Tuesday 20 October 2009

ಶಾಲೆಗೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟ ಬಡ ಹಳ್ಳಿಗರು !

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಸರಣಿಯ ನಾಲ್ಕನೇ ಕಂತು )



ನಂಜನಗೂಡು ತಾಲ್ಲೂಕಿನ ಚಾಮಲಾಪುರದ ಹುಂಡಿ, ಪಟ್ಟಣದ ಮಗ್ಗುಲಿನಲ್ಲಿಯೇ ನಾನಾ ಸಮಸ್ಯೆಗಳಿಂದ ತತ್ತರಿಸಿಕೊಂಡಿರುವ ಒಂದು ಕುಗ್ರಾಮ. ಗ್ರಾಮಸ್ಥರು ತೀರಾ ಬಡವರು. ಒಂದೊಂದು ಮನೆಯೊಳಗೂ ಮೂರ್‍ನಾಲ್ಕು ಕುಟುಂಬಗಳ ವಾಸ. ಸ್ಥಳದ ಅಭಾವ. ಮೂಲಭುತ ಸೌಲಭ್ಯಗಳು ಕನ್ನಡಿಯೊಳಗಿನ ಗಂಟು.ಹಿಂದೆ ಸುಜಾತಾ ಮಿಲ್ ಇದ್ದಾಗ ಅದರಲ್ಲಿ ದುಡಿಯುತ್ತಿದ್ದವರಲ್ಲಿ ಬಹುತೇಕ ಮಂದಿ ಕಾರ್ಮಿಕರು ಚಾಮಲಾಪುರದ ಹುಂಡಿಯವರು. ಈಗ ಕಾರ್ಖಾನೆ ಮುಚ್ಚಿದೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿಕೊಂಡಿದ್ದಾರೆ. ಈ ರೀತಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣ ಪರಿಸ್ಥಿತಿ ಏನಾಗಬೇಕು ? ಅಂತಹ ಚಿಣ್ಣರ ಭವಿಷ್ಯದ ಕನಸುಗಳಿಗೆ ಪೂರಕವಾಗಿ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆಯೇ ? ಇದಕ್ಕೆ ಉತ್ತರ ಎಂಬಂತೆ ಹಲವು ಸಮಸ್ಯೆಗಳ ನಡುವೆಯೂ ಚಾಮಲಾಪುರದ ಸರಕಾರಿ ಶಾಲೆ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ ನೀಡುತ್ತಿದೆ. ಸುಮಾರು ೬೦ ಮಂದಿ ಮಕ್ಕಳಿದ್ದ ಶಾಲೆಯಲ್ಲೀಗ ೩೫೨ ಮಂದಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.ಒಂದರಿಂದ ಆರನೇ ತರಗತಿಯವರೆಗೆ ವಿದ್ಯಾಭ್ಯಾಸದ ಅವಕಾಶವಿರುವ ಶಾಲೆಯಿದು. ಆರಂಭದಲ್ಲಿ ಇದ್ದ ಕೊಠಡಿಗಳ ಸಂಖ್ಯೆ ಎರಡು. ಈವತ್ತು ೫ ಕೊಠಡಿಗಳು ಇವೆ. ಜತೆಗೆ ಅಕ್ಷರ ದಾಸೋಹದ ಅಕ್ಕಿ, ಅಡುಗೆ ಸಲಕರಣೆಗಳೂ ಸೇರಿಕೊಂಡಿವೆ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಬಂದಿದೆ. ಆದರೆ ಕೊಠಡಿಗಳ ಸಂಖ್ಯೆ ಅನುಗುಣವಾಗಿಲ್ಲ. ಪರಿಣಾಮ ಶಾಲಾ ಜಗಲಿ, ಅಂಗಳವೇ ತರಗತಿಗಳಾಗುತ್ತಿವೆ. ಇಂತಹ ಸಮಸ್ಯೆ ಎಷ್ಟೋ ಸರಕಾರಿ ಶಾಲೆಗಳಿಗೆ ಕಾಡುತ್ತಿರಬಹುದು. ಹೀಗಿದ್ದರೂ ಇವುಗಳನ್ನೆಲ್ಲ ಎದುರಿಸಿಕೊಂಡು ಈ ಶಾಲೆ ಪ್ರಗತಿಯತ್ತ ಹೊರಳುತ್ತಿದೆ. ಅಭಿವೃದ್ಧಿತ್ತ ನಡೆದಿರುವ ಈ ಶಲೆಗೆ ಎಟಿಎಂಡ್ ಎಸ್ ಕಾರ್ಖಾನೆ ಕೂಡ ನೆರವು ನೀಡಿದೆ. ಮುಖ್ಯವಾಗಿ ಸ್ಥಳೀಯರು ಕೈಲಾದ ನೆರವು ನೀಡಿದ್ದಾರೆ. ಬಿಸಿಯೂಟ ಮಾಡುವ ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳ ಬೇಕಲ್ಲವೇ. ಇರುವ ಚೂರು ನೆಲಕ್ಕೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟಿದ್ದಾರೆ ಈ ಗ್ರಾಮಸ್ಥರು. ತೀರಾ ಪಾಳು ಬಿದ್ದಿದ್ದ ಶಾಲೆಯಿದು. ಇಂದು ಅಚ್ಚರಿ ಮೂಡಿಸುವಷ್ಟು ಬದಲಾಗಿದೆ. ಡಿಪಿಇಪಿ ಕಲಿಕಾ ಪದ್ಧತಿ ಪ್ರಭಾವ ಬೀರಿದೆ. ಶಾಲೆಯ ತರಗತಿಗಳಲ್ಲಿ ಕಲಿಕಾ ಸಾಮಗ್ರಿಗಳು ತುಂಬಿ ತುಳುಕುತ್ತಿವೆ. ಇವುಗಳ ಮಧ್ಯೆ ಚಿಣ್ಣರು ವ್ಯಾಸಂಗ ನಿರತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಈ ರೀತಿ ಅಭಿವೃದ್ಧಿಯತ್ತ ಮುಖ ಮಾಡಿರುವ ಸರಕಾರಿ ಶಾಲೆಗಳು ಹಲವು. ಇನ್ನೂ ಕೆಲವೆಡೆಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಕೊಡುಗೆ ಸಲ್ಲಿಸಿವೆ.

No comments:

Post a Comment