Monday, 31 August 2009

ಸುಲಿಗೆಗೆ ನಿಲ್ಲುವ ವೈದ್ಯರು

ಕೆಂಗೇರಿ ಉಪನಗರದ ಆಸ್ಪತ್ರೆಯೊಂದಕ್ಕೆ ಕಳೆದ ಎರಡು ದಿನಗಳಿಂದ ಹೋಗಿದ್ದೆ.
ನನ್ನವಳ ಆರೋಗ್ಯ ಹದಗೆಟ್ಟಿತ್ತು. ಜ್ವರದಿಂದ ಬಳಲುತ್ತಿದ್ದ ಅವಳಿಗೆ ಐದಾರು ಬಗೆಯ ಟೆಸ್ಟ್‌ ಗಳನ್ನು ಮಾಡಬೇಕು ಎಂದು ವೈದ್ಯ ಮಹೇಶ್‌ (ಹೆಸರು ಬದಲಿಸಿದೆ) ಶಿಫಾರಸು ಮಾಡಿದರು. ಇದಕ್ಕೂ ಮುನ್ನ ಚಂದ್ರಶೇಖರ‍್ ಎಂಬ ವೈದ್ಯರು ಪರೀಕ್ಷಿಸಿ , ಹಲವಾರು ಮಾತ್ರೆಗಳನ್ನು ಬರೆದುಕೊಟ್ಟರು. ಇತ್ತ ಶೇಖರ‍್ (ಹೆಸರು ಬದಲಿಸಿದೆ) ಕೂಡ ಹಲವಾರು ಮಾತ್ರೆಗಳನ್ನು ಬರೆದುಕೊಟ್ಟರು. ಎಲ್ಲವನ್ನೂ ತಂದಿದ್ದಾಯಿತು.
ನಾನಾ ಬಗೆಯ ಜ್ವರಗಳು ಬೆಂಗಳೂರನ್ನು ಈವತ್ತು ಕಾಡುತ್ತಿವೆ. ಹೀಗಾಗಿ ತಡ ಮಾಡಲಿಲ್ಲ. ೭೫೦ ರೂ.ನಲ್ಲಿ ಮೆಡಿಕಲ್ ಟೆಸ್ಟ್ ರಿಪೋರ್ಟ್ ಈವತ್ತು ಮಧ್ಯಾಹ್ನ ಸಿಕ್ಕಿತು. ಚಿಕೂನ್ ಗೂನ್ಯಾ, ಡೆಂಗೆ, ಮಲೇರಿಯಾ, ಟಾಯ್ ಫಾಯ್ಡ್ ಮುಂತಾದ ಯಾವುದೇ ರೋಗದ ವೈರಸ್‌ ದಾಳಿ ಆಗಿರಲಿಲ್ಲ.
ರಿಪೋರ್ಟ್ ನೋಡಿದ ವೈದ್ಯ ಮಹೇಶ್, ಇನ್ನೆರಡು ದಿನ ಬಿಟ್ಟು ರೋಗಿಯನ್ನು ಕರೆದುಕೊಂಡು ಬನ್ನಿ. ಕೆಲವೊಂದು ಇನೀಶಿಯಲ್ ಹಂತದಲ್ಲಿ ನೆಗೆಟಿವ್ ಎಂದೇ ಬರುತ್ತದೆ. ನಂತರ ಪಾಸಿಟಿವ್ ಬರಬಹುದಾದ ಸಾಧ್ಯತೆಯೂ ಇದೆ ಎಂದರು. ಹಾಗಾದರೆ ಎರಡು ದಿನಗಳ ನಂತರ ಟೆಸ್ಟ್ ಗೆ ಮತ್ತೆ ೭೫೦ ರೂ. ಕೇಳುವುದಿಲ್ಲವೇ ? ಅವರು ಹೌದಾದರೆ ಕೇಳುತ್ತಾರೆ.
ನನ್ನ ಪ್ರಶ್ನೆ ಇಷ್ಟೇ. ಹಾಗಾದರೆ ತಕ್ಷಣ ಟೆಸ್ಟ್ ಮಾಡಿಸಿದ್ದೇಕೆ ? ಎರಡು ದಿನ ಬಿಟ್ಟೇ ಮಾಡಿಸಬಹುದಿತ್ತಲ್ಲವೇ ? ಈಗಾಗಲೇ ಸಾವಿರಾರು ರೂ. ಖರ್ಚಾಗಿದೆ. ಮತ್ತೊಂದು ಕಡೆ ನನ್ನಾಕೆ ಗುಣಮುಖಳಾಗಿಲ್ಲ. ಪ್ರತಿ ಸಲ ಭೇಟಿಯಾದಾಗಲೂ ಸಮಾ ಆಂಟಿ ಬಯಾಟಿಕ್ಸ್‌ ಗುಳಿಗೆಗಳನ್ನು ಕೊಡುತ್ತಾರೆ. ಹೀಗೆ ಆಸ್ಪತ್ರೆಗಳು ಮತ್ತು ಅಲ್ಲಿರುವ ವೈದ್ಯರು ಸುಲಿಗೆಗೆ ನಿಲ್ಲಬಹುದೇ ?

Sunday, 30 August 2009

ರಾಜೇಶ್ವರಿ ಟೀಚರ‍್ ಮತ್ತು ಕನ್ನಡ ಪಾಠ

ಎರಡನೆಯ ತರಗತಿಯಲ್ಲಿ ಇದ್ದಾಗ ರಾಜೇಶ್ವರಿ ಟೀಚರ‍್ ಕನ್ನಡ ಪಾಠ ಕಲಿಸುತ್ತಿದ್ದರು. ವೆಂಕಟರಾಜ, ವೆಂಕಟರಾಜೇಶ, ಉದನೇಶ್ವರ, ಹರೀಶ, ವಿಷ್ಣು ಪ್ರಸಾದ್, ರಾಜೇಶ್, ಜಯರಾಮ, ಮಾಲತಿ, ಸುಮಲತ, ಲಕ್ಷ್ಮಿ ಅಂತ ನಾವೆಲ್ಲ ಗೆಳೆಯ ಗೆಳತಿಯರು ಒಂದೇ ಕ್ಲಾಸಿನವರು. ಈಗ ಅವರಲ್ಲಿ ಹಲವರಿಗೆ ಮದುವೆಯಾಗಿದೆ. ಕೆಲವರಿಗೆ ಮದುವೆ ನಿಶ್ಚಯವಾಗಿದೆ. ಮತ್ತೆ ಕೆಲವರಿಗೆ ಮಕ್ಕಳೂ ಇದ್ದಾರೆ. ಆದರೂ ಆ ಬಾಲ್ಯದ ದಿನಗಳು ನಿನ್ನೆ ಮೊನ್ನೆ ನಡೆದ ಘಟನೆಗಳಂತೆ ಮನದಂಗಳದಲ್ಲಿ ಹಸಿರಾಗಿ ಉಳಿದಿದೆ..
ರಾಜೇಶ್ವರಿ ಟೀಚರ‍್ ಆವತ್ತು ಮಧ್ಯಾಹ್ನ ಊಟವಾದ ನಂತರ ಧ್ರುವ ಕುಮಾರನ ಪಠ್ಯವನ್ನು ಭೋದಿಸುತ್ತಿದ್ದರು. ಎಲ್ಲ ಮಕ್ಕಳು ಮಂತ್ರಮುಗ್ಧರಾಗಿ ಕತೆ ಕೇಳುತ್ತಿದ್ದರು. ಟೀಚರ‍್ ಸುಮ್ಮನೆ ಪಾಠ ಹೇಳುತ್ತಿರಲಿಲ್ಲ. ಗುರು ಶಿಷ್ಯರ ಪಾತ್ರಾಭಿನಯ ಕೂಡ ಇತ್ತು. ಧ್ರವ ಕುಮಾರ ತಂದೆಯ ತೊಡೆಯನ್ನೇರಿ ಕುಳಿತುಕೊಳ್ಳುವ ಆಸೆಯಿಂದ ಬಂದಾಗ, ಆತನ ಮಲತಾಯಿ ಬಾಲಕನನ್ನು ತಡೆದು ದೂಡುವ ಮನೋಜ್ಞ ದೃಶ್ಯವಿದೆ. ಉತ್ತಮನಾಗಿದ್ದ ಉದನೇಶ್ವರನನ್ನು ರಾಜೇಶ್ವರಿ ಟೀಚರ‍್ ಹತ್ತಿರ ಕೂರಿಸಿದ್ದರು. ನನ್ನನ್ನೇಕೆ ಟೀಚರ‍್ ಕರೆಯುತ್ತಿಲ್ಲವಲ್ಲ ಎಂದು ಬಲವಾಗಿ ಅನ್ನಿಸುತ್ತಿತ್ತು. ಕೆಲವು ಮಕ್ಕಳು ಧ್ರುವ ಕುಮಾರನ ಕಥೆ ಕೇಳಿ ಕಣ್ಣೀರು ಹಾಕುತ್ತಿದ್ದರು. ಅಂಥ ಭಾವಸ್ಪರ್ಶಿ ಕಥನವದು. ಅಷ್ಟರಲ್ಲಿ ಧ್ರವ ಕುಮಾರನನ್ನು ದೂಡುವ ಕ್ಷಣ ಬಂತು. ರಾಜೇಶ್ವರಿ ಟೀಚರ‍್ ನನ್ನನ್ನು ಕರೆದರು. ಖುಷಿಯಾಯಿತು.
ಧ್ರುವಕುಮಾರನನ್ನು ಹೀಗೆ ದೂಡಿದರು..ಅನ್ನುತ್ತಾ ನನ್ನನ್ನೇ ದೂಡಿದ ಹಾಗೆ ಮಾಡಿದರು. ಅವರಿಂದ ದೂಡಿಸಿಕೊಂಡಾದರೂ, ಪಾತ್ರಾಭಿನಯದಲ್ಲಿ ಪಾಲ್ಗೊಂಡ ತೃಪ್ತಿ ಇತ್ತು. ಮತ್ತೆ ಯಥಾ ಸ್ಥಾನದಲ್ಲಿ ಕುಳಿತುಕೊಂಡೆ.
ಪ್ರತಿ ದಿನ ಹಿಂದಿನ ದಿನ ಮಾಡಿದ್ದ ಪಠ್ಯದ ಮೇಲೆ ಕೆಲವು ಪ್ರಶ್ನೆಗಳನ್ನು ಟೀಚರ‍್ ಕೇಳುತ್ತಿದ್ದರು. ನನಗೆ ಅದರಲ್ಲಿ ಮಿಕ್ಕಿದ್ದಕ್ಕೆ ಹೋಲಿಸಿದರೆ ಹೆಚ್ಚು ಅಂಕ ಸಿಗುತ್ತಿತ್ತು. ಕ್ರಮೇಣ ಕನ್ನಡ ಪಾಠ ಎಂದರೆ ಬಲು ಇಷ್ಟವಾಯಿತು. ಏಳನೇ ತರಗತಿಯಲ್ಲಿ ಪಂಡಿತ ಮಾಸ್ತರರು ಕನ್ನಡ ಪಾಠಕ್ಕೆ ನಮಗೆ ಸಿಕ್ಕಿದ ನಂತರವಂತೂ ಕನ್ನಡ ಪರಮಪ್ರಿಯವಾಯಿತು. ಲೆಕ್ಕ ಮತ್ತು ಇಂಗ್ಲಿಷ್‌ ಮಾತ್ರ ಎಲ್ಲ ತರಗತಿಗಳಲ್ಲಿಯೂ ಬಹಳ ಕಷ್ಟವಾಗುತ್ತಿತ್ತು.

ಬೀದಿಯಲ್ಲಿ ಉಗುಳಬೇಡಿ..ಪ್ಲೀಸ್..

ಬೆಂಗಳೂರು ನಗರದಲ್ಲಿ ನೈರ್ಮಲ್ಯ ಕಾಪಾಡುವುದು ದುಃಸ್ಸಾಧ್ಯವೆನ್ನುವ ಹಂತಕ್ಕೆ ಬಂದು ಮುಟ್ಟಿದೆಯೇ ?
ಅಂತಹದೊಂದು ಆತಂಕ ಕಾಡುತ್ತಿದೆ. ಎಲ್ಲಿ ಹೋದರೂ ಜ್ವರಪೀಡಿತ ಮಂದಿ ಸಿಗುತ್ತಾರೆ. ವಯೋಮಿತಿಯ ಭೇದವಿಲ್ಲದೆ ರೋಗಿಗಳಿಂದ ಆಸ್ಪತ್ರೆಗಳು ತುಳುಕುತ್ತಿವೆ. ಎಷ್ಟೋ ಮಂದಿ ಮನೆಯೊಳಗೆ ಸ್ವಚ್ಛತೆಯನ್ನು ಜಾರಿಯಲ್ಲಿರಿಸುತ್ತಾರೆ. ಸೊಳ್ಳೆ ಓಡಿಸಲು ಕಾಯಿಲ್ ಗಳು, ಧೂಪ, ಅಗರಬತ್ತಿ, ಸೊಳ್ಳೆ ಪರದೆ, ಲಿಕ್ವಿಡ್‌ ಸಾಧನಗಳು ಮುಂತಾದ ಕ್ರಮ ಕೈಗೊಳ್ಳುತ್ತಾರೆ. ಆದರೆ ಮನೆಯ ಗೇಟು ದಾಟಿದ ನಂತರ ಆ ಪ್ರಜ್ಞೆ ಇರುವುದಿಲ್ಲ. ಯಾವಾಗ ಸಿಕ್ಕಸಿಕ್ಕಲ್ಲಿ ಉಗುಳುವವರಿಗೆ ಬುದ್ಧಿ ಬರುತ್ತದೆಯೋ ಎನ್ನಿಸುತ್ತದೆ.
ಕಸದ ತೊಟ್ಟಿಗೆ ಹೋಗಿ ಕಸ ಬಿಸಾಡುವುದಿಲ್ಲ. ನಗರಪಾಲಿಕೆಯೂ ಸರಿಯಾಗಿ ಕಸದ ವಿಲೇವಾರಿ ಮಾಡುವುದಿಲ್ಲ. ಒಟ್ಟಾರೆ ಇಡೀ ಬೆಂಗಳೂರು ಕಸದ ತೊಟ್ಟಿಯಾಗಿದೆ. ಇದರ ಪರಿಣಾಮ ? ಮನೆಮನೆಯಲ್ಲೂ ಚಿಕೂನ್ ಗೂನ್ಯಾ,ಡೆಂಗ್ಯು, ಮಲೇರಿಯಾ ಕಾಡುತ್ತಿದೆ. ಇತ್ತೀಚೆಗೆ ಎಲ್ಲದಕ್ಕೂ ಕಲಶವಿಟ್ಟಂತೆ ಹಂದಿ ಜ್ವರ ಬಂದಿದೆ. ನಗರದ ಪರಿಸರ ಮಾಲಿನ್ಯ, ಜನದಟ್ಟಣೆಯ ಪರಿಣಾಮ ಈ ಎಲ್ಲ ರೋಗಗಳು ತೀವ್ರವಾಗಿ ಹರಡುತ್ತಿವೆ. ಈವತ್ತು ಸ್ವಲ್ಪ ಜ್ವರ ಬಂದರೆ ಸಾಕು, ವೈದ್ಯರು ತಕ್ಷಣ ಆರೆಂಟು ಬಗೆಯ ತಪಾಸಣೆ ಮಾಡಿಸಿ ಎಂದು ಚೀಟಿ ಬರೆದುಕೊಡುತ್ತಾರೆ. ಕನಿಷ್ಠ ೭೫೦-೧೦೦೦ ರೂ. ತನಕ ತಪಾಸಣೆಯ ಶುಲ್ಕ ಆಗುತ್ತದೆ. ವೈದ್ಯರ ಶುಲ್ಕ , ಔಷಧಗಳ ವೆಚ್ಚ ಮತ್ತೂ ಅಷ್ಟೇ ಆಗುತ್ತದೆ. ಅಕಸ್ಮಾತ್‌ ಚಿಕೂನ್ ಗೂನ್ಯಾ, ಡೆಂಗ್ಯು, ಮಲೇರಿಯಾ ಬಂದರಂತೂ ಆಸ್ಪತ್ರೆಗೆ ಅಡ್ಮಿಟ್ ಆಗಲು ಸೂಚಿಸುತ್ತಾರೆ. ರೋಗಿಗೂ ಅವರ ಮನೆಯ ಮಂದಿಗೂ ಸಂಕಟ ಮತ್ತೆ ಖರ್ಚು, ನೋವು, ತಳಮಳ. ಬೆಂಗಳೂರಿನಲ್ಲಿ ಒಂದು ದಿನ ಸಂಪಾದನೆ ಇಲ್ಲದಿದ್ದರೆ ತಡೆದುಕೊಳ್ಳುವುದು ಕಷ್ಟ. ಬೇಕೆಂದಾಗ ರಜೆ ಸಿಗುವುದಿಲ್ಲ. ಕೆಲಸ ಹೋಗುವ ಭೀತಿ, ಸಾಲದ ಕಂತು ಕಟ್ಟುವ ಯೋಚನೆ ಇರುತ್ತದೆ. ಒಟ್ಟಾರೆ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಒಂದು ಕಡೆ ಆರೋಗ್ಯಹಾನಿ, ಮತ್ತೊಂದೆಡೆ ವಿತ್ತ ಹಾನಿ. ದೇವರೇ ಕಾಪಾಡಬೇಕು ಬೆಂಗಳೂರನ್ನು..

Thursday, 27 August 2009

ಬಾಲ್ಯದ ಛದ್ಮವೇಷ ಮತ್ತು ಇತರ ಪಠ್ಯೇತರ ಚಟುವಟಿಕೆಗಳು

ಕಳತ್ತೂರಿನ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ನಾನು ಒಂದರಿಂದ ಏಳನೆಯ ತರಗತಿಯ ತನಕ ಓದಿದೆ. ನನ್ನ ಬಾಲ್ಯವನ್ನು ರೂಪಿಸಿದ ಶಾಲೆಯೂ ಇದುವೇ. ಈ ಶಾಲೆಯ ಕುರಿತ ಪ್ರೀತಿಯ ನೆನಪುಗಳು ಹಗಲಿರುಳೂ ಜಗ್ಗುತ್ತಿವೆ.
ಜೂನ್ ಒಂದರಂದು ಒಂದನೆಯ ತರಗತಿಗೆ ಸೇರಿದ ಮೊದಲ ದಿನ ಅನೇಕ ಮಕ್ಕಳು ಹೊಸ ವಾತಾವರಣವಾದ್ದರಿಂದ ಜೋರಾಗಿ ಅಳುತ್ತಿದ್ದವು. ಅಪ್ಪ ಅಮ್ಮಂದಿರು ತರಗತಿಗೆ ಬಿಟ್ಟು ಹೊರಟಾಗ ಮಕ್ಕಳು ರಚ್ಚೆ ಹಿಡಿದು ತಾರಕ ಸ್ವರದಲ್ಲಿ ಪ್ರತಿಭಟನೆ ಸಲ್ಲಿಸುತ್ತಿದ್ದುವು. ಆದರೆ ಕೆಲವು ಚಿಣ್ಣರು ಪಿಳಿ ಪಿಳಿ ಕಣ್ಣುಗಳಿಂದ ಎಲ್ಲವನ್ನೂ ಕುತೂಹಲ, ಆತಂಕ ಮತ್ತು ಮಾಸ್ತರರ ನಿರೀಕ್ಷೆಯೊಂದಿಗೆ ಕಾಲ ಕಳೆಯುತ್ತಿದ್ದುವು. ಕೆಲವರ ತಲೆಗೆ ಅವರ ಹೆತ್ತವರು ಮಳೆಗೆ ನೆನೆಯದಂತೆ ಉರುಟಾದ ಪ್ಲಾಸ್ಟಿಕ್ಕಿನ ಟೋಪಿಗಳನ್ನು ಹಾಕಿದ್ದರು. ಏಳನೆಯ ಕ್ಲಾಸಿನ ಹುಡುಗರು ನಮಗಾಗ ಬಹಳ ದೊಡ್ಡ ದಾಂಡಿಗರಂತೆ ಕಾಣುತ್ತಿದ್ದರು. ಅವರೆಲ್ಲ ನಿರಾತಂಕದಿಂದ ಓಡಾಡುತ್ತಿದ್ದುದನ್ನು ಕಂಡು ನಮಗೆಲ್ಲ ಅಚ್ಚರಿಯಾಗುತ್ತಿತ್ತು. ನಾನು ಅಳುತ್ತಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ನನಗೆ ಶಾಲೆಯ ವಾತಾವರಣ ಒಗ್ಗಿ ಹೋಗಿತ್ತು. ಅಧಿಕೃತವಾಗಿ ಶಾಲೆಗೆ ಸೇರುವ ಹಿಂದಿನ ವರ್ಷ ಕೂಡ ಆಗಾಗ್ಗೆ ಶಾಲೆಗೆ ಹೋಗಿ ಒಂದನೆಯ ತರಗತಿಯಲ್ಲಿ ಆಸೀನನಾಗಿರುತ್ತಿದ್ದೆ. ಅದಕ್ಕೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅಧಿಕೃತವಾಗಿ ಶಾಲೆಗೆ ಸೇರಿದ ವರ್ಷ ಎರಡನೆಯ ತರಗತಿಗೆ ಹೋಗಿದ್ದ ವಿದ್ಯಾರ್ಥಿಗಳು ನನ್ನನ್ನು ಕಂಡು, ನೀನೂ ನಮ್ಮ ಜೊತೆ ಬರಬೇಕಿತ್ತು. ಕಳೆದ ವರ್ಷವಿಡೀ ಬಂದಿದ್ಯಲ್ಲ..ಎಂದು ಹೇಳುತ್ತಿದ್ದರು. ನಾನು ಮಾತ್ರ ಅದಕ್ಕೆಲ್ಲ ತಲೆ ಕೆಡಿಸುತ್ತಿರಲಿಲ್ಲ. ಸಂಜೀವ ಮಾಸ್ತರರು ನನಗೆ ಕ್ಲಾಸ್ ಟೀಚರ‍್ ಆಗಿದ್ದರು. ಅವರಿಗೂ ಮೊದಲು ರಾಜೇಶ್ವರಿ ಟೀಚರ‍್ ಸ್ವಲ್ಪ ದಿನ ಇದ್ದ ನೆನಪು. ಆದರೆ ಸಂಜೀವ ಮಾಸ್ತರರ ಪ್ರೀತಿ ನನ್ನ ಮಧುರ ನೆನಪಾಗಿ ಉಳಿದಿದೆ. ನನ್ನ ಸೋದರ ಮಾವ (ತಾಯಿಯ ತಮ್ಮ) ಶ್ಯಾಮ್ ಭಟ್‌ ಕೂಡ ಮಾಸ್ತರರಾಗಿದ್ದರು.
ಒಂದನೇ ತರಗತಿಯಲ್ಲಿದ್ದಾಗಲೊಮ್ಮೆ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನನಗೆ ಚಂದಾವೂರಿನ ದಾಸಯ್ಯನ ವೇಷವನ್ನು ಹಾಕಲಾಗಿತ್ತು. ನಾನು ದಾಸಯ್ಯ ಅಂತ ಪರಿಚಯ ಮಾಡಿಕೊಂಡು ಒಂದೆರಡು ಸಾಲುಗಳನ್ನು ಹಾಡಬೇಕಿತ್ತು. ಮನೆಯಲ್ಲಿ ಬಾಯಿಪಾಠ ಮಾಡಿಕೊಂಡು ಶಾಲೆಗೆ ಹೋದಾಗ ಅಲ್ಲಿ ನೂರಾರು ಮಕ್ಕಳು ಬಗೆ ಬಗೆಯ ಚಿತ್ರ ವಿಚಿತ್ರ ವೇಷಧಾರಿಗಳಾಗಿ ಸ್ಪರ್ಧೆಗೆ ರೆಡಿಯಾಗಿದ್ದರು. ಅವರನ್ನೆಲ್ಲ ಕಂಡಾಗ ನನಗೆ ದಂಗುಬಡಿದ ಅನುಭವ.
ನನ್ನ ಪರಮ ಮಿತ್ರ ವೆಂಕಟರಾಜ ಬಳಿ ಬಂದು ಮಾತನಾಡಿಸಿದಾಗ ನನಗೆ ದಿಗ್ಭ್ರಮೆಯಾಯ್ತು. ಅವನು ಶಿವನ ವೇಷ ಹಾಕಿದ್ದ ನೆನಪು. ಜಡೆ, ಕಮಂಡಲು , ರುದ್ರಾಕ್ಷಿ ಮಾಲೆ ಸಹಿತ ಮಾತನಾಡಿಸಿದಾಗ ನನಗೆ ವೇದಿಕೆಯಲ್ಲಿ ಹೇಳಬೇಕಿದ್ದ ಮಾತುಗಳೆಲ್ಲ ಕ್ಷಣಾರ್ಧದಲ್ಲಿ ಮರೆತು ಹೋಯಿತು. ರಣಾಂಗಣದಲ್ಲಿ ಕರ್ಣನಿಗೆ ಅಂತಿಮ ಕ್ಷಣದಲ್ಲಿ ಶಸ್ತ್ರಾಭ್ಯಾಸ ಮರೆತು ಹೋದಂತೆ ನನಗೂ ದಿಗಿಲಾಯಿತು. ರಾಜ, ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದೆ. ಪಾಪ, ಅವನಾದರೂ ಹೇಗೆ ಹೇಳಿಕೊಡುತ್ತಾನೆ ? ಕೇಳೊಣವೆಂದರೆ ಮಾವನಾಗಲಿ, ಮನೆಯವರಾಗಲಿ ಹತ್ತಿರ ಇರಲಿಲ್ಲ. ಸುತ್ತಮುತ್ತ ಎಲ್ಲ ಬ್ರಹ್ಮ, ವಿಷ್ಣು, ಶಿವ, ಭಗತ್ ಸಿಂಗ್, ಗಾಂಧೀಜಿ, ಅಜ್ಜ, ಅಜ್ಜಿ, ಭಿಕ್ಷುಕ, ನವಿಲು, ಕರಡಿ, ಸಿಂಹ, ಹುಲಿ ಮುಂತಾದ ವೇಷ ಧರಿಸಿದ ಮಕ್ಕಳು ಮತ್ತು ಅವರನ್ನು ಸ್ಪರ್ಧೆಗೆ ಅಣಿಗೊಳಿಸುತ್ತಿದ್ದ ಶಿಕ್ಷಕ ಶಿಕ್ಷಕಿಯರೇ. ಒಬ್ಬೊಬ್ಬರೇ ವೇದಿಕೆಗೆ ಬಂದು ನಾಲ್ಕು ಮಾತುಗಳನ್ನು ಆಡಿ ಪರದೆಯ ಹಿಂದೆ ಬರುತ್ತಿದ್ದಾಗ ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅಂತೂ ನನ್ನ ಸರದಿ ಬಂತು.
ಏನು ಮಾಡುವುದಂತ ಗೊತ್ತಾಗಲಿಲ್ಲ. ವೇಷ ಧರಿಸಿದ ತಪ್ಪಿಗೆ ವೇದಿಕೆಗೆ ಕಳಿಸಲ್ಪಟ್ಟೆ. ವೇದಿಕೆಯ ಎದುರಿನ ಜನರನ್ನು ಕಂಡಾಗ ತಬ್ಬಿಬ್ಬಾದೆ. ಅಲ್ಲೇ ಮಾವ ಸೇರಿದಂತೆ ಇತರ ಗುರುಗಳಿದ್ದರು. ಅವರಲ್ಲಿ ಕೆಲವರು ಮಾತನಾಡು..ಮಾತನಾಡು..ಎಂದು ಸೂಚಿಸದರು. ನನಗಂತೂ ಒಂದೇ ಒಂದು ವಾಕ್ಯ ನೆನಪಿಗೆ ಬರಲಿಲ್ಲ. ನಾನು ತಂಜಾವೂರಿನಿಂದ ಬಂದಿದ್ದೇನೆ..ಎಂಬ ಒಂದೇ ವಾಕ್ಯ ಹೇಗೋ ನೆನಪಾಯಿತು. ಅಷ್ಟನ್ನು ಹೇಳಿಕೊಂಡೆ. ನನ್ನ ಗಡಿಬಿಡಿಯನ್ನು ಅರಿತ ತೀರ್ಪುಗಾರರು ಆಯಿತಪ್ಪಾ..ನೀನಿನ್ನು ಹೋಗಬಹುದು ಎಂದು ಕಣ್ಣಲ್ಲೇ ತಿಳಿಸಿದರು. ನಾನು ಹಾಗೆಯೇ ಪರದೆಯ ಹಿಂದೆ ಸರಿದೆ. ಅದುವೇ ಕೊನೆ. ಮತ್ತೆ ಎಂದಿಗೂ ಛದ್ಮ ವೇಷ ಹಾಕಲಿಲ್ಲ. ಮುಂದಿನ ತರಗತಿಗಳಲ್ಲಿ ಕಂಠಪಾಠ, ಪ್ರಬಂಧ, ಚಿತ್ರ, ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆರನೆಯ ತರಗತಿಯಲ್ಲಿ ವಿಜ್ಞಾನೋತ್ಸವದಲ್ಲಿ ಭಾಗವಹಿಸಿದೆ. ಜಿಲ್ಲಾ ಮಟ್ಟದ ತನಕ ಸ್ಪರ್ಧಿಸಿ ಎರಡನೆಯ ಬಹುಮಾನ ಗಳಿಸಿದೆ. ಏಳನೆಯ ತರಗತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದಲ್ಲಿಯೂ ಶಾಲೆಯನ್ನು ಪ್ರತಿನಿಧಿಸಿದ್ದೆ. ಕೋಯಿಕ್ಕೋಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನ ಗಳಿಸದಿದ್ದರೂ, ಅವಿಸ್ಮರಣೀಯ ಅನುಭವಗಳಂದಿಗೆ ಹಿಂತಿರುಗಿದ್ದೆ. ಅದಕ್ಕೆಲ್ಲ ಕಾರಣ ಆತ್ಮೀಯ ರಾಜೀವ ಮಾಸ್ತರ‍್. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಲು ಅವರಯ ನಡೆಸುತ್ತಿದ್ದ ಪ್ರಯತ್ನ ಹಲವು. ಪ್ರತಿ ಶನಿವಾರ (ರಜೆಯ ದಿನ) ಆಸಕ್ತ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಅರ್ಧ ದಿನ ಪೂರ್ತಿ ವಿಜ್ಞಾನದ ವಿಷಯಗಳನ್ನು ಕಲಿಸುತ್ತಿದ್ದರು. ದೇಶ ಮತ್ತು ಜಗತ್ತಿನ ವಿಜ್ಞಾನಿಗಳು, ಅವರು ಕಂಡುಹಿಡಿದ ಸಂಶೋಧನೆಗಳನ್ನು ಪರಿಚಯಿಸುತ್ತಿದ್ದರು. ಸಣ್ಣ ಪುಟ್ಟ ಪ್ರಯೋಗಗಳು, ರಸ ಪ್ರಶ್ನೆಯನ್ನು ನಡೆಸಿಕೊಡುತ್ತಿದ್ದರು. ವರ್ಷದ ಕೊನೆಯಲ್ಲಿ ವಿಜ್ಞಾನದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಬಹುಮಾನವನ್ನೂ ಕೊಡುತ್ತಿದ್ದರು. ಅವರ ಸಹೃದಯತೆಯನ್ನು ಎಂದಿಗೂ ಮರೆಯಲಾರೆ.

