Thursday, 16 July 2009

ಕೊಲ್ಲಾಪುರಿ ಚಪ್ಪಲಿ ನಡೆದು ಬಂದ ದಾರಿ

ಮ್ಮ ಪರಂಪರೆ ನೇಕಸುಬುಗಳು ಹೇರಳ ಉದ್ಯೋಗಾವಕಾಶಗಳ ಆಗರ. ಯಾಕೆಂದರೆ ಅವುಗಳು ಕಾರ್ಮಿಕ ಕೇಂದ್ರಿತ. ಹೀಗಿದ್ದರೂ ಅಂಥ ವೃತ್ತಿಗಳಲ್ಲಿ ಉತ್ಪನ್ನಗಳಿಗೆ ಬೆಲೆ ಕಟ್ಟುವ ವ್ಯವಸ್ಥೆ ನಮ್ಮಲ್ಲಿಲ್ಲ. ಹೀಗಾಗಿ ಉತ್ಪನ್ನಗಳ ಕಲಾವಿದನ ಪ್ರತಿಭೆಗೆ ಇಲ್ಲಿ ಕವಡೆ ಕಿಮ್ಮತ್ತು ಸಿಗುವುದಿಲ್ಲ. ಒಂದು ಸಲ ಎಲ್ಲಾದರೂ ಬೆಲೆ ದೊರಕಿಸಿಕೊಳ್ಳುವ ಕಲೆ ಗೊತ್ತಾದರೆ ಸಾಕು, ಪರಂಪರಾನುಗತ ಕುಶಲ ವೃತ್ತಿ ಹಾಗೂ ಕಿರು ಉದ್ದಿಮೆಗಳು ತಂತ್ರಜ್ಞಾನದ ನೆರವಿನೊಂದಿಗೆ ಮರು ಹುಟ್ಟು ಪಡೆದುಕೊಳ್ಳಲಿವೆ. ಹೊಸ ವಿನ್ಯಾಸ, ಮಾರುಕಟ್ಟೆ ಮತ್ತು ಲಯದೊಂದಿಗೆ...ಅದಕ್ಕೆ ಇಲ್ಲೊಂದು ಉದಾಹರಣೆ ಕೊಲ್ಲಾಪುರಿ ಚಪ್ಪಲಿ..

' The solution to India's employment problem is not huge industries, but small enterprises that employ a handful of people
each.. '

ಹಾಗಂತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಂತೂ ಸಂದರ್ಭ ಸಿಕ್ಕಾಗಲೆಲ್ಲ ಒತ್ತಿ ಹೇಳುತ್ತಲೇ ಇದ್ದಾರೆ. ಹೀಗಿದ್ದರೂ ಹೇರಳ ಉದ್ಯೋಗ ಸೃಷ್ಟಿಯ ಕಸುಬುಗಳನ್ನು ನಿರ್ಲಕ್ಷಿಸುತ್ತಲೇ ಇದ್ದೇವೆ. ಮುಖ್ಯವಾಗಿ ಏನು ಮಾಡಬೇಕು ಎಂಬುದೇ ನಮಗೆ ಗೊತ್ತಿಲ್ಲ. ಪರಿಣಾಮವಾಗಿ ಕೋಟ್ಯಂತರ ಮಂದಿ ಕಲಾವಿದರು, ಕುಶಲಕರ್ಮಿಗಳು ಬೀದಿಗೆ ಬಿದ್ದಿದ್ದಾರೆ. ಪಾರಂಪರಿಕ ಗುಡಿ ಕೈಗಾರಿಕೆಗಳು ನಿರ್ನಾಮವಾಗಿವೆ. ಕೆಲವು ಸ್ವಘೋಷಿತ ಪಂಡಿತರಂತೂ ‘ಕೈ’ಗಾರಿಕೆ ಎನ್ನುವ ಪದವನ್ನು ಬಳಸಲೇಕೂಡದು. ಈವತ್ತು ಕೈಗಳಿಂದ ನಡೆಯುವ ಕೈಗಾರಿಕೆ ಎಲ್ಲಿದೆ ? ಏನಿದ್ದರೂ ಉದ್ದಿಮೆಯೇ ಸೈ ಎಂದು ಅಳಲೇಕಾಯಿ ಪಾಂಡಿತ್ಯವನ್ನು ಕೆಲಸಕ್ಕೆ ಬಾರದವರಂತೆ ಮಂಡಿಸುತ್ತಾರೆ. ಹೋಗಲಿ, ನಮ್ಮ ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ, ನಗರದಲ್ಲಿ, ಪಟ್ಟಣದಲ್ಲಿ ಅನೇಕ ಮಂದಿ ಸಣ್ಣ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರು ಯಶಸ್ವಿಗಳಾಗಿದ್ದಾರೆ. ಅನೇಕ ಮಂದಿ ಮಹಿಳೆಯರೂ ಈವತ್ತು ಸ್ವ ಉದ್ಯೋಗಿಗಳಾಗಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಅಂಥ ಮಂದಿಯ ಯಾವುದೇ ಅಂಕಿ ಅಂಶಗಳು ಮತ್ತು ಮಾಹಿತಿ ನಿಮಗೆ ಕೈಗಾರಿಕಾ ಅಥವಾ ಯಾವುದೇ ಇಲಾಖೆಯಲ್ಲಿ ಸಿಗುವುದಿಲ್ಲ. ಅಂಥ ಬಡ್ಡಿ ಮಕ್ಕಳಿಗೆ ಅಥಣಿಯ ಇನ್ನೂರು ಕುಟುಂಬಗಳ ಕೊಲ್ಲಾಪುರಿ ಚಪ್ಪಲಿಯ ಕಥಾನಕ ಹೇಳಬೇಕು ಎನ್ನಿಸುತ್ತದೆ.
ನಿಜವಾದ ಕೊಲ್ಲಾಪುರಿ ಚಪ್ಪಲಿಯನ್ನು ಯಂತ್ರಗಳಲ್ಲಿ ಮಾಡುವುದಿಲ್ಲ. ಅದು ಕೇವಲ ಕೊಲ್ಲಾಪುರಿಯಲ್ಲಿ ತಯಾರಿಸುವ ಪಾದರಕ್ಷೆಯಲ್ಲ. ಇದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕವನ್ನು ಬಳಸುವುದಿಲ್ಲ. ಆದ್ದರಿಂದ ಅಲರ್ಜಿಯ ಸಮಸ್ಯೆ ಇರುವುದಿಲ್ಲ. ರಾಜ್ಯದಲ್ಲಿ ಹೇಳುವುದಾದರೆ ಅಥಣಿಯ ಸುತ್ತುಮುತ್ತಲಿನ ಗ್ರಾಮಗಳಲ್ಲಿ ನಾನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಕಲಾತ್ಮಕ ವಿನ್ಯಾಸದ ಕೊಲ್ಲಾಪುರಿ ಚಪ್ಪಲಿಯನ್ನು ಸಿದ್ಧಪಡಿಸುವುದೇ ಜೀವನೋಪಾಯ. ಅಥಣಿಯ ಸಂತೆಯಲ್ಲಿ ಸಿಗುವ natural leatherನ್ನು ಬಳಸಿಕೊಂಡು ಎರಡು ಸಾವಿರಕ್ಕೂ ಹೆಚ್ಚು ವಿನ್ಯಾಸದಲ್ಲಿ ಚಪ್ಪಲಿಗಳನ್ನು ಹೊಲಿಯುತ್ತಾರೆ. ಹೊಸ ಹೊಸ ವಿನ್ಯಾಸಗಳನ್ನು ಕಂಡು ಹಿಡಿಯಲು ಕುಶಲಕರ್ಮಿಗಳಿಗೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಇದರ ಪರಿಣಾಮ ಪ್ರತಿ ವರ್ಷ ೨೦೦ಕ್ಕೂ ಹೆಚ್ಚು ಹೊಸ ವಿನ್ಯಾಸಗಳು