Tuesday, 21 April 2020
ನೀನಾ ಚೀನಾ!
ಚೀನಾ ಜಗತ್ತಿನ ಏಕಮೇವ ಬಲಾಢ್ಯ ರಾಷ್ಟ್ರವಾಗಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಜಿನ್‌ಪಿಂಗ್ ಸರಕಾರ ಮತ್ತು ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸಿ ಮುಂದುವರಿಯುತ್ತಿದ್ದಾರೆ. ದೇಶದ ಪ್ರಮುಖ ವಲಯಗಳಲ್ಲಿ ಸರಕಾರಿ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಪಕ್ಷದ ಸದಸ್ಯರ ಮೇಲೆಯೂ ಅವರ ಹಿಡಿತ ಜೋರಾಗಿದೆ.
=======================
ನೀನಾ ಚೀನಾ! - ಕಮ್ಯುನಿಸ್ಟ್ ಚೀನಾದ ಬಂಡವಾಳ, ಪ್ರಗತಿ ಮತ್ತು ವಿಶ್ವಾಸ ನಷ್ಟದ ಅನಾವರಣ
ಕೇಶವ ಪ್ರಸಾದ್ ಬಿ.
ಕೋವಿಡ್-19 ಜಗತ್ತನ್ನು ತಲ್ಲಣಿಸಿರುವ ವೇಳೆಯಲ್ಲಿ ಚೀನಾದ ನಾನಾ ಮುಖವಾಡಗಳು ಕಳಚಿ ಬಿದ್ದಿವೆ. ಆದರೂ ಜಗತ್ತು ಸದ್ಯಕ್ಕೆ ಅದೇ ಚೀನಾವನ್ನು ಹೇಗೆ ಅವಲಂಬಿಸಿದೆ ಮತ್ತು ಅದರಿಂದ ಬಿಡಿಸಿಕೊಳ್ಳಲು ಕಸರತ್ತು ಆರಂಭವಾಗಿರುವುದನ್ನೂ ನಾವೆಲ್ಲ ಗಮನಿಸುತ್ತಿದ್ದೇವೆ. ಹಾಗಾದರೆ ಚೀನಾದ ಮಹತ್ತ್ವಾಕಾಂಕ್ಷೆಗಳೇನು? ಕಮ್ಯುನಿಸ್ಟ್ ಚೀನಾ ಹೇಗೆ ಅತಿ ದೊಡ್ಡ ಬಂಡವಾಳಶಾಹಿ ಶಕ್ತಿಯಾಗಿ, ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಅಮೆರಿಕಕ್ಕೇ ಸಡ್ಡು ಹೊಡೆದಿದೆ? ಮುಂದೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ‘ನೀನಾ ಚೀನಾ!’ ಸರಣಿಯಲ್ಲಿದೆ.
ಭಾಗ -1
-------------------------
ಮೊದಲಿಗೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ, ಅತಿ ದೊಡ್ಡ ಬಂಡವಾಳಶಾಹಿ ಶಕ್ತಿಯಾಗಿದ್ದು ಹೇಗೆ? ಇದರ ರೂವಾರಿ ಯಾರು? ಎಂಬುದರ ಬಗ್ಗೆ ಗಮನಿಸಲೇಬೇಕು.
ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದಲ್ಲಿ ಚೀನಾ ಫೀನಿಕ್ಸ್‌ನಂತೆ ತ್ವರಿತಗತಿಯಲ್ಲಿ ಪ್ರವರ್ಧಮಾನಕ್ಕೆ ಬಂತು. 2012ರಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾರಥ್ಯದಲ್ಲಿ ಹೊಸ ಸರಕಾರ ಅಲ್ಲಿ ಅಸ್ತಿತ್ವ ಪಡೆಯಿತು. ಈಗಲೂ ಕ್ಸಿ ಜಿನ್‌ಪಿಂಗ್, ಚೀನಾವನ್ನು ಜಗತ್ತಿನ ಸೂಪರ್ ಪವರ್ ಮಾಡುವ ಉತ್ಸಾಹದಿಂದ ಮುನ್ನುಗ್ಗುತ್ತಿದ್ದಾರೆ. ಆರ್ಥಿಕ ಪ್ರಗತಿ, ರಾಜಕೀಯ ಬಲವರ್ಧನೆ, ಚೀನಾ ಸಮಾಜದ ಮೇಲೆ, ಸಂಪತ್ತಿನ ಮೇಲೆ ಕಠಿಣ ನಿಯಂತ್ರಣ ಇತ್ಯಾದಿ ಕಾರ್ಯ ತಂತ್ರಗಳ ಸದ್ಯದ ರೂವಾರಿ ಅವರು.
