Wednesday 30 December 2009

ಹೊಸ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ


ಹಿರಿಯ ಗಾಯಕ ಅಶ್ವಥ್ ಹಾಗೂ ನಟ ವಿಷ್ಣುವರ್ಧನ್ ಅವರ ನಿಧನದ ನೋವಿನೊಂದಿಗೆ ೨೦೦೯ ಮುಕ್ತಾಯವಾಗುತ್ತಿದೆ. ಹೊಸ ವರ್ಷ ೨೦೧೦ ಆರಂಭವಾಗಲು ಕೆಲವು ಕ್ಷಣಗಳು ಬಾಕಿ ಇವೆ. ಕಳೆದ ವರ್ಷ ಏನೆಲ್ಲಾ ಆಯಿತು, ಏನೆಲ್ಲಾ ಮಾಡಿದೆವು, ಕಳೆದ ವರ್ಷ ಆರಂಭದಲ್ಲಿ ಅಂದುಕೊಂಡಿದ್ದನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಿದ್ದೇವೆ ಎಂಬುದನ್ನೆಲ್ಲ ಅವಲೋಕಿಸಬೇಕಾದ ಕ್ಷಣವಿದು. ಪ್ರತಿಯೊಬ್ಬರೂ ಅಂತಹದೊಂದು ಆತ್ಮಾವಲೋಕನವನ್ನು ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಮಾಡೋದು ಉತ್ತಮ ಎಂದನ್ನಿಸುತ್ತದೆ. ಮನೆಯ ಬಾಲ್ಕನಿಯಲ್ಲಿ ಏಳೆಂಟು ಪಾಟ್‌ಗಳಲ್ಲಿ ಗುಲಾಬಿ, ಗೌರಿ ಹೂವಿನ ಗಿಡ, ಡೇಲ್ಯ, ತುಳಸಿ ಇತ್ಯಾದಿಯಾಗಿ ಕೆಲವು ಗಿಡಗಳಿವೆ. ಬಸಳೆಯ ಬಳ್ಳಿಯಿದೆ. ಪ್ರತಿ ದಿನ ಬೆಳಗ್ಗೆ ಇವುಗಳನ್ನು ಕಂಡು ಮಾತನಾಡಿಸಿ, ನೀರೆರೆಯಲು ಮರೆಯುವುದಿಲ್ಲ. ಹೊಸತಾಗಿ ಹೂವು ಬಿಟ್ಟಿದೆಯಾ, ಗುಲಾಬಿ ಮೊಗ್ಗು ಅರಳುತ್ತಿದೆಯಾ ಎಂದು ಗಮನಿಸುತ್ತೇನೆ. ಮನೆಯಲ್ಲಿ ತರಕಾರಿಗಳ ಸಿಪ್ಪೆಯನ್ನು ಒಂದು ಮುಚ್ಚಳವಿರುವ ಡಬ್ಬಕ್ಕೆ ಹಾಕಿ ಸಾವಯವ ಗೊಬ್ಬರ ತಯಾರಿಸುತ್ತಿದ್ದೇನೆ. ಆ ಕೆಲಸ ಸ್ವಲ್ಪ ಹೊತ್ತಿನದ್ದಾದರೂ, ಇಡೀ ದಿನ ಖುಷಿ ಕೊಡುತ್ತೆ. ಮೊನ್ನೆ ಯಾವುದೋ ಬಳ್ಳಿ ಹಬ್ಬಿ ಹೂವು ಬಿಟ್ಟಿತ್ತು. ಚಿತ್ರ ಇಲ್ಲಿದೆ. ಹೊಸ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ ಅಂತ ಕಿದೂರು ಮಹದೇವನಲ್ಲಿ ಪ್ರಾರ್ಥನೆ ಮಾಡ್ತೇನೆ.

Tuesday 29 December 2009

ವಿಷ್ಣುವರ್ಧನ್ ಅಗಲಿದ್ದಾರೆ...


ನಿನ್ನೆ ತಾನೆ ನೆಚ್ಚಿನ ಗಾಯಕ ಅಶ್ವಥ್ ಅಗಲಿದರು. ಈವತ್ತು ಹಿರಿಯ ನಟ ಡಾ. ವಿಷ್ಣುವರ್ಧನ್ ಅಗಲಿದ್ದಾರೆ. ನಿಜಕ್ಕೂ ನೋವಿನ ಸಂಗತಿಯಿದು. ಬೆಳಗ್ಗೆ ಟಿ.ವಿ ನ್ಯೂಸ್ ಚಾನಲ್ ಹಾಕುತ್ತಿದ್ದಂತೆ ಒಂದು ಕ್ಷಣ ಶಾಕ್ ಆದಂತಾಯಿತು. ಡಾ. ರಾಜ್‌ಕುಮಾರ್ ನಿಧನದ ಸಂದರ್ಭ ಉಂಟಾಗಿದ್ದ ಗಲಭೆ ಈಗ ಸಂಭವಿಸದಿರಲಿ ಎಂದು ಮನದಲ್ಲೇ ಪ್ರಾರ್ಥಿಸಿದೆ. ಮತ್ತೊಂದು ಕಡೆ ಎಲ್ಲ ಸುದ್ದಿವಾಹಿನಿಗಳೂ, ಸುದ್ದಿಮನೆಗಳೂ ಬ್ಯುಸಿಯಾಗಿವೆ. ಡಾ. ವಿಷ್ಣುವರ್ಧನ್ ಅವರ ಬದುಕು, ಸಾಧನೆ, ಚಿತ್ರಗಳ ವಿವರ, ಅಪರೂಪದ ಛಾಯಾಚಿತ್ರಗಳನ್ನು ಕಲೆಹಾಕುವ ಕೆಲಸ, ಅವಸರ, ಗಡಿಬಿಡಿ ಕಂಡುಬರುತ್ತಿದೆ. ಕೆಲವು ವರದಿಗಾರರು ವಿಷ್ಣುವರ್ಧನ್ ನಿವಾಸದಲ್ಲಿದ್ದಾರೆ. ಅಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ನೆರೆದಿದ್ದಾರೆ.
ಕೆಲವು ತಿಂಗಳಿನ ಹಿಂದೆ ವಿಜಯ ಕರ್ನಾಟಕಕ್ಕೆ ವಿಷ್ಣುವರ್ಧನ್ ಅತಿಥಿ ಸಂಪಾದಕರಾಗಿ ಬಂದಿದ್ದರು. ಅವರ ಸೌಮ್ಯ ಹಾಗೂ ಸೂಕ್ಷ್ಮ ಭಾವದ ಮೊಗವನ್ನು ಗಮನಿಸಿದ್ದೆ. ಒಬ್ಬ ಸಂತನಂತಹ ಕಳೆ ಅವರ ಮುಖದಲ್ಲಿತ್ತು. ನಡೆ ನುಡಿಯಲ್ಲಿತ್ತು. ಕಚೇರಿಯ ಸಹೋದ್ಯೋಗಿಗಳು ಅವರ ಪಕ್ಕ ನಿಂತು ಫೊಟೊ ತೆಗೆಸಿಕೊಂಡಿದ್ದರು. ಪ್ರತಿಯೊಬ್ಬರ ಜತೆ ವಿಷ್ಣು ಆತ್ಮೀಯವಾಗಿ ಮಾತನಾಡಿದ್ದರು. ಎಲ್ಲ ವಿಭಾಗಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡಿದ್ದರು.

ಕರ್ನಾಟಕದ ಉದ್ಯಮ ವಲಯದ ೨೦೦೯ರ ಹಿನ್ನೋಟ


ಕರ್ನಾಟಕದ ಉದ್ಯಮ ವಲಯದ ೨೦೦೯ರ ಹಿನ್ನೋಟದ ಬಗ್ಗೆ ವಿಜಯ ಕರ್ನಾಟಕದ ವಾಣಿಜ್ಯ ವಿಭಾಗಕ್ಕೆ ಬರೆದ ಲೇಖನ ಇಲ್ಲಿದೆ. ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Monday 28 December 2009

ವರ್ಲ್ಡ್ ಸ್ಪೇಸ್ ವಿದಾಯ ಗೀತೆ






ಬಾನುಲಿಯಲ್ಲಿ ಸುಮಧುರ ಗೀತೆಗಳನ್ನು ಆಲಿಸುತ್ತ ಮೈಮರೆಯುವ ಲಕ್ಷಾಂತರ ಶ್ರೋತೃಗಳಿಗೆ ಇದೊಂದು ಕಹಿ ಸುದ್ದಿ. ಉಪಗ್ರಹ ಆಧಾರಿತ ರೇಡಿಯೊ ವರ್ಲ್ಡ್‌ಸ್ಪೇಸ್, ಕೇವಲ ಇನ್ನೆರಡು ದಿನಗಳಲ್ಲಿ ಸ್ತಬ್ಧವಾಗಲಿದೆ.
ಜಾಹೀರಾತುಗಳ ಬ್ರೇಕ್ ಇಲ್ಲದೆ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಕೇಳುಗರ ಮನತಣಿಸುತ್ತಿದ್ದ ವರ್ಲ್ಡ್ ಸ್ಪೇಸ್ ರೇಡಿಯೊದ ಪೆಟ್ಟಿಗೆಯನ್ನು ಇನ್ನುಮುಂದೆ ಷೋಕೇಸಿನಲ್ಲಿಡಬೇಕಷ್ಟೇ.
ಡಿಸೆಂಬರ್ ೩೧ರ ಮಧ್ಯರಾತ್ರಿಯಿಂದ ರೇಡಿಯೊ ವರ್ಲ್ಡ್ ಮೌನವಾಗಲಿದೆ. ಯಾಕೆಂದರೆ ವರ್ಲ್ಡ್ ಸ್ಪೇಸ್ ಇಂಡಿಯಾದ ಮಾತೃಸಂಸ್ಥೆ ವರ್ಲ್ಡ್ ಸ್ಪೇಸ್ ದಿವಾಳಿಯಾಗಿದೆ.
೨೦೦೮ರ ಅಕ್ಟೋಬರ್‌ನಿಂದ ದಿವಾಳಿ ಸ್ಥಿತಿಯಲ್ಲಿದ್ದ ವರ್ಲ್ಡ್ ಸ್ಪೇಸ್‌ನ್ನು ಖರೀದಿಸಲು ಮುಂದೆ ಬಂದಿರುವವರು, ಭಾರತದಲ್ಲಿರುವ ಕಂಪನಿಯ ಆಸ್ತಿ, ಬಿಸಿನೆಸ್ ಹಾಗೂ ಚಂದಾವನ್ನು ಖರೀದಿಸಲು ಸಿದ್ಧರಿಲ್ಲ. ಹೀಗಾಗಿ ಭಾರತದಲ್ಲಿ ತನ್ನೆಲ್ಲ ಪ್ರಸಾರವನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯ ಅಕಾರಿಗಳು ಲಭ್ಯರಿಲ್ಲ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿರುವ ವರ್ಲ್ಡ್ ಸ್ಪೇಸ್ ಕಚೇರಿಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಕಾಣಿಸುತ್ತಿಲ್ಲ. ಬದಲಿಗೆ ಎಲ್ಲರ ಮುಖದಲ್ಲೂ ಅವ್ಯಕ್ತ ಚಿಂತೆ. ಅವರವರದ್ದೇ ಧಾವಂತ. ಇನ್ನು ಕೆಲವರ ಮೊಬೈಲ್‌ಗಳಿಗೆ ಬರುವ ಕರೆಗಳಲ್ಲಿ ಅದೇ ಪ್ರಶ್ನೆ. ‘ ಕಂಪ್ನಿ ಮುಚ್ಚಿಕೊಳ್ಳುತ್ತಿದೆಯಂತೆ ಹೌದಾ ? ಬೇರೆ ಯಾರಾದರೂ ಖರೀದಿಸುತ್ತಾರೆಯೇ ? ಅಂತ.
ಹೀಗಾಗಿ ಇಷ್ಟಪಟ್ಟು ಕೆಲಸ ಮಾಡುತ್ತಿದ್ದ ರೇಡಿಯೊ ನಿಲಯ, ಸ್ಟೂಡಿಯೊದಲ್ಲೀಗ ಭಣ ಭಣ. ಸ್ವಾಗತಕಾರಿಣಿಯ ಸ್ಥಾನ ಖಾಲಿ. ದ್ವಾರದಲ್ಲಿ ವಾಚ್‌ಮನ್ ನಿರ್ಲಿಪ್ತನಂತೆ ಬಂದವರನ್ನು ಹಿಂದಿಯಲ್ಲಿ ಮಾತನಾಡಿಸಿ ಕಳುಹಿಸುತ್ತಿದ್ದಾನೆ. ಗೋಡೆಗೆ ಹಚ್ಚಿದ ನೋಟಿಸ್‌ನ್ನು ತೋರಿಸ್ತಾನೆ..ಬೇಕಾದರೆ ಪರಿಹಾರಕ್ಕೆ ಸಲ್ಲಿಸುವ ಅರ್ಜಿಯನ್ನೂ ಉಚಿತವಾಗಿ ಕೊಡುತ್ತಾನೆ.
ಅಮೆರಿಕದಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತ ಬೆಂಗಳೂರಿನಲ್ಲಿ ರೇಡಿಯೊ ನಿಲಯವೊಂದರ ಶೆಟರ್‌ನ್ನು ಹೀಗೆ ಎಳೆದುಕೊಂಡಿತು ನೋಡಿ. ಡೀಲರ್‌ಗಳಲ್ಲಿ ಬಹುತೇಕ ಮಂದಿ ಈಗಾಗಲೇ ಈ ಸ್ಯಾಟಲೈಟ್ ರೇಡಿಯೊ ಜತೆಗಿನ ವ್ಯವಹಾರವನ್ನು ಕೈ ಬಿಟ್ಟಿದ್ದಾರೆ. ಅಳಿದುಳಿದವರಿಗೂ ಹೆಚ್ಚಿನ ಮಾಹಿತಿ ಇಲ್ಲ.
ಆ ದಿನಗಳ ಅಲೆ : ಆದರೆ ವರ್ಲ್ಡ್ ಸ್ಪೇಸ್‌ನ ಆರಂಭ ಬೆಂಗಳೂರು ಸೇರಿದಂತೆ ಎಲ್ಲೆಡೆ ಬಾನುಲಿ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಸುಮಾರು ೪೦ ಪ್ರತ್ಯೇಕ ಚಾನಲ್‌ಗಳೊಂದಿಗೆ ಪ್ರಸಾರವಾಗುತ್ತಿದ್ದ ಸಂಗೀತಮಯ ರೇಡಿಯೊ ಇದಾಗಿತ್ತು. ಲಕ್ಷಗಟ್ಟಲೆ ಚಂದಾದಾರರು ವರ್ಲ್ಡ್ ಸ್ಪೇಸ್‌ಗೆ ಆಕರ್ಷಿತರಾಗಿದ್ದರು. ಆದರೆ ಅವರನ್ನೆಲ್ಲ ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ. ಇತ್ತೀಚೆಗೆ ಚಂದಾದಾರರಾದವರೂ ಇದ್ದಾರೆ. ಇವರಿಗೆಲ್ಲ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೆ ಒಳಿತಾಗುತ್ತಿತ್ತು ಅಲ್ಲವೇ. ಈಗ ಅತಂತ್ರರಾಗಿರುವ ಚಂದಾದಾರರಿಗೆ ಕಂಪನಿ ಇ-ಮೇಲ್ ಮಾಡಿ ಕೈತೊಳೆದುಕೊಂಡಿದೆ. ‘ ಅಮೆರಿಕದ ದಿವಾಳಿತನದ ಕಾನೂನಿನ ಅನ್ವಯ ಪರಿಹಾರ ಪಡೆದುಕೊಳ್ಳಬಹುದು ’ ಎಂದು ತಿಳಿಸಿದೆ. ಆದರೆ ಯಾವಾಗ ಹಾಗೂ ಎಷ್ಟು ಪರಿಹಾರ ಸಿಗಲಿದೆ ? ಹಾಗಾದರೆ ಸ್ತಬ್ಧವಾಗಲಿರುವ ರೇಡಿಯೊವನ್ನು ಕಂಪನಿ ಹಿಂತೆಗೆದುಕೊಳ್ಳಲಿದೆಯೇ ? ಈ ಪ್ರಶ್ನೆಗಳಿಗೆ ನಿಮಗೆಲ್ಲೂ ಉತ್ತರ ಸಿಗಲ್ಲ.
ಕನ್ನಡದಲ್ಲಿ ರೇಡಿಯೊ ಸ್ಪರ್ಶ, ಮರಾಠಿಯಲ್ಲಿ ಸುರಭಿ, ತೆಲುಗಿನಲ್ಲಿ ಸ್ಪಂದನ, ಮಲಯಾಳಂನಲ್ಲಿ ಮಾಧುರಿ, ತಮಿಳಿನಲ್ಲಿ ಕೆಎಲ್ ರೇಡಿಯೊ, ಬಿಬಿಸಿ ನ್ಯೂಸ್, ಭಾರತೀಯ ಶಾಸ್ತ್ರೀಯ ಸಂಗೀತ, ಹಿಂದಿ ಚಲನಚಿತ್ರ, ರೇಡಿಯೊ ಆರ್ಟ್ ಆಫ್ ಲಿವಿಂಗ್ ಆಧ್ಯಾತ್ಮ ಅಂತ ಹಲವು ಕಾರ್ಯಕ್ರಮಗಳನ್ನು ನಿಲಯ ನೀಡುತ್ತಿತ್ತು. ಕನ್ನಡದ ಚಾನಲ್ ಸ್ಪರ್ಶದಲ್ಲಿ ಕನ್ನಡ ಸಿನಿಮಾ, ಸಂಗೀತ ಲೋಕಕ್ಕೆ ಸಂಬಂಸಿ ವಿಶೇಷ ಸರಣಿ ಕಾರ್ಯಕ್ರಮಗಳು ಬಿತ್ತರವಾಗಿತ್ತು. ಚಂದಾದಾರರಾಗುವವರು ೧,೭೯೦ ರೂ.ಗಳಿಂದ ಅಂದಾಜು ೨ ಸಾವಿರ ರೂ.ತನಕ ಖರ್ಚು ಮಾಡಿ ಪ್ರತ್ಯೇಕ ರೇಡಿಯೊ ಖರೀದಿಸಿದರೆ ಸಾಕು. ದಿನವಿಡೀ ಸುಶ್ರಾವ್ಯ ನಾದಲೋಕದಲ್ಲಿ ವಿಹರಿಸಬಹುದಿತ್ತು. ಪಾಶ್ಚಾತ್ಯ ಸಂಗೀತವನ್ನೂ ಇದರಲ್ಲೇ ಆಸ್ವಾದಿಸಬಹುದಿತ್ತು. ಬಾನುಲಿ ಸಂಗೀತ ಪ್ರಿಯರಿಗಂತೂ ವರ್ಷಾಂತ್ಯಕ್ಕೆ ಬ್ಯಾಡ್ ನ್ಯೂಸ್.

Monday 21 December 2009

ವಂಡರ್ ಬಜಾರ್ ಆರಂಭ !

ಕೆ.ಆರ್.ಮಾರುಕಟ್ಟೇಲಿ ಕೇರ್ ಆಫ್ ಫುಟ್‌ಪಾತ್ ಆದೋರ್‍ಯಾರು ?


