Saturday 20 March 2010

ಕ್ರೆಡಿಟ್ ಕಾರ್ಡ್ ಕರ್ಮಕಾಂಡ



( ವಿಜಯ ಕರ್ನಾಟಕದಲ್ಲಿ ೨೦೦೭ರ ಡಿಸೆಂಬರ್ ೩ ಮತ್ತು ೪ರಂದು ಪ್ರಕಟವಾದ ಲೇಖನಗಳ ಗುಚ್ಛವಿದು. ನಿಯಮಿತವಾಗಿ ನುಡಿಚೈತ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )

ಏಯ್ ಗೂಬೆ..ನಿನ್ನಪ್ಪನ್ ಮ್ಯಾಲೆ ವಾರಂಟ್ ಐತೆ...ಇನ್ನರ್ಧ ಗಂಟೇಲಿ ಮನೆಗೆ ಬರ‍್ತೇನೆ ಆಯ್ತಾ..
ಚೆನ್ನೈನಿಂದ ಪೊಲೀಸ್ ಇನ್ಸ್‌ಪೆಕ್ಟರ್ ರಾಹುಲ್ ಮಾತಾಡ್ತಾ ಇರೋದು...ನಿಮ್ಮ ಜ್ಯೂನಿಯರ್ ಮೇಲೆ ಕ್ರಿಮಿನಲ್ ಕೇಸಿದೆ. ಹಾಫನವರಿನಲ್ಲಿ ಅರೆಸ್ಟ್ ಮಾಡಬೇಕು. ನಿಮ್ಮ ಏರಿಯಾ ಪೊಲೀಸಿನವರಿಗೆ ವಾರಂಟ್ ಕೊಟ್ಟಾಗಿದೆ...ಆರ್ ಯೂ ರೆಡಿ ?
ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳಿಂದ ಕ್ರೆಡಿಟ್‌ಕಾರ್ಡ್ ಸಾಲದ ಸುಳಿಯಲ್ಲಿ ಸಿಲುಕಿರುವ ಲಕ್ಷಾಂತರ ಬಳಕೆದಾರರು ಗೂಂಡಾಗಳಿಂದ ಎದುರಿಸುತ್ತಿರುವ ಬೆದರಿಕೆ ಕರೆಗಳ ಸ್ಯಾಂಪಲ್‌ಗಳಿವು. ಇನ್ನುಳಿದ ಅವಾಚ್ಯ ಮತ್ತು ಮಾನಹಾನಿಕರ ಕರೆಗಳನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ.
೧೯೯೧ರಲ್ಲಿ ಮುಕ್ತ ಆರ್ಥಿಕತೆಯ ಬಾಗಿಲನ್ನು ತೆರೆದಾಗ ಬಹು ರಾಷ್ಟ್ರೀಯ ಕಂಪನಿಗಳು ದೇಶವನ್ನು ಪ್ರವೇಶಿಸಿದವು. ನಂತರ ಒಂದೊಂದಾಗಿ ನಾನಾ ಕ್ಚೇತ್ರಗಳಲ್ಲಿ ಅಂತಹ ಕಂಪನಿಗಳ ಕ್ರಿಮಿನಲ್ ಗೇಮ್ ಆರಂಭವಾಯಿತು. ಇದರಿಂದ ಬ್ಯಾಂಕಿಂಗ್ ಕೂಡ ಹೊರತಲ್ಲ. ಹಾಗೆ ನುಸುಳಿದ ಕ್ರೆಡಿಟ್ ಕಾರ್ಡ್ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಇದೀಗ ಕೈಗೆ ಸಿಕ್ಕಿದವರ ಬದುಕನ್ನು ಕುಟ್ಟಿ ಪುಡಿ ಮಾಡುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡಿ, ಸುಪ್ರೀಂಕೋರ್ಟ್ ಆದೇಶವನ್ನು ಕೂಡ ಈ ಕಂಪನಿಗಳು ಗುಡಿಸಿ ಗುಂಡಾಂತರ ಮಾಡಿವೆ. ಈ ವೈಟ್ ಕಾಲರ್ ಲೂಟಿಯ ಪರಿಣಾಮ ಮನೆ ಮಠ ಮಾರಿ ಕೈ ಚೆಲ್ಲಿರುವ ಮಂದಿಯಲ್ಲಿ ಪ್ರತಿಭಟಿಸುವ ತ್ರಾಣ ಕೂಡ ಕುಸಿದಿದೆ. ದನ ಮುಂತಾದ ಮೂಕಪಶುಗಳಂತೆ ಅವರೀಗ ಹಿಂದೆ ಬಂದರೆ ಒದೆಯಲಾರರು. ಮುಂದೆ ಬಂದರೆ ಹಾಯಲಾರರು.
ಯಾರಿದ್ದಾರೆ ಯಾರಿಲ್ಲ ?ದಂಗುಬಡಿಸುವ ವಿಷಯ ಏನೆಂದರೆ ವಂಚನೆಗೀಡಾದವರಲ್ಲಿ ಯಾರಿದ್ದಾರೆ ಯಾರಿಲ್ಲ ? ಆರಂಭದಲ್ಲಿ ಮೇಲ್ಮಧ್ಯಮ ಹಾಗೂ ಇತರ ಶ್ರೀಮಂತರಿಗೆ ಮೋಸವಾಯಿತು. ಇದೀಗ ಪರಿಸ್ಥಿತಿ ಮತ್ತೊಂದು ಕರಾಳ ಮಗ್ಗುಲಿಗೆ ಹೊರಳಿದೆ. ಸಣ್ಣ ಪುಟ್ಟ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು, ಲೆಕ್ಕಾಚಾರದಲ್ಲಿ ದಂತಕತೆಗಳಾಗಿರುವ ಮಾರ‍್ವಾಡಿಗಳು, ಖುದ್ದು ಬ್ಯಾಂಕ್ ವ್ಯವಸ್ಥಾಪಕರು, ಸಾಫ್ಟ್‌ವೇರ್ ತಜ್ಞರು, ಪ್ರಿನ್ಸಿಪಾಲರು, ಪತ್ರಕರ್ತರು, ಗೃಹಿಣಿಯರು, ಗಾರ್ಮೆಂಟ್ ಹುಡುಗಿಯರು, ಇತರ ವೃತ್ತಿ ನಿರತ ಮಹಿಳೆಯರು ಕಂಡರಿಯದ ಸಮಸ್ಯೆಯಿಂದ ಬಚಾವಾಗುವುದು ಹೇಗೆಂದು ಗೊತ್ತಾಗದೆ ಪರದಾಡುತ್ತಿದ್ದಾರೆ. ಕೇಳುವವರೇ ಇಲ್ಲ. ಇವರಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಂದಿ ಮನೆಯ ಸದಸ್ಯರು ಮತ್ತು ಸ್ನೇಹಿತರಲ್ಲಿ ಹೇಳಿಕೊಳ್ಳಲು ಕೂಡ ಅಂಜುತ್ತ ಹಗಲಿರುಳು ಬ್ಲೇಡ್‌ಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಕೆಲವರು ಕಿರುಕುಳ ತಾಳಲಾರದೆ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಎಷ್ಟೋ ಮಂದಿ ಯತ್ನಿಸಿದ್ದಾರೆ. ಸಾಲ ವಸೂಲಿಯ ನೆಪದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲು ತಟ್ಟುವ ಪಾತಕಿಗಳಿಂದ ಅಸಂಖ್ಯಾತ ಸಂಸಾರಗಳ ನೆಮ್ಮದಿ ಸರ್ವನಾಶವಾಗಿದೆ.
ಸಾಮಾನ್ಯವಾಗಿ ಭಾರತೀಯ ಮನಸ್ಸತ್ವ ಅಪ್ಪಟ ಸಾಲ ವಿರೋಧಿ. ಇದು ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿ ಯಾವುದೋ ಒಂದು ಸನ್ನಿವೇಶದಲ್ಲಿ ಹಣಕಾಸು ವಿವಾದದ ಸುಳಿಗೆ ಬಿದ್ದರೆ ಆತನದ್ದೇ ಎಡವಟ್ಟು ಅಂತ ಜನ ತಲೆಗೊಂದರಂತೆ ಎಣಿಸುವುದೇ ಜಾಸ್ತಿ. ಆದ್ದರಿಂದ ಸಾಲ ಬಾಕಿ ಇದ್ದರೆ ಬ್ಯಾಂಕ್‌ನವರು ಸುಮ್ಮನೆ ಬಿಡುತ್ತಾರಾ ? ಇದನ್ನೆಲ್ಲ ಮೊದಲೇ ತಿಳಿದುಕೊಳ್ಳಬಾರದಾ ? ಎಂದು ತೋಚಿದಂತೆ ಅಂದುಕೊಂಡು ನಗುತ್ತಾರೆ. ಆದರೆ ಕೆಲಸಕ್ಕೆ ಬಾರದ ಅವಿವೇಕಿಗಳು ಮಾತ್ರ ಇಂತಹ ಕುಹಕದ ಮಾತುಗಳನ್ನಾಡಬಹುದು.
ಏಕೆಂದರೆ ವಸ್ತು ಸ್ಥಿತಿ ಬೇರೆಯೇ ಇದೆ. ದೇಶದಲ್ಲಿ ಕ್ರೆಡಿಟ್‌ಕಾರ್ಡ್‌ಗಳ ಜಾರಿಯಲ್ಲಿ ಗಂಭೀರ ಲೋಪ ದೋಷಗಳಿವೆ. ಗ್ರಾಹಕರನ್ನು ಅನಾಮತ್ತು ಕೆಡವಲು ಹತ್ತಾರು ವಾಮ ಮಾರ್ಗಗಳಿವೆ. ಯಾವತ್ತಾದರೂ ಎಡವಿ ಗುಂಡಿಗೆ ಬೀಳುವುದು ಖಚಿತ ಎಂಬುದನ್ನು ಅನಾಹುತ ಮಾಡಿಕೊಂಡವರ ವ್ಯಥೆಯ ಕಥೆಗಳು ಸಾರುತ್ತಿವೆ. ಆದ್ದರಿಂದ ಮೂಲತಃ ಹಲವಾರು ಉಪಯುಕ್ತ ಲಕ್ಷಣಗಳನ್ನು ಒಳಗೊಂಡಿರುವ ಕ್ರೆಡಿಟ್‌ಕಾರ್ಡ್ ಎಂಬ ಹಣಕಾಸು ವ್ಯವಸ್ಥೆ ಭಾರತದಲ್ಲಿ ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ.