ಸೇರ್ಪಡೆಯಾಗುತ್ತವೆ. ಈ ಕಲಾವಿದರ ಚಪ್ಪಲಿಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಗ್ರಾಹಕರ ಕೈ ಸೇರುತ್ತವೆ. ಒಂದು ಕಾಲದಲ್ಲಿ ಸಂಪಾದನೆಯಿಲ್ಲದೆ ನಿಕೃಷ್ಟರಾಗಿದ್ದ ಅಥಣಿ, ಐನಾಪುರ, ಮದಬಾಯಿಯ ಕುಶಲಕರ್ಮಿಗಳ ಬದುಕು ಮತ್ತೊಂದು ಮಗ್ಗುಲಿಗೆ ಹೊರಳಿದೆ. ಸಾಲದ ಹೊರೆ ತಗ್ಗಿದೆ. ಮನೆಗೆ ಟಿ.ವಿ, ಮಿಕ್ಸಿ ಪ್ರವೇಶಿಸಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಅವರೀಗ ಮರೆಯುತ್ತಿಲ್ಲ. ಕುಡಿಯುವುದನ್ನು ಬಹುತೇಕ ಮಂದಿ ಬಿಟ್ಟಿದ್ದಾರೆ. ಗುಳೆ ಹೋಗುವ ಪ್ರವೃತ್ತಿ ನಿಂತು ಹೋಗಿದೆ. ಅಷ್ಟೇಕೆ, ಆ ಸಮುದಾಯದ ಯುವತಿಯೊಬ್ಬಳು ಗಗನಸಖಿಯಾಗುವ ಹಂತದಲ್ಲಿ ಇದ್ದಾಳೆ. ಜರ್ಮನಿಯ ಚರ್ಮೋತ್ಪನ್ನ ಮೇಳಗಳಲ್ಲಿ ಡಜನುಗಟ್ಟಲೆ ಮಂದಿ ಭಾಗವಹಿಸಿದ್ದಾರೆ. ಮೊನ್ನೆಯಷ್ಟೇ ಚಪ್ಪಲಿಗಳ ಎಪ್ಪತ್ತೊಂದು ಬಾಕ್ಸ್ ಬೆಂಗಳೂರಿಗೆ ಬಂದಿಳಿದಿತ್ತು. ಬೆಂಗಳೂರಿಗೆ ಬಂದಾಗ ಗರುಡಾ ಮಾಲ್‌ಗೆ ಹೋಗುವ ಕುಶಲಕರ್ಮಿಗಳು, ಅಲ್ಲಿ ಸೀರೆಗೆ ೨೮ ಸಾವಿರ ರೂ. ಬೆಲೆ ಕಂಡು ಬೆರಗಾಗುವುದಲ್ಲದೆ, ಅದಕ್ಕೆ ಏಕೆ ಅಷ್ಟು ಬೆಲೆ ಅಂತ ನೋಡುತ್ತಾರೆ. ಕಲಿಯುತ್ತಾರೆ. ಚಪ್ಪಲಿಗೆ ಮೂರು ಸಾವಿರ ಬೆಲೆ ಏಕೆ ಎಂದು ದಿನಗಟ್ಟಲೆ ಲೋಚಿಸುತ್ತಾರೆ. ಈ ಪರಿವರ್ತನೆಯ ಸೂತ್ರ ಸರಳ. ‘ ಅಮಿತ ಉತ್ಪನ್ನದಿಂದ ಕನಿಷ್ಠ ಲಾಭ ಪಡೆಯುವುದಕ್ಕಿಂತ ಸೀಮಿತ ಉತ್ಪನ್ನದಿಂದ ಗರಿಷ್ಠ ಲಾಭ ಪಡೆಯುವುದು ಉತ್ತಮ’ ಮುಂಬಯಿನಲ್ಲಿ ಡಬ್ಬಾವಾಲಾಗಳ ಯಶೋಗಾಥೆಯನ್ನು ಎಂಬಿಎ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರಲ್ಲವೇ? ಹಾಗೆಯೇ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನ ಸಂಶೋಧನಾ ವಿದ್ಯಾರ್ಥಿಗಳು ಇವರ ಜಾಡನ್ನು ಅರಸಿದ್ದಾರೆ.
೨೦೦೦ಕ್ಕಿಂತ ಮೊದಲು ಇವರೆಲ್ಲ ವ್ಯಾಪಾರಿಗಳ ಕಪಿ ಮುಷ್ಠಿಯಲ್ಲಿದ್ದರು. ತಿಂಗಳಿಗೆ ಇಡೀ ಕುಟುಂಬ ಸುಮಾರು ಎರಡು ಸಾವಿರ ರೂ. ಸಂಪಾದಿಸುತ್ತಿತ್ತು. ಅದರಲ್ಲಿಯೂ ಬಹುಪಾಲು ಸಾಹುಕಾರರ ಕೈಯಿಂದ ಪಡೆದ ಸಾಲದ ಬಡ್ಡಿ ತೀರಿಸಲು ಸಂದಾಯವಾಗುತ್ತಿತ್ತು. ಸಾಲ ಬೆಳೆಯಲಿ ಅಂತ ಸಾಹುಕಾರರೇ ಮದ್ಯ ಕುಡಿಸುತ್ತಿದ್ದರು. ೧೯೭೦ರಲ್ಲಿ ಲಿಡ್ಕರ್ ಇಲಾಖೆಯವರು ಊರಿನ ಹೊರಭಾಗದಲ್ಲಿ ಉದ್ದಿಮೆಗೆ ವ್ಯವಸ್ಥ ಮಾಡಿತ್ತು. ಆದರೆ ಜನಪ್ರಿಯವಾಗಿರಲಿಲ್ಲ. ಅವರೆಲ್ಲ ಕುಡುಕರು ಎಂಬ ಉದಾಸೀನ ಇತ್ತು. ಕೊಲ್ಲಾಪುರಿ ಚಪ್ಪಲಿಗೆ ಸೈಜ್ ಎನ್ನುವುದು ಇರಲಿಲ್ಲ. ಕ್ರಮೇಣ ಬೇಡಿಕೆ ಕಡಿಮೆಯಾಗಿತ್ತು.
ಬೆಂಗಳೂರು ಮೂಲದ ಆಸೆಂಟ್ ಸೇವಾ ಸಂಸ್ಥೆ ಯುಎನ್‌ಡಿಪಿ ಪ್ರಾಯೋಜಕತ್ವದಲ್ಲಿ, ಸಿಎಲ್‌ಆರ್‌ಐನ ( ಸೆಂಟ್ರಲ್ ಲೆದರ್ ರೀಸರ್ಚ್ ಇನ್‌ಸ್ಟಿಟ್ಯೂಟ್ ) ತಾಂತ್ರಿಕ ಸಹಭಾಗಿತ್ವ ಹಾಗೂ ಕರ್ನಾಟಕ ಸರಕಾರದ ಮೂಲಸೌಕರ್ಯ ಪಡೆದ ಅಸೆಂಟ್, ಅಥಣಿಯ ಕುಶಲಕರ್ಮಿಗಳದ್ದೇ ಆದ ಸ್ವಸಹಾಯ ಆಧಾರಿತ ಟ್ರಸ್ಟ್ ನ್ನು ರೂಪುಗೊಳಿಸಿತು. ಅದರ ಹೆಸರು ಟೂಹೋಲ್ಡ್.
ಶೇ. ೯೫ ರಫ್ತು: ಟೂಹೋಲ್ಡ್‌ನಲ್ಲಿ ೧೫ ಸ್ವಸಹಾಯ ಗುಂಪುಗಳಿವೆ. ಪ್ರತಿಯೊಂದು ಗುಂಪಿನಲ್ಲಿಯೂ ೧೨-೧೫ ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಬ್ಯಾಂಕ್ ಖಾತೆಯಿದೆ ಎಮ್ಮೆ, ಕೋಣನ ತೊಗಲಿನಿಂದ ತಯಾರಿಸಿದ ಈ ಕಚ್ಛಾ ಸಾಮಗ್ರಿ (ಚಿZಜ ಠಿZಛಿb ) ಸ್ಥಳೀಯವಾಗಿ ಸಿಗುತ್ತದೆ. ಚಪ್ಪಲಿಗಳ ಮಾರಾಟದಲ್ಲಿ ಸಿಗುವ ನಿವ್ವಳ ಲಾಭದಲ್ಲಿ ಶೇ. ೪೦ ಕಂಪನಿಗೆ, ಶೇ. ೪೦ ಕುಶಲಕರ್ಮಿಗಳಿಗೆ ಹಾಗೂ ಶೇ. ೨೦ ಅವರ ಸ್ವಸಹಾಯ ಗುಂಪುಗಳಿಗೆ ಸಂದಾಯವಾಗುತ್ತದೆ. ಸ್ವಸಹಾಯ ಗುಂಪುಗಳಲ್ಲಿ ಹಣಕಾಸು ನೆರವುನ ವಹಿವಾಟು ಕೂಡ ಚಾಲ್ತಿಯಲ್ಲಿದೆ. ಈವತ್ತು ಸದಸ್ಯರ ಕುಟುಂಬದ ಆದಾಯ ತಿಂಗಳಿಗೆ ೭-೮ ಸಾವಿರ ರೂ. ದಾಟುತ್ತದೆ. ಯಾರು ಆಕರ್ಷಕ ವಿನ್ಯಾಸದಲ್ಲಿ ಹೆಚ್ಚು ಚಪ್ಪಲಿಗಳನ್ನು ಸಿದ್ಧಪಡಿಸುತ್ತಾರೆಯೋ, ಅವರಿಗೆ ಆದಾಯವೂ ತಕ್ಕಮಟ್ಟಿಗೆ ಸಿಗುತ್ತದೆ.
ಇವೆಲ್ಲಕ್ಕಿಂತ ಗಮನಾರ್ಹ ಬದಲಾವಣೆ ಏನೆಂದರೆ ಹಿಂದೊಮ್ಮೆ ಮನೆ ಎಂಬ ಗೂಡನ್ನು ಬಿಟ್ಟು ಹೊರಗೆ ಕಾಲಿಡಲು ಅಂಜುತ್ತಿದ್ದ ಮಹಿಳೆಯರೀಗ ಬ್ಯಾಂಕ್ ವ್ಯವಹಾರವನ್ನೂ ಕಲಿತಿದ್ದಾರೆ. ಅವರ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ.
