Monday 30 November 2009

ಬಾಟಲಿ ಪುತ್ರನ ಕಥೆ

ಇವತ್ತು ಯಾವುದೇ ಗಲ್ಲಿಯ ಅಂಗಡಿಗಳಿಂದ ಶಾಪಿಂಗ್ ಮಾಲ್ ತನಕ ಎಲ್ಲೆಡೆಗಳಲ್ಲಿ ಸದಾ ಲಭ್ಯವಿರುವ ಪೆಪ್ಸಿ , ಕೋಕಾಕೋಲ, ಬೂಸ್ಟ್, ಬೋರ್ನ್‌ವೀಟಾ,ಕಾಫಿ, ಟೀ ಪೌಡರ್, ಮೆಕ್‌ಡೊನಾಲ್ಡ್ ಕೆಚಪ್, ಹಾರ್ಲಿಕ್ಸ್, ಜಿಆರ್‌ಬಿ ತುಪ್ಪ, ಮಿಲ್ಮಾದ ನಾನಾ ಪಾನೀಯದ ಬಾಟಲಿಗಳನ್ನು ಗಮನಿಸಿ. ಎಲ್ಲವೂ ಪ್ಲಾಸ್ಟಿಕ್‌ಮಯ. ಮದ್ಯದ ಬಾಟಲಿಗಳೂ ಕುಪ್ಪಿಯದ್ದಲ್ಲ !

ಈ ಹಿಂದೆ ಗಾಜಿನ ಬಾಟಲಿಗಳಲ್ಲಿರುತ್ತಿದ್ದ ಪಾನೀಯಗಳೆಲ್ಲ ನಾನಾ ಆಕಾರ, ಗಾತ್ರ, ಬಣ್ಣಗಳಲ್ಲಿ ಪ್ಲಾಸ್ಟಿಕ್‌ನತ್ತ ತಿರುಗಿವೆ. ಟಿನ್ನುಗಳೂ ಮಂಗಮಾಯ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬುವ ಪಾನೀಯ, ಪುಡಿ, ಇತರ ಆಹಾರ ಪದಾರ್ಥಗಳೂ ಹಾಳಾಗದೆ ಸುದೀರ್ಘಾವ ಉಳಿದುಕೊಳ್ಳುತ್ತಿವೆ. ಇದು ಹೇಗೆ ಸಾಧ್ಯವಾಯಿತು ? ಇದರಲ್ಲಿಯೂ ಆಹಾರ ಹಾಳಾಗುವುದಿಲ್ಲ ಯಾಕೆ ? ಅಂದ ಹಾಗೆ ಪೆಪ್ಸಿಯ ಬಾಟಲಿಯ ಮೂಲ ಸ್ವರೂಪ ಒಂದು ಸಣ್ಣ ಟ್ಯೂಬಿನ ಆಕಾರದಲ್ಲಿರುತ್ತೆ ! ಬಲೂನಿಗೆ ಗಾಳಿ ತುಂಬುವಂತೆ ಇದನ್ನು ಯಂತ್ರಗಳಲ್ಲಿ ಸಾಲಾಗಿಟ್ಟು ಬ್ಲೋ ಮಾಡಿದಾಗ ಕ್ಷಣಾರ್ಧದಲ್ಲಿ ಬಾಟಲಿಯ ಆಕಾರಕ್ಕೆ ತಿರುಗುತ್ತದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಮಂಜುಶ್ರೀ ಪ್ಯಾಕೇಜಿಂಗ್ ಕಂಪನಿಯಲ್ಲಿ ಇದನ್ನೆಲ್ಲ ನೋಡಬಹುದು. ಪ್ಯಾಕೇಜಿಂಗ್ ಉದ್ಯಮದ ಇತಿಹಾಸವನ್ನು ಬಿಂಬಿಸುವ ಮ್ಯೂಸಿಯಂ ಕೂಡ ಕಂಪನಿಯ ಆವರಣದಲ್ಲಿದೆ. ಸುಮಾರು ೪ ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಪ್ಲಾಸಿಕ್ ಬಾಟಲಿಗಳ ಲೈಬ್ರೆರಿ ಕೂಡ ಇಲ್ಲಿದೆ ! ನಿಮಗೆ ಇಷ್ಟವಾದ ಬಾಟಲಿಯನ್ನು ಆರ್ಡರ್ ಮಾಡಬಹುದು.

ಅಸ್ಸಾಂನ ಗುವಾಹಟಿಯಲ್ಲಿ ೧೯೮೩ರಲ್ಲಿ ವಿಮಲ್ ಕೇಡಿಯಾ ಹಾಗೂ ಸೋದರ ಸುರೇಂದ್ರ ಕೇಡಿಯಾ ಸಣ್ಣ ಪ್ಯಾಕೇಜಿಂಗ್ ಘಟಕ ತೆರೆದರು. ಚಹಾ ಗಿಡಗಳ ಪೂರೈಕೆಗೆ ಬೇಕಾದ ಲಕೋಟೆಯನ್ನು ಇವರು ತಯಾರಿಸಿ ಮಾರುತ್ತಿದ್ದರು. ಆದರೆ ಉಗ್ರರ ಉಪಟಳಕ್ಕೆ ಬೇಸತ್ತು ೧೯೯೪ರಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿ ಕ್ಲಿಕ್ಕಾಯಿತು ಮಂಜುಶ್ರೀ. ನಿರಂತರ ಸಂಶೋಧನೆ, ಆರ್ಥಿಕ ಶಿಸ್ತು, ಪರಿಶ್ರಮದಿಂದ ಇವತ್ತು ಕಂಪನಿ ೧೫೦ ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರಿನಲ್ಲಿ ವಿಮಲ್ ಕೇಡಿಯಾ ೫ ಕೋಟಿ ರೂ.ಗಳನ್ನು ಹೂಡಿದ್ದರು. ಮಂಜುಶ್ರೀ ಪ್ರತಿ ವರ್ಷ ೨೦ ಸಾವಿರ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಪನಿ ಮಾರಾಟ ಮಾಡುತ್ತಿದೆ ಎಂದರೆ ಊಹಿಸಿ.

ಹೀಗೆ ಕಂಪನಿಗಳೆಲ್ಲ ಗಾಜು, ಟಿನ್ನುಗಳನ್ನು ಬಿಟ್ಟು ಪ್ಲಾಸ್ಟಿಕ್ ಬಾಟಲಿಗಳ ಮೊರೆ ಹೋಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಇವುಗಳಿಗೆ ತಗಲುವ ಖರ್ಚು ಕಡಿಮೆ. ಎರಡನೆಯದಾಗಿ ಗಾಜಿನಂತೆ ಒಡೆಯುವುದಿಲ್ಲ. ಹೀಗಾಗಿ ಸಾಗಣೆ ಸುಲಭ. ಪ್ರೀ ಫಾರ್ಮ್ ಹಂತದಲ್ಲಿ ಸಣ್ಣ ಟ್ಯೂಬ್‌ಗಳಂತಿರುವ ಬಾಟಲಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯಬಹುದು. ಕೊನೆಯದಾಗಿ ಬಾಟಲಿಯಲ್ಲಿನ ೬ ಲೇಯರ್ ತಂತ್ರಜ್ಞಾನದ ಪರಿಣಾಮವಾಗಿ ಇವುಗಳಲ್ಲಿಡುವ ಆಹಾರ ಬೇಗನೆ ಕೆಡುವುದಿಲ್ಲ. ಯಾಕೆಂದರೆ ಈ ಬಾಟಲಿಯೊಳಗೆ ತೇವಾಂಶ ಹಾಗೂ ಗಾಳಿಯಾಡಲು ಅವಕಾಶ ಇರುವುದಿಲ್ಲ.

ಸಣ್ಣ ಟ್ಯೂಬಿನಾಕಾರದ ಪ್ಲಾಸ್ಟಿಕ್‌ನ್ನು ಪೆಟ್ ಪ್ರೀ ಫಾರ್ಮ್ ಎನ್ನುತ್ತಾರೆ. ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ತಂಪು ಪಾನೀಯ ಕಂಪನಿಗಳಿಗೆ ಸುಲಭವಾಗಿ ಸಾಗಿಸಬಹುದು. ಹಾಗೂ ಅಲ್ಲಿ ಈ ಟ್ಯೂಬ್‌ಗಳನ್ನು ೨ ಹಂತಗಳಲ್ಲಿ ಬ್ಲೋ ಮಾಡಿದಾಗ ಬಾಟಲಿಯಾಕಾರ ತಾಳುತ್ತದೆ. ನಂತರ ಬಾಟಲಿಯ ಮೇಲಿನ ಚಿತ್ರ, ಜಾಹೀರಾತುಗಳನ್ನು ಸಹ ಯಂತ್ರದ ಮೂಲಕ ಅಂಟಿಸುತ್ತಾರೆ. ಗಾಜಿನ ಬಾಟಲಿಯಾದರೆ ಹೀಗೆ ಊದಿಸಿಕೊಳ್ಳಲು ಅಸಾಧ್ಯ. ಅಲ್ಲದೆ ಸಾಗಣೆಯ ವೇಳೆ ಹಾನಿಯಾಗುವ ಸಾಧ್ಯತೆ ಹೆಚ್ಚು. ೧೫ ಎಂಎಲ್‌ನಿಂದ ೧೫ ಲೀಟರ್ ತನಕದ ಬಾಟಲಿಗಳನ್ನು ಕಂಪನಿ ಲೀಲಾಜಾಲವಾಗಿ ಉತ್ಪಾದಿಸುತ್ತಿದೆ. ಇದಕ್ಕೆ ಬೇಕಾದ ಕಚ್ಚಾ ವಸ್ತುವನ್ನು ದೂರದ ಗುಜರಾತ್‌ನಿಂದ ರಿಲಯನ್ಸ್ ಕಂಪನಿ ಒದಗಿಸುತ್ತದೆ. ಹೇಗಿದೆಯಲ್ಲವೇ ಪ್ಯಾಕೇಜಿಂಗ್ ಮ್ಯಾಜಿಕ್ !
ಕೇಶವ ಪ್ರಸಾದ್.ಬಿ

Sunday 29 November 2009

ಭುವಿಯ ಚೂರು ನೀನೇನಾ ಚಂದಮಾಮಾ

( ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಚಂದ್ರಮುಖಿ ಇಸ್ರೊ, ಅವಲೋಕನದ ಎರಡನೇ ಕಂತು )

ಚಂದ್ರ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆ ಋಗ್ವೇದ ಕಾಲದಿಂದಲೂ ಬಗೆಹರಿದಿಲ್ಲ. ಹೀಗಿದ್ದರೂ ನಾನಾ ಸಿದ್ಧಾಂತಗಳು ಚಾಲ್ತಿಯಲ್ಲಿವೆ. ಏಕಕಾಲಕ್ಕೆ ಸೃಷ್ಟಿ : ಸೌರ ಮಂಡಲದ ಬೃಹತ್ ನೀಹಾರಿಕೆಯಿಂದ ಭೂಮಿ ಮತ್ತು ಚಂದ್ರ ಏಕಕಾಲಕ್ಕೆ ಪರಸ್ಪರ ಸಮೀಪದಲ್ಲಿ ರಚನೆಯಾಯಿತು,. ಅನತಿ ಕಾಲದಲ್ಲಿ ಭೂಮಿಯ ಸನಿಹ ಕಕ್ಷೆಯಲ್ಲಿ ಚಂದ್ರ ತಿರುಗಲು ಶುರು ಹಚ್ಚಿಕೊಂಡ ಎಂದು ಈ ಸಿದ್ಧಾಂತ ಹೇಳುತ್ತದೆ.
ಧರೆಯ ಸೆಳೆತ : ಸೌರವ್ಯೂಹದ ಯಾವುದೋ ಒಂದು ಜಾಗದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವಲ್ಲಿ ಚಂದ್ರ ರೂಪು ತಳೆದ. ನಂತರ ಉರುಳುತ್ತ ಭೂಮಿಯ ಹತ್ತಿರ ಬಂದ. ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಚಂದ್ರನನ್ನು ಸೆಳೆಯಿತು. ಅಂತಿಮವಾಗಿ ಧರೆಯ ಕಕ್ಷೆಯಲ್ಲಿ ಸ್ಥಿರವಾಗಿಚಲಿಸಿದ.
ವಿದಳನ : ಈ ಅನುಮಾನದ ಪ್ರಕಾರ ಆರಂಭದಲ್ಲಿ ಶಶಿಯೇ ಇರಲಿಲ್ಲ. ಭೂಮಿ ರಭಸದಿಂದ ಪರಿಭ್ರಮಣೆ ಮಡುತ್ತಿದ್ದ ವೇಲೆ ಅದರ ಭಾರಿ ಗಾತ್ರದ ತುಂಡು ಸಿಡಿದು ಬೇರ್ಪಟ್ಟಿತು. ಹಾರಿದ ನಂತರ ತಣ್ಣಗಾದ ಭುವಿಯ ಚೂರು ಚಂದಿರನಾಯಿತು. ಚಂದ್ರ ಮತ್ತು ಭೂಮಿಯ ಶಿಲೆಗಳಲ್ಲಿ ಸಾಮ್ಯತೆ ಇರುವುದಕಲ್ಕೆ ಇದೇ ಕಾರಣ.

ಚಂದ್ರ ಯಾಕೆ ಮಾಮ ?
ಚಂದ್ರ ಭೂಮಿಯಿಂದಲೇ ಸಿಡಿದ ತುಂಡಾಗಿದ್ದರೆ ಅವನು ಪೃಥ್ವಿಯ ಸೋದರ ಇದ್ದಂತೆ...ಭೂಮಿ ನಮಗೆ ತಾಯಿ. ಅಂದಮೇಲೆ ಚಂದಿರ ನಮ್ಮ ಮಾಮ ಅಲ್ಲವೇ !

ಚಂದ್ರಾದಾರರು
ಈ ಸಹಸ್ರಮಾನದಲ್ಲಿ ಚಂದ್ರಮಂಚಕೆ ಏರಲು ನಾನಾ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿವೆ. ಅಮೆರಿಕ, ಯೂರೋಪ್, ಜಪಾನ್, ಚೀನಾ ಮತ್ತು ರಷ್ಯಾ ಹೆಚ್ಚಿನ ಸಂಖ್ಯೆಯಲ್ಲಿ ಬಾಹ್ಯಾಕಾಶ ಯಾತ್ರೆಗಳನ್ನು ಘೋಷಿಸಿವೆ. ಸೌರವ್ಯೂಹದ ಉಗಮವನ್ನು ಅರ್ಥ ಮಡಿಕೊಳ್ಳಲು ಮಾತ್ರವಲ್ಲದೆ, ಈ ಸಾಹಸದಲ್ಲಿ ಚಂದ್ರನನ್ನು ಮಧ್ಯಂತರ ನಿಲ್ದಾಣವನ್ನಾಗಿ ಬಳಸಲು ಚಿಂತನೆ ನಡೆದಿದೆ. ಆದರೆ ಅದಕ್ಕೂ ಮೊದಲು ಅಲ್ಲಿ ಲಭ್ಯವಿರುವ ಸಂಪನ್ಮೂಲಗಳ ಸಮಗ್ರ ಅಧ್ಯಯನ ಅನಿವಾರ್ಯ.
ಜಪಾನ್ : ಚಂದ್ರನ ಆಂತರಿಕ ವಿನ್ಯಾಸದ ಅಧ್ಯಯನಕ್ಕೆ ಜಪಾನ್ ಕೈಗೆತ್ತಿಕೊಮಡಿರುವ ಯೋಜನೆ ಲೂನಾರ್ -ಎ. ಅಲ್ಲಿನ ಕಂಪನ, ಉಷ್ಣತೆಯ ಹರಿವು, ತಿರುಳಿನ ಸಮೀಕ್ಷೆ ನಡೆಯಲಿದೆ. ಕಾಂತೀಯ ಕ್ಷೇತ್ರ, ಮೇಲ್ಮೈನ ಸಂಯುಕ್ತಗಳ ರಚನೆಗೆ ಸೆಲೆನ್ ಎಂಬ ಮತ್ತೊಂದು ಯೋಜನೆಯನ್ನು ಅದು ಜಾರಿಗೊಳಿಸಿದೆ.
ಚೀನಾ : ಚಂದ್ರನ ಮಣ್ಣಿನ ಸಾಂದ್ರತೆ, ನಕ್ಷೆ ರಚನೆ ಹಾಗೂ ಪರಿಸರದ ಅವಲೋಕನಕ್ಕೆ ಚೀನಾ ಚಾಂಗೆ ಎಂಬ ಯೋಜನೆ ಹಮ್ಮಿಕೊಂಡಿದೆ. ಸ್ಟೀರಿಯೊ ಕ್ಯಾಮರಾ, ಸ್ಟೆಕ್ಟೋಮೀಟರ್, ಇಮೇಜರ್, ಲೇಸರ್ ಅಲ್ಟಿಮೀಟರ್, ಮೇಕ್ರೊವೇವ್ ರೇಡಿಯೊ ಮೀಟರ್, ಗಾಮಾ ಮತ್ತು ಎಕ್ಸ್‌ರೇ ಸ್ಪೆಕ್ಟೋಮೀಟರನ್ನು ಇದು ಒಳಗೊಂಡಿದೆ.
ಅಮೆರಿಕ : ಲೂನಾರ್ ರಿಕಾನ್ ಎಸೆನ್ಸ್ ಆರ್ಬಿಟರ್ ಎಂಬ ಈ ಸಾಹಸದ ರೂವಾರಿ ಅಮೆರಿಕದ ನಾಸಾ. ಚಂದ್ರನ ಸಂಪನ್ಮೂಲದ ಸಮಗ್ರ ಶೋಧ ಇದರ ಗುರಿ. ಚಂದ್ರನನ್ನು ವೇದಿಕೆಯಾಗಿ ಬಳಸಿಕೊಂಡು ಮಂಗಳನ ಅಧ್ಯಯನಕ್ಕೂ ನಾಸಾ ತಯಾರಿ ನಡೆಸಿದೆ.
ಚಾಂದ್ ಕಾ ಟುಕಡಾ...
೩೮೪,೪೦೦ ಕಿ.ಮೀ : ಚಂದ್ರನ ಕಕ್ಷೆಗೂ ಭೂಮಿಗೂ ಇರುವ ಅಂತರ
೩,೪೭೬ ಕಿ.ಮೀ : ಚಂದ್ರನ ವ್ಯಾಸ
೪೫೦ ಕೋಟಿ ರೂ. ಮೊದಲ ಚಂದ್ರಯಾನದ ಅಂದಾಜು ವೆಚ್ಚ
೨ ವರ್ಷ : ಚಂದ್ರಯಾನ-೧ರ ಅವ
ಪಿಎಸ್‌ಎಲ್‌ವಿ-ಎಕ್ಸ್‌ಎಲ್ : ಚಂದ್ರಯಾನದ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯಲಿರುವ ಉಡಾವಣಾ ವಾಹಕ
ಶ್ರೀಹರಿಕೋಟಾ : ಬಾಹ್ಯಾಕಾಶ ನೌಕೆಯ ಉಡ್ಡಯಣ ಸ್ಥಳ
ನಿಯಂತ್ರಣ : ಬೆಂಗಳೂರಿನ ಬ್ಯಾಲಾಳುವಿನಲ್ಲಿ ೧೮ ಮೀಟರ್ ಹಾಗೂ ೩೨ ಮೀಟರ್ ವ್ಯಾಸದ ಆಂಟೆನಾ ಅಳವಡಿಸಲಾಗಿದೆ. ಬೆಂಗಳೂರಿನಲ್ಲೇ ನಿಯಂತ್ರಣ.
ಬ್ಯಾಲಾಳುವಿನಲ್ಲಿರುವ ಇಂಡಿಯನ್ ಸ್ಪೇಸ್ ಸಯನ್ಸ್ ಸೆಂಟರ್ ಚಂದ್ರಯಾನ-೧ರ ಮಾಹಿತಿಯನ್ನು ಸಂಗ್ರಹಿಸಲಿದೆ.
೪೦೦ ಕೆ.ಜಿ : ಭೂಮಿಗೆ ಇಲ್ಲಿಯವರೆಗೆ ೧೨ಕ್ಕೂ ಹೆಚ್ಚು ಯಾತ್ರಿಗಳು ಚಂದಿರನಿಂದ ತಂದಿರುವ ಶಿಲೆ, ಮಣ್ಣಿನ ತೂಕ

ಚಂದ್ರಯಾನದಿಂದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ, ನಮಗೆಲ್ಲರಿಗೂ ಸಂಬಂಸಿದ ಯೋಜನೆಗಳಿಗೆ ಉಪಯೋಗವಿದೆ. ನೋಡಿ, ನಮ್ಮಲ್ಲಿರುವ ಪೆಟ್ರೋಲಿಯಂ ಸಂಪತ್ತು ೪೦ ವರ್ಷಗಳ ನಂತರ ಖಾಲಿಯಾಗಬಹುದು. ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಚಂದ್ರನಲ್ಲಿರುವ ಹೀಲಿಯಂ ಅನ್ನು ತರಲು ಸಾಧ್ಯವಾದಲ್ಲಿ ಪ್ರಪಂಚಕ್ಕೆ ೧ ಸಾವಿರ ವರ್ಷಕ್ಕೆ ಆಗುವಷ್ಟು ವಿದ್ಯುತ್ ಗಳಿಸಬಹುದು.
ಡಾ.ಉಡುಪಿ ರಾಮಚಂದ್ರ ರಾವ್
ಇಸ್ರೊ ಮಾಜಿ ಅಧ್ಯಕ್ಷ




ಚಂದ್ರಮುಖಿ ಇಸ್ರೊ

( ಚಂದ್ರಯಾನದ ಬಗ್ಗೆ ವಿಜಯ ಕರ್ನಾಟಕದಲ್ಲಿ ೨೦೦೮, ಮಾರ್ಚ್ ೨೪ಕ್ಕೆ ಬರೆದ ಲೇಖನ, ಅವಲೋಕನ ವಿಭಾಗದಲ್ಲಿ ಒಂದು ಪುಟ ಭರ್ತಿ ಪ್ರಕಟವಾಗಿತ್ತು. ನುಡಿಚೈತ್ರದಲ್ಲಿ ೨ ಕಂತುಗಳಲ್ಲಿ ಈ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ )

ಚಂದಿರನೇತಕೆ ಕಾಡುವ ನಮ್ಮ..
ಆರಂಭದಿಂದಲೇ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಮುಖ ಗುರಿಗಳಲ್ಲಿ ಬಾಹ್ಯಾಕಾಶ ಸಂಶೋಧನೆ ಸಹ ಒಂದಾಗಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ.
ಎಲೆಕ್ಟ್ರೋಜೆಟ್ ಅಧ್ಯಯನಕ್ಕೆ ತಿರುವನಂತಪುರದಲ್ಲಿ ೧೯೬೩ರಲ್ಲಿ ಸ್ಥಾಪನೆಯಾದ ತುಂಬಾ ರಾಕೆಟ್ ಉಡಾವಣಾ ಕೇಂದ್ರ ದೇಶದ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು. ಎಕ್ಸ್-ರೇ, ಖಗೋಳ ಶಾಸ್ತ್ರ, ಸೋಲಾರ್ ನ್ಯೂಟ್ರಾನ್, ಸೂಪರ್ ಥರ್ಮಲ್ ಎಲೆಕ್ಟ್ರಾನ್ ಸಾಂದ್ರತೆ ಮತ್ತು ಇತರ ವಿಷಯಗಳ ಬಗ್ಗೆ ಪ್ರಯೋಗ ನಡೆಸಲು ೧೯೭೫ರಲ್ಲಿ ಉಡಾಯಿಸಿದ ಮೊದಲ ಉಪಗ್ರಹ ಆರ್ಯಭಟ, ನಂತರ ಬಿಟ್ಟ ಹೀಲಿಯಂ ತುಂಬಿದ ಬಲೂನುಗಳು, ಸಂಶೋಧನೆಗೆ ಮೀಸಲಾದ ಸೌಂಡಿಗ್ ರಾಕೆಟ್ ಹಾಗೂ ಉಪಗ್ರಹಗಳು ಶೋಧಕ್ಕೆ ನೆರವಾಗಿವೆ. ಜತೆಗೆ ಅನೇಕ ವಿಶ್ವ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳ
ವಿಜ್ಞಾನಿಗಳು ಸೌರವ್ಯೂಹದ ಅಧ್ಯಯನ ಮಾಡಿದ್ದಾರೆ.
ನೈಸರ್ಗಿಕ ಸಂಪನ್ಮೂಲದ ಸಮೀಕ್ಷೆ ಮತ್ತು ನಿರ್ವಹಣೆ, ಹವಾಮಾನ ಸೇವೆ, ಉಪಗ್ರಹ ಸಂಪರ್ಕ ಕುರಿತು ಬಾಹ್ಯಾಕಾಶ ಸಾಧನಗಳ ನಿರ್ಮಾಣದಲ್ಲಿ ಭಾರತ ಕಾಲಕ್ರಮೇಣ ನೈಪುಣ್ಯ ಪಡೆಯಿತು.
ಇಸ್ರೊ ಸಿದ್ಧಪಡಿಸಿರುವ ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ) ಮತ್ತು ಜಿಎಸ್‌ಎಲ್‌ವಿನಿಂದ (ಜಿಯೊ-ಸ್ಟೇಷನರಿ ಲಾಂಚ್ ವೆಹಿಕಲ್) ಚಂದ್ರ ಹಾಗೂ ಸಮೀಪದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಭಾರತದ ಸಾಮರ್ಥ್ಯ ಅನೂಹ್ಯ ಮಟ್ಟದಲ್ಲಿ ವೃದ್ಧಿಸಿತು.
ಹೀಗೆ ದೇಶ ಗಳಿಸಿಕೊಂಡಿರುವ ತಾಂತ್ರಿಕ ಸಾಮರ್ಥ್ಯ ಹಾಗೂ ವಿeನಿಗಳ ಕುತೂಹಲ ಇದೀಗ ಚಂದ್ರಯಾನಕ್ಕೆ ಇಸ್ರೊವನ್ನು ಪ್ರೇರೇಪಿಸಿದೆ. ಬಾಹ್ಯಾಕಾಶ ವಲಯದಲ್ಲಿ ದೇಶದ ಯುವ ವಿeನಿಗಳಿಗೆ ಅವಕಾಶಗಳ ಹೆಬ್ಬಾಗಿಲನ್ನು ತೆರೆಯುವುದು ಯೋಜನೆಯ ಮತ್ತೊಂದು ಧ್ಯೇಯ.

ವಿಜ್ಞಾನ ಅಕಾಡೆಮಿಯಲ್ಲಿ ೧೯೯೯ರಲ್ಲಿ ನಡೆದ ಸಭೆಯಲ್ಲಿ ಚಂದ್ರಯಾನದ ಕಲ್ಪನೆ ಅಂಕುರವಾಯಿತು. ಅಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಲ್ಲಿ ಮುಂದಿನ ವರ್ಷ ಮತ್ತೆ ಚರ್ಚೆಯಾಯಿತು. ಈ ಎರಡೂ ಸಂಘಟನೆಗಳ ಸದಸ್ಯರ ಶಿಫಾರಸಿನ ಮೇರೆಗೆ ಇಸ್ರೊ, ರಾಷ್ಟ್ರೀಯ ಚಂದ್ರಯಾನ ಕಾರ್ಯಪಡೆ ರಚಿಸಿತು. ದೇಶದ ಪ್ರಮುಖ ವಿಜ್ಞಾನಿಗಳು, ತಂತ್ರಜ್ಞರು ಯೋಜನೆಯ ರೂಪು ರೇಷೆ ಸಿದ್ಧಪಡಿಸಿದರು. ೨೦೦೩ರಲ್ಲಿ ಕಾರ್ಯಪಡೆಯ ಅಧ್ಯಯನ ವರದಿ ಭಾರತ ಚಂದ್ರಯಾನ ಕೈಗೊಳ್ಳಲೇಬೇಕು ಎಂದು ಶಿಫಾರಸು ಮಾಡಿತು. ೨೦೦೩ರ ನವೆಂಬರ್‌ನಲ್ಲಿ ಮೊದಲ ಚಂದ್ರಯಾನಕ್ಕೆ ಸರಕಾರದ ಒಪ್ಪಿಗೆ ಪಡೆಯಿತು.
" ಚಂದ್ರನಿಗೂ ಸೌರವ್ಯೂಹದ ಆದಿಗೂ ನಂಟಿದೆ. ಅದನ್ನು ಅರ್ಥ ಮಾಡಿಕೊಂಡರೆ ಸೌರವ್ಯೂಹದ ರಹಸ್ಯ ಬಯಲಾಗುವುದು ಖಚಿತ. ಶಶಿಯ ಮೇಲೆ ನೇರವಾಗಿ ಸೂಸುವ ಸೂರ್ಯನ ಎಕ್ಸ್-ರೇಗಳ ಅಧ್ಯಯನ ಕೂಡ ಮಾಡಬಹುದು. ಆತನನ್ನೇ ವೇದಿಕೆಯನ್ನಾಗಿಸಿ ಬಾಹ್ಯಾಕಶ ಯೋಜನೆಗಳನ್ನು ಸುಸೂತ್ರವಾಗಿ ನಡೆಸಬಹುದು. ಸಾಧ್ಯವಾದರೆ ಅಲ್ಲಿನ ಅಗಾಧ ಮೊತ್ತದ ಹೀಲಿಯಂ-೩ ಬಳಸಿ ಭವಿಷ್ಯದ ವಿದ್ಯುತ್ ಕೊರತೆ ನೀಗಿಸಬಹುದೇನೊ, ಎಂಬ ವಿಶ್ವಾಸದಲ್ಲಿ ಭಾರತೀಯ ವಿeನಿಗಳು ಹಗಲು ರಾತ್ರಿಗಳನ್ನು ಸುಡುತ್ತಿದ್ದಾರೆ. ಅಮೆರಿಕ ಮತ್ತಿತರ ರಾಷ್ಟ್ರಗಳೂ ಕೈ ಜೋಡಿಸಿವೆ. ಬಾಹ್ಯಾಕಾಶದಲ್ಲಿ ದೇಶದ ಮೊದಲ ಸಂಪೂರ್ಣ ವೈeನಿಕ ಯೋಜನೆಗೆ ನಮ್ಮಲ್ಲೇಕೆ ಅಪಸ್ವರ ? ಕಾರಣ ನಿಲ್ಲದ ಬಡತನ, ಅಜ್ಞಾನ ಮತ್ತು ರಾಜಕೀಯ.
೪೦೦ ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಸೌರಮಂಡಲದಲ್ಲಿ ಭೂಮಿಗೆ ಪಕ್ಕದ ಮನೆಯವನೇ ಚಂದ್ರ. ೧೯೫೯ರಿಂದ ನೂರಾರು ಸಲ ಚಂದ್ರನನ್ನು ದಕ್ಕಿಸಲು ಶೋಧ ನಡೆದಿದೆ. ಹೀಗಿದ್ದರೂ ಅವನ ಉಗಮ, ಸ್ವರೂಪ, ಆಂತರಿಕ ವಿನ್ಯಾಸ, ರಾಸಾಯನಿಕ ಮತ್ತು ಖನಿಜಗಳ ರಚನೆ ಬಗ್ಗೆ ಸಂಶೋಧನೆ ಮುಗಿದಿಲ್ಲ.ಅಂತಹ ಚಂದಿರನ ಕಡೆಗೆ ಭಾರತದ ಮೊದಲ ಯೋಜನೆಯೇ ಚಂದ್ರಯಾನ-೧
ಭೂಮಿಯ ಗುಉತ್ವಾಕರ್ಷಣೆ ಮೀರಿ ವ್ಯೋಮದಲ್ಲಿ ಇಸ್ರೊ ನಡೆಸಲಿರುವ ಮೊದಲ ಹುಡುಕಾಟವಿದು. ಚಂದ್ರನ ಮೇಲ್ಮೈನ ಕೂಲಂಕಷ ಅಧ್ಯಯನ, ಅಲ್ಲಿನ ವಿಕಿರಣಗಳು, ಶಕ್ತಿಶಾಲಿ ಎಕ್ಸ್ ರೇ ವಲಯ, ತ್ರೀ-ಡಿ ನಕ್ಷೆ, ಖನಿಜಗಳ ಶೋಧವನ್ನು ಯೋಜನೆ ಒಳಗೊಂಡಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ೧೧ ಉಪಕರಣಗಳಿಂದ ಶೋಧ ನಡೆಯಲಿದೆ. ಭಾರತದ ಪೇಲೋಡ್‌ಗಳಲ್ಲದೆ ನಾಸಾ, ಇಎಸ್‌ಎ ಮತ್ತು ಬಲ್ಗೇರಿಯಾದ ೬ ಪೇಲೋಡ್‌ಗಳು ಬಳಕೆಯಾಗಲಿವೆ.
ಜಿ. ಮಾಧವನ್ ನಾಯರ್-ಇಸ್ರೊ ಅಧ್ಯಕ್ಷ

