Wednesday, 15 September 2010

ಕಳ್ಳೆ ಪುರಿಯಂತೆ ಸಿಮ್ ಮಾರಾಟ ಮಾಡಿದ ಮೇಲೆ ದಾಖಲೆಗಳ ತಪಾಸಣೆ ನಡೆಸಿದ್ರು !ರಾಜ್ಯದಲ್ಲಿ ಏರ್‌ಟೆಲ್‌ನ ಲಕ್ಷಾಂತರ ಗ್ರಾಹಕರ ಮೊಬೈಲ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸಲಾಗಿದೆಯೇ ? ಮೈಸೂರಿನಲ್ಲಿ ಮೊಬೈಲ್ ಮಳಿಗೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ತೀವ್ರ ತಪಾಸಣೆ ನಡೆಸಿದರಂತೆ. ಒಬ್ಬರ ಹೆಸರಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಮ್‌ಗಳನ್ನು ನೀಡಲಾಗಿದೆಯೇ ಎಂಬುದನ್ನು ಶೋಸಿದರಂತೆ. ಕೆಲ ದಿನಗಳಿಂದೀಚೆಗೆ ಹಬ್ಬುತ್ತಿರುವ ನಾನಾ ವದಂತಿಗಳಿವು. ಬೆಂಗಳೂರಿನ ವೈದ್ಯರೊಬ್ಬರು ಸರಿಯಾದ ದಾಖಲೆಗಳನ್ನು ಕೊಟ್ಟರೂ ಮೊಬೈಲ್ ಸಂಪರ್ಕ ದಿಢೀರನೆ ಕಟ್ ಆಗಿದೆಯಂತೆ.. ಈ ಮಧ್ಯೆ ಅನಗತ್ಯವಾಗಿ ಯಾರೊಬ್ಬರ ಸಂಪರ್ಕವನ್ನೂ ನಾವು ಕಡಿತಗೊಳಿಸಿಲ್ಲ ಎನ್ನುತ್ತಾರೆ ಏರ್‌ಟೆಲ್‌ನ ವಕ್ತಾರರು. ಹಾಗಾದರೆ ಏನಾಗಿದೆ ?
ನಡೆದಿರುವುದಿಷ್ಟು.
ದೂರಸಂಪರ್ಕ ಇಲಾಖೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಇತ್ತೀಚೆಗೆ ಚಂದಾದಾರರ ವಿಳಾಸ ಮತ್ತು ಇತರ ವಿವರಗಳನ್ನು ಮತ್ತೆ ದೃಢೀಕರಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ. ಇದಕ್ಕೆ ಅಕ್ಟೋಬರ್ ೩೧ರ ಗಡುವನ್ನೂ ನೀಡಿದೆ. ದಾಖಲೆಗಳು ಸರಿ ಇಲ್ಲದಿದ್ದರೆ ಅಂತಹ ಚಂದಾದಾರರ ಮೊಬೈಲ್ ಸಂಪರ್ಕ ಕಡಿತಗೊಳ್ಳಲಿದು ಖಚಿತ. ಹೀಗಾಗಿ ಏರ್‌ಟೆಲ್ ತನ್ನ ಲಕ್ಷಾಂತರ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಅಂಚೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡಿದೆ. ಏರ್‌ಟೆಲ್ ಬಳಕೆದಾರರು ರಾಜ್ಯದ ೫೯ ಪ್ರಧಾನ ಅಂಚೆ ಕಚೇರಿ ಹಾಗೂ ೨ ಸಾವಿರ ಅಂಚೆ ಕಚೇರಿಗಳಲ್ಲಿ ವಿಳಾಸ ಹಾಗೂ ಛಾಯಾಚಿತ್ರಗಳನ್ನು ದೃಢಪಡಿಸಿಕೊಳ್ಳಬಹುದು. ಈ ಕಸರತ್ತು ಏರ್‌ಟೆಲ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಟೆಲಿಕಾಂ ಕಂಪನಿಗಳೂ ದೂರಸಂಪರ್ಕ ಇಲಾಖೆಯ ಆದೇಶದಂತೆ ನಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಕಂಪನಿಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕ ಸಂದೇಶ ರವಾನಿಸುತ್ತವೆ. ಸಂದೇಶ ಪಡೆದ ಗ್ರಾಹಕರು ದಾಖಲೆಗಳ ಮರು ದೃಢೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೊಬೈಲ್ ಕೊಡಿಸಿದ್ದಲ್ಲಿ, ಅವುಗಳೂ ವಿವರ ಒದಗಿಸಬೇಕು.
