( ಮೈಸೂರಿನ ಆಂದೋಲನದಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿಯ ಐದನೇ ಕಂತು ಇಲ್ಲಿದೆ )
ಈ ಸಲದ ಗಾಂಧಿ ಜಯಂತಿಯ ದಿನ ನಂಜನಗೂಡಿನ ಒಂದು ತೀರಾ ಹಿಂದುಳಿದ ಗ್ರಾಮಕ್ಕೆ ತೆರಳಿದಾಗ ವಿಶಿಷ್ಟ ಅನುಭವ ದೊರೆಯಿತು. ಇದುವರೆಗೆ ನಮ್ಮ ಗ್ರಾಮಕ್ಕೆ ಪತ್ರಿಕೆಯವರು ಬಂದೇ ಇರಲಿಲ್ಲ. ನಮ್ಮ ಶಾಲೆಯ ಬಗ್ಗೆ ಆಂದೋಲನ ಪತ್ರಿಕೆಯ ಮೂಲಕ ಸಾವಿರಾರು ಓದುಗರಿಗೆ ಪರಿಚಯಿಸುತ್ತಿದ್ದೀರಾ. ಇದರಿಂದ ತುಂಬ ಸಂತಸವಾಗುತ್ತಿದೆ ಎಂದರು ಆ ಗ್ರಾಮಸ್ಥರು. ಆ ಗ್ರಾಮದ ಹೆಸರು ಗೌಡರ ಹುಂಡಿ..ಗೌಡರ ಹುಂಡಿಯ ಗ್ರಾಮಸ್ಥರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅಗತ್ಯ ಬಸ್ ಸೌಕರ್ಯ ಕೂಡ ಇಲ್ಲದ ಗೌಡರ ಹುಂಡಿಯಲ್ಲಿ ಶಾಲೆಯ ಏಳಿಗೆಗೆ ಗ್ರಾಮಸ್ಥರು ಅಕ್ಷರಶಃ ಪಣ ತೊಟ್ಟಿದ್ದಾರೆ. ಆದ್ದರಿಂದ ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಈ ಸರಕಾರಿ ಶಾಲೆ ಬೆಳೆದು ನಿಂತಿದೆ. ಶಾಲೆಯ ದ್ವಾರದಲ್ಲಿ ‘ ದೇವಾಲವಿ ವಿದ್ಯಾಲಯವು ಕೈ ಮುಗಿದು ಒಳಗೆ ಬಾ ಎಂಬ ಆಕರ್ಷಕ ಕಮಾನು ಇದೆ. ಸಣ್ಣ ಕೈತೋಟವಿದೆ. ಹತ್ತಾರು ತೆಂಗಿನ ಮರಗಳು, ಬಾಳೆ ಗಿಡಗಳು ಲಾಸ್ಯವಾಡುತ್ತಿವೆ. ಹೂವು ಹಣ್ಣಿನ ಗಿಡಗಳು ಹಸಿರಾಗಿವೆ. ಬಿಸಿಯೂಟಕ್ಕೆ ಬೇಕಾದ ತರಕಾರಿ, ಕಾಯಿ ಪಲ್ಲೆಗಳನ್ನು ಶಾಲೆಯ ಆವರಣದಲ್ಲೇ ಬೆಳೆಸುತ್ತಾರೆ. ಬೀನ್ಸ್, ಕ್ಯಾರೆಟ್, ಟೊಮೊಟೊ, ಬದನೆ, ಕೊತ್ತಂಬರಿ, ದಂಟಿನ ಸೊಪ್ಪು, ಸಬ್ಸಿಗೆ ಸೊಪ್ಪು ಮುಂತಾದ ತರಕಾರಿ ಸೊಪ್ಪುಗಳು ಇಲ್ಲಿ ಲಭ್ಯ. ಎಳನೀರು, ತೆಂಗಿನ ಕಾಯಿ ಕೂಡ ಸಿಗುತ್ತದೆ. ಶಾಲಾಭಿವೃದ್ಧಿ ಸಮಿತಿ ಪ್ರತಿವರ್ಷ ೨-೩ ವಿದ್ಯಾರ್ಥಿಗಳ ಸಮಸ್ತ ಖರ್ಚನ್ನೂ ನಿಭಾಯಿಸುತ್ತದೆ. ಈ ಊರಿನಲ್ಲಿ ಕಬ್ಬು ಬೆಳೆಗಾರರಿಗೆ ಸಹಕರಿಸುವ ಕೂಲಿ ಕಾರ್ಮಿಕರಿದ್ದಾರೆ. ಆ ಯುವಕರೆಲ್ಲ ಸೇರಿಕೊಂಡು ಕಬ್ಬಿನ ಸಂಘ ಎಂಬ ಸಂಘ ಸ್ಥಪಿಸಿದ್ದಾರೆ. ಸಂಘದ ಚಂದ್ರು ಮತ್ತು ಇತರರು ಸೇರಿಕೊಂಡು ಶಾಲೆಗೋಸ್ಕರ ಸೊಗಸಾದ ಬ್ಯಾಡ್ಮಿಂಟನ್ ಮೈದಾನ ನಿರ್ಮಿಸಿದ್ದಾರೆ. ಶಾಲೆಗೆ ವಿದ್ಯುಚ್ಛಕ್ತಿ ಸೌಲಭ್ಯ, ಕಮಾನು ನಿರ್ಮಾಣ, ತೋಟ ಸೇರಿದಂತೆ ಹಲವಾರು ಕಾಣಿಕೆಗಳನ್ನು ಗ್ರಾಮಸ್ಥರೆಲ್ಲ ಸೇರಿಕೊಂಡು ಕೊಟ್ಟಿದ್ದಾರೆ. ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಪರಿಕಲ್ಪನೆಯೇ ತುಸು ಭಿನ್ನ. ಸರಕಾರಿ ಶಾಲೆಗಳು ಹೇಗೆ ಪಾಳು ಬಿದ್ದು ಹೋಗಿವೆ ಎಂಬುದರ ಬಗ್ಗೆ ಮಾಧ್ಯಮಗಳು ಸಾಕಷ್ಟು ಸಲ ವರದಿ ಮಾಡಿವೆ. ಈಗಲೂ ಲೋಪ ದೋಷಗಳ ಪಟ್ಟಿ ಮುಗಿದಿಲ್ಲ. ಆದರೆ ಮತ್ತೊಂದು ಮುಖವನ್ನೂ ಪರಿಚಯಿಸಕೊಡಬೇಕಲ್ಲವೇ.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment