Wednesday 30 September 2009

ಆರ್ಕಿಟೆಕ್ಟ್ ಎಂದರೆ ಯಾರು ?

( ಆರ್ಕಿಟೆಕ್ಟ್ ವಿಲ್‌ಫ್ರೆಡ್ ಬೇಕರ್ ಅವರ ನೀತಿ, ನಿಲುವು, ಪರಿಸರ ಪ್ರೇಮ ಸ್ವಾರಸ್ಯಕರ. ಅವರ ಅನಿಸಿಕೆಗಳು ಇಲ್ಲಿವೆ)
ಈ ಪ್ರಶ್ನೆಗೆ ನಾನಾ ಉತ್ತರಗಳು ಇರಬಹುದು.
ನಿಘಂಟುಗಳ ಪ್ರಕಾರ ಆರ್ಕಿಟೆಕ್ಚರ್ ಅನ್ನು ಪ್ರಾಕ್ಟೀಸ್ ಮಾಡುವ ವ್ಯಕ್ತಿಯೇ ಆರ್ಕಿಟೆಕ್ಟ್. ಕಟ್ಟಡಗಳನ್ನು ನಿರ್ಮಾಣ ಮಾಡುವ ಕಲೆ ಮತ್ತು ವಿಜ್ಞಾನವೇ ಆರ್ಕಿಟೆಕ್ಚರ್ !
ನಾನೂ ಆರ್ಕಿಟೆಕ್ಟ್ ಅಂತ ಪ್ರಮಾಣ ಪತ್ರ ಪಡೆದ ನಂತರ ಎರಡರಿಂದ ಮೂರು ಆಫೀಸ್‌ನಲ್ಲಿ ಕೆಲಸ ಮಾಡಿದ್ದೆ. ಆದರೆ ಅದು ಡೆಡ್ಲಿ ಡಲ್ ಆಗಿತ್ತು. ಎರಡನೇ ಜಾಗತಿಕ ಯುದ್ಧದ ವೇಳೆ ನನಗೆ ಅದರಿಂದ ಮುಕ್ತಿ ದೊರೆಯಿತು. ಆಗ ಬ್ರಿಟನ್‌ನಿಂದ ಚೀನಾಗೆ ತೆರಳಿದ್ದೆ. ಕೆಲವು ವರ್ಷಗಳ ಕಾಲ ವೈದ್ಯಕೀಯ ತಂಡದಲ್ಲಿ ದುಡಿದ ನಂತರ ಭಾರತದ ಮಾರ್ಗವಾಗಿ ಇಂಗ್ಲೆಂಡ್‌ಗೆ ಹಿಂತಿರುಗಲು ಯತ್ನಿಸಿದೆ. ಹಡಗಿಗಾಗಿ ಮೂರು ತಿಂಗಳು ಕಾಯುವಂತಾಯಿತು. ಪ್ರತಿಯೊಬ್ಬರೂ ಭಾರತವನ್ನು ಬಿಡುವಂತೆ ನನಗೆ ಸಲಹೆ ನೀಡುತ್ತಿದ್ದರು. ಆದರೆ ಯಾರು ಏನೇ ಹೇಳಿದರೂ, ಭಾರತವನ್ನು ತೊರೆಯಲು ಮನಸ್ಸಿರಲಿಲ್ಲ. ಕೊನೆಗೆ ಇಲ್ಲಿಯೇ ನಿಂತೆ.
ಬ್ರಿಟನ್‌ನಲ್ಲಿ ನಾನು ಕಲಿತಿದ್ದ ಆರ್ಕಿಟೆಕ್ಚರಲ್ ಶಿಕ್ಷಣಕ್ಕೂ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಪಠ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದುವು. ನನ್ನ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ಕೂಲ್ ಆಫ್ ಆರ್ಟ್ ಕೂಡ ಅವಿಭಾಜ್ಯವಾಗಿತ್ತು. ಬಣ್ಣ ಬಳಿಯುವವರು, ಶಿಲ್ಪಿಗಳು, ಕುಂಬಾರರು, ಮರದ ಕೆತ್ತನೆ ಕೆಲಸಗಾರರು, ಕುಸುರಿ ಕೆತ್ತನೆಯ ಗ್ಲಾಸ್‌ಗಳ ಕಿಟಿಕಿ ರಚಿಸುವವರ ಕಲಾವಿದರ ಜತೆ ಬೆರೆತು ಕಲಿಯುತ್ತಿದ್ದೆವು. ಸಾಯಂಕಾಲ ಕಲಾ ತರಗತಿಗೂ ಹಾಜರಾಗಬೇಕಿತ್ತು. ಮಣ್ಣಿನ ಮಡಕೆ, ಪಿಂಗಾಣಿ ಪಾತ್ರಗೆಳನ್ನು ರಚಿಸಲು ಕಲಿತಿದ್ದೆ. ಆದರೆ ತಿರುವನಂತಪುರಂನಲ್ಲಿ ಆರ್ಕಿಟೆಕ್ಚರ್ ಎನ್ನುವುದು ಎಂಜಿನಿಯರಿಂಗ್ ಕಾಲೇಜಿನ ಒಂದು ಶಾಖೆಯಾಗಿತ್ತು. ನನಗೆ ತಿಳಿದಂತೆ ಕಲಾ ಕಾಲೇಜಿಗೂ ಇದಕ್ಕೂ ಸಂಬಂಧ ಇರಲಿಲ್ಲ.
ನಾನು ನನ್ನದೇ ಮರ್ಗ ಹುಡುಕಲು ಯತ್ನಿಸಿದೆ. ಸೂಕ್ತವಾದ ಕಚೇರಿ ನಡೆಸಲಿಲ್ಲ. ನನ್ನ ಮಂಚದ ಪಕ್ಕದಲ್ಲಿ ಹಳೆಯ ಡ್ರಾಯಿಂಗ್ ಬೋರ್ಡ್ ಇತ್ತು. ನಾನು ಶಾಲೆಯಲ್ಲಿ ಕಲಿಯುವಾಗ ನನ್ನ ಜತೆಗಿದ್ದ ಬೋರ್ಡ್ ಅದಾಗಿತ್ತು. ಶಾಲೆಗೆ ಸೇರಿದ ಸಂದರ್ಭ ಅಣ್ಣ ಕೊಟ್ಟಿದ್ದ ಹಳೆಯ ಕಂಪಾಸ್ ಜೋಪಾನವಾಗಿತ್ತು. ನನ್ನ ಮಟ್ಟಿಗೆ ಗ್ರಾಹಕರ ಜತೆ ಕೂತು ವಿನ್ಯಾಸದ ಬಗ್ಗೆ ಚರ್ಚಿಸುವುದು ಹಾಗೂ ಅವರ ಬಗ್ಗೆ ಅರಿತುಕೊಳ್ಳುವುದು ಅತ್ಯಂತ ಆಸಕ್ತಿದಾಯಕವಾಗಿತ್ತು. ಗ್ರಾಹಕರು ಹೇಗೆ ಬದುಕುತ್ತಿದ್ದಾರೆ ? ಅವರ ಉದ್ಯೋಗ ಯಾವುದು ? ಅವರ ಕನಸಿನ ಮನೆ ಎಂತಹುದು ? ಎಂದು ತಿಳಿಯಲು ಯತ್ನಿಸುತ್ತಿದ್ದೆ. ಅವರ ಯೋಚನೆಯನ್ನು ಗ್ರಹಿಸಿಕೊಂಡು ವಿನ್ಯಾಸವನ್ನು ಕಾಗದದ ಮೇಲೆ ಬಿಡಿಸುವುದು ಥ್ರಿಲ್ ಅನ್ನಿಸುತ್ತಿತ್ತು. ನಂತರ ಅವರ ಬೇಕು, ಬೇಡಗಳನ್ನು ಗಮನಿಸಿ ಬದಲಾವಣೆ ಮಾಡುತ್ತಿದ್ದೆ. ಗ್ರಾಹಕನ ತೃಪ್ತಿಯೇ ಮೊದಲ ಗುರಿಯಾಗಿತ್ತು. ಕೆಲಸಕ್ಕೆ ಪ್ರೇರಣೆಯಾಗಿತ್ತು. ನೀವು ಗ್ರಾಹಕರ ಬಯಕೆಯ ಮನೆಯನ್ನು ಕಟ್ಟಬೇಕು. ನಿಮ್ಮ ಮನೆಯನ್ನಲ್ಲ ಎಂಬುದು ಗುರುಗಳ ಪಾಠವಾಗಿತ್ತು. ಟೂ-ಡೈಮೆನ್ಶನ್ ಡ್ರಾಯಿಂಗ್ಸ್ ಅನ್ನು ತ್ರೀ-ಡೈಮೆನ್ಶನ್ ಬಿಲ್ಡಿಂಗ್‌ಗೆ ಪರಿವರ್ತಿಸುವುದು ಅಷ್ಟೇ ಸ್ವಾರಸ್ಯಕರವಾಗಿತ್ತು. ರೇಖಾ ವಿನ್ಯಾಸ ಕಟ್ಟಡವಾಗಿ ರೂಪಾಂತರವಾಗುವ ವೇಳೆ ಸ್ಥಳದಲ್ಲಿ ನಾನಿದ್ದು ಆಸ್ವಾದಿಸುತ್ತಿದ್ದೆ. ಕ್ಯಾಮೆರಾದಲ್ಲಿ ಎಲ್ಲ ಪ್ರಕ್ರಿಯೆಗಳನ್ನುನ ಕ್ಲಿಕ್ಕಿಸುತ್ತಿದ್ದೆ. ನೆಗೆಟಿವ್ ತೆಗೆಯುತ್ತಿದ್ದೆ. ಆದರೆ ಪ್ರಿಂಟ್ ಹಾಕುತ್ತಿರಲಿಲ್ಲ. ಇದೊಂದು ಮೂರ್ಖತನದಂತೆ ಕಾಣಿಸುತ್ತಿತ್ತು. ಕೆಲವು ಸಲ ಏಣಿಯನ್ನು ಹತ್ತುವಾಗ ಹೆಚ್ಚು ವ್ಯೂ ಸಿಗುತ್ತಿತ್ತು. ಸಾಮಗ್ರಿಗಳ ಮೇಲೆ ಬಣ್ಣ ಬಳಿಯುವುದರ ಬದಲಿಗೆ ಸಾಮಗ್ರಿಗಳದ್ದೇ ಬಣ್ಣವನ್ನು ಅಧ್ಯಯನ ಮಾಡುತ್ತಿದ್ದೆ. ಇದಕ್ಕಾಗಿ ಕಲ್ಲು ಕೆತ್ತುವವರು ಹಾಗೂ ಇತರ ಕಾರ್ಮಿಕರ ಜತೆ ಕೆಲಸ ಮಾಡುತ್ತಿದ್ದೆ. ಸಾಮಗ್ರಿಗಳನ್ನು ಹೇಗೆ ಬಳಸಲು ಬಯಸುತ್ತಿದ್ದೇನೆ ಅಂತ ಅವರಿಗೆ ವಿವರಿಸುತ್ತಿದ್ದೆ. ಆದ್ದರಿಂದ ನನಗೆ ಡೆಸ್ಕ್ ವರ್ಕ್‌ಗಿಂತ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಭಾಗವಹಿಸುವುದು ಹೆಚ್ಚು ಮಹತ್ವಪೂರ್ಣವಾಗಿತ್ತು.
ವಿದ್ಯಾರ್ಥಿಯಾಗಿದ್ದಾಗ ಅದೊಂದು ಅಂಶವನ್ನು ನಮ್ಮ ಪ್ರೊಫೆಸರ್‌ಗಳು ನಾಟುವಂತೆ ಹೇಳಿದ್ದರು : ‘ ಆರ್ಕಿಟೆಕ್ಟ್ ಅನ್ನಿಸಿಕೊಂಡವನ ಮನಸ್ಸಿನಲ್ಲಿ ಕಟ್ಟಡದ ಪರಿಪೂರ್ಣ ಚಿತ್ರಣ ಇರಬೇಕು. ಕೇವಲ ವಿನ್ಯಾಸ ಸಿದ್ಧಪಡಿಸುವುದು ಮಾತ್ರ ಆತನ ಕೆಲಸವಲ್ಲ, ನಿರ್ಮಿಸಿದ ಮನೆಯಲ್ಲಿ ಗ್ರಾಹಕ ಹೇಗೆ ಸಂತೃಪ್ತಿಯಿಂದ ಬದುಕಬಲ್ಲ ಎಂಬುದನ್ನೂ ತಿಳಿದಿರಬೇಕು ’
ನಮ್ಮನ್ನು ಆರ್ಕೆಸ್ಟ್ರಾದ ಕಂಡಕ್ಟರ್ ಎಂದು ಅವರು ಬಣ್ಣಿಸುತ್ತಿದ್ದರು. ಆತನಿಗೆ ತನ್ನ ಸಂಗೀತ ತಂಡದ ಪ್ರತಿಯೊಂದೂ ಗೊತ್ತಿರಬೇಕು. ಪ್ರಸಿದ್ಧನಾದ ಕಂಡಕ್ಟರ್‌ಗೆ ತಂಡದ ಪ್ರತಿಯೊಂದು ಸಂಗೀತ ಸಾಧನವನ್ನೂ ಸಮಯಕ್ಕೆ ತಕ್ಕಂತೆ ನುಡಿಸಲು ತಿಳಿದಿರಬೇಕು. ನನ್ನ ಪ್ರಕಾರ ಆರ್ಕಿಟೆಕ್ಟ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರಬೇಕು. ಆಗ ಆತನ ಕೆಲಸ ಕೂಡ ಪರಿಪೂರ್ಣವಾಗುತ್ತದೆ. ಚಿತ್ರ ಕಲಾಕಾರ ಅಥವಾ ಶಿಲ್ಪಿಯ ಕಲಾಕೃತಿಯನ್ನು ಆಸಕ್ತಿ ಇರುವವರು ಖರೀದಿಸಿ ತಮ್ಮ ಕೊಠಡಿಯಲ್ಲಿ ಇಡುತ್ತಾರೆ. ಬೇಕಾದವರು ಮಾತ್ರ ನೋಡಬಹುದು. ಆದರೆ ಆರ್ಕಿಟೆಕ್ಟ್ ಕಟ್ಟುವ ಮನೆ ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ಕಾಣುತ್ತದೆ. ಆದ್ದರಿಂದ ಆರ್ಕಿಟೆಕ್ಟ್ ತಮ್ಮ ಕೃತಿ ಇತರರಿಗೆ ಆನಂದದಾಯಕವಾಗಿರುತ್ತದೆಯೇ ? ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದೆಯೇ ಎಂದು ತಮ್ಮನ್ನೇ ಕೇಳಿಕೊಳ್ಳಬೇಕು. ವ್ಯಕ್ತಿತ್ವ ವ್ಯಕ್ತಿಯನ್ನು ರೂಪಿಸುತ್ತದೆ ಅಂತ ವಾಡಿಕೆಯ ಮಾತಿದೆ. ಆದರೆ ವ್ಯಕ್ತಿತ್ವ ಉತ್ತಮ ಆರ್ಕಿಟೆಕ್ಚರ್ ಅನ್ನೂ ರೂಪಿಸುತ್ತದೆ -ವಿಲ್‌ಫ್ರೆಡ್ ಬೇಕರ್.

Tuesday 29 September 2009

ವಾಟ್ ಆನ್ ಐಡಿಯಾ...ನೀವೇಕೆ ಸೈಕಲ್ ಟೂರಿಸಂ ಮಾಡಬಾರದು ?

ಊಟಿಯಲ್ಲಿ ನಿಸರ್ಗದ ವಿಹಂಗಮ ದೃಶ್ಯವನ್ನು ಸವಿಯಲು ಸೈಕಲ್ ಬೇಕು ಎಂದು ಎಷ್ಟೋ ಸಲ ಅನ್ನಿಸುತ್ತದೆ. ಅಲ್ಲಿನ ವಿಶಾಲ ಕೆರೆಗಳ ಬದಿಯಲ್ಲಿ ಸಾಯಂಕಾಲದ ಹೊತ್ತು ಬಾಡಿಗೆಗೆ ಸುಲಭವಾಗಿ ಸಿಗುವ ಸೈಕಲನ್ನೇರಿ ಒಂದು ಸುತ್ತಾಟ ಬಂದರೆ ಅನುಭವವನ್ನು ಜೀವಮಾನದಲ್ಲಿ ಮರೆಯಲು ಸಾಧ್ಯವಾಗುವುದಿಲ್ಲ. ಪ್ರದೇಶ ಅಪರಿಚಿತವಾಗಿದ್ದರೂ, ನಮ್ಮೂರಿನಲ್ಲೇ ಸೈಕಲ್ ಹೊಡೆದಂತಾಗುತ್ತದೆ. ಬಾಲ್ಯದ ದಿನಗಳಿಗೆ ನೆನಪು ಜಾರುತ್ತದೆ..ನಿಸರ್ಗದೊಡನೆ ಒಂದಾಗಿ ರಸ ನಿಮಿಷಗಳನ್ನು ಕಳೆಯಬೇಕಾದರೆ ಸೈಕಲ್‌ಗಿಂತ ಉತ್ತಮ ವಾಹನ ಮತ್ತೊಂದಿಲ್ಲ. ಶರೀರಕ್ಕೂ ವ್ಯಾಯಾಮ ಸಿಗುತ್ತದೆ..ಹಾಗಾದರೆ ಕೇವಲ ಊಟಿಯಲ್ಲಿ ಮಾತ್ರ ಇಂತಹ ಅನುಕೂಲ ಯಾಕೆ ? ಮೈಸೂರಿನ ಚಾಮುಂಡಿಬೆಟ್ಟ, ಮಂಡ್ಯದ ಕೃಷ್ಣ ರಾಜಸಾಗರ, ಶಿವನ ಸಮುದ್ರದಲ್ಲಿ ಇಂಥ ಅನುಕೂಲ ಯಾಕಿಲ್ಲ ? ಯಾಕೆಂದರೆ ಸೈಕಲ್ ಟೂರಿಸಂ ಅನ್ನುವುದು ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಅಪವಾದಕ್ಕೆಂಬಂತೆ ಎಲ್ಲೋ ಒಂದೆರಡು ಕಡೆ ಇರಬಹುದು, ಅಷ್ಟೇ. ಆದರೆ ಪ್ರತಿಯೊಂದು ಊರಿನಲ್ಲಿಯೂ ವೈವಿಧ್ಯಮಯ, ವೀಕ್ಷಣೆಗೆ ಸೂಕ್ತವಾದ ತಾಣಗಳು ನಮ್ಮಲ್ಲಿವೆ. ಅಲ್ಲೆಲ್ಲ ಸೈಕಲ್ ಟೂರಿಸಂ ಅನ್ನು ಉದ್ಯಮದಂತೆ ಬೆಳೆಸಲು ವಿಪುಲ ಅವಕಾಶವಿದೆ. ಆದರೆ ಇಂಥ ಐಡಿಯಾವನ್ನು ಜನಪ್ರಿಯಗೊಳಿಸಬೇಕಷ್ಟೇ.
ರಾಜ್ಯದ ವೈಶಿಷ್ಟ್ಯವೇನೆಂದರೆ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಒಂದೆರಡು ಗಂಟೆ ಪ್ರಯಾಣಿಸಿದರೆ, ಆಯಾ ಭಾಗದಲ್ಲಿನ ಹಳ್ಳಿಗಳ ಲೋಕ ತೆರೆದುಕೊಳ್ಳುತ್ತದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ನಿಜಕ್ಕೂ ಪರಿಸರವನ್ನು, ವೈವಿಧ್ಯಮಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಸೈಕಲ್ ಸವಾರಿ ಮಾಡಬೇಕು. ನಿಸ್ಸಂದೇಹವಾಗಿ ಸೈಕಲ್ ಟೂರಿಸಂ ಅನ್ನು ಬೆಳೆಸಲು ಸಮೃದ್ಧ ಅವಕಾಶ ನಮ್ಮಲ್ಲಿದೆ. ಇದರಿಂದ ಪ್ರವಾಸಿ ತಾಣಗಳ ಸುತ್ತುಮುತ್ತಲಿನ ಹಳ್ಳಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಪ್ರವಾಸಿಗರಿಗೆ ಹೊಸ ಮಿತವ್ಯಯದಲ್ಲಿ ಹೊಸ ಅನುಭವವಾಗುತ್ತದೆ. ವಿದೇಶಗಳ ಪ್ರವಾಸೋದ್ಯಮ ವಲಯದಲ್ಲಿ ಇಂತಹ ಸೈಕಲ್ ಪ್ರವಾಸವೇ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಮುಖ್ಯವಾದ ಲಕ್ಷಣವೇ ವಿನೂತನ ಅನುಭವ, ಮೋಜು ಮತ್ತು ಸ್ವಾರಸ್ಯಕರ. ಉದಾಹರಣೆಗೆ ಬೆಂಗಳೂರಿನಲ್ಲಿ ಸಮಾ ದುಡಿಯುವ ಮಂದಿ ವಾರಾಂತ್ಯದಲ್ಲಿ ಸುತ್ತುಮುತ್ತಲಿನ ಪ್ರವಾಸಿ ತಾಣಗಳಿಗೆ ಹಾಗೂ ಸಮೀಪದ ಹಳ್ಳಿಗಳಿಗೆ ಹೋಗುತ್ತಾರೆ. ಎಷ್ಟೋ ಮಂದಿ ಬೈಕನ್ನೇರಿ ಗುಂಪಾಗಿ ಮಂಡ್ಯ, ಶ್ರೀರಂಗಪಟ್ಟಣ, ಶಿವನ ಸಮುದ್ರ, ಮಧುಗಿರಿ ಅಂತ ತೆರಳುತ್ತಾರೆ. ಅಲ್ಲಿನ ಹಳ್ಳಿಗರು ಸೈಕಲ್ ಪ್ರವಾಸವನ್ನು ಆಯೋಜಿಸಿದರೆ ಆದಾಯ ಖಚಿತ.
ಸೈಕಲ್ ಜತೆಗೆ : ಅಂದಹಾಗೆ ಬರೀ ಸೈಕಲ್ ಮಾತ್ರ ಕೊಟ್ಟು ಬಿಡುವುದು ಸರಿಯಲ್ಲ. ಆ ಸೈಕಲಿನಲ್ಲಿ ಸವಾರಿ ಸುಲಭವಾಗಲು ಗೇರ್ ಇರಲಿ. ಕುಡಿಯುವ ನೀರು ಅಥವಾ ತಂಪು ಪಾನೀಯ ಇಡಲು ಚೌಕಟ್ಟಿರಲಿ. ಕುರುಕಲು ತಿಂಡಿ, ಊಟ, ತಿನಿಸನ್ನು ಇಡಲು ಜಾಗವಿರಲಿ. ಸೈಕಲ್‌ನಲ್ಲೇ ನೋಡಬಹುದಾದ ಸ್ಥಳಗಳ ಪಟ್ಟಿ ತಯಾರಿಸಿ. ವೆಬ್‌ಸೈಟ್, ಬ್ಲಾಗ್, ಮೊಬೈಲ್, ಎಸ್ಸೆಮ್ಮೆಸ್ ಮೂಲಕ ಬಿಸಿನೆಸ್ ಅನ್ನು ಪ್ರಚಾರ ಮಾಡಿ. ಬೇಕಾದರೆ ಟ್ರಾವೆಲ್ ಏಜೆಂಟ್, ಬ್ರೋಕರ್‌ಗಳ ಸಹಯೋಗವನ್ನು ಪಡೆದು ಮಾರುಕಟ್ಟೆಯನ್ನು ಸೃಷ್ಟಿಸಿ. ಕೆಲವರಿಗೆ ಬೆಟ್ಟ ಗುಡ್ಡಗಳನ್ನು ಸೈಕಲ್‌ಮೂಲಕ ಹತ್ತುವ ಸಾಹಸ ಪ್ರವೃತ್ತಿ ಇರುತ್ತದೆ. ಇನ್ನು ಕೆಲವರಿಗೆ ಸುಮ್ಮನೆ ಅಲೆಯುವುದೇ ಮುದ ಕೊಡುತ್ತದೆ. ಅಂತಹವರನ್ನೆಲ್ಲ ಆಕರ್ಷಿಸುತ್ತದೆ ಸೈಕಲ್..

Monday 28 September 2009

ವಾಟ್ ಆನ್ ಐಡಿಯಾ !ಏಸಿ ಕಾರನ್ನು ಹಂಚಿಕೊಳ್ಳಿ..ಆಟೊ ದರದಲ್ಲಿ ಪ್ರಯಾಣಿಸಿ..

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ. ನಗರವೇ ಆಗಲಿ, ಹಳ್ಳಿಯೇ ಆಗಲಿ, ನಮ್ಮ ಸುತ್ತಮುತ್ತ ಬಿಸಿನೆಸ್ ಮಾಡಲು ಸಾಕಷ್ಟು ಐಡಿಯಾಗಳಿವೆ. ಅವುಗಳನ್ನೇಕೆ ಹಂಚಿಕೊಳ್ಳಬಾರದು ? ಈ ಏಕೈಕ ಉದ್ದೇಶದಿಂದ ಇನ್ನು ಮುಂದೆ ‘ ವಾಟೆನ್ ಐಡಿಯಾ ’ ಶೀರ್ಷಿಕೆಯ ಅಡಿಯಲ್ಲಿ ಲೇಖನ ಮಾಲೆ ಬರೆಯುತ್ತೇನೆ. ನಿಮ್ಮ ಅನಿಸಿಕೆಯನ್ನು ದಯವಿಟ್ಟು ತಿಳಿಸುವಿರಾ. ಬನ್ನಿ, ನಿರುದ್ಯೋಗ ಅಂತ ನಿರಾಶೆಯಲ್ಲಿರುವ ಸಹೋದರ, ಸಹೋದರಿಯರ ನೋವಿಗೆ ಸ್ಪಂದಿಸೋಣ. ಕೆಲವು ಐಡಿಯಾಗಳನ್ನು ಹಂಚೋಣ. ಕೆಲಸದಲ್ಲಿ ಮೇಲು-ಕೀಳೆಂಬ ತಾರತಮ್ಯವನ್ನು ಹೋಗಲಾಡಿಸೋಣ...)

ದೀಪೇಶ್ ಅಗರವಾಲ್ (೩೦) ಮೊಟೊರೊಲಾ ಇಂಡಿಯಾದಲ್ಲಿ ಎಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದರು. ಆದರೆ ಹೊಸತೊಂದು ಐಡಿಯಾ ಹೊಳೆದ ನಂತರ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಕಾರನ್ನು ಹಂಚಿಕೊಳ್ಳಿ, ಉಳಿತಾಯ ಮಾಡಿರಿ ಎನ್ನುವುದೇ ಅಗರವಾಲ್ ಸೂತ್ರವಾಗಿತ್ತು.
ಬಾಡಿಗೆಯ ಕಾರುಗಳು ದುಬಾರಿ. ಆಟೊ ರಿಕ್ಷಾಗಳು ಸುಲಿಯುತ್ತವೆ. ಬಸ್ಸುಗಳು ಕಿಕ್ಕಿರಿದು ಕಿರಿಕಿರಿ ಎನಿಸುತ್ತವೆ. ಸ್ವಂತ ಕಾರಿನಲ್ಲಿ ಹೋಗುವುದಿದ್ದರೂ ಟ್ರಾಫಿಕ್ ಇದ್ದರೆ ಏನು ಮಾಡಬಹುದು ? ಎಷ್ಟೋ ಕಡೆ ಪಾರ್ಕಿಂಗ್ ಸಮಸ್ಯೆ ಬೇರೆ ಕಾಡುತ್ತದೆ. ಹಾಗಾದರೆ ಇನ್ನೋವಾದಂತ ಹವಾನಿಯಂತ್ರಿತ ಕಾರಿನಲ್ಲಿ, ಆಟೊ ರಿಕ್ಷಾದ ದರದಲ್ಲಿ ಹೋಗಲು ಸಾಧ್ಯವಾದರೆ ? ಇದು ಸಾಧ್ಯ ಎನ್ನುತ್ತಾರೆ ಅಗರವಾಲ್.
ಭಾರತದ ನಗರಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗುತ್ತಿದೆ. ಜತೆಗೆ ಪರಿಸರ ಮಾಲಿನ್ಯ, ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಕ್ಯಾಬ್ ಅನ್ನು ಹಂಚಿಕೊಂಡರೆ ಲಾಭದಾಯಕವಾಗಬಹುದಲ್ಲವೇ ಎಂದು ಅಗರವಾಲ್ ಕಳೆದ ವರ್ಷ ಸ್ನೇಹಿತ ಅಮಿತ್ ಗುಪ್ತಾ ಜತೆ ಚರ್ಚಿಸಿದರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ರೈಡ್‌ಇನ್‌ಸಿಂಕ್ ಕಂಪನಿ. ಕಳೆದ ಏಪ್ರಿಲ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ (ಐಬಿಎಸ್ ) ವಿದ್ಯಾರ್ಥಿಗಳಿಗೆ ಸೇವೆ ಒದಗಿಸಿದರು. ೧೨೦ ವಿದ್ಯಾರ್ಥಿಗಳು ೬೦ ಕ್ಯಾಬ್‌ಗಳನ್ನು ಹಂಚಿಕೊಂಡರು. ಪರಿಣಾಮ ? ಒಂದೇ ದಿನ ೩೬ ಸಾವಿರ ರೂ. ಹಾಗೂ ೨೦೦ ಲೀಟರ್ ಪೆಟ್ರೋಲ್ ಉಳಿತಾಯವಾಯಿತು. ಈ ಪ್ರಯೋಗ ಯಶಸ್ವಿಯಾಗಿದ್ದೇ ತಡ, ಅಗರವಾಲ್ ಪೂರ್ಣ ಪ್ರಮಾಣದಲ್ಲಿ ಉದ್ಯಮಿಯಾಗಲು ನಿರ್ಧರಿಸಿದರು.
ಟ್ಯಾಕ್ಸಿ ಚಾಲಕರ ಜತೆ ಒಪ್ಪಂದ ಮಾಡಿಕೊಂಡಿರುವ ರೈಡ್‌ಇನ್‌ಸಿಂಕ್‌ಗೆ ಹೈದರಾಬಾದ್‌ನಲ್ಲಿ ೧೭೩ ಮಂದಿ ನೋಂದಾಯಿತ ಬಳಕೆದಾರರಿದ್ದಾರೆ. ವಿಮಾನ ನಿಲ್ದಾಣ ಮತ್ತು ನಗರದ ನಡುವೆ ಸಂಚಾರಕ್ಕೆ ಕಂಪನಿಯ ಸೇವೆ ಬಳಸುತ್ತಿದ್ದಾರೆ. ಕಂಪನಿಯ ಸೇವೆಯನ್ನು ಬೆಂಗಳೂರು, ದಿಲ್ಲಿ,ಮುಂಬಯಿ, ಪುಣೆಗೆ ವಿಸ್ತರಿಸುವ ಯೋಚನೆ ಅವರಿಗಿದೆ.
ಒಂದು ಕಾರಿನಲ್ಲಿ ಇಬ್ಬರು ಹಂಚಿಕೊಂಡು ಹೋದಾಗ ವೆಚ್ಚ ಅರ್ಧಕ್ಕಿಳಿಯುತ್ತದೆ. ಆದರೆ ತನ್ನದೇ ಮಾರ್ಗದಲ್ಲಿ, ಅದೇ ಸಮಯದಲ್ಲಿ ಹೋಗುವ ಮತ್ತೊಬ್ಬ ಸಹ ಯಾತ್ರಿಕನನ್ನು ಪತ್ತೆ ಹಚ್ಚಬೇಕು. ಕಾರಿನ ವ್ಯವಸ್ಥೆ ಹಾಗೂ ಇಬ್ಬರಿಗೂ ಮಾಹಿತಿ ಒದಗಿಸುವ ಅನುಕೂಲ ಇರಬೇಕು. ಅಂತಹ ವ್ಯವಸ್ಥೆಯನ್ನು ರೈಡ್‌ಇನ್‌ಸಿಂಕ್ ಒದಗಿಸುತ್ತದೆ.
ಇದು ಹೇಗೆ ? ಕಂಪನಿ ಮೊಬೈಲ್/ ವೆಬ್ ಆಧಾರಿತ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಸಹ ಪ್ರಯಾಣಿಕರನ್ನು ಗುರುತಿಸಿ, ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಿ ಪ್ರಯಾಣ ವೆಚ್ಚವನ್ನು ಅರ್ಧಕ್ಕಿಳಿಸುತ್ತದೆ. ಒಂದು ವೇಳೆ ಗ್ರಾಹಕನಿಗೆ ಸಹ ಪ್ರಯಾಣಿಕ ಸಿಗದೇ ಇದ್ದಲ್ಲಿ ಡಿಸ್ಕೌಂಟ್ ದರದಲ್ಲಿ ಪ್ರತ್ಯೇಕ ಕ್ಯಾಬ್ (ಟೊಯೊಟಾ ಇನ್ನೋವಾ ) ಅನ್ನು ಕಂಪನಿ ನೀಡುತ್ತದೆ. ಇದರಿಂದ ಬಳಕೆದಾರನಿಗೆ ಪ್ರಯಾಣದ ವೆಚ್ಚ ಶೇ.೫೦ಕ್ಕೆ ಇಳಿಯುತ್ತದೆ. ಉದಾಹರಣೆಗೆ ಏರ್‌ಪೋರ್ಟ್-ಹೈದರಾಬಾದ್/ಸಿಕೆಂದರಾಬಾದ್ ಮಧ್ಯೆ ಕ್ಯಾಬ್ ಹಂಚಿಕೆಯಲ್ಲಿ- ೨೫೦ ರೂ. ಸಾಕು. ಆದರೆ ಪ್ರತ್ಯೇಕ ಕ್ಯಾಬ್‌ನಲ್ಲಿ- ೩೯೦ ರೂ. ಮತ್ತು ೩೯ ಕಿ.ಮೀ ನಂತರ ಪ್ರತಿ.ಕಿ.ಮೀಗೆ ರೂ. ೧೦. ನೀಡಬೇಕಾಗುತ್ತದೆ. ಇಬ್ಬರು ವ್ಯಕ್ತಿಗಳು ಮಾತ್ರ ಕ್ಯಾಬ್ ಹಂಚಿಕೊಳ್ಳುವುದರಿಂದ ಆರಾಮದಾಯಕ. ಟ್ರಾಫಿಕ್ ಹಾಗೂ ಪರಿಸರ ಮಾಲಿನ್ಯ ಶಮನ ನಿಟ್ಟಿನಲ್ಲಿ ಕೊಡುಗೆ ಸಲ್ಲಿಸಿದಂತಾಗುತ್ತದೆ. ಬೆಂಗಳೂರಿನಲ್ಲೇಕೆ ಇಂಥ ಪದ್ಧತಿ ಜಾರಿಯಾಗಕೂಡದು ? ಹಾಗೆ ನೋಡಿದರೆ ಎಲ್ಲ ಕಡೆಗಳಲ್ಲೂ ಸಾರಿಗೆಯಲ್ಲಿ ಇಂಥ ಪ್ರಯೋಗ ಸಾಧ್ಯವಿದೆಯಲ್ಲವೇ.


Thursday 24 September 2009

ಬೈಲೈನ್ ಬಗ್ಗೆ ವೊಡಾಫೋನ್ ನಾರಾಯಣನ್ ಹೇಳಿದ್ದು ಮತ್ತು ಕಪಾಡಿಯಾ

ಕೆಲವು ದಿನಗಳ ಹಿಂದೆ ಕೋರಮಂಗಲಕ್ಕೆ ಹೋಗಿದ್ದೆ. ಮಾರುತಿ ಇನ್ಫೋಟೆಕ್ ಸೆಂಟರ್‌ನಲ್ಲಿರುವ ವೊಡಾಫೋನ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಕೆ ಶಂಕರ ನಾರಾಯಣನ್ ಅವರನ್ನು ಭೇಟಿಯಾಗಿದ್ದೆ. ತಮಿಳುನಾಡಿನ ಅವರು ಚೆನ್ನಾಗಿ ಮಾತನಾಡುತ್ತಾರೆ. ತಿಳಿಯಾದ ಹಾಸ್ಯ ಬೆರೆತ ದನಿಯಲ್ಲಿ. ಕಂಪನಿಯ ಸುದ್ದಿ ಸಮಾಚಾರದ ಬಗ್ಗೆ ಹೇಳಿದರು. ಮಾತಿನ ಮಧ್ಯೆ ಹೇಳಿದ್ರು- ನೀವು ಚೆನ್ನಾಗಿ ಮನಮುಟ್ಟುವಂತೆ ಬರೆದರೆ ಲಕ್ಷಾಂತರ ಓದುಗರಿಗೆ ಸರಳವಾಗಿ ಅರ್ಥವಾಗುತ್ತೆ. ನಿಮಗೆ ಬಿಟ್ಟರೆ ಬೇರೆ ಯಾರಿಗೂ ಸುದ್ದಿ ಹೇಳಿಲ್ಲ. ಇಡೀ ಇಂಡಿಯಾದಲ್ಲಿ ಇನ್ನುಮುಂದೆ ಕೇವಲ ನಿಮಿಷಕ್ಕೆ ೫೦ ಪೈಸೆ ವೆಚ್ಚದಲ್ಲಿ ವೊಡಾಫೋನ್‌ನಿಂದ ಮೊಬೈಲ್/ಸ್ಥಿರವಾಣಿಗೆ ಕಾಲ್ ಮಾಡಬಹುದು...ನಾಳೆ ಜಾಹೀರಾತು ಕೊಡುತ್ತೇವೆ. ಈವತ್ತೇ ಬರೆದು ನೀವು ಬೈ ಲೈನ್ ಪಡೆದುಕೊಳ್ಳಬಹುದು ಅಲ್ಲವಾ... ಎಂದರು.
ಅದೇ ಕಚೇರಿಯಲ್ಲಿ ಧ್ರುತಿ ಕಪಾಡಿಯಾ ಕೃಷ್ಣನ್ ಎಂಬ ಗುಜರಾತ್ ಮೂಲದ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಅವರು ಕಂಪನಿಯ ಮಾರ್ಕೆಟಿಂಗ್ ಕಮ್ಯುನಿಕೇಶನ್ ವಿಭಾಗದಲ್ಲಿ ಡೆಪ್ಯುಟಿ ಮ್ಯಾನೇಜರ್. ಸದಾ ಹಸನ್ಮುಖಿ. ಕಾರ್ಪೊರೇಟ್ ಕಂಪನಿಯಲ್ಲಿ ಕನ್ನಡ ಗೊತ್ತಿದ್ದವರೂ ಮಾತನಾಡುವುದಿಲ್ಲ. ಹೀಗಿರುವಾಗ ಕಪಾಡಿಯಾ ಕನ್ನಡದಲ್ಲಿ ಮಾತನಾಡಿದ್ದು ಖುಷಿಗೆ ಕಾರಣವಾಯಿತು.

ಒಂದು ಶಾಲೆಯ ಮಕ್ಕಳ ಬ್ಲಾಗು..

ಕಾಸರಗೋಡಿನ ನೀರ್ಚಾಲಿನಲ್ಲಿರುವ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ನನ್ನ ಮಿತ್ರ ರವಿ ಶಂಕರ ದೊಡ್ಡ ಮಾಣಿ ಅಧ್ಯಾಪಕನಾಗಿದ್ದಾನೆ. ಸಲೀಸಾಗಿ ಓದಿಸಿಕೊಂಡು ಹೋಗುವ ಬರವಣಿಗೆಯ ಕಲೆ ಕೂಡ ಅವರಿಗೆ ಇದೆ. ಶಾಲೆಯಲ್ಲಿ ಬ್ಲಾಗ್ ರಚಿಸಿ ಉಪಯುಕ್ತ ಹಾಗೂ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಪತ್ರಿಕೆಗಳು, ಕೇರಳದ ಪತ್ರಿಕೆಗಳು, ಟಿ.ವಿ ಚಾನೆಲ್‌ಗಳ ಗಮನವನ್ನು ಈ ಬ್ಲಾಗ್ ಸೆಳೆದಿದೆ. ಮನಸ್ಸು ಮಾಡಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬ್ಲಾಗನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ತಾಜಾ ನಿದರ್ಶನವಿದು. ಬಯಲು ಪ್ರವಾಸದ ಅಂಗವಾಗಿ ಇತ್ತೀಚೆಗೆ ಶಾಲೆಯ ಮಕ್ಕಳು ನೀರ್ಚಾಲು ವಾಷೆ ಸತ್ಯ ನಾರಾಯಣ ಭಟ್ಟರ ಮನೆಗೆ ಹೋಗಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದಿದ್ದರು. ಆ ಚಿತ್ರವನ್ನು ಕಂಡು ನನಗೂ ಬಾಲ್ಯದ ಶಾಲೆಯ ದಿನಗಳು ಮತ್ತು ಆವಾಗ ಕೈಗೊಳ್ಳುತ್ತಿದ್ದ ಚುಟುಕು ಪ್ರವಾಸಗಳು ನೆನಪಾದವು...ಬಿಡುವಿದ್ದಾಗ ಭೇಟಿ ಕೊಡಿ http://mschsnirchal.blogspot.com

Wednesday 23 September 2009

ಲೈಫ್‌ಸ್ಟೈಲ್‌ನಲ್ಲಿ ಮಾಡೆಲ್‌ಗಳ ನಗು..

ಬೆಂಗಳೂರಿನ ಗರುಡಾ ಮಾಲ್ ಸಮೀಪ ಲೈಫ್ ಸ್ಟೈಲ್ ಇದೆಯಲ್ಲವೇ, ನಿನ್ನೆ ಅಲ್ಲಿಗೆ ಹೋಗಿದ್ದೆ. ಭಾರತಕ್ಕೆ ಪದಾರ್ಪಣೆ ಮಾಡಿ ೧೦ ವರ್ಷ ಭರ್ತಿಯಾದ್ದರಿಂದ ಸಂಭ್ರಮದ ವರ್ಣರಂಜಿತ ಸಮಾರಂಭವನ್ನು ಆಯೋಜಿಸಿದ್ದರು. ಸೌಂದರ್ಯವರ್ಧಕ ಸಾಧನಗಳು, ಫ್ಯಾಷನ್ ಉಡುಪು, ಪಾದರಕ್ಷೆ, ಸೆಂಟು, ಮಕ್ಕಳ ಆಟಿಕೆ, ಉಡುಗೊರೆ, ಗೃಹಾಲಂಕಾರದ ವಸ್ತುಗಳು, ಪೀಠೋಪಕರಣಗಳ ಮಾರಾಟ ಮಳಿಗೆಯದು. ೧೦ನೇ ವರ್ಷಾಚರಣೆಯ ಪ್ರಯುಕ್ತ ಗ್ರಾಹಕರಿಗೆ ನಾನಾ ಬಗೆಯ ಉಡುಗೊರೆಗಳನ್ನೂ ಕಂಪನಿ ಪ್ರಕಟಿಸಿದೆ. ಆದರೂ ಕೈಯಲ್ಲಿ ಸಾವಿರಾರು ರೂಪಾಯಿ ದುಡ್ಡಿದ್ದರೆ ಮಾತ್ರ ಏನಾದರೂ ಶಾಪಿಂಗ್ ಮಾಡಬಹುದು. ಆದರೂ ವಿಂಡೋ ಶಾಪಿಂಗ್ ಮಾಡಬಹುದು. ಇರಲಿ. ಕಾರ್ಯಕ್ರಮದಲ್ಲಿ ಸೂಟು ಬೂಟುಧಾರಿಗಳಾದ ಕಂಪನಿಯ ಪ್ರತಿನಿಗಳು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಇದಕ್ಕೂ ಮುನ್ನ ವೇದಿಕೆಯ ಮೇಲೆ ಪರದೆಯಂತಹ ರಚನೆ ಸರಿಯಿತು. ಆಗ ಬಿಗಿಯಾದ ಉಡುಪು ಧರಿಸಿದ್ದ ಮಾಡೆಲ್‌ಗಳು ನಗುತ್ತಾ ಲೈಫ್‌ಸ್ಟೈಲ್‌ನ ೧೦ನೇ ವರ್ಷಾಚರಣೆಯ ಲಾಂಛನವನ್ನು ಪ್ರದರ್ಶಿಸಿದರು. ಕಂಪನಿ ಪ್ರತಿನಿಗಳ ಪಕ್ಕ ವೈಯಾರದಲ್ಲಿ ಕ್ರಮಬದ್ಧವಾಗಿ ನಗುತ್ತ ನಿಂತರು. ಇವರನ್ನು ಕಂಡು ಫೊಟೋಗ್ರಾಫರುಗಳಂತೂ ತಾ ಮುಂದು ತಾಮುಂದು ಎಂಬಂತೆ ಕ್ಯಾಮರಾಗಳನ್ನು ಕ್ಲಿಕ್ಕಿಸಿದರು. ಕೆಲವು ನಿಮಿಷಗಳ ನಂತರ ರೂಪದರ್ಶಿಗಳು ನಗುವುದನ್ನು ನಿಲ್ಲಿಸಿ ತೆರೆಯ ಮರೆಯಲ್ಲಿ ಕುರ್ಚಿಯಲ್ಲಿ ಆಸೀನರಾದರು. ಭಾಷಣಗಳೆಲ್ಲ ಮುಕ್ತಾಯವಾಗುವ ಹೊತ್ತಿನಲ್ಲಿ ಮತ್ತಿಬ್ಬರು ಟಿ.ವಿ ಚಾನೆಲ್‌ನವರು ಬಂದರು. ಅವರಿಗೂ ಚಿತ್ರ ಬೇಕಿತ್ತು. ಸರಿ, ಮಾಡೆಲ್‌ಗಳಿಗೆ ಬುಲಾವ್ ಹೋಯಿತು. ತಟ್ಟನೆ ಕುರ್ಚಿಯಿಂದ ಎದ್ದ ಮಾಡೆಲ್‌ಗಳು ಲಾಂಛನವನ್ನು ಮುಟ್ಟುತ್ತ ಮತ್ತೆ ಪಳ ಪಳ ಹಲ್ಲುಗಳನ್ನು ಪ್ರದರ್ಶಿಸಿ ನಕ್ಕರು. ಕ್ಯಾಮರಾ ಸುಮ್ಮನಾದ ನಂತರ ಅವರ ನಗು ಕೂಡ ಮಾಯ. ಇಂತಹ ಕೃತಕ ನಗುವಿಗೆ ಥಳಕುಬಳುಕಿನ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬೆಲೆ ಇದೆ ಎಂದು ಅನ್ನಿಸಿತು.
(ಮೇಲ್ಕಂಡ ಚಿತ್ರ ಸಾಂದರ್ಭಿಕ)

Tuesday 22 September 2009

ಗ್ರಾಮೀಣರಿಗೆ ಸರಕಾರಿ ಉದ್ಯೋಗ, ಸಂಬಳ ಮಾತ್ರ ಕೇಳಬೇಡಿ

ಉತ್ತರಕರ್ನಾಟಕದ ಕೃಷಿ ಕಾರ್ಮಿಕರು ದಿನಕ್ಕೆ ೩೦ ರೂ. ಕೊಟ್ಟರೆ ಒಪ್ಪುತ್ತಾರೆ.
ಹಾಗಂತ ಕರಾವಳಿ ಕರ್ನಾಟಕದಲ್ಲಿ ನೂರು ಅಂದರೆ ನೂರು ಸಲ ಉಗಿದಾರು. ತೆಂಗಿನ ಕಾಯಿ ಕೊಯ್ಯಬೇಕಿದ್ದರೆ ಮರಕ್ಕೆ ಏಳರಿಂದ ೧೦ ರೂ. ನೀಡಲೇಬೇಕು. ಅಡಿಕೆ ಮರ ಹತ್ತಬೇಕಾದರಂತೂ ಮುನ್ನೂರು ಮುಂದಿಡಲೇಬೇಕು. ಅಷ್ಟೇ..
ಊರಿನಿಂದ ಊರಿಗೆ ಕಾರ್ಮಿಕರ ವೇತನದಲ್ಲಿ ವ್ಯತ್ಯಾಸ ಇದೆ. ಆದರೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದೇಶದ ಉದ್ದಗಲಕ್ಕೂ ದಿನದ ಸಂಬಳ ೮೨ ರೂಪಾಯಿ ಮಾತ್ರ ಓದುಗ ದೊರೆಯೇ...
ಪರಿಣಾಮ ?
ಸದ್ಯಕ್ಕೆ ದೇಶದಲ್ಲಿ ನಿರುದ್ಯೋಗದ ದರ ಶೇ.೭.೮ರಷ್ಟಿದೆ. ಅದೃಷ್ಟವಶಾತ್ ಕೌಟುಂಬಿಕ ವ್ಯವಸ್ಥೆ ಅನ್ನುವುದು ಈ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವುದರಿಂದ ನಿರುದ್ಯೋಗಿಗಳು ಬೀದಿಪಾಲಾಗುತ್ತಿಲ್ಲ. ಹೀಗಿದ್ದರೂ ಗತ್ಯಂತರವಿಲ್ಲದೆ ಗ್ರಾಮೀಣ ಪ್ರದೇಶಗಳಿಂದ ಭಾರಿ ಸಂಖ್ಯೆಯ ಜನ ಕೆಲಸ ಹುಡುಕುತ್ತ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಅದು ಅವರ ತಪ್ಪಲ್ಲ ಬಿಡಿ. ದೇಶದಲ್ಲಿ ಶೇ.೬೫ಕ್ಕಿಂತ ಹೆಚ್ಚು ಮಂದಿ ೩೫ ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ನಿರುದ್ಯೋಗದ ದರವನ್ನು ನಿಯಂತ್ರಿಸಬೇಕಾದರೆ ಮುಂದಿನ ಐದು ವರ್ಷಗಳಲ್ಲಿ ೬ ಕೋಟಿ ಉದ್ಯೋಗವನ್ನು ಸೃಷ್ಟಿಸಿದರೂ ಕಡಿಮೆಯೇ. ನಗರಗಳಿಂದ ಮಾತ್ರ ಇದು ಆಗುವ ಹೋಗುವ ಮಾತಲ್ಲ. ಆದ್ದರಿಂದ ಉದ್ಯೋಗ ಖಾತರಿಗೊಂದು ಯೋಜನೆ ಬೇಕು. ಆದರೆ ಈಗೇನಾಗಿದೆ ?
ಕಳೆದ ಅಕ್ಟೋಬರ್ ತನಕ ಬಳ್ಳಾರಿಯಂತಹ ಜಿಲ್ಲೆಯಲ್ಲಿ ಯೋಜನೆಗೆ ಮೀಸಲಾಗಿರುವ ೧೮ ಕೋಟಿ ರೂ.ಗಳ ಪೈಕಿ ೧೫ ಕೋಟಿ ರೂಪಾಯಿ ಖರ್ಚಾಗಿದೆ. ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆ ರೂಪಾಯಿ ಖರ್ಚಾಗಿಲ್ಲ. ಕೆಲವು ಕಡೆ ರಾಮ, ದೂಮ ಚೋಮ ಅಂತ ಯಾರ್‍ಯಾರದ್ದೋ ಹೆಸರಿನಲ್ಲಿ ಗ್ರಾಮಪಂಚಾಯಿತಿಯ ಪಿಆರ್‌ಐ, ಮೇಸ್ತ್ರಿ ಅಥವಾ ಮಧ್ಯವರ್ತಿಗಳು, ಬ್ಲಾಕ್ ಲೆವೆಲ್‌ನ ಕಾರ್ಯಕ್ರಮ ಅಕಾರಿ ಹಾಗೂ ಅವರನ್ನು ಚೆಕ್ ಮಾಡಬೇಕಿದ್ದ ಪ್ರತಿನಿಗಳು ತಿನ್ನುತ್ತಿದ್ದಾರೆ.
ವಿಪರ್ಯಾಸ ಏನೆಂದರೆ ಕೆಲವೆಡೆ ಇದು ಸರಕಾರಿ ಕೆಲಸ ಅಂತ ಭಾವಿಸಿಕೊಂಡು ಲೋಕೋಪಯೋಗಿ ಇಲಾಖೆಯ ಕೆಲಸಗಳಲ್ಲಿ ನಿರತರಾಗುವ ಮಂದಿ, ಕೃಷಿ ಚಟುವಟಿಕೆಯಲ್ಲಿ ಪ್ರೆಸ್ಟೀಜು ಕಡಿಮೆ ಎಂದು ಹಿಂದೇಟು ಹಾಕುತ್ತಾರೆ. ಯಾವುದಾದರೂ ಕಂಪನಿಗೆ ಸಿಕ್ಕಾಪಟ್ಟೆ ಬ್ರ್ಯಾಂಡ್ ನೇಮ್ ಇದ್ದಲ್ಲಿ ಸಂಬಳ ಕಡಿಮೆ ಇದ್ದರೂ ಹೋಗುತ್ತಾರಲ್ವಾ ಹಾಗೆ ! ಇರಲಿ. ನೋವಿನ ಸಂಗತಿ ಏನೆಂದರೆ ನೂರಾರು ಊರುಗಳಲ್ಲಿ ತೀರಾ ಅಗತ್ಯ ಇದ್ದರೂ, ಇಂತಹದೊಂದು ಕಾರ್ಯಕ್ರಮ ಇದೆ ಎಂಬುದೇ ಯಾರಿಗೂ ಗೊತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ,, ಅಂತ ಯಾವುದೇ ರಾಜ್ಯದಲ್ಲಿ ಯೋಜನೆಗಿಂತ ಅದರಲ್ಲಿ ನಡೆದಿರುವ ಅವ್ಯವಹಾರದ್ದೇ ಸುದ್ದಿ.
ರಾಜ್ಯದಲ್ಲಿ ಎನ್‌ಆರ್‌ಇಜಿಎಸ್‌ನಲ್ಲಿ ೫೮,೬೦೦ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದರಲ್ಲಿ ಎಷ್ಟು ಖೊಟ್ಟಿ ಅಂತ ತಿಳಿಸಿಲ್ಲ. ಆಗಸ್ಟ್ ವೇಳೆಗೆ ಗ್ರಾಮೀಣ ಕರ್ನಾಟಕದ ೩೧ ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿವೆ. ಆದರೆ ಎಷ್ಟು ಮಂದಿಗೆ ವೇತನ ನೀಡಲಾಗಿದೆ ಎಂಬ ವಿವರ ಸಿಗುವುದಿಲ್ಲ. ವೇತನವನ್ನು ಬ್ಯಾಂಕ್ ಮೂಲಕ ಬಟವಾಡೆ ಮಾಡಿದರೆ ಸಾಲದು ಮುಖ್ಯಮಂತ್ರಿಯವರೇ, ನೀಡುವ ವೇತನ ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿರಬೇಕು. ಪುತ್ತೂರಿನಲ್ಲಿ ದಿನಕ್ಕೆ ೮೨ ರೂಪಾಯಿ ಕೊಡುತ್ತೇವೆ ಅಂದರೆ ಸ್ವಂತ ಬುದ್ದಿ ಇರುವ ಯಾರೊಬ್ಬರೂ ಒಪ್ಪಲಾರರು.
ದೇಶಾದ್ಯಂತ ಬಡ ಕಾರ್ಮಿಕರಿಗೆ ವರ್ಷಕ್ಕೆ ನೂರು ದಿನ ಉದ್ಯೋಗ ಖಾತರಿಯನ್ನು ಕೊಟ್ಟು ನೆರವಾಗುವುದು ಈ ಯೋಜನೆಯ ಉದ್ದೇಶ. ಆದರೆ ಹೆಬ್ಬೆಟ್ಟು ಒತ್ತುವವರನ್ನು ವಂಚಿಸುವುದು ಸುಲಭ. ಆಂಧ್ರಪ್ರದೇಶದ ಅನಂತಪುರದಲ್ಲಿ ಜಮೀನ್ದಾರರು ತಮ್ಮ ಹೊಲದಲ್ಲಿ ಇವರನ್ನು ದುಡಿಸಿ ಯೋಜನೆಯ ನೆರವನ್ನು ನುಂಗಿದ್ದಾರೆ. ಪ್ರತಿ ವರ್ಷ ಕುಟುಂಬಕ್ಕೆ ೧೦೦ ದಿನ ಉದ್ಯೋಗ ಖಾತ್ರಿ ಎಂಬುದು ಯೋಜನೆಯ ಸೂತ್ರ. ಒಂದೇ ಜಾಬ್ ಕಾರ್ಡ್‌ನ್ನು ಕುಟುಂಬದ ಇತರ ಸದಸ್ಯರೂ ಬಳಸಬಹುದು. ಆದರೆ ಕಾಸರಗೋಡಿನ ನೀರ್ಚಾಲಿನಲ್ಲಿ ಯೋಜನೆಯನ್ವಯ ಕೆಲಸ ಮಾಡಿಸಿದ ನಂತರ ನಡೆದ ಕತೆಯೇ ಬೇರೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂಬ ನೆಪ ಒಡ್ಡಿ ಯಾರಿಗೂ ನಿಗದಿತ ವೇತನ ಕೊಡದೆ ಕೈ ತೊಳೆದರು.
ನಿಜಕ್ಕೂ ಉಪಯೋಗವಾಗಬೇಕಿದ್ದರೆ ಮೊದಲು ಉದ್ಯೋಗ ಖಾತರಿಯಲ್ಲಿರುವ ವೇತನ ಪದ್ಧತಿಯನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿಗದಿಪಡಿಸಬೇಕು. ಎರಡನೆಯದಾಗಿ ಕಾಮಗಾರಿ ಮುಕ್ತಾಯವಾದ ಕೂಡಲೇ ಸಂಬಳ ಕೊಡಬೇಕು. ಕೊಡದೆ ತಿಂಗಳುಗಟ್ಟಲೆ ಸತಾಯಿಸಕೂಡದು. ಕಾಯಿದೆಯ ಪ್ರಕಾರ ಅದೂ ಅಪರಾಧವೇ. ಅವ್ಯವಹಾರ ನಡೆಯುತ್ತಿದ್ದಲ್ಲಿ ಅಥವಾ ಕೈಲಾಗದ ಸಿಬ್ಬಂದಿ ಇದ್ದಲ್ಲಿ ಮಾತ್ರ ಇಂತಹ ಯಡವಟ್ಟು ನಡೆಯುತ್ತದೆ. ಮೂರನೆಯದಾಗಿ ನೂರು ದಿನಗಳಲ್ಲಿ ರಸ್ತೆ ಅಗೆಯುವುದು, ಹೊಂಡ ತೋಡುವುದು, ಚರಂಡಿ ನಿರ್ಮಿಸುವುದು ಮಾತ್ರ ಕೆಲಸವಲ್ಲ. ಕೃಷಿ ಚಟುವಟಿಕೆಗೆ ಒತ್ತು ನೀಡಬೇಕಿದ್ದ ಸಂದರ್ಭ ಕಾರ್ಮಿಕರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ರೈತರು ಕೊಯ್ಲಿಗೆ ಜನ ಸಿಗುತ್ತಿಲ್ಲ ಅಂತ ಪರದಾಡುವಾಗ ಉದ್ಯೋಗ ಖಾತರಿ ಅಂತ ರಸ್ತೆ ಅಗೆಸುತ್ತ ದಿನ ಕಳೆಯಕೂಡದು. ನಿಜವಾಗಿಯೂ ಕೆಲಸ ನಡೆಯುತ್ತಿದೆಯೇ ಇಲ್ಲವೇ ಹಾಗೂ ಯಾವ ಹಂತದಲ್ಲಿದೆ ಎಂಬುದನ್ನು ವಿಡಿಯೊ ಮೂಲಕ ದಾಖಲಿಸಬೇಕು ಅಂತ ಸಿಎಂ ಸಲಹೆ ನೀಡಿದ್ದಾರೆ. ಆದರೆ ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಕೂಲಿ ಸಿಗುವಂತೆ ನಿಗಾ ವಹಿಸಬೇಕಾದ್ದು ಅದಕ್ಕಿಂತ ಮುಖ್ಯವಲ್ಲವೇ.
ಮಾನ್ಯ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೇ, ಎನ್‌ಆರ್‌ಇಜಿಯ ದಕ್ಷಿಣ ಭಾರತ ವಿಭಾಗದ ಸಮ್ಮೇಳನದಲ್ಲಿ ಉದ್ಯೋಗ ಖಾತರಿಯ ವೈಫಲ್ಯವನ್ನು ಬಣ್ಣಿಸಿದ್ದೀರಿ. ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಅಗತ್ಯವನ್ನು ತಿಳಿಸಿದ್ದೀರಿ. ಆದರೆ ಸೋಲನ್ನು ಗೆಲುವಾಗಿ ಪರಿವರ್ತಿಸಬೇಕಾದ್ದು ಯಾರ ಹೊಣೆ ? ನಿಮ್ಮ ಸರಕಾರದ್ದಲ್ಲವೇ ? ಪಂಚಾಯತ್ ರಾಜ್ ವ್ಯವಸ್ಥೆಯದ್ದಲ್ಲವೇ ? ಅದನ್ನೆಲ್ಲ ಬಿಟ್ಟು ಅಮ್ಮಾ.. ನಾ ಫೇಲಾದೆ..ವರ್ತನೆ ತೋರುವುದೇ ?
ವರ್ಷಕ್ಕೆ ೪೦ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯ ವಿನ್ಯಾಸವನ್ನು ಬೆಲ್ಜಿಯಂ ಮೂಲದ ಆರ್ಥಿಕ ತಜ್ಞ ಜಿಯಾನ್ ಡ್ರೆಜ್ ಸಿದ್ಧಪಡಿಸಿದ ಎಂದ ಮಾತ್ರಕ್ಕೇ ಎಲ್ಲವೂ ಸರಿಯಿರುವುದಿಲ್ಲ. ಪ್ರತಿ ದಿನ ೮೨ ರೂ.ನಂತೆ ೧೦೦ ದಿನ ಕೊಟ್ಟರೆ ಪ್ರತಿ ತಿಂಗಳ ಲೆಕ್ಕದಲ್ಲಿ ಸುಮಾರು ೬೮೩ ರೂ ಆಗುತ್ತದೆ. ಇದು ಬಡತನ ದೂರ ಮಾಡುತ್ತದೆ ಎನ್ನುವುದು ಅವಿವೇಕದ ಮಾತು ಅಲ್ವಾ ಠಾಕೂರರೇ. ಅಷ್ಟಕ್ಕೂ ಉದ್ಯೋಗ ಖಾತರಿಯಲ್ಲಿ ಸಿಗುವ ಕೂಲಿಗಿಂತ ಇಮ್ಮಡಿ ಮೊತ್ತ ( ತಿಂಡಿ-ಊಟ ಹೊರತಾಗಿ) ತಮ್ಮದೇ ಗ್ರಾಮದಲ್ಲಿ ಸಿಕ್ಕಿದರೆ ಈ ಯೋಜನೆಯನ್ನು ಯಾವ ಸೀಮೆಯ ಜನ ಕೇಳ್ತಾರೆ ಮಾರಾಯ್ರೇ ?
ಇನ್ನು ಎನ್‌ಆರ್‌ಇಜಿಇ ಮೂಲಕ ರಸ್ತೆ ನಿರ್ಮಾಣ, ಬಾವಿ, ಚರಂಡಿ ನಿರ್ಮಾಣದಂತಹ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇವುಗಳನ್ನು ವರ್ಷದ ಯಾವುದೇ ಸಂದರ್ಭದಲ್ಲಿ ಕೈಗೊಳ್ಳಬಹುದು. ಎಷ್ಟೋ ಕಡೆಗಳಲ್ಲಿ ಇಂತಹ ಕೆಲಸಗಳಿಗೆ ಕೃಷಿ ಕಾರ್ಮಿಕರು ತೆರಳುವುದರಿಂದ ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಒಬ್ಬರೂ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಒರಿಸ್ಸಾ, ಜಾರ್ಖಂಡ್ ಉತ್ತರಪ್ರದೇಶದಂತಹ ರಾಜ್ಯಗಳ ಕತೆ ಕೇಳದಿರುವುದು ಲೇಸು. ಎನ್‌ಆರ್‌ಇಜಿಎ ಉದ್ಯೋಗದ ಕಾರ್ಡ್ ಪಡೆಯಲು ಲಂಚ ಕೊಡುವ ಪರಿಸ್ಥಿತಿ. ಊಳಿಗಮಾನ್ಯ ಪದ್ಧತಿಯಡಿಯಲ್ಲಿ ನರಳುವ ಅಲ್ಲಿನ ಗ್ರಾಮಗಳಲ್ಲ್ಲಿ ಬಡಪಾಯಿ ಕಾರ್ಮಿಕರಿಗೆ ಉದ್ಯೋಗ ಖಾತರಿ ನೀಡುವರಿಲ್ಲ.
ಅಂದಹಾಗೆ ಉದ್ಯೋಗ ಖಾತರಿ ಕಾಯಿದೆಯನ್ನು ಓದುವಾಗ ತುಂಬ ಸಂತಸವಾಗಬಹುದು. ವೇತನವನ್ನು ದಿನಗೂಲಿ ದರದಲ್ಲಿ ನೀಡಬೇಕು. ಸಂಬಳ ಬಟವಾಡೆಯನ್ನು ವಾರದ ಲೆಕ್ಕದಲ್ಲಿ ವಿತರಿಸಬೇಕು. ಯಾವುದೇ ಕಾರಣಕ್ಕೂ ೧೫ ದಿನದಿಂದ ಹೆಚ್ಚು ತಡ ಮಾಡಬಾರದು. ಫಲಾನುಭವಿಗಳ ಪೈಕಿ ಮೂರನೇ ಒಂದರಷ್ಟು ಮಂದಿ ಮಹಿಳೆಯರಿರಬೇಕು. ಕೆಲಸದ ಸ್ಥಳದಲ್ಲಿ ಬಿಸಿಲು, ಮಳೆಯಿಂದ ರಕ್ಷಣೆಗೆ ತಂಗುದಾಣ ಅಥವಾ ಆಶ್ರಯ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಅನುಕೂಲ ಕೊಡಬೇಕು. ಕನಿಷ್ಠ ಶೇ.೫೦ರಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಬೇಕು. ಜಲ ಸಂವರ್ಧನೆ, ಭೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. (ಎಲ್ಲಾದರೂ ಇವರಿಗೆ ಗಿಡ ನೆಡಲು ಕೆಲಸ ಕೊಟ್ಟಿದ್ದನ್ನು ನೋಡಿದ್ದೀರಾ ?) ಗುತ್ತಿಗೆದಾರರು ಮತ್ತು ಯಂತ್ರೋಪಕರಣಗಳಿಗೆ ಅವಕಾಶ ಇಲ್ಲ. ಗ್ರಾಮಸಭೆಯ ಮೂಲಕ ನಿಯಮಿತವಾಗಿ ಕಾಮಗಾರಿ ಕುರಿತ ಲೆಕ್ಕ ಪರಿಶೋಧನೆ ನಡೆಸಬೇಕು. ಯೋಜನೆ ಕುರಿತ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು.
ಯಾವುದೇ ವಿಶೇಷ ಕೌಶಲ್ಯದ ಅಗತ್ಯ ಬೀಳದ ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಕುಟುಂಬದಿಂದ ಬಂದ ವ್ಯಕ್ತಿ ಭಾಗವಹಿಸಬಹುದು. ಇದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಲಿಖಿತ ಇಲ್ಲವೇ ಮೌಖಿಕವಾಗಿ ತಿಳಿಸಿ ಹೆಸರು ನೋಂದಣಿ ಮಾಡಿದರೆ ಸಾಕು. ತಪಾಸಣೆಯ ನಂತರ ಗ್ರಾಮ ಪಂಚಾಯಿತಿ ಗುರುತಿನ ಚೀಟಿಯನ್ನು ನೀಡುತ್ತದೆ. ಇದಕ್ಕೆ ಯಾವುದೇ ಶುಲ್ಕ ನೀಡಬೇಕಿಲ್ಲ. ಅರ್ಜಿ ಸಲ್ಲಿಸಿದ ೧೫ ದಿನದೊಳಗೆ ಜಾಬ್ ಕಾರ್ಡ್ ನೀಡಬೇಕು. ತನಗೆ ಎಷ್ಟು ದಿನ ಕೆಲಸ ಮಾಡುವ ಇಚ್ಛೆ ಇದೆ ಎಂದು ವ್ಯಕ್ತಿ ಅರ್ಜಿಯಲ್ಲಿ ತಿಳಿಸಬೇಕು. ಕನಿಷ್ಠ ೧೪ ದಿನ ಕೆಲಸ ಮಾಡಬಹುದು. ನಂತರ ಬೇಕಾದರೆ ಬಿಡಬಹುದು. ಅರ್ಜಿ ಓ.ಕೆ ಆದ ನಂತರ ಗ್ರಾಮಪಂಚಾಯಿತಿ ಖಾತರಿಯ ರಶೀದಿ ನೀಡಬೇಕು. ಅರ್ಜಿ ಅನುಮೋದನೆಯಾದ ೧೫ ದಿನಗಳೊಳಗೆ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಅರ್ಜಿದಾರನಿಗೆ ಸರಕಾರ ಕಾಯಿದೆಯ ಪ್ರಕಾರ ನಿರುದ್ಯೋಗ ಭತ್ಯೆಯನ್ನು ಕೊಡಬೇಕು. ಗ್ರಾಮದ ೫ ಕಿ.ಮೀ ವ್ಯಾಪ್ತಿಯಲ್ಲಿ ಉದ್ಯೋಗ ಕೊಡಬೇಕು. ಅದಕ್ಕಿಂತ ಆಚೆಗೆ ಇದ್ದಲ್ಲಿ ಶೇ.೧೦ರಷ್ಟು ಹೆಚ್ಚುವರಿ ವೇತನ ನೀಡಬೇಕು. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಬೇಕು. ಕೆಲಸ ಕೂಡಾ.
ಉದ್ಯೋಗ ಖಾತರಿ ಯೋಜನೆ ಶಾಸನ ಬದ್ಧ ರೀತಿಯಲ್ಲಿ ಗ್ಯಾರಂಟಿಯಾಗಿ ಉದ್ಯೋಗ ಕೊಡುತ್ತದೆ. ಹಕ್ಕಿನಂತೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದು, ಜಾಬ್ ಕಾರ್ಡ್ ಪಡೆಯುವುದು, ತನಗೆ ಬೇಕಾದಷ್ಟು ದಿನ ಕೆಲಸ ಮಾಡುವುದು ಮತ್ತು ಸಂಬಳ ಪಡೆಯುವುದು ! ಎಲ್ಲ ಚೆನ್ನಾಗಿದೆ.
ಹಾಗಾದರೆ ಇದಕ್ಕೆಲ್ಲ ಹೊಣೆ ಯಾರು ?
ಗ್ರಾಮಸಭೆ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾವೆಲ್ಲ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಗ್ರಾಮಸಭೆ ನಿರ್ಧರಿಸಬೇಕು.
ಗ್ರಾಮೀಣ ಮಟ್ಟದಲ್ಲಿ ಯೋಜನೆಯ ಅನುಷ್ಠಾನ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯೇ ಆಧಾರ ಸ್ಥಂಭ. ಕಾಮಗಾರಿಯ ನೀಲನಕ್ಷೆ, ಅರ್ಜಿ ಸ್ವೀಕಾರ, ಅರ್ಜಿಗಳ ಪರಿಶೀಲನೆ, ನೋಂದಣಿ, ಜಾಬ್ ಕಾರ್ಡ್ ವಿತರಣೆ, ರಶೀದಿ ವಿತರಣೆ, ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಉದ್ಯೋಗ, ಕಾಮಗಾರಿಯ ನಿರ್ವಹಣೆ, ದಾಖಲೆಗಳ ನಿರ್ವಹಣೆ, ಯೋಜನೆ ಸಂಬಂಧ ಗ್ರಾಮಸಭೆ, ಹೊಣೆ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಗ್ರಾಮ ಮಟ್ಟದಲ್ಲಿ ಕಾಮಗಾರಿಯ ಉಸ್ತುವಾರಿ ಕೂಡ ಗ್ರಾಮ ಪಂಚಾಯಿತಿಗೆ ಸೇರುತ್ತದೆ.
ಇನ್ನು ಬ್ಲಾಕ್ ಮಟ್ಟದಲ್ಲಿ ಪ್ರೋಗ್ರಾಮ್ ಆಫೀಸರ್ (ಪಿ.ಒ) ಸಮನ್ವಯಕಾರನಾಗಿ ಕಾರ್‍ಯನಿರ್ವಹಿಸಬೇಕು. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ೧೫ ದಿವಸದೊಳಗೆ ಕೆಲಸ ಸಿಕ್ಕಿತೇ ಅಂತ ಈ ಅಕಾರಿ ಖಚಿತಪಡಿಸಿಕೊಳ್ಳಬೇಕು. ಕಾಮಗಾರಿಯ ಅಭಿವೃದ್ಧಿಯನ್ನು ತಪಾಸಣೆ ಮಾಡಬೇಕು. ದೂರು ದುಮ್ಮಾನಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು. ಲೆಕ್ಕ ಸರಿಯಾಗಿದೆಯೇ ಅಂತ ಪರಿಶೀಲಿಸಬೇಕು. ತಪ್ಪಿದಲ್ಲಿ ಬ್ಲಾಕ್ ಮಟ್ಟದಲ್ಲಿ ಆತನೇ ಹೊಣೆಗಾರನಾಗುತ್ತಾನೆ.
ಮತ್ತೆ ಉದ್ಯೋಗ ಖಾತರಿಯ ಜಿಲ್ಲಾ ಯೋಜನೆಗಳನ್ನು ನಿರ್ವಹಿಸುವ ಹೊಣೆ ಜಿಲ್ಲಾ ಪಂಚಾಯತ್‌ಗೆ ಸೇರಿದೆ. ಕಾರ್ಮಿಕ ಬಜೆಟ್ ಮತ್ತು ಜಿಲ್ಲೆಯಲ್ಲಿ ಯೋಜನೆಯ ಉಸ್ತುವಾರಿ ಅದಕ್ಕಿರುತ್ತದೆ. ಯೋಜನೆಯ ಮಾಹಿತಿ ಪ್ರಚಾರ, ತರಬೇತಿ, ಬ್ಲಾಕ್ ಯೋಜನೆಗಳನ್ನು ಜಿಲ್ಲಾ ಮಟ್ಟದ ಯೋಜನೆಗಳಾಗಿ ಪರಿವರ್ತನೆ, ನಿ ಬಿಡುಗಡೆ ಮತ್ತು ಬಳಕೆ,ಮಾಸಿಕ ಪ್ರಗತಿಯ ವಿವರ ಸಲ್ಲಿಕೆ ಜಿ.ಪಂ. ಯೋಜನಾ ಸಮನ್ವಯಕಾರನ ಹೊಣೆ.
ರಾಜ್ಯ ಉದ್ಯೋಗ ಖಾತರಿ ಮಂಡಳಿ (ಎಸ್‌ಇಜಿಸಿ) ರಾಜ್ಯ ಸರಕಾರಕ್ಕೆ ಯೋಜನೆಗೆ ಸಂಬಂಸಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತದೆ. ಪರಿಶೀಲನೆಯ ಜವಾಬ್ದಾರಿಯೂ ಇದಕ್ಕಿದೆ. ರಾಜ್ಯದಲ್ಲಿ ಯೋಜನೆಯ ವಾರ್ಷಿಕ ಪ್ರಗತಿ ವರದಿಯನ್ನು ಸಿದ್ಧಪಡಿಸುವುದು ಕೂಡ ಇದರ ಜವಾಬ್ದಾರಿ. ಉದ್ಯೋಗ ಖಾತರಿ ನಿಯ ಸ್ಥಾಪನೆ, ಪೂರ್ಣಕಾಲಿಕ ಸಿಬ್ಬಂದಿ ನೇಮಕ (ಮುಖ್ಯವಾಗಿ ಗ್ರಾಮ ಪಂಚಾಯತಿ ಸಹಾಯಕ, ಪ್ರೋಗ್ರಾಮ್ ಆಫೀಸರ್, ತಾಂತ್ರಿಕ ಸಿಬ್ಬಂದಿ ನೇಮಕ ), ರಾಜ್ಯದ ಪಾಲಿನ ಬಜೆಟ್ ಬಿಡುಗಡೆ, ತರಬೇತಿ, ಗುಣಮಟ್ಟ ಕಾಪಾಡಲು ನೆರವು, ನಿಯಮಿತ ಪರಿಶೀಲನೆ,ಯೋಜನೆಯ ಎಲ್ಲಾ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಹೊಣೆ ರಾಜ್ಯ ಸರಕಾರದ್ದು.
ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಕೇಂದ್ರ ಮಂಡಳಿ ಕಾರ್ಯನಿರ್ವಹಿಸುತ್ತದೆ. ಯೋಜನೆಗೆ ಸಂಬಂಸಿ ರಾಜ್ಯ ಸರಕಾರಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು, ಸಂಸತ್ತಿನಲ್ಲಿ ಮಂಡಿಸಬೇಕಾದ ವರದಿಯ ಸಿದ್ಧತೆ, ಸಕಾಲದಲ್ಲಿ ರಾಜ್ಯಗಳಿಗೆ ಅನುದಾನ ಒದಗಿಸುವುದು, ಅನುಷ್ಠಾನದ ಪರಿಶೀಲನೆ, ಅಂಕಿ ಅಂಶಗಳ ದಾಖಲು, ಮಾಹಿತಿ ತಂತ್ರeನದ ಬಳಕೆ, ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಹೊಣೆ ಹೀಗೆ ನಾನಾ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಲಾಗಿದೆ.
ಉತ್ತರ ಪ್ರದೇಶ ಸರಕಾರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜತ್ರೋಪ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ವೇತನ ವಿತರಣೆಗೆ ಸ್ಮಾರ್ಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯತನಕ ೮೭ ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ಈ ಸಂಖ್ಯೆ ೨.೬ ಲಕ್ಷ ದಾಟುವ ನಿರೀಕ್ಷೆ ಇದೆ. ಇರಲಿ.
ಆದರೆ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತದ ಜತೆ ದೇಶ ಸುದೀರ್ಘಾವಯಿಂದ ಸೆಣಸುತ್ತಿದೆ...
ಮತ್ತದೇ ರಾಜಕೀಯದ ಲಾಭ ನಷ್ಟದ್ದೇ ಲೆಕ್ಕಾಚಾರ. ಯುಪಿಎ ಸರಕಾರದ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯನ್ನು ಮತಗಳಾಗಿ ಪರಿವರ್ತಿಸಲು ವಿಫಲವಾಗದಿರುವುದೂ ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ಕಾರಣಗಳಲ್ಲೊಂದು ಅಂತ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರು ಹಳಹಳಿಯುತ್ತಿದ್ದಾರೆ.
ಆದರೆ ಅಂತಿಮವಾಗಿ ಸಾಮಾನ್ಯ ಪ್ರಜೆ ಕೇಳುವುದಿಷ್ಟೇ. ಕೆಲಸ ಮಾಡಿದ್ದಕ್ಕೆ ತಕ್ಕ ನ್ಯಾಯ ಕೊಡಿ. ಕನಿಷ್ಠ ಸಂಬಳವನ್ನು ಸರಿಯಾಗಿ ಕೊಟ್ಟು ಪುಣ್ಯ ಕಟ್ಟಿ ಕೊಳ್ಳಿ

Monday 21 September 2009

ಸಿಂಗಾಪುರ ಯಾಕೆ ಇಷ್ಟೊಂದು ಕ್ಲೀನಾಗಿದೆ ! ?

ಸಿಂಗಾಪುರ ಯಾಕೆ ಇಷ್ಟೊಂದು ಕ್ಲೀನಾಗಿದೆ ! ?
ಅಲ್ಲಿಗೆ ಹೋಗಲೇಬೇಕೆಂದಿಲ್ಲ, ಆ ನಗರಿಯ ನಾಲ್ಕಾರು ಚಿತ್ರ ನೋಡಿದವರಿಗೂ ಇದೇ ಪ್ರಶ್ನೆ ಕಾಡದಿರದು. ಅದಕ್ಕಿಂತ ಮುಖ್ಯವಾಗಿ ಸಿಂಗಾಪುರದ ಸ್ವಚ್ಛತೆಯ ಸುತ್ತ ಅನೇಕ ದಂತಕತೆಗಳೇ ಚಾಲ್ತಿಯಲ್ಲಿವೆ. ಕಸ ಬಿಸಾಡಿದವರಿಗೆ ಅಷ್ಟು ದಂಡವಂತೆ, ಟಾಯ್ಲೆಟ್‌ನಲ್ಲಿ ನೀರು ಬಳಸದಿದ್ದವರಿಗೆ ಇಷ್ಟು ದಂಡವಂತೆ, ಮನೆಯಲ್ಲಿ ಸದ್ದಾಗಬಾರದಂತೆ...ಎಂಬ ಅಂತೆ ಕಂತೆಗಳಿವೆ. ಹಾಗಾದರೆ ಇದೆಲ್ಲ ನಿಜಾನಾ ? ನಿಜಕ್ಕೂ ಅಲ್ಲಿ ಏನು ನಡೆಯುತ್ತಿದೆ ?
ಹೌದು...ಸಿಂಗಾಪುರದ ನೈರ್ಮಲ್ಯದ ಕಥಾನಕ ಸ್ವಾರಸ್ಯಕರ. ಅಲ್ಲಿನ ಕಟ್ಟುನಿಟ್ಟಿನ ನಿಯಮಗಳ ಹಿಂದೆ ಕುತೂಹಲಕರ ಇತಿಹಾಸವೇ ಅಡಗಿದೆ. ರಸ್ತೆ ವಿಭಜಕಗಳನ್ನೇರಿ ಛಂಗನೆ ನೆಗೆದು ಹೋಗುವ ನಮ್ಮವರಿಗೆ ಸಿಂಗಾಪುರದಲ್ಲಿ ಹಾಗೊಮ್ಮೆ ಮನಬಂದಂತೆ ರಸ್ತೆ ದಾಟಿದರೆ ಹದಿನಾರು ಸಾವಿರ ರೂ.ಗೂ ಹೆಚ್ಚು ದಂಡ ತೆರಬೇಕಾಗುತ್ತದೆ ಎಂದರೆ ಬಹುಶಃ ಮೂರ್ಛೆ ಹೋಗಬಹುದು.
ಸಿಂಗಾಪುರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ವಿಸಿರುವ ಹಲವಾರು ನಿಯಮಗಳು ಜಗತ್ತಿನ ಬೇರೆಲ್ಲೂ ಇಲ್ಲ. ನಗರಾದ್ಯಂತ ಅಲ್ಲಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಸೂಚಿಸಿದ್ದಾರೆ. ನನ್ನ ಕೈಲಾಗಲ್ಲ ಎನ್ನುವ ಪ್ರಶ್ನೆಯೇ ಇಲ್ಲ.
ಸಿಂಗಾಪುರದಲ್ಲಿ ಊಹಿಸಲೂ ಸಾಧ್ಯವಾಗದಷ್ಟು ಕಠಿಣ ದಂಡವನ್ನು ವಿಸುತ್ತಾರೆ. ಸಿಗರೇಟ್‌ನ ತುಂಡು, ಕಾರ್ ಪಾರ್ಕಿಂಗ್ ರಸೀತಿ, ಚಾಕಲೇಟ್‌ನ ಕವರ್‌ನ ಚೂರು ಮುಂತಾದ ಸಣ್ಣ ಪುಟ್ಟ ಕಸ ಕಡ್ಡಿಯನ್ನು ಬಿಸಾಡಿದರೂ ತೆರಬೇಕಾದ ದಂಡ ಎಷ್ಟು ಗೊತ್ತೇ ? ಮೊದಲ ಸಲವಾದರೆ ೧೦೦ರಿಂದ ೩೦೦ ಸಿಂಗಾಪುರ ಡಾಲರ್, ಅಂದರೆ ೩೨೬೦.೧ ರೂ.ಗಳಿಂದ ೯೭೮೦.೩ ರೂಪಾಯಿ !
ಮತ್ತೆ ಅದೇ ತಪ್ಪು ಎಸಗಿದಲ್ಲಿ ಮತ್ತಷ್ಟು ಕಠಿಣ ದಂಡ ಮತ್ತು ಶಿಕ್ಷೆ ಕಾದಿರುತ್ತದೆ.
ನಮ್ಮಲ್ಲಿ ಸಾರ್ವಜನಿಕ ಶೌಚಾಲಯದ ಇನ್ನೂರು ಮೀಟರ್ ಸುತ್ತ ದುರ್ವಾಸನೆಯದ್ದೇ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮೂಗು ಮುಚ್ಚದೆ ಅತ್ತಿತ್ತ ನಡೆಯುವಂತಿಲ್ಲ. ಶೌಚಾಲಯದ ಪಾತ್ರೆಯ ಕೊಳಕಿನ ಬಗ್ಗೆ ಇಲ್ಲಿ ವಿವರಿಸಿ ವಾಕರಿಕೆ ಬರಿಸಲಾರೆ..ಆದರೆ ಸಿಂಗಾಪುರದಲ್ಲಿ ನೀವೇನಾದರೂ ಶೌಚ ಮಾಡಿದ ನಂತರ ತೊಳೆಯದೇ ಹೊರ ಬಂದರೆ ೨,೪೪೫.೧ ರೂ. ದಂಡ ತೆರಬೇಕು ! ಆ ಖರ್ಚಿಗೆ ಸ್ವಲ್ಪ ಸೇರಿದಿದರೆ, ಅದರಲ್ಲಿ ಬಾವಿ ಹೊರತುಪಡಿಸಿ ಹೊಸ ಪಾಯಿಖಾನೆಯನ್ನೇ ಕಟ್ಟಬಹುದು. ಅಲ್ಲವಾ.ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ಕಸ, ಕಾಗದ ಬಿಸಾಡಿದರೆ ೩೨೬೦೦.೯ ರೂ. ತನಕ ದಂಡ ವಿಸುತ್ತಾರೆ. ಒಂದು ವೇಳೆ ಅಷ್ಟೊಂದು ದಂಡ ಕೊಡಲು ಒಪ್ಪದಿದ್ದರೆ ಸಾರ್ವಜನಿಕ ಪ್ರದೇಶದ ಕಸ ಗುಡಿಸುವ ಕೆಲಸವನ್ನು ನೀವೇ ಮಾಡಬೇಕಾಗುತ್ತದೆ.
ಸಿಂಗಾಪುರದಲ್ಲಿ ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆಗೆ ಜಾರಿಗೊಳಿಸಿರುವ ದಂಡದ ವಿವರಗಳನ್ನು ನೋಡಿ..
- ಉಗುಳಿದರೆ ೬೫೨ ರೂ. ದಂಡ.
- ಸಿಗರೇಟ್ ತುಂಡು ಬಿಸಾಡಿದರೆ ೧,೬೩೦ ರೂ. ದಂಡ
- ಅಪಾನವಾಯು ಬಿಟ್ಟರೆ ೧,೬೩೦ ರೂ. ದಂಡ
ನಮ್ಮಲ್ಲೇನಾದರೂ ಇಂತಹ ದಂಡದ ಕ್ರಮಗಳು ಜಾರಿಯಾದಲ್ಲಿ ವಾಟಾಳ್ ನಾಗರಾಜ್ ಹೂಸು ಬಿಡುತ್ತಲೇ ಪ್ರತಿಭಟಿಸಬಹುದೇನೋ. ನಮ್ಮಲ್ಲಿ ಪೊಲೀಸರು ಎಷ್ಟು ಬಾಯಿ ಬಡಿದುಕೊಂಡರೂ, ಅವರೆದುರಿನಲ್ಲೇ ಕ್ಯಾರೇ ಅನ್ನದೆ ಜನ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ದಾಟುತ್ತಾರೆ. ಸ್ವತಃ ಪೊಲೀಸರೇ ನಿಲ್ಲಿಸಬಾರದ ಜಾಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಆದರೆ ಸಿಂಗಾಪುರದಲ್ಲಿ ಅನುಮತಿ ಇಲ್ಲದ ಕಡೆಗಳಲ್ಲಿ ದಾಟಿದರೆ ದಂಡ ಎಷ್ಟು ಗೊತ್ತೇ ? ೧೬೩೦೦.೪ ರೂ. ರೋಬಾಟ್ ಹಸಿರು ತೋರಿಸುವ ತನಕ ರಸ್ತೆ ದಾಟುವಂತಿಲ್ಲ. ಕಾರಿನಲ್ಲಿ ಸಂಚಾರಕ್ಕೆ ಹೊರಟಿದ್ದಲ್ಲಿ ಟ್ಯಾಂಕ್‌ನಲ್ಲಿ ಕನಿಷ್ಠ ಮುಕ್ಕಾಲು ಭಾಗದಷ್ಟು ಇಂಧನ ಇರಲೇಬೇಕು. ಆದರೆ ಇದು ಸಿಂಗಾಪುರದ ಕಾರುಗಳಿಗೆ ಮಾತ್ರ ಅನ್ವಯವಾಗುತ್ತದೆ. ಕಾರಿನಲ್ಲಿ ಒಂದೊಮ್ಮೆ ಡ್ರಗ್ಸ್ ಇದ್ದಲ್ಲಿ ಮರಣದಂಡನೆಯೂ ಆದೀತು
ಇಷ್ಟು ಓದಿದ ಮೇಲೆ ಸಿಂಗಾಪುರಕ್ಕೆ ಹೋಗುವ ಆಲೋಚನೆಯನ್ನು ನೀವು ಕೈಬಿಟ್ಟರೆ ನಾನು ಜವಾಬ್ದಾರನಲ್ಲ
ನಾಯಿ ಸಾಕಿ ನೋಡು !
ಸಿಂಗಾಪುರದಲ್ಲಿ ನಾಯಿಗಳನ್ನು ಸಾಕಿ ಮುದ್ದಿಸುವುದು ನಿಸ್ಸಂದೇಹವಾಗಿ ಸಾಮಾನ್ಯ ಸಂಗತಿಯಲ್ಲ
ಯಾಕೆ ಗೊತ್ತೇ ? ಮೂರು ತಿಂಗಳು ಅಥವಾ ಹೆಚ್ಚು ವಯಸ್ಸಿನ ನಾಯಿಗಳನ್ನು ಸಾಕಲು ಪರವಾನಗಿ ಕಡ್ಡಾಯ. ಗಂಡು ನಾಯಿಗೆ ೧೪ ಸಿಂಗಾಪುರ ಡಾಲರ್ ಶುಲ್ಕ ಇದೆ. ಹೊಸ ಅರ್ಜಿಗೆ ೬.೫೦ ಡಾಲರ್ ತೆರಬೇಕು. ಪರವಾನಗಿಯ ಚೀಟಿಯನ್ನು ನಾಯಿಯ ಕುತ್ತಿಗೆಗೆ ಕಡ್ಡಾಯವಾಗಿ ಕಟ್ಟಬೇಕು. ವರ್ಷಕ್ಕೊಮ್ಮೆ ಪರವಾನಗಿಯನ್ನು ನವೀಕರಿಸಬೇಕು. ಮೂರಕ್ಕಿಂತ ಹೆಚ್ಚು ನಾಯಿ ಸಾಕುವುದಿದ್ದರೆ ಕೃಷಿ-ಆಹಾರ ಮತ್ತು ಪಶು ಸಂಗೋಪನಾ ಪ್ರಾಕಾರದ ಪ್ರಧಾನ ನಿರ್ದೇಶಕರಿಂದ ಲಿಖಿತ ಅನುಮತಿ ಕಡ್ಡಾಯ. ನಾಯಿಗಳ ಮಾಲೀಕರು ಬದಲಾದರೆ, ನಾಯಿ ಸತ್ತರೆ, ಕಾಣೆಯಾದರೆ ಕಡ್ಡಾಯವಾಗಿ ಪ್ರಾಕಾರಕ್ಕೆ ತಿಳಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ನಾಯಿ ಕಂತ್ರಿ ನಾಯಿಯಂತೆ ಬೊಗಳಿ ತೊಂದರೆ ಕೊಡುವುದು, ಸ್ಥಳ ಸಿಕ್ಕಲ್ಲಿ ಮೂತ್ರ ಹೊಯ್ಯುವುದು, ಕಚ್ಚುವುದು, ಕಾರನ್ನು ಬೆನ್ನಟ್ಟುವುದು ಮುಂತಾದ್ದನ್ನು ನಿಷೇಸಲಾಗಿದೆ. ಆದ್ದರಿಂದ ವಿಹಾರದ ವೇಳೆ ನಿಮ್ಮ ಜತೆಗಿರುವ ನಾಯಿ ವಿಸರ್ಜನೆ ಮಾಡಿದರೆ ತೆಗೆದಿಟ್ಟುಕೊಳ್ಳಲು ಪ್ಲಾಸ್ಟಿಕ್ ಚೀಲ ತೆಗೆದಿಟ್ಟುಕೊಂಡಿರಬೇಕು. ಸಿಂಗಾಪುರದಲ್ಲಿ ಸ್ವಚ್ಛತೆಗೆ ವಿಸಿರುವ ಕಠಿಣ ನಿಯಮಾವಳಿಗಳಿಂದ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿರುವುದು ಸುಳ್ಳಲ್ಲ. ಮುಖ್ಯವಾಗಿ ಭಾರತದಂತಹ ರಾಷ್ಟ್ರಗಳಿಂದ ಹೊರಡುವವರಿಗೆ ಅಲ್ಲಿ ಹೆಜ್ಜೆ ಹೆಜ್ಜೆಗೂ ಧುತ್ತನೆ ದಂಡ ಮತ್ತು ಸಮಸ್ಯೆ ಎದುರಾಗಿ ಕಕ್ಕಾಬಿಕ್ಕಿಯಾಗಬಹುದು. ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಗೂ ಧಕ್ಕೆಯಾಗಬಹುದು. ಹೆಜ್ಜೆ ಹೆಜ್ಜೆಗೂ ದಂಡ ಕಟ್ಟಬೇಕು ಎಂದರೆ ಯಾರಿಗೂ ಸಿಂಗಾಪುರ ಪ್ರವಾಸ ತ್ರಾಸದಾಯಕವಾಗದಿರದು. ಯಾಕೆಂದರೆ ಮೊದಲ ಬಾರಿಗೆ ಹೋಗುವವರಿಗೆ ನಿಯಮಗಳು ಕಾಲಿಗೆ ಬಿಗಿದ ಹಗ್ಗವಾದೀತು.

ಹೊರಗುತ್ತಿಗೆ ನಿಲ್ಲದಿದ್ದರೂ ಸುಮ್ಮನಿರಲಾಗುವುದಿಲ್ಲ ಬೆಂಗಳೂರಿಗೆ..

ನಮ್ಮದು ಸಿಕ್ಕಾಪಟ್ಟೇ ನಿಧಾನವಾಯ್ತು...
ಇವತ್ತು ಬೆಂಗಳೂರಿನಲ್ಲಿರುವ ಜನಸಂಖ್ಯೆ ಅಂದಾಜು ಅರುವತ್ತು ಲಕ್ಷ ಎಂದುಕೊಂಡರೂ ಕಮ್ಮಿಯೇನಲ್ಲ. ನಾರ್ವೆ, ಫಿನ್ಲೆಂಡ್, ಜಾರ್ಜಿಯಾ ಉರುಗ್ವೆ ಮುಂತಾದ ದೇಶಗಳಲ್ಲಿಯೇ ಇಷ್ಟೊಂದು ಜನರಿಲ್ಲ. ಆದರೂ ಮೆಟ್ರೊ ರೈಲಿನಂತಹ ತೀರಾ ಮೂಲಭೂತ ಅಗತ್ಯ ಸೌಕರ್ಯವನ್ನು ಈ ಮಹಾ ನಗರಕ್ಕೆ ಒದಗಿಸಲು ಹೆಣಗಾಡುತ್ತಿದ್ದೇವೆ. ಬೆಂಗಳೂರು ಮೆಟ್ರೊ ರೈಲಿನಿಂದ ಲಾಲ್‌ಬಾಗ್‌ನ ಹಸಿರು ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಹಲವು ಕಡೆಗಳಲ್ಲಿ ನೂರಾರು ಮರಗಳು ಧರೆಗುರುಳಲಿವೆ. ಆದ್ದರಿಂದ ತಕ್ಷಣ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಸ್ವಯಂಘೋಷಿತ ಪರಿಸರವಾದಿಗಳು ಈಗತಾನೇ ಬೊಬ್ಬೆ ಹಾಕುತ್ತ ಪ್ರತಿಭಟನೆಗೆ ಶುರು ಹಚ್ಚಿದ್ದಾರೆ. ಮತ್ತೊಂದು ಕಡೆ ದೈತ್ಯಾಕಾರದ ರಚನೆಗಳು ಈಗಾಗಲೇ ಸಾಕಷ್ಟು ಕಡೆಗಳಲ್ಲಿ ನಿರ್ಮಾಣವಾಗಿವೆ. ಮುಂದೆ ಏನೇನು ಬೇಕಾಬಿಟ್ಟಿ ವಿಘ್ನಗಳು ಎದುರಾಗುತ್ತವೆಯೋ.
ಹೀಗಾದರೆ ನಾವು ಮುಂದುವರಿಯುವುದು ಯಾವಾಗ ದೊರೆ...?
ಬೇಕಾದರೆ ಇತಿಹಾಸದ ಪುಟಗಳನ್ನು ತೆರೆದು ನೋಡಿ. ಬ್ರಿಟನ್‌ನಲ್ಲಿ ನೂರಾ ನಲ್ವತ್ತಾರು ವರ್ಷಗಳ ಹಿಂದೆಯೇ ಸುರಂಗ ಮಾರ್ಗದಲ್ಲಿ ರೈಲನ್ನು ಓಡಿಸಲಾಗಿತ್ತು. ಜಗತ್ತಿನಲ್ಲಿ ಮೊದಲ ಬಾರಿಗೆ ಭೂಗತ ರೈಲು ಮಾರ್ಗವನ್ನು ನಿರ್ಮಿಸಿದ ಕೀರ್ತಿ ಬ್ರಿಟನ್‌ಗೆ ಸೇರುತ್ತದೆ. ೧೮೭೦ರಲ್ಲಿಯೇ ಥೇಮ್ಸ್ ನದಿಯ ಅಡಿಯಲ್ಲಿ ರೈಲನ್ನು ಓಡಿಸಿದ್ದರು ! ನಮ್ಮಲ್ಲಿ ಕೋಲ್ಕತ್ತಾದ ಹೂಗ್ಲಿ ನದಿಯ ಅಡಿಯಲ್ಲಿ ರೈಲನ್ನು ಓಡಿಸಲು ಈಗತಾನೆ ನೀಲನಕ್ಷೆ ತಯಾರಿಸಲಾಗಿದೆ. ಜನಸಂಖ್ಯೆಯ ಅಭಿವೃದ್ಧಿ ಮಾತ್ರ ಬಿಟ್ಟರೆ ಉಳಿದ ಅಭಿವೃದ್ಧಿಯ ವಿಚಾರದಲ್ಲಿ ಎಷ್ಟು ಶತಮಾನಗಳಷ್ಟು ಹಿಂದೆ ಉಳಿದಿದ್ದೇವೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಹೇಳಿ.
ರೈಲು ಮಾರ್ಗಕ್ಕೆ ಉದ್ಯಾನ ಅಡ್ಡ ಬರುತ್ತಿದ್ದರೆ, ವನ್ಯ ಸಂಪತ್ತು ನಾಶವಾಗುವ ಭೀತಿ ಇದ್ದರೆ, ಉದ್ಯಾನದ ಕೆಳಗಿನಿಂದಲೇ ಭೂಗತ ರೈಲನ್ನು ಅವರು ಓಡಿಸುತ್ತಾರೆ. ಹಾಗಂತ ಇಡೀ ಮಾರ್ಗವನ್ನು ಸುರಂಗದ ಮೂಲಕ ನಿರ್ಮಿಸಿಯೂ ಇಲ್ಲ. ಎಲ್ಲಿ ಅಗತ್ಯ ಇದೆಯೋ, ಅಲ್ಲಿ ಸುರಂಗಗಳನ್ನು ಕೊರೆದು ಅತ್ಯಂತ ವೇಗದ ರೈಲು ಮಾರ್ಗಗಳನ್ನು ಸ್ಥಾಪಿಸಿದ್ದಾರೆ. ಹೀಗಿರುವಾಗ ಒಂದು ದೇಶಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ತುಂಬಿಕೊಂಡು ಒದ್ದಾಡುತ್ತಿರುವ ಬೆಂಗಳೂರಿನಲ್ಲಿ ಸಂಚಾರಕ್ಕೆ ಬೇಕಾದ ವ್ಯವಸ್ಥೆಗಳನ್ನು ಅಳವಡಿಸದಿದ್ದರೆ ಮುಂದೇನಾದೀತು ಎಂದು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತದೆ.
ಅಲ್ಲಾ, ಹಾಗಾದರೆ ಸರಕಾರವನ್ನು ಜೋರಾಗಿ ಎಚ್ಚರಿಸಲು ಈ ಪರಿಸರವಾದಿಗಳಿಗೆ ಈಗ ನೆನಪಾಯಿತೇ ? ಇಡೀ ಮೆಟ್ರೊವನ್ನು ಸುರಂಗ ಮಾರ್ಗದಲ್ಲಿ ನಿರ್ಮಿಸಬೇಕೆಂದಿಲ್ಲ, ಕನಿಷ್ಠ ನಗರದ ಶ್ವಾಸಕೋಶದಂತಿರುವ ಪ್ರಮುಖ ಉದ್ಯಾನಗಳ ಅಡಿಯಲ್ಲಾದರೂ ಸುರಂಗವನ್ನೇಕೆ ನಿರ್ಮಿಸಬಾರದು ? ಪರಿಸರಕ್ಕೂ ಹೇಳಿಕೊಳ್ಳುವಷ್ಟು ಹಾನಿಯಾಗದಂತೆ, ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆಯಾಗದಂತೆ ಸಂಯೋಜಿಸುವ ಜಾಣ್ಮೆಯನ್ನು ಮೆಟ್ರೋದವರಾಗಲಿ, ತಜ್ಞರಾಗಲೀ ಯಾಕೆ ಪ್ರದರ್ಶಿಸಿಲ್ಲ ?
ಮೆಟ್ರೊ ರೈಲಿನ ಕಥೆ ಇಲ್ಲಿ ಸಾಂಕೇತಿಕವಷ್ಟೇ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಹೊರಗುತ್ತಿಗೆ ವಿರುದ್ಧ ಅದೊಂದು ಹೇಳಿಕೆ ಕೊಟ್ಟರು ನೋಡಿ..ಬೆಂಗಳೂರಿನ ಬಿಪಿಒ ವಲಯ ಒಳಗೊಳಗೆ ತತ್ತರಗುಟ್ಟಿತು. ನಿಜ. ಇಂತಹದೊಂದು ಆತಂಕಕ್ಕೆ ನೈಜ ಕಾರಣವಿದೆ. ಎಷ್ಟಾದರೂ ಒಬಾಮಾ ಅಪ್ಪಟ ರಾಜಕಾರಣಿಯಾದ್ದರಿಂದ ಒಂದಕ್ಕೆ ನೂರು ಸೇರಿಸಿ ಬಿಟ್ಟಿದ್ದಾನೆಂದು ಹೇಳಿಕೊಂಡು ಹಗಲಿರುಳು ನಿರಾಳವಾಗಿದ್ದುಬಿಡುವ ಪರಿಸ್ಥಿತಿ ಈಗಿಲ್ಲ. ಅಮೆರಿಕದಲ್ಲಿ ಕಳೆದ ಏಪ್ರಿಲ್ ವೇಳೆಗೆ ನಿರುದ್ಯೋಗದ ದರ ಶೇ. ೮.೯ನಲ್ಲಿದೆ. ಏಪ್ರಿಲ್‌ನಲ್ಲಿ ೫.೩ ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ೨೦೦೭ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ೫೭ ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ.
ಹೀಗಾಗಿ ಒಬಾಮಾ ಬೇರೆ ಕೆಲಸ ಇಲ್ಲಾಂತ ಹಾಗೆ ಹೇಳಲಿಲ್ಲ. ಹಾಗಂತ ಆತ ಭಾರತದಂತಹ ರಾಷ್ಟ್ರಕ್ಕೆ ಹೊರಗುತ್ತಿಗೆ ನೀಡುವ ಕಂಪನಿಗಳ ಮೇಲೆ ತೆರಿಗೆ ವಿನಾಯಿತಿಯನ್ನು ನೀಡದಿದ್ದರೂ, ಹೊರಗುತ್ತಿಗೆಯೇ ನಿಲ್ಲುವಷ್ಟು ಪರಿಸ್ಥಿತಿ ವಿಷಮವಾಗುವುದಿಲ್ಲ. ಅದನ್ನು ಸರಳವಾಗಿ ವಿವರಿಸಬಹುದು.
ಅಮೆರಿಕದ ಕಂಪನಿಗಳಿಗೆ ಭಾರತಕ್ಕೆ ಹೊರಗುತ್ತಿಗೆ ನೀಡಿದರೆ ಅಗ್ಗದ ದರದಲ್ಲಿ ತಮ್ಮ ಕೆಲಸ ಅಥವಾ ಸೇವೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅಮೆರಿಕದಲ್ಲಿ ೩೦೦ ರೂ. ಖರ್ಚಾಗುವ ಕೆಲಸಕ್ಕೆ ಭಾರತದಲ್ಲಿ ೧೦೦ ರೂ. ಕೊಟ್ಟರೆ ಸಾಕು. ಈ ನೂರು ರೂ.ಗಳನ್ನು ಕಂಪನಿಯ ಖರ್ಚುಗಳ ಬಾಬ್ತಿಗೆ ಸೇರಿಸಬಹುದು. ಈ ನೂರು ರೂ.ಗಳ ಮೇಲೆ ಯಾವುದೇ ತೆರಿಗೆ ರಿಯಾಯಿತಿ ನೀಡುವುದಿಲ್ಲ ಎಂದು ಒಬಾಮಾ ಹೇಳುತ್ತಾನೆ. ಭಾರತದ ಹೊರಗುತ್ತಿಗೆ ಯಾಕೆ ಬಚಾವ್ ಆಗಿದೆ ಎಂದರೆ, ಒಬಾಮಾ ಈ ನೂರು ರೂ.ಗಳ ಮೇಲೆ ೫೦ ರೂ. ತೆರಿಗೆ ವಿಸಿದರೂ ಅಮೆರಿಕದ ಕಂಪನಿಗಳಿಗೆ ಲಾಭಾಂಶದಲ್ಲಿ ಭಾರಿ ನಷ್ಟವೇನೂ ಆಗುವುದಿಲ್ಲ. ಮತ್ತೂ ನೂರೈವತ್ತು ರೂಪಾಯಿ ಉಳಿತಾಯವೇ ಇರುತ್ತದೆ. ಆದ್ದರಿಂದ ಹೊರಗುತ್ತಿಗೆಯೇನೂ ನಿಲ್ಲುವುದಿಲ್ಲ.
ಹೀಗಿದ್ದರೂ, ಭಾರತ ಸುಮ್ಮನಿರುವಂತಿಲ್ಲ. ಭವಿಷ್ಯದ ಬಗ್ಗೆ ಯೋಚಿಸಲೇಬೇಕು. ಪ್ರತಿಯೊಂದು ರಾಷ್ಟ್ರದ ಅಧ್ಯಕ್ಷರೂ, ಆಯಾ ದೇಶದ ಹಿತಾಸಕ್ತಿಗೆ ಸಂಬಂಸಿ ಶಾಸನಾದಿಗಳನ್ನು ರೂಪಿಸಬಹುದು. ತಂತ್ರಗಳನ್ನು ಹೆಣೆಯಬಹುದು. ಹೇಳಿಕೆಗಳನ್ನು ತೇಲಿ ಬಿಡಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಹೀಗಿರುವಾಗ ಭವಿಷ್ಯದಲ್ಲಿ ಅಮೆರಿಕ ಹೊರಗುತ್ತಿಗೆಯ ವಿರುದ್ಧ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಜಾರಿಗೊಳಿಸಿದರೆ ಅದರ ನೇರ ಪರಿಣಾಮ ಬೆಂಗಳೂರಿನ ಅಥವಾ ಭಾರತದ ಹೊರಗುತ್ತಿಗೆಯ ಮೇಲಾಗುತ್ತದೆ. ಆಗ ಕಾಪಾಡುವರಾರು ? ಅಥವಾ ಯಾವುದು ?
ಮೊದಲಿಗೆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ.
ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ ಮಾತ್ರ ಆರ್ಥಿಕತೆಯನ್ನು ಮುನ್ನಡೆಸುವ ಚಾಲಕ ಶಕ್ತಿಯಲ್ಲ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಇತರ ಕ್ಷೇತ್ರಗಳಿಗೂ ಆದ್ಯತೆ ನೀಡಬೇಕು. ವೈಮಾನಿಕ, ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಮುಂತಾದ ಉದಯೋನ್ಮುಖ ಕ್ಷೇತ್ರಗಳ ಅಭಿವೃದ್ಧಿಗೆ ಕೂಡ ಒತ್ತು ನೀಡಬೇಕು. ಮೂಲ ವಿಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಕಲ ಸೌಲಭ್ಯ ನೀಡಬೇಕು. ಬೆಂಗಳೂರು ಎಂದರೆ ಐಟಿ-ಬಿಟಿ ರಾಜಧಾನಿ ಮಾತ್ರ ಎನ್ನುವ ಏಕೈಕ ಬ್ಯ್ಯಾಂಡ್ ಸೃಷ್ಟಿಯಾಗಬಾರದು. ಇತರ ಬ್ರ್ಯಾಂಡ್‌ಗಳು ಜನಪ್ರಿಯವಾಗಬೇಕು. ಕೈಗಾರಿಕೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸುವಾಗ ಸಮಗ್ರವಾಗಿರಬೇಕು. ಕೇವಲ ಪಿಯುಸಿ ಮುಗಿಸಿ ಧ್ವನಿಯಾಧಾರಿತ ಹೊರಗುತ್ತಿಗೆಯಲ್ಲಿ ಯುವ ಜನತೆ ಮುಳುಗಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರ ಜತೆಯಲ್ಲಿ ಉನ್ನತಮಟ್ಟದ ಜ್ಞಾನಾಧಾರಿತ ಹೊರಗುತ್ತಿಗೆಗೂ ಭಾರತ ಪ್ರಮುಖ ತಾಣವಾಗಬೇಕು. ಈ ನಿಟ್ಟಿನಲ್ಲಿ ಲಕ್ಷ್ಯ ವಹಿಸದಿದ್ದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಅದರ ದುಷ್ಪರಿಣಾಮ ತಟ್ಟಲಿದೆ.
ಬೃಹತ್ ಕಟ್ಟಡಗಳು, ಯಂತ್ರೋಪಕರಣಗಳು, ದಾಸ್ತಾನು ಕೇಂದ್ರಗಳು, ಆಕಾಶದ ತುಂಬ ಹೊಗೆಯುಗುಳುವ ಚಿಮಿಣಿ, ಜಲ ಮಾಲಿನ್ಯ ಮುಂತಾದ ತಕರಾರುಗಳು ಇಲ್ಲದೆ, ಕಂಪ್ಯೂಟರ್, ಫೋನು, ಅಂತರ್ಜಾಲ ಮುಂತಾದವುಗಳನ್ನು ಬಳಸಿಕೊಂಡು, ಭಾರತದ ಕೈಗಾರಿಕಾ ರಂಗದಲ್ಲಿ ಅನೂಹ್ಯವಾದ ಬದಲಾವಣೆಗೆ ಹೊರಗುತ್ತಿಗೆ ಕಾರಣವಾಯಿತು. ಆದರೆ ಅಮೆರಿಕದ ಮಾರುಕಟ್ಟೆಯನ್ನು ಬಹುವಾಗಿ ನಂಬಿಕೊಂಡಿದ್ದ ಹೊರಗುತ್ತಿಗೆಗೆ, ಈ ಸಮಸ್ಯೆಯನ್ನು ನೀಗಿಸಿಕೊಳ್ಳಲು ದಿನ ಬೆಳಗಾಗುವುದರೊಳಗೆ ಸಾಧ್ಯವಿಲ್ಲದಿದ್ದರೂ, ಎಚ್ಚೆತ್ತುಕೊಳ್ಳಲು ಇದು ಸಕಾಲ.
(ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ )

Sunday 20 September 2009

ಬೆಂಗಳೂರಿಗೆ ಮೊನೊ ರೈಲು ಬೇಕಾ ?

ಬೆಂಗಳೂರಿನಲ್ಲಿ ದಿನೇ ದಿನೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಿದೆ. ಹಾಗಾದರೆ ಮೆಟ್ರೊ ರೈಲು ಪೂರ್ಣವಾಗಿ ಜಾರಿಯಾದ ಮೇಲೂ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಾ ? ‘ಇಲ್ಲ’ ಎನ್ನುತ್ತಾರೆ ಸ್ಕೂಮಿ ಇಂಟರ್‌ನ್ಯಾಶನಲ್ ಕಂಪನಿಯ ಯೋಜನೆ ವಿಭಾಗದ ಮುಖ್ಯಸ್ಥ ಕನೇಸನ್ ವೇಲುಪಿಳ್ಳೈ. ಸದ್ಯಕ್ಕೆ ೬ ಮೊನೊ ರೈಲುಗಳ ನಿರ್ಮಾಣ ಯೋಜನೆಯನ್ನು ಈ ಕಂಪನಿ ಕೈಗೆತ್ತಿಕೊಂಡಿದೆ.‘ ಬೆಂಗಳೂರಿಗೆ ಮೋನೊ ರೈಲಿನ ಅಗತ್ಯ ಇದೆ. ಮೆಟ್ರೊ. ಮೊನೊ ಸೇರಿದಂತೆ ಸಮಗ್ರ ಸಾರಿಗೆ ವ್ಯವಸ್ಥೆ ಜಾರಿಯಾದಾಗ ಮಾತ್ರ ಇಲ್ಲಿನ ಟ್ರಾಫಿಕ್ ಸಮಸ್ಯೆ ಶಮನವಾಗಬಹುದು.ನಾನು ಮೆಟ್ರೊ ರೈಲಿನ ವಿರೋಯಲ್ಲ, ಆದರೆ ಅದರ ಜತೆಗೆ ಮೊನೊ ರೈಲು ಕೂಡ ಬೇಕು. ಇದು ಒಂದಕ್ಕೊಂದು ಪೂರಕ. ಮಲೇಷ್ಯಾ, ಜಪಾನ್ , ಅಮೆರಿಕ, ಚೀನಾ ಮುಂತಾದ ಕಡೆ ಇದು ಸಾಬೀತಾಗಿದೆ ’ ಎನ್ನುತ್ತಾರೆ ಪಿಳ್ಳೈ. ವಿಜಯ ಕರ್ನಾಟಕಕ್ಕೆ ಕೆಲವು ದಿನಗಳ ಹಿಂದೆ ವಿಂಡ್ಸರ್ ಹೋಟೆಲ್‌ನಲ್ಲಿ ಅವರನ್ನು ಸಂದರ್ಶಿಸಿದ್ದೆ. ಆಗ ಅವರು ಹೇಳಿದ್ದಿಷ್ಟು : ಮೊನೊ ಯಾಕೆ ? ಮೊದಲನೆಯದಾಗಿ ಮೊನೊ ರೈಲು ಮೆಟ್ರೊ ರೈಲುಗಳಿಗಿಂತ ಅಗ್ಗ. ಆದ್ದರಿಂದ ಸೇವಾ ತೆರಿಗೆ ಪಾವತಿದಾರರ ಮೇಲಿನ ಹೊರೆಯನ್ನು ತಗ್ಗಿಸಬಹುದು. ಇದು ಹಳಿ ತಪ್ಪುವ ಸಾಧ್ಯತೆ ಇಲ್ಲ. ಏಕೆಂದರೆ ಏಕೈಕ ಕಾಂಕ್ರಿಟ್ ಅಥವಾ ಉಕ್ಕಿನ ಬೀಮ್ ಮೇಲೆ ಮೊನೊ ಸಂಚರಿಸುತ್ತದೆ.ಮಾತ್ರವಲ್ಲದೆ ರೈಲು ಹಳಿಯನ್ನು ಸುತ್ತುವರಿದಿರುತ್ತದೆ. ಮೊನೊ ಅಂದರೆ ಒಂದು ಎಂದರ್ಥ. ಮೆಟ್ರೊ ರೈಲು ಹೋಗದ ಕಡೆಗೂ ಮೊನೊ ಸಂಚರಿಸುತ್ತದೆ. ಹೆಚ್ಚಿನ ಮರಗಿಡಗಳನ್ನು ಹನನ ಮಾಡಬೇಕಾದ ಅಗತ್ಯ ಇಲ್ಲ. ಹೆಚ್ಚು ಸ್ಥಳವನ್ನೂ ಇದು ಬೇಡುವುದಿಲ್ಲ. ಅಗಲ ಹೆಚ್ಚೆಂದರೆ ೧೦ ಮೀಟರ್ ಸಾಕು. ರೈಲಿನ ಚಕ್ರಗಳು ಉಕ್ಕಿನದ್ದಾಗಿರದೆ, ರಬ್ಬರ್‌ನದ್ದಾಗಿರುವುದರಿಂದ ಶಬ್ದ ಮಾಲಿನ್ಯ ಕಡಿಮೆ. ಸುಲಭವಾಗಿ ತಿರುವುಗಳನ್ನು ಮಾಡಬಹುದು. ಇದರ ಪಿಲ್ಲರ್‌ಗಳನ್ನು ಬಿಟ್ಟರೆ ಉಳಿದೆಲ್ಲ ಭಾಗಗಳನ್ನು ಬೇರೆಡೆ ಸಿದ್ಧಪಡಿಸಿ ಜೋಡಿಸಬಹುದು. ಮೆಕ್ಕಾದಲ್ಲಿ ಮೊನೊ ರೈಲನ್ನೇ ಸಾರಿಗೆಗೆ ಹೆಚ್ಚಾಗಿ ಅವಲಂಬಿಸಲಾಗಿದೆ. ಬೆಂಗಳೂರಿಗೆ ೩೬ ತಿಂಗಳಿನೊಳಗೆ ಮೊನೊ ರೈಲನ್ನು ಅಳವಡಿಸಬಹುದು. ಗಂಟೆಗೆ ೪೦ ರಿಂದ ೯೦ ಕಿ.ಮೀ ವೇಗದಲ್ಲಿ ಮೊನೊ ರೈಲು ಓಡುತ್ತದೆ. ಸರಾಸರಿ ವೇಗ ಗಂಟೆಗೆ ೪೦ ಕಿ.ಮೀ. ಇದರ ನಿರ್ಮಾಣದ ವೆಚ್ಚ ಕಿ.ಮೀಗೆ ೧೫೦ ಕೋಟಿ ರೂ. ಮೊನೊ ರೈಲ್ವೆ ನಿರ್ಮಾಣ ಸಂಬಂಧ ಸರಕಾರದ ಜತೆ ಸ್ಕೂಮಿ ಗ್ರೂಪ್ ಪ್ರಸ್ತಾಪಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಆಧುನಿಕ ಮೊನೊ ರೈಲುಗಳು ಬಹುತೇಕ ವಿದ್ಯುತ್ ಶಕ್ತಿಯನ್ನು ಬಳಸಿ ಚಲಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮೊನೊ ಅತ್ಯಲ್ಪ ಸ್ಥಳದಲ್ಲಿ ಸಂಚರಿಸಬಲ್ಲುದು. ಇದಕ್ಕೆ ಆಧಾರ ಸ್ಥಂಭಗಳೂ ಹೆಚ್ಚಿಗೆ ಬೇಕಾಗುವುದಿಲ್ಲ. ಬೇರೆ ಸ್ಥಳದಲ್ಲಿ ಸಿದ್ಧಪಡಿಸಿ ಜೋಡಿಸಬಹುದಾದ್ದರಿಂದ ಕಾಮಗಾರಿ ನಡೆಯುವ ಜಾಗದಲ್ಲಿ ಮಾಲಿನ್ಯದ ತೊಂದರೆ ಉಂಟಾಗುವುದಿಲ್ಲ. ರಬ್ಬರಿನ ಟೈರ್‌ಗಳನ್ನು ಬಳಸುವುದರಿಂದ ಹಳಿಯ ಮೇಲಿನ ಹಿಡಿತ ಚೆನ್ನಾಗಿರುತ್ತದೆ.
ಆದರೆ ದಿಲ್ಲಿ ಮೆಟ್ರೊ ಮುಖ್ಯಸ್ಥ ಶ್ರೀಧರನ್ ಪ್ರಕಾರ ಬೆಂಗಳೂರಿಗೆ ಮೊನೊಗಿಂತ ಮೆಟ್ರೊ ಸೂಕ್ತ. ಯಾಕೆಂದರೆ ಭಾರಿ ಜನಸಂಖ್ಯೆಯ ನಗರಕ್ಕೆ ಹೆಚ್ಚು ಸಾಮರ್ಥ್ಯದ ಮೆಟ್ರೊ ಸೂಕ್ತ. ಕಡಿಮೆ ಸಾಮರ್ಥ್ಯದ ಮೊನೊಗೆ ತಗಲುವ ಖರ್ಚು ಮಾತ್ರ ಮೆಟ್ರೋಗೆ ಸಮಾನ. ಹೀಗಿರುವಾಗ ಅದರಿಂದ ಉಪಯೋಗ ಇಲ್ಲ. ಮನರಂಜನೆ ಮತ್ತು ಧಾರ್ಮಿಕ ತಾಣಗಳಲ್ಲಿ ಮಾತ್ರ ಮೊನೊ ಬಳಸಬಹುದು ಎನ್ನುತ್ತಾರೆ ಅವರು.

Saturday 19 September 2009

ಗ್ರಾಮ ಲೆಕ್ಕಿಗರು ಬಹಳ ಇಂಪಾರ್ಟೆಂಟ್ ರೀ..

ಈವತ್ತು ಸಾಯಂಕಾಲ ಬೆಲ್ ಬಾರಿಸಿತು. ಕದ ತೆರೆದಾಗ ನಮ್ಮ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ಹಾಲಪ್ಪ ಸ್ವಾಮಿ ನಿಂತಿದ್ದರು.
ಅವರು ಮೂರು ವರ್ಷಗಳ ಹಿಂದೆ ಗ್ರಾಮ ಲೆಕ್ಕಿಗ ಹುದ್ದೆಯಿಂದ ನಿವೃತ್ತರಾಗಿದ್ದರು. ಸಾಯಂಕಾಲ ಜೋರಾಗಿ ಮಳೆ ಸುರಿಯುತ್ತಿತ್ತು. ಪಕ್ಕದ ಖಾಲಿ ಮನೆಯ ಮಾಳಿಗೆಯ ಮೇಲಿಂದ ನೀರು ಸೋರಿ ಅವರ ಮನೆಯ ರೂಮು ಒದ್ದೆಯಾಗುತ್ತಿತ್ತು. ಆ ಸಮಸ್ಯೆಯನ್ನು ಹೇಳಿಕೊಂಡರು. ನಾನು ಆಗತಾನೆ ನಿದ್ದೆಯಿಂದ ಎದ್ದಿದ್ದೆ. ನಾವಿಬ್ಬರು ಸಾಯಂಕಾಲದ ಚಹಾ ಜತೆ ಹರಟೆಗೆ ಶುರು ಹಚ್ಚಿದೆವು. ಅವರ ಊರು ಚಿತ್ರದುರ್ಗ. ಗ್ರಾಮಲೆಕ್ಕಿಗರಾಗಿ ಮೂರು ದಶಕಗಳಿಗೂ ಹೆಚ್ಚು ದುಡಿದಿದ್ದರು. ಶಿವಮೊಗ್ಗ, ಧಾರವಾಡ, ಚಿತ್ರದುರ್ಗದಲ್ಲಿ ಗ್ರಾಮ ಗ್ರಾಮಗಳು ಅವರಿಗೆ ಪರಿಚಯವಿದೆ. ನನ್ನ ಆಸಕ್ತಿ ಹೆಚ್ಚಿತು.
ಹಿಂದೊಮ್ಮೆ ಅವರಿಗೆ ತಿಂಗಳಿಗೆ ೨೦೦ ರೂ. ಸಂಬಳ ಇತ್ತಂತೆ. ನಿವೃತ್ತರಾಗುವ ವೇಳೆ ೧೬ ಸಾವಿರ ರೂ. ಸಂಬಳ ಇತ್ತು. ಸದ್ಯ ತಿಂಗಳಿಗೆ ೮ ಸಾವಿರ ರೂ. ಪಿಂಚಣಿ ಬರುತ್ತಿದೆ. ಮನೆ, ಮೊಮ್ಮಗು, ಊರು ಅಂತ ಆರಾಮವಾಗಿ ಇದ್ದಾರೆ. ಹಿಂದೆ ವಿಜೃಂಂಭಿಸಿದ್ದ ಊರ ಶ್ಯಾನುಭೋಗರು, ಪಟೇಲರು, ಅವರ ಈಗಿನ ಸ್ಥಿತಿ ಗತಿ, ಗ್ರಾಮ ಲೆಕ್ಕಿಗರ ಸಂಘಗಳು, ಹೋರಾಟಗಳು, ಗ್ರಾಮಗಳ ಜನಜೀವನ, ಆರ್ಥಿಕ ಚಿಂತನೆ ಬಗ್ಗೆ ಮಾತನಾಡಿದೆವು.
ಗ್ರಾಮ ಲೆಕ್ಕಿಗರ ಪಾತ್ರ ಎಷ್ಟು ದೊಡ್ಡದು ಎಂಬುದು ನನಗೆ ಆಗ ಅರಿವಾಯಿತು. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಗ್ರಾಮಗಳ ಜಮೀನುಗಳು, ಜನ, ದನ, ಕರುಗಳ ಲೆಕ್ಕ, ಕಂದಾಯ, ಪಹಣಿ, ಸರ್ವೆ ಮುಂತಾದ ಸಮಸ್ತ ಕಾರ್ಯಗಳನ್ನು ಅವರು ದಾಖಲಿಸಬೇಕು. ಬರ ಬಂದರೆ ಗಮನಿಸಬೇಕು. ಯಾವ ಬೆಳೆಯ ಭೂಮಿಗೆ ಎಷ್ಟು ಕಂದಾಯ ಕಟ್ಟಬೇಕು ಅಂತ ಗುರುತಿಸಬೇಕು. ನಂತರ ತಹಶೀಲ್ದಾರರಿಗೆ ವರದಿ ಒಪ್ಪಿಸಬೇಕು. ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸುತ್ತಾರೆ. ಹೀಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರಿಯಾಗಿ ಮಾಹಿತಿ ಹೋಗಬೇಕಾದರೆ ಗ್ರಾಮ ಲೆಕ್ಕಿಗರು ಸರಿಯಾಗಿ ಕೆಲಸ ಮಾಡಬೇಕು. ಹೀಗಿದ್ದರೂ ಅವರಿಗೆ ದಾರಿ ಖರ್ಚು ಸಿಗುವುದು ಕಡಿಮೆ. ಆದರೂ ಕೆಲಸ ತಪ್ಪಬಾರದು. ಎಷ್ಟೋ ಮಂದಿ ಗ್ರಾಮ ಲೆಕ್ಕಿಗರು ನಿವೃತ್ತರಾದ ನಂತರ ಮತ್ತೆ ಕೃಷಿ ಭೂಮಿಗೆ ಮರಳಿದ್ದಾರೆ. ಇನ್ನು ಕೆಲಸವರು ಪೇಟೆಯಲ್ಲಿ ಮನೆ ಮಾಡಿದ್ದಾರೆ. ಇನ್ನು ಕೆಲವರು ಬಾಡಿಗೆಗೆ ಮನೆ ಕೊಟ್ಟಿದ್ದಾರೆ.
ಅಂತಹ ಗ್ರಾಮ ಲೆಕ್ಕಿಗರಿಗರಿಗೆ ನಮನಗಳು.

Thursday 17 September 2009

ವಿಂಡ್ಸರ್ ಹೋಟೆಲ್‌ನಲ್ಲಿ ಪುಷ್ಪಕ ವಿಮಾನ ನೆನಪಾಯಿತು

ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್‌ಗೆ ನಿನ್ನೆ ಹೋಗಿದ್ದೆ. ಸ್ಕೂಮಿ ಇಂಟರ್‌ನ್ಯಾಶನಲ್ ಕಂಪನಿಯ ಮುಖ್ಯಸ್ಥ ಕನೇಸನ್ ವೇಳುಪಿಳ್ಳೈ ಅವರನ್ನು ಸಂದರ್ಶಿಸುವ ಕೆಲಸ ಇತ್ತು. ಹೋಟೆಲ್ ಆವರಣ ಪ್ರವೇಶಿಸುತ್ತಿದ್ದಂತೆ ಯಾಕೋ ಪುಷ್ಪಕ ವಿಮಾನ ಚಿತ್ರ ನೆನಪಾಯಿತು. ಚಿತ್ರದ ಬಹುಪಾಲು ಚಿತ್ರೀಕರಣ ಇದೇ ಹೋಟೆಲ್‌ನಲ್ಲಿ ನಡೆದಿದೆ. ಕಮಲ್ ಹಾಸನ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಈ ಚಿತ್ರದ ನಿರ್ಮಾಪಕ ಶೃಂಗಾರ್ ನಾಗರಾಜ್ ಅವರನ್ನೂ ಇತ್ತೀಚೆಗೆ ಸಂದರ್ಶಿಸಿದ್ದೆ. ಆದ್ದರಿಂದ ಅವರೂ ನೆನಪಾದರು.
ಹೋಟೆಲ್ ಈವತ್ತಿಗೂ ಭವ್ಯತೆಯನ್ನು ಉಳಿಸಿಕೊಂಡಿದೆ. ಸಿಬ್ಬಂದಿ ನಗುಮೊಗದಿಂದ ಬರ ಮಾಡಿಕೊಳ್ಳುತ್ತಾರೆ. ಯಾವುದೋ ದೇಶದ ವಿದೇಶಿಯರು ಅವರ ಸಂಸಾರ ಸಮೇತ ಹೋಟೆಲ್‌ನೊಳಗೆ ಅಡ್ಡಾಡುತ್ತಿರುತ್ತಾರೆ. ಈಜುಕೊಳದಲ್ಲಿ ಯಾವನೋ ಭೂಪ ತನ್ನ ಪಾಡಿಗೆ ಈಜುತ್ತಿರುತ್ತಾನೆ. ಕಾಫಿ ಹೌಸ್‌ನಲ್ಲಿ ಮತ್ತಾರೋ ಸೋಫಾದಲ್ಲಿ ಕುಳಿತು ಗಹನವಾದ ಸಮಾಲೋಚನೆ ನಡೆಸುತ್ತಿರುತ್ತಾರೆ. ಪರಿಚಾರಕ ಬೇಕಾದ್ದನ್ನು ತಂದುಕೊಡುತ್ತಾನೆ.
ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ಇದು ಹೆಮ್ಮೆಯ ವೈಭವೋಪೇತ ಹೋಟೆಲ್ ಆಗಿತ್ತು. ಈಗ ಅಂಥ ಅನೇಕ ಹೋಟೆಲ್‌ಗಳ ಸರಣಿಯೇ ರಾಜಧಾನಿಯಲ್ಲಿದೆ. ಒಂದಕ್ಕಿಂತ ಮತ್ತೊಂದು ಅದ್ದೂರಿ. ವಿಂಡ್ಸರ್ ಹೋಟೆಲ್‌ನಲ್ಲಿ ಸಂದರ್ಶಿಸಿದ ವೇಳು ಪಿಳ್ಳೈ ಶ್ರೀಲಂಕಾದವರು. ಅವರ ಪತ್ನಿ ಪಂಜಾಬಿ ಮೂಲದವರಂತೆ. ನೋಡಲು ಸ್ಥೂಲಕಾಯದ ವ್ಯಕ್ತಿ. ಆದರೆ ಸರಳ ಮನುಷ್ಯ. ಸಲೀಸಾಗಿ ಮಾತನಾಡುತ್ತಿದ್ದ ಅವರ ಶೈಲಿ ಇಷ್ಟವಾಯಿತು. ಬೆಂಗಳೂರಿಗೆ ಮೋನೊ ರೈಲಿನ ಅಗತ್ಯವನ್ನು ಅಂಕಿ ಅಂಶ ಹಾಗೂ ವಿಡಿಯೋ ಸಹಿತ ವಿವರಿಸಿದರು.

Wednesday 16 September 2009

ಬಾಳೆಲೆಯನ್ನೇ ಮಾರಿ ಲಕ್ಷಾಂತರ ರೂ. ವಹಿವಾಟು

ಬಾಳೆ ಎಲೆ ವ್ಯಾಪಾರಕ್ಕೆ ಹೆಚ್ಚು ಬಂಡವಾಳ ಬೇಡ. ಆದರೆ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಮುಟ್ಟಿಸಬೇಕು. ಸಾಕಷ್ಟು ಪರಿಶ್ರಮ ಪಡಬೇಕು. ಇಷ್ಟಿದ್ದರೆ ಇಲ್ಲಿ ನಷ್ಟವೆನ್ನುವುದಿಲ್ಲ. ಇಪ್ಪತ್ತೈದು ವರ್ಷಗಳ ವಹಿವಾಟಿನಲ್ಲಿ ಶಂಕರನಾರಾಯಣ ಭಟ್ಟರಿಗೆ ನಷ್ಟವಾಗಿದ್ದು ಒಂದೆರಡು ಸಲವಷ್ಟೇ.
ಹಳ್ಳಿಯಲ್ಲಿ ವಾಸವಾಗಿದ್ದರೂ , ಬರಿಗೈಯಲ್ಲಿದ್ದರೂ , ಬಾಳೆಲೆಯನ್ನೇ ಮಾರಿ ಲಕ್ಷಾಂತರ ರೂ.ಗಳ ವಹಿವಾಟು ನಡೆಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡದ ಬಾಳೆಲೆಯ ವ್ಯಾಪಾರಿಗಳೇ ಸಾಕ್ಷಿ.
ಜಿಲ್ಲೆಯಲ್ಲಿ ಇಂತಹ ಐವತ್ತಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳಿದ್ದಾರೆ. ಹೆಚ್ಚಿನವರೂ ಕವಡೆ ಕಾಸಿಲ್ಲದೆ ಬಾಲ್ಯದಲ್ಲಿ ತೀವ್ರ ಅವಮಾನ, ನೋವು ಕಂಡವರು. ಪ್ರತಿಯೊಬ್ಬರ ಕಥೆಯೂ ಹೆಂಗಿದ್ದ ಹೇಗಾದ ಎಂಬ ರೀತಿಯ ವಿಸ್ಮಯ.
ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಶಂಕರ ನಾರಾಯಣ ಭಟ್ಟರ ಕಥೆ ಕೇಳಿ. ೧೯೮೪ರಲ್ಲಿ ಭಟ್ಟರದ್ದು ಕಡು ಬಡತನದ ಸ್ಥಿತಿ. ಹತ್ತೊಂಭತ್ತನೇ ವಯಸ್ಸಿನಲ್ಲಿ ಬಾಳೆಲೆಯ ವ್ಯಾಪಾರಿಗಳಾದರು. ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಗೋಪಾಲಕೃಷ್ಣ ಅಸ್ರಣ್ಣರ ಪ್ರೋತ್ಸಾಹವಿತ್ತು. ಎಸ್ಸೆಸ್ಸೆಲ್ಸಿ ನಂತರ ಹೆಚ್ಚಿ ವಿದ್ಯಾಭ್ಯಾಸ ಮಾಡಲಿಲ್ಲ. ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದ್ದಾಗ ಸಲ್ಲಿಸಿದ ಸೇವೆ, ಇತರ ಕಡೆ ಮಾಡಿದ ಸಣ್ಣ ಪುಟ್ಟ ಕೆಲಸಗಳಿಂದ ಒಟ್ಟುಗೂಡಿಸಿದ ಇನ್ನೂರು ರೂಪಾಯಿಗಳೇ ಬಂಡವಾಳ. ಶ್ಯಾಮ ಭಟ್ಟರ ಮನೆಯ ತೋಟದಿಂದ ಬಾಳೆ ಎಲೆಗಳನ್ನು ಕೊಯ್ದು ಬಿಸಿನೆಸ್ ಶುರು ಮಾಡಿದರು. ಕಟೀಲು ದೇವಸ್ಥಾನಕ್ಕೆ ನಿಯಮಿತವಾಗಿ ಬಾಳೆ ಎಲೆ ವಿತರಿಸಿದರು. ನಿಧಾನವಾಗಿ ಬಾಳೆ ಎಲೆ ಕಟ್ಟುಗಳ ಸಂಖ್ಯೆ ಹೆಚ್ಚುತ್ತಾ ಬಂತು. ಬಾಳೆ ಎಲೆಯ ಜತೆಗೆ ಬಾಳೆ ಗೊನೆ, ಬೂದುಗುಂಬಳ, ಚೀನಿಕಾಯಿ ಸೇರಿತು. ಊರಿನಲ್ಲಿ ಸಿಗುವ ಇತರ ತರಕಾರಿ, ಸೊಪ್ಪು, ಕಾಯಿ ಪಲ್ಲೆಗಳಿಗೂ ನಾನಾ ಕಡೆಗಳಲ್ಲಿ ಮಾರುಕಟ್ಟೆ ಹುಡುಕಿ ಮಾರಾಟ ಮಾಡಿದರು. ಮೊದಲು ಮೂರೆಕೆರೆ ಖಾಲಿ ಜಮೀನಿತ್ತು. ಸಂಪಾದನೆಯಲ್ಲಿ ಆಸ್ತಿ ಹತ್ತೆಕೆರೆಗೆ ವಿಸ್ತರಿಸಿತು. ತೋಟ ಕಟ್ಟಿದರು. ಉಪ್ಪಿನ ಕಾಯಿಗೆ ಚೆನ್ನಾಗಿ ಆಗುತ್ತದೆ ಎಂದು ಅದುವರೆಗೆ ಯಾರೂ ಕೇಳದಿದ್ದ ಅಂಬಟೆ, ಬೀಂಪುಳಿ ಮುಂತಾದ ಕಾಯಿಗಳಿಗೂ ಕಟೀಲು, ಮೂಡಬಿದಿರೆಯ ಹೋಟೆಲ್‌ಗಳಲ್ಲಿ ಪರಿಚಯಿಸಿದರು. ಈ ನಡುವೆ ವಿಜಯ ಬ್ಯಾಂಕ್‌ನವರು ಭಟ್ಟರ ವಹಿವಾಟು ವಿಸ್ತರಣೆಗೆ ನೆರವು ನೀಡಿದರು.
ಇಂದು -
ಕಟೀಲು ದೇವಸ್ಥಾನಕ್ಕೆ ಪ್ರತಿ ತಿಂಗಳು ಒಂದೂ ಕಾಲು ಲಕ್ಷ ಬಾಳೆ ಎಲೆಗಳನ್ನು ಶಂಕರ ನಾರಾಯಣ ಭಟ್ಟರು ಪೂರೈಸುತ್ತಾರೆ. ಪುತ್ತೂರು, ಉಪ್ಪಿನಂಗಡಿ, ಮಾಣಿ ಮತ್ತು ನೆಲ್ಯಾಡಿಯಲ್ಲಿ ಅನುಕ್ರಮವಾಗಿ ಸೋಮವಾರ, ಗುರುವಾರ, ಶನಿವಾರ ಮತ್ತು ಬುಧವಾರ ನಡೆಯುವ ನಾಲ್ಕು ಸಂತೆಗಳಲ್ಲಿ ಖುದ್ದು ಭಟ್ಟರು ವ್ಯಾಪಾರ ನಡೆಸುತ್ತಾರೆ. ಪ್ರತಿ ತಿಂಗಳು ಅವರ ವಹಿವಾಟು ನಾಲ್ಕು ಲಕ್ಷ ರೂ. ನಾಲ್ಕು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಮನೆ, ಕಾರು, ಮಹೀಂದ್ರಾ ವೆಹಿಕಲ್ ಇದೆ.
ಬಾಳೆ ಎಲೆ ವ್ಯಾಪಾರಕ್ಕೆ ಹೆಚ್ಚು ಬಂಡವಾಳ ಬೇಡ. ಆದರೆ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಮುಟ್ಟಿಸಬೇಕು. ಸಾಕಷ್ಟು ಪರಿಶ್ರಮ ಪಡಬೇಕು. ಇಷ್ಟಿದ್ದರೆ ಇಲ್ಲಿ ನಷ್ಟವೆನ್ನುವುದಿಲ್ಲ. ಇಪ್ಪತ್ತೈದು ವರ್ಷಗಳ ಬಾಳೆಲೆ, ಗೊನೆ ವ್ಯಾಪಾರದಲ್ಲಿ ಶಂಕರನಾರಾಯಣ ಭಟ್ಟರಿಗೆ ಒಂದೆರಡು ಸಲ ನಷ್ಟವಾಗಿದ್ದಿದೆ. ಅಷ್ಟೇ.
ಓದಿದ್ದು ಮೂರನೇ ಕ್ಲಾಸು, ವಹಿವಾಟು ಲಕ್ಷಗಟ್ಟಲೆ :
ಬೆಳ್ತಂಗಡಿಯ ಅಣವು ಸಂಜೀವ ಗೌಡರದ್ದು (೫೨) ಇನ್ನೂ ರೋಚಕ ಸಾಧನೆ. ೧೯೮೮ರಲ್ಲಿ ನೂರೈವತ್ತು ರೂಪಾಯಿ ಬಂಡವಾಳದಲ್ಲಿ ಬಾಳೆ ಎಲೆ ವ್ಯಾಪಾರ ಆರಂಭಿಸಿದರು. ಪ್ರತಿ ದಿನ ೭೦ರಿಂದ ೯೦ ಕೆಜಿ ಭಾರದ ಬಾಳೆ ಎಲೆಗಳ ಕಟ್ಟವನ್ನು ಹೊತ್ತು ಸಾಗಿಸುತ್ತಿದ್ದರು. ವಾರಕ್ಕೆ ೧೦ ಸಾವಿರ ಎಲೆಗಳನ್ನು ಧರ್ಮಸ್ಥಳಕ್ಕೆ ಮಾರಾಟ ಮಾಡುತ್ತಿದ್ದರು.
ಪ್ರತಿವಾರ ೨೦ರಿಂದ ೩೦ ಸಾವಿರ ಬಾಳೆ ಕಾಯಿ, ೫ ಸಾವಿರ ಬಾಳೆ ಎಲೆಯನ್ನು ಮಾರಾಟ ಮಾಡುತ್ತಾರೆ. ವಾರಕ್ಕೆ ೫೦ ಸಾವಿರ ರೂ. ವಹಿವಾಟು ದೆ. ಸ್ವಂತ ಮನೆ, ಜೀಪು, ಬೈಕ್ ಇದೆ. ಮಗ ಎಸ್ಸೆಸ್ಸೆಲ್ಸಿ ಮುಗಿಸಿ ತಂದೆಯ ಜತೆ ವ್ಯಾಪಾರಕ್ಕಿಳಿದಿದ್ದಾನೆ. ಈಗಲೂ ಸ್ವತಃ ಗೌಡರೇ ಜೀಪಿನಲ್ಲಿ ಬಾಳೆಲೆ, ಕಾಯಿಗಳನ್ನು ಹೇರಿಕೊಂಡು ಧರ್ಮಸ್ಥಳಕ್ಕೆ ಕೊಂಡೊಯ್ಯುತ್ತಾರೆ.
ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಮಾಣಿಯಲ್ಲಿ ನಡೆಯುವ ಸಂತೆಯಲ್ಲಿ ಬ್ಯುಸಿಯಾಗಿ ಕಾಣಲು ಸಿಗುವ ಬಾಳೆಲೆ ವ್ಯಾಪಾರಿಗಳಲ್ಲಿ ಒಬ್ಬೊಬ್ಬರದ್ದೂ ಇಂಥ ಅಪರೂಪದ ಹಿನ್ನೆಲೆ ಇದೆ. ಆದರೆ ಅವರನ್ನು ಎಂಬಿಎ ವಿದ್ಯಾರ್ಥಿಗಳು ಸಂದರ್ಶಿಸಿ ವ್ಯವಹಾರ ಸೂತ್ರವನ್ನು ಅಧ್ಯಯನ ಮಾಡುವುದಿಲ್ಲ. ಹೀಗಾಗಿ ಬಾಳೆ ಎಲೆಯ ಮರೆಯಲ್ಲಿರುವ ಕಾಯಿಯಂತೆ ಅವರಿದ್ದಾರೆ. ಎರೆಡೆರಡು ಪದವಿ ಪಡೆದರೂ ನಿರುದ್ಯೋಗಿಗಳಾಗಿ ಕೊರಗುತ್ತಿರುವವರೂ ಅವರನ್ನು ಕಂಡು ಕಲಿಯಬಹುದಾದ ವಿಷಯ ಸಾಕಷ್ಟಿದೆ.

Tuesday 15 September 2009

ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದಾಗ ಅನ್ನಿಸಿದ್ದು

ಮೈಸೂರಿನಲ್ಲಿ ನಿನ್ನೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದ, ಕಂಪನಿಯ ಗ್ಲೋಬಲ್ ಎಜ್ಯುಕೇಶನ್ ಸೆಂಟರ್‌ನ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದೆ. ಇದುವರೆಗೆ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಒಂದು ಸಲ ಕ್ಯಾಂಪಸ್ಸಿನೊಳಗೆ ಕಾಲಿಟ್ಟೊಡನೆ ವಿನೂತನ ಅನುಭವದ ಪ್ರಪಂಚ ತೆರೆದುಕೊಂಡಿತು.
ಇಡೀ ದೇಶವೇ ಹೆಮ್ಮೆಪಡುವಂತಹ ಜಾಗತಿಕ ಮಟ್ಟದ ಕಾರ್ಪೊರೇಟ್ ತರಬೇತಿ ಕೇಂದ್ರವನ್ನು ಇನ್ಫೋಸಿಸ್ ಮೈಸೂರಿನಲ್ಲಿ ಸ್ಥಾಪಿಸಿದೆ. ಅದರ ವಿಸ್ತಾರ, ವಾಸ್ತುಶಿಲ್ಪ, ಅಂದ ಚೆಂದ, ವೈಶಿಷ್ಟ್ಯವನ್ನು ಬಣ್ಣಿಸಲು ಪದಗಳು ಸಿಗುತ್ತಿಲ್ಲ. ಸುಮಾರು ೧೦ ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದ ಭವ್ಯ ಕಟ್ಟಡ ಅನೇಕ ಪ್ರಥಮಗಳನ್ನು ಒಳಗೊಂಡಿದೆ. ಇಂತಹ ವಿರಾಟ್ ಕಟ್ಟಡವನ್ನು ಕಟ್ಟುವಂತೆ ಆರ್ಕಿಟೆಕ್ಟರ್‌ಗಳಿಗೆ ಸಲಹೆ ನೀಡಿದ ನಾರಾಯಣ ಮೂರ್ತಿ ನಿಜಕ್ಕೂ ರಾಷ್ಟ್ರದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರ ಕೆಲಸ ಕಾರ್ಯಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ರಾಜ್ಯ ಸರಕಾರದಿಂದ ಇನೋಸಿಸ್‌ಗೆ ೩೩೭ ಎಕರೆ ಜಮೀನನ್ನು ಹಸ್ತಾಂತರಿಸಿದಾಗ ಅದೊಂದು ಬಂಜರು ಭೂಮಿಯಾಗಿತ್ತು. ಎಣಿಸಲು ಎರಡು ಗಿಡ ಮರಗಳಿರಲಿಲ್ಲ. ಈವತ್ತು ೩೫ ಸಾವಿರ ಗಿಡಮರಗಳು ಅಲ್ಲಿ ನೆರಳು ಕೊಡುತ್ತಿವೆ. ಕ್ಯಾಂಪಸ್ಸಿನೊಳಗೆ ಪ್ರವೇಶಿಸುತ್ತಿದ್ದಂತೆ ಬೇರೆಯೇ ಲೋಕಕ್ಕೆ ಹೋದಂತಾಗುತ್ತದೆ. ಇನಿ, ನಾರಾಯಣಮೂರ್ತಿ, ಸುಧಾ ಮೂರ್ತಿ, ನಂದನ್ ನೀಲೇಕಣಿ ಮುಂತಾದವರ ಬಗ್ಗೆ ಹೆಮ್ಮೆ ತಾನಾಗಿ ಮೂಡುತ್ತದೆ..ಅಲ್ಲಿ ನನಗನ್ನಿಸಿದ್ದನ್ನು ಮುಂದೆ ಬರೆಯುವೆ.

Monday 14 September 2009

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜೈತ್ರಯಾತ್ರೆ

ಅತ್ಯಂತ ಪ್ರಬಲ ಇಚ್ಛಾಶಕ್ತಿ, ಕಠಿಣ ಪರಿಶ್ರಮ ಮತ್ತು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಸತತ ಅನ್ವೇಷಣೆ ಇದ್ದಲ್ಲಿ ಬಡತನ ಅಡ್ಡಿಯಾಗುವುದಿಲ್ಲ, ಅಕಾರಶಾಹಿ ವ್ಯವಸ್ಥೆಯ ತೊಡಕುಗಳು ಶಾಶ್ವತ ನಿಲ್ಲುವುದಿಲ್ಲ ಎಂಬುದಕ್ಕೆ ಇದೋ ಇಲ್ಲಿದೆ ಈ ಅಪರೂಪದ ವಿಜ್ಞಾನಿಯ ಸಾಕ್ಷಿ !
ಇವರು ಅಪ್ಪಟ ಕನ್ನಡಿಗರೇ ಎಂಬುದು ಹೆಮ್ಮೆಯ ಸಂಗತಿ. ಬೇಕಾದರೆ ನೋಡಿ. ಈ ದೇಶದಲ್ಲಿ ರಾಜಕಾರಣಿಗಳ ಮಕ್ಕಳು ಅಪ್ಪನ ಹೆಸರಿನಲ್ಲಿ ಸುಲಭವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಮಂತ್ರಿಗಳಾಗುತ್ತಾರೆ. ಪ್ರಖ್ಯಾತ ತಾರೆಯರ ನಾಮ ಬಲದ ಮಹಿಮೆಯಿಂದ ಅವರ ಮಕ್ಕಳು ನಟರಾಗುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಯಾಗುತ್ತಾರೆ. ಇದೆಲ್ಲ ವಿಶೇಷವೂ ಅಲ್ಲ. ಆದರೆ ದುರದೃಷ್ಟವಶಾತ್ ಇನ್ನೂ ಲಕ್ಷಾಂತರ ಪ್ರತಿಭಾವಂತ ಬಡ ಮಕ್ಕಳು ಆರ್ಥಿಕ ಅನಾನುಕೂಲದ ಪರಿಣಾಮ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶದಿಂದ ವಂಚಿತರಾಗಿ ಕೊರಗುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಇಂತಹ ನೋವಿನ ಮೌನವನ್ನು ಆಲಿಸಬಹುದು. ಅಂಥ ಕಣ್ಣೀರ ಕಥೆಗಳನ್ನೇ ಕಿರು ಪರದೆಯಲ್ಲಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸುವ ಟಿ.ವಿ ಚಾನೆಲ್‌ಗಳ ತಂತ್ರಗಾರಿಕೆಗೂ ಈಗ ಬರವಿಲ್ಲ. ಇದೆಂಥಾ ಪ್ರಜಾಪ್ರಭುತ್ವ ಎಂದು ನಿಟ್ಟುಸಿರಿಡಬಹುದು. ಆದರೆ ಅಂತಹ ಅನಾಥ ಪ್ರಜ್ಞೆಯ ಲಕ್ಷಾಂತರ ಮಕ್ಕಳಿಗೆ ಅನನ್ಯ ಸ್ಪೂರ್ತಿಯನ್ನು ತುಂಬಬಲ್ಲ ಅಸದೃಶ ಯಶೋಗಾಥೆ ಇಲ್ಲಿದೆ. ಅವರ ಹೆಸರು ಡಾ. ಶಾಮ ಭಟ್.
ಕಾಸರಗೋಡಿನ ಎಡನೀರು ಸಮೀಪ ಪೊಟ್ಟಿಪ್ಪಲದಲ್ಲಿ ವೆಂಕಟೇಶ್ವರ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರರಾಗಿ ೧೯೪೯ರಲ್ಲಿ ಶಾಮ ಭಟ್ ಜನಿಸಿದರು. ಎಂಟು ಜನ ಮಕ್ಕಳ ಕುಟುಂಬವದು. ಎಡನೀರಿನಂತಹ ಕುಗ್ರಾಮದಲ್ಲಿ ಪ್ರಾಥಮಿಕ , ಪ್ರೌಢ ಶಿಕ್ಷಣದ ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಗಳಿಸಿದರು. ವಿದ್ಯಾಭ್ಯಾಸದ ಅವಯಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪಿಯುಸಿ ನಂತರ ಆರ್ಥಿಕ ಸಂಕಷ್ಟದ ಪರಿಣಾಮ ಮೂರು ವರ್ಷ ಓದು ಮುಂದುವರಿಸಲಾಗದೆ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಒಪ್ಪೊತ್ತಿನ ಅನ್ನಾಹಾರಕ್ಕೂ ಬವಣೆಪಟ್ಟಿರುವ ಭಟ್ಟರ ಅಂದಿನ ದಿನಗಳನ್ನು ವಿವರಿಸುವ ಉದ್ದೇಶವೂ ಇಲ್ಲಿಲ್ಲ.
ಆದರೆ ಗಮನಿಸಲೇಬೇಕಾದ ಅಂಶವೇನೆಂದರೆ ಅಂಥ ದುರ್ಭರ ಸಂದರ್ಭದಲ್ಲಿಯೂ, ಸಹಾಯ ಹಸ್ತ ನೀಡಲು ಕೆಲ ಬಂಧುಗಳು ನಿರಾಕರಿಸಿದಾಗಲೂ, ಉನ್ನತ ಅಧ್ಯಯನದ ಹಂಬಲವನ್ನು ಮಾತ್ರ ಅವರು ಕೈಬಿಟ್ಟಿರಲಿಲ್ಲ. ಅದಕ್ಕಾಗಿ ಅನ್ವೇಷಣೆಯ ಮಾರ್ಗವನ್ನು ಬಲವಾಗಿ ನಂಬಿ ಅಪ್ಪಿಕೊಂಡರು. ಕೊನಗೆ ಅದುವೇ ಫಲ ಕೊಟ್ಟಿತು. ಉಡುಪಿಯಲ್ಲಿ ಶ್ರೀ ಕೃಷ್ಣ ಮಠದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಅಶನ ಸೇರಿದಂತೆ ಅನುಕೂಲ ಮಾಡಿಕೊಡಲಾಗಿತ್ತು. ಅದರ ಸೌಲಭ್ಯವನ್ನು ಪಡೆದ ಭಟ್, ಜತೆಗೆ ಕಲಿಕೆಯಲ್ಲಿ ತಪಸ್ಸಿನಂತೆ ತೊಡಗಿಸಿಕೊಂಡರು. ವಿಜ್ಞಾನ ವಿಚಾರಗಳತ್ತ ಅತೀವ ಆಸಕ್ತಿ ಆಗಲೇ ಅವರಲ್ಲಿತ್ತು. ಈ ಕುರಿತ ಚರ್ಚೆ, ರಸ ಪ್ರಶ್ನೆ, ವಿಚಾರಗೋಷ್ಠಿಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಪ್ರಜಾಮತ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಲೇಖನ, ಕವಿತೆಗಳನ್ನೂ ಬರೆದಿದ್ದರು. ಹರ ಗೋವಿಂದ ಖುರಾನಾ ಅವರ ಪ್ರಖ್ಯಾತ ಸಂಶೋಧನೆಗಳ ಬಗ್ಗೆ ಟೈಮ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದು ಭಟ್ಟರಿಗೆ ಅದಮ್ಯ ಸ್ಪೂರ್ತಿ ನೀಡಿತ್ತು. ಅದನ್ನು ಆಧರಿಸಿ ಪ್ರೊಟೀನ್ ಸಿಂಥೆಸಿಸ್ ಬಗ್ಗೆ ತಾವೇ ಮಾದರಿಯೊಂದನ್ನು ರಚಿಸಿದ ಶಾಮ ಭಟ್ಟರ ಪ್ರತಿಭೆ ಕಾಲೇಜಿನ ಗಮನ ಸೆಳೆದಿತ್ತು. ಈಗಲೂ ಅವರು ಸಿದ್ಧಪಡಿಸಿದ್ದ ಆ ಮಾದರಿ ಪೂರ್ಣಪ್ರಜ್ಞ ಕಾಲೇಜಿನಲ್ಲಿದೆ. ನಂತರ ಮಣಿಪಾಲದ ಕೆಎಂಸಿಯಲ್ಲಿ ಮೂರು ವರ್ಷ ಬಯೋ ಕೆಮಿಸ್ಟ್ರಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಎನ್ನಿಸಿಕೊಂಡರು. ಆಗ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಬಿಟ್ಟರೆ ಬೇರೆ ಯಾವ ಕ್ಷೇತ್ರಕ್ಕೆ ಉತ್ತೇಜನ ಇತ್ತು ಹೇಳಿ ? ಬಯೋ ಕೆಮಿಸ್ಟ್ರಿಯಲ್ಲಿ ಇದ್ದವರು ನಾಲ್ಕೇ ಮಂದಿ. ಸ್ವಂತ ಅಧ್ಯಯನವೇ ಉಳಿದ ದಾರಿಯಾಗಿತ್ತು. ಆದರೆ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಪ್ರವೇಶ ಪಡೆದ ನಂತರ ಶಾಮ ಭಟ್ಟರ ಪ್ರತಿಭೆಗೆ ಪ್ರಜ್ವಲವಾದ ವೇದಿಕೆ ಸಿಕ್ಕಂತಾಯಿತು. ಮುಂದಿನದ್ದೆಲ್ಲ ಜೈವಿಕ ತಂತ್ರಜ್ಞಾನ ಪ್ರಪಂಚದಲ್ಲಿ ಭಟ್ಟರ ಜೈತ್ರಯಾತ್ರೆ.
ಸ್ನೇಹಿತರ ನೆರವು, ಸ್ಕಾಲರ್‌ಶಿಪ್ ಸಹಾಯ ಪಡೆದು ಅಮೆರಿಕಕ್ಕೆ ತೆರಳಿದ ಶಾಮ ಭಟ್ಟರು ಫಿಲಿಡೆಲಿಯಾದ ಪೆನಿನ್ಸುಲ್ವೇನಿಯಾ ವಿಶ್ವ ವಿದ್ಯಾಲಯದ ನ್ಯೂರಾಲಜಿ ವಿಭಾಗದ ಅಭಿವೃದ್ಧಿಗೆ ಶ್ರಮಿಸಿದರು. ೧೯೮೩ರಿಂದ ೧೯೯೪ರ ತನಕ ವೈಜ್ಞಾನಿಕ ಸಂಶೋಧನೆ ನಡೆಸಿದರು. ಆಗತಾನೇ ಎಚ್‌ಐವಿ/ಏಡ್ಸ್ ಕುರಿತ ಸಂಶೋಧನೆಗಳು ಪ್ರವರ್ಧಮಾನವಾಗುತ್ತಿತ್ತು. ಎಚ್‌ಐವಿ ಮಿದುಳಿನ ನರಕೋಶಗಳನ್ನು ಹೇಗೆ ಪ್ರವೇಶಿಸುತ್ತವೆ ಎಂಬ ಮಹತ್ವದ ಸಂಶೋಧನೆಯನ್ನು ಶಾಮ ಭಟ್ಟರು ನಡೆಸಿದರು. ವಿಶ್ವಾದ್ಯಂತ ಈ ಸಂಶೋಧನೆ ಗಮನಸೆಳೆಯಿತು. ಪ್ರತಿಷ್ಠಿತ ಸಯನ್ಸ್ ನಿಯತಕಾಲಿಕದಲ್ಲಿ ಭಟ್ಟರ ಸಂಶೋಧನಾ ಲೇಖನ ಪ್ರಕಟವಾಯಿತು.
ಶಾಮ ಭಟ್ಟರು ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿಯೇ ಮುಂದಿನ ಭವಿಷ್ಯ ಮತ್ತು ಬದುಕು ನಡೆಸಬಹುದಿತ್ತು. ಆದರೆ ಅವರು ಭಾರತಕ್ಕೆ ಮರಳಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಹಲವರು ಭಟ್ಟರ ನಡೆಯನ್ನು ಟೀಕಿಸಿದ್ದರು. ಆದರೆ ಅವರು ನಿಲುವು ಬದಲಿಸಲಿಲ್ಲ. ಅದರಿಂದ ಭಾರತಕ್ಕೆ ಮತ್ತು ಬೆಂಗಳೂರಿಗೆ ಎಷ್ಟು ಉಪಯೋಗವಾಯಿತು ನೋಡಿ.
೧೯೯೩ರಲ್ಲಿ ಭಾರತಕ್ಕೆ ಬಂದಿದ್ದಾಗ ಶಾಮ ಭಟ್ಟರು ಇಲ್ಲಿ ಎಚ್‌ಐವಿ ಸೇರಿದಂತೆ ಅನೇಕ ರೋಗಗಳನ್ನು ಪತ್ತೆ ಹಚ್ಚುವ ಸಲಕರಣೆಗಳಿಗೆ (ಕಿಟ್) ಅಗಾಧ ಕೊರತೆ ಇರುವುದನ್ನು ಕಂಡರು. ಹೀಗಾಗಿ ತಾವೇ ಅಂತಹ ಕಂಪನಿ ಆರಂಭಿಸಲು ನಿರ್ಧರಿಸಿದರು. ಆದರೆ ಅಕಾರಶಾಹಿಯ ಕಪಿಮುಷ್ಠಿಯ ನಡುವೆ ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸಾಲಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಹೋಗಿ ಮನವಿ ಸಲ್ಲಿಸಿದರೆ, ನೀವು ಸಹಭಾಗಿತ್ವದ ಅಡಿಯಲ್ಲಿ ಕಂಪನಿ ಸ್ಥಾಪಿಸಿ ಎಂಬ ಪುಕ್ಕಟೆ ಸಲಹೆ ಬೇರೆ ಕೊಟ್ಟು ಸತಾಯಿಸಿದರು. ಇಲ್ಲ, ಸ್ವತಃ ತಾವೇ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಜ್ಞರೆಂಬುದನ್ನು ಇಲಾಖಾಕಾರಿಗಳಿಗೆ ಮನವರಿಕೆ ಮಾಡಿಸಲೂ ಹರ ಸಾಹಸಪಡಬೇಕಾಯಿತು. ಆದರೆ ಭಟ್ಟರು ಸುಮ್ಮನಿರಲಿಲ್ಲ. ಕೃಷ್ಣ ಭಟ್, ರಮೇಶ್ ಭಟ್ ಒಳಗೊಂಡಂತೆ ಕೆಲವು ಮಂದಿ ಮಿತ್ರರು, ಸಹಪಾಠಿಗಳು ಕೈಜೋಡಿಸಿದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ೧೯೯೪ರಲ್ಲಿ ಭಟ್ ಬಯೋ-ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಸ್ತಿತ್ವಕ್ಕೆ ಬಂತು.
ಅತ್ಯುನ್ನತ ಗುಣಮಟ್ಟದ ಡಯೋಗ್ನೋಸ್ಟಿಕ್ ಕಿಟ್‌ಗಳು ಮತ್ತು ಜೈವಿಕ ತಂತ್ರಜ್ಞಾನ ಉತ್ಪನ್ನಗಳನ್ನು ಕಂಪನಿ ನಾನಾ ಹಂತಗಳಲ್ಲಿ ಉತ್ಪಾದಿಸುತ್ತಾ ಬಂದಿತು. ಆರಂಭದಲ್ಲಿ ಪ್ರಗ್ನೆನ್ಸಿ ಕಿಟ್‌ಗಳನ್ನು ಉತ್ಪಾದಿಸಲಾಯಿತು. ನಂತರ ಒಂದೊಂದೇ ಉತ್ಪನ್ನಗಳು ಸೇರಿಕೊಂಡವು. ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ೪೦ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಂಪನಿ ಪೂರೈಸುತ್ತಿದೆ. ಕಂಪನಿಯ ಪ್ರೆಗ್ನೆನ್ಸಿ, ಎಚ್‌ಐವಿ, ಹೆಪಟೈಟಿಸ್, ಮಲೇರಿಯಾ, ಡೆಂಗ್ಯು, ಚಿಕೂನ್ ಗೂನ್ಯಾ, ಸಿಫಿಲಿಸ್, ಕ್ಷಯ ಮುಂತಾದ ರೋಗಗಳ ಪತ್ತೆಗೆ ಸಂಬಂದಿಸಿದ ಡಯೋಗ್ನಾಸ್ಟಿಕ್ ಸಾಧನಗಳು ವೈದ್ಯಕೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಒಂದೂವರೆ ಕೋಟಿ ರೂ. ಬಂಡವಾಳದಲ್ಲಿ ಆರಂಭವಾದ ಕಂಪನಿ, ಇಂದು ಹನ್ನೆರಡೂವರೆ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಈ ಮೊತ್ತ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ೨೫೦ಕ್ಕೂ ಹೆಚ್ಚು ಸಿಬ್ಬಂದಿಗೆ ಕಂಪನಿ ಉದ್ಯೋಗ ಒದಗಿಸಿದೆ. ಸುಸಜ್ಜಿತ ಪ್ರಯೋಗಾಲಯವನ್ನು, ಸಂಪರ್ಕ ಜಾಲವನ್ನು, ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ಗುಣಮಟ್ಟಕ್ಕಾಗಿ ಐಎಸ್‌ಒ ೯೦೦೧, ಐಎಸ್‌ಒ ೧೩೪೮೫, ಸಿಇ ಮತ್ತು ಜಿಎಂಪಿ ಪ್ರಮಾಣ ಪತ್ರವನ್ನು ಗಳಿಸಿದೆ. ಕಳೆದ ಜೂ. ೧೪ರಂದು ಕಂಪನಿಯ ನೂತನ ಕಟ್ಟಡ ಉದ್ಘಾಟನೆ ಸಂಭ್ರಮದಿಂದ ನಡೆದಿದೆ. ಕಂಪನಿಯ ಸಿಬ್ಬಂದಿಗೆ, ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿಯೂ ದತ್ತಿನಿಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಜತೆಗೆ ಸಂಶೋಧನೆಯೂ ಮುಂದುವರಿದಿದೆ.
ಹಾಗಂತ ಜೈವಿಕ ತಂತ್ರಜ್ಞಾನ ಕ್ಷೇತ್ರ ಕೂಡ ಬೆಳೆಯುತ್ತಿರುವ ವಲಯ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಚೀನಾ, ಕೊರಿಯಾ ಇತ್ಯಾದಿ ರಾಷ್ಟ್ರಗಳ ಪೈಪೋಟಿಯೂ ಇದೆ. ಆದರೆ ಇವುಗಳನ್ನೆಲ್ಲ ಮೆಟ್ಟಿ ನಿಂತರೆ ಭವಿಷ್ಯ ಪ್ರಕಾಶಿಸದಿರದು. ಇಂಥ ಸನ್ನಿವೇಶದಲ್ಲಿ ಭಾರತದಲ್ಲಿ ಇದ್ದುಕೊಂಡೇ ಸಾಸಬಹುದು ಎಂಬುದಕ್ಕೆ ಶಾಮ ಭಟ್ಟರೇ ಸಾಕ್ಷಿ. ಪ್ರತಿಭಾ ಪಲಾಯನವಾದ ತದ್ವಿರುದ್ಧವಾದಾಗ ಭಾರತೀಯರಿಗೆ ಅದರ ಪ್ರಯೋಜನ ಸಿಗುತ್ತದೆ. ಅದಕ್ಕೆ ತಕ್ಕ ಬೆಲೆ ಸಾಧಕರಿಗೂ ದೊರೆಯುತ್ತದೆ. ಆದರೆ ಸವಾಲುಗಳನ್ನು ಎದುರಿಸುವ ಛಾತಿ, ಸಮಸ್ಯೆಗಳಿಗೆ ಪರಿಹಾರವನ್ನು ಅನ್ವೇಷಿಸುವ ಗುಣ ಜಾಗೃತವಾಗಿರಬೇಕು. ಹಾಗಿದ್ದಾಗ ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ತಾಪತ್ರಯ ತಪ್ಪುತ್ತದೆ. ಸ್ವದೇಶಿ ತಂತ್ರಜ್ಞಾನ ಬೆಳೆಯುತ್ತದೆ.
ಓ ದೇವರೇ, ಈ ಜಗತ್ತಿನಲ್ಲಿ ಜೀವನದಲ್ಲಿ ಮುಂದೆ ಬರೋದು ಹೇಗೆ ಎಂದೇ ಗೊತ್ತಾಗುತ್ತಿಲ್ಲ ಎಂದು ಅನವರತ ಕೊರಗುವ ಲಕ್ಷಾಂತರ ಮಂದಿಗೆ ಭಟ್ಟರ ಯಶೋಗಾಥೆ ಅದಮ್ಯ ಸೂರ್ತಿ ನೀಡದಿರದು.

Sunday 13 September 2009

ಏನೂ ಗೊತ್ತಾಗದಿದ್ದಾಗ ಬ್ಲಾಗ್ ಬಗ್ಗೆ

ಈ ದಿನ ಏನು ಬರೆಯುವುದು ಅಂತ ಗೊತ್ತಾಗುತ್ತಿಲ್ಲ. ಹೀಗಾಗಿ ಬ್ಲಾಗ್ ಬಗ್ಗೆಯೇ ಬರೆಯುತ್ತೇನೆ. ಸದ್ಯಕ್ಕೆ ಇದರದ್ದು ಬಿಟ್ಟರೆ ಬೇರೇನೂ ತೋಚುತ್ತಿಲ್ಲ.
ನಿನ್ನೆ ಕೆಲವರ ಬ್ಲಾಗ್‌ಗಳನ್ನು ನೋಡಿದೆ. ಆರಂಭದಲ್ಲಿ ಚೆನ್ನಾಗಿಯೇ ಬರೆದಿದ್ದರು. ನಂತರ ಇದ್ದಕ್ಕಿದ್ದಂತೆಯೇ ಒಂದು ಪ್ರಕಟಣೆ- ಇನ್ನು ತಾತ್ಕಾಲಿಕವಾಗಿ ಬರೆಯುವುದಿಲ್ಲ. ಕಾರಣ ಏನೆಂದರೆ ಅವರ ಬರಹಗಳು ಅವರಿಗೇ ರುಚಿಸುತ್ತಿಲ್ಲವಂತೆ..
ತುಂಬ ಚೆಂದನೆಯ ಬರಹಗಳಿಂದ ಕೂಡಿದ್ದ ಆ ಕನ್ನಡದ ಬ್ಲಾಗ್ ಗಳು ಮುಚ್ಚುವುದನ್ನು ನಾನಂತೂ ಇಷ್ಟಪಡುವುದಿಲ್ಲ. ಆದರೆ ಅದು ಅವರಿಷ್ಟ ಅಂದುಕೊಳ್ಳಬಹುದು. ಆದರೆ ನನ್ನ ಬ್ಲಾಗನ್ನೇ ನಾನು ಮತ್ತೊಮ್ಮೆ ಮೇಲಿಂದ ಕೆಳಗಿನವರೆಗೆ ಓದಿದೆ. ನನಗೂ ಕೆಲವು ಬರಹಗಳು ತೀರಾ ಸಪ್ಪೆ ಎನ್ನಿಸತೊಡಗಿತು. ನೋಡುತ್ತಾ ಹೋದಂತೆ ಯಾವೊಂದು ಬರಹ ಕೂಡಾ ನನಗೆ ಸಂಪೂರ್ಣ ತೃಪ್ತಿ ಕೊಡಲಿಲ್ಲ. ಇತ್ತೀಚೆಗೆ ಗೆಳೆಯನೊಬ್ಬ ‘ ಬ್ಲಾಗ್‌ಗೆ ಹೇಗಿದೆ ರೆಸ್ಪಾನ್ಸ್ ? ಎಂದು ಕೇಳಿದ್ದ. ತದನಂತರ ಮತ್ತೂ ಯೋಚಿಸತೊಡಗಿದ್ದೆ. ಹಾಗಾದರೆ ನಾಳೆಯಿಂದ ಈ ಬ್ಲಾಗನ್ನೂ ಮುಚ್ಚಲೇ..ಅಂತ ಯೋಚಿಸಿದೆ.
ಆದರೆ ಬರೆಯದೆ ಇರುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೋಸ್ಕರವಾದರೂ ಬ್ಲಾಗ್ ಬೇಕಾಗಿದೆ ಎಂದು ಅನ್ನಿಸುತ್ತಿದೆ.
ಬಹುತೇಕ ಪ್ರತಿದಿನ ಏನಾದರೂ ಬರೆಯದಿದ್ದರೆ ರಾತ್ರಿ ನಿದ್ದೆ ಬರುವುದಿಲ್ಲ ಎಂಬಂತಾಗಿ ಬಿಟ್ಟಿದೆ. ಒಂದೆರೆಡು ವಾಕ್ಯ ಬರೆದೊಡನೆ ಏನೇನೂ ಆಲೋಚನೆಗಳು ಬರುತ್ತವೆ. ನೋಡ ನೋಡುತ್ತಿರುವಂತೆ ಎರಡು ವಾಕ್ಯ ಇದ್ದದ್ದು ನಾಲ್ಕಾಗುತ್ತದೆ. ನಾಲ್ಕು ಎಂಟಾಗುತ್ತದೆ. ಎಂಟು ಹನ್ನೆರಡಾಗುತ್ತದೆ..
ಕೆಲವರು ಅಸೂಯೆಪಡುವಷ್ಟು ಓದುತ್ತಾರೆ. ಆದರೆ ಬರೆಯುವುದಿಲ್ಲ. ಇನ್ನು ಕೆಲವರಿದ್ದಾರೆ ಬೆಟ್ಟದಷ್ಟು ಬರೆಯುತ್ತಾರೆ. ಹುಲ್ಲು ಕಡ್ಡಿಯಷ್ಟೂ ಓದುವುದಿಲ್ಲ. ಎಂಥಾ ವಿಚಿತ್ರ ಅನ್ನಿಸುತ್ತದೆ. ನನಗೆ ತುಂಬಾ ಓದಬೇಕು ಅನ್ನಿಸುತ್ತದೆ. ಆದರೆ ಓದಲು ಸಾಧ್ಯವಾಗುವುದಿಲ್ಲ. ಬಹಳ ಬರೆಯಬೇಕು ಅನ್ನಿಸುತ್ತದೆ. ಅದೂ ಆಗುತ್ತಿಲ್ಲ. ಸದ್ಯಕ್ಕೆ ಎರಡನ್ನೂ ಸ್ವಲ್ಪ ಸ್ವಲ್ಪ ಮಾಡುತ್ತಿದ್ದೇನೆ. ಆದರೆ ಎರಡನ್ನೂ ಸಂಪೂರ್ಣ ಬಿಟ್ಟು ಇರಲು ನನ್ನ ಕೈಯಲ್ಲಾಗುವುದೇ ಇಲ್ಲ. ಬ್ಲಾಗು ಮಾಡಿದ ನಂತರ ಯಾರೂ ಓದದಿದ್ದರೂ ಪರವಾಗಿಲ್ಲ..ಒಂದಷ್ಟು ಬರೆಯಲು ಸ್ಪೂರ್ತಿ ಸಿಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಪತ್ರಿಕೆಯಲ್ಲಿ ಬರುವ ನನ್ನ ಲೇಖನಗಳನ್ನು ಕಳೆದು ಹೋಗದಂತೆ ಸಂರಕ್ಷಿಸಿ ಇಡಲು ಉಪಯೋಗವಾಗುತ್ತಿದೆ. ಆದ್ದರಿಂದ ಬ್ಲಾಗ್ ನನಗೆ ಪ್ರಿಯ.

Friday 11 September 2009

ಪಬ್ಲಿಸಿಟಿಯ ಬಗ್ಗೆ ಪಬ್ಲಿಸಿಟಿಯಾಗದ ಸಂಗತಿ..

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇ ಗೌಡರು ವಿಧಾನ ಪರಿಷತ್ ಅಧ್ಯಕ್ಷರು. ವಿಧಾನ ಪರಿಷತ್ ನಲ್ಲಿ ನಿನ್ನೆ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಾದ ಮಂಡಿಸಿದ್ದರು. ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು. ಅವರ ವಾದ ಸರಣಿ ಚೆನ್ನಾಗಿತ್ತು ಹೀಗಾಗಿ ಈವತ್ತು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿದೆ. ಅವರೂ ವಿಜಯ ಕರ್ನಾಟಕದಲ್ಲಿ ತಮ್ಮ ಭಾಷಣದ ಬಗ್ಗೆ ವರದಿ ಬಂದಿರುವ ಬಗ್ಗೆ ಖುಶಿಯಲ್ಲಿದ್ದರು.
ಮಾತನಾಡುವ ವೇಳೆ ಅವರಂದರು- ಕೇಶವ ಪ್ರಸಾದ್ ಅವರೇ, ಮಂಡ್ಯದಲ್ಲಿ ಪತ್ರಿಕೆ ತಿರುವಿ ನೋಡಿದೆ. ಇಲ್ಲಿ ಬಂದಿರಲಿಲ್ಲ ಇಲ್ಲಿಯೂ ಬರುವಂತೆ ಮಾಡಿ. ಬೆಂಗಳೂರಲ್ಲಿ ಭರ್ಜರಿಯಾಗಿ ಬಂದಿದೆಯಂತೆ. ಈವತ್ತು ಬೆಳಗ್ಗೆ ಐಎಎಸ್ ಅಕಾರಿಯೊಬ್ಬರೂ ಫೋನ್ ಮಾಡಿ ತಿಳಿಸಿದರು ಎಂದರು. ಬಹುಶಃ ಆ ಭಾಗದ ಆವೃತ್ತಿಯಲ್ಲಿ ಸುದ್ದಿ ಪ್ರಕಟವಾಗಿಲ್ಲ ಅಂತನ್ನಿಸುತ್ತೆ ಎಂದೆ. ಆದರೆ ಅವರು ತಮ್ಮ ಭಾಷಣ ಮಂಡ್ಯದಲ್ಲಿ ಪತ್ರಿಕೆ ಮೂಲಕ ಪ್ರಸಾರ ಆಗಬೇಕಿತ್ತು ಎಂಬ ತುಡಿತ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ವಿಧಾನ ಪರಿಷತ್ತಿನಲ್ಲಿ ರೈತರ ಸಮಸ್ಯೆಗಳ ಬಗ್ಗೆ ಭಾಷಣ ಮಾಡುವಾಗ ಸಂಪಾದಕರು ಇತ್ತೀಚೆಗೆ ಕನಕಾಂಬರ ಹೂವುಗಳ ಬಗ್ಗೆ ಬರೆದಿದ್ದ ಲೇಖನವನ್ನು ಕೂಡ ಪ್ರಸ್ತಾಪಿಸಿದ್ದೇನೆ ಎಂದು ಗೌಡರು ಹೇಳಲು ಮರೆಯಲಿಲ್ಲ.ಅವರ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂದು ಅನ್ನಿಸಿತು.
ನಿನ್ನೆ ಬಂಟ್ವಾಳ ತಾಲ್ಲೂಕಿನ ಇಡ್ಕಿದು ಗ್ರಾಮದ ಪಶು ವೈದ್ಯ ಡಾ. ಕೃಷ್ಣ ಭಟ್ ಅವರ ಜೊತೆ ಮಾತನಾಡಿದ್ದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪಶು ವೈದ್ಯ, ಸಮಾಜಸೇವೆಯಲ್ಲಿ ನಿರತರಾಗಿರುವ ಸಜ್ಜನ. ಇಡ್ಕಿದು ಗ್ರಾಮದಲ್ಲಿ ಗೋ ಸಂಪತ್ತಿನ ರಕ್ಷಣೆ, ಬಯೋಗ್ಯಾಸ್ ಅಭಿವೃದ್ಧಿ, ಜಲ ಸಾಕ್ಷರತೆಯಲ್ಲಿ ಅವರ ಕೊಡುಗೆ ಗಣನೀಯ. ಸದ್ದಿಲ್ಲದೆ ಅವರು ಸಲ್ಲಿಸಿರುವ ಕೊಡುಗೆಯನ್ನು ಗಮನಿಸಿ, ಅವರ ಸಾಧನೆಯ ಬಗ್ಗೆ ವರದಿ ಬರೆಯೋಣವೆಂದು ಭಾವಿಸಿ ಪ್ರಸ್ತಾಪಿಸಿದ್ದೆ. ಆದರೆ ಅವರು ವಿನಯಪೂರ್ವಕ ವಾಗಿ ಹೇಳಿದರು-
ನಾವು ಗ್ರಾಮಸ್ಥರು ಎಲ್ಲ ಸಂಘಟಿಒತರಾಗಿ ಸಮಾಜಕ್ಕೋಸ್ಕರ ಕೆಲಸ ಮಾಡಿದ್ದೇವೆ. ಸಿದ್ಧಾಂತದ ಅಡಿಯಲ್ಲಿ ದುಡಿದಿದ್ದೇವೆ. ಇಲ್ಲಿ ನನ್ನದು ಎಂದು ಹೇಳಿಕೊಳ್ಳುವುದು ಇಷ್ಟವಾಗುತ್ತಿಲ್ಲ ಎಂದರು. ನಾನು ಆಯಿತು ಎಂದೆ. ಈ ಎರಡು ಉದಾಹರಣೆಗಳಲ್ಲಿ ಒಬ್ಬರು ವರದಿ ಮತ್ತಷ್ಟು ಹೆಚ್ಚು ಬರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಭಟ್ ತಾವು ಸುದ್ದಿಯಾಗಲು ಅರ್ಹತೆ ಇದ್ದರೂ ಪ್ರಚಾರ ಬಯಸಲಿಲ್ಲ.

Thursday 10 September 2009

ಮೊಬೈಲ್ ಕಳ್ಳತನ : ವಿಮೆ ಪರಿಹಾರವಾಗದೇ ?

ಇತ್ತೀಚೆಗೆ ಪುತ್ತೂರು ಕಡೆಗೆ ಹೋಗಿದ್ದಾಗ ಯಶವಂತಪುರ-ಮಂಗಳೂರು ಎಕ್ಸ್ ಪ್ರೆಸ ರೈಲಿನಲ್ಲಿ ಬೆಳಗ್ಗಿನ ಜಾವ ನನ್ನ ಮೊಬೈಲ್ ಕಳೆದು ಹೋಗಿತ್ತು. ಅದು ಹಳೆಯ ಮೊಬೈಲ್ ಆಗಿದ್ದರೂ ಅನೇಕ ಗಣ್ಯರ ಸಂಪರ್ಕ ಸಂಖ್ಯೆಗಳಿದ್ದವು. ಅವುಗಳನ್ನೆಲ್ಲ ಮತ್ತೆ ಹೊಂದಿಸಿಕೊಳ್ಳಬೇಕಲ್ಲವಾ ಎಂದು ಬೇಸರವಾಗಿತ್ತು.
ಈವತ್ತು ಕಚೇರಿಯಲ್ಲಿ ಸಹೋದ್ಯೋಗಿಯೊಬ್ಬರ ಮೊಬೈಲ್ ಬಸ್ಸಿನಲ್ಲಿ ಪಿಕ್ ಪಾಕೆಟ್ ಆಗಿದೆ. ಅದು ಎಂಟು ಸಾವಿರ ರೂ. ಬೆಲೆ ಬಾಳುವ ಸೆಟ್ ಬೇರೆ. ಅದರ ಜತೆ ಭಾರಿ ಅಟ್ಯಾಚ್ ಮೆಂಟ್ ಇತ್ತು ಎಂದು ಅವರೇ ಹೇಳಿಕೊಂಡರು. ಅವರೂ ಗಣ್ಯಾತಿಗಣ್ಯರ ಸಂಪರ್ಕ ಸಂಖ್ಯೆಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿಟ್ಟಿದ್ದರು.
ಕೆಲವು ತಿಂಗಳ ಹಿಂದೆ ನನ್ನ ಸೋದರಿಯ ಮೊಬೈಲ್ ಕಳೆದು ಹೋಗಿತ್ತು. ಇನ್ನು ಕೆಲವು ಸ್ನೇಹಿತರು ಎರಡು ಸಲ ಮೊಬೈಲ್ ಕಳೆದುಕೊಂಡು ಪರಿತಪಿಸಿದ್ದಾರೆ. ಮೊಬೈಲನ್ನು ಕಳೆದುಕೊಂಡಿರದವರ ಸಂಖ್ಯೆ ಅತ್ಯಲ್ಪ.
ಮುಂಬಯಿನಲ್ಲಿ ಪ್ರತಿ ಒಂದು ನಿಮಿಷಕ್ಕೆ ಹದಿನೈದು ಮೊಬೈಲ್‌ಗಳು ಕಳವಾಗುತ್ತವೆ ಎಂದು ಎರಡು ವರ್ಷಗಳ ಹಿಂದೆಯೇ ವರದಿಯಾಗಿತ್ತು. ಬೆಂಗಳೂರಿನಲ್ಲಿಯೂ ಪ್ರತಿ ನಿಮಿಷಕ್ಕೆ ಹಲವಾರು ಮೊಬೈಲ್‌ಗಳು ಕಳ್ಳರ ಪಾಲಾಗುತ್ತಿವೆ. ಬಹುಶಃ ಎಲ್ಲ ಮೊಬೈಲ್ ವಿತರಕರು ತಮ್ಮ ಉತ್ಪನ್ನಗಳಿಗೆ ವಿಮೆ ವ್ಯವಸ್ಥೆ ಕಲ್ಪಿಸಿದರೆ ಒಳ್ಳೆಯದು ಎನ್ನಿಸುತ್ತದೆ. ದುಬಾರಿ ದರ ಕೊಟ್ಟು ತೆಗೆದುಕೊಳ್ಳುವ ಮೊಬೈಲ್ ಗ್ರಾಹಕರಿಗೆ ವಿಮೆ ಅನುಕೂಲವಾದೀತು ಎಂದು ಅನ್ನಿಸುತ್ತದೆ. ಏನಂತೀರಿ ?

ಹಳ್ಳಿಗಳಲ್ಲಿ ಎಲ್ಲಿದ್ದಾರೆ ಗೋ ಡಾಕ್ಟರ್ ?

ನಾನು ಸಣ್ಣವನಿದ್ದಾಗ ದನ, ಎಮ್ಮೆಗಳಿಗೆ ಅಸೌಖ್ಯವಾದಾಗ ಗೋ ಡಾಕ್ಟರ್ ಬರುತ್ತಿದ್ದರು.
ಗೋ ಡಾಕ್ಟರ್ ಬಂದೊಡನೆ, ಅವರ ಕೈಯಲ್ಲಿದ್ದ ಔಷಧಗಳ ಬ್ಯಾಗನ್ನು ತಮ್ಮ ಕೈಗೆ ತೆಗೆದುಕೊಂಡು ಮಾವ, ಅವರನ್ನು ಗೌರವದಿಂದ ಹಟ್ಟಿಗೆ ಕರೆದೊಯ್ಯುತ್ತಿದ್ದರು. ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆಯಾದ ನಂತರ ಕೈಕಾಲು ತೊಳೆದು ವರಾಂಡಕ್ಕೆ ಬರುತ್ತಿದ್ದರು. ನಂತರ ಕಾಫಿ, ಚಹಾ, ತಿಂಡಿಯ ಉಪಚಾರ. ಕೆಲವೊಮ್ಮೆ ಮದ್ಯಾಹ್ನವಾದರೆ ಊಟ ಕೂಡಾ ಒಟ್ಟಿಗೆ ನಡೆಯುತ್ತಿತ್ತು.
ಆದರೆ ಈಗ ಗೋ ಡಾಕ್ಟರ್‌ಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಪಶು ವೈದ್ಯರೆಲ್ಲ ಶ್ರೀಮಂತರ ನಾಯಿಗಳಿಗೆ ವೈದ್ಯರಾಗಲು ಬಯಸುತ್ತಿದ್ದಾರೆ. ಅಲ್ಲಿ ಹಣವೂ ಹೆಚ್ಚು ಸಿಗುತ್ತಿದ್ದು, ಆಕರ್ಷಣೀಯವೆನಿಸಿದೆ. ಆದರೆ ಹಳ್ಳಿಗಳಲ್ಲಿ ಊರೂರು ಅಲೆಯುತ್ತ, ರೈತಾಪಿಗಳೊಂದಿಗೆ ಕಲೆಯುತ್ತ ಜಾನುವಾರುಗಳ ಸೇವೆ ಮಾಡುವುದು ಅವರಿಗೆ ಬೇಡವಾಗಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಪಶು ವೈದ್ಯರಾದ ಡಾ. ಕೃಷ್ಣ ಭಟ್ ಅವರ ಜೊತೆ ಮಾತನಾಡುವ ವೇಳೆ ಈ ಸೂಕ್ಷ್ಮ ತಿಳಿಯಿತು.
ಒಂದೂರಿಗೆ ಗ್ರಾಮ ಲೆಕ್ಕಿಗ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಗೋ ಡಾಕ್ಟರ್ ಬೇಕೇ ಬೇಕು ಎಂಬುದನ್ನು ಮರೆಯಕೂಡದು. ಈಗ ದಕ್ಷಿಣ ಕನ್ನಡ, ಕಾಸರಗೋಡಿನ ಹಳ್ಳಿಗಳಲ್ಲಿ ಇರುವವರೆಲ್ಲ ಹಳೆಯ ಪಶು ವೈದ್ಯರೇ. ಹೊಸ ತಲೆಮಾರಿನ ಗೋ ಡಾಕ್ಟರ್ ಕಾಣಿಸುತ್ತಿಲ್ಲ... ಇದನ್ನೆಲ್ಲ ಬರೆಯುವಾಗ ಬೇಸರವಾಗುತ್ತದೆ.

Wednesday 9 September 2009

ಉದ್ಯೋಗದಲ್ಲಿ ಕೃಷಿಗೂ ಗೌರವ ಕೊಡಿ..ಪ್ಲೀಸ್

ಅವರ ಹೆಸರು ಹುಚ್ಚಪ್ಪ.
ಸೊರಬದ ಕಾನಮೂಲೆ ಗ್ರಾಮದವರು. ವಯಸ್ಸು ೨೮ ವರ್ಷ. ಓದಿದ್ದಿ ಎಸ್ಸೆಸ್ಸೆಲ್ಸಿ. ಆರು ಮಂದಿಯ ತುಂಬು ಸಂಸಾರ. ಎರಡೂಕಾಲು ಎಕರೆ ಕೃಷಿ ಜಮೀನು. ಕಳೆದ ಎಂಟು ವರ್ಷಗಳಿಂದ ಸಾವಯವ ಪದ್ಧತಿಯನ್ನು ಅಳವಡಿಸಿದ್ದಾರೆ. ಅದಕ್ಕೂ ಮುಂಚೆ ಡಿಇಪಿ, ಯೂರಿಯಾ, ಫ್ಯಾಕ್ಟಂಫೋಸ್ ಅಂತ ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆ ನಷ್ಟವಾಗಿತ್ತು. ಆದರೆ ಈವತ್ತು ಚಿತ್ರಣ ಬದಲಾಗಿದೆ. ಊಟಕ್ಕೆ ಸಾಕಾಗಿ ಮಿಕ್ಕುವಷ್ಟು ಭತ್ತ ಬೆಳೆಯುತ್ತಿದ್ದಾರೆ. ಭತ್ತ ಬೆಳೆಯುವುದರಿಂದ ವರ್ಷಕ್ಕೆ ಸುಮಾರು ೨೫ ಸಾವಿರ ರೂ. ಸಂಪಾದನೆಯಾಗುತ್ತದೆ. ಹೀಗಾಗಿ ಗದ್ದೆ, ನಾಟಿಯ ನಂತರ ಬಿಡುವಿನಲ್ಲಿ ಬೇರೆ ಕಡೆ ಕೂಲಿ ಕೆಲಸಕ್ಕೂ ಹೋಗುತ್ತಾರೆ. ಅದನ್ನು ಮಾಡಬಾರದು ಎಂಬ ಕೀಳರಿಮೆಯಿಲ್ಲ. ಗದ್ದೆ, ತೋಟಕ್ಕೆ ಹಟ್ಟಿಯ ಗೊಬ್ಬರ, ಸೊಪ್ಪು ಹಾಕುತ್ತಾರೆ. ಎತ್ತು, ದನ ಅಂತ ಹದಿನೈದು ಜಾನುವಾರುಗಳಿವೆ.
ಎರಡೂಕಾಲು ಎಕರೆಯಲ್ಲಿ ಭತ್ತ ಮಾತ್ರವಲ್ಲದೆ ಅಡಿಕೆ, ಕಬ್ಬು, ಶುಂಠಿ, ಎಳ್ಳು, ಬಾಳೆ ಹಾಗೂ ನಾನಾ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಸ್ವಸಹಾಯದ ನಂಟಿದೆ. ಎರೆ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಈ ಕಾನಮೂಲೆಯಲ್ಲಿ ಇನ್ನೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಾಗಿಲ್ಲ. ಅಕಸ್ಮಾತ್ ಆರಂಭಿಸಿದರೂ, ಅಲ್ಲಿ ಕೊಡುವುದಕ್ಕಿಂತ ( ೮೨ ರೂ. ದಿನಕ್ಕೆ) ಹೆಚ್ಚು ಸಂಬಳ ಬೇರೆ ಕಡೆ ( ಕನಿಷ್ಠ ನೂರು ರೂ. ದಿನಕ್ಕೆ ) ಸಿಗುತ್ತದೆ. ಎಳ್ಳಿನಿಂದ ಎಣ್ಣೆ ತಯಾರಿಸುತ್ತಾರೆ. ಊಟಕ್ಕೆ ಅವರದ್ದೇ ಭತ್ತವಿದೆ. ತರಕಾರಿ , ಸೊಪ್ಪು ಬೆಳೆಯುತ್ತಾರೆ. ಒಂದೇ ಬೆಳೆಯನ್ನು ನೆಚ್ಚಿಕೊಂಡಿಲ್ಲ. ಪಶು ಸಂಪತ್ತಿನ ಮಹತ್ವದ ಅರಿವಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ಓದಿರುವ ಹುಚ್ಚಪ್ಪ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ವಲಸೆ ಹೋಗಿಲ್ಲ. ನಿಜ. ೨೦೦೧ರಿಂದ ಮೊದಲ ಮೂರು ವರ್ಷ ರಾಸಾಯನಿಕ ಕೈಬಿಟ್ಟಿದ್ದರಿಂದ ಇಳುವರಿ ಇಳಿದಿತ್ತು. ಆದರೆ ಈಗ ಮಣ್ಣಿನ ಫಲವತ್ತತೆ ಮರಳಿದೆ. ಇನ್ನು ಆ ಅಂಜಿಕೆಯಿಲ್ಲ. ದುಬಾರಿ ಕೆಮಿಕಲ್ಸ್ ಅಗತ್ಯವಿಲ್ಲ. ಹುಟ್ಟಿದೂರಿನಲ್ಲಿಯೇ ಇದ್ದುದರಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ.
ನೀತಿ : ಆರು ಮಂದಿಯ ಸಂಸಾರಕ್ಕೆ ಎರಡೂಕಾಲು ಎಕರೆ ಮತ್ತು ಕೂಲಿ ಕೆಲ್ಸ ಸಾಕು
ಶಿಕಾರಿಪುರದ ಮಾದನಹಳ್ಳಿಯ ಸಂಗಪ್ಪ (೪೫) ಕಳೆದ ಮೂರು ವರ್ಷಗಳಿಂದ ಸಾವಯವ ಕೃಷಿಕರಾಗಿ ಪರಿವರ್ತನೆ ಹೊಂದಿದ್ದಾರೆ. ಮೊದಲು ಕಾಂಪ್ಲೆಕ್ಸ್ ಗೊಬ್ಬರ ಹಾಕುತ್ತಿದ್ದರು. ಜೀವಾಮೃತ ತಯಾರಿಸುತ್ತಾರೆ. ಹತ್ತೆಕೆರೆ ಜಮೀನಿನಲ್ಲಿ ರಾಗಿ, ಭತ್ತ, ಮೆಕ್ಕೆ ಜೋಳ, ಶುಂಠಿ, ಅಡಿಕೆ, ಬಾಳೆ, ತೆಂಗು ಬೆಳೆಯುತ್ತಾರೆ. ಮೈಸೂರಿನಲ್ಲಿ ನಡೆದ ಪಾಳೇಕಾರ್ ಶಿಬಿರದಲ್ಲಿ ಜೀವಾಮೃತದ ಬಗ್ಗೆ ತಿಳಿದರು. ಕುಮದ್ವತಿ ನದಿಗೆ ಕಟ್ಟಿದ ಅಣೆಕಟ್ಟೆಯ ಅಂಜನಾಪುರ ಕಾಲುವೆಯಿಂದ ನೀರು ಸಿಗುತ್ತಿದೆ. ಒಂದು ಕೊಳವೆ ಬಾವಿಯಿದೆ. ಜಮೀನಿನ ಸುತ್ತ ಬದುವಿನಲ್ಲಿ ಮಾವು, ಸಪೋಟ, ಬೇವು, ನೀಲಗಿರಿ, ಸಾಗುವಾನಿ, ಸರ್ವೇ ಮರ ಅಂತ ೩೫ ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಇವರು ಓದಿದ್ದು ಕಮ್ಮಿ. ಮಗ ವಿಶ್ವನಾಥ ಬಿಎ ಓದಿದ್ದಾನೆ. ತಂದೆಯ ಹಾದಿಯಲ್ಲಿ ಕೃಷಿಗೆ ಮರಳಿದ್ದಾನೆ. ಕೃಷಿಗೆ ಗೌರವ ಇಲ್ಲದಿರುವ ಈ ಕಾಲದಲ್ಲಿ ವಿಶ್ವನಾಥನಂತೆ ಪದವಿ ಪಡೆದೂ ವ್ಯವಸಾಯ ಮಾಡುವವರು ನಿಧಾನವಾಗಿ ಹೆಚ್ಚುತ್ತಿದ್ದಾರೆ. ಇದಕ್ಕೆ ಎರಡು ಕಾರಣ. ಒಂದು ಎಷ್ಟು ಪ್ರಯತ್ನಿಸಿದರೂ ಪೇಟೆಯಲ್ಲಿ ಕೆಲಸ ಸಿಗದೆ ಕಲಿತ ಪಾಠ. ಎರಡನೆಯದ್ದು ನಿಜಕ್ಕೂ ಕೃಷಿಯ ಕಡೆಗಿನ ಆಸಕ್ತಿ. ಅದರಲ್ಲಿ ನೆಮ್ಮದಿ ಕಂಡುಕೊಳ್ಳುವ ಅಪರೂಪದ ಗುಣ. ಈವತ್ತು ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳೂ ಕೃಷಿಯಲ್ಲಿ ಆನಂದ ಕಂಡುಕೊಳ್ಳಬೇಕೆಂಬ ಹಂಬಲದಲ್ಲಿ ಉದ್ದೇಶಪೂರ್ವಕವಾಗಿಯೇ ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂಬಿಎ, ಬಿಬಿಎ ಪೂರೈಸಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಪ್ಪತ್ತು, ಮೂವತ್ತು ಸಾವಿರ ರೂ. ಸಂಬಳ ಮತ್ತು ಜತೆಗೆ ತಡೆಯಲಾಗದಷ್ಟು ಒತ್ತಡ ಮತ್ತು ಜಂಜಾಟದ ಕೆಲಸಕ್ಕೆ ರೋಸಿ ಹೋಗಿ ಮರಳಿ ಊರಿಗೆ ಬಂದು, ಅಚ್ಚುಕಟ್ಟಾಗಿ ತೋಟ ಮಾಡಿ ಮದುವೆ, ಮಕ್ಕಳು ಅಂತ ಸಂಸಾರ ನಡೆಸುತ್ತಿರುವ ಮಂದಿ ಇದ್ದಾರೆ.
ನೀತಿ : ಎಂಜಿನಿಯರಿಂಗ್ ಓದಿದವರೂ ಯಶಸ್ವಿ ಕೃಷಿಕರಾಗುತ್ತಾರೆ
ಭದ್ರಾವತಿಯ ಹಗರದಹಳ್ಳಿಯ ಶೇಖರಯ್ಯ ಸ್ವತಃ ರಾಸಾಯನಿಕ ಗೊಬ್ಬರದ ಅಂಗಡಿ ಇಟ್ಟಿದ್ದಾರೆ. ೧೯೭೯ರಿಂದ ೨೦ ವರ್ಷ ನಿರಂತರ ಮಾರಾಟದ ಅನುಭವ ಅವರಿಗಿದೆ. ಆದರೆ ತಾವು ತೋಟಕ್ಕೆ ಬಳಸುವುದಿಲ್ಲ. ಹತ್ತೆಕೆರೆ ಜಮೀನಿನಲ್ಲಿ ಅಡಿಕೆ, ಬಾಳೆ, ಸೋಯಾಬೀನ್ ಬೆಳೆದಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಾವಯವವನ್ನು ಅಳವಡಿಸುತ್ತಿರುವ ಪ್ರಯೋಗಶೀಲತೆ ಅವರಲ್ಲಿದೆ. ಅಡಿಕೆ ತೋಟದಲ್ಲಿ ಸದಾ ಹಸಿರೆಲೆ ತುಂಬಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಅದುವೇ ಗೊಬ್ಬರ. ಇದರಿಂದ ಅಡಿಕೆ ಮರ ಅಕಾಲಿಕವಾಗಿ ಸೊರಗಿ ಸಾಯುವುದು ನಿಂತಿದೆ. ಅಷ್ಟರಮಟ್ಟಿಗೆ ಉಳಿತಾಯವಾಗಿದೆ. ಇಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಫಲವಾಗಿದೆ. ಯೋಜನೆಯಲ್ಲಿ ದಿನಕ್ಕೆ ೮೨ ರೂ. ಕೊಟ್ಟರೆ, ಹೊರಗಡೆ ನೂರೈವತ್ತು ರೂ.ಗೆ ಕೊರತೆ ಇಲ್ಲದಂತೆ ಕೆಲಸ ಸಿಗುತ್ತಿದೆ. ಹೀಗಿರುವಾಗ ಯಾರು ಇದಕ್ಕೆ ಬರುತ್ತಾರೆ ? ಹೀಗಿದ್ದರೂ ಶೇಖರಯ್ಯನವರಿಗೆ ಈಗೀಗ ಕೃಷಿ ತೀರಾ ತ್ರಾಸದಾಯಕವಾಗುತ್ತಿದೆ. ವಯಸ್ಸಾಗುತ್ತಿದೆ. ಕೃಷಿ ಭೂಮಿ ಒಂದೆರೆಡು ಎಕರೆಯಲ್ಲ, ಹತ್ತೆಕೆರೆ ನೋಡಿಕೊಳ್ಳಬೇಕಾದರೆ ಒಬ್ಬರಿಂದ ಸಾಧ್ಯವೇ ಇಲ್ಲ. ಹೇಗೋ ಹೊಂದಾಣಿಕೆ ಮಾಡಿಕೊಂಡು ಇದ್ದಾರೆ. ಅತ್ತ ವ್ಯಾಪಾರವೂ ಇದೆ. ಹೀಗಾಗಿ ಮೋಸವಿಲ್ಲ.
ನೀತಿ : ಬೇಕಾದರೆ ರಾಸಾಯನಿಕ ಗೊಬ್ಬರದ ಅಂಗಡಿ ಇಡಿ, ಆದರೆ ನಿಮ್ಮ ತೋಟಕ್ಕೆ ಬ್ಯಾಡ್ರಿ..
ಶಿವಮೊಗ್ಗ ಗ್ರಾಮಾಂತರದ ಯಲವಟ್ಟಿಯಲ್ಲಿ ಎಲ್ಲ ಕಡೆಗಳಂತೆ ಕೃಷಿಗೆ ಕಾರ್ಮಿಕರು ಸಿಗದೆ ಸಮಸ್ಯೆ ತೀವ್ರವಾಗಿದೆ. ಒಂದೆರಡು ಗಂಟೆ ಕೆಲಸ ಮಾಡಿದಂತೆ ಮುಗಿಸಿ ಎಂಬತ್ತೆರಡು ರೂಪಾಯಿ ಸಂಪಾದಿಸುವ ಸುಲಭದ ಯೋಜನೆಯಾದ ಗ್ರಾಮೀಣ ಖಾತರಿ ಇಲ್ಲಿ ಇದೆ. ಮಲ್ಲಿಕಾರ್ಜುನ ಉತ್ಸಾಹಿ ಕೃಷಿಕ. ಎಂಟು ಎಕರೆ ಭೂಮಿಯಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆ. ಅಡಿಕೆ, ತೆಂಗು, ಬಾಳೆ, ಎಳ್ಳು ಮಾತ್ರವಲ್ಲದೆ ಆಯುರ್ವೇದ ಮೂಲಿಕೆಗಳನ್ನು ಬೆಳೆಸಿದ್ದಾರೆ. ಅಮೃತ ಬಳ್ಳಿ, ಹಿಪ್ಪಿಲಿ, ಲಾವಂಚ. ಲಿಂಬೆ, ಕಾಡು ಬಾಳೆ, ಇನ್ಸುಲಿನ್ ಗಿಡ ಅಂತ ಪಟ್ಟಿ ಬೆಳೆಯುತ್ತದೆ. ಅವರೂ ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ೨೦೦೩-೦೪ರ ಸಾಲಿನ ಕೃಷಿ ಪಂಡಿತ ಪುರಸ್ಕಾರ ಅವರಿಗೆ ಸಿಕ್ಕಿದೆ. ಹಂತ ಹಂತವಾಗಿ ಒಂದೊಂದೇ ಎಕರೆ ಜಾಗವನ್ನು ಸಾವಯವಕ್ಕೆ ಒಳಪಡಿಸಿದ ಮಲ್ಲಿಕಾರ್ಜುನ, ಎಂಟು ವರ್ಷಗಳಲ್ಲಿ ಅನೇಕ ವಿಷಯ ಕಲಿತಿದ್ದಾರೆ. ಪತ್ರಿಕೆ, ವಿಚಾರಸಂಕಿರಣ, ಶಿಬಿರಗಳಿಂದ ತಿಳಿದುಕೊಂಡಿದ್ದಾರೆ. ಸಮಾನಮನಸ್ಕ ಗೆಳೆಯರ ಗುಂಪು ಸದಾ ಕೃಷಿಯಲ್ಲಿ ಪ್ರಯೋಗಶೀಲತೆಯ ಬಗ್ಗೆ ಚರ್ಚಿಸುತ್ತದೆ. ಕೆಲವು ಔಷಧ ಕಂಪನಿಗಳು ಊರಲ್ಲಿ ಹಣದ ಆಮಿಷ ತೋರಿಸಿ ಔಷಯ ಬಳ್ಳಿಗಳನ್ನು ಬೆಳೆಸಿ, ಕೊನೆಗೆ ಏನೂ ಕೊಡದೆ ನಾಪತ್ತೆಯಾದ ಕಥೆಗಳು ಇಲ್ಲಿವೆ. ಇಂತಹ ವಿದ್ಯಮಾನಗಳ ಬಗ್ಗೆ ರೈತಾಪಿ ಗೆಳೆಯರ ಗುಂಪು ಚರ್ಚಿಸುತ್ತದೆ. ಮಾಹಿತಿ ವಿನಿಮಯವಾಗುತ್ತದೆ. ಯಲವಟ್ಟಿಯ ಮಲ್ಲಿಕಾರ್ಜುನ , ಹಾರನಹಳ್ಳಿಯ ಮಲ್ಲಿಕಾರ್ಜುನ, ಚಿಕ್ಕೊಳ್ಳಿಯ ಹನುಮಂತಪ್ಪ ಅಂತ ಗೆಳೆಯರ ಗುಂಪು ಸಾವಯವ ಕೃಷಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಇದರಿಂದ ಉಂಟಾಗುವ ಉಪಯೋಗದ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು. ಇವರೆಲ್ಲ ಕೆಲಸವನ್ನು ಹುಡುಕಿ ಬೆಂಗಳೂರಿಗೆ ಬರಲ್ಲ.
ನೀತಿ : ನಾಲ್ಕು ಮಂದಿ ಕೃಷಿಕರು ವೀಳೆಯ ಮೆಲ್ಲುವಾಗ, ತಮ್ಮ ವೃತ್ತಿಪರತೆಯ ಬಗ್ಗೆ ಚರ್ಚಿಸಬೇಕು.

Tuesday 8 September 2009

ಊರಿನ ಸಾಧಕರು, ಹೊಳೆ ಮತ್ತು ಶೇಂದಿ ಅಂಗಡಿ

ನಮ್ಮ ಸುತ್ತಮುತ್ತ ಸಾಧಕರು ತಮ್ಮ ಪಾಡಿಗೆ ಮೇಲೆ ಬರುತ್ತಲೇ ಇರುತ್ತಾರೆ. ಆದರೆ ಅವರಲ್ಲಿ ಬಹಳ ಮಂದಿ ಎಲೆ ಮರೆಯ ಕಾಯಿಯಂತೆ ಇರುತ್ತಾರೆ. ಈ ಸಲ ಪುತ್ತೂರಿಗೆ ಹೋಗಿದ್ದಾಗಲೂ ಅಂತಹ ಕೆಲವು ಮಂದಿಯನ್ನು ಕಂಡೆ. ಬಾಲ್ಯದಲ್ಲಿ ಕಡು ಬಡತನವನ್ನೇ ಹೊದ್ದುಕೊಂಡಿದ್ದವರು ಬಾಳೆ ಎಲೆಯ ವ್ಯಾಪಾರ ಶುರು ಮಾಡಿ ಗೆದ್ದು ಈವತ್ತು ದಿನಕ್ಕೆ ಇಪ್ಪತ್ತು ಸಾವಿರ ರೂ. ಸಂಪಾದನೆ ಮಾಡಿದವರಿದ್ದಾರೆ. ರಾಜಕೀಯಕ್ಕಿಳಿದು ಗಣ್ಯರಾದವರು ಇದ್ದಾರೆ. ಚೆನ್ನಾಗಿ ಓದಿ ಸಂಶೋಧಕರಾದವರಿದ್ದಾರೆ. ಕೃಷಿಯಲ್ಲಿ ಯಶಸ್ವಿಯಾದವರಿದ್ದಾರೆ. ಮನೆಯಲ್ಲಿ ಕೆಲಸಕ್ಕೆ ಬಾರದವನಂತಿದ್ದವರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಮತ್ತೆ ಕೆಲವರು ಮನೆಯ ತೋಟದ ಕೆಲಸದ ಜತೆಗೆ ಮಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಹೊಂದುತ್ತಿದ್ದಾರೆ. ಗೆಳೆಯನೊಬ್ಬ ಪಿಎಚ್ ಡಿ ಮಾಡುತ್ತಿದ್ದಾನೆ. ಗೆಳೆಯರು ಅನೇಕ ಮಂದಿ ಮದುವೆಯಾಗಿದ್ದಾರೆ. ಮತ್ತೆ ಹಲವರು ಹುಡುಕಾಟದಲ್ಲಿದ್ದಾರೆ..ಪ್ರತಿ ಸಲ ಹೋಗಿ ಬಂದಾಗಲೂ ಊರಿನ ಗುಂಗಿನಿಂದ ಹೊರ ಬರಲು ಬೇಗನೆ ಸಾಧ್ಯವಾಗುವುದೇ ಇಲ್ಲ. ಕಳೆದ ಸಲ ಹೋಗಿದ್ದಾಗ ಅರಳು ಹುರಿದಂತೆ ಮಾತನಾಡುತ್ತ, ಚುರುಕಿನಿಂದ ಓಡಾಡುತ್ತಿದ್ದ ಹಿರಿಯ ಬಂಧುಗಳೊಬ್ಬರು ಈ ಸಲ ಹಾಸಿಗೆ ಹಿಡಿದಿದ್ದಾರೆ. ಮಾತೇ ಇಲ್ಲ. ಅವರ ನೋವು ಈಗಲೂ ಹಿಂಡುತ್ತಿದೆ. ಮತ್ತೊಂದು ಕಡೆ ಗೆಳೆಯನೊಬ್ಬ ಅಪ್ಪನಾಗಿದ್ದ. ಮತ್ತೆ ಕೆಲವರಿಗೆ ಹೆಣ್ಣು, ಗಂಡು ಮಗು ಆಗಿರುವ ಬಗ್ಗೆ ಸಂಬಂಧಿಕರು ಸಮಾಚಾರ ತಿಳಿಸಿದರು. ಈ ಜಗತ್ತು ನೋಡ ನೋಡುತ್ತಿರುವಂತೆ ಬದಲಾಗುತ್ತಿರುವ ಪರಿ ಅಚ್ಚರಿ ಹೊತ್ತು ತರುತ್ತದೆ.
ಹೊಳೆ ಮತ್ತು ಶೇಂದಿ : ಅಡ್ಕಸ್ಥಳದಲ್ಲಿ ವಿಟ್ಲಕ್ಕೆ ಹೋಗುವ ಬಸ್ಸಿಗೆ ನಾನು ಮತ್ತು ಮಾವ ಕಾಯುತ್ತಿದ್ದೆವು. ಕಣ್ಣೆದುರಿಗೆ ಹೊಳೆ ಮೈದುಂಬಿ ಕೆಂಬಣ್ಣದಿಂದ ಹರಿಯುತ್ತಿತ್ತು. ಮಳೆ ಬಿಡದೆ ಸುರಿಯುತ್ತಿತ್ತು. ಜನರ ಓಡಾಟ ಕಡಿಮೆ ಇತ್ತು. ಹೊಳೆಯ ದಂಡೆಯಲ್ಲಿ ಒಂದು ಗುಡಿಸಲು ಇತ್ತು. ಅದರ ಸನಿಹ ಶೇಂದಿ ಅಂಗಡಿ ಎಂದು ದೊಡ್ಡಕ್ಷರದಲ್ಲಿ ಬರೆದಿದ್ದರು. ಮಳೆ-ಚಳಿಗೆ ಜನ ಗರಮ್ಮಾಗಲು ಶೇಂದಿಗೆ ಮೊರೆ ಹೋಗುತ್ತಾರೆ. ತೆಂಗಿನ ಗರಿಯಿಂದ ಹೊದೆಸಿದ ಮಾಡೇ ಶೇಂದಿ ಅಂಗಡಿಯ ಸೂರಾಗಿತ್ತು. ಒಳಗೆ ನೀರು ಸೋರದಂತೆ ಪಾಲಿಥೀನ್ ಹಾಳೆ ಹೊದೆಸಿದ್ದರು.ಆದರೆ ಎಲ್ಲರೂ ಅಲ್ಲಿಗೆ ಹೋಗುವುದಿಲ್ಲ. ಹೋಗಲೇಬೇಕು ಎಂದುಕೊಂಡವರು ಹೋಗದೆ ಬಿಡುವುದಿಲ್ಲ.
ನಾನು ಅಲ್ಲೇ ಎದುರಿದ್ದ ಗೂಡಂಗಡಿಗೆ ಹೋದೆ. ಊರಿನ ಗೆಣಸಿನ ಬುಟ್ಟಿ ಗಮನ ಸೆಳೆಯಿತು. ಕೇಜಿಗೆ ಎಷ್ಟು ಎಂದೆ. ಹತ್ತು ರೂಪಾಯಿ ಅಂದ. ಬೆಂಗಳೂರಿನಲ್ಲಿ ಇಷ್ಟು ಕಮ್ಮಿಗೆ ಇಂತಹ ಗೆಣಸು ಸಿಗದು ಎಂದು ಅನ್ನಿಸಿತು.