ಕರಾವಳಿ ತೀರದ ಮಳೆ ಮತ್ತು ಶಾಲೆಯ ದಿನಗಳು

ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು ಮಳೆ ಸುರಿಯುತ್ತಿತ್ತು. ದಿನಾ ಸಮುದ್ರದ ಮೊರೆತ ಕಿವಿಯನ್ನು ತುಂಬುತ್ತದೆ. ಕುಂಬಳೆಯ ಸರಕಾರಿ ಶಾಲೆಯಂತೂ ಸಮುದ್ರ ಕಿನಾರೆಗೆ ತೀರಾ ಸನಿಹದಲ್ಲಿದೆ. ಆ ದಿನಗಳಲ್ಲಂತೂ ಕೆಲವೊಮ್ಮೆ ತರಗತಿಯಲ್ಲಿ ಕುಳಿತುಕೊಳ್ಳಲು ಬೇಸರವಾಗುತ್ತಿತ್ತು. ಹೊರಗೆ ಮಳೆಯ ಅಬ್ಬರವನ್ನೇ ಸುಮ್ಮನೆ ನೋಡುತ್ತಿದ್ದೆ. ಯಾಕಾದರೂ ಮಳೆಗಾಲದಲ್ಲಿ ಶಾಲೆ ಇದೆಯೋ ಎಂದು ಅನ್ನಿಸುತ್ತಿತ್ತು. ಜೂನಿನಲ್ಲಿ ತರಗತಿಗಳು ಬದಲಾಗುತ್ತವೆ. ಎಂಟರಲ್ಲಿದ್ದವ ಒಂಭತ್ತಕ್ಕೆ, ಒಂಭತ್ತರಲ್ಲಿದ್ದವ ಹತ್ತಕ್ಕೆ ಬರುವ ಸಮಯ. (ಫೇಲಾಗುವವರ ವಿಷಯ ಬಿಡಿ, ಅವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ)
ಹೀಗಾಗಿ ಸಹಪಾಠಿಗಳೆಲ್ಲ ಪರಿಚಯಸ್ತರಾದರೂ, ಹೊಸ ತರಗತಿ ಇನ್ನೂ ಒಗ್ಗಿರುವುದಿಲ್ಲ. ಅಂತಹ ವೇಳೆಯಲ್ಲಿ ಹೊರಗೆ ಮೋಡ ಕವಿದ ವಾತಾವರಣ ಇದ್ದರೆ ಮನಸ್ಸಿಗೂ ಮೋಡ ಕವಿದಂತಾಗುತ್ತಿತ್ತು. ಸಂಜೆ ಬಸ್ಸಿನಲ್ಲಿ ವಿಪರೀತ ರಶ್ಶು ಬೇರೆ. ಹೇಗಪ್ಪಾ ಮನೆಗೆ ಮಳೆಯ ನಡುವೆ ಹೋಗೋದು ಎಂಬ ಚಿಂತೆ ಕಾಡುತ್ತಿತ್ತು. ಮಧ್ಯಾಹ್ನ ಊಟದ ಬಿಡುವಿನಲ್ಲಿ ಮಳೆ ನಿಂತಿದ್ದರೆ , ಅಥವಾ ಚಿರಿಪಿರಿ ಮಳೆಯಿದ್ದರೆ ಸೀದಾ ಮೈದಾನದ ಬದಿಯಲ್ಲಿದ್ದ ಗೂಡಂಗಡಿಗಳಿಗೆ ಸ್ನೇಹಿತರೊಡನೆ ಹೋಗುತ್ತಿದ್ದೆ. ಅಲ್ಲಿ ಕಟ್ಲೀಸು ಅಥವಾ ಐಸ್ ಕ್ಯಾಂಡಿ ತೆಗೆದು ಚಪ್ಪರಿಸುತ್ತಿದ್ದೆವು.
ನಮ್ಮ ಶಾಲೆಯಲ್ಲಿ ಒಂದು ಬೋರ‍್ ವೆಲ್ ಇತ್ತು. ಮಧ್ಯಾಹ್ನ ಬುತ್ತಿ ಊಟ ಆದ ನಂತರ ಕೈ ತೊಳೆಯಲು ಬೋರ‍್ ವೆಲ್ ನ ಹಿಡಿ ಅಲ್ಲಾಡಿಸಿ ನೀರು ಸುರಿಸಿಕೊಳ್ಳುತ್ತಿದ್ದೆವು. ಆಗ ಅಲ್ಲಿ ಭಯಂಕರ ಗಡಿಬಿಡಿ, ರಶ್ ಆಗುತ್ತಿತ್ತು. ಮಕ್ಕಳೆಲ್ಲ ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದರು. ಮತ್ತೊಂದು ಕಡೆ ಇತರರು ಬೋರ‍್ ವೆಲ್ ನ ಹಿಡಿಯನ್ನು ಜಗ್ಗುತ್ತಿದ್ದರು. ಒಂದು ಸಲ ಏನಾಯಿತೆಂದರೆ ನೂಕು ನುಗ್ಗಲಿನಲ್ಲಿ ಬೋರ‍್ ವೆಲ್ ನ ಹಿಡಿಯ ಅಡಿಗೆ ನನ್ನ ಬೆರಳಿನ ತುದಿ ಸಿಕ್ಕಿತು. ಅತ್ತ ಕಡೆ ಜೋರಾಗಿ ಹಿಡಿಯನ್ನು ಜಗ್ಗುತ್ತಿದ್ದರು. ಇತ್ತ ನನ್ನ ಬೆರಳು ಅರಚ್ಚಿತು. ಅಯ್ಯೋ...ಅಂತ ಬೊಬ್ಬಿಟ್ಟೆ. ತಕ್ಷಣ ಹಿಡಿಯನ್ನು ಸಡಿಲಿಸಿದರು. ಮತ್ತೆ ದೊಡ್ಡ ಗುಂಪು ನೆರೆಯಿತು. ಶಾಲೆಯ ಕಚೇರಿಗೆ ನನ್ನನ್ನು ಹೊತ್ತು ತಂದರು. ನನಗೆ ಅಂತಹ ಪೆಟ್ಟೇನೂ ಆಗಿರಲಿಲ್ಲ. ಆದರೂ ಶಿಕ್ಷಕರು ಸಹಿತ ಎಲ್ಲರ ಅನುಕಂಪ ನನಗೆ ಸಿಕ್ಕಿತ್ತು. ಬಳಿಕ ವೈದ್ಯರ ಹತ್ತಿರ ಹೋಗಿ ತೋರಿಸಿದೆ. ಮುಂಜಾಗರೂಕತಾ ಕ್ರಮವಾಗಿ ಟಿಟಾನಸ್ ಇಂಜಕ್ಷನ್ ಕೊಟ್ಟರು. ಗಾಯ ಕ್ರಮೇಣ ವಾಸಿಯಾಯಿತು.
ವಿಷಯ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಮತ್ತೆ ಮಳೆಗಾಲಕ್ಕೆ ಹೋಗೋಣ. ಪ್ರತಿ ವರ್ಷ ಮಳೆ ಬಂದೊಡನೆ ಅಜ್ಜನ ಮನೆಯ ಜಾಲಿನ ಎದುರು ಸಣ್ಣ ಕೈ ತೋಟದಲ್ಲಿ ಅಮ್ಮ ನಾನಾ ಬಗೆಯ ಹೂ ಗಿಡಗಳನ್ನು ನೆಡುತ್ತಿದ್ದಳು. ಊರಿನ ಹೆಣ್ಣು ಮಕ್ಕಳೆಲ್ಲ ಮನೆಗೆ ಬರೋರು. ಗುಲಾಬಿ, ಮಲ್ಲಿಗೆ, ಕ್ರಾಟನ್, ಲಿಲ್ಲಿ ಅಂತ ಗಿಡಗಳನ್ನು, ಅದರ ಗೆಲ್ಲುಗಳನ್ನು ಕೊಂಡೊಯ್ಯುತ್ತಿದ್ದರು. ನಾನೂ ಅಕ್ಕನೂ ಒಂದು ಕಡೆ ಎರಡು ವಿಭಾಗವನ್ನಾಗಿ ಹಂಚಿಕೊಂಡು ಸ್ಪರ್ಧಿಗಳಂತೆ ಕೈ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದೆವು. ಯಾರು ಹೆಚ್ಚು ಗಿಡಗಳನ್ನು ನೆಡುತ್ತಾರೆ ? ಯಾರ ಕೈ ತೋಟ ಚೆನ್ನಾಗಿದೆ ? ಎಂದು ಪರಸ್ಪರ ಅವಲೋಕನ, ಜಗಳ ಕೂಡ ನಡೆಯುತ್ತಿತ್ತು. ಅಕ್ಕ ತನ್ನ ತೋಟದ ಹೆಚ್ಚುಗಾರಿಕೆಯನ್ನು ಬಣ್ಣಿಸಿದರೆ, ನಾನು ನನ್ನ ತೋಟವೇ ಅದ್ಭುತ ಅಂತ ಪಟ್ಟು ಹಿಡಿದು ವಾದಿಸುತ್ತಿದ್ದೆ. ಈಗ ಆ ಜಾಗದಲ್ಲಿ ಎಷ್ಟು ಬಲ್ಲೆ (ಕಳೆ) ಬೆಳೆದಿದೆಯೋ..
ಮಳೆ ಬಂದಾಗ ಮನೆಯ ಪಕ್ಕದ ಸುರಂಗದ ಒಳಗಿನಿಂದ ನೀರು ಉಕ್ಕಿ ಹರಿಯುತ್ತಿತ್ತು. ಅದು ಬಂಡೆಗಳ ನಡುವಿನಿಂದ ಪುಟ್ಟ ಜಲಪಾತವಾಗಿ ಹರಿದು ಊರಿನ ಹಳ್ಳವನ್ನು ಸೇರುತ್ತಿದ್ದ ದೃಶ್ಯ ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಗಂಟಗಟ್ಟಲೆ ಅದನ್ನೇ ನೋಡುತ್ತಿದ್ದೆ. ಕಲ್ಲೆಸೆಯುತ್ತಿದ್ದೆ. ಮಳೆ ಬಂದಾಗ ಅಂತಹ ಚಳಿ ಆಗುತ್ತಿರಲಿಲ್ಲ. ಒಂದು ಥರಾ ಬೆಚ್ಚಗಿನ ಅನುಭವವೇ ಆಗುತ್ತಿತ್ತು. ಚೌತಿಯ ವೇಳೆ ಬೆಳಗ್ಗೆ ಅಜ್ಜ ಪೂಜೆ ಮುಗಿಸಿದ ನಂತ ಪಚ್ಚಪ್ಪ ಕೊಡುತ್ತಿದ್ದ. ಸ್ವಾದಿಷ್ಟವಾದ ಆ ಪ್ರಸಾದವನ್ನು ತಿನ್ನುತ್ತ, ಮಳೆಗೆ ಒದ್ದೆಯಾದ ಅಡಿಕೆ ತೋಟವನ್ನು ಮಾಳಿಗೆ ಮನೆಯ ಕಿಟಿಕಿಯಿಂದ ನೋಡುತ್ತ ಲೋಕವನ್ನೇ ಮರೆಯುತ್ತಿದ್ದೆ.
ಒಂದು ಸಲ ಸಾಯಂಕಾಲ ಕಪ್ಪನೆಯ ಕಾರ್ಮೋಡ ದಟ್ಟೈಸಿ ಬಂದು ಮಳೆ ಜೋರಾಗಿ ಸುರಿಯುತ್ತಿತ್ತು. ನಾನು ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನನಗೋ ಬೇಗನೆ ಮನೆ ಸೇರುವ ಆತುರ. ಆವತ್ತು ಕೊಡೆಯನ್ನು ತರಲು ಮರೆತು ಬಿಟ್ಟಿದ್ದೆ. ಆದರೆ ಮಳೆ ಬರುತ್ತೆ ಅಂತ ಶಾಲೆಯಲ್ಲಿಯೇ ಕಾಯಲು ನನ್ನಿಂದಾಗಲಿಲ್ಲ. ಹಾಗೆಯೇ ಮಳೆಯಲ್ಲಿ ನೆನೆಯುತ್ತಲೇ ಮನೆಯ ದಾರಿಯಲ್ಲಿ ಓಡುತ್ತಾ ಹೋಗುತ್ತಿದ್ದೆ. ಹೊಲದ ಬದಿಯ ಕಿರಿದಾದ ದಾರಿಯಲ್ಲಿ ಓಡುತ್ತಿದ್ದಾಗ, ಗಣಪತಿ ಭಟ್ಟರು ನನ್ನನ್ನೇ ನೋಡಿದರು. ಅವರು ಹಿರಿಯರು. ನನ್ನ ಅಜ್ಜನೂ ಅವರೂ ದೋಸ್ತಿಗಳು.ಹೀಗಾಗಿ ಏನೆನ್ನುತ್ತಾರೋ, ಅಂತ ಒಳಗೊಳಗೆ ಭಯವಾಗುತ್ತಿತ್ತು. ಆದ್ದರಿಂದ ಸ್ಪೀಡು ಸ್ವಲ್ಪ ಕಡಿಮೆ ಮಾಡಿ ನಡೆದೆ. ನನ್ನನ್ನು ಕಾಣುತ್ತಲೇ " ಅಯ್ಯೋ..ಈ ಮಳೆಗೆ ಕೊಡೆಯೂ ಇಲ್ಲದೆ ಹೋಗುತ್ತಿದ್ದೀಯಾ..ಎಂಥ ಮಕ್ಕಳಾಟಿಕೆ ನಿನ್ನದು, ಬುದ್ಧಿಯಿಲ್ಲ.. " ಎಂದು ಬೈಯ್ಯಲಿಲ್ಲ.ಬದಲಿಗೆ ಅದನ್ನೇಸೂಚಿಸುವ ಧಾಟಿಯಲ್ಲಿ ಮುಖದಲ್ಲಿ ಹುಬ್ಬು ಗಂಟಿಕ್ಕಿ ನೋಡಿದರು. ನಾನು ಕಂಡೂ ಕಾಣದಂತೆ ಮತ್ತೆ ಓಡಿ ಮನೆ ಸೇರಿದೆ. ಅವರ ಕಣ್ಣಿನ ನೋಟ ಈವತ್ತಿಗೂ ಮರೆಯಲಾಗುತ್ತಿಲ್ಲ.

Wednesday, 26 August 2009

ಅಜ್ಜನ ತೋಟದ ಪೇರಳೆಕಾಯಿಯ ಮರದ ನೆನಪು

ಸೀಬೆಕಾಯಿಯನ್ನು ನಮ್ಮೂರಿನಲ್ಲಿ ಪೇರಳೆ ಎಂದೇ ಕರೆಯುತ್ತಿದ್ದೆವು.
ನನಗೆ ಹಲವಾರು ವರ್ಷಗಳ ಕಾಲ ಸೀಬೆ ಕಾಯಿ ಅಂತ ಯಾವುದಕ್ಕೆ ಹೇಳುತ್ತಾರೆ ಎಂದೇ ಗೊತ್ತಿರಲಿಲ್ಲ. ನನಗಂತೂ ಬಾಲ್ಯದಲ್ಲಿ ಸೀಬೆ ಕಾಯಿ, ಮಾವಿನ ಕಾಯಿ, ನೆಲ್ಲಿಕಾಯಿ ಮತ್ತು ತೆಂಗಿನಕಾಯಿಯ ಚೂರು ತಿನ್ನುವುದೆಂದರೆ ಬಲು ಪ್ರಿಯವಾಗಿತ್ತು. ಅಜ್ಜನ ಮನೆಯ ತೋಟದಲ್ಲೊಂದು ಪೇರಳೆಯ ಮರವಿತ್ತು. ಅದರ ಕೆಳಗೆ ದೊಡ್ಡ ಹೊಂಡ ಹಾಗೂ ಅದಕ್ಕೆ ಹೊಂದಿಕೊಂಡಂತೆ ಕೆರೆ ಇತ್ತು. ಪೇರಳೆ ಕಾಯಿಯನ್ನು ಹಣ್ಣಾಗಲು ಬಿಡದೆ ಎಳೆಯ ಕಾಯಿಯನ್ನೇ ಕಿತ್ತು ತಿನ್ನುತ್ತಿದ್ದೆ. ಆ ಮರದಲ್ಲಿ ಪೇರಳೆಯ ಫಲವೇಕೋ ಹೆಚ್ಚಿಗೆ ಆಗುತ್ತಿರಲಿಲ್ಲ. ಆದರೂ ಇಡೀ ಮರವನ್ನು ಹುಡುಕಿ ಹುಡುಕಿ ಕೊಯ್ಯುತ್ತಿದ್ದೆ. ಏನೂ ಸಿಗದಿದ್ದರೆ ಎಳೆಯ ಚಿಗುರನ್ನೇ ತಿಂದು ತೃಪ್ತಿಪಡುತ್ತಿದ್ದೆ. ಅದರ ಒಗರು ನನಗೆ ಅಹ್ಲಾದ ನೀಡುತ್ತಿತ್ತು. ಆಗ ಎಷ್ಟು ಅಪಾಯ ಎದುರಿಸುತ್ತಿದ್ದೆ ಎಂದು ನೆನಸಿ ಈಗ ಅಚ್ಚರಿಯಾಗುತ್ತಿದೆ. ವಾರೆಕೋರೆಯ ರೆಂಬೆಗಳ ಮೇಲಿಂದ ಕಾಲಿಡುವಾಗ ಅಕಸ್ಮಾತ್ ಜಾರಿದರೆ ಸೀದಾ ದೊಡ್ಡ ಹೊಂಡಕ್ಕೆ ಬೀಳುವ ಸಾಧ್ಯತೆ ಇತ್ತು. ಅದರ ಪಕ್ಕವೇ ಕೆರೆ ಬೇರೆ. ಆದರೆ ಸೀಬೆಕಾಯಿಯಯ ಮೇಲಿನ ಪ್ರೀತಿಯಿಂದ ಉಳಿದೆಲ್ಲ ಅಪಾಯವನ್ನು ಲೆಕ್ಕಿಸುತ್ತಿರಲೇ ಇಲ್ಲ.
ಆ ಮರ ಹೆಚ್ಚಿಗೆ ಫಲ ಕೊಡುತ್ತಿರಲಿಲ್ಲ ಹಾಗೂ ಅಕಸ್ಮಾತ್‌ ಎತ್ತರದಲ್ಲಿ ನನ್ನ ಕೈಗೂ ಸಿಕ್ಕದೆ ಹಣ್ಣಿದ್ದರೂ, ಅದು ಕೆರೆಗೋ, ಹೊಂಡಕ್ಕೋ ಬೀಳುತ್ತಿತ್ತು.ಕೆಲವೊಮ್ಮೆ ಮಂಗನ ಜಾತಿಗೆ ಸೇರಿದ ಮುಜುವಿಗೋ ಆಹಾರವಾಗುತ್ತಿತ್ತು. ಹೀಗಾಗಿ ಎಲ್ಲರಿಗೂ ಆ ಮರ ನಗಣ್ಯವಾಗಿತ್ತು. ಆದರೆ ನನಗಂತೂ ಆ ಮರ ಬೇರೆಯೇ ಪ್ರಪಂಚವನ್ನು ಕಟ್ಟಿಕೊಡುತ್ತಿತ್ತು. ಆ ಮರದ ಕೊಂಬೆಯಲ್ಲಿ ನಿಂತುಕೊಂಡು ಕೆರೆಗೆ ಕಲ್ಲೆಸೆಯುತ್ತಿದ್ದೆ. ಆಗ ಕೆರೆಯಿಂದೇಳುವ ಚುಳುಕ್ ಬುಳುಕ್ ಸದ್ದು ಖುಷಿ ಕೊಡುತ್ತಿತ್ತು. ಮನೆಯಲ್ಲಿ ಯಾವುದಾದರೂ ತುಂಟಾಟಕ್ಕೆ ಹಿರಿಯರು ಬೈದರೆ, ಸೀದಾ ತೋಟಕ್ಕಿಳಿದು ಸೀಬೇಕಾಯಿಯ ಮರವನ್ನೇರುತ್ತಿದ್ದೆ. ಹೀಗಾಗಿ ನನಗದು ಸಿಕ್ಕಾಪಟ್ಟೆ ಆಪ್ತವಾಗಿತ್ತು. ಬೇಸಗೆಯ ರಜೆಯಲ್ಲಿ ಪೇರಳೆ ಕಾಯಿಯ ಹೋಳು, ಹಲಸಿನ ಹಪ್ಪಳ, ತೆಂಗಿನ ಕಾಯಿಯ ಚೂರುಗಳು ಮತ್ತು ಚಂದಮಾಮ ಕತೆ ಪುಸ್ತಕವನ್ನು ಕಟ್ಟಿಕೊಂಡು ನನ್ನ ಸವಾರಿ ಹೊರಡುತ್ತಿತ್ತು. ಕೆರೆಯ ಕಟ್ಟೆಯಲ್ಲಿಯೋ, ಪೇರಳೆ ಮರದ ಮೇಲೆಯೋ, ಗುಡ್ಡದ ಬಂಡೆಯನ್ನೇರಿಯೋ ಚಂದಮಾಮದ ಪುಟಗಳನ್ನು ತಿರುವುತ್ತಾ, ಹಪ್ಪಳ, ತೆಂಗಿನ ಕಾಯಿಯ ಚೂರು, ಪೇರಳೆಯ ಹೋಳನ್ನು ಮೆಲ್ಲುತ್ತಾ ನನ್ನದೇ ಭಾವಲೋಕದಲ್ಲಿ ಮುಳುಗುತ್ತಿದ್ದೆ. ವಿಕ್ರಮಾದಿತ್ಯನ ಕಥೆಯಲ್ಲಿ ಕೊನೆಗೆ ಅದೊಂದು ಸಾಲು ಬರುತ್ತದೆಯಲ್ವಾ- ನನ್ನ ಪ್ರಶ್ನೆಗೆ ಉತ್ತರಿಸದಿದ್ದರೆ ನಿನ್ನ ತಲೆ ನೂರು ಹೋಳಾಗುತ್ತದೆ..ಅಂತ ! ಆಗ ಉಳಿದ ಪೇರಳೆ ಹೋಳಿನ ನೆನಪಾಗಿ ಬಾಯಿಗೆ ಎಸೆದು ಜಗಿಯುತ್ತಿದ್ದೆ. ನಿಸರ್ಗದ ವೈಭವವನ್ನು ಕಂಡಾಗ ಗದಾಧರ (ರಾಮಕೃಷ್ಣ ಪರಮಹಂಸರು) ಭಾವ ಸಮಾಧಿ ಸ್ಥಿತಿಗೆ ಏರುತ್ತಿದ್ದರಂತೆ ಅಲ್ಲವಾ ? ಹಾಗೆಯೇ ನನಗೇನಾದರೂ ಆಗುತ್ತಾ ಅಂತ ಕಣ್ಮುಚ್ಚುತ್ತಿದ್ದೆ. ಆದರೆ ನನಗೆ ಅಂತಹ ಅನುಭವ ಏನೂ ಆಗುತ್ತಿರಲಿಲ್ಲ. ತಾತ್ಕಾಲಿಕವಾಗಿ ಕಣ್ಣಿಗೆ ಕತ್ತಲಾಗುತ್ತಿತ್ತು ಅಷ್ಟೇ. ಆದರೂ ಆಗಿಂದಾಗ್ಗೆ ಆಗುತ್ತಾ ಅಂತ ಪರೀಕ್ಷಿಸುತ್ತಿದ್ದೆ. ಆ ಮಕ್ಕಳಾಟ ನೆನೆದು ಈಗ ನಗು ಬರುತ್ತೆ.
ಆ ಮರ ಈಗಲೂ ಬಹುಶಃ ಇರಬಹುದು. ಬಾಲ್ಯದಲ್ಲಿ ಹತ್ತಿ ಕುಣಿದಿದ್ದ ಆ ಸೀಬೆಕಾಯಿಯ ಮರವನ್ನು ನೋಡಬೇಕೆಂದು ಆಸೆಯಾಗುತ್ತಿದೆ. ಆದರೆ ಹಲವಾರು ವರ್ಷಗಳ ಹಿಂದೆಯೇ ಆ ತೋಟವನ್ನು ಅಜ್ಜ ಬೇರೆಯವರಿಗೆ ಮಾರಿದ್ದರು. ಮುಂದಿನ ಸಲ ಊರಿಗೆ ಹೋದಾಗ ಕನಿಷ್ಠ ಆ ಪೇರಳೆ ಮರದ ಫೋಟೊ ತೆಗೆದುಕೊಂಡು ಬರಲು ನಿರ್ಧರಿಸಿದ್ದೇನೆ. ಅದನ್ನು ನೋಡುತ್ತಾ ಬೇಕಾದಾಗ ಬಾಲ್ಯದ ದಿನಗಳಿಗೆ ಸೀದಾ ಜಾರಿಕೊಳ್ಳಬಹುದು ಅಲ್ಲವಾ.

Tuesday, 25 August 2009

ಯಕ್ಷಗಾನದ ಟೆಂಟ್, ಸೋಜಿ ಪಾಯಸ ಮತ್ತು ಬಾಲ್ಯ

ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೆಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು ಹುಚ್ಚಷ್ಟೆ ! ಅದರಂತೆಯೆ ನಾವೆಲ್ಲ-ನಾನು, ತಿಮ್ಮು, ಮಾನು, ಓಬು, ಎಂಕ್ಟು, ವಾಸು, ದಾನಿ, ರಾಜಿ-ಆ ದಿನ ರಾಮ ರಾವಣರ ಕಾಳಗ ಆಡಬೇಕೆಂದು ಮಸಲತ್ತು ಮಾಡಿದೆವು. ಹುಡುಗರ ಲೋಕದಲ್ಲಿ ಯೋಚನೆ ಮಾಡಿದ್ದೆಲ್ಲ ಆಗಿಯೇ ಆಗುತ್ತದೆ. ಕಾಫಿ ಉಪ್ಪಿಟ್ಟುಗಳನ್ನು ಬೇಗ ಬೇಗ ಹೊಟ್ಟೆಗೆ ಸುರಿದುಕೊಂಡು, ಮನೆಯ ಹೊರ ಅಂಗಳಕ್ಕೆ ಹೊರಟೆವು. ಅಮ್ಮ, ಚಿಕ್ಕಮ್ಮ, ಅಕ್ಕಯ್ಯ ಇವರೆಲ್ಲ, ರಾತ್ರಿ ನಿದ್ದೆಗೆಟ್ಟಿದ್ದೀರಿ. ಮಲಗಿಕೊಳ್ಳಿ ಎಂದು ಬಯ್ದರು. ದೊಡ್ಡವರು ಹುಡುಗರನ್ನು ತಮ್ಮಂತೆಯೆ ಎಂದು ಭಾವಿಸುವುದು ಶುದ್ಧ ತಪ್ಪು. ಅವರಿಗೆ ಆಯಾಸವಾಗಿದ್ದರೆ ನಮಗೂ ಆಯಾಸವೇ ? ನಮ್ಮ ರಾಮರಾವಣರ ಯುದ್ಧದ ಮುಂದೆ ಅವರ ನಿದ್ದೆಯೇ ? ಅವರ ಮಾತನ್ನು ಕಸದ ಮೂಲೆಗೆ ಒತ್ತಿ, ಹೊರ ಅಂಗಳಕ್ಕೆ ಓಡಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆ ಹಾಕುತ್ತ ನುಗ್ಗಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆ ಹಾಕುತ್ತ ನುಗ್ಗಿದೆವು. ರಾಜಿ ಹೊಸಲನ್ನು ಎಡವಿ ಬಿದ್ದವಳು, ಮೆಲ್ಲನೆ ಎದ್ದು, ಸುತ್ತಲೂ ನೋಡಿ, ಯಾರೂ ನೋಡದೆ ಇದ್ದುದರಿಂದ ಪದ್ಧತಿಯಂತೆ ಬಿಕ್ಕಿ ಬಿಕ್ಕಿ ಅಳುವುದನ್ನು ತಡೆದು ಗುಂಪನ್ನು ಸೇರಿಕೊಂಡಳು.
ಕುವೆಂಪು ಅವರ " ರಾಮ ರಾವಣರ ಯುದ್ಧ " ಎಂಬ ಮನೋಜ್ಞ ಲಘು ಪ್ರಬಂಧದ ಕೆಲವು ಸಾಲುಗಳಿವು. ಗೋರೂರು ರಾಮಸ್ವಾಮಿ ಐಯ್ಯಂಗಾರ‍್ ಸಂಪಾದಿಸಿದ ಹೊಸಗನ್ನಡ ಪ್ರಬಂಧ ಸಂಕಲನದಲ್ಲಿ ಈ ಪ್ರಬಂಧವನ್ನು ಪ್ರಕಟಿಸಲಾಗಿದೆ. ಈ ಸಾಲುಗಳನ್ನು ಓದುತ್ತಿದ್ದಂತೆ ನನಗೆ ಬಾಲ್ಯದ ದಿನಗಳು ನೆನಪಾಯಿತು.
ಕಳತ್ತೂರು ಎಂದರೆ ಕಿದೂರಿಗೆ ಸಮೀಪದ ಗ್ರಾಮ. ಅಲ್ಲಿ ನಾನು ಓದಿದ ಪ್ರಾಥಮಿಕ ಶಾಲೆ ಮತ್ತು ಅದರ ಆಟದ ಮೈದಾನ ಇದೆ. ಪ್ರತಿ ವರ್ಷ ಅಲ್ಲಿ ಯಕ್ಷಗಾನ ನಡೆಯುತ್ತಿತ್ತು. ಯಕ್ಷಗಾನದ ದಿನ ಹಗಲು ಜೀಪಿನಲ್ಲಿ ಸಂಬಂಧಪಟ್ಟವರು ಕರ ಪತ್ರಗಳನ್ನು ಬಿಸಾಡುತ್ತ , ಮೈಕ್‌ ನಲ್ಲಿ ಯಕ್ಷಗಾನದ ಬಗ್ಗೆ ಘೋಷಣೆ ಹೊರಡಿಸುತ್ತಿದ್ದರು.
ಇಂದು ರಾತ್ರಿ ಕಳತ್ತೂರು ಶಾಲೆಯ ಮೈದಾನದಲ್ಲಿ, ಪೆರ್ಡೂರು ಮೇಳದ ವತಿಯಿಂದ ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಸಾಮ್ರಾಟ್‌ ನಹುಷೇಂದ್ರ ಎಂಬ ಪೌರಾಣಿಕ ಕಥಾ ಪ್ರಸಂಗವನ್ನು ನೋಡಲು ಮರೆಯದಿರಿ..ಅಂತ ಮೈಕ್‌ ನಲ್ಲಿ ಅವರು ಕೂಗುತ್ತಿದ್ದರೆ, ತರಗತಿಯಲ್ಲಿ ಕೂತಿರುತ್ತಿದ್ದ ನಮಗೆಲ್ಲ ಕಿವಿ ನೆಟ್ಟಗಾಗುತ್ತಿತ್ತು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಜೀಪು ಬಂದರೆ, ಚಿಣ್ಣರೆಲ್ಲ ಅದರ ಹಿಂದೆಯೇ ಓಡುತ್ತಿದ್ದರು. ಅವರು ಎಸೆಯುತ್ತಿದ್ದ ಕರಪತ್ರಗಳನ್ನು ಹೆಕ್ಕಿ ಸಂಭ್ರಮಿಸುತ್ತಿದ್ದರು. ನಾನೂ ಸಾಕಷ್ಟು ಸಲ ಜೀಪಿನ ಹಿಂದೆ ಓಡಿದ್ದೆ. ಆದರೆ ಕರಪತ್ರ ಸಿಕ್ಕಿರಲಿಲ್ಲ. ಆದರೂ ನನಗೆ ಅಂತಹ ಬೇಸರವಾಗುತ್ತಿರಲಿಲ್ಲ. ಮನೆಯಲ್ಲಿ ಮಾವ ಎಲ್ಲಿಂದಲೋ ಕರಪತ್ರ ತಂದು ಇಡುತ್ತಿದ್ದರು. ಅದನ್ನು ಒಂದಕ್ಷರ ಬಿಡದೆ ಓದುತ್ತಿದ್ದೆ.
ಸಂಜೆ ಕಳೆದು ಕತ್ತಲಾವರಿಸುತ್ತಿದ್ದಂತೆ ಮೈದಾನದಲ್ಲಿ ಮೇಳದ ಭಾರಿ ಟೆಂಟನ್ನು, ಅವುಗಳ ಪರದೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಟ್ಯೂಬ್ ಲೈಟ್‌ ಗಳ ಬೆಳಕು ಆಕರ್ಷಿಸುತ್ತಿತ್ತು. ಟೆಂಟ್ ಪಕ್ಕದಲ್ಲಿ ಸೋಜಿ ಪಾಯಸವನ್ನು ಬೀದಿ ವ್ಯಾಪಾರಿಗಳು ಮಾರುತ್ತಿದ್ದರು. ಆದರೆ ಯಾಕೋ ನನಗೆ ಅದು ಇಷ್ಟವಾಗುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಆಸೆಯಾದರೂ ಯಾರೂ ಕೊಡಿಸುತ್ತಿರಲಿಲ್ಲ. ಮನೆಯವರೂ ಸೇವಿಸುತ್ತಿರಲಿಲ್ಲ. ಏನಿದ್ದರೂಮನೆಯಲ್ಲಿ ಮಾಡುವ ಪಾಯಸ ಮಾತ್ರ ಕುಡಿಯುತ್ತಿದ್ದೆವು. ಯಕ್ಷಗಾನಕ್ಕೆ ಅಜ್ಜಿ, ಅತ್ತೆ, ಅಕ್ಕ, ಮಾವಂದಿರ ಜತೆ ಹೋಗುತ್ತಿದ್ದೆ. ಅಲ್ಲಿ ನನ್ನ ಗೆಳೆಯರೂ ಸಿಗುತ್ತಿದ್ದರು. ಎಲ್ಲ ಒಟ್ಟಿಗೆ ಕೂತು ಯಕ್ಷಗಾನವನ್ನು ಆನಂದಿಸುತ್ತಿದ್ದೆವು. ಚೆಂಡೆಯ ಅಬ್ಬರದಲ್ಲೂ ನಿದ್ದೆಯ ಜೊಂಪು ಆವರಿಸುತ್ತಿತ್ತು. ತಡರಾತ್ರಿಯಾದ ಮೇಲಂತೂ ಎಲ್ಲವೂ ಮಾಯಾ ಲೋಕದಂತೆ ಕಾಣಿಸುತ್ತಿತ್ತು. ಬಣ್ಣದ ವೇಷಗಳು ಕುಣಿಯುವಾಗ ಭಯವಾಗುತ್ತಿದ್ದರೂ ಹೇಳಿಕೊಳ್ಳುತ್ತಿರಲಿಲ್ಲ. ಬೆಳಗಿನ ಜಾವ ಚಳಿಯಿಂದ ನಡುಗುತ್ತಿದ್ದರೂ ಚೆಂಡೆಯ ಸದ್ದಿಗೆ ಅಷ್ಟಿಷ್ಟು ಮರೆಯುತ್ತಿದ್ದೆ.
ಮರುದಿನ ತರಗತಿಗೆ ಬಂದು ಕುಳಿತರೂ, ಕಿವಿಯಲ್ಲಿ ತುಂಬ ಭಾಗವತರ ಕಂಚಿನ ಕಂಠದ ಪದಗಳು, ಚೆಂಡೆಯ ಸದ್ದು ಮಾರ್ದನಿಸುತ್ತಿತ್ತು...ಆ ದಿನಗಳು ಮತ್ತೊಮ್ಮೆ ಬರುವುದಿಲ್ಲವಲ್ಲ ಅಂತ ಈಗ ಕೊಂಚ ಬೇಸರವಾಗುತ್ತಿದೆ.

Sunday, 23 August 2009

ಗ್ರಾಮ ಪಂಚಾಯಿತಿ ಗೋಡೆಯಲ್ಲಿ ಬಡವರ ಹೆಸರು..

ಮೊನ್ನೆ ಸೂಲಿಕೆರೆ ಗ್ರಾಮಕ್ಕೆ ಹೋಗಿದ್ದೆ. ಕೆಂಗೇರಿ ಹೋಬಳಿಯ ಪುಟ್ಟ ಗ್ರಾಮವಿದು. ಸೂಲಿ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರ ಜನ ವಾಸಿಸುತ್ತಿದ್ದಾರೆ. ಹಚ್ಚ ಹಸಿರಿನ ತೋಟಗಳು , ಆಲ, ಮಾವು ತೆಂಗಿನ ಮರಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಆದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಲುವಾಗಿ ಈ ಗ್ರಾಮ ಪಂಚಾಯಿತಿ ಮುಂದಿನ ದಿನಗಳಲ್ಲಿ ನಾಮಾವಶೇಷವಾಗಲಿದೆ.
ಇಂಥ ಗ್ರಾಮಪಂಚಾಯಿತಿ ಕಚೇರಿಯ ತುಂಬ ಬಡತನದ ರೇಖೆಗಿಂತ ಕೆಳಗಿರುವವರ ಹೆಸರುಗಳನ್ನು ಬರೆಯಲಾಗಿದೆ.
ನಾನು ಕೆಲವು ದೇವಸ್ಥಾನಗಳಿಗೆ, ಧಾರ್ಮಿಕ ಮಂದಿರಗಳಿಗೆ, ಶಾಲೆಗಳಿಗೆ ಹೋಗಿದ್ದಾಗ, ದಾನಿಗಳ ಹೆಸರನ್ನು ಅಮೃತ ಶಿಲೆಯಲ್ಲಿಯೋ, ಗೋಡೆಯಲ್ಲಿಯೋ ಬಣ್ಣ ಬಣ್ಣದ ಪೇಂಟಿನಲ್ಲಿ ಬರೆದದ್ದನ್ನು ಕಂಡಿದ್ದೆ. ಆದರೆ ಬಡತನದ ರೇಖೆಗಿಂತ ಕೆಳಗಿನವರ ಹೆಸರುಗಳನ್ನು ಹೀಗೆ ಗೋಡೆಯಲ್ಲಿ ಬರೆದು ಶಾಶ್ವತಗೊಳಿಸಿದ್ದನ್ನು ಇದೇ ಮೊದಲ ಬಾರಿಗೆ ಕಂಡು ಸೋಜಿಗ ಪಟ್ಟೆ. ಹಾಗಾದರೆ ಅವರೆಲ್ಲ ಇನ್ನು ಶ್ರೀಮಂತರಾಗಲು ಸಾಧ್ಯವೇ ಇಲ್ಲವಾ ? ಎಂಥ ಕ್ರೂರ ಅಣಕವಲ್ಲವೇ ಇದು ? ಇವರೆಲ್ಲ ಬಡವರು ಅಂತ ಗ್ರಾಮ ಪಂಚಾಯಿತಿ ಗೋಡೆಯ ತುಂಬ ಬರೆದುಬಿಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯೇ ? ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆಯವರೇ ಉತ್ತರಿಸಬೇಕು...

