Monday 19 March 2012

ಫೇಸ್‌ಬುಕ್ ಖಾತೆಗೆ ಜಮೆ ಮಾಡಿದ ಕೆಲ ಸಾಲುಗಳು..

1. ಓದುವ ಮತ್ತು ಬರೆಯುವ ಕ್ರಿಯೆ ಮೊದ ಮೊದಲು ಸ್ವಲ್ಪ ಕಷ್ಟ ಆಗಬಹುದು. ಆದರೆ ಕ್ರಮೇಣ ಅದು ನಿಮಗೆ ಸುಖ ಕೊಡುವುದಲ್ಲದೆ, ಜ್ಞಾನದ ಬೆಳಕಾಗುತ್ತದೆ. ಓದಿ ಬರೆದು ನಾವು ಹಾಳಾದೆವು ಅಂತ ಯಾರಾದರೂ ಅಂದದ್ದನ್ನು ಕೇಳಿದ್ದೀರಾ ?

2. ಈ ಜಗತ್ತಿಗೆ ಬಂದ ಮೇಲೆ ಛಾಪು ಮೂಡಿಸದೆಯೂ ಹೋಗಬಹುದು. ಯಾರೂ ಕೇಳಲ್ಲ. ಆದರೆ ಕೊನೆಗೆ ಅಂತರಂಗದ ವಿಷಾದ ಬಿಟ್ಟು ಹೋಗುವುದಕ್ಕಿಂತ ಛಾಪು ಅತ್ಯಂತ ಶ್ರೇಷ್ಠವಾದದ್ದು ಅಲ್ವಾ..

3. ಯಾರಲ್ಲಾದರೂ ಒಳ್ಳೆಯ ಗುಣ ಕಂಡರೆ ಅವರನ್ನು ನಿಜಕ್ಕೂ ಮೆಚ್ಚಿಕೊಂಡು, ನಾಲ್ಕು ಮಾತನ್ನಾಡಿ ಬೆನ್ನು ತಟ್ಟಲೂ ಕಂಜೂಸ್‌ತನ ಯಾಕೆ ಬೇಕು ?

4. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಎಲ್ಲರಿಗೂ ಅವರ ಅಮೋಘ ಸಾಧನೆಯಿಂದ ಮಾತ್ರ ಇಷ್ಟವಾಗುವುದಿಲ್ಲ. ಅವರ ಸುದೀರ್ಘ ಕರಿಯರ್‌ನುದ್ದಕ್ಕೂ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಮೆರೆದರು. ಅದಕ್ಕಾಗಿ ಜನ ಕ್ರಿಕೆಟ್ ಮೀರಿಯೂ ಅವರನ್ನು ಇಷ್ಟಪಡುತ್ತಾರೆ.

5. ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ನೋವಿನ ಆರಂಭವಿರುತ್ತದೆ.
ಪ್ರತಿಯೊಂದು ನೋವಿನ ಆರಂಭವೂ ಗೆಲುವಿನೊಂದಿಗೆ ಅಂತ್ಯವಾಗುತ್ತದೆ - ಡಾ. ಎಪಿಜೆ ಅಬ್ದುಲ್ ಕಲಾಂ.

6. ನೀವು ಪ್ರೀತಿಸಿದ ಹುಡುಗಿ ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದರೆ ನಿಮ್ಮ ಜತೆ ಆ ಹುಡುಗಿಗೆ ಹೊಂದಿಕೆಯಾಗುತ್ತಿಲ್ಲ ಎಂದೇ ಅರ್ಥ. ಹಾಗಾದಲ್ಲಿ ಅ ಹುಡುಗಿಗೆ ಮನಸ್ಸಿನಲ್ಲೇ ಶುಭ ವಿದಾಯ ಕೋರಿ, ಗಟ್ಟಿ ಮನಸ್ಸಿನಿಂದ ನಿಮ್ಮ ಭವಿಷ್ಯ ಮತ್ತು ಬದುಕನ್ನು ಗಾಢವಾಗಿ ಪ್ರೀತಿಸಿ. ಭಗ್ನ ಪ್ರೇಮದಿಂದ ಉಂಟಾಗುವ ಗಾಯಕ್ಕೆ ನೀವೇ ಮುಲಾಮು ತಯಾರಿಸಿ ಹಚ್ಚಬೇಕು. ಅದು ಮೆಡಿಕಲ್ ಶಾಪಿನಲ್ಲಿ ಸಿಗೋದಿಲ್ಲ.

7. ನಾವು ಮಾಡುವ ದೊಡ್ಡ ತಪ್ಪುಗಳಲ್ಲೊಂದು, ನಮಗೆ ಗೊತ್ತಿಲ್ಲದಿರುವ ವಿಷಯಗಳ ಬಗ್ಗೆ ಭಯಭೀತರಾಗುವುದು. ಆದರೆ ಗೊತ್ತಿಲ್ಲದಿರುವುದಕ್ಕೆ ಭಯಪಡಬೇಕಿಲ್ಲ. ಯಾಕೆಂದರೆ ಗೊತ್ತಿಲ್ಲದಿರುವುದೆಂದರೆ ತಾತ್ಕಾಲಿಕವಾಗಿ ತಿಳಿದಿಲ್ಲ ಎಂದಷ್ಟೇ. ಹೀಗಾಗಿ ತಿಳಿದುಕೊಳ್ಳುವುದನ್ನು ಬಿಡಬಾರದು.

8. ನಿಮ್ಮಲ್ಲಿ ಕಾನ್ಫಿಡೆನ್ಸ್ ಅನ್ನು ಹೆಚ್ಚಿಸಲು ಅತ್ಯುತ್ತಮ ದಾರಿ ಇದೆ. ಅದೇನೆಂದರೆ ನಿಮ್ಮ ಬಲವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು. ಅದನ್ನೇ ಪ್ರತಿ ದಿನದ ಸಾಧನೆಗೆ ಬಂಡವಾಳವನ್ನಾಗಿಸುವುದು. ನಿಮ್ಮ ಬ್ರ್ಯಾಂಡ್‌ನ ಮೌಲ್ಯವನ್ನು ಹೆಚ್ಚಿಸಲು ಇದು ಅಗತ್ಯ.

9. ಆಫೀಸು ಅಂದ ಮೇಲೆ ರಾಜಕೀಯ, ರೂಮರ್ರು, ಕಾಡು ಹರಟೆ, ಸದ್ದಿಲ್ಲದೆ ಕಾಲೆಳೆಯುವುದು ಇದ್ದದ್ದೇ, ಆದರೆ ಇದಾವುದನ್ನೂ ಲೆಕ್ಕಿಸದೆ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ಅಂತಹ ಮಹತ್ವಾಕಾಂಕ್ಷೆಯಿಂದ ಮಾಡುವ ಕೆಲ್ಸ ನಿಮ್ಮಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ...

10. ಶತ ಶತಮಾನಗಳೇ ಉರುಳಲಿ, ಅದೊಂದು ಪ್ರಾಚೀನ ಮಾತು ಹುರಿದುಂಬಿಸುತ್ತದೆ. ಧೈರ್ಯಂ ಸರ್ವತ್ರ ಸಾಧನಂ ! ಹೌದು. ಎಂಥದ್ದೇ ಸಂದರ್ಭ ಎದುರಾಗಲಿ, ಅವುಡುಗಚ್ಚಿ ಸಹಿಸುವ ಶಕ್ತಿಯನ್ನು ಕೊಡುವುದು ಬೇರಾವುದೂ ಅಲ್ಲ, ಅದೇ ಧೈರ್ಯ !!!

11.ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಬೆಳೆಯುತ್ತಿರುವಾಗ, ಎಷ್ಟೋ ಸಲ ಹಿರಿಯ ಸಹೋದ್ಯೋಗಿಗಳಿಂದ ಅಸಹಕಾರ ಮತ್ತು ಅವಮಾನಕ್ಕೆ ಗುರಿಯಾಗಬಹುದು. ಆದರೆ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಯಾವುದೇ ಸಂದರ್ಭ ಛಲ ಮತ್ತು ಕೆಚ್ಚು ತಣಿಯದಂತೆ ನೋಡಿಕೊಳ್ಳಿ. ಇಲ್ಲವಾದರೆ ಮುಂದುವರಿಯಲು ಕಷ್ಟವಾಗುತ್ತದೆ.

