Saturday, 16 June 2012

ಬೆಂಕಿಯಲ್ಲಿ ಅರಳಿದ ಯುವತಿಯೊಬ್ಬಳ ಯಶೋಗಾಥೆ.


ಇದು ಅಕ್ಷರಶಃ ಬೆಂಕಿಯಲ್ಲಿ ಅರಳಿದ ಯುವತಿಯೊಬ್ಬಳ ಯಶೋಗಾಥೆ. ಅವಳ ಕಥೆಯನ್ನು ಓದಿದರೆ ಸಾಕು. ಆಕೆ ಎದುರಿಸಿದ ಕಷ್ಟಕಾರ್ಪಣ್ಯಗಳೆದುರು ನಮ್ಮ ನಿಮ್ಮ ಸಂಕಷ್ಟಗಳು ಏನೇನೂ ಅಲ್ಲ ಎಂಬುದು ಗೊತ್ತಾಗುತ್ತದೆ ! ಅದು 2000ನೇ ಇಸವಿಯ ಸೆಪ್ಟೆಂಬರ್ 25. ಫಿಲಿಪ್ಪೀನ್ಸ್‌ನ ಜಾಂಬೋನ್ಗಾ ಎಂಬಲ್ಲಿ 11 ವರ್ಷದ ಬಾಲಕಿ ಮಾರ್ಸಿಯಲ್ ಅಪಾತನ್ ಎಂದಿನಂತೆ ಚಿಕ್ಕಪ್ಪನ ಜತೆಗೆ ನೀರು ತರಲು ಹೋಗಿದ್ದಳು. ಆ ದಾರಿಯಲ್ಲಿ ನಾಲ್ವರು ಅಡ್ಡಗಟ್ಟಿದರು. ಅವರ ಕೈಯಲ್ಲಿ ಉದ್ದನೆಯ ಮಚ್ಚುಗಳಿದ್ದವು. ಆಕೆಯ ಚಿಕ್ಕಪ್ಪನಿಗೆ ನೆಲಕ್ಕೆ ಕತ್ತು ಬಗ್ಗಿಸಲು ಹೇಳಿದರು. ತಕ್ಷಣ ಕುತ್ತಿಗೆಗೆ ಇರಿದು ಹತ್ಯೆಗೈದರು. ಮಾರ್ಸಿಯಲ್‌ಗೆ ಭಾರಿ ಆಘಾತವಾಗಿತ್ತು. ಯಾಕೆಂದರೆ ಆಕೆಯ ಚಿಕ್ಕಪ್ಪನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದವರು ಬೇರಾರೂ ಆಗಿರಲಿಲ್ಲ, ಆಕೆಯ ನೆರೆ ಮನೆಯವರೇ ಆಗಿದ್ದರು. ಅವಳು ಅಲ್ಲಿಂದ ತಪ್ಪಿಸಿಕೊಳ್ಳಲು ಓಡಿದಳು. ಆದರೆ ಆ ರಕ್ಕಸರು ಅಟ್ಟಿಸಿಕೊಂಡು ಬಂದರು. ಪಾಪ.." ಆಕೆ ಅಳುತ್ತಲೇ..ಪ್ಲೀಸ್ ನನ್ನನ್ನು ಕೊಲ್ಲಬೇಡಿ..ದಯವಿಟ್ಟು ಕರುಣೆ ತೋರಿ..’ ಎಂದು ಅಂಗಲಾಚಿದಳು. ಆದರೆ ದುಷ್ಕರ್ಮಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆಯ ಕುತ್ತಿಗೆಗೆ ಇರಿದರು. ಮಾರ್ಸಿಯಲ್ ಪ್ರಜ್ಞಾಶೂನ್ಯಳಾಗಿ ಬಿದ್ದಳು. ಆಕೆಗೆ ಪ್ರಜ್ಞೆ ಮರುಕಳಿಸಿದಾಗ ಸುತ್ತಮುತ್ತ ರಕ್ತದ ಕೋಡಿ ಹರಿದಿತ್ತು. ಸುತ್ತಮುತ್ತ ದುಷ್ಟರ ಕಾಲುಗಳನ್ನು ಕಂಡಳು. ಸ್ವಲ್ಪ ಹೊತ್ತಿನಲ್ಲಿ ಈಕೆ ಸತ್ತಿರುವಳೆಂದು ಭಾವಿಸಿ ಅವರೆಲ್ಲ ಹೊರಟರು. ಅವರು ಹೋದ ನಂತರ ಮಾರ್ಸಿಯಲ್ ಎದ್ದು ಮನೆಯ ಕಡೆಗೆ ಓಡಿದಳು. ದಾರಿಯಲ್ಲಿ ಆಕೆ ತನ್ನೆರಡೂ ಹಸ್ತಗಳು ಬಿದ್ದಿರುವುದನ್ನು ಗಮನಿಸಿದಳು. ಪಾತಕಿಗಳು ಅವಳ ಎರಡೂ ಹಸ್ತಗಳನ್ನು ಕಡಿದಿದ್ದರು. ಆಕೆ ಅಳುತ್ತಲೇ ಓಡಿದಳು. ಕೆಲವು ಸಲ ತಲೆ ತಿರುಗಿ ಬಿದ್ದಳು. ಪ್ರಜ್ಞೆ ಮರಳಿದಾಗ ಮತ್ತೆ ಎದ್ದು ಓಡಿದಳು. ಮನೆಗೆ ಸಮೀಪ ಬಂದು ಅಮ್ಮನನ್ನು ಕೂಗಿದಳು. ಮಗಳ ಎರಡೂ ಕೈಗಳು ಕಡಿದು ರಕ್ತಸಿಕ್ತವಾಗಿದ್ದ ದೃಶ್ಯವನ್ನು ಕಂಡು ಆ ತಾಯಿ ಆಘಾತಗೊಂಡು ತತ್ತರಿಸಿದಳು. ಮಾರ್ಸಿಯಲಳನ್ನು ಕಂಬಳಿಯಲ್ಲಿ ಸುತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೊಂದು ಸಮಸ್ಯೆ ಇತ್ತು. ಮನೆಯಿಂದ ಹೆದ್ದಾರಿಗೆ ಬರಲು 12 ಕಿ.ಮೀ ನಡೆಯಬೇಕು. ಕನಿಷ್ಠ 4 ಗಂಟೆ ನಡೆಯಬೇಕು. ಅಂತೂ ಆಸ್ಪತ್ರೆಗೆ ತಲುಪಿದ ನಂತರ ಪರೀಕ್ಷಿಸಿದ ವೈದ್ಯರು, ಬಾಲಕಿ ಸತ್ತು ಹೋಗುವಳೆಂದು ಅನುಮಾನ ಪಟ್ಟಿದ್ದರು. ಆದರೆ 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಯಿತು. ಕುತ್ತಿಗೆಯ ಸುತ್ತ 25 ಹೊಲಿಗೆ ಹಾಕಲಾಯಿತು. ಪವಾಡ ಸದೃಶ ರೀತಿಯಲ್ಲಿ ಮಾರ್ಸಿಯಲ್ ಬದುಕುಳಿದಳು. ಆದರೆ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ವಿಪರ್ಯಾಸವೆಂದರೆ ಮರುದಿನ ಅವಳ 12ನೇ ಹುಟ್ಟುಹಬ್ಬ. ಆದರೆ ದುರಂತ ಇನ್ನೂ ಮುಗಿದಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಮರಳಿದರೆ, ಗೂಂಡಾಗಳು ಅವರ ಮನೆಗೆ ಬೆಂಕಿ ಇಟ್ಟು ಕರಕಲಾಗಿಸಿದ್ದರು. ಮಾರ್ಸಿಯಲ್ ಕುಟುಂಬಕ್ಕೆ ಆಸ್ಪತ್ರೆಯ ಶುಲ್ಕಗಳನ್ನು ಭರಿಸುವ ಚೈತನ್ಯ ಇರಲಿಲ್ಲ. ಬಡವರಾದ ಅವರಿಗೆ ಅತ್ತ ಮನೆಯೂ ಭಸ್ಮವಾಗಿತ್ತು. ವಿಧಿ ಹೀಗೆ ಕಷ್ಟಗಳ ಮಳೆಯನ್ನೇ ಸುರಿಸಿತ್ತು ಆ ಬಡ ಕುಟುಂಬದ ಮೇಲೆ. ಆದರೆ ಭಗವಂತ ಕಷ್ಟದಲ್ಲಿರುವವರನ್ನು ಕಾಪಾಡಲು ತನ್ನ ಸಹವರ್ತಿಗಳನ್ನು ಕಳಿಸುತ್ತಾನಾ ? ಗೊತ್ತಿಲ್ಲ. ಆದರೆ ಆರ್ಚ್ ಬಿಷಪ್ ಆಂಟೋನಿಯೊ ಲೆಡೆಸ್ಮಾ, ಈ ಬಡ ಕುಟುಂಬದ ಕರುಣಾಜನಕ ಕತೆಯನ್ನು ಕೇಳಿ ಮಮ್ಮುಲ ಮರುಗಿದರು. ದೂರದ ಸಂಬಂಧಿಯೂ ಆಗಿದ್ದ ಅವರು ಆಸ್ಪತ್ರೆಯ ಶುಲ್ಕಗಳನ್ನು ಭರಿಸಿದರು. ಜತೆಗೆ ದುಷ್ಕರ್ಮಿಗಳನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದರು. ಆ ಪಾತಕಿಗಳನ್ನು ಜೈಲಿಗೆ ಅಟ್ಟಲಾಯಿತು. ನಂತರ ಮಾರ್ಸಿಯಲ್ ಕಥೆ ಏನಾಯಿತು..ಗೊತ್ತಾ ? ಈಗ ಹುಬ್ಬೇರಿಸುವ ಸರದಿ ನಿಮ್ಮದು...!!! ಮಾರ್ಸಿಯಲ್ ಎರಡೂ ಕೈಗಳು ತನಗಿಲ್ಲವೆಂದು ಅಳುತ್ತಾ ಕುಗ್ಗಿ ಹೋಗಲಿಲ್ಲ. ವಿಶಿಷ್ಟ ಚೇತನರ ಮಕ್ಕಳ ಶಾಲೆಯಲ್ಲಿ ಓದು ಮುಂದುವರಿಸಿದಳು. ಆಕೆಯ ಉದ್ಯಮಶೀಲತೆ ಆಗಲೇ ಬೆಳೆಯುತ್ತಿತ್ತು. ಕಂಪ್ಯೂಟರ್ ಓದಿನಲ್ಲೂ ಪರಿಣತಿ ಪಡೆದಳು. 2008ರಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಳು. ಕರ ಕುಶಲ ಕಲೆಯಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿದಳು. 2011ರಲ್ಲಿ ಚೆಫ್ ಆಗಿ ಶಿಕ್ಷಣ ಪೂರೈಸಿದಳು. ಹೌದು. ಈಗ ಆಕೆ ಹಸ್ತವಿಲ್ಲದಿದ್ದರೂ ಅಡುಗೆಯಲ್ಲಿ ತಜ್ಞಳೆನಿಸಿದ್ದಾಳೆ ! ನೋಡಿ..ಆಕೆ ತನ್ನ ಕನಸುಗಳನ್ನು ನನಸು ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ!! ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ..!!