Wednesday 21 October 2009

ಹಳ್ಳಿ ಶಾಲೆ ಮಕ್ಕಳ ಬ್ಯಾಂಕ್ ಮತ್ತು ಉಳಿತಾಯ !



(ಮೈಸೂರಿನ ಆಂದೋಲನ ಪತ್ರಿಕೆಯಲ್ಲಿದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿ )

ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚರಿಯ ಗೂಡು.
ಎಲ್ಲ ಹಳ್ಳಿಗಳಂತೆಯೇ ಇರುವ ದೊಡ್ಡ ಕೊಪ್ಪಲಿನಲ್ಲಿ ಈ ಪುಟ್ಟ ಸರಕಾರಿ ಶಾಲೆ ಸದ್ದಿಲ್ಲದೆ ನಡೆಸುತ್ತಿರುವ ಶೈಕ್ಷಣಿಕ ಪ್ರಗತಿ ಗ್ರಾಮದ ಮಟ್ಟಿಗೆ ಒಂದು ಆಂದೋಲನದಂತೆ ಪರಿವರ್ತನೆಗೊಳ್ಳುತ್ತಿದೆ. ಖಾಸಗಿ ಶಾಲೆಗಳೂ ಈ ಶಾಲೆಯನ್ನೊಮ್ಮೆ ನೋಡಿ ಹಲವು ವಿಚಾರಗಳನ್ನು ಕಲಿಯುವಂತಿದೆ. ಶಾಲೆಯ ಬಾಹ್ಯ ಪರಿಸರ, ಶಿಕ್ಷಕರು, ಚಿಣ್ಣರು, ಅನುಷ್ಠಾನಗೊಂಡಿರುವ ತರಾವರಿ ಪ್ರಯೋಗಗಳು ವಿಶಿಷ್ಟ ಕಥನವಾಗುತ್ತವೆ.
ಮಿತ್ರ ಕೃಷ್ಣ ಅವರೊಂದಿಗೆ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೆದುರು ನಿಂತಾಗ ಕಂಡ ಪರಿಸರ ವಿಭಿನ್ನ. ಅಯಸ್ಕಾಂತದಂತೆ ಅದು ಸೆಳೆದುಕೊಂಡಿತು. ಇತರರ ದೃಷ್ಟಿಯಲ್ಲಿ ವ್ಯರ್ಥವೆನಿಸುವ, ಕೈಗೆಟುಕುವ ಸಾಧನಗಳನ್ನು ಬಳಸಿ ಸುಂದರವಾದ ಉದ್ಯಾನವನ್ನು ಅಲ್ಲಿ ನಿರ್ಮಿಸಲಾಗಿತ್ತು. ಗೇಟಿನಿಂದ ಶಾಲೆಯ ಮೆಟ್ಟಿಲಿನವರೆಗೂ ಕಮಾನು, ಅವುಗಳಿಗೆ ಹೂಬಳ್ಳಿಗಳ ಅಲಂಕಾರ ಇತ್ತು. ಅಲ್ಲೊಂದು ಪುಟ್ಟದಾದ ಕೊಳವಿತ್ತು.ಅದರಲ್ಲಿ ಅಲಂಕಾರಿಕ ಮೀನುಗಳು ಓಡಾಡುತ್ತಿತ್ತು. ಉಳಿದಂತೆ ನೂರಾರು ಬಗೆತ ಕ್ರಾಟನ್ ಗಿಡಗಳು, ಹಣ್ಣಿನ ಗಿಡಗಳು, ಭರತದ ಭೂಪಟದ ಆಕಾರದ ರಚನೆಗಳು ಕಣ್ಮನ ತಣಿಸುತ್ತಿದ್ದವು.
ಕುತೂಹಲದ ಸಂಗತಿ ಏನೆಂದರೆ ಶಾಲೆಯಲ್ಲಿ ಮಕ್ಕಳೇ ನಡೆಸುತ್ತಿರುವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಬ್ಯಾಂಕ್. ಉಳಿತಾಯದ ಮಹತ್ವವನ್ನು ಮಕ್ಕಳಿಗೆ ಹೇಗೆ ಪರಿಣಾಮಕಾರಿಯಾಗಿ ಬೋಸಬಹುದೆನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಶಾಲೆಯ ೩ರಿಂದ ೭ನೇ ತರಗತಿಯ ವರೆಗಿನ ಹಳ್ಳಿ ಮಕ್ಕಳು ತಮಗಾಗಿ ಈ ಬ್ಯಾಂಕ್ ರೂಪಿಸಿದ್ದಾರೆ. ಅದರಲ್ಲಿ ಖಾತೆದಾರನ ಹೆಸರು, ಖಾತೆ ಸಮಖ್ಯೆ, ದಿನಾಂಕ ಠೇವಣಿ ಮೊತ್ತ, ಜಮಾ, ಖರ್ಚು ಉಳಿಕೆ ಎಲ್ಲವನ್ನೂ ಬರೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ಸುಸೂತ್ರವಾಗಿ ನಡೆದಿದೆ.
ಅಪ್ಪ ಅಮ್ಮಂದಿರು ಕೊಡುವ ಪಾಕೆಟ್ ಮನಿಯಲ್ಲಿ ಉಳಿಸಿ ಹಣವನ್ನು ಮಕ್ಕಳು ಈ ಬ್ಯಾಂಕಿನಲ್ಲಿಡುತ್ತಾರೆ. ವರ್ಷಾಂತ್ಯದಲ್ಲಿ ಹಣವನ್ನು ಡ್ರಾ ಮಾಡುತ್ತಾರೆ. ಉಳಿತಾಯ, ಬ್ಯಾಂಕ್ ವಹಿವಾಟು ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕೆರಳಿಸುತ್ತದೆ ಈ ವ್ಯವಸ್ಥೆ. ಈ ವರ್ಷ ಬ್ಯಾಂಕಿನಲ್ಲಿ ೧೨೪೦ ರೂ. ಸಂಗ್ರಹವಾಗಿದೆ.
ಶಾಲೆಯ ಕೈತೋಟ ಮಾತ್ರ ಕಂಗೊಳಿಸಿದರೆ ಸಾಲದು. ದೊಡ್ಡಕೊಪ್ಪಲಿನ ಪ್ರತಿಯೊಂದು ಮನೆಯ ಮುಂದೆಯೂ ಇಂಥ ಕೈತೋಟ ಇರಬೇಕು. ಆದ್ದರಿಂದ ನಾವು ಊರ ಜನತೆಗೆ ಗಿಡಗಳನ್ನು ಹಂಚಲು ಯೋಜಿಸಿದ್ದೇವೆ ಎನ್ನುತ್ತಾರೆ ಶಿಕ್ಷಕ ನವೀನ್ ಕುಮಾರ್. ಅದು ನಿಜವಾಗಲಿ.
ಶಾಲೆಯಲ್ಲಿ ಸುಪ್ತ ಶಕ್ತಿ ಎಂಬ ಭಿತ್ತಿ ಪತ್ರಿಕೆ ಇದೆ. ಶಾಲಾ ಮಕ್ಕಳ ಬರವಣಿಗೆಗೆ ಇದು ಮಾಧ್ಯಮವಾಗಿದೆ. ಬರುವಾಗ ಗೆಳೆಯ ಕೃಷ್ಣ ಹೇಳಿದರು- ಇಂಥ ಶಾಲೆ ಮೈಸೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶೇ.೬೦ಕ್ಕೆ ಮುಟ್ಟಿದರೂ ಸಾಕು..

No comments:

Post a Comment