Wednesday, 7 October 2009

ದುಡಿಯುವ ಕೈಗಳಿಗೆ ಇರಲಿ ಬ್ಯಾಂಕಿಂಗ್

‘ ನನಗೆ ಚೆನ್ನಾಗಿ ಗೊತ್ತು. ಐಟಿ ಕ್ಯಾಪಿಟಲ್ ಬೆಂಗಳೂರಿನಲ್ಲೇ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ಸಾವಿರಾರು ಕಾರ್ಮಿಕರ ಬಳಿ ಬ್ಯಾಂಕ್ ಖಾತೆಯೇ ಇಲ್ಲ. ಮೊದಲು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು. ಹಾಗಿದ್ದರೆ ಮಾತ್ರ ಆತ ದೇಶದ ಉತ್ಪಾದಕ ಆಸ್ತಿಯಾಗಬಲ್ಲ..’
ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ. ಕೆ.ಸಿ ಚಕ್ರವರ್ತಿ ಇತ್ತೀಚೆಗೆ ಕಾರ್ಪೊರೇಷನ್ ಬ್ಯಾಂಕ್‌ನ ಶಾಖೆ ರಹಿತ ೧೫೦ ಬ್ಯಾಂಕಿಂಗ್ ಕೇಂದ್ರಗಳನ್ನು ಉದ್ಘಾಟಿಸಿ ಹೇಳಿದ ಮಾತಿದು. ನಿಜ. ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿಯೂ ನೂರಾರು ಮಂದಿಗೆ ಬ್ಯಾಂಕ್ ಖಾತೆ ಎಂಬುದಿಲ್ಲ. ಮತ್ತೆ ನೂರಾರು ಮಂದಿಗೆ ಖಾತೆ ಇದ್ದರೂ ಖಾಲಿ ಮತ್ತು ಖಾಲಿ. ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ದೂರದ ಬ್ಯಾಂಕ್ ಶಾಖೆಗೆ ತೆರಳಬೇಕು. ನೂರು ರೂಪಾಯಿ ಠೇವಣಿ ಇಡಬೇಕಾದರೆ ಇಪ್ಪತೈದು ರೂ. ಖರ್ಚು ಮಾಡಬೇಕು. ಸಮಯ ಕೂಡ ವೇಸ್ಟು.
ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಈವತ್ತು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದುವೇ. ಮಾತ್ರವಲ್ಲದೆ ನಮ್ಮ ಬ್ಯಾಂಕ್‌ಗಳಿಗೆ ಶ್ರೀಮಂತ ಗ್ರಾಹಕರೆಂದರೆ ತುಂಬ ಅಚ್ಚುಮೆಚ್ಚು. ಬೇಕಾದರೆ ನೀವೇ ನೋಡಿ, ನೂರು, ಐವತ್ತು ರೂ. ಠೇವಣಿ ಇಡುವ ಗ್ರಾಹಕರು ನೀವಾಗಿದ್ದರೆ ನಿಮ್ಮತ್ತ ಬ್ಯಾಂಕ್ ಮ್ಯಾನೇಜರ್ ಮೂಸಿ ಕೂಡ ನೋಡುವುದಿಲ್ಲ. ಅದುವೇ ಲಕ್ಷಾಂತರ ಠೇವಣಿ ಇಡುವ ಉದ್ಯಮಿಯಾದರೆ ಕೈಮುಗಿದು ಛೇಂಬರಿಗೆ ಕರೆದು ಕಾಫಿ, ಟೀ ,ಜ್ಯೂಸ್ ಕೊಟ್ಟು ಸತ್ಕರಿಸುತ್ತಾರೆ. ಯಾವುದೇ ಸಂದೇಹವಿಲ್ಲ. ಬ್ಯಾಂಕ್‌ಗಳು ಶ್ರೀಮಂತ ಗಿರಾಕಿಗಳನ್ನೇ ಓಲೈಸುವುದು ಹೆಚ್ಚು. ಆದರೆ ಸ್ವತಃ ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ ಚಕ್ರವರ್ತಿ ಹೇಳ್ತಾರೆ- ಶ್ರೀಮಂತರ ಹಿಂದೆ ಬೀಳಬೇಡಿ, ಅವರಿಂದ ಬ್ಯಾಂಕ್‌ಗಳು ಉಳಿಯುವುದಿಲ್ಲ, ದೀರ್ಘಕಾಲ ಬದುಕಿ ಉಳಿಯಬೇಕಾದರೆ ಬಡವರನ್ನು ನಂಬಿ. ಅವರನ್ನು ಬ್ಯಾಂಕಿಂಗ್ ಚಟುವಟಿಕೆಯ ವ್ಯಾಪ್ತಿಗೆ ಕರೆ ತನ್ನಿ. ಹಾಗಿದ್ದರೆ ಮಾತ್ರ ಯಶಸ್ವಿಯಾಗುತ್ತೀರಿ. ಕಾರ್ಪೊರೇಷನ್‌ನಂತಯಹ ಬ್ಯಾಂಕ್‌ಗಳು ಸಣ್ಣ ಬಂಡವಾಳದಿಂದಲೇ ಆರಂಭವಾದ ಬ್ಯಾಂಕ್‌ಗಳಲ್ಲವೇ ಎನ್ನುತ್ತಾರೆ ಚಕ್ರವರ್ತಿ.
ಅಂತೂ ಇಂತೂ ನಿಧಾನವಾಗಿ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಉದಾಹರಣೆಗೆ ಕಾರ್ಪೊರೇಷನ್ ಬ್ಯಾಂಕ್ ‘ ಕಾರ್ಪ್ ಗ್ರಾಮೀಣ ವಿಕಾಸ್’ ಎಂಬ ಯೋಜನೆ ಜಾರಿಗೊಳಿಸಿದೆ. ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯಿದು. ದೂರದ ಹಳ್ಳಿಗಳಲ್ಲಿ ಸ್ಮಾರ್ಟ್ ಕಾರ್ಡ್ ಮೂಲಕ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಯೋಜನೆ ಇದು. ಒಂದೂರಿನಲ್ಲಿ ೨೦೦-೨೫೦ ಮಂದಿಗೆ ಬ್ಯಾಂಕ್ ಖಾತೆಯಿದ್ದರೆ ಸಾಕು, ಒಬ್ಬರಿಗೆ ಬ್ಯಾಂಕಿನ ಪ್ರತಿನಿಯಾಗಬಹುದು. ಆ ಪ್ರತಿನಿಗೆ ೮೦೦ ರೂ.ಗಳಿಂದ ೧,೫೦೦ ರೂ. ತನಕ ಸಂಭಾವನೆ ಸಿಗುತ್ತದೆ. ೧.೫ ಕೆ.ಜಿ ತೂಗುವ ಬಯೋಮೆಟ್ರಿಕ್ ಸಾಧನ ಕೊಡುತ್ತಾರೆ. ಧ್ವನಿಯಾಧಾರಿತ ಈ ಸಲಕರಣೆಯ ಮೂಲಕ ಗ್ರಾಹಕರು ಠೇವಣಿ ಇಡಬಹುದು. ಅದು ಎಷ್ಟೇ ಮೊತ್ತವಾದರೂ ಚಿಂತೆ ಇಲ್ಲ. ೧೦ ರೂ. ಬೇಕಾದರೂ ಇಡಬಹುದು. ನಿಮ್ಮ ಮನೆ ಬಾಗಿಲಿಗೇ ಹೀಗೆ ಬ್ಯಾಂಕ್ ಸೇವೆ ಲಭ್ಯವಾಗುತ್ತದೆ. ಜತೆಗೆ ಒಬ್ಬರಿಗೆ ಪಾರ್ಟ್ ಟೈಂ ಕೆಲಸ ಮತ್ತು ಆದಾಯ ಸಿಕ್ಕಿದಂತಾಗುತ್ತದೆ. ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್, ಆರ್.ಡಿ, ಉದ್ಯೋಗ ಖಾತರಿ ಯೋಜನೆಯ ವೇತನ ಬಟವಾಡೆ, ಎಸ್‌ಎಸ್‌ಪಿ ಪೇಮೆಂಟ್‌ಗಳನ್ನು ಇದರ ಮೂಲಕ ನಿರ್ವಹಿಸಬಹುದು.
ಈವತ್ತು ತಂತ್ರಜ್ಞಾನದ ನೆರವಿನಿಂದ ಯಾವುದೇ ಊರಿನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತರಬಹುದು. ಕೇವಲ ಏಳನೇ ಕ್ಲಾಸ್ ಓದಿದ ಮಹಿಳೆಯೂ ಮನಸ್ಸು ಮಾಡಿದರೆ ತನ್ನೂರಿನಲ್ಲಿ ಶಾಖಾ ರಹಿತ ಬ್ಯಾಂಕಿಂಗ್‌ನ ಪ್ರತಿನಿಯಾಗುವುದರ ಮೂಲಕ ಪಾರ್ಟ್ ಟೈಂ ಆದಾಯ ಪಡೆಯಬಹುದು. ಜನ ಜಾಗೃತಿಯನ್ನೂ ಮೂಡಿಸಬಹುದು. ನಿಜ. ಹಳ್ಳಿಗಾಡಿನ ಅಥವಾ ನಗರ ಪ್ರದೇಶದ ಪ್ರತಿಯೊಬ್ಬ ಕಾರ್ಮಿಕರೂ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಹಾಗಿದ್ದರೆ ಮಾತ್ರ ಆತ ಸಂಪಾದಿಸಿದ ಆದಾಯ ಹನಿಗೂಡಿ ಹಳ್ಳವಾಗುತ್ತದೆ. ದೇಶದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡಿದಂತಾಗುತ್ತದೆ. ಸಂಪಾದಿಸಿದ ಆದಾಯ ೧೦ ರೂಪಾಯಿಯೇ ಆಗಿರಲಿ, ಅದರಲ್ಲಿ ೫ ರೂ.ಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಬೇಕು. ಖಂಡಿತ ಹನಿಗೂಡಿ ಹಳ್ಳವಾಗುತ್ತದೆ. ಜತೆಗೆ ಪ್ರತಿಯೊಂದು ಬ್ಯಾಂಕ್ ಕೂಡ ತಂತ್ರಜ್ಞಾನದ ಮೂಲಕ ಬಡವರನ್ನು ತಲುಪುವುದರ ಮೂಲಕ ತಳಮಟ್ಟದಲ್ಲಿ ಹಣಕಾಸು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ಬಡತನದ ರೇಖೆಗಿಂತ ಕೆಳಗಿರುವ ಮಂದಿ ಮೇಲೆ ಬರುತ್ತಾರೆ. ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ.

No comments:

Post a Comment