Sunday, 13 November 2011

ಉಳಿತಾಯ ಬಡ್ಡಿ ಹೆಚ್ಚಳ, ಪ್ರಜೆಗಳ ಮೂಗಿಗೆ ತುಪ್ಪ

ಕೇಂದ್ರ ಸರಕಾರ ಕಳೆದ ವಾರ ಅಳೆದೂ ತೂಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಕೊಂಚ ಏರಿಸಿತು. ಇದನ್ನು ಅಸಾಮಾನ್ಯ ಸಾಧನೆ ಎಂಬಂತೆ ಸಾರಲಾಯಿತು. ಆದರೆ ಸಾಮಾನ್ಯರಿಗೆ ನಿಜಕ್ಕೂ ಇದರಿಂದ ಅಂತಹ ಪ್ರಯೋಜನ ಆಗಿದೆಯೇ ? ಇಲ್ಲ ಅಂತ ಮೂರನೇ ತರಗತಿಯ ಮಕ್ಕಳೂ ಕೂಡ ಹೇಳಿಯಾರು.
ಬೆಕ್ಕಿನ ಮೂಗಿಗೆ ತುಪ್ಪವನ್ನು ಸವರಿದ ಕೆಲಸವನ್ನಷ್ಟೇ ಕೇಂದ್ರ ಸರಕಾರ ಮಾಡಿದೆ. ಪ್ರತಿ ದಿನ ಬೆಲೆ ಏರಿಕೆ, ಹಣದುಬ್ಬರ, ತೈಲ ದರ ಹೆಚ್ಚಳ ಅಂತ ಗಾಯದ ಮೇಲೆ ಮೇಲಿಂದ ಮೇಲೆ ಬರೆ ಎಳೆಯಲಾಗುತ್ತಿದೆ. ಎಷ್ಟು ಸಂಪಾದಿಸಿದರೂ ಕೈಯಲ್ಲಿ ನಾಲ್ಕು ಕಾಸು ಉಳಿಯುತ್ತಿಲ್ಲ ಎಂಬ ಪರಿಸ್ಥಿತಿ ಜನ ಸಾಮಾನ್ಯರದ್ದು. ಹಾಗಾದರೆ ಸರಕಾರ ಮಾಡಿದ್ದೇನು ? ಪರಿಷ್ಕೃತ ಬಡ್ಡಿ ಹೆಚ್ಚಳದಿಂದ ಎಷ್ಟರಮಟ್ಟಿಗೆ ಉಪಯೋಗವಾಗಲಿದೆ ? ಎಂಬುದನ್ನು ನೋಡೋಣ.
ದೀರ್ಘಕಾಲದ ನಂತರ ನಿಮ್ಮ ಅಂಚೆ ಇಲಾಖೆ ಉಳಿತಾಯ, ರಾಷ್ಟ್ರೀಯ ಉಳಿತಾಯ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಲಿದೆ. ಸರಕಾರವೇನೋ ಮುಕ್ತ ಮಾರುಕಟ್ಟೆಯ ಬಡ್ಡಿ ದರಗಳಿಗೆ ಸಣ್ಣ ಉಳಿತಾಯ ಬಡ್ಡಿ ದರವನ್ನು ಸಮಗೊಳಿಸಲಾಗುವುದು ಎಂದು ಹೇಳುತ್ತಿದೆ. ಇದುವರೆಗೆ ಬ್ಯಾಂಕ್ ಉಳಿತಾಯ ಖಾತೆಯ ಠೇವಣಿಯಲ್ಲಿ ಸಿಗುತ್ತಿದ್ದ ಬಡ್ಡಿ ದರಕ್ಕಿಂತ ವಿಪರೀತ ಎನ್ನುವಷ್ಟು ಕಡಿಮೆ ಬಡ್ಡಿ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಿಗುತ್ತಿತ್ತು. ಪರಿಣಾಮವಾಗಿ ಭಾರಿ ಸಂಖ್ಯೆಯಲ್ಲಿ ಹೂಡಿಕೆದಾರರು ಸಣ್ಣ ಉಳಿತಾಯ ಯೋಜನೆಗಳಿಂದ ದೂರವಾಗಿದ್ದರು. ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಂತೂ ನಾಮ್‌ಕೇ ವಾಸ್ತೆಗಳಾಗಿದ್ದವು. ಕೊನೆಗೂ ಸರಕಾರ ಅಷ್ಟಿಷ್ಟು ಹೆಚ್ಚಿಸಿದೆ. ಆದರೆ ಈಗಲೂ ಬ್ಯಾಂಕ್‌ಗಳಲ್ಲಿ ನಿಗದಿತ ಠೇವಣಿಗೆ ಸಿಗುವ ಬಡ್ಡಿ ದರ ಹೆಚ್ಚೇ ಆಗಿದೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆಯ ಮಿತಿಯನ್ನು ವಾರ್ಷಿಕ ೧ ಲಕ್ಷಕ್ಕೆ ಏರಿಸಿರುವುದು ಮಾತ್ರ ಸಮಾಧಾನಕರ ಸಂಗತಿ ಎನ್ನಬಹುದು. ಇದರಿಂದ ಉಳಿತಾಯದ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತದೆ.
ಇಷ್ಟು ನಿರ್ಧಾರಕ್ಕೆ ಬರಬೇಕಾದರೆ ದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿತ್ತು. ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಶ್ಯಾಮಲಾ ಗೋಪಿನಾಥ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸು ಮೇರೆಗೆ ಈ ಎಲ್ಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರ ಪ್ರಕಾರ ಅಂಚೆ ಇಲಾಖೆಯ ಉಳಿತಾಯದ ಬಡ್ಡಿ ದರ ಈಗಿನ ಶೇ.೩.೫ರಿಂದ ಶೇ.೪ಕ್ಕೆ ಏರಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ಮೆಚ್ಯುರಿಟಿ ಅವಧಿಯಲ್ಲಿ ೬ರಿಂದ ೫ ವರ್ಷಕ್ಕೆ ಇಳಿಸಲಾಗಿದೆ. ಪಿಎಫ್‌ನಲ್ಲಿ ವಾರ್ಷಿಕ ಹೂಡಿಕೆಯ ಮಿತಿಯನ್ನು ೭೦ ಸಾವಿರ ರೂ.ಗಳಿಂದ ೧ ಲಕ್ಷ ರೂ.ಗೆ ಏರಿಸಲಾಗಿದೆ.
ಏನಾಗಿತ್ತು ?
ಮಾರುಕಟ್ಟೆಯಲ್ಲಿ ಬಡ್ಡಿ ದರಗಳು ಕೆಳ ಮಟ್ಟದಲ್ಲಿದ್ದಾಗ ಸಣ್ಣ ಉಳಿತಾಯ ಯೋಜನೆಗಳಲ್ಲಿನ ಬಡ್ಡಿ ದರಗಳು ಉಳಿತಾಯಗಾರರಿಗೆ ಸಬ್ಸಿಡಿಯಂತೆ ಆಕರ್ಷಕ ಎನ್ನಿಸುತ್ತದೆ. ಆದರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ತೀರಾ ಕಡಿಮೆ ಬಡ್ಡಿ ಇದ್ದಾಗ ಹೂಡಿಕೆದಾರರು ಅಲ್ಲಿರುವ ಹಣವನ್ನು ಹಿಂತೆಗೆದು ಇತರ ಆಯ್ಕೆಗಳತ್ತ ನಡೆಯುತ್ತಾರೆ. ಇದು ಭಾರಿ ಪ್ರಮಾಣದಲ್ಲಿ ಸಂಭವಿಸಿದರೆ ಸರಕಾರದ ಅರ್ಥ ನಿರ್ವಹಣೆ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಯಾಕೆಂದರೆ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿನ ನಿಧಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಬಳಸುತ್ತವೆ. ಬ್ಯಾಂಕ್ ಠೇವಣಿಗಳಲ್ಲಿ ಈಗ ವಾರ್ಷಿಕ ಶೇ. ೯ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತಿವೆ. ಹೀಗಿರುವಾಗ ಸಣ್ಣ ಉಳಿತಾಯ ಖಾತೆಯಲ್ಲಿ ಜನ ಕಡಿಮೆ ಬಡ್ಡಿಗೆ ದುಡ್ಡಿಡಲು ಅವರೇನು ಬೆಪ್ಪರೇ ? ಸಹಜವಾಗಿಯೇ ಭಾರಿ ಮೊತ್ತದ ನಿಧಿಯನ್ನು ಹೂಡಿಕೆದಾರರು ಹಿಂತೆಗೆದುಕೊಂಡಿದ್ದರು.
ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸಬೇಕಾದ ಒತ್ತಡಕ್ಕೆ ಸರಕಾರದ ಮೇಲಿತ್ತು. ವಿತ್ತೀಯ ಕೊರತೆಯನ್ನು ನೀಗಿಸಲು ಬೇರೆ ಮೂಲಗಳಿಂದ ಸಾಲ ಎತ್ತಬೇಕಾದ ಸನ್ನಿವೇಶ ಉಂಟಾಗಿತ್ತು. ಸಣ್ಣ ಉಳಿತಾಯ ಹೂಡಿಕೆ ಯೋಜನೆಗಳನ್ನು ಆಕರ್ಷಕಗೊಳಿಸುವ ಸರಕಾರದ ಉದ್ದೇಶ ಒಪ್ಪತಕ್ಕದ್ದೇ. ಆದರೆ ಈಗಲೂ ಅವುಗಳ ಮೇಲಿರುವ ಬಡ್ಡಿ ದರಗಳು ಬ್ಯಾಂಕ್‌ಗಳು ಒದಗಿಸುವ ಬಡ್ಡಿ ದರಕ್ಕಿಂತಲೂ ಕಡಿಮೆಯೇ. ಹಾಗಾದರೆ ಹೇಗೆ ಒಪ್ಪಲು ಸಾಧ್ಯ ?
ವಾಸ್ತವವಾಗಿ ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ನೀಡಿರುವ ಬಡ್ಡಿ ಶೇ.೮.೬ ಕೂಡ ಈಗಿನ ಶೇ.೧೦ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿರುವ ಹಣದುಬ್ಬರಕ್ಕೆ ಹೋಲಿಸಿದರೆ ಕಡಿಮೆಯೇ. ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆಯ ಕಥೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಈ ಉಳಿತಾಯ ಯೋಜನೆಗಳು ದೀರ್ಘಕಾಲೀನ ಹೂಡಿಕೆದಾರರು ಅಥವಾ ಹಿರಿಯ ನಾಗರಿಕರನ್ನು ಹಣದುಬ್ಬರದ ತಾಪದಿಂದ ರಕ್ಷಿಸಬೇಕೆಂಬ ಉದ್ದೇಶವನ್ನು ಹೊಂದಿದ್ದರೂ, ಈಗಿನ ಬಡ್ಡಿ ದರಗಳಿಂದ ಯೋಜನೆಯ ಉದ್ದೇಶ ಈಡೇರುವುದು ಅಸಾಧ್ಯ.
ಬ್ಯಾಂಕ್ ಬಡ್ಡಿಯೇ ಹೆಚ್ಚು :
ಸಣ್ಣ ಉಳಿತಾಯ ಯೋಜನೆಯ ಪರಿಷ್ಕೃತ ಬಡ್ಡಿಗೂ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನೀಡುವ ಬಡ್ಡಿಗೂ ಎಷ್ಟು ವ್ಯತ್ಯಾಸ ಇದೆ ಎಂಬುದನ್ನು ಇಲ್ಲೊಂದು ಉದಾಹರಣೆಯೊಂದಿಗೆ ನೋಡೋಣ. ಸಣ್ಣ ಉಳಿತಾಯ ಯೋಜನೆಯಲ್ಲಿ ೧,೦೦೦ ರೂ.ಗಳನ್ನು ೫ ವರ್ಷಗಳ ಅವಧಿಗೆ ಹೂಡಿದರೆ ಶೇ.೮.೩ರ ಬಡ್ಡಿ ದರದಲ್ಲಿ ೪೧೪.೭೨ ರೂ. ಬಡ್ಡಿ ಆದಾಯ ಸಿಗುತ್ತದೆ. ನಿಮ್ಮ ಹಣ ೧೪೧೪.೭೨ ರೂ.ಗೆ ಏರಿಕೆಯಾಗುತ್ತದೆ. ಆದರೆ ಕೆನರಾ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರೆ ೪೪೯.೬೯ ರೂ. ಬಡ್ಡಿ ಸಿಗುತ್ತದೆ. ದುಡ್ಡು ೧೪೪೯.೬೯ ರೂ.ಗೆ ಏರಿಕೆಯಾಗುತ್ತದೆ. ಇದು ಸಣ್ಣ ಮೊತ್ತವಾಗಿರಬಹುದು. ಆದರೆ ಹೂಡಿಕೆಯ ಮೊತ್ತ ಹೆಚ್ಚಾದಷ್ಟು ಬಡ್ಡಿಯ ವ್ಯತ್ಯಾಸವೂ ದೊಡ್ಡ ಮೊತ್ತವಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಶೇ.೯.೫ರ ಬಡ್ಡಿ ದರ ನೀಡುತ್ತಿವೆ.


ಸಣ್ಣ ಉಳಿತಾಯ ಹೂಡಿಕೆದಾರರಿಗೆ ಬಡ್ಡಿ ಇಷ್ಟು (ಶೇಕಡಾವಾರು)

ಈಗಿನ ದರ / ಪರಿಷ್ಕೃತ ದರ

ಉ.ಖಾ. ಠೇವಣಿ 3.50 - 4.00
1 ವರ್ಷ 6.25 -7.7
2 ವರ್ಷ 6.5 - 7.8
3 ವರ್ಷ 7.25 - 8.0
5 ವರ್ಷ 7.50 - 8.3
5 ವರ್ಷ ಆರ್‌ಡಿ 7.5 - 8.0

Monday, 13 June 2011

ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಕಾಮರ್ಸ್ ಕ್ಲಾಸ್ !


ಕಾಮರ್ಸ್ ಕ್ಲಾಸ್ ! : ಇದು ಇಂದಿನಿಂದ ಪ್ರತಿ ಸೋಮವಾರ ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಮೂಡಿ ಬರಲಿರುವ ಅಂಕಣ. ವಾಣಿಜ್ಯ ವಿಚಾರಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಪ್ರಶ್ನೋತ್ತರವಿದು. ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.

ಕಾಮರ್ಸ್ ಕ್ಲಾಸ್

೧. ಷೇರು ಎಂದರೇನು ?
ಕಂಪನಿಯ ಮಾಲಿಕತ್ವ. ನೀವು ಯಾವ ಕಂಪನಿಯ ಎಷ್ಟು ಷೇರುಗಳನ್ನು ಖರೀದಿಸುತ್ತೀರೊ, ಆ ಕಂಪನಿಯ ಮಾಲಿಕತ್ವದಲ್ಲಿ ಅಷ್ಟು ಪಾಲು ನಿಮ್ಮದಾಗುತ್ತದೆ. ಕಂಪನಿಯ ಲಾಭ ನಷ್ಟಗಳು ನಿಮ್ಮ ಷೇರಿನ ದರದ ಮೇಲೆ ಪರಿಣಾಮ ಬೀರುತ್ತವೆ. ಕಂಪನಿಯ ಆಡಳಿತ ಮಂಡಳಿ ತನ್ನೆಲ್ಲ ಮಾಹಿತಿಯನ್ನು ಷೇರುದಾರರಿಗೆ ನೀಡಲೇಬೇಕು. ಡಿವಿಡೆಂಡ್, ಬೋನಸ್ ವಿತರಿಸಬೇಕು.
೨. ಷೇರುಗಳ ವಹಿವಾಟು ಮಾಡುವುದು ಹೇಗೆ ?
ಮೊದಲು ಡಿಮ್ಯಾಟ್ ಖಾತೆಯನ್ನು ತೆರೆಯಲೇಬೇಕು. ಇದು ಇಲ್ಲದೆ ಷೇರು ವಹಿವಾಟು ಇಲ್ಲ. ಇದನ್ನು ದೇಶದ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಎನ್‌ಎಸ್‌ಇ ( ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ) ಹಾಗೂ ಬಿಎಸ್‌ಇನಿಂದ (ಮುಂಬಯಿ ಷೇರು ವಿನಿಮಯ ಕೇಂದ್ರ) ಮಾನ್ಯತೆ ಪಡೆದಿರುವ ಮಧ್ಯವರ್ತಿಗಳ (ಬ್ರೋಕರ್) ಮೂಲಕ ತೆರೆಯಬಹುದು. ಷೇರುಗಳ ಖರೀದಿ, ಮಾರಾಟವನ್ನು ಡಿಮ್ಯಾಟ್ ಮೂಲಕ ಮಾಡಬಹುದು.
೩. ಡಿಮ್ಯಾಟ್ ಖಾತೆಗೆ ತಗಲುವ ವೆಚ್ಚ ಎಷ್ಟು ?
ಇದು ಡಿಮ್ಯಾಟ್ ಖಾತೆ ಸೌಲಭ್ಯವನ್ನು ನೀಡುವ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಿರುತ್ತದೆ. ಕೆಲವು ಬ್ಯಾಂಕ್‌ಗಳು ೫೦೦ ರೂ. ವಿಸಬಹುದು. ಇನ್ನು ಕೆಲವರು ೭೦೦ ರೂ. ನಿಗದಿಪಡಿಸಬಹುದು. ಜತೆಗೆ ವಾರ್ಷಿಕ ನಿರ್ವಹಣೆ ಶುಲ್ಕ ನೀಡಬೇಕಾಗುತ್ತದೆ.
೪. ಡಿಮ್ಯಾಟ್‌ಗೆ ಬೇಕಾದ ದಾಖಲೆಗಳು ?
ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಬೇಕು. ಉಳಿದಂತೆ ಇತರ ಗುರುತಿನ ಚೀಟಿಯ ಅಗತ್ಯವಿದೆ. ಅದು ಮತದಾರರ ಚೀಟಿ, ವಾಹನ ಚಾಲನಾ ಪರವಾನಗಿ, ರೇಶನ್ ಕಾರ್ಡ್ ಆಗಬಹುದು. ೬ ತಿಂಗಳಿನ ಬ್ಯಾಂಕ್ ಸ್ಟೇಟ್‌ಮೆಂಟ್‌ನ ಪ್ರತಿ, ೩ ಪಾಸ್‌ಪೋರ್ಟ್ ಆಕಾರದ ಛಾಯಾಚಿತ್ರ ಬೇಕು.
೫. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಭಾರಿ ಅಪಾಯಕಾರಿಯಲ್ಲವೇ ?
ಷೇರು ಪೇಟೆಯಲ್ಲಿ ಹೂಡಿಕೆಗೆ ಮುನ್ನ ಕೆಲವು ಮಾಹಿತಿಗಳನ್ನು ತಿಳಿದಿರಬೇಕು. ಅದಿಲ್ಲದೆ ಏಕ್‌ದಂ ಲಕ್ಷಗಟ್ಟಲೆ ಹೂಡಿದರೆ ನಷ್ಟ ಆಗುತ್ತದೆ. ಆದರೆ ಷೇರುಪೇಟೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳಬಹುದು. ತಾಳ್ಮೆಯಿಂದ ಹೂಡಿಕೆ ಮಾಡಿ ವಹಿವಾಟು ನಡೆಸುವವರಿಗೆ ಲಾಭವಾಗುತ್ತದೆ.
ಪ್ರಶ್ನೆಗಳಿಗೆ ಉತ್ತರಿಸಿದವರು : ಸಾಗರ್ ಯು.ಎಸ್.

Sunday, 30 January 2011

ದಾನಿಯಾಗುವೆಯಾ, ಜಿಪುಣನಾಗುವೆಯಾ..!


ನೂರಾರು ಜನ್ಮಕ್ಕಾಗುವಷ್ಟು ಸಂಪತ್ತನ್ನು ಹೊಂದಿರುವ ಸಿರಿವಂತರು ತಮ್ಮ ಸಂಪತ್ತಿನಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಸಮಾಜ ಸೇವೆಗೆ ನೀಡುವಂತಾಗಲಿ ಎಂಬ ಉದ್ದೇಶದಿಂದ ಅಮೆರಿಕದಲ್ಲಿ ವಿನೂತನ ಆಂದೋಲನ ಆರಂಭಿಸಿರುವ ಬಿಲ್ ಗೇಟ್ಸ್ ಮತ್ತು ವಾರನ್ ಬಫೆಟ್ ಈ ವರ್ಷ ಭಾರತಕ್ಕೂ ಭೇಟಿ ನೀಡಲಿದ್ದಾರೆ. ಅವರ ಆಂದೋಲನದ ಬಗ್ಗೆ ಬರೆದ ಲೇಖನ. ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

Tuesday, 18 January 2011

ಷೇರು ಮಾರುಕಟ್ಟೆಯಲ್ಲಿ ಆರಂಭದಲ್ಲಿ ಎಷ್ಟು ಹೂಡಿಕೆ ಮಾಡಬಹುದು ?


ಅಂತರ್ಜಾಲದಲ್ಲಿ ಷೇರುಗಳಲ್ಲಿ ಆರಂಭಿಕ ಹಂತದಲ್ಲಿ ಎಷ್ಟು ದುಡ್ಡು ಹೂಡಿಕೆ ಮಾಡಬಹುದು ? ಎಂಬುದರ ಬಗ್ಗೆ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಸಿಕ್ಕಿದ ಸ್ವಾರಸ್ಯಕರ ಹಾಗೂ ಮಾಹಿತಿಯುಕ್ತ ಉತ್ತರಗಳು ಇಲ್ಲಿವೆ.

ಪ್ರಶ್ನೆ : ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಈ ಕ್ಷೇತ್ರಕ್ಕೆ ಹೊಸಬ. ೧೦,೦೦೦ ರೂ. ಹೂಡಬಹುದೇ ? ದಯವಿಟ್ಟು ಸಲಹೆ ಕೊಡಿ.

ಉತ್ತರಗಳು :
೧. ಷೇರು ಮಾರುಕಟ್ಟೆಯಲ್ಲಿ ಆರಂಭದಲ್ಲಿ ಕನಿಷ್ಠ ಇಷ್ಟು ಹೂಡಬೇಕು ಎಂಬ ಮಾನದಂಡ ಇಲ್ಲ. ೧೦೦ ರೂ.ಗಳಿಂದಲೂ ಹೂಡಿಕೆ ಶುರು ಮಾಡಬಹುದು. ನೀವು ಷೇರು ಪೇಟೆಗೆ ಹೊಸಬರಾದ್ದರಿಂದ ಮೊದಲು ಈ ಮಾರುಕಟ್ಟೆಯ ಸ್ವಭಾವದ ಬಗ್ಗೆ ವ್ಯವಸ್ಥಿತ ಅಧ್ಯಯನ ನಡೆಸುವುದು ಸೂಕ್ತ. ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಏಜೆಂಟರಿಗೆ ನೀಡಬೇಕಾದ ಕಮೀಶನ್, ಪಾವತಿಸಬೇಕಾದ ತೆರಿಗೆ ವಿವರ ತಿಳಿದುಕೊಳ್ಳಿ. ಮೊದಲು ಉತ್ತಮ ಹೆಸರು (ಬ್ರಾಂಡ್ ) ಇರುವ ಕಂಪನಿಗಳ ಷೇರುಗಳನ್ನು ಖರೀದಿಸಿ. ನಿಮ್ಮ ಉಳಿತಾಯದಲ್ಲಿ ಶೇ.೩೦ಕ್ಕಿಂತ ಹೆಚ್ಚು ಹಣವನ್ನು ಷೇರಿನಲ್ಲಿ ಹೂಡದಿರಿ.

೨. ೧೦ ಸಾವಿರ ರೂ.ಗಳಿಂದ ಹೂಡಿಕೆ ಉತ್ತಮ. ಲಾಭ ಗಳಿಸಲು ಶುರು ಮಾಡಿದ ಮೇಲೆ ಹೆಚ್ಚು ಹೂಡಬಹುದು.

೩. ಗೆಳೆಯಾ, ನಿಮ್ಮಲ್ಲಿರುವ ಹಣದಲ್ಲಿ ಶೇ.೧೦ನ್ನು ಮಾತ್ರ ಷೇರು ಪೇಟೆಗೆ ಬಳಸು. ಹೂಡಿಕೆಗೆ ಷೇರು ಮಾರುಕಟ್ಟೆ ಉತ್ತಮ ನಿಜ. ಆದರೆ ಹೆಚ್ಚು ಅಪಾಯ ಕೂಡ ಇಲ್ಲಿದೆ.

೪. ಇಂಥ ಮೂರ್ಖತನದ ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳಬೇಡಿ. ಬ್ಯಾಂಕ್‌ಗಳಲ್ಲಿ ಹೂಡಿಕೆ ಉತ್ತಮ.

೫. ಇದೆಲ್ಲವೂ ನಿಮ್ಮ ನಿರ್ಧಾರ, ಸಾಮರ್ಥ್ಯ, ಧೈರ್ಯ ಮತ್ತು ಸಮಯಸ್ಫೂರ್ತಿಯನ್ನು ಒಳಗೊಂಡಿದೆ. ಇದು ಅಮೌಂಟ್‌ನ ಪ್ರಶ್ನೆಯಲ್ಲ. ಮಾರುಕಟ್ಟೆಯಲ್ಲಿ ಬಾಳುವ ಪ್ರಶ್ನೆ. ನೀವು ಸದಾ ಹೆಸರಾಂತ ಕಂಪನಿಗಳಲ್ಲಿ, ವಲಯಗಳಲ್ಲಿ ಹೂಡಿ. ಹೂಡಿಕೆಯ ಮುನ್ನ ಕಂಪನಿಯ ಪೂರ್ವಾಪರಗಳ ಬಗ್ಗೆ ಅಧ್ಯಯನ ಮಾಡಬೇಕು. ದೀರ್ಘಕಾಲೀನ ಹೂಡಿಕೆ ಮಾಡುವುದಿದ್ದರೆ ಪ್ರತಿಷ್ಠಿತ ಕಂಪನಿಗಳ ಷೇರುಗಳನ್ನು ಖರೀದಿಸಿ. ಅಲ್ಪಕಾಲೀನ ಸಂಪಾದನೆಗೆ ಹೂಡುವುದಾದರೆ ಗರಿಷ್ಠ ಏಳು ಬೀಳುಗಳಿರುವ ಕಂಪನಿಯ ಷೇರುಗಳನ್ನು ಆಯ್ಕೆ ಮಾಡಬಹುದು.

೬. ಹತ್ತು ಸಾವಿರ ರೂ. ಉತ್ತಮ ಹೂಡಿಕೆ. ಸಾರ್ವಜನಿಕ ವಲಯದ ಕಂಪನಿಗಳಾದ ಪೆಟ್ರೊನೆಟ್ ಎಲ್‌ಎನ್‌ಜಿ, ಲಿಗ್ನೈಟ್ ಮುಂತಾದ ಕಂಪನಿಗಳಲ್ಲಿ ಈ ಮೊತ್ತದಿಂದ ಹೂಡಬಹುದು. ಆದರೆ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಲಾಭಾಂಶವನ್ನು ಮೂಲ ಹಣದಿಂದ ಪ್ರತ್ಯೇಕಿಸಿ, ವಾರದ ತನಕ ಕಾದು ನಂತರ ಮರು ಹೂಡಿಕೆ ಮಾಡಿ.

ಮತ್ತಷ್ಟು ಉತ್ತರಗಳನ್ನು ನಿರೀಕ್ಷಿಸಿ...

Monday, 17 January 2011

ಹೂಡಿಕೆಗೆ ಕಾಗದದ ಬಂಗಾರ


ಚಿನ್ನದ ಮೇಲೆ ಹೂಡಿಕೆ ಮಾಡಲು ಭೌತಿಕ ರೂಪದ ಬಂಗಾರದ ಅಗತ್ಯ ಈಗ ಇಲ್ಲ. ಗೋಲ್ಡ್ ಇಟಿಎಫ್ ಎಂಬ ಹೂಡಿಕೆ ವಿಧಾನದ ಬಗ್ಗೆ ಬರೆದ ಲೇಖನ. ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Tuesday, 11 January 2011

ಮೊದಲ ಸಂಬಳ ಹೇಳಿದ INFOSYS ಸಹ ಸಂಸ್ಥಾಪಕರು, ಈಗಿನ ಸಂಬಳ ಹೇಳಲಿಲ್ಲ !


ಪತ್ರಿಕಾ ವಲಯದಲ್ಲಿ ಇರುವವರಿಗೆ ನಿತ್ಯ ವಿಭಿನ್ನ ಅನುಭವ, ಅರಿವು, ಮಾಹಿತಿ ಸಿಗುವುದು ಸಹಜ. ಪತ್ರಿಕೆಯಲ್ಲಿ ಬರೆಯದ, ಆದರೆ ಅನುಭವಕ್ಕೆ ದಕ್ಕಿದ ಕೆಲವು ಸಂಗತಿಗಳನ್ನು ನಿಮ್ಮೊಡನೆ ಹಂಚುವ ಆಸೆ. ಅದಕ್ಕೆಂದೇ ಈ ಅಂಕಣ - ಪತ್ರಿಕಾ ಅನುಭವ

ಪತ್ರಿಕಾ ಅನುಭವ-೧
ಇತ್ತೀಚೆಗೆ INFOSYS ಸಹ ಸಂಸ್ಥಾಪಕ, ಹಿರಿಯರಾದ ದಿನೇಶ್ ಅವರನ್ನು ಸಂದರ್ಶಿಸಿದ್ದೆ. ಅವರ ಸಾಧನೆ ಅನನ್ಯ ಹಾಗೂ ಸ್ಪೂರ್ತಿದಾಯಕ. ಸರಳ ವ್ಯಕ್ತಿತ್ವದ ದಿನೇಶ್ ಸಂದರ್ಶನ ಸ್ಮರಣೀಯವಾಗಿತ್ತು.
ಅಂದು ನನ್ನ ಬಳಿ ಅವರು ಮಾತನಾಡುತ್ತಾ, " ನನ್ನ ಮೊದಲ ಸಂಬಳ ೮೦ ರೂಪಾಯಿ..' ಎಂದು ಹೇಳಿದ್ದರು. ಸಂದರ್ಶನ ಮುಗಿಸಿ ಮನೆಗೆ ಬಂದಾಗ ನನ್ನಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿತ್ತು. ಹಾಗಾದರೆ ಈಗ ಅವರ ಸಂಬಳ ಎಷ್ಟಿರಬಹುದು ? ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಆಗ ಅವರು ನೇರ ಉತ್ತರ ಕೊಡಲೇ ಇಲ್ಲ. ಕಂಪನಿಯ ವೆಬ್ ಸೈಟ್‌ನಲ್ಲಿ ವೇತನದ ಬಗ್ಗೆ ವಿವರ ಸಿಗುತ್ತದೆ. ಅವೆಲ್ಲ ಏಕೆ ? ಎಂದರು. ನಾನು ಪ್ರತ್ಯುತ್ತರ ಹೇಳಲು ಹೋಗಲಿಲ್ಲ.
ಬದಲಿಗೆ ಕೂಡಲೇ ವೆಬ್‌ಸೈಟ್ ತೆರೆದು ಉತ್ತರ ಪಡೆದುಕೊಂಡೆ. ಅವರ ಈಗಿನ ಸಂಬಳ ಎಷ್ಟು ಅಂತ ಲೇಖನದಲ್ಲಿ ಬರೆದೆ. ಆದರೆ ನಂತರ ನನ್ನ ಮನಸ್ಸು ಹೇಳುತ್ತಿತ್ತು. ಈ ಪುಣ್ಯಾತ್ಮರು ನನ್ನ ಮೊದಲ ಸಂಬಳವನ್ನು ಹೆಮ್ಮೆಯಿಂದ ಹೇಳಿದ್ದರು. ಈಗಿನ ಸಂಬಳ ಹೇಳಲು ಯಾಕಿಷ್ಟು ಮುಜುಗರ ? ಹೇಳಿದರೆ ಏನಾಗುತ್ತದೆ ? ಎಂಥ ವಿಪರ್ಯಾಸವಲ್ಲವೇ.

Sunday, 9 January 2011

ಚಿನ್ನದ ನಾಣ್ಯ ಎಲ್ಲಿ ಸಿಗುತ್ತದೆ ? ಅದೇಕೆ ಸುರಕ್ಷಿತ ?


ಬ್ಯಾಂಕ್‌ಗಳು ಇದೀಗ ಚಿನ್ನದ ನಾಣ್ಯ ಮತ್ತು ಗಟ್ಟಿಗಳ ಮಾರಾಟದಲ್ಲಿ ಹಿಂದೆಂದಿಗಿಂತ ಹೆಚ್ಚು ತೊಡಗಿಸಿಕೊಂಡಿವೆ. ಆರ್‌ಬಿಐ ಕೂಡ ಇತ್ತೀಚೆಗೆ ಮತ್ತೆ ೭ ಬ್ಯಾಂಕ್‌ಗಳಿಗೆ ಚಿನ್ನ ಆಮದು ಮಾಡಿಕೊಳ್ಳಲು ಅನುಮತಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ನಾಣ್ಯಗಳ ಕುರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

Friday, 7 January 2011

೫೦ ಸಾವಿರ ರೂ. ಬಂಡವಾಳ,ಚಾಕಲೇಟ್ ಮತ್ತು ಸುಭಾತ್ರಾ


" ಇಂಥವರೇ ಅಂತ ಇಲ್ಲ, ಯಾರೇ ಆಗಲಿ, ಬಿಸಿನೆಸ್ ಶುರು ಮಾಡ್ಬೇಕು ಎಂದು ಬಯಸಿದರೆ ತಡ ಮಾಡಬಾರದು. ಮುನ್ನುಗ್ಗಿ ಅವಕಾಶಗಳನ್ನು ಕಂಡುಕೊಳ್ಳುತ್ತ ಮುಂದುವರಿಯಬೇಕು. ಆಗ ಎಂಥ ಸವಾಲು ಕೂಡ ಕಲಿಯುವಿಕೆಯ ಭಾಗವಾಗಿ ಬಿಡುತ್ತದೆ. ಕಷ್ಟವಾಗುವುದಿಲ್ಲ..''
ಹೊಸ ದಿಲ್ಲಿಯ ಯುವ ಉದ್ಯಮಿ ಸುಭಾತ್ರಾ ಪ್ರಿಯದರ್ಶಿನಿ ಹೀಗೆನ್ನುವಾಗ ಅವರಲ್ಲಿರುವ ಆತ್ಮ ವಿಶ್ವಾಸ, ದೃಢ ನಿರ್ಧಾರ ಮತ್ತು ಛಲ ವ್ಯಕ್ತವಾಗುತ್ತದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಸುಭಾತ್ರಾ ಪ್ರಿಯದರ್ಶಿನಿ ಅವರೀಗ ಚಾಕಲೇಟ್ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿರುವ ಉದ್ಯಮಿ. ಚಾಕ್ ಆಫ್ ದಿ ಟೌನ್ ಎಂಬುದು ಅವರ ಚಾಕಲೇಟ್ ಉದ್ದಿಮೆಯ ಹೆಸರು. ಹಾಗಂತ ವ್ಯಾಪಾರ ಆರಂಭಿಸಲು ಕೋಟಿಗಟ್ಟಲೆಯೇಕೆ, ಲಕ್ಷಗಟ್ಟಲೆ ರೂಪಾಯಿ ಕೂಡ ಬಂಡವಾಳ ಹಾಕಿಲ್ಲ. ವ್ಯಾಪಾರದ ಕುಟುಂಬದಿಂದ ಬಂದವರೂ ಅಲ್ಲ, ಆದರೆ ಕೇವಲ ೫೦ ಸಾವಿರ ರೂ.ಗಳೊಂದಿಗೆ ಚಾಕಲೇಟ್ ವ್ಯಾಪಾರ ಶುರು ಮಾಡಿರುವ ದಿಟ್ಟೆ ಪ್ರಿಯದರ್ಶಿನಿ.
ಉದ್ಯಮಿಯಾಗುವ ಆಸೆ, ನಿರಂತರ ಕಲಿಕೆ, ವೆಬ್‌ಸೈಟ್, ಫೇಸ್‌ಬುಕ್ ಮತ್ತು ೫೦ ಸಾವಿರ ರೂ. ಬಂಡವಾಳದಿಂದ ಸುಭಾತ್ರಾ ಇದೀಗ ಕನಸನ್ನು ನನಸಾಗಿಸಿದ್ದಾರೆ. ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಸಾಹಸ ಮತ್ತು ಮುಂದಿನ ಗುರಿಯನ್ನು ವಿವರಿಸಿದ್ದಾರೆ. ವಿಶೇಷವೇನೆಂದರೆ ಚೆನ್ನೈ ಮೂಲದ ಸುಭಾತ್ರಾ ಪ್ರಿಯದರ್ಶಿನಿ ಚಾಕಲೇಟ್ ಉದ್ದಿಮೆಯ ಬಗ್ಗೆ ಆರಂಭಿಕ ಕಲಿಕೆ ಪಡೆದದ್ದು ಬೆಂಗಳೂರಿನ ಐಐಎಂನಲ್ಲಿ. ಕಳೆದ ವರ್ಷ ಐಐಎಂ ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳಿಗೆ ಸಿದ್ಧಪಡಿಸಿರುವ ಎರಡು ತಿಂಗಳಿನ ಕೋರ್ಸ್‌ಗೆ ಸೇರ್ಪಡೆಯಾದರು. ಕೋರ್ಸ್ ಶುಲ್ಕ ಸೇರಿ ಅವರಿಗೆ ತಗುಲಿದ ಖರ್ಚು ೫೦ ಸಾವಿರ ರೂ. ಆದರೆ ಇದು ಅವರಿಗೆ ನಿರೀಕ್ಷೆಗೂ ಮೀರಿದ ಪ್ರತಿಫಲ ಕೊಟ್ಟಿತು. ಹಲವಾರು ಸಮಾನಮನಸ್ಕ ಮಹಿಳೆಯರ ಪರಿಚಯವೂ ಆಯಿತು. ಆದರೆ ಪತಿಗೆ ಉದ್ಯೋಗ ನಿಮಿತ್ತ ದಿಲ್ಲಿಗೆ ವಲಸೆಯಾದ್ದರಿಂದ ಇವರು ಹುದ್ದೆಗೆ ವಿದಾಯ ಹೇಳಿ ದಿಲ್ಲಿಗೆ ತೆರಳಬೇಕಾಯಿತು. ಆದರೆ ಅಲ್ಲಿ ಸುಮ್ಮನಿರದೆ ಉದ್ಯಮಿಯಾಗುವ ಹಂಬಲದಿಂದ ಅನುಷ್ಠಾನಕ್ಕೆ ಇಳಿದೇ ಬಿಟ್ಟರು.
ಐಐಎಂ ಬೆಂಗಳೂರಿನಲ್ಲಿ ಚಾಕಲೇಟ್ ಉದ್ದಿಮೆಯ ಒಳ ಹೊರಗಿನ ಬಗ್ಗೆ ಶಿಕ್ಷಣ ಪಡೆದ ಸುಭಾತ್ರಾ ದಿಲ್ಲಿಯಲ್ಲಿ ಪ್ರಯೋಗಕ್ಕಿಳಿದರು. ಈವತ್ತು ಏಕಾಂಗಿಯಾಗಿಯೇ ೧೫ ಭಿನ್ನ ಬಗೆಯ ಚಾಕಲೇಟ್‌ಗಳನ್ನು ಅವರು ತಯಾರಿಸುತ್ತಾರೆ. ಆರಂಭದಲ್ಲಿ ದಿನಕ್ಕೆ ೨ ಕೆಜಿ ಚಾಕಲೇಟ್ ಮಾಡುತ್ತಿದ್ದರಂತೆ. ಈಗ ದೇಶಾದ್ಯಂತ ಬೇಡಿಕೆ ಬರುತ್ತಿದೆ. ಹೀಗಾಗಿ ಈ ಗುಡಿ ಕೈಗಾರಿಕೆಯನ್ನು ವಿಸ್ತರಿಸುವ ಆಲೋಚನೆ ಅವರಲ್ಲಿದೆ. ಒಣಗಿದ ಹಣ್ಣುಗಳು, ಬೀಜಗಳು, ತೆಂಗಿನಕಾಯಿ ಮುಂತಾದ ಪದಾರ್ಥಗಳನ್ನು ಉಪಯೋಗಿಸಿ ಚಾಕಲೇಟ್ ಉತ್ಪಾದಿಸುತ್ತಾರೆ. ಫೇಸ್‌ಬುಕ್, ತಮ್ಮದೇ ವೆಬ್‌ಸೈಟ್ ಇರುವುದರಿಂದ ದೇಶದ ನಾನಾ ಕಡೆಗಳಿಂದ ಬೇಡಿಕೆ ಬರುತ್ತಿದೆ. ಗ್ರಾಹಕರ ಸಂಪರ್ಕ ಸಾಧ್ಯವಾಗುತ್ತದೆ. ಇವೆರಡೂ ಅತ್ಯಂತ ಉಪಕಾರಿ ಎನ್ನುತ್ತಾರೆ ಸುಭಾತ್ರಾ.
ಸುಭಾತ್ರಾ ಅವರ ಚಾಕ್ ಆಫ್ ದಿ ಟೌನ್‌ನಲ್ಲಿ ೭ ರೂ.ಗಳ ಚಾಕಲೇಟ್ ಸಿಗುತ್ತದೆ. ಮೊಟ್ಟೆಯನ್ನು ಬಳಸದ ಕೇಕ್ ದೊರೆಯುತ್ತದೆ. ವಹಿವಾಟು ವಿಸ್ತರಣೆ ಸಲುವಾಗಿ ಕೆಲವರಿಗೆ ಉದ್ಯೋಗ ಕೊಡಲೂ ಸುಭಾತ್ರಾ ಮುಂದಾಗಿದ್ದಾರೆ.

Sunday, 2 January 2011

ಉಪ್ಪಿನ ಕಣಿವೆ ಕಛ್‌ನಲ್ಲಿ..
ಗುಜರಾತ್‌ನ ಕಛ್‌ಗೆ ಇತ್ತೀಚೆಗೆ ಭೇಟಿ ನೀಡಿದ ನಂತರ ಬರೆದ ಚಿತ್ರ ವರದಿ. ವರದಿಯ ಮೇಲೆಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.