ಕೃಷ್ಣರಾಜೇಂದ್ರ ಮಾರುಕಟ್ಟೆ !
ಹೀಗಂದ್ರೆ ಯಾವ್ದಪ್ಪಾ ಅಂತ ಬಹುಶಃ ಯೋಚಿಸಬಹುದು. ಆದರೆ ಸಿಟಿ ಮಾರ್ಕೆಟ್ ಅಥವಾ ಕೆ.ಆರ್. ಮಾರುಕಟ್ಟೆ ಎಂದರೆ ಪ್ರತಿಯೊಬ್ಬ ಬೆಂಗಳೂರಿಗನೂ ತೋರಿಸ್ತಾನೆ. ಅದನ್ನು ಭಾರತದ ಸಾಂಪ್ರದಾಯಿಕ ಮಾರುಕಟ್ಟೆ ಅಂತಾರೆ. ಶತಮಾನಗಳಿಂದ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಕೆ.ಆರ್.ಮಾರುಕಟ್ಟೆ ನಿತ್ಯ ಲಕ್ಷಾಂತರ ಗ್ರಾಹಕರ ಆಕರ್ಷಕ ಸಂತೆ. ಇಲ್ಲಿಯೂ ಶಾಪಿಂಗ್ ಮಾಲ್‌ಗಳಲ್ಲಿಯೂ ನಡೆಯುವುದೊಂದೇ ವ್ಯಾಪಾರ ಆದ್ರೂ ಅಜಗಜಾಂತರ ವ್ಯತ್ಯಾಸ ಇದೆ. ಅದರ ಅನುಭವ ನಿಮಗೆಲ್ಲರಿಗೂ ಆಗಿರಬಹುದು. ಅಂತಹ ಟಿಪಿಕಲ್ ಇಂಡಿಯನ್ ಶೈಲಿಯ ಕೆ.ಆರ್. ಮಾರುಕಟ್ಟೆಯ ಒಳಗಿನ ಸುಳಿ ಮೇಲ್ನೋಟಕ್ಕೆ ಸರಳ, ಆದರೆ ಒಂದಕ್ಕೊಂದು ವಿಭಿನ್ನ. ನಂಬಲೂ ಕಷ್ಟವಾಗುವ ವೈಚಿತ್ರ್ಯಗಳ ಬಜಾರ್ ಇದು. ಒಂದು ಕಡೆ ಸ್ವಾದ, ಮತ್ತೊಂದು ಕಡೆ ಖೇದ..ಒಂದು ಮೂಲೆಯಲ್ಲಿ ಗಿಜಿಗಿಜಿ ಜನರಿದ್ದರೆ ಮತ್ತೊಂದು ಮೂಲೆಯಲ್ಲಿ ಏನಿಟ್ಟರೂ ಭಣ..ಭಣ....! ಏನಿದರ ರಹಸ್ಯ ? ಹಾಗಾದರೆ ಬನ್ನಿ ಬಜಾರ್ ಸುತ್ತಿ ಬರೋಣ...
ಕೆ.ಆರ್.ಮಾರುಕಟ್ಟೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರ ಮಾತ್ರವಲ್ಲ, ಇಲ್ಲಿನ ಫುಟ್‌ಪಾತುಗಳೇ ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಸಂಕೀರ್ಣದಲ್ಲಿ ೧೮೮೧ ಅಂಗಡಿ ಮತ್ತು ಮಳಿಗೆಗಳಿವೆ. ಮೊದಲ ಮಹಡಿ, ನೆಲ ಅಂತಸ್ತು, ಮೇಲ್ಮಹಡಿ ಅಂತ ಮೂರು ಅಂತಸ್ತುಗಳಲ್ಲಿ ಇವು ಹರಡಿವೆ. ಪಕ್ಕದಲ್ಲೇ ಮಟನ್ ಮಾರ್ಕೆಟ್ ಇದೆ. ಅಂದಹಾಗೆ ಇಲ್ಲಿ ಅಂಗಡಿಗಳಿಗೆ ಬಾಡಿಗೆ ಎಷ್ಟಿರುತ್ತೆ ಗೊತ್ತೇ ?
೩೦೦ರೂ. ಬಾಡಿಗೆ, ಬಾಕಿ ೨.೫೯ ಕೋಟಿ !
ನೆನಪಿಡಿ..ಇದು ಬೆಂಗಳೂರಿನ ಹೃದಯ ಭಾಗ ಎನ್ನಿಸಿಕೊಂಡಿರುವ ಪ್ರದೇಶ. ಲಕ್ಷಾಂತರ ಜನ ನಿತ್ಯ ಇಲ್ಲಿ ಓಡಾಡುತ್ತಾರೆ. ಏನಿಟ್ಟರೂ ಸೇಲಾಗುವ ಮಹತ್ವದ ಬಿಸಿನೆಸ್ ಪಾಯಿಂಟ್. ಮೆಜೆಸ್ಟಿಕ್‌ನಿಂದ ಹದಿನೈದು ಕಿ.ಮೀ ಆಚೆಗೂ ಸಣ್ಣ ಸಂಗಡಿಗೆ ಮೂರ್‍ನಾಲ್ಕು ಸಾವಿರ ರೂ. ಬಾಡಿಗೆ ಇರುತ್ತೆ. ಹೀಗಿದ್ದರೂ ಕೆ.ಆರ್.ಮಾರುಕಟ್ಟೆಯಲ್ಲಿ ಮಾತ್ರ ಈಗಲೂ ಮುನ್ನೂರು ರೂ. ಬಾಡಿಗೆ ಚಾಲ್ತಿಯಲ್ಲಿದೆ ! ಅಂದರೆ ದಿನಕ್ಕೆ ಹತ್ತು ರೂಪಾಯಿ. ಮುನ್ನೂರು ರೂ.ಗಳಿಂದ ಆರಂಭವಾಗಿ ನಾನ್ನೂರು, ಐನೂರು, ಏಳು ನೂರು ಅಂತ ಸಾಗುತ್ತದೆ. ಮೂರು ಸಾವಿರ ರೂ.ಗಿಂತ ಹೆಚ್ಚಿನ ಬಾಡಿಗೆಯೇ ಇಲ್ಲಿಲ್ಲ. ಹೀಗಿದ್ದರೂ ಇಲ್ಲಿನ ವ್ಯಾಪಾರಿಗಳಲ್ಲಿ ಬಹುತೇಕ ಮಂದಿಗೆ ಬಾಡಿಗೆ ಕಟ್ಟಲೂ ದುಡ್ಡಿಲ್ಲವಂತೆ.ಬೇಕಾದರೆ ನೋಡಿ. ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಗೆ ಕೆ.ಆರ್.ಮಾರುಕಟ್ಟೆಯ ವರ್ತಕರಿಂದಲೇ ಬರಬೇಕಾಗಿರುವ ಬಾಡಿಗೆಯ ಬಾಕಿ ಮೊತ್ತ ೨.೫೯ ಕೋಟಿ ರೂ. !
ಅಂದಹಾಗೆ ಬಾಡಿಗೆ ಈ ರೀತಿ ಅತ್ಯಂತ ಅಗ್ಗವಾಗಲು ಕಾರಣ ? ಕಳೆದ ಹನ್ನೊಂದು ವರ್ಷಗಳಿಂದ ಬಾಡಿಗೆಯನ್ನೇ ಪರಿಷ್ಕರಿಸಿಲ್ಲ. ತಲ ತಲಾಂತರಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದ ಕುಟುಂಬಗಳಿಗೆ ಪುನರ್ವಸತಿ ಸಲುವಾಗಿ ಹೊಸ ಕಟ್ಟಡಗಳನ್ನು ಕಟ್ಟಿಸಿಕೊಟ್ಟು ಬಿಡಲಾಯಿತು. ಅಷ್ಟೇ. ನಂತರ ನಾಮ್‌ಕೇವಾಸ್ತೆ ಉಸ್ತುವಾರಿ ಮಾತ್ರ ಇಲ್ಲಿದೆ. ಅಕ್ಷರಶಃ ಸಂತೆಯೇ ಆಗಿರುವ ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಎಳ್ಳಷ್ಟೂ ಆಸ್ಪದವಿಲ್ಲ. ಒಳಗೊಮ್ಮೆ ಹೊಕ್ಕರೆ ಮನೆಗೆ ವಾಪಸಾಗುವ ಹೊತ್ತಿಗೆ ಇದ್ದಬದ್ದ ರೋಗಗಳೆಲ್ಲ ಮುತ್ತಿಕೊಳ್ಳುವ ಭೀತಿ ಯಾರಿಗಾದರೂ ಉಂಟಾಗದಿರದು. ಆದರೆ ಶಾಪಿಂಗ್ ಮಾಲ್‌ಗಳಲ್ಲಿ ನಿಮಗೆ ಯಾರೊಬ್ಬರ ಹತ್ತಿರ ಕೂಡ ಚೌಕಾಶಿ ಮಾಡಲು ಆಗುವುದಿಲ್ಲ. ಇಲ್ಲಾದರೆ ರೇಟೂ ಕಡಿಮೆ, ಮತ್ತೂ ಚೌಕಾಸಿಗೆ ಇಳಿಯಬಹುದು. ಇದೊಂದೇ ಕಾರಣಕ್ಕೆ ಮಧ್ಯಮವರ್ಗದ ಜನ ಇಲ್ಲಿಗೆ ದೌಡಾಯಿಸುತ್ತಾರೆ.
ಕಡಿಮೆ ಬಂಡ್ವಾಳ ಸಾಕು
ಹಾಗೆ ಧಾವಿಸುವ ಜನ ಸಾಗರ ಅತಿ ಹೆಚ್ಚು ವ್ಯಾಪಾರ ನಡೆಸುವುದು ಮಾತ್ರ ಕೆ.ಆರ್.ಮಾರುಕಟ್ಟೆಯ ಫುಟ್‌ಪಾತ್‌ಗಳಲ್ಲಿ ಕುಂತು ನಾನಾ ಅಗತ್ಯ ವಸ್ತುಗಳನ್ನು, ಕಾಯಿಪಲ್ಲೆಗಳನ್ನು ಹರವಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ! ಹೀಗಾಗಿ ಒಳಗೆ ಕುಳಿತು ನೊಣ ಹೊಡೆಯುತ್ತಿರುವವರೂ ಫುಟ್‌ಪಾತಿಗೆ ಬಂದು ಸಾಮಾನುಗಳನ್ನು ಹರಡಿ ಭರ್ಜರಿ ವ್ಯಾಪಾರ ಮಾಡ್ತಾರೆ. ಯಾವ ಬಾಡಿಗೆ ಅಥವಾ ಸುಂಕದ ರಗಳೆಯೇ ಇಲ್ಲದೆ, ಮಾರುಕಟ್ಟೆಯ ಫುಟ್‌ಪಾತಿನಲ್ಲಿ ಮಾರಾಟಕ್ಕೆ ಕುಳಿತುಕೊಳ್ಳುವವರಿಗೆ ಇರುವ ಏಕೈಕ ಅನುಕೂಲ ಏನೆಂದರೆ, ಕಡಿಮೆ ಬಂಡವಾಳ ಸಾಕು. ವ್ಯಾಪಾರ ಅಂತೂ ಗ್ಯಾರಂಟಿ. ಹಾಗಾದರೆ ಅವರೆಷ್ಟು ಸಂಪಾದಿಸುತ್ತಾರೆ ? ಯಾವುದೇ ಸಾಮಾನಿಟ್ಟರೂ ದಿನಕ್ಕೆ ಮುನ್ನೂರು, ಐನೂರು ಅಥವಾ ಅದೃಷ್ಟ ಖುಲಾಯಿಸಿದರೆ ದಿನಕ್ಕೆ ಸಾವಿರ ರೂ. ಆದಾಯ ಮಾಡಿದವರಿದ್ದಾರೆ. ಇಲ್ಲಿ ತರಕಾರಿ ಮಾರಾಟ ಮಾಡುವವರಿಗೆ ಮಾತ್ರ ಅಂತಹ ಸಂಪಾದನೆಯಾಗುತ್ತಿಲ್ಲ. ಹಣ್ಣು ಹಣ್ಣು ಮುದುಕಿಯರೂ ಹಣ್ಣುಗಳನ್ನಿಟ್ಟು ಸುಡುಬಿಸಿಲಿಗೆ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅವರೆಲ್ಲರ ಹಿಂದೆ ಒಂದೊಂದು ನೋವು, ಯಾತನೆಯ ಕಥೆ,ವ್ಯಥೆಯಿದೆ. ಆದರೆ ಉಳಿದವರಿಗೆ ಮೋಸವಿಲ್ಲ. ಆದರೆ ಈ ಮಾರುಕಟ್ಟೆಯಲ್ಲೂ ಎಲ್ಲೆಡೆ ಕಾಣಸಿಗುವಂತೆ ಬೇಕಾದಂತೆ ಯಾಮಾರಿಸುವವರೂ ಇದ್ದಾರೆ. ಹುಷಾರ್.


ಮೊಬೈಲ್ ಕವರಿನಲ್ಲಿ ನೂರುಲ್ಲಾ ಡೋಂಟ್ ವರಿ


ಅವರ ಹೆಸರು ನೂರುಲ್ಲಾ ಮಹಮ್ಮದ್ ಅಂತ !
ಪ್ರತಿ ಭಾನುವಾರ ಕೆಲಸಕ್ಕೆ ರಜೆ ಹಾಕಲ್ಲ. ಸೀದಾ ಕೆ.ಆರ್.ಮಾರುಕಟ್ಟೆಗೆ ಬಂದು ಫುಟ್‌ಪಾತಲ್ಲಿ ಕುಂತು ತಮ್ಮ ಜೋಳಿಇಗೆ ಬಿಡಿಸುತ್ತಾರೆ. ಅದರೊಳಗಿನಿಂದ ಬಳೆಗಳನ್ನು ಇಡಲು ಹೆಂಗಳೆಯರು ಬಳಸುವ ತಂತಿಯ ಸ್ಟ್ಯಾಂಡ್‌ಗಳನ್ನು ಹೊರತೆಗೆದು ಒಂದಕ್ಕೊಂದು ಸಿಕ್ಕಿಸುತ್ತಾರೆ. ಮೊಬೈಲ್ ಕವರ್‌ಗಳ ಪ್ಯಾಕೆಟ್ಟುಗಳನ್ನು ತೆಗೆದು ಓರಣವಾಗಿ ಜೋಡಿಸುತ್ತಾರೆ. ಸೂಪರ್ ಸ್ಟಿಕ್‌ಗಳನ್ನು ಹರವಿಡುತ್ತಾರೆ. ಹಾಗಂದರೆ ಒಂದು ವಿಧದ ಗಮ್. ಪ್ಲಾಸ್ಟಿಕ್ ಬಕೆಟ್ ಒಡೆದರೆ, ಪಾತ್ರ ತೂತಾದರೆ ಅದನ್ನು ಮೆತ್ತಿ ಸರಿಪಡಿಸಬಹುದು. ಮತ್ತೆ ಮದ್ದು ಸಿಂಪಡಿಸುವ ಸ್ಪ್ರೇಯರ್‌ಗಳನ್ನು ತಂದಿಡುತ್ತಾರೆ.
ಅಂದಹಾಗೆ ನೂರುಲ್ಲಾ ರಾಮನಗರದವರು. ಕಳೆದ ಆರು ವರ್ಷಗಳಿಂದ ಮೈಸೂರು ಬ್ಯಾಂಕ್ ವೃತ್ತದ ಬಳಿ ಬೀದಿ ಬದಿಯ ವ್ಯಾಪಾರಿ. ಅದಕ್ಕೂ ಮುನ್ನ ಮಾಲೂರು ಮುಂತಾದ ಕಡೆ ಮಸೀದಿಗಳಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನಂತರ ಹೆಚ್ಚಿನ ಸಂಪಾದನೆ ಮಾಡುವ ದೃಷ್ಟಿಯಿಂದ ಸೀದಾ ಬೆಂಗಳೂರಿನ ಅವೆನ್ಯೂ ರಸ್ತೆಗೆ ಬಂದಿಳಿದು ಬೆಂಕಿಪೊಟ್ಟಣ ಮಾರಾಟ ಮಾಡಲು ಶುರು ಮಾಡಿದರು. ಆಗ ೩೦೦ ರೂ. ಬಂಡವಾಳ ಹಾಕಿದ್ದರಂತೆ. ಕ್ರಮೇಣ ಮೊಬೈಲ್ ಕವರ್, ಸೂಪರ್ ಸ್ಟಿಕ್, ಬೆಲ್ಟು, ಬಳೆ ಸ್ಟ್ಯಾಂಡ್ ಅಂತ ವ್ಯಾಪಾರ ಮಾಡಿದರು. ಈ ಆರು ವರ್ಷದಲ್ಲಿ ಆರಾಮವಾಗಿದ್ದೇನೆ. ಕನಿಷ್ಠ ೫೦ ಸಾವಿರ ರೂ. ಉಳಿತಾಯ ಮಾಡಿದ್ದೇನೆ..ಫುಟ್‌ಪಾತ್ ವ್ಯಾಪಾರ ಮಾಡೋವ್ರು ಹೆಚ್ಚು ಬಂಡವಾಳ ಹಾಕಬೇಕಿಲ್ಲ. ಬೆಂಗಳೂರಲ್ಲಿ ಫುಟ್‌ಪಾತಲ್ಲಿ ದಿನಕ್ಕೆ ಮುನ್ನೂರು ರೂಪಾಯಿ ಈಸಿಯಾಗಿ ಸಂಪಾದನೆ ಮಾಡಬಹುದು. ತರ್‍ಕಾರಿ ಮಾರೋವ್ರಿಗೆ ಅಷ್ಟೊಂದು ಇರ್‍ಲಿಕ್ಕಿಲ್ಲ..ಅಂತಾರೆ ನೂರುಲ್ಲ !

