Saturday 16 June 2012

ಬೆಂಕಿಯಲ್ಲಿ ಅರಳಿದ ಯುವತಿಯೊಬ್ಬಳ ಯಶೋಗಾಥೆ.


ಇದು ಅಕ್ಷರಶಃ ಬೆಂಕಿಯಲ್ಲಿ ಅರಳಿದ ಯುವತಿಯೊಬ್ಬಳ ಯಶೋಗಾಥೆ. ಅವಳ ಕಥೆಯನ್ನು ಓದಿದರೆ ಸಾಕು. ಆಕೆ ಎದುರಿಸಿದ ಕಷ್ಟಕಾರ್ಪಣ್ಯಗಳೆದುರು ನಮ್ಮ ನಿಮ್ಮ ಸಂಕಷ್ಟಗಳು ಏನೇನೂ ಅಲ್ಲ ಎಂಬುದು ಗೊತ್ತಾಗುತ್ತದೆ ! ಅದು 2000ನೇ ಇಸವಿಯ ಸೆಪ್ಟೆಂಬರ್ 25. ಫಿಲಿಪ್ಪೀನ್ಸ್‌ನ ಜಾಂಬೋನ್ಗಾ ಎಂಬಲ್ಲಿ 11 ವರ್ಷದ ಬಾಲಕಿ ಮಾರ್ಸಿಯಲ್ ಅಪಾತನ್ ಎಂದಿನಂತೆ ಚಿಕ್ಕಪ್ಪನ ಜತೆಗೆ ನೀರು ತರಲು ಹೋಗಿದ್ದಳು. ಆ ದಾರಿಯಲ್ಲಿ ನಾಲ್ವರು ಅಡ್ಡಗಟ್ಟಿದರು. ಅವರ ಕೈಯಲ್ಲಿ ಉದ್ದನೆಯ ಮಚ್ಚುಗಳಿದ್ದವು. ಆಕೆಯ ಚಿಕ್ಕಪ್ಪನಿಗೆ ನೆಲಕ್ಕೆ ಕತ್ತು ಬಗ್ಗಿಸಲು ಹೇಳಿದರು. ತಕ್ಷಣ ಕುತ್ತಿಗೆಗೆ ಇರಿದು ಹತ್ಯೆಗೈದರು. ಮಾರ್ಸಿಯಲ್‌ಗೆ ಭಾರಿ ಆಘಾತವಾಗಿತ್ತು. ಯಾಕೆಂದರೆ ಆಕೆಯ ಚಿಕ್ಕಪ್ಪನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದವರು ಬೇರಾರೂ ಆಗಿರಲಿಲ್ಲ, ಆಕೆಯ ನೆರೆ ಮನೆಯವರೇ ಆಗಿದ್ದರು. ಅವಳು ಅಲ್ಲಿಂದ ತಪ್ಪಿಸಿಕೊಳ್ಳಲು ಓಡಿದಳು. ಆದರೆ ಆ ರಕ್ಕಸರು ಅಟ್ಟಿಸಿಕೊಂಡು ಬಂದರು. ಪಾಪ.." ಆಕೆ ಅಳುತ್ತಲೇ..ಪ್ಲೀಸ್ ನನ್ನನ್ನು ಕೊಲ್ಲಬೇಡಿ..ದಯವಿಟ್ಟು ಕರುಣೆ ತೋರಿ..’ ಎಂದು ಅಂಗಲಾಚಿದಳು. ಆದರೆ ದುಷ್ಕರ್ಮಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆಯ ಕುತ್ತಿಗೆಗೆ ಇರಿದರು. ಮಾರ್ಸಿಯಲ್ ಪ್ರಜ್ಞಾಶೂನ್ಯಳಾಗಿ ಬಿದ್ದಳು. ಆಕೆಗೆ ಪ್ರಜ್ಞೆ ಮರುಕಳಿಸಿದಾಗ ಸುತ್ತಮುತ್ತ ರಕ್ತದ ಕೋಡಿ ಹರಿದಿತ್ತು. ಸುತ್ತಮುತ್ತ ದುಷ್ಟರ ಕಾಲುಗಳನ್ನು ಕಂಡಳು. ಸ್ವಲ್ಪ ಹೊತ್ತಿನಲ್ಲಿ ಈಕೆ ಸತ್ತಿರುವಳೆಂದು ಭಾವಿಸಿ ಅವರೆಲ್ಲ ಹೊರಟರು. ಅವರು ಹೋದ ನಂತರ ಮಾರ್ಸಿಯಲ್ ಎದ್ದು ಮನೆಯ ಕಡೆಗೆ ಓಡಿದಳು. ದಾರಿಯಲ್ಲಿ ಆಕೆ ತನ್ನೆರಡೂ ಹಸ್ತಗಳು ಬಿದ್ದಿರುವುದನ್ನು ಗಮನಿಸಿದಳು. ಪಾತಕಿಗಳು ಅವಳ ಎರಡೂ ಹಸ್ತಗಳನ್ನು ಕಡಿದಿದ್ದರು. ಆಕೆ ಅಳುತ್ತಲೇ ಓಡಿದಳು. ಕೆಲವು ಸಲ ತಲೆ ತಿರುಗಿ ಬಿದ್ದಳು. ಪ್ರಜ್ಞೆ ಮರಳಿದಾಗ ಮತ್ತೆ ಎದ್ದು ಓಡಿದಳು. ಮನೆಗೆ ಸಮೀಪ ಬಂದು ಅಮ್ಮನನ್ನು ಕೂಗಿದಳು. ಮಗಳ ಎರಡೂ ಕೈಗಳು ಕಡಿದು ರಕ್ತಸಿಕ್ತವಾಗಿದ್ದ ದೃಶ್ಯವನ್ನು ಕಂಡು ಆ ತಾಯಿ ಆಘಾತಗೊಂಡು ತತ್ತರಿಸಿದಳು. ಮಾರ್ಸಿಯಲಳನ್ನು ಕಂಬಳಿಯಲ್ಲಿ ಸುತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೊಂದು ಸಮಸ್ಯೆ ಇತ್ತು. ಮನೆಯಿಂದ ಹೆದ್ದಾರಿಗೆ ಬರಲು 12 ಕಿ.ಮೀ ನಡೆಯಬೇಕು. ಕನಿಷ್ಠ 4 ಗಂಟೆ ನಡೆಯಬೇಕು. ಅಂತೂ ಆಸ್ಪತ್ರೆಗೆ ತಲುಪಿದ ನಂತರ ಪರೀಕ್ಷಿಸಿದ ವೈದ್ಯರು, ಬಾಲಕಿ ಸತ್ತು ಹೋಗುವಳೆಂದು ಅನುಮಾನ ಪಟ್ಟಿದ್ದರು. ಆದರೆ 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಯಿತು. ಕುತ್ತಿಗೆಯ ಸುತ್ತ 25 ಹೊಲಿಗೆ ಹಾಕಲಾಯಿತು. ಪವಾಡ ಸದೃಶ ರೀತಿಯಲ್ಲಿ ಮಾರ್ಸಿಯಲ್ ಬದುಕುಳಿದಳು. ಆದರೆ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ವಿಪರ್ಯಾಸವೆಂದರೆ ಮರುದಿನ ಅವಳ 12ನೇ ಹುಟ್ಟುಹಬ್ಬ. ಆದರೆ ದುರಂತ ಇನ್ನೂ ಮುಗಿದಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಮರಳಿದರೆ, ಗೂಂಡಾಗಳು ಅವರ ಮನೆಗೆ ಬೆಂಕಿ ಇಟ್ಟು ಕರಕಲಾಗಿಸಿದ್ದರು. ಮಾರ್ಸಿಯಲ್ ಕುಟುಂಬಕ್ಕೆ ಆಸ್ಪತ್ರೆಯ ಶುಲ್ಕಗಳನ್ನು ಭರಿಸುವ ಚೈತನ್ಯ ಇರಲಿಲ್ಲ. ಬಡವರಾದ ಅವರಿಗೆ ಅತ್ತ ಮನೆಯೂ ಭಸ್ಮವಾಗಿತ್ತು. ವಿಧಿ ಹೀಗೆ ಕಷ್ಟಗಳ ಮಳೆಯನ್ನೇ ಸುರಿಸಿತ್ತು ಆ ಬಡ ಕುಟುಂಬದ ಮೇಲೆ. ಆದರೆ ಭಗವಂತ ಕಷ್ಟದಲ್ಲಿರುವವರನ್ನು ಕಾಪಾಡಲು ತನ್ನ ಸಹವರ್ತಿಗಳನ್ನು ಕಳಿಸುತ್ತಾನಾ ? ಗೊತ್ತಿಲ್ಲ. ಆದರೆ ಆರ್ಚ್ ಬಿಷಪ್ ಆಂಟೋನಿಯೊ ಲೆಡೆಸ್ಮಾ, ಈ ಬಡ ಕುಟುಂಬದ ಕರುಣಾಜನಕ ಕತೆಯನ್ನು ಕೇಳಿ ಮಮ್ಮುಲ ಮರುಗಿದರು. ದೂರದ ಸಂಬಂಧಿಯೂ ಆಗಿದ್ದ ಅವರು ಆಸ್ಪತ್ರೆಯ ಶುಲ್ಕಗಳನ್ನು ಭರಿಸಿದರು. ಜತೆಗೆ ದುಷ್ಕರ್ಮಿಗಳನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದರು. ಆ ಪಾತಕಿಗಳನ್ನು ಜೈಲಿಗೆ ಅಟ್ಟಲಾಯಿತು. ನಂತರ ಮಾರ್ಸಿಯಲ್ ಕಥೆ ಏನಾಯಿತು..ಗೊತ್ತಾ ? ಈಗ ಹುಬ್ಬೇರಿಸುವ ಸರದಿ ನಿಮ್ಮದು...!!! ಮಾರ್ಸಿಯಲ್ ಎರಡೂ ಕೈಗಳು ತನಗಿಲ್ಲವೆಂದು ಅಳುತ್ತಾ ಕುಗ್ಗಿ ಹೋಗಲಿಲ್ಲ. ವಿಶಿಷ್ಟ ಚೇತನರ ಮಕ್ಕಳ ಶಾಲೆಯಲ್ಲಿ ಓದು ಮುಂದುವರಿಸಿದಳು. ಆಕೆಯ ಉದ್ಯಮಶೀಲತೆ ಆಗಲೇ ಬೆಳೆಯುತ್ತಿತ್ತು. ಕಂಪ್ಯೂಟರ್ ಓದಿನಲ್ಲೂ ಪರಿಣತಿ ಪಡೆದಳು. 2008ರಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಳು. ಕರ ಕುಶಲ ಕಲೆಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿದಳು. 2011ರಲ್ಲಿ ಚೆಫ್ ಆಗಿ ಶಿಕ್ಷಣ ಪೂರೈಸಿದಳು. ಹೌದು. ಈಗ ಆಕೆ ಹಸ್ತವಿಲ್ಲದಿದ್ದರೂ ಅಡುಗೆಯಲ್ಲಿ ತಜ್ಞಳೆನಿಸಿದ್ದಾಳೆ ! ನೋಡಿ..ಆಕೆ ತನ್ನ ಕನಸುಗಳನ್ನು ನನಸು ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ!! ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ..!!

Sunday 22 April 2012

1. ಅಭ್ಯಾಸ ಬಲವನ್ನು ಬದಲಾಯಿಸಲು ಕೂಡ ಸತತ ಅಭ್ಯಾಸ ಮಾಡಬೇಕಾಗುತ್ತದೆ. ಇಲ್ಲವಾದರೆ ಹಳೆಯ ಅಭ್ಯಾಸಗಳು ಮುಂದುವರಿಯುತ್ತವೆ. 2.ಅಭ್ಯಾಸ ಬಲದ ಮೂಲಕ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಹಾಗೆಯೇ ಏನನ್ನೂ ಮಾಡಿದರಲೂ ಅಭ್ಯಾಸ ಬಲವೇ ಕಾರಣವಾಗುತ್ತದೆ. 3. ಏನಾದರೂ ಸಾಧನೆ ಮಾಡಬೇಕಿದ್ದರೆ ಮಾಡಬೇಕು. ಮಿಕ್ಕಿದ್ದೆಲ್ಲವೂ ಸಮಸ್ಯೆಯಾಗಿಯೇ ಉಳಿಯುವುದಿಲ್ಲ. ಅಂದುಕೊಂಡ ಮೇಲೆ ಮಾಡದಿದ್ದರೆ ಮಾತ್ರ ಸಮಸ್ಯೆ ಅಷ್ಟೇ. 4.ನನಗೆ ಪ್ರಚಾರ ಬೇಡ, ಇವುಗಳಿಂದ ನಾನು ದೂರ ಉಳಿಯುತ್ತೇನೆ. ನನ್ನ ಬಗ್ಗೆ ಏನನ್ನೂ ಬರೆಯಬೇಡಿ, ಹೇಳ ಬೇಡಿ ಎನ್ನುವುದೂ ಒಂದು ವಿಧದ ಆಸೆ. 5.ಸುಖ ಮತ್ತು ದುಃಖದಂತೆ ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಬದುಕಿನಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಆದಕಾರಣ ಇವೆರಡನ್ನೂ ಮೀರಿ ಹೋಗಬೇಕು 6.ಯಾವುದೇ ಕ್ಷೇತ್ರದಲ್ಲಿ ಮನಸ್ಸು ಮಾಡಿದರೆ ಸಾಕಷ್ಟು ಹೆಸರು ಗಳಿಸಬಹುದು. ಅದನ್ನು ಮೀರಿಯೂ ಹೋಗಬಹುದು. ಆದರ ಜತೆಗೆ ವಿನಯವಂತಿಕೆ, ಔದಾರ್ಯ ಇದ್ದರೆ ಅದರ ಸೊಗಸೇ ಬೇರೆ. 7.ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ. 8.ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು.

Saturday 21 April 2012

ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ. ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು. ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು.. ಬಂಧುಗಳು ಹಣ ಸಹಾಯ ಮಾಡಲು ಮುಂದೆ ಬಂದರೆ ಥ್ಯಾಂಕ್ಸ್ ತಿಳಿಸಿರಿ. ಆದರೆ ಶೀಘ್ರ ಅವರ ಹಣ ವಾಪಸ್ ಮಾಡಲು ಆಗದು ಎಂದಿದ್ದರೆ, ಅವರಿಂದ ಸಾಲ ಪಡೆಯದಿರುವುದೇ ಉತ್ತಮ. ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ.

Friday 20 April 2012

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು...

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು... ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು. ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು. ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು. ವಾಸ್ತವ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ವಾಸ್ತವ.. ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ. ಧ್ಯಾನ ಮಾಡುವವರು ಕಣ್ಣು ಮುಚ್ಚುತ್ತಾರೆ, ಆದರೆ ಕಣ್ಣು ಮುಚ್ಚುವುದು ಧ್ಯಾನ ಅಲ್ಲ.. ಅಂತರಂಗದಲ್ಲಿ ಏನೆಲ್ಲಾ ಪ್ರತಿಭೆ ಅಡಗಿದೆ ಅಂತ ಅನ್ವೇಷಣೆ ಮಾಡುವುದು ರೋಚಕ ಯಾತ್ರೆ. ಯಾವತ್ತಿಗೋ ಕಳೆದು ಹೋಗಿದ್ದ ಬಾಲ್ಯದ ಮುಗ್ಧತೆ ಕೂಡಾ ಮರಳಿ ಸಿಗಬಹುದು. ಬೇಕಾದಾಗ ಆ ಮುಗ್ಧತೆಯನ್ನು ಅನುಭವಿಸಿ ಬೀಗ ಹಾಕಿಟ್ಟುಕೊಳ್ಳಬಹುದೇನೋ.. ನಮ್ಮ ಉದ್ಯೋಗಗಳಲ್ಲಿ ಒಂದಲ್ಲ, ಹಲವು ಟಾರ್ಗೆಟ್‌ಗಳು ಇರುತ್ತವೆ. ಟಾರ್ಗೆಟ್ ಮರೆತರೆ ಎಡವಿ ಬೀಳುತ್ತೇವೆ. ಟಾರ್ಗೆಟ್ ಇಲ್ಲದೆ ಉದ್ಯೋಗವೇ ಇಲ್ಲ. ಅದು ಬದುಕಿನ ಅವಿಭಾಜ್ಯ ಭಾಗವಾಗಿ ಹೋಗಿ ಬಿಟ್ಟಿದೆ. ಇತರರೊಡನೆ ಕಾಲ ಕಳೆಯುವುದು ತುಂಬ ಸಂತಸ ನೀಡುತ್ತದೆ. ಆದರೆ ನಮ್ಮ ಸಮಯದ ಜತೆಗೆ ಅವರ ಸಮಯ ಕೂಡ ಕಳೆದು ಹೋಗುವುದರಿಂದ ಉಪಯುಕ್ತವಾಗಿ ಕಳೆಯಬೇಕು.. ವಿಶ್ವವನ್ನು ಬಿಟ್ಟಿರಲು ಒಂದು ಕ್ಷಣವೂ ಇರಲು ಅಸಾಧ್ಯವಾದರೂ, ವಿಶ್ವವೇ ನನ್ನ ಹಿಂದೆ ಬರಬೇಕು ಎನ್ನುವುದು ಮೂರ್ಖತನ.. ನಮ್ಮ ನಂಬಿಕೆಗಳನ್ನು ಯಾರಾದರೂ ಒಪ್ಪಿಕೊಂಡರೆ ಅವರೊಡನೆ ಉತ್ತಮ ಬಾಂಧವ್ಯ ಬೆಳೆಯುತ್ತದೆ..ಒಪ್ಪದಿದ್ದರೂ ಬಾಂಧವ್ಯ ಉತ್ತಮವಾಗಿರಬೇಕು. ಅದು ಮನುಷ್ಯತ್ವ.

Tuesday 17 April 2012

ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಬದಲಾವಣೆಗಳು ಇರುತ್ತವೆ. ಆದರೆ ಇಡೀ ಭವಿಷ್ಯದುದ್ದಕ್ಕೂ ಹೇಗಿರಬೇಕು ಎಂದು ಕನಸು ಕಾಣಬೇಕು. ಆವಾಗ ಚಿಂತನೆಗಳೂ ವಿಶಾಲ ವ್ಯಾಪ್ತಿಯನ್ನು ಹೊಂದುತ್ತದೆ. ಮನಸ್ಸೂ ಕ್ಷುಲ್ಲಕ ಕಾರಣಗಳನ್ನು ಲೆಕ್ಕಿಸದೆ ಶಕ್ತಿಯುತವಾಗುತ್ತದೆ.

ಯಾರಾದರೂ ನಿಮ್ಮ ಐಡಿಯಾಗಳನ್ನು ಕೇಳಿ ವೃಥಾ ಗೇಲಿ ಮಾಡಿದರೆ, ಅಲ್ಲೊಂದು ಬೆಳವಣಿಗೆಗೆ ಅವಕಾಶ ಇದೆ ಎಂದರ್ಥ. ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಇದುವರೆಗೆ ಮಾಡದಿರುವ ಕೆಲಸಗಳನ್ನು ಮಾಡುವಾಗ ಮೊದಲು ಎದುರಾಗುವುದು ಕಷ್ಟವೇ. ಆದ್ದರಿಂದ ಅಷ್ಟಕ್ಕೇ ಕೈ ಬಿಡುವುದು ಸೂಕ್ತವಲ್ಲ. ಕಷ್ಟದ ಕೆಲಸಗಳನ್ನು ಸುಲಭವಾಗಿಸಲು ಕಷ್ಟಪಡಬೇಕಾಗುತ್ತದೆ.

ಪ್ರೀತಿ ಮಾಡುವುದು ಹೇಗೆ ಹೇಳದಿದ್ದರೂ ಗೊತ್ತಾಗುತ್ತದೆಯೋ, ಹಾಗೆಯೇ ವ್ಯಂಗ್ಯ, ಅವಮಾನ, ದ್ವೇಷಾಸೂಯೆಗಳೂ ಗೊತ್ತಾಗಿ ಬಿಡುತ್ತದೆ.

ಮೊದಲು ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಅಂತ ಅತ್ಯಂತ ಸ್ಪಷ್ಟವಾಗಿ ಗುರಿ ಇಟ್ಟುಕೊಳ್ಳಬೇಕು. ಯಾವ ಕ್ಷೇತ್ರ ಎಂಬುದು ಸ್ಪಷ್ಟವಾದಾಗ ಮಾಡುವ ಎಲ್ಲ ಕೆಲಸಗಳು ಮತ್ತು ಯೋಚನೆಗಳು ಅದಕ್ಕೆ ಪೂರಕವಾಗಿ ಬದಲಾಗುವುದು ಸಹಜ.

ಸಾಧನೆ ಒಂದೆರಡು ದಿನಗಳು ಅಥವಾ ತಿಂಗಳುಗಳಲ್ಲಿ ನಡೆಯುವುದಿಲ್ಲ. ಈ ಸತ್ಯ ಗೊತ್ತಿಲ್ಲದೆ ನಿರಾಸೆಗೀಡಾದರೆ ಅದಕ್ಕೆ ಕಾರಣ ಭ್ರಮೆ.

ಇತರರಲ್ಲಿರುವ ಕೆಟ್ಟ ಅಂಶಗಳನ್ನು ಬೆಟ್ಟದಷ್ಟು ದೊಡ್ಡದು ಮಾಡಿ ಹೇಳುವುದು ಸುಲಭ. ಆದರೆ ಒಳ್ಳೆಯ ಅಂಶಗಳನ್ನು ಹೇಳಲು ಮರೆಯುತ್ತೇವೆ. ಒಬ್ಬ ವ್ಯಕ್ತಿ ಸರಿ ಇಲ್ಲ ಅಂತ ದೂರಿದರೆ, ಆತ ಸರಿ ಹೋದ ಮೇಲೆ ಈಗ ಆತ ಸರಿ ದಾರಿಯಲ್ಲಿದ್ದಾನೆ ಅಂತ ಹೇಳಲು ಮಾತ್ರ ಮರೆಯುತ್ತೇವೆ..

ಯಾರೇ ಆಗಲಿ, ಬಡತನದಿಂದ ಬಳಲಿ ಬೆಂಡಾದರೂ, ತಾನು ನತದೃಷ್ಟ ಅಂತ ಕೊರಗಬಾರದು. ತಾನು ನತದೃಷ್ಟ ಎನ್ನುವುದು ಜೀವದ ಹಿಂದಿರುವ ಚೈತನ್ಯಕ್ಕೆ ತೋರುವ ಅಗೌರವ..

Monday 16 April 2012

ಕಡಲೇಕಾಯಿ ಮಾರುತ್ತಿದ್ದ ಬಾಲಕ, ಹೆಸರಾಂತ ಹೂಡಿಕೆದಾರ, ಲೇಖಕನಾದ ಕಥೆ !



ಜೇಮ್ಸ್ ಬೀಲ್ಯಾಂಡ್ ರೋಜರ್ಸ್..
ಅಮೆರಿಕದ ಖ್ಯಾತ ಹೂಡಿಕೆದಾರ ಮತ್ತು ಲೇಖಕ. ಸದ್ಯಕ್ಕೆ ಅವರು ಸಿಂಗಾಪುರದಲ್ಲಿ ನೆಲಸಿದ್ದಾರೆ. ರೋಜರ್ಸ್ ಹೋಲ್ಡಿಂಗ್ಸ್ ಆಂಡ್ ಬೀಲ್ಯಾಂಡ್ ಇಂಟರೆಸ್ಟ್ ಎಂಬ ಹೂಡಿಕೆ ಕಂಪನಿಯ ಒಡೆಯರಾಗಿದ್ದಾರೆ ರೋಜರ್ಸ್. ರೋಜರ್ಸ್ ಇಂಟರ್‌ನ್ಯಶನಲ್ ಕಮಾಡಿಟೀಸ್ ಇಂಡೆಕ್ಸ್ (ಆರ್‌ಐಸಿ)ಯ ಸೃಷ್ಟಿಕರ್ತ ಕೂಡ ಇವರೇ. ಇಷ್ಟೇ ಆಗಿದ್ದಿದ್ದರೆ ಆಕರ್ಷಕ ಅನ್ನಿಸುತ್ತಿರಲಿಲ್ಲ.

ಆದರೆ ರೋಜರ್ಸ್ ಅವರ ಮುಕ್ತ ಮಾರುಕಟ್ಟೆಯ ಪ್ರಬಲ ಪ್ರತಿಪಾದನೆ, ಯುದ್ಧ ವಿರೋಧಿ ನಿಲುವು, ಅವರು ಕಷ್ಟದಿಂದ ಬೆಳೆದು ಬಂದ ಯಶಸ್ಸಿನ ಹಾದಿ ಇಷ್ಟವಾಗುತ್ತದೆ. ಶೂನ್ಯದಿಂದ ಒಂದೊಂದೇ ಇಟ್ಟಿಗೆಯನ್ನು ಜೋಡಿಸುತ್ತಾ, ಬದುಕನ್ನು ಕಟ್ಟಿಕೊಂಡ ಅವರು, ಲೇಖಕರಾಗಿಯೂ ಹಲವು ಬೆಸ್ಟ್ ಸೆಲ್ಲರ್ ಕೃತಿಗಳನ್ನು ಬರೆದಿದ್ದಾರೆ. ಅವರ ಅರ್ಥಶಾಸ್ತ್ರ ಕುರಿತ ಕೃತಿಗಳಲ್ಲಿ ಕೇವಲ ಅಂಕಿ ಅಂಶಗಳ ಒಣ ಚರ್ಚೆ ಇರುವುದಿಲ್ಲ. ತಮ್ಮದೇ ಆದ ಜೀವನ ಸಿದ್ಧಾಂತವನ್ನು ಸರಳವಾಗಿ ಬೆರೆಸುತ್ತಾರೆ ರೋಜರ್ಸ್. ಜತೆಗೆ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿರ್ಭೀತರಾಗಿ ಎತ್ತಿ ತೋರಿಸುತ್ತಾರೆ.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ೧೯೪೨ರಲ್ಲಿ ಜನಿಸಿದ ರೋಜರ್ಸ್, ಐದು ವರ್ಷದ ಬಾಲಕನಾಗಿದ್ದಾಗಲೇ ಬಿಸಿನೆಸ್ ಆರಂಭಿಸಿದ್ದ. ಬಾಲಕ ಎಳೆಯ ಕೈಗಳಲ್ಲಿ ಕಡಲೇ ಕಾಯಿ ಮಾರುತ್ತಿದ್ದ. ಬೇಸ್‌ಬಾಲ್ ಪಂದ್ಯ ನಡೆಯುತ್ತಿದ್ದ ಸ್ಥಳಗಳಲ್ಲಿ ಅಭಿಮಾನಿಗಳು ಬಿಸಾಡುತ್ತಿದ್ದ ಖಾಲಿ ಬಾಟಲುಗಳನ್ನು ಸಂಗ್ರಹಿಸಿ ಮಾರಿ ಸ್ವಲ್ಪ ಕಾಸು ಸಂಪಾದಿಸುತ್ತಿದ್ದ..ಅಂತಹ ಬಾಲಕ ಹೇಗೆ ಬೆಳೆದು ಬಿಟ್ಟ ನೋಡಿ..!


ಜೇಮ್ಸ್ ರೋಜರ್ಸ್ ಅಮೆರಿಕದ ವಾಲ್‌ಸ್ಟ್ರೀಟ್‌ನ ಡೊಮ್ನಿಕ್ ಆಂಡ್ ಡೊಮ್ನಿಕ್ ಹೂಡಿಕೆ ಕಂಪನಿಯಲ್ಲಿ ಮೊದಲ ಕೆಲಸ ಗಳಿಸುತ್ತಾರೆ. ಯಾಲೆ ವಿಶ್ವ ವಿದ್ಯಾಲಯದಲ್ಲಿ ಇತಿಹಾಸದ ಪದವಿ ಪೂರೈಸುತ್ತಾರೆ. ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರದಲ್ಲಿ ಆಕ್ಸ್‌ಫರ್ಡ್ ವಿವಿಯಿಂದ ಮತ್ತೊಂದು ಪದವಿ ಗಳಿಸುತ್ತಾರೆ. 1973ರಲ್ಲಿ ಕ್ವಾಂಟಮ್ ಫಂಡ್ ಎಂಬ ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

1980ರಲ್ಲಿ " ನಿವೃತ್ತಿ’ಯಾಗಲು ಬಯಸುವ ರೋಜರ್ಸ್, ನಂತರ ವಿಶ್ವಾದ್ಯಂತ ಬೈಕೊಂದರಲ್ಲಿ ಪರ್ಯಟನೆ ಮಾಡುತ್ತಾರೆ. ಅಂದಿನಿಂದ ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. 1990-92ರಲ್ಲಿ ಆರು ಖಂಡಗಳಲ್ಲಿ 1 ಲಕ್ಷ ಮೈಲುಗಳ ಉದ್ದಕ್ಕೂ ಬೈಕಿನಲ್ಲಿ ಸಂಚರಿಸುತ್ತಾರೆ. ಇದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ. 1998ರಲ್ಲಿ ರೋಜರ್ಸ್ ಇಂಟರ್‌ನ್ಯಾಶನಲ್ ಕಮಾಡಿಟಿ ಇಂಡೆಕ್ಸ್ ಅನ್ನು ಸ್ಥಾಪಿಸುತ್ತಾರೆ. 1999ಮತ್ತು 2002ರ ಅವಧಿಯಲ್ಲಿ 116 ರಾಷ್ಟ್ರಗಳಲ್ಲಿ ಪತ್ನಿಯೊಡನೆ ಲೋಕ ಸಂಚಾರ ನಡೆಸಿದರು. 245,000 ಕಿ.ಮೀಗಳ ಈ ಮಹಾ ಯಾನವೂ ಗಿನ್ನೆಸ್ ದಾಖಲೆ ಬರೆಯಿತು.

ಚೀನಾದ ಬೆಳವಣಿಗೆಗಳನ್ನು 1807ರಲ್ಲಿ ಬ್ರಿಟನ್‌ನಲ್ಲಿ ಇದ್ದ ಪರಿಸ್ಥಿತಿಗೆ ಅವರು ಹೋಲಿಸುತ್ತಾರೆ. ವಿಶ್ವ ಶಕ್ತಿಯಾಗಿ ಬ್ರಿಟನ್ ಹೊರಹೊಮ್ಮುವ ಮೊದಲು ಅಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗಿತ್ತು. 1907ರಲ್ಲಿ ಅಮೆರಿಕದಲ್ಲೂ ಹಾಗೆ ಆಗಿತ್ತು. ಆಗ ಅಕ್ಷರಶಃ ಅಮೆರಿಕ ದಿವಾಳಿಯಾಗಿತ್ತು. ಆದರೂ 20ನೇ ಶತಮಾನದಲ್ಲಿ ಅಭೂತಪೂರ್ವ ಯಶಸ್ಸನ್ನು ಸಂಪಾದಿಸಿತು. 20ನೇ ಶತಮಾನದಲ್ಲಿ ಚೀನಾದಲ್ಲಿ ವಿಪತ್ತುಗಳಾಗಿರಬಹುದು. 21ನೇ ಶತಮಾನದಲ್ಲಿ ಆ ದೇಶದ ಬೆಳವಣಿಗೆ ವಿಶ್ವದ ಇತರ ಭಾಗಗಳನ್ನು ಮೀರಿಸಲಿದೆ. ಹತ್ತೊಂಭತ್ತನೇ ಶತಮಾನದಲ್ಲಿ ಅಮೆರಿಕ 15 ಸಲ ಹಿಂಜರಿತಕ್ಕೀಡಾಗಿತ್ತು. ನಾಗರಿಕ ದಂಗೆಯನ್ನು ಎದುರಿಸಿತ್ತು. ನಂತರ ವಿಶ್ವ ಶಕ್ತಿಯಾಯಿತು. ಚೀನಾದಲ್ಲಿಯೂ ಮೂವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಭೀಕರವಾಗಿತ್ತು. ಈಗ ಅದನ್ನು ನೋಡಿದರೆ ಮೊಂದೊಂದು ದಿನ ವಿಶ್ವದಲ್ಲಿ ಮುಂಚೂಣಿಗೆ ಬರಲಿದೆ ಎನ್ನಿಸುತ್ತದೆ ಎನ್ನುತ್ತಾರೆ ರೋಜರ್ಸ್.

ಅಮೆರಿಕ ಇರಾಕ್ ವಿರುದ್ಧ ಸಮರ ಸಾರಿದ್ದನ್ನು ರೋಜರ್ಸ್ ಕಟುವಾಗಿ ಟೀಕಿಸಿದ್ದರು. " ನಾವು ಇರಾಕ್ ವಿರುದ್ಧ ಯುದ್ಧ ನಡೆಸಿದರೆ, ಗೆದ್ದರೂ, ಸೋತರೂ ನಮಗೇ ನಷ್ಟ. ಇದರಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟಾಗಲಿದೆ. ಅಮೆರಿಕ ವಿರೋಧಿ ಮೂಲಭೂತವಾದಿ ವಲಯಗಳಲ್ಲಿ ಶತ್ರುತ್ವ ಹೆಚ್ಚಾಗಲಿದೆ. ’ ಎಂದು ಎಚ್ಚರಿಸಿದ್ದರು.

ಅಮೆರಿಕ ಇರಾಕ್ ವಿರುದ್ಧ ಯುದ್ಧ ಘೋಷಿಸಿದಾಗಲೇ, ರೋಜರ್ಸ್ ಇನ್ನು ಅಮೆರಿಕದ ಆರ್ಥಿಕತೆ ಪತನವಾಗುವುದು ಖಚಿತ ಎಂದು ನಂಬಿದ್ದರು. ಅದನ್ನು ನಿರ್ಭಿಡೆಯಿಂದ ಹೇಳಿದ್ದರು ಕೂಡಾ. 2007ರ ಡಿಸೆಂಬರ್‌ನಲ್ಲಿ ನ್ಯೂಯಾರ್ಕ್‌ಗೆ ವಿದಾಯ ಹೇಳಿದ ರೋಜರ್ಸ್, ಸುಮಾರು 16 ದಶಲಕ್ಷ ಡಾಲರ್ ಸಂಪತ್ತಿನೊಡನೆ ಸಿಂಗಾಪುರಕ್ಕೆ ಬಂದು ನೆಲಸಿದರು. ಮುಂದಿನ ಭವಿಷ್ಯ ಏನಿದ್ದರೂ ಏಷ್ಯಾದ ಮಾರುಕಟ್ಟೆಗಳಲ್ಲಿಯೇ ಎಂಬುದು ಅವರ ಖಚಿತ ವಿಶ್ವಾಸ. ಅವರು ಆವತ್ತು ಹೇಳಿದ್ದು ಈವತ್ತು ನಿಜವಾಗಿದೆ. ಅಮೆರಿಕದ ಅರ್ಥ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ. ಏಷ್ಯಾ ವೇಗವಾಗಿ ಬೆಳೆಯುತ್ತಿದೆ.

ರೋಜರ್ಸ್ ಹೇಳುತ್ತಾರೆ- 1807ರಲ್ಲಿ ಆಗಿದ್ದರೆ ಲಂಡನ್‌ಗೆ ತೆರಳುವುದು ಜಾಣ ನಡೆಯಾಗಿರುತ್ತಿತ್ತು. 1907ರಲ್ಲಾಗಿದ್ದರೆ ನ್ಯೂಯಾರ್ಕ್ ನಗರಕ್ಕೆ ಮತ್ತು 2007ರಲ್ಲಿ ಏಷ್ಯಾಗೆ ತೆರಳುವುದು ಜಾಣ ನಡೆ. ’ ಏಷ್ಯಾದ ಜನ ಅತ್ಯಂತ ಸ್ಪೂರ್ತಿಯಿಂದ ಮುನ್ನಡೆಯುತ್ತಿದ್ದಾರೆ. ಬೆಳವಣಿಗೆಗೆ ಇಂತಹ ಪರಿಸರದ ಅಗತ್ಯ ಇದೆ. ಹೀಗಾಗಿ ನಾನು ಅಮೆರಿಕವನ್ನು ತೊರೆದೆ ಎನ್ನುತ್ತಾರೆ ರೋಜರ್ಸ್. ಇನ್ನು ರೋಜರ್ಸ್ ಅವರ ಆರ್ಥಿಕ ವಿಚಾರ ಧಾರೆಗಳನ್ನು ನೋಡೋಣ.

- ಯಾವುದೇ ಆಸ್ತಿ ನಿರಂತರ ಹನ್ನೊಂದು ವರ್ಷ ಏರುಗತಿಯಲ್ಲಿ ಇರುವುದು ಚರಿತ್ರೆಯಲ್ಲಿ ಅಪರೂಪ. ಏರಿಳಿತದ ತಿದ್ದುಪಡಿ ಆಗೇ ಆಗುತ್ತದೆ. ಚಿನ್ನ ಕೂಡ ಇದರಿಂದ ಹೊರತಾಗಿಲ್ಲ.

- ಕೃಷಿ ವಿಶ್ವದ ಆರ್ಥಿಕತೆಯಲ್ಲಿ ಮತ್ತೊಮ್ಮೆ ಮಹತ್ತರವಾದ ಪಾತ್ರ ವಹಿಸುತ್ತಿದೆ. ಈಗ ಅಧಿಕ ಬೆಲೆ, ತಂತ್ರಜ್ಞಾನದ ವಿಸ್ತರಣೆಯನ್ನು ಕಾಣುತ್ತಿದೇವೆ. ಕೃಷಿ ಭೂಮಿಯನ್ನು ಖರೀದಿಸಲು ಇನ್ನೂ ಕಡಿಮೆ ಜನ ಮುಂದಾಗುತ್ತಿದ್ದರೂ, ಭರಾಟೆ ಕಂಡು ಬರುವ ದಿನಗಳು ಬಂದೇ ಬರುತ್ತದೆ.

- ಮುಂಬರುವ ದಿನಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಆದಾಯವನ್ನು ಕೃಷಿ ತಂದುಕೊಡಲಿದೆ. ಕೃಷಿಕರಾಗುವುದೇ ಉತ್ತಮ ಎಂದು ಆಗ ಗೊತ್ತಾಗಲಿದೆ.
- ನನಗೆ ಚೀನಾದಲ್ಲಿ ಯಾವುದೇ ನೆಲ ಇಲ್ಲ. ತೋಟ ಇಲ್ಲ. ಆದರೆ ಅಲ್ಲಿ ಕೃಷಿಗೆ ಸಾಕಷ್ಟು ಅವಕಶಗಳು ಇವೆ. ಚೀನಾ ಸರಕಾರ ಕೃಷಿಯ ಅಭಿವೃದ್ಧಿಗೆ ಬೇಕಾದ ಪ್ರತಿಯೊಂದನ್ನೂ ಮಾಡುತ್ತಿದೆ.

( ಮುಂದುವರಿಯುವುದು)

Friday 13 April 2012

ಗೊಂದಲವನ್ನು ಕೂಡ ಅರ್ಥಪೂರ್ಣವಾಗಿಸಬಹುದು. ಕಸದಿಂದ ರಸ ತೆಗೆಯುವಂತೆ.

ಯಂತ್ರ ಮಾನವರಿಗೆ ಯಾವುದೇ ಗೊಂದಲ ಇರುವುದಿಲ್ಲ. ಈಗ ಆಯ್ಕೆ ನಿಮ್ಮದೇ.

ಗೊಂದಲ ಸುದ್ದಿಯಾಗುತ್ತದೆ. ಆದರೆ ಸುದ್ದಿಯಲ್ಲಿ ಗೊಂದಲ ಇದ್ದರೆ ಅದು ಸುದ್ದಿಯಲ್ಲ, ರದ್ದಿ.

ಗೊಂದಲಗಳಿಗೆ ಉತ್ತರವನ್ನು ಹೊರಗೆ ಹುಡುಕುವುದಕ್ಕಿಂತ ಆಂತರಿಕವಾಗಿ ಕಂಡುಕೊಳ್ಳುವುದು ಪರಿಣಾಮಕಾರಿ. ಯಾಕೆಂದರೆ ಗೊಂದಲಗಳು ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿವೆ.

ಗೊಂದಲ ಮತ್ತು ಕಸಿವಿಸಿಗೆ ಬೇಸರಪಡಬೇಕಾಗಿಲ್ಲ. ಸ್ಪಷ್ಟವಾದ ಬೆಳವಣಿಗೆಗೆ ಮುನ್ನ ಇದೆಲ್ಲ ಸಹಜ ಪ್ರಕ್ರಿಯೆ.

ಕ್ರಿಕೆಟ್‌ನಲ್ಲಿ ಗೊಂದಲದ ಪರಿಣಾಮ ರನೌಟ್ ಆಗುತ್ತಾರೆ, ಕ್ಯಾಚ್ ಕೈ ಚೆಲ್ಲುತ್ತಾರೆ. ಜೀವನದಲ್ಲೂ ಅಷ್ಟೇ, ಗೊಂದಲದ ಪರಿಣಾಮ ಏನೇನೋ ಆಗಿ ಹೋಗುತ್ತವೆ. ಆದರೆ ಅಷ್ಟು ಮಾತ್ರಕ್ಕೇ ಎಲ್ಲವೂ ಮುಗಿದು ಹೋಗುವುದಿಲ್ಲ. ಗೊಂದಲ ಒಂದು ಭಾಗ ಮಾತ್ರ.

ಅರ್ಥ ಆಗದಿರುವುದೇ ಗೊಂದಲದ ಮೂಲ. ಅರ್ಥ ಆದ ತಕ್ಷಣ ಆ ಗೊಂದಲ ಇರುವುದಿಲ್ಲ. ಮತ್ತೆ ಗೊಂದಲ ಆಗೋದು ಅರ್ಥವಾಗದ ಮತ್ತೊಂದು ಗೊಂದಲ ಎದುರಾದಾಗ.

ಕ್ರಿಕೆಟ್‌ನಲ್ಲಿ ಗೊಂದಲದ ಪರಿಣಾಮ ರನೌಟ್ ಆಗುತ್ತಾರೆ, ಕ್ಯಾಚ್ ಕೈ ಚೆಲ್ಲುತ್ತಾರೆ. ಜೀವನದಲ್ಲೂ ಅಷ್ಟೇ, ಗೊಂದಲದ ಪರಿಣಾಮ ಏನೇನೋ ಆಗಿ ಹೋಗುತ್ತವೆ. ಆದರೆ ಅಷ್ಟು ಮಾತ್ರಕ್ಕೇ ಎಲ್ಲವೂ ಮುಗಿದು ಹೋಗುವುದಿಲ್ಲ. ಗೊಂದಲ ಒಂದು ಭಾಗ ಮಾತ್ರ.

ಯಾವುದೇ ವಿಚಾರದಲ್ಲಿ ಮನಸ್ಸು ಒಂದೇ ನಿರ್ಧಾರ ತಾಳುವ ತನಕ ಗೊಂದಲ ಮಾಯವಾಗುವುದಿಲ್ಲ. ನಮ್ಮಲ್ಲಿ ಎರಡು ಮನಸ್ಸುಗಳು ಇರುತ್ತವೆ. ಒಂದು ಹಳೆಯ ಮನಸ್ಸು. ಅದು ಹಳೆಯ ಅಭ್ಯಾಸಗಳ ಫಲವಾಗಿ ಸರಪಳಿಯಂತೆ ಬಿಗಿಯಾಗಿರುತ್ತದೆ. ಮತ್ತೊಂದು ಎಚ್ಚರದಲ್ಲಿರುವ ಮನಸ್ಸು. ಇವೆರಡೂ ಒಂದೇ ಆದಾಗ ಗೊಂದಲ ಇರುವುದಿಲ್ಲ. ಇಲ್ಲವಾದಲ್ಲಿ ಗೊಂದಲ ಸಹಜ.

ಎಲ್ಲಿ ಗೊಂದಲ ಇದೆಯೋ ಅಲ್ಲಿ ಸೃಜನಶೀಲತೆ ಇದೆ. ಉದಾಹರಣೆಗೆ ಜಾಹೀರಾತುಗಳು..

ಎಲ್ಲರೂ ಒಂದೇ ಎಂಬ ಭಾವ ಉತ್ಕಟವಾಗಿದ್ದಾಗ ಮನಸ್ಸು ಪ್ರಸನ್ನವಾಗುತ್ತದೆ. ಆಗ ಯಾರಾದರೂ ಜಗಳ ಕಾದರೂ ಕೋಪ ಬರುವುದಿಲ್ಲ, ಅವರಲ್ಲಿಯೂ ನಿಮ್ಮನ್ನೇ ಕಾಣುವುದರಿಂದ ಭೇದ ಕಾಣಲು ಸಾಧ್ಯವಾಗುವುದಿಲ್ಲ. ಭೇದ ಇಲ್ಲದಿದ್ದಾಗ ಜಗಳ ಮುಂದುವರಿಯುವುದಿಲ್ಲ. ವ್ಯತ್ಯಾಸವೆಲ್ಲ ನಗುವಿನಲ್ಲಿ ಅಂತ್ಯವಾಗುತ್ತದೆ.

ಸಾಧನೆಗೆ ಬದುಕೇ ದೊಡ್ಡ ಅವಕಾಶ ಕೊಟ್ಟಿದೆ. ಆದ್ದರಿಂದ ಅವಕಾಶ ಸಿಗುತ್ತಿಲ್ಲ ಎನ್ನುವುದು ಕಾಲ್ಪನಿಕ

ತಾನು ಕೆಲಸಕ್ಕೆ ಬಾರದವನು ’ ಎಂಬ ಭಾವನೆ ಇನ್ನಿಲ್ಲದಂತೆ ಕುಗ್ಗಿಸುತ್ತದೆ. ಆದ್ದರಿಂದ ಆ ಭಾವನೆಯನ್ನು ಕಿತ್ತೊಗೆಯಬೇಕು.


ಎಲ್ಲ ಅಪನಂಬಿಕೆಗಳನ್ನೂ ನಂಬಿಕೆಯಾಗಿ ಪರಿವರ್ತಿಸಿದರೆ ಅತ್ಯಂತ ಉಪಯುಕ್ತ ಶಕ್ತಿಯಾಗುತ್ತದೆ.

ಪ್ರತಿಭೆ ವ್ಯಕ್ತವಾಗಿಲ್ಲ ಎಂದ ಮಾತ್ರಕ್ಕೇ ಇಲ್ಲ ಎಂದಲ್ಲ..ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಕಸಿಯಲು ಯಾರಿಗೂ ಅಸಾಧ್ಯ. ಆದರೆ ಅದನ್ನು ವ್ಯಕ್ತಪಡಿಸಬೇಕಾದದ್ದು ಅವರವರೇ. ಆದರೆ ಏನಾಗುತ್ತದೆಯೋ ಎಂಬ ಅಪನಂಬಿಕೆಯಿಂದ ವ್ಯಕ್ತಪಡಿಸಲು ಹಿಂಜರಿಯುತ್ತೇವೆ. ಆದಕಾರಣ ಮೊದಲ ಅಪನಂಬಿಕೆಯನ್ನು ಅಳಿಸಿ ಹಾಕಬೇಕು.

ಪ್ರತಿಭೆ ವ್ಯಕ್ತವಾಗಬೇಕಾದರೆ ನಂಬಿಕೆ ಬೇಕು. ನಂಬಿಕೆ ಇಲ್ಲದಿದ್ದಲ್ಲಿ ಪ್ರತಿಭೆ ಅವ್ಯಕ್ತವಾಗಿರುತ್ತದೆ.
ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಕಾರಣ ಇಲ್ಲದಿದ್ದರೆ ದುಃಖವನ್ನು ಹೇಳಿಕೊಳ್ಳಲಾಗುವುದಿಲ್ಲ..ಅದನ್ನು ಸಹಿಸುವುದು ಬಹಳ ಕಷ್ಟ.

ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಎಷ್ಟೋ ಸಲ ನಕ್ಕರೂ, ಅದು ನಗುವಾಗಿರುವುದಿಲ್ಲ..


ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಬೇಕೆಂದು ನಿರೀಕ್ಷಿಸುವುದು ತಪ್ಪು. ಒಂದು ವೇಳೆ ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಿದರೆ ವೈವಿಧ್ಯತೆ, ಅನ್ವೇಷಣೆ, ಸೃಜನಶೀಲತೆಗೆ ಸ್ಥಳ ಇರುತ್ತಿತ್ತಾ ?

ಮನುಷ್ಯ ಎಂದ ಮೇಲೆ ಪ್ರೀತಿ, ಪ್ರೇಮ, ಕೋಪ, ತಾಪ ಎಲ್ಲ ಇದ್ದದ್ದೇ. ಆದರೆ ಆತನಿಗೆ ಅದನ್ನು ಮೀರಿ ನಿಲ್ಲಲೂ ಸಾಧ್ಯವಿದೆ. ಆತ ಭಾವನೆಗಳ ದಾಸನಾಗಬೇಕೆಂದೇನಿಲ್ಲ.

Sunday 8 April 2012

ಕೆಲಸ ಸಿಕ್ಕಿದ್ದಕ್ಕಾಗಿ ಕೃತಜ್ಞತೆಯ ಭಾವ ಇದ್ದಾಗ ಕೆಲಸ ಉತ್ತಮವಾಗುತ್ತದೆ. ಇಲ್ಲದಿದ್ದಾಗ ಗೊಣಗಾಟ, ಅತೃಪ್ತಿ, ಕಳಪೆ ಫಲಿತಾಂಶ ಖಚಿತ.

ಯಾರ ಮನೆಗೂ ಅಂತಸ್ತು, ಐಶ್ವರ್ಯ, ಕೀರ್ತಿಗಳ ಪ್ರದರ್ಶನಕ್ಕಾಗಿ ಹೋಗಕೂಡದು. ಪ್ರೀತಿ, ವಿಶ್ವಾಸಗಳನ್ನು, ಆತ್ಮೀಯತೆಯನ್ನು ಹಂಚಲು ಹೋಗಬಹುದು.

ಅರಿವನ್ನು ಕಳೆದುಕೊಂಡ ಪ್ರತಿ ಸಂದರ್ಭದಲ್ಲೂ ಅಹಂಕಾರ ಪ್ರತಿಷ್ಠಾಪನೆಯಾಗುತ್ತದೆ. ವಿನಯವಂತರಾದ ಪ್ರತಿ ಕ್ಷಣದಲ್ಲೂ ಅರಿವು ನೆಲೆಯೂರುತ್ತದೆ.

ಯಾವತ್ತಿಗೂ ಅಹಂಕಾರ ಜ್ಞಾನವನ್ನು ಬರ ಮಾಡಿಕೊಳ್ಳುವುದಿಲ್ಲ. ಆದರೆ ವಿನಯ ಬರ ಮಾಡಿಕೊಳ್ಳುತ್ತದೆ.

ಎಷ್ಟೋ ಸಲ ಜ್ಞಾನದ ಜತೆಗೆ ಅಹಂಕಾರವೂ ಪ್ರವೇಶಿಸುತ್ತದೆ. ಅದನ್ನು ಅರಿವಿನ ಸಹಾಯದಿಂದ ಹೊರದಬ್ಬಬೇಕು. ಇಲ್ಲವಾಗಿದ್ದರೆ ಅಹಂಕಾರ ದೊಡ್ಡದಾಗಿ ಬೆಳೆದು, ಜ್ಞಾನದ ಪ್ರವೇಶಕ್ಕೆ ಅಡ್ಡಿಯಾಗುತ್ತದೆ.

ಈಗಿನ ಜ್ಞಾನಕ್ಕೆ ಮತ್ತಷ್ಟು ಜ್ಞಾನ ಕೂಡಿಕೊಳ್ಳುವುದು ಅರಿವಿಗೆ ಬರುತ್ತದೆ. ಆದರೆ ಅದರ ಜತೆಗೆ ಅಹಂಕಾರವನ್ನು ಹತ್ತಿರ ಸುಳಿಯಲೂ ಬಿಡಕೂಡದು. ಆಗ ಮಾತ್ರ ಮತ್ತಷ್ಟು ಜ್ಞಾನ ಸೇರಿಕೊಳ್ಳುತ್ತದೆ. ಇಲ್ಲವಾದಲ್ಲಿ ಬೆಳವಣಿಗೆ ಖತಂ.

ಜ್ಞಾನವನ್ನು ಹಂಚುವುದರಿಂದ ಮತ್ತಷ್ಟು ಜ್ಞಾನ ಅದಕ್ಕೆ ಸೇರ್ಪಡೆಯಾಗುತ್ತದೆ. ಜ್ಞಾನದ ಹೆಸರಿನಲ್ಲಿ ಅಜ್ಞಾನ ಕೂಡ ಸೇರಿಕೊಳ್ಳಬಹುದು. ಆದರೆ ಕೊನೆಯಲ್ಲಿ ಉಳಿಯುವುದು ಜ್ಞಾನ ಮಾತ್ರ.

ಜ್ಞಾನ ಯಾರೊಬ್ಬರ ಸ್ವತ್ತಲ್ಲ. ಜ್ಞಾನವನ್ನು ಹಂಚುವುದರಿಂದ ಅದು ನಷ್ಟವಾಗುವುದಿಲ್ಲ. ಮತ್ತೂ ಹೆಚ್ಚುತ್ತದೆ ಎಂಬ ಹಿರಿಯರ ಮಾತು ನೂರಕ್ಕೆ ನೂರು ಸತ್ಯ. ಹಂಚಿದ್ದು ಜ್ಞಾನವಾಗಿದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಲ್ಲ..

ಸ್ನೇಹಿತರೇ,
ನನಗೆ ಎಷ್ಟೋ ಸಲ ಒಂದು ಪ್ರಶ್ನೆ ಪದೇ ಪದೇ ಕಾಡುತ್ತಿರುತ್ತದೆ. ಈ ಜೀವನದ ಗುರಿ ಏನು ? ಕಟ್ಟಕಡೆಗೆ ನನಗೆ ಹೊಳೆಯುವುದು ಸಚ್ಚಾರಿತ್ರ್ಯ. ದುಡ್ಡು ಅಥವಾ ಕೀರ್ತಿ ಕೊಡಲಾಗದ ತೃಪ್ತಿಯನ್ನು ಉತ್ತಮ ಗುಣ ಅಥವಾ ಸಚ್ಚಾರಿತ್ರ್ಯ ನೀಡುತ್ತದೆ. ಸಚ್ಚಾರಿತ್ರ್ಯ ನೀಡುವ ಶಕ್ತಿ ಅತ್ಯುನ್ನತ ಮಟ್ಟದ್ದು, ಅದಕ್ಕೆ ದಣಿವೇ ಇರುವುದಿಲ್ಲ. ಅಲ್ವಾ...

ಕೆಲಸ ಸಿಕ್ಕಿದ್ದಕ್ಕಾಗಿ ಕೃತಜ್ಞತೆಯ ಭಾವ ಇದ್ದಾಗ ಕೆಲಸ ಉತ್ತಮವಾಗುತ್ತದೆ. ಇಲ್ಲದಿದ್ದಾಗ ಗೊಣಗಾಟ, ಅತೃಪ್ತಿ, ಕಳಪೆ ಫಲಿತಾಂಶ ಖಚಿತ.

ಸೋಲಿನಿಂದ ಪಾಠ ಕಲಿತರೆ, ಕಲಿತದ್ದನ್ನು ಅನುಷ್ಠಾನಗೊಳಿಸಿದರೆ ಜೀವನದಲ್ಲಿ ಸೋಲು ಸೋಲೇ ಆಗಿ ಇರುವುದಿಲ್ಲ.

Friday 6 April 2012

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಸಾಮಾನ್ಯವಾಗಿ ಒಂದು ಅವಕಾಶ ತಪ್ಪಿದೊಡನೆಯೇ ಮತ್ತೊಂದು ಅವಕಾಶ ಕಾದಿರುತ್ತದೆ. ಆದರೆ ಅವಕಾಶ ಕೈತಪ್ಪಿದ ದುಃಖದಲ್ಲಿ ಅದು ಕಾಣಿಸುವುದಿಲ್ಲ.

ಅವಕಾಶಗಳು ಸಿಗದಿರುವುದು ಕೂಡ ಒಂದು ಅವಕಾಶವೇ. ಆದ್ದರಿಂದ ಅವಕಾಶ ಸಿಕ್ಕಿಲ್ಲ ಎನ್ನುವುದು ಒಂದು ಕಲ್ಪನೆಯಷ್ಟೇ. ವಾಸ್ತವವಲ್ಲ..

ಯಾರು ಅವಮಾನಿಸುತ್ತಾರೆಯೋ, ಅವರ ಬಳಿ ಜಗಳಕ್ಕೆ ಇಳಿಯಕೂಡದು. ಆದರೆ ಅವರನ್ನು ಎಂದಿಗೂ ಮರೆಯಕೂಡದು. ಅವರು ನೋಡುತ್ತಿರುವಂತೆಯೇ ಬೆಳೆಯುತ್ತಾ ಹೋಗಬೇಕು. ಇಡೀ ಬದುಕು ಉತ್ತರ ಆಗಬೇಕು. ಮಾತಲ್ಲ.

ಬ್ಯಾಂಕ್‌ಗಳು ಬಡವರಿಗೆ ಸಾಲವಾಗಿ ದುಡ್ಡು ಕೊಡುವುದಿಲ್ಲ. ಆದರೆ ಠೇವಣಿ ಇಡುವ ಶ್ರೀಮಂತರಿಗೆ ಬಡ್ಡಿ ಕೊಡುತ್ತವೆ. ಹೀಗಾಗಿ ಈವತ್ತು ಬ್ಯಾಂಕ್‌ಗಳೆಂದರೆ ದುಡ್ಡಿದ್ದವರಿಗೇ ದುಡ್ಡು ಕೊಡುವ ಹಣಕಾಸು ಸಂಸ್ಥೆಗಳಾಗಿವೆ.

ಬಡತನದಿಂದ ಆತ್ಮವಿಶ್ವಾಸದೆ ನಲುಗುತ್ತದೆ. ಆದರೆ ಬಡತನದಿಂದ ಮೇಲೆ ಬರಬೇಕಾದರೆ ಆತ್ಮವಿಶ್ವಾಸ ಅತ್ಯಂತ ಅಗತ್ಯ.

ಎಲ್ಲೋ ದೂರದಲ್ಲಿರುವ ಅವಕಾಶಗಳ ಬಗ್ಗೆ ಚಿಂತಿಸುತ್ತಾ ಕಾಲ ಹರಣ ಮಾಡುವುದರ ಬದಲಿಗೆ, ಹತ್ತಿರದ ಅವಕಾಶಗಳನ್ನು ಬಳಸಿಕೊಂಡು ಪೂರ್ಣಗೊಳಿಸಬೇಕು. ಆಗ ಮಗದೊಂದು ಅವಕಾಶ ತಾನಾಗಿಯೇ ಸೃಷ್ಟಿಯಾಗುತ್ತದೆ. ಹೊರತಾಗಿ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಕೊರಗುವುದರಿಂದ, ಕೈಯಲ್ಲಿರುವ ಅವಕಾಶಗಳೂ ತಪ್ಪಿ ಹೋಗುತ್ತವೆ.

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಕಾಯಬೇಕು..ಶತ ಶತಮಾನಗಳ ತನಕ ಬೇಕಾದರೂ ಕಾಯುವೆ ಎನ್ನುವಷ್ಟು ದೊಡ್ಡ ತಾಳ್ಮೆ ಇರಬೇಕು. ಅಂದರೆ ಅಕ್ಷರಶಃ ನೂರು ವರ್ಷ ಕಾಯೋದು ಅಂತ ಅಲ್ಲ. ಅಂತಹ ಪರ್ವತೋಪಮ ತಾಳ್ಮೆ ಇಲ್ಲದಿದ್ದರೆ ಆರಂಭಿಕ ಅಡೆತಡೆಗಳಿಂದ ಬಲು ಬೇಗ ಹತಾಶರಾಗುವ ಸಾಧ್ಯತೆ ಇರುತ್ತದೆ. ಆದರೆ ಅಂತಹ ತಾಳ್ಮೆ ಇರುವ ವ್ಯಕ್ತಿ ಬದುಕಿನಲ್ಲಿ ಉನ್ನತ ಗುರಿಗಳನ್ನು ಸಾಧಿಸುವುದು ಶತಃಸಿದ್ಧ..

ಕಷ್ಟಕಾಲದಲ್ಲಿದ್ದಾಗ ಸ್ನೇಹಿತರು ಸಹಾಯಕ್ಕೆ ಬರುತ್ತಿಲ್ಲವೇ ? ಅವರ ವಿರುದ್ಧ ಕೋಪಿಸಿಕೊಳ್ಳದಿರಿ. ಎಲ್ಲ ಕಾಲದಲ್ಲೂ ನಿಮ್ಮ ಪರಮಾಪ್ತ ಮಿತ್ರರೆಂದರೆ ನೀವೇ.

ಸುತ್ತಮುತ್ತ ಜನ ಇದ್ದಾಗ ಹೇಗಿರುತ್ತೀರಿ ಎಂಬುದಕ್ಕಿಂತಲೂ, ಒಬ್ಬರೇ ಇದ್ದಾಗ ಹೇಗೆ ವರ್ತಿಸುತ್ತೀರಿ ? ಏನು ಯೋಚಿಸುತ್ತೀರಿ ಎಂಬುದು ಸ್ವಲ್ಪ ಹೆಚ್ಚೇ ಪ್ರಾಮುಖ್ಯತೆ ಪಡೆಯುತ್ತದೆ. ಅದುವೇ ನಿಜವಾದ ನೀವು.

Monday 19 March 2012

ಫೇಸ್‌ಬುಕ್ ಖಾತೆಗೆ ಜಮೆ ಮಾಡಿದ ಕೆಲ ಸಾಲುಗಳು..

1. ಓದುವ ಮತ್ತು ಬರೆಯುವ ಕ್ರಿಯೆ ಮೊದ ಮೊದಲು ಸ್ವಲ್ಪ ಕಷ್ಟ ಆಗಬಹುದು. ಆದರೆ ಕ್ರಮೇಣ ಅದು ನಿಮಗೆ ಸುಖ ಕೊಡುವುದಲ್ಲದೆ, ಜ್ಞಾನದ ಬೆಳಕಾಗುತ್ತದೆ. ಓದಿ ಬರೆದು ನಾವು ಹಾಳಾದೆವು ಅಂತ ಯಾರಾದರೂ ಅಂದದ್ದನ್ನು ಕೇಳಿದ್ದೀರಾ ?

2. ಈ ಜಗತ್ತಿಗೆ ಬಂದ ಮೇಲೆ ಛಾಪು ಮೂಡಿಸದೆಯೂ ಹೋಗಬಹುದು. ಯಾರೂ ಕೇಳಲ್ಲ. ಆದರೆ ಕೊನೆಗೆ ಅಂತರಂಗದ ವಿಷಾದ ಬಿಟ್ಟು ಹೋಗುವುದಕ್ಕಿಂತ ಛಾಪು ಅತ್ಯಂತ ಶ್ರೇಷ್ಠವಾದದ್ದು ಅಲ್ವಾ..

3. ಯಾರಲ್ಲಾದರೂ ಒಳ್ಳೆಯ ಗುಣ ಕಂಡರೆ ಅವರನ್ನು ನಿಜಕ್ಕೂ ಮೆಚ್ಚಿಕೊಂಡು, ನಾಲ್ಕು ಮಾತನ್ನಾಡಿ ಬೆನ್ನು ತಟ್ಟಲೂ ಕಂಜೂಸ್‌ತನ ಯಾಕೆ ಬೇಕು ?

4. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಎಲ್ಲರಿಗೂ ಅವರ ಅಮೋಘ ಸಾಧನೆಯಿಂದ ಮಾತ್ರ ಇಷ್ಟವಾಗುವುದಿಲ್ಲ. ಅವರ ಸುದೀರ್ಘ ಕರಿಯರ್‌ನುದ್ದಕ್ಕೂ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಮೆರೆದರು. ಅದಕ್ಕಾಗಿ ಜನ ಕ್ರಿಕೆಟ್ ಮೀರಿಯೂ ಅವರನ್ನು ಇಷ್ಟಪಡುತ್ತಾರೆ.

5. ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ನೋವಿನ ಆರಂಭವಿರುತ್ತದೆ.
ಪ್ರತಿಯೊಂದು ನೋವಿನ ಆರಂಭವೂ ಗೆಲುವಿನೊಂದಿಗೆ ಅಂತ್ಯವಾಗುತ್ತದೆ - ಡಾ. ಎಪಿಜೆ ಅಬ್ದುಲ್ ಕಲಾಂ.

6. ನೀವು ಪ್ರೀತಿಸಿದ ಹುಡುಗಿ ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದರೆ ನಿಮ್ಮ ಜತೆ ಆ ಹುಡುಗಿಗೆ ಹೊಂದಿಕೆಯಾಗುತ್ತಿಲ್ಲ ಎಂದೇ ಅರ್ಥ. ಹಾಗಾದಲ್ಲಿ ಅ ಹುಡುಗಿಗೆ ಮನಸ್ಸಿನಲ್ಲೇ ಶುಭ ವಿದಾಯ ಕೋರಿ, ಗಟ್ಟಿ ಮನಸ್ಸಿನಿಂದ ನಿಮ್ಮ ಭವಿಷ್ಯ ಮತ್ತು ಬದುಕನ್ನು ಗಾಢವಾಗಿ ಪ್ರೀತಿಸಿ. ಭಗ್ನ ಪ್ರೇಮದಿಂದ ಉಂಟಾಗುವ ಗಾಯಕ್ಕೆ ನೀವೇ ಮುಲಾಮು ತಯಾರಿಸಿ ಹಚ್ಚಬೇಕು. ಅದು ಮೆಡಿಕಲ್ ಶಾಪಿನಲ್ಲಿ ಸಿಗೋದಿಲ್ಲ.

7. ನಾವು ಮಾಡುವ ದೊಡ್ಡ ತಪ್ಪುಗಳಲ್ಲೊಂದು, ನಮಗೆ ಗೊತ್ತಿಲ್ಲದಿರುವ ವಿಷಯಗಳ ಬಗ್ಗೆ ಭಯಭೀತರಾಗುವುದು. ಆದರೆ ಗೊತ್ತಿಲ್ಲದಿರುವುದಕ್ಕೆ ಭಯಪಡಬೇಕಿಲ್ಲ. ಯಾಕೆಂದರೆ ಗೊತ್ತಿಲ್ಲದಿರುವುದೆಂದರೆ ತಾತ್ಕಾಲಿಕವಾಗಿ ತಿಳಿದಿಲ್ಲ ಎಂದಷ್ಟೇ. ಹೀಗಾಗಿ ತಿಳಿದುಕೊಳ್ಳುವುದನ್ನು ಬಿಡಬಾರದು.

8. ನಿಮ್ಮಲ್ಲಿ ಕಾನ್ಫಿಡೆನ್ಸ್ ಅನ್ನು ಹೆಚ್ಚಿಸಲು ಅತ್ಯುತ್ತಮ ದಾರಿ ಇದೆ. ಅದೇನೆಂದರೆ ನಿಮ್ಮ ಬಲವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು. ಅದನ್ನೇ ಪ್ರತಿ ದಿನದ ಸಾಧನೆಗೆ ಬಂಡವಾಳವನ್ನಾಗಿಸುವುದು. ನಿಮ್ಮ ಬ್ರ್ಯಾಂಡ್‌ನ ಮೌಲ್ಯವನ್ನು ಹೆಚ್ಚಿಸಲು ಇದು ಅಗತ್ಯ.

9. ಆಫೀಸು ಅಂದ ಮೇಲೆ ರಾಜಕೀಯ, ರೂಮರ್ರು, ಕಾಡು ಹರಟೆ, ಸದ್ದಿಲ್ಲದೆ ಕಾಲೆಳೆಯುವುದು ಇದ್ದದ್ದೇ, ಆದರೆ ಇದಾವುದನ್ನೂ ಲೆಕ್ಕಿಸದೆ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ಅಂತಹ ಮಹತ್ವಾಕಾಂಕ್ಷೆಯಿಂದ ಮಾಡುವ ಕೆಲ್ಸ ನಿಮ್ಮಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ...

10. ಶತ ಶತಮಾನಗಳೇ ಉರುಳಲಿ, ಅದೊಂದು ಪ್ರಾಚೀನ ಮಾತು ಹುರಿದುಂಬಿಸುತ್ತದೆ. ಧೈರ್ಯಂ ಸರ್ವತ್ರ ಸಾಧನಂ ! ಹೌದು. ಎಂಥದ್ದೇ ಸಂದರ್ಭ ಎದುರಾಗಲಿ, ಅವುಡುಗಚ್ಚಿ ಸಹಿಸುವ ಶಕ್ತಿಯನ್ನು ಕೊಡುವುದು ಬೇರಾವುದೂ ಅಲ್ಲ, ಅದೇ ಧೈರ್ಯ !!!

11.ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಬೆಳೆಯುತ್ತಿರುವಾಗ, ಎಷ್ಟೋ ಸಲ ಹಿರಿಯ ಸಹೋದ್ಯೋಗಿಗಳಿಂದ ಅಸಹಕಾರ ಮತ್ತು ಅವಮಾನಕ್ಕೆ ಗುರಿಯಾಗಬಹುದು. ಆದರೆ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಯಾವುದೇ ಸಂದರ್ಭ ಛಲ ಮತ್ತು ಕೆಚ್ಚು ತಣಿಯದಂತೆ ನೋಡಿಕೊಳ್ಳಿ. ಇಲ್ಲವಾದರೆ ಮುಂದುವರಿಯಲು ಕಷ್ಟವಾಗುತ್ತದೆ.

12.ಅದು ಯಾಕೆ ಅಂತ ಹೇಳುವುದು ಕಷ್ಟ. ಎಷ್ಟೋ ಸಲ ಮನಸ್ಸು ಆತಂಕಕ್ಕೀಡಾಗುತ್ತದೆ. ಯಾರೂ ಸಮಾಧಾನಪಡಿಸುವವರು ಹತ್ತಿರ ಇರುವುದಿಲ್ಲ. ವ್ಯಾಕುಲಗೊಳ್ಳುವ ಮನಕ್ಕೆ ಧೈರ್ಯ ತುಂಬುವುದು ಹೇಗೆ ? ಅಂತಹ ಸಂದರ್ಭಗಳಲ್ಲಿ ಉತ್ತರವಾಗುತ್ತದೆ ಭಗವದ್ಗೀತೆ ! ಹೌದು. ವ್ಯಕ್ತಿತ್ವ ವಿಕಸನದ ಬಗ್ಗೆ ಹಲವಾರು ಪುಸ್ತಕಗಳನ್ನು ಓದಬಹುದು. ಆದರೆ ಗೀತೆಯ ಕೆಲವು ಸಾಲುಗಳನ್ನಾದರೂ, ಒಮ್ಮೆ ಶ್ರದ್ಧೆಯಿಂದ ಓದಿದವರಿಗೆ ಇದಕ್ಕಿಂತ ಬೇರೆ ವ್ಯಕ್ತಿತ್ವ ವಿಕಸನದ ಕೃತಿ ಬೇಕೇ ? ಎಂದು ಅನ್ನಿಸದಿರದು. ಭಗವದ್ಗೀತೆಯ ಪ್ರತಿಯೊಂದು ಸಾಲುಗಳಲ್ಲಿಯೂ ಅಂತಹ ಶಕ್ತಿ ಇದೆ.
ಗೀತೆಯ ಸಾಂಖ್ಯಯೋಗದಲ್ಲಿ ಒಂದು ಶ್ಲೋಕವಿದೆ. " ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ, ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ” ಅಂತ. ಅದರ ಕನ್ನಡಾನುವಾದ ಹೀಗಿದೆ - ಪಾರ್ಥ..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಹೇಯವಾದ ಹೃದಯ ದೌರ್ಬಲ್ಯದಿಂದ ಪಾರಾಗಿ ಎದ್ದು ನಿಲ್ಲು ! ”
ಪ್ರಯೋಗಿಸಿ ನೋಡಿ. ಮನಸ್ಸು ವೃಥಾ ಕೀಳರಿಮೆ ಪಟ್ಟಾಗ ಅಥವಾ ಯಾವುದೋ ಚಿಂತೆ ಮನಸ್ಸನ್ನು ಹಿಂಡಿ ಹೈರಾಣ ಮಾಡಿದಾಗ ಒಮ್ಮೆ ಮೇಲ್ಕಂಡ ಸಾಲನ್ನು ಧ್ಯಾನಿಸಿ. ಧೈರ್ಯದ ಒರತೆ ನಿಮ್ಮ ಬತ್ತಳಿಕೆಯನ್ನು ತುಂಬದಿದ್ದರೆ ಕೇಳಿ..

Thursday 1 March 2012

ಡಾ. ಶಿವ ಕುಮಾರ ಸ್ವಾಮೀಜಿಯವರ ದಿನಚರಿ !


ರೈತರು ನಮ್ಮ ಸಮಾಜದ ಬೆನ್ನೆಲುಬು ಅಂತ ಡಾ. ಶಿವ ಕುಮಾರ ಸ್ವಾಮೀಜಿಯವರು ದೃಢವಾಗಿ ನಂಬುತ್ತಾರೆ. ಅವರಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅದರಲ್ಲಿ ಮಹಾ ಶಿವರಾತ್ರಿಯಂದು ನಡೆಯುವ ಜಾನುವಾರು ಜಾತ್ರೆ ಒಂದು. ಲಕ್ಷಾಂತರ ರೈತರು ಮಠಕ್ಕೆ ತಮ್ಮ ಜಾನುವಾರುಗಳೊಂದಿಗೆ ಆಗಮಿಸುತ್ತಾರೆ. 15 ದಿನಗಳ ಉತ್ಸವದ ಭಾಗವಾಗಿ ಕೈಗಾರಿಕೆ ಮತ್ತು ಕೃಷಿ ಮೇಳ ನಡೆಯುತ್ತದೆ. ಬಸವಣ್ಣನವರ ಸಂದೇಶಗಳನ್ನು ಸಾರುವ ನಾಟಕಗಳು ನಡೆಯುತ್ತವೆ. ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿಯೂ ಅವರು ಕನ್ನಡಕ ಧರಿಸುವುದಿಲ್ಲ. ಅವರ ದೃಷ್ಟಿ ಮೊನಚಾಗಿದೆ. ನಡೆಯುವಾಗ ಊರುಗೋಲಿನ ಸಹಾಯ ಮಾತ್ರ ಸಾಕು. ನಿಮ್ಮ ಆರೋಗ್ಯದ ಗುಟ್ಟೇನು ಅಂದರೆ, ಅವರು ಮುಗುಳ್ನಗುತ್ತಾರೆ. ಕಠಿಣ ಪರಿಶ್ರಮ, ಅನುಯಾಯಿಗಳ ಅಕ್ಕರೆ, ಮಿತ ಆಹಾರ ಸೇವನೆ ಎನ್ನುತ್ತಾರೆ. ಸ್ವಾಮೀಜಿಯವರು ಮಿತಾಹಾರ ಸೇವನೆ ಮಾತ್ರವಲ್ಲ, ಅವರ ನಿದ್ದೆ ಕೂಡ ಅತ್ಯಲ್ಪ. ಪ್ರತಿ ದಿನ ಮೂರು ಗಂಟೆ ಮಾತ್ರ ಅವರು ನಿದ್ದೆ ಮಾಡುತ್ತಾರೆ ( ಈ ಲೇಖನ 2007ರಲ್ಲಿ, ಅವರ 99ನೇ ವಯಸ್ಸಿನಲ್ಲಿದ್ದಾಗ ಪ್ರಕಟಿತ) ಸ್ವಾಮೀಜಿಯವರ ದಿನಚರಿ ಇಂತಿದೆ.
- ಬೆಳಗ್ಗೆ 2-3 ಗಂಟೆ : ಅಧ್ಯಯನ
3-3:30 : ಸ್ನಾನ
3:30-5:30 : ಧ್ಯಾನ, ಪೂಜೆ, ಭಜನೆ, ಉಪಾಹಾರ
5:30ರಿಂದ : ವಿದ್ಯಾರ್ಥಿಗಳೊಡನೆ ಪ್ರಾರ್ಥನೆ, ಮಠದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
ಸಂಜೆ 6-8 ಗಂಟೆ : ವಿದ್ಯಾರ್ಥಿಗಳೊಡನೆ ಸಂಜೆಯ ಪ್ರಾರ್ಥನೆ
ರಾತ್ರಿ 8-11 : ಅಧ್ಯಯನ
ಸ್ವಾಮೀಜಿಯವರು ಸಾಕಷ್ಟು ಪ್ರಯಾಣ ಮಾಡುತ್ತಾರೆ. ಒಂದು ಸಣ್ಣ ಇಡ್ಲಿ, ಸಾಂಬಾರ ರಹಿತ ದಾಲ್, ಹಣ್ಣಿನ ಚೂರು ಮಾತ್ರ ಅವರ ಉಪಾಹಾರ. ಊಟಕ್ಕೆ ಸಣ್ಣ ರಾಗಿ ಮುದ್ದೆ. ಸ್ವಲ್ಪ ಅನ್ನ. ರಾತ್ರಿಯ ಊಟ ಇನ್ನೂ ಸರಳ. ಅವರು ಕಾಫಿ, ಚಹಾ ಅಥವಾ ಹಾಲು ಕುಡಿಯುವುದಿಲ್ಲ. ಬೇವಿನ ಕಷಾಯವನ್ನು ಮಾತ್ರ ಸೇವಿಸುತ್ತಾರೆ. ಬೆಳಗ್ಗೆ ದಿನಪತ್ರಿಕೆಗಳನ್ನು ಓದುವುದನ್ನು ತಪ್ಪಿಸುವುದಿಲ್ಲ. ಜಗತ್ತಿನ ಆಗುಹೋಗುಗಳಿಗೆ ದಿನಾ ಕಿವಿಗೊಡುತ್ತಾರೆ.

ಸ್ವಾಮೀಜಿ ಹುಟ್ಟಿದ ವರ್ಷ : 1908
ಹುಟ್ಟಿದ ಸ್ಥಳ : ವೀರಾಪುರ, ಮಾಗಡಿ ತಾಲ್ಲೂಕು, ಬೆಂಗಳೂರು.
ಹೆತ್ತವರು : ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ
ವಿದ್ಯಾಭ್ಯಾಸ : ಸರಕಾರಿ ಪ್ರಾಢಶಾಲೆ, ತುಮಕೂರು
ಪದವಿ-ಪೂರ್ವ, ಪದವಿ : ಸೆಂಟ್ರಲ್ ಕಾಲೇಜು, ಬೆಂಗಳೂರು.

Saturday 18 February 2012

ಎಲ್ಲವೂ ದೇವೇಚ್ಛೆ : ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ

ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿಯವರ 1930ರ ಆದಿಯಿಂದಲೇ ಆರಂಭವಾಗುತ್ತದೆ. ಆಗ ಮಠದ ಸ್ವಾಮೀಜಿಗಳಾಗಿದ್ದ ಶ್ರೀ. ಉದ್ಧಾನ ಶಿವಯೋಗಿಯವರು ವಿರಕ್ತಾಶ್ರಮದ ಪರಂಪರೆಯನ್ನು ಮುನ್ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಮೂರನೇ ವರ್ಷ ಪದವಿಯಲ್ಲಿದ್ದ ಶಿವಣ್ಣ ( ಆಗ ಶಿವ ಕುಮಾರ ಸ್ವಾಮೀಜಿಯವರನ್ನು ಕರೆಯುತ್ತಿದ್ದುದು ಹೀಗೆ) ಅವರನ್ನು ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದರು. ನಂತರ ಸ್ವಾಮೀಜಿ ಪವಾಡ ಸದೃಶ ರೀತಿಯಲ್ಲಿ ಮಠವನ್ನು ಅಭಿವೃದ್ಧಿಪಡಿಸಿ, ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈವತ್ತು ಮಠ 128 ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತದೆ. ೮,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಅಶನ,ವಸನ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ನೀಡುತ್ತಿದೆ.
ಆದರೆ ಈ ಸುದೀರ್ಘ ಯಶಸ್ಸಿನ ಪಯಣ, ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ಸ್ವಾಮೀಜಿಯವರು ಈಗಲೂ ವಿನಮ್ರ ಭಾವದಿಂದ ಇದ್ದಾರೆ. " ಎಲ್ಲವೂ ದೇವೇಚ್ಛೆ’ ಎನ್ನುತ್ತಾರೆ. " ನಾನು ನನ್ನ ಪೂಜ್ಯ ಗುರುಗಳು ಆರಂಭಿಸಿದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನಷ್ಟೆ ಮಾಡಿದ್ದೇನೆ ಎನ್ನುವ ಪ್ರಬುದ್ಧ ಮಾತು ಸ್ವಾಮೀಜಿಯವರದ್ದು. ಅವರ ಈ ಸರಳತೆಯನ್ನು ಇಷ್ಟ ಪಡುವ ಅನೇಕ ಮಂದಿ, ಸ್ವಾಮೀಜಿಯವರನ್ನು ನಡೆದಾಡುವ ದೇವರು ಅಂತ ಗೌರವಿಸುತ್ತಾರೆ. ( ಮುಂದುವರಿಯುವುದು)

Friday 17 February 2012

ನಿಜವಾದ ಕರ್ಮಯೋಗಿ..

ಎಷ್ಟೋ ಸಲ ಮನಸ್ಸಿಗೆ, ಶರೀರಕ್ಕೆ ಜಡತ್ವ ಆವರಿಸಿದಾಗ ನಮ್ಮ ನಾಡಿನ ಹೆಮ್ಮೆಯ ಶತಾಯುಷಿ ಕರ್ಮಯೋಗಿಯನ್ನು ನೆನಪಿಸಿಕೊಳ್ಳುತ್ತೇನೆ. ಅವರು ಯಾರೆಂಬುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು.. ನಿಮ್ಮ ಊಹೆ ನಿಜ. ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ. ಅವರ ಬಗ್ಗೆ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲ ವರ್ಷಗಳ ಹಿಂದೆ ಲೇಖನ ಪ್ರಕಟವಾಗಿತ್ತು. ಅದರ ಸಾರವನ್ನು ನಿಮ್ಮ ಮುಂದಿಡುತ್ತೇನೆ.
- ಸಿದ್ಧ ಗಂಗಾ ಮಠದ ಶ್ರೀ. ಶಿವಕುಮಾರ ಸ್ವಾಮೀಜಿಯವರು ಯಾವುದೇ ಮತಕ್ಕಿಂತ ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ಅವರು ಬಡವರು, ಅನಾಥರಿಗೆ ಜ್ಞಾನದ ಬಾಗಿಲುಗಳನ್ನು ತೆರೆದರು. ಜ್ಞಾನದ ಜತೆಗೆ ಅಶನ, ವಸತಿ ಒದಗಿಸಿದರು. ಅವರ ಮಠದಲ್ಲಿ ಕಂಡು ಬಂದ ಚಿತ್ರಣವಿದು.
"ಬುದ್ಧಿ, ಸರಕಾರಿ ಅಧಿಕಾರಿಯೊಬ್ಬರು ನಿಮ್ಮನ್ನು ಭೇಟಿಯಾಗ ಬಯಸುತ್ತಿದ್ದಾರೆ’ ವ್ಯಕ್ತಿಯೊಬ್ಬರು ಸ್ವಾಮೀಜಿಯವರ ಕಿವಿಯ ಬಳಿ ಮೆಲುದನಿಯಲ್ಲಿ ತಿಳಿಸುತ್ತಾರೆ. " ಬುದ್ಧಿ, ನಮ್ಮ ಕಾಲೇಜಿಗೆ ನೀವು ಭೇಟಿ ಕೊಟ್ಟರೆ ಸಂತಸವಾಗುತ್ತದೆ ಎನ್ನುತ್ತಾರೆ ಅಲ್ಲಿಗೆ ಬಂದಿರುವ ವಿದ್ಯಾರ್ಥಿಗಳ ಗುಂಪು, " ಬುದ್ಧಿ, ಜೇವರ್ಗಿಯಿಂದ ಒಂದಷ್ಟು ಮಂದಿ ಬಂದಿದ್ದು, ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ, ಬುದ್ಧಿ, ಈವತ್ತು ಪ್ರಸಾದಕ್ಕೆ ಏನು ಮಾಡೋಣ, ಅಂತ ಮಠದ ಅಡುಗೆಯವರು ಭಿನ್ನವಿಸಿಕೊಳ್ಳುತ್ತಾರೆ.
ಕಡತಗಳನ್ನು ಓದುತ್ತ ಮೆಲ್ಲನೆ ತಲೆಯನ್ನೆತ್ತಿ, ಪ್ರೀತಿಯಿಂದ ಮಾತನಾಡಿಸುವ ಸ್ವಾಮೀಜಿ, ಎಲ್ಲರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ. " ಅಧಿಕಾರಿಗೆ ಕಚೇರಿಯಲ್ಲಿ ಕುಳ್ಳಿರಲು ಹೇಳುತ್ತಾರೆ. ಎಲ್ಲ ಸರಿ ನಾನೀಗ ಬರುತ್ತೇನೆ. ವಿದ್ಯಾರ್ಥಿಗಳೇ ನೀವೆಲ್ಲರೂ ಚೆನ್ನಾಗಿ ಓದುತ್ತಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮ ಆಯ್ಕೆಯ ವಿಷಯದಲ್ಲಿ ಕಲಿಯಿರಿ, ಇನ್ನು ಜೇವರ್ಗಿಯಿಂದ ಬಂದಿರುವವರನ್ನು ಭೇಟಿಯಾಗೋಣ, ಯಾಕೆಂದರೆ ಅವರು ಬಹುದೂರ ಪ್ರಯಾಣ ಬೆಳೆಸಿ ಮನೆ ಸೇರಬೇಕಾಗಿದೆ..’ ಎನ್ನುತ್ತಾರೆ ಸ್ವಾಮೀಜಿ.. 99ರ ಇಳಿ ವಯಸ್ಸಿನಲ್ಲಿ ಸ್ವಾಮೀಜಿಯವರ ನಿತ್ಯದ ಚಟುವಟಿಕೆಗಳ ಎರಡು ನಿಮಿಷಗಳಿವು. 99ರ ವಯಸ್ಸಿನಲ್ಲಿಯೂ ಅವರು ದಿನಕ್ಕೆ 18 ಗಂಟೆ ದುಡಿಯುತ್ತಾರೆ ! ಈಗ ಅವರ ವಯಸ್ಸು 104 ( ಮುಂದುವರಿಯುವುದು)

ಆಂದೋಲನ ಎಂಬ ಪತ್ರಕರ್ತರ ಗರಡಿ ಮನೆಯಲ್ಲಿ !

ನನ್ನ ಪ್ರೀತಿಯ ಸ್ನೇಹಿತರೇ,
ಇದು ಕೇವಲ ನನ್ನ ಅನಿಸಿಕೆಯಲ್ಲ, ಹತ್ತಾರು ವರ್ಷಗಳ ಹಿಂದಿನಿಂದಲೇ ಮೈಸೂರಿನ ಆಂದೋಲನದ ಬಗ್ಗೆ ನೂರಾರು ಮಂದಿ ಪತ್ರಕರ್ತರು ಹೇಳಿರುವ ಮಾತು. ಈವತ್ತಿಗೂ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಆಂದೋಲನದಲ್ಲಿ ಪತ್ರಿಕೋದ್ಯಮದ ಪಟ್ಟುಗಳನ್ನು ಕಲಿತು ಯಶಸ್ವಿ ಕರಿಯರ್ ನಡೆಸುತ್ತಿರುವವರು ಇದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯಲ್ಲಿ ದಶಕದ ಹಿಂದೆ ವರದಿಗಾರನಾಗಿ ಸೇರ್ಪಡೆಯಾಗಿದ್ದೆ. ಆಗ ಅಲ್ಲಿ ಹಿರಿಯರಾದ ಓಂಕಾರ್, ಚಿನ್ನಸ್ವಾಮಿ ವಡ್ಡಗೆರೆ, ವೀರಭದ್ರಪ್ಪ ಬಿಸ್ಲಳ್ಳಿ, ಕುಂದೂರು ಉಮೇಶ ಭಟ್ಟ, ಕೋದಂಡರಾಮ, ಶಶಿ ಕುಮಾರ್ ಮೊದಲಾದ ಸಹೋದ್ಯೋಗಿಗಳು ಸಿಕ್ಕರು. ನಮ್ಮ ತಂಡ ವಿಟಮಿನ್ "ಎಂ’ನಿಂದ ಬಳಲುತ್ತಿದ್ದರೂ, ಉತ್ಸಾಹಕ್ಕೆ ಯಾವುದೇ ಕೊರತೆ ಇರಲಿಲ್ಲ. ಯಾವುದೇ ಕಾಲೇಜಿನಲ್ಲಿ ಕಲಿಸದ ಪತ್ರಿಕೋದ್ಯಮದ ಪಾಠಗಳನ್ನು ನನಗೆ ಆಂದೋಲನ ಕಲಿಸಿತು ಅಂತ ನೆನೆಯುತ್ತೇನೆ. ಅದಕ್ಕಾಗಿ ಪತ್ರಿಕೆಯ ಸಂಪಾದಕ, ಮಾಲೀಕರಾದ ರಾಜ ಶೇಖರಕೋಟಿಯವರಿಗೆ ಚಿರಋಣಿಯಾಗಿದ್ದೇನೆ.
ಅಲ್ಲಿವರೆಗೆ ಪತ್ರಿಕೆಗಳಿಗೆ ಸಣ್ಣ ಪುಟ್ಟ ಬರಹ, ಕತೆ, ಕವನ ಅಂತ ಬರೆದುಕೊಂಡಿದ್ದ ನನಗೆ, ಅದಕ್ಕೂ ಪತ್ರಿಕಾ ಬರವಣಿಗೆಗೂ ಎಷ್ಟು ವ್ಯತ್ಯಾಸ ಇದೆ ಎಂಬುದು ಮೊದಲ ದಿನವೇ ಮನವರಿಕೆಯಾಯಿತು. ಆಂದೋಲನಕ್ಕೆ ನಿತ್ಯ ನೂರಾರು ಪತ್ರಿಕಾ ಪ್ರಕಟಣೆಗಳು ಬರುತ್ತಿದ್ದವು. ಅವುಗಳನ್ನು ಆಯ್ದು ಹೊಸಬರಿಗೆ ಕೊಡುತ್ತಿದ್ದರು. ನಂತರ ಅದನ್ನು ಸುದ್ದಿಯಾಗಿಸಿ ಹಿರಿಯ ಸಹೋದ್ಯೋಗಿಗಳಿಗೆ ಕೊಡಬೇಕು. ಅವರು ತಿದ್ದಿ ಕೊಡುತ್ತಿದ್ದರು. ಆಗ ಆಂದೋಲನದಲ್ಲಿ ಕ್ವಾಲಿಟಿ ಕಂಟ್ರೋಲ್ ಚೆನ್ನಾಗಿತ್ತು. ತಪ್ಪಿದಾಗ ಬೈಗುಳ ಕೂಡ ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಹಿರಿ-ಕಿರಿಯರೆನ್ನದೆ ಕಾಲೆಳೆಯುವುದು, ಹಾಸ್ಯ ಚಟಾಕಿ ಸಿಡಿಸುವುದು, ಒಟ್ಟಿಗೆ ಚಾ ಕುಡಿಯಲು ಹೋಗೋದು. ಹಗಲು-ರಾತ್ರಿ ಭೇದವಿಲ್ಲದೆ ಸಾದ್ಯಂಗವಾಗಿತ್ತು. ಆದರೆ ಸಾಯಂಕಾಲ ನಿತ್ಯ ಕೋಟಿಯವರು ಕಚೇರಿಗೆ ಬರುತ್ತಿದ್ದಂತೆ ಕಚೇರಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ವಾತಾವರಣ ನಿರ್ಮಾಣವಾಗುತ್ತಿತ್ತು. ಅಂತಹ ಭಯ, ಭಕ್ತಿ,, ಗೌರವದ ಪರಾಕಾಷ್ಠೆ. ಅವರು ಮನೆಗೆ ಹೋದೊಡನೆ ಮತ್ತೆ ಗಲಗಲ..
ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಸಂದರ್ಶನ ಮುಗಿಸಿ ಆಂದೋಲನಕ್ಕೆ ಸೇರಿದ ನಂತರ ಕೋಟಿಯವರೊಡನೆ ಮುಖಾಮುಖಿ, ಮಾತುಕತೆಗೆ ಆರು ತಿಂಗಳು ಬೇಕಾಯಿತು. ಅದೊಂದು ದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಕೋಟಿಯವರೇ ಮುಖ್ಯ ಅತಿಥಿಗಳಾಗಿದ್ದರು. ಓಂಕಾರ್ ನನ್ನಲ್ಲಿ ವರದಿಗಾರಿಕೆಗೆ ಹೋಗಿ ಬನ್ನಿ ಅಂದರು. ಸರಿ ಅಂತ ಪೆನ್ನು, ಕಾಗದ ತಕ್ಕಂಡು ಹೊರಟೆ. ಕಾರ್ಯಕ್ರಮದಲ್ಲಿ ಸಂಪಾದಕರೇ ಇದ್ದಾರೆ. ಹುಷಾರಾಗಿರಬೇಕು. ಕಾಪಾಡು ತಂದೇ ಅನ್ನುತ್ತಾ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಜನ ಜಂಗುಳಿ ಇತ್ತು. ಕೋಟಿಯವರು ತಮ್ಮ ಭಾಷಣ ಮುಗಿಸಿ ಕಚೇರಿಗೆ ಹೊರಟರು. ನಾನು ಜಂಗುಳಿಯ ನಡುವೆ ಅವರ ಬಳಿ ಬಂದು ಸಾರ್ ನಮಸ್ತೆ ಅಂದೆ. ಅವರೂ ನಮಸ್ಕಾರ ಅಂದ್ರು. ಬಹುಶಃ ಅವರ ಯಾರೋ ಅಭಿಮಾನಿ ಇರಬೇಕು ಅಂತ ಅಂದು ಕೊಂಡರೇನೋ, ಸಾರ್ ಆಂದೋಲನದಲ್ಲಿ ನಾನು ಕೆಲ್ಸ ಮಾಡುತ್ತಿದ್ದೇನೆ ಅಂದೆ. ಆಗ ತಕ್ಷಣ ಕೋಟಿಯವರು, ಸರಿ..ಸರಿ..ಆಫೀಸಿಗೆ ಹೋಗಿ..ಅಂದ್ರು.
ಕಚೇರಿಗೆ ಬಂದು ಓಂಕಾರ್ ಬಳಿ ನಡೆದ ಸಂಗತಿಯನ್ನು ಹೇಳಿದೆ. ಎಲ್ಲರೂ ಕೇಳಿಸಿಕೊಂಡರು. ದೊಡ್ಡ ಜೋಕಾಗಿ ಕಾಮಿಡಿ ಟೈಮ್ ಆಯ್ತು.
ಆದರೆ ಮರು ದಿನ ಅಚ್ಚರಿ ಕಾದಿತ್ತು. ನನ್ನ ವರದಿ ಕೋಟಿಯವರಿಗೆ ಇಷ್ಟವಾಗಿತ್ತು ಅಂತ ಕಾಣುತ್ತೆ. ಮತ್ತೊಂದು ಕಾರ್ಯಕ್ರಮದ ವರದಿಗೆ ನನ್ನನ್ನೇ ಕರೆದರು. ಅವರ ಜತೆಗೆ ಕಾರಿನಲ್ಲಿ ಸುತ್ತೂರು ಸಮೀಪ ನಡೆದ ಎನ್‌ಎಸ್‌ಎಸ್ ಶಿಬಿರಕ್ಕೆ ತೆರಳಿದೆ. ಅಲ್ಲಿ ನಡೆದ ಕಾರ್ಯಕ್ರಮದ ವರದಿ ಮಾಡಿದೆ. ಅಷ್ಟರಲ್ಲಿ ಕೋಟಿಯವರ ಪ್ರಚಂಡ ದುಡಿಮೆ, ಏಕಾಗ್ರತೆ, ಪತ್ರಿಕೆ ಕಟ್ಟಿದ ಸಾಹಸ, ಯಶೋಗಾಥೆಯ ಪರಿಚಯವಾಗಿತ್ತು.
ಅದೊಂದು ದಿನ ರಾಜ ಶೇಖರ ಕೋಟಿಯವರ ಜತೆಗೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಭಾವಸಾರ್ ಕ್ಷತ್ರಿಯ ಸಮಾಜದವರ ಕಾರ್ಯಕ್ರಮ. ಅಲ್ಲಿ ಶ್ವೇತಾ ಟೇಂಮ್ಕರ್ ಎಂಬ ಯುವ ಪೈಲಟ್‌ಗೆ ಸನ್ಮಾನ ಸಮಾರಂಭ ನಡೆಯಿತು. ಶ್ವೇತಾ ಟೇಮ್ಕರ್ ಎಳೆಯ ವಯಸ್ಸಿನಲ್ಲಿಯೇ ಪೈಲಟ್ ಆಗಿ ಗಮನ ಸೆಳೆದಿದ್ದರು. ಕಾರ್ಯಕ್ರಮ ಮಿಗಿದ ತಕ್ಷಣ ಕೋಟಿಯವರು ನನ್ನನ್ನು ಕರೆದು, ಟೇಮ್ಕರ್ ಬಗ್ಗೆ ವಿಶೇಷ ವರದಿ ಬರೆಯಿರಿ ಅಂದರು. ಸರಿ ಅಂದು ಮರು ದಿನವೇ ಟೇಮ್ಕರ್ ಅವರ ಮನೆಗೆ ತೆರಳಿ ಸಂದರ್ಶನ ಮಾಡಿ ಬರೆದೆ. ಮುಂದೇನಾಯಿತು ಅಂತ ಮುಂದಿನ ಭಾಗದಲ್ಲಿ ಹೇಳುತ್ತೇನೆ...ನಿರೀಕ್ಷಿಸಿ..!

Wednesday 15 February 2012

ಅಂತೂ ಆಂದೋಲನಕ್ಕೆ ಸೇರಿದ ಕಥೆ !

ಹಾಯ್ ಫ್ರೆಂಡ್ಸ್,
ನೀವೆಲ್ಲರೂ ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಲ್ಲಿತ್ತು !
ಅದನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ನಿಜವಾಗಿಸಿದ್ದಕ್ಕೆ ಥ್ಯಾಂಕ್ಸ್. ಹಾಗಾದರೆ ಮೈಸೂರಿನಲ್ಲಿ ದಶಕದ ಹಿಂದೆ ಆಂದೋಲನ ದಿನ ಪತ್ರಿಕೆಯಲ್ಲಿ ಕಳೆದ ದಿನಗಳು ಹೇಗಿತ್ತು ಅಂತ ಬರೆಯುತ್ತೇನೆ.

ಆಗ ಮಾಧ್ಯಮ ವಲಯದಲ್ಲಿ ಈವತ್ತಿರುವಷ್ಟು ಉದ್ಯೋಗಾವಕಾಶಗಳು ಇರಲಿಲ್ಲ. ವಾರ್ತಾ ವಾಹಿನಿಗಳು ಬೆಳೆದಿರಲಿಲ್ಲ. ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಎ ಓದಿದ ನಂತರ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಎಸ್ಸೆಸ್ಸೆಲ್ಸಿಯಲ್ಲಿದ್ದಾಗಲೇ ಚುಟುಕ, ಮಕ್ಕಳ ಕಥೆ, ಕಿರು ಬರಹಗಳನ್ನು ಬರೆಯುತ್ತಿದ್ದೆ. ಆಗೊಮ್ಮೆ, ಈಗೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಬಾಲ್ಯದ ಈ ಹವ್ಯಾಸವೇ ಪತ್ರಿಕೋದ್ಯಮಕ್ಕೆ ಕರೆದೊಯ್ಯುತ್ತದೆ ಎಂದು ಅನ್ನಿಸಿರಲಿಲ್ಲ. ನನ್ನ ಸೋದರ ಮಾವ ಶಂಕರನಾರಾಯಣ ಭಟ್, ಹೊಸದಿಗಂತಕ್ಕೆ ಕಾಸರಗೋಡಿನ ಪ್ರತಿನಿಧಿಯಾಗಿ ಸುದ್ದಿಗಳನ್ನು ಕಳುಹಿಸುತ್ತಿದ್ದರು. ಅತ್ತೆ ಕೃಷ್ಣವೇಣಿ ಕಿದೂರು ಅವರೂ ಹಲವು ಪತ್ರಿಕೆ, ನಿಯತಕಾಲಿಕೆಗಳಿಗೆ ಬರೆಯುತ್ತಿದ್ದರು. ಆಗ ಬರೆಯುವ ಬಯಕೆ ಉಂಟಾಗುತ್ತಿತ್ತು. ಆದರೆ ಹೀಗೆ ಮಾಡಪ್ಪಾ ಅಂತ ಎನ್ನುವ ಮಾರ್ಗದರ್ಶಕರು ಇರಲಿಲ್ಲ. ಅದಕ್ಕಾಗಿ ಯಾರನ್ನೂ ದೂರುವುದೂ ಇಲ್ಲ. ಆಗಿನ ಪರಿಸ್ಥಿತಿಯೇ ಹಾಗಿತ್ತು.

ಆಗ ಮೈಸೂರಿನಲ್ಲಿ ಅಕ್ಕ ಹೇಮಮಾಲಾ ಬಿ ಅವರ ಮನೆಯಲ್ಲಿದ್ದೆ. ಇದಕ್ಕೂ ಮುನ್ನ ಕೃಷ್ಣಮೂರ್ತಿ ಎಂಬುವವರ ಸೀರೆ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಭೋಗಾದಿಯಲ್ಲಿದ್ದ ಆ ಕಿರು ಅಂಗಡಿಯಲ್ಲಿ ತಿಂಗಳಿಗೊಂದು ಸೀರೆ ಮಾರಾಟವಾದರೆ ಅದೇ ಹಬ್ಬ. ಅವರು ಯಾಕಾಗಿ ಆ ಸೀರೆ ಅಂಗಡಿ ಇಟ್ಟಿದ್ದರು ಎಂಬುದೇ ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ ತಿಂಗಳಿಗೆ ತಪ್ಪದೆ ಐನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ಅವರಿಗೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವಿತ್ತು. ಸೈಡಲ್ಲಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಾ ಇದ್ದರು. ಉತ್ತಮ ವಾಗ್ಮಿ. ಇತ್ತೀಚೆಗೆ ಮೈಸೂರಿಗೆ ತೆರಳಿದ್ದಾಗ ಸಿಕ್ಕರು. " ಸಾರ್, ನಾನು ಕೇಶವ ಪ್ರಸಾದ್’ ಅಂದೆ. ಓಹೋಹೋ..ಅಂತ ತುಂಬ ಆತ್ಮೀಯವಾಗಿ ಮಾತನಾಡಿಸಿದ್ರು ಮೂರ್ತಿ.

ಹಾಗೊಂದು ದಿನ ಧೈರ್ಯ ಮಾಡಿ, ಮೈಸೂರು ಮಿತ್ರ ಕಚೇರಿಗೆ ತೆರಳಿದೆ. ಅಲ್ಲಿ ಸಂಪಾದಕರಾದ ಬಿ.ಗಣಪತಿಯವರನ್ನು ಕಂಡೆ. ಸ್ವ ವಿವರ ನೋಡಿದ ಗಣಪತಿಯವರು, ಈಗೇನು ಮಾಡುತ್ತಿದ್ದೀರಿ ? ಎಂದರು. ಬಟ್ಟೆ ಅಂಗಡಿಯಲ್ಲಿ ಸಣ್ಣ ಕೆಲ್ಸ ಅಂದೆ. ಹಾಗಾದರೆ ಬಟ್ಟೆ ಅಳೆಯಲು ಬರುತ್ತಾ ? ಎಂದು ಕೀಟಲೆ ಮಾಡಿದರು ಗಣಪತಿ. ನಾನು ಸ್ವಲ್ಪ ತಬ್ಬಿಬ್ಬಾದೆ. ಮತ್ತೆ ಏನೋ ಅಂದಿದ್ದರು. ಮುಂದೇನು ಮಾಡುವುದಪ್ಪಾ ಅಂತ ಅಂದುಕೊಂಡು ಅಕ್ಕನ ಮನೆಗೆ ತೆರಳಿದ್ದೆ.

ಮತ್ತೊಂದು ವಾರ ಬಿಟ್ಟ ನಂತರ ರಾಮಾನುಜ ರಸ್ತೆಯಲ್ಲಿರುವ ಆಂದೋಲನ ಕಚೇರಿಯ ಮೆಟ್ಟಿಲು ಹತ್ತಿದೆ. ಅಲ್ಲಿ ಆಡಳಿತಾಧಿಕಾರಿ ಸೂರ್ಯವಂಶಿ ಕಡತಗಳ ವಿಲೇವಾರಿಯಲ್ಲಿ ದಡಬಡ ಮುಳುಗಿದಂತೆ ಇದ್ದರು. ಅವರೆದುರು ನಿಂತು ನನ್ನ ಸ್ವ ವಿವರಗಳನ್ನು ನೀಡಿದೆ. ಸಂಪಾದಕ ರಾಜಶೇಖರ ಕೋಟಿಯವರನ್ನು ಕಾಣುವಂತೆ ತಿಳಿಸಿದರು. ಅವರ ಮನೆ ಕಚೇರಿಗೆ ಹೊಂದಿಕೊಂಡಂತೆ ಇತ್ತು. ಭವ್ಯವಾದ ಬಂಗಲೆಯದು. ಗೇಟನ್ನು ತೆರೆದು ಅಳುಕಿನಿಂದಲೇ ಮನೆಯೊಳಕ್ಕೆ ಪ್ರವೇಶಿಸಿದೆ. ಆಂದೋಲನ, ಮೈಸೂರಿನ ಪ್ರತಿಷ್ಠಿತ ದಿನಪತ್ರಿಕೆ ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿ ನನ್ನಲ್ಲಿರಲಿಲ್ಲ. ನನ್ನ ಕಡತಗಳನ್ನು ನೋಡುತ್ತಾ, ಕೋಟಿಯವರು ನನ್ನ ಊರು ಇತ್ಯಾದಿ ವಿವರ ಕೇಳಿದರು.

ಕಾಸರಗೋಡಿನವನು ಎಂದಾಗ, ಕಾಸರಗೋಡು ಚಿನ್ನಾ ಗೊತ್ತಾ ಎಂದರು. ಗೊತ್ತಿದೆ. ಆದರೆ ಮುಖತಃ ಭೇಟಿಯಾಗಿಲ್ಲ ಎಂದೆ. ಆಗತಾನೇ ಮೈಸೂರು ಮಿತ್ರದಲ್ಲಿ ನನ್ನ ಕೆಲ ಕಿರು ಬರಹಗಳು ಪ್ರಕಟವಾಗಿದ್ದವು. ಅವುಗಳನ್ನು ತೋರಿಸಿದೆ. ಅವುಗಳನ್ನೋದಿದ ಕೋಟಿಯವರು, ಸ್ವಲ್ಪ ನಗುತ್ತಾ ಹಾಗಾದರೆ ಮೈಸೂರು ಮಿತ್ರದಲ್ಲೇ ಪ್ರಯತ್ನಿಸಬಹುದಿತ್ತಲ್ವೇ ? ಅಂದರು. ಅಂತಹ ಪ್ರಶ್ನೆ ಕೇಳುತ್ತಾರೆ ಅಂತ ನನಗೆ ಅನ್ನಿಸಿರಲಿಲ್ಲ. ಡವಡವ ಆಯ್ತು. ಇಲ್ಲ ಸಾರ್, ನಿಮ್ಮ ಪತ್ರಿಕೆಯಲ್ಲಿ ಒಳ್ಳೆಯ ಫ್ಯೂಚರ್ ಇದೆ ಅಂತ.. ಅಂದೆ.

ಸರಿ, ನಿಮ್ಮನ್ನು ಟ್ರೈನಿ ಆಗಿ ಅಪಾಯಿಂಟ್ ಮಾಡುತ್ತೇವೆ. ಸೂರ್ಯವಂಶಿಯವರ ಬಳಿ ಹೋಗಿ. ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದರು. ಬೇರೆ ಏನನ್ನೂ ಹೇಳಿರಲಿಲ್ಲ, ನಾನೂ ಕೇಳಿರಲಿಲ್ಲ. ಕೆಲಸ ಸಿಕ್ಕಿದ ಖುಷಿಯಲ್ಲಿ ಮಿಕ್ಕಿದ್ದೆಲ್ಲವೂ ಮರೆತು ಹೋಗಿತ್ತು. ಆದರೆ ಆವತ್ತು ಆಂದೋಲನಕ್ಕೆ ಸೇರಿದ್ದುದು, ಪತ್ರಿಕೋದ್ಯಮದ ಕಲಿಕೆಯ ದೃಷ್ಟಿಯಿಂದ ಒಳ್ಳೆಯದಾಯಿತು.
ಕೇಶವ ಪ್ರಸಾದ್.ಬಿ.ಕಿದೂರು

Sunday 12 February 2012

ಪತ್ರಿಕೋದ್ಯಮದಲ್ಲಿ 11 ವರ್ಷ...

ವಿಜಯ ಕರ್ನಾಟಕಕ್ಕೆ ಸೇರ್ಪಡೆಯಾಗಿ 7 ವರ್ಷಗಳು ತುಂಬಲು ಇನ್ನು ಮೂರು ತಿಂಗಳು ಮಾತ್ರ ಇದೆ. ಇದಕ್ಕೂ ಮುನ್ನ ಸುಮಾರು ಮೂರು ವರ್ಷ, ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಈ ಹೊತ್ತಿನಲ್ಲಿ ಇಬ್ಬರು ಮಹನೀಯರನ್ನು ನೆನಪಿಸಿಕೊಳ್ಳುತ್ತೇನೆ. ಅವರೇ ನನಗೆ ಕೆಲಸ ಒದಗಿಸಿ ಹರಸಿದ ಶ್ರೀ. ವಿಶ್ವೇಶ್ವರ ಭಟ್ ಹಾಗೂ ಶ್ರೀ. ರಾಜಶೇಖರ ಕೋಟಿ. ವಿಜಯ ಕರ್ನಾಟಕದಲ್ಲಿ ಏಳು ವರ್ಷಗಳ ಹಿಂದೆ ನನ್ನನ್ನು ನೇಮಿಸಿದ ವಿಶ್ವೇಶ್ವರ ಭಟ್ ಹಾಗೂ ಇದಕ್ಕೂ ಹಿಂದೆ ಆಂದೋಲನದಲ್ಲಿ ಮೂರು ವರ್ಷ ಉದ್ಯೋಗ ನೀಡಿದ ಕೋಟಿಯವರಿಗೆ ಕೋಟಿ ನಮನಗಳು.

ಮಾಧ್ಯಮ ವಲಯದಲ್ಲಿ ಹಾಗೂ ಸಾಮಾಜಿಕ ವೆಬ್‌ತಾಣಗಳಲ್ಲಿ ಸಹಜವಾಗಿ ಹೊಸ ಮಿತ್ರರ ಭೇಟಿಯಾದಾಗ, ಕುತೂಹಲದಿಂದ ನನ್ನ ವೃತ್ತಿಯ ಬಗ್ಗೆ, ಮಾಧ್ಯಮಗಳ ಬಗ್ಗೆ ಕೇಳುತ್ತಾರೆ. ಹಾಗೆ ಕೇಳಿದಾಗಲೆಲ್ಲ ಚುಟುಕಾಗಿ ತಿಳಿಸುತ್ತೇನೆ. ಆದರೆ ಕಳೆದ ಹನ್ನೊಂದು ವರ್ಷಗಳ ಪತ್ರಿಕಾ ರಂಗದ ಅನುಭವಗಳು ತಮ್ಮಷ್ಟಕ್ಕೆ ಮೆರವಣಿಗೆ ಹೊರಡುತ್ತವೆ. ಪತ್ರಿಕಾ ರಂಗದಲ್ಲಿ ಹನ್ನೊಂದು ವರ್ಷಗಳು ಹನ್ನೊಂದು ದಿನಗಳಂತೆ ಕಳೆದಿವೆ. ಈ ಅವಧಿಯಲ್ಲಿ ಹಲವಾರು ಅನುಭವಗಳು, ಕಲಿತ ಪಾಠಗಳು ಮರೆಯಲಾಗದೆ ಉಳಿದಿವೆ. ಈ ಹನ್ನೊಂದು ವರ್ಷಗಳಲ್ಲಿ ನಾನೇನೋ ಸಾಧಿಸಿದ್ದೇನೆ ಎಂಬ ಹಮ್ಮು ನನಗಿಲ್ಲ. ಆದರೆ ಶೂನ್ಯದಂತಿದ್ದ ಬದುಕಿಗೊಂದು ಆಧಾರ ಒದಗಿಸಿದೆ. ಅದಕ್ಕಿಂತ ಮುಖ್ಯವಾಗಿ ಕನ್ನಡದ ಪತ್ರಿಕೆಗಳ ಪ್ರತಿಭಾವಂತ ಸಂಪಾದಕರುಗಳ ಒಡನಾಟದ ಅವಕಾಶ ಕೊಟ್ಟಿದೆ.

ಗುಡಿಸಲಿನಿಂದ ಪಂಚತಾರಾ ಹೋಟೆಲಿನ ವೈಭವದ ತನಕ ನೋಡಿದ್ದೇನೆ. ಬರಪೀಡಿತ ಪ್ರದೇಶಗಳಲ್ಲಿ ರೈತನ ಬವಣೆಗಳನ್ನು ಆಲಿಸಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿ, ಬೆಂದು ಆಸ್ಪತ್ರೆಯಲ್ಲಿ ಸಂಕಟದಿಂದ ನರಳುತ್ತಿದ್ದ ಯುವತಿಯನ್ನು ಕಂಡು ಮರುಗಿದ್ದೇನೆ. ಆಸಿಡ್ ದಾಳಿಗೆ ಸಿಲುಕಿ ಮುಖ ವಿರೂಪಗೊಂಡು ನರಕಸದೃಶ ಬದುಕು ನಡೆಸುತ್ತಿದ್ದವಳನ್ನು ಮಾತನಾಡಿಸಿದ್ದೇನೆ. ಐಶಾರಾಮಿ ಕಾರುಗಳ ಉತ್ಪಾದನೆಯನ್ನು ನೋಡಿದ್ದೇನೆ. ಹಿಜಡಾಗಳ ನೋವು ನಲಿವನ್ನು ಅವರಿಂದಲೇ ಕೇಳಿ ಬರೆದಿದ್ದೇನೆ. ರೆಡ್‌ಬಸ್‌ನ ಸಿಇಒ ಫಣೀಂದ್ರ ಸಮಾ ಎಂಬ ಯುವ ಉದ್ಯಮಿಯಿಂದ ಶುರುವಾಗಿ ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್, ಇನ್ಫೋಸಿಸ್‌ನ ಸಹ ಸಂಸ್ಥಾಪಕ ದಿನೇಶ್ ಅವರಂತಹ ಹಿರಿಯರ ತನಕ ಹಲವಾರು ಗಣ್ಯರನ್ನು ಸಂದರ್ಶಿಸುವ ಅವಕಾಶವನ್ನು ಪತ್ರಿಕೋದ್ಯಮ ಕೊಟ್ಟಿದೆ. ಪ್ರತಿಯೊಂದು ವೃತ್ತಿಯಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯಗಳಿರುತ್ತವೆ. ಆದರೆ ಎಲ್ಲರೂ ಅವುಗಳನ್ನು ಬರೆಯಲು ಹೋಗುವುದಿಲ್ಲ. ಕೆಲವರಿಗೆ ಬರೆಯುವ ಮನಸ್ಸಿದ್ದರೂ, ಬರೆಯಲು ನಮ್ಮಿಂದಾಗದು ಎನ್ನುತ್ತಾರೆ. ಆದರೆ ಕಳೆದ 11 ವರ್ಷಗಳಿಂದ ಬರೆಯುವುದೇ ನನ್ನ ವೃತ್ತಿಯಾದ್ದರಿಂದ, ನನಗೆ ಸಿಕ್ಕಿದ ಅನುಭವಗಳಲ್ಲಿ ಕೆಲವನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಅಕ್ಷರ ರೂಪದಲ್ಲಿಡುವ ಬಯಕೆ. ಎಂದಿನಂತೆ ನಿಮ್ಮ ಬೆಂಬಲದ ನಿರೀಕ್ಷೆ ಇದ್ದೇ ಇದೆ.

Friday 3 February 2012

ನೋವುಂಡು ಜಗವ ನಗಿಸಿದ ಕರಿಬಸವಯ್ಯ



" ಛೇ, ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಪ್ರತಿಭಾವಂತನ ಬದುಕಿನಲ್ಲಿ ಮಾತ್ರ ಎಂಥಾ ದುರ್ವಿಧಿ ! ’
ಕನ್ನಡ ಚಿತ್ರರಂಗದ, ರಂಗಭೂಮಿಯ ನೆಚ್ಚಿನ ಹಾಸ್ಯನಟ ಶ್ರೀ. ಕರಿಬಸವಯ್ಯ ಅವರ ಅಕಾಲ ಮೃತ್ಯು ರಾಜ್ಯದ ಜನತೆಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಎಲ್ಲರ ಬಾಯಲ್ಲೂ ನೋವಿನ ನುಡಿಗಳು, " ಛೇ, ಕರಿಬಸವಯ್ಯನವರಿಗೆ ಹೀಗಾಗಬಾರದಿತ್ತು. ಪಾಪ, ಮಗಳನ್ನೂ ಇತ್ತೀಚೆಗೆ ಕಳೆದುಕೊಂಡಿದ್ರು.."
ಹೌದು, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕರಿಬಸವಯ್ಯ, ತಮ್ಮ ನಟನೆ, ನಡೆ ನುಡಿಯಿಂದ ಜನಮಾನಸದಲ್ಲಿ ಮರೆಯಲಾಗದ ವ್ಯಕ್ತಿತ್ವವಾಗಿದ್ದರು. ಕೆಲ ತಿಂಗಳಿನ ಹಿಂದ ಖಾಸಗಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಬಾಳ ಪಯಣದ ಕಥೆಯನ್ನು ಎಳೆಎಳೆಯಾಗಿ ವಿವರಿಸಿದ್ದರು ಕರಿಬಸವಯ್ಯ. ಅಲ್ಲಿ ನೋವಿನ ಮಡುವಿತ್ತು. ಒಂದು ಹಂತದಲ್ಲಿ ತಮ್ಮ ಪ್ರೀತಿಯ ಮಗಳು ಆತ್ಮಹತ್ಯೆ ಮಾಡಿಕೊಂಡ ದುರಂತವನ್ನು ಹೇಳುತ್ತ ಕಣ್ಣೀರಿಟ್ಟರು ಕರಿಬಸವಯ್ಯ. " ಯಾವುದೇ ಹೆಣ್ಣು ಮಕ್ಕಳನ್ನು ನೋಯಿಸದಿರಿ, ಅವರ ಹೆತ್ತವರಿಗೆ ತುಂಬ ನೋವಾಗುತ್ತದೆ. ಅದನ್ನು ಸಹಿಸಲು ಅವರಿಗೆ ಆಗುವುದಿಲ್ಲ. ನಾನು ಅಭಿನಯಿಸುವಾಗ ಪಾತ್ರವಾಗುತ್ತೇನೆ. ಎಲ್ಲ ನೋವುಗಳು ಮರೆಯಾಗುತ್ತವೆ. ಪಾತ್ರ ಮುಗಿದಾಗ ಮತ್ತೆ ದುಃಖ ಮರುಕಳಿಸುತ್ತದೆ. ಯಾವ ತಂದೆ ತಾಯಿಗೂ ಇಂತಹ ಆಘಾತ ಬರಬಾರದು. ಒಂದು ವೇಳೆ ಬಂದರೂ ಅದನ್ನು ತಡೆಯುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ’ ಎಂದು ಕರಿಬಸವಯ್ಯ ಕಣ್ಣೀರಿಡುತ್ತ ಹೇಳಿದಾಗ ನನ್ನ ಕಣ್ಣಾಲಿಗಳು ತುಂಬಿತ್ತು.
ಅಂತಹ ಕರಿಬಸವಯ್ಯನವರು ಆಡಿದ ಮನಮುಟ್ಟುವ ಮಾತುಗಳಲ್ಲಿ ಕೆಲವು ಇಲ್ಲಿದೆ.
-ನಮ್ಮ ಕಷ್ಟವನ್ನು ನಾವೇ ಅನುಭವಿಸಬೇಕು.
-ನಾನು ಹೋರಾಟದಿಂದ ಬೆಳೆದು ಬಂದವನು. ಅನೇಕ ಸ್ನೇಹಿತರಿದ್ದಾರೆ. ನನ್ನ ಕೊನೆಯುಸಿರಿನ ತನಕ ಕನ್ನಡ ಸೇವೆ ಮಾಡುತ್ತೇನೆ.
-ನಾನು ಸುಮಾರು ೨೦೦ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಗತಿಹಳ್ಳಿ ಚಂದ್ರಶೇಖರ್, ಉಮಾಶ್ರಿ, ಬರಗೂರು ರಾಮಚಂದ್ರಪ್ಪ ಮುಂತಾದವರ ಪ್ರೀತಿ, ವಿಶ್ವಾಸ, ಸಹಕಾರವನ್ನು ಅನುಗಾಲ ನೆನೆಯುತ್ತೇನೆ. ನಾನು ಯಾರಿಗೂ ದ್ವೇಷಿಯಲ್ಲ..
ನಿಜ. ಇಷ್ಟೆಲ್ಲ ನೋವನ್ನುಂಡ ಕಥೆಯನ್ನು ಹೇಳುವಾಗಲೂ ಕರಿಬಸವಯ್ಯ ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಿದ್ದರು ! ಅಲ್ಲೂ ಇತರರನ್ನು ರಂಜಿಸಲು ಅವರು ಮರೆತಂತಿರಲಿಲ್ಲ !!
ಜಗದ ನೋವು ನನಗಿರಲಿ, ಜಗವೆಲ್ಲ ನಗುತಿರಲಿ ಎಂಬ ಮಾತಿನಂತೆ ನಡೆದಿದ್ದರು ಕರಿಬಸವಯ್ಯ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
-ಕೇಶವ ಪ್ರಸಾದ್.ಬಿ,ಕಿದೂರು

Sunday 29 January 2012

ಎಂಜಿನಿಯರ್ ಬದುಕಿನ ದಿಕ್ಕು ಬದಲಿಸಿದ ಬಸ್ ಟಿಕೆಟ್ !


ಬೆಂಗಳೂರಿನಲ್ಲಿ ಟ್ರಾಫಿಕ್‌ನ ಗೋಳನ್ನು ಕೇಳುವುದೇ ಬೇಡ.
ಹಬ್ಬದ ದಿನಗಳಲ್ಲಂತೂ, ಯಪ್ಪಾ.. ಎಲ್ಲ ಬಸ್ ನಿಲ್ದಾಣಗಳು ಊರಿಗೆ ತೆರಳುವ ಧಾವಂತದಲ್ಲಿರುವ ಜನ ಸಾಗರದಲ್ಲಿ ತೊಪ್ಪೆಯಾಗುತ್ತವೆ. ಟಿಕೆಟ್ ಸಿಗದೆ ಪರದಾಡಿ ಊರಿಗೆ ಹೋಗುವ ಅವಕಾಶವನ್ನೇ ತಪ್ಪಿಸಿಕೊಂಡು ಆ ಕಿಷ್ಕಿಂದೆಯಲ್ಲಿ ಪರಿತಪಿಸುವವರಿಗೂ ಕೊರತೆ ಇಲ್ಲ. ರೈಲ್ವೆ ನಿಲ್ದಾಣದಲ್ಲಿ ಮೈಲುದ್ದದ ಸರದಿಯಲ್ಲಿ ನಿಂತು, ತರಾತುರಿಯಲ್ಲಿ ಟಿಕೆಟ್ ಸಿಗದೆ ಕಣ್ಣೆದುರೇ ಹೊರಟ ರೈಲನ್ನು ನೋಡುತ್ತ ನಿಟ್ಟುಸಿರಿಡುವ ಉದಾಹರಣೆಗಳು ಅದೆಷ್ಟೋ. ಇದರಲ್ಲೇನಪ್ಪಾ ಗುರುವೇ ? ಅಂತೀರಾ.
ಹಾಗಾದರೆ ಕೇಳಿ, ಕೇವಲ ಆರು ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭವದು. ಬೆಂಗಳೂರಿನ ಇಂದಿರಾ ನಗರದ ಬಸ್ ನಿಲ್ದಾಣದಲ್ಲಿ ಫಣೀಂದ್ರ ಸಮಾ ಎಂಬ ಯುವಕ ಹೈದರಾಬಾದಿನ ಬಸ್ಸಿಗೆ ಕಾದು ನಿಂತಿದ್ದ. ಆಂಧ್ರಪ್ರದೇಶದ ನಿಜಾಮಾಬಾದ್‌ನಲ್ಲಿ ಸಾಮಾನ್ಯ ಕೃಷಿ ಕುಟುಂಬದಲ್ಲಿ ಬೆಳೆದು, ಚೆನ್ನಾಗಿ ಓದನ್ನು ಪೂರ್ಣಗೊಳಿಸಿ ನಂತರ ಕೆಲಸ ಹುಡುಕುತ್ತ ಉದ್ಯಾನ ನಗರಿಯಲ್ಲಿ ನೆಲೆ ನಿಂತ ತರುಣ ಎಂಜಿನಿಯರ್. ತವರೂರಲ್ಲಿ ಕುಟುಂಬದ ಜತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಹೊರಟು ತುದಿಗಾಲಿನಲ್ಲಿ ನಿಂತಿದ್ದ.
ಸಾಮಾನ್ಯ ಕೃಷಿಕನ ಮಗನಾಗಿ ಹುಟ್ಟಿದರೂ, ಫಣೀಂದ್ರ ಚಿಕ್ಕಂದಿನಿಂದಲೇ ಅಸಾಧಾರಣ ಪ್ರತಿಭಾವಂತನಾಗಿದ್ದ. ಎಳೆಯ ಹರೆಯದಲ್ಲಿ ತಂದೆಯನ್ನು ಕಳೆದುಕೊಂಡು, ಕೊನೆಗೆ ಹೈದರಾಬಾದ್‌ನಲ್ಲಿ ಸಂಬಂಕರ ಮನೆಯಲ್ಲಿದ್ದು ಓದಿಕೊಂಡಿದ್ದ. ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಗಳಿಸಿದ್ದ ಜಾಣ. ರಾಜಸ್ಥಾನದ ಪಿಲಾನಿಯಲ್ಲಿರುವ ಪ್ರತಿಷ್ಠಿತ ಬಿಟ್ಸ್‌ನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪೂರೈಸಿದ ಫಣೀಂದ್ರ ಬೆಂಗಳೂರಿನಲ್ಲಿ ಹಲವು ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದ. ಅಷ್ಟೇ ಆಗಿದ್ದರೆ ಇಲ್ಲಿ ಬರೆಯುವ ಅಗತ್ಯವೇ ಇರುತ್ತಿರಲಿಲ್ಲ. ದೇಶದ ಲಕ್ಷಾಂತರ ಎಂಜಿನಿಯರುಗಳಲ್ಲಿ ಒಬ್ಬನಾಗಿರುತ್ತಿದ್ದ. ಆದರೆ ಆತನ ಬದುಕಿನ ದಿಕ್ಕನ್ನೇ ತಿರುಗಿಸಿದ ಪುಟ್ಟ ಘಟನೆ ಅದಾಗಿತ್ತು !
ಆವತ್ತು ಟಿಕೆಟ್ ಸಿಗಲಿಲ್ಲ...
ಟ್ರಾವೆಲ್ ಏಜೆಂಟನ ಬಳಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಆತ ಬೇರೆ ಟ್ರಾವೆಲ್ ಏಜೆನ್ಸಿಗೆ ಫೋನ್ ಮಾಡಿ ಕೇಳಿದರೂ ಉಪಯೋಗವಾಗಲಿಲ್ಲ. ಈ ಹುಡುಗನಿಗೆ ಸಪ್ಪೆಯಾದರೂ, ಎಲ್ಲರಂತೆ ವ್ಯವಸ್ಥೆಯ ಬಗ್ಗೆ ಗೊಣಗುತ್ತಾ ಬೆನ್ನು ತಿರುಗಿಸಲಿಲ್ಲ. ನೂರಾರು ಟ್ರಾವೆಲ್ ಏಜೆಂಟರಿದ್ದರೂ ನನಗೇಕೆ ಒಂದು ಟಿಕೆಟ್ ಸಿಗಲಿಲ್ಲ ? ನನ್ನಂತೆಯೇ ಎಷ್ಟೋ ಮಂದಿಗೆ ಸಮಸ್ಯೆ ಉಂಟಾಗುವುದಿಲ್ಲವೇ ? ಹಾಗಾದರೆ ಈ ಸಮಸ್ಯೆಗೆ ಪರಿಹಾರವಿಲ್ಲವೇ ? ಎಂದು ಯೋಚಿಸಿದ. ಈ ಬಗ್ಗೆ ತನ್ನ ಮಿದುಳಿಗೆ ಸಾಣೆ ಹಿಡಿದ. ಗೆಳೆಯರ ಹತ್ತಿರ ಚರ್ಚಿಸಿದ. ಆಗ ಹುಟ್ಟಿಕೊಂಡದ್ದೇ ರೆಡ್ ಬಸ್ ಎಂಬ ವಿನೂತನ ಕಂಪನಿಯ ಪರಿಕಲ್ಪನೆ !
ರೆಡ್ ಬಸ್‌ನ ಸಿಇಒ ಫಣೀಂದ್ರ ಅವರೇ ತಿಳಿಸಿದಂತೆ, ಈವತ್ತು ರೆಡ್‌ಬಸ್‌ನ ವಹಿವಾಟು ೩೩೦ ಕೋಟಿ ರೂ. ದಾಟಿದೆ !!!
‘ ಕಂಗ್ರಾಚ್ಯುಲೇಶನ್ಸ್, ಇದೆಲ್ಲ ಹೇಗೆ ಸಾಧ್ಯವಾಯಿತು ? ಎತ್ತಣ ಎಲೆಕ್ಟ್ರಾನಿಕ್ ಎಂಜಿನಿಯರ್ ? ಎತ್ತಣ ರೆಡ್ ಬಸ್ ? ಬಹುಶಃ ಇಂಥ ಅತ್ಯರೂಪದ ಕತೆ ಸಿನಿಮಾದಲ್ಲೂ ಬಂದಿದೆಯೋ, ಇಲ್ಲವೋ ಗೊತ್ತಿಲ್ಲ.’ ಹೀಗೆ ಕೇಳಿದರೆ ಮುಗುಳ್ನಗುತ್ತಾ ಉತ್ತರಿಸುತ್ತಾರೆ ಫಣೀಂದ್ರ.
‘ ರೆಡ್ ಬಸ್ ಕಂಪನಿ ಅಗಾಧವಾಗಿ ಬೆಳೆಯುತ್ತಿದೆ. ಕೋಟ್ಯಂತರ ಹಣ ಹರಿದು ಬರುತ್ತಿದೆ. ಈ ವೇಗವನ್ನು ಉಳಿಸಿಕೊಳ್ಳಬೇಕಾದರೆ ನಾನು ಕಂಪನಿಗಿಂತಲೂ ಹತ್ತು ಹೆಜ್ಜೆ ಮುಂದಿರಬೇಕು. ಇಲ್ಲವಾದಲ್ಲಿ ಸಂಸ್ಥೆ ಬೆಳೆಯುವುದಿಲ್ಲ. ಇದು ನನ್ನ ಮುಂದಿರುವ ಚಾಲೆಂಜ್. ಆದರೆ ಇದು ನನ್ನಿಂದೊಬ್ಬನೇ ಆಗುವ ಕೆಲಸವಲ್ಲ, ಆದ್ದರಿಂದ ಸಮರ್ಥ ಮ್ಯಾನೇಜ್‌ಮೆಂಟ್ ಮತ್ತು ಉತ್ಸಾಹಿ ಸಿಬ್ಬಂದಿ ರೆಡ್ ಬಸ್‌ನಲ್ಲಿದೆ. ಈಗಾಗಲೇ ದೇಶಾದ್ಯಂತ ರೆಡ್ ಬಸ್ ಜಾಲವಿದೆ. ಮುಂದಿನ ದಿನಗಳಲ್ಲಿ ಮಲೇಷ್ಯಾ, ಬಾಂಗ್ಲಾದೇಶಗಳಲ್ಲಿ ಕಂಪನಿಯನ್ನು ವಿಸ್ತರಿಸುವ ಆಕಾಂಕ್ಷೆ ಇದೆ ’ ಎನ್ನುತ್ತಾರೆ ಫಣೀಂದ್ರಾ ! ನೆನಪಿಡಿ, ಯಾವುದೇ ಉದ್ಯಮದ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ, ಕೇವಲ ಮೂವತ್ತೊಂದರ ಯೌವನದಲ್ಲಿ ಎಂಥಾ ಪ್ರಬುದ್ಧ ಮಾತು !
ಈಗ ರೆಡ್‌ಬಸ್‌ನ ವಿಸ್ಮಯಕಾರಿ ಯಶಸ್ಸಿನ ಬಗ್ಗೆ ನೋಡೋಣ.
ಎಲ್ಲ ಸಂಶೋಧಕರಲ್ಲೂ ಅನೇಕ ಸ್ವಾರಸ್ಯಗಳಿರುತ್ತವೆ. ೨೦೦೫ರಲ್ಲಿ ಫಣೀಂದ್ರ ಬಿಟ್ಸ್‌ನಲ್ಲಿ ತಮ್ಮ ಸಹಪಾಠಿಗಳಾಗಿದ್ದ ಚರಣ್, ಪದ್ಮರಾಜು, ಸುಧಾಕರ್ ಜತೆಗೆ ಚರ್ಚಿಸಿ ರೆಡ್‌ಬಸ್ ಸಂಸ್ಥೆಗೆ ಚಾಲನೆ ನೀಡಿದರು. ಇವರೆಲ್ಲ ಐಬಿಎಂ, ಟೆಕ್ಸಾಸ್ ಇನ್ಸ್‌ಸ್ಟ್ರುಮೆಂಟ್ಸ್ ಮುಂತಾದ ಐಟಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹುದ್ದೆಯಲ್ಲಿದ್ದವರು. ಅಂತೂ ದೀಪಾವಳಿಗೆ ಬಸ್ ಟಿಕೆಟ್ ಸಿಕ್ಕದೆ ಪರದಾಡಿದ್ದ ಫಣೀಂದ್ರರ ತಲೆಯಲ್ಲಿ ಐಡಿಯಾ ಹೊಳೆದಿತ್ತು. ಕಂಪ್ಯೂಟರ್, ಇಂಟರ್‌ನೆಟ್, ಹೊಸ ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಬೆಳೆಸಿಕೊಂಡರೆ ಹೊಸ ಉದ್ದಿಮೆ ಸ್ಥಾಪಿಸಬಹುದು ಎಂದು ಯೋಚಿಸಿದ್ದರು. ಓದಿದ್ದು ಎಲೆಕ್ಟ್ರಾನಿಕ್ಸ್ ಆದರೂ ತಾಳ ಮೇಳವೇ ಆಗದ ಹೊಸ ಸಾಹಸಕ್ಕೆ ಸ್ನೇಹಿತರು ಧುಮುಕಿದ್ದರು.
ಮಾಡಿದ್ದೇನು ? : ಇಂಟರ್‌ನೆಟ್ ಮೂಲಕ ಗ್ರಾಹಕರು ಬಸ್ ಟಿಕೆಟ್ ಖರೀದಿಸುವ ಅನುಕೂಲ ಕಲ್ಪಿಸುವುದು. ಮನೆಯಲ್ಲಿ ಅಥವಾ ಎಲ್ಲಾದರೂ ಕುಳಿತುಕೊಂಡು ಮೌಸ್ ಕ್ಲಿಕ್ಕಿಸುವುದರ ಮೂಲಕ ಯಾವುದೇ ಸಂದರ್ಭ ಟಿಕೆಟ್ ಕಾಯ್ದಿರಿಸಬಹುದು. ಅದು ಕೂಡ ಉಚಿತವಾಗಿ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಎಸ್ಸೆಮ್ಮೆಸ್ ಬರುತ್ತದೆ. ಅದನ್ನು ಬಸ್‌ನಲ್ಲಿ ನಿರ್ವಾಹಕರಿಗೆ ತೋರಿಸಿದರೆ ಸಾಕು. ಬೇಕಾದರೆ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು. ಕಂಪ್ಯೂಟರ್, ನೆಟ್ ಸೌಲಭ್ಯ ಇಲ್ಲದಿದ್ದರೆ ಕಂಪನಿಯ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಟಿಕೆಟ್ ಕಾಯ್ದಿರಿಸಬಹುದು. ಮನೆಗೆ ಟಿಕೆಟ್ ತಲುಪಬೇಕಿದ್ದರೆ ಮಾತ್ರ ಶುಲ್ಕ ನೀಡಬೇಕಾಗುತ್ತದೆ. ಜನ ಖಾಸಗಿ ಏರ್‌ಲೈನ್ಸ್‌ಗಳ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸುವುದಾದರೆ, ಯಾಕೆ ಬಸ್ ಟಿಕೆಟ್ ಆಗಬಾರದು ? ಇಂತಹ ಹೊಸ ಕಲ್ಪನೆಯನ್ನು ಗೆಳೆಯರಲ್ಲಿ ಹಂಚಿದಾಗ ಅವರೂ ಉತ್ಸಾಹದಿಂದ ಸ್ಪಂದಿಸಿದರು.
ಪೂರ್ವ ಸಿದ್ಧತೆ : ಹಾಗಂತ ಫಣೀಂದ್ರ ಏಕ್‌ದಮ್ ಬಿಸಿನೆಸ್‌ಗೆ ಇಳಿದಿರಲಿಲ್ಲ. ಸಾಧ್ಯಾಸಾಧ್ಯತೆಗಳ ಬಗ್ಗೆ ಹಲವಾರು ಬಸ್ ನಿರ್ವಾಹಕರನ್ನು, ಮಾಲೀಕರನ್ನು, ಟ್ರಾವೆಲ್ ಏಜೆಂಟರನ್ನು ಸಂಪರ್ಕಿಸಿದರು.ಆದರೂ ಮಾರುಕಟ್ಟೆ ಸೃಷ್ಟಿಸುವುದು ಸುಲಭವಿರಲಿಲ್ಲ. ಫಣೀಂದ್ರ ಬೆಂಗಳೂರಿನ ಪುಸ್ತಕದಂಗಡಿಗಳಿಗೆ ಹೊಕ್ಕು ಸಾಫ್ಟ್‌ವೇರ್‌ಗಳ ಬಗ್ಗೆ ಗ್ರಂಥಗಳನ್ನು ಕಲೆ ಹಾಕಿ ಓದಿದರು. ಬಿಸಿನೆಸ್‌ಗೆ ಬೇಕಾದ ಹೊಸ ಸಾಫ್ಟ್‌ವೇರನ್ನು ಸಿದ್ಧಪಡಿಸಿದರು. ಬಸ್ ಮಾಲೀಕರು, ಟ್ರಾವೆಲ್ ಏಜೆಂಟರುಗಳೊಡನೆ ಒಪ್ಪಂದ ಮಾಡಿಕೊಂಡರು.
ಪ್ರತಿ ದಿನ ಇನೋಸಿಸ್‌ನಲ್ಲಿ ಗೇಟಿನ ಸಮೀಪ ಕಾದು ನಿಂತು ಟೆಕ್ಕಿಗಳಿಗೆ ತಮ್ಮ ಗುರುತಿನ ಕಾರ್ಡ್ ನೀಡಿ, ರೆಡ್ ಬಸ್ ಬಗ್ಗೆ ತಿಳಿಸುತ್ತಿದ್ದರು. ಕಂಪನಿಯ ಮೊದಲ ಗ್ರಾಹಕಿ ಇನೋಸಿಸ್‌ನ ಉದ್ಯೋಗಿಯಾಗಿದ್ದರಂತೆ. ಕ್ರಮೇಣ ಟೆಕ್ಕಿಗಳು ಒಬ್ಬರಿಗೊಬ್ಬರು ರೆಡ್‌ಬಸ್‌ನ ಅನುಕೂಲತೆಗಳ ಬಗ್ಗೆ ತಿಳಿಸುತ್ತಿದ್ದಂತೆ ಜನಪ್ರಿಯವಾಗತೊಡಗಿತು. ಇತರರೂ ಬಳಸತೊಡಗಿದರು. ಫಣೀಂದ್ರ ನೇತೃತ್ವದಲ್ಲಿ ಮೂವರು ಸದಸ್ಯರಿದ್ದ ಕಂಪನಿ ನೋಡ ನೋಡುತ್ತಿದ್ದಂತೆ ಅಗಾಧವಾಗಿ ಬೆಳೆಯತೊಡಗಿತು. ೯ ತಿಂಗಳಿನಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆ ೫೦ಕ್ಕೇರಿತು. ಐವತ್ತು ನೂರಾಯಿತು, ನೂರು ಇನ್ನೂರಾಯಿತು. ಈಗ ಐನ್ನೂರು ದಾಟಿದೆ !!
ಉಳಿತಾಯದ ೫ ಲಕ್ಷ ರೂ.ಗಳಲ್ಲಿ...!
ಆರಂಭದಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ರೆಡ್ ಬಸ್ ಕಚೇರಿ ಇತ್ತು. ಗೆಳೆಯರು ತಮ್ಮ ಉಳಿತಾಯದ ಹಣವನ್ನು ಒಟ್ಟುಗೂಡಿಸಿದಾಗ ೫ ಲಕ್ಷ ರೂ.ಗಳಾಗಿತ್ತು. ಅಷ್ಟರಲ್ಲೇ ಹೊಂದಾಣಿಕೆ ಮಾಡಿಕೊಂಡು ಕಂಪನಿ ಸ್ಥಾಪಿಸಿದ ಸಾಹಸಿಗರು ಇವರು. ನಂತರ ತಿಂಗಳಿಗೆ ಎರಡರಂತೆ ಕಚೇರಿಗಳನ್ನು ತೆರೆಯುತ್ತಾ ಮುಂದುವರಿದರು. ಚೆನ್ನೈ, ಮುಂಬಯಿ, ಅಹಮದಾಬಾದ್, ಪುಣೆ, ದಿಲ್ಲಿ, ಕೋಲ್ಕತಾ, ಅಸ್ಸಾಂ, ಜೆಮ್‌ಶೆಡ್‌ಪುರ ಅಂತ ದೇಶಾದ ಉದ್ದಗಲಕ್ಕೂ ಕಂಪನಿಯ ಕಚೇರಿಗಳು ಅಸ್ತಿತ್ವಕ್ಕೆ ಬಂದಿತು. ಈವತ್ತು ದೇಶದಲ್ಲಿ ೭೫ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ರೆಡ್‌ಬಸ್‌ನ ಟಿಕೆಟ್‌ಗಳು ಸಿಗುತ್ತವೆ.
ಆದಾಯ ಹೇಗೆ ?
ರೆಡ್‌ಬಸ್ ತನ್ನ ಜಾಲದಲ್ಲಿ ೩೫೦ಕ್ಕೂ ಹೆಚ್ಚು ಬಸ್ ನಿರ್ವಾಹಕರು, ೧೦ ಸಾವಿರಕ್ಕೂ ಹೆಚ್ಚು ಟ್ರಾವೆಲ್ ಏಜೆಂಟರ ಜತೆ ವ್ಯಾವಹಾರಿಕ ಸಂಪರ್ಕ ಹೊಂದಿದೆ. ೨೦೧೧ರಲ್ಲಿ ೪೦ ಲಕ್ಷ ಪ್ರಯಾಣಿಕರು ರೆಡ್ ಬಸ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆ ಪಡೆದಿದ್ದಾರೆ. ರೆಡ್ ಬಸ್ ಬ್ರ್ಯಾಂಡ್‌ನ ಮಾಲಿಕತ್ವ ಸಂಸ್ಥೆಯ ಹೆಸರು ಪಿಲಾನಿ ಸಾಫ್ಟ್ ಲ್ಯಾಬ್ಸ್. ಇದು ೩ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ರೆಡ್ ಬಸ್- ಬಸ್ ಟಿಕೆಟ್ ವಿತರಿಸುವ ಬ್ರ್ಯಾಂಡ್, ಬಾಸ್- ಬಸ್ ನಿರ್ವಾಹಕರಿಗೆ ಒದಗಿಸುವವ ಸಾಸ್ ಸಾಫ್ಟ್‌ವೇರ್ ವಿತರಕ ಬ್ರ್ಯಾಂಡ್ ಮತ್ತು ಮೂರನೆಯದಾಗಿ ಸೀಟ್ ಟೆಲ್ಲರ್- ಅಂದರೆ ಟ್ರಾವೆಲ್ ಏಜೆಂಟರಿಗೆ ಬಸ್ ಟಿಕೆಟ್‌ಗಳನ್ನು ಮಾರಾಟ ಮಾಡುವ ಬ್ರ್ಯಾಂಡ್. ಹೀಗೆ ರೆಡ್‌ಬಸ್‌ಗೆ ಟಿಕೆಟ್ ಬುಕ್ಕಿಂಗ್, ಟ್ರಾವೆಲ್ ಏಜೆಂಟರಿಗೆ ವಿತರಣೆ ಮತ್ತು ಬಸ್ ನಿರ್ವಾಹಕರಿಗೆ ಸಾಫ್ಟ್‌ವೇರ್ ಉತ್ಪನ್ನ ಮಾರಾಟದಿಂದ ಆದಾಯ ಹರಿದು ಬರುತ್ತದೆ. ಫಣೀಂದ್ರ ಹೇಳುವಂತೆ ದಿನಕ್ಕೆ ಸರಾಸರಿ ೨೦ ಸಾವಿರ ಟಿಕೆಟ್ ಬುಕ್ಕಿಂಗ್ ಆಗುತ್ತದೆ.
ಮನ್ನಣೆ :
ಫಣೀಂದ್ರ ಅವರ ಸಾಧನೆಯನ್ನು ಪರಿಗಣಿಸಿರುವ ಬಿಸಿನೆಸ್ ವರ್ಲ್ಡ್ ನಿಯತಕಾಲಿಕೆ, ೨೦೦೯ರಲ್ಲಿಯೇ ಭಾರತದ ಮೂವರು ಅತ್ಯಂತ ವಿಶ್ವಾಸಾರ್ಹ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ನೀಡಿತ್ತು. ೨೦೧೦ರಲ್ಲಿ ಫೋರ್ಬ್ಸ್‌ನ ೫ ಪ್ರಬಲ ಉದಯೋನ್ಮುಖ ಕಂಪನಿಗಳ ಪಟ್ಟಿಯಲ್ಲಿ ರೆಡ್‌ಬಸ್ ಸ್ಥಾನ ಗಳಿಸಿತ್ತು.
ಒಟ್ಟಿನಲ್ಲಿ ಫಣೀಂದ್ರ ಅವರಿಗೆ ಆರು ವರ್ಷಗಳ ಹಿಂದೆ ದೀಪಾವಳಿಗೆ ಹೈದರಾಬಾದ್‌ಗೆ ಹೋಗಲು ಬಸ್ ಟಿಕೆಟ್ ತಪ್ಪಿದ್ದು ಎಷ್ಟು ಒಳ್ಳೆಯದಾಯಿತು ನೋಡಿ ! ಬಸ್ ಟಿಕೆಟ್ ಸಿಗದವರಿಗೆಲ್ಲ ಯಾಕೆ ಇಂಥಾ ಐಡಿಯಾ ಹೊಳೆದಿದ್ದರೆ ! ಕೊನೆಯದಾಗಿ ಕಮಲ್ ಹಾಸನ್, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಂಡಕ್ಟರ್ ಆಗಿ ಟಿಕೆಟ್ ಹಂಚುತ್ತಾ, ಹಾಡುವ ಮುಂದೆ ಬನ್ನಿ..ಮುಂದೆ ಬನ್ನಿ..ಜೀವನದಲ್ಲಿ ಇನ್ನಾದರೂ ಮುಂದೆ ಬನ್ನಿ..ಹಾಡು ನೆನಪಾಗುತ್ತೆ.