Monday 5 October 2009

ವಾಟ್ ಆನ್ ಐಡಿಯಾ..ನಿಮ್ಮೂರಲ್ಲಿ ಬ್ರ್ಯಾಂಚ್ ಇಲ್ಲದಿದ್ದರೂ ಬ್ಯಾಂಕ್ ತೆರೆಯಬಹುದು

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆ ಅಷ್ಟಾಗಿ ಇರುವುದಿಲ್ಲ. ಖಾತೆಗೆ ಒಂದಷ್ಟು ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಸಾಮಾನ್ಯ. ಹಾಗಾದರೆ ಮಾಡುವುದೇನು ? ಇದಕ್ಕೆ ಉತ್ತರ ಶಾಖಾ ರಹಿತ ಬ್ಯಾಂಕಿಂಗ್.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಚಯವಾಗುತ್ತಿರುವ ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯ ವೈಶಿಷ್ಟ್ಯವಿದು. ಕಾರ್ಪೊರೇಷನ್ ಬ್ಯಾಂಕ್ ೨೦೦೬ರಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ೨೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೇವೆ ಲಭ್ಯವಿದೆ.
ಇದು ಹೇಗೆ ಸಾಧ್ಯ ? ಶಾಖಾ ರಹಿತ ಬ್ಯಾಂಕಿಂಗ್‌ನಲ್ಲಿ ಹೆಸರೇ ಹೇಳುವಂತೆ ಬ್ಯಾಂಕಿನ ಶಾಖೆ ಇರುವುದಿಲ್ಲ. ಬದಲಿಗೆ ಬ್ಯಾಂಕ್ ಒಬ್ಬ ಪ್ರತಿನಿಯನ್ನು ನೇಮಕ ಮಾಡುತ್ತದೆ. ಆತ ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್ ಹಾಗೂ ಧ್ವನಿಯಾಧಾರಿತ ನಿರ್ದೇಶನವಿರುವ ಸಾಧನವನ್ನು ಉಪಯೋಗಿಸಿ ಗ್ರಾಮೀಣ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕ್ ಸೇವಾ ಸೌಲಭ್ಯ ಒದಗಿಸುತ್ತಾನೆ. ಗ್ರಾಹಕ ತನ್ನ ಬೆರಳ ಗುರುತನ್ನು ಸಾಧನದ ಮೇಲೆ ಒಟ್ಟಿದರೆ, ಧ್ವನಿಯಾಧಾರಿತ ಸಾಧನದಲ್ಲಿ ಹಣದ ವರ್ಗಾವಣೆಯ ಬಗ್ಗೆ ದೃಢೀಕರಣವಾಗುತ್ತದೆ.
ಕಾರ್ಪೊರೇಷನ್ ಬ್ಯಾಂಕ್ ನೇಮಕ ಮಾಡಿರುವ ಬಿಸಿನೆಸ್ ಪ್ರತಿನಿಗಳಲ್ಲಿ ಬಹುತೇಕ ಮಂದಿ ಮಹಿಳೆಯರೇ ಆಗಿದ್ದಾರೆ. ಶಾಖಾ ರಹಿತ ಬ್ಯಾಂಕ್ ಸ್ಥಾಪನೆಗೆ ೨೦ ಸಾವಿರ ರೂ. ಬೆಲೆಯ ಸಾಧನವನ್ನು ಬ್ಯಾಂಕ್ ನೀಡುತ್ತದೆ. ತಿಂಗಳಿಗೆ ೮೦೦ ರೂ.