Monday 21 September 2009

ಹೊರಗುತ್ತಿಗೆ ನಿಲ್ಲದಿದ್ದರೂ ಸುಮ್ಮನಿರಲಾಗುವುದಿಲ್ಲ ಬೆಂಗಳೂರಿಗೆ..

ನಮ್ಮದು ಸಿಕ್ಕಾಪಟ್ಟೇ ನಿಧಾನವಾಯ್ತು...
ಇವತ್ತು ಬೆಂಗಳೂರಿನಲ್ಲಿರುವ ಜನಸಂಖ್ಯೆ ಅಂದಾಜು ಅರುವತ್ತು ಲಕ್ಷ ಎಂದುಕೊಂಡರೂ ಕಮ್ಮಿಯೇನಲ್ಲ. ನಾರ್ವೆ, ಫಿನ್ಲೆಂಡ್, ಜಾರ್ಜಿಯಾ ಉರುಗ್ವೆ ಮುಂತಾದ ದೇಶಗಳಲ್ಲಿಯೇ ಇಷ್ಟೊಂದು ಜನರಿಲ್ಲ. ಆದರೂ ಮೆಟ್ರೊ ರೈಲಿನಂತಹ ತೀರಾ ಮೂಲಭೂತ ಅಗತ್ಯ ಸೌಕರ್ಯವನ್ನು ಈ ಮಹಾ ನಗರಕ್ಕೆ ಒದಗಿಸಲು ಹೆಣಗಾಡುತ್ತಿದ್ದೇವೆ. ಬೆಂಗಳೂರು ಮೆಟ್ರೊ ರೈಲಿನಿಂದ ಲಾಲ್‌ಬಾಗ್‌ನ ಹಸಿರು ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಹಲವು ಕಡೆಗಳಲ್ಲಿ ನೂರಾರು ಮರಗಳು ಧರೆಗುರುಳಲಿವೆ. ಆದ್ದರಿಂದ ತಕ್ಷಣ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಸ್ವಯಂಘೋಷಿತ ಪರಿಸರವಾದಿಗಳು ಈಗತಾನೇ ಬೊಬ್ಬೆ ಹಾಕುತ್ತ ಪ್ರತಿಭಟನೆಗೆ ಶುರು ಹಚ್ಚಿದ್ದಾರೆ. ಮತ್ತೊಂದು ಕಡೆ ದೈತ್ಯಾಕಾರದ ರಚನೆಗಳು ಈಗಾಗಲೇ ಸಾಕಷ್ಟು ಕಡೆಗಳಲ್ಲಿ ನಿರ್ಮಾಣವಾಗಿವೆ. ಮುಂದೆ ಏನೇನು ಬೇಕಾಬಿಟ್ಟಿ ವಿಘ್ನಗಳು ಎದುರಾಗುತ್ತವೆಯೋ.
ಹೀಗಾದರೆ ನಾವು ಮುಂದುವರಿಯುವುದು ಯಾವಾಗ ದೊರೆ...?
ಬೇಕಾದರೆ ಇತಿಹಾಸದ ಪುಟಗಳನ್ನು ತೆರೆದು ನೋಡಿ. ಬ್ರಿಟನ್‌ನಲ್ಲಿ ನೂರಾ ನಲ್ವತ್ತಾರು ವರ್ಷಗಳ ಹಿಂದೆಯೇ ಸುರಂಗ ಮಾರ್ಗದಲ್ಲಿ ರೈಲನ್ನು ಓಡಿಸಲಾಗಿತ್ತು. ಜಗತ್ತಿನಲ್ಲಿ ಮೊದಲ ಬಾರಿಗೆ ಭೂಗತ ರೈಲು ಮಾರ್ಗವನ್ನು ನಿರ್ಮಿಸಿದ ಕೀರ್ತಿ ಬ್ರಿಟನ್‌ಗೆ ಸೇರುತ್ತದೆ. ೧೮೭೦ರಲ್ಲಿಯೇ ಥೇಮ್ಸ್ ನದಿಯ ಅಡಿಯಲ್ಲಿ ರೈಲನ್ನು ಓಡಿಸಿದ್ದರು ! ನಮ್ಮಲ್ಲಿ ಕೋಲ್ಕತ್ತಾದ ಹೂಗ್ಲಿ ನದಿಯ ಅಡಿಯಲ್ಲಿ ರೈಲನ್ನು ಓಡಿಸಲು ಈಗತಾನೆ ನೀಲನಕ್ಷೆ ತಯಾರಿಸಲಾಗಿದೆ. ಜನಸಂಖ್ಯೆಯ ಅಭಿವೃದ್ಧಿ ಮಾತ್ರ ಬಿಟ್ಟರೆ ಉಳಿದ ಅಭಿವೃದ್ಧಿಯ ವಿಚಾರದಲ್ಲಿ ಎಷ್ಟು ಶತಮಾನಗಳಷ್ಟು ಹಿಂದೆ ಉಳಿದಿದ್ದೇವೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಹೇಳಿ.
ರೈಲು ಮಾರ್ಗಕ್ಕೆ ಉದ್ಯಾನ ಅಡ್ಡ ಬರುತ್ತಿದ್ದರೆ, ವನ್ಯ ಸಂಪತ್ತು ನಾಶವಾಗುವ ಭೀತಿ ಇದ್ದರೆ, ಉದ್ಯಾನದ ಕೆಳಗಿನಿಂದಲೇ ಭೂಗತ ರೈಲನ್ನು ಅವರು ಓಡಿಸುತ್ತಾರೆ. ಹಾಗಂತ ಇಡೀ ಮಾರ್ಗವನ್ನು ಸುರಂಗದ ಮೂಲಕ ನಿರ್ಮಿಸಿಯೂ ಇಲ್ಲ. ಎಲ್ಲಿ ಅಗತ್ಯ ಇದೆಯೋ, ಅಲ್ಲಿ ಸುರಂಗಗಳನ್ನು ಕೊರೆದು ಅತ್ಯಂತ ವೇಗದ ರೈಲು ಮಾರ್ಗಗಳನ್ನು ಸ್ಥಾಪಿಸಿದ್ದಾರೆ. ಹೀಗಿರುವಾಗ ಒಂದು ದೇಶಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ತುಂಬಿಕೊಂಡು ಒದ್ದಾಡುತ್ತಿರುವ ಬೆಂಗಳೂರಿನಲ್ಲಿ ಸಂಚಾರಕ್ಕೆ ಬೇಕಾದ ವ್ಯವಸ್ಥೆಗಳನ್ನು ಅಳವಡಿಸದಿದ್ದರೆ ಮುಂದೇನಾದೀತು ಎಂದು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತದೆ.
ಅಲ್ಲಾ, ಹಾಗಾದರೆ ಸರಕಾರವನ್ನು ಜೋರಾಗಿ ಎಚ್ಚರಿಸಲು ಈ ಪರಿಸರವಾದಿಗಳಿಗೆ ಈಗ ನೆನಪಾಯಿತೇ ? ಇಡೀ ಮೆಟ್ರೊವನ್ನು ಸುರಂಗ ಮಾರ್ಗದಲ್ಲಿ ನಿರ್ಮಿಸಬೇಕೆಂದಿಲ್ಲ, ಕನಿಷ್ಠ ನಗರದ ಶ್ವಾಸಕೋಶದಂತಿರುವ ಪ್ರಮುಖ ಉದ್ಯಾನಗಳ ಅಡಿಯಲ್ಲಾದರೂ ಸುರಂಗವನ್ನೇಕೆ ನಿರ್ಮಿಸಬಾರದು ? ಪರಿಸರಕ್ಕೂ ಹೇಳಿಕೊಳ್ಳುವಷ್ಟು ಹಾನಿಯಾಗದಂತೆ, ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆಯಾಗದಂತೆ ಸಂಯೋಜಿಸುವ ಜಾಣ್ಮೆಯನ್ನು ಮೆಟ್ರೋದವರಾಗಲಿ, ತಜ್ಞರಾಗಲೀ ಯಾಕೆ ಪ್ರದರ್ಶಿಸಿಲ್ಲ ?
ಮೆಟ್ರೊ ರೈಲಿನ ಕಥೆ ಇಲ್ಲಿ ಸಾಂಕೇತಿಕವಷ್ಟೇ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಹೊರಗುತ್ತಿಗೆ ವಿರುದ್ಧ ಅದೊಂದು ಹೇಳಿಕೆ ಕೊಟ್ಟರು ನೋಡಿ..ಬೆಂಗಳೂರಿನ ಬಿಪಿಒ ವಲಯ ಒಳಗೊಳಗೆ ತತ್ತರಗುಟ್ಟಿತು. ನಿಜ. ಇಂತಹದೊಂದು ಆತಂಕಕ್ಕೆ ನೈಜ ಕಾರಣವಿದೆ. ಎಷ್ಟಾದರೂ ಒಬಾಮಾ ಅಪ್ಪಟ ರಾಜಕಾರಣಿಯಾದ್ದರಿಂದ ಒಂದಕ್ಕೆ ನೂರು ಸೇರಿಸಿ ಬಿಟ್ಟಿದ್ದಾನೆಂದು ಹೇಳಿಕೊಂಡು ಹಗಲಿರುಳು ನಿರಾಳವಾಗಿದ್ದುಬಿಡುವ ಪರಿಸ್ಥಿತಿ ಈಗಿಲ್ಲ. ಅಮೆರಿಕದಲ್ಲಿ ಕಳೆದ ಏಪ್ರಿಲ್ ವೇಳೆಗೆ ನಿರುದ್ಯೋಗದ ದರ ಶೇ. ೮.೯ನಲ್ಲಿದೆ. ಏಪ್ರಿಲ್‌ನಲ್ಲಿ ೫.೩ ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ೨೦೦೭ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ೫೭ ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ.