ಚೀನಾ ಜಗತ್ತಿನ ಏಕಮೇವ ಬಲಾಢ್ಯ ರಾಷ್ಟ್ರವಾಗಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಜಿನ್‌ಪಿಂಗ್ ಸರಕಾರ ಮತ್ತು ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸಿ ಮುಂದುವರಿಯುತ್ತಿದ್ದಾರೆ. ಬಿಸಿನೆಸ್ ಸೆಕ್ಟರ್, ಇಂಟರ್‌ನೆಟ್, ಅಕಾಡೆಮಿಯಾ, ಮಿಲಿಟರಿ ಇತ್ಯಾದಿ ಪ್ರಮುಖ ವಲಯಗಳಲ್ಲಿ ಸರಕಾರಿ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಪಕ್ಷದ ಸದಸ್ಯರ ಮೇಲೆಯೂ ಅವರ ಹಿಡಿತ ಜೋರಾಗಿದೆ.
ಚೀನಾದ ವಿದೇಶಾಂಗ ನೀತಿಯೂ ಮಹತ್ತ್ವಾಕಾಂಕ್ಷೆಯದ್ದು. ಜಾಗತಿಕ ವ್ಯವಹಾರಗಳಲ್ಲಿ ಅದು ಸದಾ ತನ್ನ ಹಿತಾಸಕ್ತಿ ಮರೆಯುವುದಿಲ್ಲ. ನೆರೆಹೊರೆಯ ರಾಷ್ಟ್ರಗಳ ಜತೆ ಗಡಿ ವಿವಾದವನ್ನು ಆಗಾಗ್ಗೆ ಕೆದಕಿ ಜೀವಂತವಾಗಿಡಲು ಯತ್ನಿಸುತ್ತದೆ. ಪ್ರತಿ ವರ್ಷ ತನ್ನ ಮಿಲಿಟರಿ ವೆಚ್ಚವನ್ನು ಹೆಚ್ಚಿಸುತ್ತಿದೆ.
ವಿದೇಶಿ ಹೂಡಿಕೆ ನಿಯಮ ಬಿಗಿ, ಚೀನಾ ಬಂಡವಾಳಕ್ಕೆ ಭಾರತದ ಮೂಗುದಾರ
"ಒನ್ ಬೆಲ್ಟ್, ಒನ್ ರೋಡ್" ಯೋಜನೆಯ ಮೂಲಕ ಚೀನಾ ಹಲವು ರಾಷ್ಟ್ರಗಳಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ತೀವ್ರಗೊಳಿಸಿತ್ತು. ಹೊಸ ಮಿತ್ರರನ್ನು ಗಳಿಸಿತ್ತು. ತನ್ನ ಆರ್ಥಿಕತೆಗೆ ಸಂಪರ್ಕ ಹೆಚ್ಚಿಸಿತ್ತು. ಸಂಪನ್ಮೂಲ ಮೂಲದ ಹುಡುಕಾಟದ ನಡುವೆ ಜಾಗತಿಕ ಪ್ರಾಬಲ್ಯ ವನ್ನು ಹೆಚ್ಚಿಸಿತ್ತು.
