


ಹಿರಿಯ ಗಾಯಕ ಅಶ್ವಥ್ ಹಾಗೂ ನಟ ವಿಷ್ಣುವರ್ಧನ್ ಅವರ ನಿಧನದ ನೋವಿನೊಂದಿಗೆ ೨೦೦೯ ಮುಕ್ತಾಯವಾಗುತ್ತಿದೆ. ಹೊಸ ವರ್ಷ ೨೦೧೦ ಆರಂಭವಾಗಲು ಕೆಲವು ಕ್ಷಣಗಳು ಬಾಕಿ ಇವೆ. ಕಳೆದ ವರ್ಷ ಏನೆಲ್ಲಾ ಆಯಿತು, ಏನೆಲ್ಲಾ ಮಾಡಿದೆವು, ಕಳೆದ ವರ್ಷ ಆರಂಭದಲ್ಲಿ ಅಂದುಕೊಂಡಿದ್ದನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಿದ್ದೇವೆ ಎಂಬುದನ್ನೆಲ್ಲ ಅವಲೋಕಿಸಬೇಕಾದ ಕ್ಷಣವಿದು. ಪ್ರತಿಯೊಬ್ಬರೂ ಅಂತಹದೊಂದು ಆತ್ಮಾವಲೋಕನವನ್ನು ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಮಾಡೋದು ಉತ್ತಮ ಎಂದನ್ನಿಸುತ್ತದೆ. ಮನೆಯ ಬಾಲ್ಕನಿಯಲ್ಲಿ ಏಳೆಂಟು ಪಾಟ್‌ಗಳಲ್ಲಿ ಗುಲಾಬಿ, ಗೌರಿ ಹೂವಿನ ಗಿಡ, ಡೇಲ್ಯ, ತುಳಸಿ ಇತ್ಯಾದಿಯಾಗಿ ಕೆಲವು ಗಿಡಗಳಿವೆ. ಬಸಳೆಯ ಬಳ್ಳಿಯಿದೆ. ಪ್ರತಿ ದಿನ ಬೆಳಗ್ಗೆ ಇವುಗಳನ್ನು ಕಂಡು ಮಾತನಾಡಿಸಿ, ನೀರೆರೆಯಲು ಮರೆಯುವುದಿಲ್ಲ. ಹೊಸತಾಗಿ ಹೂವು ಬಿಟ್ಟಿದೆಯಾ, ಗುಲಾಬಿ ಮೊಗ್ಗು ಅರಳುತ್ತಿದೆಯಾ ಎಂದು ಗಮನಿಸುತ್ತೇನೆ. ಮನೆಯಲ್ಲಿ ತರಕಾರಿಗಳ ಸಿಪ್ಪೆಯನ್ನು ಒಂದು ಮುಚ್ಚಳವಿರುವ ಡಬ್ಬಕ್ಕೆ ಹಾಕಿ ಸಾವಯವ ಗೊಬ್ಬರ ತಯಾರಿಸುತ್ತಿದ್ದೇನೆ. ಆ ಕೆಲಸ ಸ್ವಲ್ಪ ಹೊತ್ತಿನದ್ದಾದರೂ, ಇಡೀ ದಿನ ಖುಷಿ ಕೊಡುತ್ತೆ. ಮೊನ್ನೆ ಯಾವುದೋ ಬಳ್ಳಿ ಹಬ್ಬಿ ಹೂವು ಬಿಟ್ಟಿತ್ತು. ಚಿತ್ರ ಇಲ್ಲಿದೆ. ಹೊಸ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ ಅಂತ ಕಿದೂರು ಮಹದೇವನಲ್ಲಿ ಪ್ರಾರ್ಥನೆ ಮಾಡ್ತೇನೆ.
No comments:
Post a Comment