Thursday 30 July 2009

ಟ್ಯಾಲೆಂಟ್ ಇದೆ ಅಂತ ಕುಂತರೆ ಯಾರೂ ಕರೆಯೊಲ್ಲ

ಸೂಪರ್‌ ಆಗಿದೆ ಎಂಬುದನ್ನು ತೋರಿಸಲು ಬಳಸುವ ಕೈ ಚಿಹ್ನೆಯೇ ಆ ಚಿತ್ರದ ಹೆಸರು.
ಹಾಗಿದ್ದರೆ ಅದರ ನಿರ್ದೇಶಕರಾರು ಆಗಿರಬಹುದು ?
ನಿಮ್ಮ ಊಹೆ ಸರಿಯಾಗಿದೆ. ಬಿಡಿ. ಅಂಥ ಚಿತ್ರ ಉಪ್ಪಿಯದ್ದೇ. ಹೌದು. ಸುದೀರ್ಘ ಕಾಯುವಿಕೆಯ ನಂತರ ರಿಯಲ್ ಸ್ಟಾರ‍್ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಪತ್ರಿಕೆಗಳಲ್ಲಿ ಅವರ ಸಿನಿಮಾದ ಹೆಸರು (ಕೈ ಚಿಹ್ನೆ) ಮಿಂಚಲು ಶುರುವಾಗಿದೆ. ಉಪ್ಪಿ ಅಭಿಮಾನಿಗಳ ನಿರೀಕ್ಷೆ, ಕುತೂಹಲ ಮುಗಿಲು ಮುಟ್ಟಿದೆ. ಅಂಥ ಉಪ್ಪಿ ಜತೆ ೩ ವರ್ಷಗಳ ಹಿಂದೆ ವಿಜಯ ಕರ್ನಾಟಕಕ್ಕಾಗಿ ಸಂದರ್ಶನ ನಡೆಸಿದ್ದೆ. ಆಗ ಸಿನಿಮಾದ ಸ್ಕಿಪ್ಟ್ ರಚಿಸುವುದು ಹೇಗೆ ಎಂಬುದರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆ. ಸುಮಾರು ಅರ್ಧ ಗಂಟೆ ಹೊತ್ತು ಮನಮುಟ್ಟುವಂತೆ ವಿವರಿಸಿದ್ದರು. ಆವತ್ತು ಅವರು ಹೇಳಿದ್ದು ಸಿನಿಮಾ ಚಿತ್ರಕಥೆ, ಸಂಭಾಷಣೆ ಬರೆಯಲು ಹೊರಡುವವರಿಗೆ ಯಾವತ್ತೂ ಟಿಪ್ಸ್ ಆಗಬಲ್ಲುದು..
ಕತೆಯಲ್ಲಿ ದಮ್ಮಿರಲಿ...
ನಂಗೆ ಟ್ಯಾಲೆಂಟ್ ಇದೆ ಅಂತ ಕುಂತರೆ ಯಾರೂ ಕರೆಯೊಲ್ಲ.
ಹಿಂದೆ ಹತ್ತಾರು ನಿರ್ದೇಶಕರು ಪ್ಯಾಕಪ್ ಮಾಡೋ ತಂಕ ಗಂಟೆಗಟ್ಲೆ ನಾನೂ ಕಾದಿದ್ದೆ. ಬಾಗಿಲು ತಟ್ಟಿದ್ದೆ. ಒಳ್ಳೆ ಬರೆಯೋರು ಸಿಕ್ರೆ ಸಾಕು ಎಂಬ ಪರಿಸ್ಥಿತಿ ಈಗ ಕನ್ನಡದಲ್ಲಿದೆ. ಇಂತಹ ಟೈಮಲ್ಲಿ ಚೆನ್ನಾಗಿ ಪ್ರಯತ್ನ ಪಡಬೇಕು. ಬರೀ ಟ್ಯಾಲೆಂಟ್ ಸಾಲದು. ಅವಕಾಶಗಳ ಕಡೆಗೆ ಅಲೀಬೇಕು...ಅನ್ನುತ್ತಾರೆ ಉಪೇಂದ್ರ.
ಬರೀತಾರೆ ಅಂದ ಮಾತ್ರಕ್ಕೆ ಚೆನ್ನಾಗಿರಬೇಕು ಅಂತ ಇಲ್ವಲ್ಲಾ. ಗೀಚಿದರೆ ಚಿತ್ರಕಥೆಯಾಗಲ್ಲ. ಮನೆಯ ಸೆಕ್ಯುರಿಟಿಯವರ ಕೈಗೆ ನೂರಾರು ಸ್ಕ್ರಿಪ್ಟು ಬರುತ್ತೆ. ಹರಕಲು ಕಾಗದದಲ್ಲಿ ಬರೆದುಕೊಡುವವರೂ ಇದ್ದಾರೆ. ಅದರಲ್ಲೂ ಕಾಗುಣಿತ ತಪ್ಪುಗಳು ಸಿಕ್ಕಾಪಟ್ಟೆ ಇರುತ್ತೆ. ಇದಕ್ಕೆಲ್ಲಾ ಅವರೇ ಬೇಕಾ ಅಂತ ಅನ್ನಿಸುತ್ತೆ.
ರೇಷ್ಮೆ ಹುಳುವಿನಂತೆ..
ನಾನೊಂದು ಕಥೆ ಹೇಳುವೆ. ರೇಷ್ಮೆ ಹುಳು ಇದೆಯಲ್ವಾ...ಹಿಪ್ಪು ನೇರಳೆ ಸೊಪ್ಪನ್ನು ತಿನ್ನುತ್ತಾ ಇರುತ್ತದೆ. ಚಿತ್ರ ಲೇಖಕ ವಿಷಯಗಳನ್ನು ಹಂಗೆ ಸಂಗ್ರಹಿಸುತ್ತಲೇ ಇರಬೇಕು. ಹುಳು ಜ್ವರಕ್ಕೆ ಬೀಳುತ್ತೆ.ಗೂಡು ಕಟ್ಟುತ್ತೆ. ಅದನ್ನು ನೀರಿಗೆ ಹಾಕಿ ಕುದಿಸುತ್ತಾರೆ. ನಂತರ ಹುಳು ನೂಲು ಬಿಡುತ್ತೆ. ನೂಲು ಅಂದದ ರೇಷ್ಮೆ ಸೀರೆಯಾಗಿ ಹುಡುಗಿಯನ್ನು ಅಲಂಕರಿಸಿದಾಗ ಅದಕ್ಕೆ ಸಾರ್ಥಕತೆ ಸಿಗುತ್ತದೆ. ಹಾಗೆಯೇ ಒಬ್ಬ ಲೇಖಕನ ಬರವಣಿಗೆ ಸಿನಿಮಾ ಆಗಿ ತೆರೆಯ ಮೇಲೆ ಡೈಲಾಗು ಬಿದ್ದಾಗ ಪ್ರೇಕ್ಷಕ ಖುಷಿಯಾಗಿ ಸಿಳ್ಳೆ ಹಾಕುತ್ತಾನಲ್ವಾ, ಆವಾಗ ಅವನಿಗೆ ಧನ್ಯತೆ...ಇದೆಲ್ಲ ಒಂದು ಪ್ರೊಸೆಸ್‌..
ಏನು ಮಾಡಬೇಕು ?
ಸಿನಿಮಾ ಸಂಭಾಷಣೆಕಾರ ಸಕ್ಸಸ್‌ ಆಗಬೇಕಾದರೆ ಹೆಚ್ಚೆಚ್ಚು ಸಿನಿಮಾ ನೋಡಬೇಕು. ಮೊದಲ ಸಲ ಸಿನಿಮಾ ನೋಡಿದಾಗ ಕತೆ ಗೊತ್ತಾಗಬಹುದು. ಎರಡನೆಯ ಸಲ ಕಂಡಾಗ ಸೀನ್ ಗಳ ಬಗ್ಗೆ ಅರಿವಾಗುತ್ತದೆ. ಮೂರನೆಯ ಸಲ ನೋಡಿದಾಗ ಸಂಭಾಷಣೆ, ಹಾಡು, ಶಾಟ್‌ ಗಳ ಬಗ್ಗೆ ಒಳನೋಟ ಅರ್ಥವಾಗುತ್ತದೆ. ನಾಲ್ಕನೇ ಸಲ ಇನ್ನೊಂದು ವಿಷ್ಯ ಗೊತ್ತಾಗುತ್ತದೆ. ಹಂಗೆ ಕಲಿಯಬೇಕು....
ನಾರ್ಮಲ್ಲು ಬೋರ‍್
ಸ್ಕ್ರಿಪ್ಟಿನಿಂದಲೇ ಚಿತ್ರ ಗೆಲ್ಲುತ್ತದೆ. ಚಿತ್ರಕಥೆ ಮತ್ತು ಸಂಭಾಷಣೆ ಹೀರೋ ಮೇಲೆ ಅವಲಂಬಿಸಿರುತ್ತದೆ ಎನ್ನುವುದು ಹಿಂದಿನ ಮಾತು. ಈಗ ಅದಕ್ಕೂ ಪ್ರಾಧಾನ್ಯತೆ ಸಿಗುತ್ತಿದೆ. ಚಿತ್ರ ರಿಮೇಕ್ ಆಗಿದ್ದರೂ ಕನ್ನಡಕ್ಕೆ ತರಲು ಲೇಖಕರು ಬೇಕೇ ಬೇಕು. ಹೀಗಾಗಿ ಕನ್ನಡದಲ್ಲಿ ಪ್ರತಿಭಾವಂತರಿಗೆ ಅವಕಾಶ ಇದೆ. ಈ ಫೀಲ್ಡಲ್ಲಿ ಪಳಗಲು ನನಗೆ ಎರಡು ವರ್ಷ ಬೇಕಾಯಿತು.
ಚಿತ್ರದ ಡೈಲಾಗ್ ಯಾವತ್ತೂ ನಾರ್ಮಲ್ ಆಗಿರಕೂಡದು. ಸಾಮಾನ್ಯ ಸಂಭಾಷಣೆ ಬೋರ‍್ ಅನ್ನಿಸಿಬಿಡುತ್ತದೆ.
ಅವಳ ಮೂಗು ಸಂಪಿಗೆಯ ಎಸಳು, ಮೊಗ ಕೆಂದಾವರೆ, ಗಲ್ಲ ಸೇಬಿನ ಹಣ್ಣು ಅಂತ ಬರೆದರೆ ಹಳಸಲು ಅನ್ನಿಸಲ್ವಾ.. ಇದೆಲ್ಲಕ್ಕಿಂತ ವಿಭಿನ್ನವಾಗಿ ಮತ್ತು ಹೊಸ ರೀತಿಯಲ್ಲಿ ಬರೆದು ಬಿಡಬೇಕು...

No comments:

Post a Comment