Tuesday 15 December 2009

ವೋಕ್ಸ್ ವ್ಯಾಗನ್ ಘಟಕದ ಒಳಭಾಗ
















ಇತ್ತೀಚೆಗೆ ಪುಣೆಯಲ್ಲಿ ಜರ್ಮನಿ ಮೂಲದ ವೋಕ್ಸ್ ವ್ಯಾಗನ್ ಕಾರು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಸೆರೆಹಿಡಿದ ಕೆಲವು ಚಿತ್ರಗಳು ಇಲ್ಲಿವೆ. ಘಟಕದ ಬಗ್ಗೆ ಈಗಾಗಲೇ ಲೇಖನ ಬರೆದು ನಿಮ್ಮ ಮುಂದಿಟ್ಟಿದ್ದೇನೆ. ಆದರೆ ಘಟಕದ ಒಳಭಾಗದ ನೋಟ ಇಲ್ಲಿದೆ..

Sunday 13 December 2009

ಅಂದು ಬಂಜರು, ಇಂದು ವೋಕ್ಸ್‌ವ್ಯಾಗನ್ ಕಾರು ಬಾರು !

ಸಾಮಾನ್ಯ ಮೇಲ್ಸೇತುವೆಯನ್ನು ಕಟ್ಟಲು ವರ್ಷಗಟ್ಟಲೆ ತಗಲುವ ಉದಾಹರಣೆಗಳು ನಮ್ಮಲ್ಲಿ ಧಾರಾಳ ಸಿಗುತ್ತವೆ. ಬೆಂಗಳೂರು ಮೆಟ್ರೊ ರೈಲಿನ ಕಾಮಗಾರಿ ಮೊದಲ ಹಂತವನ್ನು ಪೂರೈಸಲೂ ಇನ್ನೂ ಐದಾರು ವರ್ಷ ಕಾದು ಸುಸ್ತಾಗಬೇಕು. ಹೀಗಿರುವಾಗ ತಗ್ಗು ದಿಣ್ಣೆಗಳಿಂದ ಕೂಡಿದ ಬರಡು ಭೂಮಿಯಲ್ಲಿ ಪ್ರತಿ ವರ್ಷ ೧.೧ ಲಕ್ಷ ಕಾರುಗಳನ್ನು ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನು ಸ್ಥಾಪಿಸಲು ಎಷ್ಟು ಸಮಯ ಬೇಕು ?
ಮನಸ್ಸು ಮಾಡಿದರೆ ಕೇವಲ ೧೭ ತಿಂಗಳು ಸಾಕು ಎಂಬುದನ್ನು ನಮಗೆ ಸಾಬೀತುಪಡಿಸಿರುವುದು ಭಾರತೀಯ ಕಂಪನಿಯಲ್ಲ, ಜರ್ಮನಿಯ ವೋಕ್ಸ್ ವ್ಯಾಗನ್ ! ವಾಸ್ತವವಾಗಿ ಯೋಜಿಸಿದ್ದಕ್ಕಿಂತ ಒಂಬತ್ತು ತಿಂಗಳು ಮೊದಲೇ ನಿಗದಿತ ಗುರಿಯನ್ನು ಮುಟ್ಟಿದೆ ಈ ಕಾರು ಕಂಪನಿ. ಹಾಗಾದರೆ ಜರ್ಮನಿಯ ಉದ್ಯಮಿಗಳಿಗೆ ಸಾಧ್ಯವಾಗುವ ಇಂಥ ದಾಖಲೆಯ ನಮ್ಮವರಿಗೇಕೆ ಸಾಧ್ಯವಾಗುತ್ತಿಲ್ಲ ?
ಬೇಕಾದರೆ ನೋಡಿ. ಜರ್ಮನಿಯ ವೋಕ್ಸ್‌ವ್ಯಾಗನ್ ಪುಣೆಯಲ್ಲಿ ಶನಿವಾರ ನೂತನ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಿತು. ಮೂಲಸೌಕರ್ಯಗಳ ನಿಟ್ಟಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ, ಬೋಳು ಗುಡ್ಡ ಹಾಗೂ ಬಟಾ ಬಯಲಿನಂತಿರುವ ಚಕಾನ್‌ನಲ್ಲಿ ಸುಮಾರು ೫೭೫ ಎಕರೆ ವ್ಯಾಪ್ತಿಯಲ್ಲಿ ಭಾರಿ ಘಟಕವನ್ನು ವೋಕ್ಸ್‌ವ್ಯಾಗನ್ ನಿರ್ಮಿಸಿದೆ. ಇಂಥ ನೆಲದಲ್ಲಿ ೩,೫೦೦ ಕೋಟಿ ರೂ.ಗಳನ್ನು ಕಂಪನಿ ಬಂಡವಾಳ ಹೂಡಿದೆ. ಸ್ಕೋಡಾ, ಆಡಿ ಮುಂತಾದ ಕಂಪನಿಯ ಕಾರುಗಳನ್ನೀಗ ಇಲ್ಲಿಯೇ ಉತ್ಪಾದಿಸಲಾಗುತ್ತಿದೆ. ಕೈ ತೊಳೆದು ಮುಟ್ಟಬೇಕೆನ್ನುವ, ಪಳಪಳನೆ ಮಿಂಚುತ್ತಿರುವ ಸ್ವಚ್ಛ, ಸುಸಜ್ಜಿತ, ವ್ಯವಸ್ಥಿತ ಕಾರ್ಖಾನೆಯಿದು.
ವೋಕ್ಸ್ ವ್ಯಾಗನ್‌ಗಿಂತಲೂ ಇದರ ನಾನಾ ಬ್ರಾಂಡ್‌ಗಳ ಕಾರುಗಳ ಹೆಸರು ಭಾರತದಲ್ಲಿ ಜನಪ್ರಿಯ. ಸಿಯೆಟ್, ಸ್ಕೋಡಾ, ಆಡಿ, ಬೆಂಟ್ಲಿ, ಲ್ಯಾಂಬೋರ್‍ಗಿನಿ, ಪೋರ್ಶೆ, ಬುಗಟ್ಟಿ, ಸ್ಕಾನಿಯಾ, ವೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರು, ವೋಕ್ಸ್ ವ್ಯಾಗನ್ ಕಮರ್ಶಿಯಲ್ ವಾಹನಗಳನ್ನು ಕಂಪನಿ ಉತ್ಪಾದಿಸುತ್ತಿದೆ. ವಿಶ್ವಾದ್ಯಂತ ೬೧ ರಾಷ್ಟ್ರಗಳಲ್ಲಿ ೩.೭ ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಪ್ರತಿ ದಿನ ೨೬,೬೦೦ ವಾಹನಗಳ ಉತ್ಪಾದನೆ ಅಥವಾ ಸಂಬಂಸಿದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ ಎನ್ನುತ್ತದೆ ಕಂಪನಿ.
ಭಾರತೀಯ ಮಾರುಕಟ್ಟೆಗೆ ವೋಕ್ಸ್‌ವ್ಯಾಗನ್‌ನ ಸ್ಕೋಡಾ ಕಾರು ೨೦೦೧ರಲ್ಲಿ ಪ್ರವೆಶಿಸಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವೋಕ್ಸ್‌ವ್ಯಾಗನ್‌ನ ಆಡಿ, ಪಸ್ಯಾಟ್ , ಜೆಟ್ಟಾ ಸೇರಿದಂತೆ ೮ ಮಾದರಿಯ ಕಾರುಗಳನ್ನು ಅಸೆಂಬಲ್ ಮಾಡುತ್ತಾರೆ. ಕಾರನ್ನು ಪರಿಚಯಿಸುವುದರ ಮೂಲಕ. ಮರು ವರ್ಷವೇ ಜೆಟ್ಟಾ ಕಾರನ್ನು ಬಿಡುಗಡೆಗೊಳಿಸಿತು. ದೇಶದಲ್ಲಿ ತನ್ನ ಕಾರುಗಳು ಜನರ ಮನಸೂರೆಗೊಳ್ಳುತ್ತಿದ್ದಂತೆ ವೋಕ್ಸ್‌ವ್ಯಾಗನ್ ಇಲ್ಲಿಯೇ ಮೊದಲ ಉತ್ಪಾದನೆ ಘಟಕವನ್ನು ಆರಂಭಿಸಲು ತೀರ್ಮಾನಿಸಿತು. ಯಾಕೆಂದರೆ ಜರ್ಮನಿಯಲ್ಲೋ, ಬೇರೆಲ್ಲೊ ಬಿಡಿ ಭಾಗಗಳನ್ನು ಉತ್ಪಾದಿಸಿ ಭಾರತಕ್ಕೆ ತಂದು ಜೋಡಿಸಿ ಮಾರಾಟ ಮಾಡುವುದಕ್ಕಿಂತ ಇಲ್ಲಿಯೇ ಉತ್ಪಾದಿಸಿದರೆ ಖರ್ಚು ಉಳಿತಾಯವಾಗುತ್ತದೆ. ವ್ಯಾಪಾರ ಲಾಭದಾಯಕವಾಗುತ್ತದೆ. ಬೇಕಾದರೆ ರಫ್ತನ್ನೂ ಇಲ್ಲಿಂದಲೇ ಮಾಡಬಹುದು. ಹೀಗಾಗಿ ಸಾಕಷ್ಟು ಹುಡುಕಾಟ, ರಾಜ್ಯ ಸರಕಾರಗಳ ಜತೆ ಮಾತುಕತೆಯ ಕಸರತ್ತಿನ ನಂತರ ಮಹಾರಾಷ್ಟ್ರದ ಪುಣೆಯಲ್ಲಿನ ಚಕಾನ್‌ನ್ನು ವೋಕ್ಸ್ ವ್ಯಾಗನ್ ಆಯ್ಕೆ ಮಾಡಿಕೊಂಡಿತು. ಚಕಾನ್‌ನಲ್ಲಿ ವೋಕ್ಸ್‌ವ್ಯಾಗನ್‌ಗೆ ದಕ್ಕಿದ ಕೈಗಾರಿಕಾ ಪ್ರದೇಶ ವಿಸ್ತಾರವಾಗಿದ್ದರೂ ಬಹುತೇಕ ಬರಡು ನೆಲವಾಗಿತ್ತು.
ಅಂತೂ ೨೦೦೬ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಕಂಪನಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕೇವಲ ಮೂವತ್ತು ದಿನಗಳಲ್ಲಿ ನೆಲವನ್ನು ತಟ್ಟುಗೊಳಿಸಿ ಪೈಂಟ್ ಶಾಪ್, ಬಾಡಿ ಶಾಪ್, ಅಸೆಂಬ್ಲಿ ಮತ್ತು ಲಾಜಿಸ್ಟಿಕ್ ವಿಭಾಗವನ್ನು ನಿರ್ಮಿಸಲಾಯಿತು. ೨೦೦೮ರ ಅಕ್ಟೋಬರ್ ಹೊತ್ತಿಗೆ ಘಟಕದ ಎಲ್ಲ ವಿಭಾಗಗಳಿಗೆ ಬೇಕಾದ ಪರಿಕರಗಳನ್ನು ತಂದು ಜೋಡಿಸಲಾಯಿತು. ನವೆಂಬರ್‌ನಲ್ಲಿ ಮೊದಲ ಬಾರಿಗೆ ಬಾಡಿ ಶಾಪ್ ಮತ್ತು ಅಸೆಂಬ್ಲಿ ಕಾರ್ಯಾರಂಭ ಮಾಡಿತು. ಈ ವರ್ಷ ಜನವರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪೇಯಿಂಟ್ ಮಾಡಿದ ಕಾರಿನ ಬಾಡಿಯನ್ನು ಉತ್ಪಾದಿಸಲಾಯಿತು. ಮಾರ್ಚ್‌ನಲ್ಲಿ ಘಟಕವನ್ನು ಮಹಾರಾಷ್ಟ್ರದ ರಾಜ್ಯಪಾಲ ಎಸ್.ಸಿ ಜಮೀರ್ ಉದ್ಘಾಟಿಸಿದರು. ಮೊನ್ನೆ ಡಿ. ೧೨ರಂದು ಮಧ್ಯಮ ಶ್ರೇಣಿಯ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಲಾಯಿತು. ಹೊಸ ವರ್ಷದ ಜನವರಿಯಲ್ಲಿ ಪೊಲೊ ಕಾರು ಭಾರತದ ರಸ್ತೆಗಿಳಿಯಲಿದೆ. ನಿಜ. ಮಹಾರಾಷ್ಟ್ರ ಸರಕಾರ ವೋಕ್ಸ್ ವ್ಯಾಗನ್ ಕಂಪನಿಗೆ ನೆಲ, ನೀರು, ಕರೆಂಟು ಸೇರಿದಂತೆ ಸಕಲ ನೆರವನ್ನೂ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಆದರೆ ಅದೊಂದೇ ಕಂಪನಿಯ ಕಾರುಬಾರಿಗೆ ಸಾಕಾಗುವುದಿಲ್ಲ. ಗುಣಮಟ್ಟ ಕಾಯ್ದುಕೊಳ್ಳುವಿಕೆ, ಸತತ ಪರಿಶ್ರಮ, ಸಂಶೋಧನೆ ಮತ್ತು ತ್ವರಿತ ಅಭಿವೃದ್ಧಿ , ತಂತ್ರಗಾರಿಕೆ ಹಾಗೂ ನಾಯಕತ್ವದ ಪರಿಣಾಮವಾಗಿ ವೋಕ್ಸ್ ವ್ಯಾಗನ್ ಇವತ್ತು ಒಂದಾದ ಮೇಲೊಂದರಂತೆ ಮೈಲುಗಲ್ಲು ಸ್ಥಾಪಿಸುತ್ತಿದೆ.

ಬಜಾಜ್ ಸ್ಕೂಟರ್ ಯುಗಾಂತ್ಯ !

ಹಮಾರಾ ಬಜಾಜ್ !
ಈ ಹೆಸರು ಕೇಳಿದೊಡನೆ ೬೦,೭೦ ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ ಸ್ಕೂಟರ್ ಮೇಲೆ ತವರಿಗೆ ಜುಮ್ಮಂತ ಸವಾರಿ ಮಾಡುತ್ತಿದ್ದ ಕಾಲವದು. ಅಂತಹ ಸಂಚಲನ ಸೃಷ್ಟಿಸಿದ್ದ ಬಜಾಜ್ ಸ್ಕೂಟರ್‌ನ ಗತ ವೈಭವದತ್ತ ಒಂದು ನೋಟ..
ಪುಣೆಯಲ್ಲಿ ೧೯೪೫ರ ನವೆಂಬರ್ ೨೯ರಂದು ಅಸ್ತಿತ್ವಕ್ಕೆ ಬಂದ ಬಚಾರ್ಜ್‌ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಮುಂದೆ ಬಜಾಜ್ ಆಟೊ ಎಂದು ಹೆಸರಾಯಿತು. ಆರಂಭದಲ್ಲಿ ಕಂಪನಿ ದ್ವಿಚಕ್ರ ವಾಹನಗಳನ್ನು ಆಮದು ಮಾಡಿ ದೇಶದಲ್ಲಿ ಮಾರಾಟ ಮಾಡುತ್ತಿತ್ತು. ೧೯೫೯ರಲ್ಲಿ ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳ ಉತ್ಪಾದನೆಗೆ ಭಾರತ ಸರಕಾರದಿಂದ ಕಂಪನಿ ಪರವಾನಗಿ ಪಡೆಯಿತು.
ಆರಂಭದಲ್ಲಿ ಬಜಾಜ್ ಕಂಪನಿಯು ಇಟಲಿ ಮೂಲದ ಪ್ಯಾಶಿಯೋ ಕಂಪನಿಯ ವೆಸ್ಪಾ ಸ್ಕೂಟರ್‌ನ್ನು ಆಮದು ಮಾಡಿಕೊಳ್ಳುತ್ತಿತ್ತು. ೧೯೬೦ರಲ್ಲಿ ಈ ಕಂಪನಿಯ ಸಹಭಾಗಿತ್ವದಲ್ಲಿ ಬಜಾಜ್ ಅದೇ ಗುಣಮಟ್ಟ ಮತ್ತು ತಾಂತ್ರಿಕತೆಯೊಂದಿಗೆ ಸ್ಕೂಟರನ್ನು ಉತ್ಪಾದಿಸಲಾರಂಭಿಸಿತು. ಆದರೆ ಇಂದಿರಾ ಗಾಂಯವರ ಖಾಸಗೀಕರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ಯಾಶಿಯೊ ಜತೆಗಿನ ಒಪ್ಪಂದ ನವೀಕರಣವಾಗಲಿಲ್ಲ. ಸಹಭಾಗಿತ್ವ ಮುಗಿದ ನಂತರ ಬಜಾಜ್ ತನ್ನದೇ ಬ್ರ್ಯಾಂಡ್, ವಿನ್ಯಾಸದಲ್ಲಿ ೧೯೭೨ರಲ್ಲಿ ಸ್ಕೂಟರ್ ಉತ್ಪಾದನೆ ಆರಂಭಿಸಿತು. ಅದರ ಹೆಸರೇ ಚೇತಕ್ !
ಬಜಾಜ್‌ನ ಸ್ವದೇಶಿ ನಿರ್ಮಿತ ಸ್ಕೂಟರ್‌ಗೆ ಆ ಚೇತಕ್ ಹೆಸರು ಬರಲು ಕಾರಣ ಮೇವಾಡದ ರಜಪೂತ ದೊರೆ, ಕದನಕಲಿ ರಾಣಾ ಪ್ರತಾಪ್ ಸಿಂಗ್‌ನ ನೆಚ್ಚಿನ ಕುದುರೆ ! ಸಮರಭೂಮಿಯಲ್ಲಿ ಒಡೆಯನಿಗೆ ಸದಾ ನೆರವಾಗುತ್ತಿದ್ದ ಕುದುರೆ ಅತ್ಯಂತ ಚುರುಕು ಮತ್ತು ಬಲಶಾಲಿಯಾಗಿತ್ತು. ಆರಂಭದಲ್ಲಿ ೨ ಸ್ಟ್ರೋಕ್, ನಂತರ ೪ ಸ್ಟ್ರೋಕ್ ಅಂತ ಸ್ಕೂಟರ್‌ನ ಸಾಮರ್ಥ್ಯ, ವಿನ್ಯಾಸ ಬದಲಾಯಿತು. ೧೯೮೦ರಲ್ಲಿ ಅಮೆರಿಕದಲ್ಲಿ ೪ ಸ್ಟ್ರೋಕ್ ಸ್ಕೂಟರನ್ನು ಮಾರಲು ಕಂಪನಿ ಯತ್ನಿಸಿದರೂ ಯಶ ಕಾಣಲಿಲ್ಲ.
೬೦ರ ದಶಕದಿಂದ ತೀರಾ ೨೦೦೦ರ ತನಕ ಕೂಡ ಬಜಾಜ್ ಸ್ಕೂಟರ್‌ನಲ್ಲಿ ನಾನಾ ವಿಧಗಳು ಮಾರುಕಟ್ಟೆಗೆ ಬಂದಿವೆ. ಬಜಾಜ್ ಚೇತಕ್‌ನಿಂದ (೧೯೭೨) ಮೊದಲ್ಗೊಂಡು ಬಜಾಜ್ ಸೂಪರ್ (೧೯೭೬), ಬಜಾಜ್ ಸನ್ನಿ (೧೯೯೦) ೨೦೦೦ದಲ್ಲಿ ಬಜಾಜ್ ಸಫಾರಿ ಎಂಬ ಗೇರ್ ರಹಿತ ಸ್ಕೂಟರ್ ಸೇರಿದಂತೆ ನಾನಾ ಬಗೆಯ, ಬಣ್ಣ ಹಾಗೂ ಸಾಮರ್ಥ್ಯದ ಸ್ಕೂಟರ್ ಮಾರುಕಟ್ಟೆಗೆ ಬಂದಿತ್ತು.
೧೯೭೦ರಲ್ಲಿ ಬಜಾಜ್ ಕಂಪನಿ ೧ ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ೧೯೮೬ರಲ್ಲಿ ೫ ಲಕ್ಷ ವಾಹನಗಳನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು. ೧೯೯೫ರಲ್ಲಿ ೧೦ ಲಕ್ಷ ವಾಹನಗಳನ್ನು ಮಾರಾಟ ಮಾಡಿತು. ಸ್ಕೂಟರ್‌ನ ಮಾರಾಟಕ್ಕೆ ‘ ಹಮಾರಾ ಬಜಾಜ್ ’ ಎಂಬ ಪ್ರಚಾರಾಂದೋಲನವನ್ನು ಕಂಪನಿ ನಡೆಸಿತ್ತು.
‘ ನಾನು ೧೫ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಜಾಜ್ ಚೇತಕ್ ಸ್ಕೂಟರ್ ಖರೀದಿಸಿದೆ. ಅಂದಿನಿಂದ ಇವತ್ತಿನ ತನಕ ಅದು ನನ್ನ ಸಂಗಾತಿಯಾಗಿದೆ. ಇದುವರೆಗೆ ನಾನೇ ಅದಕ್ಕೆ ಸಣ್ಣ ಪುಟ್ಟ ತೊಂದರೆ ಕೊಟ್ಟಿರಬಹುದೇ ವಿನಾ, ಅದರಿಂದ ನನಗೇ ಏನೂ ತೊಂದರೆಯಾಗಿಲ್ಲ..’
ಹಮಾರಾ ಬಜಾಜ್ ಸ್ಕೂಟರ್‌ನ ಮಹಿಮೆ ಬಗ್ಗೆ ಹೀಗೆನ್ನುತ್ತಾರೆ ನಾಗಲಿಂಗ ಬಡಿಗೇರ್. ಅವರು ೧೯೯೪ರಲ್ಲಿ ಸ್ಕೂಟರ್‌ನ್ನು ೨೨,೫೦೦ ರೂ.ಗೆ ಖರೀದಿಸಿದ್ದರು. ಆವತ್ತಿನ ದಿನಗಳಲ್ಲಿ ೫೩ ಕಿ.ಮೀ ಮೈಲೇಜ್ ಕೊಡುತ್ತಿತ್ತು. ಈಗಲೂ ೪೩ಕ್ಕೆ ಕೊರತೆ ಇಲ್ಲ ಎನ್ನುತ್ತಾರೆ ಬಡಿಗೇರ್. ನಾನು, ಪತ್ನಿ ಮತ್ತು ಇಬ್ಬರು ಮಕ್ಕಳು ಬಜಾಜ್ ಸ್ಕೂಟರ್‌ನಲ್ಲಿ ಓಡಾಡಿರುವುದಕ್ಕೆ ಲೆಕ್ಕ ಸಿಗುವುದಿಲ್ಲ. ಈಗಲೂ ಯಾರಿಗೂ ಸ್ಕೂಟರನ್ನು ಮಾರಲು ನಾನು ಸಿದ್ಧನಿಲ್ಲ. ಅಷ್ಟೊಂದು ಭಾವನಾತ್ಮಕ ಸಂಬಂಧ ಅದರ ಮೇಲಿದೆ. ಇನ್ನು ಮುಂದೆ ಸ್ಕೂಟರ್ ಉತ್ಪಾದನೆ ನಿಂತು ಹೋದರೆ ಬಿಡಿ ಭಾಗವಾದರೂ ಸಿಗುತ್ತಾ ? ಎನ್ನುತ್ತಾರೆ ಬಡಿಗೇರ್.
ಆದರೆ ೯೦ರ ದಶಕದ ನಂತರ ಉದಾರೀಕರಣ ನೀತಿಯಿಂದ ಆರ್ಥಿಕತೆ ಸುಧಾರಣೆಯತ್ತ ತಿರುಗಿತು. ಹೀಗಾಗಿ ಗ್ರಾಹಕರ ಆಯ್ಕೆಯಲ್ಲಿ ಮಹತ್ತರ ಬದಲಾವಣೆಯಾಯಿತು. ಸಾಲದ್ದಕ್ಕೆ ಬೈಕ್‌ಗಳು ಜನಪ್ರಿಯವಾಗತೊಡಗಿತು. ಸ್ಕೂಟರ್‌ನತ್ತ ಜನರ ಆಸಕ್ತಿ ಕಡಿಮೆಯಾಯಿತು. ಹೀರೊ ಹೊಂಡಾ, ಟಿವಿಎಸ್, ಯಮಾಹಾ ಮುಂತಾದ ಕಂಪನಿಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟವು. ಕೊನೆಯ ದಿನಗಳಲ್ಲಿ ಬಜಾಜ್ ಕಂಪನಿ ತಿಂಗಳಿಗೆ ಅಂದಾಜು ೧ ಸಾವಿರ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿತ್ತು. ಅದೂ ಬಹುತೇಕ ರಫ್ತಿಗೆ ಸೀಮಿತವಾಗಿತ್ತು. ಹೀಗಾಗಿ ಇನ್ನು ಸ್ಕೂಟರ್ ಉತ್ಪಾದನೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಕಂಪನಿ ಭಾವಿಸಿತು. ಮುಂಬರುವ ಮಾರ್ಚ್‌ನಿಂದ ಸ್ಕೂಟರ್ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಬಜಾಜ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ. ಮೂರು ವರ್ಷಗಳ ಹಿಂದೆಯೇ ಬಜಾಜ್ ಚೇತಕ್ ಸ್ಕೂಟರ್ ಉತ್ಪಾದನೆ ನಿಂತು ಹೋಗಿತ್ತು.

Wednesday 9 December 2009

ಆರ್ಕುಟ್‌ನಲ್ಲಿ ಎನ್ನಾರ್ ನಾರಾಯಣ ಮೂರ್ತಿ

ಗೂಗಲ್ ಸರ್ಚ್ ಎಂಜಿನ್‌ನ ಅಂಗವಾದ ಆರ್ಕುಟ್ ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಇಷ್ಟೊಂದು ವೈವಿಧ್ಯತೆ ಹಾಗೂ ಸ್ವಾರಸ್ಯ ಇದೆ ಎಂದು ನನಗೆ ಈ ತನಕ ಗೊತ್ತೇ ಇರಲಿಲ್ಲ. ಕೆಲ ಸಹೋದ್ಯೋಗಿಗಳು, ಬಂಧು ಮಿತ್ರರು ಆರ್ಕುಟ್‌ನಲ್ಲಿ ಮುಳುಗಿರುವುದನ್ನು ನೋಡಿದಾಗ ಅವರ ಬಗ್ಗೆಯೇ ‘ ಇವರಿಗೆ ಬೇರೆ ಕೆಲ್ಸ ಇಲ್ಲಂತ ಕಾಣ್ಸುತ್ತೆ ’ ಎಂದು ತಪ್ಪಾಗಿ ಭಾವಿಸಿದ್ದುಂಟು. ಆದರೆ ನಿಜಕ್ಕೂ ಈ ಉಚಿತ ಆರ್ಕುಟ್ ನೆಟ್‌ವರ್ಕ್‌ನ ಉಪಯೋಗ ಸಾಕಷ್ಟಿದೆ.
ಅಂದಹಾಗೆ ಇನ್ನು ಮುಂದೆ ಆರ್ಕುಟ್‌ನೊಳಗೆ ವೀಕ್ಷಣೆಯ ವೇಳೆ ನನಗೆ ಕಂಡದ್ದನ್ನು ನಿಯಮಿತವಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಇದು ನಿಮಗೆ ಇಷ್ಟವಾದೀತು ಎಂದು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆ, ಅನಿಸಿಕೆಯನ್ನೂ ನಂಗೆ ತಿಳಿಸುವಿರಾ..
ಇವತ್ತು ಇನೋಸಿಸ್‌ನ ಮುಖ್ಯ ಮಾರ್ಗದರ್ಶಕ ಎನ್‌ಆರ್ ನಾರಾಯಣ ಮೂರ್ತಿ ಅವರ ಅಭಿಮಾನಿಗಳು ಮೂರ್ತಿ ಬಗ್ಗೆ ರಚಿಸಿದ ಆರ್ಕುಟ್ ಪುಟವನ್ನು ವೀಕ್ಷಿಸಿದೆ. ನಾಗವಾರ ರಾಮರಾವ್ ನಾರಾಯಣ ಮೂರ್ತಿ - ಭಾರತದಲ್ಲಿ ಅತಿ ದೊಡ್ಡ ಐಟಿ ಸಾಮ್ರಾಜ್ಯವನ್ನು ಕಟ್ಟಿದ್ದಕ್ಕೆ ಮಾತ್ರವೇ ಅವರು ಪ್ರಸಿದ್ಧರಲ್ಲ, ಸರಳತೆಗೂ ಅವರು ಹೆಸರಾಗಿದ್ದಾರೆ ಎನ್ನುತ್ತದೆ ವಿವರಣೆ. ೨೦೦೪ರ ಡಿಸೆಂಬರ್ ೩ರಂದು ರಚನೆಯಾದ ಈ ತಾಣಕ್ಕೆ ೪,೯೩೬ ಸದಸ್ಯರಿದ್ದಾರೆ.
ಎನ್ನಾರ್ ನಾರಾಯಣ ಮೂರ್ತಿಯವರ ಸಂಕ್ಷಿಪ್ತ ಪರಿಚಯ ಹಾಗೂ ಅವರ ಬಗ್ಗೆ ನೂರಾರು ಮಂದಿ ಅಭಿಪ್ರಾಯಗಳನ್ನು ಬರೆದಿದ್ದಾರೆ. ೨೦೦೭ರ ಮೂರ್ತಿಯವರು ರಾಷ್ಟ್ರಪತಿಯಾದರೆ ಭಾರತ ಹೈಟೆಕ್ ದೇಶ ಆಗುತ್ತಾ ಎಂಬ ಪ್ರಶ್ನೆಯನ್ನು ಮತಕ್ಕೆ ಹಾಕಿದಾಗ ೩೦೭ ಮಂದಿ ಪ್ರತಿಕ್ರಿಯಿಸಿದ್ದು( ಈ ತನಕ ), ಅವರಲ್ಲಿ ೨೧೨ ಮಂದಿ ಹೌದು ಎಂದಿದ್ದಾರೆ. ೬೨ ಮಂದಿ ಮೂರ್ತಿ ರಾಷ್ಟ್ರಪತಿಯಾಗುತ್ತಾರೋ ಎಂದು ನೋಡೋಣ ಎಂದಿದ್ದಾರೆ. ೩೩ ಮಂದಿ ಏನನ್ನೂ ಹೇಳಲಾಗದು ಎಂದಿದ್ದಾರೆ.
ನಾರಾಯಣಮೂರ್ತಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದರೆ ಏನು ಗಿಫ್ಟ್ ಕೊಡುತ್ತೀರಿ ? ಎಂಬ ಪ್ರಶ್ನೆಗೆ, ಮೂರ್ತಿಯವರ ದೋಸ್ತಿಗಳಿಗೆ ಔತಣಕೂಟ ಏರ್ಪಡಿಸುತ್ತೇನೆ ಎನ್ನುತ್ತಾನೆ ಒಬ್ಬ. ಅದಕ್ಕೆ ಮತ್ತೊಬ್ಬ ‘ ಒಳ್ಳೆಯದೇ, ಆದರೆ ಗಿಫ್ಟ್ ಅಂತ ಏನಾದ್ರೂ ಕೊಟ್ಟರೆ ಒಳ್ಳೇದು ’ ಅಂತಾನೆ. ಮತ್ತೊಬ್ಬ ಎನ್ನಾರ್ ಮೂರ್ತಿಯವರ ಆತ್ಮಕಥೆ ಇದೆಯೇ ಎನ್ನುತ್ತಾನೆ. ನಾರಾಯಣ ಮೂರ್ತಿ, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಪೈಕಿ ಯಾರು ಬೆಸ್ಟ್ ಉದ್ಯಮಿ ಎಂಬ ಪ್ರಶ್ನೆಯನ್ನು ಮತಕ್ಕೆ ಹಾಕಲಾಗಿದೆ.
ಹೀಗಿದ್ದರೂ ತಾಣದಲ್ಲಿ ಗಂಭೀರ ಹಾಗೂ ಸಂಗ್ರಹಯೋಗ್ಯ ಚರ್ಚೆಯಾಗಲಿ, ವಿಚಾರ ವಿನಿಮಯವಾಗಲಿ ನಡೆದಿಲ್ಲ. ಆದರೆ ನಡೆಸಬಹುದಿತ್ತು ಎಂದು ನನಗನ್ನಿಸಿತು

( ಚಿತ್ರದಲ್ಲಿರುವವರು ಯಾರೆಂದು ಗೊತ್ತಾಯಿತೇ ?
ಸುಧಾ ಮೂರ್ತಿ, ನಾರಾಯಣ ಮೂರ್ತಿ, ನಂದನ್ ನೀಲೇಕಣಿ, ರೋಹಿಣಿ ನೀಲೇಕಣಿ )

Saturday 5 December 2009

೨.೧ ಕೋಟಿ ಮೊಬೈಲ್ ಡೆಡ್..ಮುಂದ ?

ದೇಶದಲ್ಲಿ ಒಟ್ಟು ೨.೧ ಕೋಟಿ ಮೊಬೈಲ್‌ಗಳ ಸದ್ದಡಗಿ ಮೂರು ದಿನಗಳು ಕಳೆದಿವೆ. ಇತ್ತ ಬೆಂಗಳೂರಿನ ಜಯನಗರದ ಒಂಬತ್ತನೇ ಬ್ಲಾಕ್‌ನಲ್ಲಿರುವ ಜೈ ಶಂಕರ್ ತಮ್ಮ ಮೊಬೈಲ್ ಫೋನ್ ಸರ್ವೀಸ್ ಸೆಂಟರ್‌ನಲ್ಲಿ ಹಗಲು ರಾತ್ರಿ ಎನ್ನದೆ ಬ್ಯುಸಿಯಾಗಿದ್ದಾರೆ. ಅವರ ಮೊಬೈಲ್ ನಿರಂತರ ರಿಂಗಣಿಸುತ್ತಿದೆ. ಅವರೆಲ್ಲರದ್ದೂ ಒಂದೇ ದೂರು.
ಸಾರ್, ನಮ್ಮ ಮೊಬೈಲ್ ನಿಂತು ಹೋಗಿದೆ. ಔಟ್ ಗೋಯಿಂಗ್ ಇಲ್ಲ, ಇನ್‌ಕಮಿಂಗೂ ಇಲ್ಲ. ಏನ್ ಮಾಡ್ಬೇಕು ಸಾ... ಮೊಬೈಲಿಲ್ಲದೆ ಯಾವ ಕೆಲ್ಸಾನೂ ನಡೀತಿಲ್ಲ... ಇತ್ತ ಕಡೆಯಿಂದ ಜೈ ಶಖರ್ ಇದಕ್ಕೆ ಏನು ಮಾಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಚಕಚಕನೆ ಮೊಬೈಲ್‌ಗಳಿಗೆ ಹೊಸ ಗುರುತಿನ ಸಂಖ್ಯೆಯನ್ನು ನೀಡುತ್ತಾರೆ. ಇದು ಆನ್‌ಲೈನ್ ಮೂಲಕ ೨೦ ಸೆಕೆಂಡ್‌ನೊಳಗೆ ನಡೆಯುವ ಕೆಲಸ. ಆದರೂ ಗ್ರಾಹಕನ ಛಾಯಾಚಿತ್ರ, ಗುರುತಿನ ದಾಖಲೆಯನ್ನು ಪರಿಶೀಲಿಸಿ, ಬಿಲ್ ಪಡೆದು ಮೊಬೈಲನ್ನು ಹಿಂತಿರುಗಿಸುವ ಹೊತ್ತಿಗೆ ಕನಿಷ್ಠ ಹದಿನೈದು ನಿಮಿಷ ಬೇಕಾಗುತ್ತದೆ.
ಇನ್ನು ಮುಂದೆ ವಾಹನಗಳಿಗೆ ನಂಬರ್ ಪ್ಲೇಟ್ ಇರುವಂತೆ ಪ್ರತಿ ಮೊಬೈಲ್‌ಗೂ ಹದಿನೈದು ಅಂಕಿಗಳ ಐಎಂಇಐ (ಇಂಟರ್‌ನ್ಯಾಶನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ) ಕಡ್ಡಾಯ. ಇಲ್ಲವಾದಲ್ಲಿ ಅವುಗಳು ಯಾವ ಸಿಮ್ ಹಾಕಿದರೂ ಕೆಲಸ ಮಾಡಲ್ಲ. ಹೀಗಾಗಿ ಗೊತ್ತಿದ್ದೊ ಇಲ್ಲದೆಯೊ ಐಎಂಇಎ ಖರೀದಿಸಿದ್ದ ಲಕ್ಷಾಂತರ ಮಂದಿ, ಇದೀಗ ಮೊಬೈಲ್ ಸರಿ ಹೋದರೆ ಸಾಕೆಂದು ಮೊಬೈಲ್ ಮಳಿಗೆಗಳನ್ನು ಎಡತಾಕುತ್ತಿದ್ದಾರೆ. ಅನೇಕ ಮಂದಿ ಗೊಂದಲದಿಂದ ಪರದಾಡುತ್ತಿದ್ದಾರೆ.
ದೂರಸಂಪರ್ಕ ಇಲಾಖೆಯ ಆದೇಶದಂತೆ ನವೆಂಬರ್ ಮಧ್ಯರಾತ್ರಿಯಿಂದ ಐಎಂಇಎ ಸಂಖ್ಯೆ ಇಲ್ಲದ ಮೊಬೈಲ್‌ಗಳು ಸ್ಥಗಿತವಾಗಿವೆ. ಆದರೆ ಇದನ್ನು ಏನು ಮಾಡಬೇಕು ? ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಬಳಕೆದಾರರಲ್ಲಿ ಮಾಹಿತಿಯ ಕೊರತೆ ಇದೆ. ಉದಾಹರಣೆಗೆ ಸ್ಥಗಿತಗೊಂಡಿರುವ ಮೊಬೈಲ್ ಸಂಖ್ಯೆ ೨.೧ ಕೋಟಿ ಹಾಗೂ ಇದರಲ್ಲಿ ರಾಜ್ಯದಲ್ಲಿ ಶೇ.೪೦ರಷ್ಟಿದೆ ಎನ್ನುತ್ತಾರೆ ದಕ್ಷಿಣ ಭಾರತದಲ್ಲಿ ವಿಭಾಗದ ಐಎಂಇಐ ವಿತರಣೆಯನ್ನು ನಿರ್ವಹಿಸುತ್ತಿರುವ ಪ್ರಸಾದ್ ಎನ್.ವಿಎಸ್ ತಲೂರಿ.
ಆದರೆ ಬೆಂಗಳೂರಿನಲ್ಲಿ ಕೇವಲ ಐವತ್ತು ಚಿಲ್ಲರೆ ಐಎಂಇಐ ಗುರುತಿನ ಸಂಖ್ಯೆ ಕೊಡುತ್ತಾರೆ. ಇದನ್ನೆಲ್ಲ ಹೇಗೊ ಮ್ಯಾನೇಜ್ ಮಾಡಲಾಗುತ್ತಿದೆ. ಆದರೆ ಸ್ವಾರಸ್ಯ ಏನೆಂದರೆ ದೇಶದ ಭದ್ರತೆಯ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಈ ಪ್ರಕ್ರಿಯೆಯೇ ಕೋಟ್ಯಂತರ ರೂ. ವಹಿವಾಟಾಗಿ ಪರಿವರ್ತನೆಯಾಗಿದೆ.
ವಹಿವಾಟು ಕೋಟ್ಯಂತರ : ಪ್ರತಿ ಗ್ರಾಹಕ ಐಎಂಇಐ ಸಂಖ್ಯೆಯನ್ನು ಪಡೆಯಲು ೧೯೯ ರೂ. ಶುಲ್ಕ ನೀಡಬೇಕು. ಅಂದರೆ ಸಾವಿರಾರು ಕೋಟಿ ರೂ.ಗಳ ಬಿಸಿನೆಸ್ ಖಚಿತ. ಈ ಗುರುತಿನ ಸಂಖ್ಯೆ ಕೊಡುವವರು ಒಂದು ಪ್ರಿಂಟರ್, ಕ್ಯಾಮೆರಾ, ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಹಾಗೂ ಇತರ ಸಣ್ಣ ಪುಟ್ಟ ಸಾಧನ ಹೊಂದಿದ್ದರೆ ಸಾಕು. ಹೀಗಾಗಿ ಲಾಭದಾಯಕಬಲ್ಲ ಈ ಬಿಸಿನೆಸ್‌ನ ಪರವಾನಗಿ ಪಡೆಯಲು ಮೊಬೈಲ್ ಸೇವೆ ನೀಡುವವರ ನಡುವೆ ಭಾರಿ ಪೈಪೋಟಿ ನಡೆದಿತ್ತು. ಕೊನೆಗೂ ಪರವಾನಗಿ ಪಡೆದವರು ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ಹೀಗಿದ್ದರೂ ಎಷ್ಟು ಸಾವಿರ ಕೋಟಿ ಬಿಸಿನೆಸ್ ನಡೆದೀತು ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಆದರೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಕನಿಷ್ಠ ೨೫ ಲಕ್ಷ ಮೊಬೈಲ್‌ಗಳು ಈಗ ನಿಷ್ಕ್ರಿಯವಾಗಿವೆ.
ಗೊಂದಲ : ದೂರಸಂಪರ್ಕ ಇಲಾಖೆಯು ಜಿಐಐ ಕಾರ್ಯಕ್ರಮವನ್ನು (ಜೀನೀನ್ ಐಎಂಇಐ ಇಂಪ್ಲಿಮೆಂಟ್ ಪ್ರೋಗ್ರಾಮ್ ) ನ.೩೦ಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಆರಂಭದಲ್ಲಿ ಆದೇಶ ಹೊರಡಿಸಿತ್ತು. ಆದರೆ ನ.೨೭ರಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ-ಸಿಇಎಐ ಜತೆ ಚರ್ಚಿಸಿದ ನಂತರ ಇಲಾಖೆ ಮತ್ತೊಂದು ನಿರ್ದೇಶನ ಹೊರಡಿಸಿತು. ಅದರ ಪ್ರಕಾರ ಐಎಂಇಐ ಇಲ್ಲದ ಮೊಬೈಲ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಐಎಂಇಐಯನ್ನು ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಿಲ್ಲ. ಹೀಗಾಗಿ ಗ್ರಾಹಕರು ಪರದಾಡುವ ಆವಶ್ಯಕತೆ ಇಲ್ಲ. ಸಾವಿರಾರು ರೂ. ಕೊಟ್ಟು ಖರೀದಿಸಿದ ಚೀನಾದ ಮೊಬೈಲನ್ನು ಹೋಯ್ತಲ್ಲಪ್ಪಾ ಎಂದು ತಪ್ಪಾಗಿ ಭಾವಿಸಬೇಕಿಲ್ಲ.
ಯಾಕೆ ಹೀಗಾಯಿತು ? ಚೀನಾದ ಬಹುತೇಕ ಕಂಪನಿಗಳು ಸೇರಿದಂತೆ ಹಲವು ಮೊಬೈಲ್ ಬ್ರಾಂಡ್‌ಗಳಲ್ಲಿ ನಕಲಿ ಐಎಂಇಐ ಸಂಖ್ಯೆಯನ್ನು ಅಳವಡಿಸಲಾಗಿತ್ತು. ಒಂದೇ ರೀತಿಯ ಲಕ್ಷಗಟ್ಟಲೆ ಗುರುತಿನ ಸಂಖ್ಯೆಯನ್ನು ನೀಡಲಾಗಿತ್ತು. ಆದರೆ ಇದರಿಂದ ಭಯೋತ್ಪಾದನೆ ಮುಂತಾದ ಪ್ರಕರಣಗಳ ತನಿಖೆ ವೇಳೆ ಅಪರಾಧಿಗಳನ್ನು ಅವರ ಮೊಬೈಲ್ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಇದರಿಂದ ತನಿಖೆಯ ಹಾದಿಯೂ ತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಅಸಲಿ ಗುರುತಿನ ಸಂಖ್ಯೆ ನೀಡಲಾಗುತ್ತಿದೆ.
ಐಎಂಇಐ ಪತ್ತೆ ಹೇಗೆ ?
ನಿಮ್ಮ ಮೊಬೈಲ್‌ನಲ್ಲಿ ಅನುಕ್ರಮವಾಗಿ * #೦೬# ಒತ್ತಿರಿ. ತಕ್ಷಣ ೧೫ ಅಂಕಿಗಳ ಐಎಂಇಐ ಸಂಖ್ಯೆ ಕಾಣಿಸುತ್ತದೆ. ಅಕಸ್ಮಾತ್ ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಿಷ್ಕ್ರಿಯವಾಗಿರುತ್ತದೆ

Wednesday 2 December 2009

ಊರಿನ ಮತ್ತು ಬೆಂಗಳೂರಿನ ಹೊಗೆಯ ವ್ಯತ್ಯಾಸ !

ಕೆಲವು ದಿನಗಳಿಂದೀಚೆಗೆ ಬೆಳಗ್ಗೆ ಸ್ವಲ್ಪ ಚಳಿ ಜಾಸ್ತಿಯಾಗಿದೆ. ಎಂಟು ಗಂಟೆಗೆ ಆಕ್ಟಿವಾದಲ್ಲಿ ಕಚೇರಿಗೆ ತೆರಳುವಾಗ ಮೈಸೂರು ರಸ್ತೆಯಲ್ಲಿ ಮಂಜು ಕವಿದ ದೃಶ್ಯವನ್ನು ಕಾಣಬಹುದು. ಇವತ್ತು ನಾಯಂಡಹಳ್ಳಿಯ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿ ಟಯರನ್ನೋ, ಕಸಕಡ್ಡಿಯನ್ನೋ ಹೊತ್ತಿಸಿದ್ದ ಹೊಗೆ ಏಳುತ್ತಿತ್ತು. ಜತೆಗೆ ಮಂಜು ಕೂಡಾ ಇತ್ತು. ನನಗೇಕೊ ಪುತ್ತೂರಿನ ಊರಿನ ಪರಿಸರ ತಟ್ಟನೆ ನೆನಪಾಯಿತು.
ಆ ನೆನಪೇ ಆಹ್ಲಾದಮಯ. ಆರ್ಲಪದವು, ವಾಟೆಡ್ಕ ಮುಂತಾದ ಕಡೆಗಳಲ್ಲಿ ಅತ್ತ ದಟ್ಟ ಕಾನನವೂ ಅಲ್ಲದ, ಇತ್ತ ಕರಾವಳಿಯೂ ಅಲ್ಲದ ಅರೆ ಮಲೆನಾಡಿನ ಪರಿಸರ ಇದೆ. ಬೆಳಗ್ಗೆ ಮಂಜು ಹಿತವಾಗಿರುತ್ತದೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಬಚ್ಚಲುಮನೆಗಳಲ್ಲಿ ಹಂಡೆಯಲ್ಲಿ ನೀರು ಕಾಯಿಸುತ್ತಾರೆ. ತೆಂಗಿನ ಮಡಲು, ಕರಟ ಮತ್ತು ಅಡಿಕೆ ಸಿಪ್ಪೆ, ಸೋಗೆಯನ್ನು ಒಲೆಗೆ ತುರುಕುತ್ತಾರೆ. ಎರಡು ಚಮಚದಷ್ಟು ಸೀಮೆ ಎಣ್ಣೆಯನ್ನು ಎರೆದು ಬೆಂಕಿ ಕಡ್ಡಿ ಗೀರಿದರೆ ಭಗ್ಗನೆ ಬೆಂಕಿ ಹತ್ತಿಕೊಳ್ಳುತ್ತದೆ. ನಂತರ ಊದಬೇಕು. ಹೊಗೆ ಏಳುತ್ತದೆ. ಕೆಂಡವನ್ನು ಕೆದಕಿ ಬೆಂಕಿ ಎಬ್ಬಿಸಿ ಚಳಿ ಕಾಯಿಸುವ ಸುಖದೆದುರು ಇಡೀ ಜಗತ್ತೇ ತೃಣ ಸಮಾನವಾದಂತಾಗುತ್ತದೆ. ಆಗ ಕೈಯಲ್ಲಿ ಒಂದು ಕಪ್ಪು ಚಹಾ ಇಲ್ಲವೇ ಕಾಫಿ ಇದ್ದರಂತೂ ಪರಮಾನಂದ.
ಬೆಳಗ್ಗೆ ವಾಟೆಡ್ಕ, ಆರ್ಲಪದವು ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಚುಮುಚುಮು ಚಳಿಯಲ್ಲಿ ಒಂದು ವಾಕಿಂಗ್ ಹೋಗಬೇಕು. ಸಾಯಂಕಾಲವಾದರೆ ಗುಬ್ಬಚ್ಚಿಗಳ ಚಿಲಿಪಿಲಿ ಆಲಿಸುತ್ತ ಶುದ್ಧ ಗಾಳಿ ಸೇವಿಸುತ್ತ ಖುಷಿ ಪಡಬಹುದು. ಅಲ್ಲೊಂದು ಇಲ್ಲೊಂದು ಮನೆಗಳ ಮಾಡಿನಿಂದ ಏಳುತ್ತಿರುವ ಧೂಮ ರಾಶಿಯನ್ನೂ ಗಮನಿಸಬಹುದು. ಸಸ್ಯರಾಶಿಯ ಮಧ್ಯೆ ಬಿಳಿ ಹೊಗೆಯ ಚಿತ್ತಾರದಂತೆ ಕಾಣುತ್ತದೆ. ಹೊಗೆಯೂ ಇಲ್ಲಿ ಸಹ್ಯವಾಗುತ್ತದೆ. ಪರಿಸರ ಮಾಲಿನ್ಯದ ಭಾವ ಸುಳಿಯೋದೇ ಇಲ್ಲ. ಆದರೆ ಬೆಂಗಳೂರಿನಲ್ಲಿ ? ಇರುವ ಮರಗಳೂ ಮೆಟ್ರೊ ರೈಲಿಗೆ ಬಲಿಯಾಗುತ್ತಿವೆ. ಎಲ್ಲಿ ನೋಡಿದರೂ ಟ್ರಾಫಿಕ್ ಮತ್ತು ವಾಹನಗಳು ಉಗುಳುವ ಹೊಗೆ. ಶ್ವಾಸ ಕೆಟ್ಟು ಹೋಗುವ ಅನುಭವ. ಎರಡೂ ಕಡೆಗಳಲ್ಲಿ ಹೊಗೆಯೇ ಆದರೂ ಎಷ್ಟೊಂದು ವ್ಯತ್ಯಾಸ ನೋಡಿ.
ಕಳೆದ ಶಿವ ರಾತ್ರಿಗೆ ಊರಿಗೆ ಹೋಗಿದ್ದಾಗ ಅತ್ತೆ ಮನೆಯಲ್ಲಿ ಬಚ್ಚಲು ಮನೆಯಲ್ಲಿ ತೆಂಗಿನ ಮಡಲನ್ನು ಒಲೆಗೆ ಹಾಕಿ ರಟ್ಟಿನ ತುಂಡಿನಲ್ಲಿ ಗಾಳಿ ಬೀಸಿ ಕಿಚ್ಚು ಆರದಂತೆ ನೋಡಿ ಬಿಸಿ ನೀರು ಕಾಯಿಸಿ ಮಿಂದಿದ್ದೆ. ಆ ಸ್ನಾನವನ್ನು ಮರೆಯಲಾಗುತ್ತಿಲ್ಲ. ವಾಹ್..ತಕ್ಷಣ ಮಂಗಳೂರಿನ ಬಸ್ಸು ಹತ್ತಿ ಊರ ಕಡೆ ಹೋಗ್ಬೇಕು ಅನ್ಸುತ್ತೆ..ಮತ್ತೆ ಶಿವರಾತ್ರಿ ಸಮೀಪಿಸಿದೆ...ಆದರೆ ಮಾಡೋದೇನು..ಈ ಸಲ ರಜೆ ಸಿಗುತ್ತಾ ಇಲ್ವೋ ಗೊತ್ತಿಲ್ಲ.
ಚಿತ್ರ ಸಾಂದರ್ಭಿಕ

Tuesday 1 December 2009

ಮನೆಯೇ ಗ್ರಂಥಾಲಯ

ಜನ ಅಕ್ಕಿ ಬೇಳೆಯಂತೆ ಪುಸ್ತಕ ಕೊಳ್ಳಲಿ !
ಮನೆಯಲ್ಲಿ ಅಕ್ಕಿ , ಬೇಳೆ ಥರಾನೇ...ಪುಸ್ತಕ ಇರಬೇಕು. ಸಾಹಿತ್ಯ ಬಡವನ ಅನ್ನ. ಬದುಕಿನ ಸಂತೋಷದ ದಾರಿದೀಪಗಳೇ ಪುಸ್ತಕಗಳು.
ಮನೆಯಲ್ಲಿ ಪುಸ್ತಕ ಯಾಕಿರಬೇಕು ಎಂಬ ಪ್ರಶ್ನೆಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ವಿವರಿಸಿದ್ದು ಹೀಗೆ.

ಯಾವುದೇ ವಿಷಯ ಇರಬಹುದು. ಪುಸ್ತಕಗಳು ಮೌಲ್ಯಗಳ ಆಗರ. ಅಕ್ಕಿಯಲ್ಲಿ ಬೇರೆ ಬೇರೆ ವಿಧಗಳಿಲ್ಲವೇ. ಹಾಗೆ. ನಾವು ಗೋಕರ್ಣದಲ್ಲಿ ಇದ್ದಾಗಲೂ ಪುಸ್ತಕಗಳು ನಮ್ಮ ಆಸ್ತಿಯಾಗಿದ್ದವು.
ಪುಸ್ತಕ ಪ್ರೀತಿಯನ್ನು ಬಂಗಾಳದ ಜನರಿಂದ ನೋಡಿ ಕಲಿಯಬೇಕು. ಎಷ್ಟೇ ಬಡತನ ಇದ್ದರೂ ಸಾಲ ಮಾಡಿಯಾದರೂ ಅವರು ಪುಸ್ತಕಗಳನ್ನು ಖರೀದಿಸುತ್ತಾರೆ. ತಂದೆ ತಾಯಿಯರಿಗೆ ಆಸಕ್ತಿ ಇದ್ದರೆ ಮಕ್ಕಳಲ್ಲಿ ಸಹ ಅದು ಬೆಳೆಯುತ್ತದೆ. ಇಂದು ಇಂಟೀರಿಯರ್ ಡಿಸೈನರ್ ನಿಮ್ಮ ಮನೆಯಲ್ಲಿ ವಿಶ್ವಕೋಶಗಳನ್ನು ತಂದಿಡಿ. ಅದರಿಂದ ಮನೆ ನೀಟಾಗಿ ಕಾಣುವುದಲ್ಲದೆ ನಿಮ್ಮ ಘನತೆ ಹೆಚ್ಚುತ್ತದೆ ಎಂದು ಸಲಹೆ ನೀಡಬಹುದು. ಅಷ್ಟಾದರೆ ಏನು ಉಪಯೋಗ ? ಹಾಗಾದರೂ ಪುಸ್ತಕ ಮನೆಯಲ್ಲಿದ್ದರೆ ಮಕ್ಕಳ ಕಣ್ಣಿಗೆ ಬಿದ್ದು ಅವರು ಓದುವ ಸಾಧ್ಯತೆ ಇರುತ್ತದೆ ಎನ್ನಬಹುದು ಎನ್ನುತ್ತಾರೆ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ.

ಪುಸ್ತಕಗಳು ಮನೆಯ ಸಂಪತ್ತು
ಜನಸಂಖ್ಯೆ ಆಧರಿಸಿ ಹೇಳುವುದಾದರೆ ಮನೆಯಲ್ಲಿ ಗ್ರಂಥ ಸರಸ್ವತಿ ಇಟ್ಟುಕೊಂಡವರ ಸಂಖ್ಯೆ ಕಡಿಮೆ. ಓದಿನ ಬಗ್ಗೆ ಆಸಕ್ತಿ ಉಳ್ಳವರಿಗೆ ಮಾತ್ರ ಕೈಗೆ ಎಟಕುವಂತೆ ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ಇನ್ನಷ್ಟು ಜನಪ್ರಿಯಗೊಳಿಸಬಹುದು. ಪುಸ್ತಕಗಳಲ್ಲಿ ಹಳೆಯ ಚಿರಂಜೀವಿ ಸ್ವರೂಪದ ಸಾಹಿತಿಗಳು, ಚಿಂತಕರು ಇರುತ್ತಾರೆ. ವರ್ತಮಾನದ ಖ್ಯಾತನಾಮರೂ ಇರುತ್ತಾರೆ. ಭವಿಷ್ಯವನ್ನು ನಿರ್ದೇಶಿಸುವ ಶಕ್ತಿ ಕೂಡ ಇವರ ಬರಹ, ಚಿಂತನೆಗಿರುತ್ತದೆ. ಏಕಾಂಗಿಯಾದವರಿಗೆ ಅತ್ಯಂತ ಹತ್ತಿರವಾದದ್ದು ಮತ್ತು ಮನೆಯ ಆಸ್ತಿ ಕೂಡ ಪುಸ್ತಕ ಎನ್ನುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ.

ಬಿ.ವಿ ಕಾರಂತರ ವಾಚನಾಲಯ
ಮನೆಯಲ್ಲಿ ಗ್ರಂಥಾಲಯ ಹೇಗಿರಬೇಕು ಎಂಬುದಕ್ಕೆ ರಂಗಕರ್ಮಿ, ದಿವಂಗತ ಬಿ.ವಿ ಕಾರಂತರ ಮನೆ ಉದಾಹರಣೆ. ಬೆಂಗಳೂರಿನ ಗಿರಿನಗರದಲ್ಲಿನ ಅವರ ನಿವಾಸದಲ್ಲಿ ಅತ್ಯಮೂಲ್ಯ ಪುಸ್ತಕಗಳ ಬೃಹತ್ ಭಂಡಾರವೇ ಇದೆ. ನಾಟಕ, ಸಿನಿಮಾ, ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ೧೫೦೦ಕ್ಕೂ ಹೆಚ್ಚು ಪುಸ್ತಕಗಳು ಅವರ ಮನೆಯನ್ನು ಅಲಂಕರಿಸಿವೆ. ಬಿ.ವಿ ಕಾರಂತ ರಂಗಪ್ರತಿಷ್ಠಾನದ ಅಡಿಯಲ್ಲಿ ಮನೆಯ ಎರಡು ಅಂತಸ್ತುಗಳ ತುಂಬ ಬೆಲೆ ಕಟ್ಟಲಾಗದ ಅಮೂಲ್ಯ ಗ್ರಂಥಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಗ್ರಂಥಾಲಯದ ಸದಸ್ಯರಾಗಿ ಯಾರು ಬೇಕಾದರೂ ಪುಸ್ತಕಗಳನ್ನು ಓದಿ ಉಪಯೋಗಪಡೆದುಕೊಳ್ಳಬಹುದು. ಆದರೆ ಮನೆಗೆ ಕೊಂಡೊಯ್ಯುವಂತಿಲ್ಲ.ಕಾರಂತರ ಪತ್ನಿ ಪ್ರೇಮಾ ಕಾರಂತ ಸರಕಾರ ಮಾಡದಿದ್ದ ಕೆಲಸವನ್ನು ಮಾಡಿದ್ದಾರೆ. ಅಧ್ಯಯನ ಸಂಶೋಧನೆ ಮಾಡಬಯಸುವವರಿಗೆ ಇದೊಂದು ಉಪಯುಕ್ತ ಕೇಂದ್ರ.ನಾಟಕಗಳು ಮತ್ತು ರಂಗಭೂಮಿಯ ಕಲೆಯ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಸಿಗುತ್ತದೆ. ವಿಪರ್ಯಾಸ ಏನೆಂದರೆ ಒಂದು ನರಪಿಳ್ಳೆಯೂ ಈ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿಲ್ಲ ಎನ್ನುತ್ತಾರೆ ಪ್ರೇಮಾ ಕಾರಂತ.

( ೨೦೦೬ ಆಗಸ್ಟ್ ೧೨ರಂದು ವಿಜಯ ಕರ್ನಾಟಕದ ಗೃಹ ವಿಜಯ ವಿಭಾಗದಲ್ಲಿ ಪ್ರಕಟವಾದ ಮನೆಯೇ ಗ್ರಂಥಾಲಯ ಲೇಖನದ ಮೊದಲ ಕಂತು )