ಕಲಾವಿದ ಎಂಎಫ್ ಹುಸೇನ್ ಮತ್ತು ಅವರಂಥ ಕಲಾವಿದರು ಅಕಸ್ಮಾತ್ ಹಾಳೆ ಮೇಲೆ ಶಾಯಿ ಚೆಲ್ಲಿದರೂ, ಅದನ್ನೇ ಹರಾಜಿನಲ್ಲಿ ನವ್ಯ ಕಲಾಕೃತಿ ಅಂತ ಲಕ್ಷಾಂತರ ಡಾಲರ್ ಕೊಟ್ಟು ಖರೀದಿಸುವ ಹುಚ್ಚರಿದ್ದಾರೆ. ಹೀಗಿರುವಾಗ ಬದುಕನ್ನೇ ಕಲೆಗೆ, ಕೌಶಲ್ಯಕ್ಕೆ ತೇಯುತ್ತಿರುವ, ಅದು ಬಿಟ್ಟರೆ ಬೇರೇನೂ ಗೊತ್ತಿರದ ಸಾವಿರಾರು ಮಂದಿಯ ಸಾಮರ್ಥ್ಯಕ್ಕೆ, ಉತ್ಪನ್ನಗಳಿಗೆ ಯಾಕೆ ಬೆಲೆ ಕಟ್ಟುವ ಕೆಲಸ ನಡೆಯುತ್ತಿಲ್ಲ ? ದಾರಿ ಅದೊಂದೇ, ಇಲ್ಲಿ ಬೆಲೆ ಸಿಗದಿದ್ದರೆ, ಬೆಲೆ ಇರುವಲ್ಲಿ ಕಟ್ಟಬೇಕು. ಹಾಗೆ ಮಾರಾಟ ಮಾಡುವ ಕಲೆಯನ್ನು ತಿಳಿಸಿಕೊಡಬೇಕು. ಆಗ ಉದ್ಯೋಗ ಸೃಷ್ಟಿಯಾಗುತ್ತದೆ. ಪಾರಂಪರಿಕ ಕಸುಬುಗಳು ಜೀವಂತವಾಗಿ ಉಳಿಯುತ್ತವೆ. ಹೊಸ ಮಾರುಕಟ್ಟೆ ಯಿಂದ ಮರುಹುಟ್ಟು ಪಡೆಯುತ್ತವೆ. ಕಲಾಂ ಹೇಳಿರುವುದನ್ನು ಮರೆಯದಿರೋಣ. ಲಕ್ಷಾಂತರ ಜನರ ಕೈಗೆ ಕೆಲಸ ಸಿಗಬೇಬೇಕಾದರೆ ಸಣ್ಣ ಪುಟ್ಟ ಉದ್ದಿಮೆ, ಗುಡಿ ಕೈಗಾರಿಕೆಯೇ ಲಭ್ಯವಿರುವ ಏಕೈಕ ಉಪಾಯ. ದಯವಿಟ್ಟು ಯೋಚಿಸಿ.

ಈವತ್ತು ತಂತ್ರಜ್ಞಾನದ ನೆರವಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಇಂಟರ್‌ನೆಟ್, ವೆಬ್‌ಸೈಟ್ ಇದ್ದರೆ ಜಗತ್ತಿನ ಯಾವುದೇ ಮೂಲೆಯಿಂದ ಗ್ರಾಹಕರು ನಿಮ್ಮ ಉತ್ಪನ್ನವನ್ನು ಖರೀದಿಸಬಹುದು. ಕೊಲ್ಲಾಪುರಿ ಚಪ್ಪಲಿಯ ರಫ್ತು ವಿಚಾರದಲ್ಲಿ ತಂತ್ರಜ್ಞಾನದ ಪಾತ್ರ ಮುಖ್ಯವಾಗಿದೆ. ಜರ್ಮನಿ, ಬ್ರಿಟನ್, ಜಪಾನಿನ ಗ್ರಾಹಕರು ಅಂತರ್ಜಾಲದ ಮೂಲಕ ತಮಗೆ ಬೇಕಾದ ಆಯ್ಕೆಯ ಚಪ್ಪಲಿಯನ್ನು ಗುರುತಿಸುತ್ತಾರೆ. ವಿನ್ಯಾಸ ಹೀಗಿರಬೇಕು, ಹೀಗಿರಬಾರದು ಅಂತ ತಿಳಿಸುತ್ತಾರೆ. ಅವರ ಇಚ್ಛೆಯನುಸಾರ ಚಪ್ಪಲಿ ಸಿದ್ಧವಾಗಿ ರವಾನೆಯಾಗುತ್ತದೆ. ಇವರ ಬ್ಯಾಂಕ್ ಖಾತೆಗೆ ಮೊತ್ತ ಜಮೆಯಾಗುತ್ತದೆ. ಇದೇ ಮಾದರಿಯನ್ನು ಇತರ ಕುಶಲ ಕಲೆಗಳಿಗೆ ಯಾಕೆ ವಿಸ್ತರಿಸಕೂಡದು ?

No comments:

Post a Comment