ಹಾಗಾದರೆ ಮೊಬೈಲ್ ಸಂಪರ್ಕ ಪಡೆಯುವ ವೇಳೆ ಇಲ್ಲದಿದ್ದ ಕಟ್ಟುನಿಟ್ಟು ಈಗೇಕೆ ? ಈ ಟೆಲಿಕಾಂ ಕಂಪನಿಗಳು ನಿಮಗೆ ಗೊತ್ತಾಗದಂತೆ ಮನೆ ವಿಳಾಸ ತಪಾಸಣೆ ಮಾಡುತ್ತಿದ್ದಾರೆಯೇ ?
ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ದೂರಸಂಪರ್ಕ ಇಲಾಖೆ ಕಟ್ಟುನಿಟ್ಟಾಗಿ ಈ ಕ್ರಮ ಜರುಗಿಸಲು ಮುಂದಾಗಿದೆ. ಭಯೋತ್ಪಾದಕರು, ದುಷ್ಕರ್ಮಿಗಳು ಈವತ್ತು ವ್ಯಾಪಕವಾಗಿ ಮೊಬೈಲ್‌ಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಟೆಲಿಕಾಂ ಕಂಪನಿಗಳ ಡೀಲರ್, ವಿತರಕರು ವ್ಯಾಪಾರ ಆದ್ರೆ ಸಾಕಪ್ಪಾ ಅಂತ ಮೊಬೈಲ್ ಸಂಪರ್ಕ ಕೊಟ್ಟು ಬಿಟ್ಟಿದ್ದಾರೆ. ಅವರು ಕಳ್ಳೆ ಪುರಿ ಹಂಚಿದ ಹಾಗೆ ಸಿಮ್ ವಿತರಿಸಿದ್ದರ ಹಿಂದಿನ ಅಸಲಿ ಸಂಗತಿ ಏನೆಂದರೆ ಮೊಬೈಲ್ ಕಂಪನಿಗಳ ಒತ್ತಡ ತಂತ್ರ. ಪ್ರತಿ ತಿಂಗಳು ನೀವಿಷ್ಟು ಮಾರಾಟದ ಗುರಿ ಸಾಸಲೇಬೇಕು ಎಂದು ಕಂಪನಿಗಳು ಒತ್ತಡ ಹೇರುವುದು ಸಾಮಾನ್ಯ. ಪರಿಣಾಮವಾಗಿ ದಾಖಲೆಗಳಲ್ಲಿ ಕುಲ, ಗೋತ್ರ, ವಿಳಾಸಗಳಲ್ಲಿ ವ್ಯತ್ಯಾಸಗಳು, ಲೋಪ ದೋಷಗಳು ನುಸುಳಿವೆ. ಯಾರದ್ದೋ ಹೆಸರಿನಲ್ಲಿ ಯಾರ್‍ಯಾರೋ ಮೊಬೈಲ್ ಸಂಪರ್ಕ ಪಡೆದಿದ್ದಾರೆ. ಅಂದಹಾಗೆ ಕೇವಲ ಭಯೋತ್ಪಾದಕರು ಮಾತ್ರವಲ್ಲ, ಕೊಲೆ, ಸುಲಿಗೆ, ದರೋಡೆಗಳಲ್ಲಿ ನಿರತರಾಗಿರುವ ಪಾತಕಿಗಳು ಕೂಡ ಮೊಬೈಲ್ ತಂತ್ರಜ್ಞಾನ ಮತ್ತು ವ್ಯವಸ್ಥೆಯ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರಾಗುತ್ತಿದ್ದಾರೆ. ನೋಡಿ, ಹಂತಕನೊಬ್ಬ ಮೊಬೈಲ್ ಮಳಿಗೆಗೆ ತೆರಳಿ ಯಾವುದೇ ದಾಖಲೆ ಕೊಡದೆ ಸಿಮ್ ಖರೀದಿಸಬಹುದು. ಹೇಗೂ ದಾಖಲೆ ಒದಗಿಸಲು ೭ ದಿನಗಳ ಕಾಲಾವಕಾಶ ಇರುತ್ತದೆ. ಪಾತಕಿಗೆ ಏಳು ದಿವಸ ಯಾಕೆ ? ಅಷ್ಟರಲ್ಲಿ ಮಾಡಬಾರದ್ದನ್ನೆಲ್ಲ ಮಾಡಿ ಸಿಮ್ ಬಿಸಾಕಿ, ಹೊಸ ಸಿಮ್ ಖರೀದಿಸುತ್ತಾನೆ. ಬಳಿಕ ಮತ್ತೊಂದು. ಯಾರಿಗೆ ಬೇಕು ದಾಖಲೆಗಳ ಉಸಾಬರಿ ? ಹೀಗಿರುವಾಗ ಕೊಲೆಗಾರನನ್ನು ಪೊಲೀಸರು ಹೇಗೆ ಪತ್ತೆ ಹಚ್ಚಿಯಾರು ?
ನಮ್ಮಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸುವುದು, ಪ್ರಾಮಾಣಿಕತೆಯನ್ನು ತೋರದಿರುವುದು, ಶಿಸ್ತು ಪಾಲಿಸದಿರುವುದೇ ಹೆಮ್ಮೆಯ ಸಂಗತಿ ಎನಿಸಿದೆ. ಈವತ್ತು ಪ್ರೀ ಪೇಯ್ಡ್ ಸಿಮ್ ಅನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂಬ ವಿಷಯ ಎಷ್ಟು ಮಂದಿಗೆ ಗೊತ್ತಿದೆ ? ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಪೋಸ್ಟ್ ಪೇಯ್ಡ್ ದೂರವಾಣಿ ಸಂಪರ್ಕಗಳನ್ನು ಮಾತ್ರ ರಕ್ತ ಸಂಬಂಕರಿಗೆ ವರ್ಗಾಯಿಸಬಹುದು. ಆದರೆ ಪ್ರೀ ಪೇಯ್ಡ್‌ಗಳನ್ನಲ್ಲ. ಆದರೆ ಈ ನಿಯಮಗಳನ್ನೆಲ್ಲ ಯಾವತ್ತಿಗೊ ಗಾಳಿಗೆ ತೂರಲಾಗಿದೆ. ಬಹುತೇಕ ಎಲ್ಲ ಟೆಲಿಕಾಂ ಕಂಪನಿ, ಡೀಲರ್, ರೀಟೇಲ್ ಮಾರಾಟಗಾರರ ಆತುರ, ವ್ಯಾಪಾರದ ಟಾರ್ಗೆಟ್ ಮುಟ್ಟುವ ಹಪಹಪಿಯ ಪರಿಣಾಮ ಈ ಎಲ್ಲ ಗೋಜಲು ಸೃಷ್ಟಿಯಾಗಿದೆ. ಮೊಬೈಲ್, ಸ್ಥಿರ ದೂರವಾಣಿ ಸಂಪರ್ಕ ಸೇವೆ ನೀಡುವ ಮುನ್ನ ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಿದ್ದಿದ್ದರೆ ಈ ಮರು ವಿಚಾರಣೆಯ ಅಗತ್ಯ ಇರುತ್ತಿತ್ತೇ ? ನೆವರ್.