ದೇಶೀಯವಾಗಿ ಚೀನಾ ವೈವಿಧ್ಯಮಯ ಸಮಾಜವಾಗಿತ್ತು. ಸುದೀರ್ಘ ಕಾಲದ ಸಮಸ್ಯೆಗಳಿದ್ದವು. ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಭಿವೃದ್ಧಿಗೆ ಒತ್ತು ನೀಡಿದರು. ಈ ಹೈಸ್ಪೀಡ್ ಪ್ರಗತಿಯ ಪರಿಣಾಮ ಕೋಟ್ಯಂತರ ಚೀನೀಯರಿಗೆ ಅನುಕೂಲವಾಗಿದೆ. ಆದರೆ ಹೊಸ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಸಂಘರ್ಷಗಳಿಗೆ ಕಾರಣವಾಗಿದೆ. ಅಸಮಾನತೆ, ಪರಿಸರ ಮಾಲಿನ್ಯ, ಗುಣಮಟ್ಟದ ಜನಜೀವನಕ್ಕೆ ಕೊರತೆ ಎದುರಾಗಿದೆ. ಮಹಿಳೆಯರು, ಹಿರಿಯ ನಾಗರಿಕರು, ಅಲ್ಪಸಂಖ್ಯಾತರು ಕಠಿಣ ಪರಿಸ್ಥಿತಿ, ಶೋಷಣೆಗೀಡಾಗಿದ್ದಾರೆ. ಸಾರ್ವಜನಿಕ ಪ್ರತಿಭಟನೆ, ಇಂಟರ್‌ನೆಟ್ ಆಕ್ಟಿವಿಸಂ ನಡೆದಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
2012ರ ಕೊನೆಯ ಚರಣದಲ್ಲಿ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ಹೊಸ ಸರಕಾರ ಅಧಿಕಾರಕ್ಕೇರಿತು. 2013ರಲ್ಲಿ ಲೀ ಕೀಕ್ವಿಯಾಂಗ್ ಪ್ರಧಾನಿಯಾದರು. ಹೊಸ ಸರಕಾರ ಆರ್ಥಿಕ ಸುಧಾರಣೆಯ ಅಗತ್ಯ ಇದೆ ಎಂದು ಅರ್ಥ ಮಾಡಿಕೊಂಡಿತು. ಹೊಸ ಆರ್ಥಿಕ ನೀತಿಯ ಮಹಾ ಶಿಲ್ಪಿ ತಾವೇ ಎಂದು ಜಿನ್ಪಿಂಗ್ ಬಿಂಬಿಸಿದರು! ಸಾಮಾನ್ಯವಾಗಿ ಇದರಲ್ಲಿ ಪ್ರಧಾನಿಯವರ ಕೆಲಸ ಮಹತ್ವದ್ದು. ಆದರೆ ಚೀನಾದಲ್ಲಿ ಪ್ರಧಾನಿ ಇದ್ದಾರೆ ಎಂಬುದೂ ಬಹು ಜನರಿಗೆ ಗೊತ್ತಿರಲಾರದು.
2013ರಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಲಹೆಯಂತೆ 60 ಅಂಶಗಳ ಮೆಗಾ ಸುಧಾರಣೆಯ ಕ್ರಮಗಳನ್ನು ಘೋಷಿಸಲಾಯಿತು. ಅದರಲ್ಲಿ 22 ಅಂಶಗಳು ಹೊಸ ಆರ್ಥಿಕತೆಗೆ ಸಂಬಂಧಿಸಿತ್ತು.
ಬಜೆಟ್ ಅನುದಾನಗಳ ಹಂಚಿಕೆಯನ್ನು ಮಾರುಕಟ್ಟೆಯ ವಿಸ್ತರಣೆಗೆ ಪೂರಕವಾಗಿ ಬದಲಿಸಲಾಯಿತು. ಇಂಧನ, ನೈಸರ್ಗಿಕ ಸಂಪನ್ಮೂಲ, ಹೂಡಿಕೆ, ವೆಚ್ಚ ಎಲ್ಲದರಲ್ಲೂ ಚೀನಾದ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಯಿತು. ರಫ್ತುದಾರರಿಗೆ ಲಾಭ ಮಾಡಿಕೊಡಲು ಕರೆನ್ಸಿ ಮೌಲ್ಯವನ್ನು ಅಪಮೌಲ್ಯಗೊಳಿಸಲಾಯಿತು. ಕಾನೂನು ಸುಧಾರಣೆ, ಸಾಮಾಜಿಕ ನೀತಿ, ಪರಿಸರ ನೀತಿ, ಮಿಲಿಟರಿ ನೀತಿಗೆ ಬಲ ತುಂಬಲಾಯಿತು. ಸಾಮಾಜಿಕ ನಿಯಂತ್ರಣ ಮತ್ತು ಪಕ್ಷದ ರಾಜಕೀಯ ಸಿದ್ಧಾಂತ ಗಳಜಾರಿಗೂ ( ಹೇರಲು) ಕಾನೂನು ತರಲಾಯಿತು!
