Tuesday 21 July 2009

ಗಾಂಧಿ ಇದ್ದಿದ್ದರೆ ಅವರ ಹೆಸರಿನ ಪಠ್ಯಕ್ರಮವನ್ನು ಬದಲಿಸುತ್ತಿದ್ದರು

ನೀವು ಯಾವುದಾದರೂ ಎನ್‌ಜಿಒ ಕೆಲಸ ಹುಡುಕುತ್ತಿದ್ದೀರಾ ?
ಹಾಗಿದ್ದಲ್ಲಿ ಗಾಂಧಿ ಅಧ್ಯಯನ ಉಪಯೋಗಕ್ಕೆ ಬಂದೀತು..ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೂ ಹೆಚ್ಚುವರಿಯಾಗಿ ರೆಸ್ಯೂಮ್‌ಗೇ ಒಳ್ಳೆಯದು..
ಗಾಂಧಿ ಅಧ್ಯಯನ ನಮಗೇಕೆ ಬೇಕು ? ಅಂತ ನೀವು ಈವತ್ತು ವಿಶ್ವ ವಿದ್ಯಾಲಯಗಳ ಗಾಂಧಿ ಅಧ್ಯಯನ ಕೇಂದ್ರಗಳಲ್ಲಿ ಕೇಳಿದರೆ ಸಿಗುವ ನೀರಸ ಉತ್ತರ ಇದು ಬಿಟ್ಟರೆ ಬೇರೆ ಏನೂ ಅಲ್ಲ. ಇದ್ದರೂ ಅವುಗಳನ್ನು ಕಲಿಸುವರಿಲ್ಲ. ಯಾಕೆಂದರೆ ಅಲ್ಲಿನ ಪಠ್ಯಕ್ರಮದಲ್ಲಿ ಅಂತದ್ದೇನೂ ಇಲ್ಲ. ಎಲ್ಲ ಹತ್ತಾರು ವರ್ಷಗಳಷ್ಟು ಹಳೆಯ ಸಿಲೆಬಸ್‌..ಒಂದು ಕಡೆ ರೆಸ್ಯೂಮ್‌ಗೆ ಸೇರಿಸಿದರೂ ಕೆಲಸ ಸಿಗುವ ಭರವಸೆ ಇಲ್ಲ.
ಪಟನಾದ ಅಜಿತ್‌ ಸಿನ್ಹಾ ಮತ್ತು ಪ್ರಿಯರಂಜನ್‌ ಕುಮಾರ್‌ ಗಾಂಧಿವಾದದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿದ್ದಾರೆ. ಕನಿಷ್ಠ ಶಿಕ್ಷಕರ ಕೆಲಸ ಸಿಕ್ಕಿದರೂ ಸಾಕು ಎಂದು ಕೊರಗುತ್ತಾರೆ. ಗಾಂಧಿವಾದದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅಜಿತ್‌ಕುಮಾರ್‌ ಠಾಕೂರ್‌ ಕೆಲಸ ಸಿಗದ ಕಾರಣ ಕ್ಷೌರಿಕನಾದ. ಹೀಗೆ ನಿರುದ್ಯೋಗಿಗಳಾಗಿರುವ ಸಾಕಷ್ಟು ಮಂದಿ ಇದ್ದಾರೆ. ಕೆಲವರಿಗೆ ಸ್ವಯಂಸೇವಾ ಸಂಸ್ಥೆಗಳಲ್ಲಿ ಅರೆಕಾಲಿಕ ಉದ್ಯೋಗ ಸಿಕ್ಕಿದೆ. ಯಾಕಿಂಥಾ ದುಃಸ್ಥಿತಿ ? ಗಾಂಧಿ ಅಧ್ಯಯನ ವೃತ್ತಿಯಾಧಾರಿತ ಅಲ್ಲವಾ ?
ರೋಣದಲ್ಲಿ ಕಾಣಬಹುದಷ್ಟೇ
ಗಾಂಧಿ ಅಧ್ಯಯನದ ಅವಧಿಯಲ್ಲಿ ಸ್ವಲ್ಪಕಾಲ ಯಾವುದಾದರೂ ಹಳ್ಳಿಯಲ್ಲಿದ್ದು, ಅಲ್ಲಿನ ಜನರೊಡನೆ ಬೆರೆತು ಅಧ್ಯಯನ ನಡೆಸಬೇಕಾಗುತ್ತದೆ. ವರ್ಷಕ್ಕೆ ಇಬ್ಬರಿಗೆ ವಾರ್ಧಾಗೆ ತೆರಳುವ ಅವಕಾಶ ಸಿಗುತ್ತದೆ. ಅದರ ಅನುಭವವೇ ಬೇರೆ. ಎಂತಹ ಪುಂಡಾಟಿಕೆಯ ವಿದ್ಯಾರ್ಥಿಯಾದರೂ ಸರಿಯೇ, ವಾರ್ಧಾಗೆ ಕನಿಷ್ಠ ಒಂದು ವಾರದ ಮಟ್ಟಿಗೆ ಕಳಿಸಿರಿ, ಆತ ಬುದ್ಧಿವಂತನಾಗಿ ಹಿಂತಿರುಗದಿದ್ದರೆ ಕೇಳಿ ಎನ್ನುತ್ತಾರೆ ಹೋಗಿ ಬಂದ ವಿದ್ಯಾರ್ಥಿಗಳು. ಆದರೆ ಕಲಿಯುವ ವೇಳೆ ಇಂತಹ ಬೆರಗಿನ ಮಾತುಗಳು ಸಾಮಾನ್ಯ. ಹೊರಗಿನ ಜಗತ್ತಿಗೆ ಬಂದಾಗ ತಾಪ ಏನಂತ ಗೊತ್ತಾಗುತ್ತದೆ. ಕೆಲಸ ಹುಡುಕುವ ಕಷ್ಟದ ನಡುವೆ ವಾರ್ಧಾ ಆಶ್ರಮದಲ್ಲಿ ಬೆಳಗ್ಗೆ ಎದ್ದು ಮಿಂದು ತಿಂದ ಹಸಿ ಕ್ಯಾರೆಟ್‌ನ ನೆನಪು ಒಣಗುತ್ತದೆ. ಚರಕದ ಹತ್ತಿರ ನಿಂತು ತೆಗೆಸಿದ ಫೋಟೊ ಆಲ್ಬಮ್‌ನಲ್ಲಿರುತ್ತದೆ. ನಿಜಕ್ಕೂ ಚರಕದಿಂದ ನೂಲು ತೆಗೆಯಲು ದಿನಕ್ಕೆ ಹತ್ತು ಗಂಟೆ ರಟ್ಟೆ ಮುರಿದು ಮೂವತ್ತು ರೂಪಾಯಿಗೆ ತೃಪ್ತಿಪಡುವ ವೃದ್ಧೆಯರನ್ನು ರೋಣದಲ್ಲಿ ಕಾಣಬಹುದಷ್ಟೇ.
ಅಂದು ಸ್ವತಃ ನೆಹರೂ ಅವರಿಗೇ ಗಾಂಧೀಜಿ ವಿತ್ತ ಚಿಂತನೆ ಅರ್ಥವಾಗಿರಲಿಲ್ಲ. ನೀವು ಎಷ್ಟು ಕರೆಂಟ್‌ ಖರ್ಚು ಮಾಡುತ್ತೀರೊ, ಎಷ್ಟು ಉಕ್ಕು ಉತ್ಪಾದಿಸುತ್ತೀರೊ ಎನ್ನುವುದರ ಮೇಲೆ ನಿಜವಾದ ತಾಕತ್ತು ನಿಂತಿದೆ. ಗಾಂಧಿವಾದವೆಲ್ಲ ಬೋ ನಿದಾನ ಅಂತ ಮೂಗು ಮುರಿದಿದ್ದರು ಚಾಚಾ. ಇನ್ನು ನಾಲ್ಕೈದು ವಿಚಾರಸಂಕಿರಣ, ಕಾರ್ಯಾಗಾರ, ಒಂದು ಹಳ್ಳಿಗೆ ಭೇಟಿ ಮತ್ತೊಂದು ಪ್ರಬಂಧ ಸ್ಪರ್ಧೆಯಿಂದ ಹೇಗೆ ಗೊತ್ತಾಗಬೇಕು ಹೇಳಿ.
ಉಳಕೊಳ್ಳಲು ಹಾಸ್ಟೇಲ್‌ ಸಿಗುತ್ತದೆ ಎಂಬ ಅತಿಯಾಸೆಯಿಂದ ಗಾಂಧಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದವರಿದ್ದಾರೆ. ಇದೇ ಕಾರಣಕ್ಕಾಗಿ ಬೆಂಗಳೂರು ವಿ.ವಿಯಲ್ಲಿ ಗಾಂಧಿ ಅಧ್ಯಯನದ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯವನ್ನು ರದ್ದುಪಡಿಸಲಾಗಿದೆ. ಪಂಜಾಬ್‌ ವಿ.ವಿ ಸೇರಿದಂತೆ ಕೆಲವೆಡೆ ಸುಂದರ ಸುಸಜ್ಜಿತ ಭವನಗಳಿವೆ. ಆದರೆ ಅದರೊಳಗೆ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಮಹಾ ಪ್ರಬಂಧ ಮಂಡನೆಯಾಗಿದೆ. ನಡೆಯಬೇಕಿದ್ದ ವಿಷಯಗಳ ಬಗ್ಗೆ ಏನೂ ಆಗಿಲ್ಲ.
ಸ್ನಾತಕೋತ್ತರ ಪದವಿಯ ವ್ಯಾಸಂಗ ನಿರತ ಅಥವಾ ಪೂರೈಸಿದ ವಿದ್ಯಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಅವಧಿಯ ಗಾಂಧಿ ಅಧ್ಯಯನ ಪೂರೈಸಬಹುದು. ಇತರ ಪದವಿಯ ಜತೆಗೆ ಮಾಡುವುದರಿಂದ ಸಂಯೋಜಿತ ಪದವಿ ಅಂತ ಕರೆಯುತ್ತಾರೆ. ಕರಿಯರ್‌ಗೆ ಅನುಕೂಲವಾಗುತ್ತದೆ ಎಂದು ಭಾವಿಸುವವರಿಗೆ ಕಾಣುವ ಮತ್ತೊಂದು ಪ್ಲಸ್‌ ಪಾಯಿಂಟ್‌ ಶುಲ್ಕ. ಈ ಡಿಪ್ಲೊಮಾಗೆ ಪ್ರವೇಶ ಶುಲ್ಕ ೫೦೦ ರೂ. ಮಾತ್ರ. ಪರೀಕ್ಷೆಯ ಸಂದರ್ಭ ೬೦೦ ರೂ. ಶುಲ್ಕ ನೀಡಿದರೆ ಸಾಕು. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಟ್ಟು ೨೧ ಮಂದಿ ಸೇರ್ಪಡೆಯಾಗಬಹುದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಬ್ಯಾಚ್‌ನಲ್ಲಿ ಅಷ್ಟೂ ಸ್ಥಾನಗಳು ಭರ್ತಿಯಾಗಿವೆ. ಜತೆಗೆ ವಾರ್ಧಾ ಪ್ರವಾಸಕ್ಕೆ ಅವಕಾಶ ಸಿಗಲೂ ಬಹುದು.
ಅಲ್ಲೀಗ ಸಿಜಿಕೆ ಇಲ್ಲ
ಬೆಂಗಳೂರು ವಿಶ್ವ ವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರವನ್ನು ೧೯೬೫ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದ್ಘಾಟಿಸಿದ್ದರು. ಕರ್ನಾಟಕದ ರಾಜ್ಯಪಾಲ ಡಾ.ವಿ.ವಿ ಗಿರಿ, ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಆಗಮಿಸಿದ್ದರು. ೧೯೬೯ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಅಲ್ಲಿಂದ ಮತ್ತೆ ಕೇಂದ್ರದಲ್ಲಿ ಹಲವು ದಶಕಗಳ ಕಾಲ ನಡೆದ ಚಟುವಟಿಕೆ ಸೊನ್ನೆ. ೨೦೦೨ರಲ್ಲಿ ಪ್ರೊ.ಸಿಜಿಕೆಯವರು ಕೇಂದ್ರದ ನಿರ್ದೇಶಕರಾಗಿ ಬಂದಮೇಲೆ ಚೈತನ್ಯ ಬಂತು. ಗಾಂಧಿ ಅಧ್ಯಯನದ ಸುತ್ತಲಿನ ಪರಿಸರ ಕಲಾತ್ಮಕವಾಗಿ ಕಂಗೊಳಿಸಿತು. ಸಬರಮತಿ ಬಯಲು ರಂಗಮಂದಿರ ತಲೆ ಎತ್ತಿಕೊಂಡಿತು. ಬೆಂಗಳೂರಿನಲ್ಲಿಯೇ ಅತಿ ದೊಡ್ಡ ಚರಕದ ಕಂಚಿನ ಮಾದರಿ ಸ್ಥಾಪನೆಯಾಯಿತು. ಇದೆಲ್ಲ ಗಾಂಧಿ ಭವನದ ಭೌತಿಕ ಸಂದರ್ಯ ವೃದ್ಧಿಗೆ ಕಾರಣವಾಯಿತು. ಎಲ್ಲ ಚಟುವಟಿಕೆಗಳ ಹಿಂದೆ ಸಿಜಿಕೆಯವರ ದೂರದೃಷ್ಟಿ ಮತ್ತು ಪರಿಶ್ರಮ ಇತ್ತು. ಇದೀಗ ಮತ್ತೆ ಶೂನ್ಯ ಆವರಿಸಿದೆ. ಯಾಕೆಂದರೆ ಅಲ್ಲೀಗ ಸಿಜಿಕೆ ಇಲ್ಲ. ನಾಯಕತ್ವ ಸರಿಯಿಲ್ಲದಿದ್ದರೆ ಯಾವುದೇ ಸಂಸ್ಥೆಯಾದರೂ ಹೇಗೆ ಕಳಾಹೀನವಾಗುತ್ತದೆ ಎಂಬುದನ್ನು ಇಲ್ಲಿ ಧಾರಾಳವಾಗಿ ಗಮನಿಸಬಹುದು. ಈ ವರ್ಷ ಕೇಂದ್ರಕ್ಕೆ ಸಿಗುವ ಅನುದಾನದಲ್ಲಿಯೂ ಕಡಿತವಾಗಿದೆ. ಸುಜ್ಞಾನಮೂರ್ತಿಯವರು ೧೯೯೭ರಲ್ಲಿ ಸಿದ್ಧಪಡಿಸಿದ ಪಠ್ಯಕ್ರಮ ಇನ್ನೂ ಪರಿಷ್ಕರಣೆಯಾಗಿಲ್ಲ. ಎಂಫಿಲ್‌ ಆರಂಭಿಸುವ ಪ್ರಸ್ತಾಪ ನನೆಗುದಿಯಲ್ಲಿದೆ. ಗಾಂಧಿ ಅಧ್ಯಯನ-ರಾಜಕೀಯ ಮತ್ತು ಆರ್ಥಿಕತೆ, ಧರ್ಮ ಮತ್ತು ತತ್ತ್ವಶಾಸ್ತ್ರ, ಗಾಂಧಿವಾದ ಮತ್ತು ಸಾಮಾಜಿಕ ಬದಲಾವಣೆ ಹಾಗೂ ನನ್ನ ಗ್ರಾಮ ಎಂಬ ಪ್ರವಾಸ ಕಾರ್ಯಕ್ರಮವೇ ಪಠ್ಯಕ್ರಮ. ಈ ಪಠ್ಯಕ್ರಮ ಇತಿಹಾಸದ ಯಾವುದೋ ಶೀರ್ಷಿಕೆಯಂತಿಲ್ಲವೇ ? ನೀವೇ ಹೇಳಿ, ಗಾಂಧಿ ಅಧ್ಯಯನಕ್ಕೂ ಇತಿಹಾಸದ ಕಲಿಕೆಗೂ ವ್ಯತ್ಯಾಸವಿಲ್ಲವೇ ? ಅಥವಾ ಗಾಂಧಿ ಅಧ್ಯಯನವೆಂದರೆ ಅದರ ಇತಿಹಾಸ ಮಾತ್ರವಾ ? ಅದರ ಪ್ರಸ್ತುತತೆ ಏನು ಎಂಬುದು ಪಠ್ಯಕ್ರಮದಲ್ಲಿ ಇಲ್ಲದಿದ್ದರೆ ಅದರ ಅಧ್ಯಯನದ ಉಪಯೋಗವೇನು ?
ಜೈನಮತ ಮತ್ತು ಗಾಂಧಿ, ಭಯೋತ್ಪಾದನೆ ದಮನ ಮತ್ತು ಗಾಂಧಿ, ಜಾತಿ ಧರ್ಮದ ಬಗ್ಗೆ ಗಾಂಧಿ , ಶಿಕ್ಷಣ ಮತ್ತು ಗಾಂಧಿ.. ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ವಿಚಾರಸಂಕಿರಣಗಳಲ್ಲಿ ಚರ್ವಿತಚರ್ವಣವಾದ ಚಿಂತನೆಗಳ ಶೀರ್ಷಿಕೆಗಳಿವು. ಇಷ್ಟೆಲ್ಲ ಮಾಡಿದ್ದೇವೆ ಅಂತ ಕರಪತ್ರದಲ್ಲಿ ಬೇರೆ ಪ್ರಕಟಿಸಿದ್ದಾರೆ. ಇಂಥ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಗಾಂಧಿ ಭವನಗಳ ವಿಚಾರಸಂಕಿರಣವೇಕೆ ? ಗ್ರಂಥಾಲಯಗಳಲ್ಲಿ ಪುಸ್ತಕ ಓದಿ ತಿಳಿಯಬಹುದು. ಇಂಟರ್‌ನೆಟ್‌ ಕೂಡ ಸಹಾಯಕ್ಕೆ ಬರುತ್ತದೆ. ಅಲ್ವಾ.
ಮಂಗಳೂರಿನ ಪಬ್‌ನಲ್ಲಿ ಪುಂಡಾಟಿಕೆ ನಡೆಸಿದ ಮುತಾಲಿಕ್‌ ಸಂಗಡಿಗರ ವಿರುದ್ಧ ಪರ್ತಕರ್ತೆಯೊಬ್ಬರು ನಯಾ ಪೈಸೆ ಖರ್ಚಿಲ್ಲದೆ ಪಿಂಕ್‌ಚೆಡ್ಡಿ ಐಡಿಯಾ ಪ್ರಕಟಿಸಿದಳು. ಒಂದಿಷ್ಟು ಸಾವಿರ ಜನ ಆಕೆಯ ಕಪಿಚೇಷ್ಟೆಗೆ ದನಿಗೂಡಿಸಿದರು. ಕೆಲವು ಪತ್ರಿಕೆಗಳಂತೂ ಇದನ್ನು ಗಾಂಧಿಗಿರಿ ಶೈಲಿಯ ಪ್ರತಿಭಟನೆ ಅಂತ ಹೊಗಳಿದರು. ಜಯಕರ್ನಾಟಕದ ಸ್ವಯಂಘೋಷಿತ ನಾಯಕನೊಬ್ಬ ಸುವರ್ಣವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಣರಾಜ್ಯೋತ್ಸವ ದಿನದಂತೆ ಲವ್‌ ಮಾಡುವವರ ದಿನ ಇದ್ದರೇನಂತೆ ಎಂದು ಬಿಟ್ಟ. ನಾಚಿಕೆಯಾಗುವುದಿಲ್ಲವೇ ಇಂಥ ಲಜ್ಜೆಗೆಟ್ಟ ಕೆಲಸಕ್ಕೆ ಮತ್ತು ಅದರ ಸಮರ್ಥನೆಗೆ ? ಇಂತಹ ವಿಕೃತಿಗಳ ಬಗ್ಗೆ ಅರಿವು ಮೂಡಿಸಲು ಗಾಂಧಿ ಭವನಗಳೇಕೆ ಮುಂದಾಗಬಾರದು ? ಗಾಂಧೀಜಿಯವರ ಆದರ್ಶಗಳಲ್ಲಿ ಸ್ವಲ್ಪವಾದರೂ ಉಳಿದುಕೊಂಡಿರುವುದು ಖಾದಿ ಉದ್ಯಮ. ಅದರ ಪುನರುಜ್ಜೀವನಕ್ಕೆ ಹೇಗೆಲ್ಲ ದುಡಿಯಬಹುದು ಎಂಬುದರ ಬಗ್ಗೆ ಯಾಕೆ ವಿಚಾರ ಮಾಡುತ್ತಿಲ್ಲ
ಕಣ್ಣಾರೆ ಪರಿಚಯಿಸಬೇಕು
ಯಾವತ್ತೂ ಚರ್ಚೆಗಳು ಮಾತ್ರ ಸಾಲುವುದಿಲ್ಲ. ಮನಸ್ಸಿಗೆ ತಟ್ಟಬೇಕಾದರೆ, ಮುಟ್ಟಬೇಕಾದರೆ ಗಾಂಧಿ ಚಿಂತನೆಯಲ್ಲಿ ಬಾಳು ನಡೆಸಿತ್ತಿರುವವರನ್ನು ವಿದ್ಯಾರ್ಥಿಗಳಿಗೆ ಕಣ್ಣಾರೆ ಪರಿಚಯಿಸಬೇಕು. ಗಾಂಧಿ ಹೇಳಿದ್ದನ್ನು ಅವರು ಹೇಗೆ ಅನುಸರಿಸಿದರು ಎಂಬುದನ್ನು ಕಲಿಸಬೇಕು. ಅದರಿಂದ ವಿದ್ಯಾರ್ಥಿಗಳ ಬದುಕಿಗೂ ಉಪಯೋಗವಾದೀತು.
ಭೋಗ ಸಂಸ್ಕೃತಿಯ ವಿನಾಶಕಾರಿ ಭವಿಷ್ಯ ಗಾಂಧಿಜಿಗೆ ಅಂದೇ ಹೊಳೆದಿತ್ತು ಎಂಬುದು ಈಗ ಸ್ಪಷ್ಟವಾಗುತ್ತಿದೆ. ಅದಕ್ಕೆ ಕಾರಣ ಆರ್ಥಿಕ ಹಿನ್ನಡೆ. ಸಾಮಾನ್ಯ ಉದ್ಯೋಗಿಯಿಂದ ಕಾರ್ಪೊರೇಟ್‌ ಕಂಪನಿಗಳ ತನಕ ಎಲ್ಲರಿಗೂ ಸರಳ ಜೀವನದ ಅಗತ್ಯವನ್ನು ಆರ್ಥಿಕ ಕುಸಿತ ಬಲವಂತವಾಗಿ ಕಲಿಸುತ್ತಿದೆ. ಏಳೆಂಟು ಕ್ರೆಡಿಟ್‌ಕಾರ್ಡ್ ಉಜ್ಜಿ ಸಾಲದ ಬಲೆಗೆ ಬಿದ್ದವರಿಗೆ ಗಾಂಧಿ ಚಿಂತನೆಯ ಅಧ್ಯಯನದಿಂದ ಕನಿಷ್ಠ ಸರಳ ಜೀವನದ ಅಗತ್ಯ ಅರ್ಥವಾಗಬಹುದು.
೨. ಖಾದಿಗೆ ವ್ಯಾಪಾರ, ಬೀದಿಗೆ ನೇಕಾರ ಹೇ ರಾಮ್‌ !

ಆವತ್ತು ಬಾಪೂಜಿ ತಾವೇ ಚರಕದಲ್ಲಿ ದುಡಿದು ಲೋಟ ಹಾಲು ಮತ್ತು ಕಡಲೇಕಾಯಿ ತೆಗೆದುಕೊಮಡಿರಬಹುದು. ಆದರೆ ಇವರು ಕೊಡೋ ಸಂಬಳದಲ್ಲಿ ಅದಕ್ಕೂ ಕಾಸು ಹುಟ್ಟಲ್ಲ ಸಾ..
ಕಳೆದ ೨೫ ವರ್ಷಗಳಿಂದ ಖಾದಿ ಕಾರ್ಮಿಕರಾಗಿರುವ ನಾರಾಯಣ (ಹೆಸರು ಬದಲಿಸಿದೆ) ಕ್ಷೀಣವಾದ ದನಿಯಲ್ಲಿ ತೋಡಿದ ವ್ಯಥೆಯಿದು. ಇನ್ನೂ ಅವರ ಸಂಬಳ ತಿಂಗಳಿಗೆ ೨ ಸಾವಿರ ರೂ. ದಾಟಿಲ್ಲ. ಅವರೀಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೆ. ಅದೊಂದು ಕಾಲವಿತ್ತು. ಖಾದಿ ಬಟ್ಟೆ ತಯಾರಿಸುವುದು ಕಾರ್ಮಿಕನಿಗೊಂದು ಹೆಮ್ಮೆಯ ಸಂಗತಿಯಾಗಿತ್ತು. ಈಗ ಕಣ್ಣೀರು ಕೂಡ ಬತ್ತಿದೆ.
