Wednesday 2 December 2009

ಊರಿನ ಮತ್ತು ಬೆಂಗಳೂರಿನ ಹೊಗೆಯ ವ್ಯತ್ಯಾಸ !

ಕೆಲವು ದಿನಗಳಿಂದೀಚೆಗೆ ಬೆಳಗ್ಗೆ ಸ್ವಲ್ಪ ಚಳಿ ಜಾಸ್ತಿಯಾಗಿದೆ. ಎಂಟು ಗಂಟೆಗೆ ಆಕ್ಟಿವಾದಲ್ಲಿ ಕಚೇರಿಗೆ ತೆರಳುವಾಗ ಮೈಸೂರು ರಸ್ತೆಯಲ್ಲಿ ಮಂಜು ಕವಿದ ದೃಶ್ಯವನ್ನು ಕಾಣಬಹುದು. ಇವತ್ತು ನಾಯಂಡಹಳ್ಳಿಯ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿ ಟಯರನ್ನೋ, ಕಸಕಡ್ಡಿಯನ್ನೋ ಹೊತ್ತಿಸಿದ್ದ ಹೊಗೆ ಏಳುತ್ತಿತ್ತು. ಜತೆಗೆ ಮಂಜು ಕೂಡಾ ಇತ್ತು. ನನಗೇಕೊ ಪುತ್ತೂರಿನ ಊರಿನ ಪರಿಸರ ತಟ್ಟನೆ ನೆನಪಾಯಿತು.
ಆ ನೆನಪೇ ಆಹ್ಲಾದಮಯ. ಆರ್ಲಪದವು, ವಾಟೆಡ್ಕ ಮುಂತಾದ ಕಡೆಗಳಲ್ಲಿ ಅತ್ತ ದಟ್ಟ ಕಾನನವೂ ಅಲ್ಲದ, ಇತ್ತ ಕರಾವಳಿಯೂ ಅಲ್ಲದ ಅರೆ ಮಲೆನಾಡಿನ ಪರಿಸರ ಇದೆ. ಬೆಳಗ್ಗೆ ಮಂಜು ಹಿತವಾಗಿರುತ್ತದೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಬಚ್ಚಲುಮನೆಗಳಲ್ಲಿ ಹಂಡೆಯಲ್ಲಿ ನೀರು ಕಾಯಿಸುತ್ತಾರೆ. ತೆಂಗಿನ ಮಡಲು, ಕರಟ ಮತ್ತು ಅಡಿಕೆ ಸಿಪ್ಪೆ, ಸೋಗೆಯನ್ನು ಒಲೆಗೆ ತುರುಕುತ್ತಾರೆ. ಎರಡು ಚಮಚದಷ್ಟು ಸೀಮೆ ಎಣ್ಣೆಯನ್ನು ಎರೆದು ಬೆಂಕಿ ಕಡ್ಡಿ ಗೀರಿದರೆ ಭಗ್ಗನೆ ಬೆಂಕಿ ಹತ್ತಿಕೊಳ್ಳುತ್ತದೆ. ನಂತರ ಊದಬೇಕು. ಹೊಗೆ ಏಳುತ್ತದೆ. ಕೆಂಡವನ್ನು ಕೆದಕಿ ಬೆಂಕಿ ಎಬ್ಬಿಸಿ ಚಳಿ ಕಾಯಿಸುವ ಸುಖದೆದುರು ಇಡೀ ಜಗತ್ತೇ ತೃಣ ಸಮಾನವಾದಂತಾಗುತ್ತದೆ. ಆಗ ಕೈಯಲ್ಲಿ ಒಂದು ಕಪ್ಪು ಚಹಾ ಇಲ್ಲವೇ ಕಾಫಿ ಇದ್ದರಂತೂ ಪರಮಾನಂದ.
ಬೆಳಗ್ಗೆ ವಾಟೆಡ್ಕ, ಆರ್ಲಪದವು ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಚುಮುಚುಮು ಚಳಿಯಲ್ಲಿ ಒಂದು ವಾಕಿಂಗ್ ಹೋಗಬೇಕು. ಸಾಯಂಕಾಲವಾದರೆ ಗುಬ್ಬಚ್ಚಿಗಳ ಚಿಲಿಪಿಲಿ ಆಲಿಸುತ್ತ ಶುದ್ಧ ಗಾಳಿ ಸೇವಿಸುತ್ತ ಖುಷಿ ಪಡಬಹುದು. ಅಲ್ಲೊಂದು ಇಲ್ಲೊಂದು ಮನೆಗಳ ಮಾಡಿನಿಂದ ಏಳುತ್ತಿರುವ ಧೂಮ ರಾಶಿಯನ್ನೂ ಗಮನಿಸಬಹುದು. ಸಸ್ಯರಾಶಿಯ ಮಧ್ಯೆ ಬಿಳಿ ಹೊಗೆಯ ಚಿತ್ತಾರದಂತೆ ಕಾಣುತ್ತದೆ. ಹೊಗೆಯೂ ಇಲ್ಲಿ ಸಹ್ಯವಾಗುತ್ತದೆ. ಪರಿಸರ ಮಾಲಿನ್ಯದ ಭಾವ ಸುಳಿಯೋದೇ ಇಲ್ಲ. ಆದರೆ ಬೆಂಗಳೂರಿನಲ್ಲಿ ? ಇರುವ ಮರಗಳೂ ಮೆಟ್ರೊ ರೈಲಿಗೆ ಬಲಿಯಾಗುತ್ತಿವೆ. ಎಲ್ಲಿ ನೋಡಿದರೂ ಟ್ರಾಫಿಕ್ ಮತ್ತು ವಾಹನಗಳು ಉಗುಳುವ ಹೊಗೆ. ಶ್ವಾಸ ಕೆಟ್ಟು ಹೋಗುವ ಅನುಭವ. ಎರಡೂ ಕಡೆಗಳಲ್ಲಿ ಹೊಗೆಯೇ ಆದರೂ ಎಷ್ಟೊಂದು ವ್ಯತ್ಯಾಸ ನೋಡಿ.
ಕಳೆದ ಶಿವ ರಾತ್ರಿಗೆ ಊರಿಗೆ ಹೋಗಿದ್ದಾಗ ಅತ್ತೆ ಮನೆಯಲ್ಲಿ ಬಚ್ಚಲು ಮನೆಯಲ್ಲಿ ತೆಂಗಿನ ಮಡಲನ್ನು ಒಲೆಗೆ ಹಾಕಿ ರಟ್ಟಿನ ತುಂಡಿನಲ್ಲಿ ಗಾಳಿ ಬೀಸಿ ಕಿಚ್ಚು ಆರದಂತೆ ನೋಡಿ ಬಿಸಿ ನೀರು ಕಾಯಿಸಿ ಮಿಂದಿದ್ದೆ. ಆ ಸ್ನಾನವನ್ನು ಮರೆಯಲಾಗುತ್ತಿಲ್ಲ. ವಾಹ್..ತಕ್ಷಣ ಮಂಗಳೂರಿನ ಬಸ್ಸು ಹತ್ತಿ ಊರ ಕಡೆ ಹೋಗ್ಬೇಕು ಅನ್ಸುತ್ತೆ..ಮತ್ತೆ ಶಿವರಾತ್ರಿ ಸಮೀಪಿಸಿದೆ...ಆದರೆ ಮಾಡೋದೇನು..ಈ ಸಲ ರಜೆ ಸಿಗುತ್ತಾ ಇಲ್ವೋ ಗೊತ್ತಿಲ್ಲ.
ಚಿತ್ರ ಸಾಂದರ್ಭಿಕ

No comments:

Post a Comment