Thursday 30 July 2009

ನಿರಾಶೆಯಾಗಬೇಕಿಲ್ಲ, ಸಾಗರದಷ್ಟು ಐಡಿಯಾಗಳಿದೆಯಲ್ವಾ !

ಈವತ್ತು ಬೆಳಗ್ಗೆ ದೀಪಕ್ ಸಾಗರ‍್ ಎಂಬುವರು ಭೇಟಿಯಾದರು.
ಯಾವುದೋ ಲೇಖನಕ್ಕೆ ಅಗತ್ಯವಾಗಿದ್ದ ಛಾಯಾ ಚಿತ್ರವನ್ನು ಅವರು ತಂದುಕೊಟ್ಟಿದ್ದರು. ಸಾಮಾನ್ಯವಾಗಿ ವಿಷಯ ಅಷ್ಟಕ್ಕೇ ಮುಗಿಯುತ್ತದೆ. ಎಂದಿನಂತೆ ಫೋಟೋವನ್ನು ಸ್ಕ್ಯಾನ್‌ ಮಾಡಿದ ನಂತರ ವಾಪಸ್‌ ಕೊಟ್ಟು ಕಳಿಸುತ್ತಿದ್ದೆ.
ಆದರೆ ಸಾಗರ‍್ ತಮ್ಮ ಪರಿಚಯ ಮಾಡಿಕೊಟ್ಟ ನಂತರ ಹತ್ತು ಹಲವಾರು ಸ್ವಾರಸ್ಯಕರ ಸಂಗತಿಗಳು ಗೊತ್ತಾಯಿತು. ನಮ್ಮ ಚರ್ಚೆಗೆ ಹಲವು ಆಯಾಮಗಳು ಸಿಕ್ಕಿದವು.
ಸಾಗರ‍್ ಅವರಿಗೆ ಕೆಲಸದ ನಡುವೆ ಸಾಕಷ್ಟು ಸಮಯ ಸಿಗುತ್ತದೆ. (ಮನಸ್ಸು ಮಾಡಿದರೆ ಎಲ್ಲರಿಗೂ ಸಾಕಷ್ಟು ಚಟುವಟಿಕೆಗಳಿಗೆ ಸಮಯದ ಕೊರತೆ ಕಾಡುವುದಿಲ್ಲ ) ಅಂದರೆ ನಿಗದಿತ ಕೆಲಸಗಳನ್ನು ಅವಧಿಗೆ ಮುನ್ನವೇ ಅಚ್ಚುಕಟ್ಟಾಗಿ ಮುಗಿಸಿ, ಸಮಯವನ್ನು ಉಳಿತಾಯ ಮಾಡುವ ಹಾಗೂ, ಹಾಗೆ ಮಿಕ್ಕಿದ ಸಮಯವನ್ನು ಅವರಿಗೆ ಬೇಕಾದ ಚಟುವಟಿಕೆಗಳಲ್ಲಿ ಕಳೆಯಲು ಅವಕಾಶ ಇದೆ.
ಹೀಗೆ ಉಳಿಯುವ ಸಮಯವನ್ನು ಸಾಗರ‍್ ಹಲವಾರು ಸಾಮಾಜಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ಪಿಯುಸಿಯಲ್ಲಿ ಇದ್ದಾಗಲೇ ಅವರೊಂದು ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅಂಧರಿಗೆ ಸಹಾಯ ಮಾಡುವುದು ಅವರ ಸುವರ್ಣದೀಪ ಅಂಧರ ಬಳಗದ ಉದ್ದೇಶ. ಇದನ್ನು ಸಾಧಿಸುವ ವಿಧಾನ ಕುತೂಹಲಕರ.
ಕಲಾವಿದರಿಗೂ ದುಡಿದ ತೃಪ್ತಿ :
ಅವರು ಹೇಳಿದ್ದನ್ನು ಇಲ್ಲಿ ಬರೆದಿದ್ದೇನೆ. ಪ್ರಾಮಾಣಿಕವಾಗಿ ಮಾಡುವುದಿದ್ದರೆ ಮಾದರಿ ಐಡಿಯಾ ಅನ್ನಿಸಿತು. ಸುಮಾರು ಮುನ್ನೂರು ಮಂದಿಯ ತಂಡವೇ ದೀಪಕ್ ಸಾಗರ‍್ ಬಳಿ ಇದೆ. ಅವರಲ್ಲಿ ಎಂಬತ್ತಕ್ಕೂ ಹೆಚ್ಚು ಮಂದಿ ಕಲಾವಿದರು. ಹಾಡುಗಾರರು. ಮತ್ತೆ ಅನೇಕರು ಸಣ್ಣ ಪುಟ್ಟ ಕೆಲಸಗಳನ್ನು ನಿಪುಣರು. ಪ್ರತಿಯೊಬ್ಬರಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮತ್ತು ಆದಾಯ ಸಿಕ್ಕಿದೆ.
ಉದಾಹರಣೆಗೆ ಹಾಡುಗಾರರ ಗುಂಪನ್ನು ನೋಡೋಣ. ಪ್ರತಿ ತಿಂಗಳು ಕನಿಷ್ಠ ಎರಡು ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅಂಧರಲ್ಲಿ ಹಾಡುವ ಪ್ರತಿಭೆಯಿದೆ. ನೂರಾರು ಜನರನ್ನು ಆಕರ್ಷಿಸುತ್ತಾರೆ. ಅಂಧರ ಹಾಡನ್ನು ಆಲಿಸುವ ಮಂದಿ ಉತ್ತೇಜಿಸಲು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸುತ್ತಾರೆ. ಯಾರಿಂದಲೂ ಯಾರೂ ವಂತಿಗೆ ಸ್ವೀಕರಿಸುವುದಿಲ್ಲ. ಪ್ರತಿ ಕಾರ್ಯಕ್ರಮದಲ್ಲೂ ಟಿಕೆಟ್ ಇಡುತ್ತಾರೆ. ಸಿನಿಮಾಗೆ ನಲುವತ್ತೋ, ಐವತ್ತೋ ಕೊಟ್ಟು ಹೋಗುತ್ತೀರಿ. ಹಾಗೆಯೇ ಅಂಧರ ಕಾರ್ಯಕ್ರಮಕ್ಕೆ ಕೊಡಬಹುದಲ್ಲವೇ. ಕಲಾವಿದರಿಗೂ ದುಡಿದು ಸಂಪಾದಿಸಿದ ತೃಪ್ತಿ ಸಿಗುತ್ತದೆ. ಬಂದ ಹಣವನ್ನು ಗುಂಪಿನ ಕಲಾವಿದರು ಹಂಚಿಕೊಳ್ಳುತ್ತಾರೆ.
ಈ ಬಳಗವನ್ನು ಅವರಿನ್ನೂ ನೋಂದಣಿ ಮಾಡಿಸಿಲ್ಲ. ನೋಂದಣಿ ಮಾಡಿಸಿದರೆ ಟ್ರಸ್ಟ್‌ ಮಾಡಿಸಬೇಕು, ಅದರಲ್ಲಿ ನೂರೆಂಟು ನಿಯಮಾವಳಿಗಳ ರಗಳೆ ಇರುತ್ತದೆ. ಟ್ರಸ್ಟ್ ನಲ್ಲಿ ಭಿನ್ನಾಭಿಪ್ರಾಯ ಹೆಚ್ಚಾದರೆ ಸಂಘದ ಅಸ್ತಿತ್ವಕ್ಕೇ ಧಕ್ಕೆಯಾಗುವ ಚಿಂತೆ ಅಂತ ತಾಪತ್ರಯ ಇರುತ್ತದೆ. ಬದಲಿಗೆ ನೋಂದಣಿ ಮಾಡದೇ ಬಳಗವನ್ನು ಕಟ್ಟಿಕೊಂಡು ಅಂಧರಿಗೆ ನೆರವಾಗುವುದು ನಮ್ಮ ಉದ್ದೇಶ ಎನ್ನುತ್ತಾರೆ ದೀಪಕ್.
ಈ ಬಳಗದಲ್ಲಿ ರಾಜ್ಯದ ನಾನಾ ಕಡೆಗಳ ಅಂಧರಿದ್ದಾರೆ. ಅವರೆಲ್ಲ ತಮ್ಮದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಆದ್ದರಿಂದ ಬಳಗದ ಇತರ ಸದಸ್ಯರು ಉತ್ಪಾದಿಸುವ ನಾನಾ ಉತ್ಪನ್ನಗಳಿಗೆ ಎಲ್ಲರೂ ಸೇರಿ ಮಾರುಕಟ್ಟೆ ದೊರೆಯುವಂತೆ ಸಹಕರಿಸುತ್ತಾರೆ.
ಹೌದಲ್ಲವೇ, ನಮ್ಮ ಸಮಾಜದಲ್ಲಿ ಯಾರಿಗಾದರೂ ಉಪಕಾರ ಮಾಡೋಣವೆಂದು ಹೊರಟರೂ ಕೆಲವೊಮ್ಮೆ ನೂರೆಂಟು ಕಾನೂನುಗಳೂ ಅಡ್ಡಿಯಾಗುತ್ತವೆ ! ಹೀಗಿರುವಾಗ ಇಂಥ ಪರಿಹಾರೋಪಾಯಗಳೂ ಇರುತ್ತವೆ ಅಲ್ವಾ !

No comments:

Post a Comment