
ಅಂದು ಮಂಡಕಳ್ಳಿಗೆ ಕಾಲಿಟ್ಟಾಗ ಮಟ ಮಟ ಮಧ್ಯಾಹ್ನವಾಗಿತ್ತು. ಶಾಲೆಯ ಅಂಗಳ ಪ್ರವೇಶಿಸುತ್ತಿದ್ದಂತೆ ಹಾಯೆನ್ನಿಸಿತು. ನೂರಾರು ಗಿಡಮರಗಳಿಂದ ಕಂಗೊಳಿಸುತ್ತಿದ್ದ ಶಾಲೆಯ ತೋಟದಲ್ಲಿ ನಡೆದಾಗ ಆಯಾಸ ಪರಿಹಾರವಾಯಿತು. ಈ ಸರಕಾರಿ ಶಾಲೆಯ ಆವರಣ ಗೋಡೆಯನ್ನೇ ನೋಡುತ್ತ ಒಂದು ಸುತ್ತು ಹಾಕಿದರೆ ಉತ್ತಮ ಅಧ್ಯಯನವಾಗುತ್ತದೆ. ಶಾಲೆಯ ಗೇಟಿನ ಇಕ್ಕೆಲಗಳಲ್ಲಿ ಮಕ್ಕಳಿಗೆ ಸೊರೆಯುವ ಶೈಕ್ಷಣಿಕ ಸೌಲಭ್ಯಗಳ ವಿವರವನ್ನು ಬರೆಯಲಾಗಿದೆ. ಡಿಪಿಇಪಿ ಯೋಜನೆಯ ಬಗ್ಗೆ ಶಿಕ್ಷಕ ಸಮುದಾಯದಲ್ಲಿ ಗೊಂದಲ ಇದ್ದರೂ ಜನರಿಗೆ ತಿಳುವಳಿಕೆ ಮೂಡಿಸುವ ಯತ್ನವನ್ನು ಕೈಗೊಳ್ಳಲಾಗಿದೆ.
ಶಾಲೆಯ ತೋಟದಲ್ಲಿ ಬೇವು, ತೇಗ ವಿವಿಧ ಹೂಗಿಡಗಳು, ತೆಂಗು, ನೆಲ್ಲಿಯ ಮರಗಳು ಸೊಂಪಾಗಿ ಬೆಳೆದಿದೆ. ಮಕ್ಕಳು ಇವುಗಳಿಗೆ ನೀರುಣಿಸುತ್ತಾರೆ. ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಪಡೆದಿರುವ ಮಂಡಕಳ್ಳಿ ಶಾಲೆಯಲ್ಲೀಗ ಬಯಲು ರಂಗಮಂಟಪಕ್ಕೆ ಬುನಾದಿ ಹಾಕಲಾಗಿದೆ. ಶಾಲೆಗೆ ಬಂದ ನಾನಾ ಪ್ರಶಸ್ತಿಗಳ ಮೊತ್ತದಿಂದಲೇ ಮಂಟಪದ ಬುನಾದಿಯನ್ನು ಕಟ್ಟಲಾಗಿದೆ ಎನ್ನುವುದು ವಿಶೇಷ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ. ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೊಂದು ವೇದಿಕೆ ಬೇಕಲ್ಲಾ ? ಎಂಬ ಪ್ರಶ್ನೆಗೆ ಈ ಭೌತಿಕ ವೇದಿಕೆ ಉತ್ತರವಾಗುತ್ತದೆ.
ಅಂದಹಾಗೆ ವಿಕಸನದತ್ತ ಸರಕಾರಿ ಶಾಲೆಗಳು ಅಭಿಮುಖವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳು ನೆರವು ನೀಡಿವೆ. ಕೆಲ ರೋಟರಿ ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಈ ಸಂಘ ಸಂಸ್ಥೆಗಳು ತಮ್ಮ ಪ್ರಚಾರದ ಸಲುವಾಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತವೆ ವಿನಾ ನಿಜವಾದ ಸೇವೆ ಅಲ್ಲಿರುವುದಿಲ್ಲ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸರಕಾರಿ ಶಾಲೆಗಳು ವಿಕಸನದತ್ತ ಸಾಗಲಿ ಎಂಬ ಉದ್ದೇಶದಿಂದ ಇಷ್ಟಾದರೂ ಪರಿವರ್ತನೆ ಆಗುತ್ತಿದೆಯಲ್ಲವೇ, ಇದು ಸಕಾರಾತ್ಮಕ. ವೃಥಾ ನಿಂದಿಸುವುದರಿಂದ ಏನು ಪ್ರಯೋಜನ ಅಲ್ಲವೇ.
(ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ಸರಣಿ-ವಿಕಸನದತ್ತ ಸರಕಾರಿ ಶಾಲೆಗಳು. ಅದರ ೩ನೇ ಕಂತು ಇದು.)
No comments:
Post a Comment