ಆರ್‌ಬಿಐ ಕೈ ಚೆಲ್ಲಿತ್ತು !ನೋಡಿ. ನಾಲ್ಕು ವರ್ಷಗಳ ಹಿಂದೆಯೇ ಕ್ರೆಡಿಟ್ ಕಾರ್ಡ್‌ಗಳ ಮೀಟರ್ ಬಡ್ಡಿ ದರದ ಮೇಲೆ ಕಡಿವಾಣ ಹಾಕಿ ದಯವಿಟ್ಟು ಮನೆಹಾಳ ಬ್ಯಾಂಕ್‌ಗಳ ಗ್ರಹಚಾರ ಬಿಡಿಸಿ ಎಂದು ಒತ್ತಾಯಿಸಿ ಆರ್‌ಬಿಐಗೆ ಬಳಕೆದಾರರು ಮನವಿ ಸಲ್ಲಿಸಿದ್ದರು.
ಪರಿಣಾಮ ? ೨೦೦೩ರ ಮೇನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೌನ ಮುರಿದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು. ಸಾಲ ಹಾಗೂ ಮುಂಗಡಗಳ ಬಡ್ಡಿ ದರ ಕುರಿತು ತಾನು ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳು ಕ್ರೆಡಿಟ್‌ಕಾರ್ಡ್‌ಗಳಲ್ಲಿ ಪಡೆಯುವ ಸಾಲಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕಾರ್ಡ್ ಬಿಡುಗಡೆ ಮಾಡುವ ಬ್ಯಾಂಕ್‌ಗಳು ಒದಗಿಸುತ್ತಿರುವ ಸೇವೆ ಮತ್ತು ಸೌಲಭ್ಯಗಳಲ್ಲಿ ಏಕರೂಪತೆ ಇರುವುದಿಲ್ಲ. ಹೀಗಿದ್ದರೂ ಬ್ಯಾಂಕ್‌ಗಳು ಬಳಕೆದಾರರಿಗೆ ಅದನ್ನು ನೀಡುವ ಮುನ್ನ ಸದಸ್ಯತ್ವ, ನವೀಕರಣ, ಸೇವಾ ಶುಲ್ಕ ದಂಡ ಮತ್ತಿತರ ಷರತ್ತುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಸದ್ಯದ ಅನಿಯಂತ್ರಿತ ವ್ಯವಸ್ಥೆಯಲ್ಲಿ ಈ ಬಗ್ಗೆ ಮಧ್ಯಪ್ರವೇಶಿಸಲು ತಾನು ಬಯಸುತ್ತಿಲ್ಲ ಎಂದು ಪ್ರತಿಪಾದಿಸಿತು.
ಹೀಗೆ ನುಣುಚಿಕೊಂಡರೆ ಸಮಸ್ಯೆ ನಿಲ್ಲುತ್ತದೆಯೇ ? ಅದಾದ ನಂತರ ಪ್ರಮುಖ ನಗರಗಳಲ್ಲಿ ಮೆಲ್ಲಗೆ ಪ್ರತಿಭಟನೆ ಕಾವು ಪಡೆಯಿತು. ಸಾಲದ ಆಘಾತದಲ್ಲಿದ್ದವರು ಬೀದಿಗೆ ಇಳಿದು ಪ್ರತಿಭಟಿಸಿದರು. ಕೊನೆಗೂ ಆರ್‌ಬಿಐ ಕ್ರೆಡಿಟ್‌ಕಾರ್ಡ್ ಕುರಿತು ಮಾರ್ಗದರ್ಶಿ ಪ್ರಕಟಿಸಿತು. ಪ್ರತಿಯೊಂದಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ನಿರೂಪಿಸಿತು. ದುರಂತ ಏನೆಂದರೆ ಅದಾವುದೂ ಕಾಗದದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಈಚೆಗೆ ಬಂದಿಲ್ಲ. ಆದ್ದರಿಂದ ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳ ದಂಗುಬಡಿಸುವ ಹಗಲು ದರೋಡೆ ನಿಂತಿಲ್ಲ.

No comments:

Post a Comment