Monday 27 July 2009

ಅಕ್ಷರ ಮಳೆ : ಕವಿ ಸಿದ್ಧಲಿಂಗಯ್ಯನವರ ಊರು ಕೇರಿಯಲ್ಲಿ...


ಕೆಲವು ಪುಸ್ತಕಗಳು ಮನಸ್ಸನ್ನು ಗಾಢವಾಗಿ ಕಲಕುತ್ತವೆ. ಆರಂಭದ ಪುಟದಿಂದ ಕೊನೆಯ ತನಕ ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತವೆ. ಕನ್ನಡದ ಅಂಥ ವಿರಳ ಕೃತಿಗಳಲ್ಲಿ ಕವಿ ಡಾ. ಸಿದ್ಧಲಿಂಗಯ್ಯ ಅವರ ಆತ್ಮಕಥನ ಊರು ಕೇರಿಯೂ ಒಂದು. ಈ ಪುಸ್ತಕದ ಕೆಲವು ಸಾಲುಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ..




  • ಎಂದಿನಂತೆ ಹುಡುಗರೆಲ್ಲ ನಮ್ಮ ಮನೆಯ ಪಕ್ಕದ ಮೋಟುಗೋಡೆಯ ಮೇಲೆ ನಿಂತು ಅಪ್ಪ ಅವ್ವಂದಿರನ್ನು ಕೂಗುತ್ತಿದ್ದಾಗ ನಮಗೆ ಒಂದು ನೋಟ ಕಾಣಿಸಿತು. ಐನೋರ ಹೊಲದಲ್ಲಿ ಇಬ್ಬರು ಮನುಷ್ಯರ ಹೆಗಲ ನೊಗ ಹೂಡಿ ಇನ್ನಿಬ್ಬರು ಹೊಲ ಉಳುತ್ತಿದ್ದರು. ನೊಗ ಹೊತ್ತ ಆ ಇಬ್ಬರು ಮನುಷ್ಯರು ಎತ್ತುಗಳಂತೆ ಮುಂದೆ ಹೋಗುತ್ತಿದ್ದರೆ ಇನ್ನೊಬ್ಬ ಹಿಂದಿನಿಂದ ಚಾಟಿ ತಿರುಗಿಸುತ್ತಾ ಉಳುಮೆ ಮಾಡುತ್ತಿದ್ದ ದೃಶ್ಯ ಮೋಜಿನಂತೆ ಕಂಡರೂ, ನೊಗ ಹೊತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಅಪ್ಪ ಎಂದು ಗೊತ್ತಾದ ಕ್ಷಣದಿಂದ ನನ್ನಲ್ಲಿ ವಿಚಿತ್ರವಾದ ಸಂಕಟ ಶುರುವಾಯಿತು.
  • ಒಂದು ದಿನ ತಾಯಿ ಕೋಣೆಯಲ್ಲಿ ರೊಟ್ಟಿ ಸುಡುತ್ತಿದ್ದಳು. ಮೂರು ಜನ ಮಕ್ಕಳೂ ಒಲೆಯ ಮುಂದೆ ಕುಳಿತು ಅದನ್ನು ನೋಡುತ್ತಿದ್ದೆವು. ಒಲೆಯ ಮೇಲೆ ಅಟ್ಟದಂತೆ ಮಾಡಿ ಪೆಟ್ಟಿಗೆ ಇಟ್ಟಿದ್ದೆವು. ಆ ಪೆಟ್ಟಿಗೆ ಮೇಲೆ ಎರಡು ನಾಗರ ಹಾವುಗಳು ಜಗಳವಾಡುತ್ತಿದ್ದು, ಇದ್ದಕ್ಕಿದ್ದಂತೆ ರೊಟ್ಟಿಯ ಮೇಲೆ ಬಿದ್ದು ಬಿಟ್ಟವು. ಅವು ಹರಿದಾಡುತ್ತಿದ್ದಂತೆ ನಾವೆಲ್ಲ ಪರಾರಿಯಾಗಿ ಬದುಕಿದ್ದೇ ಹೆಚ್ಚು. ಬೀದಿಯ ಜನವೆಲ್ಲ ಸೇರಿ ಹಾವುಗಳನ್ನು ಹುಡುಕಿದರೂ ಸಿಗಲಿಲ್ಲ. ಅಂದಿನಿಂದ ಮನೆಯೊಳಗೆ ಹಗಲು ಹೊತ್ತು ಇರುವುದಕ್ಕೂ ಭಯವಾಗುತ್ತಿತ್ತು.
  • ವಿಚಾರಸಂಕಿರಣದಲ್ಲಿ ನಾವು ವೇದಿಕೆಯಲ್ಲಿ ಕುಳಿತಿದ್ದೆವು. ಪೇಜಾವರ ಶ್ರೀಗಳು ಆಶೀರ್ವಾದ ಮಾಡಬೇಕಾಗಿತ್ತು. ಅವರು ಬಂದ ಕೂಡಲೇ ಇಡೀ ಸಭೆ ಎದ್ದು ನಿಂತು ಗೌರವ ಸೂಚಿಸಿತು. ವೇದಿಕೆಯಲ್ಲಿದ್ದವರೂ ಎದ್ದು ನಿಂತರು. ಕುಳಿತಿದ್ದವನು ನಾನೊಬ್ಬನೇ. ಈಗ ನನಗೆ ಆ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಆಗ ನಾನು ಮಾಡಿದ್ದು ಸರಿ ಎನ್ನಿಸುತ್ತದೆ. ಹಾಗೆ ಕುಳಿತಿದ್ದರಿಂದ ನಾನು ಸ್ವಾಮಿಗಳು ಮತ್ತು ಸಭಿಕರ ಗಮನ ಸೆಳೆದೆ. ಅತ್ಯಂತ ಚಿಕ್ಕವನಂತೆ ಕಾಣಿಸುತ್ತಿದ್ದ ನನ್ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಯಿತು. ಪೇಜಾವರ ಸ್ವಾಮಿಗಳು ದಲಿತರ ಕೇರಿಗಳಿಗೆ ಭೇಟಿ ಕೊಟ್ಟಿದ್ದರು. ಸುಧಾರಣೆಯ ಮಾತುಗಳನ್ನು ಆಡುತ್ತಿದ್ದರು. ಆ ವ್ಯವಸ್ಥೆಯಲ್ಲಿ ಅವರು ಅಷ್ಟು ಮಾಡಿದ್ದೇ ಹೆಚ್ಚಾಗಿತ್ತು. ಆದರೂ ಆಗ ಉಗ್ರ ಕ್ರಾಂತಿಕಾರಿಯಾದ ನಾನು ಪೇಜಾವರರನ್ನು ಕುರಿತು, ನಿಮಗೆ ನಿಜವಾಗಿ ದಲಿತರ ಬಗ್ಗೆ ಕಾಳಜಿ ಇದ್ದರೆ ಒಬ್ಬ ಅಸ್ಪೃಶ್ಯನನ್ನು ನಿಮ್ಮ ಮಠಕ್ಕೆ ಅಧಿಪತಿಯಾಗಿ ಮಾಡಿ ಎಂದು ಬಹಿರಂಗವಾಗಿ ಹೇಳಿದೆ. ಸ್ವಾಮಿಗಳು ಇದಕ್ಕೆ ಸ್ಪಷ್ಟವಾದ ಉತ್ತರ ಹೇಳದಿದ್ದರೂ ಸುಧಾರಣೆಯ ಬಗ್ಗೆ ಅವರಿಗಿರುವ ಕಳಕಳಿಯನ್ನು ವಿವರಿಸಿದರು.

No comments:

Post a Comment