ಪಿಎಸ್ಸೆಲ್ವಿ ಬಿದ್ದಾಗ ಅಂಜಿದ್ದರೆ ?
ಮೂಲೋಪಯೋಗವಿಲ್ಲದ ಮತ್ತು ಪ್ರತಿಷ್ಠೆ ಹೆಚ್ಚಿಸಲಾಗುವುದು ಎಂದು ಹೇಳಲಾಗುವ ಉಪಗ್ರಹಗಳಂತಹ ದುಬಾರಿ ಯೋಜನೆಗಳನ್ನು ಕೈ ಬಿಡಬೇಕು. ನಾನೇನು ವೈಜ್ಞಾನಿಕ ಕೀಳರಿಮೆಯನ್ನು ಪ್ರತಿಪಾದಿಸುತ್ತಿಲ್ಲ. ಆದರೆ ವಿಜ್ಞಾನದ ಬಳಕೆಯು ಭಾರತದ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದಂತೆ, ಸಾಮಾನ್ಯ ಜನರ ಮೂಲ ಅಗತ್ಯಗಳೊಂದಿಗೆ ನೇರ ಸಂಬಂಧ ಹೊಂದಿರಬೇಕಷ್ಟೇ ಎಂದು ನಾನು ಹೇಳುವುದು- ಲೋಕ ನಾಯಕ ಜಯಪ್ರಕಾಶ್ ನಾರಾಯಣ ಹಾಗಂತ ಹೇಳಿದ್ದರು. ತುರ್ತುಪರಿಸ್ಥಿತಿಯ ವೇಳೆ ನಾಲ್ಕು ತಿಂಗಳು ಸೆರೆವಾಸ ಅನುಭವಿಸಿದಾಗ ಬರೆದ ದಿನಚರಿಯಲ್ಲಿ ದೇಶದ ಆರ್ಥಿಕ ಚೌಕಟ್ಟು ಹೇಗಿರಬೇಕೆಂದು ವಿವರಿಸುತ್ತ ಬಾಹ್ಯಾಕಾಶ ಯೋಜನೆಗಳನ್ನು ಜೆಪಿ ಬಲವಾಗಿ ವಿರೋಧಿಸುತ್ತಾರೆ. ಆದರೆ ಅವರ ಮಾತನ್ನು ವಿeನಿಗಳು ಯಾವತ್ತೋ ಸುಳ್ಳು ಮಾಡಿದ್ದಾರೆ.
ಕೇವಲ ೧೫ ವರ್ಷಗಳ ಹಿಂದೆ ಸರಿಯೋಣ. ಶ್ರೀಹರಿಕೋಟದಿಂದ ದೇಶದ ಮೊದಲ ಪಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹನ) ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿತ್ತು. ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಉಡಾವಣೆಯಾದ ೭೦೦ ಸೆಕೆಂಡ್‌ಗಳಲ್ಲೇ ಪಿಎಸ್‌ಎಲ್‌ವಿ ಬಂಗಾಳ ಕೊಲ್ಲಿಯಲ್ಲಿ ಬಿತ್ತು. ಕೋಟ್ಯಂತರ ರೂಪಾಯಿ ಬಂಗಾಳ ಕೊಲ್ಲಿ ಪಾಲಾಯಿತು ಅಂತ ಜನ ಬಾಯಿ ಬಡಿದುಕೊಂಡರು. ಬಡವರಿಗೆ ತುತ್ತು ಸಿಗದ ದೇಶದಲ್ಲಿ ಉಪಗ್ರಹ ಹಾರಿಸುವುದೇಕೆ ಎಂದು ಉಗಿದರು. ಅದೇ ರೀತಿಯಲ್ಲಿ ೪೫೦ ಕೋಟಿ ರೂ. ವೆಚ್ಚದ ಚಂದ್ರಯಾನ ಬೇಕೇ ಎಂದು ಇವತ್ತು ಚರ್ಚೆಯಾಗುತ್ತಿದೆ. ಟೀಕಿಸುವುದಕ್ಕೆ ಮುನ್ನ ಸ್ವಲ್ಪ ಯೋಚಿಸಬೇಕು.
ಇದುವರೆಗೆ ಪಿಎಸ್‌ಎಲ್‌ವಿ ವಿಫಲವಾಗಿದ್ದು ಒಂದು ಸಲ ಮಾತ್ರ.ಮತ್ತೊಂದು ಸಲ ಭಾಗಶಃ ವಿಫಲವಾಯಿತು. ಒಟ್ಟು ೧೨ ಉಡಾವಣೆಗಳಲ್ಲಿ ೧೦ ಸಲ ಯಶಸ್ಸು ಸಿಕ್ಕಿದೆ. ಇವತ್ತು ಜರ್ಮನಿ, ದಕ್ಷಿಣ ಆಫ್ರಿಕಾ, ಇಂಡೊನೇಷ್ಯಾ, ಬೆಲ್ಜಿಯಂ, ಅರ್ಜೆಂಟೀನಾ ಮುಂತಾದ ದೇಶಗಳ ೪೫ರಿಂದ ೩೫೦ ಕೆಜಿ ತೂಕದ ಉಪಗ್ರಹಗಳನ್ನು ಪಿಎಸ್ಸೆಲ್ವಿ ಉಡಾಯಿಸುತ್ತಿದೆ. ಇತ್ತೀಚೆಗೆ ೪ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ ಏಕಕಾಲಕ್ಕೆ ಉಡಾಯಿಸಿದೆ.
ಇಂದು ದೂರಸಂಪರ್ಕ, ವೈದ್ಯಕೀಯ, ಶಿಕ್ಷಣ, ಕೃಷಿ ಹವಾಮಾನ ಮುಂತಾದ ನಾನಾ ಕ್ಷೇತ್ರಗಳಲ್ಲಿ ಉಪಗ್ರಹದ ಪಾತ್ರ ಅವಿಭಾಜ್ಯ. ಆವತ್ತು ಬಂಗಾಳ ಕೊಲ್ಲಿಗೆ ಉಪಗ್ರಹ ಬಿದ್ದಾಗ ಟೀಕೆಗೆ ಅಂಜಿ ಹಿಂದೇಟು ಹಾಕಿದ್ದರೆ ವಿeನಿಗಳಿಗೆ ಈ ಎಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ ? ಮುಖ್ಯವಾಗಿ ದೂರ ಸಂಪರ್ಕ ವಲಯದಲ್ಲಿ ಇಷ್ಟೊಂದು ಕ್ರಾಂತಿ ಆಗುತ್ತಲೇ ಇರಲಿಲ್ಲ.