ಗಳಿಂದ ೧,೫೦೦ ರೂ. ವೇತನ ಕೊಡುತ್ತದೆ. ಇದು ಪಾರ್ಟ್ ಟೈಂ ಕೆಲಸವಾಗಿದ್ದು, ಪ್ರತಿನಿಗೆ ಹೆಚ್ಚುವರಿ ಆದಾಯಕ್ಕೆ ದಾರಿಯಾಗುತ್ತದೆ. ಇದರಿಂದ ಗ್ರಾಹಕರು ಕೇವಲ ಬ್ಯಾಂಕ್ ವ್ಯವಹಾರಕ್ಕೋಸ್ಕರ ಪಟ್ಟಣಕ್ಕೆ ತೆರಳಿ ಸಮಯ ಮತ್ತು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ೧೦,೨೦ರೂ. ಅಂತ ಸಣ್ಣ ಮೊತ್ತದ ಹಣವನ್ನೂ ಇದರಲ್ಲಿ ಠೇವಣಿ ಇಡಬಹುದು. ಹೀಗಾಗಿ ಹಿಂಪಡೆಯುವಿಕೆಗಿಂದ ಠೇವಣಿ ಇಡುವವರ ಸಂಖ್ಯೆಯೇ ಇಲ್ಲಿ ಹೆಚ್ಚಿರುತ್ತದೆ. ಇಲ್ಲಿ ಖಾತೆದಾರರು ಯಾವುದೇ ಆರಂಭಿಕ ಶುಲ್ಕ ಕೊಡಬೇಕಾಗಿಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಶಾಖಾ ರಹಿತ ಬ್ಯಾಂಕಿಂಗ್ ವ್ಯವಸ್ಥೆಯಿಂದ ಬ್ಯಾಂಕ್‌ಗಳಿಗೆ ಗ್ರಾಮೀಣ ಭಾಗದ ಬಡವರಿಗೆ ಹಣಕಾಸು ವ್ಯವಸ್ಥೆಯನ್ನು ಒದಗಿಸಲು ಸುಲಭವಾಗುತ್ತದೆ. ಅಲ್ಲದೆ ಪ್ರತ್ಯೇಕ ಶಾಖೆ ನಿರ್ಮಿಸಲು ಬೇಕಾಗುವ ಕಟ್ಟಡ ನಿರ್ಮಾಣ, ಸಿಬ್ಬಂದಿ ವೆಚ್ಚ ಉಳಿತಾಯವಾಗುತ್ತದೆ. ಅತಿ ಸಣ್ಣ ಮೊತ್ತದ ಹಣದ ವರ್ಗಾವಣೆಯನ್ನು ನೇರವಾಗಿ ಮಾಡಬಹುದು. ಹಣಕಾಸು ಸೇರ್ಪಡೆಯ ಹೆಚ್ಚಳಕ್ಕಾಗಿ ೨೦೦೬ರಲ್ಲಿ ಆರ್‌ಬಿಐ, ಬ್ಯಾಂಕ್‌ಗಳು ಬಿಸಿನೆಸ್ ಪ್ರತಿನಿಗಳ ಮೂಲಕ ವಹಿವಾಟು ವಿಸ್ತರಣೆಗೆ ಅನುಮತಿ ಕೊಟ್ಟಿತು.
ಶಾಖಾ ರಹಿತ ಬ್ಯಾಂಕಿಂಗ್ ಪರಿಕಲ್ಪನೆ ಬಂದಿದ್ದು ಬ್ರೆಜಿಲ್‌ನಿಂದ. ಅಲ್ಲಿ ಸಣ್ಣ ಪುಟ್ಟ ವರ್ತಕರು, ಲಾಟರಿ ಅಂಗಡಿಗಳು, ಅಂಚೆ ಕಚೇರಿಗಳು ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನೂ ಒದಗಿಸಲು ಆರಂಭಿಸಿದಾಗ ಈ ಐಡಿಯಾ ಬೆಳಕಿಗೆ ಬಂತು. ೨೦೦೫ರಲ್ಲಿ ಬ್ರೆಜಿಲ್‌ನ ೯೦ ಸಾವಿರ ಏಜೆಂಟರು ೧೦೦ ಕೋಟಿ ಡಾಲರ್‌ಗೂ ಹೆಚ್ಚು ಹಣದ ವರ್ಗಾವಣೆ ನಡೆಸಿದ್ದರು. ಕೇವಲ ಮೂರು ವರ್ಷಗಳಲ್ಲಿ ೧೨ ೧.೨ ಕೋಟಿ ಖಾತೆಗಳನ್ನು ತೆರೆಯಲಾಗಿತ್ತು.
ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಲಭ್ಯವಿರುವ ಸೇವೆ
೧. ಠೇವಣಿ ಇಡಬಹುದು
೨. ಹಣ ಹಿಂಪಡೆಯುವಿಕೆ
೩. ಬ್ಯಾಲೆನ್ಸ್ ವಿಚಾರಣೆ
೪. ಮಿನಿ ಸ್ಟೇಟ್‌ಮೆಂಟ್
೫. ಹಣದ ವರ್ಗಾವಣೆ
೬. ಆರ್.ಡಿ ಖಾತೆ
೭. ಎಸ್‌ಎಚ್‌ಜಿ ಗುಂಪುಗಳಿಗೆ ಖಾತೆ
೮. ಎನ್‌ಆರ್‌ಇಜಿ ಪೇಮೆಂಟ್
೯. ಎಸ್‌ಎಸ್‌ಪಿ ಪೇಮೆಂಟ್

1 comment: