
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು ಅವರ ಆತ್ಮಕಥನದ ಕೆಲವು ಪುಟಗಳನ್ನು ನಿನ್ನೆ ಓದಿದ್ದೆ. ಡೆಸ್ಕಿನಲ್ಲಿ ಒಂದೂವರೆ ಗಂಟೆಯ ಓದುವಿಕೆಯಲ್ಲಿ ಪ್ರಪಂಚ ಮರೆತು ಹೋಗಿತ್ತು.
ಕಸಾಪದಿಂದ ನೇರವಾಗಿ ಮಲೆನಾಡಿನ ಕುಪ್ಪಳ್ಳಿ ಮತ್ತು ತೀರ್ಥಹಳ್ಳಿಯ ಹಸಿರಿನ ತಂಪಿನಲ್ಲಿ ಇಳಿದಂತೆ ಭಾಸವಾಗುತ್ತಿತ್ತು. ನೆನಪಿನ ದೋಣಿಯಲ್ಲಿ ಕುವೆಂಪು ತಮ್ಮ ವಿಶಾಲವಾದ ತೊಲೆಗಳುಳ್ಳ ಮನೆಯ ಮಳಿಗೆಯಲ್ಲಿ ನವರಾತ್ರಿಯ ವೇಳೆ ನಡೆಯುತ್ತಿದ್ದ ಸರಸ್ವತಿಯ ಆರಾಧನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದಾಗ ಗ್ರಂಥ ಪಾಲಕ ಟ್ರೀಂ..ಟ್ರೀಂ ಅಂತ ಬೆಲ್ಲನ್ನು ಒತ್ತಿ ಬಿಟ್ಟ.
ಉಳಿದಿದ್ದ ಓದುಗರು ಪತ್ರಿಕೆಗಳನ್ನು ಮಡಚಿ ಎದ್ದಂತೆ ನಾನೂ ಎದ್ದೆ. ಪಂಪ ಮಹಾ ಕವಿ ರಸ್ತೆಯಲ್ಲಿ ಓಡುತ್ತಿದ್ದ ವಾಹನಗಳ ಹಾರ್ನುಗಳು ಮತ್ತೆ ಕೇಳಿಸತೊಡಗಿತ್ತು.
ಈವತ್ತು ಕೂಡ ದೋಣಿಯನ್ನೋದುವ ತವಕ ಬೆಳಗ್ಗೆಯಿಂದಲೇ ಜೋರಾಗಿಯೇ ಜಗ್ಗುತ್ತಿತ್ತು. ಇದೇ ವೇಳೆಯಲ್ಲಿ ಗೆಳೆಯ ಮಹೇಶ್ ಕಚೇರಿ ಬಳಿ ಸಿಕ್ಕಿದರು. ಸ್ವಲ್ಪ ಬಿಡುವು ಇತ್ತು. ಕ್ಷೇಮ ಸಮಾಚಾರದ ಆರಂಭದಲ್ಲೇ ನೆನಪಿನ ದೋಣಿಯ ಬಗ್ಗೆ ಪ್ರಸ್ತಾಪಿಸಿದೆ. ಆ ಪುಸ್ತಕವನ್ನು ಓದುತ್ತಿದ್ದಂತೆ ಸುತ್ತಮುತ್ತಲು ಮಲೆನಾಡೇ ಬಂದ ಹಾಗೆ ನನಗಾಗುತ್ತದೆ..ಎಂಥಾ ಬರವಣಿಗೆಯದು..ಯಬ್ಬ ಎಂದು ಹೇಳಿದೆ.
ಹೌದು.. ಮಳೆಯ ಸೌಂದರ್ಯದ ಬಗ್ಗೆ, ಆ ಹನಿ ಹನಿಗಳ ಬಗ್ಗೆ ವರ್ಣನೆ ಅಂದರೆ ಅವ್ರದ್ದೇ. ಎಂದು ಮಹೇಶ್ ದನಿಗೂಡಿಸಿದಾಗ ಉತ್ಸಾಹ ಇಮ್ಮಡಿ ಆಯ್ತು. ಯಾಕೆಂದರೆ ಮಾತನಾಡುವ ವಿಚಾರದಲ್ಲಿ ಇಬ್ಬರಿಗೂ ಒಲವು, ಆಸಕ್ತಿ ಇದ್ದರೆ ಮಾತ್ರ ಮುಂದುವರಿಯಬಹುದಲ್ಲವೇ.
