Saturday 25 July 2009

ಎಂಥಾ ಸಂದರ್ಭದಲ್ಲಿ ಕೂಡಾ ನಿರ್ಧಾರ ಅಗತ್ಯ


ವರ್ತಮಾನ ಮತ್ತು ನಾಳೆಯನ್ನು ನಿರ್ಧಾರಗಳು ರೂಪಿಸುತ್ತವೆ.
ಕೆಲವು ಸಲ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದೇ ನನ್ನ ನಿರ್ಧಾರವಾಗಿರುತ್ತಿತ್ತು ಅಂತ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅನುಭವದಿಂದ ವ್ಯಾಖ್ಯಾನಿಸುತ್ತಿದ್ದರಂತೆ. ಒಟ್ಟಿನಲ್ಲಿ ಬದುಕಿನುದ್ದಕ್ಕೂ ನಿರ್ಧಾರ ಅಗತ್ಯ.
ನಮ್ಮ ಬೇಕು ಬೇಡಗಳನ್ನು ಪೂರ್ಣಗೊಳಿಸಲು ಮನಸ್ಸು ಅನೇಕ ಸಂಗತಿಗಳನ್ನು ಮಂಥನ ಮಾಡುತ್ತದೆ. ಇದುವೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗುತ್ತದೆ. ಆದರೆ ಗಂಭೀರ ಸಂದರ್ಭಗಳಲ್ಲಿ ನಿರ್ಧಾರ ತಪ್ಪಾಗಿದ್ದರೆ ? ಎಂಬ್ ಅನಿಶ್ಚಿತತೆಯಿಂದ ಮನಸ್ಸು ಗೊಂದಲದ ಗೂಡಾಗುತ್ತದೆ. ಅಂಥ ಚಂಚಲದ ಮನಸ್ಸು ಗೊಂದಲದ ಗೂಡಾಗುತ್ತದೆ. ಅದನ್ನು ದಾಟಬೇಕು. ಇದು ಹೇಗೆ ಸಾಧ್ಯ ಎಂದು ನೋಡೋಣ.
ಜೀವನದ ಯಾವುದೋ ಒಂದು ಘಟ್ಟದಲ್ಲಿ ನಿಜವಾಗಿ ನಾವ್ಯಾರು ಎಂಬ ಅರಿವಾಗುತ್ತದೆ. ಆದರೆ ಆರಂಭಿಕ ಹಂತದಲ್ಲಿಯೇ ದಿಟ್ಟ ನಿಲುವು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಬೇರೊಬ್ಬರ ರೀತಿ ಜೀವಿಸಲು ನಮ್ಮಿಂದ ಅಸಾಧ್ಯ.
ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ ವ್ಯಕ್ತಿಗೆ ತನ್ನ ಶಕ್ತಿ ಮತ್ತು ಮಿತಿ ಏನೆಂಬ ಅರಿವು ಉಂಟಾಗುವುದರಿಂದ ನಿರುಮ್ಮಳವಾಗಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಹಾಗಂತ ಅವಾಸ್ತವಿಕ ತೀರ್ಮಾನಗಳನ್ನು ಕೈಗೊಂಡರೆ, ಅದುವೇ ತಿರುಗುಬಾಣವಾಗುತ್ತದೆ. ಆದರೆ ಯಾವಾಗಲೂ ಗಟ್ಟಿ ನಿರ್ಧಾರಗಳೇ ನಿರ್ಣಾಯಕ ಅಂಶ.
ಯಾವುದೇ ರಂಗದಲ್ಲಿ ಯಶಸ್ಸು ಗಳಿಸಿದವರನ್ನು ಗಮನಿಸಿ. ಒಂದು ಸನ್ನಿವೇಶದಲ್ಲಿ ನಿರ್ಭಿಡೆಯ ನಿರ್ಧಾರವನ್ನು ಕೈಗೊಂಡಿರುತ್ತಾರೆ. ಆದರೆ ನಿರ್ಣಯಗಳನ್ನು ಸಂಕಲ್ಪಿಸುವುದಕ್ಕೆ ಮಾತ್ರ ಸೀಮಿತವಾದರೆ ಅಲುಗಾಡುವ ಕುರ್ಚಿಯಲ್ಲಿ ಕುಳಿತಂತೆಯೇ. ಆದ್ದರಿಂದ ಖಚಿತವಾಗಿ ಬದಲಾವಣೆ ತರಬಲ್ಲ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ನಿರ್ಧಾರದಲ್ಲಿ ೩ ಹಂತಗಳಿವೆ.
ಮೊದಲು ಅಗತ್ಯವನ್ನು ಗುರುತಿಸುವುದು, ಎರಡನೆಯದು ಬದಲಾವಣೆ ಬಯಸುವುದು, ನಂತರ ಕಾರ್ಯಗತಗೊಳಿಸಬೇಕು. ಹೀಗಿದ್ದರೂ ಕೋಪ, ಅವಮಾನ, ಖಿನ್ನತೆ, ಹತಾಶೆ ಅಥವಾ ಅಂಜಿಕೆ ಸುಳಿಯುತ್ತಿರುವ ಉದ್ವೇಗದ ಹೊತ್ತಿನಲ್ಲಿ ಕೇವಲ ಪ್ರತೀಕಾರ ತೀರಿಸಲೆಂದೇ ಯಾವುದೇ ಗಂಭೀರ ನಿರ್ಧಾರಗಳನ್ನು ಕೈಗೊಳ್ಳಬಾರದು. ಮನಸ್ಸು ಪ್ರಶಾಂತವಾಗಿದ್ದಾಗ ತೀರ್ಮಾನಕ್ಕೆ ಬನ್ನಿ. ಹಾಗಾದರೆ ಉತ್ತಮ ನಿರ್ಧಾರ ಕೈಗೊಳ್ಳುವುದು ಹೇಗೆ ?
