Monday 22 March 2010

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಬೋನ್ಸಾಯ್ ಉದ್ಯಾನಕ್ಕೆ ಇತ್ತೀಚೆಗೆ ಹೋಗಿದ್ದಾಗ..






ಪ್ರಣಬ್‌ಗೆ ಮುಗಿ ಬಿದ್ದ ಕ್ಯಾಮೆರಾಗಳು..ಯಾಕಿಂಥಾ ಫಜೀತಿ ?


ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಬೆಂಗಳೂರಿಗೆ ಆರ್‌ಬಿಐನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಬಂದಿದ್ದರು. (ಮಾ.೨೨) ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಐಶಾರಾಮಿ ರಾಯಲ್ ಗಾರ್ಡೇನಿಯಾ ಹೋಟೆಲ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ತಮ್ಮ ಭಾಷಣ ಇತ್ಯಾದಿ ಮುಗಿದ ನಂತರ ಸಚಿವರು ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಆದರೆ ಆರ್‌ಬಿಐನ ಸಂಯೋಜಕರು ಮಾಧ್ಯಮದವರ ಜತೆ ಪ್ರಣಬ್ ಭೇಟಿ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಎಲ್ಲಿ, ಯಾವಾಗ ಸಚಿವರ ಜತೆ ಸಂವಹನ ನಡೆಸಬಹುದು ಎಂಬುದರ ಬಗ್ಗೆ ಪತ್ರಕರ್ತರಲ್ಲಿ ಗೊಂದಲವಿತ್ತು. ಅದಕ್ಕೆ ಸರಿಯಾಗಿ ಆರ್‌ಬಿಐನ ವಕ್ತಾರರೂ ಬೆಬ್ಬೆಬೆಬ್ಬೆ ಉತ್ತರಿಸುತ್ತಿದ್ದರು. ಕೆಲವು ಪತ್ರಕರ್ತರಿಗೆ ಸಚಿವರ ಭಾಷಣದ ಪ್ರತಿ ಸಿಕ್ಕಿತು. ಇನ್ನು ಕೆಲವರಿಗೆ ಅದೂ ಇಲ್ಲ. ಈ ನಡುವೆ ಸಚಿವರು ಸಭಾಂಗಣದಿಂದ ಹೊರ ಬರುತ್ತಿದ್ದುದೇ ತಡ, ನಾನಾ ಚಾನೆಲ್‌ಗಳ ಫೋಟೋಗ್ರಾಫರ್, ಕ್ಯಾಮರಾಮ್ಯಾನ್‌ಗಳು ಬಾಗಿಲಿನ ಬಳಿ ದಂಡುಗಟ್ಟಿದರು. ಎಲ್ಲರಿಗೂ ೫ ನಿಮಿಷವಾದರೂ ಸಚಿವರೊಡನೆ ಮಾತನಾಡುವ ಕಾತರ..ಆ ಸಂದರ್ಭದ ಚಿತ್ರವಿದು.
ಇದಕ್ಕೂ ಮುನ್ನ ಸಮಾರಂಭದಲ್ಲಿಯೂ ಅಷ್ಟೇ. ಪ್ರಣಬ್ ಕುಂತರೆ, ನಿಂತರೆ, ಕನ್ನಡಕ ತೆಗೆದು ಉಜ್ಜಿದರೆ, ಪಕ್ಕದವರ ಹತ್ತಿರ ಏನೋ ಮಾತನಾಡಿದರೆ, ಸ್ವಲ್ಪ ಅಲ್ಲಾಡಿದರೂ ಕ್ಯಾಮರಾಗಳು ಕ್ಲಿಕ್ ಕ್ಲಿಕ್..
ನೋಡಿ..ಹಣಕಾಸು ಸಚಿವರು ಬಂದರೆಂದರೆ ಮಧ್ಯಮದವರು ಹೇಗೆ ಮುಗಿಬೀಳುತ್ತಾರೆ...ಅನ್ನುತ್ತೀರಾ..ಒಂದು ರೀತಿಯಲ್ಲಿ ನೀವು ಹಾಗೆ ಅಂದುಕೊಂಡರೆ ನಿಜ. ಮಾಧ್ಯಮದವರು ಹೀಗೆ ರಾಜಕಾರಣಿಗಳ ಮುಂದೆ ಮುಗಿ ಬೀಳುವುದನ್ನು ಯಾವಾಗ ನಿಲ್ಲಿಸುತ್ತಾರೋ..ನನಗಂತೂ ಗೊತ್ತಿಲ್ಲ..

Saturday 20 March 2010

ಕ್ರೆಡಿಟ್ ಕಾರ್ಡ್ ಕರ್ಮಕಾಂಡ



( ವಿಜಯ ಕರ್ನಾಟಕದಲ್ಲಿ ೨೦೦೭ರ ಡಿಸೆಂಬರ್ ೩ ಮತ್ತು ೪ರಂದು ಪ್ರಕಟವಾದ ಲೇಖನಗಳ ಗುಚ್ಛವಿದು. ನಿಯಮಿತವಾಗಿ ನುಡಿಚೈತ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )

ಏಯ್ ಗೂಬೆ..ನಿನ್ನಪ್ಪನ್ ಮ್ಯಾಲೆ ವಾರಂಟ್ ಐತೆ...ಇನ್ನರ್ಧ ಗಂಟೇಲಿ ಮನೆಗೆ ಬರ‍್ತೇನೆ ಆಯ್ತಾ..
ಚೆನ್ನೈನಿಂದ ಪೊಲೀಸ್ ಇನ್ಸ್‌ಪೆಕ್ಟರ್ ರಾಹುಲ್ ಮಾತಾಡ್ತಾ ಇರೋದು...ನಿಮ್ಮ ಜ್ಯೂನಿಯರ್ ಮೇಲೆ ಕ್ರಿಮಿನಲ್ ಕೇಸಿದೆ. ಹಾಫನವರಿನಲ್ಲಿ ಅರೆಸ್ಟ್ ಮಾಡಬೇಕು. ನಿಮ್ಮ ಏರಿಯಾ ಪೊಲೀಸಿನವರಿಗೆ ವಾರಂಟ್ ಕೊಟ್ಟಾಗಿದೆ...ಆರ್ ಯೂ ರೆಡಿ ?
ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳಿಂದ ಕ್ರೆಡಿಟ್‌ಕಾರ್ಡ್ ಸಾಲದ ಸುಳಿಯಲ್ಲಿ ಸಿಲುಕಿರುವ ಲಕ್ಷಾಂತರ ಬಳಕೆದಾರರು ಗೂಂಡಾಗಳಿಂದ ಎದುರಿಸುತ್ತಿರುವ ಬೆದರಿಕೆ ಕರೆಗಳ ಸ್ಯಾಂಪಲ್‌ಗಳಿವು. ಇನ್ನುಳಿದ ಅವಾಚ್ಯ ಮತ್ತು ಮಾನಹಾನಿಕರ ಕರೆಗಳನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ.
೧೯೯೧ರಲ್ಲಿ ಮುಕ್ತ ಆರ್ಥಿಕತೆಯ ಬಾಗಿಲನ್ನು ತೆರೆದಾಗ ಬಹು ರಾಷ್ಟ್ರೀಯ ಕಂಪನಿಗಳು ದೇಶವನ್ನು ಪ್ರವೇಶಿಸಿದವು. ನಂತರ ಒಂದೊಂದಾಗಿ ನಾನಾ ಕ್ಚೇತ್ರಗಳಲ್ಲಿ ಅಂತಹ ಕಂಪನಿಗಳ ಕ್ರಿಮಿನಲ್ ಗೇಮ್ ಆರಂಭವಾಯಿತು. ಇದರಿಂದ ಬ್ಯಾಂಕಿಂಗ್ ಕೂಡ ಹೊರತಲ್ಲ. ಹಾಗೆ ನುಸುಳಿದ ಕ್ರೆಡಿಟ್ ಕಾರ್ಡ್ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಇದೀಗ ಕೈಗೆ ಸಿಕ್ಕಿದವರ ಬದುಕನ್ನು ಕುಟ್ಟಿ ಪುಡಿ ಮಾಡುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡಿ, ಸುಪ್ರೀಂಕೋರ್ಟ್ ಆದೇಶವನ್ನು ಕೂಡ ಈ ಕಂಪನಿಗಳು ಗುಡಿಸಿ ಗುಂಡಾಂತರ ಮಾಡಿವೆ. ಈ ವೈಟ್ ಕಾಲರ್ ಲೂಟಿಯ ಪರಿಣಾಮ ಮನೆ ಮಠ ಮಾರಿ ಕೈ ಚೆಲ್ಲಿರುವ ಮಂದಿಯಲ್ಲಿ ಪ್ರತಿಭಟಿಸುವ ತ್ರಾಣ ಕೂಡ ಕುಸಿದಿದೆ. ದನ ಮುಂತಾದ ಮೂಕಪಶುಗಳಂತೆ ಅವರೀಗ ಹಿಂದೆ ಬಂದರೆ ಒದೆಯಲಾರರು. ಮುಂದೆ ಬಂದರೆ ಹಾಯಲಾರರು.
ಯಾರಿದ್ದಾರೆ ಯಾರಿಲ್ಲ ?ದಂಗುಬಡಿಸುವ ವಿಷಯ ಏನೆಂದರೆ ವಂಚನೆಗೀಡಾದವರಲ್ಲಿ ಯಾರಿದ್ದಾರೆ ಯಾರಿಲ್ಲ ? ಆರಂಭದಲ್ಲಿ ಮೇಲ್ಮಧ್ಯಮ ಹಾಗೂ ಇತರ ಶ್ರೀಮಂತರಿಗೆ ಮೋಸವಾಯಿತು. ಇದೀಗ ಪರಿಸ್ಥಿತಿ ಮತ್ತೊಂದು ಕರಾಳ ಮಗ್ಗುಲಿಗೆ ಹೊರಳಿದೆ. ಸಣ್ಣ ಪುಟ್ಟ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು, ಲೆಕ್ಕಾಚಾರದಲ್ಲಿ ದಂತಕತೆಗಳಾಗಿರುವ ಮಾರ‍್ವಾಡಿಗಳು, ಖುದ್ದು ಬ್ಯಾಂಕ್ ವ್ಯವಸ್ಥಾಪಕರು, ಸಾಫ್ಟ್‌ವೇರ್ ತಜ್ಞರು, ಪ್ರಿನ್ಸಿಪಾಲರು, ಪತ್ರಕರ್ತರು, ಗೃಹಿಣಿಯರು, ಗಾರ್ಮೆಂಟ್ ಹುಡುಗಿಯರು, ಇತರ ವೃತ್ತಿ ನಿರತ ಮಹಿಳೆಯರು ಕಂಡರಿಯದ ಸಮಸ್ಯೆಯಿಂದ ಬಚಾವಾಗುವುದು ಹೇಗೆಂದು ಗೊತ್ತಾಗದೆ ಪರದಾಡುತ್ತಿದ್ದಾರೆ. ಕೇಳುವವರೇ ಇಲ್ಲ. ಇವರಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಂದಿ ಮನೆಯ ಸದಸ್ಯರು ಮತ್ತು ಸ್ನೇಹಿತರಲ್ಲಿ ಹೇಳಿಕೊಳ್ಳಲು ಕೂಡ ಅಂಜುತ್ತ ಹಗಲಿರುಳು ಬ್ಲೇಡ್‌ಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಕೆಲವರು ಕಿರುಕುಳ ತಾಳಲಾರದೆ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಎಷ್ಟೋ ಮಂದಿ ಯತ್ನಿಸಿದ್ದಾರೆ. ಸಾಲ ವಸೂಲಿಯ ನೆಪದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲು ತಟ್ಟುವ ಪಾತಕಿಗಳಿಂದ ಅಸಂಖ್ಯಾತ ಸಂಸಾರಗಳ ನೆಮ್ಮದಿ ಸರ್ವನಾಶವಾಗಿದೆ.
ಸಾಮಾನ್ಯವಾಗಿ ಭಾರತೀಯ ಮನಸ್ಸತ್ವ ಅಪ್ಪಟ ಸಾಲ ವಿರೋಧಿ. ಇದು ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿ ಯಾವುದೋ ಒಂದು ಸನ್ನಿವೇಶದಲ್ಲಿ ಹಣಕಾಸು ವಿವಾದದ ಸುಳಿಗೆ ಬಿದ್ದರೆ ಆತನದ್ದೇ ಎಡವಟ್ಟು ಅಂತ ಜನ ತಲೆಗೊಂದರಂತೆ ಎಣಿಸುವುದೇ ಜಾಸ್ತಿ. ಆದ್ದರಿಂದ ಸಾಲ ಬಾಕಿ ಇದ್ದರೆ ಬ್ಯಾಂಕ್‌ನವರು ಸುಮ್ಮನೆ ಬಿಡುತ್ತಾರಾ ? ಇದನ್ನೆಲ್ಲ ಮೊದಲೇ ತಿಳಿದುಕೊಳ್ಳಬಾರದಾ ? ಎಂದು ತೋಚಿದಂತೆ ಅಂದುಕೊಂಡು ನಗುತ್ತಾರೆ. ಆದರೆ ಕೆಲಸಕ್ಕೆ ಬಾರದ ಅವಿವೇಕಿಗಳು ಮಾತ್ರ ಇಂತಹ ಕುಹಕದ ಮಾತುಗಳನ್ನಾಡಬಹುದು.
ಏಕೆಂದರೆ ವಸ್ತು ಸ್ಥಿತಿ ಬೇರೆಯೇ ಇದೆ. ದೇಶದಲ್ಲಿ ಕ್ರೆಡಿಟ್‌ಕಾರ್ಡ್‌ಗಳ ಜಾರಿಯಲ್ಲಿ ಗಂಭೀರ ಲೋಪ ದೋಷಗಳಿವೆ. ಗ್ರಾಹಕರನ್ನು ಅನಾಮತ್ತು ಕೆಡವಲು ಹತ್ತಾರು ವಾಮ ಮಾರ್ಗಗಳಿವೆ. ಯಾವತ್ತಾದರೂ ಎಡವಿ ಗುಂಡಿಗೆ ಬೀಳುವುದು ಖಚಿತ ಎಂಬುದನ್ನು ಅನಾಹುತ ಮಾಡಿಕೊಂಡವರ ವ್ಯಥೆಯ ಕಥೆಗಳು ಸಾರುತ್ತಿವೆ. ಆದ್ದರಿಂದ ಮೂಲತಃ ಹಲವಾರು ಉಪಯುಕ್ತ ಲಕ್ಷಣಗಳನ್ನು ಒಳಗೊಂಡಿರುವ ಕ್ರೆಡಿಟ್‌ಕಾರ್ಡ್ ಎಂಬ ಹಣಕಾಸು ವ್ಯವಸ್ಥೆ ಭಾರತದಲ್ಲಿ ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ.
ಆರ್‌ಬಿಐ ಕೈ ಚೆಲ್ಲಿತ್ತು !ನೋಡಿ. ನಾಲ್ಕು ವರ್ಷಗಳ ಹಿಂದೆಯೇ ಕ್ರೆಡಿಟ್ ಕಾರ್ಡ್‌ಗಳ ಮೀಟರ್ ಬಡ್ಡಿ ದರದ ಮೇಲೆ ಕಡಿವಾಣ ಹಾಕಿ ದಯವಿಟ್ಟು ಮನೆಹಾಳ ಬ್ಯಾಂಕ್‌ಗಳ ಗ್ರಹಚಾರ ಬಿಡಿಸಿ ಎಂದು ಒತ್ತಾಯಿಸಿ ಆರ್‌ಬಿಐಗೆ ಬಳಕೆದಾರರು ಮನವಿ ಸಲ್ಲಿಸಿದ್ದರು.
ಪರಿಣಾಮ ? ೨೦೦೩ರ ಮೇನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೌನ ಮುರಿದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು. ಸಾಲ ಹಾಗೂ ಮುಂಗಡಗಳ ಬಡ್ಡಿ ದರ ಕುರಿತು ತಾನು ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳು ಕ್ರೆಡಿಟ್‌ಕಾರ್ಡ್‌ಗಳಲ್ಲಿ ಪಡೆಯುವ ಸಾಲಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕಾರ್ಡ್ ಬಿಡುಗಡೆ ಮಾಡುವ ಬ್ಯಾಂಕ್‌ಗಳು ಒದಗಿಸುತ್ತಿರುವ ಸೇವೆ ಮತ್ತು ಸೌಲಭ್ಯಗಳಲ್ಲಿ ಏಕರೂಪತೆ ಇರುವುದಿಲ್ಲ. ಹೀಗಿದ್ದರೂ ಬ್ಯಾಂಕ್‌ಗಳು ಬಳಕೆದಾರರಿಗೆ ಅದನ್ನು ನೀಡುವ ಮುನ್ನ ಸದಸ್ಯತ್ವ, ನವೀಕರಣ, ಸೇವಾ ಶುಲ್ಕ ದಂಡ ಮತ್ತಿತರ ಷರತ್ತುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಸದ್ಯದ ಅನಿಯಂತ್ರಿತ ವ್ಯವಸ್ಥೆಯಲ್ಲಿ ಈ ಬಗ್ಗೆ ಮಧ್ಯಪ್ರವೇಶಿಸಲು ತಾನು ಬಯಸುತ್ತಿಲ್ಲ ಎಂದು ಪ್ರತಿಪಾದಿಸಿತು.
ಹೀಗೆ ನುಣುಚಿಕೊಂಡರೆ ಸಮಸ್ಯೆ ನಿಲ್ಲುತ್ತದೆಯೇ ? ಅದಾದ ನಂತರ ಪ್ರಮುಖ ನಗರಗಳಲ್ಲಿ ಮೆಲ್ಲಗೆ ಪ್ರತಿಭಟನೆ ಕಾವು ಪಡೆಯಿತು. ಸಾಲದ ಆಘಾತದಲ್ಲಿದ್ದವರು ಬೀದಿಗೆ ಇಳಿದು ಪ್ರತಿಭಟಿಸಿದರು. ಕೊನೆಗೂ ಆರ್‌ಬಿಐ ಕ್ರೆಡಿಟ್‌ಕಾರ್ಡ್ ಕುರಿತು ಮಾರ್ಗದರ್ಶಿ ಪ್ರಕಟಿಸಿತು. ಪ್ರತಿಯೊಂದಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ನಿರೂಪಿಸಿತು. ದುರಂತ ಏನೆಂದರೆ ಅದಾವುದೂ ಕಾಗದದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಈಚೆಗೆ ಬಂದಿಲ್ಲ. ಆದ್ದರಿಂದ ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳ ದಂಗುಬಡಿಸುವ ಹಗಲು ದರೋಡೆ ನಿಂತಿಲ್ಲ.

Tuesday 9 March 2010

ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ...





ಚೆನ್ನಪಟ್ಟಣಕ್ಕೆ ಸಮೀಪವಿರುವ ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ ದಾರಿಯಲ್ಲಿ ಕಂಡ ದೃಶ್ಯಗಳಿವು. ಹಳ್ಳಿಯಲ್ಲಿ ಇದ್ದಷ್ಟು ಹೊತ್ತು ಇತರ ಜಗತ್ತಿನ ಜಂಜಾಟವೆಲ್ಲ ಮಂಗಮಾಯವಾಗುತ್ತದೆ. ಹಳ್ಳಿಗರ ಮುಗ್ಧತೆ, ಅತಿಥಿ ಸತ್ಕಾರ ಗುಣ ಈಗಲೂ ಉಳಿದುಕೊಂಡಿದೆ ಎಂಬುದನ್ನು ನಾಗಾವಾರದಲ್ಲಿ ಕಂಡೆ. ಆದರೆ ರೈತಾಪಿಯೊಬ್ಬ ಕರೆಂಟಿಲ್ಲದೆ ಬೆಳೆಯೆಲ್ಲ ಒಣಗಿ ಹೋಗುತ್ತಿದೆ ಎಂದು ನೋವು ತೋಡಿಕೊಂಡಾಗ ಮನಸ್ಸು ಭಾರವಾಯಿತು. ದೇವರಲ್ಲಿ ಬೇಡುವುದಿಷ್ಟೇ. ಹಳ್ಳಿಗರ ಕಷ್ಟ ಕಾರ್ಪಣ್ಯ ಪಾರು ಮಾಡು. ವಿದ್ಯುತ್ ಕೊಡು.. ಅಂತ.

Saturday 6 March 2010

ಕೆಂಗೇರಿಯ ಶಿರ್ಕೆ ಬಡಾವಣೆಯ ಜನ ಜೀವನ-ಭಾಗ-೩








ಸಾಯಂಕಾಲ ಮಕ್ಕಳಾಟ..ಯಾವುದೋ ಮನೆಗೆ ಬಣ್ಣ ಬಳಿದ ನಂತರ ಹಿಂತಿರುಗುತ್ತಿರುವ ಪೇಂಟರ್, ಯಥಾ ಪ್ರಕಾರ ನೀರಿನ ಟ್ಯಾಂಕಿಯ ಮೇಲೆ ಪಾರಿವಾಳದ ವಿರಾಮ. ಬೆಳಗ್ಗೆ ಬಾಲ್ಕನಿಯಲ್ಲಿ ಕುಳಿತುಕೊಂಡು ವಿಜಯ ಕರ್ನಾಟಕ ಓದುತ್ತಿರುವ ಹಿರಿಯ ನಾಗರಿಕ.

Wednesday 3 March 2010

ಜುಜುಬಿ ರಾಯಲ್ಟಿಗೆ ಅದಿರು ರಫ್ತು..ಐದು ವರ್ಷಗಳ ಲೆಕ್ಕ ಇಲ್ಲಿದೆ !


ವಿ.ಕದಲ್ಲಿ ಪ್ರಕಟವಾದ ಗಣಿಗಾರಿಕೆ ಕುರಿತ ಲೇಖನ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday 1 March 2010

ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಸಂಭ್ರಮ..





















ಈವತ್ತು (ಮಾರ್ಚ್ ೧) ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಹಬ್ಬ ಆಚರಿಸುವ ಉಮೇದು ಹಲವರಿಗೆ ಬಂದು ಬಿಟ್ಟಿತು. ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಎರಡು ದಿನಗಳ ಮೊದಲೇ ಸೂಚನೆ ಕೊಟ್ಟಿದ್ದರು. ಹೋಳಿ ಹಬ್ಬಕ್ಕೆ ಅವಕಾಶ ಇದೆ. ಆದರೆ ಕಚೇರಿ ಒಳಗೆ ಬಣ್ಣಗಳನ್ನು ಕಂಪ್ಯೂಟರ್, ಟೇಬಲ್ ಮೇಲೆ ಎಲ್ಲ ಚೆಲ್ಲುವ ಹಾಗೆ ಆಗಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದ್ದರು.
ಅದರಂತೆ ಸಹೋದ್ಯೋಗಿಗಳಲ್ಲಿ ಕೆಲವರು ಹೋಳಿಯ ಸಂಭ್ರಮಕ್ಕೆ ಚಾಲನೆ ಕೊಟ್ಟರು. ಕೆಲವರು ಸಂಕೋಚದಿಂದ ಅವರವರ ಡೆಸ್ಕ್‌ನಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದರು. ಅವರನ್ನೆಲ್ಲ ಉಳಿದವರು ಬರ‍್ಲೇ ಬೇಕು ಅಂತ ಒತ್ತಾಯಿಸಿ, ಕೈಹಿಡಿದು ಎಬ್ಬಿಸಿ, ಕೆಲವರಿಗೆ ಬೈದು (ಖುಷಿಯಲ್ಲಿ) ಕಚೇರಿಯ ಆವರಣದಲ್ಲಿ ಬಣ್ಣದೋಕುಳಿ ಮಾಡಿಸಲಾಯಿತು. ದೀಪಾ ಹಾಗೂ ಭದ್ರತಾ ಸಿಬ್ಬಂದಿಯವರಂತೂ ಸಿಕ್ಕಾಪಟ್ಟೆ ಒತ್ತಾಯ ಮಾಡುತ್ತಿದ್ದರು.ನಮ್ಮ ನೆರೆಯವರಾದ ಬೆಂಗಳೂರು ಮಿರರ್‌ನ ಸಿಬ್ಬಂದಿ ಕೂಡ ಭಾಗವಹಿಸಿದ್ದರು.
ಸ್ವಲ್ಪ ಹೊತ್ತಿನಲ್ಲಿ ತಮಾಷಿಗಳೂ ಜರುಗಿ ಹೋದವು. ಪ್ರತಾಪ್ ಸಿಂಹ ಗುರುತೇ ಸಿಗದಂತೆ ಓಡಾಡುತ್ತಿದ್ದರು. ಸಹೋದ್ಯೋಗಿಗಳನ್ನು ಆಫೀಸಿನ ಹೊರಗಿನಿಂದಲೇ ಕಿರುಚಿ ಕೂಗುತ್ತಿದ್ದರು. ಕೆಲವರು ಓಗೊಟ್ಟು ಹೊರಗೆ ಬರುತ್ತಿದ್ದರು. ಬಂದ ಕೂಡಲೇ ಬಣ್ಣದಿಂದ ಮಜ್ಜನ. ನಾನು ಕೂಡ ಏನು ನಡೆಯುತ್ತಿದೆ ಅಂತ ಎದ್ದು ಬಾಗಿಲಿನ ಕಡೆಗೆ ಹೋದೆ. ಅದೇ ತಪ್ಪಾಯಿತು..ಪ್ರತಾಪ್ ಸಿಂಹ ಬನ್ನಿ ರೀ..ಹೋಗಿ ರೀ..ಅಂತ ಕರೆದರು. ಕೈಯಲ್ಲಿ ಬಣ್ಣದ ಲಕೋಟೆ ಹಿಡಿದಿದ್ದರು. ಒಮ್ಮೆ ಬಾಗಿಲಿನಿಂದ ಹೊರಗೆ ಕಾಲಿಟ್ಟಿದ್ದೇ ತಡ, ಮುಖ, ತಲೆಗೆಲ್ಲ ಬಣ್ಣ ಎರಚಿದರು. ಇತರ ಸಹೋದ್ಯೋಗಿಗಳೂ ಸಾಕಷ್ಟು ಕೊಡುಗೆ ಕೊಟ್ಟರು. ಅವರ ಉತ್ಸಾಹದಲ್ಲಿ ಪಾಲ್ಗೊಂಡೆ. ನನ್ನ ಬೆನ್ನ ಹಿಂದೆ ಸುವರ್ಣ ಮೇಡಂ ಬಂದರು. ಅವರಿಗೂ ಬಣ್ಣದ ಸುರಿಮಳೆಯಾಯಿತು..ಒಟ್ಟಾರೆ ಕಚೇರಿಯಲ್ಲಿ ಐದಾರು ಮಂದಿಗೆ ಬಿಟ್ಟು ಉಳಿದವರಿಗೆಲ್ಲ ಹೋಳಿ ಬಣ್ಣದಲ್ಲಿ ಮುಳುಗಿಯಾಗಿತ್ತು. ಅಷ್ಟು ಹೊತ್ತಿಗೆ ನನಗೆ ಕ್ಯಾಮೆರಾ ನೆನೆಪಾಯಿತು. ಬ್ಯಾಗಿನಿಂದ ತೆಗೆದು ಚಿತ್ರಗಳನ್ನು ಸೆರೆಹಿಡಿದೆ. ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ಕಚೇರಿಯಲ್ಲಿದ್ದೇನೆ. ಆದರೆ ಈ ಸಲದ ಹೋಳಿ ವ್ಯಾಪಕವಾಗಿತ್ತು ಎಂದು ಅನ್ನಿಸುತ್ತಿದೆ. ಅಂದಹಾಗೆ ಆಗ ಸೆರೆ ಹಿಡಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ.

ಈ ಚಿತ್ರಗಳಲ್ಲಿ ಸಹೋದ್ಯೋಗಿ ಮಿತ್ರರಾದ ರಮೇಶ್, ವಿನಯ್.ನ, ಸುದರ್ಶನ್ ಚೆನ್ನಂಗಿಹಳ್ಳಿ, , ಎಂ.ಆರ್. ದಿಂಡಲ್‌ಕೊಪ್ಪ,ಮಹೇಶ್ ಯಲಗೋಡಮನೆ, ಯಶೋದಾ, ಎಲ್.ಪ್ರಕಾಶ್,ರಾಘವೇಂದ್ರ ಭಟ್, ಪ್ರಕಾಶ್ ಅಂತಾಪುರ,ರಮೇಶ್‌ಕುಮಾರ್ ನಾಯಕ್,ಪ್ರೇಮ್‌ಕುಮಾರ್, ಸುರೇಶ್,ಮಹೇಶ್, ಸಾಧು ಶ್ರೀನಾಥ್, ಬಸವರಾಜ್ ಭಾಷಾ ಗೂಳ್ಯಂ, ಪ್ರತಾಪ್ ಸಿಂಹ,ಹರೀಶ್ ಕೇರ ಯಶೋಧರ ಕೋಟ್ಯಾನ್ ಸೀತಾರಾಮ ಮಯ್ಯ,, ವಿನಾಯಕ ಶಶಿವಾಳ ಪ್ರೇಮ್ರಾಜ್ ಇದ್ದಾರೆ