ಕ್ಸಿ ಜಿನ್ಪಿಂಗ್ ಮತ್ತು ಲೀ ಅಧಿಕಾರ ಗ್ರಹಣ ಮಾಡಿದ ಎರಡು ವರ್ಷಗಳ ನಂತರ ಚೀನಿ ಆರ್ಥಿಕತೆ ಮಂದಗತಿಗೆ ತಿರುಗಿತು. 25 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಎಕಾನಮಿ ಮಂದಗತಿಯಲ್ಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದರು. ಇದರ ಬೆನ್ನಲ್ಲೇ, 2015ರ ಆಗಸ್ಟ್‌ನಲ್ಲಿ ಚೀನಾ ಎರಡು ದಶಕದಲ್ಲೇ ಕಂಡರಿಯದಂತೆ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿತು. ಸಾಲದ ಬಡ್ಡಿ ದರಗಳನ್ನು ತಗ್ಗಿಸಲಾಯಿತು. ಕಂಪನಿಗಳ ಷೇರುದರಗಳು ಕುಸಿಯಿತು. ದೊಡ್ಡ ಷೇರುದಾರರು ಕಂಪನಿಗಳ ಷೇರುಗಳನ್ನು ಮಾರದಂತೆ ಬ್ಲಾಕ್ ಮಾಡಿದರು. ಸರಕಾರಿ ಕಂಪನಿಗಳೇ ಷೇರುಗಳನ್ನು ಖರೀದಿಸಿದವು. ಆದರೆ ಇದರಿಂದಾಗಿ ಏನೂ ಪ್ರಯೋಜನವಾಗಲಿಲ್ಲ.
ಈ ನಡುವೆ ಕ್ಸಿ ಜಿನ್ಪಿಂಗ್ ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಿದರು. ಸರಕಾರಿ ಸಂಸ್ಥೆಗಳು, ಸೇನೆಯಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ಮುಂದಾದರು. ಆಕರ್ಷಕ ಭೂಸ್ವಾಧೀನ ಹಾಗೂ ಸಾರ್ವಜನಿಕ ಸಂಸ್ಥೆಗಳ ಲಾಭದಲ್ಲಿ ಸೋರಿಕೆ ತಡೆಯಲು ಯತ್ನಿಸಿದರು. ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿ ಚೋಂಗ್ ಕ್ವಿಂಗ್ ಸೇರಿದಂತೆ ಹಲವರನ್ನು ಜೈಲಿಗೆ ಅಟ್ಟಲಾಯಿತು. ಆದರೆ ಜಿನ್ಪಿಂಗ್ ತಮ್ಮ ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಈ ನಾಟಕವಾಡುತ್ತಿದ್ದಾರೆ ಎಂದೂ ಹಲವರು ನಂಬಿದ್ದರು. ಮಿಲಿಟರಿಯ ಹಿರಿಯ ಅಧಿಕಾರಿಗಳೂ ಜೈಲು ಕಂಡರು. 2015ರಲ್ಲಿ 14 ಸೇನಾಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿ ಸೆರೆವಾಸ ಅನುಭವಿಸಿದರು. ಹೊಸ ಕಮಾಂಡರ್‌ಗಳು ಬಂದರು. ಜಿನ್ಪಿಂಗ್ ಕೆಲಕಾಲ ಸೇನೆಯಲ್ಲಿದ್ದರು. ಈ ಹಿಂದೆ ಹಲವಾರು ವರ್ಷಗಳ ಕಾಲ ರಕ್ಷಣಾ ಸಚಿವರ ಆಪ್ತರಾಗಿ ಸೇನೆಯ ಜತೆ ನಂಟು ಬೆಳೆಸಿಕೊಂಡು ರಾಜಕೀಯದಲ್ಲಿ ಮುಂದುವರಿದಿದ್ದರು ಜಿನ್ಪಿಂಗ್. 1929ರಲ್ಲಿ ಚೀನಾ -ವಿಯೆಟ್ನಾಂ ಸಮರದ ವೇಳೆ ಮಿಲಿಟರಿ ತುಕಡಿಗಳಿಗೆ ಹೋಗಿ ಯೋಧರ ಜತೆ ಮಾತುಕತೆ ನಡೆಸುತ್ತಿದ್ದರಂತೆ.
