Monday, 2 August 2021
ಭಾರತದಲ್ಲಿ "ವಿದ್ಯೆಯ ಸಲುವಾಗಿ ವಿದ್ಯೆ' ಎನ್ನುವುದೇ ಆದರ್ಶವಾಗಿತ್ತು. ಆದರೆ ಬರಬರುತ್ತಾ "ವಿತ್ತದ ಸಲುವಾಗಿ ವಿದ್ಯೆ' ಎಂದಾಯಿತು. ಆದರೆ ಕೇವಲ "ಹಣಕ್ಕೋಸ್ಕರ ವಿದ್ಯೆ' ಎಂಬ ಜಾಯಮಾನ ಅತಿ ಕೆಳಮಟ್ಟದ ಉದ್ದೇಶ. ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣದಲ್ಲೂ ಇದು ಬಿಡುಬೀಸಾಗಿರುವುದು ಹಾಗೂ ಇದರ ಪರಿಣಾಮ ಲಕ್ಷಾಂತರ ಮಂದಿ ಯುವಜನತೆ ಪ್ರತಿಭೆ ಇದ್ದರೂ, ವಂಚಿತರಾಗುತ್ತಿರುವುದನ್ನು ಕಾಣಬಹುದು. ಒಂದೆಡೆ ಉನ್ನತ ವಿದ್ಯೆಯಿಂದ ವಂಚಿತರಾಗುವುದು, ಎರಡನೆಯದಾಗಿ ಉಳ್ಳವರು ಕೋಟಿಗಟ್ಟಲೆ ರೂ.ಗಳನ್ನು ಚೆಲ್ಲಿಯಾದರೂ, ಕೋರ್ಸ್ ಕಲಿಯುವುದು! ವೈದ್ಯರಾಗುವುದು. ವಿದೇಶಕ್ಕೂ ಹೋಗಿ ಕೈತುಂಬಾ ಗಳಿಸಿ ಅಲ್ಲೇ ನೆಲೆಸುವುದು. ಅಥವಾ ಭಾರತಕ್ಕೆ ಮರಳಿ ಸ್ವಂತ ನರ್ಸಿಂಗ್ ಹೋಮ್ ಸ್ಥಾಪಿಸುವುದು. ಇಂಥ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯ ಸಾಧಿಸುವುದು ಹೇಗೆ? ಈ ಪ್ರಶ್ನೆಗೆ ಸರಕಾರದ ಉತ್ತರವೇನು? ಎಂಬುದನ್ನು ಅವಲೋಕಿಸಲು ಸಕಾಲ. ಏಕೆಂದರೆ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ವೈದ್ಯಕೀಯ ಪದವಿ (ಯುಜಿ) ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ (ಪಿಜಿ) ಸಂಸ್ಥೆಗಳಲ್ಲಿ ಅಖಿಲ ಭಾರತ ಮೀಸಲು ಕೋಟಾದಡಿಯಲ್ಲಿ ಇತರ ಹಿಂದುಳಿದ ಜಾತಿ (ಒಬಿಸಿ) ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಈ ವರ್ಷದಿಂದಲೇ ಅನುಕ್ರಮವಾಗಿ ಶೇ.27 ಮತ್ತು ಶೇ.10ರ ಮೀಸಲನ್ನು ಕೇಂದ್ರ ಸರಕಾರ ಘೋಷಿಸಿದೆ. ಎಂಬಿಬಿಎಸ್, ಎಂಡಿ, ಎಂಎಸ್, ಡಿಪ್ಲೊಮಾ, ಬಿಡಿಎಸ್, ಎಂಡಿಎಸ್ ಕೋರ್ಸ್ ಗಳಿಗೂ ಇದು ಅನ್ವಯ. ಈ ಹಿಂದೆ 2006ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರೀಯ ಹಾಗೂ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲು ಜಾರಿಗೊಳಿಸಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದೀಗ ಆರ್ಥಿಕವಾಗಿ ದುರ್ಬಲ ವರ್ಗದವರಿಗೂ ರಿಸರ್ವೇಶನ್ ಕಲ್ಪಿಸುವ ಮೂಲಕ ಮತ್ತಷ್ಟು ಸಾಮಾಜಿಕ ಸ್ತರಕ್ಕೆ ಸ್ಪಂದಿಸಿದಂತಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅಖಿಲಭಾರತ ಕೋಟಾದಡಿಯಲ್ಲಿ ಶೇ.27 ಒಬಿಸಿ ಕೋಟಾ ಬಂದಿರುವುದು, ಈ ನಿಟ್ಟಿನಲ್ಲಿ ಕಳೆದ ವರ್ಷ ಕಾನೂನು ಹೋರಾಟ ನಡೆಸಿದ್ದ ಡಿಎಂಕೆ ಪಕ್ಷಕ್ಕೆ ಸಿಕ್ಕಿದ ಗೆಲುವು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬಣ್ಣಿಸಿದ್ದಾರೆ. ಕೇಂದ್ರ ಸರಕಾರವು, ರಾಜ್ಯ ಸರಕಾರಿ ಕಾಲೇಜುಗಳಲ್ಲಿ ತನ್ನ ಅಖಿಲ ಭಾರತ ಕೋಟಾದಡಿಯಲ್ಲಿ (ಎಐಕ್ಯೂ) ಎಂಬಿಬಿಎಸ್ ಸೀಟುಗಳಿಗೆ ಸಂಬಂಧಿಸಿ ಒಬಿಸಿ ಮೀಸಲನ್ನು ಜಾರಿಗೊಳಿಸುತ್ತಿಲ್ಲ ಎಂದು ಡಿಎಂಕೆ, ಕೇಂದ್ರ ಸರಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿತ್ತು. ವಿಚಾರಣೆ ಕೈಗೊಂಡ ಮದ್ರಾಸ್ ಹೈಕೋರ್ಟ್, ಒಬಿಸಿ ಮೀಸಲನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಹೀಗಾಗಿ ಇದು ನಮ್ಮ ಗೆಲುವು ಎಂದು ಸ್ಟಾಲಿನ್ ಬೀಗುತ್ತಿದ್ದಾರೆ. ಆದರೆ ಇಲ್ಲಿ ಈ ಎಲ್ಲ ರಾಜಕೀಯಗಳನ್ನು ಹೊರತುಪಡಿಸಿದ ನಿರ್ಣಾಯಕ ಆಯಾಮಗಳಿವೆ. ಅವುಗಳ ಬಗ್ಗೆ ಚರ್ಚಿಸಬೇಡವೇ? ಮೀಸಲು ಹೆಚ್ಚಿಸಿದ್ದಕ್ಕೆ ಬೀಗುವ ರಾಜಕಾರಣಿಗಳು ಸೀಟುಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದಾರೆಯೇ? ಈಗ ವೈದ್ಯಕೀಯ ಸೀಟುಗಳ ಸಂಖ್ಯೆ ಎಷ್ಟಿದೆಯೋ ಅಷ್ಟಕ್ಕೇ ಸೀಮಿತವಾಗಿದೆ. ಮೀಸಲನ್ನು ಮಾತ್ರ ಘೋಷಿಸಲಾಗಿದೆ! ಹಾಗಾದರೆ ಹೊಸ ಸೀಟುಗಳನ್ನು ಒದಗಿಸುವುದು, ಅದಕ್ಕಾಗಿ ಸರಕಾರಿ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದು ಯಾವಾಗ? ಗುಣಮಟ್ಟದ ವೈದ್ಯರನ್ನು ರೂಪಿಸುವುದು ಹಾಗೂ ಅವರು ಭಾರತದಲ್ಲೇ ಭವಿಷ್ಯ ಕಂಡುಕೊಳ್ಳುವಂತೆ ಸಹಕರಿಸುವುದು ಎಂದು? ಅತ್ಯುತ್ತಮ ದರ್ಜೆಯ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡೂ ದೇಶದ ತುರ್ತು ಅಗತ್ಯಗಳಾಗಿವೆ. ಆದರೆ ನಮ್ಮ ರಾಜಕಾರಣಿಗಳು ಅದಕ್ಕೆ ಗಮನ ಕೊಡುವುದಕ್ಕಿಂತಲೂ ಹೆಚ್ಚು ಜನಪ್ರಿಯ ಘೋಷಣೆಗಳಿಗೆ ಸೀಮಿತರಾಗುತ್ತಾರೆ.
