
ನಾನು ಪತ್ರಿಕಾ ರಂಗಕ್ಕೆ ಸೇರಿದ ಸಂದರ್ಭ. ಮಿತ್ರನೊಬ್ಬ ಹೇಳಿದ್ದ ಮಾತು ಈಗಲೂ ನೆನಪಿನಲ್ಲಿದೆ. " ಇಲ್ಲಿ ಯಾರನ್ನೂ ನಂಬ ಬೇಡ, ನನ್ನನ್ನೂ ಕೂಡಾ..." ಅಂತ ಹೇಳಿದ್ದ !
ಈಗ ನಾನು ಅವನನ್ನು ನಂಬುತ್ತಿಲ್ಲ. ಆದರೆ ನಾನು ನಂಬುವ ಪತ್ರಕರ್ತರು ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ.
ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ ವೃತ್ತಿ ಮಾತ್ಸರ್ಯ, ಸಣ್ಣತನ, ದೊಡ್ಡತನ, ಕಾಲೆಳೆಯುವುದು, ಕೊಚ್ಚಿಕೊಳ್ಳುವುದು ಇಲ್ಲಿ ಕೂಡ ಇದೆ. ಬರೆಯುವುದು ಒಂದು, ಮಾಡುವುದು ಮತ್ತೊಂದು ಇಲ್ಲಿ ಕಂಡುಬರುತ್ತದೆ..ಜತೆಗೆ ನಿಜಕ್ಕೂ ಸಹಾಯ ಮಾಡುವವರೂ ಇದ್ದಾರೆ ಅನ್ನಿ. ಆದರೆ ಅಂತಹ ಮಹಾನುಭಾವರ ಸಂಖ್ಯೆ ಮಾತ್ರ ಕಮ್ಮಿ.
ಮತ್ತೊಬ್ಬರಿಗೆ ವಿಮರ್ಶೆಗೆ ಅಂತ ಪ್ರತಿ ವಾರ ಹತ್ತಾರು ಪುಸ್ತಕಗಳು ಸಿಗುತ್ತವೆ. ಆದರೆ ಯಾವೊಬ್ಬ ಸಹೋದ್ಯೋಗಿಗೂ ಅವುಗಳನ್ನು ಓದಲು ಅವರು ಬಿಡುವುದಿಲ್ಲ. ಸ್ವತಃ ಅವರ ವಿಭಾಗದ ಸಹವರ್ತಿಗಳಿಗೂ ಕೊಡುವುದಿಲ್ಲ. ಈ ಬಗ್ಗೆ ಕೇಳಿದರೆ, ಪುಸ್ತಕ ತೆಗೆದುಕೊಂಡು ಹೋಗುವವರು ವಾಪಸ್ ಕೊಡುವುದಿಲ್ಲ, ಕಳ್ಳತನ ಮಾಡುತ್ತಾರೆ ಎಂಬ ಉತ್ತರ ಕಾದಿರುತ್ತದೆ.
ಇತ್ತೀಚೆಗೆ ಮತ್ತೊಂದು ಸಂಗತಿ ಹೇಳಿದರು. ನಾನು ಪರೀಕ್ಷಿಸುವ ಸಲುವಾಗಿ ಕೆಲವು ಅಷ್ಟೇನೂ ಮಹತ್ವವಲ್ಲದ ಪುಸ್ತಕಗಳನ್ನು ಹಾಗೆಯೇ ಬಿಟ್ಟು ಹೋಗುತ್ತೇನೆ. ಮರುದಿನವೇ ಅವು ನಾಪತ್ತೆಯಾಗುತ್ತವೆ..
ಹೀಗಾಗಿ ಏನಾಗಿದೆ ಎಂದರೆ ಪುಸ್ತಕಗಳೆಲ್ಲ ಬೀಗ ಹಾಕಿದ ಕಪಾಟುಗಳಲ್ಲಿ ಸುಭದ್ರವಾಗಿರುತ್ತವೆ. ಯಾರಿಗೂ ಆ ಜ್ಞಾನ ಭಂಡಾರ ಸಿಗುವುದಿಲ್ಲ. ಓದುವುದಿದ್ದರೆ ಅವರೊಬ್ಬರೇ !
ನಿಜ ಸಂಗತಿ ಏನೆಂದರೆ ಅವರಿಗೆ ಮತ್ತೊಬ್ಬರು ಓದುವುದನ್ನು ಕಂಡರಾಗುವುದಿಲ್ಲ. ಓದಿ ಜಾಣರಾಗಿ ಬಿಟ್ಟರೆ ಎಂಬ ಆತಂಕ ! ಪುಸ್ತಕ ಕಳ್ಳತನ, ಪರೀಕ್ಷೆ ಎಲ್ಲ ಕುಂಟು ನೆಪವಷ್ಟೇ.
ಮತ್ತೊಬ್ಬರಿದ್ದಾರೆ, ಅವರ ಹತ್ತಿರ ಯಾರದ್ದಾದರೂ ಗಣ್ಯರ ಫೋನ್ ನಂಬರ್ ಕೇಳಿದರೆ, ನಯವಾಗಿ ತಪ್ಪಿಸಿಕೊಳ್ಳುತ್ತಾರೆ. ಇವನೇದಾರೂ ನನಗೇ ಗೊತ್ತಿಲ್ಲದೆ ದೊಡ್ಡ ಸ್ಟೋರಿ ಮಾಡಿದರೆ ? ಎಂಬ ಆತಂಕ. ಇಂತಹ ಸಣ್ಣತನ, ದಡ್ಡತನ ಮತ್ತು ತಮಾಷಿಗಳಿಗೆ ಲೆಕ್ಕವೇ ಸಿಗದು. ಮುಂದೆ ಆ ಬಗ್ಗೆ ಬರೆಯುತ್ತೇನೆ.
No comments:
Post a Comment