ಇತ್ತೀಚೆಗೆ ನನಗೆ ಕನ್ನಡದ ಕ್ಲಾಸಿಕ್ ಎನ್ನಿಸಿದ ಸಾಹಿತ್ಯ ಪುಸ್ತಕಗಳನ್ನು ಓದಬೇಕು ಅಂತ ಅನ್ನಿಸುತ್ತಿದೆ . ಬರವಣಿಗೆಗೆ ಅದೂ ಮುಖ್ಯ ಅಲ್ವಾ. ಶ್ರೇಷ್ಠ ಸಾಹಿತ್ಯ, ಅದರಲ್ಲಿನ ವಾಕ್ಯ ರಚನೆಗಳನ್ನು ಓದುವಾಗ ನಾನೆಷ್ಟು ಓದಲು ಬಾಕಿ ಇದೆಯಪ್ಪಾ, ಸಿಕ್ಕಾಪಟ್ಟೆ ಸಮಯ ವೇಸ್ಟು ಮಾಡಿದೆ.. ಎಂದು ಭಯವೂ ಆಗುತ್ತಿದೆ.. ಹೀಗಾಗಿ ನಿನ್ನೆಯಿಂದ ನೆನಪಿನ ದೋಣಿಯನ್ನೋದುತ್ತಿದ್ದೇನೆ. ಮೊನ್ನೆ..ಸಿದ್ದಲಿಂಗಯ್ಯನವರ ಊರು-ಕೇರಿ ಓದಿದೆ. ನೀವೂ ಓದಿರಬೇಕು ಅಲ್ವಾ ? ಬೇಕಾದರೆ ಕೊಡ್ತೀನಿ ಅಂದೆ. ( ನಿಜಕ್ಕೂ ಅದು ಬೆಪ್ಪುತನದ ಪ್ರಶ್ನೆಯಾಗಿತ್ತು ಎಂದು ಕೆಲವೇ ಕ್ಷಣಗಳಲ್ಲಿ ಗೊತ್ತಾಯಿತು )
ಪರ್ತಕರ್ತರಲ್ಲಿ ಬಹುಪಾಲು ಮಂದಿ ಓದೋದು ಕಮ್ಮಿ ಅಂತ ಹೇಳುತ್ತಾರೆ. ನನ್ನ ಅನುಭವಕ್ಕೂ ಅದು ಬಂದಿತ್ತು. ಯಾಕೆಂದರೆ ಯಾವತ್ತಾದರೂ ಪುಸ್ತಕ ಬಿಡಿಸಿಟ್ಟರೆ ಸಾಕು, ಏನಪ್ಪಾ ಪುಸ್ತಕ ಬರೀತೀಯಾ ? ಏನ್ ಕಥೆ.. ಅಂತ ಹಾಸ್ಯಕ್ಕೆ ಆಸ್ಪದವಾಗುವಂತೆ ವಿಚಾರಿಸುವ ಮಿತ್ರರು ಈಗಲೂ ಇದ್ದಾರೆ.
ಒಮ್ಮೆ ಏನನ್ನೋ ಓದುತ್ತಿದ್ದಾಗ ಮೇಲ್ಕಂಡ ಪ್ರಶ್ನೆಯನ್ನು ಮುಂದಿಟ್ಟ ಮಿತ್ರನಿಗೆ, " ಪರ್ತಕರ್ತನಾದವನು ಸಾಕಷ್ಟು ಓದಿರಬೇಕು. ಬೇಕಾದರೆ ನಮ್ಮ ಎಡಿಟರನ್ನೇ ನೋಡು. ಅದರಲ್ಲೂ ಕನ್ನಡದ ಅತ್ಯುತ್ತಮ ಪುಸ್ತಕಗಳನ್ನು ಓದಲೇಬೇಕು. ಆಗ ಮಾತ್ರ ಬರವಣಿಗೆ ಏನಾದರೂ ಸುಧಾರಿಸಬಹುದು.." ಎಂದು ಪುಟ್ಟ ಭಾಷಣವನ್ನು ಕೊರೆದಿದ್ದೆ. ನಂತರ ಪ್ಲೇಟು ಬದಲಾಯಿಸಿದ್ದ ಆ ಮಿತ್ರ ಜಾಗ ಖಾಲಿ ಮಾಡಿದ್ದ.