ರಾಜ್ಯ ಸರಕಾರಗಳ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇ.15ರಷ್ಟನ್ನು ಭಾರತದ ಯಾವುದೇ ಭಾಗದ ವಿದ್ಯಾರ್ಥಿಗೆ ಸಿಗುವಂತಾಗಲು ಕೊಡಬೇಕು ಎಂಬ ನಿಯಮವಿದೆ. ಇದನ್ನೇ ಅಖಿಲ ಭಾರತೀಯ ಕೋಟಾ (ಎಐಕ್ಯೂ) ಎನ್ನುವುದು. ಉಳಿದ ಸೀಟುಗಳು ರಾಜ್ಯದ ಕೋಟಾ ವ್ಯವಸ್ಥೆಗೆ ಒಳಪಟ್ಟಿದೆ. ಪ್ರತಿಯೊಂದು ರಾಜ್ಯಗಳೂ ಶೇ.15ರ ಅಖಿಲ ಭಾರತೀಯ ಕೋಟಾಗೆ ಬದ್ಧವಾಗಿರಬೇಕು. ವಿದ್ಯಾರ್ಥಿಗಳು ಎಐಕ್ಯೂಗೂ ಅರ್ಜಿ ಸಲ್ಲಿಸಬಹುದು. ರಾಜ್ಯ ಸರಕಾರಿ ಕೋಟಾಗೂ, ಎನ್ನಾರೈ ಮ್ಯಾನೇಜ್‌ಮೆಂಟ್ ಸೀಟುಗಳಿಗೂ ಅರ್ಜಿ ಸಲ್ಲಿಸಬಹುದು. ಈ ಶೇ.15ರ ಎಐಕ್ಯೂನಲ್ಲಿ ಮೊದಲು ಎಸ್‌ಸಿ, ಎಸ್‌ಟಿಗೆ ಮಾತ್ರ ಮೀಸಲು ಇತ್ತು. ಈಗ ಒಬಿಸಿಯವರಿಗೆ ಶೇ.27 ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರ ಮೀಸಲು ಕಲ್ಪಿಸಲಾಗಿದೆ. ಹೀಗಾಗಿ ಸಾಮಾನ್ಯ ವರ್ಗದವರಿಗೆ ಸೀಟು ಕಡಿತವಾಯಿತು. ಇದು ಕೇವಲ ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನ್ವಯ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬೇರೆ ಒಪ್ಪಂದಗಳಿರುತ್ತವೆ. ಜನ ಸಾಮಾನ್ಯರಿಗೆ ಇಲ್ಲಿ ಎಂಬಿಬಿಎಸ್ ಅಥವಾ ಸ್ನಾತಕೋತ್ತರ ಪದವಿ ಗಳಿಸುವುದು ಗಗನ ಕುಸುಮವೇ ಸರಿ.
"ಖಾಸಗಿ ಕಾಲೇಜುಗಳು ಒಟ್ಟು ಮೂರು ಕೆಟಗರಿಯಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ನಿಗದಿಪಡಿಸುತ್ತವೆ. "ಎನ್ನಾರೈ ಆ್ಯಂಡ್ ಮ್ಯಾನೇಜ್‌ಮೆಂಟ್, ಪ್ರೈವೇಟ್ ಫೀಸ್ ಇನ್ ಪ್ರೈವೇಟ್ ಕಾಲೇಜ್ ಮತ್ತು ಗವರ್ನಮೆಂಟ್ ಫೀಸ್ ಇನ್ ಪ್ರೈವೇಟ್ ಕಾಲೇಜ್' ಎಂಬ ಮೂರು ಶ್ರೇಣಿಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತದೆ.
ಉದಾಹರಣೆಗೆ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಶುಲ್ಕ ಆಧರಿತ ಸೀಟುಗಳಿಗೆ ವೆಚ್ಚ ಕಡಿಮೆ. ಆದರೆ ಇತರ ಕಡಿಮೆ ದರದ ಶುಲ್ಕ (ಲೆಸ್ಸರ್ ಫೀಸ್) ವಿಭಾಗದಲ್ಲೂ ವಾರ್ಷಿಕ 10-15ಲಕ್ಷ ರೂ. ಇರುತ್ತದೆ. ಎನ್ನಾರೈ ಮತ್ತು ಮ್ಯಾನೇಜ್‌ಮೆಂಟ್ ಸೀಟಿಗೆ 25-30 ಲಕ್ಷ ರೂ. ತನಕ ಇರುತ್ತದೆ.
ಎಂಬಿಬಿಎಸ್‌ಗೆ ಸರಕಾರಿ ಶುಲ್ಕ ವಾರ್ಷಿಕ 50,000ರೂ. ಇರುತ್ತದೆ. ಆದರೆ ಖಾಸಗಿ ಕಾಲೇಜಿನಲ್ಲಿ 10-15 ಲಕ್ಷ ರೂ. ತನಕ ಇರುತ್ತದೆ! ಇತರ ಖರ್ಚು ವೆಚ್ಚಗಳನ್ನು ಸೇರಿಸಿದರೆ ಇನ್ನೂ ದುಬಾರಿಯಾಗುತ್ತದೆ. ಇದು ವಾರ್ಷಿಕ ಶುಲ್ಕ, ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಮುಕ್ತಾಯದ ವೇಳೆಗೆ 50-60 ಲಕ್ಷ ರೂ. ಖರ್ಚಾಗುತ್ತದೆ.
