Friday, 31 July 2009

ದೇವ ದಾಸಿಯರ ವ್ಯಥೆ ದೂರವಾಗಲಿ ದೇವಾ..

ಹುಟ್ಟಿ ಬಂದೆ ಎಲ್ಲವ್ವನಾಗಿ..
ನಿನ್ನ ಮದುವೆ ಮಾಡಿ ಕೊಟ್ಟರು ಜಮದಗ್ನಿಗೆ..
ನಿನ್ನ ತಾಯಿ ಭೋಗಾವತಿ, ನಿನ್ನ ತಂದೆ ರೇಣುಕ ರಾಜ..
ಇವರ ಹೊಟ್ಟೆಲಿ ಹುಟ್ಟಿ ಬಂದೆ ಎಲ್ಲವ್ವನಾಗಿ...
ಬಾಗಲಕೋಟದ ರಣ ಬಿಸಿಲಿನಲ್ಲಿ ದೇವ ದಾಸಿ ಎಲ್ಲವ್ವ ಚೌಡಿಕೆ ಹಾಡುತ್ತಾ ಅಲೆಯುತ್ತಾಳೆ. ಆಕೆ ಅಸ್ವಸ್ಥಗೊಂಡಿರುವುದನ್ನು ಆಕೆಯ ಗುಳಿ ಬಿದ್ದ ನಿಸ್ತೇಜ ಕಣ್ಣುಗಳೇ ಸೂಚಿಸುತ್ತವೆ. ಬಾಳ ಸಂಜೆಯಲ್ಲಿ ಭಿಕ್ಷೆ ಬೇಡುವ ಅವಳ ಬದುಕು ಬೀದಿ ಪಾಲು.
ರಾಯಭಾಗದಲ್ಲಿ ಇತ್ತೀಚೆಗೆ ಒಂಬತ್ತು ಮಂದಿ ಬಾಲಕಿಯರನ್ನು ಬಲವಂತವಾಗಿ ದೇವದಾಸಿ ಪದ್ಧತಿಗೆ ತಳ್ಳಲಾಯಿತು. ಅವರಲ್ಲಿ ಬಹುತೇಕ ಮಂದಿ ೧೬ ವರ್ಷ ದಾಟದ ಬಾಲೆಯರು. ಇಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದೇವದಾಸಿಯರ ಸಂಖ್ಯೆಯಲ್ಲಿ ಇಳಿಮುಖವಾಗಿರಬಹುದು. ಆದರೆ ಪಿಡುಗು ಇವತ್ತಿಗೂ ದೂರವಾಗಿಲ್ಲ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ದೇವದಾಸಿಯರ ಸಂಖ್ಯೆ ಸಹಸ್ರಾರು.ರಾಜ್ಯ ಸರಕಾರದ ಪುನರ್ವಸತಿ ಯೋಜನೆ ಆರಂಭವಾಗಿ ದಶಕವೇ ಕಳೆದರೂ ಅದರ ಪ್ರಯೋಜನ ಸಂತ್ರಸ್ತರಿಗೆ ತಲುಪಿಲ್ಲ. ಹೀಗಾಗಿ ಅಮಾಯಕ ದೇವದಾಸಿಯರ ವ್ಯಥೆ ಕರ್ನಾಟಕದ ಇತರ ಭಾಗಗಳನ್ನು ತಟ್ಟುತ್ತಿದೆ.
ಬಾಗಲಕೋಟದ ಅದೆಷ್ಟೋ ಮನೆಗಳನ್ನು ಕೇಳಿ. ಮುಂಬಯಿಯ ಕಾಮಾಟಿಪುರಕ್ಕೆ ಬಾಲಕಿಯರು ಸಾಗಣೆಯಾದ, ನಂತರದ ಅವರ ಚಿಂತಾಜನಕ ಕಥೆಗಳು ಸುರುಳಿ ಬಿಚ್ಚಿಕೊಳ್ಳುತ್ತದೆ. ದೇವದಾಸಿ ಪಿಡುಗು ಇರುವ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳನ್ನು ಮುಂಬಯಿಗೆ ಸಾಗಣೆ ಮಾಡುವುದು ಆ ಭಾಗದಲ್ಲಿ ರಟ್ಟಾಗಿರುವ ಗುಟ್ಟು. ಇಲ್ಲಿ ಬಾಲ್ಯ ವಿವಾಹ ನಡೆದರೆ ಕೇಳುವರಿಲ್ಲ. ಹುಡುಗ ಯುವಕನಾದ ನಂತರ ಒಪ್ಪದಿದ್ದರೆ ಸೋಡಾ ಚೀಟಿ. ಆಕೆ ಕಳ್ಳ ಸಾಗಣೆಯಾಗುತ್ತಾಳೆ. ಕೆಲವೊಮ್ಮೆ ಯುವತಿಯನ್ನು ಹತ್ತಿರದ ಸಂಬಂಧಿಕರೇ ವಿವಾಹವಾಗುತ್ತಾರೆ. ನಂತರ ಯಥಾಪ್ರಕಾರ ಸೋಡಾಚೀಟಿ. ಯುವತಿಯ ಭವಿಷ್ಯ ಮಾತ್ರ ಕರಾಳ.
ಸಾಕ್ಷ್ಯ ಸಿಗೋದು ಕಷ್ಟ
ಕಾಯಿದೆಯ ಪ್ರಕಾರ ಯಾರನ್ನಾದರೂ ದೇವದಾಸಿ ಪ್ರಕರಣದಡಿಯಲ್ಲಿ ಬಂಧಿಸಿದರೆ ಸೂಕ್ತ ಸಾಕ್ಷ್ಯಾಧಾರ ಹುಡುಕುವುದು ಕಷ್ಟ. ದೇವದಾಸಿ ಪದ್ಧತಿಯ ಅನ್ವಯ ಮುತ್ತು ಕಟ್ಟುತ್ತಿದ್ದರು ಎಂಬುದನ್ನು ಸಾಬೀತುಪಡಿಸಬೇಕು. ಆದರೆ ಕಟ್ಟಿದ ಮುತ್ತನ್ನು ಕ್ಷಣದಲ್ಲೇ ಕಿತ್ತು ಹಾಕಬಹುದು. ಅಲ್ಲಿಗೆ ಸಾಕ್ಷ್ಯ ನಾಶವಾದಂತೆಯೇ. ಆದ್ದರಿಂದಲೇ ಕಾನೂನಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗಿರುವ ಉದಾಹರಣೆಗಳಿಲ್ಲ.
ದೇವದಾಸಿಯರ ಮಕ್ಕಳೂ ಎಂಥ ಸಂಕಟ, ಅವಮಾನ ಎದುರಿಸುತ್ತಾರೆ ನೋಡಿ. ಶಾಲೆಯಲ್ಲಿ ಹೇಳಲು ತಂದೆಯ ಹೆಸರು ಗೊತ್ತಿಲ್ಲ. ತಾಯಿಯ ಹೆಸರನ್ನು ಮಾತ್ರ ಹೇಳಬೇಕು. ಇದರಿಂದ ಮಗು ಚಿಂತೆಗೀಡಾಗುತ್ತದೆ.
ಇನ್ನೊಂದು ಅಂಶವನ್ನು ಗಮನಿಸಬೇಕು. ಎಲ್ಲ ದೇವದಾಸಿಯರೂ ವೆಶ್ಯಾವೃತ್ತಿ ಅನುಸರಿಸುವುದಿಲ್ಲ. ಮನೆಯಲ್ಲಿಯೇ ಹೆತ್ತವರ ಜತೆಗಿದ್ದು ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡು ಕುಟುಂಬಕ್ಕೆ ಆಧಾರವಾಗುವವರೂ ಇದ್ದಾರೆ. ಮನೆಯಲ್ಲಿ ಅವರಿಗೆ ಗಂಡು ಮಕ್ಕಳಂತೆ ಸಮಾನ ಅಧಿಕಾರ, ಆಸ್ತಿಯ ಹಕ್ಕಿರುತ್ತದೆ.
ದೇವದಾಸಿ ಪದ್ಧತಿ ಚಾಲ್ತಿಯಲ್ಲಿರುವ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿಯೂ ವಿಭಿನ್ನ ಸಮಸ್ಯೆಗಳಿವೆ. ಸಾಂಗ್ಲಿ, ಸತಾರಾ, ಸೊಲ್ಲಾಪುರ, ಬೀದರ‍್ , ಬಾಗಲಕೋಟ ಮುಂತಾದ ಕಡೆಗಳಲ್ಲಿ ಸಂದರ್ಭಾನುಸಾರ ಜನ ವಲಸೆ ಹೋಗುವುದು ಸಾಮಾನ್ಯ. ಬಾಗಲಕೋಟದಲ್ಲಿ ಕಬ್ಬು ಅರೆಯುವ ಅವಧಿ ಸಮೀಪಿಸಿದಾಗ ಇತರ ಕಡೆಗಳಿಂದ ಇಲ್ಲಿಗೆ ಕಾರ್ಮಿಕರು ವಲಸೆಯಾಗುತ್ತಾರೆ. ಅರೆದಾದ ನಂತರ ಗಣಿ ಕೆಲಸಕ್ಕಾಗಿ ಪುನಃ ಬೇರೆಡೆಗೆ ವಲಸೆ. ಈ ಎಲ್ಲ ಬದಲಾವಣೆಗಳು ಅವರ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಇನ್ನು ಮಹಿಳೆಯರು ಮತ್ತು ಬಾಲಕಿಯರ ಕಳ್ಳ ಸಾಗಣೆ, ಬಾಲ್ಯ ವಿವಾಹ, ದೇವದಾಸಿ ಬಗ್ಗೆ ಗ್ರಾಮೀಣ ಜನ ಹೊಂದಿರುವ ಕುರುಡು ನಂಬಿಕೆ ಹೋಗಲಡಿಸುವ ಕಾರ್ಯ ಕೂಡ ಅಷ್ಟೊಂದು ಸುಲಭವಲ್ಲ. ಈ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಲು ಗ್ರಾಮವಾಸಿಗಳ ಮನೆ ಮನೆಗೆ ತೆರಳಿದ್ದ ವಿವಿಧ ಸೇವಾ ಸಂಸ್ಥೆಗಳ ಕಾರ್ಯಕರ್ತರು ನಾಯಿಯಿಂದ ಕಚ್ಚಿಸಿಕೊಂಡದ್ದೂ ಇದೆ. ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದ ಕಾರ್ಯಕರ್ತನ ಮೇಲೆ ಗ್ರಾಮವೊಂದರಲ್ಲಿ ನಾಯಿಗಳನ್ನು ಛೂ ಬಿಡಲಾಯಿತು. ಆತ ಮರವನ್ನೇರಿದ. ಮರದ ಕೆಳಗೆ ಗ್ರಾಮಸ್ಥರು ಮತ್ತು ನಾಯಿಗಳ ಕೂಗಾಟ. ಆತನ ಬಳಿ ಮೊಬೈಲ್ ಇದ್ದರಿಂದ ಸ್ನೇಹಿತರಿಗೆ ಕರೆ ಮಾಡಿ ಕರೆಯಿಸಿಕೊಂಡು ಬಚಾವಾದ.
ಮುಂಬಯಿ ಪ್ರಾಂತ್ಯ ಹಾಗೂ ಮದ್ರಾಸ್ ಸರಕಾರ ಜಾರಿಗೊಳಿಸಿದ ದೇವದಾಸಿ ನಿಷೇಧ ಕಾಯಿದೆಯನ್ನೇ ಮುಂಬಯಿ ಕರ್ನಾಟಕ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. ಇದನ್ನು ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ ) ಕಾಯಿದೆ -೧೯೮೨ ಎಂದು ಕರೆಯಲಾಗಿದೆ. ಇದೇ ಕಾಯಿದೆ ಸಮಗ್ರ ಕರ್ನಾಟಕಕ್ಕೂ ಅನ್ವಯ. ಯಾವುದೇ ವಯೋಮಿತಿಯ ಮಹಿಳೆಯನ್ನು ದೇವದಾಸಿ ಹೆಸರಿನಲ್ಲಿ ಯಾವುದೇ ಆರಾಧನೆ, ದೇವತೆ, ವಿಗ್ರಹ, ದೇವಾಲಯ, ಸಂಸ್ಥೆಗಳಿಗೆ ಒಪ್ಪಿಸುವುದು ಕಾನೂನು ಬಾಹಿರ. ದೇವದಾಸಿ ಪದ್ಧತಿಗೆ ಪ್ರಚೋದನೆ ನೀಡಿದವರಿಗೆ ಕನಿಷ್ಠ ಐದು ವರ್ಷ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಬಹುದು. ಮಹಿಳೆಯನ್ನು ದೇವದಾಸಿ ಪದ್ಧತಿಗೆ ದೂಡುವ ಆಕೆಯ ಹೆತ್ತವರು ,ಪಾಲಕರು, ಸಂಬಂಧಿಕರು ದಂಡನಾರ್ಹರು.
ಪರಿಹಾರ ಏನು ?
ಈ ಪದ್ಧತಿ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಿದ ಮುಧೋಳ ತಾಲೂಕಿನ ಕುಗ್ರಾಮ ಕಲಾದಗಿಯ ಮಾಜಿ ದೇವದಾಸಿಯರು ಅದರಲ್ಲಿ ಯಶಸ್ಸಿನತ್ತ ಸಾಗುತ್ತಿದ್ದಾರೆ. ಕಲಾದಗಿಯಲ್ಲಿ ಅಸ್ತಿತ್ವದಲ್ಲಿರುವ ರೇಣುಕಾದೇವಿ ಮಹಿಳಾ ಸಂಘದಲ್ಲಿ ಎಲ್ಲ ಸದಸ್ಯೆಯರು ಪ್ರತಿ ವಾರಕ್ಕೆ ೧೦ ರೂ.ನಂತೆ ಉಳಿತಾಯ ಆರಂಭಿಸಿದರು. ನಂತರ ೨೦ ಸಾವಿರ ರೂ. ಸಾಲ ಪಡೆದು ಎರಡು ಎಮ್ಮೆ ಸಾಕಿದರು. ಹಾಲು ಮಾರಿ ಬಂದ ಆದಾಯದಿಂದ ಸಾಲವನ್ನೂ ತೀರಿಸಿದರು. ಮತ್ತೆ ೪೦ ಸಾವಿರ ರೂ. ಸಾಲ ಪಡೆದು ೬ ಎಮ್ಮೆ ಪಡೆದರು. ಇನ್ನೂ ೫ ಲಕ್ಷ ರೂ. ಸಾಲಕ್ಕೆ ಅವರಿಗೆ ಅನುಮೋದನೆ ಸಿಕ್ಕಿದೆ.
ಬೀಳಗಿಯಲ್ಲಿ ಈ ಹಿಂದೆ ದೇವದಾಸಿಯಾಗಿದ್ದ ಮಹಿಳೆಯೊಬ್ಬರು ಈಗ ಪೊಲೀಸ್‌ ಸಿಬ್ಬಂದಿ. ಜಮಖಂಡಿಯ ಬಂಗಾರವ್ವ ಕೂಡ ವೇಶ್ಯಾವೃತ್ತಿಯ ಜಾಲದಿಂದ ಹೊರಬಂದು ವ್ಯಾಪಾರ ಮಾಡುತ್ತ ದಿನಕ್ಕೆ ೨೦೦ ರೂ. ಸಂಪಾದಿಸುತ್ತಾಳೆ.
ರಾಜ್ಯದಲ್ಲಿ ದೇವದಾಸಿಯರ ಪುನರ್ವಸತಿ ಯೋಜನೆ ೧೯೯೧ರಿಂದ ಆರಂಭವಾಗಿದೆ. ಈ ಯೋಜನೆಯನ್ವಯ ದೇವದಾಸಿಯರಿಗೆ ಒಂಬತ್ತು ಸಾವಿರ ರೂ. ಸಹಾಯ ಧನ ಮತ್ತು ಆರು ಸಾವಿರ ರೂ. ಸಾಲ ಸಿಗುತ್ತದೆ. ಆದರೆ ಈ ಯೋಜನೆ ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ.
ದೇವದಾಸಿ ಪಿಡುಗಿನಿಂದ ಹೊರಬಂದ ಮಹಿಳೆಯರಿಗೆ ಜೀವನೋಪಾಯಕ್ಕೆ ಒಂದು ಉದ್ಯೋಗ ಬೇಕು. ಹೊಸ ಉದ್ಯೋಗಕ್ಕೆ ತರಬೇತುಗೊಳಿಸಬೇಕು. ಇಲ್ಲದಿದ್ದರೆ ಮತ್ತೆ ಸಮಸ್ಯೆಯಾಗುತ್ತದೆ. ಬೆಳಗಾವಿಯಲ್ಲೊಮ್ಮೆ ಹಲವು ಮಂದಿ ದೇವದಾಸಿಯರು ಸೇರಿ ಖಾದಿ ಉತ್ಪನ್ನಗಳ ಘಟಕವನ್ನು ಸ್ಥಾಪಿಸಿದರು. ಆದರೆ ಖಾದಿ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಲ್ಲ ಎಂದು ಖಾದಿ ಮಂಡಳಿ ಆ ಉತ್ಪನ್ನಗಳನ್ನು ಖರೀದಿಸಲಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲರಿಯದ ದೇವದಾಸಿಯರು ಮತ್ತೆ ವೇಶ್ಯಾವೃತ್ತಿಗೆ ಇಳಿದರು.
ಬಡತನ ಮತ್ತು ಅಜ್ಞಾನ ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ಇದೆಲ್ಲ ಕೆಲವು ಸ್ಯಾಂಪಲ್ ಗಳು.

Thursday, 30 July 2009

ಟ್ಯಾಲೆಂಟ್ ಇದೆ ಅಂತ ಕುಂತರೆ ಯಾರೂ ಕರೆಯೊಲ್ಲ

ಸೂಪರ್‌ ಆಗಿದೆ ಎಂಬುದನ್ನು ತೋರಿಸಲು ಬಳಸುವ ಕೈ ಚಿಹ್ನೆಯೇ ಆ ಚಿತ್ರದ ಹೆಸರು.
ಹಾಗಿದ್ದರೆ ಅದರ ನಿರ್ದೇಶಕರಾರು ಆಗಿರಬಹುದು ?
ನಿಮ್ಮ ಊಹೆ ಸರಿಯಾಗಿದೆ. ಬಿಡಿ. ಅಂಥ ಚಿತ್ರ ಉಪ್ಪಿಯದ್ದೇ. ಹೌದು. ಸುದೀರ್ಘ ಕಾಯುವಿಕೆಯ ನಂತರ ರಿಯಲ್ ಸ್ಟಾರ‍್ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಪತ್ರಿಕೆಗಳಲ್ಲಿ ಅವರ ಸಿನಿಮಾದ ಹೆಸರು (ಕೈ ಚಿಹ್ನೆ) ಮಿಂಚಲು ಶುರುವಾಗಿದೆ. ಉಪ್ಪಿ ಅಭಿಮಾನಿಗಳ ನಿರೀಕ್ಷೆ, ಕುತೂಹಲ ಮುಗಿಲು ಮುಟ್ಟಿದೆ. ಅಂಥ ಉಪ್ಪಿ ಜತೆ ೩ ವರ್ಷಗಳ ಹಿಂದೆ ವಿಜಯ ಕರ್ನಾಟಕಕ್ಕಾಗಿ ಸಂದರ್ಶನ ನಡೆಸಿದ್ದೆ. ಆಗ ಸಿನಿಮಾದ ಸ್ಕಿಪ್ಟ್ ರಚಿಸುವುದು ಹೇಗೆ ಎಂಬುದರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆ. ಸುಮಾರು ಅರ್ಧ ಗಂಟೆ ಹೊತ್ತು ಮನಮುಟ್ಟುವಂತೆ ವಿವರಿಸಿದ್ದರು. ಆವತ್ತು ಅವರು ಹೇಳಿದ್ದು ಸಿನಿಮಾ ಚಿತ್ರಕಥೆ, ಸಂಭಾಷಣೆ ಬರೆಯಲು ಹೊರಡುವವರಿಗೆ ಯಾವತ್ತೂ ಟಿಪ್ಸ್ ಆಗಬಲ್ಲುದು..
ಕತೆಯಲ್ಲಿ ದಮ್ಮಿರಲಿ...
ನಂಗೆ ಟ್ಯಾಲೆಂಟ್ ಇದೆ ಅಂತ ಕುಂತರೆ ಯಾರೂ ಕರೆಯೊಲ್ಲ.
ಹಿಂದೆ ಹತ್ತಾರು ನಿರ್ದೇಶಕರು ಪ್ಯಾಕಪ್ ಮಾಡೋ ತಂಕ ಗಂಟೆಗಟ್ಲೆ ನಾನೂ ಕಾದಿದ್ದೆ. ಬಾಗಿಲು ತಟ್ಟಿದ್ದೆ. ಒಳ್ಳೆ ಬರೆಯೋರು ಸಿಕ್ರೆ ಸಾಕು ಎಂಬ ಪರಿಸ್ಥಿತಿ ಈಗ ಕನ್ನಡದಲ್ಲಿದೆ. ಇಂತಹ ಟೈಮಲ್ಲಿ ಚೆನ್ನಾಗಿ ಪ್ರಯತ್ನ ಪಡಬೇಕು. ಬರೀ ಟ್ಯಾಲೆಂಟ್ ಸಾಲದು. ಅವಕಾಶಗಳ ಕಡೆಗೆ ಅಲೀಬೇಕು...ಅನ್ನುತ್ತಾರೆ ಉಪೇಂದ್ರ.
ಬರೀತಾರೆ ಅಂದ ಮಾತ್ರಕ್ಕೆ ಚೆನ್ನಾಗಿರಬೇಕು ಅಂತ ಇಲ್ವಲ್ಲಾ. ಗೀಚಿದರೆ ಚಿತ್ರಕಥೆಯಾಗಲ್ಲ. ಮನೆಯ ಸೆಕ್ಯುರಿಟಿಯವರ ಕೈಗೆ ನೂರಾರು ಸ್ಕ್ರಿಪ್ಟು ಬರುತ್ತೆ. ಹರಕಲು ಕಾಗದದಲ್ಲಿ ಬರೆದುಕೊಡುವವರೂ ಇದ್ದಾರೆ. ಅದರಲ್ಲೂ ಕಾಗುಣಿತ ತಪ್ಪುಗಳು ಸಿಕ್ಕಾಪಟ್ಟೆ ಇರುತ್ತೆ. ಇದಕ್ಕೆಲ್ಲಾ ಅವರೇ ಬೇಕಾ ಅಂತ ಅನ್ನಿಸುತ್ತೆ.
ರೇಷ್ಮೆ ಹುಳುವಿನಂತೆ..
ನಾನೊಂದು ಕಥೆ ಹೇಳುವೆ. ರೇಷ್ಮೆ ಹುಳು ಇದೆಯಲ್ವಾ...ಹಿಪ್ಪು ನೇರಳೆ ಸೊಪ್ಪನ್ನು ತಿನ್ನುತ್ತಾ ಇರುತ್ತದೆ. ಚಿತ್ರ ಲೇಖಕ ವಿಷಯಗಳನ್ನು ಹಂಗೆ ಸಂಗ್ರಹಿಸುತ್ತಲೇ ಇರಬೇಕು. ಹುಳು ಜ್ವರಕ್ಕೆ ಬೀಳುತ್ತೆ.ಗೂಡು ಕಟ್ಟುತ್ತೆ. ಅದನ್ನು ನೀರಿಗೆ ಹಾಕಿ ಕುದಿಸುತ್ತಾರೆ. ನಂತರ ಹುಳು ನೂಲು ಬಿಡುತ್ತೆ. ನೂಲು ಅಂದದ ರೇಷ್ಮೆ ಸೀರೆಯಾಗಿ ಹುಡುಗಿಯನ್ನು ಅಲಂಕರಿಸಿದಾಗ ಅದಕ್ಕೆ ಸಾರ್ಥಕತೆ ಸಿಗುತ್ತದೆ. ಹಾಗೆಯೇ ಒಬ್ಬ ಲೇಖಕನ ಬರವಣಿಗೆ ಸಿನಿಮಾ ಆಗಿ ತೆರೆಯ ಮೇಲೆ ಡೈಲಾಗು ಬಿದ್ದಾಗ ಪ್ರೇಕ್ಷಕ ಖುಷಿಯಾಗಿ ಸಿಳ್ಳೆ ಹಾಕುತ್ತಾನಲ್ವಾ, ಆವಾಗ ಅವನಿಗೆ ಧನ್ಯತೆ...ಇದೆಲ್ಲ ಒಂದು ಪ್ರೊಸೆಸ್‌..
ಏನು ಮಾಡಬೇಕು ?
ಸಿನಿಮಾ ಸಂಭಾಷಣೆಕಾರ ಸಕ್ಸಸ್‌ ಆಗಬೇಕಾದರೆ ಹೆಚ್ಚೆಚ್ಚು ಸಿನಿಮಾ ನೋಡಬೇಕು. ಮೊದಲ ಸಲ ಸಿನಿಮಾ ನೋಡಿದಾಗ ಕತೆ ಗೊತ್ತಾಗಬಹುದು. ಎರಡನೆಯ ಸಲ ಕಂಡಾಗ ಸೀನ್ ಗಳ ಬಗ್ಗೆ ಅರಿವಾಗುತ್ತದೆ. ಮೂರನೆಯ ಸಲ ನೋಡಿದಾಗ ಸಂಭಾಷಣೆ, ಹಾಡು, ಶಾಟ್‌ ಗಳ ಬಗ್ಗೆ ಒಳನೋಟ ಅರ್ಥವಾಗುತ್ತದೆ. ನಾಲ್ಕನೇ ಸಲ ಇನ್ನೊಂದು ವಿಷ್ಯ ಗೊತ್ತಾಗುತ್ತದೆ. ಹಂಗೆ ಕಲಿಯಬೇಕು....
ನಾರ್ಮಲ್ಲು ಬೋರ‍್
ಸ್ಕ್ರಿಪ್ಟಿನಿಂದಲೇ ಚಿತ್ರ ಗೆಲ್ಲುತ್ತದೆ. ಚಿತ್ರಕಥೆ ಮತ್ತು ಸಂಭಾಷಣೆ ಹೀರೋ ಮೇಲೆ ಅವಲಂಬಿಸಿರುತ್ತದೆ ಎನ್ನುವುದು ಹಿಂದಿನ ಮಾತು. ಈಗ ಅದಕ್ಕೂ ಪ್ರಾಧಾನ್ಯತೆ ಸಿಗುತ್ತಿದೆ. ಚಿತ್ರ ರಿಮೇಕ್ ಆಗಿದ್ದರೂ ಕನ್ನಡಕ್ಕೆ ತರಲು ಲೇಖಕರು ಬೇಕೇ ಬೇಕು. ಹೀಗಾಗಿ ಕನ್ನಡದಲ್ಲಿ ಪ್ರತಿಭಾವಂತರಿಗೆ ಅವಕಾಶ ಇದೆ. ಈ ಫೀಲ್ಡಲ್ಲಿ ಪಳಗಲು ನನಗೆ ಎರಡು ವರ್ಷ ಬೇಕಾಯಿತು.
ಚಿತ್ರದ ಡೈಲಾಗ್ ಯಾವತ್ತೂ ನಾರ್ಮಲ್ ಆಗಿರಕೂಡದು. ಸಾಮಾನ್ಯ ಸಂಭಾಷಣೆ ಬೋರ‍್ ಅನ್ನಿಸಿಬಿಡುತ್ತದೆ.
ಅವಳ ಮೂಗು ಸಂಪಿಗೆಯ ಎಸಳು, ಮೊಗ ಕೆಂದಾವರೆ, ಗಲ್ಲ ಸೇಬಿನ ಹಣ್ಣು ಅಂತ ಬರೆದರೆ ಹಳಸಲು ಅನ್ನಿಸಲ್ವಾ.. ಇದೆಲ್ಲಕ್ಕಿಂತ ವಿಭಿನ್ನವಾಗಿ ಮತ್ತು ಹೊಸ ರೀತಿಯಲ್ಲಿ ಬರೆದು ಬಿಡಬೇಕು...

ನಿರಾಶೆಯಾಗಬೇಕಿಲ್ಲ, ಸಾಗರದಷ್ಟು ಐಡಿಯಾಗಳಿದೆಯಲ್ವಾ !

ಈವತ್ತು ಬೆಳಗ್ಗೆ ದೀಪಕ್ ಸಾಗರ‍್ ಎಂಬುವರು ಭೇಟಿಯಾದರು.
ಯಾವುದೋ ಲೇಖನಕ್ಕೆ ಅಗತ್ಯವಾಗಿದ್ದ ಛಾಯಾ ಚಿತ್ರವನ್ನು ಅವರು ತಂದುಕೊಟ್ಟಿದ್ದರು. ಸಾಮಾನ್ಯವಾಗಿ ವಿಷಯ ಅಷ್ಟಕ್ಕೇ ಮುಗಿಯುತ್ತದೆ. ಎಂದಿನಂತೆ ಫೋಟೋವನ್ನು ಸ್ಕ್ಯಾನ್‌ ಮಾಡಿದ ನಂತರ ವಾಪಸ್‌ ಕೊಟ್ಟು ಕಳಿಸುತ್ತಿದ್ದೆ.
ಆದರೆ ಸಾಗರ‍್ ತಮ್ಮ ಪರಿಚಯ ಮಾಡಿಕೊಟ್ಟ ನಂತರ ಹತ್ತು ಹಲವಾರು ಸ್ವಾರಸ್ಯಕರ ಸಂಗತಿಗಳು ಗೊತ್ತಾಯಿತು. ನಮ್ಮ ಚರ್ಚೆಗೆ ಹಲವು ಆಯಾಮಗಳು ಸಿಕ್ಕಿದವು.
ಸಾಗರ‍್ ಅವರಿಗೆ ಕೆಲಸದ ನಡುವೆ ಸಾಕಷ್ಟು ಸಮಯ ಸಿಗುತ್ತದೆ. (ಮನಸ್ಸು ಮಾಡಿದರೆ ಎಲ್ಲರಿಗೂ ಸಾಕಷ್ಟು ಚಟುವಟಿಕೆಗಳಿಗೆ ಸಮಯದ ಕೊರತೆ ಕಾಡುವುದಿಲ್ಲ ) ಅಂದರೆ ನಿಗದಿತ ಕೆಲಸಗಳನ್ನು ಅವಧಿಗೆ ಮುನ್ನವೇ ಅಚ್ಚುಕಟ್ಟಾಗಿ ಮುಗಿಸಿ, ಸಮಯವನ್ನು ಉಳಿತಾಯ ಮಾಡುವ ಹಾಗೂ, ಹಾಗೆ ಮಿಕ್ಕಿದ ಸಮಯವನ್ನು ಅವರಿಗೆ ಬೇಕಾದ ಚಟುವಟಿಕೆಗಳಲ್ಲಿ ಕಳೆಯಲು ಅವಕಾಶ ಇದೆ.
ಹೀಗೆ ಉಳಿಯುವ ಸಮಯವನ್ನು ಸಾಗರ‍್ ಹಲವಾರು ಸಾಮಾಜಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ಪಿಯುಸಿಯಲ್ಲಿ ಇದ್ದಾಗಲೇ ಅವರೊಂದು ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅಂಧರಿಗೆ ಸಹಾಯ ಮಾಡುವುದು ಅವರ ಸುವರ್ಣದೀಪ ಅಂಧರ ಬಳಗದ ಉದ್ದೇಶ. ಇದನ್ನು ಸಾಧಿಸುವ ವಿಧಾನ ಕುತೂಹಲಕರ.
ಕಲಾವಿದರಿಗೂ ದುಡಿದ ತೃಪ್ತಿ :
ಅವರು ಹೇಳಿದ್ದನ್ನು ಇಲ್ಲಿ ಬರೆದಿದ್ದೇನೆ. ಪ್ರಾಮಾಣಿಕವಾಗಿ ಮಾಡುವುದಿದ್ದರೆ ಮಾದರಿ ಐಡಿಯಾ ಅನ್ನಿಸಿತು. ಸುಮಾರು ಮುನ್ನೂರು ಮಂದಿಯ ತಂಡವೇ ದೀಪಕ್ ಸಾಗರ‍್ ಬಳಿ ಇದೆ. ಅವರಲ್ಲಿ ಎಂಬತ್ತಕ್ಕೂ ಹೆಚ್ಚು ಮಂದಿ ಕಲಾವಿದರು. ಹಾಡುಗಾರರು. ಮತ್ತೆ ಅನೇಕರು ಸಣ್ಣ ಪುಟ್ಟ ಕೆಲಸಗಳನ್ನು ನಿಪುಣರು. ಪ್ರತಿಯೊಬ್ಬರಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮತ್ತು ಆದಾಯ ಸಿಕ್ಕಿದೆ.
ಉದಾಹರಣೆಗೆ ಹಾಡುಗಾರರ ಗುಂಪನ್ನು ನೋಡೋಣ. ಪ್ರತಿ ತಿಂಗಳು ಕನಿಷ್ಠ ಎರಡು ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅಂಧರಲ್ಲಿ ಹಾಡುವ ಪ್ರತಿಭೆಯಿದೆ. ನೂರಾರು ಜನರನ್ನು ಆಕರ್ಷಿಸುತ್ತಾರೆ. ಅಂಧರ ಹಾಡನ್ನು ಆಲಿಸುವ ಮಂದಿ ಉತ್ತೇಜಿಸಲು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸುತ್ತಾರೆ. ಯಾರಿಂದಲೂ ಯಾರೂ ವಂತಿಗೆ ಸ್ವೀಕರಿಸುವುದಿಲ್ಲ. ಪ್ರತಿ ಕಾರ್ಯಕ್ರಮದಲ್ಲೂ ಟಿಕೆಟ್ ಇಡುತ್ತಾರೆ. ಸಿನಿಮಾಗೆ ನಲುವತ್ತೋ, ಐವತ್ತೋ ಕೊಟ್ಟು ಹೋಗುತ್ತೀರಿ. ಹಾಗೆಯೇ ಅಂಧರ ಕಾರ್ಯಕ್ರಮಕ್ಕೆ ಕೊಡಬಹುದಲ್ಲವೇ. ಕಲಾವಿದರಿಗೂ ದುಡಿದು ಸಂಪಾದಿಸಿದ ತೃಪ್ತಿ ಸಿಗುತ್ತದೆ. ಬಂದ ಹಣವನ್ನು ಗುಂಪಿನ ಕಲಾವಿದರು ಹಂಚಿಕೊಳ್ಳುತ್ತಾರೆ.
ಈ ಬಳಗವನ್ನು ಅವರಿನ್ನೂ ನೋಂದಣಿ ಮಾಡಿಸಿಲ್ಲ. ನೋಂದಣಿ ಮಾಡಿಸಿದರೆ ಟ್ರಸ್ಟ್‌ ಮಾಡಿಸಬೇಕು, ಅದರಲ್ಲಿ ನೂರೆಂಟು ನಿಯಮಾವಳಿಗಳ ರಗಳೆ ಇರುತ್ತದೆ. ಟ್ರಸ್ಟ್ ನಲ್ಲಿ ಭಿನ್ನಾಭಿಪ್ರಾಯ ಹೆಚ್ಚಾದರೆ ಸಂಘದ ಅಸ್ತಿತ್ವಕ್ಕೇ ಧಕ್ಕೆಯಾಗುವ ಚಿಂತೆ ಅಂತ ತಾಪತ್ರಯ ಇರುತ್ತದೆ. ಬದಲಿಗೆ ನೋಂದಣಿ ಮಾಡದೇ ಬಳಗವನ್ನು ಕಟ್ಟಿಕೊಂಡು ಅಂಧರಿಗೆ ನೆರವಾಗುವುದು ನಮ್ಮ ಉದ್ದೇಶ ಎನ್ನುತ್ತಾರೆ ದೀಪಕ್.
ಈ ಬಳಗದಲ್ಲಿ ರಾಜ್ಯದ ನಾನಾ ಕಡೆಗಳ ಅಂಧರಿದ್ದಾರೆ. ಅವರೆಲ್ಲ ತಮ್ಮದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಆದ್ದರಿಂದ ಬಳಗದ ಇತರ ಸದಸ್ಯರು ಉತ್ಪಾದಿಸುವ ನಾನಾ ಉತ್ಪನ್ನಗಳಿಗೆ ಎಲ್ಲರೂ ಸೇರಿ ಮಾರುಕಟ್ಟೆ ದೊರೆಯುವಂತೆ ಸಹಕರಿಸುತ್ತಾರೆ.
ಹೌದಲ್ಲವೇ, ನಮ್ಮ ಸಮಾಜದಲ್ಲಿ ಯಾರಿಗಾದರೂ ಉಪಕಾರ ಮಾಡೋಣವೆಂದು ಹೊರಟರೂ ಕೆಲವೊಮ್ಮೆ ನೂರೆಂಟು ಕಾನೂನುಗಳೂ ಅಡ್ಡಿಯಾಗುತ್ತವೆ ! ಹೀಗಿರುವಾಗ ಇಂಥ ಪರಿಹಾರೋಪಾಯಗಳೂ ಇರುತ್ತವೆ ಅಲ್ವಾ !

Wednesday, 29 July 2009

ಪುಷ್ಪಕ ಗೆಲ್ಲುತ್ತೆ ಅಂತ ನಿರ್ದೇಶಕರಿಗೇ ನಂಬಿಕೆ ಇರಲಿಲ್ಲ..

ಅದೊಂದು ಸಿನಿಮಾ ಕನ್ನಡ ಚಿತ್ರರಂಗದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿತ್ತು.
ಕಮಲಹಾಸನ್ ಗೆ ಮರುಜನ್ಮ ಕೊಟ್ಟಿತ್ತು. ಮುಂಬಯಿನಲ್ಲಿ ಶತ ದಿನೋತ್ಸವ ಆಚರಿಸಿತ್ತು. ಬೆಂಗಳೂರಿನಲ್ಲಿ ೫೨ ವಾರ ಓಡಿತ್ತು. ಆದರೆ ಚಿತ್ರದಲ್ಲಿ ಸಂಭಾಷಣೆಯೇ ಇರಲಿಲ್ಲ.
ನಿಜ. ಅದುವೇ ಪುಷ್ಪಕ ವಿಮಾನ...ಅಂಥ ಸಿನಿಮಾವನ್ನು ನಿರ್ಮಿಸಿ ಹಲವಾರು ದಾಖಲೆಗಳನ್ನು ಬರೆದ ನಿರ್ಮಾಪಕರೇ ಶೃಂಗಾರ್‌ ನಾಗರಾಜ್.
೧೯೮೮ರಲ್ಲಿ ಬಿಡುಗಡೆಯಾದ ಸಿನಿಮಾ ಇಂಥ ಅಭೂತಪೂರ್ವ ಯಶಸ್ಸು ಗಳಿಸುತ್ತದೆ ಎಂದು ಯಾರೊಬ್ಬರೂ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಎಲ್ಲ ಚಿತ್ರಗಳೂ ಹಾಗೆಯೇ, ಗೆಲ್ಲುತ್ತೆ ಎಂದುಕೊಂಡೇ ನಿರ್ಮಿಸುತ್ತಾರೆ. ಆದರೆ ಪುಷ್ಪಕ ವಿಮಾನದ ವಿಚಾರದಲ್ಲಿ ಸ್ವತಃ ನಾಯಕ ನಟ ಕಮಲ್ ಹಾಸನ್‌, ನಿರ್ದೇಶಕ ಶ್ರೀನಿವಾಸರಾವ್‌ ಸಿಂಗೀತಂ ಅವರಿಗೆ ಕೂಡ ನಂಬಿಕೆ ಇರಲಿಲ್ಲ.
" ಅದೃಷ್ಟವೂ ನನ್ನ ಕಡೆಗಿತ್ತು. ಹೀಗಿದ್ದರೂ ಚಿತ್ರ ಗೆಲ್ಲುತ್ತೆ ಅಂತ ಒಳ ಮನಸ್ಸು ಹೇಳುತ್ತಿತ್ತು. ಕೊನೆಗೆ ನಾನು ಅಂದುಕೊಂಡದ್ದೇ ನಿಜ ಆಯ್ತು. ಚಿತ್ರಕ್ಕೆ ರಾಷ್ಟ್ರಪತಿಯವರ ಪದಕವೂ ಬಂತು " ಎಂದರು ಶೃಂಗಾರ‍್ ನಾಗರಾಜ್. ಅವರಿಗೀಗ ವಯಸ್ಸು ಎಪ್ಪತ್ತೊಂದಾಗಿದೆ. ಹೀಗಿದ್ದರೂ ಅವರ ಉತ್ಸಾಹ ಕಮ್ಮಿಯಾಗಿಲ್ಲ. ನಿನ್ನೆ ಅವರನ್ನು ಸುಮಾರು ಮುಕ್ಕಾಲು ಗಂಟೆ ಮಾತನಾಡಿಸಿದೆ. ಇನ್ನೂ ದಿನಪೂರ್ತಿ ಮಾತನಾಡಲೂ ಅವರು ಸಿದ್ಧರಿದ್ದಂತೆ ಅನ್ನಿಸುತ್ತಿತ್ತು.
ಆದರೆ ಕಾಲದ ಅಭಾವ. ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಅಷ್ಟು ಹೊತ್ತು ಅವರು ಪುಷ್ಪಕ ವಿಮಾನದ ನಿರ್ಮಾಣದ ಹಿಂದಿನ ಕಥೆಯನ್ನು ಹೇಳುತ್ತಿದ್ದರೆ ಅದುವೇ ಮತ್ತೊಂದು ಸಿನಿಮಾಗೆ ಆಗುವಷ್ಟಿತ್ತು.
ಬಚ್ಚನ್ ಗೆ ತೋರಿಸಿದರು
ಮೂಲತಃ ಛಾಯಾಗ್ರಾಹಕರಾಗಿದ್ದ ಶೃಂಗಾರ‍್ ನಾಗರಾಜ್ ಅವರಿಎಗ ಸಿನಿಮಾ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಲೋಚನೆ ಕೊರೆಯುತ್ತಿತ್ತು. ಕೊನೆಗೆ ನಿರ್ದೇಶಕ ಶ್ರೀನಿವಾಸ ರಾವ್ ಸಿಂಗೀತಂ ಅವರ ಬಳಿ ಇಂಗಿತವನ್ನು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಸಿಂಗೀತಂ ಹತ್ತಿರ ಮೂಕಿ ಚಿತ್ರದ ಕಥಾ ವಸ್ತು ಇತ್ತು. ಏಳೆಂಟು ವರ್ಷಗಳಿಂದಲೂ ಯಾರೊಬ್ಬರೂ ಆ ಕಥಾ ಹಂದರವನ್ನು ಚಿತ್ರ ಮಾಡಲು ಒಪ್ಪಿರಲಿಲ್ಲ. ಮಾತಿಲ್ಲದ ಚಿತ್ರ ಮಾಡಿದರೆ ಕೈಗೆ ಚಿಪ್ಪೇ ಗತಿ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಆದರೆ ಅದನ್ನು ಕೇಳಿದ ಶೃಂಗಾರ‍್ ನಾಗರಾಜ್‌ ತಾವೇ ಒಪ್ಪಿಕೊಂಡರು.
ಸಂಭಾಷಣೆ ಇಲ್ಲದಿದ್ದರೇನಂತೆ, ಅದುವೇ ಪ್ಲಸ್ ಪಾಯಿಂಟ್‌ ಆಗಲಿದೆ. ಹಾಗಾದರೆ ಚಿತ್ರದಲ್ಲಿ ಬೇರೇನಿದೆ ? ಹೇಗಿರುತ್ತದೆ ಅಂತ ನೋಡಲು ಜನ ಬರುತ್ತಾರೆ ಎಂಬುದು ಶೃಂಗಾರ ನಾಗರಾಜ್ ಭಾವಿಸಿದ್ದರು. ವಿಶೇಷ ಇದೆ ಎಂದು ಭಿಕ್ಷುಕನ ಪಾತ್ರ ಇರಬೇಕೆಂದರು. ಚಿತ್ರ ಬಿಡುಗಡೆಗೆ ಮುನ್ನ ಅಮಿತಾಭ್ ಬಚ್ಚನ್ ಗೆ ತೋರಿಸಿದರು. ಹೀಗಿದ್ದರೂ ಹುಂಬತನದಿಂದಲೇ ರಿಸ್ಕ್ ತೆಗೆದುಕೊಂಡೆ. ಒಂದುವೇಳೆ ಚಿತ್ರ ಸೋತಿದ್ದರೆ ನಾನು ಮುಳುಗುತ್ತಿದ್ದೆ ಎಂದು ನಾಗರಾಜ್‌ ಹೇಳಿದರು.
ಹೆಗ್ಗಡೆ ನೆರವು
ಮತ್ತೊಂದು ಕಡೆ ಯಾರೂ ಮುಟ್ಟದಿದ್ದ ಕಥೆಯನ್ನು ಸಿನಿಮಾ ಮಾಡಲು ಬಕರಾ ಸಿಕ್ಕಿದ್ದಾನೆ ಎಂಬ ಭಾವ ನಿರ್ದೇಶಕರಲ್ಲಿತ್ತು. ಹೀಗಾಗಿ ಅವರೂ ಒಂದು ಕೈ ನೋಡಲು ಒಪ್ಪಿದರು. ಸ್ವಂತ ದುಡ್ಡು, ಪತ್ನಿ ನೀಡಿದ ಆಭರಣ, ಧರ್ಮಸ್ಥಳದ ಹೆಗ್ಗಡೆಯವರ ನೆರವು ಮುಂತಾದ ವಿಧಾನಗಳಿಂದ ಹಣಕಾಸು ಒಟ್ಟು ಮಾಡಿದ್ದ ನಾಗರಾಜ್‌ ಕೊನೆಗೂ ಚಿತ್ರವನ್ನು ಹೊರತರುವಲ್ಲಿ ಸಫಲರಾದರು. ನಂತರ ನಡೆದದ್ದು ಭಾರತೀಯ ಚಿತ್ರ ರಂಗದಲ್ಲಿಯೇ ಇತಿಹಾಸ. ಅಂದಹಾಗೆ ಆವತ್ತು ಐವತ್ತು ಲಕ್ಷ ರೂ. ಬಜೆಟ್ಟಿನ ಚಿತ್ರ ಅದಾಗಿತ್ತು. ಕಮಲ್‌ ಹಾಸನ್ ಗೆ ೫ ಲಕ್ಷ ಸಂಬಾವನೆ ಕೊಟ್ಟಿದ್ದೆ ಎನ್ನುತ್ತಾರೆ ಶೃಂಗಾರ‍್.

ದಿನಚರಿ -೧ : ನೆನಪಿನ ದೋಣಿ, ಗಡ್ಸ್‌ ಮತ್ತು ಲೈಬ್ರೆರಿಯಲ್ಲಿ ಓದಿದ್ದರ ಬಗ್ಗೆ ಗೆಳೆಯ ಮಹೇಶ್‌ ದೇವಶೆಟ್ಟಿ ಹೇಳಿದ್ದು..

ಯಾಕೋ ಕ್ರಮೇಣ ಚಿತ್ರರಂಗದ ವಿಸ್ಮಯ ಮನಸ್ಸನ್ನು ಆವರಿಸಿಕೊಳ್ಳುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು ಅವರ ಆತ್ಮಕಥನದ ಕೆಲವು ಪುಟಗಳನ್ನು ನಿನ್ನೆ ಓದಿದ್ದೆ. ಡೆಸ್ಕಿನಲ್ಲಿ ಒಂದೂವರೆ ಗಂಟೆಯ ಓದುವಿಕೆಯಲ್ಲಿ ಪ್ರಪಂಚ ಮರೆತು ಹೋಗಿತ್ತು.
ಕಸಾಪದಿಂದ ನೇರವಾಗಿ ಮಲೆನಾಡಿನ ಕುಪ್ಪಳ್ಳಿ ಮತ್ತು ತೀರ್ಥಹಳ್ಳಿಯ ಹಸಿರಿನ ತಂಪಿನಲ್ಲಿ ಇಳಿದಂತೆ ಭಾಸವಾಗುತ್ತಿತ್ತು. ನೆನಪಿನ ದೋಣಿಯಲ್ಲಿ ಕುವೆಂಪು ತಮ್ಮ ವಿಶಾಲವಾದ ತೊಲೆಗಳುಳ್ಳ ಮನೆಯ ಮಳಿಗೆಯಲ್ಲಿ ನವರಾತ್ರಿಯ ವೇಳೆ ನಡೆಯುತ್ತಿದ್ದ ಸರಸ್ವತಿಯ ಆರಾಧನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದಾಗ ಗ್ರಂಥ ಪಾಲಕ ಟ್ರೀಂ..ಟ್ರೀಂ ಅಂತ ಬೆಲ್ಲನ್ನು ಒತ್ತಿ ಬಿಟ್ಟ.
ಉಳಿದಿದ್ದ ಓದುಗರು ಪತ್ರಿಕೆಗಳನ್ನು ಮಡಚಿ ಎದ್ದಂತೆ ನಾನೂ ಎದ್ದೆ. ಪಂಪ ಮಹಾ ಕವಿ ರಸ್ತೆಯಲ್ಲಿ ಓಡುತ್ತಿದ್ದ ವಾಹನಗಳ ಹಾರ್ನುಗಳು ಮತ್ತೆ ಕೇಳಿಸತೊಡಗಿತ್ತು.
ಈವತ್ತು ಕೂಡ ದೋಣಿಯನ್ನೋದುವ ತವಕ ಬೆಳಗ್ಗೆಯಿಂದಲೇ ಜೋರಾಗಿಯೇ ಜಗ್ಗುತ್ತಿತ್ತು. ಇದೇ ವೇಳೆಯಲ್ಲಿ ಗೆಳೆಯ ಮಹೇಶ್‌ ಕಚೇರಿ ಬಳಿ ಸಿಕ್ಕಿದರು. ಸ್ವಲ್ಪ ಬಿಡುವು ಇತ್ತು. ಕ್ಷೇಮ ಸಮಾಚಾರದ ಆರಂಭದಲ್ಲೇ ನೆನಪಿನ ದೋಣಿಯ ಬಗ್ಗೆ ಪ್ರಸ್ತಾಪಿಸಿದೆ. ಆ ಪುಸ್ತಕವನ್ನು ಓದುತ್ತಿದ್ದಂತೆ ಸುತ್ತಮುತ್ತಲು ಮಲೆನಾಡೇ ಬಂದ ಹಾಗೆ ನನಗಾಗುತ್ತದೆ..ಎಂಥಾ ಬರವಣಿಗೆಯದು..ಯಬ್ಬ ಎಂದು ಹೇಳಿದೆ.
ಹೌದು.. ಮಳೆಯ ಸೌಂದರ್ಯದ ಬಗ್ಗೆ, ಆ ಹನಿ ಹನಿಗಳ ಬಗ್ಗೆ ವರ್ಣನೆ ಅಂದರೆ ಅವ್ರದ್ದೇ. ಎಂದು ಮಹೇಶ್‌ ದನಿಗೂಡಿಸಿದಾಗ ಉತ್ಸಾಹ ಇಮ್ಮಡಿ ಆಯ್ತು. ಯಾಕೆಂದರೆ ಮಾತನಾಡುವ ವಿಚಾರದಲ್ಲಿ ಇಬ್ಬರಿಗೂ ಒಲವು, ಆಸಕ್ತಿ ಇದ್ದರೆ ಮಾತ್ರ ಮುಂದುವರಿಯಬಹುದಲ್ಲವೇ.
ಇತ್ತೀಚೆಗೆ ನನಗೆ ಕನ್ನಡದ ಕ್ಲಾಸಿಕ್ ಎನ್ನಿಸಿದ ಸಾಹಿತ್ಯ ಪುಸ್ತಕಗಳನ್ನು ಓದಬೇಕು ಅಂತ ಅನ್ನಿಸುತ್ತಿದೆ . ಬರವಣಿಗೆಗೆ ಅದೂ ಮುಖ್ಯ ಅಲ್ವಾ. ಶ್ರೇಷ್ಠ ಸಾಹಿತ್ಯ, ಅದರಲ್ಲಿನ ವಾಕ್ಯ ರಚನೆಗಳನ್ನು ಓದುವಾಗ ನಾನೆಷ್ಟು ಓದಲು ಬಾಕಿ ಇದೆಯಪ್ಪಾ, ಸಿಕ್ಕಾಪಟ್ಟೆ ಸಮಯ ವೇಸ್ಟು ಮಾಡಿದೆ.. ಎಂದು ಭಯವೂ ಆಗುತ್ತಿದೆ.. ಹೀಗಾಗಿ ನಿನ್ನೆಯಿಂದ ನೆನಪಿನ ದೋಣಿಯನ್ನೋದುತ್ತಿದ್ದೇನೆ. ಮೊನ್ನೆ..ಸಿದ್ದಲಿಂಗಯ್ಯನವರ ಊರು-ಕೇರಿ ಓದಿದೆ. ನೀವೂ ಓದಿರಬೇಕು ಅಲ್ವಾ ? ಬೇಕಾದರೆ ಕೊಡ್ತೀನಿ ಅಂದೆ. ( ನಿಜಕ್ಕೂ ಅದು ಬೆಪ್ಪುತನದ ಪ್ರಶ್ನೆಯಾಗಿತ್ತು ಎಂದು ಕೆಲವೇ ಕ್ಷಣಗಳಲ್ಲಿ ಗೊತ್ತಾಯಿತು )
ಪರ್ತಕರ್ತರಲ್ಲಿ ಬಹುಪಾಲು ಮಂದಿ ಓದೋದು ಕಮ್ಮಿ ಅಂತ ಹೇಳುತ್ತಾರೆ. ನನ್ನ ಅನುಭವಕ್ಕೂ ಅದು ಬಂದಿತ್ತು. ಯಾಕೆಂದರೆ ಯಾವತ್ತಾದರೂ ಪುಸ್ತಕ ಬಿಡಿಸಿಟ್ಟರೆ ಸಾಕು, ಏನಪ್ಪಾ ಪುಸ್ತಕ ಬರೀತೀಯಾ ? ಏನ್ ಕಥೆ.. ಅಂತ ಹಾಸ್ಯಕ್ಕೆ ಆಸ್ಪದವಾಗುವಂತೆ ವಿಚಾರಿಸುವ ಮಿತ್ರರು ಈಗಲೂ ಇದ್ದಾರೆ.
ಒಮ್ಮೆ ಏನನ್ನೋ ಓದುತ್ತಿದ್ದಾಗ ಮೇಲ್ಕಂಡ ಪ್ರಶ್ನೆಯನ್ನು ಮುಂದಿಟ್ಟ ಮಿತ್ರನಿಗೆ, " ಪರ್ತಕರ್ತನಾದವನು ಸಾಕಷ್ಟು ಓದಿರಬೇಕು. ಬೇಕಾದರೆ ನಮ್ಮ ಎಡಿಟರನ್ನೇ ನೋಡು. ಅದರಲ್ಲೂ ಕನ್ನಡದ ಅತ್ಯುತ್ತಮ ಪುಸ್ತಕಗಳನ್ನು ಓದಲೇಬೇಕು. ಆಗ ಮಾತ್ರ ಬರವಣಿಗೆ ಏನಾದರೂ ಸುಧಾರಿಸಬಹುದು.." ಎಂದು ಪುಟ್ಟ ಭಾಷಣವನ್ನು ಕೊರೆದಿದ್ದೆ. ನಂತರ ಪ್ಲೇಟು ಬದಲಾಯಿಸಿದ್ದ ಆ ಮಿತ್ರ ಜಾಗ ಖಾಲಿ ಮಾಡಿದ್ದ.
ಆದರೆ ಗೆಳೆಯ ದೇವಶೆಟ್ಟಿ ಮಹೇಶ್‌ ಅವರು ತಮ್ಮ ಎಸ್ಸೆಸ್ಸಲ್ಸಿ, ಪಿಯುಸಿ ದಿನಗಳಲ್ಲಿಯೇ ನೆನಪಿನ ದೋಣಿ, ಊರು ಕೇರಿ, ಕರ್ವಾಲೋ ಎಲ್ಲ ಅರೆದು ಕುಡಿದಿದ್ದರು. ಆಗೆಲ್ಲ ಬೆಳಗ್ಗೆಯಿಂದ ಸಂಜೆಯ ತನಕ ದಿನವಿಡೀ ಲೈಬ್ರೆರಿಯಲ್ಲಿ ಕೂತು ಪಟ್ಟುಬಿಡದಂತೆ ಪುಸ್ತಕಗಳನ್ನು ಗುಡ್ಡೆ ಹಾಕಿ ಓದುತ್ತಿದ್ದೆ. ಏನು ಮಾಡುತ್ತಿದ್ದೀಯಾ ಅಂತ ಯಾರಾದರೂ ಕೇಳಿದರೆ..ಮಾಡೋದೇನು ..ಓದೋದು..ಓದೋದು..ಓದೋದು...
ಆವತ್ತು ಹಾಗೆ ಓದಿಕೊಂಡದ್ದರಿಂದ ಈಗ ಪ್ರಯೋಜನ ಆಗ್ತಿದೆ ಎಂದರು ಮಹೇಶ್‌.
ವಿಜಯ ಕರ್ನಾಟಕದ ಸಿನಿ ವಿಜಯ ವಿಭಾಗದ ಮುಖ್ಯಸ್ಥರಾಗಿರುವ ಅವರು, ಮಾತಿನ ಮಧ್ಯೆ, " ಸಿನಿಮಾ ಎನ್ನೋದು ಓಪನ್ ಫೀಲ್ಡ್ ಇದ್ದ ಹಾಗೆ. ಇಲ್ಲಿ ಬುದ್ಧಿವಂತಿಕೆ, ಪ್ರತಿಭೆ ಮತ್ತು ಗಡ್ಸ್‌ ಇದ್ದರೆ ಸಾಕು. ಯಾರು ಬೇಕಾದ್ರೂ ಉದ್ಧಾರ ಆಗಬಹುದು.. " ಎಂದರು.
ಅವರನ್ನು ಬೀಳ್ಕೊಟ್ಟ ನಂತರ ಕಸಾಪಗೆ ಹೋಗಿ ನೆನಪಿನ ದೋಣಿಯಲ್ಲಿ ಕೊಡಿ. ನಿನ್ನೆ ಸ್ವಲ್ಪ ಓದಿದ್ದೆ ಎಂದೆ. ಆದರೆ ಕಚೇರಿ ಸ್ಟಾಪ್ಸ್‌ ಬಂದಿಲ್ಲ ಎಂದು ಅಲ್ಲಿದ್ದ ಏಕೈಕ ಸಿಬ್ಬಂದಿ ಹೇಳಿದ. ತುಸು ನಿರಾಸೆಯಾದರೂ, ಏನು ಇನ್ನೇನು ಮಾಡೂದೂಂತ ಬೇರೆ ಪುಸ್ತಕಗಳನ್ನು ಹುಡುಕಲು ಶುರು ಹಚ್ಚಿದೆ.

Monday, 27 July 2009

ಅಕ್ಷರ ಮಳೆ : ಕವಿ ಸಿದ್ಧಲಿಂಗಯ್ಯನವರ ಊರು ಕೇರಿಯಲ್ಲಿ...


ಕೆಲವು ಪುಸ್ತಕಗಳು ಮನಸ್ಸನ್ನು ಗಾಢವಾಗಿ ಕಲಕುತ್ತವೆ. ಆರಂಭದ ಪುಟದಿಂದ ಕೊನೆಯ ತನಕ ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತವೆ. ಕನ್ನಡದ ಅಂಥ ವಿರಳ ಕೃತಿಗಳಲ್ಲಿ ಕವಿ ಡಾ. ಸಿದ್ಧಲಿಂಗಯ್ಯ ಅವರ ಆತ್ಮಕಥನ ಊರು ಕೇರಿಯೂ ಒಂದು. ಈ ಪುಸ್ತಕದ ಕೆಲವು ಸಾಲುಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ..
  • ಎಂದಿನಂತೆ ಹುಡುಗರೆಲ್ಲ ನಮ್ಮ ಮನೆಯ ಪಕ್ಕದ ಮೋಟುಗೋಡೆಯ ಮೇಲೆ ನಿಂತು ಅಪ್ಪ ಅವ್ವಂದಿರನ್ನು ಕೂಗುತ್ತಿದ್ದಾಗ ನಮಗೆ ಒಂದು ನೋಟ ಕಾಣಿಸಿತು. ಐನೋರ ಹೊಲದಲ್ಲಿ ಇಬ್ಬರು ಮನುಷ್ಯರ ಹೆಗಲ ನೊಗ ಹೂಡಿ ಇನ್ನಿಬ್ಬರು ಹೊಲ ಉಳುತ್ತಿದ್ದರು. ನೊಗ ಹೊತ್ತ ಆ ಇಬ್ಬರು ಮನುಷ್ಯರು ಎತ್ತುಗಳಂತೆ ಮುಂದೆ ಹೋಗುತ್ತಿದ್ದರೆ ಇನ್ನೊಬ್ಬ ಹಿಂದಿನಿಂದ ಚಾಟಿ ತಿರುಗಿಸುತ್ತಾ ಉಳುಮೆ ಮಾಡುತ್ತಿದ್ದ ದೃಶ್ಯ ಮೋಜಿನಂತೆ ಕಂಡರೂ, ನೊಗ ಹೊತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಅಪ್ಪ ಎಂದು ಗೊತ್ತಾದ ಕ್ಷಣದಿಂದ ನನ್ನಲ್ಲಿ ವಿಚಿತ್ರವಾದ ಸಂಕಟ ಶುರುವಾಯಿತು.
  • ಒಂದು ದಿನ ತಾಯಿ ಕೋಣೆಯಲ್ಲಿ ರೊಟ್ಟಿ ಸುಡುತ್ತಿದ್ದಳು. ಮೂರು ಜನ ಮಕ್ಕಳೂ ಒಲೆಯ ಮುಂದೆ ಕುಳಿತು ಅದನ್ನು ನೋಡುತ್ತಿದ್ದೆವು. ಒಲೆಯ ಮೇಲೆ ಅಟ್ಟದಂತೆ ಮಾಡಿ ಪೆಟ್ಟಿಗೆ ಇಟ್ಟಿದ್ದೆವು. ಆ ಪೆಟ್ಟಿಗೆ ಮೇಲೆ ಎರಡು ನಾಗರ ಹಾವುಗಳು ಜಗಳವಾಡುತ್ತಿದ್ದು, ಇದ್ದಕ್ಕಿದ್ದಂತೆ ರೊಟ್ಟಿಯ ಮೇಲೆ ಬಿದ್ದು ಬಿಟ್ಟವು. ಅವು ಹರಿದಾಡುತ್ತಿದ್ದಂತೆ ನಾವೆಲ್ಲ ಪರಾರಿಯಾಗಿ ಬದುಕಿದ್ದೇ ಹೆಚ್ಚು. ಬೀದಿಯ ಜನವೆಲ್ಲ ಸೇರಿ ಹಾವುಗಳನ್ನು ಹುಡುಕಿದರೂ ಸಿಗಲಿಲ್ಲ. ಅಂದಿನಿಂದ ಮನೆಯೊಳಗೆ ಹಗಲು ಹೊತ್ತು ಇರುವುದಕ್ಕೂ ಭಯವಾಗುತ್ತಿತ್ತು.
  • ವಿಚಾರಸಂಕಿರಣದಲ್ಲಿ ನಾವು ವೇದಿಕೆಯಲ್ಲಿ ಕುಳಿತಿದ್ದೆವು. ಪೇಜಾವರ ಶ್ರೀಗಳು ಆಶೀರ್ವಾದ ಮಾಡಬೇಕಾಗಿತ್ತು. ಅವರು ಬಂದ ಕೂಡಲೇ ಇಡೀ ಸಭೆ ಎದ್ದು ನಿಂತು ಗೌರವ ಸೂಚಿಸಿತು. ವೇದಿಕೆಯಲ್ಲಿದ್ದವರೂ ಎದ್ದು ನಿಂತರು. ಕುಳಿತಿದ್ದವನು ನಾನೊಬ್ಬನೇ. ಈಗ ನನಗೆ ಆ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಆಗ ನಾನು ಮಾಡಿದ್ದು ಸರಿ ಎನ್ನಿಸುತ್ತದೆ. ಹಾಗೆ ಕುಳಿತಿದ್ದರಿಂದ ನಾನು ಸ್ವಾಮಿಗಳು ಮತ್ತು ಸಭಿಕರ ಗಮನ ಸೆಳೆದೆ. ಅತ್ಯಂತ ಚಿಕ್ಕವನಂತೆ ಕಾಣಿಸುತ್ತಿದ್ದ ನನ್ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಯಿತು. ಪೇಜಾವರ ಸ್ವಾಮಿಗಳು ದಲಿತರ ಕೇರಿಗಳಿಗೆ ಭೇಟಿ ಕೊಟ್ಟಿದ್ದರು. ಸುಧಾರಣೆಯ ಮಾತುಗಳನ್ನು ಆಡುತ್ತಿದ್ದರು. ಆ ವ್ಯವಸ್ಥೆಯಲ್ಲಿ ಅವರು ಅಷ್ಟು ಮಾಡಿದ್ದೇ ಹೆಚ್ಚಾಗಿತ್ತು. ಆದರೂ ಆಗ ಉಗ್ರ ಕ್ರಾಂತಿಕಾರಿಯಾದ ನಾನು ಪೇಜಾವರರನ್ನು ಕುರಿತು, ನಿಮಗೆ ನಿಜವಾಗಿ ದಲಿತರ ಬಗ್ಗೆ ಕಾಳಜಿ ಇದ್ದರೆ ಒಬ್ಬ ಅಸ್ಪೃಶ್ಯನನ್ನು ನಿಮ್ಮ ಮಠಕ್ಕೆ ಅಧಿಪತಿಯಾಗಿ ಮಾಡಿ ಎಂದು ಬಹಿರಂಗವಾಗಿ ಹೇಳಿದೆ. ಸ್ವಾಮಿಗಳು ಇದಕ್ಕೆ ಸ್ಪಷ್ಟವಾದ ಉತ್ತರ ಹೇಳದಿದ್ದರೂ ಸುಧಾರಣೆಯ ಬಗ್ಗೆ ಅವರಿಗಿರುವ ಕಳಕಳಿಯನ್ನು ವಿವರಿಸಿದರು.

Sunday, 26 July 2009

ಪ್ಲೀಸ್‌..ನೆಗೆಟಿವ್ ಮಾತು ಬೇಡ..


ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದು ಹೊರಡುವವರ ಮೊದಲ ಶತ್ರುವೇ ನೆಗೆಟಿವ್ ಥಿಂಕಿಂಗ್.
ಯಾವುದೇ ಆಹ್ವಾನ ನೀಡದಿದ್ದರೂ ನೆಗೆಟಿವ್ ಆಲೋಚನೆಗಳು ಸುಲಭವಾಗಿ ಸುರುಳಿ ಬಿಚ್ಚುತ್ತದೆ.ಆದರೆ ಒಳ್ಳೆಯದ್ದನ್ನು ಚಿಂತಿಸಲು ಪ್ರಜ್ಞಾಪೂರ್ವಕವಾದ ಪ್ರಯತ್ನ ಬೇಕಾಗುತ್ತದೆ. ಆದರೆ ಬದುಕನ್ನು ಮುರಿಯಲು ಬೇರಾವುದೂ ಬೇಡ, ನಕಾರಾತ್ಮಕ ಚಿಂತನೆಯೇ ಧಾರಾಳ ಸಾಕು. ಯಾರಿಗೇ ಆಗಲೀ, ನಕಾರಾತ್ಮಕ ಚಿಂತನೆ ಹೆಚ್ಚುತ್ತಿದ್ದಂತೆ ಖಿನ್ನತೆ ಮತ್ತು ಪ್ರತಿಯೊಂದರಲ್ಲಿಯೂ ಜಿಗುಪ್ಸೆ ಕಾಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಏರುಪೇರಾಗುತ್ತದೆ. ಕೆಲವೊಮ್ಮೆ ಆತ್ಮಹತ್ಯೆಯ ಯೋಜನೆ ಕೂಡ ಸುಳಿಯುತ್ತದೆ.
ನಮ್ಮ ಚಿಂತನೆಗಳು ಭಾವನೆಗಳನ್ನು ಸೃಷ್ಟಿಸುತ್ತವೆ. ಭಾವನೆಗಳು ವರ್ತನೆಯನ್ನು ರೂಪಿಸುತ್ತವೆ. ಆದ್ದರಿಂದ ಒಂದಕ್ಕೊಂದು ನಿಕಟ ಸಂಬಂಧವನ್ನು ಇಲ್ಲಿ ಕಾಣಬಹುದು. ಸಕಾರಾತ್ಮಕ ಚಿಂತನೆ ಇರುವಲ್ಲಿ ಭಾವನೆ ಮತ್ತು ವರ್ತನೆ ಕೂಡ ಅದುವೇ ಆಗಿದ್ದು, ಬದುಕಿನಲ್ಲಿ ಸುಧಾರಣೆಯ ತಂಪಿರುತ್ತದೆ. ಅದೇ ನಕಾರಾತ್ಮಕ ಚಿಂತನೆ ಇದ್ದಲ್ಲಿ ಭಾವನೆ ಮತ್ತು ವರ್ತನೆ ಅದನ್ನೇ ಹಿಡಿದು ಹಿಂಬಾಲಿಸುತ್ತದೆ. ಎಲ್ಲೆಲ್ಲೂ ಸೂಲು ಮತ್ತು ನಿರಾಶೆಯ ಕಾರ್ಮೋಡ ಕವಿಯುತ್ತದೆ. ನಿಮಗೆ ಅರಿವಿಲ್ಲದಂತೆ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳುವುದರಲ್ಲಿಯೇ ಆಯುಷ್ಯ ಮುಗಿಯುತ್ತದೆ. ನಿಮ್ಮೂರ ಸಂತೆಯಲ್ಲಿ ಕೂಡ ನೀವು ಒಬ್ಬಂಟಿಯಾಗುತ್ತೀರಿ.
ಮೋಸ, ಆರ್ಥಿಕ ಹಿಂಜರಿತ, ಬರ್ಬರ ಹತ್ಯೆ, ಉಗ್ರರ ದಾಳಿ, ಅತ್ಯಾಚಾರ, ರೈತರ ಆತ್ಮಹತ್ಯೆ, ಕಪ್ಪುಹಣ ಅಂತ ಪತ್ರಿಕೆ, ಟಿವಿಯಲ್ಲಿ ಕಂಡೂ ಕಂಡೂ ಮನಸ್ಸು ಬಸವಳಿದು ಹೋಗಿದೆಯೇ ?ಮನಸ್ಸು ಗೊಂದಲದ ಗೂಡಾಗಿ ಬದುಕು ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು ದುಸ್ಸಾಧ್ಯವಾಗುತ್ತಿದೆಯೇ ? ಹಾಗಿದ್ದಲ್ಲಿ ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಹತೋಟಿಗೆ ಯತ್ನಿಸುತ್ತಿವೆ ಎಂದರ್ಥ.
ಮನಸ್ಸು ನಾನಾ ಚಿಂತನೆಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಪರಿಶೀಲಿಸುವ ಅಥವಾ ತೀರ್ಪು ನೀಡುವ ಗೋಜಿಗೆ ಹೋಗುವುದಿಲ್ಲ. ಕೇಳಿದ್ದು, ಕಾಣಿಸಿದ್ದು ಮತ್ತು ಓದಿಕೊಂಡಿದ್ದು ಯಾವಾಗಲೂ ನಕಾರಾತ್ಮಕವಾಗಿದ್ದಲ್ಲಿ ಮನಸ್ಸು ಅದನ್ನೇ ಅವಿವೇಕದಿಂದ ಒಪ್ಪಿಕೊಳ್ಳುತ್ತದೆ. ಎಷ್ಟೋ ಮಂದಿ ಕುಟುಂಬದವರಿಗಿಂತಲೂ ಮಿತ್ರ ಎನ್ನಿಸಿಕೊಂಡವನು ಹೇಳಿದ್ದು ವೇದ ವಾಕ್ಯ ಎಂದು ಭ್ರಮಿಸಿ ವ್ಯವಹಾರಗಳಲ್ಲಿ ಕೈ ಸುಟ್ಟುಕೊಳ್ಳುವುದು ಇದೇ ಕಾರಣಕ್ಕೆ. ಮನಬಂದಂತೆ ನಡೆದುಕೊಳ್ಳಬಾರದು ಅಂತ ಹೇಳುವುದು ಸಮ್ಮನೆಯಲ್ಲ.
ಇಷ್ಟಿದ್ದರೂ ಸಂತಸದಾಯಕ ಸಂಗತಿ ಏನೆಂದರೆ ಮನಸ್ಸು ಯೋಚಿಸುವ ಧಾಟಿಯನ್ನು ಬದಲಿಸಬಹುದು. ಸಕಾರಾತ್ಮಕ ಮನಸ್ಸು ಮತ್ತು ಚೈತನ್ಯ ತಂದುಕೊಳ್ಳಲು ಸತತ ಪ್ರಯತ್ನ , ಶ್ರಮ ಮತ್ತು ಸಮಯ ಸಾಕು. ಪದೇಪದೆ ನೆಗೆಟಿವ್ ಯೋಚನೆ ಸುಳಿಯುತ್ತಿದ್ದಲ್ಲಿ, ಅದರ ಬದಲಿಗೆ ಪ್ರಬಲ ಪಾಸಿಟಿವ್ ಚಿಂತನೆ ರೂಢಿಸಿಕೊಳ್ಳಿ. ಸದಾ ಸೋಲು ಕಣ್ಣಿಗೆ ಕಟ್ಟುತ್ತಿದ್ದರೆ ಗೆಲುವನ್ನು ಚಿತ್ರಿಸಿ. ಸದಾ ನನ್ನಿಂದಾಗದು ಎನ್ನುವುದರ ಬದಲಿಗೆ ಆಗುತ್ತೆ ಎಂದು ಮಂದುವರಿಯಿರಿ. ಬೇಕಾದರೆ ಒಮ್ಮೆ ಪ್ರಯೋಗಿಸಿ ನೋಡಿ.
ಸಕಾರಾತ್ಮಕ ಚಿಂತನೆ ಕೂಡ ಮನಸ್ಸಿನಾಳದಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ಉದ್ದೀಪನಗೊಳಿಸಬೇಕಷ್ಟೇ. ಕೊನೆಯದಾಗಿ ಮಾತನಾಡುವಾಗಿ ನೆಗೆಟಿವ್..ನೆಗೆಟಿವ್‌ ಪದಗಳನ್ನು ಬಳಸಬೇಡಿ.

ಎಲ್ಲವೂ ಸುಲಭವಾಗಬೇಕು ಎಂಬುದು ಎಲ್ಲರ ಬಯಕೆಉತ್ಪಾದಕತೆಗೆ ಸೋಮಾರಿತನವೇ ಶತ್ರು.
ಆದ್ದರಿಂದ ವಿಶ್ರಾಂತಿ ಮತ್ತು ಆಲಸ್ಯದ ನಡುವಿನ ಗೆರೆಯನ್ನು ಅರಿತುಕೊಳ್ಳಬೇಕು. ಆಗ ಅಗತ್ಯ ವಿಶ್ರಾಂತಿ ತೆಗೆದುಕೊಂಡು ಚೇತೋಹಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ವಿರಾಮದ ಬಳಿಕ ಪಡೆದ ಚೈತನ್ಯವನ್ನು ಗುರಿ ಸಾಧನೆಗೆ ಬಳಸಿಕೊಳ್ಳದೆ ಸಮಯವನ್ನು ವ್ಯರ್ಥಗೊಳಿಸಿದಾಗ ನಮಗೆ ಸಮಸ್ಯೆ ತಂದುಕೊಂಡಂತೆಯೇ ಸರಿ.
ಕೇಳದಿದ್ದರೂ ಆವರಿಸಿಕೊಳ್ಳುವ ಜಡತ್ವವನ್ನು ಕೆಲವು ವಿಧಾನಗಳ ಸಹಾಯದಿಂದ ಕಳೆದು ಕ್ರಿಯಾಶೀಲರಾಗಲು ಸಾಧ್ಯವಿದೆ. ಯಾವುದೇ ಚಟುವಟಿಕೆಯಲ್ಲಿ ನಿರತರಾಗಲು ಸಾಕಷ್ಟು ಚೈತನ್ಯ ಇರಲೇಬೇಕು. ವ್ಯಾಯಾಮ ಮಾಡುವುದರಿಂದ ನಮ್ಮ ಚೈತನ್ಯದ ಮಟ್ಟ ಹೆಚ್ಚುತ್ತದೆ. ಆಗ ದಿನದುದ್ದಕ್ಕೂ ದಣಿವರಿಯದೆ ಕಾರ್ಯನಿರ್ವಹಿಸಬಹುದು. ಪ್ರತಿ ದಿನ ಸ್ವಲ್ಪ ನಡೆದರೂ ಮೈಮನಕ್ಕೆ ಕಸುವು ಸಿಗುತ್ತದೆ. ಎಲ್ಲಿ ಆಲಸ್ಯ ಇರುತ್ತದೆಯೋ ಅಲ್ಲಿ ಯಾವುದೇ ಕೆಲಸ ಸಾರ್ಥಕವಾಗುವುದಿಲ್ಲ.
ಅಗತ್ಯದ ಪ್ರಜ್ಞೆ :
ಕೆಲವರಿಗೆ ಯಾವುದೇ ಕೆಲಸ ಆರಂಭಿಸುವುದು ಕಷ್ಟಕರ. ಮುಂದಿನದ್ದೆಲ್ಲ ಸುಲಲಿತ ಎನ್ನಿಸುತ್ತದೆ. ಅಂತಹ ಸಮಸ್ಯೆ ಇದ್ದಲ್ಲಿ ಕೆಲಸ ಆರಂಭಿಸಲು ೫ರಿಂದ ೧೫ ನಿಮಿಷ ಸಮಯ ನಿಗದಿಪಡಿಸಿ. ಸೋಮಾರಿತನವನ್ನು ಹೋಗಲಾಡಿಸಲು ನನಗಿದು ಅಗತ್ಯ ಎಂಬ ಪ್ರಜ್ಞೆಯನ್ನು ಪರಿಣಾಮಕಾರಿಯಾಗಿ ಬಳಸಿ. ಕೆಲಸ ಪೂರ್ಣಗೊಳಿಸಲು ನಿಗದಿತ ಗಡುವನ್ನು ವಿಧಿಸುವುದರಿಂದ ಈ ಅಗತ್ಯದ ಪ್ರಜ್ಞೆ ಬೆಳೆದುಕೊಳ್ಳುತ್ತದೆ.
ಎಷ್ಟೋ ಸಲ ಗುರಿಗಳನ್ನು ಸಾಧಿಸಲು ಪಡಬೇಕಾದ ಕಷ್ಟಗಳ ಬಗ್ಗೆ ಏನೇನೋ ವಿಪರೀತ ಕಲ್ಪಿಸಿಕೊಂಡು ಆಲಸಿಗಳಾಗುತ್ತೇವೆ. ಬದಲಿಗೆ ಪೂರ್ಣಗೊಳಿಸಿದ ನಂತರದ ಪ್ರಯೋಜನಗಳ ಬಗ್ಗೆ ಆಮೂಲಾಗ್ರವಾಗಿ ಯೋಚಿಸಬೇಕು. ಆಗ ಆಲಸ್ಯ ಮಾಯವಾಗಿ ಸ್ಪೂರ್ತಿ ಉಕ್ಕದಿರುವುದಿಲ್ಲ. ಸೋಮಾರಿತನ ನಿಜಕ್ಕೂ ಸಮಾಜಕ್ಕಂಟಿದ ಸಮಸ್ಯೆ. ರೋಗವಲ್ಲದಿದ್ದರೂ ವರ್ತನೆಯಲ್ಲಿ ಕಂಡುಬರುವ ದೋಷ. ಆದ್ದರಿಂದ ಯಾವಾಗ ಆಲಸ್ಯದ ಲಕ್ಷಣ ಕಾಣಿಸಿಕೊಳ್ಳುತ್ತದೆಯೋ, ಕೂಡಲೇ ಚಲನಶೀಲತೆಯನ್ನು ಒಗ್ಗಿಸಿಕೊಳ್ಳಿ. ಕುರ್ಚಿಯಲ್ಲಿ ತೂಕಡಿಸುತ್ತ ಕುಳಿತಿದ್ದರೆ, ದೀರ್ಘವಾಗಿ ಶ್ವಾಸ ತೆಗದುಕೊಳ್ಳಿ. ಎದ್ದು ಮುಖ ತೊಳೆದು ಬನ್ನಿ. ಒಂದರ ಮೇಲೊಂದರಂತೆ ಕೆಲಸಗಳನ್ನು ಮಾಡಿ. ಇಂತಹ ಪದ್ಧತಿ ಯಾರನ್ನಾದರೂ ಶ್ರಮಸಹಿಷ್ಣುಗಳನ್ನಾಗಿಸುತ್ತದೆ.
ಎಷ್ಟೋ ಸಲ ಅಂಜಿಕೆಯಿಂದ ನಮ್ಮೆಲ್ಲ ಬುದ್ಧಿ ಶಕ್ತಿ, ದೈಹಿಕ ಮತ್ತು ಮನೋಬಲವನ್ನು ಬಳಸಿಕೊಳ್ಳದೆ, ಬದುಕಿಯೂ ಬದುಕದಂತೆ ದಿನ ದೂಡುತ್ತೇವೆ. ಹಾಗೆಯೇ ಎಷ್ಟೋ ದಿನಗಳು ಸಂದಿರಬಹುದು. ಆದರೆ ತತ್ಪರಿಣಾಮದ ಕೀಳರಿಮೆ ಬಿಟ್ಟು ಮುಂದುವರಿಯಲೇಬೇಕು. ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಆದಾಯವನ್ನು ತಂದುಕೊಡಬಲ್ಲ ಉಪ ವೃತ್ತಿಗಳನ್ನು ಕೈಗೊಳ್ಳಬಹುದು. ಸಂಪಾದನೆ ಸಾಕಷ್ಟಿದ್ದರೂ, ಆಲಸ್ಯ ಕಾಡುತ್ತಿದ್ದರೆ, ನಿಮ್ಮ ಹವ್ಯಾಸವನ್ನು ಪುಷ್ಟಿಗೊಳಿಸುವುದರೊಂದಿಗೆ ಹೋಗಲಾಡಿಸಬಹುದು.
ಮೇಲ್ನೋಟಕ್ಕೆ ಆನಂದದಾಯಕ :
ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳದೇ ಇದ್ದಲ್ಲಿ ನಿಶ್ಚಿತವಾಗಿ ಆಲಸ್ಯ ಅಂಟಿಕೊಳ್ಳುತ್ತದೆ. ಇಂತಹ ಜಡತ್ವ ನಿಮ್ಮ ಸೃಜನಶೀಲತೆಯನ್ನೂ, ಯೋಚನಾ ಶಕ್ತಿಯನ್ನೂ, ಪ್ರಯೋಗಶೀಲತೆಯನ್ನೂ ನಿಸ್ಸಂದೇಹವಾಗಿ ಕಸಿದುಕೊಳ್ಳುತ್ತದೆ. ಆಗ ಸುತ್ತಲಿನ ಜಗತ್ತು ನಿಮ್ಮನ್ನು ಕಾಯುವುದಿಲ್ಲ. ಕೆಲಸವನ್ನು ಕದಿಯುವುದು ಮೇಲ್ನೋಟಕ್ಕೆ ಆನಂದದಾಯಕವಾಗಿರಬಹುದು. ಆದರೆ ಅದರಿಂದ ಕೊನೆಗೆ ಸಮಾಧಾನವಂತೂ ಸಿಗುವುದಿಲ್ಲ.
ದುರದೃಷ್ಟವಶಾತ್ ಒಬ್ಬ ವ್ಯಕ್ತಿ ನಿಜವಾಗಿ ಅಲ್ಲದಿದ್ದರೂ ಅನ್ಯ ಕಾರಣಗಳಿಂದ ಸೋಮಾರಿಯಂತೆ ಇತರರಿಗೆ ಕಾಣಬಹುದು. ಆತ ವಿಕಲಚೇತನನಾಗಿರಬಹುದು. ಇಲ್ಲವೇ ಸಣ್ಣ ಪುಟ್ಟ ಗುರಿಗಳನ್ನು ಸಾಧಿಸುವುದು ಹೇಗೆ ಎಂದು ತಿಳಿಯದೆ ಕಂಗಾಲಾಗಿರಬಹುದು. ಯಾವುದೋ ಬಗೆಹರಿಯದ ಖಿನ್ನತೆ ಮನಸ್ಸನ್ನು ಕದಡಿರಬಹುದು. ಅನಾರೋಗ್ಯ ಕಾಡುತ್ತಿರಬಹುದು. ಕೆಲಸವನ್ನು ಮಾಡುವ ವಿಧಾನ ಅಥವಾ ತಿಳುವಳಿಕೆ ಇಲ್ಲದೆ ಆಲಸಿಯಂತೆ ಕಾಣಬಹುದು. ಇಲ್ಲವೇ ನಿಧಾನವಾಗಿ ಕಲಿಯುವ ಸ್ವಭಾವದವರಾಗಿರಬಹುದು. ನನಗೆ ಹೆಚ್ಚು ಅನುಭವ ಇದೆ ಎಂದುಕೊಂಡು ಅನಿವಾರ್ಯವಾಗಿ ಹೇಳಿಕೊಂಡು ಕೆಲಸಕ್ಕೆ ಸೇರಿರಬಹುದು. ಆದರೆ ಇಂಥ ಲೋಪಗಳನ್ನೆಲ್ಲ ಬಗೆಹರಿಸಬಹುದು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಮೇಲ್ನೋಟಕ್ಕೆ ಕಂಡ ತಕ್ಷಣ ಆತ ಸೋಮಾರಿ ಅಂತ ಆತುರದ ನಿರ್ಧಾರ ತೆಗೆದುಕೊಳ್ಳಲೇಬಾರದು. ಸಿಕ್ಕಸಿಕ್ಕಲ್ಲಿ ಜರೆಯುವ ತಪ್ಪು ಮಾಡಕೂಡದು.
ಕೊನೆಯದಾಗಿ ಪೋಷಕರಿರಾ, ಮಕ್ಕಳೆದುರು ಸೋಮಾರಿಗಳಾಗದಿರಿ. ನಿಮ್ಮನ್ನು ಕಂಡು ಮಕ್ಕಳು ಅದನ್ನೇ ಅನುಸರಿಸುತ್ತವೆ. ಆದ್ದರಿಂದ ನಿಜವಾಗಿಯೂ ಪರಿವರ್ತನೆ ಹೊಂದಿ ಮಾದರಿಯಾಗಿ.
ಎಲ್ಲವೂ ಸುಲಭವಾಗಿ, ಅನಾಯಾಸವಾಗಿ ದಕ್ಕಬೇಕು ಎಂಬುದು ಎಲ್ಲರ ಬಯಕೆ. ಆದರೆ ಈ ಜಗತ್ತಿನಲ್ಲಿ ಶ್ರಮ, ತಾಳ್ಮೆ, ಸ್ವಲ್ಪ ತ್ಯಾಗ ಇಲ್ಲದೆ ಏನೂ ಸಿಗುವುದಿಲ್ಲ. ಸಿಕ್ಕಿದರೂ ಬಹುಕಾಲ ಉಳಿಯುವುದಿಲ್ಲ.

Saturday, 25 July 2009

ಎಂಥಾ ಸಂದರ್ಭದಲ್ಲಿ ಕೂಡಾ ನಿರ್ಧಾರ ಅಗತ್ಯ


ವರ್ತಮಾನ ಮತ್ತು ನಾಳೆಯನ್ನು ನಿರ್ಧಾರಗಳು ರೂಪಿಸುತ್ತವೆ.
ಕೆಲವು ಸಲ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದೇ ನನ್ನ ನಿರ್ಧಾರವಾಗಿರುತ್ತಿತ್ತು ಅಂತ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅನುಭವದಿಂದ ವ್ಯಾಖ್ಯಾನಿಸುತ್ತಿದ್ದರಂತೆ. ಒಟ್ಟಿನಲ್ಲಿ ಬದುಕಿನುದ್ದಕ್ಕೂ ನಿರ್ಧಾರ ಅಗತ್ಯ.
ನಮ್ಮ ಬೇಕು ಬೇಡಗಳನ್ನು ಪೂರ್ಣಗೊಳಿಸಲು ಮನಸ್ಸು ಅನೇಕ ಸಂಗತಿಗಳನ್ನು ಮಂಥನ ಮಾಡುತ್ತದೆ. ಇದುವೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗುತ್ತದೆ. ಆದರೆ ಗಂಭೀರ ಸಂದರ್ಭಗಳಲ್ಲಿ ನಿರ್ಧಾರ ತಪ್ಪಾಗಿದ್ದರೆ ? ಎಂಬ್ ಅನಿಶ್ಚಿತತೆಯಿಂದ ಮನಸ್ಸು ಗೊಂದಲದ ಗೂಡಾಗುತ್ತದೆ. ಅಂಥ ಚಂಚಲದ ಮನಸ್ಸು ಗೊಂದಲದ ಗೂಡಾಗುತ್ತದೆ. ಅದನ್ನು ದಾಟಬೇಕು. ಇದು ಹೇಗೆ ಸಾಧ್ಯ ಎಂದು ನೋಡೋಣ.
ಜೀವನದ ಯಾವುದೋ ಒಂದು ಘಟ್ಟದಲ್ಲಿ ನಿಜವಾಗಿ ನಾವ್ಯಾರು ಎಂಬ ಅರಿವಾಗುತ್ತದೆ. ಆದರೆ ಆರಂಭಿಕ ಹಂತದಲ್ಲಿಯೇ ದಿಟ್ಟ ನಿಲುವು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಬೇರೊಬ್ಬರ ರೀತಿ ಜೀವಿಸಲು ನಮ್ಮಿಂದ ಅಸಾಧ್ಯ.
ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ ವ್ಯಕ್ತಿಗೆ ತನ್ನ ಶಕ್ತಿ ಮತ್ತು ಮಿತಿ ಏನೆಂಬ ಅರಿವು ಉಂಟಾಗುವುದರಿಂದ ನಿರುಮ್ಮಳವಾಗಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಹಾಗಂತ ಅವಾಸ್ತವಿಕ ತೀರ್ಮಾನಗಳನ್ನು ಕೈಗೊಂಡರೆ, ಅದುವೇ ತಿರುಗುಬಾಣವಾಗುತ್ತದೆ. ಆದರೆ ಯಾವಾಗಲೂ ಗಟ್ಟಿ ನಿರ್ಧಾರಗಳೇ ನಿರ್ಣಾಯಕ ಅಂಶ.
ಯಾವುದೇ ರಂಗದಲ್ಲಿ ಯಶಸ್ಸು ಗಳಿಸಿದವರನ್ನು ಗಮನಿಸಿ. ಒಂದು ಸನ್ನಿವೇಶದಲ್ಲಿ ನಿರ್ಭಿಡೆಯ ನಿರ್ಧಾರವನ್ನು ಕೈಗೊಂಡಿರುತ್ತಾರೆ. ಆದರೆ ನಿರ್ಣಯಗಳನ್ನು ಸಂಕಲ್ಪಿಸುವುದಕ್ಕೆ ಮಾತ್ರ ಸೀಮಿತವಾದರೆ ಅಲುಗಾಡುವ ಕುರ್ಚಿಯಲ್ಲಿ ಕುಳಿತಂತೆಯೇ. ಆದ್ದರಿಂದ ಖಚಿತವಾಗಿ ಬದಲಾವಣೆ ತರಬಲ್ಲ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ನಿರ್ಧಾರದಲ್ಲಿ ೩ ಹಂತಗಳಿವೆ.
ಮೊದಲು ಅಗತ್ಯವನ್ನು ಗುರುತಿಸುವುದು, ಎರಡನೆಯದು ಬದಲಾವಣೆ ಬಯಸುವುದು, ನಂತರ ಕಾರ್ಯಗತಗೊಳಿಸಬೇಕು. ಹೀಗಿದ್ದರೂ ಕೋಪ, ಅವಮಾನ, ಖಿನ್ನತೆ, ಹತಾಶೆ ಅಥವಾ ಅಂಜಿಕೆ ಸುಳಿಯುತ್ತಿರುವ ಉದ್ವೇಗದ ಹೊತ್ತಿನಲ್ಲಿ ಕೇವಲ ಪ್ರತೀಕಾರ ತೀರಿಸಲೆಂದೇ ಯಾವುದೇ ಗಂಭೀರ ನಿರ್ಧಾರಗಳನ್ನು ಕೈಗೊಳ್ಳಬಾರದು. ಮನಸ್ಸು ಪ್ರಶಾಂತವಾಗಿದ್ದಾಗ ತೀರ್ಮಾನಕ್ಕೆ ಬನ್ನಿ. ಹಾಗಾದರೆ ಉತ್ತಮ ನಿರ್ಧಾರ ಕೈಗೊಳ್ಳುವುದು ಹೇಗೆ ?
ಸೂಕ್ತ ನಿರ್ಧಾರದ ಹಿಂದೆ ನಿಮ್ಮದೇ ಸಾಮರ್ಥ್ಯ ಹಾಗೂ ಜವಾಬ್ದಾರಿ ಇರಬೇಕು. ಅದು ನಿಮಗೆ ಅಭ್ಯಾಸವಾಗಬೇಕು. ಪ್ರತಿಯೊಂದು ಸಮಸ್ಯೆಯನ್ನೂ ಅರ್ಥ ಮಾಡಿಕೊಂಡು ಅದನ್ನೇ ಅವಕಾಶವಾಗಿ ಪರಿವರ್ತಿಸಬೇಕು. ಯಾಕೆಂದರೆ ಎಲ್ಲ ಸಮಸ್ಯೆಗಳಲ್ಲಿ ಕೂಡ ಗೊತ್ತೇ ಇರದಂಥ ವಿಫುಲ ಅವಕಾಶವಾಗಿ ಬದಲಿಸುವುದೇ ಸರಿಯಾದ ನಡೆಯಾಗುತ್ತದೆ.
ಜೀವನಾನುಭವದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವುದರಿಂದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಪಕ್ವವಾಗುತ್ತದೆ. ನೀವು ಹಳ್ಳಿಗಾಡಿನಲ್ಲಿಯೇ ಇರಿ, ಬೆಂಗಳೂರು ಮಹಾ ನಗರದಲ್ಲಿಯೇ ಇರಿ, ವಿಭಿನ್ನ ಅನುಭವಗಳಿಂದ, ಒಡನಾಟದಿಂದ ಹಾಗೂ ಅಧ್ಯಯನದಿಂದ ಕಲಿಯುವ ಅವಕಾಶಗಳು ಒಂದೆರಡಲ್ಲ. ಹೀಗಾಗಿ ಯಾವುದೇ ಸಮಸ್ಯೆ ಎದುರಾದರೂ, ನಿಮ್ಮ ಒಳನೋಟಕ್ಕೆ ಮತ್ತೊಂದು ಸಾಧ್ಯತೆಯಾಗಿ ಕಾಣಿಸಿಕೊಂವು ಮನಸ್ಸನ್ನು ತಿಳಿಯಾಗಿಸುತ್ತದೆ.
ಸಾಮಾನ್ಯವಾಗಿ ನಾವು ಹಿಂದಿನ ಅನುಭವದಿಂದ ಅನುಭವ ಮತ್ತು ಕೆಲವು ಯೋಚನೆಗಳನ್ನು ಆಧರಿಸಿ ಬಹುತೇಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಹಲವು ಪ್ರಕರಣಗಳಲ್ಲಿ ಸಣ್ಣದಾಗಿದ್ದರೂ ಯೋಗ್ಯವಲ್ಲದ ತೀರ್ಮಾನದಿಂದ ಪಡಬಾರದ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಒಮ್ಮೆ ಬಯಸಿದ ಫಲಿತಾಂಶ ಸಿಗದಿದ್ದಲ್ಲಿ ಯಾಕೆ ಹೀಗಾಯಿತು ಎಂದು ಮಂಥನ ಮಾಡಬೇಕು. ಸಂಭವನೀಯ ಅಡಚಣೆ ಆಗ ನಿವಾರಣೆಯಾಗುತ್ತದೆ.
ಬೇಕಾದರೆ ಗಮನಿಸಿ. ಯೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲಿ ಅಗಾಧವಾದ ಆತ್ಮ ಗೌರವ ಇರುತ್ತದೆ. ಕೆಲವರು ಇತರರು ಹೇಳಿದ್ದರಲ್ಲಿ ತಲೆಬುಡವಿಲ್ಲದಿದ್ದರೂ, ಹರಕೆಯ ಕುರಿಗಳಂತೆ ಅನುಸರಿಸುತ್ತಾರೆ. ಆದರೆ ಅವರಲ್ಲಿ ಮುಂದೇನಾದೀತು ಎಂಬ ಸಲ್ಲದ ವ್ಯಾಕುಲ ಇರುತ್ತದೆ.
ಆದ್ದರಿಂದ ಬಂಧುಗಳೇ, ಎಂಥ ಸಂದರ್ಭದಲ್ಲಿಯೂ ಆತ್ಮ ಗೌರವದ ಜತೆ ರಾಜಿ ಮಾಡಿಕೊಳ್ಳದಿರಿ. ಹಾಗೆಯೇ ಯಾವುದೇ ನಿರ್ಧಾರ ತೆಗೆದೆ ಗೊಂದಲದಲ್ಲಿ ಕಾಲ ಕಳೆಯುವುದರಿಂದ ಈ ಬದುಕನ್ನು ಅರ್ಥಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
Thursday, 23 July 2009

ರೈತರ ಬಳಿ ಗೋವಿಲ್ಲ, ಮಾಡಲು ಕೆಲಸವಿಲ್ಲ....


ಮಧುಗಿರಿಯ ರಾಮದೇವರ ಬೆಟ್ಟದಲ್ಲಿ ತಂಗಾಳಿಗೆ ಮೈಚೆಲ್ಲಿ ಹೆಬ್ಬಂಡೆಗಳ ದೃಶ್ಯಕಾವ್ಯವನ್ನು ಮನಸಾರೆ ತುಂಬಿಕೊಂಡು, ಅಲ್ಲಿದ್ದ ಗೋಶಾಲೆಯ ದನಕರುಗಳನ್ನು ಮಾತನಾಡಿಸಿ ಬೆಟ್ಟದ ತಪ್ಪಲಿನಲ್ಲಿದ್ದ ಚೆನ್ನಮಲ್ಲನಹಳ್ಳಿಗೆ ಇಳಿದಾಗ ವಿಷಾದ ದಟ್ಟವಾಗಿ ತುಂಬಿಕೊಳ್ಳುತ್ತದೆ.
ಊರ ಯುವಕರೆಲ್ಲ ಕಟ್ಟೆಯಲ್ಲಿ ಕೂತು ಕೈ ಚೆಲ್ಲಿದ್ದಾರೆ.
ಈ ಬಾರಿ ಬರದ ಛಾಯೆ ಅಡರಿಕೊಂಡಿದೆ ಆ ಪುಟ್ಟ ಹಳ್ಳಿಯಲ್ಲಿ. ಮತ್ತೊಂದು ಕಡೆ ವಿದ್ಯುತ್ತಿಲ್ಲದೆ ಕಂಗಾಲಾಗಿದ್ದಾನೆ ರೈತಾಪಿ. ಶೇಂಗಾ, ರಾಗಿ ಬೆಳೆಯಲಾಗದೆ ಸೋತಿರುವ ಜನರಿಗೆ ಕಟ್ಟೆಯಲ್ಲಿ ಕೂತು ಮಕ ಮಕ ನೋಡೋದೇ ವೃತ್ತಿ ಮತ್ತು ಪ್ರವೃತ್ತಿಯಾಗಿದೆ. ಸಾಲದ್ದಕ್ಕೆ ಐವತ್ತು ಮನೆಗೊಂದರಂತೆ ನಾಲ್ಕು ಸಾರಾಯಿ ಅಂಗಡಿ ಇದೆ. ಬಹುಶಃ ಮನೆಗೊಂದರಂತೆ ಸಾರಾಯಿ ಅಂಗಡಿ ತೆರೆದರೂ ಗಿರಾಕಿಗಳಿಗೆ ಬರ ಇರದು. ದುಃಖದ ಸಂಗತಿ ಏನೆಂದರೆ ಬೆಳಗಿನ ಜಾವದಿಂದ ತಡರಾತ್ರಿಯ ತನಕ ಆಲ್ಕೋಹಾಲು ಕುಡಿಯುವ ಜನ ಹಾಲು ಕುಡಿಯುವುದಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಅಲ್ಲಿನ ಅವಿಭಾಜ್ಯ ಅಂಶವಾಗಿದ್ದ ದನಕರುಗಳ ಕೊರಳ ಗಂಟೆಗಳ ನಿನಾದ ಕ್ಷೀಣಿಸಿ ಬಹುಕಾಲವಾಗಿದೆ. ಅವುಗಳ ಹೆಜ್ಜೆ ಗುರುತುಗಳು ಕಟುಕರ ಸಂತೆಯಲ್ಲಿ ಬಿದ್ದು ಹೋಗಿವೆ. ಈವತ್ತು ಮಧುಗಿರಿ ತಾಲ್ಲೂಕಿನಲ್ಲಿಯೇ ಪ್ರತಿ ನಿತ್ಯ ನೂರಾರು ಗೋವುಗಳು ಕಸಾಯಿಖಾನೆಯಲ್ಲಿ ಬಲಿಯಾಗುತ್ತಿವೆ. ಚೆನ್ನಮಲ್ಲನಹಳ್ಳಿಯನ್ನು ಈ ಸಾರಾಯಿ ಅಂಗಡಿಗಳು ವಿನಾಶದಂಚಿನಲ್ಲಿ ಬಹುದೂರ ಕರೆದೊಯ್ದಿವೆ.
ಹೀಗಾಗಿ ಊರಿನಲ್ಲಿ ಕೆಲಸವಿಲ್ಲದೆ ತಿರುಗಾಡುತ್ತಿರುವ ಯುವಕರನ್ನು ಹೇಗಿದ್ದೀರಿ ಸ್ವಾಮಿ ? ಎಂದೊಡನೆ ಹ್ಯಾಪಮೋರೆ ಪ್ರದರ್ಶಿಸುತ್ತಾರೆ. ಹೀಗಾದರೆ ಹೇಗೆ ಎಂದರೆ ಮತ್ತೆ ಜೈಸಾ ಚಲ್ತಾ ಹೈ ಮನೋಭಾವ.
ಹೀಗೆ ಗ್ರಾಮೀಣ ಜನರನ್ನು ಗೊಣಗಾಟ ಮತ್ತು ನಿರಾಶಾಭಾವನೆಗಳ ಮೂಟೆಯನ್ನಾಗಿಸಿದವರು ಯಾರು ? ಇದಕ್ಕೆ ಉತ್ತರ ಸ್ವತಃ ಗ್ರಾಮೀಣ ಜನರೇ. ಅವರೇ ಮರೆತು ಹೋದ ಜೀವನ ಪದ್ಧತಿ, ವಿವೇಕಶೂನ್ಯತೆ ಅವರನ್ನು ಪರಾವಲಂಬಿಗಳನ್ನಾಗಿಸಿದೆ. ಈವತ್ತು ಹಳ್ಳಿಗಳ ಚಿತ್ರಣ ಸಂಪೂರ್ಣ ಸ್ವಕೇಂದ್ರಿತವಾಗಿದೆ. ಯಾರಾದರೂ ಹೊಸಬ ಹಳ್ಳಿಗೆ ಭೇಟಿ ಕೊಟ್ಟರೆ ಆತನಿಂದ ತಮಗೇನಾದರೂ ಪ್ರಯೋಜನ ಸಿಗುತ್ತಾ ಅಂತ ಮೊದಲು ನೋಡುವವರೇ ಹೆಚ್ಚು.
ನಗರಗಳಲ್ಲಿನ ಸೌಕರ್ಯಗಳು ಹಳ್ಳಿಗಳಲ್ಲಿ ಲಭ್ಯವಾಗಬೇಕು ಎಂದರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಆದರೆ ನಗರಗಳಲ್ಲಿ ಪ್ರಜ್ಞಾಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ಕಂಡುಬರುವ ಶ್ರಮ ಸಂಸ್ಕೃತಿ ಗ್ರಾಮಗಳಿಂದ ದೂರವಾಗಿದೆ. ಚೆನ್ನಮಲ್ಲನ ಹಳ್ಳಿಯಲ್ಲಿ ಕರೆಂಟು ಬಿಲ್ಲು ಬಾಕಿ ಒಂದೂವರೆ ಲಕ್ಷ ರೂ. ದಾಟಿದೆ.
ನಿಜ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಕರೆಂಟು ಕೊಡುತ್ತಿಲ್ಲ. ಇವೆರಡೂ ಸಮಸ್ಯೆಗಳನ್ನು ಎದುರಿಸುತ್ತಾ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ. ಇದೆ. ನಿಸ್ಸಂದೇಹವಾಗಿ. ಆದರೆ ಅಂಥ ಸ್ವಾವಲಂಬಿ ಬದುಕಿನ ಕಲೆ ಗೊತ್ತಾಗದೆ ಅವರು ತೊಳಲಾಡುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮನಸ್ಸು ಮೊದಲೇ ಅವರಲ್ಲಿಲ್ಲ. ಬದಲಿಗೆ ಸಿಕ್ಕ ಬೆಲೆಗೆ ಗೋವುಗಳನ್ನು, ಎತ್ತುಗಳನ್ನು, ಎಮ್ಮೆಗಳನ್ನು ಕಟುಕರಿಗೆ ಮಾರುತ್ತಾರೆ. ನೋಡಿ, ಒಂದು ಜೋಡಿ ಎತ್ತನ್ನು ಕಟುಕರಿಗೆ ಕೊಟ್ಟರೆ ರೈತನಿಗೆ ಮೂವತ್ತಾರು ಸಾವಿರ ರೂ. ಸಿಗುತ್ತದೆ. ಅದೇ ಎತ್ತುಗಳನ್ನು ವಧಿಸಿದ ನಂತರ ಮಾಂಸ ಮಾರಾಟದಿಂದ ವ್ಯಾಪಾರಿ ಗಳಿಸುವ ಲಾಭ ಲಕ್ಷಗಟ್ಟಲೆ ದಾಟುತ್ತದೆ. ಒಂದು ಕಡೆ ಕೆಎಂಎಫ್‌ (ಕರ್ನಾಟಕ ಮಿಲ್ಕ್ ಫೆಡರೇಷನ್) ಕಳೆದ ಜೂ. ೨೨ರಂದು ೪೦.೦೨ ಲಕ್ಷ ಕೆ.ಜಿ ಹಾಲು ಉತ್ಪಾದಿಸಿ ಅಮುಲ್ ನಂತರ ಅತಿ ಹೆಚ್ಚು ಉತ್ಪಾದನೆ ದಾಖಲಿಸಿದೆ. ಮತ್ತೊಂದು ಕಡೆ ಗ್ರಾಮದ ಪ್ರತಿಯೊಂದು ಮನೆಯ ಸದಸ್ಯರಿಗೆ ಉದ್ಯೋಗ ಕೊಡಬಲ್ಲ, ಅವರ ಆರ್ಥಿಕತೆಯನ್ನು ತಿದ್ದಬಲ್ಲ ಪಶು ಸಂಗೋಪನೆ ಕಣ್ಮರೆಯಾಗುತ್ತದೆ. ಅಂದರೆ ಏನರ್ಥ ? ಕಷ್ಟಪಟ್ಟು ದುಡಿಯುವ ಜನಕ್ಕೆ ಈ ರಾಜ್ಯದ ಯಾವುದೇ ಭಾಗದಲ್ಲಿ ಪಶುಸಂಗೋಪನೆ ಜೀವನಕ್ಕೆ ಆಧಾರವಾಗಬಲ್ಲುದು. ಅನ್ಯರಿಗೆ ಕುರಿ ಸಾಕುವುದೂ ಕೈಲಾಗುತ್ತಿಲ್ಲ. ಇನ್ನು ಪ್ರಯೋಗಶೀಲತೆ ಎಲ್ಲಿಂದ ಬರಬೇಕು ಹೇಳಿ.
ಸರಕಾರಗಳ ಬೇಜವಾಬ್ದಾರಿ, ಕೃಷಿ ಉತ್ಪನ್ನಗಳಿಗೆ ಸಿಗದ ಬೆಲೆಯ ನಡುವೆ ಬದುಕು ನಡೆಸುವುದು ಹೇಗೆ ? ಕೈತುಂಬಾ ಕೆಲಸವನ್ನು ಕಂಡುಕೊಳ್ಳುವುದು ಹೇಗೆ ? ಈ ಪ್ರಶ್ನೆಗೆ ಉತ್ತರವನ್ನು ಹಳ್ಳಿಗರು ಕಂಡುಕೊಳ್ಳಬೇಕಾಗಿದೆ. ಕೃಷಿ ಮತ್ತು ಹೈನುಗಾರಿಕೆ ಒಂದಕ್ಕೊಂದು ಪೂರಕ. ಒಂದು ಇಲ್ಲದಿದ್ದರೆ ಮತ್ತೊಂದಿಲ್ಲ. ಗೋ ಸಂಪತ್ತು ನಾಶವಾದರೆ ಕೃಷಿಯ ಸರ್ವನಾಶ ಖಚಿತ. ಹಾಗಾದರೆ ಮಾಡಲು ಕೆಲಸವಿಲ್ಲದೆ ಸಾರಾಯಿ ಕುಡಿಯುತ್ತ ಹಾಳಾಗುತ್ತಿರುವ ಗ್ರಾಮವಾಸಿಗಳ ಬದುಕನ್ನು ಗೋವುಗಳಿಂದ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲವೇ ? ಅದಕ್ಕೆ ಮತ್ತೊಮ್ಮೆ ಚೆನ್ನಮಲ್ಲನಹಳ್ಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಯಾಕೆಂದರೆ ಹಲವಾರು ದ್ವಂದ್ವಗಳಿಗೆ ಇಲ್ಲೊಂದು ಉತ್ತರ ಸಿಗುತ್ತದೆ.
ಗೋಶಾಲೆಯ ಕೆಲಸ : ಚೆನ್ನಮಲ್ಲನಹಳ್ಳಿಗೆ ಐದು ವರ್ಷಗಳ ಹಿಂದೆ ಬಂದು ನೆಲಸಿದವರು ಮಧುಸೂಧನ್ ರಾವ್. ಸಾವಿತ್ರಮ್ಮಾಜಿ ಎಂಬುವರು ದಾನವಾಗಿ ನೀಡಿದ್ದ ಹತ್ತೆಕರೆ ಜಮೀನಿನಲ್ಲಿ ಸುರಭಿ ಗೋಶಾಲೆಯನ್ನು ಅವರು ಸ್ಥಾಪಿಸಿದ್ದಾರೆ. ಅನಾಥ ಮತ್ತು ಅಕ್ರಮವಾಗಿ ಕಸಾಯಿಖಾನೆ ಪಾಲಾಗುತ್ತಿದ್ದ ಪಶುಗಳನ್ನು ಸಾಕುವ ಉದ್ದೇಶದಿಂದ ಗೋಶಾಲೆಯನ್ನು ಕಟ್ಟಿದರು. ಈವತ್ತು ಇನ್ನೂರಕ್ಕೂ ಹೆಚ್ಚು ಜಾನುವಾರುಗಳು ಇಲ್ಲಿವೆ. ಅಂದಹಾಗೆ ಇವುಗಳನ್ನು ಹೇಗೆ ಸಾಕುತ್ತಾರೆ ?
ಒಂದು ದನ ಕೇವಲ ಹಾಲು ಮಾತ್ರ ಕೊಡುವುದಿಲ್ಲ ತಾನೇ. ಸಗಣಿ, ಗಂಜಲವನ್ನು ಬಳಸಿಕೊಂಡು ತಯಾರಿಸುವ ಉಪ ಉತ್ಪನ್ನಗಳು ಹಲವು. ಶ್ಯಾಂಪೂ, ಮರ್ದನ ತೈಲ, ಹಲ್ಲಿನ ಪುಡಿ, ಬೆರಣಿ, ಸೊಳ್ಳೆ ಬತ್ತಿ, ಭಸ್ಮ, ಧೂಪ ಅಂತ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಬಹುದು. ಘಾಟಿ ಗೋಶಾಲೆಯ ಗೋ ಮಾತಾ ಅಗರಬತ್ತಿ ಜನಪ್ರಿಯ. ಈ ಪ್ರಕೃತಿ ಚಿಕಿತ್ಸಗಳ ಹಿಂದೆ ಬೇಕಾಗುವ ಗವ್ಯೋತ್ಪನ್ನಗಳು ಹಲವು. ಗಂಜಲವನ್ನು ಭಟ್ಟಿ ಇಳಿಸಿ ತಯಾರಿಸುವ ದ್ರವ ಔಷಧವಾಗಿ ಬಳಕೆಯಾಗುತ್ತದೆ. ಅದಕ್ಕೆ ಪ್ರತಿ ಲೀಟರ‍್ಗೆ ೧೨೦ ರೂ. ತನಕ ಬೆಲೆಯೂ ಇದೆ. ಇನ್ನು ಗೋಬರ‍್ ಗ್ಯಾಸ್ನ ಉಪಯೋಗ ಎಲ್ಲರಿಗೂ ತಿಳಿದಿದೆ. ಈವತ್ತು ಸುರಭು ಗೋಶಾಲೆಯಿಂದ ದಿನಕ್ಕೊಂದು ಟನ್ ಸಗಣಿ ಗೊಬ್ಬರ ಹೊರ ಹೋಗುತ್ತದೆ. ಅದರ ನದಲಿಗೆ ಮೇವು ಒಳಬರುತ್ತದೆ. ಇನ್ನು ನೀರು ? ರಾಮದೇವರ ಬೆಟ್ಟದ ಬದಿಯಲ್ಲಿ ಕಟ್ಟೆಯನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಲಾಗಿದೆ. ವರ್ಷದ ಐದಾರು ತಿಂಗಳಿಗೆ ಬೇಕಾದಷ್ಟು ನೀರು ಮಳೆ ನೀರಿನ ಸಂಗ್ರಹದಿಂದ ಸಿಗುತ್ತದೆ.
ಬಾರ್ಟರ್‌ ಪದ್ಧತಿ : ಉತ್ಪನ್ನವಾಗುವ ಸಗಣಿಯನ್ನು ರೈತರಿಗೆ ಕೊಟ್ಟು, ಅದರ ಬದಲಿಗೆ ನಗದು ಪಡೆಯುದಿಲ್ಲ, ಮೇವನ್ನು ಮಾತ್ರ ಪಡೆಯುತ್ತಾರೆ. ಗೋಶಾಲೆಯಲ್ಲಿ ಮೂರು ದಿನ ಕೆಲಸ ಮಾಡಿದವರಿಗೆ ಶಾಲೆಯ ಟ್ರಾಕ್ಟರ‍್, ಜಾನುವಾರುಗಳ ಸೇವೆ ಲಭ್ಯ. ಹೀಗಾಗಿ ಮೇವಿನ ಸಮಸ್ಯೆ ಇಲ್ಲಿಲ್ಲ. ಸ್ಥಳೀಯ ೧೮ ಜನರಿಗೆ ಗೋಶಾಲೆ ಕೆಲಸ ಕೊಟ್ಟಿದೆ.
ಇಲ್ಲಿ ಚೆನ್ನಮಲ್ಲನಹಳ್ಳಿ ಮತ್ತು ಗೋಶಾಲೆ ಸಾಂಕೇತಿಕ. ಆದರೆ ನೂರಿನ್ನೂರು ಕುಟುಂಬಗಳಿರುವ, ಆದರೆ ಇಂತಹುದೇ ಸಮಸ್ಯೆಯಲ್ಲಿರುವ ಸಾವಿರಾರು ಗ್ರಾಮಗಳಿವೆ. ಅಲ್ಲಿ ಅನೇಕ ಉಪ ಕಸುಬುಗಳು ಮಾಯವಾಗಿವೆ. ಪಶುಸಂಗೋಪನೆಯಿಂದ ಜನ ದೂರವಾಗುತ್ತಿದ್ದಾರೆ. ಗ್ರಾಮ ಭಾರತದಲ್ಲಿ ಮೊಬೈಲು, ಆಲ್ಕೋಹಾಲು, ಗುಟ್ಕಾ ಮಾತ್ರ ಎಗ್ಗಿಲ್ಲದೆ ಹರಿದಾಡುತ್ತಿದೆ.
ಈ ಲೇಖನಕ್ಕೆ ಚಿತ್ರ ತೆಗೆದು ಕೊಟ್ಟವರು : ಲೆವಿನ್‌

ಕನ್ನಡ ಕುಲ ಪುರೋಹಿತರ ಮನೆ !ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾಯರು ಬಾಳಿದ ಮನೆ ಪಾಳು ಬಿದ್ದಿದೆ. ಇದನ್ನು ಕಂಡು ಮರುಗಿರುವ ಮಿತ್ರ ರಾಜ್ ಕುಮಾರ್ ಹೊಳೆ ಆಲೂರಿಗೆ ಹೋಗಿ ಚಿತ್ರಗಳನ್ನು ತಂದಿದ್ದಾರೆ. ಈ ಮಳೆಗಾಲ ಮುಗಿದೊಡನೆ ಪಾಳು ಬಿದ್ದಿರುವ ಈ ಮನೆಯನ್ನು ನವೀಕರಣಗೊಳಿಸಲಾಗುವುದು ಎಂದು ಆಲೂರರ ವಂಶಸ್ಥರು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಕಾಯೋಣವಲ್ಲವೇ.. ಆದ್ರೂ ಹೀಗೆಲ್ಲ ಆಗಬಾರದಿತ್ತು ಎಂದು ನೋವಾಗದಿರದು ಈ ಚಿತ್ರಗಳನ್ನು ಕಂಡಾಗ...
ಕರ್ನಾಟಕವೇ ನಮ್ಮ ಕರ್ಮಭೂಮಿ. ಮಹಾಮಹಿಮರ ಪಾದಧೂಳಿಯಿಂದ ಪುನೀತವಾದ ಭೂಮಿಯಲ್ಲವೇ ? ಕರ್ನಾಟಕಕ್ಕಾಗಿ ಕಾರ್ಯ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ. ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕವೆಂದರೆ ಅದೊಂದು ಕಿರಣ ಕೇಂದ್ರ ಕಾಜು. ಅದರೊಳಗಿಂದ ನನಗೆ ಭರತಭೂಮಿ ಮಾತ್ರವೇ ಏಕೆ, ಇಡಿ ವಿಶ್ವವೇ ಕಾಣುತ್ತದೆ. ವಿಶ್ವದ ಕಿರಣಗಳೂ ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ, ಅಂತರ್ಯಾಮಿಯಾಗಿವೆ ಎಂದು ಸಾರಿದ ಮಹನೀಯರು ಆಲೂರು ವೆಂಕಟರಾಯರು. ಅಂತಹ ಪ್ರಾತಃಸ್ಮರಣೀಯರನ್ನು ಮರೆಯಬಾರದು.

ಮೋರಿಯ ಮೇಲೆ ನಿಲ್ಲುವುದೇಕೆ ಸ್ಲಮ್‌ ?

ಬದುಕಲು ನಗರ ಬಿಡದಿದ್ದಾಗ ಅದರದ್ದೇ ಮೋರಿಯಲ್ಲಿ ಹುಟ್ಟಿಕೊಳ್ಳುತ್ತದೆ ಸ್ಲಮ್ ಎಂಬ ನರಕ.
ಹಳಿಗಳ ಮೇಲೆ ಕಿವಿಗಡಚಿಕ್ಕುವ ಸದ್ದಿನಲ್ಲಿ ರೈಲು ಸಾಗುವಾಗ ಸ್ಲಮ್ಮಿನ ಮೋಟುಗೋಡೆಗಳು ಅದುರುತ್ತವೆ. ಅಲ್ಲಿಯೇ ಹೇಸಿಗೆಯ ಲೆಕ್ಕಿಸದೆ ಗೂಡಿನೊಳಗೆ ಮುದುರಿಕೊಂಡಿರುವವರು ಯಾವಾಗ ಏನಾದೀತೋ ಅಂತ ಅಂದುಕೊಳ್ಳುತ್ತಾರೆ.
ಆದರೆ ಅಲ್ಲಿಯೇ ಮೋರಿ ಪಕ್ಕ ಹೊರಳಾಡುವ ಕೆಂಪಾದ ಕಣ್ಣಿನ ಕುಡುಕರು, ಮಾರಮ್ಮನ ಗುಡಿಯ ಪಕ್ಕದ ಕಟ್ಟೆಯ ಮೇಲೆ ಕೇರಂ ಬೋರ್ಡ್ ಬಿಲ್ಲೆ ಮತ್ತು ಇಸ್ಪೀಟು ಎಲೆಗಳೊಂದಿಗೆ ಜೂಜಾಡುವ ಸೋಂಭೇರಿಗಳು ಇದಾವುದೇ ಗೋಜಿಗೆ ಬರುವುದಿಲ್ಲ. ಮನೆಯ ಹೆಂಗಸನ್ನು ಬಡಿದು ಕೊಂದಾದರೂ ಸರಿ, ಕಣ್ಣೆದುರಿನಲ್ಲಿಯೇ ಮರೆಯಲ್ಲಿದ್ದಂತೆ ಮಾರಿದರೂ ಸರಿಯೇ, ಅವರಿಗೆ ತುಣುಕು ಮಾಂಸ, ಮದ್ಯ ಮತ್ತು ಜೂಜಿದ್ದರೆ ಬೇಡ ಇಹ ಪ್ರಪಂಚ ಮತ್ತು ರಾಮಕೃಷ್ಣಾಶ್ರಮದ ಪ್ರವಚನ. ಆದರೂ ನಮ್ಮ ಕೊಳಚೆಯಲ್ಲಿನ ಮಾನವರು ಒಳ್ಳೆಯವರು. ಬೇಕಾದರೆ ಮುಖ್ಯಮಂತ್ರಿಗಳೇ ಸ್ಲಂ ವಾಸ್ತವ್ಯಕ್ಕೆ ಬಂದರೂ, ಕೊಡಲೇನೂ ಇಲ್ಲದಿದ್ದರೂ ಕನಿಷ್ಠ ಗೋಣಿ ತಾಟು ಹಾಸಿ ಸತ್ಕರಿಸಿಯಾರು. ಯಾಕೆಂದರೆ ಅವರು ಇನ್ನೂ ಮನುಷ್ಯರಾಗಿ ಉಳಿದುಕೊಂಡಿದ್ದಾರೆ. ಹಾಗಂತ ಬಡತನ ನಿರ್ಮೂಲನೆಯ ಬಗ್ಗೆ ನಗರದ ರೆಸಾರ್ಟ್‌ಗಳಲ್ಲಿ ರೆಸಾರ್ಟ್ ಗಳಲ್ಲಿ ನಡೆಯುವ ವಿಚಾರಸಂಕಿರಣಗಳಲ್ಲಿ ಅವರು ಭಾಗವಹಿಸುವುದಿಲ್ಲ.
ಮೆಜೆಸ್ಟಿಕ್ ಸಮೀಪದ ಜಗಜೀವನರಾಂ ಕೊಳಚೆ ಪ್ರದೇಶ ಅಥವಾ ಅಂಜನಪ್ಪ ಗಾರ್ಡನ್‌ ಸ್ಲಂಮ್ಮಿನ ಕಿರಿದಾದ ಸಂದಿಗೊಂದಿಗಳಲ್ಲಿ ಎಂದಾದರೂ ನಡೆದಿದ್ದೀರಾ ? ಹಾಗೆ ಯಾವತ್ತಾದರೂ ಅನ್ನಿಸಿದರೆ ಒಮ್ಮೆ ಭಂಗಿ ಕಾಲೋನಿಗೆ ಹೋಗಿ ಬನ್ನಿ. ಹಿಂದೆ ಮಲ ಹೊರುತ್ತಿದ್ದ ಪೌರ ಕಾರ್ಮಿಕರು ಹೆಚ್ಚಾಗಿರುವ ಸ್ಲಮ್ ಅದು. ಸರ್ವೇ ಮಾಡಿದ ಪ್ರಕಾರ ಕೇವಲ ೨೫೦ ಅಡಿ ಅಗಲ ಮತ್ತು ೫೫೦ ಅಡಿ ಉದ್ದವಿರುವ ಈ ಕೊಳಚೆ ಪ್ರದೇಶದಲ್ಲಿ ಸುಮಾರು ೪೫೦ ಕುಟುಂಬಗಳು ಉಸಿರುಗಟ್ಟಿಸುವಂಥ ವಾತಾವರಣದಲ್ಲಿ (ಸುಮಾರು ಎರಡು ಸಾವಿರ ಜನ) ವಾಸಿಸುತ್ತಿವೆ. ಇಂಥ ಜನಸಾಂದ್ರತೆಯ ಸ್ಲಮ್ನಲ್ಲಿ ಕಳೆದ ಐವತ್ತು-ಅರುವತ್ತು ವರ್ಷಗಳಿಂದ ಅವರಿದ್ದಾರೆ. ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಕೆಲವು ಅಡಿಗಳ ಜಾಗದ ಹಕ್ಕು ಪತ್ರ ಸಿಕ್ಕಿದೆ.
ಅವರೆಲ್ಲ ಅಲ್ಲಿಯೇ ಗೂಡು ಕಟ್ಟಿದ್ದೇಕೆ ? ಅದು ಅಕ್ರಮವಾಗಿದ್ದರಿಂದ ಬೃಎಡೆಗೆ ಹೋಗಬೇಕು, ಅವರಿಗೆ ಯಾವ ಸೌಲಭ್ಯವನ್ನು ಕೊಡಲೂ ಸಾಧ್ಯವಿಲ್ಲ. ಅವರು ಕಂದಾಯ ಕಟ್ಟುತ್ತಾರೆಯೇ ? ಎನ್ನುತ್ತದೆ ಸರಕಾರ. ಆದರೆ ದಿನಕ್ಕೆ ಅರುವತ್ತು ರೂಪಾಯಿ ಸಂಪಾದಿಸಲಾಗದ ಜನ ಅವರು. ಎಲ್ಲಿಂದ ಬಾಡಿಗೆ ಮನೆ ಹಿಡಿಯುತ್ತಾರೆ ? ನಗರಪಾಲಿಕೆಯಲ್ಲಿ ಎಲ್ಲ ಕೆಲಸಗಳೂ ಗುತ್ತಿಗೆದಾರರ ಪಾಲಾಗಿವೆ. ಶಾಸನದ ಪ್ರಕಾರ ದಿನಗೂಲಿ ಎಪ್ಪತ್ತು ರೂಪಾಯಿ ಇದ್ದರೂ, ಇವರ ಕೈಗೆ ಐವತ್ತಕ್ಕಿಂತ ಹೆಚ್ಚಿಗೆ ಸಿಗುವುದಿಲ್ಲ. ಬೇರೆ ದಾರಿ ಕಾಣದೆ ರೈಲು ಹಳಿಗಳ ಪಕ್ಕ ಚೂರು ಪಾರು ಇಟ್ಟಿಗೆಗಳನ್ನು ಒತ್ತಟ್ಟಿಗಿಟ್ಟು ಗೂಡು ಕಟ್ಟುತ್ತಾರೆ. ಇಲ್ಲವಾದರೆ ಮೋರಿಗಳ ಕಲ್ಲು ಚಪ್ಪಡಿಗಳ ಮೇಲೆ ಕೆಲವು ಅಡಿಗಳಷ್ಟು ಜಾಗದಲ್ಲಿ ಗುಡಿಸಲನ್ನು ನಿರ್ಮಿಸುತ್ತಾರೆ. ಚರಂಡಿಯ ಮೇಲೆ ಸ್ಲಮ್ ತಯಾರಾಗುವುದೇ ಹಾಗೆ. ಯಾಕೆಂದರೆ ಮೋರಿ ಮತ್ತು ಹಳಿಗಳ ಪಕ್ಕ ಕೆಲವು ಅಡಿಗಳಷ್ಟು ಜಾಗ ಖಾಲಿ ಬಿಡುವುದು ಸಾಮಾನ್ಯ. ಹೀಗಿದ್ದರೂ ನಗರದವರಿಗೆ ಸ್ಲಮ್ಮಿನವರು ಬೇಕು. ಯಾಕೆಂದರೆ ಮೋರಿ ಮತ್ತು ಹಳಿಗಳ ಪಕ್ಕ ಕೆಲವು ಅಡಿಗಳಷ್ಟು ಜಾಗ ಖಾಲಿ ಬಿಡುವುದು ಸಾಮಾನ್ಯ. ಹೀಗಿದ್ದರೂ ನಗರದವರಿಗೆ ಸ್ಲಮ್ಮಿನವರು ಬೇಕು. ಯಾಕೆಂದರೆ ಅವರಿಲ್ಲದಿದ್ದರೆ ನಗರಕ್ಕೆ ನಗರವೇ ಕಸದ ಬುಟ್ಟಿಯಾಗುತ್ತದೆ.
ಸ್ಲಮ್‌ಡಾಗ್‌ ಮಿಲಿಯನೇರ‍್ ಚಿತ್ರದಲ್ಲಿ ಕೊಳಚೆ ಪ್ರದೇಶದ ಬಗ್ಗೆ ತೋರಿಸಿದ್ದು ಅತಿಯಾಗಿರಬಹುದು. ಆದರೆ ಒಮ್ಮೆ ಸ್ಲಮ್ಮಿನ ಒಳಹೊಕ್ಕು ನೋಡಿದರೆ ತೀವ್ರ ಬೇಸರವಾಗದೆ ಇರುವುದಿಲ್ಲ.

Tuesday, 21 July 2009

ಗಾಂಧಿ ಇದ್ದಿದ್ದರೆ ಅವರ ಹೆಸರಿನ ಪಠ್ಯಕ್ರಮವನ್ನು ಬದಲಿಸುತ್ತಿದ್ದರು

ನೀವು ಯಾವುದಾದರೂ ಎನ್‌ಜಿಒ ಕೆಲಸ ಹುಡುಕುತ್ತಿದ್ದೀರಾ ?
ಹಾಗಿದ್ದಲ್ಲಿ ಗಾಂಧಿ ಅಧ್ಯಯನ ಉಪಯೋಗಕ್ಕೆ ಬಂದೀತು..ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೂ ಹೆಚ್ಚುವರಿಯಾಗಿ ರೆಸ್ಯೂಮ್‌ಗೇ ಒಳ್ಳೆಯದು..
ಗಾಂಧಿ ಅಧ್ಯಯನ ನಮಗೇಕೆ ಬೇಕು ? ಅಂತ ನೀವು ಈವತ್ತು ವಿಶ್ವ ವಿದ್ಯಾಲಯಗಳ ಗಾಂಧಿ ಅಧ್ಯಯನ ಕೇಂದ್ರಗಳಲ್ಲಿ ಕೇಳಿದರೆ ಸಿಗುವ ನೀರಸ ಉತ್ತರ ಇದು ಬಿಟ್ಟರೆ ಬೇರೆ ಏನೂ ಅಲ್ಲ. ಇದ್ದರೂ ಅವುಗಳನ್ನು ಕಲಿಸುವರಿಲ್ಲ. ಯಾಕೆಂದರೆ ಅಲ್ಲಿನ ಪಠ್ಯಕ್ರಮದಲ್ಲಿ ಅಂತದ್ದೇನೂ ಇಲ್ಲ. ಎಲ್ಲ ಹತ್ತಾರು ವರ್ಷಗಳಷ್ಟು ಹಳೆಯ ಸಿಲೆಬಸ್‌..ಒಂದು ಕಡೆ ರೆಸ್ಯೂಮ್‌ಗೆ ಸೇರಿಸಿದರೂ ಕೆಲಸ ಸಿಗುವ ಭರವಸೆ ಇಲ್ಲ.
ಪಟನಾದ ಅಜಿತ್‌ ಸಿನ್ಹಾ ಮತ್ತು ಪ್ರಿಯರಂಜನ್‌ ಕುಮಾರ್‌ ಗಾಂಧಿವಾದದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿದ್ದಾರೆ. ಕನಿಷ್ಠ ಶಿಕ್ಷಕರ ಕೆಲಸ ಸಿಕ್ಕಿದರೂ ಸಾಕು ಎಂದು ಕೊರಗುತ್ತಾರೆ. ಗಾಂಧಿವಾದದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅಜಿತ್‌ಕುಮಾರ್‌ ಠಾಕೂರ್‌ ಕೆಲಸ ಸಿಗದ ಕಾರಣ ಕ್ಷೌರಿಕನಾದ. ಹೀಗೆ ನಿರುದ್ಯೋಗಿಗಳಾಗಿರುವ ಸಾಕಷ್ಟು ಮಂದಿ ಇದ್ದಾರೆ. ಕೆಲವರಿಗೆ ಸ್ವಯಂಸೇವಾ ಸಂಸ್ಥೆಗಳಲ್ಲಿ ಅರೆಕಾಲಿಕ ಉದ್ಯೋಗ ಸಿಕ್ಕಿದೆ. ಯಾಕಿಂಥಾ ದುಃಸ್ಥಿತಿ ? ಗಾಂಧಿ ಅಧ್ಯಯನ ವೃತ್ತಿಯಾಧಾರಿತ ಅಲ್ಲವಾ ?
ರೋಣದಲ್ಲಿ ಕಾಣಬಹುದಷ್ಟೇ
ಗಾಂಧಿ ಅಧ್ಯಯನದ ಅವಧಿಯಲ್ಲಿ ಸ್ವಲ್ಪಕಾಲ ಯಾವುದಾದರೂ ಹಳ್ಳಿಯಲ್ಲಿದ್ದು, ಅಲ್ಲಿನ ಜನರೊಡನೆ ಬೆರೆತು ಅಧ್ಯಯನ ನಡೆಸಬೇಕಾಗುತ್ತದೆ. ವರ್ಷಕ್ಕೆ ಇಬ್ಬರಿಗೆ ವಾರ್ಧಾಗೆ ತೆರಳುವ ಅವಕಾಶ ಸಿಗುತ್ತದೆ. ಅದರ ಅನುಭವವೇ ಬೇರೆ. ಎಂತಹ ಪುಂಡಾಟಿಕೆಯ ವಿದ್ಯಾರ್ಥಿಯಾದರೂ ಸರಿಯೇ, ವಾರ್ಧಾಗೆ ಕನಿಷ್ಠ ಒಂದು ವಾರದ ಮಟ್ಟಿಗೆ ಕಳಿಸಿರಿ, ಆತ ಬುದ್ಧಿವಂತನಾಗಿ ಹಿಂತಿರುಗದಿದ್ದರೆ ಕೇಳಿ ಎನ್ನುತ್ತಾರೆ ಹೋಗಿ ಬಂದ ವಿದ್ಯಾರ್ಥಿಗಳು. ಆದರೆ ಕಲಿಯುವ ವೇಳೆ ಇಂತಹ ಬೆರಗಿನ ಮಾತುಗಳು ಸಾಮಾನ್ಯ. ಹೊರಗಿನ ಜಗತ್ತಿಗೆ ಬಂದಾಗ ತಾಪ ಏನಂತ ಗೊತ್ತಾಗುತ್ತದೆ. ಕೆಲಸ ಹುಡುಕುವ ಕಷ್ಟದ ನಡುವೆ ವಾರ್ಧಾ ಆಶ್ರಮದಲ್ಲಿ ಬೆಳಗ್ಗೆ ಎದ್ದು ಮಿಂದು ತಿಂದ ಹಸಿ ಕ್ಯಾರೆಟ್‌ನ ನೆನಪು ಒಣಗುತ್ತದೆ. ಚರಕದ ಹತ್ತಿರ ನಿಂತು ತೆಗೆಸಿದ ಫೋಟೊ ಆಲ್ಬಮ್‌ನಲ್ಲಿರುತ್ತದೆ. ನಿಜಕ್ಕೂ ಚರಕದಿಂದ ನೂಲು ತೆಗೆಯಲು ದಿನಕ್ಕೆ ಹತ್ತು ಗಂಟೆ ರಟ್ಟೆ ಮುರಿದು ಮೂವತ್ತು ರೂಪಾಯಿಗೆ ತೃಪ್ತಿಪಡುವ ವೃದ್ಧೆಯರನ್ನು ರೋಣದಲ್ಲಿ ಕಾಣಬಹುದಷ್ಟೇ.
ಅಂದು ಸ್ವತಃ ನೆಹರೂ ಅವರಿಗೇ ಗಾಂಧೀಜಿ ವಿತ್ತ ಚಿಂತನೆ ಅರ್ಥವಾಗಿರಲಿಲ್ಲ. ನೀವು ಎಷ್ಟು ಕರೆಂಟ್‌ ಖರ್ಚು ಮಾಡುತ್ತೀರೊ, ಎಷ್ಟು ಉಕ್ಕು ಉತ್ಪಾದಿಸುತ್ತೀರೊ ಎನ್ನುವುದರ ಮೇಲೆ ನಿಜವಾದ ತಾಕತ್ತು ನಿಂತಿದೆ. ಗಾಂಧಿವಾದವೆಲ್ಲ ಬೋ ನಿದಾನ ಅಂತ ಮೂಗು ಮುರಿದಿದ್ದರು ಚಾಚಾ. ಇನ್ನು ನಾಲ್ಕೈದು ವಿಚಾರಸಂಕಿರಣ, ಕಾರ್ಯಾಗಾರ, ಒಂದು ಹಳ್ಳಿಗೆ ಭೇಟಿ ಮತ್ತೊಂದು ಪ್ರಬಂಧ ಸ್ಪರ್ಧೆಯಿಂದ ಹೇಗೆ ಗೊತ್ತಾಗಬೇಕು ಹೇಳಿ.
ಉಳಕೊಳ್ಳಲು ಹಾಸ್ಟೇಲ್‌ ಸಿಗುತ್ತದೆ ಎಂಬ ಅತಿಯಾಸೆಯಿಂದ ಗಾಂಧಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದವರಿದ್ದಾರೆ. ಇದೇ ಕಾರಣಕ್ಕಾಗಿ ಬೆಂಗಳೂರು ವಿ.ವಿಯಲ್ಲಿ ಗಾಂಧಿ ಅಧ್ಯಯನದ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯವನ್ನು ರದ್ದುಪಡಿಸಲಾಗಿದೆ. ಪಂಜಾಬ್‌ ವಿ.ವಿ ಸೇರಿದಂತೆ ಕೆಲವೆಡೆ ಸುಂದರ ಸುಸಜ್ಜಿತ ಭವನಗಳಿವೆ. ಆದರೆ ಅದರೊಳಗೆ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಮಹಾ ಪ್ರಬಂಧ ಮಂಡನೆಯಾಗಿದೆ. ನಡೆಯಬೇಕಿದ್ದ ವಿಷಯಗಳ ಬಗ್ಗೆ ಏನೂ ಆಗಿಲ್ಲ.
ಸ್ನಾತಕೋತ್ತರ ಪದವಿಯ ವ್ಯಾಸಂಗ ನಿರತ ಅಥವಾ ಪೂರೈಸಿದ ವಿದ್ಯಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಅವಧಿಯ ಗಾಂಧಿ ಅಧ್ಯಯನ ಪೂರೈಸಬಹುದು. ಇತರ ಪದವಿಯ ಜತೆಗೆ ಮಾಡುವುದರಿಂದ ಸಂಯೋಜಿತ ಪದವಿ ಅಂತ ಕರೆಯುತ್ತಾರೆ. ಕರಿಯರ್‌ಗೆ ಅನುಕೂಲವಾಗುತ್ತದೆ ಎಂದು ಭಾವಿಸುವವರಿಗೆ ಕಾಣುವ ಮತ್ತೊಂದು ಪ್ಲಸ್‌ ಪಾಯಿಂಟ್‌ ಶುಲ್ಕ. ಈ ಡಿಪ್ಲೊಮಾಗೆ ಪ್ರವೇಶ ಶುಲ್ಕ ೫೦೦ ರೂ. ಮಾತ್ರ. ಪರೀಕ್ಷೆಯ ಸಂದರ್ಭ ೬೦೦ ರೂ. ಶುಲ್ಕ ನೀಡಿದರೆ ಸಾಕು. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಟ್ಟು ೨೧ ಮಂದಿ ಸೇರ್ಪಡೆಯಾಗಬಹುದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಬ್ಯಾಚ್‌ನಲ್ಲಿ ಅಷ್ಟೂ ಸ್ಥಾನಗಳು ಭರ್ತಿಯಾಗಿವೆ. ಜತೆಗೆ ವಾರ್ಧಾ ಪ್ರವಾಸಕ್ಕೆ ಅವಕಾಶ ಸಿಗಲೂ ಬಹುದು.
ಅಲ್ಲೀಗ ಸಿಜಿಕೆ ಇಲ್ಲ
ಬೆಂಗಳೂರು ವಿಶ್ವ ವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರವನ್ನು ೧೯೬೫ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದ್ಘಾಟಿಸಿದ್ದರು. ಕರ್ನಾಟಕದ ರಾಜ್ಯಪಾಲ ಡಾ.ವಿ.ವಿ ಗಿರಿ, ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಆಗಮಿಸಿದ್ದರು. ೧೯೬೯ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಅಲ್ಲಿಂದ ಮತ್ತೆ ಕೇಂದ್ರದಲ್ಲಿ ಹಲವು ದಶಕಗಳ ಕಾಲ ನಡೆದ ಚಟುವಟಿಕೆ ಸೊನ್ನೆ. ೨೦೦೨ರಲ್ಲಿ ಪ್ರೊ.ಸಿಜಿಕೆಯವರು ಕೇಂದ್ರದ ನಿರ್ದೇಶಕರಾಗಿ ಬಂದಮೇಲೆ ಚೈತನ್ಯ ಬಂತು. ಗಾಂಧಿ ಅಧ್ಯಯನದ ಸುತ್ತಲಿನ ಪರಿಸರ ಕಲಾತ್ಮಕವಾಗಿ ಕಂಗೊಳಿಸಿತು. ಸಬರಮತಿ ಬಯಲು ರಂಗಮಂದಿರ ತಲೆ ಎತ್ತಿಕೊಂಡಿತು. ಬೆಂಗಳೂರಿನಲ್ಲಿಯೇ ಅತಿ ದೊಡ್ಡ ಚರಕದ ಕಂಚಿನ ಮಾದರಿ ಸ್ಥಾಪನೆಯಾಯಿತು. ಇದೆಲ್ಲ ಗಾಂಧಿ ಭವನದ ಭೌತಿಕ ಸಂದರ್ಯ ವೃದ್ಧಿಗೆ ಕಾರಣವಾಯಿತು. ಎಲ್ಲ ಚಟುವಟಿಕೆಗಳ ಹಿಂದೆ ಸಿಜಿಕೆಯವರ ದೂರದೃಷ್ಟಿ ಮತ್ತು ಪರಿಶ್ರಮ ಇತ್ತು. ಇದೀಗ ಮತ್ತೆ ಶೂನ್ಯ ಆವರಿಸಿದೆ. ಯಾಕೆಂದರೆ ಅಲ್ಲೀಗ ಸಿಜಿಕೆ ಇಲ್ಲ. ನಾಯಕತ್ವ ಸರಿಯಿಲ್ಲದಿದ್ದರೆ ಯಾವುದೇ ಸಂಸ್ಥೆಯಾದರೂ ಹೇಗೆ ಕಳಾಹೀನವಾಗುತ್ತದೆ ಎಂಬುದನ್ನು ಇಲ್ಲಿ ಧಾರಾಳವಾಗಿ ಗಮನಿಸಬಹುದು. ಈ ವರ್ಷ ಕೇಂದ್ರಕ್ಕೆ ಸಿಗುವ ಅನುದಾನದಲ್ಲಿಯೂ ಕಡಿತವಾಗಿದೆ. ಸುಜ್ಞಾನಮೂರ್ತಿಯವರು ೧೯೯೭ರಲ್ಲಿ ಸಿದ್ಧಪಡಿಸಿದ ಪಠ್ಯಕ್ರಮ ಇನ್ನೂ ಪರಿಷ್ಕರಣೆಯಾಗಿಲ್ಲ. ಎಂಫಿಲ್‌ ಆರಂಭಿಸುವ ಪ್ರಸ್ತಾಪ ನನೆಗುದಿಯಲ್ಲಿದೆ. ಗಾಂಧಿ ಅಧ್ಯಯನ-ರಾಜಕೀಯ ಮತ್ತು ಆರ್ಥಿಕತೆ, ಧರ್ಮ ಮತ್ತು ತತ್ತ್ವಶಾಸ್ತ್ರ, ಗಾಂಧಿವಾದ ಮತ್ತು ಸಾಮಾಜಿಕ ಬದಲಾವಣೆ ಹಾಗೂ ನನ್ನ ಗ್ರಾಮ ಎಂಬ ಪ್ರವಾಸ ಕಾರ್ಯಕ್ರಮವೇ ಪಠ್ಯಕ್ರಮ. ಈ ಪಠ್ಯಕ್ರಮ ಇತಿಹಾಸದ ಯಾವುದೋ ಶೀರ್ಷಿಕೆಯಂತಿಲ್ಲವೇ ? ನೀವೇ ಹೇಳಿ, ಗಾಂಧಿ ಅಧ್ಯಯನಕ್ಕೂ ಇತಿಹಾಸದ ಕಲಿಕೆಗೂ ವ್ಯತ್ಯಾಸವಿಲ್ಲವೇ ? ಅಥವಾ ಗಾಂಧಿ ಅಧ್ಯಯನವೆಂದರೆ ಅದರ ಇತಿಹಾಸ ಮಾತ್ರವಾ ? ಅದರ ಪ್ರಸ್ತುತತೆ ಏನು ಎಂಬುದು ಪಠ್ಯಕ್ರಮದಲ್ಲಿ ಇಲ್ಲದಿದ್ದರೆ ಅದರ ಅಧ್ಯಯನದ ಉಪಯೋಗವೇನು ?
ಜೈನಮತ ಮತ್ತು ಗಾಂಧಿ, ಭಯೋತ್ಪಾದನೆ ದಮನ ಮತ್ತು ಗಾಂಧಿ, ಜಾತಿ ಧರ್ಮದ ಬಗ್ಗೆ ಗಾಂಧಿ , ಶಿಕ್ಷಣ ಮತ್ತು ಗಾಂಧಿ.. ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ವಿಚಾರಸಂಕಿರಣಗಳಲ್ಲಿ ಚರ್ವಿತಚರ್ವಣವಾದ ಚಿಂತನೆಗಳ ಶೀರ್ಷಿಕೆಗಳಿವು. ಇಷ್ಟೆಲ್ಲ ಮಾಡಿದ್ದೇವೆ ಅಂತ ಕರಪತ್ರದಲ್ಲಿ ಬೇರೆ ಪ್ರಕಟಿಸಿದ್ದಾರೆ. ಇಂಥ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಗಾಂಧಿ ಭವನಗಳ ವಿಚಾರಸಂಕಿರಣವೇಕೆ ? ಗ್ರಂಥಾಲಯಗಳಲ್ಲಿ ಪುಸ್ತಕ ಓದಿ ತಿಳಿಯಬಹುದು. ಇಂಟರ್‌ನೆಟ್‌ ಕೂಡ ಸಹಾಯಕ್ಕೆ ಬರುತ್ತದೆ. ಅಲ್ವಾ.
ಮಂಗಳೂರಿನ ಪಬ್‌ನಲ್ಲಿ ಪುಂಡಾಟಿಕೆ ನಡೆಸಿದ ಮುತಾಲಿಕ್‌ ಸಂಗಡಿಗರ ವಿರುದ್ಧ ಪರ್ತಕರ್ತೆಯೊಬ್ಬರು ನಯಾ ಪೈಸೆ ಖರ್ಚಿಲ್ಲದೆ ಪಿಂಕ್‌ಚೆಡ್ಡಿ ಐಡಿಯಾ ಪ್ರಕಟಿಸಿದಳು. ಒಂದಿಷ್ಟು ಸಾವಿರ ಜನ ಆಕೆಯ ಕಪಿಚೇಷ್ಟೆಗೆ ದನಿಗೂಡಿಸಿದರು. ಕೆಲವು ಪತ್ರಿಕೆಗಳಂತೂ ಇದನ್ನು ಗಾಂಧಿಗಿರಿ ಶೈಲಿಯ ಪ್ರತಿಭಟನೆ ಅಂತ ಹೊಗಳಿದರು. ಜಯಕರ್ನಾಟಕದ ಸ್ವಯಂಘೋಷಿತ ನಾಯಕನೊಬ್ಬ ಸುವರ್ಣವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಣರಾಜ್ಯೋತ್ಸವ ದಿನದಂತೆ ಲವ್‌ ಮಾಡುವವರ ದಿನ ಇದ್ದರೇನಂತೆ ಎಂದು ಬಿಟ್ಟ. ನಾಚಿಕೆಯಾಗುವುದಿಲ್ಲವೇ ಇಂಥ ಲಜ್ಜೆಗೆಟ್ಟ ಕೆಲಸಕ್ಕೆ ಮತ್ತು ಅದರ ಸಮರ್ಥನೆಗೆ ? ಇಂತಹ ವಿಕೃತಿಗಳ ಬಗ್ಗೆ ಅರಿವು ಮೂಡಿಸಲು ಗಾಂಧಿ ಭವನಗಳೇಕೆ ಮುಂದಾಗಬಾರದು ? ಗಾಂಧೀಜಿಯವರ ಆದರ್ಶಗಳಲ್ಲಿ ಸ್ವಲ್ಪವಾದರೂ ಉಳಿದುಕೊಂಡಿರುವುದು ಖಾದಿ ಉದ್ಯಮ. ಅದರ ಪುನರುಜ್ಜೀವನಕ್ಕೆ ಹೇಗೆಲ್ಲ ದುಡಿಯಬಹುದು ಎಂಬುದರ ಬಗ್ಗೆ ಯಾಕೆ ವಿಚಾರ ಮಾಡುತ್ತಿಲ್ಲ
ಕಣ್ಣಾರೆ ಪರಿಚಯಿಸಬೇಕು
ಯಾವತ್ತೂ ಚರ್ಚೆಗಳು ಮಾತ್ರ ಸಾಲುವುದಿಲ್ಲ. ಮನಸ್ಸಿಗೆ ತಟ್ಟಬೇಕಾದರೆ, ಮುಟ್ಟಬೇಕಾದರೆ ಗಾಂಧಿ ಚಿಂತನೆಯಲ್ಲಿ ಬಾಳು ನಡೆಸಿತ್ತಿರುವವರನ್ನು ವಿದ್ಯಾರ್ಥಿಗಳಿಗೆ ಕಣ್ಣಾರೆ ಪರಿಚಯಿಸಬೇಕು. ಗಾಂಧಿ ಹೇಳಿದ್ದನ್ನು ಅವರು ಹೇಗೆ ಅನುಸರಿಸಿದರು ಎಂಬುದನ್ನು ಕಲಿಸಬೇಕು. ಅದರಿಂದ ವಿದ್ಯಾರ್ಥಿಗಳ ಬದುಕಿಗೂ ಉಪಯೋಗವಾದೀತು.
ಭೋಗ ಸಂಸ್ಕೃತಿಯ ವಿನಾಶಕಾರಿ ಭವಿಷ್ಯ ಗಾಂಧಿಜಿಗೆ ಅಂದೇ ಹೊಳೆದಿತ್ತು ಎಂಬುದು ಈಗ ಸ್ಪಷ್ಟವಾಗುತ್ತಿದೆ. ಅದಕ್ಕೆ ಕಾರಣ ಆರ್ಥಿಕ ಹಿನ್ನಡೆ. ಸಾಮಾನ್ಯ ಉದ್ಯೋಗಿಯಿಂದ ಕಾರ್ಪೊರೇಟ್‌ ಕಂಪನಿಗಳ ತನಕ ಎಲ್ಲರಿಗೂ ಸರಳ ಜೀವನದ ಅಗತ್ಯವನ್ನು ಆರ್ಥಿಕ ಕುಸಿತ ಬಲವಂತವಾಗಿ ಕಲಿಸುತ್ತಿದೆ. ಏಳೆಂಟು ಕ್ರೆಡಿಟ್‌ಕಾರ್ಡ್ ಉಜ್ಜಿ ಸಾಲದ ಬಲೆಗೆ ಬಿದ್ದವರಿಗೆ ಗಾಂಧಿ ಚಿಂತನೆಯ ಅಧ್ಯಯನದಿಂದ ಕನಿಷ್ಠ ಸರಳ ಜೀವನದ ಅಗತ್ಯ ಅರ್ಥವಾಗಬಹುದು.
೨. ಖಾದಿಗೆ ವ್ಯಾಪಾರ, ಬೀದಿಗೆ ನೇಕಾರ ಹೇ ರಾಮ್‌ !

ಆವತ್ತು ಬಾಪೂಜಿ ತಾವೇ ಚರಕದಲ್ಲಿ ದುಡಿದು ಲೋಟ ಹಾಲು ಮತ್ತು ಕಡಲೇಕಾಯಿ ತೆಗೆದುಕೊಮಡಿರಬಹುದು. ಆದರೆ ಇವರು ಕೊಡೋ ಸಂಬಳದಲ್ಲಿ ಅದಕ್ಕೂ ಕಾಸು ಹುಟ್ಟಲ್ಲ ಸಾ..
ಕಳೆದ ೨೫ ವರ್ಷಗಳಿಂದ ಖಾದಿ ಕಾರ್ಮಿಕರಾಗಿರುವ ನಾರಾಯಣ (ಹೆಸರು ಬದಲಿಸಿದೆ) ಕ್ಷೀಣವಾದ ದನಿಯಲ್ಲಿ ತೋಡಿದ ವ್ಯಥೆಯಿದು. ಇನ್ನೂ ಅವರ ಸಂಬಳ ತಿಂಗಳಿಗೆ ೨ ಸಾವಿರ ರೂ. ದಾಟಿಲ್ಲ. ಅವರೀಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೆ. ಅದೊಂದು ಕಾಲವಿತ್ತು. ಖಾದಿ ಬಟ್ಟೆ ತಯಾರಿಸುವುದು ಕಾರ್ಮಿಕನಿಗೊಂದು ಹೆಮ್ಮೆಯ ಸಂಗತಿಯಾಗಿತ್ತು. ಈಗ ಕಣ್ಣೀರು ಕೂಡ ಬತ್ತಿದೆ.
ಬೇಕಾದರೆ ನೋಡಿ, ರಾಜ್ಯದಲ್ಲಿ ಕಾನೂನು ಪ್ರಕಾರ ಯಾವ ಕೆಲಸಕ್ಕೆ ಎಷ್ಟು ಕನಿಷ್ಠ ವೇತನ ಎನ್ನುವುದು ನಿಗದಿಯಾಗಿದೆ. ಅದರಂತೆ ನೇಯುವವರಿಗೆ ನಾಲ್ಕು ಪ್ರಕಾರದಲ್ಲಿ ಕನಿಷ್ಠ ವೇತನ ನಿಗದಿಯಾಗಿದೆ. ಕೌಶಲ್ಯರಹಿತ ಕಾರ್ಮಿಕನಿಗೆ ದಿನಕ್ಕೆ ೧೧೩ ರೂ. ಇದ್ದರೆ, ಹೆಚ್ಚಿನ ಕೌಶಲ್ಯವಿರುವ ಉದ್ಯೋಗಿಗೆ ೧೨೭ ರೂ. ನೀಡಲೇಬೇಕು. ಹೀಗಿರುವಾಗ ೨೫ ವರ್ಷಗಳಿಂದ ದುಡಿಯುತ್ತಿರುವ ಬಡ ನಾರಾಯಣರಿಗೆ ಕನಿಷ್ಠ ವೇತನದ ಅರ್ಧ ಕೂಡ ಆಗಲಿಲ್ಲವಲ್ಲಾ. ಹಾಗಾದರೆ ಕಳೆದ ೨೫ ವರ್ಷಗಳಿಂದ ದುಡಿದು ಹೈರಾಣಾಗಿರುವ ಅವರಿಗೆ ನ್ಯಾಯವಾಗಿ ಸಿಗಬೇಕಿದ್ದ ಕನಿಷ್ಠ ವೇತನ ಹಾಗೂ ಉಳಿದ ಪಾಲನ್ನು ನುಂಗಿದ ಭೂಪನಾರು ?
ಕಾರ್ಪೋರೇಷನ್‌ನಲ್ಲಿ ಕಸ ಗುಡಿಸುವವನಿಗೆ ನನಗಿಂತ ಎರಡುಪಟ್ಟು ಹೆಚ್ಚು ಸಂಬಳ ಸಿಗುತ್ತದೆ. ಆದರೆ ೧೯೮೪ರಲ್ಲಿ ಈ ಕೆಲಸಕ್ಕೆ ಸೇರಿರುವ ನನಗಿಲ್ಲ. ದಿನಾ ಮಂಡಳಿಯವರು ಸರಿಯಾಗಿ ಲೆಕ್ಕ ತೆಗೆದುಕೊಳ್ಳುತ್ತಾರೆ. ಆದರೆ ಬರಬೇಕಾದ ಸಂಬಳಕ್ಕೆ ಎರಡೆರಡು ತಿಂಗಳು ಕಾದದ್ದಿದೆ. ಕೇಳಿದರೆ ಫಂಡು ಬಂದಿಲ್ಲ ಎಂದು ಕಥೆ ಕಟ್ಟುತ್ತಾರೆ. ಯಾರಾದರೂ ಏನಾದರೂ ಮಾಡಿ ಸಾರ್‌.. ಇವರು ಕೊಡೋದನ್ನು ನಂಬಿದರೆ ಎರಡು ಹೊತ್ತಿನ ತುತ್ತಿಗೆ ಆಗಲ್ಲ.. ಎಂದು ನೋವು ತೋಡಿಕೊಳ್ಳುತ್ತಾರೆ ನಾರಾಯಣ. ಇದು ರಾಜ್ಯದ ಐವತ್ತು ಸಾವಿರಕ್ಕೂ ಹೆಚ್ಚು ಬಡ ಕಾರ್ಮಿಕರ ಯಾತನೆ.
ಸಹಕಾರ ತತ್ತ್ವದ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು ೨೦೦ ಖಾದಿ ಕೇಂದ್ರಗಳು ನಡೆಯುತ್ತಿವೆ. ಇವುಗಳಿಗೆ ಸರಕಾರ ಅನುದಾನ, ಸಬ್ಸಿಡಿ ನೆರವು ನೀಡುತ್ತದೆ. ಇಲ್ಲಿ ಉತ್ಪನ್ನವಾಗುವ ಖಾದಿಯನ್ನು ಮಾರಾಟ ಮಡುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವ ಕಾರ್ಮಿಕ, ಕಲಾವಿದರ ಪಾಡು ಯಾರಿಗೂ ಬೇಡ. ಅವರ ಸಂಬಳವನ್ನು ಗೌರವ ಧನ ಅಂತ ಕರೆಯಲಾಗುತ್ತದೆ. ಹೆಸರು ಏನೇ ಇರಲಿ, ಬೆಳಗ್ಗೆಯಿಂದ ದಿನವಿಡೀ ವರ್ಷಗಟ್ಟಲೆ ದುಡಿಯುವುದಿಲ್ಲವೇ ? ಇವರು ಎಷ್ಟೇ ಅತ್ತು ಗೋಗರೆದರೂ ಸಂಬಳ ಹೆಚ್ಚಾಗುತ್ತಿಲ್ಲ. ಹೀಗಾಗಿ ಖಾದಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಖಾದಿ ಹೆಸರಿನಲ್ಲಿ ಮಂಡಳಿಯಿದೆ. ಕೇಂದ್ರ ಆಯೋಗವಿದೆ. ಖಾದಿ ಉತ್ಪನ್ನಗಳ ಮಾರಾಟಕ್ಕೆ ಉತ್ಸವಗಳನ್ನು ವಾರಗಟ್ಟಲೆ ಆಯೋಜಿಸುತ್ತಾರೆ. ಆದರೆ ಅದೇ ಖಾದಿಯ ಬಟ್ಟೆಯನ್ನು ನೇಯುವವನಿಗೆ ಹೊಟ್ಟೆಗೆ ಹಿಟ್ಟಿಲ್ಲ.
ಲೂಥರ್‌ ಕಲಿತದ್ದು
ಐವತ್ತು ವರ್ಷಗಳ ಹಿಂದೆ ೧೯೫೯ರ ಫೆಬ್ರವರಿ ೯ರಂದು ಅಮೆರಿಕದ ಮಾನವ ಹಕ್ಕುಗಳ ಹೋರಾಟದ ನಾಯಕ ಮಾರ್ಟಿನ್‌ ಲೂಥರ್‌ ಕಿಂಗ್ ಮುಂಬಯಿಗೆ ಬಂದಿಳಿದಿದ್ದರು. ಗಾಂಧಿ ವಿಚಾರಧಾರೆಯನ್ನು ಅಧ್ಯಯನ ಮಾಡುವುದು ಅವರ ಭೇಟಿಯ ಉದ್ದೇಶವಾಗಿತ್ತು. ಪತ್ನಿ ಹಾಗೂ ಆಪ್ತರು ಜತೆಗಿದ್ದರು. ದಿಲ್ಲಿ ಹಾಗೂ ಸಬರಮತಿ ಆಶ್ರಮಕ್ಕೂ ಕಿಂಗ್‌ ಭೇಟಿ ನೀಡಿದ್ದರು, ದಿಲ್ಲಿಯಲ್ಲಿ ಗಾಂಧಿ ಟೋಪಿ ಧರಿಸಿದ್ದ ಲೂಥರ್‌ , ಗಾಂಧೀಜಿಯವರ ಜೀವನ ಶೈಲಿಯನ್ನು ಅನುಸರಿಸಲು ಪ್ರಯತ್ನಿಸಿದ್ದರು. ಆದರೆ ಅವರ ಯಶಸ್ಸು ಸೀಮಿತವಾಗಿತ್ತು. ಉಪವಾಸ, ಧ್ಯಾನ, ಅಪರಿಗ್ರಹ ಮುಂತಾದ ಪದ್ಧತಿಯನ್ನು ಒಗ್ಗಿಸಿಕೊಳ್ಳಲು ಸಾಧ್ಯವಾಗದೆ ಹಿಂತಿರುಗಿದರು. ಹೀಗಿದ್ದರೂ ಗಾಂಧೀಜಿಯವರ ಅಹಿಂಸಾ ಮಾರ್ಗದ ಹೋರಾಟದಿಂದ ಮಾತ್ರ ಅಮೆರಿಕದಲ್ಲಿನ ವರ್ಣ ದ್ವೇಷವನ್ನು ಕೊನೆಗಾಣಿಸಬಹುದು ಎಂದು ಕಂಡುಕೊಮಡರು. ಆದರೆ ನಾವು ಯಾವುದು ಬೇಕು, ಬೇಡ ಎಂದು ಕಂಡುಕೊಳ್ಳದೇ ಸಾರಾಸಗಟಾಗಿ ಗುಡಿಸಿದ್ದೇವೆ. ಅಷ್ಟಿಷ್ಟು ಉಳಿಸಿರುವ ಖಾದಿ ಉದ್ಯಮವನ್ನು ಕೂಡ ಪರಿಷ್ಕರಿಸಿಲ್ಲ.
ದೇಶದಲ್ಲಿ ಸುಮಾರು ೮೮ ಲಕ್ಷ ಮಂದಿಗೆ ಖಾದಿಯೇ ಅನ್ನಕ್ಕೆ ದಾರಿಯಾಗಿದೆ. ಕಳೆದ ವರ್ಷ (೨೦೦೭-೦೮) ಖಾದಿ ಉದ್ಯಮದ ವಹಿವಾಟು ೫೫೫ ಕೋಟಿ ರೂ. ದಾಟಿತ್ತು. ಅದು ಕೇರಳವಾಗಿರಲಿ, ಕರ್ನಾಟಕವಾಗಿರಲಿ, ಖಾದಿ ಉತ್ಪನ್ನಗಳಿಗೆ ಬೇಡಿಕೆಯಿದೆ.ಖಾದಿ ಉತ್ಸವಗಳಲ್ಲಿ ಹೆಚ್ಚಿನ ಕ್ರಯಕ್ಕೆ ಉತ್ಪನ್ನಗಳನ್ನು ಮಾರಾಟಕ್ಕಿಟ್ಟರೂ ಜನ ಕೊಳ್ಳುತ್ತಾರೆ. ಆದರೂ ಖಾದಿ ಕಾರ್ಮಿಕನಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಕಾಟಾಚಾರಕ್ಕೆ ಕೆಲವು ರಾಜ್ಯಗಳಲ್ಲಿ ಖಾದಿ ಮಂಡಳಿಗಳು ಕಾರ್ಮಿಕರ ಮಕ್ಕಳಿಗೆ ಮುನ್ನೂರೋ, ನಾನ್ನೂರೋ ರೂ.ಗಳ ಸ್ಕಾಲರ್‌ಶಿಪ್‌ ಕೊಡುತ್ತವೆ. ಆದರೆ ಅದೇ ಮಕ್ಕಳಲ್ಲಿ ಖಾದಿ ಉತ್ಪನ್ನಗಳ ತಂತ್ರಜ್ಞರನ್ನು, ವಿನ್ಯಾಸಕಾರರನ್ನು ರೂಪಿಸಲು ನೆರವಾಗುವುದಿಲ್ಲ. ವಸ್ತ್ರದಲ್ಲಿ ಹೊಸ ವಿನ್ಯಾಸ ಅಭಿವೃದ್ಧಿಗೆ ಮುಂದಾಗಿಲ್ಲ.
ಬಾಹ್ಯ ಮಾರುಕಟ್ಟೆಯ ಆರ್ಥಿಕ ಅವಲಂಬನೆಯಿಂದ ದೂರ ಇರಬೇಕು ಎನ್ನುತ್ತದೆ ಗಾಂಧೀಜಿಯವರ ಸ್ವದೇಶಿ ಪದ್ಧತಿ. ಗ್ರಾಮದಲ್ಲಿ ಉತ್ಪಾದನೆಯಾಗುವ ವಸ್ತು ಮೊದಲು ಗ್ರಾಮದಲ್ಲಿ ಬಳಕೆಯಾಗಬೇಕು. ಗ್ರಾಮದ ಬೇಕುಗಳೆಲ್ಲ ಆಯಾ ಗ್ರಾಮದಲ್ಲಿಯೇ ಸಿಗಬೇಕು. ಪ್ರತಿಯೊಂದು ಗ್ರಾಮ ಕೂಡ ತನ್ನದೇ ಬಡಗಿ, ಚಮ್ಮಾರ, ಕುಂಬಾರ, ಬ್ಯಾಂಕರ್‌, ಎಂಜಿನಿಯರ್‌, ನೇಕಾರ, ಶಿಕ್ಷಕ, ಸಂಗೀತಗಾರ, ಪುರೋಹಿತ, ಕಲಾವಿದನನ್ನು ಹೊಂದಬೇಕು. ಆಗ ಹೊರಗಿನ ಆಶ್ರಯ ಬೇಡುವುದು ತಪ್ಪುತ್ತದೆ. ಎಲ್ಲಿಂದಲೋ ತಂದ ವಸ್ತು ಹಾಗೂ ಸೇವೆ ಸಮುದಾಯದ ಒಳಗೆ ಸರಬರಾಜಾಗಕೂಡದು. ಹೊರಗಿನಿಂದ ತಂದ ಉತ್ಪನ್ನಗಳು ಹಾಗೂ ಸೇವೆಯಿಂದ ಪರಾವಲಂಬನೆ ತಪ್ಪುತ್ತದೆ. ಎಲ್ಲಿಂದಲೋ ತಂದ ವಸ್ತು ಹಾಗೂ ಸೇವೆ ಸಮುದಾಯದ ಒಳಗೆ ಸರಬರಾಜಾಗಕೂಡದು. ಹೊರಗಿನಿಂದ ತಂದ ಉತ್ಪನ್ನಗಳು ಹಾಗೂ ಸೇವೆಯಿಂದ ಪರಾವಲಂಬನೆ ಹೆಚ್ಚುತ್ತದೆ. ಸ್ಥಳೀಯ ಮಾರುಕಟ್ಟೆಯ ತಾಳ ತಪ್ಪುತ್ತದೆ ಅಂತ ಗಾಂಧೀಜಿ ಹೇಳಿದ್ದರು. ಆಗ ಗಾಂಧೀಜಿ ಹೇಳಿದ್ದನ್ನೆಲ್ಲವನ್ನೂ ಈವತ್ತು ಯಥಾವತ್ತಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ, ಸೂಕ್ತ ಮಾರ್ಪಾಟಿನಿಂದಬಹುತೇಕ ಮಾದರಿಯನ್ನು ಅನುಸರಿಸಲು ಸಾಧ್ಯ. ಅದು ಹೇಗೆ ಎಂಬುದನ್ನು ಮುಂದೆ ಚರ್ಚಿಸೋಣ. ಅದಾವುದನ್ನೂ ಮಾಡದೆ ಅನುದಾನಗಳನ್ನು ನುಂಗಿ, ಕಾರ್ಮಿಕರನ್ನು ಶೋಷಿಸುತ್ತಿರುವ ಖಾದಿ ಮಂಡಳಿಯವರನ್ನು ಪ್ರಶ್ನಿಸೋಣ. ಆದರೆ ಈ ನಿಟ್ಟಿನಲ್ಲಿ ಚಿಂತಿಸದೆ ಗಾಂಧಿ ಅಧ್ಯಯನದ ವಿದ್ಯಾರ್ಥಿಗಳು ವರ್ಷಕ್ಕೊಮ್ಮೆ ವಾರ್ಧಾಗೆ ಹೋಗಿ ವಾಪಾಸಾದರೆ ಚೊಕ್ಕಟವಾಗಿ ಒಂದು ಪ್ರವಾಸ ಕೈಗೊಂಡಂತಾಗಬಹುದು. ಅಷ್ಟೇ.
ಪರಿಶ್ರಮದ ಮಹತ್ವ ಗೊತ್ತಾಗಬೇಕು
ಮಾಸ್‌ ಪ್ರೊಡಕ್ಷನ್‌ನಿಂದ ಜನರು ತಮ್ಮ ಗ್ರಾಮಗಳನ್ನು ತೊರೆದು ಪಟ್ಟಣ ಸೇರುತ್ತಾರೆ. ತಮ್ಮ ಜಮೀನು, ಕರಕುಶಲ, ಬಂಧು ಬಳಗವನ್ನು ಬಿಟ್ಟು ನಗರದ ಕಾರ್ಖಾನೆಯಲ್ಲಿ ಯಂತ್ರಗಳ ಮಧ್ಯೆ ಕಳೆದುಹೋಗುತ್ತಾರೆ. ಉತ್ಪಾದಕತೆ ಹೆಚ್ಚಿಸಲು ಯಂತ್ರಗಳಂತೆ ಇವರನ್ನು ದುಡಿಸಿಕೊಳ್ಳುತ್ತಾರೆ. ಜಾಗತೀಕರಣದ ಪರಿಣಾಮ ಪ್ರತಿಯೊಂದು ರಾಷ್ಟ್ರ ಕೂಡ ಮತ್ತೊಂದು ರಾಷ್ಟ್ರವನ್ನು ತನ್ನ ಉತ್ಪನ್ನಗಳಿಗೆಮಾಶರುಕಟ್ಟೆ ಎಂಬಂತೆ ನೋಡುತ್ತದೆ. ರಫ್ತನ್ನು ಹೆಚ್ಚಿಸಿ ಆಮದನ್ನು ತಗ್ಗಿಸಲು ಯತ್ನಿಸುತ್ತದೆ. ಇದರಿಂದ ನಿರುದ್ಯೋಗ ಉಂಟಾಗಿ ಆರ್ಥಿಕ ಬಿಕ್ಕಟ್ಟು ತಲೆದೋರುತ್ತದೆ. ಆದ್ದರಿಂದ ಸಮೂಹದಿಂದ ಉತ್ಪಾದನೆಯಾಗಬೇಕೇ ವಿನಾ ಮಾಸ್‌ ಪ್ರೊಡಕ್ಷನ್‌ ಆಗಕೂಡದು ಎಂದು ಗಾಂಧೀಜಿ ಹೇಳಿದ್ದರು. ಬಹುಶಃ ವಿತರಣೆ ಇಲ್ಲದಿದ್ದ ಪಕ್ಷದಲ್ಲಿ ಸಾಮೂಹಿಕ ಉತ್ಪಾದನೆಯಿಂದ ದುರಂತ ಉಂಟಾಗಬಹುದು ಎಂದು ಅವರು ಹೇಳಿರಬಹುದು. ಆದರೆ ಸಾಮೂಹಿಕ ಉತ್ಪಾದನೆಗೇ ಗಾಂಧೀಜಿಯವರ ವಿರೋಧ ಇತ್ತು ಎಂದು ಬಿಂಬಿಸಲಾಗುತ್ತಿದೆ. ಇಂಥ ಗೊಂದಲಗಳನ್ನು ಬಗೆಹರಿಸಲು ಗಾಂಧಿ ಪಠ್ಯಕ್ರಮಗಳು ಬೇಕಾಗಿದೆ.
ಯಾಕೆಂದರೆ ಜಾಗತೀಕರಣದ ಪರಿಣಾಮ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಮೀಸಲಾತಿ ಇಲ್ಲದಿದ್ದರೂ ಪ್ರತಿಭಾವಂತ ಬಡ ಯುವ ಜನತೆ ಸ್ವಂತ ಸಾಮರ್ಥ್ಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ‌ ಪ್ರೊಡಕ್ಷನ್‌ ಪರಿಣಾಮದಿಂದಲೇ ಅನೇಕ ವಸ್ತುಗಳು ಅಗ್ಗವಾಗಿವೆ. ಈವತ್ತು ಬೇಡಿಕೆ ಇರುವ ಉತ್ಪನ್ನಗಳಿಗೆ ಮಾಸ್‌ ಪ್ರೊಡಕ್ಷನ್‌ ಬೈ ಮಾಸ್‌ ಎಂಬುದೇ ಗುರಿ ಮತ್ತು ದಾರಿ ಆಗಬೇಕು. ಇದರ ಜತೆಗೆ ಗಾಂಧಿವಾದಿಯಾಗಿ ಸರಳ ಬದುಕು ಹೇಗೆ ಸಾಧ್ಯ ಎಂಬುದನ್ನು ಕಲಿಯಬೇಕು. ನಿರುದ್ಯೋಗಿಗಳಿಗೆ ಕಠಿಣ ಪರಿಶ್ರಮದ ಮಹತ್ವ ಗಾಂಧಿವಾದದಿಂದ ಗೊತ್ತಾಗಬೇಕು. ಆದಾಯ ಮೀರಿ ಕ್ರೆಡಿಟ್‌ಕಾರ್ಡ್ ಬಳಸುತ್ತಿರುವವರಿಗೆ ಸರಳತನದ ಅರಿವಾಗಬೇಕು. ಗಾಂಧಿ ಅಧ್ಯಯನಕ್ಕೂ ಉದ್ಯೋಗಾವಕಾಶಕ್ಕೂ ನಿಕಟ ಸಂಪರ್ಕ ಬೆಸೆಯಬೇಕು. ಇಲ್ಲದಿದ್ದರೆ ಓದಿ ಉಪಯೋಗವಿಲ್ಲ.

೩. ಉತ್ಸವದಲ್ಲಿ ನೇಕಾರ ತಬ್ಬಲಿ, ನಕಲಿ ಭಂಡಾರದಲ್ಲಿ ದರ ಕಡಿತ
ಈ ಖಾದಿ ಉತ್ಸವಕ್ಕೆ ಬಂದು ಹದಿನೈದು ದಿವಸಗಳಾತು. ವ್ಯಾಪಾರ ಛಲೋ ಇಲ್ಲಾರಿ, ಇದಕ್ಕಿಂತ ನಮ್ಮೂರ‍್ನಾಗೆ ಗಾಡಿ ಮ್ಯಾಲೆ ಹೋದ್ರೆ ಒಂದು ವಾರದಾಗ ಲಕ್ಷ ರೂಪಾಯಿ ವ್ಯಾಪಾರ ಆಗತೈತಿ. ಇಲ್ಲಿ ಜಳಕ (ಸ್ನಾನ) ಮಾಡೋದಕ್ಕೂ ವ್ಯವಸ್ಥೆ ಇಲ್ಲ. ಮೂರು ದಿವಸ ಆತು.. ಖರೆ ಹೇಳಬೇಕಂದ್ರೆ ಇಲ್ಲಿಗೆ ಬರೋದ್ರಿಂದ ನಷ್ಟ ಆಗತೈತಿ..
ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಖಾದಿ ಮೇಳದಲ್ಲಿ ದೂರದ ವಿಜಾಪುರದಿಂದ ಬಂದಿದ್ದ ಗ್ರಾಮೋದ್ಯೋಗ ಸಂಘದ ಕಾರ್ಯಕರ್ತ ಭೀಮಣ್ಣ (ಹೆಸರು ಬದಲಿಸಿದೆ) ಅನಾಥನಂತೆ ಹೇಳಿದ ಮಾತಿದು.
ಹಾಗಾದರೆ ನಷ್ಟವಾದರೂ ಅವರೇಕೆ ಅರಮನೆ ಮೈದಾನದ ಮೇಳದಲ್ಲಿ ಮಳಿಗೆಗೆ ೧೨ ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಖಾದಿ ಬಟ್ಟೆಗಳೊಂದಿಗೆ ಕೂತರು ? ಈ ಮೇಳದಲ್ಲಿ ಕೆಲಸವರಿಗ್‌ಎ ಮಧ್ಯಾಹ್ನ ೧೨ ಗಂಟೆ ದಾಟಿದರೂ ಬೋಣಿಯೇ ಆಗುವುದಿಲ್ಲ. ಆದರೂ ಖಾದಿ ಸಂಘಗಳು ಉತ್ಸವಕ್ಕೆ ಬರುತ್ತವೆ. ಯಾಕೆಂದರೆ ಖಾದಿ ಗ್ರಾಮೋದ್ಯೋಗ ಸಂಘಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಶೇ. ೨೫ ಮತ್ತು ಶೇ. ೧೫ರ ಸಬ್ಸಿಡಿ ನೆರವು ಸಿಗುತ್ತದೆ. ಮಳಿಗೆ ತೆರೆಯದಿದ್ದರೆ ಅವರಿಗೆ ಸಬ್ಸಿಡಿ ಸಿಗುವುದಿಲ್ಲ.
ಇಷ್ಟಾಗಿಯೂ ಖಾದಿಯ ಬ್ಯ್ರಾಂಡ್‌ ಉಳಿಸಿಕೊಳ್ಳುವ ಪ್ರಯತ್ನ ನಡೆದಿಲ್ಲ. ನೋಡಿ, ಬಾಟಾ ಅಂದೊಡನೆ ಶೂ ನೆನಪಾಗುತ್ತದೆ. ಟಾಟಾ ಅಂದೊಡನೆ ಬಸ್ಸು, ಲಾರಿ , ನ್ಯಾನೋ ಕಾರು, ಉಪ್ಪು ನೆನಪಾಗುತ್ತದೆ.ಆದರೆ ರಾಜ್ಯ ಖಾದಿ ಮಂಡಳಿಯವರು ಖಾದಿ ಉತ್ಪನ್ನಗಳ ಬ್ಯ್ರಾಂಡ್‌ ಸೃಷ್ಟಿಗೆ ಇಟ್ಟ ಹೆಸರು ನಿಸರ್ಗ !ನಿಸರ್ಗ ಅಂದೊಡನೆ ಖಾದಿಗೆ ಸಂಬಂಧಿಸಿದ್ದು ಅಂತ ಯಾರಿಗಾದರೂ ಗೊತ್ತಾಗುತ್ತಾ ?
ಖಾದಿ ಉತ್ಸವದಿಂದ ಬಡ ನೇಕಾರನ ಸಂಬಳ ಹೆಚ್ಚಾಗುವುದಿಲ್ಲ. ಅಲ್ಲಿ ಉತ್ಪನ್ನಗಳನ್ನು ಮಾರಾಟ ಮಡುವರೆಲ್ಲರೂ ನೇಕಾರರೂ ಅಲ್ಲ. ಅವರಲ್ಲಿ ಬಹುತೇಕ ಮಂದಿ ಮಧ್ಯವರ್ತಿಗಳೇ. ಇವರಿಂದ ನೇಕಾರರ ಹಿತ ಹೇಗೆ ನಿರೀಕ್ಷಿಸಬಹುದು ? ಅಂದಹಾಗೆ ನೇಕಾರರಲ್ಲೂ ಚರಕದಲ್ಲಿ ನೇಯುವವರು, ಕೈಮಗ್ಗ ನೇಕಾರರು ಅಂತ ವಿಧಗಳಿವೆ. ಕೈಮಗ್ಗ ನೇಕಾರರಿಗೆ ಕೈ ಮಗ್ಗ ನೇಕಾರರ ನಿಗಮವಿದೆ. ಅವರಿಗೆ ವಿಮೆ, ದಿನಗೂಲಿ, ಭತ್ಯೆ ಇದೆ. ಆದರೆ ನೇಕಾರನಿಗೆ ಇದಾವುದೂ ಇಲ್ಲ. ಹೀಗಿರುವಾಗ ಎಲ್ಲಿದೆ ಆತನಿಗೆ ನೆಮ್ಮದಿ ? ಬಹುತೇಕ ಮಂದಿಗೆ ನೇಕಾರ ಅಂದರೆ ಯಾರು ? ಅವರಲ್ಲಿಯೂ ವಿಧಗಳಿವೆಯಾ ಎಂಬುದೇ ಗೊತ್ತಿಲ್ಲ.
ಯೋಜನೆಗಳಿವೆ, ಸಂಬಳ ಇಲ್ಲ
ರಾಜ್ಯದಲ್ಲಿ ಚಿತ್ರದುರ್ಗದಲ್ಲಿ ಹಂಜಿ ಕೇಂದ್ರವಿದೆ. ಇಡೀ ರಾಜ್ಯದ ಇನ್ನೂರು ಖಾದಿ ಗ್ರಾಮೋದ್ಯೋಗ ಸಂಘಗಳ ನೇಕಾರರಿಗೆ ನೇಯಲು ಬೇಕಾಗುವ ಕಾಳು ಬೇರ್ಪಡಿಸಿದ ಹತ್ತಿ ರವಾನೆಯಾಗುವುದು ಇಲ್ಲಿಂದಲೇ. ೬೮ ರೂಪಾಯಿಗೆ ೧ ಕೆಜಿ ಹತ್ತಿ ಸಿಗುತ್ತದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಅಂಬರ ಕೇಂದ್ರಗಳೆಂಬ ಸ್ಥಳಗಳಿವೆ. ಇಲ್ಲಿಗೆ ರವಾನೆಯಾಗುವ ಹತ್ತಿಯನ್ನು ಆಯಾ ಗ್ರಾಮೋದ್ಯೋಗ ಸಂಘದ ಪದಾಧಿಕಾರಿಗಳು ಸಾಲದ ರೂಪದಲ್ಲಿ ಪಡೆಯುತ್ತಾರೆ. ನಂತರ ನೇಕಾರರು ಚರಕದಲ್ಲಿ ತಯಾರಿಸುವ ಕಚ್ಚಾ ನೂಲನ್ನು ಲಡಿ ಎಂದು ಕರೆಯುತ್ತಾರೆ. ಒಂದು ಲಡಿ ಎಂದರೆ ೧ ಸಾವಿರ ಮೀಟರ್‌ ಉದ್ದದ ನೂಲು. ಈ ರೀತಿ ತಯಾರಾಗುವ ಲಡಿಗಳ ಲೆಕ್ಕದಲ್ಲಿ ಸಂಬಳ ಸಿಗುತ್ತದೆ. ಒಂದು ಲಡಿಗೆ ೧ ರೂ., ೧.೭೫ ರೂ. ಅಂತ ನೇಕಾರನಿಗೆ ನಿಗದಿಯಾಗುತ್ತದೆ. ಈ ಲಡಿಗಳನ್ನು ನೇಯ್ಗೆ ಕೇಂದ್ರಗಳಲ್ಲಿ ಖಾದಿ ಬಟ್ಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಸಾಕಷ್ಟು ದೈಹಿಕ ಶ್ರಮ, ತಾಳ್ಮೆಯನ್ನು ಬೇಡುವ, ಪುಡಿಗಾಸು ನೀಡುವ ಕೆಲಸವಿದು. ಆದ್ದರಿಂದಲೇ ನೇಕಾರನಾಗಲು ಜನ ಹಿಂದೇಟು ಹಾಕುತ್ತಾರೆ. ಖಾದಿ ಉದ್ಯಮಕ್ಕೆ ಬೇಕಾದ ಬಂಡವಾಳವನ್ನು ಕೇಂದ್ರ ಸರಕಾರ ನೀಡಿದರೆ ಬಟ್ಟೆಗಳ ವ್ಯಾಪಾರದ ಮೇಲೆ ಸಬ್ಸಿಡಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡುತ್ತದೆ. ೫, ೧೦ ಲಕ್ಷ ರೂ.ಗಳಿಂದ ೩ ಕೋಟಿ ರೂ ಬೇಕಾದರೂ ಸಾಲ ಪಡೆದು ಖಾದಿ ಗ್ರಾಮೋದ್ಯೋಗ ಘಟಕವನ್ನು ಸ್ಥಾಪಿಸಬಹುದು. ನಿಸ್ಸಂದೇಹವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಇದು ಕಾರಣವಾಗುತ್ತದೆ. ಆದರೆ ನೇಕಾರರಿಗೆ ಪುಡಿಗಾಸು ನೀಡುತ್ತಿರುವುದರಿಂದ ಈ ಉದ್ಯೋಗ ಆಕರ್ಷಣೆ ಕಳೆದುಕೊಂಡಿದೆ. ಬೆಳಗ್ಗೆಯಿಂದ ರಾತ್ರಿಯ ತನಕ ಚರಕ ಸುತ್ತುವ ಖಾದಿ ಕಾರ್ಮಿಕನ ಸಂಬಳ ಕ್ವಿಂಟಾಲ್ ಅಕ್ಕಿಯ ದರಕ್ಕಿಂತ ಕಡಿಮೆಯಾಗುತ್ತದೆ.
ಈವತ್ತು ಶೇ.೬೭ರಷ್ಟು ಪಾಲಿಯೆಸ್ಟರ‍್ ಮತ್ತು ಶೇ.೩೭ ಖಾದಿ ಬೆರೆತ ಬಟ್ಟೆ ತಯಾರಾಗುತ್ತದೆ. ಗ್ರಾಮೋದ್ಯೋಗ ಸಂಘಗಳೂ ಇಂಥ ಖಾದಿ ಬಟ್ಟೆಯನ್ನು ಉತ್ಪಾದಿಸುತ್ತವೆ. ವಾಯುಸೇನೆ ಕೂಡಾ ಶ್ವೇತವರ್ಣದ ಸಮವಸ್ತ್ರಕ್ಕಾಗಿ ಪ್ರತಿ ವರ್ಷ ಸೀಮಿತ ಪ್ರಮಾಣದಲ್ಲಿ (ಮೀಟರ‍್ ಲೆಕ್ಕದಲ್ಲಿ) ಇಂತಹ ಬಟ್ಟೆಯನ್ನು ನೌಕರರ ಸಮವಸ್ತ್ರಕ್ಕಾಗಿ ಪಡೆಯುತ್ತದೆ. ಪಡೆಯಲೇಬೇಕೆಂದು ನಿಬಂಧನೆಯೂ ಇದೆ. ಆದರೆ ಸ್ವತಃ ವಾಯುಸೇನೆ ಕೂಡ ಒಪ್ಪಿಕೊಳ್ಳುವ ಖಾದಿ ನಮ್ಮ ಡಿ ಗ್ರೂಪ್‌ ನೌಕರರಿಗೆ ಅಪಥ್ಯ. ಇವರಿಗೆ ನ್ಯಾಶನಲ್ ಕಾರ್ಪೋರೇಷನ್‌ನ ಮಿಲ್ಲುಗಳು ಉತ್ಪಾದಿಸುವ ಬಟ್ಟೆಗಳೇ ಬೇಕು. ಪಾಲಿಯೆಸ್ಟರ‍್ ಮತ್ತು ಖಾದಿ ಮಿಶ್ರಿತ ಬಟ್ಟೆ ಹಳೆಯ ಖಾದಿಯಂತೆ ದೊರಗಾಗುವುದಿಲ್ಲ. ಅದರ ಎಳೆಗಳು ಮಿಲ್ಲಿನ ಬಟ್ಟೆಗಳಂತೆ ಒತ್ತಿಕೊಂಡಿರುತ್ತವೆ. ಹಾಕಿದ ಇಸ್ತ್ರಿಯೂ ದೀರ್ಘಕಾಲ ಕೆಡುವುದಿಲ್ಲ. ಹೀಗಿರುವಾಗ ಡಿ ಗ್ರೂಪ್ ನೌಕರರಿಗೆ ಆಗುವುದಿಲ್ಲವೇ ? ಶಾಲಾ ಮಕ್ಕಳಿಗೂ ಖಾದಿಯ ಸಮವಸ್ತ್ರ ಧಾರಾಳ ನೀಡಬಹುದು. ಹಳೆಯ ಖಾದಿ ಇದೀಗ ಬದಲಾಗುತ್ತಿದೆ. ಆದರೆ ಇದಕ್ಕಾಗಿ ಮನಸ್ಸು ಮಾಡಬೇಕಿರುವುದು ಸರಕಾರ. ಕನಿಷ್ಠ ಡಿ ಗ್ರೂಪ್ ನೌಕರರಿಗೆ ಖಾದಿ ಸಮವಸ್ತ್ರ ಕಡ್ಡಾಯ ಮಾಡಿದ ಪಕ್ಷದಲ್ಲಿ ಖಾದಿಗೆ ಪುನಶ್ಚೇತನ ನೀಡುವಲ್ಲಿ ಮಹತ್ವದ ಹೆಜ್ಜೆಯಾದೀತು. ದೇಶ ಸೇವೆಯೂ ಆದೀತು. ಹತ್ತಿಯ ಬಟ್ಟೆ ಆರೋಗ್ಯಕ್ಕೆ ಉತ್ತಮ. ಒಣ ಚರ್ಮದವರಿಗೆ ಒಳ್ಳೆಯದು ಅಂತ ವೈದ್ಯರು ಶಿಫಾರಸು ಮಾಡುತ್ತಾರೆ. ಇನ್ನು ಶುದ್ಧ ಖಾದಿಯ ಬಟ್ಟೆ ಇನ್ನಷ್ಟು ಉತ್ತಮ.
ಹೌದು. ಮಿಲ್ ಬಟ್ಟೆ ಖಾದಿಗಿಂತ ಅಗ್ಗ. ಜನ ಕಮ್ಮಿ ಕ್ರಯದ್ದನ್ನೇ ಮೆಚ್ಚುತ್ತಾರೆ ಎಂಬ ವಾದವಿದೆ. ಆದರೆ ಖಾದಿ ಅಂತಹ ದುಬಾರಿಯಲ್ಲ. ಮಿಲ್ ಬಟ್ಟೆಗಿಂತ ಹತ್ತಿಪ್ಪತ್ತು ರೂಪಾಯಿ ಹೆಚ್ಚಿರಬಹುದಷ್ಟೇ. ಶೋ ರೂಮ್‌ಗೆ ಹೋಗಿ ೧೫೯೦ ರೂ. ಕೊಟ್ಟು ಶೂ ಖರೀದಿಸುತ್ತೇವೆ. ಅದರಷ್ಟೇ ಬಾಳಿಕೆ ಬರುವ, ಕರ ಕುಶಲಕರ್ಮಿಗಳು ತಯಾರಿಸುವ ಶೂಗಳು ೩೦೦ ರೂ.ಗೆ ಸಿಕ್ಕಿದರೂ ಜನಕ್ಕೆ ಬೇಡ. ಬಾಟಾ ಶೋರೂಮ್‌ನಲ್ಲಿ ದುಬಾರಿ ಬೆಲೆಗೆ ತಂದರೇ ನೆಮ್ಮದಿ.
ಖಾದಿಯಲ್ಲೂ ನಕಲಿ
ಈವತ್ತು ಪವರ‍್ ಮಿಲ್ಲುಗಳಲ್ಲಿ ಉತ್ಪಾದಿಸಿದ ಬಟ್ಟೆಯಲ್ಲಿ ಉಡುಪುಗಳನ್ನು ತಯಾರಿಸಿ ಖಾದಿಯ ಹೆಸರಿನಲ್ಲೇ ಮಾರಾಟ ಮಾಡುತ್ತಿರುವ ಹಲವು ಅಂಗಡಿ, ಮಳಿಗೆಗಳನ್ನು ಕಾಣಬಹುದು. ಅಂತಹ ಕೇಂದ್ರಗಳಿಗೂ ಸರಕಾರಿ ಪ್ರಾಯೋಜಿತ ಮಂಡಳಿಗೂ ಆಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಖಾದಿ ಭಂಡಾರದ ಹೆಸರಿನಲ್ಲಿಯೇ ಅಂತಹ ಮಳಿಗೆಗಳು ಅಸ್ತಿತ್ವದಲ್ಲಿದ್ದು ಗ್ರಾಹಕರನ್ನು ದಿಕ್ಕುತಪ್ಪಿಸುತ್ತಿವೆ. ಮೆಜೆಸ್ಟಿಕ್ ಸುತ್ತ ಇಂತಹ ಹತ್ತಾರು ಮಳಿಗೆಗಳಿವೆ. ಈ ನಕಲಿ ಖಾದಿ ಭಂಡಾರಗಳಲ್ಲಿನ ಬಟ್ಟೆಗಳು ನಿಜವಾಗಿಯೂ ಖಾದಿಯಲ್ಲ. ಆದ್ದರಿಂದ ಸರಕಾರದಿಂದ ಮಾನ್ಯತೆ ಪಡೆದಿರುವ ಖಾದಿ ಭಂಡಾರಗಳಲ್ಲಿ ಮಾತ್ರವೇ ಖರೀದಿಸಿ ಅಂತ ರಾಜ್ಯ ಸರಕಾರ ಪ್ರಕಟಣೆ ಹೊರಡಿಸಿದೆ. ಆದರೆ ಇಂತಹ ಪ್ರಕಟಣೆಗಳಿಗಷ್ಟೇ ಕ್ರಮ ಸೀಮಿತವಾದರೆ ನಿಜವಾದ ಭಂಡಾರಳಿಗೆ ಹೊಡೆತ ತಪ್ಪಿದ್ದಲ್ಲ.
೪. ಅಗ್ಗದ ಮಿಲ್ ಬಟ್ಟೆ ಸಿಗುವಾಗ ಖಾದಿ ಯಾರಿಗೆ ಬೇಕು ಅಂತೀರಾ ?
ಇಡೀ ಭಾರತದಲ್ಲಿ ಟೆಕ್ಸ್‌ಟೈಲ್ ಮಿಲ್ ಗಳನ್ನು ಇಲ್ಲದಂತೆ ಮಾಡಬೇಕು. ಆಗ ಖಾದಿ ಉದ್ಯಮ ಅಗ್ರಸ್ಥಾನ ಗಳಿಸುತ್ತದೆ. ನಿರುದ್ಯೋಗ ದೂರವಾಗುತ್ತದೆ. ಸಾಮಾಜಿಕ ನ್ಯಾಯ ಸ್ಥಾಪನೆಯಾಗುತ್ತದೆ. ಹಾಗಂತ ಕನಸು ಕಂಡಿದ್ದರು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್.
ದೇಶದಲ್ಲಿ ಶೇ.೯೯ರಷ್ಟು ಬಟ್ಟೆಗಳು ಮಿಲ್ ಗಳಲ್ಲಿ ಉತ್ಪತ್ತಿಯಾಗುತ್ತಿವೆ. ಶೇ.೧ರಷ್ಟು ಬಟ್ಟೆಗಳು ಮಾತ್ರ ಖಾದಿಯಲ್ಲಿವೆ. ನೇಕಾರರ ಜೀವನ ಸಮೃದ್ಧಿಯಾಗಬೇಕಾದರೆ ಇದು ತದ್ವಿರುದ್ಧವಾಗಬೇಕು. ಇವತ್ತು ಗಲ್ಲಿಗಲ್ಲಿಯಲ್ಲಿ ಟೆಕ್ಸ್ ಟೈಲ್ ಬಟ್ಟೆಗಳು ಸಿಗುತ್ತವೆ. ಆದರೆ ಖಾದಿ ?
ಇಲ್ಲಿ ಚೇತರಿಕೆಗೆ ಹಲವು ಉಪಕ್ರಮಗಳು ಏಕಕಾಲದಲ್ಲಿ ಜಾರಿಯಾಗಬೇಕಾಗಿದೆ. ಮಾರುಕಟ್ಟೆಯಲ್ಲಿ ಖಾದಿಯದ್ದೇ ಪ್ರಾಬಲ್ಯವಿರಬೇಕು. ಅದಕ್ಕೆ ಬೇಡಿಕೆ ಸೃಷ್ಟಿಯಾಗಬೇಕು. ಮಿಲ್ ಗಳ ಬಟ್ಟೆಗಳಿಗೆ ಶಾಸನದ ಮೂಲಕ ಪ್ರತಿಬಂಧ ವಿಧಿಸುವುದೇನೋ ಸುಲಭವಾಗಬಹುದು. ಆದರೆ ಜನರ ವಸ್ತ್ರದ ಬೇಡಿಕೆಯನ್ನು ಪೂರೈಸುವ ಶಕ್ತಿಯನ್ನು ಅದಕ್ಕೂ ಮುನ್ನ ನೇಕಾರರೂ, ಮಂಡಳಿ, ಆಯೋಗ ಹೊಂದಬೇಕು. ಖಾದಿಯ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು.
ಮಿಲ್ ಗಳ ಬಟ್ಟೆ ಅತೀ ಅಗ್ಗದ ದರದಲ್ಲಿ ಅತ್ಯುತ್ತಮ ಗುಣಮಟ್ಟದೊಂದಿಗೆ ಸಿಗುತ್ತಿರುವಾಗ ಖಾದಿ ಯಾರಿಗೆ ಬೇಕು ? ಖಾದಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಿಲ್ ಗಳ ವಿರುದ್ಧ ಕಾನೂನು ಮಾತಾಡೋದು ಸರೀನಾ ಎನ್ನಬಹುದು. ಆದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಖಾದಿಗೂ ಉತ್ತೇಜನ ನೀಡಬೇಕು. ಲಕ್ಷಗಟ್ಟಲೆ ಜನರ ಉದ್ಯೋಗವನ್ನು ಕಸಿದುಕೊಳ್ಳುವ ಮಿಲ್ ಗಳಿಗೆ ಒಂದಷ್ಟು ನಿರ್ಬಂಧವನ್ನು ರೂಪಿಸುವುದರ ಮೂಲಕ ಲಕ್ಷಾಂತರ ನೇಕಾರರ ಜೀವನೋಪಾಯವನ್ನು ಉಳಿಸಿಕೊಳ್ಳಬಹುದು. ಕನಿಷ್ಠ ೩೨ ನಂಬರಿನ ತನಕದ ನೂಲುಗಳನ್ನು ಮಿಲ್‌ ಗಳು ಬಳಸಕೂಡದು ಎಂದು ನಿಯಮ ಜಾರಿಗೊಳಿಸಬಹುದು. ಇದರಿಂದ ಜಮಖಾನ, ಬೆಡ್ ಶೀಟು, ಟವೆಲ್ಲು ಮುಂತಾದ ದಿನ ಬಳಕೆಯ ಬಟ್ಟೆಗಳ ವಿಭಾಗದಲ್ಲಿ ಖಾದಿಯದ್ದೇ ಏಕಸ್ವಾಮ್ಯವನ್ನು ಉಳಿಸಬಹುದು. ಬೀದಿಪಾಲಾಗಿರುವ ನೇಕಾರರ ಹೊಟ್ಟೆಪಾಡಿಗೆ ಇಂತಹದೊಂದು ಕ್ರಮ ಜರುಗಿಸಿದಲ್ಲಿ ತಪ್ಪೇನಿಲ್ಲ ಬಿಡಿ. ಎಂಬತ್ತೆಂಟು ವರ್ಷಗಳ ಹಿಂದೆ ದೇಶೀ ವಸ್ತ್ರದ ಪರ ಗಾಂಧೀಜಿ ಆಂದೋಲನಕ್ಕೆ ಚಾಲನೆ ನೀಡಿದಾಗ ಅದೆಂಥಾ ಉತ್ಸಾಹವಿತ್ತು ನೋಡಿ..
ವಿದೇಶಿ ಬಟ್ಟೆಗಳಿಗೆ ಬಹಿಷ್ಕಾರ...
ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ವಿದೇಶಿ ಬಟ್ಟೆಗಳ ದಹನ ಕಾರ್ಯಕ್ರಮ..
ಸ್ಥಳ : ಎಲ್ಫಿನ್ ಸ್ಟೋನ್ ಮಿಲ್ ಹತ್ತಿರ. ಎಲ್ಲರೂ ಸ್ವದೇಶಿ ಬಟ್ಟೆಯಾದ ಖಾದಿಯನ್ನು ಧರಿಸಿ ಆಗಮಿಸಬೇಕಾಗಿ ಮನವಿ. ಯಾರಲ್ಲಿ ವಿದೇಶಿ ಬಟ್ಟೆಗಳಿವೆಯೋ, ಅದನ್ನೆಲ್ಲ ತರಲು ಕೋರಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಅದು ೧೯೨೧ರ ಜುಲೈ ೩೧ನೇ ತಾರೀಕು. ಬಾಂಬೆಯಲ್ಲಿ ಮಹಾತ್ಮ ಗಾಂಧೀಜಿ ವಿದೇಶಿ ಬಟ್ಟೆಗಳನ್ನು ದಹಿಸುವ ಚಳುವಳಿಗೆ ಕರೆ ನೀಡಿದ್ದರು.ಎಲ್ಫಿನ್ ಸ್ಟೋನ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಭಾಗವಹಿಸಿದ್ದರು. ಆಗ ಬಾಂಬೆ ಕ್ರೋನಿಕಲ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಕರೆ ಹಾಗಿತ್ತು.
ವಿದೇಶಿ ಬಟ್ಟೆಗಳ ವಿರುದ್ಧ ಚಳುವಳಿ ಆರಂಭಿಸಿದ ಗಾಂಧೀಜಿಯವರಲ್ಲಿ ಕ್ರಾಂತಿಕಾರಿ ಮನೋಭಾವ ಮಾತ್ರ ಇರಲಿಲ್ಲ. ಭಾರತದ ಜವಳಿ ಉದ್ಯಮದ ಸ್ವರೂಪವನ್ನೇ ಬದಲಿಸಬೇಕು ಎಂಬ ಹಂಬಲವಿತ್ತು. ಖಾದಿಯೇ ಇದಕ್ಕೆ ಕೇಂದ್ರ ಬಿಂದುವಾಗಿತ್ತು.ಆಗ ಖಾದಿ ವಸಾಹತುಶಾಹಿಯಿಂದ ಸ್ವತಂತ್ರದ ಚಿಹ್ನೆಯಾಗಿರಲಿಲ್ಲ. ಆರ್ಥಿಕ ಸ್ವಾವಲಂಬನೆಯ ಗುರುತಾಗಿತ್ತು. ಅಹಿಂಸೆ, ಆಧ್ಯಾತ್ಮಿಕತೆ, ನೈತಿಕತೆ, ರಾಷ್ಟ್ರೀಯ ಸಮಗ್ರತೆ, ಕೋಮು ಸೌಹಾರ್ದತೆ, ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆಯ ಅಂತ್ಯವನ್ನು ಪ್ರತಿನಿಧಿಸುತ್ತಿತ್ತು. ಚರಕವೇ ಸ್ವರಾಜ್ಯದ ಅಸ್ತ್ರ ಅಂತ ಕರೆದಿದ್ದರು ಬಾಪೂಜಿ. ಸ್ವದೇಶಿ ಖಾದಿಯನ್ನು ಉತ್ತೇಜಿಸುವುದರಿಂದ ಗ್ರಾಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ ಅಂತ ನಂಬಿದ್ದರು ಅವರು. ಆದ್ದರಿಂದಲೇ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ವಿದೇಶಿ ವಸ್ತ್ರಗಳ ದಹನಕ್ಕೆ ಹುರಿದುಂಬಿಸಿದ್ದರು ರಾಷ್ಟ್ರಪಿತ. ಈ ನಡುವೆ ಕಾಂಗ್ರೆಸ್ ಪಕ್ಷ ಖಾದಿಯನ್ನು ತನ್ನ ಅಧಿಕೃತ ಸಮವಸ್ತ್ರವನ್ನಾಗಿಸಿತು. ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ ದಿನಕ್ಕೆ ಅರ್ಧ ಗಂಟೆಯಾದರೂ ಚರಕದಲ್ಲಿ ನೇಯಬೇಕು ಎಂಬ ಗಾಂಧೀಜಿಯವರ ವಿವಾದಾತ್ಮಕ ನಿರ್ಣಯವನ್ನು ಕಾಂಗ್ರೆಸ್‌ ಅಂಗೀಕರಿಸಿತು. ಈಗ ಅದೇ ಪಕ್ಷದಲ್ಲಿ ಕನಿಷ್ಠ ಖಾದಿ ಬಟ್ಟೆಯಲ್ಲಿ ತಯಾರಿಸಿದ ಟೋಪಿ ಎಲ್ಲಿದೆ ?
ಖಾದಿಯನ್ನು ಪವಿತ್ರ ವಸ್ತ್ರ ಅಂತ ಗೌರವಿಸಿದವರು ಮಹಾತ್ಮಾ ಗಾಂಧಿ. ಬಿಳಿ ಬಣ್ಣದ ಟೋಪಿಯ ವಿನ್ಯಾಸಕಾರರೂ ಅವರೇ. ಅದನ್ನು ಗಾಂಧಿ ಟೋಪಿ ಅಂತಲೇ ನಂತರ ಎಲ್ಲರೂ ಕರೆದರು. ಖಾದಿ ಅಥವಾ ಖದ್ದರ‍್ ಇರುವುದು ಫ್ಯಾಷನ್ ಗೋಸ್ಕರ ಅಲ್ಲ. ಆದರೆ ಗಿಮಿಕ್ ನಂತೆ ಖಾದಿ ಉತ್ಸವಗಳಲ್ಲಿ ಫ್ಯಾಷನ್ ಶೋ ನಡೆಸುತ್ತಾರೆ. ವಿನ್ಯಾಸಕಾರರೂ ಸಂಪ್ರದಾಯದ ಪ್ರತಿಪಾದಕರಂತೆ ಖಾದಿಯನ್ನು ಬೆರೆಸುವುದಿದೆ. ಆದರೆ ದೇಶದಲ್ಲಿ ಕೈಗಾರಿಕೆಗಳು ಹುಟ್ಟುವುದಕ್ಕೆ ಮುನ್ನ ಕೃಷಿ ಕಾರ್ಮಿಕರು ಹಾಗೂ ಕಲಾವಿದರ ಪ್ರಿಯವಾದ ಬಟ್ಟೆಯೇ ಖಾದಿಯಾಗಿತ್ತು. ಮಹಿಳೆಯರು ಹಾಗೂ ನೇಕಾರರೂ ಸ್ಥಳೀಯವಾಗಿ ಬೆಳೆಯುತ್ತಿದ್ದ ಹತ್ತಿಯಿಂದ ಖಾದಿ ತಯಾರಿಸುತ್ತಿದ್ದರು. ತಕಲಿ ಮುಂತಾದ ಸಾಧನಗಳಿಂದ ಹತ್ತಿಯ ನೂಲನ್ನು ಸಿದ್ಧಪಡಿಸಿ ಬಟ್ಟೆಯನ್ನಾಗಿಸುವ ಕೆಲಸ ಹಿಂದಿನಿಂದಲೇ ಸಾಮಾನ್ಯವಾಗಿತ್ತು.
ನಡೆಯದ ಸಂಶೋಧನೆ :
ಖಾದಿ ಬೇಸಿಗೆಯಲ್ಲಿ ಮೈಗೆ ಅಂಟಿ ಬೆವರುವುದಿಲ್ಲ. ಬದಲಿಗೆ ತಂಪಾಗಿರುತ್ತದೆ. ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಅಕಸ್ಮಾತ್ ಬೆಂಕಿ ತಗುಲಿದರೆ ಉರಿದರೂ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಅಂತಹ ಖಾದಿ ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯತೆಯ ಸಂಕೇತವಾಯಿತು. ಆರಂಭದಲ್ಲಿ ಗಾಂಧೀಜಿ ಕೂಡ ಸಾರ್ವಜನಿಕ ಜೀವನದಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುತ್ತಿದ್ದರು. ಅವುಗಳು ಆಧುನಿಕತೆಯ ಲಕ್ಷಣ ಎಂದು ಭಾವಿಸಿದ್ದರು. ಕ್ರಮೇಣ ಇದರ ಅನಾನುಕೂಲತೆಗಳು ಅನುಭವಕ್ಕೆ ಬರತೊಡಗಿದವು. ೧೯೧೪ರಲ್ಲಿ ಗಾಂಧೀಜಿ ಭಾರತಕ್ಕೆ ಮರಳಿದರು. ಆ ಹೊತ್ತಿಗೆ ಅವರು ಕೈಮಗ್ಗದಲ್ಲಿ ನೇಯುವುದನ್ನು ಕೂಡ ಕಲಿತಿದ್ದರು. ಆಗ ಸರಳ ಭಾರತೀಯ ಶೈಲಿಯಲ್ಲಿ ಬಿಳಿ ಧೋತಿಯನ್ನು ಉಡುತ್ತಿದ್ದರು.
ಆದರೆ ಸ್ವತಂತ್ರದ ನಂತರ ಚಿತ್ರಣವೇ ಬದಲಾಯಿತು. ರಾಜ್ಯಗಳಲ್ಲಿ ಭಾರಿ ಕೈಗಾರಿಕೆಗಳಿಗೆ ಮಣೆ ಹಾಕಲಾಯಿತು. ಅನೇಕ ಉದ್ಯಮಿಗಳು ಜವಳಿ ಗಿರಣಿಗಳನ್ನು ಸ್ಥಾಪಿಸಿದರು. ಸಮೂಹ ಉತ್ಪಾದನೆಯಿಂದ ಬಟ್ಟೆಗಳ ದರ ಇಳಿಯಿತು. ಲಕ್ಷಾಂತರ ನೇಕಾರರು ಕೆಲಸ ಕಳೆದುಕೊಂಡರು. ೧೯೫೩ರಲ್ಲಿ ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಸ್ತಿತ್ವಕ್ಕೆ ಬಂತು. ೧೯೫೭ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ )ಕೆವಿಐಸಿ) ಸ್ಥಾಪನೆಯಾಯಿತು. ಖಾದಿ ಭಂಡಾರಗಳ ಮೂಲಕ ಖಾದಿಯನ್ನು ಜನಪ್ರಿಯಗೊಳಿಸುವುವುದು ಇದರ ಉದ್ದೇಶ. ಆದರೆ ಖಾದಿಯ ವಿನ್ಯಾಸ, ಗುಣಮಟ್ಟ ಮತ್ತು ಪ್ರಚಾರದ ತಂತ್ರಕ್ಕೆ ಸಂಬಂಧಿಸಿ ಯಾವುದೇ ಸಂಶೋಧನೆಯಾಗದ ಪರಿಣಾಮ ಮಿಲ್ ಬಟ್ಟೆಗಳೆದುರು ಪ್ರತಿಸ್ಪರ್ಧಿಯಾಗಿ ಉಳಿದಿಲ್ಲ. ಖಾದಿಯಲ್ಲಿ ಬಣ್ಣಗಳ ಆಯ್ಕೆಯೂ ಕಡಿಮೆ.
ಚರಕದಲ್ಲೇನೋ ಅಷ್ಟಿಷ್ಟು ಸಂಶೋಧನೆ ನಡೆದಿದೆ. ಇ-ಚರಕ ಎನ್ನುವ ಚರಕ ಮಾರುಕಟ್ಟೆಯಲ್ಲಿದೆ. ಈ ಚರಕವನ್ನು ಬಳಸುವಾಗ ಅಲ್ಪಮೊತ್ತದ ವಿದ್ಯುತ್ ಕೂಡ ಉತ್ಪಾದನೆಯಾಗಿ ಬಡ ನೇಕಾರನ ಮನೆಯಲ್ಲಿ ಬೆಳಕು ಹರಿಯಬಹುದು ಎಂದು ಉತ್ಪಾದಕರು ಹೇಳುತ್ತಾರೆ. ಆದರೆ ಬ್ಯಾಟರಿ ಸಮಸ್ಯೆ ಮುಂತಾದ ಕಿರಿಕಿರಿ ಇದರಲ್ಲಿದೆ ಎಂಬ ಆರೋಪಗಳಿವೆ. ಅಕಸ್ಮಾತ್ ಇಂತಹ ರಗಳೆಗಳನ್ನು ಕಳೆಯುವಂತೆ ಇ ಚರಕ ಸುಧಾರಣೆಯಾದಲ್ಲಿ ಪ್ರಯೋಜನವಾದೀತು.
ಖಾದಿಯ ಉತ್ಪಾದನೆಯಿಂದ ಮಾರಾಟದ ತನಕ ವ್ಯವಸ್ಥಿತ ಜಾಲ ಬೇಕು. ಆದರೆ ಮಧ್ಯವರ್ತಿಗಳ ಕಾಟ ಇರಕೂಡದು. ಅನೇಕ ನಕಲಿ ಖಾದಿ ಭಂಡಾರಗಳಿರುವ ಈ ದೇಶದಲ್ಲಿ ನೇಕಾರರಿಗೆ ಸಬ್ಸಿಡಿ ನೆರವು ಪಡೆಯುವುದು ಸುಲಭದ ಮಾತಲ್ಲ. ನಾಚಿಕೆ, ಮಾನ , ಮರ್ಯಾದೆಯಿಲ್ಲದ ಕೆವಿಐಸಿ ಮತ್ತು ಖಾದಿ ಮಂಡಳಿ ಖಾದಿಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ಮಾಡುವುದರ ಬದಲಿಗೆ ಖಾದಿ ಉತ್ಸವದಲ್ಲಿ ಹಪ್ಪಳ, ಸಂಡಿಗೆ, ಸೋಪುಗಳ ಮಾರಾಟ ನಡೆಸುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸಿದ ಉಪ್ಪಿನಕಾಯಿ, ಹಪ್ಪಳ ಮುಂತಾದ ಉತ್ಪನ್ನಗಳ ಮಾರಾಟವನ್ನಾದರೂ ಒಪ್ಪೋಣ. ಆದರೆ ಅರಮನೆ ಮೈದಾನದಲ್ಲಿ ನಡೆದ ಖಾದಿ ಇಂಡಿಯಾ ಮೇಳದಲ್ಲಿ ಲೈಂಗಿಕ ಕಾಮನೆಗಳ ವರ್ಧಕ ಶೀರ್ಷಿಕೆಯಡಿಯಲ್ಲಿ ಯಾವುದೋ ತೈಲದ ಬಾಟಲಿಯನ್ನು ಇಟ್ಟಿದ್ದರು. ಕೆವಿಐಸಿಯ ಎಷ್ಟೋ ಘಟಕಗಳಲ್ಲಿ ಕಳಪೆ ದರ್ಜೆಯ ಖಾದಿಯನ್ನು ಕಾಣಬಹುದು. ಅಂತಹ ಬಟ್ಟೆಯನ್ನು ಯಾರು ಖರೀದಿಸಿಯಾರು ? ಭಾರತದಲ್ಲಿ ವಿನ್ಯಾಸಕಾರರಿಗೆ ಕೊರತೆಯಿಲ್ಲ. ಸೀರೆ, ಚೂಡಿದಾರಗಳಲ್ಲಿ ಅಸಂಖ್ಯಾತ ವಿನ್ಯಾಸಗಳನ್ನು ಸಂಶೋಧಿಸಿದವರಿದ್ದಾರೆ. ಆದರೆ ಖಾದಿಯಲ್ಲಿ ನವೀನ ವಿನ್ಯಾಸಗಳಿಲ್ಲ.
ನೇಕಾರರ ಸಮಸ್ಯೆ ಅವರಲ್ಲಿಯೇ ಇದೆ. ಅವರೇಕೆ ಖಾದಿ ಗ್ರಾಮೋದ್ಯೋಗ ಸಂಘಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯಬೇಕು ? ಸ್ವತಂತ್ರವಾಗಿ ವ್ಯಾಪಾರ ಮಾಡಿಕೊಂಡಿರಬಾರದಾ ಎನ್ನುವ ಅವಿವೇಕಿಗಳಿದ್ದಾರೆ. ಸ್ವಾಮಿ, ಖಾದಿ ಕಾರ್ಮಿಕ ಕೇಂದ್ರಿತ ವಲಯ. ಬಟ್ಟೆಗಳ ಮಿಲ್ಲಿನಲ್ಲಿ ೯ ಲಕ್ಷ ಮಂದಿಗೆ ಉದ್ಯೋಗ ಸಿಕ್ಕಿದ್ದರೆ, ಖಾದಿಯಲ್ಲಿ ೧೪ ಲಕ್ಷ ಮಂದಿಗೆ ಜೀವನಾಧಾರ ಸಿಕ್ಕಿದೆ. ಕಚ್ಚಾ ಹತ್ತಿಯ ಪೂರೈಕೆ, ಕೈ ಮಗ್ಗದ ಕೆಲಸ, ಬಣ್ಣ ಹಾಕುವುದು, ಮಾರಾಟ ಅಂತ ನಾನಾ ಸ್ತರಗಳಲ್ಲಿ ಕೆಲಸವಿದ್ದು, ಒಬ್ಬರಿಂದಲೇ ನಿರ್ವಹಿಸಲು ಆಗುವುದಿಲ್ಲ. ಇದೆಲ್ಲದರ ನಿರ್ವಹಣೆಗೆ ಗ್ರಾಮೋದ್ಯೋಗ ಸಂಘಗಳು ಬೇಕು. ಸಂಘಗಳ ಅಸ್ತಿತ್ವಕ್ಕೆ ಸಬ್ಸಿಡಿ ನೆರವು ಬೇಕು. ಮೂಲಸೌಕರ್ಯ ಇರಬೇಕು. ಆದರೆ ಪ್ರತಿಯೊಂದು ಖಾದಿ ಗ್ರಾಮೋದ್ಯೋಗ ಸಂಘವೂ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಸೀತು. ನಿರಕ್ಷರಿಗಳೂ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹಳ್ಳಿಗಾಡಿನ ಮಹಿಳೆಯರಿಗೂ ಇದು ಸಂಪಾದನೆಯ ಮಾರ್ಗ. ಆದರೆ ಸಕಾಲದಲ್ಲಿ ಕಚ್ಚಾ ಸಾಮಗ್ರಿ ಪೂರೈಕೆಯಾಗದಿರುವುದು, ಉತ್ಪನ್ನ ಮಾರಾಟವಾಗದಿರುವುದು, ಸಂಬಳ ಬಟವಾಡೆಯಾಗದಿರುವುದು ಮುಂತಾದ ಅಡ್ಡಿ ಆತಂಕಗಳಿಂದ ನೇಕಾರ ಬೀದಿಗೆ ಬಿದ್ದಿದ್ದಾನೆ. ಹುಬ್ಬಳ್ಳಿ ಕಡೆ ನೇಕಾರನ ಹೆಂಡತಿ ಬತ್ತಲೆ ಎಂಬ ಮಾತಿದೆ.ಅಂದರೆ ಇಡೀ ನಾಡಿಗೆ ವಸ್ತ್ರ ನೇಯುವವನ ಹೆಂಡತಿಗೇ ಸೀರೆ ಖರೀದಿಸಲಾಗದಷ್ಟು ಬಡತನ ಇರುತ್ತದೆ ಎಂತರ್ಥ.
ಖಾದಿ ತೊಡದ ಅಧಿಕಾರಿಗಳು
ಗ್ರಾಮೀಣ ಭಾಗದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ನೇಕಾರನ ದುಮ್ಮಾನವನ್ನು ಸರಕಾರಕ್ಕೆ ಮನ ಮುಟ್ಟುವಂತೆ ವಿವರಿಸಬೇಕಾದ ಅಧಿಕಾರಿಗಳು ನಮ್ಮಲ್ಲಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಖಾದಿಯ ಬಗ್ಗೆ ಕಿಂಚಿತ್ತೂ ಪ್ರೀತಿ ಇರದ ಐಎಎಸ್‌ ಅಧಿಕಾರಿಗಳಿಂದ ಏನೂ ಉಪಯೋಗವಿಲ್ಲ. ಇಂತಹ ಅಧಿಕಾರಿಗಳು ಖಾದಿ ಉತ್ಸವದಲ್ಲಿ ಫ್ಯಾಷನ್‌ ನಂತಹ ಐಡಿಯಾ ಬಿಟ್ಟರೆ ಬೇರೇನು ಕೊಟ್ಟಾರು ?

ಹತ್ತು ಲಕ್ಷ ಕೋಟಿ ರೂ. ಬಜೆಟ್‌ನ ಕೇಂದ್ರ ಆಯವ್ಯಯದಲ್ಲಿ ನೇಕಾರರಿಗೆ, ನೂಲುವವರಿಗೆ, ಖಾದಿ ಕಾರ್ಮಿಕರಿಗೆ ಅಂತ ೩೦೦ ಕೋಟಿ ರೂ. ಕೊಟ್ಟರೆ ಸಾಕು, ಈ ಸಮುದಾಯದ ಬದುಕು ಹಸನಾಗುತ್ತದೆ ಎನ್ನುತ್ತಾರೆ ಪಾಟೀಲಪುಟ್ಟಪ್ಪನವರು. ಸರಕಾರ ಈ ಹಿರಿಯರ ಮಾತು ಕೇಳುವ ಮನಸ್ಸು ಮಾಡುತ್ತಾ ?
ನೋಡಿ, ಕನಿಷ್ಠ ಬೆಂಗಳೂರಲ್ಲೇ ಇರುವ ನಕಲಿ ಖಾದಿ ಮಳಿಗೆಗಳಿಗೆ ಬೀಗ ಜಡಿಯಲು ಯಾರೊಬ್ಬರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇವತ್ತು ಮಾರ್ವಾಡಿಗಳು ಬೆಂಗಳೂರಿನ ಮೆಜೆಸ್ಟಿಕ್, ಅವೆನ್ಯೂ ರಸ್ತೆ, ಡಿಸ್ಪೆನ್ಸರಿ ರೋಡ್‌ ಮುಂತಾದ ಕಡೆಗಳಲ್ಲಿ ನಕಲಿ ಖಾದಿ ಭಂಡಾರಗಳನ್ನು ತೆರೆದಿದ್ದಾರೆ. ಜನ ಮೋಸ ಹೋಗುತ್ತಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲ.
ಅನೇಕ ಮಂದಿ ಗಾಂಧಿ ಜಯಂತಿಯ ದಿನ ಮಾತ್ರ ಖಾದಿ ಎಂಪೋರಿಯಂಗಳಲ್ಲಿ ಭರ್ಜರಿ ದರ ಕಡಿತ ಇದೆ ಎಂದು ಭಾವಿಸುತ್ತಾರೆ. ಆದರೆ ಈ ವಿಷೇಷ ಶೇ.೩೫ರಷ್ಟು ದರ ಕಡಿತ ಅಕ್ಟೋಬರ‍್ ೨ರಿಂದ ನಮವೆಂಬರ್‌ ಮುಗಿಯುವ ತನಕ ಇರುತ್ತದೆ. ಆದರೆ ಗಾಂಧಿ ಜಯಂತಿಯಂದು ಮಾತ್ರ ಮುಗಿ ಬೀಳುವ ಕಾರಣ ಬೆಂಗಳೂರಿನ ಖಾದಿ ಎಂಪೋರಿಯಂನಲ್ಲಿ ಅಂದು ಒಂದೇ ದಿನ ೮ ಲಕ್ಷ ರೂ.ಗೂ ಹೆಚ್ಚು ವ್ಯಾಪಾರ ಕುದುರುತ್ತದೆ. ಉಳಿದ ದಿನಗಳಲ್ಲಿ ೨೦-೩೦ ಸಾವಿರ ರೂ. ತನಕ ನಡೆಯುತ್ತದೆ. ಇತರ ಖಾದಿ ಭಂಡಾರಗಳಲ್ಲಿ ಇಂತಹ ವ್ಯಾಪಾರ ಇರುವುದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಜನರಿಗೆ ಖಾದಿ ವ್ಯಾಪಾರ, ದರ ಕಡಿತದ ಬಗ್ಗೆ ಮಾಹಿತಿ ತಲುಪುತ್ತಿಲ್ಲ.
ಹತ್ತರಲ್ಲಿ ಹನ್ನೊಂದು
ಖಾದಿಯನ್ನು ಹತ್ತರಲ್ಲಿ ಹನ್ನೊಂದು ಎಂಬಂತೆ ನಿರ್ಲಕ್ಷಿಸಲಾಗಿದೆ. ಯಾಕೆಂದರೆ ಸಣ್ಣ ಮತ್ತು ಮಧ್ಯಮ ಉದ್ದಿಮೆ ಇಲಾಖೆಯ ಅಡಿಯಲ್ಲಿ ಖಾದಿ ಅಪ್ಪಚ್ಚಿಯಾಗಿದೆ. ಈ ಇಲಾಖೆಗೆ ಬರುವ ಅನುದಾನವೂ ಅಷ್ಟಕ್ಕಷ್ಟೇ. ಅದರ ಬದಲಿಗೆ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲದ ಗ್ರಾಮೀಣಾಭಿವೃದ್ಧಿ ಇಲಾಕೆಯ ವ್ಯಾಪ್ತಿಗೆ ಯಾಕೆ ತರಕೂಡದು ? ಖಾದಿ ಪರ ವಕಾಲತ್ತು ವಹಿಸುವಲ್ಲಿ ಕಾಂಗ್ರಸ್‌ ಸಂಸದ ರಾಹುಲ್ ಗಾಂಧಿ ಇತ್ತೀಚಗೆ ಆಸಕ್ತಿ ವಹಿಸಿದ್ದರು. ನಾನು ಯಾವತ್ತೂ ಖಾದಿಯ ಕುರ್ತಾ , ಪೈಜಾಮಗಳನ್ನು ಇಷ್ಟಪಡುತ್ತೇನೆ. ಇದು ನನಗೆ ಉತ್ತಮ ಎನ್ನಿಸಿದೆ ಎಂದು ಅವರು ಹೇಳಿದ್ದರು. ಸಚಿನ್ ಪೈಲಟ್, ನವೀನ್ ಜಿಂದಾಲ್, ಜ್ಯೋತಿರಾದಿತ್ಯ ಸಿಂಧ್ಯಾ ಮುಂತಾದ ಯುವ ರಾಜಕಾರಣಿಗಳು ಖಾದಿಯನ್ನು ಧರಿಸಿ ರಾಜಕೀಯ ವೇದಿಕೆಗಳಲ್ಲಿ ಕಾಣುತ್ತಾರೆ. ಆದರೆ ನೇಕಾರರ ದುಸ್ಥಿತಿಯ ಬಗ್ಗೆ ಕೂಡ ಇವರು ತಿಳಿಯಬೇಕಲ್ಲವೇ.

Monday, 20 July 2009

ಗಂಜಲದಿಂದ ಔಷಧಿ ತಯಾರಿಸುವ ಮಣ್ಣಿನ ಯಂತ್ರ


ಮಧುಗಿರಿಯ ಚೆನ್ನಮಲ್ಲನಹಳ್ಳಿಗೆ ಇತ್ತೀಚೆಗೆ ಹೋಗಿದ್ದಾಗ, ಮಿತ್ರ ಮಧುಸೂಧನ ಅವರ ಗೋಶಾಲೆಯಲ್ಲಿ ಕಂಡು ಬಂದ ಮಡಿಕೆಯ ರಚನೆಯಿದು. ಕೆಳಗಿನ ಮಡಕೆಯಲ್ಲಿ ಗೋಮೂತ್ರವನ್ನು ಶೇಖರಿಸಿ ಭಟ್ಟಿ ಇಳಿಸಬೇಕು. ಮೇಲೆ ತಣ್ಣೀರಿನ ಮಡಕೆ ಇಡಬೇಕು. ಮಧ್ಯದ ಪಾತ್ರೆಯ ಮೂಲಕ ಆವಿ ದ್ರವವಾಗಿ ಹೊರಬರುತ್ತದೆ. ಇದು ಔಷಧವಾಗಿ ಬಳಕೆಯಾಗುತ್ತದೆ. ಪ್ರತಿ ಲೀಟರಿಗೆ ೧೨೦ ರೂ. ಬೆಲೆ ಇರುತ್ತದೆ ಎಂದು ಮಧುಸೂಧನ ವಿವರಿಸಿದಾಗ ಬೆರಗಾಗುವ ಸರದಿ ನನ್ನದಾಗಿತ್ತು.

Thursday, 16 July 2009

ಕೊಲ್ಲಾಪುರಿ ಚಪ್ಪಲಿ ನಡೆದು ಬಂದ ದಾರಿ

ಮ್ಮ ಪರಂಪರೆ ನೇಕಸುಬುಗಳು ಹೇರಳ ಉದ್ಯೋಗಾವಕಾಶಗಳ ಆಗರ. ಯಾಕೆಂದರೆ ಅವುಗಳು ಕಾರ್ಮಿಕ ಕೇಂದ್ರಿತ. ಹೀಗಿದ್ದರೂ ಅಂಥ ವೃತ್ತಿಗಳಲ್ಲಿ ಉತ್ಪನ್ನಗಳಿಗೆ ಬೆಲೆ ಕಟ್ಟುವ ವ್ಯವಸ್ಥೆ ನಮ್ಮಲ್ಲಿಲ್ಲ. ಹೀಗಾಗಿ ಉತ್ಪನ್ನಗಳ ಕಲಾವಿದನ ಪ್ರತಿಭೆಗೆ ಇಲ್ಲಿ ಕವಡೆ ಕಿಮ್ಮತ್ತು ಸಿಗುವುದಿಲ್ಲ. ಒಂದು ಸಲ ಎಲ್ಲಾದರೂ ಬೆಲೆ ದೊರಕಿಸಿಕೊಳ್ಳುವ ಕಲೆ ಗೊತ್ತಾದರೆ ಸಾಕು, ಪರಂಪರಾನುಗತ ಕುಶಲ ವೃತ್ತಿ ಹಾಗೂ ಕಿರು ಉದ್ದಿಮೆಗಳು ತಂತ್ರಜ್ಞಾನದ ನೆರವಿನೊಂದಿಗೆ ಮರು ಹುಟ್ಟು ಪಡೆದುಕೊಳ್ಳಲಿವೆ. ಹೊಸ ವಿನ್ಯಾಸ, ಮಾರುಕಟ್ಟೆ ಮತ್ತು ಲಯದೊಂದಿಗೆ...ಅದಕ್ಕೆ ಇಲ್ಲೊಂದು ಉದಾಹರಣೆ ಕೊಲ್ಲಾಪುರಿ ಚಪ್ಪಲಿ..

' The solution to India's employment problem is not huge industries, but small enterprises that employ a handful of people
each.. '

ಹಾಗಂತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಂತೂ ಸಂದರ್ಭ ಸಿಕ್ಕಾಗಲೆಲ್ಲ ಒತ್ತಿ ಹೇಳುತ್ತಲೇ ಇದ್ದಾರೆ. ಹೀಗಿದ್ದರೂ ಹೇರಳ ಉದ್ಯೋಗ ಸೃಷ್ಟಿಯ ಕಸುಬುಗಳನ್ನು ನಿರ್ಲಕ್ಷಿಸುತ್ತಲೇ ಇದ್ದೇವೆ. ಮುಖ್ಯವಾಗಿ ಏನು ಮಾಡಬೇಕು ಎಂಬುದೇ ನಮಗೆ ಗೊತ್ತಿಲ್ಲ. ಪರಿಣಾಮವಾಗಿ ಕೋಟ್ಯಂತರ ಮಂದಿ ಕಲಾವಿದರು, ಕುಶಲಕರ್ಮಿಗಳು ಬೀದಿಗೆ ಬಿದ್ದಿದ್ದಾರೆ. ಪಾರಂಪರಿಕ ಗುಡಿ ಕೈಗಾರಿಕೆಗಳು ನಿರ್ನಾಮವಾಗಿವೆ. ಕೆಲವು ಸ್ವಘೋಷಿತ ಪಂಡಿತರಂತೂ ‘ಕೈ’ಗಾರಿಕೆ ಎನ್ನುವ ಪದವನ್ನು ಬಳಸಲೇಕೂಡದು. ಈವತ್ತು ಕೈಗಳಿಂದ ನಡೆಯುವ ಕೈಗಾರಿಕೆ ಎಲ್ಲಿದೆ ? ಏನಿದ್ದರೂ ಉದ್ದಿಮೆಯೇ ಸೈ ಎಂದು ಅಳಲೇಕಾಯಿ ಪಾಂಡಿತ್ಯವನ್ನು ಕೆಲಸಕ್ಕೆ ಬಾರದವರಂತೆ ಮಂಡಿಸುತ್ತಾರೆ. ಹೋಗಲಿ, ನಮ್ಮ ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ, ನಗರದಲ್ಲಿ, ಪಟ್ಟಣದಲ್ಲಿ ಅನೇಕ ಮಂದಿ ಸಣ್ಣ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರು ಯಶಸ್ವಿಗಳಾಗಿದ್ದಾರೆ. ಅನೇಕ ಮಂದಿ ಮಹಿಳೆಯರೂ ಈವತ್ತು ಸ್ವ ಉದ್ಯೋಗಿಗಳಾಗಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಅಂಥ ಮಂದಿಯ ಯಾವುದೇ ಅಂಕಿ ಅಂಶಗಳು ಮತ್ತು ಮಾಹಿತಿ ನಿಮಗೆ ಕೈಗಾರಿಕಾ ಅಥವಾ ಯಾವುದೇ ಇಲಾಖೆಯಲ್ಲಿ ಸಿಗುವುದಿಲ್ಲ. ಅಂಥ ಬಡ್ಡಿ ಮಕ್ಕಳಿಗೆ ಅಥಣಿಯ ಇನ್ನೂರು ಕುಟುಂಬಗಳ ಕೊಲ್ಲಾಪುರಿ ಚಪ್ಪಲಿಯ ಕಥಾನಕ ಹೇಳಬೇಕು ಎನ್ನಿಸುತ್ತದೆ.
ನಿಜವಾದ ಕೊಲ್ಲಾಪುರಿ ಚಪ್ಪಲಿಯನ್ನು ಯಂತ್ರಗಳಲ್ಲಿ ಮಾಡುವುದಿಲ್ಲ. ಅದು ಕೇವಲ ಕೊಲ್ಲಾಪುರಿಯಲ್ಲಿ ತಯಾರಿಸುವ ಪಾದರಕ್ಷೆಯಲ್ಲ. ಇದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕವನ್ನು ಬಳಸುವುದಿಲ್ಲ. ಆದ್ದರಿಂದ ಅಲರ್ಜಿಯ ಸಮಸ್ಯೆ ಇರುವುದಿಲ್ಲ. ರಾಜ್ಯದಲ್ಲಿ ಹೇಳುವುದಾದರೆ ಅಥಣಿಯ ಸುತ್ತುಮುತ್ತಲಿನ ಗ್ರಾಮಗಳಲ್ಲಿ ನಾನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಕಲಾತ್ಮಕ ವಿನ್ಯಾಸದ ಕೊಲ್ಲಾಪುರಿ ಚಪ್ಪಲಿಯನ್ನು ಸಿದ್ಧಪಡಿಸುವುದೇ ಜೀವನೋಪಾಯ. ಅಥಣಿಯ ಸಂತೆಯಲ್ಲಿ ಸಿಗುವ natural leatherನ್ನು ಬಳಸಿಕೊಂಡು ಎರಡು ಸಾವಿರಕ್ಕೂ ಹೆಚ್ಚು ವಿನ್ಯಾಸದಲ್ಲಿ ಚಪ್ಪಲಿಗಳನ್ನು ಹೊಲಿಯುತ್ತಾರೆ. ಹೊಸ ಹೊಸ ವಿನ್ಯಾಸಗಳನ್ನು ಕಂಡು ಹಿಡಿಯಲು ಕುಶಲಕರ್ಮಿಗಳಿಗೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಇದರ ಪರಿಣಾಮ ಪ್ರತಿ ವರ್ಷ ೨೦೦ಕ್ಕೂ ಹೆಚ್ಚು ಹೊಸ ವಿನ್ಯಾಸಗಳು ಸೇರ್ಪಡೆಯಾಗುತ್ತವೆ. ಈ ಕಲಾವಿದರ ಚಪ್ಪಲಿಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಗ್ರಾಹಕರ ಕೈ ಸೇರುತ್ತವೆ. ಒಂದು ಕಾಲದಲ್ಲಿ ಸಂಪಾದನೆಯಿಲ್ಲದೆ ನಿಕೃಷ್ಟರಾಗಿದ್ದ ಅಥಣಿ, ಐನಾಪುರ, ಮದಬಾಯಿಯ ಕುಶಲಕರ್ಮಿಗಳ ಬದುಕು ಮತ್ತೊಂದು ಮಗ್ಗುಲಿಗೆ ಹೊರಳಿದೆ. ಸಾಲದ ಹೊರೆ ತಗ್ಗಿದೆ. ಮನೆಗೆ ಟಿ.ವಿ, ಮಿಕ್ಸಿ ಪ್ರವೇಶಿಸಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಅವರೀಗ ಮರೆಯುತ್ತಿಲ್ಲ. ಕುಡಿಯುವುದನ್ನು ಬಹುತೇಕ ಮಂದಿ ಬಿಟ್ಟಿದ್ದಾರೆ. ಗುಳೆ ಹೋಗುವ ಪ್ರವೃತ್ತಿ ನಿಂತು ಹೋಗಿದೆ. ಅಷ್ಟೇಕೆ, ಆ ಸಮುದಾಯದ ಯುವತಿಯೊಬ್ಬಳು ಗಗನಸಖಿಯಾಗುವ ಹಂತದಲ್ಲಿ ಇದ್ದಾಳೆ. ಜರ್ಮನಿಯ ಚರ್ಮೋತ್ಪನ್ನ ಮೇಳಗಳಲ್ಲಿ ಡಜನುಗಟ್ಟಲೆ ಮಂದಿ ಭಾಗವಹಿಸಿದ್ದಾರೆ. ಮೊನ್ನೆಯಷ್ಟೇ ಚಪ್ಪಲಿಗಳ ಎಪ್ಪತ್ತೊಂದು ಬಾಕ್ಸ್ ಬೆಂಗಳೂರಿಗೆ ಬಂದಿಳಿದಿತ್ತು. ಬೆಂಗಳೂರಿಗೆ ಬಂದಾಗ ಗರುಡಾ ಮಾಲ್‌ಗೆ ಹೋಗುವ ಕುಶಲಕರ್ಮಿಗಳು, ಅಲ್ಲಿ ಸೀರೆಗೆ ೨೮ ಸಾವಿರ ರೂ. ಬೆಲೆ ಕಂಡು ಬೆರಗಾಗುವುದಲ್ಲದೆ, ಅದಕ್ಕೆ ಏಕೆ ಅಷ್ಟು ಬೆಲೆ ಅಂತ ನೋಡುತ್ತಾರೆ. ಕಲಿಯುತ್ತಾರೆ. ಚಪ್ಪಲಿಗೆ ಮೂರು ಸಾವಿರ ಬೆಲೆ ಏಕೆ ಎಂದು ದಿನಗಟ್ಟಲೆ ಲೋಚಿಸುತ್ತಾರೆ. ಈ ಪರಿವರ್ತನೆಯ ಸೂತ್ರ ಸರಳ. ‘ ಅಮಿತ ಉತ್ಪನ್ನದಿಂದ ಕನಿಷ್ಠ ಲಾಭ ಪಡೆಯುವುದಕ್ಕಿಂತ ಸೀಮಿತ ಉತ್ಪನ್ನದಿಂದ ಗರಿಷ್ಠ ಲಾಭ ಪಡೆಯುವುದು ಉತ್ತಮ’ ಮುಂಬಯಿನಲ್ಲಿ ಡಬ್ಬಾವಾಲಾಗಳ ಯಶೋಗಾಥೆಯನ್ನು ಎಂಬಿಎ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರಲ್ಲವೇ? ಹಾಗೆಯೇ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನ ಸಂಶೋಧನಾ ವಿದ್ಯಾರ್ಥಿಗಳು ಇವರ ಜಾಡನ್ನು ಅರಸಿದ್ದಾರೆ.
೨೦೦೦ಕ್ಕಿಂತ ಮೊದಲು ಇವರೆಲ್ಲ ವ್ಯಾಪಾರಿಗಳ ಕಪಿ ಮುಷ್ಠಿಯಲ್ಲಿದ್ದರು. ತಿಂಗಳಿಗೆ ಇಡೀ ಕುಟುಂಬ ಸುಮಾರು ಎರಡು ಸಾವಿರ ರೂ. ಸಂಪಾದಿಸುತ್ತಿತ್ತು. ಅದರಲ್ಲಿಯೂ ಬಹುಪಾಲು ಸಾಹುಕಾರರ ಕೈಯಿಂದ ಪಡೆದ ಸಾಲದ ಬಡ್ಡಿ ತೀರಿಸಲು ಸಂದಾಯವಾಗುತ್ತಿತ್ತು. ಸಾಲ ಬೆಳೆಯಲಿ ಅಂತ ಸಾಹುಕಾರರೇ ಮದ್ಯ ಕುಡಿಸುತ್ತಿದ್ದರು. ೧೯೭೦ರಲ್ಲಿ ಲಿಡ್ಕರ್ ಇಲಾಖೆಯವರು ಊರಿನ ಹೊರಭಾಗದಲ್ಲಿ ಉದ್ದಿಮೆಗೆ ವ್ಯವಸ್ಥ ಮಾಡಿತ್ತು. ಆದರೆ ಜನಪ್ರಿಯವಾಗಿರಲಿಲ್ಲ. ಅವರೆಲ್ಲ ಕುಡುಕರು ಎಂಬ ಉದಾಸೀನ ಇತ್ತು. ಕೊಲ್ಲಾಪುರಿ ಚಪ್ಪಲಿಗೆ ಸೈಜ್ ಎನ್ನುವುದು ಇರಲಿಲ್ಲ. ಕ್ರಮೇಣ ಬೇಡಿಕೆ ಕಡಿಮೆಯಾಗಿತ್ತು.
ಬೆಂಗಳೂರು ಮೂಲದ ಆಸೆಂಟ್ ಸೇವಾ ಸಂಸ್ಥೆ ಯುಎನ್‌ಡಿಪಿ ಪ್ರಾಯೋಜಕತ್ವದಲ್ಲಿ, ಸಿಎಲ್‌ಆರ್‌ಐನ ( ಸೆಂಟ್ರಲ್ ಲೆದರ್ ರೀಸರ್ಚ್ ಇನ್‌ಸ್ಟಿಟ್ಯೂಟ್ ) ತಾಂತ್ರಿಕ ಸಹಭಾಗಿತ್ವ ಹಾಗೂ ಕರ್ನಾಟಕ ಸರಕಾರದ ಮೂಲಸೌಕರ್ಯ ಪಡೆದ ಅಸೆಂಟ್, ಅಥಣಿಯ ಕುಶಲಕರ್ಮಿಗಳದ್ದೇ ಆದ ಸ್ವಸಹಾಯ ಆಧಾರಿತ ಟ್ರಸ್ಟ್ ನ್ನು ರೂಪುಗೊಳಿಸಿತು. ಅದರ ಹೆಸರು ಟೂಹೋಲ್ಡ್.
ಶೇ. ೯೫ ರಫ್ತು: ಟೂಹೋಲ್ಡ್‌ನಲ್ಲಿ ೧೫ ಸ್ವಸಹಾಯ ಗುಂಪುಗಳಿವೆ. ಪ್ರತಿಯೊಂದು ಗುಂಪಿನಲ್ಲಿಯೂ ೧೨-೧೫ ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಬ್ಯಾಂಕ್ ಖಾತೆಯಿದೆ ಎಮ್ಮೆ, ಕೋಣನ ತೊಗಲಿನಿಂದ ತಯಾರಿಸಿದ ಈ ಕಚ್ಛಾ ಸಾಮಗ್ರಿ (ಚಿZಜ ಠಿZಛಿb ) ಸ್ಥಳೀಯವಾಗಿ ಸಿಗುತ್ತದೆ. ಚಪ್ಪಲಿಗಳ ಮಾರಾಟದಲ್ಲಿ ಸಿಗುವ ನಿವ್ವಳ ಲಾಭದಲ್ಲಿ ಶೇ. ೪೦ ಕಂಪನಿಗೆ, ಶೇ. ೪೦ ಕುಶಲಕರ್ಮಿಗಳಿಗೆ ಹಾಗೂ ಶೇ. ೨೦ ಅವರ ಸ್ವಸಹಾಯ ಗುಂಪುಗಳಿಗೆ ಸಂದಾಯವಾಗುತ್ತದೆ. ಸ್ವಸಹಾಯ ಗುಂಪುಗಳಲ್ಲಿ ಹಣಕಾಸು ನೆರವುನ ವಹಿವಾಟು ಕೂಡ ಚಾಲ್ತಿಯಲ್ಲಿದೆ. ಈವತ್ತು ಸದಸ್ಯರ ಕುಟುಂಬದ ಆದಾಯ ತಿಂಗಳಿಗೆ ೭-೮ ಸಾವಿರ ರೂ. ದಾಟುತ್ತದೆ. ಯಾರು ಆಕರ್ಷಕ ವಿನ್ಯಾಸದಲ್ಲಿ ಹೆಚ್ಚು ಚಪ್ಪಲಿಗಳನ್ನು ಸಿದ್ಧಪಡಿಸುತ್ತಾರೆಯೋ, ಅವರಿಗೆ ಆದಾಯವೂ ತಕ್ಕಮಟ್ಟಿಗೆ ಸಿಗುತ್ತದೆ.
ಇವೆಲ್ಲಕ್ಕಿಂತ ಗಮನಾರ್ಹ ಬದಲಾವಣೆ ಏನೆಂದರೆ ಹಿಂದೊಮ್ಮೆ ಮನೆ ಎಂಬ ಗೂಡನ್ನು ಬಿಟ್ಟು ಹೊರಗೆ ಕಾಲಿಡಲು ಅಂಜುತ್ತಿದ್ದ ಮಹಿಳೆಯರೀಗ ಬ್ಯಾಂಕ್ ವ್ಯವಹಾರವನ್ನೂ ಕಲಿತಿದ್ದಾರೆ. ಅವರ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ.
ಕಲಾವಿದ ಎಂಎಫ್ ಹುಸೇನ್ ಮತ್ತು ಅವರಂಥ ಕಲಾವಿದರು ಅಕಸ್ಮಾತ್ ಹಾಳೆ ಮೇಲೆ ಶಾಯಿ ಚೆಲ್ಲಿದರೂ, ಅದನ್ನೇ ಹರಾಜಿನಲ್ಲಿ ನವ್ಯ ಕಲಾಕೃತಿ ಅಂತ ಲಕ್ಷಾಂತರ ಡಾಲರ್ ಕೊಟ್ಟು ಖರೀದಿಸುವ ಹುಚ್ಚರಿದ್ದಾರೆ. ಹೀಗಿರುವಾಗ ಬದುಕನ್ನೇ ಕಲೆಗೆ, ಕೌಶಲ್ಯಕ್ಕೆ ತೇಯುತ್ತಿರುವ, ಅದು ಬಿಟ್ಟರೆ ಬೇರೇನೂ ಗೊತ್ತಿರದ ಸಾವಿರಾರು ಮಂದಿಯ ಸಾಮರ್ಥ್ಯಕ್ಕೆ, ಉತ್ಪನ್ನಗಳಿಗೆ ಯಾಕೆ ಬೆಲೆ ಕಟ್ಟುವ ಕೆಲಸ ನಡೆಯುತ್ತಿಲ್ಲ ? ದಾರಿ ಅದೊಂದೇ, ಇಲ್ಲಿ ಬೆಲೆ ಸಿಗದಿದ್ದರೆ, ಬೆಲೆ ಇರುವಲ್ಲಿ ಕಟ್ಟಬೇಕು. ಹಾಗೆ ಮಾರಾಟ ಮಾಡುವ ಕಲೆಯನ್ನು ತಿಳಿಸಿಕೊಡಬೇಕು. ಆಗ ಉದ್ಯೋಗ ಸೃಷ್ಟಿಯಾಗುತ್ತದೆ. ಪಾರಂಪರಿಕ ಕಸುಬುಗಳು ಜೀವಂತವಾಗಿ ಉಳಿಯುತ್ತವೆ. ಹೊಸ ಮಾರುಕಟ್ಟೆ ಯಿಂದ ಮರುಹುಟ್ಟು ಪಡೆಯುತ್ತವೆ. ಕಲಾಂ ಹೇಳಿರುವುದನ್ನು ಮರೆಯದಿರೋಣ. ಲಕ್ಷಾಂತರ ಜನರ ಕೈಗೆ ಕೆಲಸ ಸಿಗಬೇಬೇಕಾದರೆ ಸಣ್ಣ ಪುಟ್ಟ ಉದ್ದಿಮೆ, ಗುಡಿ ಕೈಗಾರಿಕೆಯೇ ಲಭ್ಯವಿರುವ ಏಕೈಕ ಉಪಾಯ. ದಯವಿಟ್ಟು ಯೋಚಿಸಿ.

ಈವತ್ತು ತಂತ್ರಜ್ಞಾನದ ನೆರವಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಇಂಟರ್‌ನೆಟ್, ವೆಬ್‌ಸೈಟ್ ಇದ್ದರೆ ಜಗತ್ತಿನ ಯಾವುದೇ ಮೂಲೆಯಿಂದ ಗ್ರಾಹಕರು ನಿಮ್ಮ ಉತ್ಪನ್ನವನ್ನು ಖರೀದಿಸಬಹುದು. ಕೊಲ್ಲಾಪುರಿ ಚಪ್ಪಲಿಯ ರಫ್ತು ವಿಚಾರದಲ್ಲಿ ತಂತ್ರಜ್ಞಾನದ ಪಾತ್ರ ಮುಖ್ಯವಾಗಿದೆ. ಜರ್ಮನಿ, ಬ್ರಿಟನ್, ಜಪಾನಿನ ಗ್ರಾಹಕರು ಅಂತರ್ಜಾಲದ ಮೂಲಕ ತಮಗೆ ಬೇಕಾದ ಆಯ್ಕೆಯ ಚಪ್ಪಲಿಯನ್ನು ಗುರುತಿಸುತ್ತಾರೆ. ವಿನ್ಯಾಸ ಹೀಗಿರಬೇಕು, ಹೀಗಿರಬಾರದು ಅಂತ ತಿಳಿಸುತ್ತಾರೆ. ಅವರ ಇಚ್ಛೆಯನುಸಾರ ಚಪ್ಪಲಿ ಸಿದ್ಧವಾಗಿ ರವಾನೆಯಾಗುತ್ತದೆ. ಇವರ ಬ್ಯಾಂಕ್ ಖಾತೆಗೆ ಮೊತ್ತ ಜಮೆಯಾಗುತ್ತದೆ. ಇದೇ ಮಾದರಿಯನ್ನು ಇತರ ಕುಶಲ ಕಲೆಗಳಿಗೆ ಯಾಕೆ ವಿಸ್ತರಿಸಕೂಡದು ?