ಊರಿನಲ್ಲಿ ಮಳೆ, ಪೂಜೆ ಮತ್ತು ಭೋಜನದ ನಂತರದ ಹರಟೆ

ಆರ್ಲಪದವಿನ ಹತ್ತಿರ ನನ್ನ ಮಾವನ ಮನೆಗೆ ಹೋಗಿದ್ದೆ.
ಅಲ್ಲಿಯೇ ಹತ್ತಿರ ಮತ್ತೊಬ್ಬ ಬಂಧುಗಳ ಮನೆಯಲ್ಲಿ ಪೂಜೆ ಇತ್ತು. ಸುಮಾರು ಇಪ್ಪತ್ತೈದು ಮಂದಿ ಭಾಗವಹಿಸಿದ್ದರು. ದೊಡ್ಡ ಅಂಗಳ, ಹಳೆಯ ಕಂಬ, ತೊಲೆ, ವಿಶಾಲವಾದ ಹಜಾರ್, ಮಾಳಿಗೆ, ಮೆಟ್ಟಿಲುಗಳನ್ನು ಹೊಂದಿರುವ ಮನೆಯದು. ಹೊರಗೆ ಹೆಚ್ಚಿಗೆ ಬಿಡುವು ಕೊಡದೆ ಮಳೆ ಸುರಿಯುತ್ತಿತ್ತು. ದೇವರಕೋಣೆಯಲ್ಲಿ ಮಂತ್ರ ಪಠಣದೊಂದಿಗೆ ಪೂಜೆ ನಡೆಯುತ್ತಿತ್ತು. ಕತ್ತಲಿನ ದೇವರಕೋಣೆಯಲ್ಲಿ ಎಣ್ಣೆಯ ದೀಪ ಹದವಾಗಿ ಉರಿದು ಬೆಳಕು ಬೀರುತ್ತಿತ್ತು. ನಾನಾ ಆಕಾರದ ಆರತಿಗಳು, ಶಂಖ, ಜಾಗಟೆ, ತಾಳಗಳ ಹಿಮ್ಮೇಳ ಭಕ್ತಿದಾಯಕವಾಗಿತ್ತು. ಅಂತಹ ಸಂದರ್ಭ ಅಪರೂಪಕ್ಕೆ ಒಲಿದಿತ್ತು. ಆದ್ದರಿಂದ ಪ್ರತಿಯೊಂದನ್ನೂ ಚೆನ್ನಾಗಿ ಗಮನಿಸುತ್ತಾ ಮುಳುಗಿದೆ.
ದೇವರಕೋಣೆಗೆ ಹೋಗುವಾಗ ಅಂಗಿ ಕಳಚಿ ಇಡಲೇಬೇಕು ಎಂದು ಮನೆಯ ಹಿರಿಯರು ಕಿರಿಯರಿಗೆ ಸೂಚಿಸಿದರು. ತೀರ್ಥ, ಪ್ರಸಾದ ಸೇವಿಸಿದ ನಂತರ ಸವಿ ಭೋಜನ ಉಂಡೆ. ಉದ್ದನೆಯ ಜಗಲಿಯಲ್ಲಿ ಹರಟುತ್ತ ಭೋಜನ ಸವಿಯುವಾಗಲೂ ಹೊರಗೆ ಮಳೆ ತುಂತುರು ಹನಿಯುತ್ತಿತ್ತು. ಇದರಿಂದಾಗಿ ಊಟಕ್ಕೆ ಸ್ವಾದ ಹೆಚ್ಚಿದಂತೆ ನನಗೆ ಅನ್ನಿಸುತ್ತಿತ್ತು.
ಅನ್ನ, ಹಪ್ಪಳ, ಸಾರು, ಪಲ್ಯ, ಗೊಜ್ಜು, ದೀಗುಜ್ಜೆ ಸಾಂಬಾರು, ಪಾಯಸ, ಕೇಸರಿಭಾತು, ಮಿಕ್ಸ್ ಚರ್, ಮಜ್ಜಿಗೆ ಹುಳಿ, ಮಾವಿನ ಮಿಡಿಯ ಉಪ್ಪಿನಕಾಯ ಸವಿದು ಊಟವಾದ ನಂತರ ವರಾಂಡದಲ್ಲಿ ಎಲ್ಲರೂ ಕೂತು, ಅವರವರಿಗೆ ಬೇಕಾದಂತೆ ಪವಡಿಸುತ್ತ ಸುಮಾರು ಒಂದು ಗಂಟೆ ಹರಟೆ ಹೊಡೆದೆವು. ಯಾರೋ ಒಬ್ಬರು ಹಿರಿಯರು ವಂಶ ವೃಕ್ಷದ ಬಗ್ಗೆ ಮಾತೆತ್ತಿದರು.
ನಾವೆಲ್ಲ ವಿಶ್ವಾಮಿತ್ರ ಗೋತ್ರದವರು. ಹವ್ಯಕರು ಉತ್ತರದವರು. ಪೊಸಡಿಗುಂಪೆಗೆ ಬಂದು ನೆಲಸಿದವರು. ಇಡುಗುಂಜಿಯ ಗಣಪತಿ ನಮ್ಮ ದೇವರು ಎಂದರು. ತಮ್ಮ ವಂಶ ವೃಕ್ಷ ಕಂಡುಹಿಡಿಯಲು ನಡೆಸಿದ ಸಾಹಸವನ್ನು ನಾನಾ ರೀತಿಯಲ್ಲಿ ಬಣ್ಣಿಸಿದರು. ಕೆಲವರ ಮನೆಯಲ್ಲಿ ಪುರಾತನ ತಾಳೇಗರಿಯ ಓಲೆಗಳು ಇವೆ. ಅವುಗಳನ್ನು ಶೋಧಿಸಿದರೆ ವಂಶ ವೃಕ್ಷ ಸಿಗುವ ಸಾಧ್ಯತೆ ಇರುತ್ತವೆ. ಆದರೆ ತಾಳೆಗರಿ ಯಾಕೆ ಬೇಕೆಂದು ಬಿಸಾಡಿದವರೇ ಹೆಚ್ಚು. ಇನ್ನು ಕೆಲವರು ಮ್ಯೂಸಿಯಮ್ಮಿಗೆ ಕೊಟ್ಟಿದ್ದಾರೆ ಎಂದರು.
ಜೋರಾಗಿ ಬೀಳುತ್ತಿರುವ ಮಳೆಯಿಂದ ಸಂಭವನೀಯ ತೊಂದರೆಗಳ ಬಗ್ಗೆ ಚರ್ಚೆ ನಡೆಯಿತು. ಬೆಳೆ ಹಾನಿಯನ್ನು ತಪ್ಪಿಸುವ ಬಗ್ಗೆ, ಆಂಧ್ರ ಮುಖ್ಯಮಂತ್ರಿಯ ದುರ್ಮರಣ ಹಾಗೂ ನಂತರ ಸಂಭವಿಸಿದ ಸಾವು-ನೋವಿನ ಬಗ್ಗೆ ಸಹ ಮಾತಾಯಿತು. ಜತೆಗೆ ಕಾಫಿ ಸೇವನೆಯೂ ಸಾಂಗವಾಗಿ ನೆರವೇರಿತು. ಅಲ್ಲಿಗೆ ಕಾರ್ಯಕ್ರಮ ಮುಕ್ತಾಯದ ಘಟ್ಟ ತಲುಪಿತು ಎಂದರ್ಥ. ಎಲ್ಲ ನೆಂಟರೂ ಅವರವರ ಮನೆಗೆ ತೆರಳಿದರು. ಕೆಲವರು ಕಾರಿನಲ್ಲಿ, ಕೆಲವರು ಬೈಕಿನಲ್ಲಿ ಹಾಗೂ ಹಲವರು ಕಾಲ್ನಡಿಗೆಯಲ್ಲಿ ತೆರಳಿದರು.
ಅವರ ಸುಖವನ್ನು ಕಂಡು ಈ ಊರಿನ್ನು ಬಿಟ್ಟು ನಾಳೆ ಬೆಂಗಳೂರಿಗೆ ಹೋಗಲೇ ಬೇಕಲ್ವಾ..ಎಂದು ಅನ್ನಿಸಿತು.

Monday 7 September 2009

ಪುತ್ತೂರಿನ ವಿವೇಕಾನಂದ ಕಾಲೇಜು, ಮೆಸ್ ಮತ್ತು ಬೆಳೆಗಾರ..

ಮೊನ್ನೆ ಪುತ್ತೂರಿಗೆ ಹೋಗಿದ್ದೆ..ಸಮಯ ಸಿಕ್ಕದೆ ಕಿದೂರು, ಕಳತ್ತೂರಿಗೆ ಭೇಟಿ ನೀಡಲು ಆಗಲಿಲ್ಲ.
ಪುತ್ತೂರು ವಿವೇಕಾನಂದ ಕಾಲೇಜು ವಿಸ್ತಾರವಾಗಿ ಬೆಳೆದಿದೆ. ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಎಂಬಿಎ ಅಂತ ಅನೇಕಾನೇಕ ಕೋರ್ಸ್ ಗಳನ್ನು ಕಲಿತುಕೊಳ್ಳಲು ಸಾವಿರಾರು ವಿದ್ಯಾರ್ಥಿಗಳು ರಾಜ್ಯದ ನಾನಾ ಕಡೆಗಳಿಂದ ಬರುತ್ತಾರೆ. ಅವರಿಗೆಲ್ಲ ಊಟ, ಕಾಫಿ, ತಿಂಡಿಯ ವ್ಯವಸ್ಥೆ ಆಗಬೇಕಲ್ಲವೇ ?
ಹೀಗಾಗಿ ಕಾಲೇಜಿನ ಸುತ್ತಲೂ ಅನೇಕ ಮೆಸ್ ಗಳು ಹುಟ್ಟಿಕೊಂಡಿವೆ. ಹತ್ತು ವರುಶಗಳ ಹಿಂದೆ ತೀರಾ ಬಡತನದಲ್ಲಿದ್ದ ಜನ, ಈವಾಗ ಮೆಸ್ ಗಳನ್ನು ಕಟ್ಟಿಕೊಂಡು ಸಂಪಾದಿಸಿದ ದುಡ್ಡಿನಲ್ಲಿಯೇ ಮನೆ, ಬೈಕು ಮಾಡಿಕೊಂಡಿದ್ದಾರೆ. ಅವರಲ್ಲೀಗ ಹಣ ಓಡಾಡುತ್ತಿದೆ. ಈ ಬದಲಾವಣೆಗೆ ವಿವೇಕಾನಂದ ಕಾಲೇಜು ಕಾರಣ ಅಂತ ಅವರೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಅದೇ ಪುತ್ತೂರಿನ ಹಳ್ಳಿಗಳಲ್ಲಿ ಅಡಿಕೆ ಬೆಳೆಗಾರರ ಸ್ಥಿತಿ ಅಂತಹ ಬದಲಾವಣೆ ಕಂಡಿಲ್ಲ. ಬದಲಿಗೆ ಪ್ರತಿಯೊಬ್ಬ ಅಡಿಕೆ ಬೆಳೆಗಾರನೂ ತೀವ್ರ ತೊಂದರೆಯಲ್ಲಿದ್ದಾನೆ. ತನ್ನದೇ ಕೊನೆ, ಮಕ್ಕಳು ಇಂಥ ಸ್ಥಿತಿಗೆ ಬರಬಾರದು ಅಂತ ಭಾವಿಸುತ್ತಾನೆ. ಹಾಗಾದರೆ ಮುಂದೆ ನಿಮ್ಮ ಜಮೀನು ನೋಡಿಕೊಳ್ಳುವವರಾರು ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ.
ನಾವಂತೂ ವೃದ್ಧಾಶ್ರಮ ಸೇರಲು ನಿರ್ಧಾರ ಮಾಡಿದ್ದೇವೆ..ಎನ್ನುತ್ತಾರೆ ಅವರು..

ರೈತಾಪಿ ಮಿತ್ರನ ಹಿಂಬಾಲಿಸಿದ ಕಾರ್ ಡ್ರೈವರ್

ಚೆನ್ನಪಟ್ಟಣದ ಅರಳಾಳುಸಂದ್ರ ಬೆಂಗಳೂರಿನ ದಟ್ಟವಾದ ಪ್ರಭಾವಕ್ಕೆ ತುತ್ತಾಗಿರುವ ಪ್ರದೇಶಗಳಲ್ಲೊಂದು. ಬರ ಬೇರೆ ಕಾಡುತ್ತಿದೆ. ಗ್ರಾಮದ ನಿರುದ್ಯೋಗಿ ಯುವಕರೆಲ್ಲ ಸ್ವಂತ ಜಮೀನಿದ್ದರೂ, ಹಳ್ಳಿಯ ಸಹವಾಸ ಬೇಡವೆಂದು ರಾಜಧಾನಿಯನ್ನು ಸೇರುತ್ತಿದ್ದರೆ,ಹಸಿರು ಶಾಲು ಹೊದ್ದ ಗಿರೀಶ್ ಊರಿನಲ್ಲಿಯೇ ಇದ್ದುಕೊಂಡು ಹಿರಿಯರಿಂದ ಬಂದ ಜಮೀನನ್ನು ಸಾವಯವ ಪದ್ದತಿಯಲ್ಲಿ ಬೆಳೆಸುತ್ತಿದ್ದಾರೆ. ಅಕ್ಕ ಪಕ್ಕದ ರೈತರು ರಾಸಾಯನಿಕ ಗೊಬ್ಬರಗಳಿಗೆ ಮೊರೆಹೋಗಿದ್ದರೆ ಗಿರೀಶ ಅದನ್ನು ನಿಲ್ಲಿಸಿ ಕೆಲವು ಸಮಯವಾಗಿದೆ. ಹೊಲದ ಪಕ್ಕದಲ್ಲಿ ಜೀವಾಮೃತ ತಯಾರಿಸಿ ರಾಗಿ ಬೆಳೆದಿದ್ದಾರೆ. ( ೧೦ ಲೀಟರ್ ಗಂಜಲ, ೧೦ ಕಿಲೋ ಸೆಗಣಿ, ೨ ಕಿಲೋ ಬೆಲ್ಲ, ೨ ಕಿಲೊ ದ್ವಿದಳ ಧಾನ್ಯದ ಹಿಟ್ಟು, ನೀರು ಮತ್ತು ಮಣ್ಣನ್ನು ಮಿಶ್ರಣ ಮಾಡಿ ಜೀವಾಮೃತ ತಯಾರಿಸಬಹುದು) . ಈಗ ಅವರ ಬಂಜರು ಭೂಮಿಯಲ್ಲಿ ಎರೆಹುಳಗಳ ಸಂತತಿ ಹೆಚ್ಚಿದೆ. ನೆರೆಹೊರೆಯವರೆಲ್ಲ ಲೇವಡಿ ಮಾಡಿದರೂ ಗಿರೀಶ್ ಲೆಕ್ಕಿಸದೆ ಸಾವಯವಕ್ಕೆ ಮರಳಿದ್ದರು.
ಗಿರೀಶ್ ಅವರ ಕಥೆ ಕೇಳಿದ ರಾಜೇಶ ಎಂಬ ಅವರ ಮಿತ್ರ ನಗರದಿಂದ ತನ್ನೂರಿಗೆ ಹಿಂತಿರುಗಿದ್ದಾರೆ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಏಳೆಂಟು ವರುಶ ದುಡಿದು, ಬಾಸ್ ಬೈಗುಳ ತಿಂದು ಹೈರಾಣಾಗಿದ್ದ ರಾಜೇಶ ಇದೀಗ ಗುತ್ತಿಗೆಗೆ ಬೇರೆಯವರ ಹೊಲದಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅದೂ ಸಾವಯವ ಪದ್ದತಿಯಲ್ಲಿ. ಇಲ್ಲಿ ಕೆಲಸ ಸುಲಭವಲ್ಲವಾದರೂ, ಮನಸ್ಸಿಗೆ ನೆಮ್ಮದಿ ಇದೆ. ಇಲ್ಲಿ ನನಗೆ ನಾನೇ ಬಾಸ್..ಎನ್ನುತ್ತಾರೆ ರಾಜೇಶ್.
ನೆರೆಹೊರೆಯವರೆಲ್ಲ ನೀರಿಲ್ಲ, ನೀರೇ ಇಲ್ಲ ಎಂದು ಹಪಹಪಿಸುತ್ತಿರುವ ಸಂದರ್ಭದಲ್ಲಿ ಗಿರೀಶ್ ಉಪಾಯ ಮಾಡಿದರು. ಇವರ ಜಮೀನಿನ ಪಕ್ಕದಲ್ಲಿ ಬೆಟ್ಟವೊಂದಿದೆ. ಮಳೆ ಬಂದಾಗ ನೀರು ಇಳಿದು ವ್ಯರ್ಥವಾಗಿ ಹೋಗುತ್ತದೆ. ಆದರೆ ಗಿರೀಶ್ ತಮ್ಮ ಹೊಲದಲ್ಲಿ ದೊಡ್ಡ ಹೊಂಡವನ್ನು ತೋಡಿದರು. ಬೆಟ್ಟಕ್ಕೆ ಬೀಳುವ ಮಳೆನೀರು ಹೊಂಡದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಏನಾಗಿದೆ ಎಂದರೆ ಹೊಂಡದ ಸಮೀಪ ಸ್ವಲ್ಪ ತಗ್ಗಿನಲ್ಲಿರುವ ಬಾವಿಯಲ್ಲಿ ಅಂತರ್ಜಲದ ಪ್ರಮಾಣದಲ್ಲಿ ಏರಿಕೆಯಾಗಿದೆ. ಗಿರೀಶ್ ಗೆ ಏನಂತೆ ? ಅವರಿಗೆ ನೀರಾವರಿ ಇದೆ. ಸಾವಯವ ಮಾಡಬಹುದು ಎಂದು ಇತರ ರೈತರು ಹೇಳುತ್ತಾರೆ. ಆದರೆ ಬೆಟ್ಟದ ಸಮೀಪ ಮಳೆನೀರಿನ ಸಂಗ್ರಹದ ಹೊಂಡ ಮಾಡಿರುವುದರಿಂದ ಬಾವಿಯಲ್ಲಿ ಅಂತರ್ಜಲ ಹೆಚ್ಚಿ ಉಪಯೋಗವಾಗಿರುವ ಸಂಗತಿ ಗಿರೀಶ್ ಅನುಭವಕ್ಕೆ ಬಂದಿದೆ. ಆದರೂ ಈ ಸಲ ಬರದ ತೀವ್ರತೆಯ ಪರಿಣಾಮ ಬಿಸಿ ತಟ್ಟಿದೆ. ಡೀಸೆಲ್ ಪಂಪಿನಲ್ಲಿ ನೀರೆತ್ತಬೇಕು. ಬೋರ್ ವೆಲ್ ಇಲ್ಲ. ಇಂಗು ಗುಂಡಿಯಲ್ಲಿಯೂ ನೀರಿಲ್ಲ. ಇಂತಹ ಬರವನ್ನೂ ಎದುರಿಸುವ ಬಗೆ ಹೇಗೆ ಎಂಬುದನ್ನು ಗಿರೀಶ್ ಕಂಡುಕೊಳ್ಳಬೇಕಾಗಿದೆ.
ಹೈಸ್ಕೂಲ್ ಮೆಟ್ಟಿಲು ಹತ್ತದಿರುವ ಗಿರೀಶ್ ಸಾವಯವಕ್ಕೆ ಸಂಬಂಧಿಸಿದ ತರಬೇತಿಯನ್ನು ಪಡೆದು ಬಂದಿದ್ದಾರೆ. ಅವರ ಮನೆಯ ಟ್ರಂಕ್ ಪೆಟ್ಟಿಗೆಯಲ್ಲಿ ಸಾವಯವ ಕುರಿತ ಕಿರು ಟಿಪ್ಪಣಿಗಳಿವೆ. ಜತೆಗೆ ಸ್ವಾನುಭವದಿಂದ ಕಲಿಯುತ್ತಿದ್ದಾರೆ. ನೀರಾ ಇಳಿಸುತ್ತಿದ್ದಾರೆ. ಉದ್ಯೋಗದಲ್ಲಿ ಕುಶಲತೆ ಸಾಧಿಸುವುದು ಎಂದರೆ ಇದುವೇ ಅಲ್ಲವೇ ?

Tuesday 1 September 2009

ಆರು ದಿನಗಳ ವಿರಾಮ

ನಮಸ್ಕಾರಗಳು.
ಈವತ್ತು ರಾತ್ರಿ ಕಾಸರಗೋಡು ಜಿಲ್ಲೆಯ ನನ್ನೂರಿಗೆ ಹೋಗುತ್ತೇನೆ. ಕಿದೂರು, ಕಳತ್ತೂರಿಗೆ, ಪುತ್ತೂರಿಗೆ ಭೇಟಿ ನೀಡುತ್ತೇನೆ. ಸೆ.೭ಕ್ಕೆ ವಾಪಸ್ ಬರುತ್ತೇನೆ. ನಂತರ ಎಂದಿನಂತೆ ನುಡಿಚೈತ್ರ ಬರಲಿದೆ.
ಇತಿ
ನಿಮ್ಮ ಕೇಶವ ಪ್ರಸಾದ್ ಬಿ ಕಿದೂರು.

ಹುಳಿಯಾಗಿದ್ದರೆ ಕಾಯಿ, ಬಾಲ್ಯದ ನೆನಪು ಜಾಸ್ತಿ...

ಚಿಕ್ಕವನಿದ್ದಾಗ ನೆಕ್ಕರೆ ಎಂಬ್ ಹೆಸರಿನ ಮಾವಿನ ಕಾಯಿ ಎಂದರೆ ತುಂಬಾ ಪ್ರೀತಿಯಿಂದ ತಿನ್ನುತ್ತಿದ್ದೆ.
ಹುಳಿ ಮಾವಿನ ಕಾಯಿ, ಪೇರಳೆ ಕಾಯಿ, ತೆಂಗಿನ ಕಾಯಿಯ ಚೂರು, ಹಲಸಿನ ಹಪ್ಪಳ, ಲಿಂಬೆ ಹಣ್ಣು, ನೆಲ್ಲಿಕಾಯಿ, ನೇರಳೆ ಹಣ್ಣು, ಹಸಿ ನೆಲಗಡಲೆ ಎಂದರೆ ತಿನ್ನದೆ ಬಿಡುತ್ತಿರಲಿಲ್ಲ. ಹುಳಿ ಮಾವಿನ ಕಾಯಿಯ ಸೊನೆಯನ್ನು ತೆಗೆದು, ಉಪ್ಪು ಮತ್ತು ಮೆಣಸು ಬೆರೆಸಿ ತಿನ್ನುವಾಗ ಜಗತ್ತೇ ಮರೆತು ಹೋಗುತ್ತಿತ್ತು. ಈಗಲೂ ನಿಂಬೆ ಹಣ್ಣು, ನೆಲ್ಲಿ, ಹುಳಿ ಮಾವಿನ ಕಾಯಿ ತಿನ್ನೋದು ಅಂದರೆ ಬೇರೇನೂ ಬೇಕಾಗುವುದಿಲ್ಲ. ಹುಳಿಗೆ ಅಂಥ ತಾಕತ್ತಿದೆ. ಹುಳಿಯಾದ ನೆಲ್ಲಿ ತಿನ್ನುವಾಗ ಹಲ್ಲಿಗೆ ನಾಟುವುದಿಲ್ಲವೇ ? ಎಂದು ಕೆಲವರು ಹೇಳುತ್ತಾರೆ. ಆದರೆ ಇದುವರೆಗೆ ಹಾಗೆ ನನಗನ್ನಿಸಿಲ್ಲ. ನನಗಂತೂ ಹುಳಿಯಾಗಿರುವ ಕಾಯಿ ಎಂದರೆ ಬಾಲ್ಯದ ನೆನಪುಗಳನ್ನು ಚಪ್ಪರಿಸಲು ಅನುವು ಮಾಡಿಕೊಡುವ ಮಹತ್ವದ ಪದಾರ್ಥಗಳೂ ಆಗಿವೆ.
ಹೀಗೊಂದು ಟಿಪ್ಸ್ : ಅವರೇನೋ, ಪತ್ರಿಕೆಯವರು ತಮ್ಮ ಫೋಟೊ ಹಾಕುತ್ತಾರೆ ಎಂದು ಸಾವಯವ ಬೇಸಾಯ ಕೈಗೊಳ್ಳಲಿಲ್ಲ. ಸ್ನೇಹಿತರು, ಅಕ್ಕಪಕ್ಕದವರು ಮಾಡಿದ್ದನ್ನು ಕಂಡು ತಾವು ಕೂಡ ಅನುಸರಿಸಿದರು. ಅಥವಾ ತರಬೇತಿ ಪಡೆದು ಮಾಡುತ್ತಾರೆ.
ಇವರು ನಾವು ಹೋದಾಗ ತಮ್ಮದೇ ಧಾಟಿಯಲ್ಲಿ ವಿವರಿಸುತ್ತಾರೆ. ಆದರೆ, ಒಂದು ಸಲ ಪತ್ರಿಕೆಯಲ್ಲಿ ಅವರ ಚಿತ್ರ ಪ್ರಕಟವಾದ ನಂತರ ಅವರಲ್ಲೊಂದು ಬದಲಾವಣೆ ತಣ್ಣಗೆ ಆಗಿ ಬಿಡುತ್ತದೆ.
ನಾನಿನ್ನು ಸಾರ್ವಜನಿಕ ವ್ಯಕ್ತಿ, ಪತ್ರಿಕೆಯವರು ಬಂದಾಗ ಏನಾದರೂ ಹೇಳಬೇಕು ಎಂಬ ಭಾವನೆ ಉಂಟಾಗುತ್ತದೆ. ಮಾತನಾಡುತ್ತ ಕೇಳದೇ ಇದ್ದರೂ ಫೋಟೋಗೆ ಫೋಸು ಕೊಡುವಂತೆ ಇರುತ್ತಾರೆ. ಎಲ್ಲ ಬಲ್ಲವರಂತೆ ಇರಲು ಬಯಸುತ್ತಾರೆ. ಆದರೆ ಇವರನ್ನು ಒಪ್ಪಿಕೊಳ್ಳಬಹುದು. ಮಾನವ ಸಹಜ ಗುಣಗಳಿವು ಎನ್ನಬಹುದು. ಆದರೆ ಇನ್ನು ಕೆಲವರಿದ್ದಾರೆ.
ತಮ್ಮಿಂದಲೇ ಪತ್ರಿಕೆಗೆ ಹೊಸ ಸುದ್ದಿ ಸಿಕ್ಕಿ ಉಪಕಾರ ಆಯಿತು ಎಂದು ಭಾವಿಸುತ್ತಾರೆ. ಪತ್ರಿಕೆಯ ಪ್ರತಿನಿಧಿಗಳಿಗೇ ಪತ್ತೆದಾರಿ ವರದಿ ಬರೆಯಲು ಹೇಳಿಕೊಡುವಂತೆ ಫೋಸು ಕೊಡುತ್ತಾರೆ. ಇವರ ಸಹವಾಸ ಕಿರಿಕಿರಿ ಆಗುತ್ತದೆ.