ಹೀಗಾಗಿ ಒಬಾಮಾ ಬೇರೆ ಕೆಲಸ ಇಲ್ಲಾಂತ ಹಾಗೆ ಹೇಳಲಿಲ್ಲ. ಹಾಗಂತ ಆತ ಭಾರತದಂತಹ ರಾಷ್ಟ್ರಕ್ಕೆ ಹೊರಗುತ್ತಿಗೆ ನೀಡುವ ಕಂಪನಿಗಳ ಮೇಲೆ ತೆರಿಗೆ ವಿನಾಯಿತಿಯನ್ನು ನೀಡದಿದ್ದರೂ, ಹೊರಗುತ್ತಿಗೆಯೇ ನಿಲ್ಲುವಷ್ಟು ಪರಿಸ್ಥಿತಿ ವಿಷಮವಾಗುವುದಿಲ್ಲ. ಅದನ್ನು ಸರಳವಾಗಿ ವಿವರಿಸಬಹುದು.
ಅಮೆರಿಕದ ಕಂಪನಿಗಳಿಗೆ ಭಾರತಕ್ಕೆ ಹೊರಗುತ್ತಿಗೆ ನೀಡಿದರೆ ಅಗ್ಗದ ದರದಲ್ಲಿ ತಮ್ಮ ಕೆಲಸ ಅಥವಾ ಸೇವೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅಮೆರಿಕದಲ್ಲಿ ೩೦೦ ರೂ. ಖರ್ಚಾಗುವ ಕೆಲಸಕ್ಕೆ ಭಾರತದಲ್ಲಿ ೧೦೦ ರೂ. ಕೊಟ್ಟರೆ ಸಾಕು. ಈ ನೂರು ರೂ.ಗಳನ್ನು ಕಂಪನಿಯ ಖರ್ಚುಗಳ ಬಾಬ್ತಿಗೆ ಸೇರಿಸಬಹುದು. ಈ ನೂರು ರೂ.ಗಳ ಮೇಲೆ ಯಾವುದೇ ತೆರಿಗೆ ರಿಯಾಯಿತಿ ನೀಡುವುದಿಲ್ಲ ಎಂದು ಒಬಾಮಾ ಹೇಳುತ್ತಾನೆ. ಭಾರತದ ಹೊರಗುತ್ತಿಗೆ ಯಾಕೆ ಬಚಾವ್ ಆಗಿದೆ ಎಂದರೆ, ಒಬಾಮಾ ಈ ನೂರು ರೂ.ಗಳ ಮೇಲೆ ೫೦ ರೂ. ತೆರಿಗೆ ವಿಸಿದರೂ ಅಮೆರಿಕದ ಕಂಪನಿಗಳಿಗೆ ಲಾಭಾಂಶದಲ್ಲಿ ಭಾರಿ ನಷ್ಟವೇನೂ ಆಗುವುದಿಲ್ಲ. ಮತ್ತೂ ನೂರೈವತ್ತು ರೂಪಾಯಿ ಉಳಿತಾಯವೇ ಇರುತ್ತದೆ. ಆದ್ದರಿಂದ ಹೊರಗುತ್ತಿಗೆಯೇನೂ ನಿಲ್ಲುವುದಿಲ್ಲ.
ಹೀಗಿದ್ದರೂ, ಭಾರತ ಸುಮ್ಮನಿರುವಂತಿಲ್ಲ. ಭವಿಷ್ಯದ ಬಗ್ಗೆ ಯೋಚಿಸಲೇಬೇಕು. ಪ್ರತಿಯೊಂದು ರಾಷ್ಟ್ರದ ಅಧ್ಯಕ್ಷರೂ, ಆಯಾ ದೇಶದ ಹಿತಾಸಕ್ತಿಗೆ ಸಂಬಂಸಿ ಶಾಸನಾದಿಗಳನ್ನು ರೂಪಿಸಬಹುದು. ತಂತ್ರಗಳನ್ನು ಹೆಣೆಯಬಹುದು. ಹೇಳಿಕೆಗಳನ್ನು ತೇಲಿ ಬಿಡಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಹೀಗಿರುವಾಗ ಭವಿಷ್ಯದಲ್ಲಿ ಅಮೆರಿಕ ಹೊರಗುತ್ತಿಗೆಯ ವಿರುದ್ಧ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಜಾರಿಗೊಳಿಸಿದರೆ ಅದರ ನೇರ ಪರಿಣಾಮ ಬೆಂಗಳೂರಿನ ಅಥವಾ ಭಾರತದ ಹೊರಗುತ್ತಿಗೆಯ ಮೇಲಾಗುತ್ತದೆ. ಆಗ ಕಾಪಾಡುವರಾರು ? ಅಥವಾ ಯಾವುದು ?
ಮೊದಲಿಗೆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ.
ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ ಮಾತ್ರ ಆರ್ಥಿಕತೆಯನ್ನು ಮುನ್ನಡೆಸುವ ಚಾಲಕ ಶಕ್ತಿಯಲ್ಲ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಇತರ ಕ್ಷೇತ್ರಗಳಿಗೂ ಆದ್ಯತೆ ನೀಡಬೇಕು. ವೈಮಾನಿಕ, ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಮುಂತಾದ ಉದಯೋನ್ಮುಖ ಕ್ಷೇತ್ರಗಳ ಅಭಿವೃದ್ಧಿಗೆ ಕೂಡ ಒತ್ತು ನೀಡಬೇಕು. ಮೂಲ ವಿಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಕಲ ಸೌಲಭ್ಯ ನೀಡಬೇಕು. ಬೆಂಗಳೂರು ಎಂದರೆ ಐಟಿ-ಬಿಟಿ ರಾಜಧಾನಿ ಮಾತ್ರ ಎನ್ನುವ ಏಕೈಕ ಬ್ಯ್ಯಾಂಡ್ ಸೃಷ್ಟಿಯಾಗಬಾರದು. ಇತರ ಬ್ರ್ಯಾಂಡ್‌ಗಳು ಜನಪ್ರಿಯವಾಗಬೇಕು. ಕೈಗಾರಿಕೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸುವಾಗ ಸಮಗ್ರವಾಗಿರಬೇಕು. ಕೇವಲ ಪಿಯುಸಿ ಮುಗಿಸಿ ಧ್ವನಿಯಾಧಾರಿತ ಹೊರಗುತ್ತಿಗೆಯಲ್ಲಿ ಯುವ ಜನತೆ ಮುಳುಗಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರ ಜತೆಯಲ್ಲಿ ಉನ್ನತಮಟ್ಟದ ಜ್ಞಾನಾಧಾರಿತ ಹೊರಗುತ್ತಿಗೆಗೂ ಭಾರತ ಪ್ರಮುಖ ತಾಣವಾಗಬೇಕು. ಈ ನಿಟ್ಟಿನಲ್ಲಿ ಲಕ್ಷ್ಯ ವಹಿಸದಿದ್ದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಅದರ ದುಷ್ಪರಿಣಾಮ ತಟ್ಟಲಿದೆ.
ಬೃಹತ್ ಕಟ್ಟಡಗಳು, ಯಂತ್ರೋಪಕರಣಗಳು, ದಾಸ್ತಾನು ಕೇಂದ್ರಗಳು, ಆಕಾಶದ ತುಂಬ ಹೊಗೆಯುಗುಳುವ ಚಿಮಿಣಿ, ಜಲ ಮಾಲಿನ್ಯ ಮುಂತಾದ ತಕರಾರುಗಳು ಇಲ್ಲದೆ, ಕಂಪ್ಯೂಟರ್, ಫೋನು, ಅಂತರ್ಜಾಲ ಮುಂತಾದವುಗಳನ್ನು ಬಳಸಿಕೊಂಡು, ಭಾರತದ ಕೈಗಾರಿಕಾ ರಂಗದಲ್ಲಿ ಅನೂಹ್ಯವಾದ ಬದಲಾವಣೆಗೆ ಹೊರಗುತ್ತಿಗೆ ಕಾರಣವಾಯಿತು. ಆದರೆ ಅಮೆರಿಕದ ಮಾರುಕಟ್ಟೆಯನ್ನು ಬಹುವಾಗಿ ನಂಬಿಕೊಂಡಿದ್ದ ಹೊರಗುತ್ತಿಗೆಗೆ, ಈ ಸಮಸ್ಯೆಯನ್ನು ನೀಗಿಸಿಕೊಳ್ಳಲು ದಿನ ಬೆಳಗಾಗುವುದರೊಳಗೆ ಸಾಧ್ಯವಿಲ್ಲದಿದ್ದರೂ, ಎಚ್ಚೆತ್ತುಕೊಳ್ಳಲು ಇದು ಸಕಾಲ.
(ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ )

No comments:

Post a Comment