Thursday, 8 October 2009

ವಾಟ್ ಆನ್ ಐಡಿಯಾ...ಝೀರೊ ಬ್ಯಾಲೆನ್ಸ್ ಖಾತೆಯಲ್ಲಿಟ್ಟ ಚಿಲ್ಲರೆ, ಸಾಲದ ಕಂತು ತೀರಿಸುತ್ತೆ..

ಬೆಂಗಳೂರಿನಿಂದ ೫೫ ಕಿ.ಮೀ ದೂರದಲ್ಲಿ ದೊಡ್ಡ ಬಳ್ಳಾಪುರ ತಾಲೂಕಿಗೆ ಸೇರಿದ ದೊಡ್ಡ ಬೆಳವಂಗಳ ಹೋಬಳಿಯಿದೆ. ಈ ಹೋಬಳಿಯಲ್ಲಿ ಹಾದರಿಪುರ ಎಂಬ ಗ್ರಾಮ ಇದೆ. ೮೮೦ ಜನಸಂಖ್ಯೆಯ ಗ್ರಾಮದಲ್ಲಿ ೨೮೦ ಕುಟುಂಬವಿದೆ. ಬಹುತೇಕ ಮಂದಿ ಕೃಷಿ ಕೂಲಿ ಕಾರ್ಮಿಕರು. ಕೆಲವರು ಸಣ್ಣ ಪುಟ್ಟ ವ್ಯಾಪಾರಸ್ಥರು. ಪ್ರತಿ ದಿನ ಐವತ್ತೋ, ನೂರೋ ಸಂಪಾದಿಸುತ್ತಾರೆ. ಇಲ್ಲಿಯವರೆಗೆ ಬಹುತೇಕ ಮಂದಿ ಬ್ಯಾಂಕ್ ಮೆಟ್ಟಿಲೇರಿದವರಲ್ಲ. ಆದರೆ-
ಈ ಗ್ರಾಮದ ಪಂಚಾಯಿತಿ ಗ್ರಂಥಾಲಯದ ಪಾಲಕ ರಂಗಸ್ವಾಮಿ ಉತ್ಸಾಹಿ. ಗ್ರಾಮದಲ್ಲಿ ೨೪೨ ಮಂದಿಗೆ ಕಾರ್ಪೊರೇಷನ್ ಬ್ಯಾಂಕ್‌ನ ಖಾತೆ ಮಾಡಿಸಿಕೊಟ್ಟಿದ್ದಾರೆ. ಬ್ಯಾಂಕಿನ ಶಾಖಾ ರಹಿತ ಕೇಂದ್ರದ ಪ್ರತಿನಿಯಾಗಿರುವ ಸ್ವಾಮಿ, ಹಿಂದೆಂದಿಗಿಂತ ಬ್ಯುಸಿಯಾಗಿದ್ದಾರೆ. ಊರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿಯಾಗಿದ್ದವರೆಲ್ಲ ಇವರ ಬಳಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಸುಲಭವಾಗಿ ಬ್ಯಾಂಕ್ ವಹಿವಾಟು ಮಾಡುತ್ತಿದ್ದಾರೆ. ಬ್ಯಾಂಕ್ ಹುಡುಕಿಕೊಂಡು ಹೋಗಬೇಕಿಲ್ಲ. ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಪರವಾಗಿಲ್ಲ, ಅಕೌಂಟ್ (ಕಾರ್ಪ್ ಪ್ರಗತಿ ಎಸ್‌ಬಿ ಖಾತೆ ) ಚಾಲ್ತಿಯಲ್ಲಿರುತ್ತದೆ. ಒಬ್ಬರಿಗೆ ದಿನಕ್ಕೆ ಗರಿಷ್ಠ ೨೦೦೦ ರೂ. ಹಣ ವರ್ಗಾಣೆಗೆ ಅವಕಾಶವಿದೆ.
ಉದಾಹರಣೆಗೆ ಓದು ಬಾರದ ಹಳ್ಳಿಗನೊಬ್ಬ ರಂಗಸ್ವಾಮಿಯ ಬಳಿ ಬಂದು ಬಯೋ ಮೆಟ್ರಿಕ್ ಸಾಧನದ ಮೇಲೆ ಹೆಬ್ಬೆಟ್ಟು ಒತ್ತಿ, ಹತ್ತು ರೂ. ಕೊಟ್ಟೊಡನೆ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಅನ್ನುತ್ತೆ. ಠೇವಣಿ ಪ್ರಕ್ರಿಯೆ ಮುಗಿದೊಡನೆ ‘ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಎನ್ನುತ್ತದೆ. ಹಾಗೆಯೇ ಹಣ ತೆಗೆಯುವಾಗಲೂ ತೆಗೆದದ್ದೆಷ್ಟು, ಉಳಿದದ್ದೆಷ್ಟು ಎಂದು ಮೆಶೀನ್ ತಿಳಿಸುತ್ತದೆ. ಜತೆಗೆ ರಸೀದಿಯನ್ನೂ ಕೊಡುತ್ತದೆ. ಹೀಗಾಗಿ ಎಲ್ಲವೂ ಕರಾರುವಾಕ್. ಸ್ವಸಹಾಯ ಸಂಘಗಳ ಸದಸ್ಯರೂ, ದಿನದ ಸಂಪಾದನೆಯಲ್ಲಿ ಕೈಲಾದಷ್ಟನ್ನು ಖಾತೆಗೆ ಹಾಕುತ್ತಾರೆ. ತಿಂಗಳಿನ ಕೊನೆಗೆ ಸಂಘದ ಸಾಲದ ಕಂತು ತೀರಿಸಲು ಈ ಹಣವನ್ನು ಬಳಸುತ್ತಾರೆ. ಚಿಲ್ಲರೆ ದುಡ್ಡುಗಳೆಲ್ಲ ಸೇರಿ ಸಾಲದ ಕಂತು ತೀರುತ್ತದೆ.
ಸುಮಾರು ೨೦ ಸಾವಿರ ರೂ. ಬೆಲೆಯ ಬಯೋಮೆಟ್ರಿಕ್ ಮೆಶೀನ್‌ನಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಬ್ಯಾಂಕಿಗೂ ಪ್ರತ್ಯೇಕ ಶಾಖೆ ತೆರೆಯಬೇಕಾದ ಖರ್ಚು ಉಳಿಯುತ್ತದೆ. ಈವತ್ತು ಪ್ರತಿಯೊಂದು ಗ್ರಾಮದಲ್ಲೂ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿವೆ. (ಅದು ಬೀಗ ಜಡಿದಿರುವುದೇ ಹೆಚ್ಚು) ಈ ಕೇಂದ್ರಗಳಲ್ಲಿ ದುಡಿಯುವವರಲ್ಲಿ ಪ್ರಾಮಾಣಿಕರನ್ನು ಗುರುತಿಸಿ, ಶಾಖೆ ರಹಿತ ಬ್ಯಾಂಕಿಂಗ್ ಅನ್ನು ಹಳ್ಳಿಯ ಮನೆ ಬಾಗಿಲಿಗೆ ತಲುಪಿಸಬಹುದು. ರಾಜ್ಯದ ಲಕ್ಷಾಂತರ ಗ್ರಾಮವಾಸಿಗರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಬಹುದು. ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಮುಂತಾದ ಆರ್ಥಿಕ ನೆರವನ್ನು ಈ ಪದ್ಧತಿಯಲ್ಲಿ ವಿತರಿಸಿದರೆ ಜನತೆಗೆ, ತಮಗೆ ಅಗತ್ಯವಿರುವಷ್ಟು ಹಣವನ್ನು ತಾವಿದ್ದಲ್ಲೇ ಕ್ರಮಬದ್ಧವಾಗಿ ಪಡೆಯಲು ಸಾಧ್ಯವಾಗುತ್ತದೆ. ಮಿಕ್ಕಿದ ಹಣ ಬ್ಯಾಲೆನ್ಸ್ ನಲ್ಲೇ ಇರುತ್ತದೆ. ನಗರಗಳಲ್ಲಿ ಎಟಿಎಂ ಬಳಕೆಯಂತೆ ಹಳ್ಳಿಗಳಲ್ಲಿ ಶಾಖಾ ರಹಿತ ಬ್ಯಾಂಕಿಂಗ್ ಸಖತ್ ಐಡಿಯಾ.

No comments:

Post a Comment