Wednesday, 21 October 2009

ಹಳ್ಳಿ ಶಾಲೆ ಮಕ್ಕಳ ಬ್ಯಾಂಕ್ ಮತ್ತು ಉಳಿತಾಯ !(ಮೈಸೂರಿನ ಆಂದೋಲನ ಪತ್ರಿಕೆಯಲ್ಲಿದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿ )

ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚರಿಯ ಗೂಡು.
ಎಲ್ಲ ಹಳ್ಳಿಗಳಂತೆಯೇ ಇರುವ ದೊಡ್ಡ ಕೊಪ್ಪಲಿನಲ್ಲಿ ಈ ಪುಟ್ಟ ಸರಕಾರಿ ಶಾಲೆ ಸದ್ದಿಲ್ಲದೆ ನಡೆಸುತ್ತಿರುವ ಶೈಕ್ಷಣಿಕ ಪ್ರಗತಿ ಗ್ರಾಮದ ಮಟ್ಟಿಗೆ ಒಂದು ಆಂದೋಲನದಂತೆ ಪರಿವರ್ತನೆಗೊಳ್ಳುತ್ತಿದೆ. ಖಾಸಗಿ ಶಾಲೆಗಳೂ ಈ ಶಾಲೆಯನ್ನೊಮ್ಮೆ ನೋಡಿ ಹಲವು ವಿಚಾರಗಳನ್ನು ಕಲಿಯುವಂತಿದೆ. ಶಾಲೆಯ ಬಾಹ್ಯ ಪರಿಸರ, ಶಿಕ್ಷಕರು, ಚಿಣ್ಣರು, ಅನುಷ್ಠಾನಗೊಂಡಿರುವ ತರಾವರಿ ಪ್ರಯೋಗಗಳು ವಿಶಿಷ್ಟ ಕಥನವಾಗುತ್ತವೆ.
ಮಿತ್ರ ಕೃಷ್ಣ ಅವರೊಂದಿಗೆ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೆದುರು ನಿಂತಾಗ ಕಂಡ ಪರಿಸರ ವಿಭಿನ್ನ. ಅಯಸ್ಕಾಂತದಂತೆ ಅದು ಸೆಳೆದುಕೊಂಡಿತು. ಇತರರ ದೃಷ್ಟಿಯಲ್ಲಿ ವ್ಯರ್ಥವೆನಿಸುವ, ಕೈಗೆಟುಕುವ ಸಾಧನಗಳನ್ನು ಬಳಸಿ ಸುಂದರವಾದ ಉದ್ಯಾನವನ್ನು ಅಲ್ಲಿ ನಿರ್ಮಿಸಲಾಗಿತ್ತು. ಗೇಟಿನಿಂದ ಶಾಲೆಯ ಮೆಟ್ಟಿಲಿನವರೆಗೂ ಕಮಾನು, ಅವುಗಳಿಗೆ ಹೂಬಳ್ಳಿಗಳ ಅಲಂಕಾರ ಇತ್ತು. ಅಲ್ಲೊಂದು ಪುಟ್ಟದಾದ ಕೊಳವಿತ್ತು.ಅದರಲ್ಲಿ ಅಲಂಕಾರಿಕ ಮೀನುಗಳು ಓಡಾಡುತ್ತಿತ್ತು. ಉಳಿದಂತೆ ನೂರಾರು ಬಗೆತ ಕ್ರಾಟನ್ ಗಿಡಗಳು, ಹಣ್ಣಿನ ಗಿಡಗಳು, ಭರತದ ಭೂಪಟದ ಆಕಾರದ ರಚನೆಗಳು ಕಣ್ಮನ ತಣಿಸುತ್ತಿದ್ದವು.
ಕುತೂಹಲದ ಸಂಗತಿ ಏನೆಂದರೆ ಶಾಲೆಯಲ್ಲಿ ಮಕ್ಕಳೇ ನಡೆಸುತ್ತಿರುವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಬ್ಯಾಂಕ್. ಉಳಿತಾಯದ ಮಹತ್ವವನ್ನು ಮಕ್ಕಳಿಗೆ ಹೇಗೆ ಪರಿಣಾಮಕಾರಿಯಾಗಿ ಬೋಸಬಹುದೆನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಶಾಲೆಯ ೩ರಿಂದ ೭ನೇ ತರಗತಿಯ ವರೆಗಿನ ಹಳ್ಳಿ ಮಕ್ಕಳು ತಮಗಾಗಿ ಈ ಬ್ಯಾಂಕ್ ರೂಪಿಸಿದ್ದಾರೆ. ಅದರಲ್ಲಿ ಖಾತೆದಾರನ ಹೆಸರು, ಖಾತೆ ಸಮಖ್ಯೆ, ದಿನಾಂಕ ಠೇವಣಿ ಮೊತ್ತ, ಜಮಾ, ಖರ್ಚು ಉಳಿಕೆ ಎಲ್ಲವನ್ನೂ ಬರೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ಸುಸೂತ್ರವಾಗಿ ನಡೆದಿದೆ.
ಅಪ್ಪ ಅಮ್ಮಂದಿರು ಕೊಡುವ ಪಾಕೆಟ್ ಮನಿಯಲ್ಲಿ ಉಳಿಸಿ ಹಣವನ್ನು ಮಕ್ಕಳು ಈ ಬ್ಯಾಂಕಿನಲ್ಲಿಡುತ್ತಾರೆ. ವರ್ಷಾಂತ್ಯದಲ್ಲಿ ಹಣವನ್ನು ಡ್ರಾ ಮಾಡುತ್ತಾರೆ. ಉಳಿತಾಯ, ಬ್ಯಾಂಕ್ ವಹಿವಾಟು ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕೆರಳಿಸುತ್ತದೆ ಈ ವ್ಯವಸ್ಥೆ. ಈ ವರ್ಷ ಬ್ಯಾಂಕಿನಲ್ಲಿ ೧೨೪೦ ರೂ. ಸಂಗ್ರಹವಾಗಿದೆ.
ಶಾಲೆಯ ಕೈತೋಟ ಮಾತ್ರ ಕಂಗೊಳಿಸಿದರೆ ಸಾಲದು. ದೊಡ್ಡಕೊಪ್ಪಲಿನ ಪ್ರತಿಯೊಂದು ಮನೆಯ ಮುಂದೆಯೂ ಇಂಥ ಕೈತೋಟ ಇರಬೇಕು. ಆದ್ದರಿಂದ ನಾವು ಊರ ಜನತೆಗೆ ಗಿಡಗಳನ್ನು ಹಂಚಲು ಯೋಜಿಸಿದ್ದೇವೆ ಎನ್ನುತ್ತಾರೆ ಶಿಕ್ಷಕ ನವೀನ್ ಕುಮಾರ್. ಅದು ನಿಜವಾಗಲಿ.
ಶಾಲೆಯಲ್ಲಿ ಸುಪ್ತ ಶಕ್ತಿ ಎಂಬ ಭಿತ್ತಿ ಪತ್ರಿಕೆ ಇದೆ. ಶಾಲಾ ಮಕ್ಕಳ ಬರವಣಿಗೆಗೆ ಇದು ಮಾಧ್ಯಮವಾಗಿದೆ. ಬರುವಾಗ ಗೆಳೆಯ ಕೃಷ್ಣ ಹೇಳಿದರು- ಇಂಥ ಶಾಲೆ ಮೈಸೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶೇ.೬೦ಕ್ಕೆ ಮುಟ್ಟಿದರೂ ಸಾಕು..

ಕೂಲಿ ಕೆಲಸಗಾರರು ಕಟ್ಟಿದ ಶಾಲಾ ಮೈದಾನ !

( ಮೈಸೂರಿನ ಆಂದೋಲನದಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿಯ ಐದನೇ ಕಂತು ಇಲ್ಲಿದೆ )
ಈ ಸಲದ ಗಾಂಧಿ ಜಯಂತಿಯ ದಿನ ನಂಜನಗೂಡಿನ ಒಂದು ತೀರಾ ಹಿಂದುಳಿದ ಗ್ರಾಮಕ್ಕೆ ತೆರಳಿದಾಗ ವಿಶಿಷ್ಟ ಅನುಭವ ದೊರೆಯಿತು. ಇದುವರೆಗೆ ನಮ್ಮ ಗ್ರಾಮಕ್ಕೆ ಪತ್ರಿಕೆಯವರು ಬಂದೇ ಇರಲಿಲ್ಲ. ನಮ್ಮ ಶಾಲೆಯ ಬಗ್ಗೆ ಆಂದೋಲನ ಪತ್ರಿಕೆಯ ಮೂಲಕ ಸಾವಿರಾರು ಓದುಗರಿಗೆ ಪರಿಚಯಿಸುತ್ತಿದ್ದೀರಾ. ಇದರಿಂದ ತುಂಬ ಸಂತಸವಾಗುತ್ತಿದೆ ಎಂದರು ಆ ಗ್ರಾಮಸ್ಥರು. ಆ ಗ್ರಾಮದ ಹೆಸರು ಗೌಡರ ಹುಂಡಿ..ಗೌಡರ ಹುಂಡಿಯ ಗ್ರಾಮಸ್ಥರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅಗತ್ಯ ಬಸ್ ಸೌಕರ್ಯ ಕೂಡ ಇಲ್ಲದ ಗೌಡರ ಹುಂಡಿಯಲ್ಲಿ ಶಾಲೆಯ ಏಳಿಗೆಗೆ ಗ್ರಾಮಸ್ಥರು ಅಕ್ಷರಶಃ ಪಣ ತೊಟ್ಟಿದ್ದಾರೆ. ಆದ್ದರಿಂದ ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಈ ಸರಕಾರಿ ಶಾಲೆ ಬೆಳೆದು ನಿಂತಿದೆ. ಶಾಲೆಯ ದ್ವಾರದಲ್ಲಿ ‘ ದೇವಾಲವಿ ವಿದ್ಯಾಲಯವು ಕೈ ಮುಗಿದು ಒಳಗೆ ಬಾ ಎಂಬ ಆಕರ್ಷಕ ಕಮಾನು ಇದೆ. ಸಣ್ಣ ಕೈತೋಟವಿದೆ. ಹತ್ತಾರು ತೆಂಗಿನ ಮರಗಳು, ಬಾಳೆ ಗಿಡಗಳು ಲಾಸ್ಯವಾಡುತ್ತಿವೆ. ಹೂವು ಹಣ್ಣಿನ ಗಿಡಗಳು ಹಸಿರಾಗಿವೆ. ಬಿಸಿಯೂಟಕ್ಕೆ ಬೇಕಾದ ತರಕಾರಿ, ಕಾಯಿ ಪಲ್ಲೆಗಳನ್ನು ಶಾಲೆಯ ಆವರಣದಲ್ಲೇ ಬೆಳೆಸುತ್ತಾರೆ. ಬೀನ್ಸ್, ಕ್ಯಾರೆಟ್, ಟೊಮೊಟೊ, ಬದನೆ, ಕೊತ್ತಂಬರಿ, ದಂಟಿನ ಸೊಪ್ಪು, ಸಬ್ಸಿಗೆ ಸೊಪ್ಪು ಮುಂತಾದ ತರಕಾರಿ ಸೊಪ್ಪುಗಳು ಇಲ್ಲಿ ಲಭ್ಯ. ಎಳನೀರು, ತೆಂಗಿನ ಕಾಯಿ ಕೂಡ ಸಿಗುತ್ತದೆ. ಶಾಲಾಭಿವೃದ್ಧಿ ಸಮಿತಿ ಪ್ರತಿವರ್ಷ ೨-೩ ವಿದ್ಯಾರ್ಥಿಗಳ ಸಮಸ್ತ ಖರ್ಚನ್ನೂ ನಿಭಾಯಿಸುತ್ತದೆ. ಈ ಊರಿನಲ್ಲಿ ಕಬ್ಬು ಬೆಳೆಗಾರರಿಗೆ ಸಹಕರಿಸುವ ಕೂಲಿ ಕಾರ್ಮಿಕರಿದ್ದಾರೆ. ಆ ಯುವಕರೆಲ್ಲ ಸೇರಿಕೊಂಡು ಕಬ್ಬಿನ ಸಂಘ ಎಂಬ ಸಂಘ ಸ್ಥಪಿಸಿದ್ದಾರೆ. ಸಂಘದ ಚಂದ್ರು ಮತ್ತು ಇತರರು ಸೇರಿಕೊಂಡು ಶಾಲೆಗೋಸ್ಕರ ಸೊಗಸಾದ ಬ್ಯಾಡ್ಮಿಂಟನ್ ಮೈದಾನ ನಿರ್ಮಿಸಿದ್ದಾರೆ. ಶಾಲೆಗೆ ವಿದ್ಯುಚ್ಛಕ್ತಿ ಸೌಲಭ್ಯ, ಕಮಾನು ನಿರ್ಮಾಣ, ತೋಟ ಸೇರಿದಂತೆ ಹಲವಾರು ಕಾಣಿಕೆಗಳನ್ನು ಗ್ರಾಮಸ್ಥರೆಲ್ಲ ಸೇರಿಕೊಂಡು ಕೊಟ್ಟಿದ್ದಾರೆ. ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಪರಿಕಲ್ಪನೆಯೇ ತುಸು ಭಿನ್ನ. ಸರಕಾರಿ ಶಾಲೆಗಳು ಹೇಗೆ ಪಾಳು ಬಿದ್ದು ಹೋಗಿವೆ ಎಂಬುದರ ಬಗ್ಗೆ ಮಾಧ್ಯಮಗಳು ಸಾಕಷ್ಟು ಸಲ ವರದಿ ಮಾಡಿವೆ. ಈಗಲೂ ಲೋಪ ದೋಷಗಳ ಪಟ್ಟಿ ಮುಗಿದಿಲ್ಲ. ಆದರೆ ಮತ್ತೊಂದು ಮುಖವನ್ನೂ ಪರಿಚಯಿಸಕೊಡಬೇಕಲ್ಲವೇ.

Tuesday, 20 October 2009

ಶಾಲೆಗೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟ ಬಡ ಹಳ್ಳಿಗರು !

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಸರಣಿಯ ನಾಲ್ಕನೇ ಕಂತು )ನಂಜನಗೂಡು ತಾಲ್ಲೂಕಿನ ಚಾಮಲಾಪುರದ ಹುಂಡಿ, ಪಟ್ಟಣದ ಮಗ್ಗುಲಿನಲ್ಲಿಯೇ ನಾನಾ ಸಮಸ್ಯೆಗಳಿಂದ ತತ್ತರಿಸಿಕೊಂಡಿರುವ ಒಂದು ಕುಗ್ರಾಮ. ಗ್ರಾಮಸ್ಥರು ತೀರಾ ಬಡವರು. ಒಂದೊಂದು ಮನೆಯೊಳಗೂ ಮೂರ್‍ನಾಲ್ಕು ಕುಟುಂಬಗಳ ವಾಸ. ಸ್ಥಳದ ಅಭಾವ. ಮೂಲಭುತ ಸೌಲಭ್ಯಗಳು ಕನ್ನಡಿಯೊಳಗಿನ ಗಂಟು.ಹಿಂದೆ ಸುಜಾತಾ ಮಿಲ್ ಇದ್ದಾಗ ಅದರಲ್ಲಿ ದುಡಿಯುತ್ತಿದ್ದವರಲ್ಲಿ ಬಹುತೇಕ ಮಂದಿ ಕಾರ್ಮಿಕರು ಚಾಮಲಾಪುರದ ಹುಂಡಿಯವರು. ಈಗ ಕಾರ್ಖಾನೆ ಮುಚ್ಚಿದೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿಕೊಂಡಿದ್ದಾರೆ. ಈ ರೀತಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣ ಪರಿಸ್ಥಿತಿ ಏನಾಗಬೇಕು ? ಅಂತಹ ಚಿಣ್ಣರ ಭವಿಷ್ಯದ ಕನಸುಗಳಿಗೆ ಪೂರಕವಾಗಿ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆಯೇ ? ಇದಕ್ಕೆ ಉತ್ತರ ಎಂಬಂತೆ ಹಲವು ಸಮಸ್ಯೆಗಳ ನಡುವೆಯೂ ಚಾಮಲಾಪುರದ ಸರಕಾರಿ ಶಾಲೆ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ ನೀಡುತ್ತಿದೆ. ಸುಮಾರು ೬೦ ಮಂದಿ ಮಕ್ಕಳಿದ್ದ ಶಾಲೆಯಲ್ಲೀಗ ೩೫೨ ಮಂದಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.ಒಂದರಿಂದ ಆರನೇ ತರಗತಿಯವರೆಗೆ ವಿದ್ಯಾಭ್ಯಾಸದ ಅವಕಾಶವಿರುವ ಶಾಲೆಯಿದು. ಆರಂಭದಲ್ಲಿ ಇದ್ದ ಕೊಠಡಿಗಳ ಸಂಖ್ಯೆ ಎರಡು. ಈವತ್ತು ೫ ಕೊಠಡಿಗಳು ಇವೆ. ಜತೆಗೆ ಅಕ್ಷರ ದಾಸೋಹದ ಅಕ್ಕಿ, ಅಡುಗೆ ಸಲಕರಣೆಗಳೂ ಸೇರಿಕೊಂಡಿವೆ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಬಂದಿದೆ. ಆದರೆ ಕೊಠಡಿಗಳ ಸಂಖ್ಯೆ ಅನುಗುಣವಾಗಿಲ್ಲ. ಪರಿಣಾಮ ಶಾಲಾ ಜಗಲಿ, ಅಂಗಳವೇ ತರಗತಿಗಳಾಗುತ್ತಿವೆ. ಇಂತಹ ಸಮಸ್ಯೆ ಎಷ್ಟೋ ಸರಕಾರಿ ಶಾಲೆಗಳಿಗೆ ಕಾಡುತ್ತಿರಬಹುದು. ಹೀಗಿದ್ದರೂ ಇವುಗಳನ್ನೆಲ್ಲ ಎದುರಿಸಿಕೊಂಡು ಈ ಶಾಲೆ ಪ್ರಗತಿಯತ್ತ ಹೊರಳುತ್ತಿದೆ. ಅಭಿವೃದ್ಧಿತ್ತ ನಡೆದಿರುವ ಈ ಶಲೆಗೆ ಎಟಿಎಂಡ್ ಎಸ್ ಕಾರ್ಖಾನೆ ಕೂಡ ನೆರವು ನೀಡಿದೆ. ಮುಖ್ಯವಾಗಿ ಸ್ಥಳೀಯರು ಕೈಲಾದ ನೆರವು ನೀಡಿದ್ದಾರೆ. ಬಿಸಿಯೂಟ ಮಾಡುವ ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳ ಬೇಕಲ್ಲವೇ. ಇರುವ ಚೂರು ನೆಲಕ್ಕೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟಿದ್ದಾರೆ ಈ ಗ್ರಾಮಸ್ಥರು. ತೀರಾ ಪಾಳು ಬಿದ್ದಿದ್ದ ಶಾಲೆಯಿದು. ಇಂದು ಅಚ್ಚರಿ ಮೂಡಿಸುವಷ್ಟು ಬದಲಾಗಿದೆ. ಡಿಪಿಇಪಿ ಕಲಿಕಾ ಪದ್ಧತಿ ಪ್ರಭಾವ ಬೀರಿದೆ. ಶಾಲೆಯ ತರಗತಿಗಳಲ್ಲಿ ಕಲಿಕಾ ಸಾಮಗ್ರಿಗಳು ತುಂಬಿ ತುಳುಕುತ್ತಿವೆ. ಇವುಗಳ ಮಧ್ಯೆ ಚಿಣ್ಣರು ವ್ಯಾಸಂಗ ನಿರತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಈ ರೀತಿ ಅಭಿವೃದ್ಧಿಯತ್ತ ಮುಖ ಮಾಡಿರುವ ಸರಕಾರಿ ಶಾಲೆಗಳು ಹಲವು. ಇನ್ನೂ ಕೆಲವೆಡೆಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಕೊಡುಗೆ ಸಲ್ಲಿಸಿವೆ.

Thursday, 15 October 2009

ಪ್ರಶಸ್ತಿ ಹಣದಲ್ಲಿ ಶಾಲೆಯ ರಂಗಮಂದಿರ ಕಟ್ಟಿದರು ನೋಡಿ !

ಅಲ್ಲೊಂದು ಪಾಳು ಬಿದ್ದಿರುವ ಶಾಲೆ ಇರುತ್ತದೆ. ಶಾಲೆ ಪರಮ ನಿರ್ಲಕ್ಷ್ಯತನಕ್ಕೆ ಬಿದ್ದಿರುವುದು ಎಲ್ಲರಿಗೂ ಗೊತ್ತಿದ್ದರೂ, ಅದು ಉದ್ಧಾರವಾಗಲಿ ಎಂಬ ಹಾರೈಕೆ ಯಾರಿಗೂ ಇರುವುದಿಲ್ಲ. ಇಂತಹ ನೂರಾರು ಸರಕಾರಿ ಶಾಲೆಗಳಂತೆ ಮಂಡಕಳ್ಳಿಯಲ್ಲಿಯೂ ಪಾಳು ಬಿದ್ದಿದ್ದ ಸರಕಾರಿ ಶಾಲೆಯೊಂದಿತ್ತು. ಆದರೆ ಆ ಸರಕಾರಿ ಶಾಲೆ ಈಗ ಪರಿವರ್ತನೆಯ ಮಜಲನ್ನು ದಾಟಿದೆ. ಸ್ವರೂಪವೇ ಬದಲಾಗಿದೆ.
ಅಂದು ಮಂಡಕಳ್ಳಿಗೆ ಕಾಲಿಟ್ಟಾಗ ಮಟ ಮಟ ಮಧ್ಯಾಹ್ನವಾಗಿತ್ತು. ಶಾಲೆಯ ಅಂಗಳ ಪ್ರವೇಶಿಸುತ್ತಿದ್ದಂತೆ ಹಾಯೆನ್ನಿಸಿತು. ನೂರಾರು ಗಿಡಮರಗಳಿಂದ ಕಂಗೊಳಿಸುತ್ತಿದ್ದ ಶಾಲೆಯ ತೋಟದಲ್ಲಿ ನಡೆದಾಗ ಆಯಾಸ ಪರಿಹಾರವಾಯಿತು. ಈ ಸರಕಾರಿ ಶಾಲೆಯ ಆವರಣ ಗೋಡೆಯನ್ನೇ ನೋಡುತ್ತ ಒಂದು ಸುತ್ತು ಹಾಕಿದರೆ ಉತ್ತಮ ಅಧ್ಯಯನವಾಗುತ್ತದೆ. ಶಾಲೆಯ ಗೇಟಿನ ಇಕ್ಕೆಲಗಳಲ್ಲಿ ಮಕ್ಕಳಿಗೆ ಸೊರೆಯುವ ಶೈಕ್ಷಣಿಕ ಸೌಲಭ್ಯಗಳ ವಿವರವನ್ನು ಬರೆಯಲಾಗಿದೆ. ಡಿಪಿಇಪಿ ಯೋಜನೆಯ ಬಗ್ಗೆ ಶಿಕ್ಷಕ ಸಮುದಾಯದಲ್ಲಿ ಗೊಂದಲ ಇದ್ದರೂ ಜನರಿಗೆ ತಿಳುವಳಿಕೆ ಮೂಡಿಸುವ ಯತ್ನವನ್ನು ಕೈಗೊಳ್ಳಲಾಗಿದೆ.
ಶಾಲೆಯ ತೋಟದಲ್ಲಿ ಬೇವು, ತೇಗ ವಿವಿಧ ಹೂಗಿಡಗಳು, ತೆಂಗು, ನೆಲ್ಲಿಯ ಮರಗಳು ಸೊಂಪಾಗಿ ಬೆಳೆದಿದೆ. ಮಕ್ಕಳು ಇವುಗಳಿಗೆ ನೀರುಣಿಸುತ್ತಾರೆ. ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಪಡೆದಿರುವ ಮಂಡಕಳ್ಳಿ ಶಾಲೆಯಲ್ಲೀಗ ಬಯಲು ರಂಗಮಂಟಪಕ್ಕೆ ಬುನಾದಿ ಹಾಕಲಾಗಿದೆ. ಶಾಲೆಗೆ ಬಂದ ನಾನಾ ಪ್ರಶಸ್ತಿಗಳ ಮೊತ್ತದಿಂದಲೇ ಮಂಟಪದ ಬುನಾದಿಯನ್ನು ಕಟ್ಟಲಾಗಿದೆ ಎನ್ನುವುದು ವಿಶೇಷ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ. ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೊಂದು ವೇದಿಕೆ ಬೇಕಲ್ಲಾ ? ಎಂಬ ಪ್ರಶ್ನೆಗೆ ಈ ಭೌತಿಕ ವೇದಿಕೆ ಉತ್ತರವಾಗುತ್ತದೆ.
ಅಂದಹಾಗೆ ವಿಕಸನದತ್ತ ಸರಕಾರಿ ಶಾಲೆಗಳು ಅಭಿಮುಖವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳು ನೆರವು ನೀಡಿವೆ. ಕೆಲ ರೋಟರಿ ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಈ ಸಂಘ ಸಂಸ್ಥೆಗಳು ತಮ್ಮ ಪ್ರಚಾರದ ಸಲುವಾಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತವೆ ವಿನಾ ನಿಜವಾದ ಸೇವೆ ಅಲ್ಲಿರುವುದಿಲ್ಲ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸರಕಾರಿ ಶಾಲೆಗಳು ವಿಕಸನದತ್ತ ಸಾಗಲಿ ಎಂಬ ಉದ್ದೇಶದಿಂದ ಇಷ್ಟಾದರೂ ಪರಿವರ್ತನೆ ಆಗುತ್ತಿದೆಯಲ್ಲವೇ, ಇದು ಸಕಾರಾತ್ಮಕ. ವೃಥಾ ನಿಂದಿಸುವುದರಿಂದ ಏನು ಪ್ರಯೋಜನ ಅಲ್ಲವೇ.
(ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ಸರಣಿ-ವಿಕಸನದತ್ತ ಸರಕಾರಿ ಶಾಲೆಗಳು. ಅದರ ೩ನೇ ಕಂತು ಇದು.)

Tuesday, 13 October 2009

ಸರಕಾರಿ ಶಾಲೆಯಿಂದ ಗ್ರಾಮದ ಪರಿವರ್ತನೆ

ಸಾಗರಕಟ್ಟೆ ಹೆಮ್ಮನಹಳ್ಳಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎನ್ ಜಯಲಕ್ಷ್ಮಿ. ಅವರು ಈ ಶಾಲೆಗೆ ಬಂದಾಗ ಶಾಲೆಯ ಸ್ಥಿತಿ ಉತ್ತಮವಾಗಿರಲಿಲ್ಲ. ಹೇಳೋರು ಕೇಳೋರು ಇಲ್ಲದ ಅನೇಕ ಸರಕಾರಿ ಶಾಲೆಗಳಂತೆ ಇದೂ ಇತ್ತು.
ಅಂತಹ ಶಾಲೆಯ ಪುನಶ್ಚೇತನಕ್ಕಾಗಿ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಹಾಗೂ ಗ್ರಾಮಸ್ಥರು ಜತೆಗೂಡಿ ಶ್ರಮಿಸಿದ ರೀತಿ ಅನನ್ಯ. ಅನೇಕ ಮಂದಿ ಶಿಕ್ಷಣ ತಜ್ಞರು ಈ ಶಾಲೆಗೆ ಭೇಟಿ ಕೊಟ್ಟು ಮೂಕ ವಿಸ್ಮಿತರಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು ?
ಸಾಗರಕಟ್ಟೆ ಹೆಮ್ಮನಹಳ್ಳಿ ಅತ್ಯಂತ ಪುಟ್ಟ ಹಳ್ಳಿ. ಅಂದಾಜು ನೂರು ಮನೆಗಳಿವೆ. ಇತರೆಡೆಗಳಿಂದ ವಲಸೆ ಬಂದವರು, ಕೂಲಿ ನಾಲಿ ಮಾಡುವವರು ವಾಸಿಸುತ್ತಾರೆ. ಅಂತಹ ಗ್ರಾಮವಾಸಿಗಳಲ್ಲಿ ಶಾಲೆ ನಮ್ಮದು ಎಂಬ ಭಾವನೆಯನ್ನು ಜಯಲಕ್ಷ್ಮಿ ಬಿತ್ತಿದರು. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ದಿನಗಳಂದು ಶಾಲೆಯಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಹಬ್ಬ ಆಚರಿಸಿದರು. ಎಲ್ಲರೂ ಜಾತ್ರೆಗೆ ಸೇರುವಂತೆ ಈ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ಆವತ್ತು ಮಧ್ಯಾಹ್ನ ಗ್ರಾಮದವರೆಲ್ಲರಿಗೂ ಮಕ್ಕಳೊಂದಿಗೆ ಶಾಲೆಯಲ್ಲೇ ಊಟ. ಸಿಹಿ ವಿತರಣೆ. ಶಾಲೆಯ ಅಭಿವೃದ್ಧಿಗೂ ಆಗ ಚರ್ಚೆಯಾಗುತ್ತದೆ. ಶಾಲೆಯಲ್ಲಿ ಸೋಲಾರ್ ದೀಪವಿದೆ. ಹೂತೋಟವಿದೆ. ಬಾಳೆ, ಪಪ್ಪಾಯ, ವಿವಿಧ ಹೂವಿನ ಗಿಡಗಳು ಇವೆ. ಗ್ರಾಮಸ್ಥರೆಲ್ಲರೂ ಶಾಲೆಗೆ ಶ್ರಮ ದಾನ ನೀಡುತ್ತಾರೆ.
ಈ ಹಿಂದೆ ಗ್ರಾಮದಲ್ಲಿ ಅಸ್ತ್ರ ಒಲೆಗಳು ಇರಲಿಲ್ಲ. ಹಾಗಂದರೇನು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಈಗ ಊರಿನ ಎಲ್ಲ ಮನೆಗಳಲ್ಲಿ ಅಸ್ತ್ರ ಒಲೆ ಇದೆ. ಇದಕ್ಕೆ ಕಾರಣ ಸರಕಾರಿ ಶಾಲೆ. ಶಾಲೆಯ ತೋಟಕ್ಕೆ ಹನಿ ನೀರಾವರಿ ಇದೆ. ಮಕ್ಕಳಾಡುವ ಚಕಮಕಿಗೆ ಕೊಳವೆ ಬಾವಿಯ ಹಿಡಿಯನ್ನು ಜೋಡಿಸಲಾಗಿದೆ. ಮಕ್ಕಳು ಚಕಮಕಿಯನ್ನೇರಿ ಆಡುವಾಗ ನೀರು ಟ್ಯಾಂಕ್‌ಗೆ ಹರಿಯುತ್ತದೆ. ಇಂತಹ ಹಲವಾರು ಪ್ರಯೋಗಗಳಿಗೆ ಈ ಶಾಲೆ ಕಾರಣವಾಗಿದೆ. ಒಂದು ಸರಕಾರಿ ಶಾಲೆ ಸಾಮಾಜಿಕ ಪರಿವರ್ತನೆ ಮಾಡುತ್ತಿರುವುದು ಅಚ್ಚರಿದಾಯಕವಲ್ಲವೇ.

Monday, 12 October 2009

ಕೆ.ಆರ್. ನಗರದಲ್ಲಿ ಕಲ್ಲರಳಿ ಹೂವಾದ ಸರಕಾರಿ ಶಾಲೆ

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಕಾಸ ಹೊಂದುತ್ತಿರುವ ಸರಕಾರಿ ಶಾಲೆಗಳ ಬಗ್ಗೆ ಸರಣಿ ಬರೆದಿದ್ದೆ. ಈ ಸರಣಿಯಲ್ಲಿ ೧೨ ಸರಕಾರಿ ಶಾಲೆಗಳ ಬಗ್ಗೆ ಬರೆದಿದ್ದೆ. ಇಷ್ಟೂ ಶಾಲೆಗಳು ವಿಕಾಸವಾದ ಪರಿ ಕುತೂಹಲಕರ. ಅವುಗಳ ವಿವರ ನಿಮ್ಮೊಂದಿಗೆ-)

ಕಳೆದ ವಾರದ ಹಾಡುವಿನಲ್ಲಿ ಹುಣಸೂರಿನ ಕುಗ್ರಾಮವಾದ ಕೆಂಪಮ್ಮನ ಹೊಸೂರಿನಲ್ಲಿ ಶಿಕ್ಷಕ-ಶಿಕ್ಷಕಿಯರಿಬ್ಬರ ಕಠಿಣ ಪರಿಶ್ರಮದಿಂದಾಗಿ ಮಾದರಿಯಾಗಬಹುದಾದಂತಹ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರೂಪುಗೊಂಡ ಯಶೋಗಾಥೆಯನ್ನು ಓದಿದ್ದೀರಿ.
ಶಾಲೆ ಎಂಬ eನಾಲಯದ ಉತ್ಥಾನಕ್ಕೆ ಎಲ್ಲಾ ಶಿಕ್ಷಕರು ಜತೆಗೂಡಿದಾಗ ಅವರೊಂದಿಗೆ ಸಮುದಾಯದ ಬೆಂಬಲ ಸಂಗಮಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಅನ್ನುವುದು ಕೆ.ಆರ್.ನಗರದ ಅಗ್ರಹಾರದ ಸರಕಾರಿ ಶಾಲೆಯಿಂದ ಸಾಬೀತಾಗಿದೆ.
ಮೂಲತಃ ಹಾಸನದವರಾದ ಶ್ರೀಕಂಠಪ್ಪ ಈ ಸರಕಾರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸದತ್ತ ಒಲವನ್ನು ತೋರಿಸಬೇಕಾದರೆ ಸುತ್ತಲಿನ ಪರಿಸರ ಮನೀಜ್ಞವಾಗಿರಬೇಕು. ಕಲಿಕೆ, ಅಧ್ಯಯನಾದಿಗಳಿಗೆ ಹುಮ್ಮಸ್ಸು ತುಂಬಿಸುವಂತಿರಬೇಕು ಎಂಬುದನ್ನು ಶ್ರೀಮಕಂಠಪ್ಪ ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೆ ನಂಬಿದ್ದನ್ನು ಕಾರ್ಯಗತಗೊಳಿಸಿದ್ದಾರೆ ಕೂಡಾ. ಯಾವಾಗಲೂ ನಂಬಿಕೆಗಳಾಗಿ ಪ್ರವರ್ತನೆಯಾದಾಗ ಮಾತ್ರ ಬೆಲೆ ಬರುವುದು ತಾನೇ ?
ಕೆಲವು ವರ್ಷಗಳ ಹಿಂದೆ ಈ ಶಾಲೆ ಬಹುತೇಕ ಸರಕಾರಿ ಶಾಲೆಗಳಂತೆ ಅವ್ಯವಸ್ಥೆಗಳ ಬೀಡಾಗಿತ್ತು. ಕೊರತೆಗಳ ಪಟ್ಟಿ ಮೈಲುದ್ದವಾಗಿತ್ತು. ಶಾಲೆಯದ್ದೇ ಅನ್ನುವ ಪ್ರತ್ಯೇಕ ಜಾಗವೂ ದಾಖಲೆಗಳಲ್ಲಿ ಇರಲಿಲ್ಲ. ಆವರಣ ಗೋಡೆ ಇರಲಿಲ್ಲ. ಶಾಲೆಯ ಸೂರೇ ಕಿತ್ತು ಹೋಗಿತ್ತು. ಮಳೆ ಬಂದರೆ ಶಾಲೆಯೊಳಗೂ ಛತ್ರಿ ಅಗತ್ಯ ಎನ್ನುವ ಪರಿಸ್ಥಿತಿ. ಅಂಥ ದುಸ್ಥಿತಿಗೆ ಸಿಲುಕಿದ್ದ ಸರಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳ, ಕಲಿಕೆಯಲ್ಲಿ ಪ್ರಗತಿ ಹೇಗೆ ಸಾಧ್ಯವಾಯಿತು ?
ಮೂರು ವರ್ಷಗಳ ಹಿಂದೆ ಶಾಲೆಯ ಬಳಿ ಕೊಳವೆ ಬಾವಿ ಕೊರೆಸಲಾಯಿತು. ನೀರು ಉಕ್ಕಿತು. ಕೊಳವೆ ಬಾವಿಯ ನೀರನ್ನು ಶಾಲೆಗೆ ಮಾತ್ರವಲ್ಲದೆ ಸ್ಥಳೀಯರಿಗೂ ಪೂರೈಸಲಾಯಿತು. ಶಾಲೆಯತ್ತ ಸಮುದಾಯ ಸಹಾಹ ಹಸ್ತ ಚಾಚಲು ಇದು ಕಾರಣವಾಯಿತು.
ಶಾಲೆಯ ಮುಂದೆ ಇದ್ದ ಜಾಗದಲ್ಲಿ ಕ್ರಮೇಣ ಉದ್ಯಾನವನ್ನು ನಿರ್ಮಿಸಲಾಯಿತು. ಇದರಿಂದಾಗಿ ಶಾಲೆಯ ಸ್ವರೂಪವೇ ಅಗಾಧವಾಗಿ ಪರಿವರ್ತನೆಗೊಂಡಿತು. ಅರಣ್ಯ ಇಲಾಖೆಯೂ ಇಲ್ಲಿಗೆ ಬಗೆಬಗೆಯ ಗಿಡಗಳನ್ನು ವಿತರಿಸಿದೆ.
ಇಂದು ಶಾಲೆಯ ಮುಂದೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತಹ ಅಪರೂಪದ ಸುಂದರ ಉದ್ಯಾನ ತಲೆ ಎತ್ತಿಕೊಂಡಿದೆ. ಶಾಲಾ ಮಕ್ಕಳು ಉರಿ ಬಿಸಿಲಿಗೆ ನಿಂತು ಪ್ರಾರ್ಥನೆ, ಧ್ವಜವಂದನೆ ಮಾಡಬೇಕಾದ ಪ್ರಮೇಯವೇ ಇಲ್ಲ. ಈ ಶಾಲೆಯ ಸಾಧನೆಗಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ( ೨೦ ಸಾವಿರ ರೂ. ನಗದು) ತಾಲೂಕಿನ ಅತ್ಯುತ್ತಮ ಶಾಲೆ ಎಂಬಿತ್ಯಾದಿಯಾಗಿ ಬಹುಮಾನಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಶಾಲಾವರಣದಲ್ಲಿ ಔದೀಯ ಗಿಡ ಮೂಲಿಕೆಗಳನ್ನು ಬೆಳೆಸುವ ಯೋಜನೆ ಇದೆ. ಅದು ಸಿದ್ಧಗೊಳ್ಳುತ್ತಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಶ್ರೀಕಂಠಪ್ಪ. ನೀವು ಊಹಿಸಬಲ್ಲಿರಾ ಸರಕಾರಿ ಶಾಲೆಯೊಳಗೆ ಇಂತಹ ಗಿಡಮೂಲಿಕೆಗಳ ಉದ್ಯಾನವನ್ನು ? ಶಾಲಾ ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಒಂದು ಬೋರ್ಡಿದೆ. ಅದರಲ್ಲಿ ಶಾಲಾ ಮಂತ್ರಿ ಮಂಡಲದ ವಿವರಣೆ ಇದೆ. ಶಾಲೆಯ ಎಲ್ಲ ಸಚಿವರುಗಳ ವಿವರ ಇದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಪ್ರೇರೇಪಿಸಲಿ ಇಂತಹ ಉಪಕ್ರಮಗಳು ಸಹಕಾರಿ.

Thursday, 8 October 2009

ವಾಟ್ ಆನ್ ಐಡಿಯಾ...ಝೀರೊ ಬ್ಯಾಲೆನ್ಸ್ ಖಾತೆಯಲ್ಲಿಟ್ಟ ಚಿಲ್ಲರೆ, ಸಾಲದ ಕಂತು ತೀರಿಸುತ್ತೆ..

ಬೆಂಗಳೂರಿನಿಂದ ೫೫ ಕಿ.ಮೀ ದೂರದಲ್ಲಿ ದೊಡ್ಡ ಬಳ್ಳಾಪುರ ತಾಲೂಕಿಗೆ ಸೇರಿದ ದೊಡ್ಡ ಬೆಳವಂಗಳ ಹೋಬಳಿಯಿದೆ. ಈ ಹೋಬಳಿಯಲ್ಲಿ ಹಾದರಿಪುರ ಎಂಬ ಗ್ರಾಮ ಇದೆ. ೮೮೦ ಜನಸಂಖ್ಯೆಯ ಗ್ರಾಮದಲ್ಲಿ ೨೮೦ ಕುಟುಂಬವಿದೆ. ಬಹುತೇಕ ಮಂದಿ ಕೃಷಿ ಕೂಲಿ ಕಾರ್ಮಿಕರು. ಕೆಲವರು ಸಣ್ಣ ಪುಟ್ಟ ವ್ಯಾಪಾರಸ್ಥರು. ಪ್ರತಿ ದಿನ ಐವತ್ತೋ, ನೂರೋ ಸಂಪಾದಿಸುತ್ತಾರೆ. ಇಲ್ಲಿಯವರೆಗೆ ಬಹುತೇಕ ಮಂದಿ ಬ್ಯಾಂಕ್ ಮೆಟ್ಟಿಲೇರಿದವರಲ್ಲ. ಆದರೆ-
ಈ ಗ್ರಾಮದ ಪಂಚಾಯಿತಿ ಗ್ರಂಥಾಲಯದ ಪಾಲಕ ರಂಗಸ್ವಾಮಿ ಉತ್ಸಾಹಿ. ಗ್ರಾಮದಲ್ಲಿ ೨೪೨ ಮಂದಿಗೆ ಕಾರ್ಪೊರೇಷನ್ ಬ್ಯಾಂಕ್‌ನ ಖಾತೆ ಮಾಡಿಸಿಕೊಟ್ಟಿದ್ದಾರೆ. ಬ್ಯಾಂಕಿನ ಶಾಖಾ ರಹಿತ ಕೇಂದ್ರದ ಪ್ರತಿನಿಯಾಗಿರುವ ಸ್ವಾಮಿ, ಹಿಂದೆಂದಿಗಿಂತ ಬ್ಯುಸಿಯಾಗಿದ್ದಾರೆ. ಊರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿಯಾಗಿದ್ದವರೆಲ್ಲ ಇವರ ಬಳಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಸುಲಭವಾಗಿ ಬ್ಯಾಂಕ್ ವಹಿವಾಟು ಮಾಡುತ್ತಿದ್ದಾರೆ. ಬ್ಯಾಂಕ್ ಹುಡುಕಿಕೊಂಡು ಹೋಗಬೇಕಿಲ್ಲ. ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಪರವಾಗಿಲ್ಲ, ಅಕೌಂಟ್ (ಕಾರ್ಪ್ ಪ್ರಗತಿ ಎಸ್‌ಬಿ ಖಾತೆ ) ಚಾಲ್ತಿಯಲ್ಲಿರುತ್ತದೆ. ಒಬ್ಬರಿಗೆ ದಿನಕ್ಕೆ ಗರಿಷ್ಠ ೨೦೦೦ ರೂ. ಹಣ ವರ್ಗಾಣೆಗೆ ಅವಕಾಶವಿದೆ.
ಉದಾಹರಣೆಗೆ ಓದು ಬಾರದ ಹಳ್ಳಿಗನೊಬ್ಬ ರಂಗಸ್ವಾಮಿಯ ಬಳಿ ಬಂದು ಬಯೋ ಮೆಟ್ರಿಕ್ ಸಾಧನದ ಮೇಲೆ ಹೆಬ್ಬೆಟ್ಟು ಒತ್ತಿ, ಹತ್ತು ರೂ. ಕೊಟ್ಟೊಡನೆ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಅನ್ನುತ್ತೆ. ಠೇವಣಿ ಪ್ರಕ್ರಿಯೆ ಮುಗಿದೊಡನೆ ‘ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಎನ್ನುತ್ತದೆ. ಹಾಗೆಯೇ ಹಣ ತೆಗೆಯುವಾಗಲೂ ತೆಗೆದದ್ದೆಷ್ಟು, ಉಳಿದದ್ದೆಷ್ಟು ಎಂದು ಮೆಶೀನ್ ತಿಳಿಸುತ್ತದೆ. ಜತೆಗೆ ರಸೀದಿಯನ್ನೂ ಕೊಡುತ್ತದೆ. ಹೀಗಾಗಿ ಎಲ್ಲವೂ ಕರಾರುವಾಕ್. ಸ್ವಸಹಾಯ ಸಂಘಗಳ ಸದಸ್ಯರೂ, ದಿನದ ಸಂಪಾದನೆಯಲ್ಲಿ ಕೈಲಾದಷ್ಟನ್ನು ಖಾತೆಗೆ ಹಾಕುತ್ತಾರೆ. ತಿಂಗಳಿನ ಕೊನೆಗೆ ಸಂಘದ ಸಾಲದ ಕಂತು ತೀರಿಸಲು ಈ ಹಣವನ್ನು ಬಳಸುತ್ತಾರೆ. ಚಿಲ್ಲರೆ ದುಡ್ಡುಗಳೆಲ್ಲ ಸೇರಿ ಸಾಲದ ಕಂತು ತೀರುತ್ತದೆ.
ಸುಮಾರು ೨೦ ಸಾವಿರ ರೂ. ಬೆಲೆಯ ಬಯೋಮೆಟ್ರಿಕ್ ಮೆಶೀನ್‌ನಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಬ್ಯಾಂಕಿಗೂ ಪ್ರತ್ಯೇಕ ಶಾಖೆ ತೆರೆಯಬೇಕಾದ ಖರ್ಚು ಉಳಿಯುತ್ತದೆ. ಈವತ್ತು ಪ್ರತಿಯೊಂದು ಗ್ರಾಮದಲ್ಲೂ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿವೆ. (ಅದು ಬೀಗ ಜಡಿದಿರುವುದೇ ಹೆಚ್ಚು) ಈ ಕೇಂದ್ರಗಳಲ್ಲಿ ದುಡಿಯುವವರಲ್ಲಿ ಪ್ರಾಮಾಣಿಕರನ್ನು ಗುರುತಿಸಿ, ಶಾಖೆ ರಹಿತ ಬ್ಯಾಂಕಿಂಗ್ ಅನ್ನು ಹಳ್ಳಿಯ ಮನೆ ಬಾಗಿಲಿಗೆ ತಲುಪಿಸಬಹುದು. ರಾಜ್ಯದ ಲಕ್ಷಾಂತರ ಗ್ರಾಮವಾಸಿಗರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಬಹುದು. ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಮುಂತಾದ ಆರ್ಥಿಕ ನೆರವನ್ನು ಈ ಪದ್ಧತಿಯಲ್ಲಿ ವಿತರಿಸಿದರೆ ಜನತೆಗೆ, ತಮಗೆ ಅಗತ್ಯವಿರುವಷ್ಟು ಹಣವನ್ನು ತಾವಿದ್ದಲ್ಲೇ ಕ್ರಮಬದ್ಧವಾಗಿ ಪಡೆಯಲು ಸಾಧ್ಯವಾಗುತ್ತದೆ. ಮಿಕ್ಕಿದ ಹಣ ಬ್ಯಾಲೆನ್ಸ್ ನಲ್ಲೇ ಇರುತ್ತದೆ. ನಗರಗಳಲ್ಲಿ ಎಟಿಎಂ ಬಳಕೆಯಂತೆ ಹಳ್ಳಿಗಳಲ್ಲಿ ಶಾಖಾ ರಹಿತ ಬ್ಯಾಂಕಿಂಗ್ ಸಖತ್ ಐಡಿಯಾ.

Wednesday, 7 October 2009

ದುಡಿಯುವ ಕೈಗಳಿಗೆ ಇರಲಿ ಬ್ಯಾಂಕಿಂಗ್

‘ ನನಗೆ ಚೆನ್ನಾಗಿ ಗೊತ್ತು. ಐಟಿ ಕ್ಯಾಪಿಟಲ್ ಬೆಂಗಳೂರಿನಲ್ಲೇ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ಸಾವಿರಾರು ಕಾರ್ಮಿಕರ ಬಳಿ ಬ್ಯಾಂಕ್ ಖಾತೆಯೇ ಇಲ್ಲ. ಮೊದಲು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು. ಹಾಗಿದ್ದರೆ ಮಾತ್ರ ಆತ ದೇಶದ ಉತ್ಪಾದಕ ಆಸ್ತಿಯಾಗಬಲ್ಲ..’
ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ. ಕೆ.ಸಿ ಚಕ್ರವರ್ತಿ ಇತ್ತೀಚೆಗೆ ಕಾರ್ಪೊರೇಷನ್ ಬ್ಯಾಂಕ್‌ನ ಶಾಖೆ ರಹಿತ ೧೫೦ ಬ್ಯಾಂಕಿಂಗ್ ಕೇಂದ್ರಗಳನ್ನು ಉದ್ಘಾಟಿಸಿ ಹೇಳಿದ ಮಾತಿದು. ನಿಜ. ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿಯೂ ನೂರಾರು ಮಂದಿಗೆ ಬ್ಯಾಂಕ್ ಖಾತೆ ಎಂಬುದಿಲ್ಲ. ಮತ್ತೆ ನೂರಾರು ಮಂದಿಗೆ ಖಾತೆ ಇದ್ದರೂ ಖಾಲಿ ಮತ್ತು ಖಾಲಿ. ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ದೂರದ ಬ್ಯಾಂಕ್ ಶಾಖೆಗೆ ತೆರಳಬೇಕು. ನೂರು ರೂಪಾಯಿ ಠೇವಣಿ ಇಡಬೇಕಾದರೆ ಇಪ್ಪತೈದು ರೂ. ಖರ್ಚು ಮಾಡಬೇಕು. ಸಮಯ ಕೂಡ ವೇಸ್ಟು.
ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಈವತ್ತು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದುವೇ. ಮಾತ್ರವಲ್ಲದೆ ನಮ್ಮ ಬ್ಯಾಂಕ್‌ಗಳಿಗೆ ಶ್ರೀಮಂತ ಗ್ರಾಹಕರೆಂದರೆ ತುಂಬ ಅಚ್ಚುಮೆಚ್ಚು. ಬೇಕಾದರೆ ನೀವೇ ನೋಡಿ, ನೂರು, ಐವತ್ತು ರೂ. ಠೇವಣಿ ಇಡುವ ಗ್ರಾಹಕರು ನೀವಾಗಿದ್ದರೆ ನಿಮ್ಮತ್ತ ಬ್ಯಾಂಕ್ ಮ್ಯಾನೇಜರ್ ಮೂಸಿ ಕೂಡ ನೋಡುವುದಿಲ್ಲ. ಅದುವೇ ಲಕ್ಷಾಂತರ ಠೇವಣಿ ಇಡುವ ಉದ್ಯಮಿಯಾದರೆ ಕೈಮುಗಿದು ಛೇಂಬರಿಗೆ ಕರೆದು ಕಾಫಿ, ಟೀ ,ಜ್ಯೂಸ್ ಕೊಟ್ಟು ಸತ್ಕರಿಸುತ್ತಾರೆ. ಯಾವುದೇ ಸಂದೇಹವಿಲ್ಲ. ಬ್ಯಾಂಕ್‌ಗಳು ಶ್ರೀಮಂತ ಗಿರಾಕಿಗಳನ್ನೇ ಓಲೈಸುವುದು ಹೆಚ್ಚು. ಆದರೆ ಸ್ವತಃ ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ ಚಕ್ರವರ್ತಿ ಹೇಳ್ತಾರೆ- ಶ್ರೀಮಂತರ ಹಿಂದೆ ಬೀಳಬೇಡಿ, ಅವರಿಂದ ಬ್ಯಾಂಕ್‌ಗಳು ಉಳಿಯುವುದಿಲ್ಲ, ದೀರ್ಘಕಾಲ ಬದುಕಿ ಉಳಿಯಬೇಕಾದರೆ ಬಡವರನ್ನು ನಂಬಿ. ಅವರನ್ನು ಬ್ಯಾಂಕಿಂಗ್ ಚಟುವಟಿಕೆಯ ವ್ಯಾಪ್ತಿಗೆ ಕರೆ ತನ್ನಿ. ಹಾಗಿದ್ದರೆ ಮಾತ್ರ ಯಶಸ್ವಿಯಾಗುತ್ತೀರಿ. ಕಾರ್ಪೊರೇಷನ್‌ನಂತಯಹ ಬ್ಯಾಂಕ್‌ಗಳು ಸಣ್ಣ ಬಂಡವಾಳದಿಂದಲೇ ಆರಂಭವಾದ ಬ್ಯಾಂಕ್‌ಗಳಲ್ಲವೇ ಎನ್ನುತ್ತಾರೆ ಚಕ್ರವರ್ತಿ.
ಅಂತೂ ಇಂತೂ ನಿಧಾನವಾಗಿ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಉದಾಹರಣೆಗೆ ಕಾರ್ಪೊರೇಷನ್ ಬ್ಯಾಂಕ್ ‘ ಕಾರ್ಪ್ ಗ್ರಾಮೀಣ ವಿಕಾಸ್’ ಎಂಬ ಯೋಜನೆ ಜಾರಿಗೊಳಿಸಿದೆ. ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯಿದು. ದೂರದ ಹಳ್ಳಿಗಳಲ್ಲಿ ಸ್ಮಾರ್ಟ್ ಕಾರ್ಡ್ ಮೂಲಕ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಯೋಜನೆ ಇದು. ಒಂದೂರಿನಲ್ಲಿ ೨೦೦-೨೫೦ ಮಂದಿಗೆ ಬ್ಯಾಂಕ್ ಖಾತೆಯಿದ್ದರೆ ಸಾಕು, ಒಬ್ಬರಿಗೆ ಬ್ಯಾಂಕಿನ ಪ್ರತಿನಿಯಾಗಬಹುದು. ಆ ಪ್ರತಿನಿಗೆ ೮೦೦ ರೂ.ಗಳಿಂದ ೧,೫೦೦ ರೂ. ತನಕ ಸಂಭಾವನೆ ಸಿಗುತ್ತದೆ. ೧.೫ ಕೆ.ಜಿ ತೂಗುವ ಬಯೋಮೆಟ್ರಿಕ್ ಸಾಧನ ಕೊಡುತ್ತಾರೆ. ಧ್ವನಿಯಾಧಾರಿತ ಈ ಸಲಕರಣೆಯ ಮೂಲಕ ಗ್ರಾಹಕರು ಠೇವಣಿ ಇಡಬಹುದು. ಅದು ಎಷ್ಟೇ ಮೊತ್ತವಾದರೂ ಚಿಂತೆ ಇಲ್ಲ. ೧೦ ರೂ. ಬೇಕಾದರೂ ಇಡಬಹುದು. ನಿಮ್ಮ ಮನೆ ಬಾಗಿಲಿಗೇ ಹೀಗೆ ಬ್ಯಾಂಕ್ ಸೇವೆ ಲಭ್ಯವಾಗುತ್ತದೆ. ಜತೆಗೆ ಒಬ್ಬರಿಗೆ ಪಾರ್ಟ್ ಟೈಂ ಕೆಲಸ ಮತ್ತು ಆದಾಯ ಸಿಕ್ಕಿದಂತಾಗುತ್ತದೆ. ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್, ಆರ್.ಡಿ, ಉದ್ಯೋಗ ಖಾತರಿ ಯೋಜನೆಯ ವೇತನ ಬಟವಾಡೆ, ಎಸ್‌ಎಸ್‌ಪಿ ಪೇಮೆಂಟ್‌ಗಳನ್ನು ಇದರ ಮೂಲಕ ನಿರ್ವಹಿಸಬಹುದು.
ಈವತ್ತು ತಂತ್ರಜ್ಞಾನದ ನೆರವಿನಿಂದ ಯಾವುದೇ ಊರಿನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತರಬಹುದು. ಕೇವಲ ಏಳನೇ ಕ್ಲಾಸ್ ಓದಿದ ಮಹಿಳೆಯೂ ಮನಸ್ಸು ಮಾಡಿದರೆ ತನ್ನೂರಿನಲ್ಲಿ ಶಾಖಾ ರಹಿತ ಬ್ಯಾಂಕಿಂಗ್‌ನ ಪ್ರತಿನಿಯಾಗುವುದರ ಮೂಲಕ ಪಾರ್ಟ್ ಟೈಂ ಆದಾಯ ಪಡೆಯಬಹುದು. ಜನ ಜಾಗೃತಿಯನ್ನೂ ಮೂಡಿಸಬಹುದು. ನಿಜ. ಹಳ್ಳಿಗಾಡಿನ ಅಥವಾ ನಗರ ಪ್ರದೇಶದ ಪ್ರತಿಯೊಬ್ಬ ಕಾರ್ಮಿಕರೂ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಹಾಗಿದ್ದರೆ ಮಾತ್ರ ಆತ ಸಂಪಾದಿಸಿದ ಆದಾಯ ಹನಿಗೂಡಿ ಹಳ್ಳವಾಗುತ್ತದೆ. ದೇಶದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡಿದಂತಾಗುತ್ತದೆ. ಸಂಪಾದಿಸಿದ ಆದಾಯ ೧೦ ರೂಪಾಯಿಯೇ ಆಗಿರಲಿ, ಅದರಲ್ಲಿ ೫ ರೂ.ಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಬೇಕು. ಖಂಡಿತ ಹನಿಗೂಡಿ ಹಳ್ಳವಾಗುತ್ತದೆ. ಜತೆಗೆ ಪ್ರತಿಯೊಂದು ಬ್ಯಾಂಕ್ ಕೂಡ ತಂತ್ರಜ್ಞಾನದ ಮೂಲಕ ಬಡವರನ್ನು ತಲುಪುವುದರ ಮೂಲಕ ತಳಮಟ್ಟದಲ್ಲಿ ಹಣಕಾಸು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ಬಡತನದ ರೇಖೆಗಿಂತ ಕೆಳಗಿರುವ ಮಂದಿ ಮೇಲೆ ಬರುತ್ತಾರೆ. ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ.

Monday, 5 October 2009

ವಾಟ್ ಆನ್ ಐಡಿಯಾ..ನಿಮ್ಮೂರಲ್ಲಿ ಬ್ರ್ಯಾಂಚ್ ಇಲ್ಲದಿದ್ದರೂ ಬ್ಯಾಂಕ್ ತೆರೆಯಬಹುದು

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆ ಅಷ್ಟಾಗಿ ಇರುವುದಿಲ್ಲ. ಖಾತೆಗೆ ಒಂದಷ್ಟು ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಸಾಮಾನ್ಯ. ಹಾಗಾದರೆ ಮಾಡುವುದೇನು ? ಇದಕ್ಕೆ ಉತ್ತರ ಶಾಖಾ ರಹಿತ ಬ್ಯಾಂಕಿಂಗ್.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಚಯವಾಗುತ್ತಿರುವ ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯ ವೈಶಿಷ್ಟ್ಯವಿದು. ಕಾರ್ಪೊರೇಷನ್ ಬ್ಯಾಂಕ್ ೨೦೦೬ರಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ೨೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೇವೆ ಲಭ್ಯವಿದೆ.
ಇದು ಹೇಗೆ ಸಾಧ್ಯ ? ಶಾಖಾ ರಹಿತ ಬ್ಯಾಂಕಿಂಗ್‌ನಲ್ಲಿ ಹೆಸರೇ ಹೇಳುವಂತೆ ಬ್ಯಾಂಕಿನ ಶಾಖೆ ಇರುವುದಿಲ್ಲ. ಬದಲಿಗೆ ಬ್ಯಾಂಕ್ ಒಬ್ಬ ಪ್ರತಿನಿಯನ್ನು ನೇಮಕ ಮಾಡುತ್ತದೆ. ಆತ ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್ ಹಾಗೂ ಧ್ವನಿಯಾಧಾರಿತ ನಿರ್ದೇಶನವಿರುವ ಸಾಧನವನ್ನು ಉಪಯೋಗಿಸಿ ಗ್ರಾಮೀಣ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕ್ ಸೇವಾ ಸೌಲಭ್ಯ ಒದಗಿಸುತ್ತಾನೆ. ಗ್ರಾಹಕ ತನ್ನ ಬೆರಳ ಗುರುತನ್ನು ಸಾಧನದ ಮೇಲೆ ಒಟ್ಟಿದರೆ, ಧ್ವನಿಯಾಧಾರಿತ ಸಾಧನದಲ್ಲಿ ಹಣದ ವರ್ಗಾವಣೆಯ ಬಗ್ಗೆ ದೃಢೀಕರಣವಾಗುತ್ತದೆ.
ಕಾರ್ಪೊರೇಷನ್ ಬ್ಯಾಂಕ್ ನೇಮಕ ಮಾಡಿರುವ ಬಿಸಿನೆಸ್ ಪ್ರತಿನಿಗಳಲ್ಲಿ ಬಹುತೇಕ ಮಂದಿ ಮಹಿಳೆಯರೇ ಆಗಿದ್ದಾರೆ. ಶಾಖಾ ರಹಿತ ಬ್ಯಾಂಕ್ ಸ್ಥಾಪನೆಗೆ ೨೦ ಸಾವಿರ ರೂ. ಬೆಲೆಯ ಸಾಧನವನ್ನು ಬ್ಯಾಂಕ್ ನೀಡುತ್ತದೆ. ತಿಂಗಳಿಗೆ ೮೦೦ ರೂ.ಗಳಿಂದ ೧,೫೦೦ ರೂ. ವೇತನ ಕೊಡುತ್ತದೆ. ಇದು ಪಾರ್ಟ್ ಟೈಂ ಕೆಲಸವಾಗಿದ್ದು, ಪ್ರತಿನಿಗೆ ಹೆಚ್ಚುವರಿ ಆದಾಯಕ್ಕೆ ದಾರಿಯಾಗುತ್ತದೆ. ಇದರಿಂದ ಗ್ರಾಹಕರು ಕೇವಲ ಬ್ಯಾಂಕ್ ವ್ಯವಹಾರಕ್ಕೋಸ್ಕರ ಪಟ್ಟಣಕ್ಕೆ ತೆರಳಿ ಸಮಯ ಮತ್ತು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ೧೦,೨೦ರೂ. ಅಂತ ಸಣ್ಣ ಮೊತ್ತದ ಹಣವನ್ನೂ ಇದರಲ್ಲಿ ಠೇವಣಿ ಇಡಬಹುದು. ಹೀಗಾಗಿ ಹಿಂಪಡೆಯುವಿಕೆಗಿಂದ ಠೇವಣಿ ಇಡುವವರ ಸಂಖ್ಯೆಯೇ ಇಲ್ಲಿ ಹೆಚ್ಚಿರುತ್ತದೆ. ಇಲ್ಲಿ ಖಾತೆದಾರರು ಯಾವುದೇ ಆರಂಭಿಕ ಶುಲ್ಕ ಕೊಡಬೇಕಾಗಿಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಶಾಖಾ ರಹಿತ ಬ್ಯಾಂಕಿಂಗ್ ವ್ಯವಸ್ಥೆಯಿಂದ ಬ್ಯಾಂಕ್‌ಗಳಿಗೆ ಗ್ರಾಮೀಣ ಭಾಗದ ಬಡವರಿಗೆ ಹಣಕಾಸು ವ್ಯವಸ್ಥೆಯನ್ನು ಒದಗಿಸಲು ಸುಲಭವಾಗುತ್ತದೆ. ಅಲ್ಲದೆ ಪ್ರತ್ಯೇಕ ಶಾಖೆ ನಿರ್ಮಿಸಲು ಬೇಕಾಗುವ ಕಟ್ಟಡ ನಿರ್ಮಾಣ, ಸಿಬ್ಬಂದಿ ವೆಚ್ಚ ಉಳಿತಾಯವಾಗುತ್ತದೆ. ಅತಿ ಸಣ್ಣ ಮೊತ್ತದ ಹಣದ ವರ್ಗಾವಣೆಯನ್ನು ನೇರವಾಗಿ ಮಾಡಬಹುದು. ಹಣಕಾಸು ಸೇರ್ಪಡೆಯ ಹೆಚ್ಚಳಕ್ಕಾಗಿ ೨೦೦೬ರಲ್ಲಿ ಆರ್‌ಬಿಐ, ಬ್ಯಾಂಕ್‌ಗಳು ಬಿಸಿನೆಸ್ ಪ್ರತಿನಿಗಳ ಮೂಲಕ ವಹಿವಾಟು ವಿಸ್ತರಣೆಗೆ ಅನುಮತಿ ಕೊಟ್ಟಿತು.
ಶಾಖಾ ರಹಿತ ಬ್ಯಾಂಕಿಂಗ್ ಪರಿಕಲ್ಪನೆ ಬಂದಿದ್ದು ಬ್ರೆಜಿಲ್‌ನಿಂದ. ಅಲ್ಲಿ ಸಣ್ಣ ಪುಟ್ಟ ವರ್ತಕರು, ಲಾಟರಿ ಅಂಗಡಿಗಳು, ಅಂಚೆ ಕಚೇರಿಗಳು ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನೂ ಒದಗಿಸಲು ಆರಂಭಿಸಿದಾಗ ಈ ಐಡಿಯಾ ಬೆಳಕಿಗೆ ಬಂತು. ೨೦೦೫ರಲ್ಲಿ ಬ್ರೆಜಿಲ್‌ನ ೯೦ ಸಾವಿರ ಏಜೆಂಟರು ೧೦೦ ಕೋಟಿ ಡಾಲರ್‌ಗೂ ಹೆಚ್ಚು ಹಣದ ವರ್ಗಾವಣೆ ನಡೆಸಿದ್ದರು. ಕೇವಲ ಮೂರು ವರ್ಷಗಳಲ್ಲಿ ೧೨ ೧.೨ ಕೋಟಿ ಖಾತೆಗಳನ್ನು ತೆರೆಯಲಾಗಿತ್ತು.
ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಲಭ್ಯವಿರುವ ಸೇವೆ
೧. ಠೇವಣಿ ಇಡಬಹುದು
೨. ಹಣ ಹಿಂಪಡೆಯುವಿಕೆ
೩. ಬ್ಯಾಲೆನ್ಸ್ ವಿಚಾರಣೆ
೪. ಮಿನಿ ಸ್ಟೇಟ್‌ಮೆಂಟ್
೫. ಹಣದ ವರ್ಗಾವಣೆ
೬. ಆರ್.ಡಿ ಖಾತೆ
೭. ಎಸ್‌ಎಚ್‌ಜಿ ಗುಂಪುಗಳಿಗೆ ಖಾತೆ
೮. ಎನ್‌ಆರ್‌ಇಜಿ ಪೇಮೆಂಟ್
೯. ಎಸ್‌ಎಸ್‌ಪಿ ಪೇಮೆಂಟ್

Sunday, 4 October 2009

ಹೆಲಿಕಾಪ್ಟರ್ ನಿಂದ ಪೊಟ್ಟಣ..ನಾಯಿಪಾಡಾದ ಜನ

ಇಡೀ ಉತ್ತರ ಕರ್ನಾಟಕ ನೆರೆಯ ಹಾವಳಿಗೆ ತತ್ತರಿಸಿದೆ. ಜೀವ ಹಾನಿ ಹಾಗೂ ಆಸ್ತಿ ಪಾಸ್ತಿಯ ನಷ್ಟ ಅಷ್ಟಿಷ್ಟಲ್ಲ. ೨೦ ಸಾವಿರ ಕೋಟಿ ರೂ. ನಷ್ಟವಾಗಿರುವುದರ ಜತೆಗೆ ಸಹಸ್ರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನಿಜಕ್ಕೂ ಇದೊಂದು ರಾಷ್ಟ್ರೀಯ ವಿಪತ್ತು. ಇಂಥ ಸಂದರ್ಭದಲ್ಲಿ ಪಕ್ಷ ಭೇದ ಮರೆತು ರಾಜಕಾರಣಿಗಳು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕೈಗೊಳ್ಳಬೇಕು. ಈವತ್ತು ಮೂರ್‍ನಾಲ್ಕು ಹೆಲಿಕಾಪ್ಟರ್‌ಗಳು ಆಹಾರದ ಮೂಟೆಗಳನ್ನು ನಾಯಿಗಳಿಗೆ ಬಿಸಾಡಿದಂತೆ ಕೆಳಗೆ ಎಸೆಯುತ್ತಿವೆ. ಸಂಕಷ್ಟಪೀಡಿತ ಜನ ಓಡೋಡಿ ಮುಗಿಬಿದ್ದು ಆಹಾರದ ಮೂಟೆಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಎಂಥಾ ದುರಂತವಿದು..ಪ್ರತಿಯೊಬ್ಬರೂ ಉತ್ತರ ಕರ್ನಾಟಕದ ಜನತೆಯ ನೋವನ್ನು ಹಂಚಿಕೊಳ್ಳಬೇಕಾಗಿದೆ.
ದುರದೃಷ್ಟವಶಾತ್ ಪರಿಹಾರ ಕಾರ್ಯದಲ್ಲಿಯೂ ಕೇಂದ್ರ ಸರಕಾರ ಅಕ್ಷರಶಃ ತಾರತಮ್ಯ ನಡೆಸುತ್ತಿದೆ. ಆಂಧ್ರ ಪ್ರದೇಶದಲ್ಲಿ ಕರ್ನಾಟಕದಷ್ಟು ಹಾನಿಯಾಗಿರದಿದ್ದರೂ ಪರಿಹಾರ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದಂತೂ ನಿಜ.

Friday, 2 October 2009

ಮೆಚ್ಯೂರಾದ ಭಗ್ನಪ್ರೇಮಿ...

ದಿನದಿಂದ ದಿನಕ್ಕೆ ಮನುಷ್ಯ ಮೆಚ್ಯೂರ್ ಆಗುತ್ತಿದ್ದಾನಾ ?
ಈಗ ಯಾರೂ ಜನುಮ ಜನುಮದಾ ಅನುಬಂಧ ಅಂತ ರಾಗ ಹಾಡುವುದಿಲ್ಲ.
ಹುಡುಗೀರೂ ಅಂತ ಹಾಡುಗಳನ್ನೆಲ್ಲ ನಂಬಲ್ಲ. ಏನಿದ್ದರೂ ಈವತ್ತು ಮಾತ್ರ ಸತ್ಯ. ಏನಿದ್ದರೂ ಲೆಕ್ಕ ಈ ಜನ್ಮದಲ್ಲೇ ಚುಕ್ತ ಆಗಬೇಕು..ಆಗುತ್ತದೆ ಎಂಬ ಪ್ರಬಲ ನಂಬಿಕೆ ಕೂಡಾ.
ಪ್ರೀತಿಯಲ್ಲಿ ಸೋತರೆ ಸೇಡು ತೀರಿಸುವ ದಾರೀನೇ ಬೇರೆ. ನೀನು ಸಿಗದಿದ್ದರೆ ಬದುಕನ್ನು ಛಿದ್ರ ಮಾಡುವ ಪ್ರಶ್ನೆಯೇ ಇಲ್ಲ..ಆಕೆ ಪ್ರೀತಿಸುವುದಿಲ್ಲ ಎಂದು ಕನ್ನಡಿಯಷ್ಟು ಸ್ಪಷ್ಟವಾದ ಮೇಲೆ ಹರ್ಟ್ ಆಗುತ್ತೆ. ಆದರೆ ತಾಕತ್ತಿದೆಯಲ್ಲವೇ, ಅದನ್ನು ಆರಿಸುವ ಪ್ರಶ್ನೆಯೇ ಇಲ್ಲ...ಬದುಕು ಇದೆಯಲ್ಲವೇ..ಅದನ್ನು ಸದ್ಯದ ದೃಷ್ಟಿಯಿಂದ ನೋಡಿಕೊಂಡು ಕಟ್ಟಿಕೊಳ್ಳುವ ರೀತಿಯೇ ಉತ್ತರವಾಗುತ್ತದೆ. ಅಲ್ಲಿ ನಾನೇ...ಸಾಕಿದಾ ಗಿಣಿ ಹಾಡಿಗೆ ನೋ ಛಾನ್ಸ್. ಇದ್ದಷ್ಟು ದಿನ ಯಾರ ಅನುಕಂಪಕ್ಕೂ ಕಾಯದೆ ಕಳೆದು ಹೋದ ಪ್ರೀತಿಯನ್ನು ಮತ್ತೊಂದರಲ್ಲಿ ದಕ್ಕಿಸಿಕೊಳ್ಳುವುದು. ವಾಸ್ತವಕ್ಕೆ ಮುಖಾಮುಖಿಯಾಗುವುದು.
ನನಗನ್ನಿಸುತ್ತಿದೆ ಭಗ್ನ ಪ್ರೇಮಿಗಳು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಗ್ನ ಪ್ರೇಮದಲ್ಲೂ ತಾಕತ್ತನ್ನು ಮರೆಯದೆ ಪ್ರಬುದ್ಧರಾಗುತ್ತಿದ್ದಾರೆ. ಬದುಕಿನುದ್ದಕ್ಕೂ ಅಳುಬುರಕರಾಗುವುದಿಲ್ಲ. ಕೈ ಜಾರಿದ ಗುಲಾಬಿಯನ್ನೇ ಹುಡುಕುತ್ತ ಟೈಮ್ ವೇಸ್ಟ್ ಮಾಡಲ್ಲ. ಗುಲಾಬಿಯ ತೋಟವನ್ನೇ ಸೃಷ್ಟಿಸುತ್ತಾರೆ. ಬದುಕಿನ ವಿಕಾಸದ ಅತ್ಯುನ್ನತ ಹಂತವೂ ಇದೇ ಅಲ್ಲವೇ.

ಓಶೋ ಹೇಳಿದ್ದು..ನಾಲ್ಕು ಮಾತು..

೧. ನೀವು ಬದುಕುವ ಸಲುವಾಗಿ ಹೊರಗಿನದ್ದನ್ನು ಬದಲಿಸಲು ಹೋಗಬಹುದು. ಆದರೆ ಅದರಿಂದಲೇ ನಿಮಗೆ ತೃಪ್ತಿ ಸಿಗುವುದಿಲ್ಲ. ಬದಲಾವಣೆಗೆ ಮತ್ತೊಂದು ಯಾವುದೋ ಉಳಿದುಕೊಳ್ಳುತ್ತದೆ. ಅದುವೇ ಆಂತರಿಕ ಬದಲಾವಣೆ. ಅದಿಲ್ಲದಿದ್ದರೆ ಹೊರಗಿನ ಬದಲಾವಣೆ ಪೂರ್ಣವಾಗುವುದಿಲ್ಲ....
೨. ಯಾವಾಗ ಪ್ರೀತಿ ಮತ್ತು ದ್ವೇಷವೆರಡೂ ಗೈರು ಹಾಜರಾಗುತ್ತವೆಯೋ, ಆವಾಗ ಪ್ರತಿಯೊಂದೂ ಸ್ಪಷ್ಟ ವಾಗುತ್ತವೆ
೩. ಜ್ಞಾನ ಎಂದರೆ ಮಾಹಿತಿ ಅಲ್ಲ, ಪರಿವರ್ತನೆ
೪. ನಿಮ್ಮೊಳಗಿನ ಅನೂಹ್ಯ ರಹಸ್ಯಗಳು ನಿಮ್ಮೆದುರು ತೆರೆದುಕೊಳ್ಳಬೇಕಿದ್ದರೆ, ಅಚ್ಚರಿ ನಿಮ್ಮಲ್ಲಿರಲಿ. ಪ್ರಶ್ನಿಸುವವರ ಮುಂದೆ ನಿಗೂಢಗಳು ತೆರೆದುಕೊಳ್ಳಲಾರವು. ಪ್ರಶ್ನಿಸುವವರು ಶೀಘ್ರವಾಗಿ ಇಲ್ಲವೇ ಕೊನೆಗೆ ಪವಿತ್ರ ಗ್ರಂಥಗಳೊಂದಿಗೆ ಪರ್ಯವಸಾನ ಹೊಂದುತ್ತಾರೆ. ಯಾಕೆಂದರೆ ಅವುಗಳ ತುಂಬ ಉತ್ತರಗಳಿರುತ್ತವೆ. ಉತ್ತರಗಳು ಯಾವತ್ತಿಗೂ ಅಪಾಯಕಾರಿ. ಅವುಗಳು ನಿಮ್ಮ ಅಚ್ಚರಿಯನ್ನು ಕೊಲ್ಲುತ್ತವೆ.

ಕೆಂಡಸಂಪಿಗೆ, ಜಯಪ್ರದಾ ಮತ್ತು ಸಂದೀಪ್ ಬೇಕಲ್

ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ಕೊಡುತ್ತಿದೆ. ಪ್ರತಿ ದಿನ ಕನ್ನಡದ ಬೆಡಗು, ಪರಿಮಳವನ್ನು ಹೊತ್ತು ವಿವಿಧ ಬರಹಗಳೊಡನೆ ಮೂಡಿ ಬರುತ್ತಿದ್ದ ಕೆಂಡಸಂಪಿಗೆಯನ್ನು ನಿತ್ಯ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ರಸಭರಿತವಾಗಿ ಓದಿಸಿಕೊಂಡು ಹೋಗುತ್ತಿತ್ತು. ಛೆ..ಹೀಗಾಗಬಾರದಿತ್ತು.
ನಿನ್ನೆ ಜ್ಯುಯೆಲ್ಸ್ ಆಫ್ ಇಂಡಿಯಾದ ಸುದ್ದಿಗೋಷ್ಠಿಗೆ ಹೋಗಿದ್ದೆ. ಝಗಮಗಿಸುವ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಜಯಪ್ರದಾ ಕೇಂದ್ರ ಬಿಂದುವಾಗಿದ್ದರು. ಜುಯೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ರಾಯಭಾರಿಯಾಗಿದ್ದ ಅವರು ಮೈತುಂಬ ಕೇಜಿಗಟ್ಟಲೆ ಬಂಗಾರದ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದರು. ನನಗೆ ಹದಿನೈದು ದಿನಗಳ ಹಿಂದಿನ ಘಟನೆಯೊಂದು ನೆನಪಾಯಿತು. ಲಖನೌ ಸಮೀಪದ ರಾಮ್‌ಪುರ ಜಯಪ್ರದಾ ಅವರ ಸ್ವಕ್ಷೇತ್ರ. ನೆರೆಯ ಹಾವಳಿಯಿಂದ ರಾಮ್‌ಪುರದ ಹಲವಾರು ಹಳ್ಳಿಗಳು ಜಲಾವೃತವಾಗಿದ್ದವು. ನೆರೆ ಪೀಡಿತ ಪ್ರದೇಶದ ವೀಕ್ಷಣೆ ನಡೆಸಿದ ಜಯಪ್ರದಾ ನೆರೆಯ ಅಬ್ಬರಕ್ಕೆ ಭಯಪಟ್ಟು ಕೊನೆಗೆ ಅತ್ತುಬಿಟ್ಟಿದ್ದರು. ಇದು ರಾಷ್ಟ್ರೀಯ ಪತ್ರಿಕೆಗಳಲ್ಲೂ ಚಿತ್ರ ಸಮೇತ ಪ್ರಕಟವಾಗಿತ್ತು. ಇಂತಿಪ್ಪ ಜಯಪ್ರದಾ ಈಗ ಪಕ್ಕಾ ಮಾಡೆಲ್ ನಾಚುವಂತೆ ಜಗಮಗಿಸುತ್ತಿದ್ದರು. ಎರಡೂ ವಿಭಿನ್ನ ಪಾತ್ರ..ಒಂದೆಡೆ ಸಂತ್ರಸ್ತರನ್ನು ಸಂತೈಸುವ ಬಡವರ ಬಂಧುವಿನ ಪಾತ್ರ, ಕೆಲವೇ ದಿನಗಳಲ್ಲಿ ಅಮೂಲ್ಯ ಚಿನ್ನಾಭರಣಗಳ ಗ್ರಾಹಕರನ್ನು ಮೋಡಿ ಮಾಡುವ ಕಂಪನಿಯ ರಾಯಭಾರಿಯ ಪಾತ್ರ. ಅಲ್ಲಿ ಬಡವರ ಬಂಧು, ಇಲ್ಲಿ ಒಡವೆಯೇ ಬಂಧು. ಒಂದೆಡೆ ಕಣ್ಣೀರು ಹಾಕುವ ಪಾತ್ರ, ಮತ್ತೊಂದೆಡೆ ಗ್ರಾಹಕರನ್ನು ಸೆಳೆಯಲು ವೈಯ್ಯಾರದ, ಥಳಕು ಬಳುಕಿನ ಮಾಡೆಲ್‌ನ ಪಾತ್ರ..
ಈ ಜಗತ್ತು ಮಾಯೆಯಲ್ಲವೇ..ಎಂದೂ ಅನ್ನಿಸಿತು.
ಆದರೂ ಸಂದೀಪ್ ಬೇಕಲ್ ಅವರ ಸಾಹಸ ಮೆಚ್ಚತಕ್ಕದ್ದೇ. ಜ್ಯುಯೆಲ್ಸ್ ಆಫ್ ಇಂಡಿಯಾದ ಸಿಇಒ ಆಗಿರುವ ಸಂದೀಪ್ ಬೇಕಲ್, ನಾನಾ ರಾಜ್ಯಗಳ ಚಿನ್ನಾಭರಣ ವ್ಯಾಪಾರಿಗಳನ್ನು ಒಗ್ಗೂಡಿಸಿ, ರೀಟೇಲ್ ಚಿನ್ನಾಭರಣ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಸಂಘಟಿಸುತ್ತಿದ್ದಾರೆ. ಇದರಿಂದ ವ್ಯಾಪಾರ ಹೆಚ್ಚುತ್ತದೆ ಎಂಬುದು ಅವರ ಅನುಭವದ ಮಾತು. ಕನ್ನಡಿಗರ ಸಾಹಸ ಹೀಗೆ ಮುಂದುವರಿಯಲಿ..