Thursday, 20 August 2009

ಸ್ಯಾಶೆ ಮತ್ತು ಪತ್ರಕರ್ತರ ಬಗ್ಗೆ ಹಳ್ಳಿಗರ ಕಮೆಂಟ್‌

ಹಳ್ಳಿಯ ಜನ ಶ್ಯಾಂಪೂ, ಸೋಪು, ಬಿಸ್ಕತ್ತು, ಟೂತ್ ಪೌಡರ‍್, ಮುಂತಾದವುಗಳನ್ನು ಬಳಸುತ್ತಾರೆ. ಆದರೆ ಅದು ಸ್ಯಾಶೆಯ ರೂಪದಲ್ಲಿರುವುದೇ ಹೆಚ್ಚು. ಆದ್ದರಿಂದ ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲಿ ಸ್ಯಾಶೆಯಲ್ಲಿರುವ (sachet) ತೆಂಗಿನೆಣ್ಣೆ, ಟೂತ್ ಪೇಸ್ಟ್, ಫೇರ‍್ ಎಂಡ್ ಲವ್ಲಿ, ಸಣ್ಣ ಬಿಸ್ಕತ್ತಿನ ಪ್ಯಾಕೇಟ್ ಸಿಕ್ಕೇ ಸಿಗುತ್ತದೆ. ಬ್ರಿಟಾನಿಯಾ ಟೈಗರ‍್ ನ ಪುಟ್ಟ ಪೊಟ್ಟಣಗಳಲ್ಲಿ ಕೇವಲ ಮೂರು ಪೀಸ್ ಬಿಸ್ಕತ್ ಇರುತ್ತದೆ. ೧ ರೂ ಕಾಯಿನ್ ಬಾಕ್ಸ್ ಇರುತ್ತೆ. ೧೦ ರೂ.ಗಳ ಟಾಪ್ ಅಪ್ ಸಿಗುತ್ತದೆ. ಚೋಟಾ ಪೆಪ್ಸಿ ಇರುತ್ತೆ. ಒಟ್ಟಾರೆ ಹಳ್ಳಿಯ ಮಾರುಕಟ್ಟೆ ಎಂದರೆ ಮಿನಿಯೇಚರ‍್ ಜಗತ್ತು. ಯಾಕೆ ಹೀಗೆ ? ಅಲ್ಲಿನ ಖರ್ಚಿನ ಸಾಮರ್ಥ್ಯ ಅಷ್ಟೇ ಆಗಿರುತ್ತದೆ.
ಅನೇಕ ಬಳಕೆಯ ವಸ್ತುಗಳು ಒಂದು ದಿನ ಅಥವಾ ವಾರದಮಟ್ಟಿಗೆ ಬೇಕಾಗುತ್ತದೆ. ಅವರಲ್ಲಿ ಬಹಳ ಮಂದಿಗೆ ಕೂಲಿ ದಿನಗೂಲಿ ಇಲ್ಲವೇ ವಾರಕ್ಕೊಮ್ಮೆ. ಇನ್ನು ಕೆಲವರಿಗೆ ಎರಡು ವಾರಕ್ಕೊಮ್ಮೆ. ಆದ್ದರಿಂದ ಅವರಿಗೆ ಒಟ್ಟಿಗೇ ಹೆಚ್ಚು ಖರ್ಚಿನ ಉತ್ಪನ್ನಗಳನ್ನು ಖರೀದಿಸಲು ಆಗುವುದಿಲ್ಲ. ಅವರ ಬಜೆಟ್ ವಾರದ ಲೆಕ್ಕದಲ್ಲಿ ಇರುತ್ತದೆ. ವಾರದಿಂದಾಚೆಗೆ ಅವರ ಬಜೆಟ್‌ ಲೆಕ್ಕಾಚಾರ ಹೋಗುವುದಿಲ್ಲ.

ಇತ್ತೀಚೆಗೆ ಬೆಂಗಳೂರಿಗೆ ಸಮೀಪದ ಹಳ್ಳಿಯೊಂದಕ್ಕೆ ಹೋಗಿದ್ದೆ. ರೈತಾಪಿಯೊಬ್ಬ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ಹೋಗಿ ಮಾತನಾಡಿಸುವ ಎಂದು ಅನ್ನಿಸಿತು. ಸರಿ, ಸ್ಕೂಟರನ್ನು ರಸ್ತೆ ಬದಿಯ ಮರದ ನೆರಳಲ್ಲಿ ನಿಲ್ಲಿಸಿದೆ. ಹೊಲದ ಬದುವಿನಲ್ಲಿ ನಡೆದು ಆತನತ್ತ ನಡೆದೆ. ನನ್ನನ್ನೇ ಆತ ಯಾರಪ್ಪಾ ಅಂತ ನೋಡುತ್ತಿದ್ದ. ಆತನೂ ಯುವಕ. ಹತ್ತಿರ ಹೋಗಿ ನನ್ನ ಪರಿಚಯ ಮಾಡಿಸಿದೆ. ನಿಮ್ಮೂರಿನ ವಿಶೇಷ ಹೇಳಿ, ಬೆಳೆಯ ಬಗ್ಗೆ ನಾಲ್ಕು ಮಾತಾಡಿ ಎಂದೆ. ಆಗ ಶುರುವಾಯಿತು ಗ್ರಾಮಾಯಣ. ಗ್ರಾಮವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ತನ್ನದೇ ಶೈಲಿಯಲ್ಲಿ ಉಸುರಿದ. ಎಲ್ಲವನ್ನೂ ಕೇಳಿಸಿಕೊಂಡೆ. ಕೊನೆಗೆ ಕುತೂಹಲಕ್ಕಾಗಿ ಪತ್ರಕರ್ತರ ಬಗ್ಗೆ ಊರಿನವರ ಅಭಿಪ್ರಾಯ ಏನು ಎಂದೆ ? ಆತ ಏನು ಹೇಳಿದ ಗೊತ್ತೇ ?
ಅಯ್ಯೋ, ನೀನು ಹೇಳ್ತೀಯಾ, ಅವನು ಬರೀತಾನೆ.. ಅವನಿಗೆ ಸಂಬಳ ಬರತದೆ. ಬರೀತಾನೆ..ಹೋಗ್ತಾನೆ..ಅಷ್ಟೇ..ಏನಾಗ್ತದೆ ಮತ್ತ ? ಅಂತಾರೆ ಎಂದ.

ಗ್ರಾಮೀಣ ಬಿಪಿಒ ಹೇಗಿದ್ದರೆ ಅನುಕೂಲಕರ ?

ಕೊನೆಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಬಿಪಿಒ( ಬಿಸಿನೆಸ್ ಪ್ರೊಸೆಸ್‌ ಔಟ್ ಸೋರ್ಸಿಂಗ್ ) ಸ್ಥಾಪನೆಯಾಗುತ್ತಿದೆ.
ಹೊರಗುತ್ತಿಗೆಯ ಘಟಕಗಳನ್ನು, ಕಾಲ್ ಸೆಂಟರ‍್ಗಳನ್ನು ಹಳ್ಳಿಗಳಲ್ಲಿ ಆರಂಭಿಸುವವರಿಗೆ ರಾಜ್ಯ ಸರಕಾರ ಒಟ್ಟು ೪೦ ಲಕ್ಷ ರೂ.ಗಳ ಆಕರ್ಷಕ ಸಬ್ಸಿಡಿ ನೆರವು ನೀಡುತ್ತಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಗಿಂತ ಹೆಚ್ಚಿಗೆ ಓದಿರದ, ನಗರಗಳಿಗೆ ಬಂದು ಪರದಾಡುತ್ತಿರುವ ಹುಡುಗರಿಗೆ ಇದೊಂದು ಒಳ್ಳೆಯ ಸುದ್ದಿ. ಕಲ್ಪನಾ ಚಾವ್ಲಾಳಂತಹ ಪ್ರತಿಭೆಯಿದ್ದರೂ, ಎಸ್ಸೆಸ್ಸೆಲ್ಸಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೂ, ಪಿಯುಸಿಗೆ ಹೋಗಲಾಗದೆ ಹೆಂಚಿನ ಮನೆಯಲ್ಲಿ ಕಣ್ಣೀರಿಡುವ ಹುಡುಗಿಯರಿಗೆ ಇದೊಂದು ಗುಡ್‌ ನ್ಯೂಸ್. ಬಡತನದಿಂದ ಎಳೆಯ ವಯಸ್ಸಿನಲ್ಲಿ ಮದುವೆಯಾಗಿ, ಮಕ್ಕಳಾಗಿ ಕುಟುಂಬದ ನೊಗ ಹೊತ್ತು ಬಸವಳಿದ ಯುವತಿಯರಿಗೆ ಇಂಥ ಯೋಜನೆ ಸಹಕಾರಿಯಾದೀತು. ಆದರೆ ಬೇಗ ಬೇಗನೇ ಪ್ರತಿಯೊಂದು ಹೋಬಳಿಗೂ ಬಿಪಿಒ ಸೆಂಟರ‍್ ಬರಬೇಕು. ಯಾಕೆಂದರೆ ಕನಿಷ್ಠ ನಗರಗಳಿಗೆ ಯುವಜನರ ಸಾಮೂಹಿಕ ವಲಸೆಯನ್ನು ತಡೆಯಲು ಇದು ಅತ್ಯುತ್ತಮ ಮಾರ್ಗ.
ಬೆಂಗಳೂರು ಕಳೆದ ದಶಕದಲ್ಲಿ ಐಟಿ, ಬಿಪಿಒ, ಐಟಿಇಎಸ್ ವಲಯದಲ್ಲಿ ಮುಂಚೂಣಿಗೆ ಬಂತು. ಹೊರಗಿನವರಿಗೆ ಕರ್ನಾಟಕ ಎಂದರೇನೆಂದು ಗೊತ್ತಿರದಿದ್ದರೂ, ಬೆಂಗಳೂರು ಎಂದರೆ ಅರ್ಥವಾಗುವಂತಾಯಿತು. ಇಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚುಮಂದಿಗೆ ಈ ಕ್ಷೇತ್ರ ಉದ್ಯೋಗ ಕೊಟ್ಟಿದೆ. ಈಗ ತಾತ್ಕಾಲಿಕವಾಗಿ ಆರ್ಥಿಕ ಹಿಂಜರಿತದ ಪರಿಣಾಮ ತಟ್ಟಿರಬಹುದು. ಆದರೂ ಈ ವಲಯ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸುವುದಿಲ್ಲ. ಕಳೆದ ವರ್ಷ ೫೫ ಸಾವಿರ ಕೋಟಿ ರೂ.ನಷ್ಟಿದ್ದ ರಾಜ್ಯದ ಐಟಿ ರಫ್ತು ಈ ಸಲ ೭೧ ಸಾವಿರ ಕೋಟಿ ರೂ.ಗೇರಿದೆ. ದೇಶದ ಐಟಿ ರಫ್ತಿನಲ್ಲಿ ಕರ್ನಾಟಕದ್ದೇ ಅರ್ಧಪಾಲು. ಏರ‍್ ಟೆಲ್ ಮುಂತಾದ ಕಂಪನಿಗಳ ಮೊಬೈಲ್ ಸೇವೆ ಊರೂರನ್ನು ಮುಟ್ಟುತ್ತವೆ. ನಗರದ ಹಾನಿಕಾರಕ ತ್ಯಾಜ್ಯಗಳನ್ನು ಹಳ್ಳಿಗೆ ಲೋಡುಗಟ್ಟಲೆ ತಂದು ಚೆಲ್ಲುತ್ತಾರೆ. ಬೀದಿ ನಾಯಿಗಳನ್ನೂ ಬಿಡುತ್ತಾರೆ. ಒಂದು ಬಿಪಿಒ ಘಟಕ ಸ್ಥಾಪನೆಗೆ ಬೃಹತ್ ಚಿಮಿಣಿಗಳು ಬೇಡ, ಗಗನಚುಂಬಿ ಕಟ್ಟಡಗಳ ಅಗತ್ಯ ಇಲ್ಲ. ಡಾಂಬರಿನ ರಸ್ತೆಯೇ ಬೇಕೆಂದಿಲ್ಲ. ಉತ್ಪಾದನೆಗೆ ಕಲ್ಲಿದ್ದಲಿನಂಥ ಇಂಧನ ಬೇಕಿಲ್ಲ. ಎಕರೆಗಟ್ಟಲೆ ನೆಲ ಕಬಳಿಸಬೇಕಿಲ್ಲ. ನೂರೆಂಟು ಪರವಾನಗಿಗಳ ಅಗತ್ಯವಿಲ್ಲ. ಕಂಪ್ಯೂಟರ‍್, ಕರೆಂಟ್, ಇಂಟರ‍್ ನೆಟ್ ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ನಿಷ್ಠೆಯಿಂದ ದುಡಿಯುವ ಕೆಲಸಗಾರರು ಸಾಕು. ಸಾಮಾನ್ಯವಾಗಿ ಗ್ರಾಮೀಣ ಬಿಪಿಒಗಳಲ್ಲಿ ಕಂಡುಬರುವ ಸನಸ್ಯೆ ನಿರಂತರ ಬ್ರಾಡ್‌ ಬ್ಯಾಂಡ್‌ ಸರ್ವೀಸಿನದ್ದೇ. ಇದೂ ಬಗೆಹರಿಸಲಾಗದ್ದೇನಲ್ಲ. ಹೀಗಿದ್ದರೂ, ಮೊನ್ನೆಮೊನ್ನೆಯಷ್ಟೇ ಹಳ್ಳಿಯಲ್ಲಿ ಮೊದಲ ಬಿಪಿಒ ಸ್ಥಾಪಿಸಲಾಗಿದೆ. ಈ ಮಂದಗತಿಗೆ ಏನೆನ್ನುವುದು ? ಇರಲಿ, ಬಿಪಿಒ ಹಳ್ಳಿ ಕಡೆಗೆ ಮುಖ ಮಾಡಿರುವುದು ಸ್ವಾಗತಾರ್ಹ.
ಬಿಪಿಒ ಘಟಕಗಳಲ್ಲಿ ವಾಯ್ಸ್ ಬೇಸ್ಡ್ ಮತ್ತು ಡಾಟಾ ಬೇಸ್ಡ್ ಎಂಬ ವಿಭಾಗವಿದೆ. ಅಥವಾ ಎರಡರ ಸಂಯೋಜನೆಯೂ ಇರಬಹುದು. ಗ್ರಾಹಕರ ಜತೆಗೆ ಸಂವಹನ, ಹಣಕಾಸು ಮತ್ತು ಲೆಕ್ಕಪತ್ರ ದಾಖಲು, ಕಾಲ್ ಸೆಂಟರ‍್, ಡಾಟಾ ಮ್ಯಾನೇಜ್ ಮೆಂಟ್, ವಿಮೆ, ವೈದ್ಯಕೀಯ ಮಾಹಿತಿ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಹೊರಗುತ್ತಿಗೆ ನಡೆಸಬಹುದು. ಇದಕ್ಕೆಲ್ಲ ಹೆಚ್ಚಿನ ಔದ್ಯೋಗಿಕ ಕೌಶಲ್ಯ ಅಥವಾ ಉನ್ನತ ಶಿಕ್ಷಣವಾಗಲೀ ಬೇಕಾಗುವುದಿಲ್ಲ. ಎಸ್ಸೆಸ್ಸೆಲ್ಸಿ, ಸ್ವಲ್ಪ ಇಂಗ್ಲಿಷ್‌ ಮತ್ತು ಕಂಪ್ಯೂಟರ‍್ ಜ್ಞಾನವಿದ್ದರೆ ಸಾಕು. ಬಿಪಿಒ ಸೆಂಟರ‍್ ಗಳಲ್ಲಿ ಕೆಲಸ ಸಿಗುತ್ತದೆ. ಅಲ್ಲಿಯೇ ತಕ್ಕಮಟ್ಟಿನ ತರಬೇತಿಯನ್ನು ನೀಡುತ್ತಾರೆ.
೨೦೦೮-೦೯ರ ಸಾಲಿನ ರಾಜ್ಯ ಬಜೆಟ್ ನಲ್ಲಿ ಈ ಸಂಬಂಧ ಸರಕಾರ ಅನುದಾನ ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಬಿಪಿಒ ಎಂದರೆ ಏನೆಂದು ಮೊದಲಿಗೆ ತಿಳಿದುಕೊಳ್ಳಬೇಕು. ಯಾಕೆಂದರೆ ಕಳೆದ ವರ್ಷ ಸರಕಾರ ಬಿಪಿಒ ಸ್ಥಾಪನೆಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಬಹುತೇಕ ಮಂದಿ ಇದೊಂದು ನೆಮ್ಮದಿಯಂತಹ ತರಬೇತಿ ಕಾರ್ಯಕ್ರಮ ಇರಬಹುದು ಎಂದು ಭಾವಿಸಿದ್ದರು. ಆದರೆ ತರಬೇತಿಯ ನಂತರ ಉದ್ಯೋಗವನ್ನು ಆಧರಿಸಿದ ರೆವೆನ್ಯೂ ಬೇಸ್ಡ್ ಬಿಸಿನೆಸ್ ಮಾಡೆಲ್ ಎಂದು ಗೊತ್ತಾಗಲಿಲ್ಲ. ಖಾಸಗಿ ವಲಯದವರಿಗೆ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಹೊರಗುತ್ತಿಗೆ ಉದ್ಯಮವನ್ನು ಬೆಳೆಸಲು ಸಬ್ಸಿಡಿಯ ಮೂಲಕ ಉತ್ತೇಜಿಸುವುದೇ ಸರಕಾರದ ಉದ್ದೇಶ. ಈವತ್ತು ಬ್ರಾಡ್ ಬಾಂಡ್ ಸಂಪರ್ಕ ಇಲ್ಲದ ತಾಲೂಕು, ಹೋಬಳಿ ಸಿಗಲಿಕ್ಕಿಲ್ಲ. ಇತರ ಮೂಲ ಸೌಕರ್ಯಗಳನ್ನು ಒದಗಿಸಿದರಾಯಿತು.
ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ರಾಜ್ಯದ ಮೊದಲ ಗ್ರಾಮೀಣ ಬಿಪಿಒ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಒಟ್ಟು ನೂರು ಮಂದಿ ಗ್ರಾಮೀಣರಿಗೆ ಇಲ್ಲಿ ತರಬೇತಿಯ ನಂತರ ಉದ್ಯೋಗ ಸಿಗಲಿದೆ. ಆರಂಭದಲ್ಲಿ ಮೂರರಿಂದ ಮೂರೂವರೆ ಸಾವಿರ ರೂ. ಆರಂಭಿಕ ವೇತನ ನೀಡುವುದಾಗಿ ಘಟಕ ಸ್ಥಾಪಿಸಿರುವ ಕಂಪನಿ ಐಟಿ ಇಲಾಖೆಗೆ ತಿಳಿಸಿದೆ. ಅದಕ್ಕಿಂತ ಕಡಿಮೆ ಕೊಟ್ಟರೆ ಅಲ್ಲಿ ಯಾರೂ ಕೆಲಸ ಮಾಡಲಾರರು ಎನ್ನುವುದು ಬೇರೆ ವಿಷಯ. ಹಾಗಾದರೆ ಯೋಜನೆಯ ರೂಪು ರೇಷೆಯೇನು ?
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ತಾಲೂಕು/ಹೋಬಳಿ ಮಟ್ಟದಲ್ಲಿ ನೂರು ಸೀಟುಗಳ ಸಾಮರ್ಥ್ಯದ ಗ್ರಾಮೀಣ ಬಿಪಿಒಗಳನ್ನು ಸ್ಥಾಪಿಸಲು ಸರಕಾರ ೪೦ ಲಕ್ಷ ರೂ. ಸಬ್ಸಿಡಿ ನೆರವು ನೀಡುತ್ತದೆ. ಘಟಕ ಸ್ಥಾಪನೆಯ ಬಂಡವಾಳಕ್ಕೆ ೨೦ ಲಕ್ಷ ರೂ, ಉದ್ಯೋಗಿಗಳ ತರಬೇತಿಗೆ ೨೦ ಲಕ್ಷ ರೂ, ಎರಡು ವರ್ಷಗಳ ಬಾಡಿಗೆ, ಇಂಟರ‍್ ನೆಟ್‌, ವಿದ್ಯುತ್, ಜನರೇಟರ‍್ ಮುಂತಾದ ವ್ಯವಸ್ಥೆಗೆ ೧೦ ಲಕ್ಷ ರೂ. ಅಂತ ಒಟ್ಟು ೪೦ ಲಕ್ಷ ರೂ. ಆರ್ಥಿಕ ನೆರವು ಕೊಡುತ್ತದೆ. ವೈಯಕ್ತಿಕವಾಗಿ ಅಥವಾ ಟ್ರಸ್ಟ್‌ ಮೂಲಕ ಬಿಪಿಒ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು. ಕಳೆದ ವರ್ಷ ಬಂದಿದ್ದ ೧೦೪ ಅರ್ಜಿಗಳ ಪೈಕಿ ನಾಲ್ಕನ್ನು ಆಯ್ಕೆ ಮಾಡಲಾಗಿತ್ತು. ಈ ವರ್ಷ ಈಗಾಗಲೇ ೧೨೪ ಅರ್ಜಿಗಳು ಬಂದಿವೆ.ಹಾವೇರಿಯ ಶಿಗ್ಗಾಂವ್ ಮತ್ತು ಹಾಸನದ ಸಮೀಪ ಸೆಪ್ಟೆಂಬರ‍್ ನಲ್ಲಿ ಮತ್ತೊಂದು ಕೇಂದ್ರ ಸ್ಥಾಪನೆಯಾಗಲಿದೆ. ಬಾಬುರಾಯನಕೊಪ್ಪಲಿನಲ್ಲಿ ಘಟಕದಲ್ಲಿ ನೇಮಕಗೊಂಡಿರುವ ಉದ್ಯೋಗಾರ್ಥಿಗಳೀಗ ತರಬೇತಿ ಪಡೆಯುತ್ತಿದು, ಶೀಘ್ರದಲ್ಲಿ ಹೊರಗುತ್ತಿಗೆಯ ಬಿಸಿನೆಸ್ ಆರಂಭವಾಗಲಿದೆ. ಗ್ರಾಮೀಣ ಬಿಪಿಒ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಯೋಜನೆಯ ಉದ್ದೇಶ. ಈ ವರ್ಷ ಯೋಜನೆಗೆ ೪೦ ಕೋಟಿ ರೂ. ಮಂಜೂರಾಗಿದ್ದು, ಸಮರ್ಪಕವಾಗಿ ಜಾರಿಯಾದಲ್ಲಿ ಅಷ್ಟರಮಟ್ಟಿಗೆ ಯುವಜನತೆ ನಗರಗಳಿಗೆ ವಲಸೆ ಬಂದು ತಾಪತ್ರಯಕ್ಕೆ ಸಿಲುಕುವುದು ತಪ್ಪುತ್ತದೆ. ಯಾರೇನೇ ಅನ್ನಲಿ, ಈ ದೇಶಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ೧೬ ಲಕ್ಷ ಕೋಟಿ ರೂ. ಮೊತ್ತದ ವಹಿವಾಟು ನೀಡಿದೆ. ಹೀಗಿರುವಾಗ ಅದನ್ನು ಬೆಂಗಳೂರಿನ ಗಡಿ ದಾಟಿಸಿ ಹಳ್ಳಿಗಳಿಗೆ ಮುಟ್ಟಿಸುವುದು ಮಹತ್ವಪೂರ್ಣ.
ಸಾಮಾನ್ಯವಾಗಿ ಗ್ರಾಮೀಣ ಬಿಪಿಒಗಳಿಗೆ ಪಿಯುಸಿ ತನಕ ಓದಿದವರು, ಕಾಲೇಜು ಓದನ್ನು ಅರ್ಧಕ್ಕೇ ಬಿಟ್ಟವರು ಬರುತ್ತಾರೆ. ಅವರಿಗೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ‍್ ಬಳಕೆಯ ಪ್ರಾಥಮಿಕ ತರಬೇತಿ ನೀಡುತ್ತಾರೆ. ಇದಕ್ಕೆ ಎಂಟ್ಹತ್ತು ವಾರ ಬೇಕಾಗುತ್ತದೆ. ನಂತರ ಅವರಿಗೆ ಅಸೈನ್ ಮೆಂಟ್ ಕೊಡುತ್ತಾರೆ. ಹಳ್ಳಿಗಳಲ್ಲಿ ಶೇ. ೫೦ಕ್ಕಿಂತಲೂ ಹೆಚ್ಚು ಮಂದಿ ಮಹಿಳೆಯರೇ ಸೇರುತ್ತಾರೆ. ಮದುವೆ ಖರ್ಚಿಗೆ, ಸಾಲ ತೀರಿಸಲು, ಕಿವಿಯೋಲೆ, ಹೊಲಿಗೆ ಮೆಶಿನ್ ಪಡೆಯಲು, ದನ ಸಾಕಲು ಮುಂತಾದ ನಾನಾ ಕಾರಣಗಳಿಗೆ ಅವರಿಗೆ ಹಣ ಬೇಕು. ಬಿಪಿಒ ಕೆಲಸ ಅವರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ಇದೊಂಥರಾ ವಿನ್-ವಿನ್ ಗೇಮ್. ಕಂಪನಿಗಳಿಗೆ ಒಂದು ಕಡೆ ಸರಕಾರದಿಂದ ಭಾರಿ ಮೊತ್ತದ ಸಬ್ಸಿಡಿ, ಮತ್ತೊಂದು ಕಡೆ ಕಡಿಮೆ ಬಾಡಿಗೆಗೆ ಕಟ್ಟಡ ಸಿಗುತ್ತದೆ. ಹೀಗಾಗಿ ಸಾಕಷ್ಟು ಉಳಿತಾಯ ಸಾಧ್ಯವಾಗುತ್ತದೆ.
ಆರ್ಥಿಕ ಹಿಂಜರಿತದ ನಂತರ ಲ್ಯಾಟಿನ್ ಅಮೆರಿಕ, ಯುರೋಪ್ ಮುಂತಾದ ಕಡೆ ಮಾರುಕಟ್ಟೆಗಳನ್ನು ಹುಡುಕುತ್ತಿರುವ, ಭಾರತೀಯ ರೈಲ್ವೆಯ ೨,೫೦೦ ಕೋಟಿ ರೂ.ಗಳ ಹೊರಗುತ್ತಿಗೆ ಒಪ್ಪಂದವನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿರುವ ಟಿಸಿಎಸ್ ನಂತಹ ಕಂಪನಿಗಳು ಗ್ರಾಮೀಣ ಬಿಪಿಒ ಘಟಕಗಳ ಸ್ಥಾಪನೆಗೂ ಮನಸ್ಸು ಮಾಡಬೇಕು. ಐಟಿ ವಲಯದ ದಿಗ್ಗಜ ಕಂಪನಿಗಳೀಗ ಬೇರೂರಿ ಹೋಗಿವೆ. ಗ್ರಾಮೀಣ ಮಾರುಕಟ್ಟೆ ಬಗ್ಗೆ ಯೋಚಿಸುವುದಕ್ಕಿಂತ, ಅತ್ಯಧಿಕ ಲಾಭದ ವಿದೇಶಿ ಮಾರುಕಟ್ಟೆಯ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ವ್ಯಾಪಾರ ಅಂದ ಮೇಲೆ ಲಾಭ-ನಷ್ಟಗಳ ಲೆಕ್ಕ ಇರುತ್ತದೆ ಎಂದು ಅಂದುಕೊಳ್ಳಬಹುದು. ಆದರೆ ವಿಪ್ರೊ ಇರಲಿ, ಟಿಸಿಎಸ್ ಇರಲಿ, ಯಾರೇ ಬಂದರೂ ಅರ್ಹತೆ ಇದ್ದಲ್ಲಿ ಸಬ್ಸಿಡಿ ನೆರವು ಕೊಡಲು ನಾವು ತಯಾರಿದ್ದೇವೆ ಎನ್ನುತ್ತದೆ ಐಟಿ ಇಲಖೆ. ಹೀಗಿರುವಾಗ ಗ್ರಾಮೀಣ ಬಿಪಿಒ ಎಂಬ ಹೊಸ ಮಾರುಕಟ್ಟೆಯ ಅನ್ವೇಷಣೆಗೆ ಅವಕಾಶ ಬಂದಿದೆ. ಸದ್ಯಕ್ಕೆ ಯಾರಿಗೆ ಗೊತ್ತು ಈ ಮಾರುಕಟ್ಟೆಯ ಉದ್ದಗಲ ?
ನಿಜ. ತಮ್ಮ ಗ್ರಾಮಗಳಲ್ಲಿ, ಮನೆಗೆ ಸಮೀಪ ಕೆಲಸ ಸಿಕ್ಕಿದಾಗ, ೩,೫೦೦ ರೂ. ಸಂಬಳದಲ್ಲಿ ಸಾಕಷ್ಟು ಉಳಿತಾಯ ಆಗಬಹುದು. ಬಾಡಿಗೆ ಕೊಡಬೇಕಿಲ್ಲ, ಸಾರಿಗೆಗೆ ಖರ್ಚಾಗುವುದಿಲ್ಲ. ಜತೆಗೆ ತರಕಾರಿ, ಸೊಪ್ಪುಪಲ್ಲೆ ಬೆಳೆಯೋದು, ಹಾಲು ಮಾರಾಟ ಅಂತ ಇತರ ವೃತ್ತಿಗಳೂ ಇರುವುದರಿಂದ ಆದಾಯ ಸಿಗುತ್ತದೆ. ಕೆಲಸದ ವೇಳೆಯನ್ನೂ ಪಾಳಿಯಲ್ಲಿ ಹೊಂದಿಸಿಕೊಳ್ಳುವ ಅನುಕೂಲ ಇಲ್ಲಿದೆ. ಹಾಗಾದರೆ ಬಿಪಿಒ ಘಟಕಗಳನ್ನು ತೆರೆದು ಎಸ್ಸೆಸ್ಸೆಲ್ಸಿ ಪಿಯುಸಿ ಮಾಡಿದವರಿಗೆ ಒಂದಷ್ಟು ತರಬೇತಿ ಕೊಟ್ಟು ತಿಂಗಳಿಗೆ ಮೂರು ಸಾವಿರ, ಮೂರೂವರೆ , ನಾಲ್ಕು ಸಾವಿರ ಕೊಟ್ಟು ಕೆಲಸ ಮಾಡಿಸಿದರೆ ಸಾಕೇ ? ನೆವರ‍್. ನಮ್ಮಲ್ಲಿ ಸಾಮಾನ್ಯವಾಗಿ ತಕ್ಷಣದ ಲಾಭ ಏನು ಎಂದು ಯೋಚಿಸುವವರೇ ಹೆಚ್ಚು. ಅದರ ಆಧಾರದ ಮೇಲೆ ಅರಮನೆ ಕಟ್ಟಲು ಹೊರಡುತ್ತಾರೆ. ಆದರೆ ಮುಂದೇನು ? ನಾಳೆ ಮಾರುಕಟ್ಟೆಯ ಪರಿಸ್ಥಿತಿ ಇದೇ ರೀತಿ ಉಳಿಯುತ್ತದೆಯೇ ? ಇಲ್ಲವಾದಲ್ಲಿ ಎದುರಿಸುವ ಸಿದ್ಧತೆ ಏನು ಎತ್ತ ಅಂತ ಯೋಚಿಸುವುದಿಲ್ಲ.
ಭಾರತದ ಹೊರಗುತ್ತಿಗೆ, ಭವಿಷ್ಯದಲ್ಲಿ ಎದುರಾಗುವ ಪೈಪೋಟಿ ಮತ್ತು ಸವಾಲುಗಳನ್ನು ಎದುರಿಸಲು ಈವತ್ತಿನಿಂದಲೇ ತಯಾರಾಗಬೇಕು. ಇನ್ನು ನಗರಗಳಿಗೆ ಹೋಗಿ ಪರದಾಡುವ ಅವಸ್ಥೆ ಇಲ್ಲ, ಸಂಬಳ ಕಡಿಮೆ ಇದ್ದರೂ ಸಾಕು ಅಂತ ಹಳ್ಳಿಯ ಹುಡುಗ, ಹುಡುಗಿಯರೇನೋ ಬರಬಹುದು. ಆದರೆ ಅವರ ಭವಿಷ್ಯ ಕೂಡ ಮುಖ್ಯವಲ್ಲವೇ. ನಗರಗಳಲ್ಲಿ ಏನಾಗಿದೆ ನೋಡಿ, ಒಳ್ಳೆ ಕೆಲಸ ಸಿಗಲಿಲ್ಲ , ಮನೆಯ ಪರಿಸ್ಥಿತಿ ಚೆನ್ನಾಗಿಲ್ಲ, ಹೆಚ್ಚಿನ ಓದಿಲ್ಲ, ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು, ಮನೆಗೆ ತಂದು ಬಿಡುತ್ತಾರೆ, ಪಿಕಪ್ಪೂ ಇರುತ್ತದೆ ಅಂತ ಅಂದುಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ ಹೆಚ್ಚು ಸಂಬಳ, ಉನ್ನತ ಶಿಕ್ಷಣ, ಬೆಳೆಯುವ ಅವಕಾಶಕ್ಕಾಗಿ ಬಿಪಿಒ ಘಟಕದಿಂದ ಕಾಲ್ತೆಗೆಯುವ ಮಂದಿಯೂ ಹೆಚ್ಚು. ಕಂಪನಿಯೇ ಮಿಸ್ ಗೈಡ್ ಮಾಡಿತು, ಪರ್ಸನಲ್ ಲೇಫೇ ಇಲ್ಲ, ಟೀಮ್ ಲೀಡರ‍್ ಜೊತೆ ಹೊಂದಿಕೊಳ್ಳಲಾಗುತ್ತಿಲ್ಲ, ಮಾನಸಿಕ ದೈಹಿಕ ಒತ್ತಡ ಬೇರೆ ಅಂತ ಸಂಕಟದಿಂದ ತೊಳಲಾಡುವ ಮಂದಿ ಇಲ್ಲಿ ಸಾಕಷ್ಟು ಮಂದಿ ಇದ್ದಾರೆ. ಯಾಕೆ ಹೀಗಾಗುತ್ತಿದೆ ? ಕಳಪೆ ಗುಣಮಟ್ಟ ಮತ್ತು ಶಿಕ್ಷಣದ ಕೊರತೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಏನಾದೀತು ? ಭವಿಷ್ಯದ ಬಿಪಿಒ ಮಾರುಕಟ್ಟೆಯಲ್ಲಿ ಭಾರತ ತನ್ನ ಪಾಲನ್ನು ಇತರರ ಜತೆ ಹಂಚಿಕೊಳ್ಳಬೇಕಾದೀತು. ನಮ್ಮಲ್ಲಿ ಶಿಕ್ಷಣಸಂಸ್ಥೆಗಳ ಸಮಖ್ಯೆಗೆ ಸರಿ ಸಮನಾಗಿ ಗುಣಮಟ್ಟ ಹೆಚ್ಚುತ್ತಿಲ್ಲ. ಯುವಜನತೆಗೆ ನೀಡುವ ಶಿಕ್ಷಣ ಕಳಪೆಯಾದಲ್ಲಿ ನಿಸ್ಸಂದೇಹವಾಗಿ ಬಿಪಿಒ ವಲಯಕ್ಕೆ ಹೊಡೆತ ಬೀಳುತ್ತದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರಿಗೆ ವೆಬ್ ಸೈಟ್ ಏನಂತ ಗೊತ್ತಿರುವುದಿಲ್ಲ. ವಿದ್ಯುತ್ ಮೊದಲೇ ಇರುವುದಿಲ್ಲ. ದೂರಸಂಪರ್ಕ ಅಸ್ತವ್ಯಸ್ತವಾಗಿರುತ್ತದೆ. ಈ ಎಲ್ಲ ಪೂರಕ ಅಂಶಗಳು ಸಮರ್ಪಕವಾಗಿದ್ದಾಗ ಮಾತ್ರ ಬೆಳವಣಿಗೆ ವೇಗ ಪಡೆದುಕೊಳ್ಳಲು ಸಾಧ್ಯ.
ಇವೆಲ್ಲಕ್ಕಿಂತ ಮುಖ್ಯವಾಗಿ ಈ ಬಿಪಿಒಗಳ ಪ್ರಯೋಜನವನ್ನು ಗ್ರಾಮೀಣ ಯುವಜನತೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಹುಡುಗರ ಬುದ್ಧಿ ಪ್ರಬುದ್ಧವಾಗಿರುವುದಿಲ್ಲ. ಆ ಸಮಯದಲ್ಲಿ ದುಡ್ಡಿನ ರುಚಿ ಹತ್ತಿದ ನಂತರ ಕಲಿಯುವಿಕೆಯಲ್ಲಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಕಲಿಯುವುದರಲ್ಲಿ ಆಸಕ್ತಿ ತಗ್ಗಿದ ಬಳಿಕ ಬೆಳವಣಿಗೆಗೆ ಕೂಡ ಅವಕಾಶ ಇಲ್ಲವಾಗುತ್ತದೆ. ಹೀಗಾಗಲು ಬಿಡಬಾರದು. ಆದ್ದರಿಂದಲೇ ಈವತ್ತು ನಗರಗಳಲ್ಲಿ ಕೆಲಸದಲ್ಲಿದ್ದವರೆಲ್ಲ ಜತೆಗೆ ನಾನಾ ಡಿಪ್ಲೊಮಾ, ಎಂಬಿಎ ಕಲಿಯುತ್ತಾರೆ. ಈ ಕಲಿಯುವ ಪ್ರಕ್ರಿಯೆ ಮುಂದುವರಿಸಬೇಕು ಎನ್ನುವ ಹಂಬಲ ಆ ಎಳೆಯ ಹರೆಯದವರಲ್ಲಿ ಬರಬೇಕು. ಹಾಗಿದ್ದರೆ ಮಾತ್ರ ಅಂತಹ ಮಂದಿ ಬಿಪಿಒ ಕೆಲಸಕ್ಕೆ ಸೇರಿಕೊಂಡ ನಂತರ ಭವಿಷ್ಯವನ್ನು ಕಂಡುಕೊಳ್ಳಬಲ್ಲರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತನ್ನ ೨೦೨೦ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಆದರ್ಶದಲ್ಲಿ ಗ್ರಾಮೀಣ ಬಿಪಿಒಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಅದನ್ನೊಮ್ಮೆ ಸ್ಮರಿಸುವುದು ಉತ್ತಮ. ಅವರು ಹೇಳ್ತಾರೆ-
ಭಾರತವನ್ನು ೨೦೨೦ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ದೇಶದ ೬ ಲಕ್ಷ ಗ್ರಾಮಗಳನ್ನು ಸಮೃದ್ಧಗೊಳಿಸುವುದು ಮುಖ್ಯವಾದ ಹೆಜ್ಜೆಗಳಲ್ಲೊಂದು. ನಮ್ಮ ಗ್ರಾಮಗಳಲ್ಲಿ ಭೌತಿಕ, ಎಲೆಕ್ಟ್ರಾನಿಕ್ ಮತ್ತು ಜ್ಞಾನಧಾರಿತ ಸಂಪರ್ಕ ವ್ಯವಸ್ಥೆಯಿದ್ದು, ಅದು ಆರ್ಥಿಕ ಚಟುವಟಿಕೆಯ ಪ್ರಗತಿಗೆ ಕಾರಣವಾಗಬೇಕು. ಜನತೆಯ ಆದಾಯದಲ್ಲಿ ಹೆಚ್ಚಳಕ್ಕೆ ಇದರಿಂದ ಅವಕಾಶ ಸೃಷ್ಟಿಯಾಗುತ್ತದೆ. ಕೃಷಿ ಕುಟುಂಬದಿಂದ ಬಂದಿರುವ ಯುವಜನತೆಯಲ್ಲಿ ಒಂದಷ್ಟು ಮಂದಿ ಇತರ ಕ್ಷೇತ್ರಗಳಲ್ಲಿ ಅವಕಾಶ ಗಳನ್ನು ಅರಸುತ್ತಾರೆ. ಇದು ನಗರಗಳತ್ತ ಅವರ ವಲಸೆಯನ್ನು ಪ್ರಚೋದಿಸುತ್ತದೆ. ಆದರೆ ಗ್ರಾಮೀಣ ಬಿಪಿಒ ಮೂಲಕ ಅವರಿಗೆ ಹೊಸ ಕೌಶಲ್ಯ ಕಲಿಯಲು ಹಾಗೂ ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯವಾಗಬಹುದು. ಇದರಿಂದ ಕೃಷಿ ಸಮುದಾಯಕ್ಕೂ ಅನುಕೂಲ ದೊರೆಯಲಿದೆ. ಗ್ರಾಮೀಣ ಬಿಪಿಒಗಳು ಸಾಮಾಜಿಕ ಹಾಗೂ ಅರ್ಥಿಕವಾಗಿ ತೀರಾ ಹಿಂದುಳಿದ ಯುವಜನತೆಗೆ ತರಬೇತಿ ನೀಡಿ ಕೆಲಸ ಒದಗಿಸುವುದರ ಜೊತೆಗೆ ಅವರನ್ನು, ಇತರ ಅಂತಾರಾಷ್ಟ್ರೀಯ ಬಿಪಿಒ ಉದ್ಯೋಗಿಗಳ ಮಟ್ಟಕ್ಕೆ ಸಮನಾಗಿ ಬೆಳೆಸಬೇಕು. ಇದರಿಂದ ನಗರಗಳತ್ತ ವಲಸೆಯನ್ನು ತಡೆಯಬಹುದು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಇ ಆಡಳಿತ ಪದ್ಧತಿಯಲ್ಲಿ ಗ್ರಾಮೀಣ
ಸೀಟು ನೂರಿದ್ದರೆ ಸಬ್ಸಿಡಿ
ಹಾಗಾದರೆ ಆವತ್ತು ಸಂದರ್ಶನದಲ್ಲಿ ಏನು ಬೇಕಂತ ಕೇಳಿದರು ?
ಗ್ರಾಮೀಣ ಬಿಪಿಒ ಯೋಜನೆಯಿಂದ ಆಕರ್ಷಿತರಾಗಿ ತನ್ನೂರಿನಲ್ಲೂ ಸೆಂಟರ್ ತೆರೆಯುವ ಉತ್ಸಾಹವನ್ನು ಆವತ್ತು ಹೊಂದಿದ್ದ, ಆ ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ತಮಗಾದ ಅನುಭವವನ್ನುವಿವರಿಸಿದ್ದು ಹೀಗೆ : ‘ ನಾನು ಎಂಸಿಎ ಮಾಡಿದ್ದೇನೆ. ಹಿಂದುಳಿದ ಜಿಲ್ಲೆಯಿಂದ ಬಂದವನು. ನಮ್ಮೂರಲ್ಲಿ ಬಿಒಇ ಓಪನ್ ಮಾಡಿದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುತ್ತದೆ. ಹೊಸಬರಿಗೆ ಒಳ್ಳೆಯ ಚಾನ್ಸು ಅಂದುಕೊಂಡಿದ್ದೆ. ಆದರೆ ಇಂಟರ್‌ವ್ಯೂನಲ್ಲಿ ನಡೆದದ್ದೇ ಬೇರೆ ಕಥೆ. ನೀವು ಯಾವುದಾದರೂ ಕಂಪನಿಯಿಂದ ಕಮಿಟ್‌ಮೆಂಟ್ ಲೆಟರ್ ತನ್ನಿರಿ ಎಂದರು. ಯಾವುದೇ ಕಚೇರಿಯಾಗಲಿ, ಅನುಭವವಾಗಲಿ ಇಲ್ಲದ ನನಗೆ ಅದ್ಯಾವ ಕಂಪನಿಯವರು ಪ್ರಾಜೆಕ್ಟ್ ಕೊಡ್ತಾರೆ ?
ಮೊದಲು ಕಚೇರಿ ತೆರೆಯಿರಿ, ಮೂಲಸೌಕರ್ಯ ಎಲ್ಲಿದೆ ಅಂತ ತೋರಿಸಿ, ಉದ್ಯೋಗಿಗಳನ್ನು ಸೇರಿಸಿ..ಯಾವುದೂ ಇಲ್ಲದೆ ಕಮಿಟ್‌ಮೆಂಟ್ ಲೆಟರ್ ಕೊಡಿ ಎಂದರೆ ಅದನ್ನು ಒಪ್ಪುವುದು ಹೇಗೆ ? ಎಂದು ಕಂಪನಿಯವರು ನಕ್ಕು ಹೇಳುತ್ತಾರೆ. ಹೇಗೋ ಮಾಡಿ ಕಮಿಟ್‌ಮೆಂಟ್ ಲೆಟರ್ ತಂದುಕೊಟ್ಟರೆ, ಇಂಥದ್ದನ್ನೆಲ್ಲ ಯಾರು ಬೇಕಾದರೂ ತರಿಸಬಹುದು, ಹೋಗಿ ಇದೆಲ್ಲ ಆಗಲ್ಲ ಎನ್ನುತ್ತಾರೆ. ಬಂಡವಾಳವೇ ಇಲ್ಲದಿದ್ದರೆ ನೂರು ಸೀಟುಗಳ ಬಿಪಿಒ ಸ್ಥಾಪಿಸುವುದಾದರೂ ಹೇಗೆ ? ಬಂಡವಾಳ ಇಲ್ಲದ ಕಾರಣಕ್ಕೇ ಸರಕಾರದ ಸಹಾಯ ಕೇಳುತ್ತೇವೆ. ಎಲ್ಲ ಇದ್ದಿದ್ದರೆ ಇವರ್‍ಯಾಕೆ ಬೇಕು ? ಎಂದರು ನಿರಾಸೆಯಿಂದ.
ರಾಜ್ಯ ಸರಕಾರದ ಇತ್ತೀಚಿನ ಗ್ರಾಮೀಣ ಬಿಪಿಒ ಯೋಜನೆಯನ್ನು ಯುವಜನತೆ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಅವರಲ್ಲಿ ಎಸ್ಸೆಸ್ಸೆಲ್ಸಿ , ಪಿಯುಸಿ ಪೂರೈಸಿದವರಿದ್ದಾರೆ. ಎಂಬಿಎ, ಎಂಸಿಎ, ಬಿಸಿಎ ವಿದ್ಯಾರ್ಥಿಗಳೂ ಇದ್ದಾರೆ. ನಗರ ಮತ್ತು ಪಟ್ಟಣಗಳಲ್ಲಿನ ಸಣ್ಣ ಪುಟ್ಟ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್‌ಗಳ ಮಾಲೀಕರೂ ಇದ್ದಾರೆ. ಕಳೆದ ವಾರ ಉದ್ಯೋಗ ವಿಜಯದಲ್ಲಿ ಪ್ರಕಟವಾದ ಗ್ರಾಮೀಣ ಬಿಪಿಒ ಕುರಿತ ವರದಿಗೆ ಹಲವು ಓದುಗರು ಪ್ರತಿಕ್ರಿಯಿಸಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಹೆಚ್ಚಿನ ಮಾಹಿತಿಯನ್ನು, ಸಂಪರ್ಕ ಸಂಖ್ಯೆಯನ್ನು, ಮಾರ್ಗದರ್ಶನವನ್ನು ಬಯಸಿದ್ದಾರೆ. ಮಹತ್ವಾಕಾಂಕ್ಷೆಯ ಈ ಯೋಜನೆಯ ಅನುಷ್ಠಾನದಲ್ಲಿ ನಡೆದಿರುವ ಲೋಪಗಳನ್ನು ಕೆಲವರು ಬೊಟ್ಟು ಮಾಡಿದ್ದಾರೆ. ತುಂಬ ಚೆನ್ನಾಗಿರುವ ಈ ಯೋಜನೆಯ ಅನುಷ್ಠಾನ ಮಾತ್ರ ಅಷ್ಟೇ ಕೆಟ್ಟ ರೀತಿಯಲ್ಲಿ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಮೇಲೆ ಹೇಳಿದ್ದು ಅಂತಹದೊಂದು ಸ್ಯಾಂಪಲ್.
ಇದನ್ನೆಲ್ಲ ಕಂಡಾಗ ಒಂದಂತೂ ಸ್ಪಷ್ಟ. ಕೆಲವು ಮಾರ್ಪಾಟುಗಳೊಂದಿಗೆ ಯೋಜನೆ ಸರಿಯಾಗಿ ಕಾರ್ಯಗತವಾದ ಪಕ್ಷದಲ್ಲಿ ಇದು ಜನಪ್ರಿಯವಾಗಲಿದೆ. ಎಸ್ಸೆಸ್ಸೆಲ್ಸಿ. ಪಿಯುಸಿ ಮಾತ್ರ ಆಗಿರುವ , ಮುಂದೇನೆಂಬ ಚಿಂತೆಯಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಇದರಿಂದ ಉಪಯೋಗವಾಗಲಿದೆ.
ಅಂದಹಾಗೆ ಗ್ರಾಮೀಣ ಬಿಪಿಒ ಯೋಜನೆಯ ಬಗ್ಗೆ ಮಾಹಿತಿ ತಂತ್ರeನ ಇಲಾಖೆ, ಕಳೆದ ಜೂನ್ ತಿಂಗಳಿನಲ್ಲಿ ೨೭ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿತು. ಗ್ರಾಮೀಣ ಬಿಪಿಒ ಘಟಕವನ್ನು ತೆರೆಯಲು ಸರಕಾರದ ಸಬ್ಸಿಡಿ ನೆರವು ಕೋರಿ ೧೦೪ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ ೨೭ ಮಂದಿಯನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಈ ಸಂವಹನದಲ್ಲಿ ಒಟ್ಟು ಆರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಾಲ್ವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಅವುಗಳೆಂದರೆ-
೧. ಯೋಜನೆಯ ಪ್ರಸ್ತಾವನೆಯ ಬಗ್ಗೆ ಸಂಪೂರ್ಣ ವಿವರ. ೨. ಅಭ್ಯರ್ಥಿಯ ವಿದ್ಯಾರ್ಹತೆ/ ತಾಂತ್ರಿಕ ನೈಪುಣ್ಯತೆ. ೩. ಬಂಡವಾಳ ಹಾಕುವ ಸಾಮರ್ಥ್ಯ. ೪. ಉದ್ದೇಶಿತ ಯೋಜನೆಗೆ ಪ್ರತಿಷ್ಠಿತ ಕಂಪನಿಗಳಿಂದ ಬಿಪಿಒ ಪ್ರಸ್ತಾಪಗಳನ್ನು (ಆರ್ಡರ್‍ಸ್) ಪಡೆದಿರುವ ಬಗ್ಗೆ. ೫. ಅನುಭವ. ೬. ಈಗಾಗಲೇ ಬಿಪಿಒ ನಡೆಸುತ್ತಿದ್ದಲ್ಲಿ ಅದರ ಅನುಭವದ ವಿವರ.
ಸಂದರ್ಶನದಲ್ಲಿ ಆಯ್ಕೆಯಾಗಲು ವಿಫಲರಾದ ಬಹುತೇಕ ಮಂದಿ, ಆಯ್ಕೆಯ ಈ ಮಾನದಂಡವನ್ನು ಕಟುವಾಗಿ ಟೀಕಿಸಿದ್ದಾರೆ. ಈಗಾಗಲೇ ಬಿಪಿಒ ಘಟಕ ಹೊಂದಿರುವ ಉದ್ಯಮಿಗಳಿಗೆ ಮಾತ್ರ ಸಬ್ಸಿಡಿ ನೆರವು ಕೊಟ್ಟಿದ್ದಾರೆ. ಕನಿಷ್ಠ ೨೫ರಿಂದ ೩೦ ಲಕ್ಷ ಬಂಡವಾಳ ಹಾಕಬಲ್ಲವರಿಗೆ, ಅನುಭವಸ್ಥರಿಗೆ ಮಾತ್ರ ಸಬ್ಸಿಡಿ ನೆರವು ನೀಡಲು ಇಲಾಖೆ ಮುಂದೆ ಬಂದಿದೆ. ಆದರೆ ಹೊಸಬರಿಗೆ ಇಲ್ಲಿ ಅವಕಾಶವೇ ಇಲ್ಲ. ಇದರಿಂದ ಹಾಲಿ ಬಿಪಿಒ ಘಟಕ ನಡೆಸುತ್ತಿರುವವರಿಗೆ ಅದಕ್ಕೆ ಸಮೀಪದಲ್ಲಿ ಮತ್ತೊಂದು ಶಾಖೆ ತೆರೆಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ. ಆದರೆ ನಿಜಕ್ಕೂ ನೆರವು ಬೇಕಾಗಿರುವುದು ಹೊಸಬರಿಗೆ ಅಲ್ಲವೇ ? ಈಗಾಗಲೇ ಬಿಪಿಒ ಘಟಕ ಮತ್ತು ಬಂಡವಾಳ ಇದ್ದರೆ ಸರಕಾರದ ನೆರವು ಯಾವನಿಗೆ ಬೇಕು ? ಇದೆಲ್ಲ ಸಬ್ಸಿಡಿ ದುಡ್ಡು ನುಂಗುವ ಪ್ಲಾನು ಅಷ್ಟೇ. ಇಲ್ಲಿಯೂ ಏನಾದರೂ ಮಾಡುವ, ಆದರೆ ಬಂಡವಾಳ ಹೂಡಲು ಸಾಮರ್ಥ್ಯವಿಲ್ಲದವರನ್ನು ಹೇಳುವರಿಲ್ಲ, ಕೇಳುವರಿಲ್ಲ..ಎಂದು ಸಂದರ್ಶನದಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ನಿರಾಶೆಯಿಂದ ಗೋಳು ಹೊಯ್ದುಕೊಂಡವರಂತೆ ತೋಡಿಕೊಂಡಿದ್ದಾರೆ. ಆಯ್ಕೆಯಾಗಿರುವ ಬೆರಳೆಣಿಕೆಯಷ್ಟು ಮಂದಿ ಅಪಾರ ಸಂತಸದಲ್ಲಿದ್ದು, ತಮ್ಮ ಅರ್ಹತೆ, ಅನುಭವಕ್ಕೆ ಮನ್ನಣೆ ಸಿಕ್ಕಿದೆ. ಇಲ್ಲಿ ಯಾವುದೇ ಪ್ರಭಾವ, ಲಾಬಿ ಗೀಬಿ ನಡೆದಿಲ್ಲ , ಎಲ್ಲವೂ ಪಾರದರ್ಶಕವಾಗಿತ್ತು ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿದ್ದಾರೆ. ಹಾಗಾದರೆ ಯಾವುದನ್ನು ನಂಬುವುದು ?
ಗ್ರಾಮೀಣ ಬಿಪಿಒ ಯೋಜನೆಯ ನೀತಿ ನಿರೂಪಕರು ಬುದ್ಧಿಯೇ ಇಲ್ಲದವರಂತೆ ಎಡವಿದ್ದೇ ಇಲ್ಲಿ. ಗ್ರಾಮೀಣ ಪ್ರದೇಶದಲ್ಲಿ ಬಿಪಿಒ ಸ್ಥಾಪಿಸಲು ಬಯಸುವ ಉತ್ಸಾಹಿಗಳಿಗೆ, ಅದು ವೈಯುಕ್ತಿಕವಾಗಿರಬಹುದು, ಟ್ರಸ್ಟ್ ಆಗಿರಬಹುದು, ಆರ್ಥಿಕ ನೆರವಿನ ರೂಪದಲ್ಲಿ ೪೦ ಲಕ್ಷ ರೂ. ಸಬ್ಸಿಡಿ ಕೊಡುತ್ತೇವೆ. ಘಟಕ ಸ್ಥಾಪಿಸಿ, ನೆಲೆ ಕಂಡುಕೊಳ್ಳಿ, ನೂರು ಜನರಿಗೆ ಉದ್ಯೋಗ ಕೊಡಿ, ಕಾರ್ಮಿಕ ಕಾಯಿದೆಯನ್ವಯ ಉದ್ಯೋಗಿಗಳಿಗೆ ಸಂಬಳ ಸಾರಿಗೆ ಕೊಡಿ ಎಂದಿತ್ತು ಇಲಾಖೆ. ಆದರೆ ಬಿಪಿಒ ಸ್ಥಾಪಿಸಲು ಬಯಸುವವರಿಗೆ ಕನಿಷ್ಠ ೨೫ರಿಂದ ೩೦ ಲಕ್ಷ ಬಂಡವಾಳ ಹಾಕುವ ತಾಕತ್ತು ಇರಬೇಕು, ಈಗಾಗಲೇ ಹಲವು ವರ್ಷಗಳ ಸಮೃದ್ಧ ಅನುಭವ ಇರಬೇಕು, ಅಲ್ಲದೆ ಬೇರೆ ಬೇರೆ ಕಂಪನಿಗಳಿಂದ ಈಗಾಗಲೇ ಹೊರಗುತ್ತಿಗೆ ಒಪ್ಪಂದಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಎಂಬ ಅಂಶಗಳನ್ನು ಇಲಾಖೆ ಪ್ರಚುರಪಡಿಸಲೇ ಇಲ್ಲ.
‘ನಮ್ಮದು ಅತ್ಯಂತ ಕಟ್ಟುನಿಟ್ಟಿನ ಪದ್ಧತಿ. ಅಭ್ಯರ್ಥಿಗಳ ಅರ್ಹತೆಯನ್ನು ಅಳೆಯಲು ಅಂಕಗಳನ್ನು ಕೂಡ ನೀಡಿದ್ದೆವು. ಆದ್ದರಿಂದಲೇ ನೋಡಿ, ಬಂದಿದ್ದ ೧೦೪ ಅರ್ಜಿಗಳ ಪೈಕಿ ನಾಲ್ವರು ಮಾತ್ರ ಆಯ್ಕೆಯಾಗಿದ್ದಾರೆ ’ ಅಂತ ಅಕಾರಿಗಳು ಕೇಳಿದವರಿಗೆ ತಮ್ಮನ್ನು ಸಮರ್ಥಿಸಿಕೊಂಡರು. ಆದರೆ ಇಂತಹ ಕಟ್ಟುಪಾಡುಗಳ ಸಂಗತಿ ಅಭ್ಯರ್ಥಿಗಳಿಗೆ ಗೊತ್ತಾಗಿದ್ದು, ಬೆಂಗಳೂರಿನಲ್ಲಿ ನಡೆದ ವೈಯಕ್ತಿಕ ಸಂದರ್ಶನದಲ್ಲಿ ಮಾತ್ರ. ಅಲ್ಲಿಯ ತನಕ ಏನೊಂದೂ ಗೊತ್ತಿರಲಿಲ್ಲ. ವೈಯಕ್ತಿಕ ಸಂದರ್ಶನಕ್ಕೆ ಆಯ್ಕೆಯಾದಾಗ, ಇನ್ನೇನು ನಮ್ಮದೇ ಆದ ಬಿಪಿಒ ಘಟಕಕ್ಕೆ ಸರಕಾರದ ವತಿಯಿಂದ ೪೦ ಲಕ್ಷ ಸಬ್ಸಿಡಿ ಸಿಕ್ಕೇ ಬಿಡ್ತು ಎಂಬ ಉಮೇದಿನಲ್ಲಿದ್ದ ಆಕಾಂಕ್ಷಿಗಳ ಉತ್ಸಾಹ ಯುಎನ್‌ಐ ಬಿಲ್ಡಿಂಗ್‌ನಲ್ಲಿ ಕೆಲವೇ ಕ್ಷಣಗಳಲ್ಲಿ ಧರೆಗಿಳಿಯಿತು. ಸ್ವಾರಸ್ಯ ಏನೆಂದರೆ ಸಂದರ್ಶನ ಪೂರೈಸಿದ ನಂತರವೂ, ತಮಗೆ ಅಂಕಗಳನ್ನು ನೀಡಿದ್ದಾರೆ ಎಂಬ ಸಂಗತಿ ಕೆಲವು ಅಭ್ಯರ್ಥಿಗಳಿಗೆ ತಿಳಿದಿರಲಿಲ್ಲ. ಅಭ್ಯರ್ಥಿಯೊಬ್ಬರನ್ನು ಸಂಪರ್ಕಿಸಿದ ಪತ್ರಿಕೆ ‘ ನಿಮಗೆ ಸಂದರ್ಶನದಲ್ಲಿ ೨೧ ಅಂಕಗಳನ್ನು ನೀಡಿದ್ದರು ಎಂದು ತಿಳಿಸಿದಾಗ, ಹೌದಾ ? ನಂಗೆ ಗೊತ್ತೇ ಇರಲಿಲ್ಲ, ಎಷ್ಟರಲ್ಲಿ ಇಪ್ಪತ್ತೊಂದು ಸಾರ್ ? ’ ಎಂದರು. ‘ ಲೋ ಬಾರಯ್ಯ, ನಾವೊಂದು ಬಿಸಿನೆಸ್ ಮಾಡೋಣ, ನೀನು ಮೂವತ್ತು ಲಕ್ಷ ಹಾಕು, ನಾನು ನಲುವತ್ತು ಲಕ್ಷ ಕೊಡ್ತೀನಿ, ನೂರು ಜನ ಕೆಲಸಗಾರರಿಗೆ ಸಂಬಳ ಕೊಡು, ಮತ್ತೆ ಏನ್ ಬೇಕಾದ್ರೂ ಮಾಡು..ಕಣ್ಲಾ..ಆಗಲ್ಲಾಂದ್ರೆ ನಡಿ..’ ಅಂತ ಸಂತೆಯಲ್ಲಿ ನಿಂತು ಹೇಳಿದ ಹಾಗೆ ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು. ಹಾಗಾದರೆ ಬಿಪಿಒದ ಎಬಿಸಿಡಿ ಗೊತ್ತಿಲ್ಲದವರಿಗೆ ೪೦ ಲಕ್ಷ ರೂ. ಸಬ್ಸಿಡಿ ಕೊಟ್ಟರೆ, ನಾಳೆ ಅಂಗಡಿ ನಡೆಸಿಕೊಂಡು ಹೋಗೋ ತಾಕತ್ತು ಅವರಿಗೆ ಇರುತ್ತಾ ? ಒಂದುವೇಳೆ ಅಪಾರ್ಥರಿಗೆ ಲಕ್ಷಾಂತರ ರೂ. ನೆರವು ಕೊಟ್ಟ ನಂತರ ನಷ್ಟವಾದಲ್ಲಿ ಯೋಜನೆ ಹಳ್ಳ ಹಿಡಿಯುವುದಿಲ್ಲವೇ ? ಆದ್ದರಿಂದಲೇ ಅನುಭವ ಮತ್ತು ತಾಕತ್ತು ಇರುವವರನ್ನು ನೋಡಿ ನೆರವು ನೀಡುತ್ತೇವೆ ಎನ್ನುತ್ತಾರೆ ಅಕಾರಿಗಳು ನಮ್ಮದೇನೂ ತಪ್ಪಿಲ್ಲಪ್ಪಾ ಎನ್ನುವ ಧಾಟಿಯಲ್ಲಿ.
ನಿಜ. ಅಕಾರಿಗಳು ಹಾಗನ್ನುವುದರಲ್ಲಿ ತಪ್ಪಿಲ್ಲ. ಪುಕ್ಕಟೆಯಾಗಿ ಸಬ್ಸಿಡಿ ಕೊಡಿ ಅಂದರೆ ಯಾರು ಒಪ್ಪುತ್ತಾರೆ ? ಆದರೆ ಗ್ರಾಮೀಣ ಬಿಪಿಒ ಯೋಜನೆಯ ಸಿದ್ಧತೆಯಲ್ಲಿ ಬಿಪಿಒ ಮಾರುಕಟ್ಟೆ, ನಮ್ಮ ಗ್ರಾಮೀಣ ಭಾಗದ ವಿಸ್ತಾರ ಮತ್ತು ಸ್ಥಳದಿಂದ ಸ್ಥಳಕ್ಕೆ ಕಂಡುಬರುವ ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕ ಲಕ್ಷಣ ಮತ್ತು ವ್ಯತ್ಯಾಸಗಳನ್ನು ಪರಿಗಣಿಸದಿರುವುದು, ಇತರ ಉದ್ಯಮಗಳಿಗೆ ಅನ್ವಯಿಸುವ ಕಾಯಿದೆಗಳನ್ನೇ ಬಿಪಿಒ ಉದ್ಯಮಕ್ಕೂ ಅನ್ವಯಗೊಳಿಸಿರುವುದು ಈ ಅಕಾರಿಗಳು ಎಸಗಿದ ತಪ್ಪು. ಗ್ರಾಮೀಣ ಭಾಗದಲ್ಲಿ ಬಿಪಿಒ ಮಾದರಿಯಾಗಿ ಬೆಳೆಯಬೇಕಾದರೆ, ಅಲ್ಲಿನ ಆರ್ಥಿಕತೆಗೆ ಪುಷ್ಟಿಯನ್ನು ನೀಡಬೇಕಾದರೆ, ಅದಕ್ಕೆ ಬೇರೆಯೇ ಆದ ನೀತಿ ಮತ್ತು ವಿಧಾನ ಬೇಕೆಂಬ ಬುದ್ಧಿ ಆತುರದಲ್ಲಿ ಇವರಿಗೆ ಹೊಳೆಯಲೇ ಇಲ್ಲ. ಹೀಗಾಗಿ ನಮಗಂತೂ ಈ ಯೋಜನೆಯಲ್ಲಿ ಅವಕಾಶವೇ ಇಲ್ಲ ಎಂದು ಬಹುತೇಕ ಆಕಾಂಕ್ಷಿಗಳು ನಿರಾಶೆಗೊಳಗಾಗುವಂತಹ ಪರಿಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಯಾಕೆಂದರೆ ಈಗಿನ ನಿಯಮಾವಳಿಗಳ ಪ್ರಕಾರ ನೂರು ಸೀಟುಗಳ ಬಿಪಿಒ ಸ್ಥಾಪಿಸಬೇಕಾದರೆ ಅಭ್ಯರ್ಥಿ ಸ್ವತಃ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷವಾದರೂ ಬಂಡವಾಳ ಹೂಡಬೇಕಾಗುತ್ತದೆ. ಪ್ರತಿ ತಿಂಗಳು ನೂರು ಮಂದಿಯ ಸಂಬಳ ತಲಾ ೩,೦೦೦ ರೂ. ಎಂದರೂ ೩ ಲಕ್ಷ ರೂ. ಬೇಕು. ಕಂಪನಿ ಕಾಯಿದೆಯ ಪ್ರಕಾರ ಇತರ ಸೌಲಭ್ಯ ಒದಗಿಸಬೇಕಾದರೆ ಮತ್ತೂ ಖರ್ಚಾಗುತ್ತದೆ. ಅದಕ್ಕೂ ಮೊದಲು ಅವರಿಗೆ ತಜ್ಞರಿಂದ ತರಬೇತಿ ನೀಡಿ ಸಜ್ಜುಗೊಳಿಸುವುದು ಸುಲಭದ ಮಾತಲ್ಲ. ಹೊಸಬರಿಗೆ ಅದೊಂದು ಸವಾಲೇ. ತರಬೇತಿಗೆಂದೇ ಎರಡು ತಿಂಗಳಾದರೂ ಹಿಡಿಯುತ್ತದೆ. ಆದ್ದರಿಂದ ನೂರು ಮಂದಿಯ ಹಡಗನ್ನು ನಡೆಸಲು ದೊಡ್ಡ ಮೊತ್ತದ ಬಂಡವಾಳ, ಅನುಭವ ಬೇಕೇ ಬೇಕು. ಇಂಥ ಸಂದರ್ಭದಲ್ಲಿ ಸರಕಾರ ಏನು ಮಾಡಬಹುದು ?
ನೂರು ಸೀಟುಗಳ ಜೊತೆಗೆ ಐವತ್ತು, ಇಪ್ಪತ್ತೈದು ಹಾಗೂ ಹದಿನೈದು ಸೀಟುಗಳ ಸಣ್ಣ ಬಿಪಿಒ ಘಟಕಗಳ ಸ್ಥಾಪನೆಗೆ ಕೂಡ ಮಾಹಿತಿ ತಂತ್ರಜ್ಞಾನ ಇಲಾಖೆ ಬೆಂಬಲ ನೀಡಬೇಕು. ಇಂತಹ ಅನುಕೂಲದಿಂದ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹೊರಗುತ್ತಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಸಬ್ಸಿಡಿಯ ಮೊತ್ತ ಕೂಡ ಸೀಟುಗಳ ಸಂಖ್ಯೆಯನ್ನು ಅನುಸರಿಸಿರಲಿ. ಆಗತಾನೆ ಎಂಬಿಎ, ಬಿಸಿಎ, ಎಂಸಿಎ ಅಂತ ಕೋರ್ಸ್ ಪೂರೈಸಿದವರಿಗೆ ಏಕಾಏಕಿಯಾಗಿ ನೂರು ಸೀಟುಗಳ ಬಿಪಿಒ ಮಾಡಿಬಿಡಿ, ನಾವು ನಲ್ವತ್ತು ಲಕ್ಷ ಸಬ್ಸಿಡಿ ಕೊಡ್ತೇವೆ..ಎಂದರೆ ನೀರಿಳಿಯದ ಗಂಟಲೊಳು ಕಡುಬು ತುರುಕಿದಂತೆ ಆಗುವುದಿಲ್ಲವೇ ? ಈವತ್ತು ಉತ್ಸಾಹಿಯೊಬ್ಬ ಬ್ಯಾಂಕಿಗೆ ಹೋಗಿ, ಸಾರ್ ನಾನು ಹೊಸತಾಗಿ ಹಳ್ಳಿಯಲ್ಲಿ ಬಿಪಿಒ ಸೆಂಟರ್ ಶುರು ಮಾಡುತ್ತೇನೆ. ಒಂದಿಪ್ಪತ್ತು ಲಕ್ಷ ಸಾಲ ಕೊಡುವಿರಾ ಎಂದರೆ, ವೆರಿ ಗುಡ್ ಆಗಲಿ ಎನ್ನುವ ಮ್ಯಾನೇಜರ್ ಎಲ್ಲಿದ್ದಾರೆ ಹೇಳಿ ? ಆತನ ಎಂಬಿಎ, ಬಿಸಿಎ,ಎಂಸಿಎ ಸರ್ಟಿಫಿಕೇಟ್‌ಗಳೂ ಸಾಲಕ್ಕೆ ಖಾತರಿಯಾಗಲಾರದು. ಉದ್ದಿಮೆಯಲ್ಲಿ ಸಾಕಷ್ಟು ಅನುಭವ ಇರುವ ಮಂದಿಯೇ ಗ್ರಾಮೀಣ ಬಿಪಿಒ ವಿಷಯದಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಕಾರಣ ಏನೆಂದರೆ ನೂರು ಸೀಟುಗಳ ಬಿಪಿಒ ನಡೆಸುವುದು ಹೇಳಿದಷ್ಟು ಸುಲಭವಲ್ಲ, ಸರಕಾರ ಸಬ್ಸಿಡಿಯನ್ನೇನೋ, ಕೊಡುತ್ತದೆ. ಆದರೆ ಯಾವಾಗ ? ಆರಂಭದಲ್ಲಿ ಮೂಲಸೌಕರ್ಯ, ವರ್ಕಿಂಗ್ ಕ್ಯಾಪಿಟಲ್ ಹೂಡಿದ ಮೇಲಷ್ಟೆ ತಾನೇ ? ಅಕಸ್ಮಾತ್ ಮುಂದೆ ನಷ್ಟವಾದರೆ ತಡೆದುಕೊಳ್ಳುವುದು ಹೇಗೆ ? ಈ ಆತಂಕದಿಂದಲೇ ಹಲವಾರು ಮಂದಿ ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗುವುದರ ಬದಲಿಗೆ ಐವತ್ತು, ಇಪ್ಪತ್ತೈದು ಹಾಗೂ ಹದಿನೈದು ಸೀಟುಗಳ ಕಿರು ಘಟಕಗಳಿಗೂ ಸಬ್ಸಿಡಿ ಬೆಂಬಲ ಕೊಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಂದೆ ಬರುತ್ತಾರೆ. ರಿಸ್ಕ್ ಹಂಚಿ ಹೋಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇರೂರಿರುವ ಕಂಪನಿಗಳಿಗೆ ಎಷ್ಟೋ ಸಲ ಪ್ರಾಜೆಕ್ಟ್‌ಗಳ ಒತ್ತಡ ತೀವ್ರವಾಗಿದ್ದಾಗ, ಇಂತಹ ಸಣ್ಣ ಪುಟ್ಟ ಘಟಕಗಳಿಗೆ ಹೊರಗುತ್ತಿಗೆ ವಹಿಸಬಹುದು. ಆಗ ಎರಡೂ ಕಡೆಗೂ ಲಾಭವಾಗುತ್ತದೆ. ಅನುಭವ ಹೆಚ್ಚಾದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ರಿಸ್ಕ್ ತೆಗೆದುಕೊಳ್ಳಲು ಬಯಸದವರು ಇದ್ದದ್ದರಲ್ಲಿಯೇ ತೃಪ್ತಿಪಡಲಿ. ಗ್ರಾಮೀಣ ಬಿಪಿಒ ಈಗಷ್ಟೇ ರಾಜ್ಯದಲ್ಲಿ ಕಣ್ಣು ಬಿಡುತ್ತಿದೆ. ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ಇದೆ. ಇತರ ಉದ್ದಿಮೆಗಳಿಗೂ ಬಿಪಿಒಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕಕ್ಕೆ ಈ ಕ್ಷೇತ್ರದಲ್ಲಿ ಅಡ್ವಾಂಟೇಜ್ ಹೆಚ್ಚು. ಅದನ್ನೇಕೆ ಲಾಭವಾಗಿ ಪರಿವರ್ತಿಸಬಾರದು ?
ಈವತ್ತು ಗ್ರಾಮಾಂತರ ವಿಭಾಗದ ಶಾಲಾ ಕಾಲೇಜುಗಳಲ್ಲಿಯೂ ಕಂಪ್ಯೂಟರ್ ಕಲಿಕೆ ಸಾಮಾನ್ಯ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದವರಿಗೆ ಮೊದಲು ಕಾಣುವುದೇ ಹತ್ತಿರದ ಪಟ್ಟಣ ಅಥವಾ ನಗರದ ಬಿಪಿಒ ಸೆಂಟರ್‌ಗಳು. ಬೇಕಾದರೆ ಮೈಸೂರು, ಹುಬ್ಬಳ್ಳಿ , ಮಂಗಳೂರು ಎನ್ನದೆ ಎಲ್ಲಾದರೂ ಒಂದು ಸುತ್ತು ಬನ್ನಿ. ಬಿಪಿಒ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವ ಹುಡುಗ ಹುಡುಗಿಯರಾರು ? ಅಕ್ಕಪಕ್ಕದ ಹಳ್ಳಿಯಿಂದ ಬಂದವರೇ. ಉದಾಹರಣೆಗೆ ತೊಕ್ಕೊಟ್ಟು ಸಮೀಪದ ಮುಡಿಪಿನ ನಾರಾಯಣ, ಬೈಕಿನಲ್ಲಿ ದಿನಾ ಮಂಗಳೂರಿಗೆ ಹೋಗಿ ಬಿಪಿಒ ಸೆಂಟರ್ ಒಂದರಲ್ಲಿ ದುಡಿಯುತ್ತಾನೆ. ಅವನಿಗೆ ಪೆಟ್ರೋಲ್‌ಗೇ ಸಾಕಷ್ಟು ಖರ್ಚಾಗುತ್ತದೆ. ಸಮಯವೂ ನಷ್ಟವಾಗುತ್ತದೆ. ಒಂದೊಮ್ಮೆ ಮುಡಿಪಿನಲ್ಲಿಯೇ ಬಿಪಿಒ ಸೆಂಟರ್ ಇದ್ದಿದ್ದರೆ ಆತ ಮಂಗಳೂರಿಗೆ ಹೋಗುತ್ತಿರಲಿಲ್ಲ. ಪೆಟ್ರೋಲ್, ಸಮಯ ಎರಡೂ ಉಳಿತಾಯವಾಗುತ್ತಿತ್ತು. ಇಂಥ ನೂರಾರು ಉದಾಹರಣೆಗಳು ಸಿಗುತ್ತವೆ.
ಪ್ರತಿ ವರ್ಷ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾಗಿ ಹೊರ ಬರುತ್ತಿದ್ದಾರೆ. ಆದರೆ ಅವರ ಪೈಕಿ ಉದ್ಯೋಗಾರ್ಹತೆ ಹೊಂದಿರುವವರ ಶೇಕಡಾವಾರು ಕಡಿಮೆ. ಅವರಿಗೆ ಬಿಪಿಒಉದ್ಯಮಕ್ಕೆ ಬೇಕಾದ ವಿಶೇಷ ತರಬೇತಿಯನ್ನು ಕೊಟ್ಟು ಬೆಳೆಸುವ ಕೆಲಸ ನಡೆಯಬೇಕಿದೆ. ಹೀಗಿದ್ದರೂ, ಒಂದೊಮ್ಮೆ ಗ್ರಾಮೀಣ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟಲ್ಲಿ ಇತರರಿಗೆ ಕಮ್ಮಿಯಿಲ್ಲದಂತೆ ವೃತ್ತಿಪರತೆಯಿಂದ ಮುಂದುವರಿಯುತ್ತಾರೆ. ಅಂತಹ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಬೇಕಿದೆ.

