Sunday, 13 November 2011

ಉಳಿತಾಯ ಬಡ್ಡಿ ಹೆಚ್ಚಳ, ಪ್ರಜೆಗಳ ಮೂಗಿಗೆ ತುಪ್ಪ

ಕೇಂದ್ರ ಸರಕಾರ ಕಳೆದ ವಾರ ಅಳೆದೂ ತೂಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಕೊಂಚ ಏರಿಸಿತು. ಇದನ್ನು ಅಸಾಮಾನ್ಯ ಸಾಧನೆ ಎಂಬಂತೆ ಸಾರಲಾಯಿತು. ಆದರೆ ಸಾಮಾನ್ಯರಿಗೆ ನಿಜಕ್ಕೂ ಇದರಿಂದ ಅಂತಹ ಪ್ರಯೋಜನ ಆಗಿದೆಯೇ ? ಇಲ್ಲ ಅಂತ ಮೂರನೇ ತರಗತಿಯ ಮಕ್ಕಳೂ ಕೂಡ ಹೇಳಿಯಾರು.
ಬೆಕ್ಕಿನ ಮೂಗಿಗೆ ತುಪ್ಪವನ್ನು ಸವರಿದ ಕೆಲಸವನ್ನಷ್ಟೇ ಕೇಂದ್ರ ಸರಕಾರ ಮಾಡಿದೆ. ಪ್ರತಿ ದಿನ ಬೆಲೆ ಏರಿಕೆ, ಹಣದುಬ್ಬರ, ತೈಲ ದರ ಹೆಚ್ಚಳ ಅಂತ ಗಾಯದ ಮೇಲೆ ಮೇಲಿಂದ ಮೇಲೆ ಬರೆ ಎಳೆಯಲಾಗುತ್ತಿದೆ. ಎಷ್ಟು ಸಂಪಾದಿಸಿದರೂ ಕೈಯಲ್ಲಿ ನಾಲ್ಕು ಕಾಸು ಉಳಿಯುತ್ತಿಲ್ಲ ಎಂಬ ಪರಿಸ್ಥಿತಿ ಜನ ಸಾಮಾನ್ಯರದ್ದು. ಹಾಗಾದರೆ ಸರಕಾರ ಮಾಡಿದ್ದೇನು ? ಪರಿಷ್ಕೃತ ಬಡ್ಡಿ ಹೆಚ್ಚಳದಿಂದ ಎಷ್ಟರಮಟ್ಟಿಗೆ ಉಪಯೋಗವಾಗಲಿದೆ ? ಎಂಬುದನ್ನು ನೋಡೋಣ.
ದೀರ್ಘಕಾಲದ ನಂತರ ನಿಮ್ಮ ಅಂಚೆ ಇಲಾಖೆ ಉಳಿತಾಯ, ರಾಷ್ಟ್ರೀಯ ಉಳಿತಾಯ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಲಿದೆ. ಸರಕಾರವೇನೋ ಮುಕ್ತ ಮಾರುಕಟ್ಟೆಯ ಬಡ್ಡಿ ದರಗಳಿಗೆ ಸಣ್ಣ ಉಳಿತಾಯ ಬಡ್ಡಿ ದರವನ್ನು ಸಮಗೊಳಿಸಲಾಗುವುದು ಎಂದು ಹೇಳುತ್ತಿದೆ. ಇದುವರೆಗೆ ಬ್ಯಾಂಕ್ ಉಳಿತಾಯ ಖಾತೆಯ ಠೇವಣಿಯಲ್ಲಿ ಸಿಗುತ್ತಿದ್ದ ಬಡ್ಡಿ ದರಕ್ಕಿಂತ ವಿಪರೀತ ಎನ್ನುವಷ್ಟು ಕಡಿಮೆ ಬಡ್ಡಿ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಿಗುತ್ತಿತ್ತು. ಪರಿಣಾಮವಾಗಿ ಭಾರಿ ಸಂಖ್ಯೆಯಲ್ಲಿ ಹೂಡಿಕೆದಾರರು ಸಣ್ಣ ಉಳಿತಾಯ ಯೋಜನೆಗಳಿಂದ ದೂರವಾಗಿದ್ದರು. ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಂತೂ ನಾಮ್‌ಕೇ ವಾಸ್ತೆಗಳಾಗಿದ್ದವು. ಕೊನೆಗೂ ಸರಕಾರ ಅಷ್ಟಿಷ್ಟು ಹೆಚ್ಚಿಸಿದೆ. ಆದರೆ ಈಗಲೂ ಬ್ಯಾಂಕ್‌ಗಳಲ್ಲಿ ನಿಗದಿತ ಠೇವಣಿಗೆ ಸಿಗುವ ಬಡ್ಡಿ ದರ ಹೆಚ್ಚೇ ಆಗಿದೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆಯ ಮಿತಿಯನ್ನು ವಾರ್ಷಿಕ ೧ ಲಕ್ಷಕ್ಕೆ ಏರಿಸಿರುವುದು ಮಾತ್ರ ಸಮಾಧಾನಕರ ಸಂಗತಿ ಎನ್ನಬಹುದು. ಇದರಿಂದ ಉಳಿತಾಯದ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತದೆ.