ಕ್ಸಿ ಜಿನ್ಪಿಂಗ್ ತಮ್ಮ ಭಾವನಾತ್ಮಕ ಭಾಷಣಗಳ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರಚುರಪಡಿಸಿದರು. 2012ರ ನವೆಂಬರ್‌ನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ನಂತರ ಮಾಡಿದ ಭಾಷಣದಲ್ಲಿ ಚೀನಾದ ಕನಸುಗಳ ಬಗ್ಗೆ ಮಾತನಾಡಿದರು. "ಚೀನಾದ ಪ್ರತಿಯೊಬ್ಬರೂ ಅತ್ಯಂತ ಕಠಿಣ ಪರಿಶ್ರಮ ಪಡಲು ಸಿದ್ಧರಾಗಬೇಕು. ಆಗ ಮಾತ್ರ ದೇಶ ಬಲಾಢ್ಯವಾದೀತು. ಚೀನಾ ಕಮ್ಯುನಿಸ್ಟ್ ಪಾರ್ಟಿ ಹೇಳಿದಂತೆ ಎಲ್ಲರೂ ನಡೆದುಕೊಂಡರೆ ಮಾತ್ರ ಉದ್ಧಾರವಾಗಬಹುದು ಎಂದು ಹುಕುಂ ಕೊಟ್ಟರು. ಎಲ್ಲರೂ ಸಂಘಟಿತ ಕನಸು ಕಾಣುವುದು ಹೇಗೆ ಎಂದು ಕ್ಲಾಸ್ ತೆಗೆದುಕೊಂಡರು. ಚೀನಾ ಜನತೆ ಪಕ್ಷದ ಸಿದ್ಧಾಂತಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಜಿನ್ಪಿಂಗ್ , ಆರ್ಥಿಕ ಪ್ರಗತಿಯ ಭರವಸೆ ಕೊಡುತ್ತಾ ತಮ್ಮ ರಾಷ್ಟ್ರೀಯವಾದಿ ರಾಜಕಾರಣದ ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
ಒಂದು ಕಡೆ ಭ್ರಷ್ಟಾಚಾರ ವಿರೋಧಿ ಅಭಿಯಾನ, ಮತ್ತೊಂದು ಕಡೆ ‘ಚೈನಾ ಡ್ರೀಮ್’ ಸಿದ್ಧಾಂತದ ಮೂಲಕ ಜಿನ್ಪಿಂಗ್ ಜನಪ್ರಿಯತೆ ಹೆಚ್ಚಿಸಿಕೊಂಡರು. ಸಿಸಿಪಿಯ ಪ್ರಮುಖ ಬಣಗಳ ಮೇಲೆ ನಿಯಂತ್ರಣ ಸಾಧಿಸಿದರು. ಪಕ್ಷ ಮತ್ತುಸರಕಾರದ ಮಧ್ಯೆ ನಿರ್ದಿಷ್ಟ ನೀತಿಗಳ ವಿಚಾರ ದಲ್ಲಿ ಸಮನ್ವಯತೆ ಕಂಡುಕೊಂಡರು. ಅದು ತೈವಾನ್ನಿಂದ ಹಾಂಕಾಂಗ್ ವಿಷಯವಾಗಿರಲಿ, ಇಂಟರ್ನೆಟ್ ಭದ್ರತೆ, ಕಾನೂನು ವಿಚಾರವಾಗಿರಲಿ ಸಮನ್ವಯ ತಪ್ಪದಂತೆ ನೋಡಿಕೊಂಡರು. ಆದರೆ ಜಿನ್ಪಿಂಗ್ ಪಕ್ಷದ ಒಳ ಹೊರಗುಗಳಲ್ಲಿ ಏಕಮೇವಾದ್ವಿತೀಯ ನಾಯಕರಾದರು. ಸಂಘಟಿತ ನಾಯಕತ್ವ ಇಲ್ಲವಾಯಿತು.
( ಮುಂದುವರಿಯುವುದು)
Subscribe to:
Post Comments (Atom)
ಒಳ್ಳೆಯ ವಿಶ್ಲೇಷಣೆ. ಬೇಗನೇ ಮುಂದಿನ ಭಾಗ ಬರಲಿ.
ReplyDelete