Wednesday, 19 August 2009

ವ್ಯಾಸಂಗದ ಹವ್ಯಾಸ

ನನ್ನ ವ್ಯಾಸಂಗದ ಹವ್ಯಾಸವು ಒಂದು ವಿಹಾರ. ಕೈಗೆ ಸಿಕ್ಕಿದ ಪುಸ್ತಕವನ್ನು ತತ್ಕಾಲದ ಕುತೂಹಲದಿಂದ ಪ್ರೇರಿತನಾಗಿ ಓದುತ್ತ, ಓದುವಾಗ ಅದರ ಸವಿಯೊಳಗೆ ಮುಳುಗುತ್ತ, ಆಮೇಲೆ ಮರೆತುಬಿಡುವುದೆಂದರೆ ನನಗೆ ಬಲು ಪ್ರಿಯವಾದದ್ದು. ಓದಿದ್ದದ್ದನ್ನೆಲ್ಲ ಮರೆಯದ ಜಿಗುಟು ಸ್ಮರಣ ಶಕ್ತಿ ಎನಗಿಲ್ಲ. ಅದು ಆವಶ್ಯಕವೂ ಅಲ್ಲ. ಓದಿದ ಹಲವು ವಿಷಯಗಳಲ್ಲಿ ಕೆಲವಾದರೂ ಸುಪ್ತ ಜೀವನದೊಳಹೊಕ್ಕು ಅಲ್ಲಿ ನಿಕ್ಷಿಪ್ತವಾಗಿದ್ದು, ಅನಿರೀಕ್ಷಿತವಾಗಿ ನೀರ್ಗುಳ್ಳೆಯಂತೆ ಮೇಲಕ್ಕೆ ತೇಲಿ ಬರುವುದಷ್ಟೇ ನನಗೆ ಸಾಕು. ಹಚ್ಚನೆಯ ಹುಲ್ಲುಗಾವಲ ಹರವಿನಲ್ಲಿ ಸ್ವೇಚ್ಛೆಯಾಗಿ ತಿರುಗಾಡುತ್ತಾ, ಸೊಂಪಾಗಿ ಕಾಣುವೆಡೆಗಳಲ್ಲಿ ತಂಗಿ ಹಿಡಿ ಹುಲ್ಲನ್ನು ಕಬಳಿಸುವ ಹಸುವಿನಂತಿದೆ ನನ್ನ ವ್ಯಾಸಂಗದ ಹವ್ಯಾಸ.
ಡಿ.ಎಲ್. ನರಸಿಂಹಾಚಾರ‍್ ಬರೆದ ವ್ಯಾಸಂಗದ ಹವ್ಯಾಸ ಎಂಬ ಲೇಖನದ ಕೆಲವು ಸಾಲುಗಳಿವು. ಸ್ಪೂರ್ತಿದಾಯಕ,

Tuesday, 18 August 2009

ಅಸೂಯಾಪರ ಪತ್ರಕರ್ತೆಯರೂ ಇರುತ್ತಾರೆ...

ಪತ್ರಿಕಾಲಯದಲ್ಲಿ ಎಂಥಾ ಅಸೂಯಾಪರರು ಇದ್ದಾರೆ ಹಾಗೂ, ಅವರಲ್ಲಿ ಕೆಲವು ಮಹಿಳೆಯರೂ ಇದ್ದಾರೆ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ನನಗೆ ತಿಳಿದ ಒಂದು ಪ್ರಸಂಗ ಹೇಳ್ತೀನಿ. ಇಲ್ಲಿ ಹೆಸರು, ಪತ್ರಿಕೆ, ಯಾರು ಏನು ಅಂತ ತಿಳಿಸುವುದಿಲ್ಲ. ಆದರೆ ಈ ಘಟನೆ ನಡೆದದ್ದು ಮಾತ್ರ ನಿಜ.
ನನ್ನ ಗೆಳತಿ ಪತ್ರಿಕೋದ್ಯೋಗಿ. ಆಕೆಯ ಕಚೇರಿಯಲ್ಲಿ ನಡೆಯುವ ಕೆಲವು ವಿದ್ಯಮಾನಗಳನ್ನು ತಿಳಿಸುತ್ತಾಳೆ. ಅವಳ ವಿಭಾಗದ ಸೀನಿಯರ‍್ ಕೂಡಾ ಹೆಣ್ಣೇ.
ಇವಳಿಗೆ ಒಮ್ಮೆ ಯಾವುದೋ ಪದದ ಅರ್ಥ ಗೊತ್ತಾಗಲಿಲ್ಲ. ಇಂಥ ಸಂದರ್ಭದಲ್ಲಿ ಹತ್ತಿರ ಯಾರು ಸಿಗುತ್ತಾರೋ, ಅವರನ್ನು ಕೇಳುವುದು ವಾಡಿಕೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಹಾಗೆ ಮತ್ತೊಬ್ಬ ಹಿರಿಯರ ಬಳಿ ಕೇಳಿದಳು. ಎಲ್ಲೋ ದೂರದಲ್ಲಿ ಆಕೆಯ ಸೀನಿಯರ‍್ ಇದನ್ನು ಗಮನಿಸುತ್ತಿದ್ದವಳೇ, ಸ್ವಲ್ಪ ಹೊತ್ತು ಬಿಟ್ಟು ಬಂದು ಈಕೆಯನ್ನು ಕರೆದಳು. ಕರೆದು ಕೇಳಿದ್ದೇನು ಗೊತ್ತೇ ? ನೀನ್ಯಾಕೆ ಅವರ ಹತ್ತಿರ ಮಾತನಾಡಿದೆ ? ನನ್ನನ್ನು ಕೇಳಬಾರದಿತ್ತೇ ? ಅಂತ !
ಪಾಪ, ಈಕೆ ಏನೆನ್ನಬೇಕು ?
ನಾನು ನಿಮ್ಮ ಕುರ್ಚಿ ಕಡೆ ನೋಡಿದೆ. ನೀವಿರಲಿಲ್ಲ, ಬಲಕ್ಕೆ ತಿರುಗಿದೆ. ಮೇಡಮ್ ಇದ್ದರು. ಅವರನ್ನು ಕೇಳಿದೆ ಎಂದಳು.
ಅದಕ್ಕೆ ಆ ಸೀನಿಯರ‍್ ಅಂದಳು- ಮೇಡಂ ಮಿಸ್ ಗೈಡ್ ಮಾಡ್ತಾರೆ..!!
ಆ ಮೇಡಂಗೆ ಪತ್ರಿಕೋದ್ಯಮದಲ್ಲಿ ದಶಕಗಳಷ್ಟು ಅನುಭವ ಇತ್ತು. ಅವರಿಗೆ ಮಿಸ್ ಗೈಡ್ ಮಾಡಬೇಕಾದ ಹರಕತ್ತೇನಾದರೂ ಇತ್ತ ? ಅದೂ ಯಾವುದೋ ಒಂದು ಪದದ ಅರ್ಥ ಕೇಳಿದ್ದಕ್ಕೆ ?
ಕಾರಣವಿಷ್ಟೇ,
ಅಸೂಯೆ, ಈ ಹುಡುಗಿ ನನ್ನ ಕಪಿ ಮುಷ್ಠಿಯೊಳಗಿರಬೇಕು. ಬೆಳೆಯಕೂಡದು ಎನ್ನುವ ಅಸೂಯೆ..ಮತ್ತು ಮೂರ್ಖತನ..ಹೀಗೆ ಸಣ್ಣತನ ತೋರಿದ ಆ ಸೀನಿಯರ‍್ ಗೆ ತಾನು ಕನ್ನಡ ಸಾರಸ್ವತ ಲೋಕದ ಮಹಾನ್ ಪ್ರವರ್ತಕಿ ಎಂಬ ಹಮ್ಮಿರುವುದನ್ನು ನಾನೂ ಗಮನಿಸಿದ್ದೇನೆ. ಆಕೆಯ ಮತ್ತಷ್ಟು ವಿಚಿತ್ರ ವರ್ತನೆಗಳನ್ನು ಇನ್ನು ಯಾವತ್ತಾದರೂ ಬರೆಯುತ್ತೇನೆ.
ಅಂದಹಾಗೆ ಇದು ಯಾರನ್ನೋ ಹೀಯಾಳಿಸಲು ಬರೆದ ಲೇಖನ ಅಲ್ಲ, ಸುಳ್ಳೂ ಅಲ್ಲ.. ಇಂಥವರೂ ಇರುತ್ತಾರೆ ಎಂಬುದನ್ನು ಹೇಳಿದೆ.
ಆದರೆ ಇಂಥಾ ಅಸೂಯಾಪರ ಜರ್ನಲಿಸ್ಟುಗಳಿಗೆ ನನ್ನ ಮನವಿ ಇಷ್ಟೇ-
ಅರಳುವ ಹೂಗಳನ್ನು ತಡೆಯಲು ಯಾರಿಂದ ಸಾಧ್ಯ ? ಬೆಳಗುವ ರವಿಯನ್ನು ಮೋಡಗಳಿಂದ ಮರೆಮಾಚಲು ಎಷ್ಟು ಹೊತ್ತು ಸಾಧ್ಯ ? ಆದ್ದರಿಂದ ಬಾಯಿ ಮುಚ್ಕೊಂಡು ನಿಮ್ಮ ನಿಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ. ಸಾಧ್ಯವಾದರೆ ಎಳೆಯರನ್ನು ಸಾಧನೆಗೆ ಪ್ರೋತ್ಸಾಹಿಸಿ, ಇಲ್ಲವಾದಲ್ಲಿ ಅವರು ಬೆಳೆಯುವುದನ್ನು ಕಂಡು ಆನಂದಿಸುವುದನ್ನು ಕಲಿತುಕೊಳ್ಳಿ..

ಆತ್ಮ ವಿಶ್ವಾಸ ಕಳೆದುಕೊಳ್ಳದಿರಿ, ಯಾಕೆಂದರೆ...

ರಾಜೇಶ್‌ ಮಾಯಣ್ಣ ಎಂಬ ಮಿತ್ರ ಸಾಫ್ಟ್ ವೇರ‍್ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಜನತೆಗೆ ಸಹಾಯ ಮಾಡಲು ಉತ್ಸಾಹದಿಂದ ತಮ್ಮದೇ ನೆಟ್‌ ವರ್ಕ ಸ್ಥಾಪಿಸಿದ್ದಾರೆ. ಅವರು ಇತ್ತೀಚೆಗೆ ಕಳಿಸಿದ ಈ ಮೇಲ್ ನಲ್ಲಿ ತಿಳಿಸಿದ ಸಂಗತಿ ಅಚ್ಚರಿಗೆ ಕಾರಣವಾಯಿತು.
ಆದದ್ದಷ್ಟು-
ರಾಜೇಶ್ ಮಾಯಣ್ಣ ಇತ್ತೀಚೆಗೆ ೩೦ ಮಂದಿಯನ್ನು ( ೨೦೦೮ ಮತ್ತು ೨೦೦೯ರಲ್ಲಿ ಪಾಸಾದವರನ್ನು) ತಮಗೆ ತಿಳಿದಿದ್ದ ಸಂಸ್ಥೆಯೊಂದಕ್ಕೆ ರೆಫರ‍್ ಮಾಡಿದರು. ಆದರೆ ಮೂವರು ಮಾತ್ರ ಆಯ್ಕೆಯಾಗಿದ್ದರು. ಕನಿಷ್ಠ ೨೫ ಮಂದಿಗೆ ಕೆಲಸ ಸಿಗಬಹುದು ಎಂದು ಮಾಯಣ್ಣ ಭಾವಿಸಿದ್ದರು.
ಇಂಟರ‍್ ವ್ಯೂ ಮಾಡಿದ್ದ ಸಮಿತಿಯಿಂದ ಇವರಿಗೆ ಉತ್ತರ ಬಂತು- ಅಭ್ಯರ್ಥಿಗಳಲ್ಲಿ ಹಲವಾರು ಮಂದಿಗೆ ಉತ್ತಮ ತಾಂತ್ರಿಕ ನೈಪುಣ್ಯತೆ ಇದ್ದರೂ, ವಿಷಯದ ಮೇಲೆ ಆತ್ಮ ವಿಶ್ವಾಸದ ಕೊರತೆ ಇತ್ತು. ಆದ್ದರಿಂದ ಅವರವರ ವಿಷಯದಲ್ಲಿ ಅಪ್ ಡೇಟೆಡ್‌ ಮಾಡಿ ಆತ್ಮವಿಶ್ವಾಸ ತುಂಬಿ ಕಳಿಸಿ..ಇದರಿಂದ ಕೆಲಸಕ್ಕೆ ಸಹಾಯ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಆದ್ದರಿಂದ ಮಿತ್ರರೇ,
ಯಾವತ್ತಿಗೂ ಕಲಿತ ವಿಷಯದಲ್ಲಿ ನಿಪುಣರಾಗುವುದರ ಜತೆಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ. ಕೆಲವು ವಿಷಯಗಳಲ್ಲಿ ಪರಿಣತಿ ಸಾಕಷ್ಟು ಇಲ್ಲದಿದ್ದರೂ, ಸರಿಯೇ, ಆತ್ಮ ವಿಶ್ವಾಸವನ್ನು ಮಾತ್ರ ಯಾವುದೇ ಕ್ಷಣದಲ್ಲಿ ಬಿಟ್ಟುಕೊಳ್ಳದಿರಿ..

Monday, 17 August 2009

ಗ್ರಾಮೀಣ ಬಿಪಿಒ ಓಕೆ, ೩,೦೦೦ ರೂ. ಸಂಬಳ ಸಾಕೇ ?

ರಾಜ್ಯದಲ್ಲಿ ಗ್ರಾಮೀಣ ಬಿಪಿಒಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ರಾಜ್ಯದ ಮೊಟ್ಟ ಮೊದಲ ಗ್ರಾಮೀಣ ಬಿಪಿಒ ಆರಂಭವಾಗಿದೆ. ಹೀಗಿದ್ದರೂ ಕೆಲವು ಪತ್ರಿಕೆಗಳಲ್ಲಿ ದೇಶದ ಮೊಟ್ಟ ಮೊದಲನೆಯ ಗ್ರಾಮೀಣ ಬಿಪಿಒ ಎಂದು ವರದಿ ಪ್ರಕಟವಾಗಿದೆ. ಆದರೆ ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಿಪಿಒ ಘಟಕಗಳಿವೆ. ತರಾತುರಿಯಲ್ಲಿ ವರದಿ ಪ್ರಕಟಿಸಿದರೆ ಇಂಥ ತಪ್ಪು ಮಾಹಿತಿಗಳೇ ರವಾನೆಯಾಗುತ್ತವೆ. ಅದಿರಲಿ, ಬಾಬುರಾಯನ ಕೊಪ್ಪಲಿನಲ್ಲಿ ಸರಕಾರದ ೪೦ ಲಕ್ಷ ರೂ ಸಬ್ಸಿಡಿ ನೆರವಿನೊಂದಿಗೆ ಗ್ರಾಮೀಣ ಬಿಪಿಒ ಸ್ಥಾಪಿಸಿರುವ ಸಂಸ್ಥೆಯ ಪ್ರತಿನಿಧಿಯ ಜತೆ ನಿನ್ನೆ ದೂರವಾಣಿ ಮೂಲಕ ಮಾತನಾಡಿದ್ದೆ. ಆತ ಒಂದಕ್ಷರ ಕನ್ನಡ ಮಾತನಾಡುತ್ತಿರಲಿಲ್ಲ. ಇಂಗ್ಲಿಷ್‌ ನಲ್ಲೇ ಮಾತನಾಡಿದ. ಹೆಚ್ಚಿಗೆ ಮಾಹಿತಿಯೂ ಆ ಭೂಪನಿಗೆ ಗೊತ್ತಿರಲಿಲ್ಲ. ನೀವು ಕೋರಮಂಗಲದ ಕಚೇರಿಗೆ ಹೋಗಿ, ಅಲ್ಲಿ ಮಾಹಿತಿ ಸಿಗುತ್ತೆ ಎಂದ. ಹೋಗಲಿ, ಹೇಗಿದೆ ಡಿಮ್ಯಾಂಡು ? ಎಂದೆ. ಅದಕ್ಕೆ ಆತ ಹೇಳಿದ- ತುಂಬ ಬೇಡಿಕೆ ಇಲ್ಲಿದೆ. ಇದೇ ಊರಿನಲ್ಲಿ ಇನ್ನೆರಡು ಯೂನಿಟ್‌ ತೆರೆದರೂ ನಡೆಯುತ್ತೆ ಎಂದ.
ಆದರೆ ಈ ಘಟಕದಲ್ಲಿ ತಿಂಗಳಿಗೆ ೩ರಿಂದ ಮೂರೂವರೆ ಸಾವಿರ ರೂ. ಸಂಬಳ ಕೊಡುವ ಭರವಸೆ ನೀಡಿದ್ದಾರಂತೆ ಎಂದು ನನಗೆ ಬೇರೆಯವರಿಂದ ಗೊತ್ತಾಗಿದೆ.
ಇದು ಕಡಿಮೆಯಾಯಿತು ಎಂದು ನನಗನ್ನಿಸಿತು...ಸರಕಾರದಿಂದ ಇಷ್ಟೆಲ್ಲ ನೆರವು ಪಡೆದು ಮೂರು ಸಾವಿರ ಸಂಬಳ ಕೊಡೋದಾ ?

Sunday, 16 August 2009

ರಾಗಿ ಬೆಳೆದಾತನ ಮೂರಂತಸ್ತಿನ ಮನೆ ಮತ್ತು ಕಾರಣ

ಇತ್ತೀಚೆಗೆ ರಾಮೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪನವರ ಮನೆಗೆ ಹೋಗಿದ್ದೆ. ಗುಲಗುಂಜನಹಳ್ಳಿಯ ಬಡವರ ಗುಡಿಸಲು ಹಾಗೂ ಹೆಂಚಿನ ಮನೆಗಳನ್ನು ದಾಟುತ್ತ ಹೋದಂತೆ ಇಡೀ ಊರಿಗೆ ಅವರ ಮೂರು ಅಂತಸ್ತಿನ ಬಂಗಲೆ ಕಾಣುತ್ತದೆ. ಅಂಥ ಬಂಗಲೆಯಲ್ಲಿ ಅವರು ಮತ್ತು ಪತ್ನಿ ಇದ್ದರು. ಮನೆಯ ಎದುರು ಲಾನ್ ಬೆಳೆಸಿದ್ದರು. ಆಳೆತ್ತರದ ಕಂಪೌಂಡ್ ಇತ್ತು. ಬೃಹತ್ ಗೇಟು ಇತ್ತು. ಅದನ್ನು ದೂಡಿ ಸರಿದಾಗ ಅಧ್ಯಕ್ಷರ ಪತ್ನಿ ಅಂಗಳದಲ್ಲಿದ್ದರು. ಅವರಿಗೆ ನನ್ನ ಪರಿಚಯ ಮಾಡಿಕೊಂಡೆ. ಅಧ್ಯಕ್ಷರನ್ನು ಮಾತನಾಡಿಸಬೇಕಿತ್ತು ಎಂದರು. ಅವರಿಗೆ ಮೈಯಲ್ಲಿ ಉಶಾರಿಲ್ಲ ಎಂದರು. ಸರಿ, ಹಾಗಾದರೆ ಪರ‍್ವಾಗಿಲ್ಲ, ಅವರ ಫೋನ್ ನಂಬರ‍್ ಕೊಡಿ, ಇನ್ನೊಮ್ಮೆ ಮಾತನಾಡುತ್ತೇನೆ ಎಂದೆ. ಅಷ್ಟರಲ್ಲಿ ಹನುಮಂತಪ್ಪನವರೇ ಜಗಲಿಗೆ ಬಂದು ಮಂಚದಲ್ಲಿ ಕುಳಿತರು. ನೀವೂ ಕುಳ್ಳಿರಿ ಎಂದು ಇಬ್ಬರೂ ಹೇಳಿರಲಿಲ್ಲ. ನಾನೂ ಅಂತದ್ದನ್ನೆಲ್ಲ ನಿರೀಕ್ಷಿಸುವುದಿಲ್ಲ. ಆದರೆ ಸಾಮಾನ್ಯವಾಗಿ ಹಳ್ಳಿ ಕಡೆ ಯಾರೇ ಮನೆಗೆ ಬಂದರೂ ಕನಿಷ್ಠ ಕುಳಿತುಕೊಳ್ಳಲು ಹೇಳಿ, ತಾವೂ ಕುಳಿತುಕೊಂಡು ಮಾತಿಗೆ ಶುರು ಹಚ್ಚುತ್ತಾರೆ. ಆದರೆ ಇಲ್ಲಿ ನಾನು ನಿಂತೇ ಮಾತನಾಡಿದೆ. ತೂಕಡಿಕೆಯಲ್ಲಿದ್ದಂತೆ ಮಾತನಾಡಿದ ಅಧ್ಯಕ್ಷರಿಗೆ ನೀವೇನು ಮಾಡುತ್ತಿದ್ದೀರಿ ? ಎಂದೆ. ರಾಗಿ ಬೆಳೆಯುತ್ತಿದ್ದೇನೆ ಎಂದರು. ರಾಗಿ ಬೆಳೆಯುವವರಿಗೆ ಮೂರಂತಸ್ತಿನ ಬಂಗಲೆ ಕಟ್ಟಲು ಆಗುತ್ತಾ ಅಂತ ಆಶ್ಚರ್ಯವಾಯಿತು. ಅವರೊಡನೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.
ಅವರಿಗೆ ನಮಸ್ಕರಿಸಿ ಹೊರಬಿದ್ದೆ. ಸ್ಥಳೀಯ ಗ್ರಾಮಸ್ಥರೊಡನೆ ಕೇಳಿದೆ. ರಾಗಿ ಬೆಳೆದು ಮೂರಂತಸ್ತಿನ ಬಂಗಲೆ ಕಟ್ಟಿದ್ದಾರೆ ನಿಮ್ಮ ಅಧ್ಯಕ್ಷರು. ನಿಮಗೇಕೆ ಆಗೋದಿಲ್ಲ ?
ಅದಕ್ಕೆ ಅವರೆಂದರು- ನಮ್ಮ ಅಧ್ಯಕ್ಷರಿಗೆ ಕ್ವಾರಿ ಇದೆ. ( ಗಣಿ) ಜತೆಗೆ ರಾಜಕೀಯ.
ಇನ್ನೇನು ಬೇಕು ಹೇಳಿ...

Saturday, 15 August 2009

ಹಳ್ಳಿಗಳನ್ನು ಕಾಡುವ ಕ್ರಿಮಿನಲ್ ಗಳ ಬಗ್ಗೆ

ಸ್ವಾಮಿ ರಂಗನಾಥಾನಂದರು ಹೇಳಿರುವ ಈ ಮಾತು ಸದಾ ನನ್ನ ಮನಸ್ಸನ್ನು ಕಾಡುತ್ತಿರುತ್ತಿದೆ. ಅವರು ಹೇಳ್ತಾರೆ-
ನಾವು ಶೈಕ್ಷಣಿಕವಾಗಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ನಮ್ಮ ಗ್ರಾಮೀಣ ಬದುಕನ್ನು-ಅದರಲ್ಲಿ ಮೂಲನಿವಾಸಿ ಪ್ರದೇಶಗಳೂ ಸೇರಿದಂತೆ, ಸಮಗ್ರವಾಗಿ ಪರಿವರ್ತಿಸದಿದ್ದರೆ, ನಮ್ಮ ರಾಷ್ಟ್ರೀಯ ಅಭಿವೃದ್ಧಿ, ಶಕ್ತಿ, ಸಾಮರ್ಥ್ಯಗಳನ್ನು ನಾವು ಎಂದಿಗೂ ಸಾಧಿಸಲಾರೆವು.
ನಮ್ಮನ್ನು ಪ್ರಭಾವಿಸುವ ಎಲ್ಲಾ ಸಮಸ್ಯೆಗಳು, ನಗರ ಪ್ರದೇಶದ ಸಮಸ್ಯೆಗಳು ಕೂಡ, ಅಭಿವೃದ್ಧಿಯಾಗದ ಗ್ರಾಮೀಣ ಕ್ಷೇತ್ರದ ಸ್ಥಿತಿಗತಿಗಳಿಂದಲೇ ಉದ್ಭವಿಸಿವೆ. ನಮ್ಮ ಪಟ್ಟಣಗಳ, ನಗರಗಳ ಅಭಿವೃದ್ಧಿ, ಸುಧಾರಣೆಗಳನ್ನು ಸಾಧಿಸುವುದಕ್ಕೆ ಜತೆಜತೆಯಾಗಿ ಅಥವಾ ಪೂರ್ವಭಾವಿಯಾಗಿ ನಾವು ನಮ್ಮ ವಿಶಾಲ ಗ್ರಾಮೀಣ ಜನತೆಯ ಸ್ಥಿತಿಯನ್ನು ಸುಧಾರಿಸಲು ನಮ್ಮ ಗಮನವೆಲ್ಲವನ್ನೂ ಅದರ ಮೇಲೆ ಕೇಂದ್ರೀಕರಿಸಬೇಕು.
ನಾವು ನಮ್ಮ ಗ್ರಾಮೀಣ ಅಭಿವೃದ್ಧಿಯನ್ನು ಉಪೇಕ್ಷಿಸುತ್ತಿರುವುದರಿಂದ ಅದು ನಮ್ಮ ನಗರಪ್ರದೇಶಗಳ ಮೇಲೆ ಅನಪೇಕ್ಷಣೀಯ ಪ್ರಭಾವ ಬೀರುತ್ತಿದೆ. ನಾವು ಇಲ್ಲಿಯವರೆಗೆ ಯಾವ ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರೀಕರಿಸಿದ್ದೇವೆಯೋ ಆ ಕ್ಷೇತ್ರಗಳ ಏಳಿಗೆಯಿಂದ ಕೇವಲ ನಮ್ಮ ಗ್ರಾಮ ಮತ್ತು ಸಮಾಜದ ಪ್ರತಿಷ್ಠಿತರಿಗೆ, ಗಣ್ಯರಿಗೆ ಮಾತ್ರ ಅಭಿವೃದ್ಧಿಯ ಫಲಾನುಭ ಲಭ್ಯವಾಗಿದೆ...
ಎಂಥಾ ಸತ್ಯವಾದ ಮಾತಿದು. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಹಳ್ಳಿಗಳಲ್ಲೂ ಒಳಹೊಕ್ಕು ನೋಡಿದರೆ, ವಿಚಾರಿಸಿದರೆ ಕಂಡು ಬರುವ ನಗ್ನ ಸತ್ಯವಿದು. ಶಾಂತಿ ಪ್ರಿಯತೆ, ಸಮಾನತೆ ನೆಲಸಿರುವ ಗಂಧದ ಬೀಡಿನಲ್ಲಿ ಕೂಡ ಇಂಥ ಅಸಮಾನತೆ, ಕ್ರೌರ್ಯ, ಸ್ವಾರ್ಥ, ಹಳ್ಳಿಗಳನ್ನು ವಿನಾಶ ಮಾಡುತ್ತಿರುವುದನ್ನು ಕಂಡಾಗ ಹೊಟ್ಟೆಯಲ್ಲಿ ಬೆಂಕಿ ಏಳುತ್ತದೆ.
ಇತ್ತೀಚೆಗೆ ಹಳ್ಳಿಯೊಂದರಲ್ಲಿ ಅಲ್ಲಿನ ಬಡವರ ಸಮಸ್ಯೆಯನ್ನು ಆಲಿಸಲು, ವಿಚಾರಿಸಲು ಯತ್ನಿಸಿದಾಗ ಏಕ ನಾಥನೆಂಬ ( ಹೆಸರು ಬದಲಿಸಿದೆ) ಕ್ರಿಮಿನಲ್‌ ನನ್ನು ಭೇಟಿಯಾಗಿದ್ದೆ. ಕಂಡರಿಯದ ಸಮಾಜಸುಧಾರಕನಂತೆ ಫೋಸು ಕೊಡುತ್ತಿದ್ದ ಈತನ ಕುಟುಂಬಕ್ಕೆ ಆ ಪುಟ್ಟ ಹಳ್ಳಿಯಲ್ಲಿ ನೂರಿಪ್ಪತ್ತು ಎಕರೆ ಜಮೀನಿತ್ತು. ಅದೂ ಬೆಂಗಳೂರಿಗೆ ಅತ್ಯಂತ ಸಮೀಪದ ಗ್ರಾಮ. ಒಂದೆಕರೆ ಖಾಲಿ ಭೂಮಿಗೇ ೪೦ರಿಂದ ೫೦-೬೦ ಲಕ್ಷ ರೂ. ಬೆಲೆ ಬರಬಹುದು. ಈತನ ಪುಂಡಾಟಿಕೆಯ ಬಗ್ಗೆ ಊರೆಲ್ಲ ಕಥೆಗಳಿವೆ. ಕಾರ್ಪೊರೇಷನ್‌ ಕಸದ ಲಾರಿಗಳು ಈತನ ಮೂವತ್ತೆಕರೆ ಜಾಗದಲ್ಲಿ ಕಸದ ಬೆಟ್ಟವನ್ನೇ ಸೃಷ್ಟಿಸಿವೆ. ಅದಕ್ಕೆ ವಿಶ್ವನಾಥ ಬೆಂಕಿ ಇಡುತ್ತಾನೆ. ಒಂದು ಲೋಡು ಕಸಕ್ಕೆ ೪೦೦ ರೂ. ಸಿಗುತ್ತದೆಯಂತೆ. ( ಆದರೆ ಆತ ಅದನ್ನು ಒಪ್ಪುವುದಿಲ್ಲ. ನಾನೇ ಲಾರಿ ಚಾಲಕರಿಗೆ ಖರ್ಚಿಗೆ ನೂರು ರೂ. ಕೊಡುತ್ತೇನೆ ಅನ್ನುತ್ತಾನೆ ಈ ಭೂಪ. ) ಆದರೆ ಊರಿಡೀ ಗಾಳಿಯಲ್ಲಿ ದುರ್ನಾತ ಮತ್ತು ನೊಣಗಳ ಸಾಮ್ರಾಜ್ಯ ಹಬ್ಬಿರುವುದಂತೂ ನಿಜ. ಮನೆಮನೆಯನ್ನೂ ಈ ನೊಣಗಳು ಬಿಡುತ್ತಿಲ್ಲ. ಗ್ರಾಮಸ್ಥರಂತೂ ಅಕ್ಷರಶಃ ರೋಸಿ ಹೋಗಿದ್ದಾರೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಿಲ್ಲ...ಊರಿನವರ ವಿರೋಧವನ್ನು ಲೆಕ್ಕಿಸದೆ ತಾನೇ ಖುದ್ದಾಗಿ ಕಾವಲಿಗೆ ನಿಂತು ಕಸದ ಲಾರಿಗಳನ್ನು ಬರ ಮಾಡಿಕೊಳ್ಳುತ್ತಾನೆ.
ಆತ ಹೀಗೆ ಕಥೆ ಹೇಳುತ್ತಾನೆ- ಕಸ ಹಾಕುವ ಜಾಗದಲ್ಲಿ ದೊಡ್ಡ ಹೊಂಡ ಇದೆ. ಕಸದಿಂದ ಹೊಂಡ ತುಂಬುತ್ತಿದೆ. ಅದರ ಮೇಲೆ ಮಣ್ಣಿನ ಪದರ ನಿರ್ಮಿಸುತ್ತೇನೆ. ಕಾಂಪೋಸ್ಟ್‌ ಗೊಬ್ಬರವಾಗುತ್ತದೆ. ಅದರಲ್ಲಿ ಗೊಬ್ಬರದ ಹುಳ ಹುಟ್ಟುತ್ತದೆ..
ಅಲ್ಲಾ, ಇಪ್ಪತ್ತನಾಲ್ಕು ಗಂಟೆಯೂ ಅಲ್ಲಿ ಹೊಗೆ ಏಳುತ್ತದೆ. ಕಿಚ್ಚು ಆರುವುದಿಲ್ಲ. ಸುತ್ತುಮುತ್ತಲ ಪರಿಸರ ನೊಣ, ಹೊಗೆ, ಧೂಳು ಮತ್ತು ಕಿಚ್ಚಿನಲ್ಲಿ ಸುಡುತ್ತದೆ. ಹೀಗಿರುವಾಗ ಅಲ್ಲಿ ಗೊಬ್ಬರದ ಹುಳು ಬದುಕುತ್ತದಾ ? ಛೀ ಧಿಕ್ಕಾರವಿರಲಿ, ನಾಥನಂತಹ ಕ್ರಿಮಿನಲ್‌ ಗಳಿಗೆ....

Thursday, 13 August 2009

ಸ್ವಾಮಿ ರಂಗನಾಥಾನಂದ ಬೋಧಿಸಿದ ಶಾಶ್ವತ ಮೌಲ್ಯಗಳು

ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದ ಅವರ ಪರಿವರ್ತನಶೀಲ ಸಮಾಜಕ್ಕೆ ಶಾಶ್ವತ ಮೌಲ್ಯಗಳು ಕೃತಿ ಶ್ರೇಣಿಯಲ್ಲಿರುವ ವಿಚಾರಗಳು ಚಿಂತನ ಯೋಗ್ಯ. ಸಮಾಜ ಮುಖಿ. ಸ್ಯಾಂಪಲ್‌ ಇಲ್ಲಿದೆ..
ಭಾರತದಲ್ಲಿ ಹಣ ಸಂಪಾದನೆ ಮಾಡುವ ಸಾಮರ್ಥ್ಯವನ್ನು ಬೇಕಾದ ಹಾಗೆ ಪಡೆದಿರುವ ಅದೆಷ್ಟೋ ಬಗೆಯ ಜನರಿದ್ದಾರೆ. ಆದರೆ ಇಲ್ಲಿಯವರೆಗೆ ಖರ್ಚು ಮಾಡಿರುವ ರೀತಿ ಮಾತ್ರ ಅನಾರೋಗ್ಯಕರ. ಉದ್ದೇಶರಹಿತ ಬದುಕಿಗೆ, ಊಳಿಗಗಕ್ಕೋ, ಮಕ್ಕಳ ಡಾಂಭಿಕ ಮದುವೆಗಳಿಗೋ ವಿನಿಯೋಗಿಸಿದವರಿದ್ದಾರೆ.ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ವಿಕೃತ ಪರಿಣಾಮವೇ ಉಂಟಾಯಿತು. ಆದರೆ ಇಂದು ಕೆಲವರಾದರೂ " ನಾವು ನಮ್ಮ ಹಣ, ನಮ್ಮ ಅರಿವು, ನಮ್ಮ ಪ್ರತಿಭೆಗಳನ್ನು ಮಾನವ ಅಭಿವೃದ್ಧಿಗಾಗಿ ಮುಡಿಪಾಗಿಡೋಣ, ಪ್ರಜಾಸತ್ತೆಯ ನಾಗರಿಕರಾದ ನಮಗೆ ದೇಶದ ಹಿಂದುಳಿದ, ಬಡವರ ಮೇಲಣ ಜವಾಬ್ದಾರಿ ಇದೆ, ಅವರೂ ನಮ್ಮವರೇ " ಎಂಬ ರೀತಿಯ ಆರೋಗ್ಯಕರ ಚಿಂತನೆಯಿಂದ ಪ್ರಚೋದಿತರಾಗುತ್ತಿದ್ದಾರೆ.
ನಾವು ನಮ್ಮ ಗ್ರಾಮೀಣ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿರುವುದರಿಂದ ಅದು ನಮ್ಮ ನಗರಪ್ರದೇಶಗಳ ಮೇಲೆ ಅನಪೇಕ್ಷಣೀಯ ಪ್ರಭಾವ ಬೀರುತ್ತದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಆರ್ಥಿಕ ಅವಕಾಶಗಳು ಇರುತ್ತಿದ್ದರೆ , ಶೈಕ್ಷಣಿಕ ಮುನ್ನಡೆಯಾಗಿರುತ್ತಿದ್ದರೆ ನಗರಗಳತ್ತ ಧಾವಿಸಿ ಕೊಳಚೆ ಪ್ರದೇಶಗಳಲ್ಲಿ ಜನ ಮಬ್ಬುಗವಿದ ಜೀವನ ಸಾಗಿಸಲು ಆತುರರಾಗಿರುತ್ತಿರಲಿಲ್ಲ.

Wednesday, 12 August 2009

ಪತ್ರಕರ್ತರ ಸಣ್ಣತನದ ಬಗ್ಗೆ...


ನಾನು ಪತ್ರಿಕಾ ರಂಗಕ್ಕೆ ಸೇರಿದ ಸಂದರ್ಭ. ಮಿತ್ರನೊಬ್ಬ ಹೇಳಿದ್ದ ಮಾತು ಈಗಲೂ ನೆನಪಿನಲ್ಲಿದೆ. " ಇಲ್ಲಿ ಯಾರನ್ನೂ ನಂಬ ಬೇಡ, ನನ್ನನ್ನೂ ಕೂಡಾ..." ಅಂತ ಹೇಳಿದ್ದ !
ಈಗ ನಾನು ಅವನನ್ನು ನಂಬುತ್ತಿಲ್ಲ. ಆದರೆ ನಾನು ನಂಬುವ ಪತ್ರಕರ್ತರು ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ.
ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ ವೃತ್ತಿ ಮಾತ್ಸರ್ಯ, ಸಣ್ಣತನ, ದೊಡ್ಡತನ, ಕಾಲೆಳೆಯುವುದು, ಕೊಚ್ಚಿಕೊಳ್ಳುವುದು ಇಲ್ಲಿ ಕೂಡ ಇದೆ. ಬರೆಯುವುದು ಒಂದು, ಮಾಡುವುದು ಮತ್ತೊಂದು ಇಲ್ಲಿ ಕಂಡುಬರುತ್ತದೆ..ಜತೆಗೆ ನಿಜಕ್ಕೂ ಸಹಾಯ ಮಾಡುವವರೂ ಇದ್ದಾರೆ ಅನ್ನಿ. ಆದರೆ ಅಂತಹ ಮಹಾನುಭಾವರ ಸಂಖ್ಯೆ ಮಾತ್ರ ಕಮ್ಮಿ.
ಮತ್ತೊಬ್ಬರಿಗೆ ವಿಮರ್ಶೆಗೆ ಅಂತ ಪ್ರತಿ ವಾರ ಹತ್ತಾರು ಪುಸ್ತಕಗಳು ಸಿಗುತ್ತವೆ. ಆದರೆ ಯಾವೊಬ್ಬ ಸಹೋದ್ಯೋಗಿಗೂ ಅವುಗಳನ್ನು ಓದಲು ಅವರು ಬಿಡುವುದಿಲ್ಲ. ಸ್ವತಃ ಅವರ ವಿಭಾಗದ ಸಹವರ್ತಿಗಳಿಗೂ ಕೊಡುವುದಿಲ್ಲ. ಈ ಬಗ್ಗೆ ಕೇಳಿದರೆ, ಪುಸ್ತಕ ತೆಗೆದುಕೊಂಡು ಹೋಗುವವರು ವಾಪಸ್‌ ಕೊಡುವುದಿಲ್ಲ, ಕಳ್ಳತನ ಮಾಡುತ್ತಾರೆ ಎಂಬ ಉತ್ತರ ಕಾದಿರುತ್ತದೆ.
ಇತ್ತೀಚೆಗೆ ಮತ್ತೊಂದು ಸಂಗತಿ ಹೇಳಿದರು. ನಾನು ಪರೀಕ್ಷಿಸುವ ಸಲುವಾಗಿ ಕೆಲವು ಅಷ್ಟೇನೂ ಮಹತ್ವವಲ್ಲದ ಪುಸ್ತಕಗಳನ್ನು ಹಾಗೆಯೇ ಬಿಟ್ಟು ಹೋಗುತ್ತೇನೆ. ಮರುದಿನವೇ ಅವು ನಾಪತ್ತೆಯಾಗುತ್ತವೆ..
ಹೀಗಾಗಿ ಏನಾಗಿದೆ ಎಂದರೆ ಪುಸ್ತಕಗಳೆಲ್ಲ ಬೀಗ ಹಾಕಿದ ಕಪಾಟುಗಳಲ್ಲಿ ಸುಭದ್ರವಾಗಿರುತ್ತವೆ. ಯಾರಿಗೂ ಆ ಜ್ಞಾನ ಭಂಡಾರ ಸಿಗುವುದಿಲ್ಲ. ಓದುವುದಿದ್ದರೆ ಅವರೊಬ್ಬರೇ !
ನಿಜ ಸಂಗತಿ ಏನೆಂದರೆ ಅವರಿಗೆ ಮತ್ತೊಬ್ಬರು ಓದುವುದನ್ನು ಕಂಡರಾಗುವುದಿಲ್ಲ. ಓದಿ ಜಾಣರಾಗಿ ಬಿಟ್ಟರೆ ಎಂಬ ಆತಂಕ ! ಪುಸ್ತಕ ಕಳ್ಳತನ, ಪರೀಕ್ಷೆ ಎಲ್ಲ ಕುಂಟು ನೆಪವಷ್ಟೇ.
ಮತ್ತೊಬ್ಬರಿದ್ದಾರೆ, ಅವರ ಹತ್ತಿರ ಯಾರದ್ದಾದರೂ ಗಣ್ಯರ ಫೋನ್‌ ನಂಬರ್‌ ಕೇಳಿದರೆ, ನಯವಾಗಿ ತಪ್ಪಿಸಿಕೊಳ್ಳುತ್ತಾರೆ. ಇವನೇದಾರೂ ನನಗೇ ಗೊತ್ತಿಲ್ಲದೆ ದೊಡ್ಡ ಸ್ಟೋರಿ ಮಾಡಿದರೆ ? ಎಂಬ ಆತಂಕ. ಇಂತಹ ಸಣ್ಣತನ, ದಡ್ಡತನ ಮತ್ತು ತಮಾಷಿಗಳಿಗೆ ಲೆಕ್ಕವೇ ಸಿಗದು. ಮುಂದೆ ಆ ಬಗ್ಗೆ ಬರೆಯುತ್ತೇನೆ.

ಬೆಂಗಳೂರಿಗೆ ಬಂದ ಹಳ್ಳಿಮುಖ

ಬೆಂಗಳೂರು ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಕೃಷಿಯಲ್ಲಿ ಹಣ ಮತ್ತು ನೆಮ್ಮದಿಯನ್ನು ಕಾಣದ ರೈತರು ತಮ್ಮ ಮಕ್ಕಳನ್ನು ಸಿಟಿಗೆ ಹೋಗಿರೆಂದು ಖುದ್ದು ಒತ್ತಾಯಿಸುತ್ತಿದ್ದಾರೆ. ಇಲ್ಲಿ ನಾವು ಪಟ್ಟ ಕಷ್ಟವೇ ಸಾಕು. ನೀವಾದರೂ ಉದ್ಧಾರವಾಗಿ ಎನ್ನುವುದು ಹೆತ್ತವರ ಬಯಕೆ. ಇಂತಹ ಮನೋಭಾವ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳ ಸುತ್ತುಮುತ್ತಲಿನ ಹಳ್ಳಿಗಳಲ್ಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎ, ಬಿಕಾಂ ನಂತರ ಬೆಂಗಳೂರಿನ ಬಸ್ಸು ಹತ್ತಿ ಹೋಗುವ ಹುಡುಗರಿಗೆ ಕೆಲಸವೇನೋ ಸುಲಭವಾಗಿ ಸಿಗುತ್ತದೆ. ಹಾಗಾದರೆ ಅಲ್ಲಿಯಾದರೂ ನೆಲೆ ಕಂಡುಕೊಳ್ಳುತ್ತಾರಾ ?
ನೋಡಿ, ಬೆಂಗಳೂರಿನ ಸುತ್ತಮುತ್ತ ಗ್ರಾಮಗಳಿಂದ ರಾಜಧಾನಿಗೆ ಬಂದಿಳಿಯುವ ಬಹುತೇಕ ಯುವಕರು ಗಾರ್ಮೆಂಟ್ಸ್, ಸೆಕ್ಯುರಿಟಿ, ಕಾರು, ಜೆಸಿಬಿ ಡ್ರೈವರ್‌, ಲಾರಿ ಕ್ಲೀನರ‍್, ಹೆಲ್ಪರ‍್ ಮುಂತಾದ ಅರೆ ಕೌಶಲ್ಯಾಧಾರಿತ ಕಸುಬುಗಳನ್ನು ನೆಚ್ಚಿಕೊಳ್ಳುತ್ತಾರೆ. ಆರಂಭದಲ್ಲಿ ಎರಡರಿಂದ ಮೂರು ಸಾವಿರ ರೂ. ಸಂಬಳ ಸಿಗುತ್ತದೆ. ಸಂಬಳ ಐದು ಸಾವಿರ ಮುಟ್ಟಲು ಮತ್ತೆ ಐದಾರು ವರ್ಷ ಕಾಯಬೇಕು. ಒಂದು ಗ್ರಾಮದಲ್ಲಿ ಹುಡುಗನೊಬ್ಬ ನಗರದಲ್ಲಿ ಹೇಗೋ ಯಾವುದೋ ಕೆಲಸ ಗಿಟ್ಟಿಸಿದನೆಂದರೆ ಸಾಕು, ಮತ್ತೆ ಹುಟ್ಟೂರಿಗೆ ಹೋಗುವಾಗ ವೇಷ ಭೂಷಣ ಮತ್ತು ಚಹರೆಯಲ್ಲಿ ಬದಲಾವಣೆಯಾಗುತ್ತದೆ. ಆತನ ಪ್ಯಾಂಟ್, ಟೀ ಶರ್ಟು, ಶೂ, ಬೆಲ್ಟ್ ಮತ್ತು ಇತ್ತೀಚಿನ ಮೊಬೈಲ್ ರವಾನಿಸುವ ಸಂದೇಶವೇ ಬೇರೆ.
ಪರ್ವಾಗಿಲ್ಲ ಕಣಯ್ಯಾ, ಹೊಲದಲ್ಲಿ ಕೆಸರು ಮೆತ್ತಿಕೊಂಡಿದ್ದ ಹುಡುಗ ಈ ಪಾಟಿ ಬೋ ಬೆಳೆದು ಬಿಟ್ಟವನೆ ಅಂತ ಜನ ತಪ್ಪು ತಪ್ಪಾಗಿ ಭಾವಿಸುತ್ತಾರೆ. ಅವರಿಗೆ ಹಿಂದು ಮುಂದು ವಿಚಾರಿಸದೆ ಕೈಲಾದಷ್ಟು ವರದಕ್ಷಿಣೆ, ವರೋಪಚಾರ ಮಾಡಿ ಕನ್ಯಾಧಾರೆ ಮಾಡುವ ಮಾತಾ ಪಿತೃಗಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮೂರು ಸಾವಿರ ರೂ. ಸಂಬಳದ ಬದುಕು ಎಷ್ಟು ದುರ್ಭರ ಎಂಬುದು ಅನುಭವಿಸಿದವನಿಗೆ ಮಾತ್ರ ಗೊತ್ತಿರುತ್ತದೆ. ಊರಿಗೆ ಹೋದಾಗ ಬೇಕರಿಯಿಂದ ಒಂದಷ್ಟು ಸ್ವೀಟು ಖಾರ ಕೊಂಡೊಯ್ಯುವ ಹುಡುಗ (ಕೆಲವೊಮ್ಮೆ ಅದೂ ಇಲ್ಲ ) ನಗರದ ಬೇಗುದಿಯನ್ನು ವಿವರಿಸಲು ಹೋಗುವುದಿಲ್ಲ. ಯಾರಿಂದೆಲ್ಲ ಎಷ್ಟೆಷ್ಟು ಸಾಲ ಮಾಡಿದ್ದೇನೆ, ಯಾವುದೋ ಕೆಟ್ಟ ಘಳಿಗೆಯಲ್ಲಿ ಚಟ ಹತ್ತಿಕೊಂಡಿದೆ ಅಂತ ಹೇಳಲ್ಲ. ಬಾಸ್‌ ಕೈಯಲ್ಲಿ ದಿನಕ್ಕೆಷ್ಟು ಸಲ ಉಗಿಸಿಕೊಳ್ಳುತ್ತಿದ್ದೇನೆ ಎನ್ನುವುದಿಲ್ಲ. ಗುತ್ತಿಗೆ ಕೆಲಸಕ್ಕೆ ಸೇರುವಾಗ ಖಾಲಿ ಪೇಪರಿಗೆ ಸಹಿ ಹಾಕಿಸಿದ್ದಾರೆ. ಯಾವಾಗ ಬೇಕಾದರೂ ನಿರುದ್ಯೋಗಿಯಾಗಬಹದು ಎಂದು ತಿಳಿಸುವುದಿಲ್ಲ. ಹೀಗಿದ್ದರೂ ಹಳ್ಳಿಗಾಡಿನ ಯುವಕರು ತಂಡೋಪತಂಡವಾಗಿ ಸಿಕ್ಕ ಕೆಲಸಕ್ಕೆ ಮೊದಲು ತವಕಿಸುತ್ತಾರೆ.
" ನಮಗೆ ಎರಡೆಕೆರೆ ಹೊಲ ಐತೆ. ರಾಗಿ ಬಿತ್ತಿದ್ದೇವೆ.ಮಳೆ ಇಲ್ಲದೆ ಬೆಳೆ ಒಣಗಿದೆ. ಬೋರ‍್ವೆಲ್ ನಲ್ಲಿ ನೀರಿಲ್ಲ. ಉಪ್ಪು ಹಾಕಿದ್ದಕ್ಕೆ (ರಾಸಾಯನಿಕ ಗೊಬ್ಬರಕ್ಕೆ ಕೆಲವು ಹಳ್ಳಿಗಳಲ್ಲಿ ಉಪ್ಪು ಅಂತಾನೇ ಕರೆಯುತ್ತಾರೆ) ಬೆಳೆ ಬೆಂದಂತೆ ಆಗಿದೆ. ಹೀಗಾದರೆ ಮಾಡುವುದೇನು ? ಐಟಿಐ ಎರಡನೇ ವರ್ಷ ಓದುತ್ತಿದ್ದೇನೆ. ಮುಂದೆ ಫಿಟ್ಟರ‍್ ಆಗಬಹುದೂಂತ ಅಂದುಕೊಂಡಿದ್ದೇನೆ. ಬೆಂಗಳುರಿಗೆ ಹೋಗಬೇಕು ಅಂತ ನೋಡ್ತಿದ್ದೀನಿ. ಕೃಷಿ ಇಷ್ಟ ಇಲ್ಲ ಅಂತಲ್ಲ, ಆದರೆ ಏನಿದೆ ಇದರಲ್ಲಿ ? ಹಾಕಿದ್ದೆಲ್ಲ ಲಾಸೇ " ಎನ್ನುತ್ತಾನೆ ಚೆನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಸವ. ಅಲ್ಲಿನ ಗುಡ್ಡಗಾಡಿನಲ್ಲಿ, ಮರಗಳ ನೆರಳಿನಲ್ಲಿ ಅಡ್ಡಾಡುವ ಅಷ್ಟಿಷ್ಟು ಯುವಕರಲ್ಲಿ ನಗರದಲ್ಲಿ ಬದುಕಿನ ಕನಸು ಹೊತ್ತವರೇ ಬಹುತೇಕ ಮಂದಿ.
ಕೃಷಿಯನ್ನು ಹಣದ ದೃಷ್ಟಿಯಲ್ಲಿ ನೋಡಬಾರದು. ಅದು ಬದುಕು ಅಲ್ಲವಾ ? ಎಂದರೆ, ಹಾಗಾದರೆ ಕೃಷಿಗೆ ಬಂಡವಾಳ ಬೇಡವೇ ? ನೋಡಿ, ರಾಗಿ ಬೇಜ ತರೋಕೆ, ಅದಕ್ಕೆ ಗೊಬ್ಬರ ತರೋದಿಕ್ಕೆ ದುಡ್ಡು ಬೇಡ್ವೇ ? ಎನ್ನುತ್ತಾನೆ. ಗಂಜಲ, ಸಗಣಿ ಮತ್ತು ನೀರು ಬೆರೆಸಿ ತಯಾರಿಸುವ ಜೀವಾಮೃತದ ಬಗ್ಗೆ ಗೊತ್ತಾ ? ಎಂದರೆ ಇಲ್ಲವೆಂದು ತಲೆಯಲ್ಲಾಡಿಸುತ್ತಾನೆ ಬಸವ.
ಇಂಥ ಸಂದರ್ಭದಲ್ಲಿ, ಇಲ್ಲಿ ಮೈಮುರಿಯುವುದಕ್ಕಿಂತ ಬೆಂಗಳೂರಿನಲ್ಲಿ ಹೇಗೋ ಒಂದು ಕೆಲಸಕ್ಕೆ ಸೇರಿಕೊಂಡರೆ ಸಾಕು, ತಿಂಗಳಿಗೆ ತಪ್ಪದೆ ಸಂಬಳ ಸಿಗುತ್ತದೆ, ಬಂದಷ್ಟು ಸಾಕು. ಮದುವೆ ಆಗಿ ಸುಖವಾಗಿ ಇರುತ್ತೇನೆ ಎನ್ನುತ್ತಾರೆ ಅವನಂತಹ ಹುಡುಗರು. ದುರದೃಷ್ಟವಶಾತ್ ಈವತ್ತು ನಗರಗಳಲ್ಲಿ ಅರೆ ಕೌಶಲ್ಯಾಧಾರಿತ ಕೆಲಸಗಳಿಗೆ ಸೇರಿಕೊಳ್ಳುವ ಹಳ್ಳಿಯ ಹುಡುಗರ ಅತಂತ್ರ ಪರಿಸ್ಥಿತಿಗೆ ಕೊನೆ ಇಲ್ಲವಾಗಿದೆ.
ಸೆಕ್ಯುರಿಟಿ ಕೆಲಸಕ್ಕೆ ಬೇಕಾಗಿದ್ದಾರೆ, ಸಂಬಳ ಮೂರರಿಂದ ಐದೂವರೆ ಸಾವಿರ. ಊಟ ಮತ್ತು ವಸತಿ ಸೌಕರ್ಯ ಇದೆ ಅಂತ ನಿತ್ಯ ಜಾಹೀರಾತುಗಳನ್ನು ಓದಬಹುದು. ಇದನ್ನು ನೋಡಿದವನು ಪರ್ವಾಗಿಲ್ಲ, ಸಂಬಳದ ಜೊತೆಗೆ ಊಟ ಮತ್ತು ವಸತಿ ಸೌಕರ್ಯವೂ ಇದೆ, ಇನ್ನೇನು ಬೇಕು ನಂಗೆ ಅಂತ ಹಿಗ್ಗಿನಿಂದ ಅರ್ಜಿ ಸಲ್ಲಿಸಲು ಹೊರಡುತ್ತಾನೆ. ಆತ ಗೊತ್ತಿಲ್ಲದೆ ಬಲಿಪೀಠಕ್ಕೆ ಕೊರಳೊಡ್ಡುವುದು ಹೀಗೆ. ಕಾರ್ಪೊರೇಟ್‌ ಕಂಪನಿಗಳಲ್ಲಿ ಭದ್ರತೆಗೆ ಸಿಬ್ಬಂದಿ ಬೇಕು. ಅವುಗಳು ಸಾಮಾನ್ಯವಾಗಿ ನಾನಾ ಏಜೆನ್ಸಿಗಳನ್ನು ಅವಲಂಬಿಸುತ್ತವೆ. ನೇರವಾಗಿ ನೇಮಕ ಮಡಿಕೊಳ್ಳುವುದು ಕಡಿಮೆ. ಅನೇಕ ಏಜೆನ್ಸಿಗಳು ಕಾರ್ಪೊರೇಟ್‌ ಕಂಪನಿಗಳು ಕೊಡುವ ಸಂಬಳದಲ್ಲಿ ಶೇ. ೨೫ನ್ನು ತಾವೇ ನುಂಗಿಕೊಳ್ಳುವುದು ಸಾಮಾನ್ಯ.ಇನ್ನು ಊಟ ಬೇಕಾದರೆ ಕಂಪನಿಗಳ ಕ್ಯಾಂಟೀನ್‌ ತೋರಿಸುತ್ತವೆ. ಅಷ್ಟೇ. ಅಷ್ಟಿಷ್ಟು ಕೊಟ್ಟರೆ ಅದೇ ಹೆಚ್ಚು. ಇನ್ನು ವಸತಿ ವಿಚಾರ ಶತ್ರುಗಳಿಗೂ ಬೇಡ. ಒಬ್ಬರು ಅಥವಾ ಇಬ್ಬರು ಕಷ್ಟದಲ್ಲಿ ಇರಬಹುದಾದ ಗಬ್ಬೇಳುವ ಕೊಠಡಿಯಲ್ಲಿ ಇಪ್ಪತ್ತೈದು ಜನರನ್ನು ದನಗಳಂತೆ ದಬ್ಬುತ್ತಾರೆ. ಅದುವೇ ವಸತಿ ಸೌಕರ್ಯ. ಅಲ್ಲಿ ನೀರಿಲ್ಲ, ಬೆಳಕಿಲ್ಲ, ಕೂರಲು ಜಾಗವಿಲ್ಲ, ನಿಲ್ಲಲು ಆಗಲ್ಲ ಪರಿಸ್ಥಿತಿ. ಅರಳಾಳು ಸಂದ್ರದಿಂದ ಇಪ್ಪತ್ತೈದು ಮಂದಿ ಹುಡುಗರು ಇತ್ತೀಚೆಗೆ ನಗರದಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದರು. ಯಾವುದೋ ಕುಳಕ್ಕೆ ಸೇರಿದ ಖಾಲಿ ಸೈಟುಗಳನ್ನು ಹಗಲು ರಾತ್ರಿ ಯಾರೂ ಲಪಟಾಯಿಸದಂತೆ ಕಾಯುವುದೇ ಅವರ ಕೆಲಸವಾಗಿತ್ತು. ಏಜೆನ್ಸಿಯ ದಬ್ಬಾಳಿಕೆ ಸಹಿಸಲಾಗದೆ ವಾರದಲ್ಲಿಯೇ ಕಾಲ್ತೆಗೆದು ಮನೆಗೆ ವಾಪಸಾಗಿದ್ದರು. ಮತ್ತೊಬ್ಬ ಬೆಂಗಳೂರಿನಲ್ಲಿ ಮೊಬೈಲ್ ರಿಪೇರಿಯ ಜತೆಗೆ ಬೈಕ್ ಕದಿಯುವುದನ್ನೂ ಕಲಿತು ಬಿಟ್ಟಿದ್ದ. ಹಾಗೆ ಕದ್ದ ಬೈಕ್‌ ಗಳನ್ನು ಮಾರಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಊರಿನ ಹುಡುಗ ಅಂತ ಬೈಕ್‌ ಖರೀದಿಸಿದ್ದ ಗ್ರಾಮಸ್ಥರು ಹಣ ಮತ್ತು ಬೈಕನ್ನು ಜೊತೆಗೆ ಕಳೆದುಕೊಂಡಿದ್ದರು. ಹೀಗೆ ದಾರಿ ತಪ್ಪುವ ಹುಡುಗರನ್ನು ತಿದ್ದುವವರಾರು ?
ಇಂಥ ಕಥೆಗಳನ್ನು ಹಳ್ಳಿಗಾಡಿನಲ್ಲಿ ಹಿರಿಯರಿಂದ ಕೇಳಬೇಕಾದಾಗ ನೋವಾಗುತ್ತದೆ.

Tuesday, 11 August 2009

ಹಳ್ಳಿ ಬಗ್ಗೆ ಬರೆಯಲು ಅವರಂತೆಯೇ ಬದುಕಬೇಕು

ಶ್ರೀ ಪಡ್ರೆಯವರ ಜತೆ ನಿನ್ನೆ ರಾತ್ರಿ ಮೊದಲ ಸಲ ಮಾತನಾಡಿದ್ದೆ. ರಾಜ್ಯ ಮತ್ತು ದೇಶದ ನಾನಾ ಕಡೆಗಳ ಹಳ್ಳಿಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಿರಂತರವಾಗಿ ಸಂಚರಿಸುವ ಶ್ರೀ ಪಡ್ರೆಯವರ ತಾಳ್ಮೆ ಮತ್ತು ಅಧ್ಯಯನ ನನ್ನನ್ನು ಸದಾ ಅಚ್ಚರಿಗೆ ದೂಡುತ್ತದೆ. ಇತ್ತೀಚೆಗೆ ಕಳತ್ತೂರಿಗೂ ಬಂದಿದ್ದರು. ಇದು ಕಿದೂರಿಗೆ ಸಮೀಪದ ಗ್ರಾಮ. ಕುಂಬಳೆಯಿಂದ ೮ ಕಿ.ಮೀ ದೂರದಲ್ಲಿದೆ. ನಾನು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದು ಇದೇ ಊರಿನಲ್ಲಿ. ನನ್ನ ಅಜ್ಜನ ಮನೆಯೂ ಇಲ್ಲಿದೆ. ಕಳತ್ತೂರಿಗೆ (ಕಾಸರಗೋಡು ಜಿಲ್ಲೆ) ಭೇಟಿ ನೀಡಿದ್ದ ಶ್ರೀ ಪಡ್ರೆಯವರು ಅಲ್ಲಿ ನಡೆದ ಸಮಾರಂಭದಲ್ಲಿ ನನ್ನ ಅತ್ತೆ ಕೃಷ್ಣವೇಣಿ ಕಿದೂರು ಅವರನ್ನೂ ಮಾತನಾಡಿಸಿದ್ದರು. ನನ್ನ ಬಗ್ಗೆ ಕೇಳುತ್ತಾ, ನಿಮ್ಮ ಮಗನಾ ಅಂತ ಅತ್ತೆಯ ಹತ್ತಿರ ಪಡ್ರೆ ವಿಚಾರಿಸಿದ್ದರು. ಅಲ್ಲ, ಅತ್ತಿಗೆಯ ಮಗ ಅಂತ ಅತ್ತೆ ತಿಳಿಸಿದರು. ಈ ವಿಷಯವನ್ನು ಪಡ್ರೆಯವರೇ ನನಗೆ ಹೇಳಿದರು.
ಮಾತನಾಡುತ್ತ ಲಹರಿ ಹಳ್ಳಿಗಳತ್ತ ತಿರುಗಿತು. ಹಳ್ಳಿಗಳ ಬಗ್ಗೆ ಅಧ್ಯಯನ ಮಾಡುವುದು ಎಂದರೆ ಅದಕ್ಕೊಂದು ಸ್ಪಷ್ಟವಾದ ಗುರಿ ಇರಬೇಕು. ಹಳ್ಳಿಯ ನಿರ್ದಿಷ್ಟ ಸಮಸ್ಯೆ ಇರಬಹುದು, ಅಸಮಾನತೆ ಇರಬಹುದು, ಅಭಿವೃದ್ಧಿಯ ವಿಚಾರ ಇರಬಹುದು, ಅಂತೂ ಲೇಖನ ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ಉತ್ತರ ಇರಬೇಕಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು ಪಡ್ರೆ.
ಹಳ್ಳಿಗಳ ಅಂತರಾತ್ಮ ಹೊಕ್ಕು ಬರೆಯಬೇಕಾದರೆ ಹಳ್ಳಿಯವರಂತೆಯೇ ಬದುಕಬೇಕು. ಆಗ ಸಮಸ್ಯೆ ಏನು ಎಂದು ಗೊತ್ತಾಗುತ್ತದೆ. ಇಲ್ಲವಾದಲ್ಲಿ ಬರಹ ಆಳವಾಗುವುದಿಲ್ಲ. ಈಗೀಗ ಪತ್ರಕರ್ತರ ಜತೆ ಮಾತನಾಡುವವರು ಎಲ್ಲ ಹಳ್ಳಿಗಳಲ್ಲಿಯೂ ಇರುತ್ತಾರೆ. ಅದು ಅವರಿಗೆ ಗೊತ್ತಿದೆ.ಕೆಲವೊಮ್ಮೆ ಹಳ್ಳಿಗಳ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲವೇನೋ ಎಂದೂ ಅನ್ನಿಸುತ್ತಿದೆ ಎಂದರು.
ಹೀಗೆ ಇನ್ನೂ ಕೆಲವು ಉಪಯುಕ್ತ ಮಾಹಿತಿ, ಸಲಹೆಯನ್ನು ನೀಡಿದ ಪಡ್ರೆಯವರಿಗೆ, ಈ ಸಲ ಊರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಬೇಕೆಂದು ಹೇಳಿದೆ. ಆಗಬಹುದು ಬನ್ನಿ ಎಂದರು ಆತ್ಮೀಯವಾಗಿ.
ಫೋನಿಟ್ಟ ನಂತರ ಪಡ್ರೆಯವರ ಮಾತುಗಳನ್ನು ಬಹಳ ಹೊತ್ತು ಮೆಲುಕು ಹಾಕಿದೆ. ಕೆಲವೊಮ್ಮೆ ಹಳ್ಳಿಗಳ ಸಮಸ್ಯೆಗೆ ಪರಿಹಾರ ಇಲ್ಲವೇನೋ ಎಂದು ನನಗನ್ನಿಸುತ್ತಿದೆ ಎಂಬ ಪಡ್ರೆಯವರ ಮಾತು ಆಳವಾಗಿ ಕಲಕುತ್ತಿದೆ...

