ವಿಜಯ ಕರ್ನಾಟಕಕ್ಕೆ ಸೇರ್ಪಡೆಯಾಗಿ 7 ವರ್ಷಗಳು ತುಂಬಲು ಇನ್ನು ಮೂರು ತಿಂಗಳು ಮಾತ್ರ ಇದೆ. ಇದಕ್ಕೂ ಮುನ್ನ ಸುಮಾರು ಮೂರು ವರ್ಷ, ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಈ ಹೊತ್ತಿನಲ್ಲಿ ಇಬ್ಬರು ಮಹನೀಯರನ್ನು ನೆನಪಿಸಿಕೊಳ್ಳುತ್ತೇನೆ. ಅವರೇ ನನಗೆ ಕೆಲಸ ಒದಗಿಸಿ ಹರಸಿದ ಶ್ರೀ. ವಿಶ್ವೇಶ್ವರ ಭಟ್ ಹಾಗೂ ಶ್ರೀ. ರಾಜಶೇಖರ ಕೋಟಿ. ವಿಜಯ ಕರ್ನಾಟಕದಲ್ಲಿ ಏಳು ವರ್ಷಗಳ ಹಿಂದೆ ನನ್ನನ್ನು ನೇಮಿಸಿದ ವಿಶ್ವೇಶ್ವರ ಭಟ್ ಹಾಗೂ ಇದಕ್ಕೂ ಹಿಂದೆ ಆಂದೋಲನದಲ್ಲಿ ಮೂರು ವರ್ಷ ಉದ್ಯೋಗ ನೀಡಿದ ಕೋಟಿಯವರಿಗೆ ಕೋಟಿ ನಮನಗಳು.
ಮಾಧ್ಯಮ ವಲಯದಲ್ಲಿ ಹಾಗೂ ಸಾಮಾಜಿಕ ವೆಬ್‌ತಾಣಗಳಲ್ಲಿ ಸಹಜವಾಗಿ ಹೊಸ ಮಿತ್ರರ ಭೇಟಿಯಾದಾಗ, ಕುತೂಹಲದಿಂದ ನನ್ನ ವೃತ್ತಿಯ ಬಗ್ಗೆ, ಮಾಧ್ಯಮಗಳ ಬಗ್ಗೆ ಕೇಳುತ್ತಾರೆ. ಹಾಗೆ ಕೇಳಿದಾಗಲೆಲ್ಲ ಚುಟುಕಾಗಿ ತಿಳಿಸುತ್ತೇನೆ. ಆದರೆ ಕಳೆದ ಹನ್ನೊಂದು ವರ್ಷಗಳ ಪತ್ರಿಕಾ ರಂಗದ ಅನುಭವಗಳು ತಮ್ಮಷ್ಟಕ್ಕೆ ಮೆರವಣಿಗೆ ಹೊರಡುತ್ತವೆ. ಪತ್ರಿಕಾ ರಂಗದಲ್ಲಿ ಹನ್ನೊಂದು ವರ್ಷಗಳು ಹನ್ನೊಂದು ದಿನಗಳಂತೆ ಕಳೆದಿವೆ. ಈ ಅವಧಿಯಲ್ಲಿ ಹಲವಾರು ಅನುಭವಗಳು, ಕಲಿತ ಪಾಠಗಳು ಮರೆಯಲಾಗದೆ ಉಳಿದಿವೆ. ಈ ಹನ್ನೊಂದು ವರ್ಷಗಳಲ್ಲಿ ನಾನೇನೋ ಸಾಧಿಸಿದ್ದೇನೆ ಎಂಬ ಹಮ್ಮು ನನಗಿಲ್ಲ. ಆದರೆ ಶೂನ್ಯದಂತಿದ್ದ ಬದುಕಿಗೊಂದು ಆಧಾರ ಒದಗಿಸಿದೆ. ಅದಕ್ಕಿಂತ ಮುಖ್ಯವಾಗಿ ಕನ್ನಡದ ಪತ್ರಿಕೆಗಳ ಪ್ರತಿಭಾವಂತ ಸಂಪಾದಕರುಗಳ ಒಡನಾಟದ ಅವಕಾಶ ಕೊಟ್ಟಿದೆ.
