Saturday, 18 February 2012

ಎಲ್ಲವೂ ದೇವೇಚ್ಛೆ : ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ

ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿಯವರ 1930ರ ಆದಿಯಿಂದಲೇ ಆರಂಭವಾಗುತ್ತದೆ. ಆಗ ಮಠದ ಸ್ವಾಮೀಜಿಗಳಾಗಿದ್ದ ಶ್ರೀ. ಉದ್ಧಾನ ಶಿವಯೋಗಿಯವರು ವಿರಕ್ತಾಶ್ರಮದ ಪರಂಪರೆಯನ್ನು ಮುನ್ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಮೂರನೇ ವರ್ಷ ಪದವಿಯಲ್ಲಿದ್ದ ಶಿವಣ್ಣ ( ಆಗ ಶಿವ ಕುಮಾರ ಸ್ವಾಮೀಜಿಯವರನ್ನು ಕರೆಯುತ್ತಿದ್ದುದು ಹೀಗೆ) ಅವರನ್ನು ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದರು. ನಂತರ ಸ್ವಾಮೀಜಿ ಪವಾಡ ಸದೃಶ ರೀತಿಯಲ್ಲಿ ಮಠವನ್ನು ಅಭಿವೃದ್ಧಿಪಡಿಸಿ, ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈವತ್ತು ಮಠ 128 ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತದೆ. ೮,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಅಶನ,ವಸನ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ನೀಡುತ್ತಿದೆ.
ಆದರೆ ಈ ಸುದೀರ್ಘ ಯಶಸ್ಸಿನ ಪಯಣ, ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ಸ್ವಾಮೀಜಿಯವರು ಈಗಲೂ ವಿನಮ್ರ ಭಾವದಿಂದ ಇದ್ದಾರೆ. " ಎಲ್ಲವೂ ದೇವೇಚ್ಛೆ’ ಎನ್ನುತ್ತಾರೆ. " ನಾನು ನನ್ನ ಪೂಜ್ಯ ಗುರುಗಳು ಆರಂಭಿಸಿದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನಷ್ಟೆ ಮಾಡಿದ್ದೇನೆ ಎನ್ನುವ ಪ್ರಬುದ್ಧ ಮಾತು ಸ್ವಾಮೀಜಿಯವರದ್ದು. ಅವರ ಈ ಸರಳತೆಯನ್ನು ಇಷ್ಟ ಪಡುವ ಅನೇಕ ಮಂದಿ, ಸ್ವಾಮೀಜಿಯವರನ್ನು ನಡೆದಾಡುವ ದೇವರು ಅಂತ ಗೌರವಿಸುತ್ತಾರೆ. ( ಮುಂದುವರಿಯುವುದು)

Friday, 17 February 2012

ನಿಜವಾದ ಕರ್ಮಯೋಗಿ..

ಎಷ್ಟೋ ಸಲ ಮನಸ್ಸಿಗೆ, ಶರೀರಕ್ಕೆ ಜಡತ್ವ ಆವರಿಸಿದಾಗ ನಮ್ಮ ನಾಡಿನ ಹೆಮ್ಮೆಯ ಶತಾಯುಷಿ ಕರ್ಮಯೋಗಿಯನ್ನು ನೆನಪಿಸಿಕೊಳ್ಳುತ್ತೇನೆ. ಅವರು ಯಾರೆಂಬುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು.. ನಿಮ್ಮ ಊಹೆ ನಿಜ. ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ. ಅವರ ಬಗ್ಗೆ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲ ವರ್ಷಗಳ ಹಿಂದೆ ಲೇಖನ ಪ್ರಕಟವಾಗಿತ್ತು. ಅದರ ಸಾರವನ್ನು ನಿಮ್ಮ ಮುಂದಿಡುತ್ತೇನೆ.
- ಸಿದ್ಧ ಗಂಗಾ ಮಠದ ಶ್ರೀ. ಶಿವಕುಮಾರ ಸ್ವಾಮೀಜಿಯವರು ಯಾವುದೇ ಮತಕ್ಕಿಂತ ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ಅವರು ಬಡವರು, ಅನಾಥರಿಗೆ ಜ್ಞಾನದ ಬಾಗಿಲುಗಳನ್ನು ತೆರೆದರು. ಜ್ಞಾನದ ಜತೆಗೆ ಅಶನ, ವಸತಿ ಒದಗಿಸಿದರು. ಅವರ ಮಠದಲ್ಲಿ ಕಂಡು ಬಂದ ಚಿತ್ರಣವಿದು.
"ಬುದ್ಧಿ, ಸರಕಾರಿ ಅಧಿಕಾರಿಯೊಬ್ಬರು ನಿಮ್ಮನ್ನು ಭೇಟಿಯಾಗ ಬಯಸುತ್ತಿದ್ದಾರೆ’ ವ್ಯಕ್ತಿಯೊಬ್ಬರು ಸ್ವಾಮೀಜಿಯವರ ಕಿವಿಯ ಬಳಿ ಮೆಲುದನಿಯಲ್ಲಿ ತಿಳಿಸುತ್ತಾರೆ. " ಬುದ್ಧಿ, ನಮ್ಮ ಕಾಲೇಜಿಗೆ ನೀವು ಭೇಟಿ ಕೊಟ್ಟರೆ ಸಂತಸವಾಗುತ್ತದೆ ಎನ್ನುತ್ತಾರೆ ಅಲ್ಲಿಗೆ ಬಂದಿರುವ ವಿದ್ಯಾರ್ಥಿಗಳ ಗುಂಪು, " ಬುದ್ಧಿ, ಜೇವರ್ಗಿಯಿಂದ ಒಂದಷ್ಟು ಮಂದಿ ಬಂದಿದ್ದು, ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ, ಬುದ್ಧಿ, ಈವತ್ತು ಪ್ರಸಾದಕ್ಕೆ ಏನು ಮಾಡೋಣ, ಅಂತ ಮಠದ ಅಡುಗೆಯವರು ಭಿನ್ನವಿಸಿಕೊಳ್ಳುತ್ತಾರೆ.
ಕಡತಗಳನ್ನು ಓದುತ್ತ ಮೆಲ್ಲನೆ ತಲೆಯನ್ನೆತ್ತಿ, ಪ್ರೀತಿಯಿಂದ ಮಾತನಾಡಿಸುವ ಸ್ವಾಮೀಜಿ, ಎಲ್ಲರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ. " ಅಧಿಕಾರಿಗೆ ಕಚೇರಿಯಲ್ಲಿ ಕುಳ್ಳಿರಲು ಹೇಳುತ್ತಾರೆ. ಎಲ್ಲ ಸರಿ ನಾನೀಗ ಬರುತ್ತೇನೆ. ವಿದ್ಯಾರ್ಥಿಗಳೇ ನೀವೆಲ್ಲರೂ ಚೆನ್ನಾಗಿ ಓದುತ್ತಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮ ಆಯ್ಕೆಯ ವಿಷಯದಲ್ಲಿ ಕಲಿಯಿರಿ, ಇನ್ನು ಜೇವರ್ಗಿಯಿಂದ ಬಂದಿರುವವರನ್ನು ಭೇಟಿಯಾಗೋಣ, ಯಾಕೆಂದರೆ ಅವರು ಬಹುದೂರ ಪ್ರಯಾಣ ಬೆಳೆಸಿ ಮನೆ ಸೇರಬೇಕಾಗಿದೆ..’ ಎನ್ನುತ್ತಾರೆ ಸ್ವಾಮೀಜಿ.. 99ರ ಇಳಿ ವಯಸ್ಸಿನಲ್ಲಿ ಸ್ವಾಮೀಜಿಯವರ ನಿತ್ಯದ ಚಟುವಟಿಕೆಗಳ ಎರಡು ನಿಮಿಷಗಳಿವು. 99ರ ವಯಸ್ಸಿನಲ್ಲಿಯೂ ಅವರು ದಿನಕ್ಕೆ 18 ಗಂಟೆ ದುಡಿಯುತ್ತಾರೆ ! ಈಗ ಅವರ ವಯಸ್ಸು 104 ( ಮುಂದುವರಿಯುವುದು)

ಆಂದೋಲನ ಎಂಬ ಪತ್ರಕರ್ತರ ಗರಡಿ ಮನೆಯಲ್ಲಿ !

ನನ್ನ ಪ್ರೀತಿಯ ಸ್ನೇಹಿತರೇ,
ಇದು ಕೇವಲ ನನ್ನ ಅನಿಸಿಕೆಯಲ್ಲ, ಹತ್ತಾರು ವರ್ಷಗಳ ಹಿಂದಿನಿಂದಲೇ ಮೈಸೂರಿನ ಆಂದೋಲನದ ಬಗ್ಗೆ ನೂರಾರು ಮಂದಿ ಪತ್ರಕರ್ತರು ಹೇಳಿರುವ ಮಾತು. ಈವತ್ತಿಗೂ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಆಂದೋಲನದಲ್ಲಿ ಪತ್ರಿಕೋದ್ಯಮದ ಪಟ್ಟುಗಳನ್ನು ಕಲಿತು ಯಶಸ್ವಿ ಕರಿಯರ್ ನಡೆಸುತ್ತಿರುವವರು ಇದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯಲ್ಲಿ ದಶಕದ ಹಿಂದೆ ವರದಿಗಾರನಾಗಿ ಸೇರ್ಪಡೆಯಾಗಿದ್ದೆ. ಆಗ ಅಲ್ಲಿ ಹಿರಿಯರಾದ ಓಂಕಾರ್, ಚಿನ್ನಸ್ವಾಮಿ ವಡ್ಡಗೆರೆ, ವೀರಭದ್ರಪ್ಪ ಬಿಸ್ಲಳ್ಳಿ, ಕುಂದೂರು ಉಮೇಶ ಭಟ್ಟ, ಕೋದಂಡರಾಮ, ಶಶಿ ಕುಮಾರ್ ಮೊದಲಾದ ಸಹೋದ್ಯೋಗಿಗಳು ಸಿಕ್ಕರು. ನಮ್ಮ ತಂಡ ವಿಟಮಿನ್ "ಎಂ’ನಿಂದ ಬಳಲುತ್ತಿದ್ದರೂ, ಉತ್ಸಾಹಕ್ಕೆ ಯಾವುದೇ ಕೊರತೆ ಇರಲಿಲ್ಲ. ಯಾವುದೇ ಕಾಲೇಜಿನಲ್ಲಿ ಕಲಿಸದ ಪತ್ರಿಕೋದ್ಯಮದ ಪಾಠಗಳನ್ನು ನನಗೆ ಆಂದೋಲನ ಕಲಿಸಿತು ಅಂತ ನೆನೆಯುತ್ತೇನೆ. ಅದಕ್ಕಾಗಿ ಪತ್ರಿಕೆಯ ಸಂಪಾದಕ, ಮಾಲೀಕರಾದ ರಾಜ ಶೇಖರಕೋಟಿಯವರಿಗೆ ಚಿರಋಣಿಯಾಗಿದ್ದೇನೆ.
ಅಲ್ಲಿವರೆಗೆ ಪತ್ರಿಕೆಗಳಿಗೆ ಸಣ್ಣ ಪುಟ್ಟ ಬರಹ, ಕತೆ, ಕವನ ಅಂತ ಬರೆದುಕೊಂಡಿದ್ದ ನನಗೆ, ಅದಕ್ಕೂ ಪತ್ರಿಕಾ ಬರವಣಿಗೆಗೂ ಎಷ್ಟು ವ್ಯತ್ಯಾಸ ಇದೆ ಎಂಬುದು ಮೊದಲ ದಿನವೇ ಮನವರಿಕೆಯಾಯಿತು. ಆಂದೋಲನಕ್ಕೆ ನಿತ್ಯ ನೂರಾರು ಪತ್ರಿಕಾ ಪ್ರಕಟಣೆಗಳು ಬರುತ್ತಿದ್ದವು. ಅವುಗಳನ್ನು ಆಯ್ದು ಹೊಸಬರಿಗೆ ಕೊಡುತ್ತಿದ್ದರು. ನಂತರ ಅದನ್ನು ಸುದ್ದಿಯಾಗಿಸಿ ಹಿರಿಯ ಸಹೋದ್ಯೋಗಿಗಳಿಗೆ ಕೊಡಬೇಕು. ಅವರು ತಿದ್ದಿ ಕೊಡುತ್ತಿದ್ದರು. ಆಗ ಆಂದೋಲನದಲ್ಲಿ ಕ್ವಾಲಿಟಿ ಕಂಟ್ರೋಲ್ ಚೆನ್ನಾಗಿತ್ತು. ತಪ್ಪಿದಾಗ ಬೈಗುಳ ಕೂಡ ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಹಿರಿ-ಕಿರಿಯರೆನ್ನದೆ ಕಾಲೆಳೆಯುವುದು, ಹಾಸ್ಯ ಚಟಾಕಿ ಸಿಡಿಸುವುದು, ಒಟ್ಟಿಗೆ ಚಾ ಕುಡಿಯಲು ಹೋಗೋದು. ಹಗಲು-ರಾತ್ರಿ ಭೇದವಿಲ್ಲದೆ ಸಾದ್ಯಂಗವಾಗಿತ್ತು. ಆದರೆ ಸಾಯಂಕಾಲ ನಿತ್ಯ ಕೋಟಿಯವರು ಕಚೇರಿಗೆ ಬರುತ್ತಿದ್ದಂತೆ ಕಚೇರಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ವಾತಾವರಣ ನಿರ್ಮಾಣವಾಗುತ್ತಿತ್ತು. ಅಂತಹ ಭಯ, ಭಕ್ತಿ,, ಗೌರವದ ಪರಾಕಾಷ್ಠೆ. ಅವರು ಮನೆಗೆ ಹೋದೊಡನೆ ಮತ್ತೆ ಗಲಗಲ..
ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಸಂದರ್ಶನ ಮುಗಿಸಿ ಆಂದೋಲನಕ್ಕೆ ಸೇರಿದ ನಂತರ ಕೋಟಿಯವರೊಡನೆ ಮುಖಾಮುಖಿ, ಮಾತುಕತೆಗೆ ಆರು ತಿಂಗಳು ಬೇಕಾಯಿತು. ಅದೊಂದು ದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಕೋಟಿಯವರೇ ಮುಖ್ಯ ಅತಿಥಿಗಳಾಗಿದ್ದರು. ಓಂಕಾರ್ ನನ್ನಲ್ಲಿ ವರದಿಗಾರಿಕೆಗೆ ಹೋಗಿ ಬನ್ನಿ ಅಂದರು. ಸರಿ ಅಂತ ಪೆನ್ನು, ಕಾಗದ ತಕ್ಕಂಡು ಹೊರಟೆ. ಕಾರ್ಯಕ್ರಮದಲ್ಲಿ ಸಂಪಾದಕರೇ ಇದ್ದಾರೆ. ಹುಷಾರಾಗಿರಬೇಕು. ಕಾಪಾಡು ತಂದೇ ಅನ್ನುತ್ತಾ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಜನ ಜಂಗುಳಿ ಇತ್ತು. ಕೋಟಿಯವರು ತಮ್ಮ ಭಾಷಣ ಮುಗಿಸಿ ಕಚೇರಿಗೆ ಹೊರಟರು. ನಾನು ಜಂಗುಳಿಯ ನಡುವೆ ಅವರ ಬಳಿ ಬಂದು ಸಾರ್ ನಮಸ್ತೆ ಅಂದೆ. ಅವರೂ ನಮಸ್ಕಾರ ಅಂದ್ರು. ಬಹುಶಃ ಅವರ ಯಾರೋ ಅಭಿಮಾನಿ ಇರಬೇಕು ಅಂತ ಅಂದು ಕೊಂಡರೇನೋ, ಸಾರ್ ಆಂದೋಲನದಲ್ಲಿ ನಾನು ಕೆಲ್ಸ ಮಾಡುತ್ತಿದ್ದೇನೆ ಅಂದೆ. ಆಗ ತಕ್ಷಣ ಕೋಟಿಯವರು, ಸರಿ..ಸರಿ..ಆಫೀಸಿಗೆ ಹೋಗಿ..ಅಂದ್ರು.
ಕಚೇರಿಗೆ ಬಂದು ಓಂಕಾರ್ ಬಳಿ ನಡೆದ ಸಂಗತಿಯನ್ನು ಹೇಳಿದೆ. ಎಲ್ಲರೂ ಕೇಳಿಸಿಕೊಂಡರು. ದೊಡ್ಡ ಜೋಕಾಗಿ ಕಾಮಿಡಿ ಟೈಮ್ ಆಯ್ತು.
ಆದರೆ ಮರು ದಿನ ಅಚ್ಚರಿ ಕಾದಿತ್ತು. ನನ್ನ ವರದಿ ಕೋಟಿಯವರಿಗೆ ಇಷ್ಟವಾಗಿತ್ತು ಅಂತ ಕಾಣುತ್ತೆ. ಮತ್ತೊಂದು ಕಾರ್ಯಕ್ರಮದ ವರದಿಗೆ ನನ್ನನ್ನೇ ಕರೆದರು. ಅವರ ಜತೆಗೆ ಕಾರಿನಲ್ಲಿ ಸುತ್ತೂರು ಸಮೀಪ ನಡೆದ ಎನ್‌ಎಸ್‌ಎಸ್ ಶಿಬಿರಕ್ಕೆ ತೆರಳಿದೆ. ಅಲ್ಲಿ ನಡೆದ ಕಾರ್ಯಕ್ರಮದ ವರದಿ ಮಾಡಿದೆ. ಅಷ್ಟರಲ್ಲಿ ಕೋಟಿಯವರ ಪ್ರಚಂಡ ದುಡಿಮೆ, ಏಕಾಗ್ರತೆ, ಪತ್ರಿಕೆ ಕಟ್ಟಿದ ಸಾಹಸ, ಯಶೋಗಾಥೆಯ ಪರಿಚಯವಾಗಿತ್ತು.
ಅದೊಂದು ದಿನ ರಾಜ ಶೇಖರ ಕೋಟಿಯವರ ಜತೆಗೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಭಾವಸಾರ್ ಕ್ಷತ್ರಿಯ ಸಮಾಜದವರ ಕಾರ್ಯಕ್ರಮ. ಅಲ್ಲಿ ಶ್ವೇತಾ ಟೇಂಮ್ಕರ್ ಎಂಬ ಯುವ ಪೈಲಟ್‌ಗೆ ಸನ್ಮಾನ ಸಮಾರಂಭ ನಡೆಯಿತು. ಶ್ವೇತಾ ಟೇಮ್ಕರ್ ಎಳೆಯ ವಯಸ್ಸಿನಲ್ಲಿಯೇ ಪೈಲಟ್ ಆಗಿ ಗಮನ ಸೆಳೆದಿದ್ದರು. ಕಾರ್ಯಕ್ರಮ ಮಿಗಿದ ತಕ್ಷಣ ಕೋಟಿಯವರು ನನ್ನನ್ನು ಕರೆದು, ಟೇಮ್ಕರ್ ಬಗ್ಗೆ ವಿಶೇಷ ವರದಿ ಬರೆಯಿರಿ ಅಂದರು. ಸರಿ ಅಂದು ಮರು ದಿನವೇ ಟೇಮ್ಕರ್ ಅವರ ಮನೆಗೆ ತೆರಳಿ ಸಂದರ್ಶನ ಮಾಡಿ ಬರೆದೆ. ಮುಂದೇನಾಯಿತು ಅಂತ ಮುಂದಿನ ಭಾಗದಲ್ಲಿ ಹೇಳುತ್ತೇನೆ...ನಿರೀಕ್ಷಿಸಿ..!

Wednesday, 15 February 2012

ಅಂತೂ ಆಂದೋಲನಕ್ಕೆ ಸೇರಿದ ಕಥೆ !

ಹಾಯ್ ಫ್ರೆಂಡ್ಸ್,
ನೀವೆಲ್ಲರೂ ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಲ್ಲಿತ್ತು !
ಅದನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ನಿಜವಾಗಿಸಿದ್ದಕ್ಕೆ ಥ್ಯಾಂಕ್ಸ್. ಹಾಗಾದರೆ ಮೈಸೂರಿನಲ್ಲಿ ದಶಕದ ಹಿಂದೆ ಆಂದೋಲನ ದಿನ ಪತ್ರಿಕೆಯಲ್ಲಿ ಕಳೆದ ದಿನಗಳು ಹೇಗಿತ್ತು ಅಂತ ಬರೆಯುತ್ತೇನೆ.

ಆಗ ಮಾಧ್ಯಮ ವಲಯದಲ್ಲಿ ಈವತ್ತಿರುವಷ್ಟು ಉದ್ಯೋಗಾವಕಾಶಗಳು ಇರಲಿಲ್ಲ. ವಾರ್ತಾ ವಾಹಿನಿಗಳು ಬೆಳೆದಿರಲಿಲ್ಲ. ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಎ ಓದಿದ ನಂತರ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಎಸ್ಸೆಸ್ಸೆಲ್ಸಿಯಲ್ಲಿದ್ದಾಗಲೇ ಚುಟುಕ, ಮಕ್ಕಳ ಕಥೆ, ಕಿರು ಬರಹಗಳನ್ನು ಬರೆಯುತ್ತಿದ್ದೆ. ಆಗೊಮ್ಮೆ, ಈಗೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಬಾಲ್ಯದ ಈ ಹವ್ಯಾಸವೇ ಪತ್ರಿಕೋದ್ಯಮಕ್ಕೆ ಕರೆದೊಯ್ಯುತ್ತದೆ ಎಂದು ಅನ್ನಿಸಿರಲಿಲ್ಲ. ನನ್ನ ಸೋದರ ಮಾವ ಶಂಕರನಾರಾಯಣ ಭಟ್, ಹೊಸದಿಗಂತಕ್ಕೆ ಕಾಸರಗೋಡಿನ ಪ್ರತಿನಿಧಿಯಾಗಿ ಸುದ್ದಿಗಳನ್ನು ಕಳುಹಿಸುತ್ತಿದ್ದರು. ಅತ್ತೆ ಕೃಷ್ಣವೇಣಿ ಕಿದೂರು ಅವರೂ ಹಲವು ಪತ್ರಿಕೆ, ನಿಯತಕಾಲಿಕೆಗಳಿಗೆ ಬರೆಯುತ್ತಿದ್ದರು. ಆಗ ಬರೆಯುವ ಬಯಕೆ ಉಂಟಾಗುತ್ತಿತ್ತು. ಆದರೆ ಹೀಗೆ ಮಾಡಪ್ಪಾ ಅಂತ ಎನ್ನುವ ಮಾರ್ಗದರ್ಶಕರು ಇರಲಿಲ್ಲ. ಅದಕ್ಕಾಗಿ ಯಾರನ್ನೂ ದೂರುವುದೂ ಇಲ್ಲ. ಆಗಿನ ಪರಿಸ್ಥಿತಿಯೇ ಹಾಗಿತ್ತು.

ಆಗ ಮೈಸೂರಿನಲ್ಲಿ ಅಕ್ಕ ಹೇಮಮಾಲಾ ಬಿ ಅವರ ಮನೆಯಲ್ಲಿದ್ದೆ. ಇದಕ್ಕೂ ಮುನ್ನ ಕೃಷ್ಣಮೂರ್ತಿ ಎಂಬುವವರ ಸೀರೆ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಭೋಗಾದಿಯಲ್ಲಿದ್ದ ಆ ಕಿರು ಅಂಗಡಿಯಲ್ಲಿ ತಿಂಗಳಿಗೊಂದು ಸೀರೆ ಮಾರಾಟವಾದರೆ ಅದೇ ಹಬ್ಬ. ಅವರು ಯಾಕಾಗಿ ಆ ಸೀರೆ ಅಂಗಡಿ ಇಟ್ಟಿದ್ದರು ಎಂಬುದೇ ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ ತಿಂಗಳಿಗೆ ತಪ್ಪದೆ ಐನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ಅವರಿಗೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವಿತ್ತು. ಸೈಡಲ್ಲಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಾ ಇದ್ದರು. ಉತ್ತಮ ವಾಗ್ಮಿ. ಇತ್ತೀಚೆಗೆ ಮೈಸೂರಿಗೆ ತೆರಳಿದ್ದಾಗ ಸಿಕ್ಕರು. " ಸಾರ್, ನಾನು ಕೇಶವ ಪ್ರಸಾದ್’ ಅಂದೆ. ಓಹೋಹೋ..ಅಂತ ತುಂಬ ಆತ್ಮೀಯವಾಗಿ ಮಾತನಾಡಿಸಿದ್ರು ಮೂರ್ತಿ.

ಹಾಗೊಂದು ದಿನ ಧೈರ್ಯ ಮಾಡಿ, ಮೈಸೂರು ಮಿತ್ರ ಕಚೇರಿಗೆ ತೆರಳಿದೆ. ಅಲ್ಲಿ ಸಂಪಾದಕರಾದ ಬಿ.ಗಣಪತಿಯವರನ್ನು ಕಂಡೆ. ಸ್ವ ವಿವರ ನೋಡಿದ ಗಣಪತಿಯವರು, ಈಗೇನು ಮಾಡುತ್ತಿದ್ದೀರಿ ? ಎಂದರು. ಬಟ್ಟೆ ಅಂಗಡಿಯಲ್ಲಿ ಸಣ್ಣ ಕೆಲ್ಸ ಅಂದೆ. ಹಾಗಾದರೆ ಬಟ್ಟೆ ಅಳೆಯಲು ಬರುತ್ತಾ ? ಎಂದು ಕೀಟಲೆ ಮಾಡಿದರು ಗಣಪತಿ. ನಾನು ಸ್ವಲ್ಪ ತಬ್ಬಿಬ್ಬಾದೆ. ಮತ್ತೆ ಏನೋ ಅಂದಿದ್ದರು. ಮುಂದೇನು ಮಾಡುವುದಪ್ಪಾ ಅಂತ ಅಂದುಕೊಂಡು ಅಕ್ಕನ ಮನೆಗೆ ತೆರಳಿದ್ದೆ.

ಮತ್ತೊಂದು ವಾರ ಬಿಟ್ಟ ನಂತರ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯ ಮೆಟ್ಟಿಲು ಹತ್ತಿದೆ. ಅಲ್ಲಿ ಆಡಳಿತಾಧಿಕಾರಿ ಸೂರ್ಯವಂಶಿ ಕಡತಗಳ ವಿಲೇವಾರಿಯಲ್ಲಿ ದಡಬಡ ಮುಳುಗಿದಂತೆ ಇದ್ದರು. ಅವರೆದುರು ನಿಂತು ನನ್ನ ಸ್ವ ವಿವರಗಳನ್ನು ನೀಡಿದೆ. ಸಂಪಾದಕ ರಾಜಶೇಖರ ಕೋಟಿಯವರನ್ನು ಕಾಣುವಂತೆ ತಿಳಿಸಿದರು. ಅವರ ಮನೆ ಕಚೇರಿಗೆ ಹೊಂದಿಕೊಂಡಂತೆ ಇತ್ತು. ಭವ್ಯವಾದ ಬಂಗಲೆಯದು. ಗೇಟನ್ನು ತೆರೆದು ಅಳುಕಿನಿಂದಲೇ ಮನೆಯೊಳಕ್ಕೆ ಪ್ರವೇಶಿಸಿದೆ. ಆಂದೋಲನ, ಮೈಸೂರಿನ ಪ್ರತಿಷ್ಠಿತ ದಿನಪತ್ರಿಕೆ ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿ ನನ್ನಲ್ಲಿರಲಿಲ್ಲ. ನನ್ನ ಕಡತಗಳನ್ನು ನೋಡುತ್ತಾ, ಕೋಟಿಯವರು ನನ್ನ ಊರು ಇತ್ಯಾದಿ ವಿವರ ಕೇಳಿದರು.

ಕಾಸರಗೋಡಿನವನು ಎಂದಾಗ, ಕಾಸರಗೋಡು ಚಿನ್ನಾ ಗೊತ್ತಾ ಎಂದರು. ಗೊತ್ತಿದೆ. ಆದರೆ ಮುಖತಃ ಭೇಟಿಯಾಗಿಲ್ಲ ಎಂದೆ. ಆಗತಾನೇ ಮೈಸೂರು ಮಿತ್ರದಲ್ಲಿ ನನ್ನ ಕೆಲ ಕಿರು ಬರಹಗಳು ಪ್ರಕಟವಾಗಿದ್ದವು. ಅವುಗಳನ್ನು ತೋರಿಸಿದೆ. ಅವುಗಳನ್ನೋದಿದ ಕೋಟಿಯವರು, ಸ್ವಲ್ಪ ನಗುತ್ತಾ ಹಾಗಾದರೆ ಮೈಸೂರು ಮಿತ್ರದಲ್ಲೇ ಪ್ರಯತ್ನಿಸಬಹುದಿತ್ತಲ್ವೇ ? ಅಂದರು. ಅಂತಹ ಪ್ರಶ್ನೆ ಕೇಳುತ್ತಾರೆ ಅಂತ ನನಗೆ ಅನ್ನಿಸಿರಲಿಲ್ಲ. ಡವಡವ ಆಯ್ತು. ಇಲ್ಲ ಸಾರ್, ನಿಮ್ಮ ಪತ್ರಿಕೆಯಲ್ಲಿ ಒಳ್ಳೆಯ ಫ್ಯೂಚರ್ ಇದೆ ಅಂತ.. ಅಂದೆ.

ಸರಿ, ನಿಮ್ಮನ್ನು ಟ್ರೈನಿ ಆಗಿ ಅಪಾಯಿಂಟ್ ಮಾಡುತ್ತೇವೆ. ಸೂರ್ಯವಂಶಿಯವರ ಬಳಿ ಹೋಗಿ. ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದರು. ಬೇರೆ ಏನನ್ನೂ ಹೇಳಿರಲಿಲ್ಲ, ನಾನೂ ಕೇಳಿರಲಿಲ್ಲ. ಕೆಲಸ ಸಿಕ್ಕಿದ ಖುಷಿಯಲ್ಲಿ ಮಿಕ್ಕಿದ್ದೆಲ್ಲವೂ ಮರೆತು ಹೋಗಿತ್ತು. ಆದರೆ ಆವತ್ತು ಆಂದೋಲನಕ್ಕೆ ಸೇರಿದ್ದುದು, ಪತ್ರಿಕೋದ್ಯಮದ ಕಲಿಕೆಯ ದೃಷ್ಟಿಯಿಂದ ಒಳ್ಳೆಯದಾಯಿತು.
ಕೇಶವ ಪ್ರಸಾದ್.ಬಿ.ಕಿದೂರು

Sunday, 12 February 2012

ಪತ್ರಿಕೋದ್ಯಮದಲ್ಲಿ 11 ವರ್ಷ...

ವಿಜಯ ಕರ್ನಾಟಕಕ್ಕೆ ಸೇರ್ಪಡೆಯಾಗಿ 7 ವರ್ಷಗಳು ತುಂಬಲು ಇನ್ನು ಮೂರು ತಿಂಗಳು ಮಾತ್ರ ಇದೆ. ಇದಕ್ಕೂ ಮುನ್ನ ಸುಮಾರು ಮೂರು ವರ್ಷ, ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಈ ಹೊತ್ತಿನಲ್ಲಿ ಇಬ್ಬರು ಮಹನೀಯರನ್ನು ನೆನಪಿಸಿಕೊಳ್ಳುತ್ತೇನೆ. ಅವರೇ ನನಗೆ ಕೆಲಸ ಒದಗಿಸಿ ಹರಸಿದ ಶ್ರೀ. ವಿಶ್ವೇಶ್ವರ ಭಟ್ ಹಾಗೂ ಶ್ರೀ. ರಾಜಶೇಖರ ಕೋಟಿ. ವಿಜಯ ಕರ್ನಾಟಕದಲ್ಲಿ ಏಳು ವರ್ಷಗಳ ಹಿಂದೆ ನನ್ನನ್ನು ನೇಮಿಸಿದ ವಿಶ್ವೇಶ್ವರ ಭಟ್ ಹಾಗೂ ಇದಕ್ಕೂ ಹಿಂದೆ ಆಂದೋಲನದಲ್ಲಿ ಮೂರು ವರ್ಷ ಉದ್ಯೋಗ ನೀಡಿದ ಕೋಟಿಯವರಿಗೆ ಕೋಟಿ ನಮನಗಳು.

ಮಾಧ್ಯಮ ವಲಯದಲ್ಲಿ ಹಾಗೂ ಸಾಮಾಜಿಕ ವೆಬ್‌ತಾಣಗಳಲ್ಲಿ ಸಹಜವಾಗಿ ಹೊಸ ಮಿತ್ರರ ಭೇಟಿಯಾದಾಗ, ಕುತೂಹಲದಿಂದ ನನ್ನ ವೃತ್ತಿಯ ಬಗ್ಗೆ, ಮಾಧ್ಯಮಗಳ ಬಗ್ಗೆ ಕೇಳುತ್ತಾರೆ. ಹಾಗೆ ಕೇಳಿದಾಗಲೆಲ್ಲ ಚುಟುಕಾಗಿ ತಿಳಿಸುತ್ತೇನೆ. ಆದರೆ ಕಳೆದ ಹನ್ನೊಂದು ವರ್ಷಗಳ ಪತ್ರಿಕಾ ರಂಗದ ಅನುಭವಗಳು ತಮ್ಮಷ್ಟಕ್ಕೆ ಮೆರವಣಿಗೆ ಹೊರಡುತ್ತವೆ. ಪತ್ರಿಕಾ ರಂಗದಲ್ಲಿ ಹನ್ನೊಂದು ವರ್ಷಗಳು ಹನ್ನೊಂದು ದಿನಗಳಂತೆ ಕಳೆದಿವೆ. ಈ ಅವಧಿಯಲ್ಲಿ ಹಲವಾರು ಅನುಭವಗಳು, ಕಲಿತ ಪಾಠಗಳು ಮರೆಯಲಾಗದೆ ಉಳಿದಿವೆ. ಈ ಹನ್ನೊಂದು ವರ್ಷಗಳಲ್ಲಿ ನಾನೇನೋ ಸಾಧಿಸಿದ್ದೇನೆ ಎಂಬ ಹಮ್ಮು ನನಗಿಲ್ಲ. ಆದರೆ ಶೂನ್ಯದಂತಿದ್ದ ಬದುಕಿಗೊಂದು ಆಧಾರ ಒದಗಿಸಿದೆ. ಅದಕ್ಕಿಂತ ಮುಖ್ಯವಾಗಿ ಕನ್ನಡದ ಪತ್ರಿಕೆಗಳ ಪ್ರತಿಭಾವಂತ ಸಂಪಾದಕರುಗಳ ಒಡನಾಟದ ಅವಕಾಶ ಕೊಟ್ಟಿದೆ.

ಗುಡಿಸಲಿನಿಂದ ಪಂಚತಾರಾ ಹೋಟೆಲಿನ ವೈಭವದ ತನಕ ನೋಡಿದ್ದೇನೆ. ಬರಪೀಡಿತ ಪ್ರದೇಶಗಳಲ್ಲಿ ರೈತನ ಬವಣೆಗಳನ್ನು ಆಲಿಸಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿ, ಬೆಂದು ಆಸ್ಪತ್ರೆಯಲ್ಲಿ ಸಂಕಟದಿಂದ ನರಳುತ್ತಿದ್ದ ಯುವತಿಯನ್ನು ಕಂಡು ಮರುಗಿದ್ದೇನೆ. ಆಸಿಡ್ ದಾಳಿಗೆ ಸಿಲುಕಿ ಮುಖ ವಿರೂಪಗೊಂಡು ನರಕಸದೃಶ ಬದುಕು ನಡೆಸುತ್ತಿದ್ದವಳನ್ನು ಮಾತನಾಡಿಸಿದ್ದೇನೆ. ಐಶಾರಾಮಿ ಕಾರುಗಳ ಉತ್ಪಾದನೆಯನ್ನು ನೋಡಿದ್ದೇನೆ. ಹಿಜಡಾಗಳ ನೋವು ನಲಿವನ್ನು ಅವರಿಂದಲೇ ಕೇಳಿ ಬರೆದಿದ್ದೇನೆ. ರೆಡ್‌ಬಸ್‌ನ ಸಿಇಒ ಫಣೀಂದ್ರ ಸಮಾ ಎಂಬ ಯುವ ಉದ್ಯಮಿಯಿಂದ ಶುರುವಾಗಿ ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, ಇನ್ಫೋಸಿಸ್‌ನ ಸಹ ಸಂಸ್ಥಾಪಕ ದಿನೇಶ್ ಅವರಂತಹ ಹಿರಿಯರ ತನಕ ಹಲವಾರು ಗಣ್ಯರನ್ನು ಸಂದರ್ಶಿಸುವ ಅವಕಾಶವನ್ನು ಪತ್ರಿಕೋದ್ಯಮ ಕೊಟ್ಟಿದೆ. ಪ್ರತಿಯೊಂದು ವೃತ್ತಿಯಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯಗಳಿರುತ್ತವೆ. ಆದರೆ ಎಲ್ಲರೂ ಅವುಗಳನ್ನು ಬರೆಯಲು ಹೋಗುವುದಿಲ್ಲ. ಕೆಲವರಿಗೆ ಬರೆಯುವ ಮನಸ್ಸಿದ್ದರೂ, ಬರೆಯಲು ನಮ್ಮಿಂದಾಗದು ಎನ್ನುತ್ತಾರೆ. ಆದರೆ ಕಳೆದ 11 ವರ್ಷಗಳಿಂದ ಬರೆಯುವುದೇ ನನ್ನ ವೃತ್ತಿಯಾದ್ದರಿಂದ, ನನಗೆ ಸಿಕ್ಕಿದ ಅನುಭವಗಳಲ್ಲಿ ಕೆಲವನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಅಕ್ಷರ ರೂಪದಲ್ಲಿಡುವ ಬಯಕೆ. ಎಂದಿನಂತೆ ನಿಮ್ಮ ಬೆಂಬಲದ ನಿರೀಕ್ಷೆ ಇದ್ದೇ ಇದೆ.

Friday, 3 February 2012

ನೋವುಂಡು ಜಗವ ನಗಿಸಿದ ಕರಿಬಸವಯ್ಯ" ಛೇ, ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಪ್ರತಿಭಾವಂತನ ಬದುಕಿನಲ್ಲಿ ಮಾತ್ರ ಎಂಥಾ ದುರ್ವಿಧಿ ! ’
ಕನ್ನಡ ಚಿತ್ರರಂಗದ, ರಂಗಭೂಮಿಯ ನೆಚ್ಚಿನ ಹಾಸ್ಯನಟ ಶ್ರೀ. ಕರಿಬಸವಯ್ಯ ಅವರ ಅಕಾಲ ಮೃತ್ಯು ರಾಜ್ಯದ ಜನತೆಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಎಲ್ಲರ ಬಾಯಲ್ಲೂ ನೋವಿನ ನುಡಿಗಳು, " ಛೇ, ಕರಿಬಸವಯ್ಯನವರಿಗೆ ಹೀಗಾಗಬಾರದಿತ್ತು. ಪಾಪ, ಮಗಳನ್ನೂ ಇತ್ತೀಚೆಗೆ ಕಳೆದುಕೊಂಡಿದ್ರು.."
ಹೌದು, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕರಿಬಸವಯ್ಯ, ತಮ್ಮ ನಟನೆ, ನಡೆ ನುಡಿಯಿಂದ ಜನಮಾನಸದಲ್ಲಿ ಮರೆಯಲಾಗದ ವ್ಯಕ್ತಿತ್ವವಾಗಿದ್ದರು. ಕೆಲ ತಿಂಗಳಿನ ಹಿಂದ ಖಾಸಗಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಬಾಳ ಪಯಣದ ಕಥೆಯನ್ನು ಎಳೆಎಳೆಯಾಗಿ ವಿವರಿಸಿದ್ದರು ಕರಿಬಸವಯ್ಯ. ಅಲ್ಲಿ ನೋವಿನ ಮಡುವಿತ್ತು. ಒಂದು ಹಂತದಲ್ಲಿ ತಮ್ಮ ಪ್ರೀತಿಯ ಮಗಳು ಆತ್ಮಹತ್ಯೆ ಮಾಡಿಕೊಂಡ ದುರಂತವನ್ನು ಹೇಳುತ್ತ ಕಣ್ಣೀರಿಟ್ಟರು ಕರಿಬಸವಯ್ಯ. " ಯಾವುದೇ ಹೆಣ್ಣು ಮಕ್ಕಳನ್ನು ನೋಯಿಸದಿರಿ, ಅವರ ಹೆತ್ತವರಿಗೆ ತುಂಬ ನೋವಾಗುತ್ತದೆ. ಅದನ್ನು ಸಹಿಸಲು ಅವರಿಗೆ ಆಗುವುದಿಲ್ಲ. ನಾನು ಅಭಿನಯಿಸುವಾಗ ಪಾತ್ರವಾಗುತ್ತೇನೆ. ಎಲ್ಲ ನೋವುಗಳು ಮರೆಯಾಗುತ್ತವೆ. ಪಾತ್ರ ಮುಗಿದಾಗ ಮತ್ತೆ ದುಃಖ ಮರುಕಳಿಸುತ್ತದೆ. ಯಾವ ತಂದೆ ತಾಯಿಗೂ ಇಂತಹ ಆಘಾತ ಬರಬಾರದು. ಒಂದು ವೇಳೆ ಬಂದರೂ ಅದನ್ನು ತಡೆಯುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ’ ಎಂದು ಕರಿಬಸವಯ್ಯ ಕಣ್ಣೀರಿಡುತ್ತ ಹೇಳಿದಾಗ ನನ್ನ ಕಣ್ಣಾಲಿಗಳು ತುಂಬಿತ್ತು.
ಅಂತಹ ಕರಿಬಸವಯ್ಯನವರು ಆಡಿದ ಮನಮುಟ್ಟುವ ಮಾತುಗಳಲ್ಲಿ ಕೆಲವು ಇಲ್ಲಿದೆ.
-ನಮ್ಮ ಕಷ್ಟವನ್ನು ನಾವೇ ಅನುಭವಿಸಬೇಕು.
-ನಾನು ಹೋರಾಟದಿಂದ ಬೆಳೆದು ಬಂದವನು. ಅನೇಕ ಸ್ನೇಹಿತರಿದ್ದಾರೆ. ನನ್ನ ಕೊನೆಯುಸಿರಿನ ತನಕ ಕನ್ನಡ ಸೇವೆ ಮಾಡುತ್ತೇನೆ.
-ನಾನು ಸುಮಾರು ೨೦೦ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಗತಿಹಳ್ಳಿ ಚಂದ್ರಶೇಖರ್, ಉಮಾಶ್ರಿ, ಬರಗೂರು ರಾಮಚಂದ್ರಪ್ಪ ಮುಂತಾದವರ ಪ್ರೀತಿ, ವಿಶ್ವಾಸ, ಸಹಕಾರವನ್ನು ಅನುಗಾಲ ನೆನೆಯುತ್ತೇನೆ. ನಾನು ಯಾರಿಗೂ ದ್ವೇಷಿಯಲ್ಲ..
ನಿಜ. ಇಷ್ಟೆಲ್ಲ ನೋವನ್ನುಂಡ ಕಥೆಯನ್ನು ಹೇಳುವಾಗಲೂ ಕರಿಬಸವಯ್ಯ ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಿದ್ದರು ! ಅಲ್ಲೂ ಇತರರನ್ನು ರಂಜಿಸಲು ಅವರು ಮರೆತಂತಿರಲಿಲ್ಲ !!
ಜಗದ ನೋವು ನನಗಿರಲಿ, ಜಗವೆಲ್ಲ ನಗುತಿರಲಿ ಎಂಬ ಮಾತಿನಂತೆ ನಡೆದಿದ್ದರು ಕರಿಬಸವಯ್ಯ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
-ಕೇಶವ ಪ್ರಸಾದ್.ಬಿ,ಕಿದೂರು