Thursday 23 July 2009

ರೈತರ ಬಳಿ ಗೋವಿಲ್ಲ, ಮಾಡಲು ಕೆಲಸವಿಲ್ಲ....


ಮಧುಗಿರಿಯ ರಾಮದೇವರ ಬೆಟ್ಟದಲ್ಲಿ ತಂಗಾಳಿಗೆ ಮೈಚೆಲ್ಲಿ ಹೆಬ್ಬಂಡೆಗಳ ದೃಶ್ಯಕಾವ್ಯವನ್ನು ಮನಸಾರೆ ತುಂಬಿಕೊಂಡು, ಅಲ್ಲಿದ್ದ ಗೋಶಾಲೆಯ ದನಕರುಗಳನ್ನು ಮಾತನಾಡಿಸಿ ಬೆಟ್ಟದ ತಪ್ಪಲಿನಲ್ಲಿದ್ದ ಚೆನ್ನಮಲ್ಲನಹಳ್ಳಿಗೆ ಇಳಿದಾಗ ವಿಷಾದ ದಟ್ಟವಾಗಿ ತುಂಬಿಕೊಳ್ಳುತ್ತದೆ.
ಊರ ಯುವಕರೆಲ್ಲ ಕಟ್ಟೆಯಲ್ಲಿ ಕೂತು ಕೈ ಚೆಲ್ಲಿದ್ದಾರೆ.
ಈ ಬಾರಿ ಬರದ ಛಾಯೆ ಅಡರಿಕೊಂಡಿದೆ ಆ ಪುಟ್ಟ ಹಳ್ಳಿಯಲ್ಲಿ. ಮತ್ತೊಂದು ಕಡೆ ವಿದ್ಯುತ್ತಿಲ್ಲದೆ ಕಂಗಾಲಾಗಿದ್ದಾನೆ ರೈತಾಪಿ. ಶೇಂಗಾ, ರಾಗಿ ಬೆಳೆಯಲಾಗದೆ ಸೋತಿರುವ ಜನರಿಗೆ ಕಟ್ಟೆಯಲ್ಲಿ ಕೂತು ಮಕ ಮಕ ನೋಡೋದೇ ವೃತ್ತಿ ಮತ್ತು ಪ್ರವೃತ್ತಿಯಾಗಿದೆ. ಸಾಲದ್ದಕ್ಕೆ ಐವತ್ತು ಮನೆಗೊಂದರಂತೆ ನಾಲ್ಕು ಸಾರಾಯಿ ಅಂಗಡಿ ಇದೆ. ಬಹುಶಃ ಮನೆಗೊಂದರಂತೆ ಸಾರಾಯಿ ಅಂಗಡಿ ತೆರೆದರೂ ಗಿರಾಕಿಗಳಿಗೆ ಬರ ಇರದು. ದುಃಖದ ಸಂಗತಿ ಏನೆಂದರೆ ಬೆಳಗಿನ ಜಾವದಿಂದ ತಡರಾತ್ರಿಯ ತನಕ ಆಲ್ಕೋಹಾಲು ಕುಡಿಯುವ ಜನ ಹಾಲು ಕುಡಿಯುವುದಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಅಲ್ಲಿನ ಅವಿಭಾಜ್ಯ ಅಂಶವಾಗಿದ್ದ ದನಕರುಗಳ ಕೊರಳ ಗಂಟೆಗಳ ನಿನಾದ ಕ್ಷೀಣಿಸಿ ಬಹುಕಾಲವಾಗಿದೆ. ಅವುಗಳ ಹೆಜ್ಜೆ ಗುರುತುಗಳು ಕಟುಕರ ಸಂತೆಯಲ್ಲಿ ಬಿದ್ದು ಹೋಗಿವೆ. ಈವತ್ತು ಮಧುಗಿರಿ ತಾಲ್ಲೂಕಿನಲ್ಲಿಯೇ ಪ್ರತಿ ನಿತ್ಯ ನೂರಾರು ಗೋವುಗಳು ಕಸಾಯಿಖಾನೆಯಲ್ಲಿ ಬಲಿಯಾಗುತ್ತಿವೆ. ಚೆನ್ನಮಲ್ಲನಹಳ್ಳಿಯನ್ನು ಈ ಸಾರಾಯಿ ಅಂಗಡಿಗಳು ವಿನಾಶದಂಚಿನಲ್ಲಿ ಬಹುದೂರ ಕರೆದೊಯ್ದಿವೆ.
ಹೀಗಾಗಿ ಊರಿನಲ್ಲಿ ಕೆಲಸವಿಲ್ಲದೆ ತಿರುಗಾಡುತ್ತಿರುವ ಯುವಕರನ್ನು ಹೇಗಿದ್ದೀರಿ ಸ್ವಾಮಿ ? ಎಂದೊಡನೆ ಹ್ಯಾಪಮೋರೆ ಪ್ರದರ್ಶಿಸುತ್ತಾರೆ. ಹೀಗಾದರೆ ಹೇಗೆ ಎಂದರೆ ಮತ್ತೆ ಜೈಸಾ ಚಲ್ತಾ ಹೈ ಮನೋಭಾವ.
ಹೀಗೆ ಗ್ರಾಮೀಣ ಜನರನ್ನು ಗೊಣಗಾಟ ಮತ್ತು ನಿರಾಶಾಭಾವನೆಗಳ ಮೂಟೆಯನ್ನಾಗಿಸಿದವರು ಯಾರು ? ಇದಕ್ಕೆ ಉತ್ತರ ಸ್ವತಃ ಗ್ರಾಮೀಣ ಜನರೇ. ಅವರೇ ಮರೆತು ಹೋದ ಜೀವನ ಪದ್ಧತಿ, ವಿವೇಕಶೂನ್ಯತೆ ಅವರನ್ನು ಪರಾವಲಂಬಿಗಳನ್ನಾಗಿಸಿದೆ. ಈವತ್ತು ಹಳ್ಳಿಗಳ ಚಿತ್ರಣ ಸಂಪೂರ್ಣ ಸ್ವಕೇಂದ್ರಿತವಾಗಿದೆ. ಯಾರಾದರೂ ಹೊಸಬ ಹಳ್ಳಿಗೆ ಭೇಟಿ ಕೊಟ್ಟರೆ ಆತನಿಂದ ತಮಗೇನಾದರೂ ಪ್ರಯೋಜನ ಸಿಗುತ್ತಾ ಅಂತ ಮೊದಲು ನೋಡುವವರೇ ಹೆಚ್ಚು.
ನಗರಗಳಲ್ಲಿನ ಸೌಕರ್ಯಗಳು ಹಳ್ಳಿಗಳಲ್ಲಿ ಲಭ್ಯವಾಗಬೇಕು ಎಂದರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಆದರೆ ನಗರಗಳಲ್ಲಿ ಪ್ರಜ್ಞಾಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ಕಂಡುಬರುವ ಶ್ರಮ ಸಂಸ್ಕೃತಿ ಗ್ರಾಮಗಳಿಂದ ದೂರವಾಗಿದೆ. ಚೆನ್ನಮಲ್ಲನ ಹಳ್ಳಿಯಲ್ಲಿ ಕರೆಂಟು ಬಿಲ್ಲು ಬಾಕಿ ಒಂದೂವರೆ ಲಕ್ಷ ರೂ. ದಾಟಿದೆ.
