ಹಾಯ್ ಫ್ರೆಂಡ್ಸ್,
ನೀವೆಲ್ಲರೂ ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಲ್ಲಿತ್ತು !
ಅದನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ನಿಜವಾಗಿಸಿದ್ದಕ್ಕೆ ಥ್ಯಾಂಕ್ಸ್. ಹಾಗಾದರೆ ಮೈಸೂರಿನಲ್ಲಿ ದಶಕದ ಹಿಂದೆ ಆಂದೋಲನ ದಿನ ಪತ್ರಿಕೆಯಲ್ಲಿ ಕಳೆದ ದಿನಗಳು ಹೇಗಿತ್ತು ಅಂತ ಬರೆಯುತ್ತೇನೆ.
ಆಗ ಮಾಧ್ಯಮ ವಲಯದಲ್ಲಿ ಈವತ್ತಿರುವಷ್ಟು ಉದ್ಯೋಗಾವಕಾಶಗಳು ಇರಲಿಲ್ಲ. ವಾರ್ತಾ ವಾಹಿನಿಗಳು ಬೆಳೆದಿರಲಿಲ್ಲ. ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಎ ಓದಿದ ನಂತರ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಎಸ್ಸೆಸ್ಸೆಲ್ಸಿಯಲ್ಲಿದ್ದಾಗಲೇ ಚುಟುಕ, ಮಕ್ಕಳ ಕಥೆ, ಕಿರು ಬರಹಗಳನ್ನು ಬರೆಯುತ್ತಿದ್ದೆ. ಆಗೊಮ್ಮೆ, ಈಗೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಬಾಲ್ಯದ ಈ ಹವ್ಯಾಸವೇ ಪತ್ರಿಕೋದ್ಯಮಕ್ಕೆ ಕರೆದೊಯ್ಯುತ್ತದೆ ಎಂದು ಅನ್ನಿಸಿರಲಿಲ್ಲ. ನನ್ನ ಸೋದರ ಮಾವ ಶಂಕರನಾರಾಯಣ ಭಟ್, ಹೊಸದಿಗಂತಕ್ಕೆ ಕಾಸರಗೋಡಿನ ಪ್ರತಿನಿಧಿಯಾಗಿ ಸುದ್ದಿಗಳನ್ನು ಕಳುಹಿಸುತ್ತಿದ್ದರು. ಅತ್ತೆ ಕೃಷ್ಣವೇಣಿ ಕಿದೂರು ಅವರೂ ಹಲವು ಪತ್ರಿಕೆ, ನಿಯತಕಾಲಿಕೆಗಳಿಗೆ ಬರೆಯುತ್ತಿದ್ದರು. ಆಗ ಬರೆಯುವ ಬಯಕೆ ಉಂಟಾಗುತ್ತಿತ್ತು. ಆದರೆ ಹೀಗೆ ಮಾಡಪ್ಪಾ ಅಂತ ಎನ್ನುವ ಮಾರ್ಗದರ್ಶಕರು ಇರಲಿಲ್ಲ. ಅದಕ್ಕಾಗಿ ಯಾರನ್ನೂ ದೂರುವುದೂ ಇಲ್ಲ. ಆಗಿನ ಪರಿಸ್ಥಿತಿಯೇ ಹಾಗಿತ್ತು.
ಆಗ ಮೈಸೂರಿನಲ್ಲಿ ಅಕ್ಕ ಹೇಮಮಾಲಾ ಬಿ ಅವರ ಮನೆಯಲ್ಲಿದ್ದೆ. ಇದಕ್ಕೂ ಮುನ್ನ ಕೃಷ್ಣಮೂರ್ತಿ ಎಂಬುವವರ ಸೀರೆ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಭೋಗಾದಿಯಲ್ಲಿದ್ದ ಆ ಕಿರು ಅಂಗಡಿಯಲ್ಲಿ ತಿಂಗಳಿಗೊಂದು ಸೀರೆ ಮಾರಾಟವಾದರೆ ಅದೇ ಹಬ್ಬ. ಅವರು ಯಾಕಾಗಿ ಆ ಸೀರೆ ಅಂಗಡಿ ಇಟ್ಟಿದ್ದರು ಎಂಬುದೇ ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ ತಿಂಗಳಿಗೆ ತಪ್ಪದೆ ಐನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ಅವರಿಗೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವಿತ್ತು. ಸೈಡಲ್ಲಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಾ ಇದ್ದರು. ಉತ್ತಮ ವಾಗ್ಮಿ. ಇತ್ತೀಚೆಗೆ ಮೈಸೂರಿಗೆ ತೆರಳಿದ್ದಾಗ ಸಿಕ್ಕರು. " ಸಾರ್, ನಾನು ಕೇಶವ ಪ್ರಸಾದ್’ ಅಂದೆ. ಓಹೋಹೋ..ಅಂತ ತುಂಬ ಆತ್ಮೀಯವಾಗಿ ಮಾತನಾಡಿಸಿದ್ರು ಮೂರ್ತಿ.
ಹಾಗೊಂದು ದಿನ ಧೈರ್ಯ ಮಾಡಿ, ಮೈಸೂರು ಮಿತ್ರ ಕಚೇರಿಗೆ ತೆರಳಿದೆ. ಅಲ್ಲಿ ಸಂಪಾದಕರಾದ ಬಿ.ಗಣಪತಿಯವರನ್ನು ಕಂಡೆ. ಸ್ವ ವಿವರ ನೋಡಿದ ಗಣಪತಿಯವರು, ಈಗೇನು ಮಾಡುತ್ತಿದ್ದೀರಿ ? ಎಂದರು. ಬಟ್ಟೆ ಅಂಗಡಿಯಲ್ಲಿ ಸಣ್ಣ ಕೆಲ್ಸ ಅಂದೆ. ಹಾಗಾದರೆ ಬಟ್ಟೆ ಅಳೆಯಲು ಬರುತ್ತಾ ? ಎಂದು ಕೀಟಲೆ ಮಾಡಿದರು ಗಣಪತಿ. ನಾನು ಸ್ವಲ್ಪ ತಬ್ಬಿಬ್ಬಾದೆ. ಮತ್ತೆ ಏನೋ ಅಂದಿದ್ದರು. ಮುಂದೇನು ಮಾಡುವುದಪ್ಪಾ ಅಂತ ಅಂದುಕೊಂಡು ಅಕ್ಕನ ಮನೆಗೆ ತೆರಳಿದ್ದೆ.
ಮತ್ತೊಂದು ವಾರ ಬಿಟ್ಟ ನಂತರ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯ ಮೆಟ್ಟಿಲು ಹತ್ತಿದೆ. ಅಲ್ಲಿ ಆಡಳಿತಾಧಿಕಾರಿ ಸೂರ್ಯವಂಶಿ ಕಡತಗಳ ವಿಲೇವಾರಿಯಲ್ಲಿ ದಡಬಡ ಮುಳುಗಿದಂತೆ ಇದ್ದರು. ಅವರೆದುರು ನಿಂತು ನನ್ನ ಸ್ವ ವಿವರಗಳನ್ನು ನೀಡಿದೆ. ಸಂಪಾದಕ ರಾಜಶೇಖರ ಕೋಟಿಯವರನ್ನು ಕಾಣುವಂತೆ ತಿಳಿಸಿದರು. ಅವರ ಮನೆ ಕಚೇರಿಗೆ ಹೊಂದಿಕೊಂಡಂತೆ ಇತ್ತು. ಭವ್ಯವಾದ ಬಂಗಲೆಯದು. ಗೇಟನ್ನು ತೆರೆದು ಅಳುಕಿನಿಂದಲೇ ಮನೆಯೊಳಕ್ಕೆ ಪ್ರವೇಶಿಸಿದೆ. ಆಂದೋಲನ, ಮೈಸೂರಿನ ಪ್ರತಿಷ್ಠಿತ ದಿನಪತ್ರಿಕೆ ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿ ನನ್ನಲ್ಲಿರಲಿಲ್ಲ. ನನ್ನ ಕಡತಗಳನ್ನು ನೋಡುತ್ತಾ, ಕೋಟಿಯವರು ನನ್ನ ಊರು ಇತ್ಯಾದಿ ವಿವರ ಕೇಳಿದರು.
ಕಾಸರಗೋಡಿನವನು ಎಂದಾಗ, ಕಾಸರಗೋಡು ಚಿನ್ನಾ ಗೊತ್ತಾ ಎಂದರು. ಗೊತ್ತಿದೆ. ಆದರೆ ಮುಖತಃ ಭೇಟಿಯಾಗಿಲ್ಲ ಎಂದೆ. ಆಗತಾನೇ ಮೈಸೂರು ಮಿತ್ರದಲ್ಲಿ ನನ್ನ ಕೆಲ ಕಿರು ಬರಹಗಳು ಪ್ರಕಟವಾಗಿದ್ದವು. ಅವುಗಳನ್ನು ತೋರಿಸಿದೆ. ಅವುಗಳನ್ನೋದಿದ ಕೋಟಿಯವರು, ಸ್ವಲ್ಪ ನಗುತ್ತಾ ಹಾಗಾದರೆ ಮೈಸೂರು ಮಿತ್ರದಲ್ಲೇ ಪ್ರಯತ್ನಿಸಬಹುದಿತ್ತಲ್ವೇ ? ಅಂದರು. ಅಂತಹ ಪ್ರಶ್ನೆ ಕೇಳುತ್ತಾರೆ ಅಂತ ನನಗೆ ಅನ್ನಿಸಿರಲಿಲ್ಲ. ಡವಡವ ಆಯ್ತು. ಇಲ್ಲ ಸಾರ್, ನಿಮ್ಮ ಪತ್ರಿಕೆಯಲ್ಲಿ ಒಳ್ಳೆಯ ಫ್ಯೂಚರ್ ಇದೆ ಅಂತ.. ಅಂದೆ.
ಸರಿ, ನಿಮ್ಮನ್ನು ಟ್ರೈನಿ ಆಗಿ ಅಪಾಯಿಂಟ್ ಮಾಡುತ್ತೇವೆ. ಸೂರ್ಯವಂಶಿಯವರ ಬಳಿ ಹೋಗಿ. ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದರು. ಬೇರೆ ಏನನ್ನೂ ಹೇಳಿರಲಿಲ್ಲ, ನಾನೂ ಕೇಳಿರಲಿಲ್ಲ. ಕೆಲಸ ಸಿಕ್ಕಿದ ಖುಷಿಯಲ್ಲಿ ಮಿಕ್ಕಿದ್ದೆಲ್ಲವೂ ಮರೆತು ಹೋಗಿತ್ತು. ಆದರೆ ಆವತ್ತು ಆಂದೋಲನಕ್ಕೆ ಸೇರಿದ್ದುದು, ಪತ್ರಿಕೋದ್ಯಮದ ಕಲಿಕೆಯ ದೃಷ್ಟಿಯಿಂದ ಒಳ್ಳೆಯದಾಯಿತು.
ಕೇಶವ ಪ್ರಸಾದ್.ಬಿ.ಕಿದೂರು
Wednesday, 15 February 2012
Subscribe to:
Post Comments (Atom)
No comments:
Post a Comment