ಭಾರತದಲ್ಲಿ ಪ್ರತಿ ವರ್ಷ ಎಂಬಿಬಿಎಸ್, ದಂತ ವೈದ್ಯಕೀಯ (ಬಿಡಿಎಸ್) ಆಯುಷ್ ಕೋರ್ಸ್ ಗಳಿಗೆ 15 ಲಕ್ಷ ವಿದ್ಯಾರ್ಥಿಗಳು ನೀಟ್ ಪ್ರವೇಶ ಪರೀಕ್ಷೆ ಎದುರಿಸುತ್ತಾರೆ. ಆದರೆ ಲಭ್ಯವಿರುವ ಸರಕಾರಿ ಸೀಟುಗಳ ಸಂಖ್ಯೆ 80 ಸಾವಿರದ ಆಸುಪಾಸಿನಲ್ಲಿದೆ. ಹೀಗೆ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಗಾಧ ವ್ಯತ್ಯಾಸವನ್ನು ಕಾಣಬಹುದು. ಇದಕ್ಕೇನು ಪರಿಹಾರ?
ಸರಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈಗ 550 ಕಾಲೇಜುಗಳಿವೆ. ಪ್ರತಿ ವರ್ಷ 1 ಲಕ್ಷ ಸರಕಾರಿ ವೈದ್ಯಕೀಯ ಸೀಟುಗಳ ಲಭ್ಯತೆ ಇರುವಂತೆ ನೋಡಿಕೊಳ್ಳಲು ಸರಕಾರ ಯೋಜಿಸಿದೆ. ಅಂದರೆ ಇನ್ನೂ 20,000 ಸೀಟುಗಳನ್ನು ವ್ಯವಸ್ಥೆ ಮಾಡಬೇಕು. ಆದರೆ ಇದಕ್ಕಾಗಿ ದೊಡ್ಡ ಮಟ್ಟಿನ ಹೂಡಿಕೆಯ ಅಗತ್ಯ ಇದೆ.
"ಒಂದು ಸರಕಾರಿ ವೈದ್ಯಕೀಯ ಕಾಲೆಜು ಸ್ಥಾಪನೆಗೆ 200ರಿಂದ 300 ಕೋಟಿ ರೂ. ಬೇಕು. ಹಾಗೂ ವಾರ್ಷಿಕ 50 ಕೋಟಿ ರೂ. ನಿರ್ವಹಣಾ ವೆಚ್ಚ ಬೇಕಾಗುತ್ತದೆ. ಇದನ್ನು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದಲ್ಲಿ ಭರಿಸಲು ಸಾಧ್ಯವಿಲ್ಲ'' ಎನ್ನುತ್ತಾರೆ ಡಾ.ಎಸ್.ಸಚ್ಚಿದಾನಂದ. ಹೀಗಾಗಿ ಸರಕಾರವೇ ತನ್ನ ಬಜೆಟ್‌ನಲ್ಲಿ ಇದಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಹಂತಹಂತವಾಗಿ ಸರಕಾರಿ ಕಾಲೇಜುಗಳನ್ನು ಹೆಚ್ಚಿಸಬೇಕಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳು ಕೋರ್ಸ್ ಮುಗಿದ ಮೇಲೆ ಜಿಲ್ಲಾ ಮಟ್ಟದಲ್ಲಿ 1 ವರ್ಷ ಸೇವೆ ಸಲ್ಲಿಸಬೇಕು. ತಪ್ಪಿದರೆ ಲಕ್ಷಾಂತರ ರೂ. ದಂಡ ಪಾವತಿಸಬೇಕು. ಆದರೆ ಗ್ರಾಮಾಂತರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಲು ದಂಡ ಕಟ್ಟುವವರೂ ಇದ್ದಾರೆ ಎನ್ನುತ್ತಾರೆ ತಜ್ಞರು.