ನಿಜ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಕರೆಂಟು ಕೊಡುತ್ತಿಲ್ಲ. ಇವೆರಡೂ ಸಮಸ್ಯೆಗಳನ್ನು ಎದುರಿಸುತ್ತಾ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ. ಇದೆ. ನಿಸ್ಸಂದೇಹವಾಗಿ. ಆದರೆ ಅಂಥ ಸ್ವಾವಲಂಬಿ ಬದುಕಿನ ಕಲೆ ಗೊತ್ತಾಗದೆ ಅವರು ತೊಳಲಾಡುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮನಸ್ಸು ಮೊದಲೇ ಅವರಲ್ಲಿಲ್ಲ. ಬದಲಿಗೆ ಸಿಕ್ಕ ಬೆಲೆಗೆ ಗೋವುಗಳನ್ನು, ಎತ್ತುಗಳನ್ನು, ಎಮ್ಮೆಗಳನ್ನು ಕಟುಕರಿಗೆ ಮಾರುತ್ತಾರೆ. ನೋಡಿ, ಒಂದು ಜೋಡಿ ಎತ್ತನ್ನು ಕಟುಕರಿಗೆ ಕೊಟ್ಟರೆ ರೈತನಿಗೆ ಮೂವತ್ತಾರು ಸಾವಿರ ರೂ. ಸಿಗುತ್ತದೆ. ಅದೇ ಎತ್ತುಗಳನ್ನು ವಧಿಸಿದ ನಂತರ ಮಾಂಸ ಮಾರಾಟದಿಂದ ವ್ಯಾಪಾರಿ ಗಳಿಸುವ ಲಾಭ ಲಕ್ಷಗಟ್ಟಲೆ ದಾಟುತ್ತದೆ. ಒಂದು ಕಡೆ ಕೆಎಂಎಫ್‌ (ಕರ್ನಾಟಕ ಮಿಲ್ಕ್ ಫೆಡರೇಷನ್) ಕಳೆದ ಜೂ. ೨೨ರಂದು ೪೦.೦೨ ಲಕ್ಷ ಕೆ.ಜಿ ಹಾಲು ಉತ್ಪಾದಿಸಿ ಅಮುಲ್ ನಂತರ ಅತಿ ಹೆಚ್ಚು ಉತ್ಪಾದನೆ ದಾಖಲಿಸಿದೆ. ಮತ್ತೊಂದು ಕಡೆ ಗ್ರಾಮದ ಪ್ರತಿಯೊಂದು ಮನೆಯ ಸದಸ್ಯರಿಗೆ ಉದ್ಯೋಗ ಕೊಡಬಲ್ಲ, ಅವರ ಆರ್ಥಿಕತೆಯನ್ನು ತಿದ್ದಬಲ್ಲ ಪಶು ಸಂಗೋಪನೆ ಕಣ್ಮರೆಯಾಗುತ್ತದೆ. ಅಂದರೆ ಏನರ್ಥ ? ಕಷ್ಟಪಟ್ಟು ದುಡಿಯುವ ಜನಕ್ಕೆ ಈ ರಾಜ್ಯದ ಯಾವುದೇ ಭಾಗದಲ್ಲಿ ಪಶುಸಂಗೋಪನೆ ಜೀವನಕ್ಕೆ ಆಧಾರವಾಗಬಲ್ಲುದು. ಅನ್ಯರಿಗೆ ಕುರಿ ಸಾಕುವುದೂ ಕೈಲಾಗುತ್ತಿಲ್ಲ. ಇನ್ನು ಪ್ರಯೋಗಶೀಲತೆ ಎಲ್ಲಿಂದ ಬರಬೇಕು ಹೇಳಿ.
