ನನ್ನ ಪ್ರೀತಿಯ ಸ್ನೇಹಿತರೇ,
ಇದು ಕೇವಲ ನನ್ನ ಅನಿಸಿಕೆಯಲ್ಲ, ಹತ್ತಾರು ವರ್ಷಗಳ ಹಿಂದಿನಿಂದಲೇ ಮೈಸೂರಿನ ಆಂದೋಲನದ ಬಗ್ಗೆ ನೂರಾರು ಮಂದಿ ಪತ್ರಕರ್ತರು ಹೇಳಿರುವ ಮಾತು. ಈವತ್ತಿಗೂ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಆಂದೋಲನದಲ್ಲಿ ಪತ್ರಿಕೋದ್ಯಮದ ಪಟ್ಟುಗಳನ್ನು ಕಲಿತು ಯಶಸ್ವಿ ಕರಿಯರ್ ನಡೆಸುತ್ತಿರುವವರು ಇದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯಲ್ಲಿ ದಶಕದ ಹಿಂದೆ ವರದಿಗಾರನಾಗಿ ಸೇರ್ಪಡೆಯಾಗಿದ್ದೆ. ಆಗ ಅಲ್ಲಿ ಹಿರಿಯರಾದ ಓಂಕಾರ್, ಚಿನ್ನಸ್ವಾಮಿ ವಡ್ಡಗೆರೆ, ವೀರಭದ್ರಪ್ಪ ಬಿಸ್ಲಳ್ಳಿ, ಕುಂದೂರು ಉಮೇಶ ಭಟ್ಟ, ಕೋದಂಡರಾಮ, ಶಶಿ ಕುಮಾರ್ ಮೊದಲಾದ ಸಹೋದ್ಯೋಗಿಗಳು ಸಿಕ್ಕರು. ನಮ್ಮ ತಂಡ ವಿಟಮಿನ್ "ಎಂ’ನಿಂದ ಬಳಲುತ್ತಿದ್ದರೂ, ಉತ್ಸಾಹಕ್ಕೆ ಯಾವುದೇ ಕೊರತೆ ಇರಲಿಲ್ಲ. ಯಾವುದೇ ಕಾಲೇಜಿನಲ್ಲಿ ಕಲಿಸದ ಪತ್ರಿಕೋದ್ಯಮದ ಪಾಠಗಳನ್ನು ನನಗೆ ಆಂದೋಲನ ಕಲಿಸಿತು ಅಂತ ನೆನೆಯುತ್ತೇನೆ. ಅದಕ್ಕಾಗಿ ಪತ್ರಿಕೆಯ ಸಂಪಾದಕ, ಮಾಲೀಕರಾದ ರಾಜ ಶೇಖರಕೋಟಿಯವರಿಗೆ ಚಿರಋಣಿಯಾಗಿದ್ದೇನೆ.
ಅಲ್ಲಿವರೆಗೆ ಪತ್ರಿಕೆಗಳಿಗೆ ಸಣ್ಣ ಪುಟ್ಟ ಬರಹ, ಕತೆ, ಕವನ ಅಂತ ಬರೆದುಕೊಂಡಿದ್ದ ನನಗೆ, ಅದಕ್ಕೂ ಪತ್ರಿಕಾ ಬರವಣಿಗೆಗೂ ಎಷ್ಟು ವ್ಯತ್ಯಾಸ ಇದೆ ಎಂಬುದು ಮೊದಲ ದಿನವೇ ಮನವರಿಕೆಯಾಯಿತು. ಆಂದೋಲನಕ್ಕೆ ನಿತ್ಯ ನೂರಾರು ಪತ್ರಿಕಾ ಪ್ರಕಟಣೆಗಳು ಬರುತ್ತಿದ್ದವು. ಅವುಗಳನ್ನು ಆಯ್ದು ಹೊಸಬರಿಗೆ ಕೊಡುತ್ತಿದ್ದರು. ನಂತರ ಅದನ್ನು ಸುದ್ದಿಯಾಗಿಸಿ ಹಿರಿಯ ಸಹೋದ್ಯೋಗಿಗಳಿಗೆ ಕೊಡಬೇಕು. ಅವರು ತಿದ್ದಿ ಕೊಡುತ್ತಿದ್ದರು. ಆಗ ಆಂದೋಲನದಲ್ಲಿ ಕ್ವಾಲಿಟಿ ಕಂಟ್ರೋಲ್ ಚೆನ್ನಾಗಿತ್ತು. ತಪ್ಪಿದಾಗ ಬೈಗುಳ ಕೂಡ ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಹಿರಿ-ಕಿರಿಯರೆನ್ನದೆ ಕಾಲೆಳೆಯುವುದು, ಹಾಸ್ಯ ಚಟಾಕಿ ಸಿಡಿಸುವುದು, ಒಟ್ಟಿಗೆ ಚಾ ಕುಡಿಯಲು ಹೋಗೋದು. ಹಗಲು-ರಾತ್ರಿ ಭೇದವಿಲ್ಲದೆ ಸಾದ್ಯಂಗವಾಗಿತ್ತು. ಆದರೆ ಸಾಯಂಕಾಲ ನಿತ್ಯ ಕೋಟಿಯವರು ಕಚೇರಿಗೆ ಬರುತ್ತಿದ್ದಂತೆ ಕಚೇರಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ವಾತಾವರಣ ನಿರ್ಮಾಣವಾಗುತ್ತಿತ್ತು. ಅಂತಹ ಭಯ, ಭಕ್ತಿ,, ಗೌರವದ ಪರಾಕಾಷ್ಠೆ. ಅವರು ಮನೆಗೆ ಹೋದೊಡನೆ ಮತ್ತೆ ಗಲಗಲ..
ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಸಂದರ್ಶನ ಮುಗಿಸಿ ಆಂದೋಲನಕ್ಕೆ ಸೇರಿದ ನಂತರ ಕೋಟಿಯವರೊಡನೆ ಮುಖಾಮುಖಿ, ಮಾತುಕತೆಗೆ ಆರು ತಿಂಗಳು ಬೇಕಾಯಿತು. ಅದೊಂದು ದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಕೋಟಿಯವರೇ ಮುಖ್ಯ ಅತಿಥಿಗಳಾಗಿದ್ದರು. ಓಂಕಾರ್ ನನ್ನಲ್ಲಿ ವರದಿಗಾರಿಕೆಗೆ ಹೋಗಿ ಬನ್ನಿ ಅಂದರು. ಸರಿ ಅಂತ ಪೆನ್ನು, ಕಾಗದ ತಕ್ಕಂಡು ಹೊರಟೆ. ಕಾರ್ಯಕ್ರಮದಲ್ಲಿ ಸಂಪಾದಕರೇ ಇದ್ದಾರೆ. ಹುಷಾರಾಗಿರಬೇಕು. ಕಾಪಾಡು ತಂದೇ ಅನ್ನುತ್ತಾ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಜನ ಜಂಗುಳಿ ಇತ್ತು. ಕೋಟಿಯವರು ತಮ್ಮ ಭಾಷಣ ಮುಗಿಸಿ ಕಚೇರಿಗೆ ಹೊರಟರು. ನಾನು ಜಂಗುಳಿಯ ನಡುವೆ ಅವರ ಬಳಿ ಬಂದು ಸಾರ್ ನಮಸ್ತೆ ಅಂದೆ. ಅವರೂ ನಮಸ್ಕಾರ ಅಂದ್ರು. ಬಹುಶಃ ಅವರ ಯಾರೋ ಅಭಿಮಾನಿ ಇರಬೇಕು ಅಂತ ಅಂದು ಕೊಂಡರೇನೋ, ಸಾರ್ ಆಂದೋಲನದಲ್ಲಿ ನಾನು ಕೆಲ್ಸ ಮಾಡುತ್ತಿದ್ದೇನೆ ಅಂದೆ. ಆಗ ತಕ್ಷಣ ಕೋಟಿಯವರು, ಸರಿ..ಸರಿ..ಆಫೀಸಿಗೆ ಹೋಗಿ..ಅಂದ್ರು.
ಕಚೇರಿಗೆ ಬಂದು ಓಂಕಾರ್ ಬಳಿ ನಡೆದ ಸಂಗತಿಯನ್ನು ಹೇಳಿದೆ. ಎಲ್ಲರೂ ಕೇಳಿಸಿಕೊಂಡರು. ದೊಡ್ಡ ಜೋಕಾಗಿ ಕಾಮಿಡಿ ಟೈಮ್ ಆಯ್ತು.
ಆದರೆ ಮರು ದಿನ ಅಚ್ಚರಿ ಕಾದಿತ್ತು. ನನ್ನ ವರದಿ ಕೋಟಿಯವರಿಗೆ ಇಷ್ಟವಾಗಿತ್ತು ಅಂತ ಕಾಣುತ್ತೆ. ಮತ್ತೊಂದು ಕಾರ್ಯಕ್ರಮದ ವರದಿಗೆ ನನ್ನನ್ನೇ ಕರೆದರು. ಅವರ ಜತೆಗೆ ಕಾರಿನಲ್ಲಿ ಸುತ್ತೂರು ಸಮೀಪ ನಡೆದ ಎನ್‌ಎಸ್‌ಎಸ್ ಶಿಬಿರಕ್ಕೆ ತೆರಳಿದೆ. ಅಲ್ಲಿ ನಡೆದ ಕಾರ್ಯಕ್ರಮದ ವರದಿ ಮಾಡಿದೆ. ಅಷ್ಟರಲ್ಲಿ ಕೋಟಿಯವರ ಪ್ರಚಂಡ ದುಡಿಮೆ, ಏಕಾಗ್ರತೆ, ಪತ್ರಿಕೆ ಕಟ್ಟಿದ ಸಾಹಸ, ಯಶೋಗಾಥೆಯ ಪರಿಚಯವಾಗಿತ್ತು.
ಅದೊಂದು ದಿನ ರಾಜ ಶೇಖರ ಕೋಟಿಯವರ ಜತೆಗೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಭಾವಸಾರ್ ಕ್ಷತ್ರಿಯ ಸಮಾಜದವರ ಕಾರ್ಯಕ್ರಮ. ಅಲ್ಲಿ ಶ್ವೇತಾ ಟೇಂಮ್ಕರ್ ಎಂಬ ಯುವ ಪೈಲಟ್‌ಗೆ ಸನ್ಮಾನ ಸಮಾರಂಭ ನಡೆಯಿತು. ಶ್ವೇತಾ ಟೇಮ್ಕರ್ ಎಳೆಯ ವಯಸ್ಸಿನಲ್ಲಿಯೇ ಪೈಲಟ್ ಆಗಿ ಗಮನ ಸೆಳೆದಿದ್ದರು. ಕಾರ್ಯಕ್ರಮ ಮಿಗಿದ ತಕ್ಷಣ ಕೋಟಿಯವರು ನನ್ನನ್ನು ಕರೆದು, ಟೇಮ್ಕರ್ ಬಗ್ಗೆ ವಿಶೇಷ ವರದಿ ಬರೆಯಿರಿ ಅಂದರು. ಸರಿ ಅಂದು ಮರು ದಿನವೇ ಟೇಮ್ಕರ್ ಅವರ ಮನೆಗೆ ತೆರಳಿ ಸಂದರ್ಶನ ಮಾಡಿ ಬರೆದೆ. ಮುಂದೇನಾಯಿತು ಅಂತ ಮುಂದಿನ ಭಾಗದಲ್ಲಿ ಹೇಳುತ್ತೇನೆ...ನಿರೀಕ್ಷಿಸಿ..!
Friday, 17 February 2012
Subscribe to:
Post Comments (Atom)
No comments:
Post a Comment