Monday, 16 April 2012

ಕಡಲೇಕಾಯಿ ಮಾರುತ್ತಿದ್ದ ಬಾಲಕ, ಹೆಸರಾಂತ ಹೂಡಿಕೆದಾರ, ಲೇಖಕನಾದ ಕಥೆ !ಜೇಮ್ಸ್ ಬೀಲ್ಯಾಂಡ್ ರೋಜರ್ಸ್..
ಅಮೆರಿಕದ ಖ್ಯಾತ ಹೂಡಿಕೆದಾರ ಮತ್ತು ಲೇಖಕ. ಸದ್ಯಕ್ಕೆ ಅವರು ಸಿಂಗಾಪುರದಲ್ಲಿ ನೆಲಸಿದ್ದಾರೆ. ರೋಜರ್ಸ್ ಹೋಲ್ಡಿಂಗ್ಸ್ ಆಂಡ್ ಬೀಲ್ಯಾಂಡ್ ಇಂಟರೆಸ್ಟ್ ಎಂಬ ಹೂಡಿಕೆ ಕಂಪನಿಯ ಒಡೆಯರಾಗಿದ್ದಾರೆ ರೋಜರ್ಸ್. ರೋಜರ್ಸ್ ಇಂಟರ್‌ನ್ಯಶನಲ್ ಕಮಾಡಿಟೀಸ್ ಇಂಡೆಕ್ಸ್ (ಆರ್‌ಐಸಿ)ಯ ಸೃಷ್ಟಿಕರ್ತ ಕೂಡ ಇವರೇ. ಇಷ್ಟೇ ಆಗಿದ್ದಿದ್ದರೆ ಆಕರ್ಷಕ ಅನ್ನಿಸುತ್ತಿರಲಿಲ್ಲ.

ಆದರೆ ರೋಜರ್ಸ್ ಅವರ ಮುಕ್ತ ಮಾರುಕಟ್ಟೆಯ ಪ್ರಬಲ ಪ್ರತಿಪಾದನೆ, ಯುದ್ಧ ವಿರೋಧಿ ನಿಲುವು, ಅವರು ಕಷ್ಟದಿಂದ ಬೆಳೆದು ಬಂದ ಯಶಸ್ಸಿನ ಹಾದಿ ಇಷ್ಟವಾಗುತ್ತದೆ. ಶೂನ್ಯದಿಂದ ಒಂದೊಂದೇ ಇಟ್ಟಿಗೆಯನ್ನು ಜೋಡಿಸುತ್ತಾ, ಬದುಕನ್ನು ಕಟ್ಟಿಕೊಂಡ ಅವರು, ಲೇಖಕರಾಗಿಯೂ ಹಲವು ಬೆಸ್ಟ್ ಸೆಲ್ಲರ್ ಕೃತಿಗಳನ್ನು ಬರೆದಿದ್ದಾರೆ. ಅವರ ಅರ್ಥಶಾಸ್ತ್ರ ಕುರಿತ ಕೃತಿಗಳಲ್ಲಿ ಕೇವಲ ಅಂಕಿ ಅಂಶಗಳ ಒಣ ಚರ್ಚೆ ಇರುವುದಿಲ್ಲ. ತಮ್ಮದೇ ಆದ ಜೀವನ ಸಿದ್ಧಾಂತವನ್ನು ಸರಳವಾಗಿ ಬೆರೆಸುತ್ತಾರೆ ರೋಜರ್ಸ್. ಜತೆಗೆ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿರ್ಭೀತರಾಗಿ ಎತ್ತಿ ತೋರಿಸುತ್ತಾರೆ.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ೧೯೪೨ರಲ್ಲಿ ಜನಿಸಿದ ರೋಜರ್ಸ್, ಐದು ವರ್ಷದ ಬಾಲಕನಾಗಿದ್ದಾಗಲೇ ಬಿಸಿನೆಸ್ ಆರಂಭಿಸಿದ್ದ. ಬಾಲಕ ಎಳೆಯ ಕೈಗಳಲ್ಲಿ ಕಡಲೇ ಕಾಯಿ ಮಾರುತ್ತಿದ್ದ. ಬೇಸ್‌ಬಾಲ್ ಪಂದ್ಯ ನಡೆಯುತ್ತಿದ್ದ ಸ್ಥಳಗಳಲ್ಲಿ ಅಭಿಮಾನಿಗಳು ಬಿಸಾಡುತ್ತಿದ್ದ ಖಾಲಿ ಬಾಟಲುಗಳನ್ನು ಸಂಗ್ರಹಿಸಿ ಮಾರಿ ಸ್ವಲ್ಪ ಕಾಸು ಸಂಪಾದಿಸುತ್ತಿದ್ದ..ಅಂತಹ ಬಾಲಕ ಹೇಗೆ ಬೆಳೆದು ಬಿಟ್ಟ ನೋಡಿ..!


