
ದೀಪೇಶ್ ಅಗರವಾಲ್ (೩೦) ಮೊಟೊರೊಲಾ ಇಂಡಿಯಾದಲ್ಲಿ ಎಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದರು. ಆದರೆ ಹೊಸತೊಂದು ಐಡಿಯಾ ಹೊಳೆದ ನಂತರ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಕಾರನ್ನು ಹಂಚಿಕೊಳ್ಳಿ, ಉಳಿತಾಯ ಮಾಡಿರಿ ಎನ್ನುವುದೇ ಅಗರವಾಲ್ ಸೂತ್ರವಾಗಿತ್ತು.
ಬಾಡಿಗೆಯ ಕಾರುಗಳು ದುಬಾರಿ. ಆಟೊ ರಿಕ್ಷಾಗಳು ಸುಲಿಯುತ್ತವೆ. ಬಸ್ಸುಗಳು ಕಿಕ್ಕಿರಿದು ಕಿರಿಕಿರಿ ಎನಿಸುತ್ತವೆ. ಸ್ವಂತ ಕಾರಿನಲ್ಲಿ ಹೋಗುವುದಿದ್ದರೂ ಟ್ರಾಫಿಕ್ ಇದ್ದರೆ ಏನು ಮಾಡಬಹುದು ? ಎಷ್ಟೋ ಕಡೆ ಪಾರ್ಕಿಂಗ್ ಸಮಸ್ಯೆ ಬೇರೆ ಕಾಡುತ್ತದೆ. ಹಾಗಾದರೆ ಇನ್ನೋವಾದಂತ ಹವಾನಿಯಂತ್ರಿತ ಕಾರಿನಲ್ಲಿ, ಆಟೊ ರಿಕ್ಷಾದ ದರದಲ್ಲಿ ಹೋಗಲು ಸಾಧ್ಯವಾದರೆ ? ಇದು ಸಾಧ್ಯ ಎನ್ನುತ್ತಾರೆ ಅಗರವಾಲ್.
ಭಾರತದ ನಗರಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗುತ್ತಿದೆ. ಜತೆಗೆ ಪರಿಸರ ಮಾಲಿನ್ಯ, ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಕ್ಯಾಬ್ ಅನ್ನು ಹಂಚಿಕೊಂಡರೆ ಲಾಭದಾಯಕವಾಗಬಹುದಲ್ಲವೇ ಎಂದು ಅಗರವಾಲ್ ಕಳೆದ ವರ್ಷ ಸ್ನೇಹಿತ ಅಮಿತ್ ಗುಪ್ತಾ ಜತೆ ಚರ್ಚಿಸಿದರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ರೈಡ್‌ಇನ್‌ಸಿಂಕ್ ಕಂಪನಿ. ಕಳೆದ ಏಪ್ರಿಲ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ (ಐಬಿಎಸ್ ) ವಿದ್ಯಾರ್ಥಿಗಳಿಗೆ ಸೇವೆ ಒದಗಿಸಿದರು. ೧೨೦ ವಿದ್ಯಾರ್ಥಿಗಳು ೬೦ ಕ್ಯಾಬ್‌ಗಳನ್ನು ಹಂಚಿಕೊಂಡರು. ಪರಿಣಾಮ ? ಒಂದೇ ದಿನ ೩೬ ಸಾವಿರ ರೂ. ಹಾಗೂ ೨೦೦ ಲೀಟರ್ ಪೆಟ್ರೋಲ್ ಉಳಿತಾಯವಾಯಿತು. ಈ ಪ್ರಯೋಗ ಯಶಸ್ವಿಯಾಗಿದ್ದೇ ತಡ, ಅಗರವಾಲ್ ಪೂರ್ಣ ಪ್ರಮಾಣದಲ್ಲಿ ಉದ್ಯಮಿಯಾಗಲು ನಿರ್ಧರಿಸಿದರು.
ಟ್ಯಾಕ್ಸಿ ಚಾಲಕರ ಜತೆ ಒಪ್ಪಂದ ಮಾಡಿಕೊಂಡಿರುವ ರೈಡ್‌ಇನ್‌ಸಿಂಕ್‌ಗೆ ಹೈದರಾಬಾದ್‌ನಲ್ಲಿ ೧೭೩ ಮಂದಿ ನೋಂದಾಯಿತ ಬಳಕೆದಾರರಿದ್ದಾರೆ. ವಿಮಾನ ನಿಲ್ದಾಣ ಮತ್ತು ನಗರದ ನಡುವೆ ಸಂಚಾರಕ್ಕೆ ಕಂಪನಿಯ ಸೇವೆ ಬಳಸುತ್ತಿದ್ದಾರೆ. ಕಂಪನಿಯ ಸೇವೆಯನ್ನು ಬೆಂಗಳೂರು, ದಿಲ್ಲಿ,ಮುಂಬಯಿ, ಪುಣೆಗೆ ವಿಸ್ತರಿಸುವ ಯೋಚನೆ ಅವರಿಗಿದೆ.
ಒಂದು ಕಾರಿನಲ್ಲಿ ಇಬ್ಬರು ಹಂಚಿಕೊಂಡು ಹೋದಾಗ ವೆಚ್ಚ ಅರ್ಧಕ್ಕಿಳಿಯುತ್ತದೆ. ಆದರೆ ತನ್ನದೇ ಮಾರ್ಗದಲ್ಲಿ, ಅದೇ ಸಮಯದಲ್ಲಿ ಹೋಗುವ ಮತ್ತೊಬ್ಬ ಸಹ ಯಾತ್ರಿಕನನ್ನು ಪತ್ತೆ ಹಚ್ಚಬೇಕು. ಕಾರಿನ ವ್ಯವಸ್ಥೆ ಹಾಗೂ ಇಬ್ಬರಿಗೂ ಮಾಹಿತಿ ಒದಗಿಸುವ ಅನುಕೂಲ ಇರಬೇಕು. ಅಂತಹ ವ್ಯವಸ್ಥೆಯನ್ನು ರೈಡ್‌ಇನ್‌ಸಿಂಕ್ ಒದಗಿಸುತ್ತದೆ.
ಇದು ಹೇಗೆ ? ಕಂಪನಿ ಮೊಬೈಲ್/ ವೆಬ್ ಆಧಾರಿತ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಸಹ ಪ್ರಯಾಣಿಕರನ್ನು ಗುರುತಿಸಿ, ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಿ ಪ್ರಯಾಣ ವೆಚ್ಚವನ್ನು ಅರ್ಧಕ್ಕಿಳಿಸುತ್ತದೆ. ಒಂದು ವೇಳೆ ಗ್ರಾಹಕನಿಗೆ ಸಹ ಪ್ರಯಾಣಿಕ ಸಿಗದೇ ಇದ್ದಲ್ಲಿ ಡಿಸ್ಕೌಂಟ್ ದರದಲ್ಲಿ ಪ್ರತ್ಯೇಕ ಕ್ಯಾಬ್ (ಟೊಯೊಟಾ ಇನ್ನೋವಾ ) ಅನ್ನು ಕಂಪನಿ ನೀಡುತ್ತದೆ. ಇದರಿಂದ ಬಳಕೆದಾರನಿಗೆ ಪ್ರಯಾಣದ ವೆಚ್ಚ ಶೇ.೫೦ಕ್ಕೆ ಇಳಿಯುತ್ತದೆ. ಉದಾಹರಣೆಗೆ ಏರ್‌ಪೋರ್ಟ್-ಹೈದರಾಬಾದ್/ಸಿಕೆಂದರಾಬಾದ್ ಮಧ್ಯೆ ಕ್ಯಾಬ್ ಹಂಚಿಕೆಯಲ್ಲಿ- ೨೫೦ ರೂ. ಸಾಕು. ಆದರೆ ಪ್ರತ್ಯೇಕ ಕ್ಯಾಬ್‌ನಲ್ಲಿ- ೩೯೦ ರೂ. ಮತ್ತು ೩೯ ಕಿ.ಮೀ ನಂತರ ಪ್ರತಿ.ಕಿ.ಮೀಗೆ ರೂ. ೧೦. ನೀಡಬೇಕಾಗುತ್ತದೆ. ಇಬ್ಬರು ವ್ಯಕ್ತಿಗಳು ಮಾತ್ರ ಕ್ಯಾಬ್ ಹಂಚಿಕೊಳ್ಳುವುದರಿಂದ ಆರಾಮದಾಯಕ. ಟ್ರಾಫಿಕ್ ಹಾಗೂ ಪರಿಸರ ಮಾಲಿನ್ಯ ಶಮನ ನಿಟ್ಟಿನಲ್ಲಿ ಕೊಡುಗೆ ಸಲ್ಲಿಸಿದಂತಾಗುತ್ತದೆ. ಬೆಂಗಳೂರಿನಲ್ಲೇಕೆ ಇಂಥ ಪದ್ಧತಿ ಜಾರಿಯಾಗಕೂಡದು ? ಹಾಗೆ ನೋಡಿದರೆ ಎಲ್ಲ ಕಡೆಗಳಲ್ಲೂ ಸಾರಿಗೆಯಲ್ಲಿ ಇಂಥ ಪ್ರಯೋಗ ಸಾಧ್ಯವಿದೆಯಲ್ಲವೇ.
No comments:
Post a Comment