Tuesday, 13 October 2009

ಸರಕಾರಿ ಶಾಲೆಯಿಂದ ಗ್ರಾಮದ ಪರಿವರ್ತನೆ

ಸಾಗರಕಟ್ಟೆ ಹೆಮ್ಮನಹಳ್ಳಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎನ್ ಜಯಲಕ್ಷ್ಮಿ. ಅವರು ಈ ಶಾಲೆಗೆ ಬಂದಾಗ ಶಾಲೆಯ ಸ್ಥಿತಿ ಉತ್ತಮವಾಗಿರಲಿಲ್ಲ. ಹೇಳೋರು ಕೇಳೋರು ಇಲ್ಲದ ಅನೇಕ ಸರಕಾರಿ ಶಾಲೆಗಳಂತೆ ಇದೂ ಇತ್ತು.
ಅಂತಹ ಶಾಲೆಯ ಪುನಶ್ಚೇತನಕ್ಕಾಗಿ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಹಾಗೂ ಗ್ರಾಮಸ್ಥರು ಜತೆಗೂಡಿ ಶ್ರಮಿಸಿದ ರೀತಿ ಅನನ್ಯ. ಅನೇಕ ಮಂದಿ ಶಿಕ್ಷಣ ತಜ್ಞರು ಈ ಶಾಲೆಗೆ ಭೇಟಿ ಕೊಟ್ಟು ಮೂಕ ವಿಸ್ಮಿತರಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು ?
ಸಾಗರಕಟ್ಟೆ ಹೆಮ್ಮನಹಳ್ಳಿ ಅತ್ಯಂತ ಪುಟ್ಟ ಹಳ್ಳಿ. ಅಂದಾಜು ನೂರು ಮನೆಗಳಿವೆ. ಇತರೆಡೆಗಳಿಂದ ವಲಸೆ ಬಂದವರು, ಕೂಲಿ ನಾಲಿ ಮಾಡುವವರು ವಾಸಿಸುತ್ತಾರೆ. ಅಂತಹ ಗ್ರಾಮವಾಸಿಗಳಲ್ಲಿ ಶಾಲೆ ನಮ್ಮದು ಎಂಬ ಭಾವನೆಯನ್ನು ಜಯಲಕ್ಷ್ಮಿ ಬಿತ್ತಿದರು. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ದಿನಗಳಂದು ಶಾಲೆಯಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಹಬ್ಬ ಆಚರಿಸಿದರು. ಎಲ್ಲರೂ ಜಾತ್ರೆಗೆ ಸೇರುವಂತೆ ಈ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ಆವತ್ತು ಮಧ್ಯಾಹ್ನ ಗ್ರಾಮದವರೆಲ್ಲರಿಗೂ ಮಕ್ಕಳೊಂದಿಗೆ ಶಾಲೆಯಲ್ಲೇ ಊಟ. ಸಿಹಿ ವಿತರಣೆ. ಶಾಲೆಯ ಅಭಿವೃದ್ಧಿಗೂ ಆಗ ಚರ್ಚೆಯಾಗುತ್ತದೆ. ಶಾಲೆಯಲ್ಲಿ ಸೋಲಾರ್ ದೀಪವಿದೆ. ಹೂತೋಟವಿದೆ. ಬಾಳೆ, ಪಪ್ಪಾಯ, ವಿವಿಧ ಹೂವಿನ ಗಿಡಗಳು ಇವೆ. ಗ್ರಾಮಸ್ಥರೆಲ್ಲರೂ ಶಾಲೆಗೆ ಶ್ರಮ ದಾನ ನೀಡುತ್ತಾರೆ.
ಈ ಹಿಂದೆ ಗ್ರಾಮದಲ್ಲಿ ಅಸ್ತ್ರ ಒಲೆಗಳು ಇರಲಿಲ್ಲ. ಹಾಗಂದರೇನು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಈಗ ಊರಿನ ಎಲ್ಲ ಮನೆಗಳಲ್ಲಿ ಅಸ್ತ್ರ ಒಲೆ ಇದೆ. ಇದಕ್ಕೆ ಕಾರಣ ಸರಕಾರಿ ಶಾಲೆ. ಶಾಲೆಯ ತೋಟಕ್ಕೆ ಹನಿ ನೀರಾವರಿ ಇದೆ. ಮಕ್ಕಳಾಡುವ ಚಕಮಕಿಗೆ ಕೊಳವೆ ಬಾವಿಯ ಹಿಡಿಯನ್ನು ಜೋಡಿಸಲಾಗಿದೆ. ಮಕ್ಕಳು ಚಕಮಕಿಯನ್ನೇರಿ ಆಡುವಾಗ ನೀರು ಟ್ಯಾಂಕ್‌ಗೆ ಹರಿಯುತ್ತದೆ. ಇಂತಹ ಹಲವಾರು ಪ್ರಯೋಗಗಳಿಗೆ ಈ ಶಾಲೆ ಕಾರಣವಾಗಿದೆ. ಒಂದು ಸರಕಾರಿ ಶಾಲೆ ಸಾಮಾಜಿಕ ಪರಿವರ್ತನೆ ಮಾಡುತ್ತಿರುವುದು ಅಚ್ಚರಿದಾಯಕವಲ್ಲವೇ.

No comments:

Post a Comment