Sunday, 3 January 2010

ಕನ್ನಡದ ಪುಸ್ತಕಗಳು ಖರ್ಚಾಗೋದೇ ಇಲ್ಲಾಂತ !
ಬೆಂಗಳೂರಿನ ಕೋರಮಂಗಲದ ಫೋರಂ ಶಾಪಿಂಗ್ ಮಾಲ್‌ಗೆ ಹೋಗಿದ್ದೆ. ಜಗಮಗಿಸುವ ಭವ್ಯ ಶಾಪಿಂಗ್ ಮಾಲ್ ಅದು. ನಿತ್ಯ ಸಾವಿರಾರು ಮಂದಿ ಅಲ್ಲಿಗೆ ಬೆಲ್ಲಕ್ಕೆ ಮುತ್ತಿದ ಇರುವೆಗಳಂತೆ ಧಾವಿಸುತ್ತಾರೆ. ರಜಾ ದಿನಗಳಲ್ಲಂತೂ ಕೇಳೋದೇ ಬ್ಯಾಡ. ಅಂತಹ ಶಾಪಿಂಗ್ ಮಾಲ್ ಕರ್ನಾಟಕದಲ್ಲೇ ಇದ್ದರೂ ಅಲ್ಲಿ ಕನ್ನಡದ ಗಂಧ ಗಾಳಿ ಮಾತ್ರ ಅತ್ಯಲ್ಪ. ಬಹುಶಃ ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಹೀಗಿರುವಾಗ ಅಲ್ಲಿನ ಪುಸ್ತಕ ವ್ಯಾಪಾರ ವಿಭಾಗದಲ್ಲಿ ಒಳ ಹೊಕ್ಕಾಗ ನನಗೆ ರೋಮಾಂಚನ ಆಯಿತು. ಯಾಕೆಂದರೆ ಅಲ್ಲಿ ಲಕ್ಷಗಟ್ಟಲೆ ಇಂಗ್ಲಿಷ್ ಪುಸ್ತಕಗಳ ನಡುವೆ ಕನ್ನಡದ ಒಂದು ಪುಸ್ತಕ ಕಾಣಿಸಿತು ! ಅದುವೇ ವಾಲ್ಮೀಕಿ ರಾಮಾಯಣ !
ವೇ. ದೊಡ್ಡಬೆಲೆ ನಾರಾಯಣ ಶಾಸ್ತ್ರಿ ಬರೆದ ಟೀಕಾ ತಾತ್ಪರ್ಯ ಸಹಿತ ಶ್ರೀ. ಮದ್ವಾಲ್ಮೀಕಿ ರಾಮಾಯಣ ಸುಂದರ ಕಾಂಡ ಪುಸ್ತಕ ಅಲ್ಲಿತ್ತು. ಅದನ್ನು ಕಂಡು ಪುಳಕಿತನಾಗುತ್ತ, ನಂತರ ಹತ್ತಿರ ನಿಂತಿದ್ದ ಸಿಬ್ಬಂದಿಯತ್ತ ಕೇಳಿದೆ..‘ ಕನ್ನಡದ ಬೇರೆ ಪುಸ್ತಕಗಳಿಲ್ಲವೇ ? ’ ಆತ ಒಂದು ಮೂಲೆಯನ್ನು ತೋರಿಸುತ್ತ ‘ ಅಲ್ಲಿದೆ ’ ಎಂದ . ಹೋಗಿ ನೋಡಿದ್ರೆ ಒಂದು ಮೂಲೆಯಲ್ಲಿ ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಪುಸ್ತಕಗಳನ್ನು ಪೇರಿಡಲಾಗಿತ್ತು..ಅಷ್ಟೇ...
ಯಾಕಿಂಥ ಅಸಡ್ಡೆಯಾ..ಅದೂ ಕನ್ನಡ ನಾಡಿನಲ್ಲೇ..ಅಂತ ಭಾವಿಸಿದೆ. ಏನು ಮಾಡೋದು ಅಂತ ಶಾಪಿಂಗ್ ಮಾಲಿನಿಂದ ಹೊರ ಬಂದೆ. ಮರು ದಿನ ಭೇಟಿಯಾದಾಗ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಜತೆ ಈ ಬಗ್ಗೆ ಪ್ರಸ್ತಾಪಿಸಿದೆ. ಅವರು ಅಂದರು- ಶಾಪಿಂಗ್ ಮಾಲ್‌ನವರಲ್ಲಿ ಹೇಳಿದ್ರೆ ಅವರು ಹೇಳೋದು ಏನೆಂದರೆ ಕನ್ನಡದ ಪುಸ್ತಕಗಳು ಖರ್ಚಾಗೋದೇ ಇಲ್ಲಾಂತ. ಖರ್ಚಾಗುವುದಿದ್ದರೆ ಅವರೂ ಇಡಲಿಕ್ಕೆ ತಯಾರಿದ್ದಾರಂತೆ ! ಆದರೆ ಖರೀದಿದಾರರೇ ಇಲ್ಲವಾದರೆ ಏನುಪಯೋಗ ! ಎಂಥ ದುರತವಲ್ಲವೇ ಇದು...ಛೇ.

No comments:

Post a Comment