ಸೂಕ್ತ ನಿರ್ಧಾರದ ಹಿಂದೆ ನಿಮ್ಮದೇ ಸಾಮರ್ಥ್ಯ ಹಾಗೂ ಜವಾಬ್ದಾರಿ ಇರಬೇಕು. ಅದು ನಿಮಗೆ ಅಭ್ಯಾಸವಾಗಬೇಕು. ಪ್ರತಿಯೊಂದು ಸಮಸ್ಯೆಯನ್ನೂ ಅರ್ಥ ಮಾಡಿಕೊಂಡು ಅದನ್ನೇ ಅವಕಾಶವಾಗಿ ಪರಿವರ್ತಿಸಬೇಕು. ಯಾಕೆಂದರೆ ಎಲ್ಲ ಸಮಸ್ಯೆಗಳಲ್ಲಿ ಕೂಡ ಗೊತ್ತೇ ಇರದಂಥ ವಿಫುಲ ಅವಕಾಶವಾಗಿ ಬದಲಿಸುವುದೇ ಸರಿಯಾದ ನಡೆಯಾಗುತ್ತದೆ.
ಜೀವನಾನುಭವದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವುದರಿಂದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಪಕ್ವವಾಗುತ್ತದೆ. ನೀವು ಹಳ್ಳಿಗಾಡಿನಲ್ಲಿಯೇ ಇರಿ, ಬೆಂಗಳೂರು ಮಹಾ ನಗರದಲ್ಲಿಯೇ ಇರಿ, ವಿಭಿನ್ನ ಅನುಭವಗಳಿಂದ, ಒಡನಾಟದಿಂದ ಹಾಗೂ ಅಧ್ಯಯನದಿಂದ ಕಲಿಯುವ ಅವಕಾಶಗಳು ಒಂದೆರಡಲ್ಲ. ಹೀಗಾಗಿ ಯಾವುದೇ ಸಮಸ್ಯೆ ಎದುರಾದರೂ, ನಿಮ್ಮ ಒಳನೋಟಕ್ಕೆ ಮತ್ತೊಂದು ಸಾಧ್ಯತೆಯಾಗಿ ಕಾಣಿಸಿಕೊಂವು ಮನಸ್ಸನ್ನು ತಿಳಿಯಾಗಿಸುತ್ತದೆ.
ಸಾಮಾನ್ಯವಾಗಿ ನಾವು ಹಿಂದಿನ ಅನುಭವದಿಂದ ಅನುಭವ ಮತ್ತು ಕೆಲವು ಯೋಚನೆಗಳನ್ನು ಆಧರಿಸಿ ಬಹುತೇಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಹಲವು ಪ್ರಕರಣಗಳಲ್ಲಿ ಸಣ್ಣದಾಗಿದ್ದರೂ ಯೋಗ್ಯವಲ್ಲದ ತೀರ್ಮಾನದಿಂದ ಪಡಬಾರದ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಒಮ್ಮೆ ಬಯಸಿದ ಫಲಿತಾಂಶ ಸಿಗದಿದ್ದಲ್ಲಿ ಯಾಕೆ ಹೀಗಾಯಿತು ಎಂದು ಮಂಥನ ಮಾಡಬೇಕು. ಸಂಭವನೀಯ ಅಡಚಣೆ ಆಗ ನಿವಾರಣೆಯಾಗುತ್ತದೆ.
ಬೇಕಾದರೆ ಗಮನಿಸಿ. ಯೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲಿ ಅಗಾಧವಾದ ಆತ್ಮ ಗೌರವ ಇರುತ್ತದೆ. ಕೆಲವರು ಇತರರು ಹೇಳಿದ್ದರಲ್ಲಿ ತಲೆಬುಡವಿಲ್ಲದಿದ್ದರೂ, ಹರಕೆಯ ಕುರಿಗಳಂತೆ ಅನುಸರಿಸುತ್ತಾರೆ. ಆದರೆ ಅವರಲ್ಲಿ ಮುಂದೇನಾದೀತು ಎಂಬ ಸಲ್ಲದ ವ್ಯಾಕುಲ ಇರುತ್ತದೆ.
ಆದ್ದರಿಂದ ಬಂಧುಗಳೇ, ಎಂಥ ಸಂದರ್ಭದಲ್ಲಿಯೂ ಆತ್ಮ ಗೌರವದ ಜತೆ ರಾಜಿ ಮಾಡಿಕೊಳ್ಳದಿರಿ. ಹಾಗೆಯೇ ಯಾವುದೇ ನಿರ್ಧಾರ ತೆಗೆದೆ ಗೊಂದಲದಲ್ಲಿ ಕಾಲ ಕಳೆಯುವುದರಿಂದ ಈ ಬದುಕನ್ನು ಅರ್ಥಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.








No comments:

Post a Comment