Sunday 22 November 2009

ಐಟಿ ಈಸ್ ಇನ್ ಮೈ ಬ್ಲಡ್- ಸುಹಾಸ್ ಗೋಪಿನಾಥ್

ಸುಹಾಸ್ ಗೋಪಿನಾಥ್ !
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲವರಿಗೆ ಈ ಹೆಸರು ಪರಿಚಿತ. ಅಪ್ಪಟ ಕನ್ನಡಿಗ ಸುಹಾಸ್‌ಗೆ ಈಗ ಕೇವಲ ೨೩ರ ಹರೆಯ. ಮೀಸೆ ಇನ್ನೂ ಬಲಿಯದ ಪ್ರಾಯ. ಆದರೆ ಈತನ ರಕ್ತದಲ್ಲೇ ಮಾಹಿತಿ ತಂತ್ರಜ್ಞಾನ ಕರಗತವಾಗಿದೆ.
ಬೆಂಗಳೂರಿನ ಮತ್ತಿಕೆರೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಈ ಹುಡುಗ ಗ್ಲೋಬಲ್ಸ್ ಎಂಬ ಐಟಿ ಬಹುರಾಷ್ಟ್ರೀಯ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ. ಅಮೆರಿಕ, ಕೆನಡಾ, ಬಹರೇನ್, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ ಹನ್ನೊಂದು ರಾಷ್ಟ್ರಗಳಲ್ಲಿ ಈ ಕಂಪನಿಯ ವಹಿವಾಟು ನಡೆಯುತ್ತಿದೆ !
ನೀವು ನಂಬುತ್ತೀರಾ..ವಿಶ್ವ ಬ್ಯಾಂಕ್‌ನ ಆರ್ಥಿಕ ಸಲಹಾ ಮಂಡಳಿಯಲ್ಲಿನ ಏಕೈಕ ಭಾರತೀಯ ಹಾಗೂ ಕಿರಿಯ ಸದಸ್ಯ ಈ ಹೈದ. ಆಫ್ರಿಕಾದ ಬಡ ರಾಷ್ಟ್ರಗಳು ಸೇರಿದಂತೆ ಹಿಂದುಳಿದ ದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬಹುದು ಎಂಬುದರ ಬಗ್ಗೆ ಸುಹಾಸ್ ಜತೆ ವಿಶ್ವ ಬ್ಯಾಂಕ್ ಸಮಾಲೋಚನೆ ನಡೆಸುತ್ತದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೂಡ ಸುಹಾಸ್ ಸದಸ್ಯ. ಮೊನ್ನೆ ದಿಲ್ಲಿಯಲ್ಲಿ ನಡೆದ ಭಾರತೀಯ ಆರ್ಥಿಕ ಶೃಂಗದಲ್ಲಿ ಕೂಡ ಭಾಗವಹಿಸಿದ್ದಾನೆ. ಪೆಪ್ಸಿಕೊದ ಸಿಇಒ ಇಂದ್ರಾ ನೂಯಿ ಸೇರಿದಂತೆ ಘಟಾನುಘಟಿಗಳನ್ನು ಭೇಟಿಯಾಗಿದ್ದಾನೆ. ಇನೋಸಿಸ್‌ನ ಮುಖ್ಯ ಮಾರ್ಗದರ್ಶಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಹಾಸ್ ನಡುವೆ ನಿಯಮಿತವಾಗಿ ಇ-ಮೇಲ್ ಸಂವಹನ ನಡೆಯುತ್ತದೆ.
ಸುಹಾಸ್ ತಂದೆ ಗೋಪಿನಾಥ್ ರಕ್ಷಣಾ ಇಲಾಖೆಯಲ್ಲಿ ಅಕಾರಿಯಾಗಿದ್ದವರು. ಇನ್ನೂ ೧೬ರ ಬಾಲಕನಾಗಿದ್ದಾಗಲೇ ಹೆತ್ತವರ ಮಾರ್ಗದರ್ಶನದಲ್ಲಿ ಅಮೆರಿಕಕ್ಕೆ ತೆರಳಿ, ಸ್ನೇಹಿತರನ್ನು ಸಂಪಾದಿಸಿ ಅಲ್ಲಿನ ಮುಕ್ತ ವಾತಾವರಣದಲ್ಲಿ ಈ ಕಂಪನಿಯನ್ನು ಅಸ್ತಿತ್ವಕ್ಕೆ ತಂದ ಸುಹಾಸ್‌ನ ಯಶೋಗಾಥೆ ನಿಜಕ್ಕೂ ಅಚ್ಚರಿಯ ಸರಮಾಲೆ. ಈ ಹುಡುಗ ಮತ್ತೊಬ್ಬ ಎನ್.ಆರ್. ನಾರಾಯಣಮೂರ್ತಿಯಾಗುವ ದಿನಗಳು ದೂರವಿಲ್ಲ ಎಂದು ಅನ್ನಿಸಲು ಹಲವು ಕಾರಣಗಳಿವೆ. ಮೂರ್ತಿಯವರಂತೆ ಇವನದ್ದೂ ಹೋರಾಟದ ಹಾದಿ. ೧೭ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸಿಇಒ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಸುಹಾಸ್, ನಂತರ ಕೂಡ ಹಿಂದೆ ಬಿದ್ದಿಲ್ಲ. ಮುಂದಿನ ವರ್ಷ ಮತ್ತೊಂದು ಕಂಪನಿಯ ಸ್ಥಾಪನೆಗೆ ಮುಂದಾಗಿದ್ದಾನೆ. ಯಾರಿಗಾದರೂ ಒಂದು ಕ್ಷಣ ನಂಬಲೂ ಕಷ್ಟವಾಗುವ, ಆದರೆ ಅಷ್ಟೇ ಸತ್ಯವಾಗಿರುವ ಸಾಧನೆ ಈ ಹುಡುಗನಿಂದ ಹೇಗೆ ಸಾಧ್ಯವಾಯಿತು ?
ಆಗ ಸುಹಾಸ್‌ಗೆ ೧೩ ವರ್ಷವಾಗಿತ್ತು. ಅಣ್ಣ ಶ್ರೇಯಸ್ ಗೋಪಿನಾಥ್ ಆಗಾಗ್ಗೆ ಮನೆಯ ಪಕ್ಕದ ಸೈಬರ್ ಕೆಫೆಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಕಂಪ್ಯೂಟರ್ ಇರಲಿಲ್ಲ. ಈಗಿನಂತೆ ಇಂಟರ್‌ನೆಟ್ ಅಗ್ಗವಾಗಿರಲಿಲ್ಲ. ಗಂಟೆಗೆ ೧೦೦ ರೂ. ಶುಲ್ಕವಾಗುತ್ತಿತ್ತು. ಅಣ್ಣನೊಟ್ಟಿಗೆ ತಾನೂ ಇ-ಮೇಲ್ ಎಲ್ಲ ಮಾಡಿಕೊಂಡ ಹುಡುಗನಿಗೆ ಕ್ರಮೇಣ ನೆಟ್‌ಲೋಕ ಕೈ ಬೀಸಿ ಕರೆಯಿತು.
ವೆಬ್‌ಸೈಟ್ ಮಾಡೋದು ಹೇಗೆ ? ಇದರ ಮೂಲಕ ಹಣ ಗಳಿಸುವುದು ಹೇಗೆ ? ಎಂದೆಲ್ಲ ಇ-ಕಾಮರ್ಸ್ ಬಗ್ಗೆ ಬಾಲಕ ಕಲಿಯಲು ಆಸಕ್ತಿ ವಹಿಸಿದ. ಇಂಟರ್‌ನೆಟ್ ದುಬಾರಿಯಾದಾಗ ಕೆಫೆಯ ಮಾಲೀಕನೊಡನೆ ಚರ್ಚಿಸಿ, ಬಿಡುವಿನ ವೇಳೆ ತಾನೇ ಕೆಫೆಯನ್ನು ನೋಡಿಕೊಂಡ. ಆದಾಯ ಹೆಚ್ಚುವುದಾದರೆ ಯಾರು ಬೇಡ ಎನ್ನುತ್ತಾರೆ ? ಇತ್ತ ಸುಹಾಸ್‌ಗೂ ಉಚಿತವಾಗಿ ಇಂಟರ್‌ನೆಟ್ ಲೋಕವನ್ನು ಹೊಕ್ಕುವ ಅವಕಾಶ ಸಿಕ್ಕಿತು. ಕೂಲ್ ಹಿಂದುಸ್ತಾನ್ ಡಾಟ್‌ಕಾಮ್ ಎಂಬ ವೆಬ್‌ಸೈಟ್ ಯೋಜನೆಯನ್ನು ೧೪ನೇ ಪ್ರಾಯದಲ್ಲಿ ಸುಹಾಸ್ ನಿರ್ಮಿಸಿದಾಗ, ವಿಶ್ವದ ಅತ್ಯಂತ ಕಿರಿಯ ವೆಬ್‌ಸೈಟ್ ಡಿಸೈನರ್ ಎಂಬ ಹೆಗ್ಗಳಿಕೆ ಬಂತು. ಅನಂತರ ಅಮೆರಿಕದ ಕಂಪನಿಯೊಂದರಿಂದ ಸುಹಾಸ್‌ಗೆ ಆಹ್ವಾನ ಸಿಕ್ಕಿತು. ಭಾರತದಲ್ಲಿ ಸ್ವಂತ ಐಟಿ ಕಂಪನಿ ತೆರೆಯಬಹುದಲ್ಲವೇ ಎಂಬ ಯೋಚನೆ ಅಲ್ಲಿಯೇ ಹೊಳೆಯಿತು. ಆದರೆ ಭಾರತದಲ್ಲಿ ಕಾನೂನು ಪ್ರಕಾರ ಕಂಪನಿ ಸ್ಥಾಪಿಸಬೇಕಾದರೆ ೧೮ ವರ್ಷ ಕಡ್ಡಾಯವಾಗಿ ಭರ್ತಿಯಾಗಲೇ ಬೇಕು. ಹೀಗಾಗಿ ಅಮೆರಿಕದಲ್ಲೇ ಸುಹಾಸ್ ಕಂಪನಿ ಆರಂಭಿಸಿದ. ಭಾರತಕ್ಕೆ ಮರಳಿ ವ್ಯಾಪಾರ ಮುಂದುವರಿಸಿದ. ಹೆಚ್ಚಿನ ವಹಿವಾಟುಗಳೆಲ್ಲ ಅಂತರ್ಜಾಲದ ಮೂಲಕವೇ ನಡೆಯುತ್ತಿತ್ತು. ಐಟಿಗಿರುವ ಬಹುದೊಡ್ಡ ಅನುಕೂಲವೇ ಇದು. ಎಷ್ಟೋ ಸಲ ಗ್ರಾಹಕರು ಸುಹಾಸ್ ಧ್ವನಿ ಕೇಳಿ, ಬಾಲಕನ ಧ್ವನಿಯಂತಿದೆಯಲ್ಲವೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರಂತೆ. ಒಂದು ಕಂಪನಿಯ ಸಿಇಒ ಎಂದರೆ ಯಾರೂ ನಂಬುತ್ತಿರಲಿಲ್ಲ. ಆದರೆ ‘ ನೀವು ನನ್ನ ಸೇವೆಯನ್ನು ಗಮನಿಸಿ, ನಂತರ ಹೇಳಿ ಎಂದು ಒಪ್ಪಿಸುವ ಜಾಣ್ಮೆ ಸುಹಾಸ್‌ನಲ್ಲಿತ್ತು.
ಕಂಪನಿಯ ವಹಿವಾಟು ವಿಸ್ತರಿಸಿದಂತೆ ಬಿಡುವು ಸಿಗದಾಯಿತು. ಮಾಹಿತಿ ತಂತ್ರಜ್ಞಾನದಲ್ಲಿ ೬ನೇ ಸೆಮಿಸ್ಟರ್ ನಂತರ ಓದು ಮುಂದುವರಿಸಲು ಕಷ್ಟವಾಯಿತು. ನಂತರ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದ ಮೂಲಕ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ವಿಶೇಷ ಅರ್ಹತೆಯ ಮೇರೆಗೆ ಡಿಪ್ಲೊಮಾ ಪದವಿಯನ್ನು ಸುಹಾಸ್ ಪೂರೈಸಿದ್ದಾನೆ. ಗ್ಲೋಬಲ್ಸ್ ಕಂಪನಿಯಲ್ಲಿ ನೂರಾರು ಮಂದಿ ಟೆಕ್ಕಿಗಳಿದ್ದಾರೆ. ಬಹುತೇಕ ಮಂದಿ ೨೦-೨೫ ವಯಸ್ಸಿನ ಎಳೆಯರು.
ಭಾರತದಲ್ಲಿ ಉದ್ಯಮಶೀಲತೆ ಅಭಿವೃದ್ಧಿಯಾಗಬೇಕಾದರೆ ಬಾಲ್ಯದಿಂದಲೇ ಉತ್ತೇಜನ ಸಿಗಬೇಕು. ಹೆತ್ತವರಿಂದ, ಸಮಾಜದಿಂದ, ಶೈಕ್ಷಣಿಕ ವಲಯದಿಂದ, ಮಾಧ್ಯಮಗಳಿಂದ ಪ್ರೋತ್ಸಾಹ ಸಿಗಬೇಕು. ಭಾರತೀಯರು ಉದ್ದಿಮೆಯಲ್ಲಿ ಸೋಲುಗಳನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು. ಒಂದು ದೃಷ್ಟಿಕೋನ ಇರಬೇಕು. ಕಠಿಣ ಪರಿಶ್ರಮದ ಜತೆಗೆ ಕೌಶಲ್ಯಯುಕ್ತ ದುಡಿಮೆಯೂ ಆಗಬೇಕು. ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಹೊರಡುವವರಿಗೆ ಅನುಕೂಲವಾಗುವಂತೆ ನಿಜವಾದ ಏಕ ಗವಾಕ್ಷಿ ಯೋಜನೆ ಜಾರಿಯಾಗಬೇಕು. ಎಷ್ಟೋ ಸಲ ಕಾಲೇಜುಗಳಲ್ಲಿ ಉದ್ಯಮಶೀಲತೆ ಬಗ್ಗೆ ಉಪನ್ಯಾಸ ಕೊಟ್ಟಿದ್ದೇನೆ. ಹೊರ ಬರುವಾಗ ಹಲವರು ಬಂದು ಸ್ವ ವಿವರವನ್ನು ಕೊಟ್ಟು ನಿಮ್ಮ ಕಂಪನಿಯಲ್ಲಿ ಉದ್ಯೋಗ ಸಿಗಬಹುದೇ ಎಂದು ಕೇಳುತ್ತಾರೆ ! ಆದ್ದರಿಂದ ಉದ್ಯಮಿಗಳ ಸಂಖ್ಯೆ ಹೆಚ್ಚಬೇಕಾದರೆ ಮೊದಲು ಮೈ ಚಳಿ ಬಿಡಬೇಕು ಎಂದು ಮುಂದುವರಿಯುತ್ತದೆ ಸುಹಾಸ್ ಮಾತಿನ ಸರಣಿ. ಹಾಗಾದರೆ ಮುಂದಿನ ಕಂಪನಿ ಐಟಿಗೆ ಸಂಬಂಸಿದ್ದೇ ಅಥವಾ ಬೇರೆಯೇ ? ಎಂದಾಗ ಸುಹಾಸ್ ಹೇಳಿದ್ದೇನು ಗೊತ್ತೇ ?
" ಐಟಿ ಈಸ್ ಇನ್ ಮೈ ಬ್ಲಡ್.. ಹೀಗಾಗಿ ಅದು ಬಿಟ್ಟು ಬೇರೆ ಇಲ್ಲ.." !


ಹೀಗಿದ್ದಾನೆ ಯಂಗ್ ಸಿಇಒ !
ಸುಹಾಸ್ ದಿನಚರಿಯೇ ಆತನೊಳಗಿರುವ ಸಾಧಕನನ್ನು ಪರಿಚಯಿಸುತ್ತದೆ. ಪ್ರತಿ ದಿನ ೪ರಿಂದ ೫ ಗಂಟೆ ಮಾತ್ರ ವಿಶ್ರಾಂತಿ. ಉಳಿದೆಲ್ಲ ಪ್ರಚಂಡ ದುಡಿಮೆ. ಹಾಸಿಗೆಗೆ ಒರಗುವ ವೇಳೆ ಮುಂಜಾನೆ ೩ ಅಥವಾ ೪ ಗಂಟೆಯಾಗುತ್ತದೆ. ಬೆಳಗ್ಗೆ ೮ಕ್ಕೆ ಮತ್ತೆ ದಿನ ಆರಂಭ. ಗೆಳೆಯರ ಜತೆಗೆಲ್ಲ ಜಾಲಿ ಹೊಡೆಯಲು ಸಮಯದ ಅಭಾವ. ಕೆಲವೊಮ್ಮೆ ಒತ್ತಡ ಹೆಚ್ಚಾದಾಗ ಇದೆಲ್ಲ ಬೇಕೇ ಎಂದೂ ಅನ್ನಿಸಿದ್ದು ಇದೆಯಂತೆ. ಆದರೆ ತನ್ನ ಕಂಪನಿಯಿಂದ ನೂರಾರು ಮಂದಿಗೆ ಉದ್ಯೋಗ ಸಿಕ್ಕಿರುವುದನ್ನು ನೆನೆದಾಗ ಪಟ್ಟ ಶ್ರಮ ಸಾರ್ಥಕ ಎನ್ನಿಸಿ ಮತ್ತೆ ಚೈತನ್ಯ ಗಳಿಸಿಕೊಳ್ಳುತ್ತೇನೆ.ನಾನು ಆಧ್ಯಾತ್ಮಿಕ ವ್ಯಕ್ತಿಯಲ್ಲ, ಆದರೆ ಆದರೆ ಒತ್ತಡ ಶಮನಕ್ಕೆ ಯೋಗಾಭ್ಯಾಸ ಕಲಿಯಲು ಬಯಸಿದ್ದೇನೆ ಎನ್ನುತ್ತಾನೆ ಸುಹಾಸ್. ಎಂಥಾ ಪ್ರಬುದ್ಧ ಮಾತಲ್ಲವೇ ಇದು. ಬಿಬಿಸಿ ನ್ಯೂಸ್ ಚಾನೆಲ್‌ನವರಂತೂ ಒಂದು ವಾರ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಸುಹಾಸ್ ಉಣ್ಣೋದರಿಂದ ಹಿಡಿದು ಮಲಗೋತನಕ ಶೂಟಿಂಗ್ ಮಾಡಿ ಹೋಗಿದ್ದರು. ಹೆತ್ತವರ ಜತೆ ಕಾಲ ಕಳೆಯಲೂ ಈತನಿಗೆ ಸಮಯ ಸಿಗುತ್ತಿಲ್ಲ. ಅಮೆರಿಕ, ಫ್ರಾನ್ಸ್, ಜರ್ಮನಿ, ಸ್ಪೇನ್, ಸಿಂಗಾಪುರ ಅಂತ ನಾನಾ ರಾಷ್ಟ್ರಗಳಲ್ಲಿ ಸಂಚರಿಸಬೇಕು. ವಿಶ್ವ ಬ್ಯಾಂಕ್ ಅಧ್ಯಕ್ಷರು ಇ-ಮೇಲ್ ಮೂಲಕ ಆಹ್ವಾನಿಸಿದಾಗ ಸುಹಾಸ್ ವಿಮಾನದಲ್ಲಿದ್ದ.

ಸಾಕು ಪ್ರಾಣಿಗಳೆಂದರೆ ಇಷ್ಟ
ಇಷ್ಟೆಲ್ಲ ಕೆಲಸದ ನಡುವೆಯೂ ಬೀದಿ ನಾಯಿಗಳನ್ನು ಸಲಹಲು ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದ್ದಾನೆ ಸುಹಾಸ್. ಬಾಲ್ಯದಿಂದಲೇ ನಾಯಿ, ಬೆಕ್ಕು ಅಂತ ಸಾಕುಪ್ರಾಣಿಗಳೆಂದರೆ ಸುಹಾಸ್‌ಗೆ ಪಂಚಪ್ರಾಣ. ಕಚೇರಿಯ ಚೇಂಬರಿನಲ್ಲೂ ಮುದ್ದಾದ ನಾಯಿಮರಿಗಳ ಚಿತ್ರಗಳಿವೆ. ಸುಹಾಸ್‌ನ ಕಂಪ್ಯೂಟರ್ ಪರದೆಯಲ್ಲೂ ನಾಯಿ ಮರಿಗಳು ಆಟವಾಡುತ್ತಿರುವ ಚಿತ್ರವೇ ಮಿಂಚುತ್ತಿದೆ.

ಸುದೀಪ್ ಅಭಿಮಾನಿ, ಕನ್ನಡದ ಚಿತ್ರಗಳೇ ಇಷ್ಟ
ಸಮಯ ಸಿಕ್ಕಿದಾಗ ಕನ್ನಡದ ಚಿತ್ರಗಳನ್ನು ಸುಹಾಸ್ ನೋಡುತ್ತಾನೆ. ಸುದೀಪ್ ಚಿತ್ರಗಳ ಅಭಿಮಾನಿ ನಾನು. ಗ್ಲೋಬಲ್ಸ್‌ನಲ್ಲಿ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಕನ್ನಡಿಗ ಟೆಕ್ಕಿಗಳಿದ್ದಾರೆ. ಕಚೇರಿ ವ್ಯವಹಾರ ಬಿಟ್ಟು ಉಳಿದ ಸಂದರ್ಭ ಕನ್ನಡದಲ್ಲೇ ಮಾತುಕತೆ ನಡೆಯುತ್ತದೆ ಎನ್ನುತ್ತಾನೆ ಸುಹಾಸ್.
e-mail : suhas@globalsinc.com

Wednesday 11 November 2009

ನ್ಯಾನೊ ನಿನಗೆ ಕಾಣಿಸ್ತೇನೊ..

ಹೊಸದಿಲ್ಲಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿ ಕಳೆದ ವರ್ಷ ಜನವರಿ ಹತ್ತರಂದು ನ್ಯಾನೊ ಕಾರನ್ನು ಮೊಟ್ಟ ಮೊದಲ ಬಾರಿಗೆ ಪ್ರದರ್ಶಿಸಿದಾಗ ದೇಶದ ಜನ ಕಣ್ಣರಳಿಸಿ ನೋಡಿದ್ದರು. ಈ ವರ್ಷ ಮಾರ್ಚ್ ೨೩ರಂದು ವಾಣಿಜ್ಯೋದ್ದೇಶದಿಂದ ಬಿಡುಗಡೆಗೊಳಿಸಿದಾಗಲೂ ಅದೇ ಮಟ್ಟದಲ್ಲಿ ಜನ ಬೆರಗಾಗಿದ್ದರು. ಹೀಗಾಗಿ ಏಪ್ರಿಲ್ ೯ರಿಂದ ೨೫ರ ತನಕ ಕೇವಲ ೧೫ ದಿನಗಳ ಬುಕ್ಕಿಂಗ್ ಅವಯಲ್ಲಿ ೨೦ ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಇದು ಮಾರುತಿ ೮೦೦ಕ್ಕಿಂತ ಅಗ್ಗದ ಕಾರು ಎಂದು ಬಣ್ಣಿಸಲಾಯಿತು. ಇರಬಹುದು. ಆದರೆ ಈಗ ರಾಜ್ಯದಲ್ಲಿ ಎಷ್ಟು ನ್ಯಾನೊ ಕಾರು ರಸ್ತೆಗಿಳಿದಿವೆ ? ಬೆಂಗಳೂರಿನಲ್ಲಿ ಎಲ್ಲೋ, ಅಲ್ಲೊಂದು ಇಲ್ಲೊಂದು ಕಾರು ಓಡಾಡುತ್ತಿದೆಯಷ್ಟೇ. ಹಾಗಾದರೆ ಎಲ್ಲೆಲ್ಲಿಯೂ ಕಾರು ಬರೋದು ಯಾವಾಗ ?
ಟಾಟಾದ ಮುಂಬಯಿನ ಪ್ರಧಾನ ಕಚೇರಿಯಲ್ಲೂ ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಮುಖ್ಯವಾಗಿ ಕಾನ್‌ಕಾರ್ಡ್ ಮೋಟಾರ್ಸ್ ಹಾಗೂ ಪ್ರೇರಣಾ ಮೋಟಾರ್ಸ್ ಡೀಲರ್‌ಗಳಾಗಿವೆ. ಕಾನ್‌ಕಾರ್ಡ್‌ನ ಶಾಖೆಯೊಂದರಲ್ಲಿ ಸುಮಾರು ೩ ಸಾವಿರ ಮಂದಿಗೆ ಕಾರು ಮಂಜೂರಾಗಿದೆ. ಆದರೆ ೧೦೦ರಿಂದ ೧೫೦ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ಪ್ರೇರಣಾ ಮೋಟಾರ್ಸ್‌ನಿಂದ ೨೪ ಕಾರುಗಳನ್ನು ನೀಡಲಾಗಿದೆ.
ಇದಕ್ಕಿಂತ ಹೆಚ್ಚಿನ ಉತ್ತರ ಸಿಗುವುದಿಲ್ಲ. ಡೀಲರ್‌ಗಳಿಗೆ ಸಂಪರ್ಕಿಸಿದರೆ ಟಾಟಾ ಮೋಟಾರ್ಸ್‌ನವರತ್ತ ಬೊಟ್ಟು ಮಾಡುತ್ತಾರೆ. ಟಾಟಾ ಮೋಟಾರ್ಸ್‌ನ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದರೆ ಮತ್ತೆ ಬೆಂಗಳೂರಿನ ಡೀಲರ್‌ಗಳ ಸಂಪರ್ಕ ಸಂಖ್ಯೆ ಕೊಟ್ಟು ಬಿಡುತ್ತಾರೆ. ಅಷ್ಟೇ.
ಕೊನೆಗೂ ಪ್ರೇರಣಾ ಮೋಟರ್ಸ್‌ನ ಸಿಬ್ಬಂದಿ ಹೇಳಿದ್ದಿಷ್ಟು : ‘ ನ್ಯಾನೊ ಕಾರಿನ ವ್ಯಾಪಾರ ಚಟುವಟಿಕೆ ಸದ್ಯಕ್ಕೆ ನಿಂತಿದೆ. ಯಾಕೆಂದರೆ ಬುಕ್ಕಿಂಗ್ ನಡೆಯುತ್ತಿಲ್ಲ. ಈಗಾಗಲೇ ಕಾರು ಮಂಜೂರಾದವರಿಗೆ, ಸಕಾಲದಲ್ಲಿ ಬಿಡುಗಡೆಯಾಗಬಹುದು. ಬಹುಶಃ ಮುಂದಿನ ತಿಂಗಳು ನೂರೋ, ಇನ್ನೂರೋ ಕಾರು ಬಿಡುಗಡೆಯಾಗಬಹುದು. ಆದರೆ ಪ್ರತಿಯೊಬ್ಬ ಗ್ರಾಹಕನಿಗೂ ಮುಂಬಯಿನಿಂದ ರವಾನೆಯಾಗುವ ಮಂಜೂರು ಪತ್ರದಲ್ಲಿ, ಯಾವಾಗ ಸಿಗುತ್ತದೆ ? ಬಣ್ಣ, ದರ ಇತ್ಯಾದಿ ಎಲ್ಲ ವಿವರ ಇರುತ್ತದೆ ಉದಾಹರಣೆಗೆ ‘ ಅಕ್ಟೋಬರ್‌ನಿಂದ ಡಿಸೆಂಬರ್ ಅವಯಲ್ಲಿ ಬಿಡುಗಡೆ ’ ಆಗಬಹುದು ಎಂದಿರುತ್ತದೆ. ಹೀಗಾಗಿ ಗೊಂದಲದ ಅಗತ್ಯ ಇಲ್ಲ. ಪ್ರೇರಣಾ ಮೋಟಾರ್ಸ್‌ನಿಂದ ನ್ಯಾನೊ ಕಾರು ತೆಗೆದುಕೊಂಡಿರುವ ಗ್ರಾಹಕರು ಸಂತೃಪ್ತಿಯಲ್ಲಿದ್ದಾರೆ. ಅವರು ಹೋದೆಡೆಯಲ್ಲೆಲ್ಲ ಜನ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಹೊಸ ಉತ್ಪನ್ನವಾದ್ದರಿಂದ ಇದೆಲ್ಲ ಸಹಜ ’
ಇಷ್ಟೆಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಟಾಟಾ ನ್ಯಾನೊ ಕಾರಿನ ಮಾರಾಟದ ಬಗ್ಗೆ ಡೀಲರ್‌ಗಳು ಹಾಗೂ ಟಾಟಾ ಮೋಟಾರ್ಸ್ ಕಂಪನಿ ಮಾಹಿತಿ ಕೊಡಲು ಮಾತ್ರ ಹಿಂದೇಟು ಹಾಕುತ್ತಿರುವುದೇಕೆ ? ಗೊಂದಲ ಮತ್ತು ಅನುಮಾನ ಉಂಟಾಗುವುದೇ ಹೀಗೆ. ಆದರೆ ಒಂದಂತೂ ಸ್ಪಷ್ಟ. ಅತಿ ರಂಜಿತವಾಗಿ ‘ ವಿಶ್ವದ ಅತ್ಯಂತ ಅಗ್ಗದ ಕಾರು ’ ಬುಕ್ಕಿಂಗ್ ಆದದ್ದಕ್ಕೂ, ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಕಾರುಗಳ ಸಂಖ್ಯೆಗೂ ಭಾರಿ ಅಂತರ ಇದೆ. ಆದ್ದರಿಂದಲೇ ಜನ ಕೆಲವೇ ಮಂದಿ ನ್ಯಾನೊ ಮಾಲೀಕರ ಮೇಲೆ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಈ ನಡುವೆ ಬೆಂಗಳೂರಿನ ಬಳಸಿದ ಕಾರುಗಳ ಮಾರುಕಟ್ಟೆಗೂ ಶೀಘ್ರದಲ್ಲೇ ನ್ಯಾನೊ ಕಾರು ಬರಲಿದೆ ಎಂಬ ಸುದ್ದಿಯಿದೆ. ಈಗಾಗಲೇ ಮುಂಬಯಿನ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಗೆ ನ್ಯಾನೊ ಬಂದಿದೆ.

Wednesday 4 November 2009

ಬಂಗಾರ ದುಬಾರಿಯಾದಾಗ ? ೫೦೦ ರೂ. ಕಂತಿನಲ್ಲಿ ಕನಸು ನನಸು

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ. ಅಂತಹ ಬಂಗಾರ ಕೇವಲ ಸೌಂದರ್ಯವರ್ಧಕ ಸಾಧನವಾಗಿಯೂ ಉಳಿದಿಲ್ಲ. ಉಳಿತಾಯ ಹಾಗೂ ಹೂಡಿಕೆಯ ಸುರಕ್ಷಿತ ವಿಧಾನವಾಗಿ ಕೂಡ ಆಕರ್ಷಿಸುತ್ತಿದೆ. ಒಂದು ವೇಳೆ ಭಾರತದಲ್ಲಿ ಚಿನ್ನದ ಕೊರತೆ ತೀವ್ರವಾಗಿದ್ದಲ್ಲಿ, ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೇಶ ಕಂಗಾಲಾಗುತ್ತಿತ್ತು. ಹೀಗಿದ್ದರೂ ಚಿನ್ನದ ಬೆಲೆ ಪ್ರತಿ ೧೦ ಗ್ರಾಮ್‌ಗೆ ೧೬,೪೫೦ ರೂ. ಗಡಿ ದಾಟಿದೆ. ಹೀಗಾಗಿ ಚಿನ್ನದ ಖರೀದಿಗೆ ಚಿಂತಿಸುವವರೂ ಹೆಚ್ಚುತ್ತಿದ್ದಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚಿನ್ನವನ್ನು ನಿಮ್ಮದಾಗಿಸಲು ಸುರಕ್ಷಿತ ಹಾಗೂ ಸರಳ ಅನುಕೂಲ ಇದೆ. ಪ್ರತಿ ತಿಂಗಳು ಸುಲಭ ಕಂತುಗಳ ಮೂಲಕ ಬಂಗಾರದ ಕನಸನ್ನು ನನಸು ಮಾಡಿಕೊಳ್ಳಬಹುದು. ಯಾರ್‍ಯಾರೋ ಕೈಗೆ ದುಡ್ಡು ಕೊಟ್ಟು ಮೋಸ ಹೋಗುವುದರ ಬದಲಿಗೆ ಬ್ರಾಂಡ್ ಕಂಪನಿಗಳ ಕಂತಿನ ಯೋಜನೆಯಲ್ಲಿ ಸೇರಿಕೊಳ್ಳಬೇಕು. ಅಷ್ಟೇ. ಹಾಗಾದರೆ ಚಿನ್ನದ ಮಾಸಿಕ ಕಂತು ಯೋಜನೆಗಳು ಹೇಗಿರುತ್ತವೆ ? ಅವುಗಳಲ್ಲಿ ಏನೇನು ಸೌಲಭ್ಯ ಸಿಗುತ್ತವೆ ? ಉದಾಹರಣೆಗೆ ಮಲಬಾರ್ ಗೋಲ್ಡ್ ಕಂಪನಿಯ ಯೋಜನೆಯನ್ನು ನೋಡೋಣ. ಐನೂರು ರೂ.ಗಳಿಂದ ಕಂತು ಆರಂಭವಾಗುತ್ತದೆ. ಯಾರು ಬೇಕಾದರೂ ಕಂಪನಿಯ ಶೋ ರೂಮ್‌ಗೆ ಹೋಗಿ ಎರಡು ಪಾಸ್‌ಪೋರ್ಟ್ ಆಕಾರದ ಭಾವ ಚಿತ್ರ, ವಿಳಾಸ ಕೊಟ್ಟು ಯೋಜನೆಗೆ ಸೇರಿಕೊಳ್ಳಬಹುದು. ನಿಮಗೆ ಗುರುತಿನ ಕಾರ್ಡ್, ರಸೀದಿ ಕೊಡುತ್ತಾರೆ. ೧೮ ತಿಂಗಳಿಗೆ ಕಂತಿನ ಮೊತ್ತ ೯ ಸಾವಿರ ರೂ. ಆಗುತ್ತದೆ. ವರ್ಷಕ್ಕೆ ಶೆ. ೬ರಷ್ಟು ಬೋನಸ್‌ನ್ನು ಕೂಡ ಮಲಬಾರ್ ನೀಡುತ್ತದೆ. ೯ ಸಾವಿರ ರೂ.ಗೆ ( ಬೋನಸ್ ೪೨೭.೫ ರೂ.) ನಿಮಗೆ ಬೇಕಾದ ಉಂಗುರ ಅಥವಾ ಚೈನ್ ಖರೀದಿಸಬಹುದು. ಅಥವಾ ೨೪ ತಿಂಗಳಿಗೆ ಮುಂದುವರಿಸಿದರೆ ೧೨ ಸಾವಿರ ರೂ. (೪೨೭.೫ ರೂ. ಬೋನಸ್ ) ಬೆಲೆಯ ಬಂಗಾರ ನಿಮ್ಮದಾಗುತ್ತದೆ. ಬಜೆಟ್‌ಗೆ ತಕ್ಕಂತೆ ೫೦೦, ೧೦೦೦,೨೫೦೦, ೫೦೦೦ ರೂ. ಕಂತುಗಳಲ್ಲಿ ಸೇರಿಕೊಳ್ಳಬಹುದು. ಚಿನ್ನದ ನಾಣ್ಯ : ನಾನಾ ಬ್ಯಾಂಕ್‌ಗಳು, ಆಭರಣ ಕಂಪನಿಗಳು, ಅಷ್ಟೇಕೆ ಅಂಚೆ ಇಲಾಖೆ ಕೂಡ ಈವತ್ತು ಬಂಗಾರದ ನಾಣ್ಯಗಳನ್ನು ಮಾರಾಟ ಮಾಡುತ್ತಿವೆ. ಇವುಗಳೂ ಹೂಡಿಕೆಗೆ ಸುರಕ್ಷಿತ ವಿಧಾನ. ಬಂಗಾರದ ನಾಣ್ಯಗಳನ್ನು ಪಡೆದ ನಂತರ ಮಜೂರಿ ಶುಲ್ಕ ( ಮೇಕಿಂಗ್ ಚಾರ್ಜ್) ಅಂತ ಬೇರೆ ಕೊಡಬೇಕಾದ ಅಗತ್ಯ ಇರುವುದಿಲ್ಲ. ಚಿನ್ನ ಲೋಪವಾಗುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳನ್ನೂ ಕಂತಿನಲ್ಲಿ ಪಡೆಯಬಹುದು. ಆದ್ದರಿಂದ ಕೈಯಲ್ಲಿ ದುಡ್ಡಿಲ್ಲ ಅಂತ ಚಿನ್ನ ಖರೀದಿಸುವ ಯೋಜನೆಯನ್ನು ಕೈಬಿಡಬೇಡಿ. ಕಂತಿನ ಮಾರ್ಗದಲ್ಲಿ ಹನಿಗೂಡಿ ಹಳ್ಳವಾಗುತ್ತದೆ. ಬಂಗಾರ ನಿಮ್ಮದಾಗುತ್ತದೆ.
(ವಿಜಯಕರ್ನಾಟಕದಲ್ಲಿ ಪ್ರಕಟಿತ ವರದಿ )

Tuesday 3 November 2009

ಜನ ಚೇಂಜ್ ಕೇಳ್ತಾರೆ, ಕೇಬಲ್ ಟಿವಿಯಿಂದ ಡಿಟಿಎಚ್‌ಗೆ

ದಿನೇ ದಿನೆ ಡಿಟಿಎಚ್ ಉದ್ಯಮ ವಿಸ್ತರಿಸಿಕೊಳ್ಳುತ್ತಿದೆ. ಮನರಂಜನೆ ಕ್ಷೇತ್ರದಲ್ಲಿ ಈ ಉದ್ಯಮದ ಪಾತ್ರವೇನು ? ಅದರಲ್ಲೂ ಬಿಗ್‌ಟಿವಿಯ ವೈಶಿಷ್ಟ್ಯವೇನು ? ಕಂಪನಿಯ ಹಿರಿಯ ಉಪಾಧ್ಯಕ್ಷ ಉಮೇಶ್ ರಾವ್ ವಿಜಯ ಕರ್ನಟಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು :

೧. ಡಿಟಿಎಚ್ ವಿಸ್ತರಣೆಯಲ್ಲಿ ಕಂಡುಬರುತ್ತಿರುವ ಸವಾಲು ಯಾವುದು ?
ರಾಷ್ಟ್ರದಾದ್ಯಂತ ಡಿಟಿಎಚ್ ಸೇವೆ ಒದಗಿಸುವುದು ಎಲ್ಲಕ್ಕಿಂತ ಮುಖ್ಯ ಸವಾಲು. ಆದರೆ ರಿಲಯನ್ಸ್ ಬಿಗ್ ಟಿವಿಯು ೬,೫೦೦ಕ್ಕೂ ಹೆಚ್ಚು ಪಟ್ಟಣಗಳಲ್ಲಿ ೧ ಲಕ್ಷಕ್ಕೂ ಹೆಚ್ಚು ರೀಟೇಲ್ ಕೇಂದ್ರಗಳಲ್ಲಿ ಲಭ್ಯವಿದೆ. ರಿಲಯನ್ಸ್ ಬಿಗ್ ಟಿವಿಯಲ್ಲಿ ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ೩೦೦ಕ್ಕೂ ಹೆಚ್ಚು ಚಾನೆಲ್‌ಗಳಿವೆ.

೨. ಇತರ ಡಿಟಿಎಚ್‌ಗಿಂತ ಬಿಗ್ ಟಿವಿ ಹೇಗೆ ವಿಭಿನ್ನ ?
ತಂತ್ರಜ್ಞಾನ, ವಸ್ತು ಮತ್ತು ವಿತರಣೆಯ ವಿಷಯದಲ್ಲಿ ಬಿಗ್ ಟಿವಿ ವಿಭಿನ್ನ. ಎಂಪಿಇಜಿ ೪ ತಂತ್ರಜ್ಞಾನವನ್ನು ಮೊದಲು ಜಾರಿಗೊಳಿಸಿದ್ದೇವೆ. ೪೦೦ಕ್ಕೂ ಹೆಚ್ಚು ಚಾನಲ್‌ಗಳನ್ನು ಹೊಂದುವ ಸಾಮರ್ಥ್ಯ ನಮಗಿದೆ. ಇತರ ಯಾವುದೇ ಕಂಪನಿಗಿಂತ ಹೆಚ್ಚು ಚಾನಲ್‌ಗಳು ನಮ್ಮಲ್ಲಿವೆ. ೩೨ ಸಿನಿಮಾ ಚಾನಲ್‌ಗಳಿವೆ (ಪಿಪಿವಿ ಚಿತ್ರ ). ಇವು ಪ್ರಾದೇಶಿಕ ಭಾಷೆಗಳಲ್ಲೂ ಈ ಲಭ್ಯ. ಬಿಗ್ ಟಿವಿಯ ಕಾಲ್ ಸೆಂಟರ್ ೧೧ ಭಾಷೆಗಳಲ್ಲಿ, ನಿತ್ಯ ೫೦ ಸಾವಿರ ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ.

೩. ಭಾರತದಲ್ಲಿ ಡಿಟಿಎಚ್ ಭವಿಷ್ಯ ?
ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಟಿ.ವಿ ವೀಕ್ಷಕಕರನ್ನು ಹೊಂದಿರುವ ದೇಶ. ೧೧೯ ದಶಲಕ್ಷ ಕುಟುಂಬಗಳಲ್ಲಿ ಟಿ.ವಿ ಇದೆ. ಸದ್ಯಕ್ಕೆ ಡಿಟಿಎಚ್ ೧೩ ದಶಲಕ್ಷ ಕುಟುಂಬಗಳಲ್ಲಿ ಇದೆ. ಇದು ಶೇ.೨೫-೩೦ರ ದರದಲ್ಲಿ ಬೆಳೆಯುತ್ತಿದೆ. ಇತ್ತೀಚಿನ ಟ್ರೆಂಡ್ ಏನೆಂದರೆ ಜನ ಕೇಬಲ್ ಟಿವಿಯಿಂದ ಡಿಟಿಎಚ್‌ನತ್ತ ವಾಲುತ್ತಿರುವುದು. ಕ್ರಮೇಣ ಡಿಟಿಎಚ್ ಕೇಬಲ್ ಮತ್ತು ಸ್ಯಾಟಲೈಟ್ ಸಾಂದ್ರತೆಗೆ ಸಮನಾಗುವ ವಿಶ್ವಾಸವಿದೆ.

೪. ಬಿಗ್ ಟಿ.ವಿ ಇತರ ಡಿಟಿಎಚ್‌ಗಿಂತ ಎಷ್ಟು ಅಗ್ಗ ?
ನಮ್ಮಲ್ಲಿ ೯೯ ರೂ.ಗಳಿಂದ ಆರಂಭವಾಗುವ ೧೧ ಪ್ಯಾಕೇಜ್ ಇದೆ. ಮೂಲ ಪ್ಯಾಕೇಜ್‌ನಿಂದ ಚಾನಲ್‌ಗಳನ್ನು ಸೇರಿಸುತ್ತ ಹೋಗಬಹುದು. ನಿಮಗೆ ಯಾವ ಚಾನಲ್ ಬೇಕೋ ಅಷ್ಟನ್ನು ಯ್ಕೆ ಮಾಕೊಳ್ಳಬಹುದು. ಅತ್ಯಂತ ಕಡಿಮೆ ಎಂದರೆ ೯೯ ರೂ.ಗಳಿಗೆ ೮೧ ಚಾನೆಲ್. ಇದರಲ್ಲಿ ೭೦ ಟಿ.ವಿ ಚಾನೆಲ್ ೧೦ ಆಡಿಯೊ ಚಾನೆಲ್.

೫. ಜಾಹೀರಾತು ಸಲುವಾಗಿ ಬಿಗ್ ಟಿವಿ ಎಷ್ಟು ವೆಚ್ಚ ಮಾಡುತ್ತಿದೆ ?
ಬಿಗ್ ಟಿವಿ ತನ್ನ ಹೊಸ ಬ್ರಾಂಡ್‌ನ ಅಭಿಯಾನ ಕೈಗೊಂಡಿದ್ದು, ೫೦ ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ. ಮುದ್ರಣ, ಟಿ.ವಿ, ನೂರಕ್ಕೂ ಹೆಚ್ಚು ಇತರ ಪ್ರಕಾಶನ, ಆನ್‌ಲೈನ್, ೧ ಸಾವಿರ ವೆಬ್‌ಸೈಟ್, ೫೦ ರೇಡಿಯೊ ನಿಲಯಗಳ ಮೂಲಕ ಪ್ರಚಾರ ಅಭಿಯಾನ ನಡೆಯುತ್ತಿದೆ.

(ವಿಜಯ ಕರ್ನಾಟಕಕ್ಕೆ ಇತ್ತೀಚೆಗೆ ರಿಲಯನ್ಸ್ ಬಿಗ್ ಟಿವಿಯ ಹಿರಿಯ ಉಪಾಧ್ಯಕ್ಷ ಉಮೇಶ್ ರಾವ್ ಜತೆ ನಡೆಸಿದ ಸಂದರ್ಶನವಿದು )