Friday 31 July 2009

ದೇವ ದಾಸಿಯರ ವ್ಯಥೆ ದೂರವಾಗಲಿ ದೇವಾ..

ಹುಟ್ಟಿ ಬಂದೆ ಎಲ್ಲವ್ವನಾಗಿ..
ನಿನ್ನ ಮದುವೆ ಮಾಡಿ ಕೊಟ್ಟರು ಜಮದಗ್ನಿಗೆ..
ನಿನ್ನ ತಾಯಿ ಭೋಗಾವತಿ, ನಿನ್ನ ತಂದೆ ರೇಣುಕ ರಾಜ..
ಇವರ ಹೊಟ್ಟೆಲಿ ಹುಟ್ಟಿ ಬಂದೆ ಎಲ್ಲವ್ವನಾಗಿ...
ಬಾಗಲಕೋಟದ ರಣ ಬಿಸಿಲಿನಲ್ಲಿ ದೇವ ದಾಸಿ ಎಲ್ಲವ್ವ ಚೌಡಿಕೆ ಹಾಡುತ್ತಾ ಅಲೆಯುತ್ತಾಳೆ. ಆಕೆ ಅಸ್ವಸ್ಥಗೊಂಡಿರುವುದನ್ನು ಆಕೆಯ ಗುಳಿ ಬಿದ್ದ ನಿಸ್ತೇಜ ಕಣ್ಣುಗಳೇ ಸೂಚಿಸುತ್ತವೆ. ಬಾಳ ಸಂಜೆಯಲ್ಲಿ ಭಿಕ್ಷೆ ಬೇಡುವ ಅವಳ ಬದುಕು ಬೀದಿ ಪಾಲು.
ರಾಯಭಾಗದಲ್ಲಿ ಇತ್ತೀಚೆಗೆ ಒಂಬತ್ತು ಮಂದಿ ಬಾಲಕಿಯರನ್ನು ಬಲವಂತವಾಗಿ ದೇವದಾಸಿ ಪದ್ಧತಿಗೆ ತಳ್ಳಲಾಯಿತು. ಅವರಲ್ಲಿ ಬಹುತೇಕ ಮಂದಿ ೧೬ ವರ್ಷ ದಾಟದ ಬಾಲೆಯರು. ಇಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದೇವದಾಸಿಯರ ಸಂಖ್ಯೆಯಲ್ಲಿ ಇಳಿಮುಖವಾಗಿರಬಹುದು. ಆದರೆ ಪಿಡುಗು ಇವತ್ತಿಗೂ ದೂರವಾಗಿಲ್ಲ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ದೇವದಾಸಿಯರ ಸಂಖ್ಯೆ ಸಹಸ್ರಾರು.ರಾಜ್ಯ ಸರಕಾರದ ಪುನರ್ವಸತಿ ಯೋಜನೆ ಆರಂಭವಾಗಿ ದಶಕವೇ ಕಳೆದರೂ ಅದರ ಪ್ರಯೋಜನ ಸಂತ್ರಸ್ತರಿಗೆ ತಲುಪಿಲ್ಲ. ಹೀಗಾಗಿ ಅಮಾಯಕ ದೇವದಾಸಿಯರ ವ್ಯಥೆ ಕರ್ನಾಟಕದ ಇತರ ಭಾಗಗಳನ್ನು ತಟ್ಟುತ್ತಿದೆ.
ಬಾಗಲಕೋಟದ ಅದೆಷ್ಟೋ ಮನೆಗಳನ್ನು ಕೇಳಿ. ಮುಂಬಯಿಯ ಕಾಮಾಟಿಪುರಕ್ಕೆ ಬಾಲಕಿಯರು ಸಾಗಣೆಯಾದ, ನಂತರದ ಅವರ ಚಿಂತಾಜನಕ ಕಥೆಗಳು ಸುರುಳಿ ಬಿಚ್ಚಿಕೊಳ್ಳುತ್ತದೆ. ದೇವದಾಸಿ ಪಿಡುಗು ಇರುವ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳನ್ನು ಮುಂಬಯಿಗೆ ಸಾಗಣೆ ಮಾಡುವುದು ಆ ಭಾಗದಲ್ಲಿ ರಟ್ಟಾಗಿರುವ ಗುಟ್ಟು. ಇಲ್ಲಿ ಬಾಲ್ಯ ವಿವಾಹ ನಡೆದರೆ ಕೇಳುವರಿಲ್ಲ. ಹುಡುಗ ಯುವಕನಾದ ನಂತರ ಒಪ್ಪದಿದ್ದರೆ ಸೋಡಾ ಚೀಟಿ. ಆಕೆ ಕಳ್ಳ ಸಾಗಣೆಯಾಗುತ್ತಾಳೆ. ಕೆಲವೊಮ್ಮೆ ಯುವತಿಯನ್ನು ಹತ್ತಿರದ ಸಂಬಂಧಿಕರೇ ವಿವಾಹವಾಗುತ್ತಾರೆ. ನಂತರ ಯಥಾಪ್ರಕಾರ ಸೋಡಾಚೀಟಿ. ಯುವತಿಯ ಭವಿಷ್ಯ ಮಾತ್ರ ಕರಾಳ.
ಸಾಕ್ಷ್ಯ ಸಿಗೋದು ಕಷ್ಟ
ಕಾಯಿದೆಯ ಪ್ರಕಾರ ಯಾರನ್ನಾದರೂ ದೇವದಾಸಿ ಪ್ರಕರಣದಡಿಯಲ್ಲಿ ಬಂಧಿಸಿದರೆ ಸೂಕ್ತ ಸಾಕ್ಷ್ಯಾಧಾರ ಹುಡುಕುವುದು ಕಷ್ಟ. ದೇವದಾಸಿ ಪದ್ಧತಿಯ ಅನ್ವಯ ಮುತ್ತು ಕಟ್ಟುತ್ತಿದ್ದರು ಎಂಬುದನ್ನು ಸಾಬೀತುಪಡಿಸಬೇಕು. ಆದರೆ ಕಟ್ಟಿದ ಮುತ್ತನ್ನು ಕ್ಷಣದಲ್ಲೇ ಕಿತ್ತು ಹಾಕಬಹುದು. ಅಲ್ಲಿಗೆ ಸಾಕ್ಷ್ಯ ನಾಶವಾದಂತೆಯೇ. ಆದ್ದರಿಂದಲೇ ಕಾನೂನಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗಿರುವ ಉದಾಹರಣೆಗಳಿಲ್ಲ.
ದೇವದಾಸಿಯರ ಮಕ್ಕಳೂ ಎಂಥ ಸಂಕಟ, ಅವಮಾನ ಎದುರಿಸುತ್ತಾರೆ ನೋಡಿ. ಶಾಲೆಯಲ್ಲಿ ಹೇಳಲು ತಂದೆಯ ಹೆಸರು ಗೊತ್ತಿಲ್ಲ. ತಾಯಿಯ ಹೆಸರನ್ನು ಮಾತ್ರ ಹೇಳಬೇಕು. ಇದರಿಂದ ಮಗು ಚಿಂತೆಗೀಡಾಗುತ್ತದೆ.
ಇನ್ನೊಂದು ಅಂಶವನ್ನು ಗಮನಿಸಬೇಕು. ಎಲ್ಲ ದೇವದಾಸಿಯರೂ ವೆಶ್ಯಾವೃತ್ತಿ ಅನುಸರಿಸುವುದಿಲ್ಲ. ಮನೆಯಲ್ಲಿಯೇ ಹೆತ್ತವರ ಜತೆಗಿದ್ದು ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡು ಕುಟುಂಬಕ್ಕೆ ಆಧಾರವಾಗುವವರೂ ಇದ್ದಾರೆ. ಮನೆಯಲ್ಲಿ ಅವರಿಗೆ ಗಂಡು ಮಕ್ಕಳಂತೆ ಸಮಾನ ಅಧಿಕಾರ, ಆಸ್ತಿಯ ಹಕ್ಕಿರುತ್ತದೆ.
ದೇವದಾಸಿ ಪದ್ಧತಿ ಚಾಲ್ತಿಯಲ್ಲಿರುವ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿಯೂ ವಿಭಿನ್ನ ಸಮಸ್ಯೆಗಳಿವೆ. ಸಾಂಗ್ಲಿ, ಸತಾರಾ, ಸೊಲ್ಲಾಪುರ, ಬೀದರ‍್ , ಬಾಗಲಕೋಟ ಮುಂತಾದ ಕಡೆಗಳಲ್ಲಿ ಸಂದರ್ಭಾನುಸಾರ ಜನ ವಲಸೆ ಹೋಗುವುದು ಸಾಮಾನ್ಯ. ಬಾಗಲಕೋಟದಲ್ಲಿ ಕಬ್ಬು ಅರೆಯುವ ಅವಧಿ ಸಮೀಪಿಸಿದಾಗ ಇತರ ಕಡೆಗಳಿಂದ ಇಲ್ಲಿಗೆ ಕಾರ್ಮಿಕರು ವಲಸೆಯಾಗುತ್ತಾರೆ. ಅರೆದಾದ ನಂತರ ಗಣಿ ಕೆಲಸಕ್ಕಾಗಿ ಪುನಃ ಬೇರೆಡೆಗೆ ವಲಸೆ. ಈ ಎಲ್ಲ ಬದಲಾವಣೆಗಳು ಅವರ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಇನ್ನು ಮಹಿಳೆಯರು ಮತ್ತು ಬಾಲಕಿಯರ ಕಳ್ಳ ಸಾಗಣೆ, ಬಾಲ್ಯ ವಿವಾಹ, ದೇವದಾಸಿ ಬಗ್ಗೆ ಗ್ರಾಮೀಣ ಜನ ಹೊಂದಿರುವ ಕುರುಡು ನಂಬಿಕೆ ಹೋಗಲಡಿಸುವ ಕಾರ್ಯ ಕೂಡ ಅಷ್ಟೊಂದು ಸುಲಭವಲ್ಲ. ಈ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಲು ಗ್ರಾಮವಾಸಿಗಳ ಮನೆ ಮನೆಗೆ ತೆರಳಿದ್ದ ವಿವಿಧ ಸೇವಾ ಸಂಸ್ಥೆಗಳ ಕಾರ್ಯಕರ್ತರು ನಾಯಿಯಿಂದ ಕಚ್ಚಿಸಿಕೊಂಡದ್ದೂ ಇದೆ. ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದ ಕಾರ್ಯಕರ್ತನ ಮೇಲೆ ಗ್ರಾಮವೊಂದರಲ್ಲಿ ನಾಯಿಗಳನ್ನು ಛೂ ಬಿಡಲಾಯಿತು. ಆತ ಮರವನ್ನೇರಿದ. ಮರದ ಕೆಳಗೆ ಗ್ರಾಮಸ್ಥರು ಮತ್ತು ನಾಯಿಗಳ ಕೂಗಾಟ. ಆತನ ಬಳಿ ಮೊಬೈಲ್ ಇದ್ದರಿಂದ ಸ್ನೇಹಿತರಿಗೆ ಕರೆ ಮಾಡಿ ಕರೆಯಿಸಿಕೊಂಡು ಬಚಾವಾದ.
ಮುಂಬಯಿ ಪ್ರಾಂತ್ಯ ಹಾಗೂ ಮದ್ರಾಸ್ ಸರಕಾರ ಜಾರಿಗೊಳಿಸಿದ ದೇವದಾಸಿ ನಿಷೇಧ ಕಾಯಿದೆಯನ್ನೇ ಮುಂಬಯಿ ಕರ್ನಾಟಕ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. ಇದನ್ನು ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ ) ಕಾಯಿದೆ -೧೯೮೨ ಎಂದು ಕರೆಯಲಾಗಿದೆ. ಇದೇ ಕಾಯಿದೆ ಸಮಗ್ರ ಕರ್ನಾಟಕಕ್ಕೂ ಅನ್ವಯ. ಯಾವುದೇ ವಯೋಮಿತಿಯ ಮಹಿಳೆಯನ್ನು ದೇವದಾಸಿ ಹೆಸರಿನಲ್ಲಿ ಯಾವುದೇ ಆರಾಧನೆ, ದೇವತೆ, ವಿಗ್ರಹ, ದೇವಾಲಯ, ಸಂಸ್ಥೆಗಳಿಗೆ ಒಪ್ಪಿಸುವುದು ಕಾನೂನು ಬಾಹಿರ. ದೇವದಾಸಿ ಪದ್ಧತಿಗೆ ಪ್ರಚೋದನೆ ನೀಡಿದವರಿಗೆ ಕನಿಷ್ಠ ಐದು ವರ್ಷ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಬಹುದು. ಮಹಿಳೆಯನ್ನು ದೇವದಾಸಿ ಪದ್ಧತಿಗೆ ದೂಡುವ ಆಕೆಯ ಹೆತ್ತವರು ,ಪಾಲಕರು, ಸಂಬಂಧಿಕರು ದಂಡನಾರ್ಹರು.
ಪರಿಹಾರ ಏನು ?
ಈ ಪದ್ಧತಿ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಿದ ಮುಧೋಳ ತಾಲೂಕಿನ ಕುಗ್ರಾಮ ಕಲಾದಗಿಯ ಮಾಜಿ ದೇವದಾಸಿಯರು ಅದರಲ್ಲಿ ಯಶಸ್ಸಿನತ್ತ ಸಾಗುತ್ತಿದ್ದಾರೆ. ಕಲಾದಗಿಯಲ್ಲಿ ಅಸ್ತಿತ್ವದಲ್ಲಿರುವ ರೇಣುಕಾದೇವಿ ಮಹಿಳಾ ಸಂಘದಲ್ಲಿ ಎಲ್ಲ ಸದಸ್ಯೆಯರು ಪ್ರತಿ ವಾರಕ್ಕೆ ೧೦ ರೂ.ನಂತೆ ಉಳಿತಾಯ ಆರಂಭಿಸಿದರು. ನಂತರ ೨೦ ಸಾವಿರ ರೂ. ಸಾಲ ಪಡೆದು ಎರಡು ಎಮ್ಮೆ ಸಾಕಿದರು. ಹಾಲು ಮಾರಿ ಬಂದ ಆದಾಯದಿಂದ ಸಾಲವನ್ನೂ ತೀರಿಸಿದರು. ಮತ್ತೆ ೪೦ ಸಾವಿರ ರೂ. ಸಾಲ ಪಡೆದು ೬ ಎಮ್ಮೆ ಪಡೆದರು. ಇನ್ನೂ ೫ ಲಕ್ಷ ರೂ. ಸಾಲಕ್ಕೆ ಅವರಿಗೆ ಅನುಮೋದನೆ ಸಿಕ್ಕಿದೆ.
ಬೀಳಗಿಯಲ್ಲಿ ಈ ಹಿಂದೆ ದೇವದಾಸಿಯಾಗಿದ್ದ ಮಹಿಳೆಯೊಬ್ಬರು ಈಗ ಪೊಲೀಸ್‌ ಸಿಬ್ಬಂದಿ. ಜಮಖಂಡಿಯ ಬಂಗಾರವ್ವ ಕೂಡ ವೇಶ್ಯಾವೃತ್ತಿಯ ಜಾಲದಿಂದ ಹೊರಬಂದು ವ್ಯಾಪಾರ ಮಾಡುತ್ತ ದಿನಕ್ಕೆ ೨೦೦ ರೂ. ಸಂಪಾದಿಸುತ್ತಾಳೆ.
ರಾಜ್ಯದಲ್ಲಿ ದೇವದಾಸಿಯರ ಪುನರ್ವಸತಿ ಯೋಜನೆ ೧೯೯೧ರಿಂದ ಆರಂಭವಾಗಿದೆ. ಈ ಯೋಜನೆಯನ್ವಯ ದೇವದಾಸಿಯರಿಗೆ ಒಂಬತ್ತು ಸಾವಿರ ರೂ. ಸಹಾಯ ಧನ ಮತ್ತು ಆರು ಸಾವಿರ ರೂ. ಸಾಲ ಸಿಗುತ್ತದೆ. ಆದರೆ ಈ ಯೋಜನೆ ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ.
ದೇವದಾಸಿ ಪಿಡುಗಿನಿಂದ ಹೊರಬಂದ ಮಹಿಳೆಯರಿಗೆ ಜೀವನೋಪಾಯಕ್ಕೆ ಒಂದು ಉದ್ಯೋಗ ಬೇಕು. ಹೊಸ ಉದ್ಯೋಗಕ್ಕೆ ತರಬೇತುಗೊಳಿಸಬೇಕು. ಇಲ್ಲದಿದ್ದರೆ ಮತ್ತೆ ಸಮಸ್ಯೆಯಾಗುತ್ತದೆ. ಬೆಳಗಾವಿಯಲ್ಲೊಮ್ಮೆ ಹಲವು ಮಂದಿ ದೇವದಾಸಿಯರು ಸೇರಿ ಖಾದಿ ಉತ್ಪನ್ನಗಳ ಘಟಕವನ್ನು ಸ್ಥಾಪಿಸಿದರು. ಆದರೆ ಖಾದಿ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಲ್ಲ ಎಂದು ಖಾದಿ ಮಂಡಳಿ ಆ ಉತ್ಪನ್ನಗಳನ್ನು ಖರೀದಿಸಲಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲರಿಯದ ದೇವದಾಸಿಯರು ಮತ್ತೆ ವೇಶ್ಯಾವೃತ್ತಿಗೆ ಇಳಿದರು.
ಬಡತನ ಮತ್ತು ಅಜ್ಞಾನ ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ಇದೆಲ್ಲ ಕೆಲವು ಸ್ಯಾಂಪಲ್ ಗಳು.

No comments:

Post a Comment