12.ಅದು ಯಾಕೆ ಅಂತ ಹೇಳುವುದು ಕಷ್ಟ. ಎಷ್ಟೋ ಸಲ ಮನಸ್ಸು ಆತಂಕಕ್ಕೀಡಾಗುತ್ತದೆ. ಯಾರೂ ಸಮಾಧಾನಪಡಿಸುವವರು ಹತ್ತಿರ ಇರುವುದಿಲ್ಲ. ವ್ಯಾಕುಲಗೊಳ್ಳುವ ಮನಕ್ಕೆ ಧೈರ್ಯ ತುಂಬುವುದು ಹೇಗೆ ? ಅಂತಹ ಸಂದರ್ಭಗಳಲ್ಲಿ ಉತ್ತರವಾಗುತ್ತದೆ ಭಗವದ್ಗೀತೆ ! ಹೌದು. ವ್ಯಕ್ತಿತ್ವ ವಿಕಸನದ ಬಗ್ಗೆ ಹಲವಾರು ಪುಸ್ತಕಗಳನ್ನು ಓದಬಹುದು. ಆದರೆ ಗೀತೆಯ ಕೆಲವು ಸಾಲುಗಳನ್ನಾದರೂ, ಒಮ್ಮೆ ಶ್ರದ್ಧೆಯಿಂದ ಓದಿದವರಿಗೆ ಇದಕ್ಕಿಂತ ಬೇರೆ ವ್ಯಕ್ತಿತ್ವ ವಿಕಸನದ ಕೃತಿ ಬೇಕೇ ? ಎಂದು ಅನ್ನಿಸದಿರದು. ಭಗವದ್ಗೀತೆಯ ಪ್ರತಿಯೊಂದು ಸಾಲುಗಳಲ್ಲಿಯೂ ಅಂತಹ ಶಕ್ತಿ ಇದೆ.
ಗೀತೆಯ ಸಾಂಖ್ಯಯೋಗದಲ್ಲಿ ಒಂದು ಶ್ಲೋಕವಿದೆ. " ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ, ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ” ಅಂತ. ಅದರ ಕನ್ನಡಾನುವಾದ ಹೀಗಿದೆ - ಪಾರ್ಥ..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಹೇಯವಾದ ಹೃದಯ ದೌರ್ಬಲ್ಯದಿಂದ ಪಾರಾಗಿ ಎದ್ದು ನಿಲ್ಲು ! ”
ಪ್ರಯೋಗಿಸಿ ನೋಡಿ. ಮನಸ್ಸು ವೃಥಾ ಕೀಳರಿಮೆ ಪಟ್ಟಾಗ ಅಥವಾ ಯಾವುದೋ ಚಿಂತೆ ಮನಸ್ಸನ್ನು ಹಿಂಡಿ ಹೈರಾಣ ಮಾಡಿದಾಗ ಒಮ್ಮೆ ಮೇಲ್ಕಂಡ ಸಾಲನ್ನು ಧ್ಯಾನಿಸಿ. ಧೈರ್ಯದ ಒರತೆ ನಿಮ್ಮ ಬತ್ತಳಿಕೆಯನ್ನು ತುಂಬದಿದ್ದರೆ ಕೇಳಿ..

Thursday 1 March 2012

ಡಾ. ಶಿವ ಕುಮಾರ ಸ್ವಾಮೀಜಿಯವರ ದಿನಚರಿ !


ರೈತರು ನಮ್ಮ ಸಮಾಜದ ಬೆನ್ನೆಲುಬು ಅಂತ ಡಾ. ಶಿವ ಕುಮಾರ ಸ್ವಾಮೀಜಿಯವರು ದೃಢವಾಗಿ ನಂಬುತ್ತಾರೆ. ಅವರಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅದರಲ್ಲಿ ಮಹಾ ಶಿವರಾತ್ರಿಯಂದು ನಡೆಯುವ ಜಾನುವಾರು ಜಾತ್ರೆ ಒಂದು. ಲಕ್ಷಾಂತರ ರೈತರು ಮಠಕ್ಕೆ ತಮ್ಮ ಜಾನುವಾರುಗಳೊಂದಿಗೆ ಆಗಮಿಸುತ್ತಾರೆ. 15 ದಿನಗಳ ಉತ್ಸವದ ಭಾಗವಾಗಿ ಕೈಗಾರಿಕೆ ಮತ್ತು ಕೃಷಿ ಮೇಳ ನಡೆಯುತ್ತದೆ. ಬಸವಣ್ಣನವರ ಸಂದೇಶಗಳನ್ನು ಸಾರುವ ನಾಟಕಗಳು ನಡೆಯುತ್ತವೆ. ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿಯೂ ಅವರು ಕನ್ನಡಕ ಧರಿಸುವುದಿಲ್ಲ. ಅವರ ದೃಷ್ಟಿ ಮೊನಚಾಗಿದೆ. ನಡೆಯುವಾಗ ಊರುಗೋಲಿನ ಸಹಾಯ ಮಾತ್ರ ಸಾಕು. ನಿಮ್ಮ ಆರೋಗ್ಯದ ಗುಟ್ಟೇನು ಅಂದರೆ, ಅವರು ಮುಗುಳ್ನಗುತ್ತಾರೆ. ಕಠಿಣ ಪರಿಶ್ರಮ, ಅನುಯಾಯಿಗಳ ಅಕ್ಕರೆ, ಮಿತ ಆಹಾರ ಸೇವನೆ ಎನ್ನುತ್ತಾರೆ. ಸ್ವಾಮೀಜಿಯವರು ಮಿತಾಹಾರ ಸೇವನೆ ಮಾತ್ರವಲ್ಲ, ಅವರ ನಿದ್ದೆ ಕೂಡ ಅತ್ಯಲ್ಪ. ಪ್ರತಿ ದಿನ ಮೂರು ಗಂಟೆ ಮಾತ್ರ ಅವರು ನಿದ್ದೆ ಮಾಡುತ್ತಾರೆ ( ಈ ಲೇಖನ 2007ರಲ್ಲಿ, ಅವರ 99ನೇ ವಯಸ್ಸಿನಲ್ಲಿದ್ದಾಗ ಪ್ರಕಟಿತ) ಸ್ವಾಮೀಜಿಯವರ ದಿನಚರಿ ಇಂತಿದೆ.
- ಬೆಳಗ್ಗೆ 2-3 ಗಂಟೆ : ಅಧ್ಯಯನ
3-3:30 : ಸ್ನಾನ
3:30-5:30 : ಧ್ಯಾನ, ಪೂಜೆ, ಭಜನೆ, ಉಪಾಹಾರ
5:30ರಿಂದ : ವಿದ್ಯಾರ್ಥಿಗಳೊಡನೆ ಪ್ರಾರ್ಥನೆ, ಮಠದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
ಸಂಜೆ 6-8 ಗಂಟೆ : ವಿದ್ಯಾರ್ಥಿಗಳೊಡನೆ ಸಂಜೆಯ ಪ್ರಾರ್ಥನೆ
ರಾತ್ರಿ 8-11 : ಅಧ್ಯಯನ
ಸ್ವಾಮೀಜಿಯವರು ಸಾಕಷ್ಟು ಪ್ರಯಾಣ ಮಾಡುತ್ತಾರೆ. ಒಂದು ಸಣ್ಣ ಇಡ್ಲಿ, ಸಾಂಬಾರ ರಹಿತ ದಾಲ್, ಹಣ್ಣಿನ ಚೂರು ಮಾತ್ರ ಅವರ ಉಪಾಹಾರ. ಊಟಕ್ಕೆ ಸಣ್ಣ ರಾಗಿ ಮುದ್ದೆ. ಸ್ವಲ್ಪ ಅನ್ನ. ರಾತ್ರಿಯ ಊಟ ಇನ್ನೂ ಸರಳ. ಅವರು ಕಾಫಿ, ಚಹಾ ಅಥವಾ ಹಾಲು ಕುಡಿಯುವುದಿಲ್ಲ. ಬೇವಿನ ಕಷಾಯವನ್ನು ಮಾತ್ರ ಸೇವಿಸುತ್ತಾರೆ. ಬೆಳಗ್ಗೆ ದಿನಪತ್ರಿಕೆಗಳನ್ನು ಓದುವುದನ್ನು ತಪ್ಪಿಸುವುದಿಲ್ಲ. ಜಗತ್ತಿನ ಆಗುಹೋಗುಗಳಿಗೆ ದಿನಾ ಕಿವಿಗೊಡುತ್ತಾರೆ.

ಸ್ವಾಮೀಜಿ ಹುಟ್ಟಿದ ವರ್ಷ : 1908
ಹುಟ್ಟಿದ ಸ್ಥಳ : ವೀರಾಪುರ, ಮಾಗಡಿ ತಾಲ್ಲೂಕು, ಬೆಂಗಳೂರು.
ಹೆತ್ತವರು : ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ
ವಿದ್ಯಾಭ್ಯಾಸ : ಸರಕಾರಿ ಪ್ರಾಢಶಾಲೆ, ತುಮಕೂರು
ಪದವಿ-ಪೂರ್ವ, ಪದವಿ : ಸೆಂಟ್ರಲ್ ಕಾಲೇಜು, ಬೆಂಗಳೂರು.