ಖಾಸಗಿ ಕಾಲೇಜುಗಳಲ್ಲಿ ಶೇ.30 ಸೀಟುಗಳನ್ನು ಸಬ್ಸಿಡಿ ದರದಲ್ಲಿ ಮೀಸಲಿಡಿ ಎಂದರೆ, ಉಳಿದ ಶೇ.70 ಸೀಟುಗಳ ಶುಲ್ಕವನ್ನು ಏರಿಸಿ, ಖರ್ಚನ್ನು ಭರಿಸಿಕೊಳ್ಳುತ್ತವೆ. ಖಾಸಗಿ ಕಾಲೇಜುಗಳಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಉದಾಹರಣೆಗೆ 100 ವಿದ್ಯಾರ್ಥಿಗಳಿದ್ದರೆ 20ಮಂದಿಗೆ ಮೀಸಲು ಕೊಡಿ ಎಂದರೆ ಅಲ್ಲಿ ಕಡಿತವಾಗುವ ಮೊತ್ತವನ್ನು ಉಳಿದ 80 ವಿದ್ಯಾರ್ಥಿಗಳ ಲೆಕ್ಕದಲ್ಲಿ ಸೇರಿಸುತ್ತಾರೆ. ಹೀಗಾಗಿ ಸರಕಾರಿ ಕಾಲೇಜುಗಳನ್ನು ಹೆಚ್ಚಿಸುವುದೇ ಇದಕ್ಕೆ ಪರಿಹಾರ. ಆದರೆ ಜನಪ್ರಿಯ ಘೋಷಣೆಗಳು, ಉಚಿತ ಭಾಗ್ಯಗಳಿಗೆ ಮೊರೆ ಹೋಗುವ ಸರಕಾರಗಳಿದ್ದರೆ, ಇಂಥ ಮೂಲ ಸೌಕರ್ಯಗಳ ಕೊರತೆ ಉಂಟಾಗುತ್ತದೆ. ಉನ್ನತ ಶಿಕ್ಷಣದ ವೆಚ್ಚ ಇಳಿಸುವುದು ಜನತೆಗೆ ವೈದ್ಯಕೀಯ ವೆಚ್ಚ ಇಳಿಸುವ ನಿಟ್ಟಿನಲ್ಲಿಯೂ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಲೂ ಅವಶ್ಯಕ.
"ನಮ್ಮ ಜನಸಂಖ್ಯೆಯ ಶೇ.30ರಷ್ಟನ್ನೂ ಹೆಲ್ತ್ ಕೇರ್ ಮೂಲ ಸೌಕರ್ಯಗಳು ತಲುಪಿಲ್ಲ. ಹಳ್ಳಿಗಳಲ್ಲಿ ಆರೋಗ್ಯ ಸೇವೆ ದುರ್ಬಲವಾಗಿದೆ. ವೈದ್ಯಕೀಯ ಸಲಕರಣೆಗಳೂ ಕಡಿಮೆ. ಮತ್ತೊಂದು ಕಡೆ ವೈದ್ಯಕೀಯ ಶಿಕ್ಷಣದ ವೆಚ್ಚ ದುಬಾರಿಯಾಗಿದೆ. ಹೀಗಾಗಿ ಸರಕಾರ ಡಿಪ್ಲೊಮಾ ಇನ್ ಮೆಡಿಸಿನ್ ಮತ್ತು ಡಿಪ್ಲೊಮಾ ಇನ್ ಸರ್ಜರಿ ಎಂಬ 4 ವರ್ಷಗಳ ಕೋರ್ಸ್ಗಳನ್ನು ಮಾಡಬೇಕು. ಕೋರ್ಸ್ ಮುಗಿದ ನಂತರ ಹಳ್ಳಿಗಳಲ್ಲಿ ಅಥವಾ 50,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಸೇವೆ ಸಲ್ಲಿಸಲು ಸರ್ಟಿಫಿಕೇಟ್ ನೀಡಬೇಕು. 10 ವರ್ಷಗಳ ಸೇವೆ ನಂತರ ಪರೀಕ್ಷೆ ಮೂಲಕ ಎಂಬಿಬಿಎಸ್ ಪದವಿ ನೀಡುವಂತಾಗಬೇಕು. ಇದರಿಂದಾಗಿ ಆರೋಗ್ಯ ಸೇವೆಯನ್ನು ವಿಸ್ತರಿಸಬಹುದು'' ಎನ್ನುತ್ತಾರೆ ಮೈಸೂರಿನ ಸ್ಕಾನ್ರೆ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವ. ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರಂತೂ, 1.5ಲಕ್ಷ ನುರಿತ ವೈದ್ಯರ ಅಗತ್ಯ ಭಾರತಕ್ಕಿದೆ ಎಂದಿದ್ದಾರೆ. ಕೋವಿಡೋತ್ತರ ಕಾಲದಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಬೇಕಾದ ತುರ್ತಿದೆ. ಕೇವಲ ಮೀಸಲು ಮಾತ್ರವಲ್ಲ.
Subscribe to:
Post Comments (Atom)
No comments:
Post a Comment