
ನಿನ್ನೆ ತಾನೆ ನೆಚ್ಚಿನ ಗಾಯಕ ಅಶ್ವಥ್ ಅಗಲಿದರು. ಈವತ್ತು ಹಿರಿಯ ನಟ ಡಾ. ವಿಷ್ಣುವರ್ಧನ್ ಅಗಲಿದ್ದಾರೆ. ನಿಜಕ್ಕೂ ನೋವಿನ ಸಂಗತಿಯಿದು. ಬೆಳಗ್ಗೆ ಟಿ.ವಿ ನ್ಯೂಸ್ ಚಾನಲ್ ಹಾಕುತ್ತಿದ್ದಂತೆ ಒಂದು ಕ್ಷಣ ಶಾಕ್ ಆದಂತಾಯಿತು. ಡಾ. ರಾಜ್‌ಕುಮಾರ್ ನಿಧನದ ಸಂದರ್ಭ ಉಂಟಾಗಿದ್ದ ಗಲಭೆ ಈಗ ಸಂಭವಿಸದಿರಲಿ ಎಂದು ಮನದಲ್ಲೇ ಪ್ರಾರ್ಥಿಸಿದೆ. ಮತ್ತೊಂದು ಕಡೆ ಎಲ್ಲ ಸುದ್ದಿವಾಹಿನಿಗಳೂ, ಸುದ್ದಿಮನೆಗಳೂ ಬ್ಯುಸಿಯಾಗಿವೆ. ಡಾ. ವಿಷ್ಣುವರ್ಧನ್ ಅವರ ಬದುಕು, ಸಾಧನೆ, ಚಿತ್ರಗಳ ವಿವರ, ಅಪರೂಪದ ಛಾಯಾಚಿತ್ರಗಳನ್ನು ಕಲೆಹಾಕುವ ಕೆಲಸ, ಅವಸರ, ಗಡಿಬಿಡಿ ಕಂಡುಬರುತ್ತಿದೆ. ಕೆಲವು ವರದಿಗಾರರು ವಿಷ್ಣುವರ್ಧನ್ ನಿವಾಸದಲ್ಲಿದ್ದಾರೆ. ಅಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ನೆರೆದಿದ್ದಾರೆ.
ಕೆಲವು ತಿಂಗಳಿನ ಹಿಂದೆ ವಿಜಯ ಕರ್ನಾಟಕಕ್ಕೆ ವಿಷ್ಣುವರ್ಧನ್ ಅತಿಥಿ ಸಂಪಾದಕರಾಗಿ ಬಂದಿದ್ದರು. ಅವರ ಸೌಮ್ಯ ಹಾಗೂ ಸೂಕ್ಷ್ಮ ಭಾವದ ಮೊಗವನ್ನು ಗಮನಿಸಿದ್ದೆ. ಒಬ್ಬ ಸಂತನಂತಹ ಕಳೆ ಅವರ ಮುಖದಲ್ಲಿತ್ತು. ನಡೆ ನುಡಿಯಲ್ಲಿತ್ತು. ಕಚೇರಿಯ ಸಹೋದ್ಯೋಗಿಗಳು ಅವರ ಪಕ್ಕ ನಿಂತು ಫೊಟೊ ತೆಗೆಸಿಕೊಂಡಿದ್ದರು. ಪ್ರತಿಯೊಬ್ಬರ ಜತೆ ವಿಷ್ಣು ಆತ್ಮೀಯವಾಗಿ ಮಾತನಾಡಿದ್ದರು. ಎಲ್ಲ ವಿಭಾಗಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡಿದ್ದರು.
No comments:
Post a Comment