ಬೇಕಾದರೆ ನೋಡಿ, ರಾಜ್ಯದಲ್ಲಿ ಕಾನೂನು ಪ್ರಕಾರ ಯಾವ ಕೆಲಸಕ್ಕೆ ಎಷ್ಟು ಕನಿಷ್ಠ ವೇತನ ಎನ್ನುವುದು ನಿಗದಿಯಾಗಿದೆ. ಅದರಂತೆ ನೇಯುವವರಿಗೆ ನಾಲ್ಕು ಪ್ರಕಾರದಲ್ಲಿ ಕನಿಷ್ಠ ವೇತನ ನಿಗದಿಯಾಗಿದೆ. ಕೌಶಲ್ಯರಹಿತ ಕಾರ್ಮಿಕನಿಗೆ ದಿನಕ್ಕೆ ೧೧೩ ರೂ. ಇದ್ದರೆ, ಹೆಚ್ಚಿನ ಕೌಶಲ್ಯವಿರುವ ಉದ್ಯೋಗಿಗೆ ೧೨೭ ರೂ. ನೀಡಲೇಬೇಕು. ಹೀಗಿರುವಾಗ ೨೫ ವರ್ಷಗಳಿಂದ ದುಡಿಯುತ್ತಿರುವ ಬಡ ನಾರಾಯಣರಿಗೆ ಕನಿಷ್ಠ ವೇತನದ ಅರ್ಧ ಕೂಡ ಆಗಲಿಲ್ಲವಲ್ಲಾ. ಹಾಗಾದರೆ ಕಳೆದ ೨೫ ವರ್ಷಗಳಿಂದ ದುಡಿದು ಹೈರಾಣಾಗಿರುವ ಅವರಿಗೆ ನ್ಯಾಯವಾಗಿ ಸಿಗಬೇಕಿದ್ದ ಕನಿಷ್ಠ ವೇತನ ಹಾಗೂ ಉಳಿದ ಪಾಲನ್ನು ನುಂಗಿದ ಭೂಪನಾರು ?
ಕಾರ್ಪೋರೇಷನ್‌ನಲ್ಲಿ ಕಸ ಗುಡಿಸುವವನಿಗೆ ನನಗಿಂತ ಎರಡುಪಟ್ಟು ಹೆಚ್ಚು ಸಂಬಳ ಸಿಗುತ್ತದೆ. ಆದರೆ ೧೯೮೪ರಲ್ಲಿ ಈ ಕೆಲಸಕ್ಕೆ ಸೇರಿರುವ ನನಗಿಲ್ಲ. ದಿನಾ ಮಂಡಳಿಯವರು ಸರಿಯಾಗಿ ಲೆಕ್ಕ ತೆಗೆದುಕೊಳ್ಳುತ್ತಾರೆ. ಆದರೆ ಬರಬೇಕಾದ ಸಂಬಳಕ್ಕೆ ಎರಡೆರಡು ತಿಂಗಳು ಕಾದದ್ದಿದೆ. ಕೇಳಿದರೆ ಫಂಡು ಬಂದಿಲ್ಲ ಎಂದು ಕಥೆ ಕಟ್ಟುತ್ತಾರೆ. ಯಾರಾದರೂ ಏನಾದರೂ ಮಾಡಿ ಸಾರ್‌.. ಇವರು ಕೊಡೋದನ್ನು ನಂಬಿದರೆ ಎರಡು ಹೊತ್ತಿನ ತುತ್ತಿಗೆ ಆಗಲ್ಲ.. ಎಂದು ನೋವು ತೋಡಿಕೊಳ್ಳುತ್ತಾರೆ ನಾರಾಯಣ. ಇದು ರಾಜ್ಯದ ಐವತ್ತು ಸಾವಿರಕ್ಕೂ ಹೆಚ್ಚು ಬಡ ಕಾರ್ಮಿಕರ ಯಾತನೆ.
ಸಹಕಾರ ತತ್ತ್ವದ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು ೨೦೦ ಖಾದಿ ಕೇಂದ್ರಗಳು ನಡೆಯುತ್ತಿವೆ. ಇವುಗಳಿಗೆ ಸರಕಾರ ಅನುದಾನ, ಸಬ್ಸಿಡಿ ನೆರವು ನೀಡುತ್ತದೆ. ಇಲ್ಲಿ ಉತ್ಪನ್ನವಾಗುವ ಖಾದಿಯನ್ನು ಮಾರಾಟ ಮಡುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವ ಕಾರ್ಮಿಕ, ಕಲಾವಿದರ ಪಾಡು ಯಾರಿಗೂ ಬೇಡ. ಅವರ ಸಂಬಳವನ್ನು ಗೌರವ ಧನ ಅಂತ ಕರೆಯಲಾಗುತ್ತದೆ. ಹೆಸರು ಏನೇ ಇರಲಿ, ಬೆಳಗ್ಗೆಯಿಂದ ದಿನವಿಡೀ ವರ್ಷಗಟ್ಟಲೆ ದುಡಿಯುವುದಿಲ್ಲವೇ ? ಇವರು ಎಷ್ಟೇ ಅತ್ತು ಗೋಗರೆದರೂ ಸಂಬಳ ಹೆಚ್ಚಾಗುತ್ತಿಲ್ಲ. ಹೀಗಾಗಿ ಖಾದಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಖಾದಿ ಹೆಸರಿನಲ್ಲಿ ಮಂಡಳಿಯಿದೆ. ಕೇಂದ್ರ ಆಯೋಗವಿದೆ. ಖಾದಿ ಉತ್ಪನ್ನಗಳ ಮಾರಾಟಕ್ಕೆ ಉತ್ಸವಗಳನ್ನು ವಾರಗಟ್ಟಲೆ ಆಯೋಜಿಸುತ್ತಾರೆ. ಆದರೆ ಅದೇ ಖಾದಿಯ ಬಟ್ಟೆಯನ್ನು ನೇಯುವವನಿಗೆ ಹೊಟ್ಟೆಗೆ ಹಿಟ್ಟಿಲ್ಲ.
ಲೂಥರ್‌ ಕಲಿತದ್ದು
ಐವತ್ತು ವರ್ಷಗಳ ಹಿಂದೆ ೧೯೫೯ರ ಫೆಬ್ರವರಿ ೯ರಂದು ಅಮೆರಿಕದ ಮಾನವ ಹಕ್ಕುಗಳ ಹೋರಾಟದ ನಾಯಕ ಮಾರ್ಟಿನ್‌ ಲೂಥರ್‌ ಕಿಂಗ್ ಮುಂಬಯಿಗೆ ಬಂದಿಳಿದಿದ್ದರು. ಗಾಂಧಿ ವಿಚಾರಧಾರೆಯನ್ನು ಅಧ್ಯಯನ ಮಾಡುವುದು ಅವರ ಭೇಟಿಯ ಉದ್ದೇಶವಾಗಿತ್ತು. ಪತ್ನಿ ಹಾಗೂ ಆಪ್ತರು ಜತೆಗಿದ್ದರು. ದಿಲ್ಲಿ ಹಾಗೂ ಸಬರಮತಿ ಆಶ್ರಮಕ್ಕೂ ಕಿಂಗ್‌ ಭೇಟಿ ನೀಡಿದ್ದರು, ದಿಲ್ಲಿಯಲ್ಲಿ ಗಾಂಧಿ ಟೋಪಿ ಧರಿಸಿದ್ದ ಲೂಥರ್‌ , ಗಾಂಧೀಜಿಯವರ ಜೀವನ ಶೈಲಿಯನ್ನು ಅನುಸರಿಸಲು ಪ್ರಯತ್ನಿಸಿದ್ದರು. ಆದರೆ ಅವರ ಯಶಸ್ಸು ಸೀಮಿತವಾಗಿತ್ತು. ಉಪವಾಸ, ಧ್ಯಾನ, ಅಪರಿಗ್ರಹ ಮುಂತಾದ ಪದ್ಧತಿಯನ್ನು ಒಗ್ಗಿಸಿಕೊಳ್ಳಲು ಸಾಧ್ಯವಾಗದೆ ಹಿಂತಿರುಗಿದರು. ಹೀಗಿದ್ದರೂ ಗಾಂಧೀಜಿಯವರ ಅಹಿಂಸಾ ಮಾರ್ಗದ ಹೋರಾಟದಿಂದ ಮಾತ್ರ ಅಮೆರಿಕದಲ್ಲಿನ ವರ್ಣ ದ್ವೇಷವನ್ನು ಕೊನೆಗಾಣಿಸಬಹುದು ಎಂದು ಕಂಡುಕೊಮಡರು. ಆದರೆ ನಾವು ಯಾವುದು ಬೇಕು, ಬೇಡ ಎಂದು ಕಂಡುಕೊಳ್ಳದೇ ಸಾರಾಸಗಟಾಗಿ ಗುಡಿಸಿದ್ದೇವೆ. ಅಷ್ಟಿಷ್ಟು ಉಳಿಸಿರುವ ಖಾದಿ ಉದ್ಯಮವನ್ನು ಕೂಡ ಪರಿಷ್ಕರಿಸಿಲ್ಲ.
ದೇಶದಲ್ಲಿ ಸುಮಾರು ೮೮ ಲಕ್ಷ ಮಂದಿಗೆ ಖಾದಿಯೇ ಅನ್ನಕ್ಕೆ ದಾರಿಯಾಗಿದೆ. ಕಳೆದ ವರ್ಷ (೨೦೦೭-೦೮) ಖಾದಿ ಉದ್ಯಮದ ವಹಿವಾಟು ೫೫೫ ಕೋಟಿ ರೂ. ದಾಟಿತ್ತು. ಅದು ಕೇರಳವಾಗಿರಲಿ, ಕರ್ನಾಟಕವಾಗಿರಲಿ, ಖಾದಿ ಉತ್ಪನ್ನಗಳಿಗೆ ಬೇಡಿಕೆಯಿದೆ.ಖಾದಿ ಉತ್ಸವಗಳಲ್ಲಿ ಹೆಚ್ಚಿನ ಕ್ರಯಕ್ಕೆ ಉತ್ಪನ್ನಗಳನ್ನು ಮಾರಾಟಕ್ಕಿಟ್ಟರೂ ಜನ ಕೊಳ್ಳುತ್ತಾರೆ. ಆದರೂ ಖಾದಿ ಕಾರ್ಮಿಕನಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಕಾಟಾಚಾರಕ್ಕೆ ಕೆಲವು ರಾಜ್ಯಗಳಲ್ಲಿ ಖಾದಿ ಮಂಡಳಿಗಳು ಕಾರ್ಮಿಕರ ಮಕ್ಕಳಿಗೆ ಮುನ್ನೂರೋ, ನಾನ್ನೂರೋ ರೂ.ಗಳ ಸ್ಕಾಲರ್‌ಶಿಪ್‌ ಕೊಡುತ್ತವೆ. ಆದರೆ ಅದೇ ಮಕ್ಕಳಲ್ಲಿ ಖಾದಿ ಉತ್ಪನ್ನಗಳ ತಂತ್ರಜ್ಞರನ್ನು, ವಿನ್ಯಾಸಕಾರರನ್ನು ರೂಪಿಸಲು ನೆರವಾಗುವುದಿಲ್ಲ. ವಸ್ತ್ರದಲ್ಲಿ ಹೊಸ ವಿನ್ಯಾಸ ಅಭಿವೃದ್ಧಿಗೆ ಮುಂದಾಗಿಲ್ಲ.