ಇಷ್ಟು ನಿರ್ಧಾರಕ್ಕೆ ಬರಬೇಕಾದರೆ ದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿತ್ತು. ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಶ್ಯಾಮಲಾ ಗೋಪಿನಾಥ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸು ಮೇರೆಗೆ ಈ ಎಲ್ಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರ ಪ್ರಕಾರ ಅಂಚೆ ಇಲಾಖೆಯ ಉಳಿತಾಯದ ಬಡ್ಡಿ ದರ ಈಗಿನ ಶೇ.೩.೫ರಿಂದ ಶೇ.೪ಕ್ಕೆ ಏರಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ಮೆಚ್ಯುರಿಟಿ ಅವಧಿಯಲ್ಲಿ ೬ರಿಂದ ೫ ವರ್ಷಕ್ಕೆ ಇಳಿಸಲಾಗಿದೆ. ಪಿಎಫ್‌ನಲ್ಲಿ ವಾರ್ಷಿಕ ಹೂಡಿಕೆಯ ಮಿತಿಯನ್ನು ೭೦ ಸಾವಿರ ರೂ.ಗಳಿಂದ ೧ ಲಕ್ಷ ರೂ.ಗೆ ಏರಿಸಲಾಗಿದೆ.
ಏನಾಗಿತ್ತು ?
ಮಾರುಕಟ್ಟೆಯಲ್ಲಿ ಬಡ್ಡಿ ದರಗಳು ಕೆಳ ಮಟ್ಟದಲ್ಲಿದ್ದಾಗ ಸಣ್ಣ ಉಳಿತಾಯ ಯೋಜನೆಗಳಲ್ಲಿನ ಬಡ್ಡಿ ದರಗಳು ಉಳಿತಾಯಗಾರರಿಗೆ ಸಬ್ಸಿಡಿಯಂತೆ ಆಕರ್ಷಕ ಎನ್ನಿಸುತ್ತದೆ. ಆದರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ತೀರಾ ಕಡಿಮೆ ಬಡ್ಡಿ ಇದ್ದಾಗ ಹೂಡಿಕೆದಾರರು ಅಲ್ಲಿರುವ ಹಣವನ್ನು ಹಿಂತೆಗೆದು ಇತರ ಆಯ್ಕೆಗಳತ್ತ ನಡೆಯುತ್ತಾರೆ. ಇದು ಭಾರಿ ಪ್ರಮಾಣದಲ್ಲಿ ಸಂಭವಿಸಿದರೆ ಸರಕಾರದ ಅರ್ಥ ನಿರ್ವಹಣೆ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಯಾಕೆಂದರೆ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿನ ನಿಧಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಬಳಸುತ್ತವೆ. ಬ್ಯಾಂಕ್ ಠೇವಣಿಗಳಲ್ಲಿ ಈಗ ವಾರ್ಷಿಕ ಶೇ. ೯ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತಿವೆ. ಹೀಗಿರುವಾಗ ಸಣ್ಣ ಉಳಿತಾಯ ಖಾತೆಯಲ್ಲಿ ಜನ ಕಡಿಮೆ ಬಡ್ಡಿಗೆ ದುಡ್ಡಿಡಲು ಅವರೇನು ಬೆಪ್ಪರೇ ? ಸಹಜವಾಗಿಯೇ ಭಾರಿ ಮೊತ್ತದ ನಿಧಿಯನ್ನು ಹೂಡಿಕೆದಾರರು ಹಿಂತೆಗೆದುಕೊಂಡಿದ್ದರು.
ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸಬೇಕಾದ ಒತ್ತಡಕ್ಕೆ ಸರಕಾರದ ಮೇಲಿತ್ತು. ವಿತ್ತೀಯ ಕೊರತೆಯನ್ನು ನೀಗಿಸಲು ಬೇರೆ ಮೂಲಗಳಿಂದ ಸಾಲ ಎತ್ತಬೇಕಾದ ಸನ್ನಿವೇಶ ಉಂಟಾಗಿತ್ತು. ಸಣ್ಣ ಉಳಿತಾಯ ಹೂಡಿಕೆ ಯೋಜನೆಗಳನ್ನು ಆಕರ್ಷಕಗೊಳಿಸುವ ಸರಕಾರದ ಉದ್ದೇಶ ಒಪ್ಪತಕ್ಕದ್ದೇ. ಆದರೆ ಈಗಲೂ ಅವುಗಳ ಮೇಲಿರುವ ಬಡ್ಡಿ ದರಗಳು ಬ್ಯಾಂಕ್‌ಗಳು ಒದಗಿಸುವ ಬಡ್ಡಿ ದರಕ್ಕಿಂತಲೂ ಕಡಿಮೆಯೇ. ಹಾಗಾದರೆ ಹೇಗೆ ಒಪ್ಪಲು ಸಾಧ್ಯ ?
ವಾಸ್ತವವಾಗಿ ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ನೀಡಿರುವ ಬಡ್ಡಿ ಶೇ.೮.೬ ಕೂಡ ಈಗಿನ ಶೇ.೧೦ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿರುವ ಹಣದುಬ್ಬರಕ್ಕೆ ಹೋಲಿಸಿದರೆ ಕಡಿಮೆಯೇ. ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆಯ ಕಥೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಈ ಉಳಿತಾಯ ಯೋಜನೆಗಳು ದೀರ್ಘಕಾಲೀನ ಹೂಡಿಕೆದಾರರು ಅಥವಾ ಹಿರಿಯ ನಾಗರಿಕರನ್ನು ಹಣದುಬ್ಬರದ ತಾಪದಿಂದ ರಕ್ಷಿಸಬೇಕೆಂಬ ಉದ್ದೇಶವನ್ನು ಹೊಂದಿದ್ದರೂ, ಈಗಿನ ಬಡ್ಡಿ ದರಗಳಿಂದ ಯೋಜನೆಯ ಉದ್ದೇಶ ಈಡೇರುವುದು ಅಸಾಧ್ಯ.
ಬ್ಯಾಂಕ್ ಬಡ್ಡಿಯೇ ಹೆಚ್ಚು :
ಸಣ್ಣ ಉಳಿತಾಯ ಯೋಜನೆಯ ಪರಿಷ್ಕೃತ ಬಡ್ಡಿಗೂ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನೀಡುವ ಬಡ್ಡಿಗೂ ಎಷ್ಟು ವ್ಯತ್ಯಾಸ ಇದೆ ಎಂಬುದನ್ನು ಇಲ್ಲೊಂದು ಉದಾಹರಣೆಯೊಂದಿಗೆ ನೋಡೋಣ. ಸಣ್ಣ ಉಳಿತಾಯ ಯೋಜನೆಯಲ್ಲಿ ೧,೦೦೦ ರೂ.ಗಳನ್ನು ೫ ವರ್ಷಗಳ ಅವಧಿಗೆ ಹೂಡಿದರೆ ಶೇ.೮.೩ರ ಬಡ್ಡಿ ದರದಲ್ಲಿ ೪೧೪.೭೨ ರೂ. ಬಡ್ಡಿ ಆದಾಯ ಸಿಗುತ್ತದೆ. ನಿಮ್ಮ ಹಣ ೧೪೧೪.೭೨ ರೂ.ಗೆ ಏರಿಕೆಯಾಗುತ್ತದೆ. ಆದರೆ ಕೆನರಾ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರೆ ೪೪೯.೬೯ ರೂ. ಬಡ್ಡಿ ಸಿಗುತ್ತದೆ. ದುಡ್ಡು ೧೪೪೯.೬೯ ರೂ.ಗೆ ಏರಿಕೆಯಾಗುತ್ತದೆ. ಇದು ಸಣ್ಣ ಮೊತ್ತವಾಗಿರಬಹುದು. ಆದರೆ ಹೂಡಿಕೆಯ ಮೊತ್ತ ಹೆಚ್ಚಾದಷ್ಟು ಬಡ್ಡಿಯ ವ್ಯತ್ಯಾಸವೂ ದೊಡ್ಡ ಮೊತ್ತವಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಶೇ.೯.೫ರ ಬಡ್ಡಿ ದರ ನೀಡುತ್ತಿವೆ.