ಸರಕಾರಗಳ ಬೇಜವಾಬ್ದಾರಿ, ಕೃಷಿ ಉತ್ಪನ್ನಗಳಿಗೆ ಸಿಗದ ಬೆಲೆಯ ನಡುವೆ ಬದುಕು ನಡೆಸುವುದು ಹೇಗೆ ? ಕೈತುಂಬಾ ಕೆಲಸವನ್ನು ಕಂಡುಕೊಳ್ಳುವುದು ಹೇಗೆ ? ಈ ಪ್ರಶ್ನೆಗೆ ಉತ್ತರವನ್ನು ಹಳ್ಳಿಗರು ಕಂಡುಕೊಳ್ಳಬೇಕಾಗಿದೆ. ಕೃಷಿ ಮತ್ತು ಹೈನುಗಾರಿಕೆ ಒಂದಕ್ಕೊಂದು ಪೂರಕ. ಒಂದು ಇಲ್ಲದಿದ್ದರೆ ಮತ್ತೊಂದಿಲ್ಲ. ಗೋ ಸಂಪತ್ತು ನಾಶವಾದರೆ ಕೃಷಿಯ ಸರ್ವನಾಶ ಖಚಿತ. ಹಾಗಾದರೆ ಮಾಡಲು ಕೆಲಸವಿಲ್ಲದೆ ಸಾರಾಯಿ ಕುಡಿಯುತ್ತ ಹಾಳಾಗುತ್ತಿರುವ ಗ್ರಾಮವಾಸಿಗಳ ಬದುಕನ್ನು ಗೋವುಗಳಿಂದ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲವೇ ? ಅದಕ್ಕೆ ಮತ್ತೊಮ್ಮೆ ಚೆನ್ನಮಲ್ಲನಹಳ್ಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಯಾಕೆಂದರೆ ಹಲವಾರು ದ್ವಂದ್ವಗಳಿಗೆ ಇಲ್ಲೊಂದು ಉತ್ತರ ಸಿಗುತ್ತದೆ.
ಗೋಶಾಲೆಯ ಕೆಲಸ : ಚೆನ್ನಮಲ್ಲನಹಳ್ಳಿಗೆ ಐದು ವರ್ಷಗಳ ಹಿಂದೆ ಬಂದು ನೆಲಸಿದವರು ಮಧುಸೂಧನ್ ರಾವ್. ಸಾವಿತ್ರಮ್ಮಾಜಿ ಎಂಬುವರು ದಾನವಾಗಿ ನೀಡಿದ್ದ ಹತ್ತೆಕರೆ ಜಮೀನಿನಲ್ಲಿ ಸುರಭಿ ಗೋಶಾಲೆಯನ್ನು ಅವರು ಸ್ಥಾಪಿಸಿದ್ದಾರೆ. ಅನಾಥ ಮತ್ತು ಅಕ್ರಮವಾಗಿ ಕಸಾಯಿಖಾನೆ ಪಾಲಾಗುತ್ತಿದ್ದ ಪಶುಗಳನ್ನು ಸಾಕುವ ಉದ್ದೇಶದಿಂದ ಗೋಶಾಲೆಯನ್ನು ಕಟ್ಟಿದರು. ಈವತ್ತು ಇನ್ನೂರಕ್ಕೂ ಹೆಚ್ಚು ಜಾನುವಾರುಗಳು ಇಲ್ಲಿವೆ. ಅಂದಹಾಗೆ ಇವುಗಳನ್ನು ಹೇಗೆ ಸಾಕುತ್ತಾರೆ ?
ಒಂದು ದನ ಕೇವಲ ಹಾಲು ಮಾತ್ರ ಕೊಡುವುದಿಲ್ಲ ತಾನೇ. ಸಗಣಿ, ಗಂಜಲವನ್ನು ಬಳಸಿಕೊಂಡು ತಯಾರಿಸುವ ಉಪ ಉತ್ಪನ್ನಗಳು ಹಲವು. ಶ್ಯಾಂಪೂ, ಮರ್ದನ ತೈಲ, ಹಲ್ಲಿನ ಪುಡಿ, ಬೆರಣಿ, ಸೊಳ್ಳೆ ಬತ್ತಿ, ಭಸ್ಮ, ಧೂಪ ಅಂತ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಬಹುದು. ಘಾಟಿ ಗೋಶಾಲೆಯ ಗೋ ಮಾತಾ ಅಗರಬತ್ತಿ ಜನಪ್ರಿಯ. ಈ ಪ್ರಕೃತಿ ಚಿಕಿತ್ಸಗಳ ಹಿಂದೆ ಬೇಕಾಗುವ ಗವ್ಯೋತ್ಪನ್ನಗಳು ಹಲವು. ಗಂಜಲವನ್ನು ಭಟ್ಟಿ ಇಳಿಸಿ ತಯಾರಿಸುವ ದ್ರವ ಔಷಧವಾಗಿ ಬಳಕೆಯಾಗುತ್ತದೆ. ಅದಕ್ಕೆ ಪ್ರತಿ ಲೀಟರ‍್ಗೆ ೧೨೦ ರೂ. ತನಕ ಬೆಲೆಯೂ ಇದೆ. ಇನ್ನು ಗೋಬರ‍್ ಗ್ಯಾಸ್ನ ಉಪಯೋಗ ಎಲ್ಲರಿಗೂ ತಿಳಿದಿದೆ. ಈವತ್ತು ಸುರಭು ಗೋಶಾಲೆಯಿಂದ ದಿನಕ್ಕೊಂದು ಟನ್ ಸಗಣಿ ಗೊಬ್ಬರ ಹೊರ ಹೋಗುತ್ತದೆ. ಅದರ ನದಲಿಗೆ ಮೇವು ಒಳಬರುತ್ತದೆ. ಇನ್ನು ನೀರು ? ರಾಮದೇವರ ಬೆಟ್ಟದ ಬದಿಯಲ್ಲಿ ಕಟ್ಟೆಯನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಲಾಗಿದೆ. ವರ್ಷದ ಐದಾರು ತಿಂಗಳಿಗೆ ಬೇಕಾದಷ್ಟು ನೀರು ಮಳೆ ನೀರಿನ ಸಂಗ್ರಹದಿಂದ ಸಿಗುತ್ತದೆ.
ಬಾರ್ಟರ್‌ ಪದ್ಧತಿ : ಉತ್ಪನ್ನವಾಗುವ ಸಗಣಿಯನ್ನು ರೈತರಿಗೆ ಕೊಟ್ಟು, ಅದರ ಬದಲಿಗೆ ನಗದು ಪಡೆಯುದಿಲ್ಲ, ಮೇವನ್ನು ಮಾತ್ರ ಪಡೆಯುತ್ತಾರೆ. ಗೋಶಾಲೆಯಲ್ಲಿ ಮೂರು ದಿನ ಕೆಲಸ ಮಾಡಿದವರಿಗೆ ಶಾಲೆಯ ಟ್ರಾಕ್ಟರ‍್, ಜಾನುವಾರುಗಳ ಸೇವೆ ಲಭ್ಯ. ಹೀಗಾಗಿ ಮೇವಿನ ಸಮಸ್ಯೆ ಇಲ್ಲಿಲ್ಲ. ಸ್ಥಳೀಯ ೧೮ ಜನರಿಗೆ ಗೋಶಾಲೆ ಕೆಲಸ ಕೊಟ್ಟಿದೆ.
ಇಲ್ಲಿ ಚೆನ್ನಮಲ್ಲನಹಳ್ಳಿ ಮತ್ತು ಗೋಶಾಲೆ ಸಾಂಕೇತಿಕ. ಆದರೆ ನೂರಿನ್ನೂರು ಕುಟುಂಬಗಳಿರುವ, ಆದರೆ ಇಂತಹುದೇ ಸಮಸ್ಯೆಯಲ್ಲಿರುವ ಸಾವಿರಾರು ಗ್ರಾಮಗಳಿವೆ. ಅಲ್ಲಿ ಅನೇಕ ಉಪ ಕಸುಬುಗಳು ಮಾಯವಾಗಿವೆ. ಪಶುಸಂಗೋಪನೆಯಿಂದ ಜನ ದೂರವಾಗುತ್ತಿದ್ದಾರೆ. ಗ್ರಾಮ ಭಾರತದಲ್ಲಿ ಮೊಬೈಲು, ಆಲ್ಕೋಹಾಲು, ಗುಟ್ಕಾ ಮಾತ್ರ ಎಗ್ಗಿಲ್ಲದೆ ಹರಿದಾಡುತ್ತಿದೆ.
ಈ ಲೇಖನಕ್ಕೆ ಚಿತ್ರ ತೆಗೆದು ಕೊಟ್ಟವರು : ಲೆವಿನ್‌

No comments:

Post a Comment