Monday, 10 August 2009

ನಮ್ಮಲ್ಲಿ ಟೆಕ್ನಿಕಲ್‌ ಪ್ರಶ್ನೆಗಳಿಗೆ ಮಾತ್ರ ಉತ್ತರ...

ರಾಜ್ಯದಲ್ಲಿ ರೈತರಿಗೆ ಸಹಾಯ ಮಾಡಲೆಂದು ಸಹಾಯವಾಣಿಯೊಂದು ಅಸ್ತಿತ್ವದಲ್ಲಿದೆ. ಕೆಲವು ತಿಂಗಳಿನ ಹಿಂದೆ ಚಾಲ್ತಿಗೆ ಬಂದಿರುವ ಸಹಾಯವಾಣಿಯ ನಂ- ೧೮೦೦-೪೨೫-೩೫೫೩. ಇದು ಉಚಿತವಾಗಿದ್ದು , ಬೆಳಗ್ಗೆ ೭ ರಿಂದ ರಾತ್ರಿ ೯ರ ತನಕ ಸೇವೆಗೆ ಲಭ್ಯವಿದೆ. ಸ್ಥಿರ ದೂರವಾಣಿ ಅಥವಾ ಮೊಬೈಲ್ ನಿಂದ ಕರೆ ಮಾಡಬಹುದು. ಇತ್ತೀಚೆಗೆ ಕುತೂಹಲ ತಡೆಯಲಾಗದೆ ಫೋನ್ ನಂಬರ‍್ ಒತ್ತಿದೆ. ಕೊನೆಗೂ ಅನ್ನದಾತನಿಗೆ ನೆರವು ಸಿಗುತ್ತಿದೆಯಲ್ಲವೇ ಅಂತ ಖುಷಿಯೂ ಇತ್ತು. ಅತ್ತ ಕಡೆಯಿಂದ ಪುಣ್ಯಕ್ಕೆ ಅಚ್ಚ ಕನ್ನಡದಲ್ಲೇ ಮಾತನಾಡಿದರು. ನಮಸ್ಕಾರ ಸಾರ‍್, ಎಂದು ನನ್ನ ಪರಿಚಯ ಹೇಳಿದೆ. ಏನು ಮಾಹಿತಿ ಬೇಕಿತ್ತು ಎಂದಾಗ , ಸಾರ‍್, ರಾಜ್ಯದಲ್ಲಿ ಕೃಷಿ ಕ್ಷೇತ್ರ ಸಂಕಟದಲ್ಲಿದೆ. ರೈತರ ಆತ್ಮಹತ್ಯೆ ಆಗಿಂದಾಗ್ಗೆ ವರದಿಯಾಗುತ್ತಿದೆ. ನೆರೆ-ಬರದ ಸಮಸ್ಯೆ ಇದೆ. ಅಂತಹ ತೊಂದರೆ ಎದುರಿಸುತ್ತಿರುವ ರೈತರನ್ನು ಹೇಗೆ ಸಮಾಧಾನ ಪಡಿಸುತ್ತೀರಾ ಎಂದೆ.
ಅದಕ್ಕೆ ಸಿಕ್ಕಿದ ಉತ್ತರ ಏನೆಂದರೆ-
" ನಮ್ಮಲ್ಲಿ ಟೆಕ್ನಿಕಲ್ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತದೆ "
ಅವರ ಇಂಥ ಉತ್ತರದಿಂದ ತೃಪ್ತನಾಗದೆ, ಹಾಗಂದರೆ ? ಎಂದೆ.
ಯಾವ ಬೆಳೆಗೆ ಯಾವ ಗೊಬ್ಬರ ಹಾಕಬೇಕು ? ರಸಗೊಬ್ಬರ ದಾಸ್ತಾನು ಇದೆಯೇ, ಇಲ್ಲವೇ, ಯಾವ ಬೆಳೆಯ ರೋಗಕ್ಕೆ ಎಂಥ ಚಿಕಿತ್ಸೆ ಇದೆ ಎಂಬಿತ್ಯಾದಿ ತಾಂತ್ರಿಕ ಸಮಸ್ಯೆಗಳಿಗೆ ಮಾತ್ರ ತಜ್ಞರಿಂದ ಉತ್ತರ ಕೊಡುತ್ತೇವೆ. ದಿನಕ್ಕೆ ಸುಮಾರು ಎಪ್ಪತ್ತು ಎಂಬತ್ತು ಕರೆಗಳು ಬರುತ್ತಿವೆ ಎಂದರು.
ಹಾಗಾದರೆ ರೈತರು ತಮ್ಮ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆ ಹೇಳಿಕೊಳ್ಳುವುದಿಲ್ಲವಾ ? ಹತಾಶೆಗೊಂಡಿರುವ ಮನಸ್ಸನ್ನು ಸರಿಪಡಿಸುವ ಬಗೆ ಯಾವುದು ? ಹಿಂಡುತ್ತಿರುವ ಸಾಲದ ಹೊರೆಯಿಂದ ಮುಕ್ತನಾಗುವುದು ಹೇಗೆ ಎಂದು ಕೇಳುವುದಿಲ್ಲವಾ ? ಆತ್ಮಹತ್ಯೆಯ ಆಲೋಚನೆ ಮಾಡುವ ರೈತರು ಸಾಂತ್ವನ ಬಯಸಿ ಕರೆ ಮಾಡುವುದಿಲ್ಲವೇ ? ಎಂದು ಕೇಳಿದೆ.
ಸಾರ‍್, ಮೊದಲೇ ಹೇಳಿದೆಯಲ್ಲವೇ, ನಮ್ಮಲ್ಲಿ ಟೆಕ್ನಿಕಲ್ ಪ್ರಶ್ನೆಗಳಿಗೆ ಮಾತ್ರ ಉತ್ತರ ಇದೆ ಅಂತ..ಅಂದರು. ನಾನು ನಿರುತ್ತರನಾದೆ. ಫೋನಿಟ್ಟೆ.

Sunday, 9 August 2009

ರಾಮನಗರದ ಬಳಿ ಕಂಡ ಮರೆಯಲಾಗದ ಚಿತ್ರ...

ಚನ್ನಪಟ್ಟಣದ ಅರಳಾಳುಸಂದ್ರ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ್ದೆ. ಗೆಳೆಯ ಗಿರೀಶ ಅವರ ಸಾವಯವ ಕೃಷಿಯನ್ನು ಕಂಡು, ಅವರ ಮನೆಯಲ್ಲಿ ಉಂಡು ರಾಮನಗರಕ್ಕೆ ಹೊರಟಿದ್ದೆ. ಇದಕ್ಕೂ ಮುನ್ನ ಒಂದು ಸಣ್ಣ ಪ್ರಸಂಗ ನಡೆಯಿತು. ಗಿರೀಶ ಅವರ ಅಮ್ಮ ಮನೆಗೆ ಬಂದ ಅತಿಥಿಗೆ ಅಂತ ಮೊಟ್ಟೆ, ಕೋಳಿಸಾರು, ಮುದ್ದೆ ಮಾಡಿ ನಮಗಾಗಿ ಕಾಯುತ್ತಿದ್ದರು. ತೋಟವನ್ನೆಲ್ಲ ಸುತ್ತಾಡಿ ಬಳಲಿ ಮನೆಗೆ ಬಂದೊಡನೆ ತಟ್ಟೆಗೆ ಬಡಿಸಿ ತಂದರು. ತಟ್ಟೆಯನ್ನು ಕಂಡೊಡನೆ ನನ್ನ ತಪ್ಪಿನ ಅರಿವಾಯಿತು. ನನಗೆ ಮಾಂಸಾಹಾರ ಸೇವನೆ ಅಭ್ಯಾಸವಿಲ್ಲ ಎಂದು ಮೊದಲೇ ತಿಳಿಸಲು ಮರೆತುಬಿಟ್ಟಿದ್ದೆ. ಪಾಪ, ಆ ತಾಯಿ ತುಂಬ ನಿರಾಶರಾದರು. ಮೊದಲೇ ಹೇಳಬಾರದಿತ್ತೇ, ಹೇಳಿದ್ದರೆ ಬೇರೆಯೇ ಅಡುಗೆ ಮಾಡಿರುತ್ತಿದ್ದೆ, ಮಜ್ಜಿಗೆಯೂ ಇಲ್ಲ ಮನೇಲಿ ಎಂದರು. ಇಲ್ಲಮ್ಮಾ, ನೀವೇನೂ ಯೋಚನೆ ಮಾಡಬೇಡಿ, ನನಗೂ ಹೇಳಲು ಮರೆತು ಹೋಯಿತು. ಪರ‍್ವಾಗಿಲ್ಲ, ಅನ್ನ ಸಾರು ನನಗೆ ಸಾಕು ಎಂದೆ. ಅವರು ಹಾಗೆಯೇ ಮಾಡಿದರು. ಊಟ ಮಾಡುತ್ತಿದ್ದಂತೆ ಪಕ್ಕದ ಮನೆಯಿಂದ ಮಜ್ಜಿಗೆ ತಂದು ಕೊಟ್ಟರು. ಅದನ್ನೂ ಕುಡಿದೆ. ಅವರ ವಾತ್ಸಲ್ಯಮಯಿ ಉಪಚಾರ ನನಗೆ ನನ್ನ ಹಳ್ಳಿಯನ್ನು ನೆನಪಿಗೆ ತಂದಿತು. ಊಟವಾಗುತ್ತಿದ್ದಂತೆ ರೈತಸಂಘದ ಪುಟ್ಟಸ್ವಾಮಿ ಬಂದರು. ಅವರೊಡನೆ ಗಂಟೆಗಟ್ಟಲೆ ಹರಟೆ ಹೊಡೆದೆ. ಗ್ರಾಮ ಜೀವನ, ಬೆಂಗಳೂರಿನ ಪ್ರಭಾವ, ಪಟ್ಟಣ ಸೇರಿ ಕೆಡುವ ಹಳ್ಳಿ ಹೈದರ ಬಗ್ಗೆ ಮಾತನಾಡಿದೆವು. ಸಾವಯವ ಕೂಡ ಚರ್ಚೆಗೆ ಬಂತು.
ಅಷ್ಟು ಹೊತ್ತಿಗೆ ಸಾಯಂಕಾಲವಾಗಿತ್ತು. ಸ್ವಾದಿಷ್ಟವಾದ ಟೀ ಕುಡಿದು ಗಿರೀಶ್ ಮುಂತಾದವರಿಗೆ ಧನ್ಯವಾದ ತಿಳಿಸಿ, ನನ್ನ ಸ್ಕೂಟರನ್ನೇರಿ ರಾಮನಾಗರದ ಹಾದಿಯಲ್ಲಿ ಹೋದೆ. ದಾರಿ ಮಧ್ಯೆ ಮೋಡ ಕವಿದು ಸಮಾ ಮಳೆ ಬಂತು. ಯಾವುದೋ ಹಳ್ಳಿಯ ಬೀದಿ ಪಕ್ಕದ, ಹಂಚಿನ ಮಾಡಿನ ಕಟ್ಟಡದ ಬಳಿ ಸ್ಕೂಟರ‍್ ನಿಲ್ಲಿಸಿದೆ. ಅದೊಂದು ಸಾರ್ವಜನಿಕ ಕಟ್ಟಡ. ಹಳೆಯದಾಗಿತ್ತು. ಬಾಗಿಲು ಮುಚ್ಚಿದ ಗ್ರಾಮೀಣ ಗ್ರಂಥಾಲಯ ಕೊಠಡಿ, ಪುಟ್ಟ ಗುಡಿ, ಹಾಲಿನ ಸೊಸೈಟಿ ಅಲ್ಲಿತ್ತು. ಹುಡುಗನೊಬ್ಬ , ಲ್ಯಾಕ್ಟೋಮೀಟರನ್ನು ಹಾಲಿನಲ್ಲಿ ಮುಳುಗಿಸಿ ಪರೀಕ್ಷಿಸುತ್ತಿದ್ದ. ಇತ್ತೀಚಿನ ಕೆಎಂಎಫ್‌ ಚುನಾವಣೆಯಲ್ಲಿ ಯಾರ‍್ಯಾರಿಗೋ ಏನೇನೋ ಕೊಟ್ಟಿದ್ದರು. ಎಲ್ಲರೂ ಬಾಚಿದ್ದೇ ಬಾಚಿದ್ದು. ನಮಗೆ ಮಾತ್ರ ಐದು ಪೈಸಾ ಸಿಗಲಿಲ್ಲ ಎಂದು ಹಲ್ಲು ಕಿರಿಯುತ್ತಾ ಸಂಗಡಿಗರೊಡನೆ ಹರಟುತ್ತಿದ್ದ. ಮಿಕ್ಕವರೂ ಕಿಸಕಿಸನೆ ನಗುತ್ತಿದ್ದರು. ಮಳೆ ಬಿರುಸಾದೊಡನೆ ಬಡ ಮಹಿಳೆಯೊಬ್ಬಳು ತಳ್ಳುವ ಗಾಡಿಯನ್ನು ತಳ್ಳುತ್ತಾ ಮಾಡಿನ ಸಮೀಪ ನಿಲ್ಲಿಸಿದಳು. ಗಾಡಿಯಲ್ಲಿ ಮಕ್ಕಳ ಆಟದ ಸಾಮಾನುಗಳು, ಬಿಂದಿಗೆ, ಪ್ಲಾಸ್ಟಿಕ್ ಪದಾರ್ಥಗಳು ಇದ್ದವು. ಪ್ಲಾಸ್ಟಿಕ್ ನ ಹಾಳೆಯನ್ನು ವಸ್ತುಗಳ ಮೇಲೆ ಅವಸರದಲ್ಲಿ ಮುಚ್ಚಿದ ಮಹಿಳೆ ತನ್ನ ಹಸುಗೂಸನ್ನು ಅವುಚಿಕೊಂಡು ಗಾಡಿಯ ಚಕ್ರದ ನಡುವೆ ಕುಕ್ಕರಗಾಲಿನಲ್ಲಿ ಕುಂತಳು. ಆಗ ಹತ್ತಿರವಿದ್ದವರು, ಬಾರಮ್ಮಾ, ಮಳೆ ಜೋರಿದೆ. ಇಲ್ಲಿ ನಿಲ್ಲು ಎಂದರು. ಕಟ್ಟಡದ ಜಗುಲಿಗೆ ಬಂದು ಯಾವಾಗ ಮಳೆ ನಿಲ್ಲುತ್ತದೆಯೋ ಅಂತ ಆಕಾಶ ನೋಡುತ್ತ ನಿಂತಳು. ಗಾಳಿ ಜೋರಾಗಿ ಬೀಸಿದಾಗ ಪ್ಲಾಸ್ಟಿಕ್ ಹಾಳೆ ಜಾರಿ ಆಟದ ಸಾಮಾನುಗಳು ತೊಯ್ದು ತೊಪ್ಪೆಯಾಯಿತು. ಮಗುವನ್ನು ಜಗುಲಿಯಲ್ಲಿಟ್ಟ ಮಹಿಳೆ, ಲಗುಬಗೆಯಿಂದ ಮತ್ತೆ ಪ್ಲಾಸ್ಟಿಕ್ ಹಾಳೆಯನ್ನು ಸರಿಪಡಿಸಿ, ತಾನೂ ಒದ್ದೆಯಾದಳು. ಮಗು ಚಳಿಯಲ್ಲಿ ನಡುಗುತ್ತಿತ್ತು.
ಮಳೆ ಸ್ವಲ್ಪ ಕಮ್ಮಿಯಾಗುತ್ತಿದ್ದಂತೆ ಮೆಟ್ಟಿಲನ್ನು ಇಳಿದು ಗಾಡಿಯ ನಡುವೆ ಮಗುವನ್ನು ಇಟ್ಟ ಮಹಿಳೆ, ತುಂತುರು ಮಳೆಗೆ ಲೆಕ್ಕಿಸದೆ ಗಾಡಿಯನ್ನು ತಳ್ಳುತ್ತಾ ಹೋದಳು. ಮುಂದೆ ಇಳಿಜಾರಿನಲ್ಲಿ ಹಿಂಬದಿಯಿಂದ ಗಾಡಿಯನ್ನು ಗಟ್ಟಿಯಾಗಿ ಹಿಡಿಯುತ್ತ ಬೇಗ ಬೇಗನೆ ಸಾಗಿ ತಿರುವಿನಲ್ಲಿ ಮರೆಯಾದಳು. ಆಕೆಯ ಚಿತ್ರ ಸಣ್ಣದಾಗುತ್ತಿದ್ದಂತೆ ನೋಡುತ್ತಿದ್ದ ಹಳ್ಳಿಗರು, ನೋಡ್ರಲಾ, ಆಯಮ್ಮ ಜೀವನಕ್ಕೆ ಎಷ್ಟು ಕಷ್ಟ ಪಡ್ತಿದಾಳೆ, ನೋಡಿ ಕಲೀರಿ..ಅಂತ ಆಸುಪಾಸಿನ ಮಿತ್ರರಿಗೆ ಹೇಳಿದರು.
ಬೆಂಗಳೂರಿಗೆ ಬಂದ ನಂತರವೂ ತಳ್ಳುವ ಗಾಡಿಯಲ್ಲಿ ಹಸುಗೂಸನ್ನು ಇಟ್ಟು ಮಳೆಯಲ್ಲಿಯೇ ನೆನೆಯುತ್ತ ಸಾಗಿದ ಮಹಿಳೆಯ ಸಂಕಟ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಈಗಲೂ ಆ ಚಿತ್ರ ಮರೆಯಲಾಗುತ್ತಿಲ್ಲ...
ಕಾಫಿಯ ಬಗ್ಗೆ : ನಾಗೇಶ ಹೆಗಡೆಯವರ ಮನೆಯ ನಾಯಿಯ ಹೆಸರು ಕಾಫಿ, ಮುದ್ದಾದ, ಬುದ್ಧಿವಂತ ಶ್ವಾನವದು. ಹೆಗಡೆಯವರ ಮೈತ್ರಿಗ್ರಾಮದ ಮನೆಗೆ ಶನಿವಾರ ಹೋಗಿದ್ದಾಗ ಮೊದಲು ಅದನ್ನೇ ಪರಿಚಯ ಮಾಡಿಕೊಟ್ಟರು. ಮೊದಲು ಸಹಜವಾಗಿ ಬೊಗಳಿದ್ದ ಕಾಫಿ, ಕೆಲವು ಕ್ಷಣಗಳ ಕಾಲ ನನ್ನನ್ನೇ ದಿಟ್ಟಿಸುತ್ತಿತ್ತು. ನಂತರ ಪರಿಚಯವಾದವರಂತೆ ಸುಮ್ಮನಿತ್ತು. ಹೆಗಡೆಯವರ ಜತೆ ಸಾಯಂಕಾಲ ಸ್ವಲ್ಪ ಅಡ್ಡಾಡಲು ಹೊರಟಾಗ ಕಾಫಿಯೂ ನಮ್ಮೊಡನೆ ಹೊರಟಿತು. ಹೊಂಡಾ ಆಕ್ಟಿವಾದಲ್ಲಿ ನಾವಿಬ್ಬರು ಹೋಗುತ್ತಿದ್ದರೆ, ಪಕ್ಕದಲ್ಲಿ ಕಾಫಿಯ ರನ್ನಿಂಗ್..ಕೆಲವು ಸಲ ಕೊಳ್ಳದಂಥ ಮಾರ್ಗದಲ್ಲಿ ಕಾಫಿಯೇ ನಮ್ಮ ಗಾಡಿಯನ್ನು ಹಿಂದೆ ಹಾಕುತ್ತಿತ್ತು. ಅದರ ರೇಸನ್ನು ಕಂಡು ನಗು ಉಕ್ಕುತ್ತಿತ್ತು. ಆದರೆ ಕಾಫಿಯ ಗುಣ ಚೆನ್ನಾಗಿದೆ ಅನ್ನಿಸಿತು. ವಾಪಸ್‌ ಬರುವಾಗಲೂ ಅದರ ರನ್ನಿಂಗ್ ನಡೆದಿತ್ತು.

Friday, 7 August 2009

ನಗರಕ್ಕಿಂತ ಗ್ರಾಮಗಳಲ್ಲಿನ ಬಡವರೇ ಅದೃಷ್ಟವಂತರು

ಹಳ್ಳಿಯ ಬಗ್ಗೆ ಬರೆಯೋದು, ಓದೋದು, ಹಳ್ಳಿಗರ ಜತೆ ಸುತ್ತುವುದು, ಹರಟೆ ಹೊಡೆಯೋದು ನಂಗೆ ತುಂಬ ಖುಷಿ ಕೊಡುತ್ತದೆ. ಆದರೆ ಹಳ್ಳಿಗಳನ್ನು ಕಾಡುತ್ತಿರುವ ಸಮಸ್ಯೆಗಳು ತಲ್ಲಣಗೊಳಿಸುತ್ತವೆ. ಹೀಗಿದ್ದರೂ ನಗರದಲ್ಲಿರುವ ಬಡವರಿಗಿಂತ ಗ್ರಾಮಗಳಲ್ಲಿನ ಬಡವರೇ ಅದೃಷ್ಟವಂತರು ಎಂದು ನನಗನ್ನಿಸುತ್ತದೆ. ಹಳ್ಳಿಯಲ್ಲಿ ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಹೊಟ್ಟೆಗೆ ಒಂದು ಹಿಡಿ ಅನ್ನ ಸಿಗಬಹುದು. ಆದರೆ ನಗರದಲ್ಲಿ ಹಾಗಲ್ಲ. ಮುಖ ನೋಡಿ ಮಾತನಾಡಿಸುವವರೇ ಇಲ್ಲ. ದುಡ್ಡಿಲ್ಲ ಎಂದಾದರೆ ನಗರದಲ್ಲೇನೂ ಕೈಗೆ ಸಿಗದು. ಈವತ್ತು ಹಳ್ಳಿ ಜನರಲ್ಲಿ ಹಣ ಓಡಾಡದಿರಬಹುದು. ಆದರೆ ಪರಸ್ಪರ ಸುಖ ದುಃಖ ವಿಚಾರಿಸುವ, ಸೌಜನ್ಯ ಉಳಿದುಕೊಂಡಿದೆ.
ಈವತ್ತು ಕ್ರೆಡಿಟ್‌ ಕಾರ್ಡ ಬಳಕೆದಾರರ ಸಂಘದ ಕಾರ್ಯದರ್ಶಿ ಗಿಡ್ಡಪ್ಪನವರೂ ಇದೇ ಮಾತನ್ನು ಹೇಳಿದರು. ಅವರು ಈ ಹಿಂದೆ ಬ್ಯಾಂಕ್ ಅಧಿಕಾರಿಯಾಗಿದ್ದವರು. ಅಗಾಧವಾದ ಜೀವನಾನುಭವ ಅವರಲ್ಲಿದೆ. ಒಂದೂರಿನಲ್ಲಿದ್ದಾಗ ಊರಿನ ಸೊಸೈಟಿಗಳಿಗೆ ತಲಾ ಹತ್ತು ಹಸುಗಳನ್ನು ಕೊಳ್ಳಲು ಸಾಲದ ನೆರವು ನೀಡಿದರು. ಅವರು ಮಾಡಿದ್ದಿಷ್ಟೇ, ಸೊಸೈಟಿಗಳು ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿಯನ್ನೇ ಸಾಲವಾಗಿ ವಿತರಿಸಿದ್ದರು. ಹಸು ಕೊಂಡ ಜನ ಶ್ರದ್ಧೆಯಿಂದ ಸಾಕಿದರು. ಹೈನುಗಾರಿಕೆಯಲ್ಲಿ ಜೀವನೋಪಾಯ ಕಂಡುಕೊಂಡರು. ಸಾಲವನ್ನು ಚುಕ್ತಾ ಮಾಡಿದರು.
ಮತ್ತೊಂದು ಸಲ ಯಾವುದೋ ಊರಿನಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು, ರಟ್ಟು, ಕಡತಗಳು, ಫೈಲ್‌ ಕವರ‍್ ಗಳನ್ನು ತಯಾರಿಸುವ ಸಣ್ಣ ಘಟಕ ಸ್ಥಾಪಿಸಲಾಯಿತು. ಗಿಡ್ಡಪ್ಪನವರು ಸಾಲ ಕೊಡಿಸಿದರು. ಮಹಿಳೆಯರಯ ಉತ್ಸಾಹದಿಂದ ಫೈಲುಗಳನ್ನು ತಯಾರಿಸಿದರು. ಆದರೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟವಾಯಿತು.
ಮತ್ತೊಮ್ಮೆ ಆದಿವಾಸಿ ಜನರಿಗೆ ಸಾಲ ಕೊಡಲು ಗಿಡ್ಡಪ್ಪ ಮನಸ್ಸು ಮಾಡಿದರು. ಆದರೆ ನಮಗೇಕೆ ಸಾಲ ಎಂದು ಹೇಳಿದರಂತೆ. ಮಾತಿನ ನಡುವೆ ಅವರೊಂದು ಕಥೆ ಹೇಳಿದರು.
ಒಮ್ಮೆ ಬ್ಯಾಂಕ್ ನವರು ಕುಗ್ರಾಮವೊಂದಕ್ಕೆ ತೆರಳಿದರು. ಊರಿನ ಕಟ್ಟೆಯಲ್ಲಿ ಯುವಕರು ಕೂತು ಹರಟುತ್ತ, ಜೂಜಾಡುತ್ತ ಮಜಾ ಉಡಾಯಿಸುತ್ತಿದ್ದರು. ಅವರ ಹತ್ತಿರಕ್ಕೆ ಬಂದ ಅಧಿಕಾರಿಗಳು, ನೀವೇಕೆ ಬೇರೆ ಕೆಲಸವಿಲ್ಲದೆ ಕೂತಿದ್ದೀರಾ ? ಏನಾದರೂ ಉದ್ಯೋಗ ಮಾಡಿ. ಬೇಕಾದರೆ ಸಾಲ ಕೊಡುತ್ತೇವೆ. ಹಸುಗಳನ್ನು ಸಾಕಿ. ಕುರಿ ಸಾಕಿ ಎಂದರು.
ಅದಕ್ಕೆ ಆ ಯುವಕರು, ಮತ್ತೆ ಏನಾಗುತ್ತದೆ ? ಎಂದರು. ಅಧಿಕಾರಿಗಳು, ಕುರಿ, ಹಸುಗಳನ್ನು ಸಾಕಿ ಹಾಲು, ಹಣ ಗಳಿಸಬಹುದು. ಇದರಿಂದ ನಿಮ್ಮ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ. ಮುಂದೆ ಒಳ್ಳೆಯದಾಗುತ್ತದೆ. ಎಂದರು.
ಮುಂದೆ ಏನಾಗುತ್ತದೆ ಎಂದರು ಯುವಕರು. ಅಧಿಕಾರಿಗಳು, ನಿಮಗೆ ಮದುವೆಯಾಗಿ ಮಕ್ಕಳಾಗುತ್ತವೆ. ಸಂಸಾರ ಸರಾಗವಾಗಿ ನಡೆಯುತ್ತದೆ ಎಂದು ಬಣ್ಣಿಸಿದರು.
ಪಟ್ಟು ಬಿಡದ ಯುವಕರು, ಮುಂದೇನಾಗುತ್ತದೆ ಎಂದರು. ಅದಕ್ಕೆ ಅಧಿಕಾರಿಗಳು, ವಯಸ್ಸಾದ ಮೇಲೆ ಆನಂದವಾಗಿ, ಯಾವ ಚಿಂತೆಯೂ ಇಲ್ಲದೆ ಕಾಲ ಕಳೆಯಬಹುದು ಎಂದರು.
ಅದಕ್ಕೆ ಆ ಯುವಕರು, ನಾವೀಗ ಅದನ್ನೇ ಮಾಡುತ್ತಿದ್ದೇವೆ. ಆನಂದವಾಗಿ ಕಾಲ ಕಳೆಯಲು ವಯಸ್ಸಾಗುವ ತನಕ ಕಾಯಬೇಕೇ ? ಎಂದರಂತೆ.

Thursday, 6 August 2009

ಸ್ಪೂರ್ತಿದಾತರಿಗೆ ನಮನಗಳು...

ಅವರ ಹೆಸರು ರೇಣುಕಾ ಮಂಜುನಾಥ್‌..
ಪತ್ರಕರ್ತರಿಗೆ ಇರಬೇಕಾದ ಸೂಕ್ಷ್ಮತೆ, ಬರವಣಿಗೆ, ಸುದ್ದಿ ನಾಸಿಕ, ಸುದ್ದಿ ಸಂಗ್ರಹಕ್ಕೆ ಬೇಕಾದ ಸಂಪನ್ಮೂಲ, ಅಧ್ಯಯನ ಎಲ್ಲವೂ ಇದೆ. ಮನೆಯ, ಸಂಸಾರದ ಕೆಲಸದ ಒತ್ತಡದ ನಡುವೆ ಸಮಾಜದ ಆಗಹೋಗುಗಳಿಗೆ ಸದಾ ಸ್ಪಂದಿಸುವ ಅವರ ಸ್ವಭಾವ ನನ್ನ ಗಮನ ಸೆಳೆದಿತ್ತು.
ಈವತ್ತು ಸಂಪನ್ಮೂಲ ವ್ಯಕ್ತಿಯೊಬ್ಬರ ದೂರವಾಣಿ ನಂಬರ‍್ ಪಡೆಯಲೆಂದು ಅವರಿಗೆ ಫೋನ್‌ ಮಾಡಿದೆ. ನಂಬರ್‌ ಮಾತ್ರವಲ್ಲದೆ, ಪತ್ರಿಕೋದ್ಯಮದ ಒಳನೋಟದ ಬಗ್ಗೆ ಸಂಕ್ಷಿಪ್ತವಾಗಿ ತಮಗೆ ತಿಳಿದಿದ್ದನ್ನೆಲ್ಲ ಹೇಳಿಕೊಟ್ಟರು. ಸುದ್ದಿ, ಮಾಹಿತಿ, ಜ್ಞಾನ ನೀಡುವವರನ್ನು ಹೇಗೆ ಸ್ಮರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಅದರಲ್ಲಿಯೂ ಮುಖ್ಯವಾಗಿ ಹೇಳಿದ್ದೇನೆಂದರೆ- " ನಮಗೆ (ಪತ್ರಕರ್ತರಿಗೆ ಅಥವಾ ಯಾರಿಗೂ ಆಗಬಹುದು) ಮಗುವಿನಲ್ಲಿರುವ ಕುತೂಹಲ ಇರಬೇಕು. ಯಾವುದನ್ನು ಕೂಡ ನನಗೆ ಗೊತ್ತು ಅಂತ ಅಲಕ್ಷ್ಯ ಮಾಡಬಾರದು..ಯಾವುದೋ ಸಣ್ಣ ಎಳೆ ಮಹತ್ವದ ಮತ್ತೆಲ್ಲಿಗೋ ಕರೆದೊಯ್ಯಬಹುದು.. " ಎಂದರು.ಎಷ್ಟು ಸತ್ಯವಾದ ಮಾತು ಅಲ್ವಾ...ರೇಣುಕಾ ಮಂಜುನಾಥ್‌ ಅವರೇ, ಇಂತಹ ಸಲಹೆ, ಮಾರ್ಗದರ್ಶನ ಸದಾ ನಿರೀಕ್ಷಿಸುತ್ತೇನೆ. ನಿಮಗೆ ಧನ್ಯವಾದಗಳು.
ಈವತ್ತು ವಿಜಯ ಕರ್ನಾಟಕದಲ್ಲಿ ರೈತರ ಮಕ್ಕಳು ಯಾಕೆ ಬೇಸಾಯ ಮಾಡಲ್ಲ ಎಂಬ ಶೀರ್ಷಿಕೆಯ ನನ್ನ ಲೇಖನ ಪ್ರಕಟವಾಗಿದೆ. ಬೆಳಗ್ಗೆಯೇ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿಯವರು ಕರೆ ಮಾಡಿದ್ದರು.
ಕೇಶವ ಪ್ರಸಾದ್‌ ಅವರೇ, ತುಂಬ ಚೆನ್ನಾಗಿ ಲೇಖನ ಬರೆದಿದ್ದೀರಾ, ರೈತರ ಸಮಸ್ಯೆಗಳು ಮತ್ತಷ್ಟು ಬೆಳಕಿಗೆ ಬರಬೇಕು. ಹೀಗೆಯೇ ಬರೆಯುತ್ತಿರಿ...ಅಂತ ಹಾರೈಸಿದರು. ಸ್ವಾಮೀಜಿಯವರೇ, ನಿಮ್ಮ ಹಾರೈಕೆಗೆ ಪ್ರಣಾಮಗಳು.
ಮತ್ತೊಬ್ಬ ಓದುಗ, ಶಂಕರ ಮೂರ್ತಿ ಎಂಬುವರು, " ನಿಮ್ಮ ಲೇಖನ ಓದಿ ಖುಷಿ ಆಯಿತು. ನಾನೂ ರೈತನ ಮಗ. ೪ ಲಕ್ಷ ರೂ. ಸಾಲ ಮಾಡಿದ್ದೇನೆ. ಬೆಳೆ ನಷ್ಟವಾಗಿದೆ. ಮೋಸ ಮಾಡುವವರಿಗೆ ಸಾಲಮನ್ನಾ ಉಪಯೋಗವಾಗಿದೆ. ನಮಗೆಲ್ಲ ಅಲ್ಲ.. ಎಂದು ಪ್ರತಿಕ್ರಿಯಿಸಿದ್ದರು. ವಿಷಾದದಲ್ಲಿಯೂ, ಲೇಖನ ಅವರಿಗೆ ಖುಷಿ ತಂದಿತ್ತು.
ಎಷ್ಟೋ ಸಲ ಹಿರಿಯರು, ಕಿರಿಯರು ಆಡುವ ಪ್ರಬುದ್ಧ ಮಾತು, ಸಲಹೆಗಳು ಹೀಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತವೆ. ಅವರಿಗೆಲ್ಲ ಕೃತಜ್ಞತೆ ನುಡಿಚೈತ್ರದ ಮೂಲಕ ಮತ್ತೆ ಮತ್ತೆ ಧನ್ಯವಾದಗಳು.

Wednesday, 5 August 2009

ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?

ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ.
ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ.
ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..
ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.
ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.
ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು
ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ, ಸಾಲ ಜಾಸ್ತಿಯಾಗುತ್ತಿದೆ...
ಇಷ್ಟೆಲ್ಲ ಸಮಸ್ಯೆಗಳಿರುವಾಗ ದಿಕ್ಕು ತೋಚದೆ ಕೀಳರಿಮೆಯಿಂದ ನೊಂದು ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದಯವಿಟ್ಟು ಗ್ರಾಮ ವಾಸ್ತವ್ಯ ಮಾಡಿ ಅಂತ ಮಂತ್ರಿಗಳಿಗೆ ಪಕ್ಷಾಧ್ಯಕ್ಷರು ಉತ್ತರದಿಂದ ಬಂದು ಕೌನ್ಸಿಲಿಂಗ್ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಮಠಗಳು ಕೂಡ ಸಾಂಪ್ರದಾಯಿಕ ವ್ಯವಸಾಯಗಳನ್ನೆಲ್ಲ ಕೈ ಬಿಟ್ಟು ಶಿಕ್ಷಣ, ಎಂಜಿನಿಯರಿಂಗ್ ಅಂತ ಬೇರೆ ಉದ್ಯೋಗಗಳಲ್ಲಿ ಫಸಲು ಕಾಣುತ್ತಿವೆ. ಇನ್ನೂ ಕೃಷಿಯನ್ನು ನೆಚ್ಚಿರುವ ಸಣ್ಣ ಪುಟ್ಟ ಮಠಗಳ ಸ್ಥಿತಿ ಬಡಪಾಯಿ ರೈತನಿಗೆ ಸಮವಾಗಿದೆ.
ಎದೆ ಮುಟ್ಟಿ ಕೇಳಿ, ಯಾರಿಗೆ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವಾಸೆ ಇರುತ್ತದೆ ? ನಮ್ಮ ಸರಕಾರಗಳು ನಿಜಕ್ಕೂ ಪ್ರಾಂಜಲ ಮನಸ್ಸಿನಿಂದ ರೈತರ ನೋವನ್ನು ಶಮನಗೊಳಿಸುತ್ತಿವೆಯಾ ? ಪ್ರತಿ ಸಲ ಬಜೆಟ್ ಮಂಡನೆಮಧ್ಯಕ್ಕೆ ಒಗ್ಗೂಡಿಸುಯಾದಾಗಲೂ ಸರಕಾರ ತನ್ನದು ರೈತಪರ ಬಜೆಟ್ ಅಂತ ಘೋಷಿಸುವುದನ್ನು ನೋಡುತ್ತೇವೆ. ಕೇಂದ್ರ ಸರಕಾರ ವಿದರ್ಭ ಪ್ರಾಂತ್ಯದ ರೈತರಿಗೆ ಪ್ಯಾಕೇಜ್ ಪ್ರಕಟಿಸಿ ಕೈ ತೊಳೆಯಿತು. ಆದರೆ ಈವತ್ತಿಗೂ ಅಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ.
ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಉತ್ತೇಜಿಸಿದರೆ ರೈತನ ಬದುಕು ಉದ್ಧಾರವಾದೀತು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸುಲಿಗೆ ನಿಂತರೆ, ಬೆಳೆಗೆ ಯೋಗ್ಯ ಬೆಲೆ ಕಟ್ಟಿದರೆ ಮಿಕ್ಕಿದ ಸಮಸ್ಯೆಗಳೆಲ್ಲ ಕರಗಿಯಾವು ಅಂತ ಎಲ್ಲರಿಗೂ ಗೊತ್ತಿದೆ. ಆದರೆ ರೈತರ ಕಲ್ಯಾಣದ ಮಂಥನ, ಜಿಜ್ಞಾಸೆಗಳೆಲ್ಲ ಬಾಯುಪಚಾರದಲ್ಲೇ ನಿಂತುಬಿಟ್ಟಿದೆ. ಬರೀ ಮಾತು...ಮಾತು...ಮಾತು..ಬಹುಶಃ ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎಂದರೆ ಕೃಷಿಯೇ.
ನೋಡಿ, ಕೃಷಿ ಕ್ಷೇತ್ರದ ಸುಧಾರಣೆಗೆ ಉದ್ಯಮ ಬೆಂಬಲವಾಗಿ ನಿಲ್ಲಬೇಕು. ಅಭಿವೃದ್ಧಿ ಹೊಂದಿದ ಪ್ರತಿ ರಾಷ್ಟ್ರದಲ್ಲಿಯೂ ಶೇ.೮೦ರಷ್ಟು ಕೃಷಿ ಉತ್ಪನ್ನಗಳು ಸಮಸ್ಕರಣೆಯಾಗುತ್ತವೆ. ಆದರೆ ನಮ್ಮಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಹೊತ್ತಿಗೆ ಶೇ. ೪೦ರಷ್ಟು ಸಂಸ್ಕರಣೆಯಾಗದೆ ವ್ಯರ್ಥವಾಗುತ್ತವೆ.
ಗ್ರಾಮೀಣ ಪ್ರದೇಶಗಳ ಸಮಸ್ಯೆ ಮತ್ತು ಆತಂಕದ ಕಾರಣಗಳು ಒಂದೊಂದು ಕಡೆಯಲ್ಲಿ ಭಿನ್ನ. ನಮಗೆ ಚಾಮುಂಡಿ ಬೆಟ್ಟ ಗೊತ್ತು. ಬನ್ನೇರು ಘಟ್ಟ ಗೊತ್ತು. ಯಾಕೆಂದರೆ ಅವೆಲ್ಲ ಬೆಂಗಳೂರಿಗೆ ಸಮೀಪದಲ್ಲಿ ಇದೆ. ಆದರೆ ಗದಗಿನ ಸಮೀಪ ಸುಕಾರು ಒಂದು ಲಕ್ಷ ಎಕರೆಯಲ್ಲಿ ಹರಡಿರುವ ಕಪ್ಪತ್ತಗುಡ್ಡದ ಹೆಸರು ಎಷ್ಟು ಮಂದಿಗೆ ಗೊತ್ತಿದೆ ? ಹೇರಳ ನೈಸರ್ಗಿಕ ಸಂಪನ್ಮೂಲದ ಆಗರವಾಗಿರುವ ಕಪ್ಪತ್ತಗುಡ್ಡದಲ್ಲಿ ಅತ್ಯಂತ ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ ನಾನಾ ಬಗೆಯ ವದಂತಿಗಳು ಕೂಡಾ. ಅದೇನೆಂದರೆ ಗಣಿಗಾರಿಕೆ. ಇಲ್ಲಿ ಇದೆ ಎನ್ನಲಾಗಿರುವ ಚಿನ್ನದ ಅದಿರನ್ನು ಕಬಳಿಸಲು ಯತ್ನಿಸುತ್ತಿರುವ ಕಂಪನಿಗಳು, ಸೋಡಿಯಂ ಸಯನೈಡ್ ಅನ್ನು ಪ್ರಯೋಗಿಸಲು ಸಂಚು ಹೂಡಿವೆ ಎಂಬ ಗುಲ್ಲು ಗುಡ್ಡದ ತಪ್ಪಲಿನಲ್ಲಿದೆ. ಚಿನ್ನದ ಗಣಿಗಾರಿಕೆಯಲ್ಲಿ ಬಳಸುವ ಈ ಸೋಡಿಯಂ ಸಯನೈಡ್ ಅತ್ಯಂತ ವಿಷಪೂರಿತ.
ಕಪ್ಪತ್ತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪದ ಮೇಲೆ ಬಂಡವಾಳಶಾಹಿ ಕಂಪನಿಗಳ ವಕ್ರ ದೃಷ್ಟಿ ಬಿದ್ದಿದೆ. ಹೇಗಾದರೂ ಗುಡ್ಡದಲ್ಲಿ ಗಣಿಗಾರಿಕೆ ನಡೆಸಬೇಕೆಂದು ಹೊಂಚು ಹಾಕುತ್ತಿವೆ ಎಂಬ ವದಂತಿ ಈ ಭಾಗದ ಐವತ್ತಾರು ಗ್ರಾಮಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಗಣಿಗಾರಿಕೆ ಆರಂಭವಾದರೆ ಅಲ್ಲಿನ ಪರಿಸರ, ಜೀವಸಂಕುಲ, ಸುತ್ತುಮುತ್ತಲ ಕೃಷಿ ಬದುಕಿನ ನಶ ಸಮೀಪಿಸಿದಂತೆಯೇ ಸರಿ. ಆದರೆ ಈ ಗಂಭೀರ ಸಮಸ್ಯೆಯನ್ನು ಆಲಿಸಲು ಒಬ್ಬರೂ ಬಂದಿಲ್ಲ ಎಂದು ನೋವು ಮತ್ತು ಅಸಹನೆಯಲ್ಲಿ ಹೇಳುತ್ತಾರೆ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿ.
ಹೀಗೆ ಏಕಕಾಲದಲ್ಲಿ ದಶದಿಕ್ಕುಗಳಿಂದ ಸಮಸ್ಯೆಗಳು ಬಂದೆರಗಿರುವುದರಿಂದ ಯುವಜನತೆ ಬೆಂಗಳೂರಿಗೋ, ಮುಂಬಯಿಗೋ, ಗೋವಾಗೋ, ಹುಬ್ಬಳ್ಳಿಗೋ ಹೋಗುವುದರಲ್ಲಿ ಆಶ್ಚರ್ಯವಾಗುವಂಥದ್ದೇನಿದೆ ?

Tuesday, 4 August 2009

ಕೃಷಿ ನೆಚ್ಚಿಕೊಂಡ ಮಠಗಳ ವ್ಯಥೆ...

" ಕೃಷಿಯ ಬಗ್ಗೆ ನಮ್ಮ ಜನಕ್ಕೆ ಅತೀವ ಕೀಳರಿಮೆ ಉಂಟಾಗಿದೆ. ಈ ಹಿಂದೆ ವ್ಯವಸಾಯವನ್ನು ಆದಾಯಕ್ಕೆ ನೆಚ್ಚಿಕೊಂಡಿದ್ದ ಮಠಗಳು ಕೂಡ ಈಗ ಶಿಕ್ಷಣ, ವೈದ್ಯಕೀಯದಲ್ಲಿ ಫಸಲು ಕಾಣುತ್ತಿವೆ. ಬೇಸಾಯವನ್ನು ನೆಚ್ಚಿಕೊಂಡಿರುವ ಚಿಕ್ಕಪುಟ್ಟ ಮಠಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಯಾರೊಬ್ಬರೂ ಬಹಿರಂಗವಾಗಿ ಹೇಳುತ್ತಿಲ್ಲವಷ್ಟೇ...
ಸ್ವತಃ ಸ್ವಾಮೀಜಿಯೊಬ್ಬರೇ ಹೇಳಿದ ಮಾತಿದು. ಅವರ ಹೆಸರು ಶ್ರೀ ಶಿವಕುಮಾರ ಸ್ವಾಮಿ. ಗದಗದ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಸ್ವಾಮೀಜಿಯವರು. ೨೦೦೨ರಲ್ಲಿ ಪಟ್ಟವನ್ನೇರಿದ್ದ ಶಿವಕುಮಾರ ಸ್ವಾಮಿಯವರಿಗೆ ಪರಿಸರದ ಬಗ್ಗೆ ಕಾಳಜಿ. ಸ್ವತಃ ಕೃಷಿಕರು ಎಂದು ಹೇಳಿಕೊಳ್ಳಲು ಅವರಿಗೆ ಹೆಮ್ಮೆ. ಕೃಷಿ ಬಿಟ್ಟರೆ ಮಿಕ್ಕಿದ್ದೆಲ್ಲ ದಂಧೆ ಎನ್ನುವ ಸ್ವಾಮೀಜಿ ಗದಗ ಸಮೀಪದ ಕಪ್ಪತ್ತಗುಡ್ಡದಲ್ಲಿ ಎದ್ದಿರುವ ಗಣಿಗಾರಿಕೆಯ ಭೀತಿ ಬಗ್ಗೆ ಇತ್ತೀಚೆಗೆ ವಿವರಿಸಿದರು. ಆ ಬೆಟ್ಟದಲ್ಲಿ ಹುದುಗಿರುವ ಚಿನ್ನದ ಅದಿರನ್ನು ತೆಗೆಯಲು ಕೆಲವು ಕಂಪನಿಗಳು ಹುನ್ನಾರ ನಡೆಸಿದ್ದು, ಬೆಟ್ಟದ ಉಳಿವಿಗೆ ಸಂಚಕಾರ ಬಂದಿದೆ ಎಂಬುದು ಅವರ ಆತಂಕ.
ಹಳ್ಳಿಯ ಜನಜೀವನದ, ಕಷ್ಟ ಸಂಕಷ್ಟಗಳ ಆಳವಾದ ಪರಿಚಯ ಇರುವ ಸ್ವಾಮೀಜಿಗೆ ಸರಕಾರ ಪರಿಸರ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ. ಆದರೆ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಎತ್ತಿರುವ ಧ್ವನಿಯನ್ನು ಮುಚ್ಚಲು ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ವಾಕ್ಯ ಮಾತನಾಡಲೂ ನನಗೆ ಅವಕಾಶ ನೀಡಿರಲಿಲ್ಲ. ಆದರೆ ಆತ್ಮವಂಚನೆಯಿಂದ ಬದುಕಲು ನನಗೆ ಸಾಧ್ಯವಿಲ್ಲ. ಹಳ್ಳಿಯ ಪರಿಸರದ ಸಂರಕ್ಷಣೆಗೆ, ಕೃಷಿಕರ ಹಿತಾಸಕ್ತಿಗೆ ದುಡಿಯುವುದನ್ನು ನಿಲ್ಲಿಸಲಾರೆ ಎನ್ನುತ್ತಾರೆ ಶಿವಕುಮಾರ ಸ್ವಾಮಿ.
ಬೆಸಗರಹಳ್ಳಿ ರಾಮಣ್ಣನವರ ಓದು
ಅಣ್ಣ ಎಲ್ಲಾದರೂ ಹೋದರೆಂದರೆ ಎರಡು ಕೈಯಲ್ಲೂ ಗಿಟಕಿರುತ್ತಿದ್ದ ಪುಸ್ತಕದ ದಂಡನ್ನು ಹೊತ್ತು ತರುತ್ತಿದ್ದರು. ಅವು ಸಾಹಿತ್ಯ, ಭೂಗೋಳ, ವಿಜ್ಞಾನ ಇತ್ಯಾದಿ ಪ್ರಪಂಚದ ಸಕಲೆಂಟು ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಾಗಿರುತ್ತಿದುವು. ಆ ಹೊಸ ಪುಸ್ತಕಗಳಿಂದ ಹೊಮ್ಮುತ್ತಿದ್ದ ಹೊಸ ಅಕ್ಷರಗಳ ವಾಸನೆಯನ್ನು ಆಘ್ರಾಣಿಸುವುದು ನನಗೆ ಇಷ್ಟವಾಗುತ್ತಿತ್ತು. ತಂದ ತಕ್ಷಣವೆ ಅಣ್ಣನಿಗೆ ಓದುವ ಆತುರ. ಸಿಕ್ಕ ಯಾರನ್ನೇ ಆಗಲಿ ಎಳೆದು ಕೂರಿಸಿ, ಕಾಫಿ ಕುಡಿಸಿ ಆ ಪುಸ್ತಕದ ಕುರಿತೇ ಮಾತು. ಆ ಪುಸ್ತಕದ ಗಹನತೆ, ಕೃತಿಕಾರನ ಚಿಂತನೆ, ಅವುಗಳ ಪ್ರಸ್ತುತತೆ ಮುಂತಾದವುಗಳ ಬಗ್ಗೆ ನಿರರ್ಗಳ ಮಾತಾಡಿ, ತಮಗೆ ಮೆಚ್ಚುಗೆಯಾದ ಸಾಲುಗಳನ್ನು ನೆನಪಿನಿಂದಲೇ ಉದ್ಧರಿಸುತ್ತಿದ್ದರು. ಎದುರು ಕೂತವರಿಗೆ ಆ ಪುಸ್ತಕವನ್ನು ಕೊಟ್ಟು ಮುಟ್ಟಯ್ಯ, ಹೆಂಗದೆ ನೋಡು, ಓದ್ಬೇಕು. ಅವನ ಅನುಭವ ನೋಡು ಎಂದು ಕನಿಷ್ಠ ಪುಸ್ತಕವನ್ನು ಮುಟ್ಟುವಂತೆ ಮಾಡುತ್ತಿದ್ದರು. ಹಾಗೆ ಸಿಕ್ಕವರು ಯುವಕರಾಗಿದ್ದರಂತೂ, ಪುಸ್ತಕ ಕೊಳ್ಳುವಂತೆ ತರಿಸಿಕೊಟ್ಟು ಓದಲು ಪ್ರೇರೇಪಿಸುತ್ತಿದ್ದರು.
ಆಸ್ಪತ್ರೆಯ ಬಿಡುವಿಲ್ಲದ ಕೆಲಸ ಮುಗಿಸಿ, ಅಣ್ಣ ಮನೆಗೆ ಬಂದು, ಒಂದು ಸ್ನಾನ ಮಾಡಿ ಪುಸ್ತಕಗಳೊಂದಿಗೆ ಕೂತರೆಂದರೆ ಅದೊಂದು ಧ್ಯಾನ ಸ್ಥಿತಿ. ಹಾಸಿಗೆಯ ಸುತ್ತಾ ತಮಗೆ ಪ್ರಿಯವಾದ ಪುಸ್ತಕಗಳನ್ನು ಹರಡಿಕೊಂಡು, ಇಷ್ಟವಾದದ್ದನ್ನು ಓದುತ್ತಾ, ಏನಾದರೂ ಅನಿಸಿದರೆ ಅಲ್ಲೇ ಬರೆಯುತ್ತಾ ಬೆಳಗಿನ ಜಾವದವರೆಗೂ ಕೂತಿರುತ್ತಿದ್ದರು. ಅವರ ನಿದ್ದೆಯನ್ನು ಕೋಳಿ ನಿದ್ದೆಯೆಂದು ನಾವು ತಮಾಷೆ ಮಾಡುತ್ತಿದ್ದೆವು.
( ಆಗಸ್ಟ್ ಸಂಚಿಕೆಯ ಮಯೂರದಲ್ಲಿ ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಬಗ್ಗೆ ಪುತ್ರ ರವಿ ಬೆಸಗರಹಳ್ಳಿ ಮನೋಜ್ಞವಾದ ಲೇಖನದ ಮೂಲಕ ತಂದೆಯನ್ನು ಸ್ಮರಿಸಿದ್ದಾರೆ. ಲೇಖನದ ಕೆಲವು ಸಾಲುಗಳು ಇಲ್ಲಿವೆ )
ನಾಗೇಶ್ ಹೆಗಡೆ ಜತೆ
ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಗುರುಗಳಾದ ನಾಗೇಶ್‌ ಹೆಗಡೆಯವರ (ತರಗತಿಯ ಗುರುಗಳಲ್ಲ ) ಜತೆ ಎಷ್ಟು ಹೊತ್ತು ಮಾತನಾಡಿದರೂ ನನಗೆ ಸಾಲುವುದಿಲ್ಲ. ಅವರ ಆತ್ಮೀಯತೆ, ತಿಳಿ ಹಾಸ್ಯ, ತಾಳ್ಮೆ, ಅಪಾರ ಜ್ಞಾನ, ಮಾತಿನ ಮೋಡಿ, ಎಳೆಯರನ್ನು ಪ್ರೋತ್ಸಾಹಿಸುವ ಪರಿ ಯಾವಾಗಲೂ ನನ್ನನ್ನು ಅಚ್ಚರಿಗೆ ದೂಡುತ್ತದೆ.
ನಾನೊಂದು ವೇಳೆ ಅವರನ್ನು ಹೊಗಳುತ್ತಿದ್ದೇನೆ ಎಂದು ಭಾವಿಸುತ್ತಾರೋ, ಏನೋ, ಆದರೆ ಇದು ನಿಜ. ಅವರಿಂದ ನಾವೆಲ್ಲ ಕಲಿಯಬೇಕಾದ್ದು ಬಹಳಷ್ಟಿದೆ.
ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಒತ್ತಡ, ಗೊಂದಲ ಆದಾಗ ಸಾಮಾನ್ಯವಾಗಿ ನೆಚ್ಚಿನ ಗುರುಗಳ ಫೋನ್ ನಂಬರ‍್ ಒತ್ತಿ ಕಿವಿಗೆ ಹಚ್ಚುತ್ತೇನೆ. ಅತ್ತ ಕಡೆಯಿಂದ ಅವರು ಸೂಕ್ತ ಸಲಹೆ ಕೊಡುತ್ತಾರೆ. ನಾನಂತೂ ಒಮ್ಮೆಯೂ ನಿರಾಶನಾಗಿಲ್ಲ. ಬದಲಿಗೆ ಹೊಸ ಹೊಳಹು, ಸ್ಪೂರ್ತಿ ಅವರಿಂದ ಸಿಕ್ಕಿದೆ.


Sunday, 2 August 2009

ಸುದ್ದಿಮನೆಯಲ್ಲಿ ಪತ್ರಕರ್ತರೇಕೆ ತಣ್ಣಗಾಗಿದ್ದಾರೆ ?

ಈ ಸಲ ವಿಧಾನ ಸಭೆ ಅಧಿವೇಶನದಲ್ಲಿ ಡಿಕೆ ಶಿವಕುಮಾರ‍್ ಸಿದ್ದರಾಮಯ್ಯ , ಉಗ್ರಪ್ಪ ಮೊದಲಾದ ರಾಜಕಾರಣಿಗಳೇ ಹತ್ತು ಹಲವಾರು ಹಗರಣಗಳನ್ನು ಹೊರಗೆಳೆದರು. ಮತ್ತೊಂದು ಕಡೆ ಲೋಕಾಯುಕ್ತರು ಆಗಿಂದಾಗ್ಗೆ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಜಾಲಾಡುತ್ತಿದ್ದಾರೆ. ಡಿಕೆಶಿ ಆರೋಪಿಸಿದ ಇಸ್ಕಾನ್ ಹಗರಣ, ಜೆಡಿಎಸ್ ಮುಂದಿಟ್ಟ ಗೃಹ ಮಂಡಳಿ ಹಗರಣಗಳಂತೂ ಈ ರಾಜ್ಯದಲ್ಲಿ ಮಾಧ್ಯಮಗಳೇನು ಮಾಡುತ್ತಿವೆ ಎಂಬ ಪ್ರಶ್ನೆ ಹುಟ್ಟಿಸಿದೆ.
ಹಾಗಾದರೆ ರಾಜಕಾರಣಿಗಳು ಬಯಲಿಗೆಳೆದ ಹಗರಣಗಳನ್ನು ಪರ್ತಕರ್ತರು ಯಥಾವತ್ ವರದಿ ಒಪ್ಪಿಸುವಂತೆ ಯಾಕಾಯಿತು ?
ವಾಸ್ತವವಾಗಿ ಕೆಂಡದಂಥ ವರದಿಗಳನ್ನು ಬರೆಯುವ ಅವಕಾಶ ಈವತ್ತಿನ ಪರ್ತ್ರಕರ್ತರಿಗೆ ಕಡಿಮೆಯಾಗುತ್ತಿದೆ.
ದೊಡ್ಡ ಪತ್ರಿಕೆಗಳು ತಮ್ಮ ಉಳಿವಿಗೆ ಜಾಹೀರಾತುಗಳ ಬೆನ್ನು ಹತ್ತುತ್ತಿವೆ. ಪತ್ರಿಕಾಲಯದಲ್ಲಿ ಜಾಹೀರಾತು ವಿಭಾಗ ಪ್ರಾಬಲ್ಯ ಪಡೆಯುತ್ತಿದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಪತ್ರಿಕೆಯೊಂದಕ್ಕೆ ಜಾಹೀರಾತು ನೀಡುತ್ತವೆ ಎಂದಿಟ್ಟುಕೊಳ್ಳೋಣ. ಆಗ ಆ ಕ್ಷೇತ್ರಕ್ಕೆ ಸಂಬಂಧಿಸಿ ಸ್ಫೋಟಕ ವರದಿ ತಯಾರಿಸಲು ವರದಿಗಾರ ಸಾವಿರ ಸಲ ಯೋಚಿಸಬೇಕಾಗುತ್ತದೆ. ಹೀಗಿದ್ದರೂ ಖಾತರಿ ಇರುವುದಿಲ್ಲ. ಒಂದೆರಡು ಸಲ ಇಂಥ ಅನುಭವ ಆದಲ್ಲಿ ಸಹಜವಾಗಿ ಭ್ರಮ ನಿರಸನ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇಂತಹ ಹುಂಬತನದಿಂದ ಕೆಲಸ, ಬಡ್ತಿಗೆ ಕುತ್ತು ಉಂಟಾದರೇನು ಗತಿ ಎಂಬ ಆತಂಕ ಉಂಟಾಗುತ್ತದೆ. ಕೆಲವು ಪತ್ರಿಕಾಲಯಗಳಲ್ಲಿ ಹುದ್ದೆಗೆ ಸೇರಿಸಿಕೊಳ್ಳುವಾಗಲೇ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹೀಗೆ ಮ್ಯಾನೇಜ್ ಮೆಂಟ್‌ಗೆ ತನ್ನ ಜುಟ್ಟನ್ನು ಕೊಡುವ ಪತ್ರಕರ್ತನ ಸಂಕಟ ಅವನಿಗೇ ಗೊತ್ತು.
ಈವತ್ತು ಗುತ್ತಿಗೆ ಆಧಾರದಲ್ಲಿ ಪರ್ತಕರ್ತರ ನೇಮಕ ನಡೆಯುತ್ತಿರುವುದು ಸಾಮಾನ್ಯ. ಈಗಾಗಲೇ ಕೆಲಸದಲ್ಲಿ ಇರುವವರನ್ನೂ ಗುತ್ತಿಗೆಗೆ ಪರಿವರ್ತಿಸಲಾಗಿದೆ. ಹೀಗಾಗಿ ಯಾವಾಗ ಏನಾಗಬಹುದು ಎಂಬ ಅನಿಶ್ಚಿತತೆ ಸದಾ ಕಾಡುತ್ತಿರುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಒಂದು ದಿನ ಕೆಲಸ ಇಲ್ಲದಿದ್ದರೆ ಬದುಕುವುದು ಕಷ್ಟ. ಪತ್ರಕರ್ತನೂ ಎಲ್ಲರಂತೆ ತನ್ನದೇ ಕೌಟುಂಬಿಕ ಹೊರೆ, ಸಾಲದ ಹೊರೆ, ಬದ್ದತೆಗಳ ಸಂಸಾರದಲ್ಲಿರುತ್ತಾನೆ. ಅನಗತ್ಯ ರಿಸ್ಕ್‌ ಯಾಕೆ ಬೇಕು ಎಂಬ ಭಾವ ಸಹಜವಾಗಿ ಚಾಲ್ತಿಯಲ್ಲಿರುತ್ತದೆ.
ಇನ್ನು ಕೆಲವು ಪರ್ತಕರ್ತರಿಗೆ ಕೆಲಸ ಇದ್ದರೆ ಸಾಕು. ಉಳಿದೆಲ್ಲ "ಸಂಪಾದನೆ" ಹೊರಗೆ ಆಗಿಬಿಡುತ್ತದೆ. ಹೀಗಾಗಿ ಅವರಿಗೆ ಯಾವುದೇ ಸಾಮಾಜಿಕ ಬದ್ಧತೆ ಇರುವುದಿಲ್ಲ. ಪರ್ತಕರ್ತರ ಮುಖವಾಡ ಮಾತ್ರ ಅವರಿಗೆ ಸಾಕು. ಯಾವುದೇ ಪ್ರಲೋಭನೆಗೆ ಒಳಗಾಗದೆ ಉಳಿಯುವ ವರದಿಗಾರನೊಬ್ಬ ಸಾಕಷ್ಟು ಹೋರಾಡಿ ಸ್ಫೋಟಕ ವರದಿ ಬರೆದನೆಂದರೆ, ಅದು ಪ್ರಕಟವಾಗುತ್ತದೆ ಎಂಬ ಖಾತರಿ ಇಲ್ಲ.
ಪರ್ತಕರ್ತರು ಕೂಡ ಸಾಲದ ಹೊರೆಯಿಂದ ಬಳಲುತ್ತಾರೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಅಂತ ನಾನಾ ಬಗೆಯ ಆರ್ಥಿಕ ಬದ್ಧತೆ ಅವರಿಗಿರುತ್ತದೆ. ರಿಸೆಶನ್ ಅಂತ ಕಂಪನಿ ಸಂಬಳ ಹೆಚ್ಚಿಸುವುದಿಲ್ಲ. ಹೊಸ ನೇಮಕ ಪ್ರಕ್ರಿಯೆಗಳು ನಿಂತು ಹೋಗಿವೆ. ಹೀಗೆಲ್ಲ ಪರಿಸ್ಥಿತಿ ವಿಷಮಿಸಿರುವಾಗ ತಾವಾಗಿಯೇ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಕೊಟ್ಟ ಕೆಲಸವನ್ನು ಮಾಡಿ ಮನೆಗೆ ಹೋಗುವ ಎಂಬ ರಕ್ಷಣಾತ್ಮಕ ಭಾವನೆ ಉಂಟಾಗದಿರುವುದಿಲ್ಲ.

ಸ್ಕಿಪ್ಟ್ ಚಿತ್ರದ ತಾಯಿ ಇದ್ದ ಹಾಗೆ

ಒಳ್ಳೆಯ ಸ್ಕಿಪ್ಟ್ ನಿಂದ ಚಿತ್ರಗಳು ಗೆದ್ದಿರುವ ಅನೇಕ ಉದಾಹರಣೆಗಳಿವೆ.
ಸ್ಕಿಪ್ಟ್ ಚಿತ್ರದ ತಾಯಿ ಇದ್ದ ಹಾಗೆ.
ಆದರೆ ಅದಕ್ಕೆ ನಿಮ್ಮ ಶಿಸ್ತು, ಅಧ್ಯಯನ, ಅಲೆದಾಟ, ಪ್ರಸ್ತುತತೆ, ತಾಂತ್ರಿಕ ನೈಪುಣ್ಯ ಮತ್ತು ಅಂತಿಮವಾಗಿ ನಿಮ್ಮದೇ ಆದ ದರ್ಶನ ಮುಖ್ಯ ಅನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ‍್.
ಈ ಹಿಂದೆ ಅವರ ಮನೆ ಸಿಹಿ ಕನಸಿನಲ್ಲಿ ಮಾತನಾಡಿಸಿದ್ದಾಗ ಚಲನಚಿತ್ರ ಸಂಭಾಷಣೆ ಮತ್ತು ಚಿತ್ರಕಥೆಯ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದರು. ಅದರ ವಿವರ ಇಲ್ಲಿದೆ. ಅವರು ಹೇಳ್ತಾರೆ..
ಚಿತ್ರಕಥೆ-ಸಂಭಾಷಣೆ ಎಲ್ಲವನ್ನೂ ಸ್ಕಿಪ್ಟ್ ಒಳಗೊಳ್ಳುತ್ತದೆ. ಅದನ್ನು ಬರೆಯಬೇಕು ಎಂಬ ಹಂಬಲ ಇರುವವರು ಸಂಬಂಧಪಟ್ಟ ಪುಸ್ತಕಗಳನ್ನು ಓದಬೇಕು. ಇಂಗ್ಲಿಷ್‌ ನಲ್ಲಿ ಬೇಕಾದಷ್ಟು ಪುಸ್ತಕಗಳು ಸಿಗುತ್ತವೆ. ಕನ್ನಡದಲ್ಲಿ ಜಾಸ್ತಿಯಿಲ್ಲ. ಪುಸ್ತಕ ಓದುವುದರಿಂದ ಚಿತ್ರಕಥೆ ಬರೆಯೋದು ಹೇಗೆ ಎಂಬುದರ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆಯುತ್ತದೆ. ಕ್ಯಾಮರಾದ ಬಗ್ಗೆ ಕೂಡ ಮಾಹಿತಿ ತಿಳಿದಿರಬೇಕು. ಸಿನಿಮಾ ಛಾಯಾಗ್ರಹಣದಲ್ಲಿ ಯಾವ ಲೆನ್ಸ್ ಬಳಸುತ್ತಾರೆ, ಲೆನ್ಸ್, ಫಿಲ್ಟರ‍್ , ಲೈಟಿಂಗ್ಸ್ ಬಗ್ಗೆ ಅಗತ್ಯಕ್ಕೆ ತಕ್ಕಷ್ಟು ಅರಿವು ಇರಬೇಕು.
ಒಳ್ಳೆಯ ಸ್ಕಿಪ್ಟ್ ನಲ್ಲಿ ಡೈಲಾಗ್ ಕಡಿಮೆ ಇರುತ್ತದೆ. ತಾಂತ್ರಿಕತೆ ಸಮೃದ್ಧವಾಗಿರುತ್ತದೆ. ಇಲ್ಲವಾದಲ್ಲಿ ಅದೊಂದು ಶಾಲಾ ಮಕ್ಕಳ ನಾಟಕದಂತಿರುತ್ತದೆ. ಈ ತಾಂತ್ರಿಕತೆಯನ್ನು ತಿಳಿದುಕೊಳ್ಳಲು ಪುಸ್ತಕ ಓದಬಹುದು, ನಿರ್ದೇಶಕರು, ಛಾಯಾಗ್ರಾಹಕರನ್ನು ಭೇಟಿಯಾಗಬೇಕು. ಪ್ರೊಡಕ್ಷನ್ ಕಂಪನಿಗಳಲ್ಲಿ ಸಹಾಯಕರಾಗಿ ಅನುಭವ ಪಡೆದುಕೊಳ್ಳಬೇಕು.
ನಿರ್ದೇಶಕ ಏನನ್ನು ಹೇಳಲು ಬಯಸುತ್ತಾನೆ ಎಂಬುದನ್ನು ಲೇಖಕ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಸಾಹಿತ್ಯದ ಗಂಧ ಇಲ್ಲದಿದ್ದರೆ ಒಳ್ಳೆಯ ಕಥೆ-ಸಂಭಾಷಣೆ ಅಸಾಧ್ಯ. ಭಾಷೆಯ ಮೇಲೆ ಹಿಡಿತ ಸಿಗಲ್ಲ. ಯಾರು ಉತ್ಕೃಷ್ಟ ಸ್ಕಿಪ್ಟ್ ಬರೀತಾರೋ, ಶ್ರದ್ಧೆ, ಶಿಸ್ತಿನಿಂದ ದುಡೀತಾರೋ, ಅವರನ್ನು ಹುಡುಕಿಕೊಂಡು ಹೇಗಬೇಕಾದ ಪರಿಸ್ಥಿತಿ ಇದೆ. ಇನ್ನು ಕತೆಯನ್ನು ಬರೆಯುವ ಸಂಸ್ಕೃತಿಯ ಬದಲಿಗೆ ಹೇಳುವ ಸಂಸ್ಕೃತಿ ಉಂಟಾಗಿದೆ. ಲೇಖಕರ ಕತೆಯನ್ನು ಕೇಳುವ ವ್ಯವಧಾನ ನಿರ್ದೇಶಕರಲ್ಲಿ ಇರಲ್ಲ. ಒಳ್ಳೆಯ ಬರಹಗಾರರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ.
ಚಲನಚಿತ್ರ ಮಂಡಳಿ ಮತ್ತು ಚಿತ್ರೋದ್ಯಮ ಒಳ್ಳೆಯ ಬರಹಗಾರರನ್ನು ಗುರುತಿಸುವ ಯೋಜನೆ ಹಮ್ಮಿಕೊಳ್ಳಬೇಕು.