ಜೇಮ್ಸ್ ರೋಜರ್ಸ್ ಅಮೆರಿಕದ ವಾಲ್‌ಸ್ಟ್ರೀಟ್‌ನ ಡೊಮ್ನಿಕ್ ಆಂಡ್ ಡೊಮ್ನಿಕ್ ಹೂಡಿಕೆ ಕಂಪನಿಯಲ್ಲಿ ಮೊದಲ ಕೆಲಸ ಗಳಿಸುತ್ತಾರೆ. ಯಾಲೆ ವಿಶ್ವ ವಿದ್ಯಾಲಯದಲ್ಲಿ ಇತಿಹಾಸದ ಪದವಿ ಪೂರೈಸುತ್ತಾರೆ. ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರದಲ್ಲಿ ಆಕ್ಸ್‌ಫರ್ಡ್ ವಿವಿಯಿಂದ ಮತ್ತೊಂದು ಪದವಿ ಗಳಿಸುತ್ತಾರೆ. 1973ರಲ್ಲಿ ಕ್ವಾಂಟಮ್ ಫಂಡ್ ಎಂಬ ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

1980ರಲ್ಲಿ " ನಿವೃತ್ತಿ’ಯಾಗಲು ಬಯಸುವ ರೋಜರ್ಸ್, ನಂತರ ವಿಶ್ವಾದ್ಯಂತ ಬೈಕೊಂದರಲ್ಲಿ ಪರ್ಯಟನೆ ಮಾಡುತ್ತಾರೆ. ಅಂದಿನಿಂದ ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. 1990-92ರಲ್ಲಿ ಆರು ಖಂಡಗಳಲ್ಲಿ 1 ಲಕ್ಷ ಮೈಲುಗಳ ಉದ್ದಕ್ಕೂ ಬೈಕಿನಲ್ಲಿ ಸಂಚರಿಸುತ್ತಾರೆ. ಇದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ. 1998ರಲ್ಲಿ ರೋಜರ್ಸ್ ಇಂಟರ್‌ನ್ಯಾಶನಲ್ ಕಮಾಡಿಟಿ ಇಂಡೆಕ್ಸ್ ಅನ್ನು ಸ್ಥಾಪಿಸುತ್ತಾರೆ. 1999ಮತ್ತು 2002ರ ಅವಧಿಯಲ್ಲಿ 116 ರಾಷ್ಟ್ರಗಳಲ್ಲಿ ಪತ್ನಿಯೊಡನೆ ಲೋಕ ಸಂಚಾರ ನಡೆಸಿದರು. 245,000 ಕಿ.ಮೀಗಳ ಈ ಮಹಾ ಯಾನವೂ ಗಿನ್ನೆಸ್ ದಾಖಲೆ ಬರೆಯಿತು.

ಚೀನಾದ ಬೆಳವಣಿಗೆಗಳನ್ನು 1807ರಲ್ಲಿ ಬ್ರಿಟನ್‌ನಲ್ಲಿ ಇದ್ದ ಪರಿಸ್ಥಿತಿಗೆ ಅವರು ಹೋಲಿಸುತ್ತಾರೆ. ವಿಶ್ವ ಶಕ್ತಿಯಾಗಿ ಬ್ರಿಟನ್ ಹೊರಹೊಮ್ಮುವ ಮೊದಲು ಅಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗಿತ್ತು. 1907ರಲ್ಲಿ ಅಮೆರಿಕದಲ್ಲೂ ಹಾಗೆ ಆಗಿತ್ತು. ಆಗ ಅಕ್ಷರಶಃ ಅಮೆರಿಕ ದಿವಾಳಿಯಾಗಿತ್ತು. ಆದರೂ 20ನೇ ಶತಮಾನದಲ್ಲಿ ಅಭೂತಪೂರ್ವ ಯಶಸ್ಸನ್ನು ಸಂಪಾದಿಸಿತು. 20ನೇ ಶತಮಾನದಲ್ಲಿ ಚೀನಾದಲ್ಲಿ ವಿಪತ್ತುಗಳಾಗಿರಬಹುದು. 21ನೇ ಶತಮಾನದಲ್ಲಿ ಆ ದೇಶದ ಬೆಳವಣಿಗೆ ವಿಶ್ವದ ಇತರ ಭಾಗಗಳನ್ನು ಮೀರಿಸಲಿದೆ. ಹತ್ತೊಂಭತ್ತನೇ ಶತಮಾನದಲ್ಲಿ ಅಮೆರಿಕ 15 ಸಲ ಹಿಂಜರಿತಕ್ಕೀಡಾಗಿತ್ತು. ನಾಗರಿಕ ದಂಗೆಯನ್ನು ಎದುರಿಸಿತ್ತು. ನಂತರ ವಿಶ್ವ ಶಕ್ತಿಯಾಯಿತು. ಚೀನಾದಲ್ಲಿಯೂ ಮೂವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಭೀಕರವಾಗಿತ್ತು. ಈಗ ಅದನ್ನು ನೋಡಿದರೆ ಮೊಂದೊಂದು ದಿನ ವಿಶ್ವದಲ್ಲಿ ಮುಂಚೂಣಿಗೆ ಬರಲಿದೆ ಎನ್ನಿಸುತ್ತದೆ ಎನ್ನುತ್ತಾರೆ ರೋಜರ್ಸ್.

ಅಮೆರಿಕ ಇರಾಕ್ ವಿರುದ್ಧ ಸಮರ ಸಾರಿದ್ದನ್ನು ರೋಜರ್ಸ್ ಕಟುವಾಗಿ ಟೀಕಿಸಿದ್ದರು. " ನಾವು ಇರಾಕ್ ವಿರುದ್ಧ ಯುದ್ಧ ನಡೆಸಿದರೆ, ಗೆದ್ದರೂ, ಸೋತರೂ ನಮಗೇ ನಷ್ಟ. ಇದರಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟಾಗಲಿದೆ. ಅಮೆರಿಕ ವಿರೋಧಿ ಮೂಲಭೂತವಾದಿ ವಲಯಗಳಲ್ಲಿ ಶತ್ರುತ್ವ ಹೆಚ್ಚಾಗಲಿದೆ. ’ ಎಂದು ಎಚ್ಚರಿಸಿದ್ದರು.

ಅಮೆರಿಕ ಇರಾಕ್ ವಿರುದ್ಧ ಯುದ್ಧ ಘೋಷಿಸಿದಾಗಲೇ, ರೋಜರ್ಸ್ ಇನ್ನು ಅಮೆರಿಕದ ಆರ್ಥಿಕತೆ ಪತನವಾಗುವುದು ಖಚಿತ ಎಂದು ನಂಬಿದ್ದರು. ಅದನ್ನು ನಿರ್ಭಿಡೆಯಿಂದ ಹೇಳಿದ್ದರು ಕೂಡಾ. 2007ರ ಡಿಸೆಂಬರ್‌ನಲ್ಲಿ ನ್ಯೂಯಾರ್ಕ್‌ಗೆ ವಿದಾಯ ಹೇಳಿದ ರೋಜರ್ಸ್, ಸುಮಾರು 16 ದಶಲಕ್ಷ ಡಾಲರ್ ಸಂಪತ್ತಿನೊಡನೆ ಸಿಂಗಾಪುರಕ್ಕೆ ಬಂದು ನೆಲಸಿದರು. ಮುಂದಿನ ಭವಿಷ್ಯ ಏನಿದ್ದರೂ ಏಷ್ಯಾದ ಮಾರುಕಟ್ಟೆಗಳಲ್ಲಿಯೇ ಎಂಬುದು ಅವರ ಖಚಿತ ವಿಶ್ವಾಸ. ಅವರು ಆವತ್ತು ಹೇಳಿದ್ದು ಈವತ್ತು ನಿಜವಾಗಿದೆ. ಅಮೆರಿಕದ ಅರ್ಥ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ. ಏಷ್ಯಾ ವೇಗವಾಗಿ ಬೆಳೆಯುತ್ತಿದೆ.

ರೋಜರ್ಸ್ ಹೇಳುತ್ತಾರೆ- 1807ರಲ್ಲಿ ಆಗಿದ್ದರೆ ಲಂಡನ್‌ಗೆ ತೆರಳುವುದು ಜಾಣ ನಡೆಯಾಗಿರುತ್ತಿತ್ತು. 1907ರಲ್ಲಾಗಿದ್ದರೆ ನ್ಯೂಯಾರ್ಕ್ ನಗರಕ್ಕೆ ಮತ್ತು 2007ರಲ್ಲಿ ಏಷ್ಯಾಗೆ ತೆರಳುವುದು ಜಾಣ ನಡೆ. ’ ಏಷ್ಯಾದ ಜನ ಅತ್ಯಂತ ಸ್ಪೂರ್ತಿಯಿಂದ ಮುನ್ನಡೆಯುತ್ತಿದ್ದಾರೆ. ಬೆಳವಣಿಗೆಗೆ ಇಂತಹ ಪರಿಸರದ ಅಗತ್ಯ ಇದೆ. ಹೀಗಾಗಿ ನಾನು ಅಮೆರಿಕವನ್ನು ತೊರೆದೆ ಎನ್ನುತ್ತಾರೆ ರೋಜರ್ಸ್. ಇನ್ನು ರೋಜರ್ಸ್ ಅವರ ಆರ್ಥಿಕ ವಿಚಾರ ಧಾರೆಗಳನ್ನು ನೋಡೋಣ.

- ಯಾವುದೇ ಆಸ್ತಿ ನಿರಂತರ ಹನ್ನೊಂದು ವರ್ಷ ಏರುಗತಿಯಲ್ಲಿ ಇರುವುದು ಚರಿತ್ರೆಯಲ್ಲಿ ಅಪರೂಪ. ಏರಿಳಿತದ ತಿದ್ದುಪಡಿ ಆಗೇ ಆಗುತ್ತದೆ. ಚಿನ್ನ ಕೂಡ ಇದರಿಂದ ಹೊರತಾಗಿಲ್ಲ.

- ಕೃಷಿ ವಿಶ್ವದ ಆರ್ಥಿಕತೆಯಲ್ಲಿ ಮತ್ತೊಮ್ಮೆ ಮಹತ್ತರವಾದ ಪಾತ್ರ ವಹಿಸುತ್ತಿದೆ. ಈಗ ಅಧಿಕ ಬೆಲೆ, ತಂತ್ರಜ್ಞಾನದ ವಿಸ್ತರಣೆಯನ್ನು ಕಾಣುತ್ತಿದೇವೆ. ಕೃಷಿ ಭೂಮಿಯನ್ನು ಖರೀದಿಸಲು ಇನ್ನೂ ಕಡಿಮೆ ಜನ ಮುಂದಾಗುತ್ತಿದ್ದರೂ, ಭರಾಟೆ ಕಂಡು ಬರುವ ದಿನಗಳು ಬಂದೇ ಬರುತ್ತದೆ.

- ಮುಂಬರುವ ದಿನಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಆದಾಯವನ್ನು ಕೃಷಿ ತಂದುಕೊಡಲಿದೆ. ಕೃಷಿಕರಾಗುವುದೇ ಉತ್ತಮ ಎಂದು ಆಗ ಗೊತ್ತಾಗಲಿದೆ.
- ನನಗೆ ಚೀನಾದಲ್ಲಿ ಯಾವುದೇ ನೆಲ ಇಲ್ಲ. ತೋಟ ಇಲ್ಲ. ಆದರೆ ಅಲ್ಲಿ ಕೃಷಿಗೆ ಸಾಕಷ್ಟು ಅವಕಶಗಳು ಇವೆ. ಚೀನಾ ಸರಕಾರ ಕೃಷಿಯ ಅಭಿವೃದ್ಧಿಗೆ ಬೇಕಾದ ಪ್ರತಿಯೊಂದನ್ನೂ ಮಾಡುತ್ತಿದೆ.

( ಮುಂದುವರಿಯುವುದು)

2 comments: