Wednesday, 29 July 2009

ಪುಷ್ಪಕ ಗೆಲ್ಲುತ್ತೆ ಅಂತ ನಿರ್ದೇಶಕರಿಗೇ ನಂಬಿಕೆ ಇರಲಿಲ್ಲ..

ಅದೊಂದು ಸಿನಿಮಾ ಕನ್ನಡ ಚಿತ್ರರಂಗದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿತ್ತು.
ಕಮಲಹಾಸನ್ ಗೆ ಮರುಜನ್ಮ ಕೊಟ್ಟಿತ್ತು. ಮುಂಬಯಿನಲ್ಲಿ ಶತ ದಿನೋತ್ಸವ ಆಚರಿಸಿತ್ತು. ಬೆಂಗಳೂರಿನಲ್ಲಿ ೫೨ ವಾರ ಓಡಿತ್ತು. ಆದರೆ ಚಿತ್ರದಲ್ಲಿ ಸಂಭಾಷಣೆಯೇ ಇರಲಿಲ್ಲ.
ನಿಜ. ಅದುವೇ ಪುಷ್ಪಕ ವಿಮಾನ...ಅಂಥ ಸಿನಿಮಾವನ್ನು ನಿರ್ಮಿಸಿ ಹಲವಾರು ದಾಖಲೆಗಳನ್ನು ಬರೆದ ನಿರ್ಮಾಪಕರೇ ಶೃಂಗಾರ್‌ ನಾಗರಾಜ್.
೧೯೮೮ರಲ್ಲಿ ಬಿಡುಗಡೆಯಾದ ಸಿನಿಮಾ ಇಂಥ ಅಭೂತಪೂರ್ವ ಯಶಸ್ಸು ಗಳಿಸುತ್ತದೆ ಎಂದು ಯಾರೊಬ್ಬರೂ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಎಲ್ಲ ಚಿತ್ರಗಳೂ ಹಾಗೆಯೇ, ಗೆಲ್ಲುತ್ತೆ ಎಂದುಕೊಂಡೇ ನಿರ್ಮಿಸುತ್ತಾರೆ. ಆದರೆ ಪುಷ್ಪಕ ವಿಮಾನದ ವಿಚಾರದಲ್ಲಿ ಸ್ವತಃ ನಾಯಕ ನಟ ಕಮಲ್ ಹಾಸನ್‌, ನಿರ್ದೇಶಕ ಶ್ರೀನಿವಾಸರಾವ್‌ ಸಿಂಗೀತಂ ಅವರಿಗೆ ಕೂಡ ನಂಬಿಕೆ ಇರಲಿಲ್ಲ.
" ಅದೃಷ್ಟವೂ ನನ್ನ ಕಡೆಗಿತ್ತು. ಹೀಗಿದ್ದರೂ ಚಿತ್ರ ಗೆಲ್ಲುತ್ತೆ ಅಂತ ಒಳ ಮನಸ್ಸು ಹೇಳುತ್ತಿತ್ತು. ಕೊನೆಗೆ ನಾನು ಅಂದುಕೊಂಡದ್ದೇ ನಿಜ ಆಯ್ತು. ಚಿತ್ರಕ್ಕೆ ರಾಷ್ಟ್ರಪತಿಯವರ ಪದಕವೂ ಬಂತು " ಎಂದರು ಶೃಂಗಾರ‍್ ನಾಗರಾಜ್. ಅವರಿಗೀಗ ವಯಸ್ಸು ಎಪ್ಪತ್ತೊಂದಾಗಿದೆ. ಹೀಗಿದ್ದರೂ ಅವರ ಉತ್ಸಾಹ ಕಮ್ಮಿಯಾಗಿಲ್ಲ. ನಿನ್ನೆ ಅವರನ್ನು ಸುಮಾರು ಮುಕ್ಕಾಲು ಗಂಟೆ ಮಾತನಾಡಿಸಿದೆ. ಇನ್ನೂ ದಿನಪೂರ್ತಿ ಮಾತನಾಡಲೂ ಅವರು ಸಿದ್ಧರಿದ್ದಂತೆ ಅನ್ನಿಸುತ್ತಿತ್ತು.
ಆದರೆ ಕಾಲದ ಅಭಾವ. ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಅಷ್ಟು ಹೊತ್ತು ಅವರು ಪುಷ್ಪಕ ವಿಮಾನದ ನಿರ್ಮಾಣದ ಹಿಂದಿನ ಕಥೆಯನ್ನು ಹೇಳುತ್ತಿದ್ದರೆ ಅದುವೇ ಮತ್ತೊಂದು ಸಿನಿಮಾಗೆ ಆಗುವಷ್ಟಿತ್ತು.
ಬಚ್ಚನ್ ಗೆ ತೋರಿಸಿದರು
ಮೂಲತಃ ಛಾಯಾಗ್ರಾಹಕರಾಗಿದ್ದ ಶೃಂಗಾರ‍್ ನಾಗರಾಜ್ ಅವರಿಎಗ ಸಿನಿಮಾ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಲೋಚನೆ ಕೊರೆಯುತ್ತಿತ್ತು. ಕೊನೆಗೆ ನಿರ್ದೇಶಕ ಶ್ರೀನಿವಾಸ ರಾವ್ ಸಿಂಗೀತಂ ಅವರ ಬಳಿ ಇಂಗಿತವನ್ನು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಸಿಂಗೀತಂ ಹತ್ತಿರ ಮೂಕಿ ಚಿತ್ರದ ಕಥಾ ವಸ್ತು ಇತ್ತು. ಏಳೆಂಟು ವರ್ಷಗಳಿಂದಲೂ ಯಾರೊಬ್ಬರೂ ಆ ಕಥಾ ಹಂದರವನ್ನು ಚಿತ್ರ ಮಾಡಲು ಒಪ್ಪಿರಲಿಲ್ಲ. ಮಾತಿಲ್ಲದ ಚಿತ್ರ ಮಾಡಿದರೆ ಕೈಗೆ ಚಿಪ್ಪೇ ಗತಿ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಆದರೆ ಅದನ್ನು ಕೇಳಿದ ಶೃಂಗಾರ‍್ ನಾಗರಾಜ್‌ ತಾವೇ ಒಪ್ಪಿಕೊಂಡರು.
ಸಂಭಾಷಣೆ ಇಲ್ಲದಿದ್ದರೇನಂತೆ, ಅದುವೇ ಪ್ಲಸ್ ಪಾಯಿಂಟ್‌ ಆಗಲಿದೆ. ಹಾಗಾದರೆ ಚಿತ್ರದಲ್ಲಿ ಬೇರೇನಿದೆ ? ಹೇಗಿರುತ್ತದೆ ಅಂತ ನೋಡಲು ಜನ ಬರುತ್ತಾರೆ ಎಂಬುದು ಶೃಂಗಾರ ನಾಗರಾಜ್ ಭಾವಿಸಿದ್ದರು. ವಿಶೇಷ ಇದೆ ಎಂದು ಭಿಕ್ಷುಕನ ಪಾತ್ರ ಇರಬೇಕೆಂದರು. ಚಿತ್ರ ಬಿಡುಗಡೆಗೆ ಮುನ್ನ ಅಮಿತಾಭ್ ಬಚ್ಚನ್ ಗೆ ತೋರಿಸಿದರು. ಹೀಗಿದ್ದರೂ ಹುಂಬತನದಿಂದಲೇ ರಿಸ್ಕ್ ತೆಗೆದುಕೊಂಡೆ. ಒಂದುವೇಳೆ ಚಿತ್ರ ಸೋತಿದ್ದರೆ ನಾನು ಮುಳುಗುತ್ತಿದ್ದೆ ಎಂದು ನಾಗರಾಜ್‌ ಹೇಳಿದರು.
ಹೆಗ್ಗಡೆ ನೆರವು
ಮತ್ತೊಂದು ಕಡೆ ಯಾರೂ ಮುಟ್ಟದಿದ್ದ ಕಥೆಯನ್ನು ಸಿನಿಮಾ ಮಾಡಲು ಬಕರಾ ಸಿಕ್ಕಿದ್ದಾನೆ ಎಂಬ ಭಾವ ನಿರ್ದೇಶಕರಲ್ಲಿತ್ತು. ಹೀಗಾಗಿ ಅವರೂ ಒಂದು ಕೈ ನೋಡಲು ಒಪ್ಪಿದರು. ಸ್ವಂತ ದುಡ್ಡು, ಪತ್ನಿ ನೀಡಿದ ಆಭರಣ, ಧರ್ಮಸ್ಥಳದ ಹೆಗ್ಗಡೆಯವರ ನೆರವು ಮುಂತಾದ ವಿಧಾನಗಳಿಂದ ಹಣಕಾಸು ಒಟ್ಟು ಮಾಡಿದ್ದ ನಾಗರಾಜ್‌ ಕೊನೆಗೂ ಚಿತ್ರವನ್ನು ಹೊರತರುವಲ್ಲಿ ಸಫಲರಾದರು. ನಂತರ ನಡೆದದ್ದು ಭಾರತೀಯ ಚಿತ್ರ ರಂಗದಲ್ಲಿಯೇ ಇತಿಹಾಸ. ಅಂದಹಾಗೆ ಆವತ್ತು ಐವತ್ತು ಲಕ್ಷ ರೂ. ಬಜೆಟ್ಟಿನ ಚಿತ್ರ ಅದಾಗಿತ್ತು. ಕಮಲ್‌ ಹಾಸನ್ ಗೆ ೫ ಲಕ್ಷ ಸಂಬಾವನೆ ಕೊಟ್ಟಿದ್ದೆ ಎನ್ನುತ್ತಾರೆ ಶೃಂಗಾರ‍್.

No comments:

Post a Comment