Monday 12 October 2009

ಕೆ.ಆರ್. ನಗರದಲ್ಲಿ ಕಲ್ಲರಳಿ ಹೂವಾದ ಸರಕಾರಿ ಶಾಲೆ

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಕಾಸ ಹೊಂದುತ್ತಿರುವ ಸರಕಾರಿ ಶಾಲೆಗಳ ಬಗ್ಗೆ ಸರಣಿ ಬರೆದಿದ್ದೆ. ಈ ಸರಣಿಯಲ್ಲಿ ೧೨ ಸರಕಾರಿ ಶಾಲೆಗಳ ಬಗ್ಗೆ ಬರೆದಿದ್ದೆ. ಇಷ್ಟೂ ಶಾಲೆಗಳು ವಿಕಾಸವಾದ ಪರಿ ಕುತೂಹಲಕರ. ಅವುಗಳ ವಿವರ ನಿಮ್ಮೊಂದಿಗೆ-)

ಕಳೆದ ವಾರದ ಹಾಡುವಿನಲ್ಲಿ ಹುಣಸೂರಿನ ಕುಗ್ರಾಮವಾದ ಕೆಂಪಮ್ಮನ ಹೊಸೂರಿನಲ್ಲಿ ಶಿಕ್ಷಕ-ಶಿಕ್ಷಕಿಯರಿಬ್ಬರ ಕಠಿಣ ಪರಿಶ್ರಮದಿಂದಾಗಿ ಮಾದರಿಯಾಗಬಹುದಾದಂತಹ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರೂಪುಗೊಂಡ ಯಶೋಗಾಥೆಯನ್ನು ಓದಿದ್ದೀರಿ.
ಶಾಲೆ ಎಂಬ eನಾಲಯದ ಉತ್ಥಾನಕ್ಕೆ ಎಲ್ಲಾ ಶಿಕ್ಷಕರು ಜತೆಗೂಡಿದಾಗ ಅವರೊಂದಿಗೆ ಸಮುದಾಯದ ಬೆಂಬಲ ಸಂಗಮಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಅನ್ನುವುದು ಕೆ.ಆರ್.ನಗರದ ಅಗ್ರಹಾರದ ಸರಕಾರಿ ಶಾಲೆಯಿಂದ ಸಾಬೀತಾಗಿದೆ.
ಮೂಲತಃ ಹಾಸನದವರಾದ ಶ್ರೀಕಂಠಪ್ಪ ಈ ಸರಕಾರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸದತ್ತ ಒಲವನ್ನು ತೋರಿಸಬೇಕಾದರೆ ಸುತ್ತಲಿನ ಪರಿಸರ ಮನೀಜ್ಞವಾಗಿರಬೇಕು. ಕಲಿಕೆ, ಅಧ್ಯಯನಾದಿಗಳಿಗೆ ಹುಮ್ಮಸ್ಸು ತುಂಬಿಸುವಂತಿರಬೇಕು ಎಂಬುದನ್ನು ಶ್ರೀಮಕಂಠಪ್ಪ ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೆ ನಂಬಿದ್ದನ್ನು ಕಾರ್ಯಗತಗೊಳಿಸಿದ್ದಾರೆ ಕೂಡಾ. ಯಾವಾಗಲೂ ನಂಬಿಕೆಗಳಾಗಿ ಪ್ರವರ್ತನೆಯಾದಾಗ ಮಾತ್ರ ಬೆಲೆ ಬರುವುದು ತಾನೇ ?
ಕೆಲವು ವರ್ಷಗಳ ಹಿಂದೆ ಈ ಶಾಲೆ ಬಹುತೇಕ ಸರಕಾರಿ ಶಾಲೆಗಳಂತೆ ಅವ್ಯವಸ್ಥೆಗಳ ಬೀಡಾಗಿತ್ತು. ಕೊರತೆಗಳ ಪಟ್ಟಿ ಮೈಲುದ್ದವಾಗಿತ್ತು. ಶಾಲೆಯದ್ದೇ ಅನ್ನುವ ಪ್ರತ್ಯೇಕ ಜಾಗವೂ ದಾಖಲೆಗಳಲ್ಲಿ ಇರಲಿಲ್ಲ. ಆವರಣ ಗೋಡೆ ಇರಲಿಲ್ಲ. ಶಾಲೆಯ ಸೂರೇ ಕಿತ್ತು ಹೋಗಿತ್ತು. ಮಳೆ ಬಂದರೆ ಶಾಲೆಯೊಳಗೂ ಛತ್ರಿ ಅಗತ್ಯ ಎನ್ನುವ ಪರಿಸ್ಥಿತಿ. ಅಂಥ ದುಸ್ಥಿತಿಗೆ ಸಿಲುಕಿದ್ದ ಸರಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳ, ಕಲಿಕೆಯಲ್ಲಿ ಪ್ರಗತಿ ಹೇಗೆ ಸಾಧ್ಯವಾಯಿತು ?
ಮೂರು ವರ್ಷಗಳ ಹಿಂದೆ ಶಾಲೆಯ ಬಳಿ ಕೊಳವೆ ಬಾವಿ ಕೊರೆಸಲಾಯಿತು. ನೀರು ಉಕ್ಕಿತು. ಕೊಳವೆ ಬಾವಿಯ ನೀರನ್ನು ಶಾಲೆಗೆ ಮಾತ್ರವಲ್ಲದೆ ಸ್ಥಳೀಯರಿಗೂ ಪೂರೈಸಲಾಯಿತು. ಶಾಲೆಯತ್ತ ಸಮುದಾಯ ಸಹಾಹ ಹಸ್ತ ಚಾಚಲು ಇದು ಕಾರಣವಾಯಿತು.
ಶಾಲೆಯ ಮುಂದೆ ಇದ್ದ ಜಾಗದಲ್ಲಿ ಕ್ರಮೇಣ ಉದ್ಯಾನವನ್ನು ನಿರ್ಮಿಸಲಾಯಿತು. ಇದರಿಂದಾಗಿ ಶಾಲೆಯ ಸ್ವರೂಪವೇ ಅಗಾಧವಾಗಿ ಪರಿವರ್ತನೆಗೊಂಡಿತು. ಅರಣ್ಯ ಇಲಾಖೆಯೂ ಇಲ್ಲಿಗೆ ಬಗೆಬಗೆಯ ಗಿಡಗಳನ್ನು ವಿತರಿಸಿದೆ.
ಇಂದು ಶಾಲೆಯ ಮುಂದೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತಹ ಅಪರೂಪದ ಸುಂದರ ಉದ್ಯಾನ ತಲೆ ಎತ್ತಿಕೊಂಡಿದೆ. ಶಾಲಾ ಮಕ್ಕಳು ಉರಿ ಬಿಸಿಲಿಗೆ ನಿಂತು ಪ್ರಾರ್ಥನೆ, ಧ್ವಜವಂದನೆ ಮಾಡಬೇಕಾದ ಪ್ರಮೇಯವೇ ಇಲ್ಲ. ಈ ಶಾಲೆಯ ಸಾಧನೆಗಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ( ೨೦ ಸಾವಿರ ರೂ. ನಗದು) ತಾಲೂಕಿನ ಅತ್ಯುತ್ತಮ ಶಾಲೆ ಎಂಬಿತ್ಯಾದಿಯಾಗಿ ಬಹುಮಾನಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಶಾಲಾವರಣದಲ್ಲಿ ಔದೀಯ ಗಿಡ ಮೂಲಿಕೆಗಳನ್ನು ಬೆಳೆಸುವ ಯೋಜನೆ ಇದೆ. ಅದು ಸಿದ್ಧಗೊಳ್ಳುತ್ತಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಶ್ರೀಕಂಠಪ್ಪ. ನೀವು ಊಹಿಸಬಲ್ಲಿರಾ ಸರಕಾರಿ ಶಾಲೆಯೊಳಗೆ ಇಂತಹ ಗಿಡಮೂಲಿಕೆಗಳ ಉದ್ಯಾನವನ್ನು ? ಶಾಲಾ ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಒಂದು ಬೋರ್ಡಿದೆ. ಅದರಲ್ಲಿ ಶಾಲಾ ಮಂತ್ರಿ ಮಂಡಲದ ವಿವರಣೆ ಇದೆ. ಶಾಲೆಯ ಎಲ್ಲ ಸಚಿವರುಗಳ ವಿವರ ಇದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಪ್ರೇರೇಪಿಸಲಿ ಇಂತಹ ಉಪಕ್ರಮಗಳು ಸಹಕಾರಿ.

No comments:

Post a Comment