Sunday, 9 August 2009

ರಾಮನಗರದ ಬಳಿ ಕಂಡ ಮರೆಯಲಾಗದ ಚಿತ್ರ...

ಚನ್ನಪಟ್ಟಣದ ಅರಳಾಳುಸಂದ್ರ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ್ದೆ. ಗೆಳೆಯ ಗಿರೀಶ ಅವರ ಸಾವಯವ ಕೃಷಿಯನ್ನು ಕಂಡು, ಅವರ ಮನೆಯಲ್ಲಿ ಉಂಡು ರಾಮನಗರಕ್ಕೆ ಹೊರಟಿದ್ದೆ. ಇದಕ್ಕೂ ಮುನ್ನ ಒಂದು ಸಣ್ಣ ಪ್ರಸಂಗ ನಡೆಯಿತು. ಗಿರೀಶ ಅವರ ಅಮ್ಮ ಮನೆಗೆ ಬಂದ ಅತಿಥಿಗೆ ಅಂತ ಮೊಟ್ಟೆ, ಕೋಳಿಸಾರು, ಮುದ್ದೆ ಮಾಡಿ ನಮಗಾಗಿ ಕಾಯುತ್ತಿದ್ದರು. ತೋಟವನ್ನೆಲ್ಲ ಸುತ್ತಾಡಿ ಬಳಲಿ ಮನೆಗೆ ಬಂದೊಡನೆ ತಟ್ಟೆಗೆ ಬಡಿಸಿ ತಂದರು. ತಟ್ಟೆಯನ್ನು ಕಂಡೊಡನೆ ನನ್ನ ತಪ್ಪಿನ ಅರಿವಾಯಿತು. ನನಗೆ ಮಾಂಸಾಹಾರ ಸೇವನೆ ಅಭ್ಯಾಸವಿಲ್ಲ ಎಂದು ಮೊದಲೇ ತಿಳಿಸಲು ಮರೆತುಬಿಟ್ಟಿದ್ದೆ. ಪಾಪ, ಆ ತಾಯಿ ತುಂಬ ನಿರಾಶರಾದರು. ಮೊದಲೇ ಹೇಳಬಾರದಿತ್ತೇ, ಹೇಳಿದ್ದರೆ ಬೇರೆಯೇ ಅಡುಗೆ ಮಾಡಿರುತ್ತಿದ್ದೆ, ಮಜ್ಜಿಗೆಯೂ ಇಲ್ಲ ಮನೇಲಿ ಎಂದರು. ಇಲ್ಲಮ್ಮಾ, ನೀವೇನೂ ಯೋಚನೆ ಮಾಡಬೇಡಿ, ನನಗೂ ಹೇಳಲು ಮರೆತು ಹೋಯಿತು. ಪರ‍್ವಾಗಿಲ್ಲ, ಅನ್ನ ಸಾರು ನನಗೆ ಸಾಕು ಎಂದೆ. ಅವರು ಹಾಗೆಯೇ ಮಾಡಿದರು. ಊಟ ಮಾಡುತ್ತಿದ್ದಂತೆ ಪಕ್ಕದ ಮನೆಯಿಂದ ಮಜ್ಜಿಗೆ ತಂದು ಕೊಟ್ಟರು. ಅದನ್ನೂ ಕುಡಿದೆ. ಅವರ ವಾತ್ಸಲ್ಯಮಯಿ ಉಪಚಾರ ನನಗೆ ನನ್ನ ಹಳ್ಳಿಯನ್ನು ನೆನಪಿಗೆ ತಂದಿತು. ಊಟವಾಗುತ್ತಿದ್ದಂತೆ ರೈತಸಂಘದ ಪುಟ್ಟಸ್ವಾಮಿ ಬಂದರು. ಅವರೊಡನೆ ಗಂಟೆಗಟ್ಟಲೆ ಹರಟೆ ಹೊಡೆದೆ. ಗ್ರಾಮ ಜೀವನ, ಬೆಂಗಳೂರಿನ ಪ್ರಭಾವ, ಪಟ್ಟಣ ಸೇರಿ ಕೆಡುವ ಹಳ್ಳಿ ಹೈದರ ಬಗ್ಗೆ ಮಾತನಾಡಿದೆವು. ಸಾವಯವ ಕೂಡ ಚರ್ಚೆಗೆ ಬಂತು.
ಅಷ್ಟು ಹೊತ್ತಿಗೆ ಸಾಯಂಕಾಲವಾಗಿತ್ತು. ಸ್ವಾದಿಷ್ಟವಾದ ಟೀ ಕುಡಿದು ಗಿರೀಶ್ ಮುಂತಾದವರಿಗೆ ಧನ್ಯವಾದ ತಿಳಿಸಿ, ನನ್ನ ಸ್ಕೂಟರನ್ನೇರಿ ರಾಮನಾಗರದ ಹಾದಿಯಲ್ಲಿ ಹೋದೆ. ದಾರಿ ಮಧ್ಯೆ ಮೋಡ ಕವಿದು ಸಮಾ ಮಳೆ ಬಂತು. ಯಾವುದೋ ಹಳ್ಳಿಯ ಬೀದಿ ಪಕ್ಕದ, ಹಂಚಿನ ಮಾಡಿನ ಕಟ್ಟಡದ ಬಳಿ ಸ್ಕೂಟರ‍್ ನಿಲ್ಲಿಸಿದೆ. ಅದೊಂದು ಸಾರ್ವಜನಿಕ ಕಟ್ಟಡ. ಹಳೆಯದಾಗಿತ್ತು. ಬಾಗಿಲು ಮುಚ್ಚಿದ ಗ್ರಾಮೀಣ ಗ್ರಂಥಾಲಯ ಕೊಠಡಿ, ಪುಟ್ಟ ಗುಡಿ, ಹಾಲಿನ ಸೊಸೈಟಿ ಅಲ್ಲಿತ್ತು. ಹುಡುಗನೊಬ್ಬ , ಲ್ಯಾಕ್ಟೋಮೀಟರನ್ನು ಹಾಲಿನಲ್ಲಿ ಮುಳುಗಿಸಿ ಪರೀಕ್ಷಿಸುತ್ತಿದ್ದ. ಇತ್ತೀಚಿನ ಕೆಎಂಎಫ್‌ ಚುನಾವಣೆಯಲ್ಲಿ ಯಾರ‍್ಯಾರಿಗೋ ಏನೇನೋ ಕೊಟ್ಟಿದ್ದರು. ಎಲ್ಲರೂ ಬಾಚಿದ್ದೇ ಬಾಚಿದ್ದು. ನಮಗೆ ಮಾತ್ರ ಐದು ಪೈಸಾ ಸಿಗಲಿಲ್ಲ ಎಂದು ಹಲ್ಲು ಕಿರಿಯುತ್ತಾ ಸಂಗಡಿಗರೊಡನೆ ಹರಟುತ್ತಿದ್ದ. ಮಿಕ್ಕವರೂ ಕಿಸಕಿಸನೆ ನಗುತ್ತಿದ್ದರು. ಮಳೆ ಬಿರುಸಾದೊಡನೆ ಬಡ ಮಹಿಳೆಯೊಬ್ಬಳು ತಳ್ಳುವ ಗಾಡಿಯನ್ನು ತಳ್ಳುತ್ತಾ ಮಾಡಿನ ಸಮೀಪ ನಿಲ್ಲಿಸಿದಳು. ಗಾಡಿಯಲ್ಲಿ ಮಕ್ಕಳ ಆಟದ ಸಾಮಾನುಗಳು, ಬಿಂದಿಗೆ, ಪ್ಲಾಸ್ಟಿಕ್ ಪದಾರ್ಥಗಳು ಇದ್ದವು. ಪ್ಲಾಸ್ಟಿಕ್ ನ ಹಾಳೆಯನ್ನು ವಸ್ತುಗಳ ಮೇಲೆ ಅವಸರದಲ್ಲಿ ಮುಚ್ಚಿದ ಮಹಿಳೆ ತನ್ನ ಹಸುಗೂಸನ್ನು ಅವುಚಿಕೊಂಡು ಗಾಡಿಯ ಚಕ್ರದ ನಡುವೆ ಕುಕ್ಕರಗಾಲಿನಲ್ಲಿ ಕುಂತಳು. ಆಗ ಹತ್ತಿರವಿದ್ದವರು, ಬಾರಮ್ಮಾ, ಮಳೆ ಜೋರಿದೆ. ಇಲ್ಲಿ ನಿಲ್ಲು ಎಂದರು. ಕಟ್ಟಡದ ಜಗುಲಿಗೆ ಬಂದು ಯಾವಾಗ ಮಳೆ ನಿಲ್ಲುತ್ತದೆಯೋ ಅಂತ ಆಕಾಶ ನೋಡುತ್ತ ನಿಂತಳು. ಗಾಳಿ ಜೋರಾಗಿ ಬೀಸಿದಾಗ ಪ್ಲಾಸ್ಟಿಕ್ ಹಾಳೆ ಜಾರಿ ಆಟದ ಸಾಮಾನುಗಳು ತೊಯ್ದು ತೊಪ್ಪೆಯಾಯಿತು. ಮಗುವನ್ನು ಜಗುಲಿಯಲ್ಲಿಟ್ಟ ಮಹಿಳೆ, ಲಗುಬಗೆಯಿಂದ ಮತ್ತೆ ಪ್ಲಾಸ್ಟಿಕ್ ಹಾಳೆಯನ್ನು ಸರಿಪಡಿಸಿ, ತಾನೂ ಒದ್ದೆಯಾದಳು. ಮಗು ಚಳಿಯಲ್ಲಿ ನಡುಗುತ್ತಿತ್ತು.
ಮಳೆ ಸ್ವಲ್ಪ ಕಮ್ಮಿಯಾಗುತ್ತಿದ್ದಂತೆ ಮೆಟ್ಟಿಲನ್ನು ಇಳಿದು ಗಾಡಿಯ ನಡುವೆ ಮಗುವನ್ನು ಇಟ್ಟ ಮಹಿಳೆ, ತುಂತುರು ಮಳೆಗೆ ಲೆಕ್ಕಿಸದೆ ಗಾಡಿಯನ್ನು ತಳ್ಳುತ್ತಾ ಹೋದಳು. ಮುಂದೆ ಇಳಿಜಾರಿನಲ್ಲಿ ಹಿಂಬದಿಯಿಂದ ಗಾಡಿಯನ್ನು ಗಟ್ಟಿಯಾಗಿ ಹಿಡಿಯುತ್ತ ಬೇಗ ಬೇಗನೆ ಸಾಗಿ ತಿರುವಿನಲ್ಲಿ ಮರೆಯಾದಳು. ಆಕೆಯ ಚಿತ್ರ ಸಣ್ಣದಾಗುತ್ತಿದ್ದಂತೆ ನೋಡುತ್ತಿದ್ದ ಹಳ್ಳಿಗರು, ನೋಡ್ರಲಾ, ಆಯಮ್ಮ ಜೀವನಕ್ಕೆ ಎಷ್ಟು ಕಷ್ಟ ಪಡ್ತಿದಾಳೆ, ನೋಡಿ ಕಲೀರಿ..ಅಂತ ಆಸುಪಾಸಿನ ಮಿತ್ರರಿಗೆ ಹೇಳಿದರು.
ಬೆಂಗಳೂರಿಗೆ ಬಂದ ನಂತರವೂ ತಳ್ಳುವ ಗಾಡಿಯಲ್ಲಿ ಹಸುಗೂಸನ್ನು ಇಟ್ಟು ಮಳೆಯಲ್ಲಿಯೇ ನೆನೆಯುತ್ತ ಸಾಗಿದ ಮಹಿಳೆಯ ಸಂಕಟ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಈಗಲೂ ಆ ಚಿತ್ರ ಮರೆಯಲಾಗುತ್ತಿಲ್ಲ...
ಕಾಫಿಯ ಬಗ್ಗೆ : ನಾಗೇಶ ಹೆಗಡೆಯವರ ಮನೆಯ ನಾಯಿಯ ಹೆಸರು ಕಾಫಿ, ಮುದ್ದಾದ, ಬುದ್ಧಿವಂತ ಶ್ವಾನವದು. ಹೆಗಡೆಯವರ ಮೈತ್ರಿಗ್ರಾಮದ ಮನೆಗೆ ಶನಿವಾರ ಹೋಗಿದ್ದಾಗ ಮೊದಲು ಅದನ್ನೇ ಪರಿಚಯ ಮಾಡಿಕೊಟ್ಟರು. ಮೊದಲು ಸಹಜವಾಗಿ ಬೊಗಳಿದ್ದ ಕಾಫಿ, ಕೆಲವು ಕ್ಷಣಗಳ ಕಾಲ ನನ್ನನ್ನೇ ದಿಟ್ಟಿಸುತ್ತಿತ್ತು. ನಂತರ ಪರಿಚಯವಾದವರಂತೆ ಸುಮ್ಮನಿತ್ತು. ಹೆಗಡೆಯವರ ಜತೆ ಸಾಯಂಕಾಲ ಸ್ವಲ್ಪ ಅಡ್ಡಾಡಲು ಹೊರಟಾಗ ಕಾಫಿಯೂ ನಮ್ಮೊಡನೆ ಹೊರಟಿತು. ಹೊಂಡಾ ಆಕ್ಟಿವಾದಲ್ಲಿ ನಾವಿಬ್ಬರು ಹೋಗುತ್ತಿದ್ದರೆ, ಪಕ್ಕದಲ್ಲಿ ಕಾಫಿಯ ರನ್ನಿಂಗ್..ಕೆಲವು ಸಲ ಕೊಳ್ಳದಂಥ ಮಾರ್ಗದಲ್ಲಿ ಕಾಫಿಯೇ ನಮ್ಮ ಗಾಡಿಯನ್ನು ಹಿಂದೆ ಹಾಕುತ್ತಿತ್ತು. ಅದರ ರೇಸನ್ನು ಕಂಡು ನಗು ಉಕ್ಕುತ್ತಿತ್ತು. ಆದರೆ ಕಾಫಿಯ ಗುಣ ಚೆನ್ನಾಗಿದೆ ಅನ್ನಿಸಿತು. ವಾಪಸ್‌ ಬರುವಾಗಲೂ ಅದರ ರನ್ನಿಂಗ್ ನಡೆದಿತ್ತು.

Friday, 7 August 2009

ನಗರಕ್ಕಿಂತ ಗ್ರಾಮಗಳಲ್ಲಿನ ಬಡವರೇ ಅದೃಷ್ಟವಂತರು

ಹಳ್ಳಿಯ ಬಗ್ಗೆ ಬರೆಯೋದು, ಓದೋದು, ಹಳ್ಳಿಗರ ಜತೆ ಸುತ್ತುವುದು, ಹರಟೆ ಹೊಡೆಯೋದು ನಂಗೆ ತುಂಬ ಖುಷಿ ಕೊಡುತ್ತದೆ. ಆದರೆ ಹಳ್ಳಿಗಳನ್ನು ಕಾಡುತ್ತಿರುವ ಸಮಸ್ಯೆಗಳು ತಲ್ಲಣಗೊಳಿಸುತ್ತವೆ. ಹೀಗಿದ್ದರೂ ನಗರದಲ್ಲಿರುವ ಬಡವರಿಗಿಂತ ಗ್ರಾಮಗಳಲ್ಲಿನ ಬಡವರೇ ಅದೃಷ್ಟವಂತರು ಎಂದು ನನಗನ್ನಿಸುತ್ತದೆ. ಹಳ್ಳಿಯಲ್ಲಿ ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಹೊಟ್ಟೆಗೆ ಒಂದು ಹಿಡಿ ಅನ್ನ ಸಿಗಬಹುದು. ಆದರೆ ನಗರದಲ್ಲಿ ಹಾಗಲ್ಲ. ಮುಖ ನೋಡಿ ಮಾತನಾಡಿಸುವವರೇ ಇಲ್ಲ. ದುಡ್ಡಿಲ್ಲ ಎಂದಾದರೆ ನಗರದಲ್ಲೇನೂ ಕೈಗೆ ಸಿಗದು. ಈವತ್ತು ಹಳ್ಳಿ ಜನರಲ್ಲಿ ಹಣ ಓಡಾಡದಿರಬಹುದು. ಆದರೆ ಪರಸ್ಪರ ಸುಖ ದುಃಖ ವಿಚಾರಿಸುವ, ಸೌಜನ್ಯ ಉಳಿದುಕೊಂಡಿದೆ.
ಈವತ್ತು ಕ್ರೆಡಿಟ್‌ ಕಾರ್ಡ ಬಳಕೆದಾರರ ಸಂಘದ ಕಾರ್ಯದರ್ಶಿ ಗಿಡ್ಡಪ್ಪನವರೂ ಇದೇ ಮಾತನ್ನು ಹೇಳಿದರು. ಅವರು ಈ ಹಿಂದೆ ಬ್ಯಾಂಕ್ ಅಧಿಕಾರಿಯಾಗಿದ್ದವರು. ಅಗಾಧವಾದ ಜೀವನಾನುಭವ ಅವರಲ್ಲಿದೆ. ಒಂದೂರಿನಲ್ಲಿದ್ದಾಗ ಊರಿನ ಸೊಸೈಟಿಗಳಿಗೆ ತಲಾ ಹತ್ತು ಹಸುಗಳನ್ನು ಕೊಳ್ಳಲು ಸಾಲದ ನೆರವು ನೀಡಿದರು. ಅವರು ಮಾಡಿದ್ದಿಷ್ಟೇ, ಸೊಸೈಟಿಗಳು ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿಯನ್ನೇ ಸಾಲವಾಗಿ ವಿತರಿಸಿದ್ದರು. ಹಸು ಕೊಂಡ ಜನ ಶ್ರದ್ಧೆಯಿಂದ ಸಾಕಿದರು. ಹೈನುಗಾರಿಕೆಯಲ್ಲಿ ಜೀವನೋಪಾಯ ಕಂಡುಕೊಂಡರು. ಸಾಲವನ್ನು ಚುಕ್ತಾ ಮಾಡಿದರು.
ಮತ್ತೊಂದು ಸಲ ಯಾವುದೋ ಊರಿನಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು, ರಟ್ಟು, ಕಡತಗಳು, ಫೈಲ್‌ ಕವರ‍್ ಗಳನ್ನು ತಯಾರಿಸುವ ಸಣ್ಣ ಘಟಕ ಸ್ಥಾಪಿಸಲಾಯಿತು. ಗಿಡ್ಡಪ್ಪನವರು ಸಾಲ ಕೊಡಿಸಿದರು. ಮಹಿಳೆಯರಯ ಉತ್ಸಾಹದಿಂದ ಫೈಲುಗಳನ್ನು ತಯಾರಿಸಿದರು. ಆದರೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟವಾಯಿತು.
ಮತ್ತೊಮ್ಮೆ ಆದಿವಾಸಿ ಜನರಿಗೆ ಸಾಲ ಕೊಡಲು ಗಿಡ್ಡಪ್ಪ ಮನಸ್ಸು ಮಾಡಿದರು. ಆದರೆ ನಮಗೇಕೆ ಸಾಲ ಎಂದು ಹೇಳಿದರಂತೆ. ಮಾತಿನ ನಡುವೆ ಅವರೊಂದು ಕಥೆ ಹೇಳಿದರು.
ಒಮ್ಮೆ ಬ್ಯಾಂಕ್ ನವರು ಕುಗ್ರಾಮವೊಂದಕ್ಕೆ ತೆರಳಿದರು. ಊರಿನ ಕಟ್ಟೆಯಲ್ಲಿ ಯುವಕರು ಕೂತು ಹರಟುತ್ತ, ಜೂಜಾಡುತ್ತ ಮಜಾ ಉಡಾಯಿಸುತ್ತಿದ್ದರು. ಅವರ ಹತ್ತಿರಕ್ಕೆ ಬಂದ ಅಧಿಕಾರಿಗಳು, ನೀವೇಕೆ ಬೇರೆ ಕೆಲಸವಿಲ್ಲದೆ ಕೂತಿದ್ದೀರಾ ? ಏನಾದರೂ ಉದ್ಯೋಗ ಮಾಡಿ. ಬೇಕಾದರೆ ಸಾಲ ಕೊಡುತ್ತೇವೆ. ಹಸುಗಳನ್ನು ಸಾಕಿ. ಕುರಿ ಸಾಕಿ ಎಂದರು.
ಅದಕ್ಕೆ ಆ ಯುವಕರು, ಮತ್ತೆ ಏನಾಗುತ್ತದೆ ? ಎಂದರು. ಅಧಿಕಾರಿಗಳು, ಕುರಿ, ಹಸುಗಳನ್ನು ಸಾಕಿ ಹಾಲು, ಹಣ ಗಳಿಸಬಹುದು. ಇದರಿಂದ ನಿಮ್ಮ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ. ಮುಂದೆ ಒಳ್ಳೆಯದಾಗುತ್ತದೆ. ಎಂದರು.
ಮುಂದೆ ಏನಾಗುತ್ತದೆ ಎಂದರು ಯುವಕರು. ಅಧಿಕಾರಿಗಳು, ನಿಮಗೆ ಮದುವೆಯಾಗಿ ಮಕ್ಕಳಾಗುತ್ತವೆ. ಸಂಸಾರ ಸರಾಗವಾಗಿ ನಡೆಯುತ್ತದೆ ಎಂದು ಬಣ್ಣಿಸಿದರು.
ಪಟ್ಟು ಬಿಡದ ಯುವಕರು, ಮುಂದೇನಾಗುತ್ತದೆ ಎಂದರು. ಅದಕ್ಕೆ ಅಧಿಕಾರಿಗಳು, ವಯಸ್ಸಾದ ಮೇಲೆ ಆನಂದವಾಗಿ, ಯಾವ ಚಿಂತೆಯೂ ಇಲ್ಲದೆ ಕಾಲ ಕಳೆಯಬಹುದು ಎಂದರು.
ಅದಕ್ಕೆ ಆ ಯುವಕರು, ನಾವೀಗ ಅದನ್ನೇ ಮಾಡುತ್ತಿದ್ದೇವೆ. ಆನಂದವಾಗಿ ಕಾಲ ಕಳೆಯಲು ವಯಸ್ಸಾಗುವ ತನಕ ಕಾಯಬೇಕೇ ? ಎಂದರಂತೆ.

Thursday, 6 August 2009

ಸ್ಪೂರ್ತಿದಾತರಿಗೆ ನಮನಗಳು...

ಅವರ ಹೆಸರು ರೇಣುಕಾ ಮಂಜುನಾಥ್‌..
ಪತ್ರಕರ್ತರಿಗೆ ಇರಬೇಕಾದ ಸೂಕ್ಷ್ಮತೆ, ಬರವಣಿಗೆ, ಸುದ್ದಿ ನಾಸಿಕ, ಸುದ್ದಿ ಸಂಗ್ರಹಕ್ಕೆ ಬೇಕಾದ ಸಂಪನ್ಮೂಲ, ಅಧ್ಯಯನ ಎಲ್ಲವೂ ಇದೆ. ಮನೆಯ, ಸಂಸಾರದ ಕೆಲಸದ ಒತ್ತಡದ ನಡುವೆ ಸಮಾಜದ ಆಗಹೋಗುಗಳಿಗೆ ಸದಾ ಸ್ಪಂದಿಸುವ ಅವರ ಸ್ವಭಾವ ನನ್ನ ಗಮನ ಸೆಳೆದಿತ್ತು.
ಈವತ್ತು ಸಂಪನ್ಮೂಲ ವ್ಯಕ್ತಿಯೊಬ್ಬರ ದೂರವಾಣಿ ನಂಬರ‍್ ಪಡೆಯಲೆಂದು ಅವರಿಗೆ ಫೋನ್‌ ಮಾಡಿದೆ. ನಂಬರ್‌ ಮಾತ್ರವಲ್ಲದೆ, ಪತ್ರಿಕೋದ್ಯಮದ ಒಳನೋಟದ ಬಗ್ಗೆ ಸಂಕ್ಷಿಪ್ತವಾಗಿ ತಮಗೆ ತಿಳಿದಿದ್ದನ್ನೆಲ್ಲ ಹೇಳಿಕೊಟ್ಟರು. ಸುದ್ದಿ, ಮಾಹಿತಿ, ಜ್ಞಾನ ನೀಡುವವರನ್ನು ಹೇಗೆ ಸ್ಮರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಅದರಲ್ಲಿಯೂ ಮುಖ್ಯವಾಗಿ ಹೇಳಿದ್ದೇನೆಂದರೆ- " ನಮಗೆ (ಪತ್ರಕರ್ತರಿಗೆ ಅಥವಾ ಯಾರಿಗೂ ಆಗಬಹುದು) ಮಗುವಿನಲ್ಲಿರುವ ಕುತೂಹಲ ಇರಬೇಕು. ಯಾವುದನ್ನು ಕೂಡ ನನಗೆ ಗೊತ್ತು ಅಂತ ಅಲಕ್ಷ್ಯ ಮಾಡಬಾರದು..ಯಾವುದೋ ಸಣ್ಣ ಎಳೆ ಮಹತ್ವದ ಮತ್ತೆಲ್ಲಿಗೋ ಕರೆದೊಯ್ಯಬಹುದು.. " ಎಂದರು.ಎಷ್ಟು ಸತ್ಯವಾದ ಮಾತು ಅಲ್ವಾ...ರೇಣುಕಾ ಮಂಜುನಾಥ್‌ ಅವರೇ, ಇಂತಹ ಸಲಹೆ, ಮಾರ್ಗದರ್ಶನ ಸದಾ ನಿರೀಕ್ಷಿಸುತ್ತೇನೆ. ನಿಮಗೆ ಧನ್ಯವಾದಗಳು.
ಈವತ್ತು ವಿಜಯ ಕರ್ನಾಟಕದಲ್ಲಿ ರೈತರ ಮಕ್ಕಳು ಯಾಕೆ ಬೇಸಾಯ ಮಾಡಲ್ಲ ಎಂಬ ಶೀರ್ಷಿಕೆಯ ನನ್ನ ಲೇಖನ ಪ್ರಕಟವಾಗಿದೆ. ಬೆಳಗ್ಗೆಯೇ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿಯವರು ಕರೆ ಮಾಡಿದ್ದರು.
ಕೇಶವ ಪ್ರಸಾದ್‌ ಅವರೇ, ತುಂಬ ಚೆನ್ನಾಗಿ ಲೇಖನ ಬರೆದಿದ್ದೀರಾ, ರೈತರ ಸಮಸ್ಯೆಗಳು ಮತ್ತಷ್ಟು ಬೆಳಕಿಗೆ ಬರಬೇಕು. ಹೀಗೆಯೇ ಬರೆಯುತ್ತಿರಿ...ಅಂತ ಹಾರೈಸಿದರು. ಸ್ವಾಮೀಜಿಯವರೇ, ನಿಮ್ಮ ಹಾರೈಕೆಗೆ ಪ್ರಣಾಮಗಳು.
ಮತ್ತೊಬ್ಬ ಓದುಗ, ಶಂಕರ ಮೂರ್ತಿ ಎಂಬುವರು, " ನಿಮ್ಮ ಲೇಖನ ಓದಿ ಖುಷಿ ಆಯಿತು. ನಾನೂ ರೈತನ ಮಗ. ೪ ಲಕ್ಷ ರೂ. ಸಾಲ ಮಾಡಿದ್ದೇನೆ. ಬೆಳೆ ನಷ್ಟವಾಗಿದೆ. ಮೋಸ ಮಾಡುವವರಿಗೆ ಸಾಲಮನ್ನಾ ಉಪಯೋಗವಾಗಿದೆ. ನಮಗೆಲ್ಲ ಅಲ್ಲ.. ಎಂದು ಪ್ರತಿಕ್ರಿಯಿಸಿದ್ದರು. ವಿಷಾದದಲ್ಲಿಯೂ, ಲೇಖನ ಅವರಿಗೆ ಖುಷಿ ತಂದಿತ್ತು.
ಎಷ್ಟೋ ಸಲ ಹಿರಿಯರು, ಕಿರಿಯರು ಆಡುವ ಪ್ರಬುದ್ಧ ಮಾತು, ಸಲಹೆಗಳು ಹೀಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತವೆ. ಅವರಿಗೆಲ್ಲ ಕೃತಜ್ಞತೆ ನುಡಿಚೈತ್ರದ ಮೂಲಕ ಮತ್ತೆ ಮತ್ತೆ ಧನ್ಯವಾದಗಳು.

Wednesday, 5 August 2009

ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?

ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ.
ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ.
ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..
ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.
ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.
ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು
ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ, ಸಾಲ ಜಾಸ್ತಿಯಾಗುತ್ತಿದೆ...
ಇಷ್ಟೆಲ್ಲ ಸಮಸ್ಯೆಗಳಿರುವಾಗ ದಿಕ್ಕು ತೋಚದೆ ಕೀಳರಿಮೆಯಿಂದ ನೊಂದು ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದಯವಿಟ್ಟು ಗ್ರಾಮ ವಾಸ್ತವ್ಯ ಮಾಡಿ ಅಂತ ಮಂತ್ರಿಗಳಿಗೆ ಪಕ್ಷಾಧ್ಯಕ್ಷರು ಉತ್ತರದಿಂದ ಬಂದು ಕೌನ್ಸಿಲಿಂಗ್ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಮಠಗಳು ಕೂಡ ಸಾಂಪ್ರದಾಯಿಕ ವ್ಯವಸಾಯಗಳನ್ನೆಲ್ಲ ಕೈ ಬಿಟ್ಟು ಶಿಕ್ಷಣ, ಎಂಜಿನಿಯರಿಂಗ್ ಅಂತ ಬೇರೆ ಉದ್ಯೋಗಗಳಲ್ಲಿ ಫಸಲು ಕಾಣುತ್ತಿವೆ. ಇನ್ನೂ ಕೃಷಿಯನ್ನು ನೆಚ್ಚಿರುವ ಸಣ್ಣ ಪುಟ್ಟ ಮಠಗಳ ಸ್ಥಿತಿ ಬಡಪಾಯಿ ರೈತನಿಗೆ ಸಮವಾಗಿದೆ.
ಎದೆ ಮುಟ್ಟಿ ಕೇಳಿ, ಯಾರಿಗೆ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವಾಸೆ ಇರುತ್ತದೆ ? ನಮ್ಮ ಸರಕಾರಗಳು ನಿಜಕ್ಕೂ ಪ್ರಾಂಜಲ ಮನಸ್ಸಿನಿಂದ ರೈತರ ನೋವನ್ನು ಶಮನಗೊಳಿಸುತ್ತಿವೆಯಾ ? ಪ್ರತಿ ಸಲ ಬಜೆಟ್ ಮಂಡನೆಮಧ್ಯಕ್ಕೆ ಒಗ್ಗೂಡಿಸುಯಾದಾಗಲೂ ಸರಕಾರ ತನ್ನದು ರೈತಪರ ಬಜೆಟ್ ಅಂತ ಘೋಷಿಸುವುದನ್ನು ನೋಡುತ್ತೇವೆ. ಕೇಂದ್ರ ಸರಕಾರ ವಿದರ್ಭ ಪ್ರಾಂತ್ಯದ ರೈತರಿಗೆ ಪ್ಯಾಕೇಜ್ ಪ್ರಕಟಿಸಿ ಕೈ ತೊಳೆಯಿತು. ಆದರೆ ಈವತ್ತಿಗೂ ಅಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ.
ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಉತ್ತೇಜಿಸಿದರೆ ರೈತನ ಬದುಕು ಉದ್ಧಾರವಾದೀತು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸುಲಿಗೆ ನಿಂತರೆ, ಬೆಳೆಗೆ ಯೋಗ್ಯ ಬೆಲೆ ಕಟ್ಟಿದರೆ ಮಿಕ್ಕಿದ ಸಮಸ್ಯೆಗಳೆಲ್ಲ ಕರಗಿಯಾವು ಅಂತ ಎಲ್ಲರಿಗೂ ಗೊತ್ತಿದೆ. ಆದರೆ ರೈತರ ಕಲ್ಯಾಣದ ಮಂಥನ, ಜಿಜ್ಞಾಸೆಗಳೆಲ್ಲ ಬಾಯುಪಚಾರದಲ್ಲೇ ನಿಂತುಬಿಟ್ಟಿದೆ. ಬರೀ ಮಾತು...ಮಾತು...ಮಾತು..ಬಹುಶಃ ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎಂದರೆ ಕೃಷಿಯೇ.
ನೋಡಿ, ಕೃಷಿ ಕ್ಷೇತ್ರದ ಸುಧಾರಣೆಗೆ ಉದ್ಯಮ ಬೆಂಬಲವಾಗಿ ನಿಲ್ಲಬೇಕು. ಅಭಿವೃದ್ಧಿ ಹೊಂದಿದ ಪ್ರತಿ ರಾಷ್ಟ್ರದಲ್ಲಿಯೂ ಶೇ.೮೦ರಷ್ಟು ಕೃಷಿ ಉತ್ಪನ್ನಗಳು ಸಮಸ್ಕರಣೆಯಾಗುತ್ತವೆ. ಆದರೆ ನಮ್ಮಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಹೊತ್ತಿಗೆ ಶೇ. ೪೦ರಷ್ಟು ಸಂಸ್ಕರಣೆಯಾಗದೆ ವ್ಯರ್ಥವಾಗುತ್ತವೆ.
ಗ್ರಾಮೀಣ ಪ್ರದೇಶಗಳ ಸಮಸ್ಯೆ ಮತ್ತು ಆತಂಕದ ಕಾರಣಗಳು ಒಂದೊಂದು ಕಡೆಯಲ್ಲಿ ಭಿನ್ನ. ನಮಗೆ ಚಾಮುಂಡಿ ಬೆಟ್ಟ ಗೊತ್ತು. ಬನ್ನೇರು ಘಟ್ಟ ಗೊತ್ತು. ಯಾಕೆಂದರೆ ಅವೆಲ್ಲ ಬೆಂಗಳೂರಿಗೆ ಸಮೀಪದಲ್ಲಿ ಇದೆ. ಆದರೆ ಗದಗಿನ ಸಮೀಪ ಸುಕಾರು ಒಂದು ಲಕ್ಷ ಎಕರೆಯಲ್ಲಿ ಹರಡಿರುವ ಕಪ್ಪತ್ತಗುಡ್ಡದ ಹೆಸರು ಎಷ್ಟು ಮಂದಿಗೆ ಗೊತ್ತಿದೆ ? ಹೇರಳ ನೈಸರ್ಗಿಕ ಸಂಪನ್ಮೂಲದ ಆಗರವಾಗಿರುವ ಕಪ್ಪತ್ತಗುಡ್ಡದಲ್ಲಿ ಅತ್ಯಂತ ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ ನಾನಾ ಬಗೆಯ ವದಂತಿಗಳು ಕೂಡಾ. ಅದೇನೆಂದರೆ ಗಣಿಗಾರಿಕೆ. ಇಲ್ಲಿ ಇದೆ ಎನ್ನಲಾಗಿರುವ ಚಿನ್ನದ ಅದಿರನ್ನು ಕಬಳಿಸಲು ಯತ್ನಿಸುತ್ತಿರುವ ಕಂಪನಿಗಳು, ಸೋಡಿಯಂ ಸಯನೈಡ್ ಅನ್ನು ಪ್ರಯೋಗಿಸಲು ಸಂಚು ಹೂಡಿವೆ ಎಂಬ ಗುಲ್ಲು ಗುಡ್ಡದ ತಪ್ಪಲಿನಲ್ಲಿದೆ. ಚಿನ್ನದ ಗಣಿಗಾರಿಕೆಯಲ್ಲಿ ಬಳಸುವ ಈ ಸೋಡಿಯಂ ಸಯನೈಡ್ ಅತ್ಯಂತ ವಿಷಪೂರಿತ.
ಕಪ್ಪತ್ತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪದ ಮೇಲೆ ಬಂಡವಾಳಶಾಹಿ ಕಂಪನಿಗಳ ವಕ್ರ ದೃಷ್ಟಿ ಬಿದ್ದಿದೆ. ಹೇಗಾದರೂ ಗುಡ್ಡದಲ್ಲಿ ಗಣಿಗಾರಿಕೆ ನಡೆಸಬೇಕೆಂದು ಹೊಂಚು ಹಾಕುತ್ತಿವೆ ಎಂಬ ವದಂತಿ ಈ ಭಾಗದ ಐವತ್ತಾರು ಗ್ರಾಮಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಗಣಿಗಾರಿಕೆ ಆರಂಭವಾದರೆ ಅಲ್ಲಿನ ಪರಿಸರ, ಜೀವಸಂಕುಲ, ಸುತ್ತುಮುತ್ತಲ ಕೃಷಿ ಬದುಕಿನ ನಶ ಸಮೀಪಿಸಿದಂತೆಯೇ ಸರಿ. ಆದರೆ ಈ ಗಂಭೀರ ಸಮಸ್ಯೆಯನ್ನು ಆಲಿಸಲು ಒಬ್ಬರೂ ಬಂದಿಲ್ಲ ಎಂದು ನೋವು ಮತ್ತು ಅಸಹನೆಯಲ್ಲಿ ಹೇಳುತ್ತಾರೆ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿ.
ಹೀಗೆ ಏಕಕಾಲದಲ್ಲಿ ದಶದಿಕ್ಕುಗಳಿಂದ ಸಮಸ್ಯೆಗಳು ಬಂದೆರಗಿರುವುದರಿಂದ ಯುವಜನತೆ ಬೆಂಗಳೂರಿಗೋ, ಮುಂಬಯಿಗೋ, ಗೋವಾಗೋ, ಹುಬ್ಬಳ್ಳಿಗೋ ಹೋಗುವುದರಲ್ಲಿ ಆಶ್ಚರ್ಯವಾಗುವಂಥದ್ದೇನಿದೆ ?

Tuesday, 4 August 2009

ಕೃಷಿ ನೆಚ್ಚಿಕೊಂಡ ಮಠಗಳ ವ್ಯಥೆ...

" ಕೃಷಿಯ ಬಗ್ಗೆ ನಮ್ಮ ಜನಕ್ಕೆ ಅತೀವ ಕೀಳರಿಮೆ ಉಂಟಾಗಿದೆ. ಈ ಹಿಂದೆ ವ್ಯವಸಾಯವನ್ನು ಆದಾಯಕ್ಕೆ ನೆಚ್ಚಿಕೊಂಡಿದ್ದ ಮಠಗಳು ಕೂಡ ಈಗ ಶಿಕ್ಷಣ, ವೈದ್ಯಕೀಯದಲ್ಲಿ ಫಸಲು ಕಾಣುತ್ತಿವೆ. ಬೇಸಾಯವನ್ನು ನೆಚ್ಚಿಕೊಂಡಿರುವ ಚಿಕ್ಕಪುಟ್ಟ ಮಠಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಯಾರೊಬ್ಬರೂ ಬಹಿರಂಗವಾಗಿ ಹೇಳುತ್ತಿಲ್ಲವಷ್ಟೇ...
ಸ್ವತಃ ಸ್ವಾಮೀಜಿಯೊಬ್ಬರೇ ಹೇಳಿದ ಮಾತಿದು. ಅವರ ಹೆಸರು ಶ್ರೀ ಶಿವಕುಮಾರ ಸ್ವಾಮಿ. ಗದಗದ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಸ್ವಾಮೀಜಿಯವರು. ೨೦೦೨ರಲ್ಲಿ ಪಟ್ಟವನ್ನೇರಿದ್ದ ಶಿವಕುಮಾರ ಸ್ವಾಮಿಯವರಿಗೆ ಪರಿಸರದ ಬಗ್ಗೆ ಕಾಳಜಿ. ಸ್ವತಃ ಕೃಷಿಕರು ಎಂದು ಹೇಳಿಕೊಳ್ಳಲು ಅವರಿಗೆ ಹೆಮ್ಮೆ. ಕೃಷಿ ಬಿಟ್ಟರೆ ಮಿಕ್ಕಿದ್ದೆಲ್ಲ ದಂಧೆ ಎನ್ನುವ ಸ್ವಾಮೀಜಿ ಗದಗ ಸಮೀಪದ ಕಪ್ಪತ್ತಗುಡ್ಡದಲ್ಲಿ ಎದ್ದಿರುವ ಗಣಿಗಾರಿಕೆಯ ಭೀತಿ ಬಗ್ಗೆ ಇತ್ತೀಚೆಗೆ ವಿವರಿಸಿದರು. ಆ ಬೆಟ್ಟದಲ್ಲಿ ಹುದುಗಿರುವ ಚಿನ್ನದ ಅದಿರನ್ನು ತೆಗೆಯಲು ಕೆಲವು ಕಂಪನಿಗಳು ಹುನ್ನಾರ ನಡೆಸಿದ್ದು, ಬೆಟ್ಟದ ಉಳಿವಿಗೆ ಸಂಚಕಾರ ಬಂದಿದೆ ಎಂಬುದು ಅವರ ಆತಂಕ.
ಹಳ್ಳಿಯ ಜನಜೀವನದ, ಕಷ್ಟ ಸಂಕಷ್ಟಗಳ ಆಳವಾದ ಪರಿಚಯ ಇರುವ ಸ್ವಾಮೀಜಿಗೆ ಸರಕಾರ ಪರಿಸರ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ. ಆದರೆ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಎತ್ತಿರುವ ಧ್ವನಿಯನ್ನು ಮುಚ್ಚಲು ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ವಾಕ್ಯ ಮಾತನಾಡಲೂ ನನಗೆ ಅವಕಾಶ ನೀಡಿರಲಿಲ್ಲ. ಆದರೆ ಆತ್ಮವಂಚನೆಯಿಂದ ಬದುಕಲು ನನಗೆ ಸಾಧ್ಯವಿಲ್ಲ. ಹಳ್ಳಿಯ ಪರಿಸರದ ಸಂರಕ್ಷಣೆಗೆ, ಕೃಷಿಕರ ಹಿತಾಸಕ್ತಿಗೆ ದುಡಿಯುವುದನ್ನು ನಿಲ್ಲಿಸಲಾರೆ ಎನ್ನುತ್ತಾರೆ ಶಿವಕುಮಾರ ಸ್ವಾಮಿ.
ಬೆಸಗರಹಳ್ಳಿ ರಾಮಣ್ಣನವರ ಓದು
ಅಣ್ಣ ಎಲ್ಲಾದರೂ ಹೋದರೆಂದರೆ ಎರಡು ಕೈಯಲ್ಲೂ ಗಿಟಕಿರುತ್ತಿದ್ದ ಪುಸ್ತಕದ ದಂಡನ್ನು ಹೊತ್ತು ತರುತ್ತಿದ್ದರು. ಅವು ಸಾಹಿತ್ಯ, ಭೂಗೋಳ, ವಿಜ್ಞಾನ ಇತ್ಯಾದಿ ಪ್ರಪಂಚದ ಸಕಲೆಂಟು ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಾಗಿರುತ್ತಿದುವು. ಆ ಹೊಸ ಪುಸ್ತಕಗಳಿಂದ ಹೊಮ್ಮುತ್ತಿದ್ದ ಹೊಸ ಅಕ್ಷರಗಳ ವಾಸನೆಯನ್ನು ಆಘ್ರಾಣಿಸುವುದು ನನಗೆ ಇಷ್ಟವಾಗುತ್ತಿತ್ತು. ತಂದ ತಕ್ಷಣವೆ ಅಣ್ಣನಿಗೆ ಓದುವ ಆತುರ. ಸಿಕ್ಕ ಯಾರನ್ನೇ ಆಗಲಿ ಎಳೆದು ಕೂರಿಸಿ, ಕಾಫಿ ಕುಡಿಸಿ ಆ ಪುಸ್ತಕದ ಕುರಿತೇ ಮಾತು. ಆ ಪುಸ್ತಕದ ಗಹನತೆ, ಕೃತಿಕಾರನ ಚಿಂತನೆ, ಅವುಗಳ ಪ್ರಸ್ತುತತೆ ಮುಂತಾದವುಗಳ ಬಗ್ಗೆ ನಿರರ್ಗಳ ಮಾತಾಡಿ, ತಮಗೆ ಮೆಚ್ಚುಗೆಯಾದ ಸಾಲುಗಳನ್ನು ನೆನಪಿನಿಂದಲೇ ಉದ್ಧರಿಸುತ್ತಿದ್ದರು. ಎದುರು ಕೂತವರಿಗೆ ಆ ಪುಸ್ತಕವನ್ನು ಕೊಟ್ಟು ಮುಟ್ಟಯ್ಯ, ಹೆಂಗದೆ ನೋಡು, ಓದ್ಬೇಕು. ಅವನ ಅನುಭವ ನೋಡು ಎಂದು ಕನಿಷ್ಠ ಪುಸ್ತಕವನ್ನು ಮುಟ್ಟುವಂತೆ ಮಾಡುತ್ತಿದ್ದರು. ಹಾಗೆ ಸಿಕ್ಕವರು ಯುವಕರಾಗಿದ್ದರಂತೂ, ಪುಸ್ತಕ ಕೊಳ್ಳುವಂತೆ ತರಿಸಿಕೊಟ್ಟು ಓದಲು ಪ್ರೇರೇಪಿಸುತ್ತಿದ್ದರು.
ಆಸ್ಪತ್ರೆಯ ಬಿಡುವಿಲ್ಲದ ಕೆಲಸ ಮುಗಿಸಿ, ಅಣ್ಣ ಮನೆಗೆ ಬಂದು, ಒಂದು ಸ್ನಾನ ಮಾಡಿ ಪುಸ್ತಕಗಳೊಂದಿಗೆ ಕೂತರೆಂದರೆ ಅದೊಂದು ಧ್ಯಾನ ಸ್ಥಿತಿ. ಹಾಸಿಗೆಯ ಸುತ್ತಾ ತಮಗೆ ಪ್ರಿಯವಾದ ಪುಸ್ತಕಗಳನ್ನು ಹರಡಿಕೊಂಡು, ಇಷ್ಟವಾದದ್ದನ್ನು ಓದುತ್ತಾ, ಏನಾದರೂ ಅನಿಸಿದರೆ ಅಲ್ಲೇ ಬರೆಯುತ್ತಾ ಬೆಳಗಿನ ಜಾವದವರೆಗೂ ಕೂತಿರುತ್ತಿದ್ದರು. ಅವರ ನಿದ್ದೆಯನ್ನು ಕೋಳಿ ನಿದ್ದೆಯೆಂದು ನಾವು ತಮಾಷೆ ಮಾಡುತ್ತಿದ್ದೆವು.
( ಆಗಸ್ಟ್ ಸಂಚಿಕೆಯ ಮಯೂರದಲ್ಲಿ ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಬಗ್ಗೆ ಪುತ್ರ ರವಿ ಬೆಸಗರಹಳ್ಳಿ ಮನೋಜ್ಞವಾದ ಲೇಖನದ ಮೂಲಕ ತಂದೆಯನ್ನು ಸ್ಮರಿಸಿದ್ದಾರೆ. ಲೇಖನದ ಕೆಲವು ಸಾಲುಗಳು ಇಲ್ಲಿವೆ )
ನಾಗೇಶ್ ಹೆಗಡೆ ಜತೆ
ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಗುರುಗಳಾದ ನಾಗೇಶ್‌ ಹೆಗಡೆಯವರ (ತರಗತಿಯ ಗುರುಗಳಲ್ಲ ) ಜತೆ ಎಷ್ಟು ಹೊತ್ತು ಮಾತನಾಡಿದರೂ ನನಗೆ ಸಾಲುವುದಿಲ್ಲ. ಅವರ ಆತ್ಮೀಯತೆ, ತಿಳಿ ಹಾಸ್ಯ, ತಾಳ್ಮೆ, ಅಪಾರ ಜ್ಞಾನ, ಮಾತಿನ ಮೋಡಿ, ಎಳೆಯರನ್ನು ಪ್ರೋತ್ಸಾಹಿಸುವ ಪರಿ ಯಾವಾಗಲೂ ನನ್ನನ್ನು ಅಚ್ಚರಿಗೆ ದೂಡುತ್ತದೆ.
ನಾನೊಂದು ವೇಳೆ ಅವರನ್ನು ಹೊಗಳುತ್ತಿದ್ದೇನೆ ಎಂದು ಭಾವಿಸುತ್ತಾರೋ, ಏನೋ, ಆದರೆ ಇದು ನಿಜ. ಅವರಿಂದ ನಾವೆಲ್ಲ ಕಲಿಯಬೇಕಾದ್ದು ಬಹಳಷ್ಟಿದೆ.
ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಒತ್ತಡ, ಗೊಂದಲ ಆದಾಗ ಸಾಮಾನ್ಯವಾಗಿ ನೆಚ್ಚಿನ ಗುರುಗಳ ಫೋನ್ ನಂಬರ‍್ ಒತ್ತಿ ಕಿವಿಗೆ ಹಚ್ಚುತ್ತೇನೆ. ಅತ್ತ ಕಡೆಯಿಂದ ಅವರು ಸೂಕ್ತ ಸಲಹೆ ಕೊಡುತ್ತಾರೆ. ನಾನಂತೂ ಒಮ್ಮೆಯೂ ನಿರಾಶನಾಗಿಲ್ಲ. ಬದಲಿಗೆ ಹೊಸ ಹೊಳಹು, ಸ್ಪೂರ್ತಿ ಅವರಿಂದ ಸಿಕ್ಕಿದೆ.


Sunday, 2 August 2009

ಸುದ್ದಿಮನೆಯಲ್ಲಿ ಪತ್ರಕರ್ತರೇಕೆ ತಣ್ಣಗಾಗಿದ್ದಾರೆ ?

ಈ ಸಲ ವಿಧಾನ ಸಭೆ ಅಧಿವೇಶನದಲ್ಲಿ ಡಿಕೆ ಶಿವಕುಮಾರ‍್ ಸಿದ್ದರಾಮಯ್ಯ , ಉಗ್ರಪ್ಪ ಮೊದಲಾದ ರಾಜಕಾರಣಿಗಳೇ ಹತ್ತು ಹಲವಾರು ಹಗರಣಗಳನ್ನು ಹೊರಗೆಳೆದರು. ಮತ್ತೊಂದು ಕಡೆ ಲೋಕಾಯುಕ್ತರು ಆಗಿಂದಾಗ್ಗೆ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಜಾಲಾಡುತ್ತಿದ್ದಾರೆ. ಡಿಕೆಶಿ ಆರೋಪಿಸಿದ ಇಸ್ಕಾನ್ ಹಗರಣ, ಜೆಡಿಎಸ್ ಮುಂದಿಟ್ಟ ಗೃಹ ಮಂಡಳಿ ಹಗರಣಗಳಂತೂ ಈ ರಾಜ್ಯದಲ್ಲಿ ಮಾಧ್ಯಮಗಳೇನು ಮಾಡುತ್ತಿವೆ ಎಂಬ ಪ್ರಶ್ನೆ ಹುಟ್ಟಿಸಿದೆ.
ಹಾಗಾದರೆ ರಾಜಕಾರಣಿಗಳು ಬಯಲಿಗೆಳೆದ ಹಗರಣಗಳನ್ನು ಪರ್ತಕರ್ತರು ಯಥಾವತ್ ವರದಿ ಒಪ್ಪಿಸುವಂತೆ ಯಾಕಾಯಿತು ?
ವಾಸ್ತವವಾಗಿ ಕೆಂಡದಂಥ ವರದಿಗಳನ್ನು ಬರೆಯುವ ಅವಕಾಶ ಈವತ್ತಿನ ಪರ್ತ್ರಕರ್ತರಿಗೆ ಕಡಿಮೆಯಾಗುತ್ತಿದೆ.
ದೊಡ್ಡ ಪತ್ರಿಕೆಗಳು ತಮ್ಮ ಉಳಿವಿಗೆ ಜಾಹೀರಾತುಗಳ ಬೆನ್ನು ಹತ್ತುತ್ತಿವೆ. ಪತ್ರಿಕಾಲಯದಲ್ಲಿ ಜಾಹೀರಾತು ವಿಭಾಗ ಪ್ರಾಬಲ್ಯ ಪಡೆಯುತ್ತಿದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಪತ್ರಿಕೆಯೊಂದಕ್ಕೆ ಜಾಹೀರಾತು ನೀಡುತ್ತವೆ ಎಂದಿಟ್ಟುಕೊಳ್ಳೋಣ. ಆಗ ಆ ಕ್ಷೇತ್ರಕ್ಕೆ ಸಂಬಂಧಿಸಿ ಸ್ಫೋಟಕ ವರದಿ ತಯಾರಿಸಲು ವರದಿಗಾರ ಸಾವಿರ ಸಲ ಯೋಚಿಸಬೇಕಾಗುತ್ತದೆ. ಹೀಗಿದ್ದರೂ ಖಾತರಿ ಇರುವುದಿಲ್ಲ. ಒಂದೆರಡು ಸಲ ಇಂಥ ಅನುಭವ ಆದಲ್ಲಿ ಸಹಜವಾಗಿ ಭ್ರಮ ನಿರಸನ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇಂತಹ ಹುಂಬತನದಿಂದ ಕೆಲಸ, ಬಡ್ತಿಗೆ ಕುತ್ತು ಉಂಟಾದರೇನು ಗತಿ ಎಂಬ ಆತಂಕ ಉಂಟಾಗುತ್ತದೆ. ಕೆಲವು ಪತ್ರಿಕಾಲಯಗಳಲ್ಲಿ ಹುದ್ದೆಗೆ ಸೇರಿಸಿಕೊಳ್ಳುವಾಗಲೇ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹೀಗೆ ಮ್ಯಾನೇಜ್ ಮೆಂಟ್‌ಗೆ ತನ್ನ ಜುಟ್ಟನ್ನು ಕೊಡುವ ಪತ್ರಕರ್ತನ ಸಂಕಟ ಅವನಿಗೇ ಗೊತ್ತು.
ಈವತ್ತು ಗುತ್ತಿಗೆ ಆಧಾರದಲ್ಲಿ ಪರ್ತಕರ್ತರ ನೇಮಕ ನಡೆಯುತ್ತಿರುವುದು ಸಾಮಾನ್ಯ. ಈಗಾಗಲೇ ಕೆಲಸದಲ್ಲಿ ಇರುವವರನ್ನೂ ಗುತ್ತಿಗೆಗೆ ಪರಿವರ್ತಿಸಲಾಗಿದೆ. ಹೀಗಾಗಿ ಯಾವಾಗ ಏನಾಗಬಹುದು ಎಂಬ ಅನಿಶ್ಚಿತತೆ ಸದಾ ಕಾಡುತ್ತಿರುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಒಂದು ದಿನ ಕೆಲಸ ಇಲ್ಲದಿದ್ದರೆ ಬದುಕುವುದು ಕಷ್ಟ. ಪತ್ರಕರ್ತನೂ ಎಲ್ಲರಂತೆ ತನ್ನದೇ ಕೌಟುಂಬಿಕ ಹೊರೆ, ಸಾಲದ ಹೊರೆ, ಬದ್ದತೆಗಳ ಸಂಸಾರದಲ್ಲಿರುತ್ತಾನೆ. ಅನಗತ್ಯ ರಿಸ್ಕ್‌ ಯಾಕೆ ಬೇಕು ಎಂಬ ಭಾವ ಸಹಜವಾಗಿ ಚಾಲ್ತಿಯಲ್ಲಿರುತ್ತದೆ.
ಇನ್ನು ಕೆಲವು ಪರ್ತಕರ್ತರಿಗೆ ಕೆಲಸ ಇದ್ದರೆ ಸಾಕು. ಉಳಿದೆಲ್ಲ "ಸಂಪಾದನೆ" ಹೊರಗೆ ಆಗಿಬಿಡುತ್ತದೆ. ಹೀಗಾಗಿ ಅವರಿಗೆ ಯಾವುದೇ ಸಾಮಾಜಿಕ ಬದ್ಧತೆ ಇರುವುದಿಲ್ಲ. ಪರ್ತಕರ್ತರ ಮುಖವಾಡ ಮಾತ್ರ ಅವರಿಗೆ ಸಾಕು. ಯಾವುದೇ ಪ್ರಲೋಭನೆಗೆ ಒಳಗಾಗದೆ ಉಳಿಯುವ ವರದಿಗಾರನೊಬ್ಬ ಸಾಕಷ್ಟು ಹೋರಾಡಿ ಸ್ಫೋಟಕ ವರದಿ ಬರೆದನೆಂದರೆ, ಅದು ಪ್ರಕಟವಾಗುತ್ತದೆ ಎಂಬ ಖಾತರಿ ಇಲ್ಲ.
ಪರ್ತಕರ್ತರು ಕೂಡ ಸಾಲದ ಹೊರೆಯಿಂದ ಬಳಲುತ್ತಾರೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಅಂತ ನಾನಾ ಬಗೆಯ ಆರ್ಥಿಕ ಬದ್ಧತೆ ಅವರಿಗಿರುತ್ತದೆ. ರಿಸೆಶನ್ ಅಂತ ಕಂಪನಿ ಸಂಬಳ ಹೆಚ್ಚಿಸುವುದಿಲ್ಲ. ಹೊಸ ನೇಮಕ ಪ್ರಕ್ರಿಯೆಗಳು ನಿಂತು ಹೋಗಿವೆ. ಹೀಗೆಲ್ಲ ಪರಿಸ್ಥಿತಿ ವಿಷಮಿಸಿರುವಾಗ ತಾವಾಗಿಯೇ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಕೊಟ್ಟ ಕೆಲಸವನ್ನು ಮಾಡಿ ಮನೆಗೆ ಹೋಗುವ ಎಂಬ ರಕ್ಷಣಾತ್ಮಕ ಭಾವನೆ ಉಂಟಾಗದಿರುವುದಿಲ್ಲ.

ಸ್ಕಿಪ್ಟ್ ಚಿತ್ರದ ತಾಯಿ ಇದ್ದ ಹಾಗೆ

ಒಳ್ಳೆಯ ಸ್ಕಿಪ್ಟ್ ನಿಂದ ಚಿತ್ರಗಳು ಗೆದ್ದಿರುವ ಅನೇಕ ಉದಾಹರಣೆಗಳಿವೆ.
ಸ್ಕಿಪ್ಟ್ ಚಿತ್ರದ ತಾಯಿ ಇದ್ದ ಹಾಗೆ.
ಆದರೆ ಅದಕ್ಕೆ ನಿಮ್ಮ ಶಿಸ್ತು, ಅಧ್ಯಯನ, ಅಲೆದಾಟ, ಪ್ರಸ್ತುತತೆ, ತಾಂತ್ರಿಕ ನೈಪುಣ್ಯ ಮತ್ತು ಅಂತಿಮವಾಗಿ ನಿಮ್ಮದೇ ಆದ ದರ್ಶನ ಮುಖ್ಯ ಅನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ‍್.
ಈ ಹಿಂದೆ ಅವರ ಮನೆ ಸಿಹಿ ಕನಸಿನಲ್ಲಿ ಮಾತನಾಡಿಸಿದ್ದಾಗ ಚಲನಚಿತ್ರ ಸಂಭಾಷಣೆ ಮತ್ತು ಚಿತ್ರಕಥೆಯ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದರು. ಅದರ ವಿವರ ಇಲ್ಲಿದೆ. ಅವರು ಹೇಳ್ತಾರೆ..
ಚಿತ್ರಕಥೆ-ಸಂಭಾಷಣೆ ಎಲ್ಲವನ್ನೂ ಸ್ಕಿಪ್ಟ್ ಒಳಗೊಳ್ಳುತ್ತದೆ. ಅದನ್ನು ಬರೆಯಬೇಕು ಎಂಬ ಹಂಬಲ ಇರುವವರು ಸಂಬಂಧಪಟ್ಟ ಪುಸ್ತಕಗಳನ್ನು ಓದಬೇಕು. ಇಂಗ್ಲಿಷ್‌ ನಲ್ಲಿ ಬೇಕಾದಷ್ಟು ಪುಸ್ತಕಗಳು ಸಿಗುತ್ತವೆ. ಕನ್ನಡದಲ್ಲಿ ಜಾಸ್ತಿಯಿಲ್ಲ. ಪುಸ್ತಕ ಓದುವುದರಿಂದ ಚಿತ್ರಕಥೆ ಬರೆಯೋದು ಹೇಗೆ ಎಂಬುದರ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆಯುತ್ತದೆ. ಕ್ಯಾಮರಾದ ಬಗ್ಗೆ ಕೂಡ ಮಾಹಿತಿ ತಿಳಿದಿರಬೇಕು. ಸಿನಿಮಾ ಛಾಯಾಗ್ರಹಣದಲ್ಲಿ ಯಾವ ಲೆನ್ಸ್ ಬಳಸುತ್ತಾರೆ, ಲೆನ್ಸ್, ಫಿಲ್ಟರ‍್ , ಲೈಟಿಂಗ್ಸ್ ಬಗ್ಗೆ ಅಗತ್ಯಕ್ಕೆ ತಕ್ಕಷ್ಟು ಅರಿವು ಇರಬೇಕು.
ಒಳ್ಳೆಯ ಸ್ಕಿಪ್ಟ್ ನಲ್ಲಿ ಡೈಲಾಗ್ ಕಡಿಮೆ ಇರುತ್ತದೆ. ತಾಂತ್ರಿಕತೆ ಸಮೃದ್ಧವಾಗಿರುತ್ತದೆ. ಇಲ್ಲವಾದಲ್ಲಿ ಅದೊಂದು ಶಾಲಾ ಮಕ್ಕಳ ನಾಟಕದಂತಿರುತ್ತದೆ. ಈ ತಾಂತ್ರಿಕತೆಯನ್ನು ತಿಳಿದುಕೊಳ್ಳಲು ಪುಸ್ತಕ ಓದಬಹುದು, ನಿರ್ದೇಶಕರು, ಛಾಯಾಗ್ರಾಹಕರನ್ನು ಭೇಟಿಯಾಗಬೇಕು. ಪ್ರೊಡಕ್ಷನ್ ಕಂಪನಿಗಳಲ್ಲಿ ಸಹಾಯಕರಾಗಿ ಅನುಭವ ಪಡೆದುಕೊಳ್ಳಬೇಕು.
ನಿರ್ದೇಶಕ ಏನನ್ನು ಹೇಳಲು ಬಯಸುತ್ತಾನೆ ಎಂಬುದನ್ನು ಲೇಖಕ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಸಾಹಿತ್ಯದ ಗಂಧ ಇಲ್ಲದಿದ್ದರೆ ಒಳ್ಳೆಯ ಕಥೆ-ಸಂಭಾಷಣೆ ಅಸಾಧ್ಯ. ಭಾಷೆಯ ಮೇಲೆ ಹಿಡಿತ ಸಿಗಲ್ಲ. ಯಾರು ಉತ್ಕೃಷ್ಟ ಸ್ಕಿಪ್ಟ್ ಬರೀತಾರೋ, ಶ್ರದ್ಧೆ, ಶಿಸ್ತಿನಿಂದ ದುಡೀತಾರೋ, ಅವರನ್ನು ಹುಡುಕಿಕೊಂಡು ಹೇಗಬೇಕಾದ ಪರಿಸ್ಥಿತಿ ಇದೆ. ಇನ್ನು ಕತೆಯನ್ನು ಬರೆಯುವ ಸಂಸ್ಕೃತಿಯ ಬದಲಿಗೆ ಹೇಳುವ ಸಂಸ್ಕೃತಿ ಉಂಟಾಗಿದೆ. ಲೇಖಕರ ಕತೆಯನ್ನು ಕೇಳುವ ವ್ಯವಧಾನ ನಿರ್ದೇಶಕರಲ್ಲಿ ಇರಲ್ಲ. ಒಳ್ಳೆಯ ಬರಹಗಾರರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ.
ಚಲನಚಿತ್ರ ಮಂಡಳಿ ಮತ್ತು ಚಿತ್ರೋದ್ಯಮ ಒಳ್ಳೆಯ ಬರಹಗಾರರನ್ನು ಗುರುತಿಸುವ ಯೋಜನೆ ಹಮ್ಮಿಕೊಳ್ಳಬೇಕು.