ಸಣ್ಣ ಉಳಿತಾಯ ಹೂಡಿಕೆದಾರರಿಗೆ ಬಡ್ಡಿ ಇಷ್ಟು (ಶೇಕಡಾವಾರು)

ಈಗಿನ ದರ / ಪರಿಷ್ಕೃತ ದರ

ಉ.ಖಾ. ಠೇವಣಿ 3.50 - 4.00
1 ವರ್ಷ 6.25 -7.7
2 ವರ್ಷ 6.5 - 7.8
3 ವರ್ಷ 7.25 - 8.0
5 ವರ್ಷ 7.50 - 8.3
5 ವರ್ಷ ಆರ್‌ಡಿ 7.5 - 8.0

Monday, 13 June 2011

ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಕಾಮರ್ಸ್ ಕ್ಲಾಸ್ !


ಕಾಮರ್ಸ್ ಕ್ಲಾಸ್ ! : ಇದು ಇಂದಿನಿಂದ ಪ್ರತಿ ಸೋಮವಾರ ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಮೂಡಿ ಬರಲಿರುವ ಅಂಕಣ. ವಾಣಿಜ್ಯ ವಿಚಾರಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಪ್ರಶ್ನೋತ್ತರವಿದು. ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.

ಕಾಮರ್ಸ್ ಕ್ಲಾಸ್

೧. ಷೇರು ಎಂದರೇನು ?
ಕಂಪನಿಯ ಮಾಲಿಕತ್ವ. ನೀವು ಯಾವ ಕಂಪನಿಯ ಎಷ್ಟು ಷೇರುಗಳನ್ನು ಖರೀದಿಸುತ್ತೀರೊ, ಆ ಕಂಪನಿಯ ಮಾಲಿಕತ್ವದಲ್ಲಿ ಅಷ್ಟು ಪಾಲು ನಿಮ್ಮದಾಗುತ್ತದೆ. ಕಂಪನಿಯ ಲಾಭ ನಷ್ಟಗಳು ನಿಮ್ಮ ಷೇರಿನ ದರದ ಮೇಲೆ ಪರಿಣಾಮ ಬೀರುತ್ತವೆ. ಕಂಪನಿಯ ಆಡಳಿತ ಮಂಡಳಿ ತನ್ನೆಲ್ಲ ಮಾಹಿತಿಯನ್ನು ಷೇರುದಾರರಿಗೆ ನೀಡಲೇಬೇಕು. ಡಿವಿಡೆಂಡ್, ಬೋನಸ್ ವಿತರಿಸಬೇಕು.
೨. ಷೇರುಗಳ ವಹಿವಾಟು ಮಾಡುವುದು ಹೇಗೆ ?
ಮೊದಲು ಡಿಮ್ಯಾಟ್ ಖಾತೆಯನ್ನು ತೆರೆಯಲೇಬೇಕು. ಇದು ಇಲ್ಲದೆ ಷೇರು ವಹಿವಾಟು ಇಲ್ಲ. ಇದನ್ನು ದೇಶದ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಎನ್‌ಎಸ್‌ಇ ( ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ) ಹಾಗೂ ಬಿಎಸ್‌ಇನಿಂದ (ಮುಂಬಯಿ ಷೇರು ವಿನಿಮಯ ಕೇಂದ್ರ) ಮಾನ್ಯತೆ ಪಡೆದಿರುವ ಮಧ್ಯವರ್ತಿಗಳ (ಬ್ರೋಕರ್) ಮೂಲಕ ತೆರೆಯಬಹುದು. ಷೇರುಗಳ ಖರೀದಿ, ಮಾರಾಟವನ್ನು ಡಿಮ್ಯಾಟ್ ಮೂಲಕ ಮಾಡಬಹುದು.
೩. ಡಿಮ್ಯಾಟ್ ಖಾತೆಗೆ ತಗಲುವ ವೆಚ್ಚ ಎಷ್ಟು ?
ಇದು ಡಿಮ್ಯಾಟ್ ಖಾತೆ ಸೌಲಭ್ಯವನ್ನು ನೀಡುವ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಿರುತ್ತದೆ. ಕೆಲವು ಬ್ಯಾಂಕ್‌ಗಳು ೫೦೦ ರೂ. ವಿಸಬಹುದು. ಇನ್ನು ಕೆಲವರು ೭೦೦ ರೂ. ನಿಗದಿಪಡಿಸಬಹುದು. ಜತೆಗೆ ವಾರ್ಷಿಕ ನಿರ್ವಹಣೆ ಶುಲ್ಕ ನೀಡಬೇಕಾಗುತ್ತದೆ.
೪. ಡಿಮ್ಯಾಟ್‌ಗೆ ಬೇಕಾದ ದಾಖಲೆಗಳು ?
ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಬೇಕು. ಉಳಿದಂತೆ ಇತರ ಗುರುತಿನ ಚೀಟಿಯ ಅಗತ್ಯವಿದೆ. ಅದು ಮತದಾರರ ಚೀಟಿ, ವಾಹನ ಚಾಲನಾ ಪರವಾನಗಿ, ರೇಶನ್ ಕಾರ್ಡ್ ಆಗಬಹುದು. ೬ ತಿಂಗಳಿನ ಬ್ಯಾಂಕ್ ಸ್ಟೇಟ್‌ಮೆಂಟ್‌ನ ಪ್ರತಿ, ೩ ಪಾಸ್‌ಪೋರ್ಟ್ ಆಕಾರದ ಛಾಯಾಚಿತ್ರ ಬೇಕು.
೫. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಭಾರಿ ಅಪಾಯಕಾರಿಯಲ್ಲವೇ ?
ಷೇರು ಪೇಟೆಯಲ್ಲಿ ಹೂಡಿಕೆಗೆ ಮುನ್ನ ಕೆಲವು ಮಾಹಿತಿಗಳನ್ನು ತಿಳಿದಿರಬೇಕು. ಅದಿಲ್ಲದೆ ಏಕ್‌ದಂ ಲಕ್ಷಗಟ್ಟಲೆ ಹೂಡಿದರೆ ನಷ್ಟ ಆಗುತ್ತದೆ. ಆದರೆ ಷೇರುಪೇಟೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳಬಹುದು. ತಾಳ್ಮೆಯಿಂದ ಹೂಡಿಕೆ ಮಾಡಿ ವಹಿವಾಟು ನಡೆಸುವವರಿಗೆ ಲಾಭವಾಗುತ್ತದೆ.
ಪ್ರಶ್ನೆಗಳಿಗೆ ಉತ್ತರಿಸಿದವರು : ಸಾಗರ್ ಯು.ಎಸ್.