Friday 2 October 2009

ಕೆಂಡಸಂಪಿಗೆ, ಜಯಪ್ರದಾ ಮತ್ತು ಸಂದೀಪ್ ಬೇಕಲ್

ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ಕೊಡುತ್ತಿದೆ. ಪ್ರತಿ ದಿನ ಕನ್ನಡದ ಬೆಡಗು, ಪರಿಮಳವನ್ನು ಹೊತ್ತು ವಿವಿಧ ಬರಹಗಳೊಡನೆ ಮೂಡಿ ಬರುತ್ತಿದ್ದ ಕೆಂಡಸಂಪಿಗೆಯನ್ನು ನಿತ್ಯ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ರಸಭರಿತವಾಗಿ ಓದಿಸಿಕೊಂಡು ಹೋಗುತ್ತಿತ್ತು. ಛೆ..ಹೀಗಾಗಬಾರದಿತ್ತು.
ನಿನ್ನೆ ಜ್ಯುಯೆಲ್ಸ್ ಆಫ್ ಇಂಡಿಯಾದ ಸುದ್ದಿಗೋಷ್ಠಿಗೆ ಹೋಗಿದ್ದೆ. ಝಗಮಗಿಸುವ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಜಯಪ್ರದಾ ಕೇಂದ್ರ ಬಿಂದುವಾಗಿದ್ದರು. ಜುಯೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ರಾಯಭಾರಿಯಾಗಿದ್ದ ಅವರು ಮೈತುಂಬ ಕೇಜಿಗಟ್ಟಲೆ ಬಂಗಾರದ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದರು. ನನಗೆ ಹದಿನೈದು ದಿನಗಳ ಹಿಂದಿನ ಘಟನೆಯೊಂದು ನೆನಪಾಯಿತು. ಲಖನೌ ಸಮೀಪದ ರಾಮ್‌ಪುರ ಜಯಪ್ರದಾ ಅವರ ಸ್ವಕ್ಷೇತ್ರ. ನೆರೆಯ ಹಾವಳಿಯಿಂದ ರಾಮ್‌ಪುರದ ಹಲವಾರು ಹಳ್ಳಿಗಳು ಜಲಾವೃತವಾಗಿದ್ದವು. ನೆರೆ ಪೀಡಿತ ಪ್ರದೇಶದ ವೀಕ್ಷಣೆ ನಡೆಸಿದ ಜಯಪ್ರದಾ ನೆರೆಯ ಅಬ್ಬರಕ್ಕೆ ಭಯಪಟ್ಟು ಕೊನೆಗೆ ಅತ್ತುಬಿಟ್ಟಿದ್ದರು. ಇದು ರಾಷ್ಟ್ರೀಯ ಪತ್ರಿಕೆಗಳಲ್ಲೂ ಚಿತ್ರ ಸಮೇತ ಪ್ರಕಟವಾಗಿತ್ತು. ಇಂತಿಪ್ಪ ಜಯಪ್ರದಾ ಈಗ ಪಕ್ಕಾ ಮಾಡೆಲ್ ನಾಚುವಂತೆ ಜಗಮಗಿಸುತ್ತಿದ್ದರು. ಎರಡೂ ವಿಭಿನ್ನ ಪಾತ್ರ..ಒಂದೆಡೆ ಸಂತ್ರಸ್ತರನ್ನು ಸಂತೈಸುವ ಬಡವರ ಬಂಧುವಿನ ಪಾತ್ರ, ಕೆಲವೇ ದಿನಗಳಲ್ಲಿ ಅಮೂಲ್ಯ ಚಿನ್ನಾಭರಣಗಳ ಗ್ರಾಹಕರನ್ನು ಮೋಡಿ ಮಾಡುವ ಕಂಪನಿಯ ರಾಯಭಾರಿಯ ಪಾತ್ರ. ಅಲ್ಲಿ ಬಡವರ ಬಂಧು, ಇಲ್ಲಿ ಒಡವೆಯೇ ಬಂಧು. ಒಂದೆಡೆ ಕಣ್ಣೀರು ಹಾಕುವ ಪಾತ್ರ, ಮತ್ತೊಂದೆಡೆ ಗ್ರಾಹಕರನ್ನು ಸೆಳೆಯಲು ವೈಯ್ಯಾರದ, ಥಳಕು ಬಳುಕಿನ ಮಾಡೆಲ್‌ನ ಪಾತ್ರ..
ಈ ಜಗತ್ತು ಮಾಯೆಯಲ್ಲವೇ..ಎಂದೂ ಅನ್ನಿಸಿತು.
ಆದರೂ ಸಂದೀಪ್ ಬೇಕಲ್ ಅವರ ಸಾಹಸ ಮೆಚ್ಚತಕ್ಕದ್ದೇ. ಜ್ಯುಯೆಲ್ಸ್ ಆಫ್ ಇಂಡಿಯಾದ ಸಿಇಒ ಆಗಿರುವ ಸಂದೀಪ್ ಬೇಕಲ್, ನಾನಾ ರಾಜ್ಯಗಳ ಚಿನ್ನಾಭರಣ ವ್ಯಾಪಾರಿಗಳನ್ನು ಒಗ್ಗೂಡಿಸಿ, ರೀಟೇಲ್ ಚಿನ್ನಾಭರಣ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಸಂಘಟಿಸುತ್ತಿದ್ದಾರೆ. ಇದರಿಂದ ವ್ಯಾಪಾರ ಹೆಚ್ಚುತ್ತದೆ ಎಂಬುದು ಅವರ ಅನುಭವದ ಮಾತು. ಕನ್ನಡಿಗರ ಸಾಹಸ ಹೀಗೆ ಮುಂದುವರಿಯಲಿ..

No comments:

Post a Comment