ಗುಡಿಸಲಿನಿಂದ ಪಂಚತಾರಾ ಹೋಟೆಲಿನ ವೈಭವದ ತನಕ ನೋಡಿದ್ದೇನೆ. ಬರಪೀಡಿತ ಪ್ರದೇಶಗಳಲ್ಲಿ ರೈತನ ಬವಣೆಗಳನ್ನು ಆಲಿಸಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿ, ಬೆಂದು ಆಸ್ಪತ್ರೆಯಲ್ಲಿ ಸಂಕಟದಿಂದ ನರಳುತ್ತಿದ್ದ ಯುವತಿಯನ್ನು ಕಂಡು ಮರುಗಿದ್ದೇನೆ. ಆಸಿಡ್ ದಾಳಿಗೆ ಸಿಲುಕಿ ಮುಖ ವಿರೂಪಗೊಂಡು ನರಕಸದೃಶ ಬದುಕು ನಡೆಸುತ್ತಿದ್ದವಳನ್ನು ಮಾತನಾಡಿಸಿದ್ದೇನೆ. ಐಶಾರಾಮಿ ಕಾರುಗಳ ಉತ್ಪಾದನೆಯನ್ನು ನೋಡಿದ್ದೇನೆ. ಹಿಜಡಾಗಳ ನೋವು ನಲಿವನ್ನು ಅವರಿಂದಲೇ ಕೇಳಿ ಬರೆದಿದ್ದೇನೆ. ರೆಡ್‌ಬಸ್‌ನ ಸಿಇಒ ಫಣೀಂದ್ರ ಸಮಾ ಎಂಬ ಯುವ ಉದ್ಯಮಿಯಿಂದ ಶುರುವಾಗಿ ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, ಇನ್ಫೋಸಿಸ್‌ನ ಸಹ ಸಂಸ್ಥಾಪಕ ದಿನೇಶ್ ಅವರಂತಹ ಹಿರಿಯರ ತನಕ ಹಲವಾರು ಗಣ್ಯರನ್ನು ಸಂದರ್ಶಿಸುವ ಅವಕಾಶವನ್ನು ಪತ್ರಿಕೋದ್ಯಮ ಕೊಟ್ಟಿದೆ. ಪ್ರತಿಯೊಂದು ವೃತ್ತಿಯಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯಗಳಿರುತ್ತವೆ. ಆದರೆ ಎಲ್ಲರೂ ಅವುಗಳನ್ನು ಬರೆಯಲು ಹೋಗುವುದಿಲ್ಲ. ಕೆಲವರಿಗೆ ಬರೆಯುವ ಮನಸ್ಸಿದ್ದರೂ, ಬರೆಯಲು ನಮ್ಮಿಂದಾಗದು ಎನ್ನುತ್ತಾರೆ. ಆದರೆ ಕಳೆದ 11 ವರ್ಷಗಳಿಂದ ಬರೆಯುವುದೇ ನನ್ನ ವೃತ್ತಿಯಾದ್ದರಿಂದ, ನನಗೆ ಸಿಕ್ಕಿದ ಅನುಭವಗಳಲ್ಲಿ ಕೆಲವನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಅಕ್ಷರ ರೂಪದಲ್ಲಿಡುವ ಬಯಕೆ. ಎಂದಿನಂತೆ ನಿಮ್ಮ ಬೆಂಬಲದ ನಿರೀಕ್ಷೆ ಇದ್ದೇ ಇದೆ.
Sunday, 12 February 2012
Subscribe to:
Post Comments (Atom)
ಪತ್ರಿಕೊದ್ಯಮವೂ "ಕಾಸಿಗಾಗಿ ಬರಹ" ಶೈಲಿಗೆ ಬದಲಾಗುತ್ತಿರುವ ಪರ್ವ ಕಾಲದಲ್ಲಿ, ೧೧ ವರ್ಷಗಳ ಈ ಸುದೀರ್ಘ ವಿಕ ಪಯಣವು ನಿಮ್ಮ ನಿಷ್ಠೆಯನ್ನು ತೋರುತ್ತದೆ.
ReplyDeleteಎಲ್ಲ ಶುಭವಾಗಲಿ.
ನನ್ನ ಬ್ಲಾಗಿಗೂ ಸ್ವಾಗತ.
thanks
ReplyDelete