Sunday, 29 January 2012

ಎಂಜಿನಿಯರ್ ಬದುಕಿನ ದಿಕ್ಕು ಬದಲಿಸಿದ ಬಸ್ ಟಿಕೆಟ್ !


ಬೆಂಗಳೂರಿನಲ್ಲಿ ಟ್ರಾಫಿಕ್‌ನ ಗೋಳನ್ನು ಕೇಳುವುದೇ ಬೇಡ.
ಹಬ್ಬದ ದಿನಗಳಲ್ಲಂತೂ, ಯಪ್ಪಾ.. ಎಲ್ಲ ಬಸ್ ನಿಲ್ದಾಣಗಳು ಊರಿಗೆ ತೆರಳುವ ಧಾವಂತದಲ್ಲಿರುವ ಜನ ಸಾಗರದಲ್ಲಿ ತೊಪ್ಪೆಯಾಗುತ್ತವೆ. ಟಿಕೆಟ್ ಸಿಗದೆ ಪರದಾಡಿ ಊರಿಗೆ ಹೋಗುವ ಅವಕಾಶವನ್ನೇ ತಪ್ಪಿಸಿಕೊಂಡು ಆ ಕಿಷ್ಕಿಂದೆಯಲ್ಲಿ ಪರಿತಪಿಸುವವರಿಗೂ ಕೊರತೆ ಇಲ್ಲ. ರೈಲ್ವೆ ನಿಲ್ದಾಣದಲ್ಲಿ ಮೈಲುದ್ದದ ಸರದಿಯಲ್ಲಿ ನಿಂತು, ತರಾತುರಿಯಲ್ಲಿ ಟಿಕೆಟ್ ಸಿಗದೆ ಕಣ್ಣೆದುರೇ ಹೊರಟ ರೈಲನ್ನು ನೋಡುತ್ತ ನಿಟ್ಟುಸಿರಿಡುವ ಉದಾಹರಣೆಗಳು ಅದೆಷ್ಟೋ. ಇದರಲ್ಲೇನಪ್ಪಾ ಗುರುವೇ ? ಅಂತೀರಾ.
ಹಾಗಾದರೆ ಕೇಳಿ, ಕೇವಲ ಆರು ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭವದು. ಬೆಂಗಳೂರಿನ ಇಂದಿರಾ ನಗರದ ಬಸ್ ನಿಲ್ದಾಣದಲ್ಲಿ ಫಣೀಂದ್ರ ಸಮಾ ಎಂಬ ಯುವಕ ಹೈದರಾಬಾದಿನ ಬಸ್ಸಿಗೆ ಕಾದು ನಿಂತಿದ್ದ. ಆಂಧ್ರಪ್ರದೇಶದ ನಿಜಾಮಾಬಾದ್‌ನಲ್ಲಿ ಸಾಮಾನ್ಯ ಕೃಷಿ ಕುಟುಂಬದಲ್ಲಿ ಬೆಳೆದು, ಚೆನ್ನಾಗಿ ಓದನ್ನು ಪೂರ್ಣಗೊಳಿಸಿ ನಂತರ ಕೆಲಸ ಹುಡುಕುತ್ತ ಉದ್ಯಾನ ನಗರಿಯಲ್ಲಿ ನೆಲೆ ನಿಂತ ತರುಣ ಎಂಜಿನಿಯರ್. ತವರೂರಲ್ಲಿ ಕುಟುಂಬದ ಜತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಹೊರಟು ತುದಿಗಾಲಿನಲ್ಲಿ ನಿಂತಿದ್ದ.
ಸಾಮಾನ್ಯ ಕೃಷಿಕನ ಮಗನಾಗಿ ಹುಟ್ಟಿದರೂ, ಫಣೀಂದ್ರ ಚಿಕ್ಕಂದಿನಿಂದಲೇ ಅಸಾಧಾರಣ ಪ್ರತಿಭಾವಂತನಾಗಿದ್ದ. ಎಳೆಯ ಹರೆಯದಲ್ಲಿ ತಂದೆಯನ್ನು ಕಳೆದುಕೊಂಡು, ಕೊನೆಗೆ ಹೈದರಾಬಾದ್‌ನಲ್ಲಿ ಸಂಬಂಕರ ಮನೆಯಲ್ಲಿದ್ದು ಓದಿಕೊಂಡಿದ್ದ. ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಗಳಿಸಿದ್ದ ಜಾಣ. ರಾಜಸ್ಥಾನದ ಪಿಲಾನಿಯಲ್ಲಿರುವ ಪ್ರತಿಷ್ಠಿತ ಬಿಟ್ಸ್‌ನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪೂರೈಸಿದ ಫಣೀಂದ್ರ ಬೆಂಗಳೂರಿನಲ್ಲಿ ಹಲವು ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದ. ಅಷ್ಟೇ ಆಗಿದ್ದರೆ ಇಲ್ಲಿ ಬರೆಯುವ ಅಗತ್ಯವೇ ಇರುತ್ತಿರಲಿಲ್ಲ. ದೇಶದ ಲಕ್ಷಾಂತರ ಎಂಜಿನಿಯರುಗಳಲ್ಲಿ ಒಬ್ಬನಾಗಿರುತ್ತಿದ್ದ. ಆದರೆ ಆತನ ಬದುಕಿನ ದಿಕ್ಕನ್ನೇ ತಿರುಗಿಸಿದ ಪುಟ್ಟ ಘಟನೆ ಅದಾಗಿತ್ತು !
ಆವತ್ತು ಟಿಕೆಟ್ ಸಿಗಲಿಲ್ಲ...
ಟ್ರಾವೆಲ್ ಏಜೆಂಟನ ಬಳಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಆತ ಬೇರೆ ಟ್ರಾವೆಲ್ ಏಜೆನ್ಸಿಗೆ ಫೋನ್ ಮಾಡಿ ಕೇಳಿದರೂ ಉಪಯೋಗವಾಗಲಿಲ್ಲ. ಈ ಹುಡುಗನಿಗೆ ಸಪ್ಪೆಯಾದರೂ, ಎಲ್ಲರಂತೆ ವ್ಯವಸ್ಥೆಯ ಬಗ್ಗೆ ಗೊಣಗುತ್ತಾ ಬೆನ್ನು ತಿರುಗಿಸಲಿಲ್ಲ. ನೂರಾರು ಟ್ರಾವೆಲ್ ಏಜೆಂಟರಿದ್ದರೂ ನನಗೇಕೆ ಒಂದು ಟಿಕೆಟ್ ಸಿಗಲಿಲ್ಲ ? ನನ್ನಂತೆಯೇ ಎಷ್ಟೋ ಮಂದಿಗೆ ಸಮಸ್ಯೆ ಉಂಟಾಗುವುದಿಲ್ಲವೇ ? ಹಾಗಾದರೆ ಈ ಸಮಸ್ಯೆಗೆ ಪರಿಹಾರವಿಲ್ಲವೇ ? ಎಂದು ಯೋಚಿಸಿದ. ಈ ಬಗ್ಗೆ ತನ್ನ ಮಿದುಳಿಗೆ ಸಾಣೆ ಹಿಡಿದ. ಗೆಳೆಯರ ಹತ್ತಿರ ಚರ್ಚಿಸಿದ. ಆಗ ಹುಟ್ಟಿಕೊಂಡದ್ದೇ ರೆಡ್ ಬಸ್ ಎಂಬ ವಿನೂತನ ಕಂಪನಿಯ ಪರಿಕಲ್ಪನೆ !
ರೆಡ್ ಬಸ್‌ನ ಸಿಇಒ ಫಣೀಂದ್ರ ಅವರೇ ತಿಳಿಸಿದಂತೆ, ಈವತ್ತು ರೆಡ್‌ಬಸ್‌ನ ವಹಿವಾಟು ೩೩೦ ಕೋಟಿ ರೂ. ದಾಟಿದೆ !!!
‘ ಕಂಗ್ರಾಚ್ಯುಲೇಶನ್ಸ್, ಇದೆಲ್ಲ ಹೇಗೆ ಸಾಧ್ಯವಾಯಿತು ? ಎತ್ತಣ ಎಲೆಕ್ಟ್ರಾನಿಕ್ ಎಂಜಿನಿಯರ್ ? ಎತ್ತಣ ರೆಡ್ ಬಸ್ ? ಬಹುಶಃ ಇಂಥ ಅತ್ಯರೂಪದ ಕತೆ ಸಿನಿಮಾದಲ್ಲೂ ಬಂದಿದೆಯೋ, ಇಲ್ಲವೋ ಗೊತ್ತಿಲ್ಲ.’ ಹೀಗೆ ಕೇಳಿದರೆ ಮುಗುಳ್ನಗುತ್ತಾ ಉತ್ತರಿಸುತ್ತಾರೆ ಫಣೀಂದ್ರ.
‘ ರೆಡ್ ಬಸ್ ಕಂಪನಿ ಅಗಾಧವಾಗಿ ಬೆಳೆಯುತ್ತಿದೆ. ಕೋಟ್ಯಂತರ ಹಣ ಹರಿದು ಬರುತ್ತಿದೆ. ಈ ವೇಗವನ್ನು ಉಳಿಸಿಕೊಳ್ಳಬೇಕಾದರೆ ನಾನು ಕಂಪನಿಗಿಂತಲೂ ಹತ್ತು ಹೆಜ್ಜೆ ಮುಂದಿರಬೇಕು. ಇಲ್ಲವಾದಲ್ಲಿ ಸಂಸ್ಥೆ ಬೆಳೆಯುವುದಿಲ್ಲ. ಇದು ನನ್ನ ಮುಂದಿರುವ ಚಾಲೆಂಜ್. ಆದರೆ ಇದು ನನ್ನಿಂದೊಬ್ಬನೇ ಆಗುವ ಕೆಲಸವಲ್ಲ, ಆದ್ದರಿಂದ ಸಮರ್ಥ ಮ್ಯಾನೇಜ್‌ಮೆಂಟ್ ಮತ್ತು ಉತ್ಸಾಹಿ ಸಿಬ್ಬಂದಿ ರೆಡ್ ಬಸ್‌ನಲ್ಲಿದೆ. ಈಗಾಗಲೇ ದೇಶಾದ್ಯಂತ ರೆಡ್ ಬಸ್ ಜಾಲವಿದೆ. ಮುಂದಿನ ದಿನಗಳಲ್ಲಿ ಮಲೇಷ್ಯಾ, ಬಾಂಗ್ಲಾದೇಶಗಳಲ್ಲಿ ಕಂಪನಿಯನ್ನು ವಿಸ್ತರಿಸುವ ಆಕಾಂಕ್ಷೆ ಇದೆ ’ ಎನ್ನುತ್ತಾರೆ ಫಣೀಂದ್ರಾ ! ನೆನಪಿಡಿ, ಯಾವುದೇ ಉದ್ಯಮದ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ, ಕೇವಲ ಮೂವತ್ತೊಂದರ ಯೌವನದಲ್ಲಿ ಎಂಥಾ ಪ್ರಬುದ್ಧ ಮಾತು !
ಈಗ ರೆಡ್‌ಬಸ್‌ನ ವಿಸ್ಮಯಕಾರಿ ಯಶಸ್ಸಿನ ಬಗ್ಗೆ ನೋಡೋಣ.
ಎಲ್ಲ ಸಂಶೋಧಕರಲ್ಲೂ ಅನೇಕ ಸ್ವಾರಸ್ಯಗಳಿರುತ್ತವೆ. ೨೦೦೫ರಲ್ಲಿ ಫಣೀಂದ್ರ ಬಿಟ್ಸ್‌ನಲ್ಲಿ ತಮ್ಮ ಸಹಪಾಠಿಗಳಾಗಿದ್ದ ಚರಣ್, ಪದ್ಮರಾಜು, ಸುಧಾಕರ್ ಜತೆಗೆ ಚರ್ಚಿಸಿ ರೆಡ್‌ಬಸ್ ಸಂಸ್ಥೆಗೆ ಚಾಲನೆ ನೀಡಿದರು. ಇವರೆಲ್ಲ ಐಬಿಎಂ, ಟೆಕ್ಸಾಸ್ ಇನ್ಸ್‌ಸ್ಟ್ರುಮೆಂಟ್ಸ್ ಮುಂತಾದ ಐಟಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹುದ್ದೆಯಲ್ಲಿದ್ದವರು. ಅಂತೂ ದೀಪಾವಳಿಗೆ ಬಸ್ ಟಿಕೆಟ್ ಸಿಕ್ಕದೆ ಪರದಾಡಿದ್ದ ಫಣೀಂದ್ರರ ತಲೆಯಲ್ಲಿ ಐಡಿಯಾ ಹೊಳೆದಿತ್ತು. ಕಂಪ್ಯೂಟರ್, ಇಂಟರ್‌ನೆಟ್, ಹೊಸ ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಬೆಳೆಸಿಕೊಂಡರೆ ಹೊಸ ಉದ್ದಿಮೆ ಸ್ಥಾಪಿಸಬಹುದು ಎಂದು ಯೋಚಿಸಿದ್ದರು. ಓದಿದ್ದು ಎಲೆಕ್ಟ್ರಾನಿಕ್ಸ್ ಆದರೂ ತಾಳ ಮೇಳವೇ ಆಗದ ಹೊಸ ಸಾಹಸಕ್ಕೆ ಸ್ನೇಹಿತರು ಧುಮುಕಿದ್ದರು.
ಮಾಡಿದ್ದೇನು ? : ಇಂಟರ್‌ನೆಟ್ ಮೂಲಕ ಗ್ರಾಹಕರು ಬಸ್ ಟಿಕೆಟ್ ಖರೀದಿಸುವ ಅನುಕೂಲ ಕಲ್ಪಿಸುವುದು. ಮನೆಯಲ್ಲಿ ಅಥವಾ ಎಲ್ಲಾದರೂ ಕುಳಿತುಕೊಂಡು ಮೌಸ್ ಕ್ಲಿಕ್ಕಿಸುವುದರ ಮೂಲಕ ಯಾವುದೇ ಸಂದರ್ಭ ಟಿಕೆಟ್ ಕಾಯ್ದಿರಿಸಬಹುದು. ಅದು ಕೂಡ ಉಚಿತವಾಗಿ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಎಸ್ಸೆಮ್ಮೆಸ್ ಬರುತ್ತದೆ. ಅದನ್ನು ಬಸ್‌ನಲ್ಲಿ ನಿರ್ವಾಹಕರಿಗೆ ತೋರಿಸಿದರೆ ಸಾಕು. ಬೇಕಾದರೆ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು. ಕಂಪ್ಯೂಟರ್, ನೆಟ್ ಸೌಲಭ್ಯ ಇಲ್ಲದಿದ್ದರೆ ಕಂಪನಿಯ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಟಿಕೆಟ್ ಕಾಯ್ದಿರಿಸಬಹುದು. ಮನೆಗೆ ಟಿಕೆಟ್ ತಲುಪಬೇಕಿದ್ದರೆ ಮಾತ್ರ ಶುಲ್ಕ ನೀಡಬೇಕಾಗುತ್ತದೆ. ಜನ ಖಾಸಗಿ ಏರ್‌ಲೈನ್ಸ್‌ಗಳ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸುವುದಾದರೆ, ಯಾಕೆ ಬಸ್ ಟಿಕೆಟ್ ಆಗಬಾರದು ? ಇಂತಹ ಹೊಸ ಕಲ್ಪನೆಯನ್ನು ಗೆಳೆಯರಲ್ಲಿ ಹಂಚಿದಾಗ ಅವರೂ ಉತ್ಸಾಹದಿಂದ ಸ್ಪಂದಿಸಿದರು.
ಪೂರ್ವ ಸಿದ್ಧತೆ : ಹಾಗಂತ ಫಣೀಂದ್ರ ಏಕ್‌ದಮ್ ಬಿಸಿನೆಸ್‌ಗೆ ಇಳಿದಿರಲಿಲ್ಲ. ಸಾಧ್ಯಾಸಾಧ್ಯತೆಗಳ ಬಗ್ಗೆ ಹಲವಾರು ಬಸ್ ನಿರ್ವಾಹಕರನ್ನು, ಮಾಲೀಕರನ್ನು, ಟ್ರಾವೆಲ್ ಏಜೆಂಟರನ್ನು ಸಂಪರ್ಕಿಸಿದರು.ಆದರೂ ಮಾರುಕಟ್ಟೆ ಸೃಷ್ಟಿಸುವುದು ಸುಲಭವಿರಲಿಲ್ಲ. ಫಣೀಂದ್ರ ಬೆಂಗಳೂರಿನ ಪುಸ್ತಕದಂಗಡಿಗಳಿಗೆ ಹೊಕ್ಕು ಸಾಫ್ಟ್‌ವೇರ್‌ಗಳ ಬಗ್ಗೆ ಗ್ರಂಥಗಳನ್ನು ಕಲೆ ಹಾಕಿ ಓದಿದರು. ಬಿಸಿನೆಸ್‌ಗೆ ಬೇಕಾದ ಹೊಸ ಸಾಫ್ಟ್‌ವೇರನ್ನು ಸಿದ್ಧಪಡಿಸಿದರು. ಬಸ್ ಮಾಲೀಕರು, ಟ್ರಾವೆಲ್ ಏಜೆಂಟರುಗಳೊಡನೆ ಒಪ್ಪಂದ ಮಾಡಿಕೊಂಡರು.
ಪ್ರತಿ ದಿನ ಇನೋಸಿಸ್‌ನಲ್ಲಿ ಗೇಟಿನ ಸಮೀಪ ಕಾದು ನಿಂತು ಟೆಕ್ಕಿಗಳಿಗೆ ತಮ್ಮ ಗುರುತಿನ ಕಾರ್ಡ್ ನೀಡಿ, ರೆಡ್ ಬಸ್ ಬಗ್ಗೆ ತಿಳಿಸುತ್ತಿದ್ದರು. ಕಂಪನಿಯ ಮೊದಲ ಗ್ರಾಹಕಿ ಇನೋಸಿಸ್‌ನ ಉದ್ಯೋಗಿಯಾಗಿದ್ದರಂತೆ. ಕ್ರಮೇಣ ಟೆಕ್ಕಿಗಳು ಒಬ್ಬರಿಗೊಬ್ಬರು ರೆಡ್‌ಬಸ್‌ನ ಅನುಕೂಲತೆಗಳ ಬಗ್ಗೆ ತಿಳಿಸುತ್ತಿದ್ದಂತೆ ಜನಪ್ರಿಯವಾಗತೊಡಗಿತು. ಇತರರೂ ಬಳಸತೊಡಗಿದರು. ಫಣೀಂದ್ರ ನೇತೃತ್ವದಲ್ಲಿ ಮೂವರು ಸದಸ್ಯರಿದ್ದ ಕಂಪನಿ ನೋಡ ನೋಡುತ್ತಿದ್ದಂತೆ ಅಗಾಧವಾಗಿ ಬೆಳೆಯತೊಡಗಿತು. ೯ ತಿಂಗಳಿನಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆ ೫೦ಕ್ಕೇರಿತು. ಐವತ್ತು ನೂರಾಯಿತು, ನೂರು ಇನ್ನೂರಾಯಿತು. ಈಗ ಐನ್ನೂರು ದಾಟಿದೆ !!
ಉಳಿತಾಯದ ೫ ಲಕ್ಷ ರೂ.ಗಳಲ್ಲಿ...!
ಆರಂಭದಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ರೆಡ್ ಬಸ್ ಕಚೇರಿ ಇತ್ತು. ಗೆಳೆಯರು ತಮ್ಮ ಉಳಿತಾಯದ ಹಣವನ್ನು ಒಟ್ಟುಗೂಡಿಸಿದಾಗ ೫ ಲಕ್ಷ ರೂ.ಗಳಾಗಿತ್ತು. ಅಷ್ಟರಲ್ಲೇ ಹೊಂದಾಣಿಕೆ ಮಾಡಿಕೊಂಡು ಕಂಪನಿ ಸ್ಥಾಪಿಸಿದ ಸಾಹಸಿಗರು ಇವರು. ನಂತರ ತಿಂಗಳಿಗೆ ಎರಡರಂತೆ ಕಚೇರಿಗಳನ್ನು ತೆರೆಯುತ್ತಾ ಮುಂದುವರಿದರು. ಚೆನ್ನೈ, ಮುಂಬಯಿ, ಅಹಮದಾಬಾದ್, ಪುಣೆ, ದಿಲ್ಲಿ, ಕೋಲ್ಕತಾ, ಅಸ್ಸಾಂ, ಜೆಮ್‌ಶೆಡ್‌ಪುರ ಅಂತ ದೇಶಾದ ಉದ್ದಗಲಕ್ಕೂ ಕಂಪನಿಯ ಕಚೇರಿಗಳು ಅಸ್ತಿತ್ವಕ್ಕೆ ಬಂದಿತು. ಈವತ್ತು ದೇಶದಲ್ಲಿ ೭೫ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ರೆಡ್‌ಬಸ್‌ನ ಟಿಕೆಟ್‌ಗಳು ಸಿಗುತ್ತವೆ.
ಆದಾಯ ಹೇಗೆ ?
ರೆಡ್‌ಬಸ್ ತನ್ನ ಜಾಲದಲ್ಲಿ ೩೫೦ಕ್ಕೂ ಹೆಚ್ಚು ಬಸ್ ನಿರ್ವಾಹಕರು, ೧೦ ಸಾವಿರಕ್ಕೂ ಹೆಚ್ಚು ಟ್ರಾವೆಲ್ ಏಜೆಂಟರ ಜತೆ ವ್ಯಾವಹಾರಿಕ ಸಂಪರ್ಕ ಹೊಂದಿದೆ. ೨೦೧೧ರಲ್ಲಿ ೪೦ ಲಕ್ಷ ಪ್ರಯಾಣಿಕರು ರೆಡ್ ಬಸ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆ ಪಡೆದಿದ್ದಾರೆ. ರೆಡ್ ಬಸ್ ಬ್ರ್ಯಾಂಡ್‌ನ ಮಾಲಿಕತ್ವ ಸಂಸ್ಥೆಯ ಹೆಸರು ಪಿಲಾನಿ ಸಾಫ್ಟ್ ಲ್ಯಾಬ್ಸ್. ಇದು ೩ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ರೆಡ್ ಬಸ್- ಬಸ್ ಟಿಕೆಟ್ ವಿತರಿಸುವ ಬ್ರ್ಯಾಂಡ್, ಬಾಸ್- ಬಸ್ ನಿರ್ವಾಹಕರಿಗೆ ಒದಗಿಸುವವ ಸಾಸ್ ಸಾಫ್ಟ್‌ವೇರ್ ವಿತರಕ ಬ್ರ್ಯಾಂಡ್ ಮತ್ತು ಮೂರನೆಯದಾಗಿ ಸೀಟ್ ಟೆಲ್ಲರ್- ಅಂದರೆ ಟ್ರಾವೆಲ್ ಏಜೆಂಟರಿಗೆ ಬಸ್ ಟಿಕೆಟ್‌ಗಳನ್ನು ಮಾರಾಟ ಮಾಡುವ ಬ್ರ್ಯಾಂಡ್. ಹೀಗೆ ರೆಡ್‌ಬಸ್‌ಗೆ ಟಿಕೆಟ್ ಬುಕ್ಕಿಂಗ್, ಟ್ರಾವೆಲ್ ಏಜೆಂಟರಿಗೆ ವಿತರಣೆ ಮತ್ತು ಬಸ್ ನಿರ್ವಾಹಕರಿಗೆ ಸಾಫ್ಟ್‌ವೇರ್ ಉತ್ಪನ್ನ ಮಾರಾಟದಿಂದ ಆದಾಯ ಹರಿದು ಬರುತ್ತದೆ. ಫಣೀಂದ್ರ ಹೇಳುವಂತೆ ದಿನಕ್ಕೆ ಸರಾಸರಿ ೨೦ ಸಾವಿರ ಟಿಕೆಟ್ ಬುಕ್ಕಿಂಗ್ ಆಗುತ್ತದೆ.
ಮನ್ನಣೆ :
ಫಣೀಂದ್ರ ಅವರ ಸಾಧನೆಯನ್ನು ಪರಿಗಣಿಸಿರುವ ಬಿಸಿನೆಸ್ ವರ್ಲ್ಡ್ ನಿಯತಕಾಲಿಕೆ, ೨೦೦೯ರಲ್ಲಿಯೇ ಭಾರತದ ಮೂವರು ಅತ್ಯಂತ ವಿಶ್ವಾಸಾರ್ಹ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ನೀಡಿತ್ತು. ೨೦೧೦ರಲ್ಲಿ ಫೋರ್ಬ್ಸ್‌ನ ೫ ಪ್ರಬಲ ಉದಯೋನ್ಮುಖ ಕಂಪನಿಗಳ ಪಟ್ಟಿಯಲ್ಲಿ ರೆಡ್‌ಬಸ್ ಸ್ಥಾನ ಗಳಿಸಿತ್ತು.
ಒಟ್ಟಿನಲ್ಲಿ ಫಣೀಂದ್ರ ಅವರಿಗೆ ಆರು ವರ್ಷಗಳ ಹಿಂದೆ ದೀಪಾವಳಿಗೆ ಹೈದರಾಬಾದ್‌ಗೆ ಹೋಗಲು ಬಸ್ ಟಿಕೆಟ್ ತಪ್ಪಿದ್ದು ಎಷ್ಟು ಒಳ್ಳೆಯದಾಯಿತು ನೋಡಿ ! ಬಸ್ ಟಿಕೆಟ್ ಸಿಗದವರಿಗೆಲ್ಲ ಯಾಕೆ ಇಂಥಾ ಐಡಿಯಾ ಹೊಳೆದಿದ್ದರೆ ! ಕೊನೆಯದಾಗಿ ಕಮಲ್ ಹಾಸನ್, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಕಂಡಕ್ಟರ್ ಆಗಿ ಟಿಕೆಟ್ ಹಂಚುತ್ತಾ, ಹಾಡುವ ಮುಂದೆ ಬನ್ನಿ..ಮುಂದೆ ಬನ್ನಿ..ಜೀವನದಲ್ಲಿ ಇನ್ನಾದರೂ ಮುಂದೆ ಬನ್ನಿ..ಹಾಡು ನೆನಪಾಗುತ್ತೆ.