ಆದರೆ ಗೆಳೆಯ ದೇವಶೆಟ್ಟಿ ಮಹೇಶ್ ಅವರು ತಮ್ಮ ಎಸ್ಸೆಸ್ಸಲ್ಸಿ, ಪಿಯುಸಿ ದಿನಗಳಲ್ಲಿಯೇ ನೆನಪಿನ ದೋಣಿ, ಊರು ಕೇರಿ, ಕರ್ವಾಲೋ ಎಲ್ಲ ಅರೆದು ಕುಡಿದಿದ್ದರು. ಆಗೆಲ್ಲ ಬೆಳಗ್ಗೆಯಿಂದ ಸಂಜೆಯ ತನಕ ದಿನವಿಡೀ ಲೈಬ್ರೆರಿಯಲ್ಲಿ ಕೂತು ಪಟ್ಟುಬಿಡದಂತೆ ಪುಸ್ತಕಗಳನ್ನು ಗುಡ್ಡೆ ಹಾಕಿ ಓದುತ್ತಿದ್ದೆ. ಏನು ಮಾಡುತ್ತಿದ್ದೀಯಾ ಅಂತ ಯಾರಾದರೂ ಕೇಳಿದರೆ..ಮಾಡೋದೇನು ..ಓದೋದು..ಓದೋದು..ಓದೋದು...
ಆವತ್ತು ಹಾಗೆ ಓದಿಕೊಂಡದ್ದರಿಂದ ಈಗ ಪ್ರಯೋಜನ ಆಗ್ತಿದೆ ಎಂದರು ಮಹೇಶ್.
ವಿಜಯ ಕರ್ನಾಟಕದ ಸಿನಿ ವಿಜಯ ವಿಭಾಗದ ಮುಖ್ಯಸ್ಥರಾಗಿರುವ ಅವರು, ಮಾತಿನ ಮಧ್ಯೆ, " ಸಿನಿಮಾ ಎನ್ನೋದು ಓಪನ್ ಫೀಲ್ಡ್ ಇದ್ದ ಹಾಗೆ. ಇಲ್ಲಿ ಬುದ್ಧಿವಂತಿಕೆ, ಪ್ರತಿಭೆ ಮತ್ತು ಗಡ್ಸ್ ಇದ್ದರೆ ಸಾಕು. ಯಾರು ಬೇಕಾದ್ರೂ ಉದ್ಧಾರ ಆಗಬಹುದು.. " ಎಂದರು.
ಅವರನ್ನು ಬೀಳ್ಕೊಟ್ಟ ನಂತರ ಕಸಾಪಗೆ ಹೋಗಿ ನೆನಪಿನ ದೋಣಿಯಲ್ಲಿ ಕೊಡಿ. ನಿನ್ನೆ ಸ್ವಲ್ಪ ಓದಿದ್ದೆ ಎಂದೆ. ಆದರೆ ಕಚೇರಿ ಸ್ಟಾಪ್ಸ್ ಬಂದಿಲ್ಲ ಎಂದು ಅಲ್ಲಿದ್ದ ಏಕೈಕ ಸಿಬ್ಬಂದಿ ಹೇಳಿದ. ತುಸು ನಿರಾಸೆಯಾದರೂ, ಏನು ಇನ್ನೇನು ಮಾಡೂದೂಂತ ಬೇರೆ ಪುಸ್ತಕಗಳನ್ನು ಹುಡುಕಲು ಶುರು ಹಚ್ಚಿದೆ.
No comments:
Post a Comment