ಬಾಹ್ಯ ಮಾರುಕಟ್ಟೆಯ ಆರ್ಥಿಕ ಅವಲಂಬನೆಯಿಂದ ದೂರ ಇರಬೇಕು ಎನ್ನುತ್ತದೆ ಗಾಂಧೀಜಿಯವರ ಸ್ವದೇಶಿ ಪದ್ಧತಿ. ಗ್ರಾಮದಲ್ಲಿ ಉತ್ಪಾದನೆಯಾಗುವ ವಸ್ತು ಮೊದಲು ಗ್ರಾಮದಲ್ಲಿ ಬಳಕೆಯಾಗಬೇಕು. ಗ್ರಾಮದ ಬೇಕುಗಳೆಲ್ಲ ಆಯಾ ಗ್ರಾಮದಲ್ಲಿಯೇ ಸಿಗಬೇಕು. ಪ್ರತಿಯೊಂದು ಗ್ರಾಮ ಕೂಡ ತನ್ನದೇ ಬಡಗಿ, ಚಮ್ಮಾರ, ಕುಂಬಾರ, ಬ್ಯಾಂಕರ್‌, ಎಂಜಿನಿಯರ್‌, ನೇಕಾರ, ಶಿಕ್ಷಕ, ಸಂಗೀತಗಾರ, ಪುರೋಹಿತ, ಕಲಾವಿದನನ್ನು ಹೊಂದಬೇಕು. ಆಗ ಹೊರಗಿನ ಆಶ್ರಯ ಬೇಡುವುದು ತಪ್ಪುತ್ತದೆ. ಎಲ್ಲಿಂದಲೋ ತಂದ ವಸ್ತು ಹಾಗೂ ಸೇವೆ ಸಮುದಾಯದ ಒಳಗೆ ಸರಬರಾಜಾಗಕೂಡದು. ಹೊರಗಿನಿಂದ ತಂದ ಉತ್ಪನ್ನಗಳು ಹಾಗೂ ಸೇವೆಯಿಂದ ಪರಾವಲಂಬನೆ ತಪ್ಪುತ್ತದೆ. ಎಲ್ಲಿಂದಲೋ ತಂದ ವಸ್ತು ಹಾಗೂ ಸೇವೆ ಸಮುದಾಯದ ಒಳಗೆ ಸರಬರಾಜಾಗಕೂಡದು. ಹೊರಗಿನಿಂದ ತಂದ ಉತ್ಪನ್ನಗಳು ಹಾಗೂ ಸೇವೆಯಿಂದ ಪರಾವಲಂಬನೆ ಹೆಚ್ಚುತ್ತದೆ. ಸ್ಥಳೀಯ ಮಾರುಕಟ್ಟೆಯ ತಾಳ ತಪ್ಪುತ್ತದೆ ಅಂತ ಗಾಂಧೀಜಿ ಹೇಳಿದ್ದರು. ಆಗ ಗಾಂಧೀಜಿ ಹೇಳಿದ್ದನ್ನೆಲ್ಲವನ್ನೂ ಈವತ್ತು ಯಥಾವತ್ತಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ, ಸೂಕ್ತ ಮಾರ್ಪಾಟಿನಿಂದಬಹುತೇಕ ಮಾದರಿಯನ್ನು ಅನುಸರಿಸಲು ಸಾಧ್ಯ. ಅದು ಹೇಗೆ ಎಂಬುದನ್ನು ಮುಂದೆ ಚರ್ಚಿಸೋಣ. ಅದಾವುದನ್ನೂ ಮಾಡದೆ ಅನುದಾನಗಳನ್ನು ನುಂಗಿ, ಕಾರ್ಮಿಕರನ್ನು ಶೋಷಿಸುತ್ತಿರುವ ಖಾದಿ ಮಂಡಳಿಯವರನ್ನು ಪ್ರಶ್ನಿಸೋಣ. ಆದರೆ ಈ ನಿಟ್ಟಿನಲ್ಲಿ ಚಿಂತಿಸದೆ ಗಾಂಧಿ ಅಧ್ಯಯನದ ವಿದ್ಯಾರ್ಥಿಗಳು ವರ್ಷಕ್ಕೊಮ್ಮೆ ವಾರ್ಧಾಗೆ ಹೋಗಿ ವಾಪಾಸಾದರೆ ಚೊಕ್ಕಟವಾಗಿ ಒಂದು ಪ್ರವಾಸ ಕೈಗೊಂಡಂತಾಗಬಹುದು. ಅಷ್ಟೇ.
ಪರಿಶ್ರಮದ ಮಹತ್ವ ಗೊತ್ತಾಗಬೇಕು
ಮಾಸ್‌ ಪ್ರೊಡಕ್ಷನ್‌ನಿಂದ ಜನರು ತಮ್ಮ ಗ್ರಾಮಗಳನ್ನು ತೊರೆದು ಪಟ್ಟಣ ಸೇರುತ್ತಾರೆ. ತಮ್ಮ ಜಮೀನು, ಕರಕುಶಲ, ಬಂಧು ಬಳಗವನ್ನು ಬಿಟ್ಟು ನಗರದ ಕಾರ್ಖಾನೆಯಲ್ಲಿ ಯಂತ್ರಗಳ ಮಧ್ಯೆ ಕಳೆದುಹೋಗುತ್ತಾರೆ. ಉತ್ಪಾದಕತೆ ಹೆಚ್ಚಿಸಲು ಯಂತ್ರಗಳಂತೆ ಇವರನ್ನು ದುಡಿಸಿಕೊಳ್ಳುತ್ತಾರೆ. ಜಾಗತೀಕರಣದ ಪರಿಣಾಮ ಪ್ರತಿಯೊಂದು ರಾಷ್ಟ್ರ ಕೂಡ ಮತ್ತೊಂದು ರಾಷ್ಟ್ರವನ್ನು ತನ್ನ ಉತ್ಪನ್ನಗಳಿಗೆಮಾಶರುಕಟ್ಟೆ ಎಂಬಂತೆ ನೋಡುತ್ತದೆ. ರಫ್ತನ್ನು ಹೆಚ್ಚಿಸಿ ಆಮದನ್ನು ತಗ್ಗಿಸಲು ಯತ್ನಿಸುತ್ತದೆ. ಇದರಿಂದ ನಿರುದ್ಯೋಗ ಉಂಟಾಗಿ ಆರ್ಥಿಕ ಬಿಕ್ಕಟ್ಟು ತಲೆದೋರುತ್ತದೆ. ಆದ್ದರಿಂದ ಸಮೂಹದಿಂದ ಉತ್ಪಾದನೆಯಾಗಬೇಕೇ ವಿನಾ ಮಾಸ್‌ ಪ್ರೊಡಕ್ಷನ್‌ ಆಗಕೂಡದು ಎಂದು ಗಾಂಧೀಜಿ ಹೇಳಿದ್ದರು. ಬಹುಶಃ ವಿತರಣೆ ಇಲ್ಲದಿದ್ದ ಪಕ್ಷದಲ್ಲಿ ಸಾಮೂಹಿಕ ಉತ್ಪಾದನೆಯಿಂದ ದುರಂತ ಉಂಟಾಗಬಹುದು ಎಂದು ಅವರು ಹೇಳಿರಬಹುದು. ಆದರೆ ಸಾಮೂಹಿಕ ಉತ್ಪಾದನೆಗೇ ಗಾಂಧೀಜಿಯವರ ವಿರೋಧ ಇತ್ತು ಎಂದು ಬಿಂಬಿಸಲಾಗುತ್ತಿದೆ. ಇಂಥ ಗೊಂದಲಗಳನ್ನು ಬಗೆಹರಿಸಲು ಗಾಂಧಿ ಪಠ್ಯಕ್ರಮಗಳು ಬೇಕಾಗಿದೆ.
ಯಾಕೆಂದರೆ ಜಾಗತೀಕರಣದ ಪರಿಣಾಮ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಮೀಸಲಾತಿ ಇಲ್ಲದಿದ್ದರೂ ಪ್ರತಿಭಾವಂತ ಬಡ ಯುವ ಜನತೆ ಸ್ವಂತ ಸಾಮರ್ಥ್ಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ‌ ಪ್ರೊಡಕ್ಷನ್‌ ಪರಿಣಾಮದಿಂದಲೇ ಅನೇಕ ವಸ್ತುಗಳು ಅಗ್ಗವಾಗಿವೆ. ಈವತ್ತು ಬೇಡಿಕೆ ಇರುವ ಉತ್ಪನ್ನಗಳಿಗೆ ಮಾಸ್‌ ಪ್ರೊಡಕ್ಷನ್‌ ಬೈ ಮಾಸ್‌ ಎಂಬುದೇ ಗುರಿ ಮತ್ತು ದಾರಿ ಆಗಬೇಕು. ಇದರ ಜತೆಗೆ ಗಾಂಧಿವಾದಿಯಾಗಿ ಸರಳ ಬದುಕು ಹೇಗೆ ಸಾಧ್ಯ ಎಂಬುದನ್ನು ಕಲಿಯಬೇಕು. ನಿರುದ್ಯೋಗಿಗಳಿಗೆ ಕಠಿಣ ಪರಿಶ್ರಮದ ಮಹತ್ವ ಗಾಂಧಿವಾದದಿಂದ ಗೊತ್ತಾಗಬೇಕು. ಆದಾಯ ಮೀರಿ ಕ್ರೆಡಿಟ್‌ಕಾರ್ಡ್ ಬಳಸುತ್ತಿರುವವರಿಗೆ ಸರಳತನದ ಅರಿವಾಗಬೇಕು. ಗಾಂಧಿ ಅಧ್ಯಯನಕ್ಕೂ ಉದ್ಯೋಗಾವಕಾಶಕ್ಕೂ ನಿಕಟ ಸಂಪರ್ಕ ಬೆಸೆಯಬೇಕು. ಇಲ್ಲದಿದ್ದರೆ ಓದಿ ಉಪಯೋಗವಿಲ್ಲ.

೩. ಉತ್ಸವದಲ್ಲಿ ನೇಕಾರ ತಬ್ಬಲಿ, ನಕಲಿ ಭಂಡಾರದಲ್ಲಿ ದರ ಕಡಿತ
ಈ ಖಾದಿ ಉತ್ಸವಕ್ಕೆ ಬಂದು ಹದಿನೈದು ದಿವಸಗಳಾತು. ವ್ಯಾಪಾರ ಛಲೋ ಇಲ್ಲಾರಿ, ಇದಕ್ಕಿಂತ ನಮ್ಮೂರ‍್ನಾಗೆ ಗಾಡಿ ಮ್ಯಾಲೆ ಹೋದ್ರೆ ಒಂದು ವಾರದಾಗ ಲಕ್ಷ ರೂಪಾಯಿ ವ್ಯಾಪಾರ ಆಗತೈತಿ. ಇಲ್ಲಿ ಜಳಕ (ಸ್ನಾನ) ಮಾಡೋದಕ್ಕೂ ವ್ಯವಸ್ಥೆ ಇಲ್ಲ. ಮೂರು ದಿವಸ ಆತು.. ಖರೆ ಹೇಳಬೇಕಂದ್ರೆ ಇಲ್ಲಿಗೆ ಬರೋದ್ರಿಂದ ನಷ್ಟ ಆಗತೈತಿ..
ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಖಾದಿ ಮೇಳದಲ್ಲಿ ದೂರದ ವಿಜಾಪುರದಿಂದ ಬಂದಿದ್ದ ಗ್ರಾಮೋದ್ಯೋಗ ಸಂಘದ ಕಾರ್ಯಕರ್ತ ಭೀಮಣ್ಣ (ಹೆಸರು ಬದಲಿಸಿದೆ) ಅನಾಥನಂತೆ ಹೇಳಿದ ಮಾತಿದು.
ಹಾಗಾದರೆ ನಷ್ಟವಾದರೂ ಅವರೇಕೆ ಅರಮನೆ ಮೈದಾನದ ಮೇಳದಲ್ಲಿ ಮಳಿಗೆಗೆ ೧೨ ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಖಾದಿ ಬಟ್ಟೆಗಳೊಂದಿಗೆ ಕೂತರು ? ಈ ಮೇಳದಲ್ಲಿ ಕೆಲಸವರಿಗ್‌ಎ ಮಧ್ಯಾಹ್ನ ೧೨ ಗಂಟೆ ದಾಟಿದರೂ ಬೋಣಿಯೇ ಆಗುವುದಿಲ್ಲ. ಆದರೂ ಖಾದಿ ಸಂಘಗಳು ಉತ್ಸವಕ್ಕೆ ಬರುತ್ತವೆ. ಯಾಕೆಂದರೆ ಖಾದಿ ಗ್ರಾಮೋದ್ಯೋಗ ಸಂಘಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಶೇ. ೨೫ ಮತ್ತು ಶೇ. ೧೫ರ ಸಬ್ಸಿಡಿ ನೆರವು ಸಿಗುತ್ತದೆ. ಮಳಿಗೆ ತೆರೆಯದಿದ್ದರೆ ಅವರಿಗೆ ಸಬ್ಸಿಡಿ ಸಿಗುವುದಿಲ್ಲ.
ಇಷ್ಟಾಗಿಯೂ ಖಾದಿಯ ಬ್ಯ್ರಾಂಡ್‌ ಉಳಿಸಿಕೊಳ್ಳುವ ಪ್ರಯತ್ನ ನಡೆದಿಲ್ಲ. ನೋಡಿ, ಬಾಟಾ ಅಂದೊಡನೆ ಶೂ ನೆನಪಾಗುತ್ತದೆ. ಟಾಟಾ ಅಂದೊಡನೆ ಬಸ್ಸು, ಲಾರಿ , ನ್ಯಾನೋ ಕಾರು, ಉಪ್ಪು ನೆನಪಾಗುತ್ತದೆ.ಆದರೆ ರಾಜ್ಯ ಖಾದಿ ಮಂಡಳಿಯವರು ಖಾದಿ ಉತ್ಪನ್ನಗಳ ಬ್ಯ್ರಾಂಡ್‌ ಸೃಷ್ಟಿಗೆ ಇಟ್ಟ ಹೆಸರು ನಿಸರ್ಗ !ನಿಸರ್ಗ ಅಂದೊಡನೆ ಖಾದಿಗೆ ಸಂಬಂಧಿಸಿದ್ದು ಅಂತ ಯಾರಿಗಾದರೂ ಗೊತ್ತಾಗುತ್ತಾ ?
ಖಾದಿ ಉತ್ಸವದಿಂದ ಬಡ ನೇಕಾರನ ಸಂಬಳ ಹೆಚ್ಚಾಗುವುದಿಲ್ಲ. ಅಲ್ಲಿ ಉತ್ಪನ್ನಗಳನ್ನು ಮಾರಾಟ ಮಡುವರೆಲ್ಲರೂ ನೇಕಾರರೂ ಅಲ್ಲ. ಅವರಲ್ಲಿ ಬಹುತೇಕ ಮಂದಿ ಮಧ್ಯವರ್ತಿಗಳೇ. ಇವರಿಂದ ನೇಕಾರರ ಹಿತ ಹೇಗೆ ನಿರೀಕ್ಷಿಸಬಹುದು ? ಅಂದಹಾಗೆ ನೇಕಾರರಲ್ಲೂ ಚರಕದಲ್ಲಿ ನೇಯುವವರು, ಕೈಮಗ್ಗ ನೇಕಾರರು ಅಂತ ವಿಧಗಳಿವೆ. ಕೈಮಗ್ಗ ನೇಕಾರರಿಗೆ ಕೈ ಮಗ್ಗ ನೇಕಾರರ ನಿಗಮವಿದೆ. ಅವರಿಗೆ ವಿಮೆ, ದಿನಗೂಲಿ, ಭತ್ಯೆ ಇದೆ. ಆದರೆ ನೇಕಾರನಿಗೆ ಇದಾವುದೂ ಇಲ್ಲ. ಹೀಗಿರುವಾಗ ಎಲ್ಲಿದೆ ಆತನಿಗೆ ನೆಮ್ಮದಿ ? ಬಹುತೇಕ ಮಂದಿಗೆ ನೇಕಾರ ಅಂದರೆ ಯಾರು ? ಅವರಲ್ಲಿಯೂ ವಿಧಗಳಿವೆಯಾ ಎಂಬುದೇ ಗೊತ್ತಿಲ್ಲ.
ಯೋಜನೆಗಳಿವೆ, ಸಂಬಳ ಇಲ್ಲ
ರಾಜ್ಯದಲ್ಲಿ ಚಿತ್ರದುರ್ಗದಲ್ಲಿ ಹಂಜಿ ಕೇಂದ್ರವಿದೆ. ಇಡೀ ರಾಜ್ಯದ ಇನ್ನೂರು ಖಾದಿ ಗ್ರಾಮೋದ್ಯೋಗ ಸಂಘಗಳ ನೇಕಾರರಿಗೆ ನೇಯಲು ಬೇಕಾಗುವ ಕಾಳು ಬೇರ್ಪಡಿಸಿದ ಹತ್ತಿ ರವಾನೆಯಾಗುವುದು ಇಲ್ಲಿಂದಲೇ. ೬೮ ರೂಪಾಯಿಗೆ ೧ ಕೆಜಿ ಹತ್ತಿ ಸಿಗುತ್ತದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಅಂಬರ ಕೇಂದ್ರಗಳೆಂಬ ಸ್ಥಳಗಳಿವೆ. ಇಲ್ಲಿಗೆ ರವಾನೆಯಾಗುವ ಹತ್ತಿಯನ್ನು ಆಯಾ ಗ್ರಾಮೋದ್ಯೋಗ ಸಂಘದ ಪದಾಧಿಕಾರಿಗಳು ಸಾಲದ ರೂಪದಲ್ಲಿ ಪಡೆಯುತ್ತಾರೆ. ನಂತರ ನೇಕಾರರು ಚರಕದಲ್ಲಿ ತಯಾರಿಸುವ ಕಚ್ಚಾ ನೂಲನ್ನು ಲಡಿ ಎಂದು ಕರೆಯುತ್ತಾರೆ. ಒಂದು ಲಡಿ ಎಂದರೆ ೧ ಸಾವಿರ ಮೀಟರ್‌ ಉದ್ದದ ನೂಲು. ಈ ರೀತಿ ತಯಾರಾಗುವ ಲಡಿಗಳ ಲೆಕ್ಕದಲ್ಲಿ ಸಂಬಳ ಸಿಗುತ್ತದೆ. ಒಂದು ಲಡಿಗೆ ೧ ರೂ., ೧.೭೫ ರೂ. ಅಂತ ನೇಕಾರನಿಗೆ ನಿಗದಿಯಾಗುತ್ತದೆ. ಈ ಲಡಿಗಳನ್ನು ನೇಯ್ಗೆ ಕೇಂದ್ರಗಳಲ್ಲಿ ಖಾದಿ ಬಟ್ಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಸಾಕಷ್ಟು ದೈಹಿಕ ಶ್ರಮ, ತಾಳ್ಮೆಯನ್ನು ಬೇಡುವ, ಪುಡಿಗಾಸು ನೀಡುವ ಕೆಲಸವಿದು. ಆದ್ದರಿಂದಲೇ ನೇಕಾರನಾಗಲು ಜನ ಹಿಂದೇಟು ಹಾಕುತ್ತಾರೆ. ಖಾದಿ ಉದ್ಯಮಕ್ಕೆ ಬೇಕಾದ ಬಂಡವಾಳವನ್ನು ಕೇಂದ್ರ ಸರಕಾರ ನೀಡಿದರೆ ಬಟ್ಟೆಗಳ ವ್ಯಾಪಾರದ ಮೇಲೆ ಸಬ್ಸಿಡಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡುತ್ತದೆ. ೫, ೧೦ ಲಕ್ಷ ರೂ.ಗಳಿಂದ ೩ ಕೋಟಿ ರೂ ಬೇಕಾದರೂ ಸಾಲ ಪಡೆದು ಖಾದಿ ಗ್ರಾಮೋದ್ಯೋಗ ಘಟಕವನ್ನು ಸ್ಥಾಪಿಸಬಹುದು. ನಿಸ್ಸಂದೇಹವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಇದು ಕಾರಣವಾಗುತ್ತದೆ. ಆದರೆ ನೇಕಾರರಿಗೆ ಪುಡಿಗಾಸು ನೀಡುತ್ತಿರುವುದರಿಂದ ಈ ಉದ್ಯೋಗ ಆಕರ್ಷಣೆ ಕಳೆದುಕೊಂಡಿದೆ. ಬೆಳಗ್ಗೆಯಿಂದ ರಾತ್ರಿಯ ತನಕ ಚರಕ ಸುತ್ತುವ ಖಾದಿ ಕಾರ್ಮಿಕನ ಸಂಬಳ ಕ್ವಿಂಟಾಲ್ ಅಕ್ಕಿಯ ದರಕ್ಕಿಂತ ಕಡಿಮೆಯಾಗುತ್ತದೆ.
ಈವತ್ತು ಶೇ.೬೭ರಷ್ಟು ಪಾಲಿಯೆಸ್ಟರ‍್ ಮತ್ತು ಶೇ.೩೭ ಖಾದಿ ಬೆರೆತ ಬಟ್ಟೆ ತಯಾರಾಗುತ್ತದೆ. ಗ್ರಾಮೋದ್ಯೋಗ ಸಂಘಗಳೂ ಇಂಥ ಖಾದಿ ಬಟ್ಟೆಯನ್ನು ಉತ್ಪಾದಿಸುತ್ತವೆ. ವಾಯುಸೇನೆ ಕೂಡಾ ಶ್ವೇತವರ್ಣದ ಸಮವಸ್ತ್ರಕ್ಕಾಗಿ ಪ್ರತಿ ವರ್ಷ ಸೀಮಿತ ಪ್ರಮಾಣದಲ್ಲಿ (ಮೀಟರ‍್ ಲೆಕ್ಕದಲ್ಲಿ) ಇಂತಹ ಬಟ್ಟೆಯನ್ನು ನೌಕರರ ಸಮವಸ್ತ್ರಕ್ಕಾಗಿ ಪಡೆಯುತ್ತದೆ. ಪಡೆಯಲೇಬೇಕೆಂದು ನಿಬಂಧನೆಯೂ ಇದೆ. ಆದರೆ ಸ್ವತಃ ವಾಯುಸೇನೆ ಕೂಡ ಒಪ್ಪಿಕೊಳ್ಳುವ ಖಾದಿ ನಮ್ಮ ಡಿ ಗ್ರೂಪ್‌ ನೌಕರರಿಗೆ ಅಪಥ್ಯ. ಇವರಿಗೆ ನ್ಯಾಶನಲ್ ಕಾರ್ಪೋರೇಷನ್‌ನ ಮಿಲ್ಲುಗಳು ಉತ್ಪಾದಿಸುವ ಬಟ್ಟೆಗಳೇ ಬೇಕು. ಪಾಲಿಯೆಸ್ಟರ‍್ ಮತ್ತು ಖಾದಿ ಮಿಶ್ರಿತ ಬಟ್ಟೆ ಹಳೆಯ ಖಾದಿಯಂತೆ ದೊರಗಾಗುವುದಿಲ್ಲ. ಅದರ ಎಳೆಗಳು ಮಿಲ್ಲಿನ ಬಟ್ಟೆಗಳಂತೆ ಒತ್ತಿಕೊಂಡಿರುತ್ತವೆ. ಹಾಕಿದ ಇಸ್ತ್ರಿಯೂ ದೀರ್ಘಕಾಲ ಕೆಡುವುದಿಲ್ಲ. ಹೀಗಿರುವಾಗ ಡಿ ಗ್ರೂಪ್ ನೌಕರರಿಗೆ ಆಗುವುದಿಲ್ಲವೇ ? ಶಾಲಾ ಮಕ್ಕಳಿಗೂ ಖಾದಿಯ ಸಮವಸ್ತ್ರ ಧಾರಾಳ ನೀಡಬಹುದು. ಹಳೆಯ ಖಾದಿ ಇದೀಗ ಬದಲಾಗುತ್ತಿದೆ. ಆದರೆ ಇದಕ್ಕಾಗಿ ಮನಸ್ಸು ಮಾಡಬೇಕಿರುವುದು ಸರಕಾರ. ಕನಿಷ್ಠ ಡಿ ಗ್ರೂಪ್ ನೌಕರರಿಗೆ ಖಾದಿ ಸಮವಸ್ತ್ರ ಕಡ್ಡಾಯ ಮಾಡಿದ ಪಕ್ಷದಲ್ಲಿ ಖಾದಿಗೆ ಪುನಶ್ಚೇತನ ನೀಡುವಲ್ಲಿ ಮಹತ್ವದ ಹೆಜ್ಜೆಯಾದೀತು. ದೇಶ ಸೇವೆಯೂ ಆದೀತು. ಹತ್ತಿಯ ಬಟ್ಟೆ ಆರೋಗ್ಯಕ್ಕೆ ಉತ್ತಮ. ಒಣ ಚರ್ಮದವರಿಗೆ ಒಳ್ಳೆಯದು ಅಂತ ವೈದ್ಯರು ಶಿಫಾರಸು ಮಾಡುತ್ತಾರೆ. ಇನ್ನು ಶುದ್ಧ ಖಾದಿಯ ಬಟ್ಟೆ ಇನ್ನಷ್ಟು ಉತ್ತಮ.
ಹೌದು. ಮಿಲ್ ಬಟ್ಟೆ ಖಾದಿಗಿಂತ ಅಗ್ಗ. ಜನ ಕಮ್ಮಿ ಕ್ರಯದ್ದನ್ನೇ ಮೆಚ್ಚುತ್ತಾರೆ ಎಂಬ ವಾದವಿದೆ. ಆದರೆ ಖಾದಿ ಅಂತಹ ದುಬಾರಿಯಲ್ಲ. ಮಿಲ್ ಬಟ್ಟೆಗಿಂತ ಹತ್ತಿಪ್ಪತ್ತು ರೂಪಾಯಿ ಹೆಚ್ಚಿರಬಹುದಷ್ಟೇ. ಶೋ ರೂಮ್‌ಗೆ ಹೋಗಿ ೧೫೯೦ ರೂ. ಕೊಟ್ಟು ಶೂ ಖರೀದಿಸುತ್ತೇವೆ. ಅದರಷ್ಟೇ ಬಾಳಿಕೆ ಬರುವ, ಕರ ಕುಶಲಕರ್ಮಿಗಳು ತಯಾರಿಸುವ ಶೂಗಳು ೩೦೦ ರೂ.ಗೆ ಸಿಕ್ಕಿದರೂ ಜನಕ್ಕೆ ಬೇಡ. ಬಾಟಾ ಶೋರೂಮ್‌ನಲ್ಲಿ ದುಬಾರಿ ಬೆಲೆಗೆ ತಂದರೇ ನೆಮ್ಮದಿ.
ಖಾದಿಯಲ್ಲೂ ನಕಲಿ
ಈವತ್ತು ಪವರ‍್ ಮಿಲ್ಲುಗಳಲ್ಲಿ ಉತ್ಪಾದಿಸಿದ ಬಟ್ಟೆಯಲ್ಲಿ ಉಡುಪುಗಳನ್ನು ತಯಾರಿಸಿ ಖಾದಿಯ ಹೆಸರಿನಲ್ಲೇ ಮಾರಾಟ ಮಾಡುತ್ತಿರುವ ಹಲವು ಅಂಗಡಿ, ಮಳಿಗೆಗಳನ್ನು ಕಾಣಬಹುದು. ಅಂತಹ ಕೇಂದ್ರಗಳಿಗೂ ಸರಕಾರಿ ಪ್ರಾಯೋಜಿತ ಮಂಡಳಿಗೂ ಆಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಖಾದಿ ಭಂಡಾರದ ಹೆಸರಿನಲ್ಲಿಯೇ ಅಂತಹ ಮಳಿಗೆಗಳು ಅಸ್ತಿತ್ವದಲ್ಲಿದ್ದು ಗ್ರಾಹಕರನ್ನು ದಿಕ್ಕುತಪ್ಪಿಸುತ್ತಿವೆ. ಮೆಜೆಸ್ಟಿಕ್ ಸುತ್ತ ಇಂತಹ ಹತ್ತಾರು ಮಳಿಗೆಗಳಿವೆ. ಈ ನಕಲಿ ಖಾದಿ ಭಂಡಾರಗಳಲ್ಲಿನ ಬಟ್ಟೆಗಳು ನಿಜವಾಗಿಯೂ ಖಾದಿಯಲ್ಲ. ಆದ್ದರಿಂದ ಸರಕಾರದಿಂದ ಮಾನ್ಯತೆ ಪಡೆದಿರುವ ಖಾದಿ ಭಂಡಾರಗಳಲ್ಲಿ ಮಾತ್ರವೇ ಖರೀದಿಸಿ ಅಂತ ರಾಜ್ಯ ಸರಕಾರ ಪ್ರಕಟಣೆ ಹೊರಡಿಸಿದೆ. ಆದರೆ ಇಂತಹ ಪ್ರಕಟಣೆಗಳಿಗಷ್ಟೇ ಕ್ರಮ ಸೀಮಿತವಾದರೆ ನಿಜವಾದ ಭಂಡಾರಳಿಗೆ ಹೊಡೆತ ತಪ್ಪಿದ್ದಲ್ಲ.
೪. ಅಗ್ಗದ ಮಿಲ್ ಬಟ್ಟೆ ಸಿಗುವಾಗ ಖಾದಿ ಯಾರಿಗೆ ಬೇಕು ಅಂತೀರಾ ?
ಇಡೀ ಭಾರತದಲ್ಲಿ ಟೆಕ್ಸ್‌ಟೈಲ್ ಮಿಲ್ ಗಳನ್ನು ಇಲ್ಲದಂತೆ ಮಾಡಬೇಕು. ಆಗ ಖಾದಿ ಉದ್ಯಮ ಅಗ್ರಸ್ಥಾನ ಗಳಿಸುತ್ತದೆ. ನಿರುದ್ಯೋಗ ದೂರವಾಗುತ್ತದೆ. ಸಾಮಾಜಿಕ ನ್ಯಾಯ ಸ್ಥಾಪನೆಯಾಗುತ್ತದೆ. ಹಾಗಂತ ಕನಸು ಕಂಡಿದ್ದರು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್.
ದೇಶದಲ್ಲಿ ಶೇ.೯೯ರಷ್ಟು ಬಟ್ಟೆಗಳು ಮಿಲ್ ಗಳಲ್ಲಿ ಉತ್ಪತ್ತಿಯಾಗುತ್ತಿವೆ. ಶೇ.೧ರಷ್ಟು ಬಟ್ಟೆಗಳು ಮಾತ್ರ ಖಾದಿಯಲ್ಲಿವೆ. ನೇಕಾರರ ಜೀವನ ಸಮೃದ್ಧಿಯಾಗಬೇಕಾದರೆ ಇದು ತದ್ವಿರುದ್ಧವಾಗಬೇಕು. ಇವತ್ತು ಗಲ್ಲಿಗಲ್ಲಿಯಲ್ಲಿ ಟೆಕ್ಸ್ ಟೈಲ್ ಬಟ್ಟೆಗಳು ಸಿಗುತ್ತವೆ. ಆದರೆ ಖಾದಿ ?
ಇಲ್ಲಿ ಚೇತರಿಕೆಗೆ ಹಲವು ಉಪಕ್ರಮಗಳು ಏಕಕಾಲದಲ್ಲಿ ಜಾರಿಯಾಗಬೇಕಾಗಿದೆ. ಮಾರುಕಟ್ಟೆಯಲ್ಲಿ ಖಾದಿಯದ್ದೇ ಪ್ರಾಬಲ್ಯವಿರಬೇಕು. ಅದಕ್ಕೆ ಬೇಡಿಕೆ ಸೃಷ್ಟಿಯಾಗಬೇಕು. ಮಿಲ್ ಗಳ ಬಟ್ಟೆಗಳಿಗೆ ಶಾಸನದ ಮೂಲಕ ಪ್ರತಿಬಂಧ ವಿಧಿಸುವುದೇನೋ ಸುಲಭವಾಗಬಹುದು. ಆದರೆ ಜನರ ವಸ್ತ್ರದ ಬೇಡಿಕೆಯನ್ನು ಪೂರೈಸುವ ಶಕ್ತಿಯನ್ನು ಅದಕ್ಕೂ ಮುನ್ನ ನೇಕಾರರೂ, ಮಂಡಳಿ, ಆಯೋಗ ಹೊಂದಬೇಕು. ಖಾದಿಯ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು.
ಮಿಲ್ ಗಳ ಬಟ್ಟೆ ಅತೀ ಅಗ್ಗದ ದರದಲ್ಲಿ ಅತ್ಯುತ್ತಮ ಗುಣಮಟ್ಟದೊಂದಿಗೆ ಸಿಗುತ್ತಿರುವಾಗ ಖಾದಿ ಯಾರಿಗೆ ಬೇಕು ? ಖಾದಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಿಲ್ ಗಳ ವಿರುದ್ಧ ಕಾನೂನು ಮಾತಾಡೋದು ಸರೀನಾ ಎನ್ನಬಹುದು. ಆದರೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಖಾದಿಗೂ ಉತ್ತೇಜನ ನೀಡಬೇಕು. ಲಕ್ಷಗಟ್ಟಲೆ ಜನರ ಉದ್ಯೋಗವನ್ನು ಕಸಿದುಕೊಳ್ಳುವ ಮಿಲ್ ಗಳಿಗೆ ಒಂದಷ್ಟು ನಿರ್ಬಂಧವನ್ನು ರೂಪಿಸುವುದರ ಮೂಲಕ ಲಕ್ಷಾಂತರ ನೇಕಾರರ ಜೀವನೋಪಾಯವನ್ನು ಉಳಿಸಿಕೊಳ್ಳಬಹುದು. ಕನಿಷ್ಠ ೩೨ ನಂಬರಿನ ತನಕದ ನೂಲುಗಳನ್ನು ಮಿಲ್‌ ಗಳು ಬಳಸಕೂಡದು ಎಂದು ನಿಯಮ ಜಾರಿಗೊಳಿಸಬಹುದು. ಇದರಿಂದ ಜಮಖಾನ, ಬೆಡ್ ಶೀಟು, ಟವೆಲ್ಲು ಮುಂತಾದ ದಿನ ಬಳಕೆಯ ಬಟ್ಟೆಗಳ ವಿಭಾಗದಲ್ಲಿ ಖಾದಿಯದ್ದೇ ಏಕಸ್ವಾಮ್ಯವನ್ನು ಉಳಿಸಬಹುದು. ಬೀದಿಪಾಲಾಗಿರುವ ನೇಕಾರರ ಹೊಟ್ಟೆಪಾಡಿಗೆ ಇಂತಹದೊಂದು ಕ್ರಮ ಜರುಗಿಸಿದಲ್ಲಿ ತಪ್ಪೇನಿಲ್ಲ ಬಿಡಿ. ಎಂಬತ್ತೆಂಟು ವರ್ಷಗಳ ಹಿಂದೆ ದೇಶೀ ವಸ್ತ್ರದ ಪರ ಗಾಂಧೀಜಿ ಆಂದೋಲನಕ್ಕೆ ಚಾಲನೆ ನೀಡಿದಾಗ ಅದೆಂಥಾ ಉತ್ಸಾಹವಿತ್ತು ನೋಡಿ..
ವಿದೇಶಿ ಬಟ್ಟೆಗಳಿಗೆ ಬಹಿಷ್ಕಾರ...
ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ವಿದೇಶಿ ಬಟ್ಟೆಗಳ ದಹನ ಕಾರ್ಯಕ್ರಮ..
ಸ್ಥಳ : ಎಲ್ಫಿನ್ ಸ್ಟೋನ್ ಮಿಲ್ ಹತ್ತಿರ. ಎಲ್ಲರೂ ಸ್ವದೇಶಿ ಬಟ್ಟೆಯಾದ ಖಾದಿಯನ್ನು ಧರಿಸಿ ಆಗಮಿಸಬೇಕಾಗಿ ಮನವಿ. ಯಾರಲ್ಲಿ ವಿದೇಶಿ ಬಟ್ಟೆಗಳಿವೆಯೋ, ಅದನ್ನೆಲ್ಲ ತರಲು ಕೋರಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಅದು ೧೯೨೧ರ ಜುಲೈ ೩೧ನೇ ತಾರೀಕು. ಬಾಂಬೆಯಲ್ಲಿ ಮಹಾತ್ಮ ಗಾಂಧೀಜಿ ವಿದೇಶಿ ಬಟ್ಟೆಗಳನ್ನು ದಹಿಸುವ ಚಳುವಳಿಗೆ ಕರೆ ನೀಡಿದ್ದರು.ಎಲ್ಫಿನ್ ಸ್ಟೋನ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಭಾಗವಹಿಸಿದ್ದರು. ಆಗ ಬಾಂಬೆ ಕ್ರೋನಿಕಲ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಕರೆ ಹಾಗಿತ್ತು.
ವಿದೇಶಿ ಬಟ್ಟೆಗಳ ವಿರುದ್ಧ ಚಳುವಳಿ ಆರಂಭಿಸಿದ ಗಾಂಧೀಜಿಯವರಲ್ಲಿ ಕ್ರಾಂತಿಕಾರಿ ಮನೋಭಾವ ಮಾತ್ರ ಇರಲಿಲ್ಲ. ಭಾರತದ ಜವಳಿ ಉದ್ಯಮದ ಸ್ವರೂಪವನ್ನೇ ಬದಲಿಸಬೇಕು ಎಂಬ ಹಂಬಲವಿತ್ತು. ಖಾದಿಯೇ ಇದಕ್ಕೆ ಕೇಂದ್ರ ಬಿಂದುವಾಗಿತ್ತು.ಆಗ ಖಾದಿ ವಸಾಹತುಶಾಹಿಯಿಂದ ಸ್ವತಂತ್ರದ ಚಿಹ್ನೆಯಾಗಿರಲಿಲ್ಲ. ಆರ್ಥಿಕ ಸ್ವಾವಲಂಬನೆಯ ಗುರುತಾಗಿತ್ತು. ಅಹಿಂಸೆ, ಆಧ್ಯಾತ್ಮಿಕತೆ, ನೈತಿಕತೆ, ರಾಷ್ಟ್ರೀಯ ಸಮಗ್ರತೆ, ಕೋಮು ಸೌಹಾರ್ದತೆ, ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆಯ ಅಂತ್ಯವನ್ನು ಪ್ರತಿನಿಧಿಸುತ್ತಿತ್ತು. ಚರಕವೇ ಸ್ವರಾಜ್ಯದ ಅಸ್ತ್ರ ಅಂತ ಕರೆದಿದ್ದರು ಬಾಪೂಜಿ. ಸ್ವದೇಶಿ ಖಾದಿಯನ್ನು ಉತ್ತೇಜಿಸುವುದರಿಂದ ಗ್ರಾಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ ಅಂತ ನಂಬಿದ್ದರು ಅವರು. ಆದ್ದರಿಂದಲೇ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ವಿದೇಶಿ ವಸ್ತ್ರಗಳ ದಹನಕ್ಕೆ ಹುರಿದುಂಬಿಸಿದ್ದರು ರಾಷ್ಟ್ರಪಿತ. ಈ ನಡುವೆ ಕಾಂಗ್ರೆಸ್ ಪಕ್ಷ ಖಾದಿಯನ್ನು ತನ್ನ ಅಧಿಕೃತ ಸಮವಸ್ತ್ರವನ್ನಾಗಿಸಿತು. ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ ದಿನಕ್ಕೆ ಅರ್ಧ ಗಂಟೆಯಾದರೂ ಚರಕದಲ್ಲಿ ನೇಯಬೇಕು ಎಂಬ ಗಾಂಧೀಜಿಯವರ ವಿವಾದಾತ್ಮಕ ನಿರ್ಣಯವನ್ನು ಕಾಂಗ್ರೆಸ್‌ ಅಂಗೀಕರಿಸಿತು. ಈಗ ಅದೇ ಪಕ್ಷದಲ್ಲಿ ಕನಿಷ್ಠ ಖಾದಿ ಬಟ್ಟೆಯಲ್ಲಿ ತಯಾರಿಸಿದ ಟೋಪಿ ಎಲ್ಲಿದೆ ?
ಖಾದಿಯನ್ನು ಪವಿತ್ರ ವಸ್ತ್ರ ಅಂತ ಗೌರವಿಸಿದವರು ಮಹಾತ್ಮಾ ಗಾಂಧಿ. ಬಿಳಿ ಬಣ್ಣದ ಟೋಪಿಯ ವಿನ್ಯಾಸಕಾರರೂ ಅವರೇ. ಅದನ್ನು ಗಾಂಧಿ ಟೋಪಿ ಅಂತಲೇ ನಂತರ ಎಲ್ಲರೂ ಕರೆದರು. ಖಾದಿ ಅಥವಾ ಖದ್ದರ‍್ ಇರುವುದು ಫ್ಯಾಷನ್ ಗೋಸ್ಕರ ಅಲ್ಲ. ಆದರೆ ಗಿಮಿಕ್ ನಂತೆ ಖಾದಿ ಉತ್ಸವಗಳಲ್ಲಿ ಫ್ಯಾಷನ್ ಶೋ ನಡೆಸುತ್ತಾರೆ. ವಿನ್ಯಾಸಕಾರರೂ ಸಂಪ್ರದಾಯದ ಪ್ರತಿಪಾದಕರಂತೆ ಖಾದಿಯನ್ನು ಬೆರೆಸುವುದಿದೆ. ಆದರೆ ದೇಶದಲ್ಲಿ ಕೈಗಾರಿಕೆಗಳು ಹುಟ್ಟುವುದಕ್ಕೆ ಮುನ್ನ ಕೃಷಿ ಕಾರ್ಮಿಕರು ಹಾಗೂ ಕಲಾವಿದರ ಪ್ರಿಯವಾದ ಬಟ್ಟೆಯೇ ಖಾದಿಯಾಗಿತ್ತು. ಮಹಿಳೆಯರು ಹಾಗೂ ನೇಕಾರರೂ ಸ್ಥಳೀಯವಾಗಿ ಬೆಳೆಯುತ್ತಿದ್ದ ಹತ್ತಿಯಿಂದ ಖಾದಿ ತಯಾರಿಸುತ್ತಿದ್ದರು. ತಕಲಿ ಮುಂತಾದ ಸಾಧನಗಳಿಂದ ಹತ್ತಿಯ ನೂಲನ್ನು ಸಿದ್ಧಪಡಿಸಿ ಬಟ್ಟೆಯನ್ನಾಗಿಸುವ ಕೆಲಸ ಹಿಂದಿನಿಂದಲೇ ಸಾಮಾನ್ಯವಾಗಿತ್ತು.
ನಡೆಯದ ಸಂಶೋಧನೆ :
ಖಾದಿ ಬೇಸಿಗೆಯಲ್ಲಿ ಮೈಗೆ ಅಂಟಿ ಬೆವರುವುದಿಲ್ಲ. ಬದಲಿಗೆ ತಂಪಾಗಿರುತ್ತದೆ. ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಅಕಸ್ಮಾತ್ ಬೆಂಕಿ ತಗುಲಿದರೆ ಉರಿದರೂ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಅಂತಹ ಖಾದಿ ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯತೆಯ ಸಂಕೇತವಾಯಿತು. ಆರಂಭದಲ್ಲಿ ಗಾಂಧೀಜಿ ಕೂಡ ಸಾರ್ವಜನಿಕ ಜೀವನದಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುತ್ತಿದ್ದರು. ಅವುಗಳು ಆಧುನಿಕತೆಯ ಲಕ್ಷಣ ಎಂದು ಭಾವಿಸಿದ್ದರು. ಕ್ರಮೇಣ ಇದರ ಅನಾನುಕೂಲತೆಗಳು ಅನುಭವಕ್ಕೆ ಬರತೊಡಗಿದವು. ೧೯೧೪ರಲ್ಲಿ ಗಾಂಧೀಜಿ ಭಾರತಕ್ಕೆ ಮರಳಿದರು. ಆ ಹೊತ್ತಿಗೆ ಅವರು ಕೈಮಗ್ಗದಲ್ಲಿ ನೇಯುವುದನ್ನು ಕೂಡ ಕಲಿತಿದ್ದರು. ಆಗ ಸರಳ ಭಾರತೀಯ ಶೈಲಿಯಲ್ಲಿ ಬಿಳಿ ಧೋತಿಯನ್ನು ಉಡುತ್ತಿದ್ದರು.
ಆದರೆ ಸ್ವತಂತ್ರದ ನಂತರ ಚಿತ್ರಣವೇ ಬದಲಾಯಿತು. ರಾಜ್ಯಗಳಲ್ಲಿ ಭಾರಿ ಕೈಗಾರಿಕೆಗಳಿಗೆ ಮಣೆ ಹಾಕಲಾಯಿತು. ಅನೇಕ ಉದ್ಯಮಿಗಳು ಜವಳಿ ಗಿರಣಿಗಳನ್ನು ಸ್ಥಾಪಿಸಿದರು. ಸಮೂಹ ಉತ್ಪಾದನೆಯಿಂದ ಬಟ್ಟೆಗಳ ದರ ಇಳಿಯಿತು. ಲಕ್ಷಾಂತರ ನೇಕಾರರು ಕೆಲಸ ಕಳೆದುಕೊಂಡರು. ೧೯೫೩ರಲ್ಲಿ ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಸ್ತಿತ್ವಕ್ಕೆ ಬಂತು. ೧೯೫೭ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ )ಕೆವಿಐಸಿ) ಸ್ಥಾಪನೆಯಾಯಿತು. ಖಾದಿ ಭಂಡಾರಗಳ ಮೂಲಕ ಖಾದಿಯನ್ನು ಜನಪ್ರಿಯಗೊಳಿಸುವುವುದು ಇದರ ಉದ್ದೇಶ. ಆದರೆ ಖಾದಿಯ ವಿನ್ಯಾಸ, ಗುಣಮಟ್ಟ ಮತ್ತು ಪ್ರಚಾರದ ತಂತ್ರಕ್ಕೆ ಸಂಬಂಧಿಸಿ ಯಾವುದೇ ಸಂಶೋಧನೆಯಾಗದ ಪರಿಣಾಮ ಮಿಲ್ ಬಟ್ಟೆಗಳೆದುರು ಪ್ರತಿಸ್ಪರ್ಧಿಯಾಗಿ ಉಳಿದಿಲ್ಲ. ಖಾದಿಯಲ್ಲಿ ಬಣ್ಣಗಳ ಆಯ್ಕೆಯೂ ಕಡಿಮೆ.
ಚರಕದಲ್ಲೇನೋ ಅಷ್ಟಿಷ್ಟು ಸಂಶೋಧನೆ ನಡೆದಿದೆ. ಇ-ಚರಕ ಎನ್ನುವ ಚರಕ ಮಾರುಕಟ್ಟೆಯಲ್ಲಿದೆ. ಈ ಚರಕವನ್ನು ಬಳಸುವಾಗ ಅಲ್ಪಮೊತ್ತದ ವಿದ್ಯುತ್ ಕೂಡ ಉತ್ಪಾದನೆಯಾಗಿ ಬಡ ನೇಕಾರನ ಮನೆಯಲ್ಲಿ ಬೆಳಕು ಹರಿಯಬಹುದು ಎಂದು ಉತ್ಪಾದಕರು ಹೇಳುತ್ತಾರೆ. ಆದರೆ ಬ್ಯಾಟರಿ ಸಮಸ್ಯೆ ಮುಂತಾದ ಕಿರಿಕಿರಿ ಇದರಲ್ಲಿದೆ ಎಂಬ ಆರೋಪಗಳಿವೆ. ಅಕಸ್ಮಾತ್ ಇಂತಹ ರಗಳೆಗಳನ್ನು ಕಳೆಯುವಂತೆ ಇ ಚರಕ ಸುಧಾರಣೆಯಾದಲ್ಲಿ ಪ್ರಯೋಜನವಾದೀತು.
ಖಾದಿಯ ಉತ್ಪಾದನೆಯಿಂದ ಮಾರಾಟದ ತನಕ ವ್ಯವಸ್ಥಿತ ಜಾಲ ಬೇಕು. ಆದರೆ ಮಧ್ಯವರ್ತಿಗಳ ಕಾಟ ಇರಕೂಡದು. ಅನೇಕ ನಕಲಿ ಖಾದಿ ಭಂಡಾರಗಳಿರುವ ಈ ದೇಶದಲ್ಲಿ ನೇಕಾರರಿಗೆ ಸಬ್ಸಿಡಿ ನೆರವು ಪಡೆಯುವುದು ಸುಲಭದ ಮಾತಲ್ಲ. ನಾಚಿಕೆ, ಮಾನ , ಮರ್ಯಾದೆಯಿಲ್ಲದ ಕೆವಿಐಸಿ ಮತ್ತು ಖಾದಿ ಮಂಡಳಿ ಖಾದಿಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ಮಾಡುವುದರ ಬದಲಿಗೆ ಖಾದಿ ಉತ್ಸವದಲ್ಲಿ ಹಪ್ಪಳ, ಸಂಡಿಗೆ, ಸೋಪುಗಳ ಮಾರಾಟ ನಡೆಸುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸಿದ ಉಪ್ಪಿನಕಾಯಿ, ಹಪ್ಪಳ ಮುಂತಾದ ಉತ್ಪನ್ನಗಳ ಮಾರಾಟವನ್ನಾದರೂ ಒಪ್ಪೋಣ. ಆದರೆ ಅರಮನೆ ಮೈದಾನದಲ್ಲಿ ನಡೆದ ಖಾದಿ ಇಂಡಿಯಾ ಮೇಳದಲ್ಲಿ ಲೈಂಗಿಕ ಕಾಮನೆಗಳ ವರ್ಧಕ ಶೀರ್ಷಿಕೆಯಡಿಯಲ್ಲಿ ಯಾವುದೋ ತೈಲದ ಬಾಟಲಿಯನ್ನು ಇಟ್ಟಿದ್ದರು. ಕೆವಿಐಸಿಯ ಎಷ್ಟೋ ಘಟಕಗಳಲ್ಲಿ ಕಳಪೆ ದರ್ಜೆಯ ಖಾದಿಯನ್ನು ಕಾಣಬಹುದು. ಅಂತಹ ಬಟ್ಟೆಯನ್ನು ಯಾರು ಖರೀದಿಸಿಯಾರು ? ಭಾರತದಲ್ಲಿ ವಿನ್ಯಾಸಕಾರರಿಗೆ ಕೊರತೆಯಿಲ್ಲ. ಸೀರೆ, ಚೂಡಿದಾರಗಳಲ್ಲಿ ಅಸಂಖ್ಯಾತ ವಿನ್ಯಾಸಗಳನ್ನು ಸಂಶೋಧಿಸಿದವರಿದ್ದಾರೆ. ಆದರೆ ಖಾದಿಯಲ್ಲಿ ನವೀನ ವಿನ್ಯಾಸಗಳಿಲ್ಲ.
ನೇಕಾರರ ಸಮಸ್ಯೆ ಅವರಲ್ಲಿಯೇ ಇದೆ. ಅವರೇಕೆ ಖಾದಿ ಗ್ರಾಮೋದ್ಯೋಗ ಸಂಘಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯಬೇಕು ? ಸ್ವತಂತ್ರವಾಗಿ ವ್ಯಾಪಾರ ಮಾಡಿಕೊಂಡಿರಬಾರದಾ ಎನ್ನುವ ಅವಿವೇಕಿಗಳಿದ್ದಾರೆ. ಸ್ವಾಮಿ, ಖಾದಿ ಕಾರ್ಮಿಕ ಕೇಂದ್ರಿತ ವಲಯ. ಬಟ್ಟೆಗಳ ಮಿಲ್ಲಿನಲ್ಲಿ ೯ ಲಕ್ಷ ಮಂದಿಗೆ ಉದ್ಯೋಗ ಸಿಕ್ಕಿದ್ದರೆ, ಖಾದಿಯಲ್ಲಿ ೧೪ ಲಕ್ಷ ಮಂದಿಗೆ ಜೀವನಾಧಾರ ಸಿಕ್ಕಿದೆ. ಕಚ್ಚಾ ಹತ್ತಿಯ ಪೂರೈಕೆ, ಕೈ ಮಗ್ಗದ ಕೆಲಸ, ಬಣ್ಣ ಹಾಕುವುದು, ಮಾರಾಟ ಅಂತ ನಾನಾ ಸ್ತರಗಳಲ್ಲಿ ಕೆಲಸವಿದ್ದು, ಒಬ್ಬರಿಂದಲೇ ನಿರ್ವಹಿಸಲು ಆಗುವುದಿಲ್ಲ. ಇದೆಲ್ಲದರ ನಿರ್ವಹಣೆಗೆ ಗ್ರಾಮೋದ್ಯೋಗ ಸಂಘಗಳು ಬೇಕು. ಸಂಘಗಳ ಅಸ್ತಿತ್ವಕ್ಕೆ ಸಬ್ಸಿಡಿ ನೆರವು ಬೇಕು. ಮೂಲಸೌಕರ್ಯ ಇರಬೇಕು. ಆದರೆ ಪ್ರತಿಯೊಂದು ಖಾದಿ ಗ್ರಾಮೋದ್ಯೋಗ ಸಂಘವೂ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಸೀತು. ನಿರಕ್ಷರಿಗಳೂ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹಳ್ಳಿಗಾಡಿನ ಮಹಿಳೆಯರಿಗೂ ಇದು ಸಂಪಾದನೆಯ ಮಾರ್ಗ. ಆದರೆ ಸಕಾಲದಲ್ಲಿ ಕಚ್ಚಾ ಸಾಮಗ್ರಿ ಪೂರೈಕೆಯಾಗದಿರುವುದು, ಉತ್ಪನ್ನ ಮಾರಾಟವಾಗದಿರುವುದು, ಸಂಬಳ ಬಟವಾಡೆಯಾಗದಿರುವುದು ಮುಂತಾದ ಅಡ್ಡಿ ಆತಂಕಗಳಿಂದ ನೇಕಾರ ಬೀದಿಗೆ ಬಿದ್ದಿದ್ದಾನೆ. ಹುಬ್ಬಳ್ಳಿ ಕಡೆ ನೇಕಾರನ ಹೆಂಡತಿ ಬತ್ತಲೆ ಎಂಬ ಮಾತಿದೆ.ಅಂದರೆ ಇಡೀ ನಾಡಿಗೆ ವಸ್ತ್ರ ನೇಯುವವನ ಹೆಂಡತಿಗೇ ಸೀರೆ ಖರೀದಿಸಲಾಗದಷ್ಟು ಬಡತನ ಇರುತ್ತದೆ ಎಂತರ್ಥ.
ಖಾದಿ ತೊಡದ ಅಧಿಕಾರಿಗಳು
ಗ್ರಾಮೀಣ ಭಾಗದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ನೇಕಾರನ ದುಮ್ಮಾನವನ್ನು ಸರಕಾರಕ್ಕೆ ಮನ ಮುಟ್ಟುವಂತೆ ವಿವರಿಸಬೇಕಾದ ಅಧಿಕಾರಿಗಳು ನಮ್ಮಲ್ಲಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಖಾದಿಯ ಬಗ್ಗೆ ಕಿಂಚಿತ್ತೂ ಪ್ರೀತಿ ಇರದ ಐಎಎಸ್‌ ಅಧಿಕಾರಿಗಳಿಂದ ಏನೂ ಉಪಯೋಗವಿಲ್ಲ. ಇಂತಹ ಅಧಿಕಾರಿಗಳು ಖಾದಿ ಉತ್ಸವದಲ್ಲಿ ಫ್ಯಾಷನ್‌ ನಂತಹ ಐಡಿಯಾ ಬಿಟ್ಟರೆ ಬೇರೇನು ಕೊಟ್ಟಾರು ?

ಹತ್ತು ಲಕ್ಷ ಕೋಟಿ ರೂ. ಬಜೆಟ್‌ನ ಕೇಂದ್ರ ಆಯವ್ಯಯದಲ್ಲಿ ನೇಕಾರರಿಗೆ, ನೂಲುವವರಿಗೆ, ಖಾದಿ ಕಾರ್ಮಿಕರಿಗೆ ಅಂತ ೩೦೦ ಕೋಟಿ ರೂ. ಕೊಟ್ಟರೆ ಸಾಕು, ಈ ಸಮುದಾಯದ ಬದುಕು ಹಸನಾಗುತ್ತದೆ ಎನ್ನುತ್ತಾರೆ ಪಾಟೀಲಪುಟ್ಟಪ್ಪನವರು. ಸರಕಾರ ಈ ಹಿರಿಯರ ಮಾತು ಕೇಳುವ ಮನಸ್ಸು ಮಾಡುತ್ತಾ ?
ನೋಡಿ, ಕನಿಷ್ಠ ಬೆಂಗಳೂರಲ್ಲೇ ಇರುವ ನಕಲಿ ಖಾದಿ ಮಳಿಗೆಗಳಿಗೆ ಬೀಗ ಜಡಿಯಲು ಯಾರೊಬ್ಬರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇವತ್ತು ಮಾರ್ವಾಡಿಗಳು ಬೆಂಗಳೂರಿನ ಮೆಜೆಸ್ಟಿಕ್, ಅವೆನ್ಯೂ ರಸ್ತೆ, ಡಿಸ್ಪೆನ್ಸರಿ ರೋಡ್‌ ಮುಂತಾದ ಕಡೆಗಳಲ್ಲಿ ನಕಲಿ ಖಾದಿ ಭಂಡಾರಗಳನ್ನು ತೆರೆದಿದ್ದಾರೆ. ಜನ ಮೋಸ ಹೋಗುತ್ತಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲ.
ಅನೇಕ ಮಂದಿ ಗಾಂಧಿ ಜಯಂತಿಯ ದಿನ ಮಾತ್ರ ಖಾದಿ ಎಂಪೋರಿಯಂಗಳಲ್ಲಿ ಭರ್ಜರಿ ದರ ಕಡಿತ ಇದೆ ಎಂದು ಭಾವಿಸುತ್ತಾರೆ. ಆದರೆ ಈ ವಿಷೇಷ ಶೇ.೩೫ರಷ್ಟು ದರ ಕಡಿತ ಅಕ್ಟೋಬರ‍್ ೨ರಿಂದ ನಮವೆಂಬರ್‌ ಮುಗಿಯುವ ತನಕ ಇರುತ್ತದೆ. ಆದರೆ ಗಾಂಧಿ ಜಯಂತಿಯಂದು ಮಾತ್ರ ಮುಗಿ ಬೀಳುವ ಕಾರಣ ಬೆಂಗಳೂರಿನ ಖಾದಿ ಎಂಪೋರಿಯಂನಲ್ಲಿ ಅಂದು ಒಂದೇ ದಿನ ೮ ಲಕ್ಷ ರೂ.ಗೂ ಹೆಚ್ಚು ವ್ಯಾಪಾರ ಕುದುರುತ್ತದೆ. ಉಳಿದ ದಿನಗಳಲ್ಲಿ ೨೦-೩೦ ಸಾವಿರ ರೂ. ತನಕ ನಡೆಯುತ್ತದೆ. ಇತರ ಖಾದಿ ಭಂಡಾರಗಳಲ್ಲಿ ಇಂತಹ ವ್ಯಾಪಾರ ಇರುವುದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಜನರಿಗೆ ಖಾದಿ ವ್ಯಾಪಾರ, ದರ ಕಡಿತದ ಬಗ್ಗೆ ಮಾಹಿತಿ ತಲುಪುತ್ತಿಲ್ಲ.
ಹತ್ತರಲ್ಲಿ ಹನ್ನೊಂದು
ಖಾದಿಯನ್ನು ಹತ್ತರಲ್ಲಿ ಹನ್ನೊಂದು ಎಂಬಂತೆ ನಿರ್ಲಕ್ಷಿಸಲಾಗಿದೆ. ಯಾಕೆಂದರೆ ಸಣ್ಣ ಮತ್ತು ಮಧ್ಯಮ ಉದ್ದಿಮೆ ಇಲಾಖೆಯ ಅಡಿಯಲ್ಲಿ ಖಾದಿ ಅಪ್ಪಚ್ಚಿಯಾಗಿದೆ. ಈ ಇಲಾಖೆಗೆ ಬರುವ ಅನುದಾನವೂ ಅಷ್ಟಕ್ಕಷ್ಟೇ. ಅದರ ಬದಲಿಗೆ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲದ ಗ್ರಾಮೀಣಾಭಿವೃದ್ಧಿ ಇಲಾಕೆಯ ವ್ಯಾಪ್ತಿಗೆ ಯಾಕೆ ತರಕೂಡದು ? ಖಾದಿ ಪರ ವಕಾಲತ್ತು ವಹಿಸುವಲ್ಲಿ ಕಾಂಗ್ರಸ್‌ ಸಂಸದ ರಾಹುಲ್ ಗಾಂಧಿ ಇತ್ತೀಚಗೆ ಆಸಕ್ತಿ ವಹಿಸಿದ್ದರು. ನಾನು ಯಾವತ್ತೂ ಖಾದಿಯ ಕುರ್ತಾ , ಪೈಜಾಮಗಳನ್ನು ಇಷ್ಟಪಡುತ್ತೇನೆ. ಇದು ನನಗೆ ಉತ್ತಮ ಎನ್ನಿಸಿದೆ ಎಂದು ಅವರು ಹೇಳಿದ್ದರು. ಸಚಿನ್ ಪೈಲಟ್, ನವೀನ್ ಜಿಂದಾಲ್, ಜ್ಯೋತಿರಾದಿತ್ಯ ಸಿಂಧ್ಯಾ ಮುಂತಾದ ಯುವ ರಾಜಕಾರಣಿಗಳು ಖಾದಿಯನ್ನು ಧರಿಸಿ ರಾಜಕೀಯ ವೇದಿಕೆಗಳಲ್ಲಿ ಕಾಣುತ್ತಾರೆ. ಆದರೆ ನೇಕಾರರ ದುಸ್ಥಿತಿಯ ಬಗ್ಗೆ ಕೂಡ ಇವರು ತಿಳಿಯಬೇಕಲ್ಲವೇ.

No comments:

Post a Comment